ವಿಧವೆಯಾಗಿ ನಾನು ನಿಜ ಸಾಂತ್ವನವನ್ನು ಕಂಡುಕೊಂಡೆ
ಲಿಲಿ ಆರ್ಥರ್ರಿಂದ ಹೇಳಲ್ಪಟ್ಟದ್ದು
ಭಾರತದ ಉದಕಮಂಡಲ ಶಹರದ ಒಂದು ಭಾಗದಲ್ಲಿ ಯೆಹೋವನ ಸಾಕ್ಷಿಗಳ ಒಬ್ಬ ಯುವ ಶುಶ್ರೂಷಕನು ಮನೆಮನೆಯ ಸಂದರ್ಶನೆ ಮಾಡುತ್ತಿದ್ದನು. ಅಂಥ ಒಬ್ಬ ಅಗಂತುಕನಿಗೆ ಮಹಿಳೆಯರು ವಾಡಿಕೆಯಾಗಿ ಬಾಗಲು ತೆರೆಯುತ್ತಿದ್ದಿಲ್ಲ. ಕೆಲವು ತಾಸುಗಳ ಅನಂತರ, ದಣಿದ ಮತ್ತು ತುಸು ನಿರಾಶೆಗೊಂಡ ಆತನು ಮನೆಗೆ ಹೋಗಲು ಹೊರಟನು. ಆದರೆ ನಿಂತುಬಿಟ್ಟನು, ಮುಂದಿನ ಮನೆಯನ್ನು ಸಂದರ್ಶಿಸಲು ಹೇಗೋ ಪ್ರಚೋದಿತನಾದ ಅನಿಸಿಕೆಯಿಂದ. ಅವನಿಗಾಗಿ ಬಾಗಿಲು ತೆರೆದ ಆ ಮಹಿಳೆಯಿಂದ ವಿವರಿಸಲ್ಪಟ್ಟ ಪ್ರಕಾರ, ಏನು ಸಂಭವಿಸಿತ್ತೆಂಬದನ್ನು ಗಮನಿಸಿರಿ.
ತೋಳಲ್ಲಿ ನನ್ನ ಎರಡು ತಿಂಗಳ ಹೆಣ್ಣು ಮಗು ಮತ್ತು ಪಕ್ಕದಲ್ಲಿ 22 ತಿಂಗಳ ನನ್ನ ಮಗನೊಂದಿಗೆ, ನಾನು ಕೂಡಲೇ ಬಾಗಲು ತೆರೆದೆ ಮತ್ತು ಒಬ್ಬ ಅಪರಿಚಿತನು ಅಲ್ಲಿ ನಿಂತಿರುವುದನ್ನು ಕಂಡೆನು. ಕಳೆದ ರಾತ್ರಿಯಲ್ಲೇ ನಾನು ಬಹಳವಾಗಿ ಸಂಕಟಪಟ್ಟಿದ್ದೆ. ಆದರಣೆಯನ್ನು ಹುಡುಕುತ್ತಾ, “ಪರಲೋಕದ ತಂದೆಯೆ, ನಿನ್ನ ವಾಕ್ಯದ ಮೂಲಕ ನನ್ನನ್ನು ಸಂತೈಸು” ಎಂದು ಪ್ರಾರ್ಥನೆ ಮಾಡಿದ್ದೆ.” ಈಗ, ನನ್ನ ಆಶ್ಚರ್ಯಕ್ಕೋ ಎಂಬಂತೆ, ಆ ಅಗಂತುಕನು ವಿವರಿಸಿದ್ದು: “ದೇವರ ವಾಕ್ಯದಿಂದ ಒಂದು ಸಾಂತ್ವನದ ಮತ್ತು ನಿರೀಕ್ಷೆಯ ಸಂದೇಶವನ್ನು ನಿಮಗೆ ತಂದಿದ್ದೇನೆ.” ದೇವರಿಂದ ಕಳುಹಿಸಲ್ಪಟ್ಟ ಪ್ರವಾದಿ ಇವನಿರಬೇಕು ಎಂಬ ಅನಿಸಿಕೆ ನನಗಾಯಿತು. ಆದರೆ ಯಾವ ಪರಿಸ್ಥಿತಿಯು ಸಹಾಯಕ್ಕಾಗಿ ನನ್ನ ಪ್ರಾರ್ಥನೆಯನ್ನು ಪ್ರಚೋದಿಸಿತ್ತು?
ಬೈಬಲ್ ಸತ್ಯಗಳನ್ನು ಕಲಿತದ್ದು
ದಕ್ಷಿಣ ಭಾರತದ ಸುಂದರವಾದ ನೀಲಗಿರಿ ಬೆಟ್ಟಗಳ ಒಂದು ಹಳ್ಳಿಯಾದ ಗುದಲೂರಿನಲ್ಲಿ 1922ರಲ್ಲಿ ನಾನು ಜನಿಸಿದೆ. ನಾನು ಮೂರು ವಯಸ್ಸಿನವಳಿದ್ದಾಗ ನನ್ನ ತಾಯಿ ತೀರಿಕೊಂಡರು. ಪ್ರಾಟೆಸ್ಟಂಟ್ ವೈದಿಕರಾಗಿದ್ದ ನನ್ನ ತಂದೆ, ಅನಂತರ, ಪುನರ್ವಿವಾಹವಾದರು. ನಾವು ಮಾತಾಡಲು ಸುರುಮಾಡಿದೊಡನೆ ನನಗೆ ಮತ್ತು ನನ್ನ ಸಹೋದರ ಮತ್ತು ಸಹೋದರಿಯರಿಗೆ ನಮ್ಮ ತಂದೆ ಪ್ರಾರ್ಥಿಸಲು ಕಲಿಸಿದ್ದರು. ತಂದೆ ದಿನಾಲು ಬೆಳಿಗ್ಗೆ ಬೈಬಲು ಓದಲು ಕೂತುಕೊಳ್ಳುವಾಗ, ನಾಲ್ಕು ವಯಸ್ಸಿನ ನಾನು ಸಹಾ, ನೆಲದಲ್ಲಿ ಕೂತು ನನ್ನ ಸ್ವಂತ ಬೈಬಲನ್ನು ಓದುತ್ತಿದ್ದೆ.
ಬೆಳೆದು ದೊಡ್ಡವಳಾದಾಗ, ನಾನು ಒಬ್ಬ ಅಧ್ಯಾಪಕಿಯಾದೆ. ಮತ್ತು 21ನೇ ವಯಸ್ಸಿನಲ್ಲಿ ನನ್ನ ತಂದೆ ನನ್ನ ಮದುವೆಯನ್ನು ಏರ್ಪಡಿಸಿದರು. ನನ್ನ ಗಂಡ ಮತ್ತು ನನಗೆ ನಮ್ಮ ಮಗ ಸುಂದರ್, ಮತ್ತು ಅನಂತರ ಮಗಳು ರತ್ನ, ಜನಿಸಿದ ಆಶೀರ್ವಾದ ಪ್ರಾಪ್ತಿಸಿತು. ಆದರೆ ರತ್ನ ಜನಿಸಿದ ಸಮಯಕ್ಕೆ ಸುಮಾರಾಗಿ ನನ್ನ ಗಂಡ ಅತಿಯಾಗಿ ಬೇನೆಬಿದ್ದು, ಅನಂತರ ಕೊಂಚ ಸಮಯದಲ್ಲೇ ತೀರಿಕೊಂಡರು. ಥಟ್ಟನೆ, ನಾನೊಬ್ಬ ವಿಧವೆಯಾಗಿ ಪರಿಣಮಿಸಿದೆ, ಎರಡು ಚಿಕ್ಕ ಮಕ್ಕಳ ಜವಾಬ್ದಾರಿಕೆಯೊಂದಿಗೆ.
ಅನಂತರ ನಾನು ಯಾವಾಗಲೂ ದೇವರ ವಾಕ್ಯದ ಸಾಂತ್ವನಕ್ಕಾಗಿ ವಿಜ್ಞಾಪಿಸ ತೊಡಗಿದೆ, ಮತ್ತು ಯೆಹೋವನ ಸಾಕ್ಷಿಗಳ ಆ ಶುಶ್ರೂಷಕನು ನನ್ನನ್ನು ಸಂದರ್ಶನೆ ಮಾಡಿದ್ದು ಮಾರಣೇ ದಿನವೇ. ನಾನು ಅವನನ್ನು ಒಳಗೆ ಆಮಂತ್ರಿಸಿಸಿದೆ ಮತ್ತು ದೇವರು ಸತ್ಯವಂತನೇ ಸರಿ ಎಂಬ ಪುಸ್ತಕವನ್ನು ಸ್ವೀಕರಿಸಿದೆ. ಆ ರಾತ್ರಿ ಅದನ್ನೋದುವಾಗ, ಯೆಹೋವ ಎಂಬ ಹೆಸರು ಪದೇಪದೇ ನೋಡಸಿಕ್ಕಿತು, ನನಗದು ಬಹು ಅಪೂರ್ವ ಸಂಗತಿಯಾಗಿತ್ತು. ಅದು ದೇವರ ಹೆಸರೆಂದು ಆನಂತರ ಆ ಶುಶ್ರೂಷಕನು ಬೈಬಲಿಂದ ನನಗೆ ತೋರಿಸಿಕೊಟ್ಟನು.
ಬೇಗನೇ ನಾನು, ತ್ರಯೈಕತ್ವ ಮತ್ತು ನರಕಾಗ್ನಿಯು ಬೈಬಲಾಧಾರಿತ ಬೋಧನೆಗಳಲ್ಲವೆಂದೂ ಕಲಿತೆ. ದೇವರ ರಾಜ್ಯದ ಕೆಳಗೆ ಭೂಮಿಯು ಪರದೈಸವಾಗುವದೆಂದೂ ಸತ್ತ ಪ್ರಿಯಜನರು ಪುನರುತ್ಥಾನದಲ್ಲಿ ಹಿಂದೆ ಬರುವರೆಂದೂ ಕಲಿತಾಗ, ಆದರಣೆ ಮತ್ತು ನಿರೀಕ್ಷೆ ನನ್ನನ್ನು ಆವರಿಸಿತು. ಪ್ರಾಮುಖ್ಯವಾಗಿ, ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ನನ್ನ ಸಹಾಯಕ್ಕಾಗಿ ಬಂದ ಸತ್ಯದೇವರಾದ ಯೆಹೋವನನ್ನು, ನಾನು ತಿಳಿಯ ತೊಡಗಿದೆ ಮತ್ತು ಪ್ರೀತಿಸಲಾರಂಭಿಸಿದೆ.
ಹೊಸತಾಗಿ ಕಂಡುಕೊಂಡ ಜ್ಞಾನವನ್ನು ಹಂಚಿದ್ದು
ದೇವರ ಹೆಸರಿದ್ದ ಆ ಬೈಬಲ್ ವಚನಗಳು ನನ್ನ ವಾಚನದಲ್ಲಿ ತಪ್ಪಿಹೋದದ್ದು ಹೇಗೆ ಎಂದು ನಾನು ಯೋಚಿಸ ತೊಡಗಿದೆ. ಮತ್ತು ಪರದೈಸ ಭೂಮಿಯಲ್ಲಿ ನಿತ್ಯಜೀವದ ಆ ಸ್ಪಷ್ಟ ನಿರೀಕ್ಷೆಯನ್ನು ನನ್ನ ಬೈಬಲ್ ವಾಚನದಲ್ಲಿ ನಾನೇಕೆ ಕಾಣಲಿಲ್ಲ? ಪ್ರಾಟೆಸ್ಟಂಟ್ ಮಿಶನೆರಿಗಳಿಂದ ನಡಿಸಲ್ಪಡುತ್ತಿದ್ದ ಒಂದು ಶಾಲೆಯಲ್ಲಿ ನಾನು ಕಲಿಸುತ್ತಿದ್ದೆ, ಆದ್ದರಿಂದ ಶಾಲಾ ವ್ಯವಸ್ಥಾಪಕಳಿಗೆ ಆ ಕೆಲವು ಬೈಬಲ್ ವಚನಗಳನ್ನು ತೋರಿಸಿದೆ. (ವಿಮೋಚನಕಾಂಡ 6:3; ಕೀರ್ತನೆ 37:29; 83:18; ಯೆಶಾಯ 11:6-9; ಪ್ರಕಟನೆ 21:3, 4) ಹೇಗೋ ನಾವು ಅವನ್ನು ಲಕ್ಷಿಸಿಲ್ಲವೆಂದು ತಿಳಿಸಿದೆ. ಆದರೆ ಅವಳು ಏನೂ ಸಂತೋಷ ವ್ಯಕ್ತಪಡಿಸದ್ದು ನನಗೆ ಆಶ್ಚರ್ಯ.
ಅನಂತರ ನಾನು ಇವೇ ಬೈಬಲ್ ವಚನಗಳನ್ನು ಉಲ್ಲೇಖಿಸಿ ಇನ್ನೊಂದು ಊರಿನ ಪ್ರಾಧ್ಯಾಪಕಳಿಗೆ ಬರೆದೆ. ಅವಳೊಂದಿಗೆ ಮಾತನಾಡುವ ಸಂದರ್ಭಕ್ಕಾಗಿ ವಿನಂತಿಸಿದೆ. ಅವಳ ತಂದೆ, ಇಂಗ್ಲೆಂಡಿನ ಒಬ್ಬ ಪ್ರಖ್ಯಾತ ವೈದಿಕ, ನನ್ನೊಂದಿಗೆ ವಿಷಯವನ್ನು ಚರ್ಚಿಸುವರೆಂದು ಆಕೆ ಉತ್ತರಿಸಿದಳು. ಪ್ರಾಧ್ಯಾಪಿಕೆಯ ಸಹೋದರನು ಒಬ್ಬ ಪ್ರಮುಖ ಬಿಷಪನಾಗಿದ್ದನು.
ನಾನು ಎಲ್ಲಾ ವಿಷಯ ಮತ್ತು ವಚನಗಳನ್ನು ತಯಾರಿಸಿಟ್ಟೆ, ಮತ್ತು ದೇವರು ಸತ್ಯವಂತನೇ ಸರಿ ಪುಸ್ತಕವನ್ನು ಮತ್ತು ನನ್ನ ಮಕ್ಕಳನ್ನು ತಕ್ಕೊಂಡು ಆ ಊರಿಗೆ ಹೋದೆ. ಯೆಹೋವನು ಯಾರು, ತ್ರಯೈಕತ್ವ ಏಕೆ ಇಲ್ಲ ಮುಂತಾದ ನಾನು ಕಲಿತಿದ್ದ ವಿಷಯಗಳನ್ನು ಉತ್ಸಾಹದಿಂದ ವಿವರಿಸಿದೆ. ಅವರು ತುಸು ಹೊತ್ತು ಕೇಳಿದರು, ಆದರೆ ಏನೂ ಹೇಳಲಿಲ್ಲ. ಅನಂತರ ಆ ಇಂಗ್ಲೆಂಡಿನ ವೈದಿಕನು ಅಂದದ್ದು: “ನಾನು ನಿನಗಾಗಿ ಪ್ರಾರ್ಥಿಸುತ್ತೇನೆ.” ಅವರು ನನಗಾಗಿ ಪ್ರಾರ್ಥಿಸಿದರು ಮತ್ತು ನನ್ನನ್ನು ಕಳುಹಿಸಿಬಿಟ್ಟರು.
ಬೀದಿ ಸಾಕ್ಷಿಕಾರ್ಯ
ಒಂದು ದಿನ ನನ್ನನ್ನು ಯೆಹೋವನ ಸಾಕ್ಷಿಯ ಸುವಾರ್ತಿಕನು ವಾಚ್ಟವರ್ ಮತ್ತು ಅವೇಕ್! ಪತ್ರಿಕೆಯೊಂದಿಗೆ ಬೀದಿ ಸಾಕ್ಷಿಗಾಗಿ ಆಮಂತ್ರಿಸಿದನು. ಇದನ್ನು ಮಾತ್ರ ಎಂದೂ ಮಾಡಲಾರೆ ಎಂದೆ ನಾನು. ಭಾರತದಲ್ಲಿ ಒಬ್ಬಾಕೆ ಸ್ತ್ರೀ ಬೀದಿಯಲ್ಲಿ ನಿಲ್ಲುವದನ್ನು ಅಥವಾ ಮನೆಮನೆಗೆ ಹೋಗುವದನ್ನು ಜನರು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಅದು ಆ ಸ್ತ್ರೀಯ ಪ್ರತಿಷ್ಠೆಗೆ ಮತ್ತು ಅವಳ ಕುಟುಂಬಕ್ಕೂ ಕುಂದನ್ನು ತರುವುದು. ನಾನು ನನ್ನ ತಂದೆಯನ್ನು ಆಳವಾಗಿ ಪ್ರೀತಿಸುತ್ತಿದ್ದೆ ಮತ್ತು ಗೌರವಿಸುತ್ತಿದ್ದೆ, ಅವರ ಹೆಸರಿಗೆ ನಿಂದೆಯನ್ನು ತರಲು ನಾನು ಬಯಸಲಿಲ್ಲ.
ಆದರೆ ಶುಶ್ರೂಷಕನು ನನಗೊಂದು ಬೈಬಲ್ ವಚನವನ್ನು ತೋರಿಸಿದನು. ಅದನ್ನುವದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” (ಜ್ಞಾನೋಕ್ತಿ 27:11, ಕಿಂಗ್ಜೇಮ್ಸ್ ವರ್ಶನ್) ಅವನಂದದ್ದು: “ಯೆಹೋವನಿಗಾಗಿ ಮತ್ತು ಆತನ ರಾಜ್ಯಕ್ಕಾಗಿ ನೀನು ನಿಂತಿರುವಿ ಎಂದು ಬಹಿರಂಗವಾಗಿ ತೋರಿಸುವ ಮೂಲಕ ಯೆಹೋವನ ಹೃದಯವನ್ನು ಆನಂದಪಡಿಸು.” ಬೇರೆ ಯಾವದಕ್ಕಿಂತಲೂ ಹೆಚ್ಚು ಯೆಹೋವನ ಹೃದಯವನ್ನು ಸಂತೋಷಪಡಿಸುವದಕ್ಕೆ ಬಯಸಿ, ನಾನು ಪತ್ರಿಕೆಯ ಬ್ಯಾಗನ್ನೆತ್ತಿಕೊಂಡು ಅವನೊಂದಿಗೆ ಬೀದಿ ಸಾಕ್ಷಿಕಾರ್ಯಕ್ಕೆ ಹೊರಟೆ. ನಾನದನ್ನು ಹೇಗೆ ಮಾಡಿದೆನೆಂದು ಇಂದು ಕೂಡ ನನಗೆ ಊಹಿಸಲಸಾಧ್ಯ. ಅದು 1946ರಲ್ಲಿ, ನನ್ನನ್ನು ಸಂಪರ್ಕಿಸಿದ ಸುಮಾರು ನಾಲ್ಕು ತಿಂಗಳ ಮೇಲೆ.
ಭಯವನ್ನು ನೀಗಿಸಲು ಪ್ರೋತ್ಸಾಹಿಸಲ್ಪಟ್ಟದ್ದು
1947ರಲ್ಲಿ, ಭಾರತದ ಪೂರ್ವ ಕರಾವಳಿಯಲ್ಲಿರುವ ಮದ್ರಾಸಿನ ಹೊರವಲಯದಲ್ಲಿ, ನಾನು ಒಂದು ಕಲಿಸುವ ಕೆಲಸ ಸ್ವೀಕರಿಸಿದೆ ಮತ್ತು ಮಕ್ಕಳೊಂದಿಗೆ ಅಲ್ಲಿಗೆ ಸ್ಥಳಾಂತರ ಮಾಡಿದೆ. ಸುಮಾರು ಎಂಟು ಮಂದಿ ಯೆಹೋವನ ಸಾಕ್ಷಿಗಳ ಒಂದು ಚಿಕ್ಕ ಗುಂಪು ಆ ಶಹರದಲ್ಲಿ ಕ್ರಮವಾಗಿ ಕೂಡಿಬರುತ್ತಿದ್ದರು. ಆ ಕೂಟಗಳನ್ನು ಹಾಜರಾಗಲು ನಮಗೆ 25 ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಹಿಂದೆ ಭಾರತದಲ್ಲಿ ಸ್ತ್ರೀಯರು ಸಾಮಾನ್ಯವಾಗಿ ಒಬ್ಬಂಟಿಗರಾಗಿ ಪ್ರಯಾಣಿಸುತ್ತಿರಲಿಲ್ಲ. ತಮ್ಮನ್ನು ಒಯ್ಯಲು ಪುರುಷರ ಮೇಲೆ ಆತುಕೊಂಡಿದ್ದರು. ಬಸ್ ಹತ್ತುವದು ಹೇಗೆ, ಟಿಕೆಟಿಗಾಗಿ ಕೇಳುವದು ಹೇಗೆ ಮತ್ತು ಬಸ್ಸಿನಿಂದ ಇಳಿಯುವದು ಹೇಗೆ ಮುಂತಾದವು ನನಗೆ ಗೊತ್ತಿರಲಿಲ್ಲ. ನಾನು ಯೆಹೋವನನ್ನು ಸೇವಿಸಲೇ ಬೇಕೆಂದು ನನಗೆ ಅನಿಸಿಕೆಯಿತ್ತು, ಆದರೆ ಹೇಗೆ? ಆದ್ದರಿಂದ ನಾನು ಪ್ರಾರ್ಥಿಸ ತೊಡಗಿದೆ: “ಯೆಹೋವ ದೇವರೇ, ನಿನ್ನನ್ನು ಸೇವಿಸದ ಹೊರತು ನಾನು ಜೀವಿಸಲಾರೆ. ಆದರೆ ಭಾರತೀಯ ಸ್ತ್ರೀಯಾದ ನನಗೆ ಮನೆಯಿಂದ ಮನೆಗೆ ಹೋಗುವದು ಅಸಾಧ್ಯವೇ ಸರಿ.”
ಈ ಹೋರಾಟವನ್ನು ನೀಗಿಸಲು ಯೆಹೋವನು ನನ್ನನ್ನು ಸಾಯಲು ಬಿಟ್ಟಿದ್ದರೂ ಒಳ್ಳೆಯದೆಂದು ನಾನು ಅಪೇಕ್ಷಿಸಿದೆ. ಆದರೂ, ಬೈಬಲಿನಿಂದ ಏನಾದರೂ ಓದುವಂತೆ ನಾನು ನಿಶ್ಚಯಿಸಿದೆ. ನಾನು ಅಕಾಸ್ಮಾತ್ತಾಗಿ ಅದನ್ನು ಯೆರೆಮೀಯನ ಪುಸ್ತಕಕ್ಕೆ ತೆರೆದೆ, ಅದು ಹೇಳುವದು: “ಬಾಲಕನೆನ್ನಬೇಡ; ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಅವರೆಲ್ಲರ ಬಳಿಗೆ ನೀನು ಹೋಗೇ ಹೋಗುವಿ; ನಾನು ಆಜ್ಞಾಪಿಸಿದ್ದನ್ನೆಲ್ಲಾ ನುಡಿಯಲೇ ನುಡಿಯುವಿ. ಅವರಿಗೆ ಅಂಜಬೇಡ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು.”—ಯೆರೆಮೀಯ 1:7, 8.
ಯೆಹೋವನು ನಿಜವಾಗಿ ನನ್ನೊಂದಿಗೆ ಮಾತಾಡುತ್ತಿದ್ದಾನೆಂದು ನನಗೆ ಭಾಸವಾಯಿತು. ಆದ್ದರಿಂದ ನಾನು ಧೈರ್ಯಪಡಕೊಂಡು, ನನ್ನ ಹೊಲಿಗೆಯ ಯಂತ್ರದಿಂದ ಪತ್ರಿಕೆಗಳಿಗಾಗಿ ಒಂದು ಬ್ಯಾಗನ್ನು ಹೊಲಿದೆ. ಮನಃಪೂರ್ವಕವಾಗಿ ಪ್ರಾರ್ಥಿಸಿದ ಬಳಿಕ, ಒಬ್ಬಳಾಗಿಯೇ ಹೋಗಿ ಮನೆಮನೆಯ ಸೇವೆ ಮಾಡಿದೆ, ನನ್ನೆಲ್ಲಾ ಸಾಹಿತ್ಯವನ್ನು ನೀಡಿದೆ, ಮತ್ತು ಆ ದಿನ ಒಂದು ಬೈಬಲಭ್ಯಾಸವನ್ನೂ ಪ್ರಾರಂಭಿಸಿದೆ. ಯೆಹೋವನಿಗೆ ನನ್ನ ಜೀವಿತದಲ್ಲಿ ಪ್ರಥಮ ಸ್ಥಾನವನ್ನು ಕೊಡಲು ನಿಶ್ಚಯ ಮಾಡಿಕೊಂಡೆ, ಮತ್ತು ಆತನಲ್ಲಿ ನನ್ನ ಪೂರ್ಣ ನಂಬಿಕೆಯನ್ನೂ ಭರವಸವನ್ನೂ ಇಟ್ಟೆ. ಜನರ ನಿಂದೆಯ ಮಧ್ಯೆಯೂ, ಬಹಿರಂಗ ಸಾರುವಿಕೆ ನನ್ನ ಜೀವನದ ಕ್ರಮದ ಭಾಗವಾಯಿತು. ವಿರೋಧದ ನಡುವೆಯೂ, ನನ್ನ ಚಟುವಟಿಕೆಯು ಕೆಲವರ ಮೇಲೆ ಬಲವಾದ ಅಚ್ಚೊತ್ತನ್ನು ಹಾಕಿತು.
ಇದು, ನನ್ನ ಮಗಳು ಮತ್ತು ನಾನು ಹಲವಾರು ವರ್ಷಗಳ ಹಿಂದೆ ಮದ್ರಾಸಿನಲ್ಲಿ ಮನೆಮನೆಯ ಸೇವೆ ಮಾಡುವಾಗ ಚಿತ್ರಿತವಾಯಿತು. ಹೈಕೋರ್ಟಿನ ನ್ಯಾಯಾಧೀಶನಾಗಿದ್ದ ಹಿಂದೂ ಸಜ್ಜನನೊಬ್ಬನು, ನನ್ನ ವಯಸ್ಸನ್ನು ತಪ್ಪು ಗ್ರಹಿಸಿ, ಅಂದದ್ದು: “ನೀನು ಹುಟ್ಟುವದಕ್ಕೆ ಮುಂಚಿನಿಂದಲೂ ನನಗೀ ಪತ್ರಿಕೆಯ ಪರಿಚಯವಿದೆ! ಮೂವತ್ತು ವರ್ಷಗಳ ಹಿಂದೆ ಒಬ್ಬ ಮಹಿಳೆಯು ಕ್ರಮವಾಗಿ ಮೌಂಟ್ ರೋಡಿನಲ್ಲಿ ನಿಂತು ಅವನ್ನು ನೀಡುತ್ತಿದ್ದಳು.” ಅವನಿಗೊಂದು ಚಂದಾ ಬೇಕಿತ್ತು.
ಇನ್ನೊಂದು ಮನೆಯಲ್ಲಿ ನಿವೃತ್ತ ಅಧಿಕಾರಿಯಾಗಿದ್ದ ಒಬ್ಬ ಹಿಂದೂ ಬ್ರಾಹ್ಮಣನು, ನಮ್ಮನ್ನು ಒಳಗೆ ಕರೆದು, ಅಂದದ್ದು: “ಅನೇಕ ವರ್ಷಗಳ ಹಿಂದೆ ಒಬ್ಬಾಕೆ ಮಹಿಳೆ ಮೌಂಟ್ ರೋಡಿನಲ್ಲಿ ನಿಂತು ದ ವಾಚ್ಟವರ್ ನೀಡುತ್ತಿದ್ದಳು. ಅವಳೆಡೆಗೆ ಪರಿಗಣನೆಯಿಂದ ನೀವು ನೀಡುವ ಪತ್ರಿಕೆಗಳನ್ನು ನಾನು ತಕ್ಕೊಳ್ಳುವೆ.” ನಾನು ನಸುನಗ ಬೇಕಾಯಿತು ಯಾಕೆಂದರೆ ಆ ಇಬ್ಬರೂ ಸೂಚಿಸಿದ್ದ ಮಹಿಳೆ ನಾನೇ ಎಂದು ನನಗೆ ತಿಳಿದಿತ್ತು.
ಬಲಪಡಿಸಲ್ಪಟ್ಟದ್ದು ಮತ್ತು ಆಶೀರ್ವದಿಸಲ್ಪಟ್ಟದ್ದು
1947ರ ಒಕ್ಟೋಬರದಲ್ಲಿ ನಾನು ಯೆಹೋವನಿಗೆ ನನ್ನ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಮಾಡಿಕೊಂಡೆ. ಆ ಸಮಯದಲ್ಲಿ ತಮಿಳು ಭಾಷೆಯನ್ನಾಡುವ ಸ್ತ್ರೀ ಸಾಕ್ಷಿ ಇಡೀ ಪ್ರಾಂತ್ಯದಲ್ಲಿ ನಾನೊಬ್ಬಳೇ ಆಗಿದ್ದೆ, ಆದರೆ ಈಗ ಸಾವಿರಾರು ತಮಿಳು ಸ್ತ್ರೀಯರು ಯೆಹೋವನ ನಂಬಿಗಸ್ತ, ಕ್ರಿಯಾಶೀಲ ಸಾಕ್ಷಿಗಳಾಗಿದ್ದಾರೆ.
ನನ್ನ ದೀಕ್ಷಾಸ್ನಾನದ ನಂತರ, ಎಲ್ಲಾ ಕಡೆಗಳಿಂದ ವಿರೋಧವು ಬರತೊಡಗಿತು. ನನ್ನ ಸಹೋದರನು ಬರೆದದ್ದು: “ನೀನು ಎಲ್ಲಾ ಔಚಿತ್ಯ ಮತ್ತು ಮರ್ಯಾದೆಯನ್ನು ಮೀರಿಹೋಗಿರುವಿ.” ನಾನು ಕೆಲಸ ಮಾಡಿದ್ದ ಶಾಲೆಯಲ್ಲಿ ಮತ್ತು ಸಮಾಜದಲ್ಲೂ ನನಗೆ ವಿರೋಧ ಬಂತು. ನಾನು ಎಡೆಬಿಡದೆ, ಮನಸಾರೆ ಪ್ರಾರ್ಥಿಸುತ್ತಾ ಯೆಹೋವನಿಗೆ ಇನ್ನೂ ಹತ್ತಿರ ಅಂಟಿಕೊಂಡೆ. ರಾತ್ರೀ ಮಧ್ಯದಲ್ಲಿ ಎದ್ದರೆ, ಕೂಡಲೆ ಸೀಮೆಯೆಣ್ಣೆ ಲಾಂದ್ರ ಹಚ್ಚಿ ಅಭ್ಯಾಸಕ್ಕೆ ತೊಡಗುತ್ತಿದ್ದೆ.
ನಾನು ಬಲಗೊಂಡಷ್ಟಕ್ಕೆ, ಇತರರಿಗೆ ನೆರವಾಗಲು ಮತ್ತು ಸಾಂತ್ವನ ಕೊಡಲು ಒಳ್ಳೇ ಸ್ಥಾನದಲ್ಲಿದ್ದೆ. ನಾನು ಅಭ್ಯಾಸ ಮಾಡಿದ್ದ ಒಬ್ಬ ವೃದ್ಧೆ ಹಿಂದೂ ಮಹಿಳೆಯು ಯೆಹೋವನ ಆರಾಧನೆಗಾಗಿ ದೃಢವಾದ ಸ್ಥಾನವನ್ನು ತಕ್ಕೊಂಡಳು. ಅವಳು ಸತ್ತಾಗ, ಆ ಮನೆವಾರ್ತೆಯ ಇನ್ನೊಬ್ಬ ಸ್ತ್ರೀಯು ಅಂದದ್ದು: “ನಮ್ಮನ್ನು ಸಂತೋಷಪಡಿಸಿದ್ದು ಯಾವದಂದರೆ, ಅಕೆ ಯಾರನ್ನು ಆರಾಧಿಸಲು ಆರಿಸಿದಳೋ ಆ ದೇವರಿಗೆ ಕೊನೆಯ ತನಕ ಆಕೆ ತೋರಿಸಿದ ನಿಷ್ಟೆಯೆ.”
ನಾನು ಅಭ್ಯಾಸ ಮಾಡಿದ ಇನ್ನೊಬ್ಬ ಸ್ತ್ರೀಯು ಎಂದೂ ನಗುತ್ತಿರಲಿಲ್ಲ. ಅವಳ ಮುಖವು ಯಾವಾಗಲೂ ಚಿಂತೆ ಮತ್ತು ಬೇಸರವನ್ನು ಪ್ರತಿಬಿಂಬಿಸುತ್ತಿತ್ತು. ಆದರೆ ಯೆಹೋವನ ಕುರಿತು ಕಲಿಸಿದ ನಂತರ, ಅತನಿಗೆ ಪ್ರಾರ್ಥಿಸುವಂತೆ ನಾನು ಆಕೆಯನ್ನು ಉತ್ತೇಜಿಸಿದೆ ಏಕೆಂದರೆ ಅವನಿಗೆ ನಮ್ಮ ತೊಂದರೆಗಳು ಗೊತ್ತಿವೆ ಮತ್ತು ಆತನು ನಮ್ಮನ್ನು ಲಕ್ಷಿಸುತ್ತಾನೆ. ಮರು ವಾರ ಆಕೆಯ ಮುಖದಲ್ಲಿ ಸಂತೋಷ ಹೊರಸೂಸುತ್ತಿತ್ತು. ನಾನಾಕೆ ನಗುವದನ್ನು ನೋಡಿದ್ದು ಅದೇ ಮೊದಲು. “ನಾನು ಯೆಹೋವನಿಗೆ ಪ್ರಾರ್ಥನೆ ಮಾಡಿದೆನು,” ಅವಳು ವಿವರಿಸಿದ್ದು, “ಮತ್ತು ನನಗೀಗ ಮನೋಶಾಂತಿ ಮತ್ತು ಹೃದ ಸಮಾಧಾನವು ದೊರೆತದೆ.” ಆಕೆ ತನ್ನ ಸಮರ್ಪಣೆಯನ್ನು ಮಾಡಿಕೊಂಡು, ಅನೇಕ ಕಷ್ಟಗಳ ನಡುವೆಯೂ ನಂಬಿಗಸ್ತಿಕೆಯಿಂದ ಉಳಿದಿದ್ದಾಳೆ.
ಜವಾಬ್ದಾರಿಗಳನ್ನು ಸಮತೆಯಲ್ಲಿಡುವುದ
ಇಬ್ಬರು ಚಿಕ್ಕ ಮಕ್ಕಳ ಪರಾಮರಿಕೆ ಇರಲಾಗಿ, ಯೆಹೋವನನ್ನು ಪೂರ್ಣ ಸಮಯದ ಪಯನೀಯರಳಾಗಿ ಸೇವಿಸುವ ನನ್ನ ಅಪೇಕ್ಷೆ ಪೂರೈಸಲಿಕ್ಕಿಲವ್ಲೆಂಬ ಅನಿಸಿಕೆ ನನಗಾಯಿತು. ಆದರೆ ಬೈಬಲ್ ಸಾಹಿತ್ಯವನ್ನು ತಮಿಳಿಗೆ ಭಾಷಾಂತರಿಸಲು ಯಾರಾದರೂ ಬೇಕು ಎಂಬ ಕರೆ ಬಂದಾಗ ಒಂದು ಹೊಸ ಸೇವಾ ಮಾರ್ಗವು ತೆರೆಯಲ್ಪಟ್ಟಿತು. ಯೆಹೋವನ ಸಹಾಯದಿಂದ ಆ ನೇಮಕಕ್ಕೆ ನೆರವಾಗಲು ನಾನು ಶಕ್ತಳಾದೆ ಮತ್ತು ಅದೇ ಸಮಯದಲ್ಲಿ ಅಧ್ಯಾಪಿಕೆಯಾಗಿ ಕೆಲಸ ಮಾಡಲು, ಮಕ್ಕಳನ್ನು ನೋಡಿಕೊಳ್ಳಲು, ಮನೆಗೆಲಸ ಮಾಡಲು, ಎಲ್ಲಾ ಕೂಟಗಳನ್ನು ಹಾಜರಾಗಲು ಮತ್ತು ಕ್ಷೇತ್ರ ಸೇವೆಯನ್ನೂ ಮಾಡಲು ಶಕ್ತಳಾದೆ. ಕೊನೆಗೆ, ಮಕ್ಕಳು ಬೆಳೆದು ದೊಡ್ಡವರಾದಾಗ, ನಾನು ಒಬ್ಬ ವಿಶೇಷ ಪಯನೀಯರಳಾದೆ, ಕಳೆದ 33 ವರ್ಷಗಳಿಂದ ನಾನೀ ಸುಯೋಗದಲ್ಲಿ ಆನಂದಿಸುತ್ತಿದ್ದೇನೆ.
ಸುಂದರ್ ಮತ್ತು ರತ್ನ ಅತಿ ಚಿಕ್ಕವರಾಗಿರುವಾಗಲೂ, ಯೆಹೋವನ ಕಡೆಗೆ ಪ್ರೀತಿಯನ್ನು ಮತ್ತು ಆತನ ಅಭಿರುಚಿಗಳನ್ನು ಯಾವಾಗಲೂ ತಮ್ಮ ಜೀವನದ ಎಲ್ಲಾ ವಿಷಯಗಳಿಗಿಂತ ಪ್ರಥಮವಾಗಿಡುವ ಅಪೇಕ್ಷೆಯನ್ನು ಅವರಲ್ಲಿ ಬೇರೂರಿಸಲು ನಾನು ಪ್ರಯತ್ನಿಸಿದ್ದೆ. ಬೆಳಿಗ್ಗೆ ಎದ್ದಾಗ ಅವರು ಮೊದಲು ಮಾತಾಡಬೇಕಾದ ವ್ಯಕ್ತಿ ಯೆಹೋವ ಮತ್ತು ಮಲಗುವ ಮುಂಚೆ ಕೊನೆಗೆ ಮಾತಾಡಬೇಕಾದ ವ್ಯಕ್ತಿಯೂ ಆತನೇ ಎಂದವರಿಗೆ ತಿಳಿದಿತ್ತು. ಮತ್ತು ಕ್ರೈಸ್ತ ಕೂಟಗಳ ತಯಾರಿಯು ಶಾಲಾ ಮನೆಗೆಲಸದ ಕಾರಣ ದುರ್ಲಕ್ಷಿಸಲ್ಪಡಬಾರೆಂದು ಅವರಿಗೆ ಗೊತ್ತಿತ್ತು. ಶಾಲಾಗೆಲಸದಲ್ಲಿ ಒಳ್ಳೇದಾಗಿ ಮಾಡುವಂತೆ ನಾನು ಅವರನ್ನು ಉತ್ತೇಜಿಸಿದೆನ್ದಾದರೂ, ಉಚ್ಛ ರ್ಯಾಂಕನ್ನು ಪಡೆಯುವಂತೆ ಒತ್ತಾಯಿಸಿರಲಿಲ್ಲ, ಅವರದನ್ನು ತಮ್ಮ ಜೀವಿತದ ಅತಿ ಪ್ರಧಾನ ವಿಷಯವಾಗಿ ಮಾಡ್ಯಾರೆಂಬ ಭಯದಿಂದ.
ದೀಕ್ಷಾಸ್ನಾನ ಪಡಕೊಂಡ ಮೇಲೆ, ಅವರು ಶಾಲಾ ರಜೆಯನ್ನು ಪಯನೀಯರಾಗಲು ಉಪಯೋಗಿಸುತ್ತಿದ್ದರು. ರತ್ನ ಧೈರ್ಯವಂತೆಯಾಗುವಂತೆ, ನನ್ನಂತೆ ಪುಕ್ಕಲು ಮತ್ತು ಸಂಕೋಚ ಪ್ರವೃತ್ತಿಯವಳಾಗದಂತೆ ನಾನು ಉತ್ತೇಜಿಸಿದೆ. ಹೈಸ್ಕೂಲ್ ಶಿಕ್ಷಣ ಮತ್ತು ಕಮರ್ಶಿಯಲ್ ತರಬೇತಿಯ ಅನಂತರ, ಆಕೆ ಪಯನೀಯರಿಂಗ್ ಮಾಡ ತೊಡಗಿದಳು, ಆ ಮೇಲೆ ವಿಶೇಷ ಪಯನೀಯರಳಾದಳು. ಸಮಯಾನಂತರ ಆಕೆ, ಆಗ ಸಂಚಾರ ಮೇಲ್ವಿಚಾರಕರಾಗಿದ್ದ ಮತ್ತು ಈಗ ಭಾರತದ ವಾಚ್ಟವರ್ ಸೊಸೈಟಿಯ ಬ್ರಾಂಚ್ ಕಮಿಟಿ ಕಾರ್ಡಿನೇಟರ್ ಆಗಿರುವ, ರಿಚರ್ಡ್ ಗ್ಯಾಬ್ರಿಯೆಲ್ ಅವರನ್ನು ವಿವಾಹವಾದಳು. ಅವರು ಮತ್ತು ಅವರ ಮಗಳು ಅಬೀಗೈಲ್, ಭಾರತ ಬ್ರಾಂಚ್ನಲ್ಲಿ ಪೂರ್ಣ ಸಮಯದ ಸೇವೆ ಮಾಡುತ್ತಿದ್ದಾರೆ ಮತ್ತು ಅವರ ಚಿಕ್ಕ ಮಗ ಆ್ಯಂಡ್ರೂ, ಸುವಾರ್ತೆಯ ಪ್ರಚಾರಕನಾಗಿದ್ದಾನೆ.
ಆದರೆ ಸುಂದರ್, ತನ್ನ 18ನೆಯ ವಯಸ್ಸಿನಲ್ಲಿ, ಯೆಹೋವನ ಸಾಕ್ಷಿಗಳೊಂದಿಗೆ ಜತೆಗೂಡುವದನ್ನು ನಿಲ್ಲಿಸಿ ನನಗೆ ಹೃದಯವೇದನೆ ತಂದನು. ಹಿಂಬಾಲಿಸಿದ ಆ ವರ್ಷಗಳು ನನಗೆ ಅತ್ಯಂತ ದುಃಖಮಯವಾಗಿದ್ದವು. ಅವನನ್ನು ಬೆಳೆಸುವದರಲ್ಲಿ ನನ್ನಲ್ಲಿ ಯಾವದೇ ಕುಂದುಗಳಾಗಿದ್ದರೆ ಕ್ಷಮಿಸುವಂತೆ ಮತ್ತು ಸುಂದರ್ ಹಿಂತಿರುಗುವ ಹಾಗೆ ಅವನಿಗೆ ಸದ್ಭುದ್ಧಿಯನ್ನು ಕೊಡುವಂತೆ ನಾನು ಯೆಹೋವನಿಗೆ ಬಲವಾಗಿ ವಿಜ್ಞಾಪಿಸಿದೆ. ಆದರೆ ಸಮಯಾನಂತರ ನಾನೆಲ್ಲಾ ನಿರೀಕ್ಷೆ ಕಳಕೊಂಡೆ. ತರುವಾಯ 13 ವರ್ಷದ ನಂತರ, ಒಂದು ದಿನ ಅವನು ಬಂದು ನನಗೆ ಹೇಳಿದ್ದು: “ಚಿಂತಿಸಬೇಡಿ ಅಮ್ಮಾ, ನಾನು ಒಳ್ಳೆಯವನಾಗುವೆ.”
ಅನಂತರ ಬೇಗನೇ, ಸುಂದರ್ ಆತ್ಮಿಕವಾಗಿ ಪ್ರೌಢನಾಗಲು ವಿಶೇಷ ಪ್ರಯತ್ನ ಮಾಡಿದ. ಯೆಹೋವನ ಸಾಕ್ಷಿಗಳ ಒಂದು ಸಭೆಯ ಮೇಲ್ವಿಚಾರವನ್ನು ವಹಿಸಿ ಕೊಳ್ಳುವಷ್ಟು ಪ್ರಗತಿಯನ್ನೂ ಮಾಡಿದನು. ಅನಂತರ ಒಳ್ಳೇ-ವೇತನದ ತನ್ನ ಕೆಲಸವನ್ನೂ ತೊರೆದು ಪಯನೀಯರನಾದ. ಈಗ ಅವನು ತನ್ನ ಪತ್ನಿ ಎಸ್ತರ್ ಜೊತೆಯಲ್ಲಿ, ದಕ್ಷಿಣ ಭಾರತದ ಬೆಂಗಳೂರಿನಲ್ಲಿ ಇದೇ ಸೇವೆಯನ್ನು ಮಾಡುತ್ತಿದ್ದಾನೆ.
ಜೀವಾವಧಿಯ ಸಾಂತ್ವನ
ಕಷ್ಟಗಳನ್ನು ಮತ್ತು ತೊಂದರೆಗಳನ್ನು ವರ್ಷಗಳ ವರೆಗೆ ಅನುಭವಿಸಲು ಬಿಟ್ಟದ್ದಕ್ಕಾಗಿ ಕೆಲವು ಸಾರಿ ನಾನು ಯೆಹೋವನಿಗೆ ಉಪಕಾರ ಹೇಳ್ತುತ್ತೇನೆ. ಅಂಥ ಅನುಭವಗಳ ಹೊರತಾಗಿ ಯೆಹೋವನ ಒಳ್ಳೇತನ, ಕರುಣೆ, ಕೋಮಲ ಪರಾಮರಿಕೆ ಮತ್ತು ಮಮತೆಯ ವಿಸ್ತಾರ್ಯದ ಸವಿಯನ್ನು ಅನುಭವಿಸುವ ಅಮೂಲ್ಯ ಸುಯೋಗವು ನನ್ನದಾಗುತ್ತಿರಲಿಲ್ಲ. (ಯಾಕೋಬ 5:11) “ತಂದೆಯಿಲ್ಲದ ಹುಡುಗ ಮತ್ತು ವಿಧವೆಯರ” ಕಡೆಗೆ ಯೆಹೋವನ ಪರಾಮರಿಕೆ ಮತ್ತು ಚಿಂತೆಯನ್ನು ಓದುವದು ಹೃದಯ ಪ್ರೇರಕವು. (ಧರ್ಮೋಪದೇಶಕಾಂಡ 24:19-21) ಆದರೆ ಆತನ ಪರಾಮರಿಕೆ ಮತ್ತು ಚಿಂತೆಯನ್ನು ಪ್ರತ್ಯಕ್ಷವಾಗಿ ಅನುಭವಿಸುವ ಸಂತೋಷ ಮತ್ತು ಸಾಂತ್ವನಕ್ಕೆ ತುಲನೆಯಲ್ಲಿ ಅದೇನೂ ಅಲ್ಲ.
ಸ್ವಬುದ್ಧಿಯನ್ನು ಆಧಾರಮಾಡಿಕೊಳ್ಳದೆ ಯೆಹೋವನಲ್ಲಿ ಪೂರ್ಣವಾದ ನಂಬಿಗೆ ಮತ್ತು ಭರವಸವನ್ನಿಡಲು ಮತ್ತು ನನ್ನ ಎಲ್ಲಾ ಮಾರ್ಗಗಳಲ್ಲಿ ಆತನ ಕಡೆಗೇ ದೃಷ್ಟಿಸಲು ನಾನು ಕಲಿತಿದ್ದೇನೆ. (ಕೀರ್ತನೆ 43:5; ಜ್ಞಾನೋಕ್ತಿ 3:5, 6.) ಯುವ ವಿಧವೆಯೋಪಾದಿ ನಾನು ದೇವರ ವಾಕ್ಯದ ಸಾಂತ್ವನಕ್ಕಾಗಿ ಪ್ರಾರ್ಥಿಸಿದ್ದೆ. ಈಗ 69ನೇ ವಯಸ್ಸಿನಲ್ಲಿ, ಬೈಬಲನ್ನು ತಿಳುಕೊಳ್ಳುವದರಲ್ಲಿ ಮತ್ತು ಅದರ ಸೂಚನೆಗಳನ್ನು ಅನ್ವಯಿಸುವುದರಲ್ಲಿ ಅತ್ಯಂತ ಮಿಗಿಲಾದ ಸಾಂತ್ವನವನ್ನು ನಾನು ಕಂಡುಕೊಂಡಿದ್ದೇನೆಂದು ನಿಜವಾಗಿ ಹೇಳಬಲ್ಲೆನು. (w91 2/1)
[Picture of Lily Arthur on page 26]
[ಪುಟ 27 ರಲ್ಲಿರುವ ಚಿತ್ರ]
ಲಿಲಿ ಆರ್ಥರ್ ತನ್ನ ಕುಟುಂಬ ಸದಸ್ಯರೊಂದಿಗೆ