ದೇವರಿಗೆ ಭಯಪಡಬೇಕು, ಮನುಷ್ಯರಿಗಲ್ಲ, ಯಾಕೆ?
“ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ.” (ಜ್ಞಾನೋಕ್ತಿ 29:25) ನಿಜವಾಗಿಯೂ ಮಾನಸಿಕ ವಿಷವಾಗಿರುವ ಭಯದ ಒಂದು ವಿಧದ ಕುರಿತು ಪುರಾತನ ಜ್ಞಾನೋಕ್ತಿ ಈ ಮಾತುಗಳಿಂದ ನಮ್ಮನ್ನು ಎಚ್ಚರಿಸುತ್ತದೆ—ಅದೇ ಮನುಷ್ಯನ ಭಯ. ಅದನ್ನು ಉರುಲಿಗೆ ಹೋಲಿಸಲಾಗಿದೆ. ಯಾಕೆ? ಕಾರಣ ಮೊಲದಂತಹ ಚಿಕ್ಕ ಪ್ರಾಣಿ ಉರುಲಿನಲ್ಲಿ ಸಿಕ್ಕಿ ಬಿದ್ದಾಗ ನಿಸ್ಸಹಾಯಕವಾಗುತ್ತದೆ. ಅದು ಓಡಲಿಕ್ಕೆ ಬಯಸುತ್ತದೆ, ಆದರೆ ಉರುಲು ಇನ್ನಷ್ಟು ಗಟ್ಟಿಯಾಗಿ ಎಡೆಬಿಡದೆ ಸೆಳೆದು ಹಿಡಿಯುತ್ತದೆ. ಬಲಿಯಾದ ಪಶು ಕಾರ್ಯಥ ನಿಷ್ಕ್ರಿಯೆಗೊಳ್ಳುತ್ತದೆ.
ನಾವು ಮನುಷ್ಯ ಭಯದಿಂದ ಹಿಡಿಯಲ್ಪಟ್ಟಿದ್ದರೆ, ಬಹಳ ಮಟ್ಟಿಗೆ ಆ ಮೊಲದಂತೆಯೇ ಇದ್ದೇವೆ. ನಾವೇನು ಮಾಡತಕ್ಕದ್ದು ಎಂದು ನಮಗೆ ತಿಳಿದಿರಬಹುದು. ನಾವದನ್ನು ಮಾಡಲೂ ಬಹುದು. ಆದರೆ ಭಯವು ನಮ್ಮನ್ನು ಪಾಶದಲ್ಲಿ ಹಿಡಿಯುತ್ತದೆ. ನಾವು ನಿಷ್ಕ್ರಿಯರಾಗುತ್ತೇವೆ, ಕ್ರಿಯೆಗೈಯಲು ಅಶಕ್ತರಾಗುತ್ತೇವೆ.
ಮನುಷ್ಯನಿಗೆ ಭಯಪಡುವ ಪಾಶ
ಭಯದ ಪಾಶಕ್ಕೆ ಬಲಿಯಾದ ಬೈಬಲ್ ಸಮಯಗಳ ಕೆಲವರ ಉದಾಹರಣೆಗಳನ್ನು ನೆನಪಿಗೆ ತನ್ನಿರಿ. ಯೆಹೋಶುವನ ದಿನಗಳಲ್ಲಿ ಇಸ್ರಾಯೇಲ್ಯರ ಯೋಜಿತ ಆಕ್ರಮಣದ ಮೊದಲು ಕಾನಾನ್ಯ ದೇಶವನ್ನು ಬೇಹುಗಾರಿಕೆ ಮಾಡಲು 12 ಮಂದಿ ಪುರುಷರನ್ನು ಕಳುಹಿಸಲಾಯಿತು. ಗೂಢಚಾರರು ಹಿಂದಿರುಗಿ ಬಂದು, ದೇಶವು ಫಲಭರಿತವೂ ಸಮೃದ್ಧವೂ, ದೇವರು ಹೇಳಿದಂತೆಯೇ ಆಗಿ ಇದೆ ಎಂದು ವರದಿ ಸಲ್ಲಿಸಿದರು. ಆದರೆ ಅಲ್ಲಿನ ನಿವಾಸಿಗಳ ಬಲದಿಂದ ಗೂಢಚಾರರಲ್ಲಿ ಹತ್ತುಮಂದಿ ಮಿತಿಮೀರಿ ಭಯಪಟ್ಟರು. ಹೀಗೆ ಮನುಷ್ಯನ ಭಯದಿಂದ ಹಿಡಿಯಲ್ಪಟ್ಟವರಾಗಿ, ಅವರು ಇಸ್ರಾಯೇಲ್ಯರಿಗೆ ಅವರ ಬಲದ ಕುರಿತು ಅತಿಶಯೋಕ್ತಿಯಾದ ವರದಿಯನ್ನು ಕೊಟ್ಟು, ಇಡೀ ಜನಾಂಗವೇ ಭಯ ಪೀಡಿತರಾಗುವುದಕ್ಕೂ ಕಾರಣರಾದರು. ಕಾನಾನ್ ತನಕ ನಡೆದು, ಆ ದೇಶವನ್ನು ಸ್ವಾಧೀನಪಡಿಸುವ ದೇವರ ಆಜೆಗ್ಞೆ ವಿಧೇಯರಾಗಲು ಇಸ್ರಾಯೇಲ್ಯರು ನಿರಾಕರಿಸಿದರು. ಫಲಿತಾಂಶವಾಗಿ, ಮುಂದಿನ 40 ವರ್ಷಗಳಲ್ಲಿ ಆ ಸಮಯದ ಎಲ್ಲಾ ಪ್ರಾಯಕ್ಕೆ ಬಂದ ಪುರುಷರು, ಕೇವಲ ಕೆಲವರನ್ನು ಹೊರತುಪಡಿಸಿ, ಅರಣ್ಯದಲ್ಲಿ ಸತ್ತರು.—ಅರಣ್ಯಕಾಂಡ 13:21–14:38.
ಮನುಷ್ಯರ ಭಯಕ್ಕೆ ಬಲಿಯಾದ ಇನ್ನೊಬ್ಬನು ಯೋನನು. ಮಹಾ ನಗರವಾದ ನಿನೆವೆಯಲ್ಲಿ ಸಾರಲು ನೇಮಕ ಹೊಂದಿದಾಗ, ಅವನು “ಯೆಹೋವನ ಸನ್ನಿಧಿಗೆ ತಪ್ಪಿಸಿಕೊಳ್ಳುವ ಹಾಗೆ ತಾರ್ಷಿಷಿಗೆ ಓಡಿಹೋಗಲು” ಸಿದ್ಧತೆ ಮಾಡಿದನು. (ಯೋನ 1:3) ಯಾಕೆ? ನಿನೆವೆಯ ಜನರು ಕ್ರೂರರೂ, ಬಲಾತ್ಕಾರಿಗಳೂ ಎಂದು ಹೆಸರುವಾಸಿಯಾಗಿದ್ದರು. ಮತ್ತು ಯೋನನಿಗೆ ಅದು ಖಂಡಿತವಾಗಿಯೂ ತಿಳಿದಿತ್ತು. ಮನುಷ್ಯನ ಭಯವು ಅವನನ್ನು ನಿನೆವೆಯ ವಿರುದ್ಧ ದಿಕ್ಕಿಗೆ ದೂರ ಪಲಾಯನ ಮಾಡಲು ಕಾರಣವಾಯಿತು. ಕೊನೆಗೆ ಅವನು ತನ್ನ ನೇಮಕವನ್ನು ಸ್ವೀಕರಿಸಿದನೆಂಬದೇನೋ ಸತ್ಯ, ಆದರೂ ಯೆಹೋವನಿಂದ ಅಸಾಧಾರಣವಾದ ತಿದ್ದುಪಾಟನ್ನು ಪಡೆದಾದ ನಂತರವೇ.—ಯೋನ 1:4, 17
ಅರಸರು ಸಹಾ ಮನುಷ್ಯರಿಗೆ ಭಯಪಡಬಹುದು. ಒಂದು ಸಂದರ್ಭದಲ್ಲಿ ರಾಜನಾದ ಸೌಲನು ದೇವರಿಂದ ಕೊಡಲ್ಪಟ್ಟ ಅಪ್ಪಣೆಗೆ ನೇರವಾಗಿ ಅವಿಧೇಯನಾದನು. ಅವನ ನೆವನವೇನಾಗಿತ್ತು? “ನಾನು ಯೆಹೋವನ ಮತ್ತು ನಿನ್ನ ಆಜ್ಞೆಗಳನ್ನು ಮೀರಿ ಪಾಪ ಮಾಡಿದ್ದೇನೆ; ಜನರಿಗೆ ಹೆದರಿ ಅವರ ಮಾತುಗಳನ್ನು ಕೇಳಿದೆನು.” (1 ಸಮುವೇಲ 15:24) ಕೆಲವು ಶತಕಗಳ ನಂತರ ಬಬಿಲೋನ್ಯರಿಂದ ಯೆರೂಸಲೇಮು ಆಕ್ರಮಣಕ್ಕೆ ಒಳಗಾದಾಗ, ನಂಬಿಗಸ್ತ ಪ್ರವಾದಿಯಾದ ಯೆರೆಮೀಯನು ಅರಸನಾದ ಚಿದ್ಕೀಯನಿಗೆ, ಶರಣಾಗತನಾಗಿ, ರಕ್ತಪಾತದಿಂದ ಯೆರೂಸಲೇಮನ್ನು ಉಳಿಸುವಂತೆ ಸಲಹೆಯನ್ನಿತ್ತನು. ಯಾಕೆ? ಯೆರೆಮೀಯನಿಗೆ ಅವನಂದದ್ದು: “ಕಸ್ದೀಯರು ತಮ್ಮನ್ನು ಮರೆಹೊಕ್ಕಿರುವ ಯೆಹೂದ್ಯರಿಗೆ ನನ್ನನ್ನು ಒಪ್ಪಿಸುವರೋ ಏನೋ; ಅವರು ನನ್ನನ್ನು ಹಿಂಸಿಸಿಯಾರು ಎಂದು ಶಂಕೆಪಡುತ್ತೇನೆ.”—ಯೆರೆಮೀಯ 38:19.
ಕೊನೆಯಲ್ಲಿ, ಒಬ್ಬ ಅಪೊಸ್ತಲನು ಸಹಾ ಭೀತನಾಗ ಸಾಧ್ಯವಿದೆ. ಯೇಸು ಸಾಯಲಿಕ್ಕಿದ್ದ ದಿನ, ಅವರೆಲ್ಲರೂ ಅವನನ್ನು ತೊಲಗಿ, ಚದರಿ ಹೋಗುವರೆಂದು ತನ್ನ ಶಿಷ್ಯರಿಗೆ ಎಚ್ಚರಿಸಿದ್ದನು. ಆದಾಗ್ಯೂ ಪೇತ್ರನು ಧೈರ್ಯದಿಂದ ಅಂದದ್ದು: “ಸ್ವಾಮೀ, ನಿನ್ನ ಸಂಗಡ ಸೆರೆಮನೆಗೆ ಹೋಗುವದಕ್ಕೂ ಸಾಯುವದಕ್ಕೂ ಸಿದ್ಧನಾಗಿದ್ದೇನೆ.” (ಲೂಕ 22:33; ಮತ್ತಾಯ 26:31, 33) ಈ ಮಾತುಗಳು ಎಷ್ಟೊಂದು ತಪ್ಪೆಂದು ರುಜುವಾದವು! ಕೆಲವೇ ತಾಸುಗಳ ನಂತರ, ಹೆದರಿಕೆಯಿಂದಾಗಿ ಪೇತ್ರನು ತಾನು ಯೇಸುವಿನೊಂದಿಗೆ ಇದ್ದನೆಂಬದನ್ನು, ಆತನನ್ನು ಅರಿತಿದ್ದೇನೆಂಬದನ್ನೂ ಅಲ್ಲಗಳೆದನು. ಮನುಷ್ಯರ ಭಯವು ಅವನ ಮೇಲೆ ಸವಾರಿ ನಡಿಸಿತು! ಹೌದು, ಮನುಷ್ಯರ ಭಯವು ಖಂಡಿತವಾಗಿಯೂ ಒಂದು ಮಾನಸಿಕ ವಿಷವಾಗಿರುತ್ತದೆ.
ನಾವು ಯಾರಿಗೆ ಭಯಪಡಬೇಕು?
ಮನುಷ್ಯನ ಭಯವನ್ನು ನಾವು ಹೇಗೆ ಹೋಗಲಾಡಿಸಬಹುದು? ಅದನ್ನು ಎಷ್ಟೋ ಹೆಚ್ಚು ಪೋಷಕವಾದ ಭಯದಿಂದ ಸ್ಥಾನಪಲ್ಲಟ ಮಾಡುವದರಿಂದಲೇ. ಈ ರೀತಿಯ ಭಯವು ಅದೇ ಅಪೊಸ್ತಲ ಪೇತ್ರನಿಂದ ಉತ್ತೇಜಿಸಲ್ಪಟ್ಟಿತ್ತು, ಅವನಂದದ್ದು: “ದೇವರಿಗೆ ಭಯಪಡಿರಿ.” (1 ಪೇತ್ರ 2:17) ಪ್ರಕಟನೆಯಲ್ಲಿ ಯೋಹಾನನು ನೋಡಿದ ದೇವದೂತನು ಸಹಾ ಮಾನವಕುಲವನ್ನು ಕರೆದು ಹೇಳಿದ್ದು: “ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ.” (ಪ್ರಕಟನೆ 14:7) ಜ್ಞಾನಿ ಅರಸ ಸೊಲೋಮೋನನು ಅಂತಹ ಭಯವನ್ನು ಪ್ರೋತ್ಸಾಹಿಸುತ್ತಾ ಅಂದದ್ದು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು. ಮನುಷ್ಯರೆಲ್ಲರ ಕರ್ತವ್ಯವು ಇದೇ.” (ಪ್ರಸಂಗಿ 12:13) ಹೌದು, ದೇವರ ಭಯವು ಒಂದು ಹಂಗು ಆಗಿರುತ್ತದೆ.
ದೇವರ ಭಯ ಪ್ರಯೋಜನಗಳನ್ನು ತರುತ್ತದೆ. ಪ್ರಾಚೀನ ಕೀರ್ತನೆಗಾರನು ಹಾಡಿದ್ದು: “ಭಯಭಕ್ತಿಯುಳ್ಳ ಜನರಿಗೆ ಆತನ (ಯೆಹೋವನ) ರಕ್ಷಣೆ ಹತ್ತಿರವಿರುವುದು ಸತ್ಯ.” (ಕೀರ್ತನೆ 85:9) ಬೈಬಲಿನ ಜ್ಞಾನೋಕ್ತಿಯೂ ಒತ್ತಿಹೇಳುವುದು: “ಯೆಹೋವನಿಗೆ ಭಯಪಡುವವರ ದಿನಗಳಿಗೆ ವೃದ್ಧಿ.” (ಜ್ಞಾನೋಕ್ತಿ 10:27) ಹೌದು, ಯೆಹೋವನ ಭಯ ಆರೋಗ್ಯಕರ, ಪ್ರಯೋಜನದಾಯಕ ಸಂಗತಿಯು. ‘ಆದರೆ, ಖಂಡಿತವಾಗಿಯೂ’ ನೀವನ್ನಬಹುದು, ‘ಯೆಹೋವನು ಪ್ರೀತಿಯುಳ್ಲ ದೇವರು. ಪ್ರೀತಿಯ ದೇವರೊಬ್ಬನಿಗೆ ನಾವೇಕೆ ಭಯಪಡಬೇಕು?’
ಪ್ರೀತಿಯ ದೇವರಿಗೆ ಭಯಪಡುವುದೋ?
ದೇವರ ಭಯವು ಕೆಲವೊಂದು ಸನ್ನಿವೇಶ ಗಳಲ್ಲಿ ಜನರನ್ನು ಹಿಡಿಯುವಂಥ ಹೀನ, ನಿಷ್ಕ್ರಿಯೆಗೊಳಿಸುವ ಭಯವಲ್ಲ. ಅದು ತನ್ನ ತಂದೆಯ ಕಡೆಗೆ ಮಗನಿಗೆ, ತಂದೆಯು ತನ್ನನ್ನು ಪ್ರೀತಿಸುತ್ತಾನೆಂದು ತಿಳಿದಿದ್ದರೂ ಮತ್ತು ತಾನು ತಂದೆಯನ್ನು ಪ್ರೀತಿಸಿದರೂ, ಇರಬಹುದಾದ ಭಯವಾಗಿರುತ್ತದೆ.
ದೇವರ ಭಯವೆಂದರೆ, ಅವನು ನೀತಿ, ನ್ಯಾಯ, ವಿವೇಕ ಮತ್ತು ಪ್ರೀತಿಯ ಪೂರ್ಣ ವ್ಯಕ್ತೀಕರಣವೆಂಬ ಅರಿವಿನಿಂದ ಹೊರಸೂಸುವ ಅಗಾಧವಾದ ಭಕ್ತಿ ಭಾವವು. ದೇವರನ್ನು ಅಸಂತೋಷಗೊಳಿಸುವ ಆರೋಗ್ಯಕರ ಭೀತಿಯೂ ಅದರಲ್ಲಿ ಸೇರಿದೆ. ಯಾಕಂದರೆ ಪ್ರತಿಫಲಕೊಡಲು ಮತ್ತು ಶಿಕ್ಷಿಸಲು ಶಕ್ತಿಯಿರುವ ಶ್ರೇಷ್ಟ ನ್ಯಾಯಾಧೀಶನು ಆತನು. “ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವದು ಭಯಂಕರವಾದದ್ದು” ಎಂದು ಅಪೊಸ್ತಲ ಪೌಲನು ಬರೆದಿದ್ದಾನೆ. (ಇಬ್ರಿಯ 10:31) ದೇವರ ಪ್ರೀತಿ ಬೇಕಾಬಿಟ್ಟೀ ತೆಗೆದುಕೊಳ್ಳುವ ಒಂದು ಸಂಗತಿಯಲ್ಲ, ಇಲ್ಲವೇ ಅವನ ತೀರ್ಪುಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಆದಕಾರಣ ಬೈಬಲು ನಮ್ಮನ್ನು ಎಚ್ಚರಿಸುವುದು: “ಯೆಹೋವನ ಭಯವೇ ಜ್ಞಾನದ ಆರಂಭ.”—ಜ್ಞಾನೋಕ್ತಿ 9:10.
ತನಗೆ ವಿಧೇಯರಾಗದೇ ಇರುವವರನ್ನು ದಂಡಿಸಲು ಯೆಹೋವನಿಗೆ ಶಕ್ತಿಯಿದೆ—ಮತ್ತು ಅದನ್ನು ಆತನು ಆಗಾಗ್ಯೆ ಮಾಡಿರುತ್ತಾನೆ—ಆದರೂ ಆತನು ಯಾವುದೇ ರೀತಿಯಲ್ಲಿ ರಕ್ತಪೀಪಾಸು ಯಾ ಕ್ರೂರನಾಗಿಲ್ಲವೆಂದು ನಾವು ನೆನಪಿನಲ್ಲಡಬೇಕು. ಅವನು ನಿಜವಾಗಿಯೂ ಪ್ರೀತಿಯ ದೇವರು. ಆದರೂ ಪ್ರೀತಿಯ ಹೆತ್ತವನೋಪಾದಿ ಅವನು ಕೆಲವೊಮ್ಮೆ ಧರ್ಮಕ್ರೋಧವುಳ್ಳವನಾಗಿದ್ದಾನೆ. (1 ಯೋಹಾನ 4:8) ಆದ್ದರಿಂದ ಆತನಿಗೆ ಹೆದರುವದು ಪ್ರಯೋಜನದಾಯಕವು. ಅದು ನಮ್ಮ ಒಳ್ಳಿತ್ತಿಗಾಗಿ ರೂಪಿಸಲ್ಪಟ್ಟಿರುವ ಆತನ ನಿಯಮಗಳಿಗೆ ವಿಧೇಯರಾಗಲು ನಮ್ಮನ್ನು ನಡಿಸುತ್ತದೆ. ದೇವರ ನಿಯಮಗಳಿಗೆ ವಿಧೇಯರಾಗುವದು ಸಂತೋಷವನ್ನು ತರುವಾಗ ಅವುಗಳಿಗೆ ಅವಿಧೇಯರಾಗುವದು ಯಾವಾಗಲೂ ದುಷ್ಪರಿಣಾಮಗಳನ್ನು ತರುತ್ತದೆ. (ಗಲಾತ್ಯ 6:7, 8) ಕೀರ್ತನೆಗಾರನು ಪ್ರೇರಿತನಾಗಿ ಹೀಗೆ ಹೇಳಿದನು: “ಯೆಹೋವನ ಜನರೇ, ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ; ಆತನಲ್ಲಿ ಭಯಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇರುವದಿಲ್ಲ.”—ಕೀರ್ತನೆ 34:9.
ಯಾರಿಗೆ ನೀವು ಭಯಪಡುವಿರಿ?
ದೇವರ ಭಯವು ಮನುಷ್ಯನ ಭಯವನ್ನು ಜಯಿಸಲು ನಮಗೆ ಹೇಗೆ ಸಹಾಯ ಮಾಡುತ್ತದೆ? ಒಳ್ಳೇದು, ಮಾನವರು ನಮ್ಮನ್ನು ಗೇಲಿಮಾಡಬಹುದು, ಯೋಗ್ಯವಾದದ್ದನ್ನು ಮಾಡುವಾಗ ನಮ್ಮನ್ನು ಹಿಂಸಿಸಲೂ ಬಹುದು, ಇದು ನಮ್ಮ ಮೇಲೆ ಒತ್ತಡ ಹಾಕುತ್ತದೆ. ಆದರೆ ಆದರಣೀಯ ದೇವಭಯವು ಯೋಗ್ಯ ಪಥದಲ್ಲಿ ಅಂಟಿಕೊಂಡಿರಲು ನಮ್ಮನ್ನು ಪ್ರಚೋದಿಸುವದು, ಯಾಕಂದರೆ ನಾವಾತನನ್ನು ಅಪ್ರಸನ್ನಗೊಳಿಸಲು ಪ್ರಯತ್ನಿಸುವದಿಲ್ಲ. ಅಷ್ಟಲ್ಲದೇ, ದೇವರ ಪ್ರೀತಿಯು ಆತನ ಹೃದಯಕ್ಕೆ ಸಂತೋಷ ತರುವುದನ್ನು ಮಾಡಲು ನಮ್ಮನ್ನು ಒತ್ತಾಯಿಸುವುದು. ಇದಕ್ಕೆ ಕೂಡಿಸಿ, ಯಾವುದು ಯೋಗ್ಯವೂ ಅದನ್ನು ಮಾಡಿದ್ದಕ್ಕಾಗಿ ದೇವರು ನಮ್ಮನ್ನು ಹೇರಳವಾಗಿ ಆಶೀರ್ವದಿಸುವನೆಂದು ನಾವು ನೆನಪಿಸುತ್ತೇವೆ. ಇದು ಅವನನ್ನು ಇನ್ನೂ ಹೆಚ್ಚು ಪ್ರೀತಿಸುವಂತೆ ಮತ್ತು ಆತನ ಚಿತ್ತವನ್ನು ಮಾಡುವಂತೆ ನಮ್ಮನ್ನು ನಡಿಸುತ್ತದೆ. ಆದಕಾರಣ, ದೇವರ ಕುರಿತಾದ ಸಮತೂಕದ ದೃಷ್ಟಿಕೋನವು ಮನುಷ್ಯರ ಯಾವುದೇ ಭಯವನ್ನು ಜಯಿಸಲು ನಮಗೆ ಸಹಾಯ ಕೊಡುತ್ತದೆ.
ಉದಾಹರಣೆಗೆ, ತಮ್ಮ ಸಮವಯಸ್ಕರು ಏನು ಎಣಿಸುತ್ತಾರೋ ಎಂಬ ಭಯದ ಕಾರಣ ಅನೇಕರು ಕೆಟ್ಟತನ ಮಾಡುವ ಒತ್ತಡಕ್ಕೆ ಬಲಿಯಾಗುತ್ತಾರೆ. ಶಾಲೆಯಲ್ಲಿ ಎಳೆಯರು ಹೊಗೆಬತ್ತಿ ಸೇದುತ್ತಾರೆ, ದುರ್ಭಾಷೆ ಬಳಸುತ್ತಾರೆ, ಲೈಂಗಿಕ ಕೃತ್ಯವನ್ನು (ನೈಜ ಯಾ ಕಾಲ್ಪನಿಕ) ಕೊಚ್ಚಿಕೊಳ್ಳುತ್ತಾರೆ, ಶರಾಬು ಯಾ ಅಮಲೌಷಧ ಸೇವಿಸಲೂ ಬಹುದು. ಯಾಕೆ? ಯಾವಾಗಲೂ ಅದನ್ನು ಮಾಡುವದು ತಾವು ಬಯಸಿದ್ದರಿಂದಲ್ಲ, ಬದಲು ತಾವು ಭಿನ್ನವಾದ ರೀತಿಯಲ್ಲಿ ವರ್ತಿಸಿದರೆ, ತಮ್ಮ ಸಹವಾಸಿಗಳು ಏನನ್ನುವರೋ ಎಂಬ ಭಯದಿಂದ. ಒಬ್ಬ ಹದಿವಯಸ್ಕನಿಗೆ ಗೇಲಿ ಯಾ ಚೇಷ್ಟೇಯು ದೈಹಿಕ ಹಿಂಸೆಯನ್ನು ತಾಳಿಕೊಳ್ಳುವಷ್ಟೇ ಕಷ್ಟಕರವಾಗಬಹುದು.
ತಪ್ಪನ್ನು ಮಾಡುವ ಒತ್ತಡಕ್ಕೆ ಒಬ್ಬ ಪ್ರಾಪ್ತವಯಸ್ಕನು ಸಹಾ ಬೀಳಬಹುದು. ಕೆಲಸದಲ್ಲಿ ಕ್ರಯದ ಬಿಲ್ಲನ್ನು ಗಿರಾಕಿಗೆ ಹೆಚ್ಚು ಹಾಕಿಕೊಡುವಂತೆ ಧನಿಯು ಹೇಳಬಹುದು. ಕರಕೊಡುವದನ್ನು ಕಡಿಮೆಗೊಳಿಸಲು ಕಂಪೆನಿಯ ಟೇಕ್ಸ್ ಪತ್ರವನ್ನು ಅಪ್ರಾಮಾಣಿಕವಾಗಿ ತುಂಬಿಸುವಂತೆ ಕೇಳಬಹುದು. ಅವನು ಅದಕ್ಕೆ ವಿಧೇಯನಾಗದಿದ್ದರೆ, ತನ್ನ ಕೆಲಸವನ್ನು ಕಳಕೊಳ್ಳಬಹುದೆಂದು ಕ್ರೈಸ್ತನು ಎಣಿಸಬಹುದು. ಈ ರೀತಿ ಮನುಷ್ಯನ ಭಯವು ಕೆಟ್ಟತನವನ್ನು ಮಾಡುವಂತೆ ಅವನನ್ನು ಒತ್ತಡಕ್ಕೆ ಹಾಕುತ್ತದೆ.
ಎರಡೂ ಸಂದರ್ಭಗಳಲ್ಲಿ, ದೇವರ ಆರೋಗ್ಯಕರ ಭಯ ಮತ್ತು ಅವನ ನಿಯಮಗಳಿಗೆ ಗೌರವ ಮನುಷ್ಯನ ಭಯದಿಂದ ನಿಷ್ಕ್ರಿಯನಾಗದಂತೆ ಕ್ರೈಸ್ತನನ್ನು ತಡೆಯುತ್ತದೆ ಮತ್ತು ದೇವರ ಪ್ರೀತಿಯು ದೇವರು ನಿಷೇಧಿಸಿದ್ದನ್ನು ಮಾಡದಂತೆ ನಿರ್ಬಂಧಿಸುತ್ತದೆ. (ಜ್ಞಾನೋಕ್ತಿ 8:13) ಅಷ್ಟಲ್ಲದೇ, ದೇವರ ಮೇಲಿನ ಅವನ ಭರವಸವು, ತನ್ನ ಬೈಬಲ್-ಶಿಕ್ಷಿತ ಮನಸ್ಸಾಕ್ಷಿಗನುಸಾರ ವರ್ತಿಸಿದರೆ, ಫಲಿತಾಂಶವೇನೇ ಆಗಲಿ, ದೇವರು ಅವನನ್ನು ಬೆಂಬಲಿಸುವನೆಂಬ ಆಶ್ವಾಸನೆ ಕೊಡುತ್ತದೆ. ಅಪೊಸ್ತಲ ಪೌಲನು ತನ್ನ ನಂಬಿಕೆಯನ್ನು ಹೀಗೆ ವ್ಯಕ್ತಪಡಿಸಿರುವನು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲದಕ್ಕೂ ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13.
ಬೈಬಲು, ಅತೀ ಕಠಿಣ ಪರಿಸ್ಥಿತಿಗಳಲ್ಲೂ ಯೆಹೋವನಿಗೆ ನಂಬಿಗಸ್ತರಾಗಿ ನಿಂತ ಸ್ತ್ರೀ-ಪುರುಷರ ಅನೇಕಾನೇಕ ಉದಾಹರಣೆಗಳನ್ನು ಕೊಡುತ್ತದೆ. ಅವರು “ಅಪಹಾಸ್ಯ, ಕೊರಡೆಯ ಪೆಟ್ಟು, ಬೇಡಿ, ಸೆರೆಮನೆ ಇವುಗಳನ್ನು ಅನುಭವಿಸಿದರು. ಕೆಲವರನ್ನು ಜನರು ಕಲ್ಲಿಸೆದು ಕೊಂದರು.” (ಇಬ್ರಿಯ 11:36, 37) ಆದರೆ ಮನುಷ್ಯನ ಭಯವು ಅವರ ಮನಸ್ಸುಗಳನ್ನು ಅಂಕೆಯಲ್ಲಿಡಲು ಅವರು ಬಿಡಲಿಲ್ಲ. ಬದಲಿಗೆ ಅವರು, ನಂತರ ಯೇಸು ತನ್ನ ಶಿಷ್ಯರಿಗೆ ಕೊಟ್ಟ ಅದೇ ವಿವೇಕದ ಮಾರ್ಗವನ್ನು ಬೆನ್ನಟ್ಟಿದ್ದರು: “ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ದೇಹ ಎರಡನ್ನೂ ಕೂಡಾ ಗೆಹೆನ್ನಾದಲ್ಲಿ ಹಾಕಿ ನಾಶಮಾಡುವಾತನಿಗೆ ಹೆದರಿರಿ.”—ಮತ್ತಾಯ 10:28.
ಮನುಷ್ಯನ ಬದಲಾಗಿ ದೇವರಿಗೆ ಭಯಪಡುವ ಈ ಯೇಸುವಿನ ಸಲಹೆಯು ಆರಂಭದ ಕ್ರೈಸ್ತರಿಗೆ “ಸುವಾರ್ತೆಯ ನಿಮಿತ್ತ” ಎಲ್ಲಾ ವಿಧದ ಕಷ್ಟಗಳನ್ನು, ಶೋಧನೆಗಳನ್ನು, ಹಿಂಸೆಗಳನ್ನು ತಾಳಿಕೊಳ್ಳಲು ಶಕ್ತರನ್ನಾಗಿ ಮಾಡಿತು. (ಫಿಲೆಮೋನ 13) ಅಪೊಸ್ತಲ ಪೌಲನು ಇದರಲ್ಲಿ ಒಂದು ಗಮನಾರ್ಹ ಉದಾಹರಣೆಯಾಗಿದ್ದಾನೆ. ಅವನು ಕೊರಿಂಥದವರಿಗೆ ಬರೆದ ಎರಡನೆಯ ಪತ್ರದಲ್ಲಿ ದೇವರ ಭಯವು ಅವನನ್ನು ಸೆರೆಮನೆವಾಸವನ್ನು, ಹೊಡೆತಗಳನ್ನು, ಕಲ್ಲಿಸೆತಗಳನ್ನು, ಹಡಗುನಷ್ಟಗಳನ್ನು, ರಸ್ತೆಯ ಮೇಲೆ ಅನೇಕ ಅಪಾಯಗಳನ್ನು, ನಿದ್ರೆರಹಿತ ರಾತ್ರಿಗಳನ್ನು, ಹಸಿವೆ, ಬಾಯಾರಿಕೆ, ಚಳಿ, ವಸ್ತ್ರವಿಲ್ಲದಿರುವಿಕೆ ಮುಂತಾ ದವನ್ನು ತಾಳಿಕೊಳ್ಳಲು ಹೇಗೆ ಶಕ್ತನನ್ನಾಗಿ ಮಾಡಿತೆಂದು ತೋರಿಸಿದ್ದಾನೆ.—2 ಕೊರಿಂಥ 11:23-27.
ಮಲ್ಲರಂಗದಲ್ಲಿ ಕ್ರೂರ ಮೃಗಗಳಿಗೆ ಕೆಲವರು ಎಸೆಯಲ್ಪಟ್ಟಂತಹ ಸಮಯದಲ್ಲಿ, ರೋಮನ್ ಸಾಮ್ರಾಜ್ಯದ ಕೆಳಗೆ ತೀವ್ರ ಹಿಂಸೆಗೆ ಗುರಿಯಾದಾಗ ಆರಂಭದ ಕ್ರೈಸ್ತರು ಕೂಡಾ ಸ್ಥಿರರಾಗಿ ನಿಲ್ಲಲು ದೇವರ ಭಯವು ಬಲಪಡಿಸಿತು. ಮಧ್ಯಯುಗದಲ್ಲಿ ಅವರ ನಂಬಿಕೆಯಲ್ಲಿ ಒಪ್ಪಂದ ಮಾಡಿಕೊಳ್ಳದೇ ಇದ್ದುದರಿಂದ ಧೈರ್ಯಶಾಲಿ ವಿಶ್ವಾಸಿಗಳು ಬಹಿರಂಗವಾಗಿ ಸುಡಲ್ಪಟ್ಟು ಕೊಲ್ಲಲ್ಪಟ್ಟರು. ಕಳೆದ ಲೋಕ ಯುದ್ಧದಲ್ಲಿ ದೇವರನ್ನು ಅಪ್ರಸನ್ನಗೊಳಿಸುವ ಸಂಗತಿಗಳನ್ನು ಮಾಡುವ ಬದಲಾಗಿ ಕ್ರೈಸ್ತರು ಕೂಟಶಿಬಿರಗಳಲ್ಲಿ ಬಾಧೆಪಡಲು ಮತ್ತು ಸಾಯಲು ತಯಾರಾಗಿದ್ದರು. ದೇವರ ಭಯವು ಎಂತಹ ಬಲಶಾಲಿ ಶಕ್ತಿ! ಖಂಡಿತವಾಗಿಯೂ ಅಂತಹ ಶೋಧನೆಯ ಪರಿಸ್ಥಿತಿಗಳ ಅಡಿಯಲ್ಲಿ ಮನುಷ್ಯನ ಭಯವನ್ನು ಜಯಿಸಲು ಅದು ಕ್ರೈಸ್ತರನ್ನು ಬಲಪಡಿಸಿತ್ತಾದರೆ, ನಾವು ಯಾವುದೇ ಪರಿಸ್ಥಿತಿಗಳಲ್ಲಿದ್ದರೂ ಅದು ನಮ್ಮನ್ನು ಬಲಪಡಿಸಶಕ್ತವಾಗಿದೆ.
ಇಂದು, ದೇವರನ್ನು ಮೆಚ್ಚಿಸದಂತೆ ನಮ್ಮನ್ನು ಒತ್ತಡಕ್ಕೆ ಒಳಪಡಿಸಲು ಪಿಶಾಚನಾದ ಸೈತಾನನು ತನ್ನಿಂದಾದೆಲ್ಲವನ್ನು ಮಾಡುತ್ತಿದ್ದಾನೆ. ಅಪೊಸ್ತಲ ಪೌಲನು ವ್ಯಕ್ತಿಪಡಿಸಿದ ತದ್ರೀತಿಯ ನಿರ್ಧಾರವು ನಿಜ ಕ್ರೈಸ್ತರದ್ದೂ ಆಗಿರಬೇಕು. ಅವನು ಬರೆದದ್ದು: “ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ.” (ಇಬ್ರಿಯ 10:39) ಯೆಹೋವನ ಭಯವು ಶಕ್ತಿಯ ನಿಜ ಉಗಮವಾಗಿದೆ. ಅದರ ಸಹಾಯದೊಂದಿಗೆ, ನಾವು ಸಹಾ “ಧೈರ್ಯವಾಗಿದ್ದು ಹೀಗೆ ಹೇಳುವೆವು: ಯೆಹೋವನು ನನ್ನ ಸಹಾಯಕನು. ಮನುಷ್ಯನು ನನಗೇನು ಮಾಡಶಕ್ತನು?”—ಇಬ್ರಿಯ 13:6. (w89 6/1)
[ಪುಟ 7 ರಲ್ಲಿರುವ ಚಿತ್ರ]
ದೇವರ ಭಯವು ಪೌಲನನ್ನು ಎಲ್ಲಾ ಸಂಗತಿಗಳನ್ನು, ಹೊಡೆತಗಳು, ಸೆರೆಮನೆ, ಹಡಗುನಷ್ಟ ಸಹಿತ ಎಲ್ಲವನ್ನು ತಾಳಿಕೊಳ್ಳಲು ಧೈರ್ಯಗೊಳಿಸಿತು.—2 ಕೊರಿಂಥ 11:23-27