ದೇವರ ವಾಕ್ಯವು ಸತ್ಯವಾಗಿದೆ
“ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು.”—ಯೋಹಾನ 17:17.
1. ಹಿಬ್ರೂ ಕೀರ್ತನೆಗಾರನು ಬೈಬಲನ್ನು ಹೇಗೆ ವೀಕ್ಷಿಸಿದನು, ಆದರೆ ಇಂದು ಅನೇಕರು ಹೇಗೆ ವೀಕ್ಷಿಸುತ್ತಾರೆ?
“ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” (ಕೀರ್ತನೆ 119:105) ಹೀಗೆಂದನು ಹಿಬ್ರೂ ಕೀರ್ತನೆಗಾರನು. ದೇವರ ವಾಕ್ಯಕ್ಕೆ ಈ ರೀತಿಯ ಸನ್ಮಾನ ಇಂದು ಕೊಂಚ ಜನರಲ್ಲಿದೆ. ಈ ಇಪ್ಪತ್ತನೆಯ ಶತಮಾನದಲ್ಲಿ ದೇವರ ವಾಕ್ಯವು ಲಿಖಿತ ರೂಪದಲ್ಲಿ ಪವಿತ್ರ ಬೈಬಲೆಂದು ಕರೆಯಲ್ಪಡುತ್ತದೆ. ಇದನ್ನು ಇತಿಹಾಸದಲ್ಲಿ ಇತರ ಯಾವ ಗ್ರಂಥಕ್ಕೂ ಹೆಚ್ಚು ಭಾಷೆಗಳಲ್ಲಿ ತರ್ಜುಮೆ ಮಾಡಲಾಗಿದೆ ಮತ್ತು ಹೆಚ್ಚು ವ್ಯಾಪಕವಾಗಿ ವಿತರಣೆ ಮಾಡಲಾಗಿದೆ. ಆದರೂ ಅಧಿಕಾಂಶ ಜನರು ಇದನ್ನು ತಮ್ಮ ಕಾಲಿಗೆ ಬೆಳಕಾಗಿ ಅಂಗೀಕರಿಸುವುದಿಲ್ಲ. ಕ್ರೈಸ್ತರೆನಿಸಿಕೊಳ್ಳುವವರು ಸಹಾ, ಅಧಿಕಾಂಶ, ಬೈಬಲು ತಮ್ಮ ದಾರಿಯನ್ನು ಬೆಳಗಿಸುವಂತೆ ಬಿಡುವ ಬದಲು ತಮ್ಮ ಸ್ವಂತ ವಿಚಾರಗಳನ್ನು ಅನುಸರಿಸುತ್ತಾರೆ.—2 ತಿಮೊಥಿ 3:5.
2, 3. ಯೆಹೋವನ ಸಾಕ್ಷಿಗಳು ಬೈಬಲನ್ನು ಹೇಗೆ ವೀಕ್ಷಿಸುತ್ತಾರೆ, ಮತ್ತು ಅದು ಅವರಿಗೆ ಯಾವ ಪ್ರಯೋಜನವನ್ನು ತಂದಿದೆ?
2 ಇದಕ್ಕೆ ತೀರಾ ಪ್ರತಿಕೂಲವಾಗಿ, ಯೆಹೋವನ ಸಾಕ್ಷಿಗಳಾದ ನಾವು ಕೀರ್ತನೆಗಾರನೊಂದಿಗೆ ಸಮ್ಮತಿಸುತ್ತೇವೆ. ನಮಗಾದರೋ ಬೈಬಲು ದೇವದತ್ತ ಮಾರ್ಗದರ್ಶಿ. “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥಿ 3:16) ಇಂದಿನ ಅನೇಕರಿಗೆ ಅಸದೃಶವಾಗಿ, ನೈತಿಕತೆ ಮತ್ತು ನಡತೆಯ ವಿಚಾರದಲ್ಲಿ ನಾವು ಪರೀಕ್ಷಾ ಪ್ರಯೋಗ ಮಾಡಬಯಸುವುದಿಲ್ಲ. ಯಾವುದು ಒಳ್ಳೆಯದೆಂದು ನಮಗೆ ತಿಳಿದದೆ, ಏಕೆಂದರೆ ಬೈಬಲು ಹಾಗೆನ್ನುತ್ತದೆ.
3 ಇದು ನಮಗೆ ಮಹಾ ಪ್ರಯೋಜನಗಳನ್ನು ತಂದದೆ. ನಮಗೆ ಯೆಹೋವನ ಪರಿಚಯವಾಗಿರುವುದು ಮಾತ್ರವಲ್ಲ ಭೂಮಿಯ ಮತ್ತು ಮಾನವ ಕುಲದ ಕಡೆಗೆ ಆತನ ಶೋಭಾಯಮಾನವಾದ ಉದ್ದೇಶಗಳ ಕುರಿತು ನಾವು ಕಲಿತಿದ್ದೇವೆ. ಹೀಗೆ, ನಮಗೂ ನಮ್ಮ ಕುಟುಂಬಕ್ಕೂ ಶುಭ್ರ ಭವಿಷ್ಯವು ಸಾಧ್ಯವೆಂಬ ಭರವಸ ನಮಗಿದೆ. “ನಿನ್ನ ಧರ್ಮಶಾಸ್ತ್ರವು ನನಗೆಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ. ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ” ಎಂದು ಹೇಳಿದ ಕೀರ್ತನೆಗಾರನೊಂದಿಗೆ ನಾವು ಹೃತ್ಪೂರ್ವಕವಾಗಿ ಏಕಾಭಿಪ್ರಾಯದಿಂದಿದ್ದೇವೆ.—ಕೀರ್ತನೆ 119:97, 98.
ನಡತೆಯ ಮೂಲಕ ಸಾಕ್ಷಿ ನೀಡುವುದು
4. ಬೈಬಲನ್ನು ದೇವರ ವಾಕ್ಯವೆಂದು ಒಪ್ಪುವುದು ನಮ್ಮ ಮೇಲೆ ಯಾವ ಅವಶ್ಯ ಕರ್ತವ್ಯವನ್ನು ತರುತ್ತದೆ?
4 ಹೀಗೆ, ಯೇಸು ಕ್ರಿಸ್ತನು ತನ್ನ ತಂದೆಗೆ ಹೇಳಿದ “ನಿನ್ನ ವಾಕ್ಯವೇ ಸತ್ಯವು” ಎಂಬ ಮಾತುಗಳನ್ನು ನಾವು ಒಪ್ಪುತ್ತೇವೆ. (ಯೋಹಾನ 17.17) ಆದರೂ ಈ ನಿಜತ್ವವನ್ನು ಒಪ್ಪುವುದು ನಮ್ಮ ಮೇಲೆ ಒಂದು ಅವಶ್ಯ ಕರ್ತವ್ಯವನ್ನು ಹೊರಿಸುತ್ತದೆ. ದೇವರ ವಾಕ್ಯವು ಸತ್ಯವೆಂದು ತಿಳಿಯಲು ನಾವು ಇತರರಿಗೆ ಸಹಾಯ ಮಾಡತಕ್ಕದ್ದು. ಈ ರೀತಿ, ನಾವು ಅನುಭವಿಸುವ ಆಶೀರ್ವಾದಗಳನ್ನು ಅವರೂ ಅನುಭವಿಸುವಂತಾಗುವುದು. ನಾವು ಹಾಗೆ ಅವರಿಗೆ ಹೇಗೆ ಸಹಾಯ ಮಾಡಬಲ್ಲೆವು? ಒಂದು ವಿಷಯವೇನಂದರೆ, ನಮ್ಮ ದೈನಂದಿನ ಜೀವಿತದಲ್ಲಿ ನಾವು ಬೈಬಲ್ ಮೂಲಸೂತ್ರಗಳನ್ನು ಅನ್ವಯಿಸಿಕೊಳ್ಳಲು ಸಕಲ ಪ್ರಯತ್ನವನ್ನೂ ಮಾಡತಕ್ಕದ್ದು. ಈ ವಿಧದಲ್ಲಿ, ಸಮರ್ಪಕ ಹೃದಯವುಳ್ಳವರು ಬೈಬಲಿನ ಮಾರ್ಗ ಅತ್ಯುತ್ತಮ ಮಾರ್ಗವೆಂದು ನೋಡುವರು.
5. ನಮ್ಮ ನಡತೆಯ ಮೂಲಕ ಸಾಕ್ಷಿ ನೀಡುವ ವಿಷಯದಲ್ಲಿ ಪೇತ್ರನು ಯಾವ ಸಲಹೆ ನೀಡಿದನು?
5 ಯಾರ ಗಂಡಂದಿರು ಅವಿಶ್ವಾಸಿಗಳಾಗಿದ್ದಾರೋ ಆ ಕ್ರೈಸ್ತ ಮಹಿಳೆಯರಿಗೆ ಅಪೊಸ್ತಲ ಪೇತ್ರನು ಕೊಟ್ಟ ಸಲಹೆಯ ಸಾರಾಂಶ ಇದೇ ಆಗಿತ್ತು. ಅವನು ಹೇಳಿದ್ದು: “ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.” (1 ಪೇತ್ರ 3:1) ಇದೇ ಸೂತ್ರವು, ಅವನು ಪುರುಷ, ಸ್ತ್ರೀ ಮತ್ತು ಮಕ್ಕಳಾದ ಸಕಲ ಕ್ರೈಸ್ತರಿಗೆ ಕೊಟ್ಟ ಸಲಹೆಯ ಹಿಂದೆ ಇತ್ತು. ಅವನಂದದ್ದು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯೆ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.”—1 ಪೇತ್ರ 2:12; 3:16.
ಬೈಬಲಿನ ಮೇಲ್ಮಟ್ಟದ ವಿವೇಕ
6. ಇತರರು ಬೈಬಲನ್ನು ಗಣ್ಯಮಾಡುವಂತೆ ನಾವು ನೆರವಾಗಬೇಕೆಂಬದನ್ನು ಕಾಣಲು ಪೇತ್ರನು ನಮಗೆ ಹೇಗೆ ಸಹಾಯ ಮಾಡುತ್ತಾನೆ?
6 ಇದಲ್ಲದೆ, ಪೇತ್ರನು ಇನ್ನೂ ಬುದ್ಧಿ ಹೇಳಿದಂತೆ, “ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆ ಪಡಿಸಿರಿ.” ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧರಾಗಿರಿ. ಆದರೆ ಅದನ್ನು ಸಾತ್ವಿಕತೆಯಿಂದಲೂ ಮನೋಭೀತಿಯಿಂದಲೂ ಹೇಳಿರಿ” ಎಂಬದನ್ನು ಕ್ರೈಸ್ತರು ಮಾಡುವದಾದರೆ, ಇತರರು ಬೈಬಲನ್ನು ಗಣ್ಯಮಾಡಲು ಅವರು ಸಹಾಯ ನೀಡಬಲ್ಲರು. (1 ಪೇತ್ರ 3:15) ಕ್ರೈಸ್ತ ಶುಶ್ರೂಷಕರು ಬೈಬಲಿನ ಸಮರ್ಥನೆ ಮಾಡಿ ಅದು ದೇವರ ವಾಕ್ಯವೆಂದು ಇತರರಿಗೆ ವಿವರಿಸಲು ಶಕ್ತರಾಗಬೇಕು. ಅವರು ಇದನ್ನು ಹೇಗೆ ಮಾಡಬಲ್ಲರು?
7. ಬೈಬಲಿನ ಕುರಿತು ಯಾವ ನಿಜತ್ವವು ಅದು ದೇವರ ವಾಕ್ಯವಾಗಿರಲೇಬೇಕೆಂದು ತೋರಿಸುತ್ತದೆ?
7 ಒಡಂಬಡಿಸುವ ಒಂದು ತರ್ಕಸರಣಿ ಜ್ಞಾನೋಕ್ತಿ ಪುಸ್ತಕದಲ್ಲಿದೆ. ಅಲ್ಲಿ ನಾವು ಓದುವುದು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ. ನಿನ್ನ ಕಿವಿಯನ್ನು ವಿವೇಕದ ಕಡೆಗೂ ತಿರುಗಿಸು. . . . ಆಗ ನೀನು ದೈವಜ್ಞಾನವನ್ನು ಪಡೆದುಕೊಳ್ಳುವಿ. ಯೆಹೋವನೇ ಜ್ಞಾನವನ್ನು ಕೊಡುವಾತನು. ಆತನ ಬಾಯಿಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.” (ಜ್ಞಾನೋಕ್ತಿ 2:1-6) ದೇವರ ಸ್ವಂತ ವಿವೇಕ ಬೈಬಲಿನ ಪುಟಗಳಲ್ಲಿ ಕಂಡುಬರುತ್ತದೆ. ಒಬ್ಬ ಯಥಾರ್ಥಚಿತ್ತನು ಆ ಅಗಾಧವಾದ ವಿವೇಕವನ್ನು ನೋಡುವಲ್ಲಿ ಬೈಬಲು ಕೇವಲ ಮನುಷ್ಯ ವಾಕ್ಯಕ್ಕಿಂತ ಮೇಲ್ಮಟ್ಟದ್ದೆಂದು ಗ್ರಹಿಸದೆ ಹೋಗನು.
8, 9. ಐಶ್ವರ್ಯ ಸಂಪಾದನೆಯಲ್ಲಿ ಸಮತೆಯ ವೀಕ್ಷಣವಿರಬೇಕೆಂಬ ಬೈಬಲಿನ ಬುದ್ಧಿವಾದ ಹೇಗೆ ಸರಿಯೆಂದು ತೋರಿಸಲ್ಪಟ್ಟಿದೆ?
8 ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ. ಇಂದು ಜೀವನ ಯಶಸ್ಸು ಸಾಮಾನ್ಯವಾಗಿ ಆರ್ಥಿಕ ರೀತಿಯಲ್ಲಿ ಅಳೆಯಲ್ಪಡುತ್ತದೆ. ಮನುಷ್ಯನು ಎಷ್ಟು ಹೆಚ್ಚು ಸಂಪಾದಿಸುತ್ತಾನೋ ಅಷ್ಟು ಹೆಚ್ಚು ಕೃತಕೃತ್ಯನೆಂದು ಎಣಿಸಲಾಗುತ್ತದೆ. ಬೈಬಲಾದರೋ ಪ್ರಾಪಂಚಿಕ ವಸ್ತುಗಳ ಮೇಲೆ ಮಿತಿಮೀರಿ ಪ್ರಾಮುಖ್ಯತೆ ಇಡುವ ವಿರುದ್ಧ ಎಚ್ಚರಿಸುತ್ತದೆ: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರ ಪಟ್ಟು ಅದರಿಂದ ಕ್ರಿಸ್ತ ನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿ ಕೊಳ್ಳುತ್ತಾರೆ.”—1 ತಿಮೊಥಿ 6:9, 10; ಇದನ್ನು ಮತ್ತಾಯ 6:24ಕ್ಕೆ ಹೋಲಿಸಿ.
9 ಈ ಎಚ್ಚರಿಕೆ ಎಷ್ಟು ಉಚಿತವೆಂಬದನ್ನು ಅನುಭವವು ತೋರಿಸಿದೆ. ಒಬ್ಬ ನಿಪುಣ ಮನಶಾಸ್ತ್ರಜ್ಞನು ಹೇಳುವುದು: “ಒಂದನೇ ನಂಬರಿನವರೂ ಧನಿಕರೂ ಆಗುವುದರಿಂದ ಉದ್ದೇಶ ಪೂರೈಕೆ, ತೃಪ್ತಿ, ಸಪ್ರಮಾಣದ ಗೌರವ ಮತ್ತು ಪ್ರೇಮ ನಿಮಗೆ ಸಿಕ್ಕಿದಂತೆ ಅನಿಸುವುದಿಲ್ಲ.” ಹೌದು, ಸಂಪತ್ತನ್ನು ಬೆನ್ನಟ್ಟುವದಕ್ಕೆ ತಮ್ಮ ಶಕ್ತಿಯನ್ನೆಲ್ಲಾ ಉಪಯೋಗಿಸುವವರು ಅನೇಕ ವೇಳೆ ಕಠೋರ ಮತ್ತು ಹತಾಶರಾಗುತ್ತಾರೆ. ಶಾಸ್ತ್ರವು, ಹಣದ ಮೌಲ್ಯವನ್ನು ಒಪ್ಪುತ್ತಾದರೂ ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ಯಾವುದೋ ವಿಷಯಕ್ಕೆ ಕೈ ತೋರಿಸುತ್ತದೆ: “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ. ಜ್ಞಾನಕ್ಕೆ ವಿಶೇಷವೇನಂದರೆ ಅದು ಜೀವದಾಯಕವೆಂಬದೇ.”—ಪ್ರಸಂಗಿ 7:12.
10. ಸಹವಾಸದ ವಿಷಯ ಎಚ್ಚರವಿರಬೇಕೆಂಬ ಬೈಬಲಿನ ಸಲಹೆಗೆ ನಾವು ಏಕೆ ಕಿವಿಗೊಡಬೇಕು?
10 ಬೈಬಲಿನಲ್ಲಿ ಇಂಥ ಅನೇಕ ಕಟ್ಟಳೆಗಳಿವೆ. ಇನ್ನೊಂದು ಹೀಗೆನ್ನುತ್ತದೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು. ಜ್ಞಾನ ಹೀನರ ಒಡನಾಡಿ ಸಂಕಟ ಪಡುವನು.” (ಜ್ಞಾನೋಕ್ತಿ 13:20) ಇದು ಸಹ ಅನುಭವದ ಮೂಲಕ ಸತ್ಯವೆಂದು ಸಾಬೀತಾಗಿದೆ. ಸಮಾನ ವಯಸ್ಸಿನವರಿಂದ ಬರುವ ಒತ್ತಡ ಅನೇಕ ಯುವಜನರನ್ನು ಕುಡುಕತನ, ಮಾದಕ ಪದಾರ್ಥದ ದುರುಪಯೋಗ ಮತ್ತು ಲೈಂಗಿಕ ದುರಾಚಾರಕ್ಕೆ ನಡಿಸಿದೆ. ಅಶ್ಲೀಲ ಭಾಷೆಯನ್ನು ಆಡುವವರೊಂದಿಗೆ ಬೆರೆಯುವವರು ಕ್ರಮೇಣ ತಾವೂ ಅಸಹ್ಯ ಭಾಷೆಯನ್ನು ಆಡುವವರಾಗಿ ಕಂಡು ಕೊಳ್ಳುವರು. ಅನೇಕರು ತಮ್ಮ ಕೆಲಸದ ಯಜಮಾನರಿಂದ ‘ಎಲ್ಲರೂ ಮಾಡುವ ಕಾರಣ’ ತಾವೂ ಕದಿಯುತ್ತಾರೆ. ಸತ್ಯವಾಗಿ, ಬೈಬಲು ಹೇಳುವಂತೆ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.”—1 ಕೊರಿಂಥ 15:33.
11. ಸುವರ್ಣನಿಯಮವನ್ನು ಪಾಲಿಸುವ ವಿವೇಕವನ್ನು ಒಂದು ಮನೋವೈಜ್ಞಾನಿಕ ಅಧ್ಯಯನ ಹೇಗೆ ತೋರಿಸಿತು?
11 ಬೈಬಲಿನ ಅತ್ಯಂತ ಪ್ರಸಿದ್ಧ ಬುದ್ಧಿವಾದಗಳಲ್ಲಿ ಒಂದನ್ನು ಸುವರ್ಣ ನಿಯಮವೆಂದು ಕರೆಯಲಾಗಿದೆ: “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಮಾನವಕುಲ ಈ ನಿಯಮವನ್ನು ಪಾಲಿಸುವಲ್ಲಿ ಈ ಜಗತ್ತು ಬದುಕಲು ಹೆಚ್ಚು ಉತ್ತಮ ಸ್ಥಳವಾಗುವದು ಖಂಡಿತ. ಆದರೆ, ಸಾಮಾನ್ಯವಾಗಿ ಜನರು ಈ ನಿಯಮವನ್ನು ಅನುಸರಿಸದಿದ್ದರೂ ನೀವು ವ್ಯಕ್ತಿಪರವಾಗಿ ಇದನ್ನು ಮಾಡುವುದು ಒಳ್ಳೆಯದು. ಏಕೆ? ನಾವು ಪರರ ಜಾಗ್ರತೆ ವಹಿಸಿ ಪರರ ಚಿಂತೆಯನ್ನು ಮಾಡುವಂತೆ ಸೃಷ್ಟಿಸಲ್ಪಟ್ಟಿದ್ದೇವೆ. (ಅಪೊಸ್ತಲರ ಕೃತ್ಯ 20:35) ಜನರು ಇತರರಿಗೆ ಸಹಾಯ ಮಾಡಿದಾಗ ಅವರ ಪ್ರತಿವರ್ತನೆ ಏನೆಂದು ಕಂಡು ಹಿಡಿಯಲು ಅಮೆರಿಕದಲ್ಲಿ ಮಾಡಿದ ಒಂದು ಮನೋವೈಜ್ಞಾನಿಕ ಅಧ್ಯಯನವು ಈ ತೀರ್ಮಾನಕ್ಕೆ ಬಂದಿತು: “ಹಾಗಾದರೆ, ಪರರ ಚಿಂತೆ ಮಾಡುವುದು ಸಚ್ವಿಂತೆಯಷ್ಟೇ ಮಾನವ ಪ್ರಕೃತಿಯ ಭಾಗವಾಗಿದೆಯೆಂದು ತೋರುತ್ತದೆ.”—ಮತ್ತಾಯ 22:39.
ಬೈಬಲಿನ ಬುದ್ಧಿವಾದ—ಅದ್ವಿತೀಯವಾಗಿ ವಿವೇಕಪ್ರದ
12. ಯಾವ ಒಂದು ರೀತಿಯಲ್ಲಿ ಬೈಬಲ್ ಅದ್ವಿತೀಯವಾಗಿದೆ?
12 ಇಂದು ಬೈಬಲಲ್ಲದೆ ಅನೇಕ ಬಾಹ್ಯ ಸಲಹೆಗಳ ಮೂಲಗಳಿವೆ. ವಾರ್ತಾ ಪತ್ರಿಕೆಗಳಲ್ಲಿ ಸಲಹಾಂಕಣ, ಪುಸ್ತಕದಂಗಡಿಗಳಲ್ಲಿ ಸ್ವಸಹಾಯಕ್ಕೆ ಅನೇಕಾನೇಕ ಪುಸ್ತಕಗಳಿವೆ. ಇದಲ್ಲದೆ, ಮನಃಶಾಸ್ತ್ರಜ್ಞರು, ಸಲಹೆ ನೀಡುವ ಕಸಬಿನವರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಬುದ್ಧಿ ನೀಡುವವರಿದ್ದಾರೆ. ಆದರೆ, ಬೈಬಲು, ಕಡಿಮೆ ಪಕ್ಷ, ಮೂರು ವಿಧಗಳಲ್ಲಾದರೂ ಅದ್ವಿತೀಯ. ಒಂದನೆಯದಾಗಿ, ಅದರ ಬುದ್ಧಿವಾದ ಸದಾ ಪ್ರಯೋಜನಕರ. ಅದು ಬರೇ ಕಲ್ಪನೆಯಲ್ಲ ಮತ್ತು ಅದೆಂದಿಗೂ ನಮಗೆ ಹಾನಿಕಾರಕವಲ್ಲ. ಬೈಬಲಿನ ಬುದ್ಧಿವಾದವನ್ನು ಪಾಲಿಸುವವನು, “ನಿನ್ನ ಆಜ್ಞೆಗಳು ಬಹು ಖಂಡಿತವಾಗಿವೆ” ಎಂದು ದೇವರಿಗೆ ಪ್ರಾರ್ಥಿಸಿದ ಕೀರ್ತನೆಗಾರನ ಮಾತುಗಳನ್ನು ಸಮ್ಮತಿಸಲೇ ಬೇಕು.—ಕೀರ್ತನೆ 93:5.
13. ಬೈಬಲು ಮಾನವ ವಿವೇಕ ಮೂಲಗಳಿಂದ ಎಷ್ಟೋ ಶ್ರೇಷ್ಠವೆಂದು ಯಾವುದು ತೋರಿಸುತ್ತದೆ?
13 ಎರಡನೆಯದಾಗಿ, ಬೈಬಲು ಸಮಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ. (1 ಪೇತ್ರ 1:25; ಯೆಶಾಯ 40:8) ಮಾನವ ಮೂಲಗಳಿಂದ ಬರುವ ಬುದ್ಧಿವಾದವು ಬದಲಾವಣೆ ಹೊಂದುವದರಲ್ಲಿ ಕುಪ್ರಸಿದ್ಧ. ಮತ್ತುಸಕಾಲಿಕವೆಂದು ಹೇಳಲಾಗುವ ಸಲಹೆಗಳನ್ನು ಅನೇಕ ವೇಳೆ ಮರುವರ್ಷದಲ್ಲಿ ಟೀಕಿಸಲಾಗುತ್ತದೆ. ಆದರೆ, ಬೈಬಲು ಸುಮಾರು 2000 ವರ್ಷಗಳ ಹಿಂದೆ ಪೂರ್ಣಗೊಂಡಿರುವದಾದರೂ, ದೊರಕ ಸಾಧ್ಯವಿರುವ ಅತ್ಯಂತ ವಿವೇಕದ ಸಲಹೆಯು ಅದರಲ್ಲಿ ಇನ್ನೂ ಅಡಗಿರುವುದು ಮಾತ್ರವಲ್ಲ, ಅದರ ಮಾತುಗಳು ಜಗತ್ತಿನಲ್ಲೆಲ್ಲಾ ಅನ್ವಯ ಯೋಗ್ಯವಾಗಿದೆ. ನಾವು ಆಫ್ರಿಕಾ, ಏಷ್ಯಾ, ದಕ್ಷಿಣ ಅಥವಾ ಉತ್ತರ ಅಮೆರಿಕ ಅಥವಾ ಸಮುದ್ರ ದ್ವೀಪಗಳಲ್ಲಿ ವಾಸಿಸಲಿ, ಅವು ಸಮಾನ ಪರಿಣಾಮದಿಂದ ನಮಗೆ ತಟ್ಟುತ್ತವೆ.
14. ದೇವರ ವಾಕ್ಯದ ಬುದ್ಧಿವಾದ ಯಾವ ವಿಧದಲ್ಲಿ ಮಿಗಿಲಾಗಿದೆ?
14 ಅಂತಿಮವಾಗಿ, ಬೈಬಲಿನ ಬುದ್ಧಿವಾದದ ವ್ಯಾಪಕವಾದ ಪರಿಮಿತಿಗೆ ಸರಿಸಮಾನತೆಯೇ ಇಲ್ಲ. ಬೈಬಲಿನ ಒಂದು ಜ್ಞಾನೋಕ್ತಿ, “ಯೆಹೋವನೇ ಜ್ಞಾನ [ವಿವೇಕ, NW ] ನ್ನು ಕೊಡುವಾತನು” ಎಂದು ಹೇಳುತ್ತದೆ ಮತ್ತು ಸಮಸ್ಯೆ ಮತ್ತು ಮಾಡಲಿರುವ ನಿರ್ಣಯ ಯಾವುದೇ ಆಗಿರಲಿ, ಬೈಬಲು ಅದನ್ನು ಬಗೆಹರಿಸಲು ಸಹಾಯ ನೀಡುತ್ತದೆ. (ಜ್ಞಾನೋಕ್ತಿ 2:6) ಮಕ್ಕಳು, ಹದಿಹರೆಯದವರು, ಹೆತ್ತವರು, ವೃದ್ಧರು, ನೌಕರರು, ಯಜಮಾನರು, ಅಧಿಕಾರಸ್ಥರು—ಇವರೆಲ್ಲರಿಗೂ ಬೈಬಲಿನ ವಿವೇಕ ಅನ್ವಯಿಸುತ್ತದೆ. (ಜ್ಞಾನೋಕ್ತಿ 4:11) ಯೇಸು ಮತ್ತು ಅವನ ಅಪೊಸ್ತಲರ ದಿನಗಳಲ್ಲಿ ಆಜ್ಞಾತವಾಗಿದ್ದ ಸ್ಥಿತಿಗತಿಗಳನ್ನು ನಾವು ಎದುರಿಸುವಾಗಲೂ ಬೈಬಲು ಕಾರ್ಯಸಾಧಕ ಬುದ್ಧಿವಾದವನ್ನು ಕೊಡುತ್ತದೆ. ದೃಷ್ಟಾಂತಕ್ಕೆ, ಹೊಗೆ ಸೊಪ್ಪಿನ ಸೇವನೆ ಮಧ್ಯಾಸ್ಯದಲ್ಲಿ ಆಜ್ಞಾತವಾಗಿತ್ತು. ಆದರೆ ಇಂದು ಇದು ಬಹು ವ್ಯಾಪಕವಾಗಿದೆ. ಆದರೆ, “ಯಾವುದಕ್ಕೂ ಒಳಗಾಗುವುದರಿಂದ [ಅಥವಾ ನಿಯಂತ್ರಣಕ್ಕೆ ಒಳಗಾಗುವುದರಿಂದ] ತಪ್ಪಬೇಕು” ಮತ್ತು “ಶರೀರಾತ್ಮದ ಕಲ್ಮಶವನ್ನು” ತೊಲಗಿಸಬೇಕು ಎಂಬ ಬೈಬಲಿನ ಸಲಹೆಯನ್ನು ಗಮನಿಸುವವನು, ಈ ಚಟಹಿಡಿಸುವ ಮತ್ತು ಆರೋಗ್ಯಕ್ಕೆ ಹಾನಿಕರವಾದ ಅಭ್ಯಾಸದಿಂದ ದೂರವಿರುವನು.”—1 ಕೊರಿಂಥ 6:12; 2 ಕೊರಿಂಥ 7:1.
ನಮ್ಮ ದೀರ್ಘಾವಧಿಯ ಹಿತ
15. ಬೈಬಲು ಈಗಿನ ಕಾಲಕ್ಕೆ ಅಸಂಬದ್ಧವೆಂದು ಅನೇಕರು ವಾದಿಸುವದೇಕೆ?
15 ಹೌದು, ಅನೇಕರು ಬೈಬಲು ಹಳೆಯ ಕಾಲಕ್ಕಾಗಿ ಬರೆಯಲ್ಪಟ್ಟದ್ದೆಂದೂ ಈ ಇಪ್ಪತ್ತನೆಯ ಶತಕಕ್ಕೆ ಅಸಂಬದ್ಧವೆಂದೂ ಹೇಳಬಹುದು. ಆದರೆ ಇದಕ್ಕೆ ಪ್ರಾಯಶಃ ಕಾರಣವು ಅವರು ಕೇಳಲಿಚ್ಛಿಸುವುದನ್ನು ಬೈಬಲು ಹೇಳದಿರುವದೇ. ಶಾಸ್ತ್ರದ ಸಲಹೆಯನ್ನು ಪಾಲಿಸುವುದು ನಮ್ಮ ದೀರ್ಘಕಾಲದ ಹಿತಕ್ಕಾಗಿದೆ. ಆದರೆ ಇದಕ್ಕೆ ಅನೇಕವೇಳೆ ತಾಳ್ಮೆ, ಶಿಸ್ತು ಮತ್ತು ಸ್ವಾರ್ಥತ್ಯಾಗದ ಅಗತ್ಯವಿದೆ. ಮತ್ತು ಈ ಗುಣಗಳು ತತ್‌ಕ್ಷಣ ಇಚ್ಛಾಪೂರ್ತಿಯನ್ನು ಹುಡುಕುವ ಜಗತ್ತಿಗೆ ಜನಪ್ರಿಯವಲ್ಲ.—ಜ್ಞಾನೋಕ್ತಿ 1:1-3.
16, 17. ಲೈಂಗಿಕ ನೀತಿಯ ಯಾವ ಶ್ರೇಷ್ಠ ಮಟ್ಟಗಳನ್ನು ಬೈಬಲು ಇಟ್ಟದೆ, ಮತ್ತು ಆಧುನಿಕ ಕಾಲಗಳಲ್ಲಿ ಇವನ್ನು ಅಲಕ್ಷ್ಯಿಸಲಾಗಿರುವುದು ಹೇಗೆ?
16 ಲೈಂಗಿಕ ನೀತಿಯನ್ನು ತಕ್ಕೊಳ್ಳಿ. ಶಾಸ್ತ್ರದ ಮಟ್ಟ ಅತ್ಯಂತ ಕಟ್ಟುನಿಟ್ಟಾದದ್ದು. ಲೈಂಗಿಕ ಸಂಬಂಧ ವಿವಾಹದೊಳಗೆ ಮಾತ್ರ. ವಿವಾಹಕ್ಕೆ ಬಾಹ್ಯವಾದ ಸಕಲ ಸಂಬಂಧವೂ ನಿಷಿದ್ಧ. ನಾವು ಓದುವುದು: “ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ವಿಟರು, ಪುರುಷಗಾಮಿಗಳು . . . ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.” (1 ಕೊರಿಂಥ 6:9, 10) ಇದಲ್ಲದೆ, ಕ್ರೈಸ್ತರಿಂದ ಬೈಬಲು ಏಕಪತ್ನೀತ್ವವನ್ನು, ಒಬ್ಬ ಪತ್ನಿಗೆ ಒಬ್ಬನೇ ಪತಿಯನ್ನು, ಕೇಳಿಕೊಳ್ಳುತ್ತದೆ. (1 ತಿಮೊಥಿ 3:2) ಮತ್ತು ವಿವಾಹ ವಿಚ್ಛೇದ ಮತ್ತು ಪ್ರತ್ಯೇಕ ವಾಸವನ್ನು ಅನುಮತಿಸುವ ವಿಪರೀತ ಸಂದರ್ಭಗಳಿರ ಬಹುದಾದರೂ ಸಾಮಾನ್ಯವಾಗಿ ವಿವಾಹ ಬಂಧವು ಜೀವಾವಧಿಗಾಗಿದೆ. ಯೇಸು ತಾನೇ ಹೇಳಿದ್ದು: “ಈ ಕಾರಣದಿಂದ ಪುರುಷನು ತಂದೆ ತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿ ಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ? ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ. ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”—ಮತ್ತಾಯ 19:4-6, 9; 1 ಕೊರಿಂಥ 7:12-16.
17 ಇಂದು, ಈ ಮಟ್ಟವನ್ನು ವ್ಯಾಪಕವಾಗಿ ಅಲಕ್ಷ್ಯಿಸಲಾಗುತ್ತದೆ. ಸಡಿಲು ಲೈಂಗಿಕಾಚಾರವನ್ನು ಸಹಿಸಿಕೊಳ್ಳಲಾಗುತ್ತದೆ. ಪ್ರಣಯ ಪರಿಚಯ ಮಾಡಿಕೊಳ್ಳುವ ಹದಿಹರೆಯದವರ ಮಧ್ಯೆ ಲೈಂಗಿಕ ಸಂಬಂಧ ಸಾಧಾರಣವೆಂದು ಎಣಿಸಲ್ಪಡುತ್ತದೆ. ವಿವಾಹವಿಲ್ಲದೆನೇ ಕೂಡಿ ಜೀವಿಸುವುದನ್ನು ಅಂಗೀಕರಿಸಲಾಗುತ್ತದೆ. ವೈವಾಹಿಕ ದಂಪತಿಗಳಿಬ್ಬರೂ ಅಕ್ರಮ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳುವುದು ಅಸಾಮಾನ್ಯವಲ್ಲ. ಈ ಆಧುನಿಕ ಲೋಕದಲ್ಲಿ ವಿವಾಹ ವಿಚ್ಛೇದವು ಸರ್ವವ್ಯಾಪಿ ವ್ಯಾಧಿ. ಆದರೆ ಈ ಸಡಿಲು ಮಟ್ಟವು ಸಂತೋಷವನ್ನು ತಂದಿರುವದಿಲ್ಲ. ಇಂದಿನ ದುಷ್ಪರಿಣಾಮವು, ಬೈಬಲು ನ್ಯಾಯವಾಗಿಯೇ ಕಟ್ಟುನಿಟ್ಟಾದ ನೈತಿಕ ಮಟ್ಟವನ್ನು ಕೇಳಿಕೊಂಡಿದೆ ಎಂಬದನ್ನು ರುಜುಪಡಿಸುತ್ತದೆ.
18, 19. ಯೆಹೋವನ ನೀತಿಮಟ್ಟಗಳ ವ್ಯಾಪಕವಾದ ಅಲಕ್ಷ್ಯಾಭಾವದಿಂದ ಪರಿಣಾಮವೇನಾಗಿದೆ?
18 ಲೇಡಿಸ್ ಹೋಮ್ ಜರ್ನಲ್ ಪತ್ರಿಕೆ ಹೇಳಿದ್ದು: “ಅರವತ್ತು ಮತ್ತು ಎಪ್ಪತ್ತುಗಳನ್ನು ಪ್ರತಿನಿಧೀಕರಿಸಿದ ಲೈಂಗಿಕ ಪ್ರಾಧಾನ್ಯತೆಯು ಅಪಾರ ಮಾನವ ಸಂತೋಷವನ್ನು ತರದೆ ಗಂಭೀರವಾದ ಮಾನವ ಸಂಕಟವನ್ನು ತಂದಿದೆ.” ಇಲ್ಲಿ ಹೇಳಿರುವ “ಗಂಭೀರವಾದ ಮಾನವ ಸಂಕಟದಲ್ಲಿ” ಹೆತ್ತವರ ವಿವಾಹ ವಿಚ್ಛೇದದಿಂದಾಗಿ ಪೆಟ್ಟಾಗಿರುವ ಮಕ್ಕಳು ಮತ್ತು ತೀರಾ ಮನೋವೇದನೆಯನ್ನು ಅನುಭವಿಸುವ ವಯಸ್ಕರು ಸೇರಿದ್ದಾರೆ. ಹೆತ್ತವರಲ್ಲಿ ಒಬ್ಬರೇ ಇರುವ ಕುಟುಂಬಗಳ ವರ್ಧನ ಮತ್ತು ಅವಿವಾಹಿತರೂ ತಾವೇ ಬಾಲ್ಯಾವಸ್ಥೆಯಿಂದ ಇನ್ನೂ ಹೊರಬರದವರೂ ಆದ ಮಕ್ಕಳನ್ನು ಹೆತ್ತಿರುವ ಹುಡುಗಿಯರ ಸಾಂಕ್ರಾಮಿಕ ರೋಗ ಇದರಲ್ಲಿ ಸೇರಿದೆ. ಇದಲ್ಲದೆ ಜೆನಿಟಲ್ ಹರ್ಪೀಸ್, ಗೊನೋರಿಯ, ಸಿಫಿಲಿಸ್, ಕ್ಲೈಮಿಡಿಯ ಮತ್ತು ಏಯ್ಡ್ಸ್ ಮುಂತಾದ ಲೈಂಗಿಕವಾಗಿ ಹರಡಿಸಲ್ಪಡುವ ಸರ್ವವ್ಯಾಪ್ತಿ ವ್ಯಾಧಿಗಳೂ ಸೇರಿವೆ.
19 ಇದನ್ನು ವೀಕ್ಷಿಸುತ್ತಾ ಸಮಾಜಶಾಸ್ತ್ರದ ಪ್ರೊಫೆಸರರೊಬ್ಬರು ಹೇಳುವುದು: “ನಮ್ಮ ಪೌರ ಜನರ ಅವಶ್ಯಕತೆ ಮತ್ತು ಸ್ವಾತಂತ್ರ್ಯ ಹಕ್ಕಿಗೆ ಅಂದರೆ ರೋಗದಿಂದ ಸ್ವಾತಂತ್ರ್ಯ ಮತ್ತು ಅನಪೇಕ್ಷಿತ ಗರ್ಭಧಾರಣೆಯಿಂದ ಸ್ವಾತಂತ್ರ್ಯಕ್ಕೆ ಅತ್ಯಂತ ಪ್ರತ್ಯುತ್ತರದಾಯಕ ಕಾರ್ಯನೀತಿಯಾಗಿ ವಿವಾಹಮುನ್ನ ಲೈಂಗಿಕ ವರ್ಜನವನ್ನು ಬೆಳೆಸುವದು ಒಳ್ಳೆಯದೋ ಎಂದು ಪರಿಗಣಿಸಲು ನಾವು ಪ್ರಾಯಶಃ ಸಾಕಷ್ಟು ಪ್ರಾಯಸ್ಥರಾಗಿದ್ದೇವೆ.” ಬೈಬಲು ಸತ್ಯವಾಗಿಯೇ ಹೇಳುವದು: “ಯಾವನು ಅಹಂಕಾರಿಗಳಲ್ಲಿಯೂ ಸುಳ್ಳನ್ನು ಹಿಂಬಾಲಿಸುವವರಲ್ಲಿಯೂ ಸೇರದೆ ಯೆಹೋವನನ್ನೇ ನಂಬುತ್ತಾನೋ ಅವನೇ ಧನ್ಯನು.” (ಕೀರ್ತನೆ 40:4) ಬೈಬಲಿನ ವಿವೇಕದಲ್ಲಿ ಭರವಸವನ್ನು ಇಡುವವರು, ಬೈಬಲನ್ನು ವಿರೋಧಿಸುತ್ತಾ ಸಡಿಲು ನೈತಿಕ ನಡತೆ ಆನಂದವನ್ನು ತರುತ್ತದೆಂದು ಹೇಳುವವರ ಸುಳ್ಳಿನಿಂದ ವಂಚಿತರಾಗರು. ಬೈಬಲಿನ ವಿವೇಕದ ಹಾಗೂ ಕಟ್ಟುನಿಟ್ಟಾದ ಮಟ್ಟಗಳು ನಮ್ಮ ಅತ್ಯುತ್ತಮ ಹಿತಕ್ಕಾಗಿವೆ.
ಜೀವನದ ಕಷ್ಟಕರವಾದ ಸಮಸ್ಯೆಗಳು
20. ತಮ್ಮ ಜೀವನದಲ್ಲಿ ಕಡುಬಡತನವನ್ನು ನಿಭಾಯಿಸಬೇಕಾದವರಿಗೆ ಯಾವ ಬೈಬಲ್ ಮೂಲಸೂತ್ರಗಳು ಸಹಾಯಕಾರಿಯಾಗಿ ಪರಿಣಮಿಸಿವೆ?
20 ಬೈಬಲಿನ ವಿವೇಕವು ನಾವು ಜೀವನದಲ್ಲಿ ಎದುರಿಸುವ ಕಷ್ಟಕರವಾದ ಸಮಸ್ಯೆಗಳನ್ನು ನಿಭಾಯಿಸಲು ಸಹ ಸಹಾಯ ಮಾಡುತ್ತದೆ. ಉದಾಹರಣೆಗೆ, ಅನೇಕ ದೇಶಗಳಲ್ಲಿ ತೀರಾ ಕಡುಬಡತನದಲ್ಲಿ ಜೀವಿಸುವ ಕ್ರೈಸ್ತರಿದ್ದಾರೆ. ಆದರೂ ಅವರು ಬಡತನವನ್ನು ನಿಭಾಯಿಸುತ್ತಾ ಅದರಲ್ಲೂ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಇದು ಹೇಗೆ? ದೇವರ ಪ್ರೇರಿತ ವಾಕ್ಯವನ್ನು ಪಾಲಿಸಿಯೇ. ಅವರು ಕೀರ್ತನೆ 55:22 ರ ದುಃಖಶಾಮಕ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು. ಆತನು ನಿನ್ನನ್ನು ಉದ್ಧಾರ ಮಾಡುವನು.” ಸಹನಶಕ್ತಿಗಾಗಿ ಅವರು ದೇವರ ಮೇಲೆ ಹೊಂದಿ ಕೊಳ್ಳುತ್ತಾರೆ. ಬಳಿಕ ಅವರು ಬೈಬಲ್ ಸೂತ್ರಗಳನ್ನು ಅನ್ವಯಿಸಿ ಕೊಳ್ಳುತ್ತಾ ಧೂಮಪಾನ, ಕುಡುಕತನ, ಮುಂತಾದ ನಿಷ್ಪಯ್ರೋಜಕ ಅಭ್ಯಾಸಗಳಿಂದ ದೂರವಿರುತ್ತಾರೆ. ಬೈಬಲ್ ಶಿಫಾರಸು ಮಾಡುವಂತೆ ಅವರು ಉದ್ಯೋಗಶೀಲರಾಗುವುದರಿಂದ, ಸೋಮಾರಿಗಳು ಅಥವಾ ಹತಾಶರು ತಮ್ಮ ಕುಟುಂಬಗಳನ್ನು ಪೋಷಿಸಲು ಅಸಾಧ್ಯವಾದ ಸ್ಥಿತಿಯಲ್ಲಿರುವಾಗ ಇವರಾದರೋ ಪೋಷಿಸ ಶಕ್ತರಾಗುತ್ತಾರೆ. (ಜ್ಞಾನೋಕ್ತಿ 6:6-11; 10:26) ಇದಲ್ಲದೆ, “ಕೆಟ್ಟ ನಡತೆಯುಳ್ಳವನನ್ನು ನೋಡಿ ಉರಿಗೊಳ್ಳ ಬೇಡ” ಎಂಬ ಬೈಬಲಿನ ಎಚ್ಚರಿಕೆಗೆ ಅವರು ಕಿವಿಗೊಡುತ್ತಾರೆ. (ಕೀರ್ತನೆ 37:1) ಅವರು ಜೂಜು ಅಥವಾ ಮಾದಕ ದ್ರವ್ಯಗಳ ಮಾರಾಟದಂಥ ಪಾತಕಗಳಲ್ಲಿ ಭಾಗವಹಿಸುವದಿಲ್ಲ. ಇಂಥ ವಿಷಯಗಳು ಅವರ ಸಮಸ್ಯೆಗಳಿಗೆ ಕ್ಷಿಪ್ರ “ಪರಿಹಾರ” ವನ್ನು ಒದಗಿಸ ಬಹುದು. ಆದರೆ ದೀರ್ಘಾವಧಿಯ ಫಲವು ಕಟು.
21, 22. (ಎ) ಒಬ್ಬ ಕ್ರೈಸ್ತ ಮಹಿಳೆ ಬೈಬಲಿನಿಂದ ಹೇಗೆ ದುಃಖೋಪಶಮನ ಪಡೆದಳು? (ಬಿ) ಬೈಬಲಿನ ಕುರಿತಾದ ಇನ್ನಾವ ನಿಜತ್ವವು ಅದು ದೇವರ ವಾಕ್ಯವೆಂದು ತಿಳಿಯುವಂತೆ ನಮಗೆ ಸಹಾಯ ಮಾಡುತ್ತದೆ?
21 ಬೈಬಲನ್ನು ಅನುಸರಿಸುವುದು ಕಡು ಬಡವರಿಗೆ ನಿಜವಾಗಿಯೂ ಸಹಾಯ ಮಾಡುತ್ತದೋ? ಅನೇಕಾನೇಕ ಅನುಭವಗಳು ಹೌದೆಂದು ರುಜುಪಡಿಸುತ್ತವೆ. ಏಷ್ಯಾದ ಒಬ್ಬ ಕ್ರೈಸ್ತ ವಿಧವೆ ಬರೆಯುವದು: “ನಾನು ದಾರಿದ್ರ್ಯ ರೇಖೆಯ ಪಕ್ಕದಲ್ಲಿ ಜೀವಿಸುತ್ತೇನಾದರೂ, ಕೋಪಿಸಿ ಕೊಳ್ಳುವುದಿಲ್ಲ ಅಥವಾ ಕಠೋರವಾಗಿರುವದಿಲ್ಲ. ಬೈಬಲ್ ಸತ್ಯಗಳು ನನಗೆ ಸಕಾರಾತ್ಮಕ ಹೊರ ನೋಟವನ್ನು ಕೊಡುತ್ತವೆ. ಯೇಸುವಿನ ಗಮನಾರ್ಹ ವಾಗ್ದಾನವೊಂದು ಆಕೆಯಲ್ಲಿ ನೆರವೇರಿದೆಯೆಂದು ಆಕೆ ವರದಿ ಮಾಡುತ್ತಾಳೆ. ಆಕೆ ಹೇಳಿದ್ದು: “ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:33) ಆಕೆ ತನ್ನ ಜೀವಿತದಲ್ಲಿ ದೇವರ ಸೇವೆಯನ್ನು ಪ್ರಥಮವಾಗಿ ಇಡುವದರಿಂದ ತಾನು ಒಂದಲ್ಲ ಒಂದು ವಿಧದಲ್ಲಿ ಲೌಕಿಕ ಜೀವನಾವಶ್ಯಕತೆಗಳನ್ನು ಪಡೆಯುತ್ತೇನೆಂದು ದೃಢವಾಗಿ ತಿಳಿಸುತ್ತಾಳೆ. ಮತ್ತು ಆಕೆಯ ಕ್ರೈಸ್ತ ಸೇವೆ ಅವಳಿಗೆ ಘನತೆ ಮತ್ತು ಜೀವನ ಧ್ಯೇಯವನ್ನು ಕೊಟ್ಟು ಆಕೆಯ ಬಡತನವನ್ನು ಸಹಿಸ ಸಾಧ್ಯವಾಗಿ ಮಾಡುತ್ತದೆ.
22 ನಿಜವಾಗಿಯೂ ಬೈಬಲಿನ ವಿವೇಕದ ಗಾಢತೆ, ಅದನ್ನು ದೇವರ ವಾಕ್ಯವೆಂದು ತೋರಿಸುತ್ತದೆ. ಕೇವಲ ಮಾನವರಿಂದ ತಯಾರಿಸಲ್ಪಟ್ಟ ಯಾವ ಪುಸ್ತಕವೂ ಜೀವನದ ಇಷ್ಟೊಂದು ವಿವಿಧ ಭಾಗಗಳನ್ನು ಆವರಿಸ ಸಾಧ್ಯವಿಲ್ಲ. ಅದು ಅಷ್ಟು ಆಳವಾದ ವಿವೇಚನೆಯುಳ್ಳದ್ದೂ ಹೊಂದಿಕೆಯುಳ್ಳದ್ದೂ ಆಗಿ ಸರಿಯಾಗಿರಲು ಸಾಧ್ಯವಿಲ್ಲ. ಆದರೆ ಬೈಬಲಿನ ದೈವಿಕ ಉಗಮವನ್ನು ತೋರಿಸುವ ಇನ್ನೊಂದು ನಿಜತ್ವವಿದೆ. ಇದು ಜನರನ್ನು ಒಳ್ಳೆಯದಕ್ಕೆ ಪರಿವರ್ತನೆ ಮಾಡಲು ಶಕ್ತಿಯುಳ್ಳದ್ದು. ಮುಂದಿನ ಲೇಖನದಲ್ಲಿ ನಾವಿದನ್ನು ಚರ್ಚಿಸೋಣ. (w90 4/1)
ನೀವು ವಿವರಿಸಬಲ್ಲಿರಾ?
◻ ಬೈಬಲನ್ನು ದೇವರ ವಾಕ್ಯವೆಂದು ಸ್ವೀಕರಿಸಿದ ಕಾರಣ ಯೆಹೋವನ ಸಾಕ್ಷಿಗಳು ಯಾವ ವಿಧದಲ್ಲಿ ಆಶೀರ್ವದಿಸಲ್ಪಟ್ಟಿರುತ್ತಾರೆ?
◻ ದೇವರ ವಾಕ್ಯದಲ್ಲಿ ವಿಶ್ವಾಸವಿಟ್ಟವರಾದ ಕಾರಣ ನಮಗೆ ಯಾವ ಅವಶ್ಯ ಹಂಗು ಇದೆ, ಮತ್ತು ಈ ಹಂಗನ್ನು ನಿರ್ವಹಿಸಲು ನಮ್ಮ ನಡತೆ ಹೇಗೆ ಸಹಾಯ ಮಾಡಬಲ್ಲದು?
◻ ಬೈಬಲಿನ ವಿವೇಕದ ಬುದ್ಧಿವಾದವನ್ನು ಕೇವಲ ಮಾನವ ಸಲಹೆಗಿಂತ ಉತ್ತಮವಾಗಿ ಮಾಡುವುದು ಯಾವುದು?
◻ ಬೈಬಲಿನ ವಿವೇಕದ ಗಾಢತೆಯನ್ನು ತೋರಿಸುವ ಕೆಲವು ದೃಷ್ಟಾಂತಗಳು ಯಾವುವು?