ಬೈಬಲ್ ಸಮಯಗಳಲ್ಲಿ ಯುವಸೇವಕರು
ಬೈಬಲು, ತಮ್ಮ ದೇವರ ಸೇವೆಯನ್ನು ಗಂಭೀರವಾಗಿ ತಗೆದುಕ್ಕೊಂಡು ಹಾಗೆ ಮಾಡಿದುದಕ್ಕಾಗಿ ಹೇರಳವಾಗಿ ಆಶೀರ್ವದಿಸಲ್ಪಟ್ಟಿರುವ ಅನೇಕ ಉತ್ತಮ ಯುವಜನರ ಕುರಿತು ಹೇಳುತ್ತದೆ. ನಾವು ಎಳೆಯರು, ಪ್ರಾಯಸ್ಥರು ಅಥವಾ ವೃದ್ಧರಾದರೂ ಈ ಉತ್ತಮ ತೆರದ ಬೈಬಲ್ ಮಾದರಿಗಳು ನಮಗೆ ಮಹಾ ಪ್ರೋತ್ಸಾಹವನ್ನು ನೀಡಬಲ್ಲವು.
ಯೋಸೇಫನು ಐಗುಪ್ತದಲ್ಲಿ ದಾಸ್ವತಕ್ಕೆ ಮಾರಲ್ಪಟ್ಟಾಗ ಕೇವಲ 17 ವಯಸ್ಸಿನವನಾಗಿದ್ದನು. ಅಲ್ಲಿ ತನ್ನ ಕುಟುಂಬ ಮತ್ತು ಪರಿಚಯಸ್ಥರಿಂದ ದೂರದಲ್ಲಿದ್ದ ಅವನು ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು. ಪೊಟಿಫಾರನ ಪತ್ನಿ ಯೋಸೇಫನನ್ನು ದುರ್ಮಾರ್ಗಕ್ಕೆ ಎಳೆಯಪ್ರಯತ್ನಿಸಿದಾಗ, “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪ ಮಾಡಲಿ” ಎಂದು ಅವನು ಉತ್ತರ ಕೊಟ್ಟನು. ಆ ದಿನಗಳ ಬಲಾಢ್ಯ ಅರಸನಾದ ಮಹಾ ಫರೋಹನ ಮುಂದೆಯೂ, ಫರೋಹನ ಕನಸುಗಳ ಅರ್ಥಕ್ಕೆ ಅವನು ದೇವರಿಗೆ ಗೌರವ ಕೊಡಲು ಸಂದರ್ಭ ತಕ್ಕೊಂಡನು. ಇದಕ್ಕಾಗಿ ಅವನಿಗೆ ಹೇರಳವಾದ ಆಶೀರ್ವಾದ ದೊರೆಯಿತು. ಐಗುಪ್ತರನ್ನೂ ತನ್ನ ಕುಟುಂಬದವರನ್ನೂ ಬರಗಾಲದ ಮರಣದಿಂದ ಉಳಿಸಲು ಮತ್ತು ತನ್ನ ತಂದೆ ಯಾಕೋಬನನ್ನೂ ಅವನ ಕುಟುಂಬವನ್ನೂ ಐಗುಪ್ತಕ್ಕೆ ತರಲು ದೇವರು ಅವನನ್ನು ಉಪಯೋಗಿಸಿದನು.—ಆದಿಕಾಂಡ 37:2; 39:7-9; 41:15,16,32.
ಯೌವನದಲ್ಲಿ ನಂಬಿಗಸ್ತರಾಗಿದ್ದ ಮೋಶೆ ಮತ್ತು ಇತರರು
ಫರೋಹನ ಪುತ್ರಿ ಮೋಶೆಯನ್ನು ತನ್ನ ಸ್ವಂತ ಮಗನಾಗಿ ತಕ್ಕೊಂಡರೂ ಮೋಶೆಯ ತಾಯಿತಂದೆ ಅವನಿಗೆ ಸತ್ಯದೇವರ ಕುರಿತು ಕಲಿಸಶಕ್ತರಾದರು. ದೊಡ್ಡವನಾದ ಬಳಿಕ ಅವನು “ಫರೋಹನ ಕುಮಾರ್ತೆಯ ಮಗನೆನಿಸಿಕೊಳ್ಳುವದು ಬೇಡ” ವೆಂದು ಹೇಳಿ “ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು.” ದೇವರು ತನ್ನ ಜನರನ್ನು ಐಗುಪ್ತದಿಂದ ಹೊರತರಲು, ಸೀನಾಯಿಯಲ್ಲಿ ಧರ್ಮಶಾಸ್ತ್ರವನ್ನು ಪಡೆಯಲು ಮತ್ತು ಬೈಬಲಿನ ಒಂದು ದೊಡ್ಡ ಭಾಗವನ್ನು ಬರೆಯಲು ಮೋಶೆಯನ್ನು ಉಪಯೋಗಿಸಿದನು. ನಿಮ್ಮ ವಯಸ್ಸು ಎಷ್ಟೇ ಆಗಿರಲಿ, ಮೋಶೆಯಂತೆ ದೇವರನ್ನು ಸೇವಿಸುವ ದೃಢತೆಯನ್ನು ನೀವು ಬೆಳೆಸುತ್ತೀದ್ದೀರೊ?—ಇಬ್ರಿಯ 11:23-29; ವಿಮೋಚನಕಾಂಡ 2:1-10.
ದೇವರ ಧರ್ಮಶಾಸ್ತ್ರವನ್ನು ಇಸ್ರಾಯೇಲಿಗೆ ಓದಲಾದಾಗ ಇತರರೊಂದಿಗೆ “ಮಕ್ಕಳೂ” ಅಲ್ಲಿದ್ದರೆಂದು ಶಾಸ್ತ್ರ ತಿಳಿಸುತ್ತದೆ.(ಧರ್ಮೋಪದೇಶಕಾಂಡ 31:10-13) ನೆಹೆಮೀಯನ ದಿನಗಳಲ್ಲಿ ಧರ್ಮಶಾಸ್ತ್ರವನ್ನು ಆಲಿಸಲು “ಗ್ರಹಿಸಶಕ್ತರಾದವರೆಲ್ಲರೂ” “ಪ್ರಾತಃಕಾಲದಿಂದ ಮಧ್ಯಾಹ್ನದ ವರೆಗೆ” ನಿಂತರು.(ನೆಹೆಮೀಯ 8:1-8) ಚಿಕ್ಕವರಿಗೆ ಎಲ್ಲ ವಿಷಯಗಳ ಅರ್ಥ ತಿಳಿಯದಿದ್ದರೂ ಅವರು ಯೆಹೋವ ದೇವರನ್ನು ಪ್ರೀತಿಸಿ, ಆರಾಧಿಸಿ, ಆತನಿಗೆ ವಿಧೇಯರಾಗಬೇಕೆಂಬುದನ್ನು ಗಣ್ಯಮಾಡಶಕ್ತರಾಗಿದ್ದರು. ನಿಮ್ಮ ಪ್ರಾಯ ಎಷ್ಟೇ ಆಗಿರಲಿ, ದೇವರ ವಾಕ್ಯವು ಚರ್ಚಿಸಲ್ಪಡುವ ಸ್ಥಳಗಳಾದ ದೊಡ್ಡ, ಚಿಕ್ಕ ಸಮ್ಮೇಳನಗಳಲ್ಲಿ ನೀವು ಆಲಿಸಿದ್ದುಂಟೊ? ಆ ಕಿರೀ ಇಸ್ರಾಯೇಲ್ಯರಂತೆ ಆತನಿಗೆ ವಿಧೇಯರಾಗುವ ಪ್ರಾಮುಖ್ಯತೆಯನ್ನು ನೀವು ಕಲಿತಿದ್ದೀರೊ?
ದಾವೀದ, ಯೋಷೀಯ ಮತ್ತು ಯೆರೆಮೀಯ
ದೇವರು ಎಂಟು ಮಂದಿ ಸಹೋದರರಲ್ಲಿ ಎಳೆಯವನಾದ ದಾವೀದನನ್ನು ವಿಶೇಷ ಸೇವೆಗೆ ಆರಿಸಿ, “ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನಗೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟವನ್ನೆಲ್ಲಾ ನೆರವೇರಿಸುವನು” ಎಂದು ಹೇಳಿದನು. ದೇವರು ಅವನನ್ನು ತನ್ನ ಜನರ ‘ಕುರುಬ’ನಾಗಿ ನೇಮಿಸಲಾಗಿ ದಾವೀದನು ಆ ಸೇವೆಯನ್ನು ಮಾಡುತ್ತಾ ಅನೇಕ ವರ್ಷಕಾಲ ಯೆಹೋವನಿಗೆ ತನ್ನ ಪ್ರೀತಿಯನ್ನು ರುಜುಪಡಿಸಿದನು. 70ಕ್ಕೂ ಹೆಚ್ಚು ಕೀರ್ತನೆಗಳನ್ನು ಬರೆದ ಅವನು ಯೇಸುಕ್ರಿಸ್ತನ ಪೂರ್ವಜನಾದನು. ಕಿರಿಯರಾಗಲಿ, ಹಿರಿಯರಾಗಲಿ, ನೀವು ದೇವರ ಮಾರ್ಗಗಳನ್ನು ಗಣ್ಯಮಾಡುತ್ತಾ ದಾವೀದನಂತೆ ದೇವರು ಬಯಸುವ ಕಾರ್ಯಗಳನ್ನು ಮಾಡುತ್ತೀರೊ?—ಅಪೊಸ್ತಲರ ಕೃತ್ಯ 13:22; ಕೀರ್ತನೆ 78:70,71; 1 ಸಮುವೇಲ 16:10,11; ಲೂಕ 3:23,31.
ಯೋಷೀಯನು ಕೇವಲ ಎಂಟನೆಯ ವಯಸ್ಸಿನಲ್ಲಿ ರಾಜನಾದನು. ಸುಮಾರು 15ನೆಯ ವಯಸ್ಸಿನಲ್ಲಿ ಅವನು, “ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕುವವನಾದನು.” ಇಪ್ಪತ್ತನೆಯ ವಯಸ್ಸಿನೊಳಗೆ ಯೋಷೀಯನು ಸುಳ್ಳು ಆರಾಧನೆಯ ವಿರುದ್ಧ ಚಳವಳಿಯನ್ನಾರಂಭಿಸಿದನು. ಆ ತರುವಾಯ ಅವನು ದೇವಾಲಯವನ್ನು ದುರಸ್ತಿ ಮಾಡಿ ದೇಶದಲ್ಲಿ ಸತ್ಯಾರಾಧನೆಯನ್ನು ಪುನಃಸ್ಥಾಪಿಸಿದನು. ನಾವು ಓದುವುದು:“ಅವನ ಜೀವಮಾನದಲ್ಲೆಲ್ಲಾ ಅವರು ತಮ್ಮ ಪಿತೃಗಳ ದೇವರಾದ ಯೆಹೋವನನ್ನು ಬಿಡದೆ ಹಿಂಬಾಲಿಸಿದರು.” ನಾವೆಲ್ಲರು ಯೋಷೀಯ ರಾಜನಂತೆ ಆಗದಿದ್ದರು, ನಮ್ಮ ವಯಸ್ಸು ಎಷ್ಟೇ ಆಗಿರಲಿ, ನಾವು ದೇವರನ್ನು ಸೇವಿಸಿ ಮಿಥ್ಯಾರಾಧನೆಯ ವಿರುದ್ಥ ದೃಢವಾಗಿ ನಿಲ್ಲಬಲ್ಲೆವು.—2 ಪೂರ್ವಕಾಲವೃತ್ತಾಂತ 34:3,8,33.
ಸರ್ವಶಕ್ತನಾದ ದೇವರು ಯೆರೆಮೀಯನಿಗೆ ಹೇಳಿದ್ದು: “ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವದಕ್ಕಿಂತ ಮುಂಚೆ ನಿನ್ನನ್ನು ತಿಳಿದಿದ್ದೆನು; ನೀನು ಉದರದಿಂದ ಬರುವದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು. ಜನಾಂಗಗಳಿಗೆ ಪ್ರವಾದಿಯಾಗಿ ನಿನ್ನನ್ನು ನೇಮಿಸಿದ್ದೇನೆ.” ತಾನು ಪ್ರವಾದಿಯಾಗಲು ಇನ್ನೂ ಚಿಕ್ಕವನೆಂದು ಯೆರೆಮೀಯನು ಆಕ್ಷೇಪವೆತ್ತಿ, “ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು” ಎಂದು ಹೇಳಿದನು. ಆಗ ಯೆಹೋವನು ಉತ್ತರ ಕೊಟ್ಟದ್ದು: “ಬಾಲಕನನ್ನಬೇಡ, ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಅವರೆಲ್ಲರ ಬಳಿಗೆ ನೀನು ಹೋಗೇ ಹೋಗುವಿ; ನಾನು ಆಜ್ಞಾಪಿಸುವದನ್ನೆಲ್ಲಾ ನುಡಿಯಲೇ ನುಡಿಯುವಿ.” 40ಕ್ಕೂ ಹೆಚ್ಚು ವರ್ಷಗಳಲ್ಲಿ ಯೆರೆಮೀಯನು ಇದನ್ನು ಎಷ್ಟರ ಮಟ್ಟಿಗೆ ಮಾಡಿದನೆಂದರೆ ನಿಲ್ಲಿಸಬೇಕೆಂದಿದ್ದಾಗಲೂ ಅವನು ಅದನ್ನು ನಿಲ್ಲಿಸಶಕ್ತನಾಗಲಿಲ್ಲ. ದೇವರ ವಾಕ್ಯವು “ಉರಿಯುವ ಬೆಂಕಿಯು[ಅವನ] ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ” ಇತ್ತು. ಅವನು ಮಾತಾಡಲೇ ಬೇಕಾಯಿತು! ನಿಮ್ಮ ವಯಸ್ಸು ಎಷ್ಟೇ ಇರಲಿ, ನೀವು ಯೆರೆಮೀಯನಲ್ಲಿದ್ದಂಥ ನಂಬಿಕೆಯನ್ನು ವಿಕಸಿಸುತ್ತಾ ದೇವರ ಸೇವೆಯಲ್ಲಿ ಆತನಂತೆ ಮುಂದರಿಯುತ್ತಿದ್ದೀರೊ?—ಯೆರೆಮೀಯ 1:4-8; 20:9.
ದಾನಿಯೇಲ, ಯೇಸು ಮತ್ತು ತಿಮೊಥಿ
ದಾನಿಯೇಲನ ವಿಷಯ ನೀವು ಕೇಳಿಲ್ಲವೆ? ಅವನನ್ನು ಇತರ “ಯುವಕ”ರೊಂದಿಗೆ ಬಾಬೆಲಿನ ರಾಜ ಮಹಾ ನೆಬೂಕದ್ನೆಚ್ಚರನ ಆಸ್ಥಾನಕ್ಕೆ ಕೊಂಡೊಯ್ದಾಗ ಅವನ ವಯಸ್ಸು 20ಕ್ಕೂ ಕಡಿಮೆಯಾಗಿದ್ದಿರಬಹುದು. ಅವನು ಯುವಕನಾಗಿದ್ದರೂ ದೇವರಿಗೆ ವಿಧೇಯನಾಗಲು ದೃಢನಿಶ್ಚಯ ಮಾಡಿದ್ದನು. ದಾನಿಯೇಲನೂ ಅವನ ಸಂಗಾತಿಗಳೂ ದೇವರ ನಿಯಮವನ್ನು ಮೀರಿರಬಹುದಾಗಿದ್ದ ಯಾ ವಿಧರ್ಮಿ ಸಂಸ್ಕಾರಗಳಿಂದ ಮಲಿನವಾಗಿದ್ದ ಆಹಾರಪದಾರ್ಥಗಳಿಂದ ತಮ್ಮನ್ನು ಮಲಿನ ಮಾಡಿಕೊಳ್ಳಲು ನಿರಾಕರಿಸಿದರು. ದಾನಿಯೇಲನು 80ಕ್ಕೂ ಹೆಚ್ಚು ವರ್ಷಕಾಲ ಸ್ಥಿರವಾಗಿ ನಿಂತನು. ದೇವರಿಗೆ ಪ್ರಾರ್ಥಿಸುವುದನ್ನು ನಿಲ್ಲಿಸದಿರುವಲ್ಲಿ ಸಿಂಹಗಳಿಗೆ ತುತ್ತಾಗುವಂತಿದ್ದರೂ ಅವನು ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು. ನಿಮ್ಮ ದೇವರ ಸೇವೆ ಮತ್ತು ಪ್ರಾರ್ಥನೆ ಅಷ್ಟು ಗಂಭೀರವೆಂದು ನೀವು ಎಣಿಸುತ್ತೀರೊ? ಎಣಿಸಬೇಕು.—ದಾನಿಯೇಲ 1:3,4,8; 6:10,16,22.
12ನೆಯ ವಯಸ್ಸಿನಲ್ಲಿ ಯೇಸು ಯೆರೂಸಲೇಮಿನ ದೇವಾಲಯದಲ್ಲಿ ಧಾರ್ಮಿಕ ಭೋಧಕರ ಮಧ್ಯೆ ಕುಳಿತು, “ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆ ಮಾಡುತ್ತಾ ಇದ್ದನು. ಆತನು ಆಡಿದ ಮಾತುಗಳನ್ನು ಕೇಳಿದವರೆಲ್ಲರೂ ಆತನ ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು.” ಆ ದೇವಾಲಯದ ಹಿರಿಯರ ಶಾಸ್ತ್ರೀಯ ಚರ್ಚೆ ನಿಮ್ಮಲ್ಲಿ ಕಾಳಜಿಯನ್ನು ಹುಟ್ಟಿಸುತ್ತಿತ್ತೊ? ನಿಮ್ಮ ಬುದ್ಧಿ ಮತ್ತು ಉತ್ತರಗಳನ್ನು ಕೇಳಿ ಇತರರು ಬೆರಗಾಗುತ್ತಿದ್ದರೆ? ಇಂದು, ಅಭ್ಯಸಿಸಿ, ಜಾಗರೂಕತೆಯಿಂದ ಆಲಿಸಿ ಕ್ರೈಸ್ತಕೂಡಗಳಲ್ಲಿ ಭಾಗವಹಿಸುವ ಅನೇಕ ಯುವಸಾಕ್ಷಿಗಳ ಶಾಸ್ತ್ರೀಯ ಜ್ಞಾನ ಪ್ರಾಯಸ್ಥರನ್ನು ಬೆರಗುಗೊಳಿಸುತ್ತದೆ.—ಲೂಕ 2:42, 46, 47.
ನೀವು ಚಿಕ್ಕಂದಿನಲ್ಲಿ “ಗ್ರಂಥಗಳು” ಕಲಿಸಲ್ಪಟ್ಟಿದ್ದ ತಿಮೊಥಿಯಂತಿದ್ದೀರೋ? ಅವನು ಯುವಕನಾಗಿದ್ದಾಗ ಕಡಿಮೆಪಕ್ಷ ಎರಡು ಸಭೆಗಳ ಸಹೋದರರಾದರೂ ಅವನ ವಿಷಯ “ಒಳ್ಳೇ ಸಾಕ್ಷಿ ಹೇಳುತ್ತಿದ್ದರು.” ಅಪೋಸ್ತಲ ಪೌಲನು ತನ್ನೊಂದಿಗೆ ಪ್ರಯಾಣಿಸಲು ತಿಮೊಥಿಯನ್ನು ಆರಿಸಿಕೊಂಡನು. ಪೌಲನ ಸಾಮಾನು ಹೊರಲಿಕ್ಕಲ್ಲ, ಇತರರಿಗೆ ಕಲಿಸುವಾಗ ಪೌಲನಿಗೆ ಸಹಾಯ ಮಾಡಲಿಕ್ಕಾಗಿಯೇ. ಇಂಥ ಸುಯೋಗಗಳಿಗೆ ನಿಮ್ಮನ್ನು ಆರಿಸಲಾದೀತೇ? ನಿಮ್ಮ ಚಟುವಟಿಕೆಯನ್ನು ನೋಡಿ ಕೇವಲ ನಿಮ್ಮ ಸಭೆಯಲ್ಲಲ್ಲ, ಬೇರೆ ಸಭೆಗಳಲ್ಲಿಯೂ “ಒಳ್ಳೇ ಸಾಕ್ಷಿ” ಹೇಳಲ್ಪಡುತ್ತಿದೆಯೆ?—2 ತಿಮೊಥಿ 3:15; ಅಪೊಸ್ತಲರ ಕೃತ್ಯ 16:1-4.
ಯಾವ ರೀತಿಯ ಭವಿಷ್ಯತ್ತನ್ನು ನೀವು ಬಯಸುತ್ತೀರಿ?
ಇಂದಿನ ಯುವಕರು ಯೊಸೇಫ, ಮೋಶೆ, ದಾವೀದ ಮತ್ತು ಇತರರಂತೆ ನಂಬಿಗಸ್ತರಾಗಿರುವ ಸಾಧ್ಯತೆ ಇದೆಯೆ? ಹೌದು, ಇದೆ. ಅನೇಕ ಯುವಕರು ಮಜಾ ಮಾಡುವುದರಲ್ಲಿಯೇ ಕಾಳಜಿಯುಳ್ಳವರೆಂಬುದು ನಿಜ. ಆದರೆ ಇತರರು ತಮ್ಮ ಯೌವನವನ್ನು ದೇವರ ಮತ್ತು ತಮ್ಮ ಕಡೆಗಿರುವ ಆತನ ಚಿತ್ತದ ಪರಿಚಯ ಮಾಡಿಕೊಳ್ಳುತ್ತಾ ವಿವೇಕದಿಂದ ಕಳೆಯುತ್ತಾರೆ. ಅವರು ಈ ಬೈಬಲ್ ಪ್ರವಾದನೆಯನ್ನು ನೆರವೇರಿಸುತ್ತಾರೆ: “ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. . . . ನಿನ್ನ ಯುವಸೈನಿಕರು ಉದಯಕಾಲದ ಇಬ್ಬನಿಯಂತಿರುವರು.”—ಕೀರ್ತನೆ 110:3.
ಇಂಥ ಶ್ರೇಷ್ಟ ತರದ ಯುವಜನರು ತಮ್ಮ ಪ್ರಸ್ತುತದ ಜೀವನವನ್ನು ಸಫಲಮಾಡುವರೆ ಮತ್ತು ಬರಲಿರುವ ಹೊಸಜಗತ್ತಿನ ಶೋಭಾಯಮಾನವಾದ ಭವಿಷ್ಯವನ್ನು ಅವರಿಗೆ ಕೊಡುವರೆ ದೇವರು ಸಹಾಯ ಮಾಡುವುದರಿಂದ ತಮ್ಮ ವಯಸ್ಸಿಗೆ ಮೀರಿದ ವಿವೇಕವನ್ನು ಪ್ರದರ್ಶಿಸುತ್ತಾರೆ. (1 ತಿಮೊಥಿ 4:8) ಆದರೆ ಆಧುನಿಕ ಯುವಜನರು ಬೈಬಲಿನಲ್ಲಿ ಹೇಳಿರುವ ಯುವಜನರಂಥ ನಂಬಿಕೆಯನ್ನು ಹೇಗೆ ಬೆಳೆಸಬಲ್ಲರು? ತಿಳಿಯಲಿಚ್ಛಿಸುವುದಾದರೆ ಈ ಪತ್ರಿಕೆಯ 27ನೆಯ ಪುಟದಿಂದಾರಂಭವಾಗುವ “ಯೆಹೋವನ ಸೇವೆಯಲ್ಲಿ ಸಂತೋಷದ ಯುವಜನರು” ಎಂಬ ಲೇಖನವನ್ನು ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. (w90 5/15)
[ಪುಟ 5 ರಲ್ಲಿರುವ ಚಿತ್ರಗಳು]
ಐಗುಪ್ತದ ಐಶ್ವರ್ಯ ಯುವಮೋಶೆಯನ್ನು ದುರ್ಮಾಕ್ಕೆಳೆಯಲಿಲ್ಲ
ಯುವ ದಾವೀದನು ಯೆಹೋವನ ಹೃದಯಕ್ಕೆ ಹಿಡಿಸಿದನು
[ಪುಟ 6 ರಲ್ಲಿರುವ ಚಿತ್ರಗಳು]
ಯೆರೆಮೀಯನು ತಾನು “ಬಾಲಕ”ನೆಂದೆಣಿಸಿದರೂ ಜನಪ್ರಿಯವಲ್ಲದ ಸಂದೇಶವನ್ನು ಧೈರ್ಯದಿಂದ ಸಾರಿದನು
12ನೆಯ ವಯಸ್ಸಿನಲ್ಲಿ ಯೇಸು, ದೇವರ ವಾಕ್ಯದ ತನ್ನ ತಿಳುವಳಿಕೆಯ ಕಾರಣ ಹಿರಿಯರನ್ನು ಬೆರಗುಗೊಳಿಸಿದನು
[ಪುಟ 7 ರಲ್ಲಿರುವ ಚಿತ್ರ]
ಇಸ್ರಾಯೇಲಿನಲ್ಲಿ ಚಿಕ್ಕವರೂ ದೇವರ ವಾಕ್ಯ ಓದಲ್ಪಡುವುದನ್ನು ಆಲಿಸಿದರು. ನೀವೋ?