ದೇವರ ಕರುಣೆಯನ್ನು ನೀವು ಅನುಕರಿಸುವಿರೋ?
“ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಕರಿಸುವವರಾಗಿರಿ.”—ಎಫೆಸ 5:1.
1. ಇತರರನ್ನು ಅನುಕರಿಸುವ ವಿಷಯದಲ್ಲಿ ನಾವೆಲ್ಲರೂ ಚಿಂತಿತರಾಗಿರಬೇಕು ಏಕೆ?
ಹೆಚ್ಚಿನ ಜನರು, ಒಳ್ಳೇದಕ್ಕಾಗಲಿ ಅಥವಾ ಕೆಟ್ಟದಕ್ಕಾಗಲಿ, ಇತರರನ್ನು ಅನುಕರಿಸುತ್ತಾರೆ. ನಾವು ಯಾರ ಸುತ್ತಲೂ ಇದ್ದೇವೋ, ಮತ್ತು ಯಾರನ್ನು ಅನುಕರಿಸುತ್ತೇವೋ ಅವರು ನಮ್ಮ ಮೇಲೆ ಕ್ರಮಗತಿಯಾಗಿ ಪರಿಣಾಮ ಬೀರಬಹುದು. ಜ್ಞಾನೋಕ್ತಿ 13:20ರ ಪ್ರೇರಿತ ಬರಹಗಾರನು ಎಚ್ಚರಿಸಿದ್ದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” ಹೀಗಿರಲಾಗಿ ಸಕಾರಣದಿಂದಲೇ, ದೇವರ ವಾಕ್ಯವು ಹೇಳುವುದು: “ನೀನು ಕೆಟ್ಟ ನಡತೆಯನ್ನು ಅನುಸರಿಸದೆ ಒಳ್ಳೇ ನಡತೆಯನ್ನು ಅನುಸರಿಸು; ಒಳ್ಳೇದನ್ನು ಮಾಡುವವನು ದೇವರಿಂದ ಹುಟ್ಟಿದವನಾಗಿದ್ದಾನೆ.”—3 ಯೋಹಾನ 11.
2. ಯಾರನ್ನು ನಾವು ಅನುಕರಿಸಲೇ ಬೇಕು, ಮತ್ತು ಯಾವ ರೀತಿಯಲ್ಲಿ?
2 ನಾವು ಅನುಸರಿಸಬಹುದಾದ ಪುರುಷರ ಮತ್ತು ಸ್ತ್ರೀಯರ ಅತ್ಯುತ್ತಮವಾದ ಬೈಬಲ್ ಮಾದರಿಗಳು ನಮಗಿವೆ. (1 ಕೊರಿಂಥ 4:16; 11:1; ಫಿಲಿಪ್ಪಿಯ 3:17) ಆದರೂ, ಅನುಕರಿಸಲು ನಮಗೆ ಅತ್ಯಂತ ಪ್ರಾಮುಖ್ಯವಾಗಿರುವವನು ದೇವರೇ ಆಗಿರುತ್ತಾನೆ. ಎಫೆಸ 4:31-ಎಫೆಸ 4:31 ರಿಂದ 5:2ರಲ್ಲಿ ಅಪೊಸ್ತಲ ಪೌಲನು, ನಾವು ವರ್ಜಿಸಬೇಕಾದ ದುರ್ನಡತೆಗಳನ್ನು ಮತ್ತು ಪದ್ಧತಿಗಳನ್ನು ತಿಳಿಸಿಯಾದ ಮೇಲೆ, “ಒಬ್ಬರಿಗೊಬ್ಬರು ಕೋಮಲ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ” ಎಂದು ನಮ್ಮನ್ನು ಪ್ರಬೋಧಿಸಿದ್ದಾನೆ. ಇದು ಮುಖ್ಯ ಉಪದೇಶದ ಕಡೆಗೆ ನಡಿಸಿತು: “ಆದದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಕರಿಸುವವರಾಗಿರಿ.”
3, 4. ದೇವರು ತಾನೇ ತನ್ನ ವಿಷಯವಾದ ಯಾವ ವರ್ಣನೆಯನ್ನು ಒದಗಿಸಿದನು, ಮತ್ತು ಆತನು ನ್ಯಾಯವಂತನಾದ ದೇವರು ಎಂಬದಕ್ಕೆ ನಾವು ಏಕೆ ಗಮನವನ್ನು ಕೊಡಬೇಕು?
3 ನಾವು ಅನುಕರಿಸಬೇಕಾದ ದೇವರ ಮಾರ್ಗಗಳು ಮತ್ತು ಗುಣಗಳು ಅದ್ಯಾವುವು? ಆತನ ವ್ಯಕ್ತಿತ್ವದ ಅನೇಕ ಮುಖಗಳು ಮತ್ತು ಕ್ರಿಯೆಗಳು ಅಲ್ಲಿವೆ, ದೇವರು ತಾನೇ ಮೋಶೆಗೆ ವರ್ಣಿಸಿದ ರೀತಿಯಲ್ಲಿ ನಾವಿದನ್ನು ಕಾಣಬಹುದು: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು. ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನೂ ಆದರೂ ಅಪರಾಧಗಳನ್ನು ಶಿಕ್ಷಿಸದೆ ಬಿಡದವನು; ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರುನಾಲ್ಕು ತಲೆಗಳ ವರೆಗೆ ಬರಮಾಡುವವನು.”—ವಿಮೋಚನಕಾಂಡ 34:6, 7.
4 ಯೆಹೋವನು “ನೀತಿನ್ಯಾಯಗಳನ್ನು ಪ್ರೀತಿಸುವಾತನು” ಆಗಿರುವುದರಿಂದ, ನಾವಾತನ ವ್ಯಕ್ತಿತ್ವದ ಈ ಮುಖವನ್ನು ನಿಶ್ಚಯವಾಗಿಯೂ ತಿಳಿದುಕೊಳ್ಳಬೇಕು ಮತ್ತು ಅನುಕರಿಸಬೇಕು. (ಕೀರ್ತನೆ 33:5; 37:28) ಆತನು ನಿರ್ಮಾಣಿಕನಾದ ದೇವರು ಹಾಗೂ ಮಾನವಕುಲದ ಶ್ರೇಷ್ಠ ನ್ಯಾಯಾಧಿಪತಿ ಮತ್ತು ಧರ್ಮವಿಧಾಯಕನು, ಆದ್ದರಿಂದ ಎಲ್ಲರ ಕಡೆಗೆ ನ್ಯಾಯವನ್ನೇ ತೋರಿಸುವಾತನು. (ಯೆಶಾಯ 33:22) ಇದು, ಆತನು ನ್ಯಾಯವನ್ನು ಅಪೇಕ್ಷಿಸಿದ ರೀತಿಯಲ್ಲಿ ಮತ್ತು ಅದನ್ನು ಇಸ್ರಾಯೇಲಿನ ತನ್ನ ಜನರ ನಡುವೆ ಮತ್ತು ತದನಂತರ ಕ್ರೈಸ್ತ ಸಭೆಯಲ್ಲಿ ನಿರ್ವಹಿಸಲ್ಪಡುವಂತೆ ಮಾಡಿದ ರೀತಿಯಲ್ಲಿ ಸ್ಪಷ್ಟವಾಗಿಗಿ ಸೂಚಿಸಲ್ಪಟ್ಟಿದೆ.
ದೈವಿಕ ನ್ಯಾಯವು ನಿರ್ವಹಿಸಲ್ಪಟ್ಟಿತು
5, 6. ಇಸ್ರಾಯೇಲ್ಯರೊಂದಿಗೆ ದೇವರ ವ್ಯವಹಾರಗಳಲ್ಲಿ ನ್ಯಾಯವು ಹೇಗೆ ಪ್ರದರ್ಶಿಸಲ್ಪಟ್ಟಿತು?
5 ಇಸ್ರಾಯೇಲನ್ನು ತನ್ನ ಜನರಾಗಿ ಆರಿಸಿಕೊಳ್ಳುವಾಗ, ‘ಅವರು ಆತನ ಮಾತಿಗೆ ಶ್ರದ್ಧೆಯಿಂದ ವಿಧೇಯರಾಗಿ ಆತನ ಒಡಂಬಡಿಕೆಯನ್ನು ಅನುಸರಿಸಿ ನಡೆಯುವರೋ’ ಇಲ್ಲವೋ ಎಂದು ದೇವರು ಕೇಳಿದ್ದನು. ಸೀನಾಯಿ ಬೆಟ್ಟದ ತಳದಲ್ಲಿ ಸಮೂಹವಾಗಿ ಕೂಡಿಬಂದ ಅವರು, “ಯೆಹೋವನು ಹೇಳಿದಂತೆಯೇ ಮಾಡುವೆವು,” ಎಂದುತ್ತರ ಕೊಟ್ಟಿದ್ದರು. (ವಿಮೋಚನಕಾಂಡ 19:3-8) ಎಂಥ ಗಂಭೀರವಾದ ವಚನಬದ್ಧತೆ! ದೇವದೂತರುಗಳ ಮೂಲಕವಾಗಿ ದೇವರು ಇಸ್ರಾಯೇಲ್ಯರಿಗೆ ಸುಮಾರು 600 ನೇಮವಿಧಿಗಳನ್ನು ಕೊಟ್ಟಿದ್ದನು; ಅವನ್ನು ಅವರು ಆತನ ಸಮರ್ಪಿತ ಜನರೋಪಾದಿ ಪಾಲಿಸುವದಕ್ಕೆ ಹೊಣೆಗಾರರಾಗಿದ್ದರು. ಅವರಲ್ಲಿ ಯಾರಾದರೂ ಅದನ್ನು ಪಾಲಿಸದೆ ಹೋದಲ್ಲಿ ಆಗೇನು? ದೇವರ ನಿಯಮಶಾಸ್ತ್ರದಲ್ಲಿ ಪರಿಣಿತ ವ್ಯಕ್ತಿಯೊಬ್ಬನು ವಿವರಿಸಿದ್ದು: “ದೇವದೂತರ ಮೂಲಕ ಹೇಳಲ್ಪಟ್ಟ ವಾಕ್ಯವು ಸ್ಥಿರವಾಗಿದ್ದು ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪಿಗೂ ಅವಿಧೇಯತ್ವಕ್ಕೂ ನ್ಯಾಯವಾದ ಪ್ರತಿಫಲವುಂಟಾಗುವುದು.”—ಇಬ್ರಿಯ 2:2.
6 ಹೌದು, ವಿಧೇಯನಾಗದೇ ಇರುವ ಇಸ್ರಾಯೇಲ್ಯನು “ನ್ಯಾಯವಾದ ದಂಡನಾ ಪ್ರತಿಫಲವನ್ನು” ಹೊಂದಲಿದ್ದನು, ಇದು ನ್ಯೂನತೆಯುಳ್ಳ ಮಾನವ ನ್ಯಾಯವಿಧಿಯಲ್ಲ, ನಮ್ಮ ನಿರ್ಮಾಣಿಕನಿಂದ ಬಂದ ನ್ಯಾಯತೀರ್ಪಾಗಿದೆ. ನಿಯಮದ ಉಲ್ಲಂಘನೆಗಾಗಿ ಹಲವಾರು ತರದ ದಂಡನೆಗಳನ್ನು ದೇವರು ನಮೂದಿಸಿದ್ದನು. ಅತ್ಯಂತ ಕಟುತರದ ಶಿಕ್ಷೆಯು ‘ಛೇದಿಸಲ್ಪಡುವಿಕೆ’ ಯಾ ನಾಶನವೇ. ಘೋರ ಉಲ್ಲಂಘನೆಗಳಾದ ವಿಗ್ರಹಾರಾಧನೆ, ವ್ಯಭಿಚಾರ, ಅಗಮ್ಯಗಮನ, ಪಶುಗಮನ, ಸಲಿಂಗಿಕಾಮ, ಮಕ್ಕಳಾಹುತಿ, ಕೊಲೆ, ಮತ್ತು ರಕ್ತದ ದುರುಪಯೋಗ ಇವೆಲ್ಲಾದಕ್ಕೆ ಅದು ಅನ್ವಯಿಸಿತ್ತು. (ಯಾಜಕಕಾಂಡ 17:14; 18:6-17, 21-29) ಅಷ್ಟಲ್ಲದೆ, ಯಾವ ಇಸ್ರಾಯೇಲ್ಯನಾದರೂ ಬುದ್ಧಿಪೂರ್ವಕವಾಗಿ ಹಾಗೂ ಪಶ್ಚಾತ್ತಾಪರಹಿತನಾಗಿ ಯಾವುದೇ ದೈವಿಕ ನಿಯಮನ್ನು ಮೀರಿದ್ದಾದರೆ, ಅವನು “ಛೇದಿಸಲ್ಪಡಲಿದ್ದನು.” (ಅರಣ್ಯಕಾಂಡ 4:15, 18; 15:30, 31) ಈ ದೈವಿಕ ನ್ಯಾಯ ತೀರ್ಪು ನಿರ್ವಹಿಸಲ್ಪಟ್ಟಾಗ, ಪರಿಣಾಮಗಳು ಅಪರಾಧಿಯ ಸಂತತಿಯವರಿಂದಲೂ ಅನುಭವಿಸಲ್ಪಡುವ ಸಾಧ್ಯತೆಯಿತ್ತು.
7. ದೇವರ ಪುರಾತನ ಜನರಲ್ಲಿ ನ್ಯಾಯವನ್ನು ವಿಧಿಸುವುದರಲ್ಲಿ ಕೂಡಿದ್ದ ಕೆಲವು ಅಂತ್ಯಫಲಗಳಾವುವು?
7 ಅಂಥಾ ಶಿಕ್ಷೆಗಳು ದೈವಿಕ ನಿಯಮವನ್ನು ಉಲ್ಲಂಘಿಸುವ ಗಂಭೀರತೆಯನ್ನು ಒತ್ತಿಹೇಳುತ್ತವೆ. ಉದಾಹರಣೆಗಾಗಿ, ಒಬ್ಬ ಮಗನು ಕುಡುಕನೂ ಹೊಟ್ಟೆಬಾಕನೂ ಆಗಿ ಪರಿಣಮಿಸಿದಲ್ಲಿ, ಪಕ್ವತೆಯುಳ್ಳ ನ್ಯಾಯಾಧೀಶರ ಮುಂದೆ ಅವನನ್ನು ತರಬೇಕಿತ್ತು. ಅವನು ಬುದ್ಧಿಪೂರ್ವಕನಾದ, ಪಶ್ಚಾತ್ತಾಪರಹಿತ ಅಪರಾಧಿಯೆಂದು ಅವರು ಕಂಡುಕೊಂಡಲ್ಲಿ, ನ್ಯಾಯತೀರ್ಪನ್ನು ನಿರ್ವಹಿಸುವುದರಲ್ಲಿ ಹೆತ್ತವರು ಕೂಡ ಭಾಗವಹಿಸಬೇಕಿತ್ತು. (ಧರ್ಮೋಪದೇಶಕಾಂಡ 21:18-21) ಅದನ್ನು ಮಾಡುವದೇನೂ ಸುಲಭವಲ್ಲವೆಂದು ನಮ್ಮಲ್ಲಿ ಹೆತ್ತವರಾಗಿರುವವರು ಕಲ್ಪಿಸಿಕೊಳ್ಳಬಹುದು. ಆದರೂ, ಸತ್ಯಾರಾಧಕರ ನಡುವೆ ದುಷ್ಟತನವು ಹರಡದಂತೆ ಅದು ಬೇಕಾಗಿತ್ತೆಂದು ದೇವರಿಗೆ ತಿಳಿದಿತ್ತು. (ಯೆಹೆಜ್ಕೇಲ 33:17-19) ಯಾರ ಕುರಿತಾಗಿ ಇದನ್ನು ಹೇಳಸಾಧ್ಯವೋ ಆತನಿಂದಲೇ ಇದು ಏರ್ಪಡಿಸಲ್ಪಟ್ಟಿತ್ತು: “ಆತನು ನಡಿಸುವದೆಲ್ಲವೂ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು.”—ಧರ್ಮೋಪದೇಶಕಾಂಡ 32:4.
8. ಕ್ರೈಸ್ತ ಸಭೆಯೊಂದಿಗೆ ದೇವರ ವ್ಯವಹಾರದಲ್ಲಿ ನ್ಯಾಯವು ಹೇಗೆ ತೋರಿಬಂತು?
8 ಅನೇಕ ಶತಮಾನಗಳ ತರುವಾಯ ದೇವರು ಇಸ್ರಾಯೇಲ್ ಜನಾಂಗವನ್ನು ತಿರಸ್ಕರಿಸಿದನು ಮತ್ತು ಕ್ರೈಸ್ತ ಸಭೆಯನ್ನು ಆರಿಸಿಕೊಂಡನು. ಆದರೆ ಯೆಹೋವನು ಬದಲಾಗಲಿಲ್ಲ. ಆತನು ಇನ್ನೂ ನ್ಯಾಯತ್ವಕ್ಕೆ ವಚನಬದನ್ಧು ಮತ್ತು “ದಹಿಸುವ ಅಗ್ನಿ”ಯಾಗಿ ವರ್ಣಿಸಲ್ಪಡ ಸಾಧ್ಯವಿದೆ. (ಇಬ್ರಿಯ 12:29; ಲೂಕ 18:7, 8) ಆದ್ದರಿಂದ, ಅಪರಾಧಿಗಳನ್ನು ಬಹಿಷ್ಕರಿಸುವ ಮೂಲಕವಾಗಿ ಇಡೀ ಸಭೆಯಲ್ಲಿ ದಿವ್ಯ ಭಯಭಕ್ತಿಯನ್ನು ಬೇರೂರಿಸಲಿಕ್ಕಾಗಿ ಒಂದು ಒದಗಿಸುವಿಕೆಯನ್ನು ಆತನು ಇನ್ನೂ ಇಟ್ಟನು. ಪಶ್ಚಾತ್ತಾಪಪಡದ ಅಪರಾಧಿಗಳಾಗಿ ಪರಿಣಮಿಸಿದ ಸಮರ್ಪಿತ ಕ್ರೈಸ್ತರನ್ನು ಬಹಿಷ್ಕಾರಕ್ಕೆ ಒಳಪಡಿಸಲಾಯಿತು.
9. ಬಹಿಷ್ಕಾರವೆಂದರೇನು, ಅದು ಏನನ್ನು ಪೂರೈಸುತ್ತದೆ?
9 ಬಹಿಷ್ಕಾರದಲ್ಲಿ ಏನೆಲ್ಲಾ ಒಳಗೂಡಿದೆ? ಒಂದನೇ ಶತಮಾನದಲ್ಲಿ ಒಂದು ಸಮಸ್ಯೆಯು ನಿರ್ವಹಿಸಲ್ಪಟ್ಟ ರೀತಿಯಿಂದ ನಾವು ಒಂದು ವಸ್ತುಪಾಠವನ್ನು ಕಲಿಯುತ್ತೇವೆ. ಕೊರಿಂಥದ ಒಬ್ಬ ಕ್ರೈಸ್ತನು ತನ್ನ ತಂದೆಯ ಪತ್ನಿಯೊಂದಿಗೆ ಅನೈತಿಕತೆಯನ್ನು ನಡಿಸಿದ್ದನು ಮತ್ತು ಪಶ್ಚಾತ್ತಾಪ ಪಟ್ಟಿರಲಿಲ್ಲ. ಆದುದರಿಂದ ಅವನನ್ನು ಆ ಸಭೆಯಿಂದ ಬಹಿಷ್ಕರಿಸಬೇಕೆಂದು ಪೌಲನು ಆದೇಶಿಸಿದನು. ದೇವಜನರ ಶುದ್ಧತೆಯನ್ನು ಕಾಪಾಡುವುದಕ್ಕಾಗಿ ಇದನ್ನು ನಡಿಸಲೇಬೇಕಿತ್ತು, ಯಾಕೆಂದರೆ, “ಸ್ವಲ್ಪ ಹುಳಿ ಕಲಸಿದರೆ ಕಣಿಕವೆಲ್ಲಾ ಹುಳಿಯಾಗುತ್ತದಷ್ಟೇ.” ಅವನನ್ನು ಬಹಿಷ್ಕರಿಸುವಿಕೆಯು, ಅವನು ದೇವರನ್ನು ಮತ್ತು ದೇವಜನರನ್ನು ಇಬ್ಬರನ್ನೂ ಅಗೌರವಿಸುವ ಅವನ ದುಷ್ಟತನವನ್ನು ತಡೆಯುವದು. ಬಹಿಷ್ಕರಿಸಲ್ಪಡುವ ಆ ಉಗ್ರ ಶಿಕ್ಷೆಯು ಧಕ್ಕೆಯೋಪಾದಿ ಅವನ ಬುದ್ಧಿಯನ್ನು ಸ್ವಾಸ್ಧಕ್ಕೆ ತರಬಹುದು ಮತ್ತು ಅವನಲ್ಲಿ ಮತ್ತು ಸಭೆಯಲ್ಲಿ ತಕ್ಕದಾದ್ದ ದೇವರ ಭಯವನ್ನು ಮೂಡಿಸಬಹುದು.—1 ಕೊರಿಂಥ 5:1-13; ಧರ್ಮೋಪದೇಶಕಾಂಡ 17:2, 12, 13ಕ್ಕೆ ಹೋಲಿಸಿರಿ.
10. ಯಾರಾದರೂ ಬಹಿಷ್ಕರಿಸಲ್ಪಟ್ಟಾಗ ದೇವರ ಸೇವಕರು ಹೇಗೆ ಪ್ರತಿಕ್ರಿಯೆ ತೋರಿಸಬೇಕು?
10 ದುಷ್ಟನು ಬಹಿಷ್ಕೃತನಾದಲ್ಲಿ, ಕ್ರೈಸ್ತನು “ಅವನನ್ನು ಮನೆಯೊಳಗೆ ಸೇರಿಸ” ಬಾರದಿತ್ತು, “ಅವನೊಂದಿಗೆ ಊಟವನ್ನೂ ಮಾಡಬಾರದಿತ್ತು.”a ಹೀಗೆ ಅವನು, ದೇವರ ನಿಯಮಕ್ಕನುಸಾರ ನಡೆಯ ಬಯಸುವ ಮತ್ತು ಅದನ್ನು ಗೌರವಿಸುವ ನಿಷ್ಠಾವಂತರೊಂದಿಗಿನ ಸಾಮಾಜಿಕವಾಗಿ ಸಹಿತವಾದ, ಸಹವಾಸದಿಂದ ಕಡಿಯಲ್ಪಡುತ್ತಾನೆ. ಅವರಲ್ಲಿ ಕೆಲವರು ಅದೇ ಕುಟುಂಬದ ಭಾಗವಾಗಿರದಿದ್ದರೂ, ಕುಟುಂಬದ ಹತ್ತಿರದ ಸಂಬಂಧಿಕರಾಗಿರಬಹುದು. ಈ ದೈವಿಕ ನಿಯಮವನ್ನು ಅನ್ವಯಿಸಲು ಒಂದುವೇಳೆ ಆ ಸಂಬಂಧಿಕರಿಗೆ ಕಷ್ಟವಾದೀತು. ಮೋಶೆಯ ಧರ್ಮಶಾಸ್ತ್ರದಡಿಯಲ್ಲಿದ್ದ ಆ ಹಿಬ್ರೂ ಹೆತ್ತವರಿಗೆ ತಮ್ಮ ದುಷ್ಟ ಮಗನನ್ನು ವಧಿಸುವುದರಲ್ಲಿ ಭಾಗವಹಿಸಲು ಹೇಗೆ ಸುಲಭವಿರಲಿಲ್ಲವೋ ಹಾಗೆಯೇ. ಆದರೂ, ದೇವರ ಆಜ್ಞೆಯು ಸ್ಪಷ್ಟ; ಹೀಗೆ ಬಹಿಷ್ಕಾರವು ನ್ಯಾಯವಾದದ್ದು ಎಂಬ ನಿಶ್ಚಯತೆ ನಮಗಿರ ಸಾಧ್ಯವಿದೆ.—1 ಕೊರಿಂಥ 5:1, 6-8, 11; ತೀತ 3:10, 11; 2 ಯೋಹಾನ 9-11; ದಿ ವಾಚ್ಟವರ್, ಸಪ್ಟಂಬರ 15, 1981, ಪುಟ 26-31; ಎಪ್ರಿಲ್ 15, 1988, ಪುಟ 28-31 ನೋಡಿರಿ.
11. ಬಹಿಷ್ಕಾರದ ಸಂಬಂಧದಲ್ಲಿ ದೇವರ ವ್ಯಕ್ತಿತ್ವದ ಹಲವಾರು ಮುಖಗಳು ಹೇಗೆ ಪ್ರದರ್ಶಿಸಲ್ಪಡುತ್ತವೆ?
11 ನಮ್ಮ ದೇವರು ಕೇವಲ ನ್ಯಾಯವಂತನು ಮಾತ್ರವೇ ಅಲ್ಲ, “ಬಹು ಪ್ರೀತಿ-ದಯೆಯುಳ್ಳವನೂ, ಅಪರಾಧ ಪಾಪಗಳನ್ನು ಕ್ಷಮಿಸುವವನೂ” ಆಗಿದ್ದಾನೆಂಬದನ್ನು ಜ್ಞಾಪಕದಲ್ಲಿಡಿರಿ. (ಅರಣ್ಯಕಾಂಡ 14:18) ಬಹಿಷ್ಕಾರಗೊಂಡ ವ್ಯಕ್ತಿಯು ದೈವಿಕ ಕ್ಷಮೆಯನ್ನು ಯಾಚಿಸುತ್ತಾ, ಪಶ್ಚಾತ್ತಾಪ ಪಡಬಹುದೆಂದು ಆತನ ವಾಕ್ಯವು ಸೃಷ್ಟಗೊಳಿಸುತ್ತದೆ. ಆ ಮೇಲೆ ಏನು? ಅನುಭವಸ್ಥ ಹಿರಿಯರು ಅವನನ್ನು ಸಂದರ್ಶಿಸಿ, ಬಹಿಷ್ಕಾರಕ್ಕೆ ನಡಿಸಿದ ದುರ್ನಡತೆಯ ಮೇಲೆ ಪಶ್ಚಾತ್ತಾಪ ಪಟ್ಟಿದ್ದಾನೆಂಬದಕ್ಕೆ ರುಜುವಾತು ಅವನಲ್ಲಿದೆಯೋ ಇಲ್ಲವೋ ಎಂಬದನ್ನು ಪ್ರಾರ್ಥನಾಪೂರ್ವಕವಾಗಿ ಮತ್ತು ಜಾಗರೂಕತೆಯಿಂದ ನಿರ್ಧರಿಸ ಸಾಧ್ಯವಿದೆ. (ಅಪೊಸ್ತಲರ ಕೃತ್ಯಗಳು 26:20) ರುಜುವಾತು ಇದ್ದಲ್ಲಿ, ಕೊರಿಂಥದ ಆ ಮನುಷ್ಯನಿಗೆ ಏನಾಯಿತೆಂದು 2 ಕೊರಿಂಥ 2:6-11 ಸೂಚಿಸುತ್ತದೋ ಆ ಮೇರೆಗೆ, ಸಭೆಯೊಳಗೆ ಅವನನ್ನು ಪುನಃಸ್ಥಾಪಿಸ ಸಾಧ್ಯವಿದೆ. ಆದರೂ, ಕೆಲವು ಬಹಿಷ್ಕೃತರು ದೇವರ ಸಭೆಯಿಂದ ಹಲವಾರು ವರ್ಷಗಳಿಂದ ಹೊರಗಿದ್ದಾರೆ, ಇಂಥವರು ಹಿಂದೆ ಬರುವ ಮಾರ್ಗವನ್ನು ಕಾಣುವಂತೆ ನೆರವಾಗಲು ಏನಾದರೂ ಮಾಡ ಸಾಧ್ಯವೋ?
ಕರುಣೆಯೊಂದಿಗೆ ಸಮದೂಗಿದ ನ್ಯಾಯ
12, 13. ನಾವು ದೇವರನ್ನು ಅನುಕರಿಸುವುದರಲ್ಲಿ ಆತನ ನ್ಯಾಯವನ್ನು ಪ್ರದರ್ಶಿಸುವುದಕ್ಕಿಂತ ಹೆಚ್ಚಿನದ್ದು ಒಳಗೂಡಿರಬೇಕು ಏಕೆ?
12 ಮೇಲಿನ ವಿಷಯವು, ವಿಮೋಚನಕಾಂಡ 34:6, 7ರಲ್ಲಿ ತಿಳಿಸಲ್ಪಟ್ಟ ದೇವರ ಗುಣಗಳ ಒಂದು ಮುಖವನ್ನು ಮುಖ್ಯವಾಗಿ ಚರ್ಚಿಸಿಯದೆ. ಆ ವಚನಗಳಾದರೋ, ದೇವರ ನ್ಯಾಯಕ್ಕಿಂತ ಎಷ್ಟೋ ಹೆಚ್ಚಿನ ಗುಣಗಳನ್ನು ನಮಗೆ ತಿಳಿಸುತ್ತವೆ, ಮತ್ತು ಆತನನ್ನು ಅನುಕರಿಸ ಬಯಸುವವರು ನ್ಯಾಯವನ್ನು ವಿಧಿಸುವುದರಲ್ಲಿ ಮಾತ್ರವೇ ಮನಸ್ಸನ್ನು ಕೇಂದ್ರೀಕರಿಸುವುದಿಲ್ಲ. ಸೊಲೊಮೋನನಿಂದ ಕಟ್ಟಲ್ಪಟ್ಟ ಆಲಯದ ಒಂದು ನಮೂನೆಯನ್ನು ನೀವು ಮಾಡುತ್ತೀರಾದರೆ, ಅದರ ಕಂಬಗಳಲ್ಲಿ ಕೇವಲ ಒಂದರ ಅಧ್ಯಯನವನ್ನು ಮಾತ್ರವೇ ಮಾಡುವಿರೋ? (1 ಅರಸು 7:15-22) ಇಲ್ಲ, ಯಾಕೆಂದರೆ ಅದು ನಿಮಗೆ ಆ ದೇವಾಲಯದ ರಚನೆ ಮತ್ತು ಪಾತ್ರದ ಕುರಿತಾದ ಒಂದು ಸಮತೂಕದ ಚಿತ್ರವನ್ನು ಕೊಡಲಾರದು. ತದ್ರೀತಿ ನಾವು ದೇವರನ್ನು ಅನುಕರಿಸ ಬಯಸುತ್ತೇವಾದರೆ, ಆತನ ಬೇರೆಲ್ಲಾ ಮಾರ್ಗಗಳನ್ನು ಮತ್ತು ಗುಣಗಳನ್ನು ಅಂದರೆ, “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಕೃಪೆಯೂ ಸತ್ಯವೂ ಉಳ್ಳವನು, ಸಾವಿರಾರು ತಲೆಗಳ ವರೆಗೂ ದಯೆ ತೋರಿಸುವವನು, ದೋಷಾಪರಾಧಪಾಪಗಳನ್ನು ಕ್ಷಮಿಸುವವನು” ಮುಂತಾದವುಗಳನ್ನೂ ಅನುಕರಿಸುವ ಅಗತ್ಯ ನಮಗಿದೆ.
13 ದೇವರು ಇಸ್ರಾಯೇಲ್ಯರೊಂದಿಗೆ ವ್ಯವಹರಿಸಿದ ವಿಧಾನವನ್ನು ನಾವು ಕಾಣುವಾಗ, ಕರುಣೆ ಮತ್ತು ಕ್ಷಮೆಯು ಆತನ ಮೂಲಭೂತ ಗುಣಗಳಾಗಿ ತೋರಿಬರುತ್ತವೆ. ಅವರು ಪದೇ ಪದೇ ಪಾಪ ಮಾಡಿದ ಪಾಪಕ್ಕಾಗಿ ನ್ಯಾಯವಂತನಾದ ದೇವರು ಅವರಿಗೆ ಶಿಕ್ಷೆಯಿಂದ ವಿನಾಯಿತಿಯನ್ನು ಕೊಡಲಿಲ್ಲ. ಆದರೂ, ಅವನು ಬಹಳವಾಗಿ ಕರುಣೆ ತೋರಿಸಿದನು ಮತ್ತು ಕ್ಷಮಿಸಿದನು. “ಆತನು ಮೋಶೆಗೆ ತನ್ನ ಮಾರ್ಗವನ್ನೂ ಇಸ್ರಾಯೇಲ್ಯರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು. ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣ ಪ್ರೀತಿಯೂ ಉಳ್ಳವನು. ಆತನು ಯಾವಾಲೂ ತಪ್ಪು ಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ.” (ಕೀರ್ತನೆ 103:7-9; 106:43-46) ಹೌದು, ನೂರಾರು ವರ್ಷಗಳ ಆತನ ವ್ಯವಹಾರದ ಪೂರ್ವಸ್ಥಿತಿಯನ್ನು ವೀಕ್ಷಿಸುವಲ್ಲಿ ಆ ಮಾತುಗಳು ಸತ್ಯವೆಂದು ರುಜುವಾಗುತ್ತವೆ.—ಕೀರ್ತನೆ 86:15; 145:8, 9; ಮೀಕ 7:18, 19.
14. ಯೇಸುವು ತಾನು ದೇವರ ಕನಿಕರವನ್ನು ಅನುಕರಿಸಿದ್ದನೆಂದು ಹೇಗೆ ತೋರಿಸಿದನು?
14 ಯೇಸು ಕ್ರಿಸ್ತನು, “ದೇವರ ಪ್ರಭಾವದ ಪ್ರಕಾಶವೂ ಆತನ ತತ್ವದ ಮೂರ್ತಿಯೂ” ಆಗಿರುವುದರಿಂದ, ಅವನು ತದ್ರೀತಿಯ ಕರುಣೆ ಮತ್ತು ಕ್ಷಮೆಯ ಸಿದ್ಧಮನಸ್ಸನ್ನು ಪ್ರದರ್ಶಿಸುವನೆಂದು ನಾವು ನಿರೀಕ್ಷಿಸಬೇಕು. (ಇಬ್ರಿಯ 1:3) ಮತ್ತು ಆತನು ಅದನ್ನು ಪ್ರದರ್ಶಿಸಿದನು, ಇತರರ ಕಡೆಗಿನ ಅವನ ಕ್ರಿಯೆಗಳು ಅದನ್ನು ತೋರಿಸುತ್ತವೆ. (ಮತ್ತಾಯ 20:30-34) ಲೂಕ 15ನೇ ಅಧ್ಯಾಯದಲ್ಲಿ ನಾವು ಓದುವ ಪ್ರಕಾರ ಆತನು ಮಾತುಗಳಿಂದಲೂ ಕರುಣೆಯನ್ನು ವ್ಯಕ್ತಪಡಿಸಿದ್ದನು. ಅದರಲ್ಲಿರುವ ಮೂರು ದೃಷ್ಟಾಂತಗಳು ಯೇಸುವು ಯೆಹೋವನನ್ನು ಅನುಕರಿಸಿದ್ದನೆಂದು ರುಜುಪಡಿಸುತ್ತವೆ ಮತ್ತು ನಮಗಾಗಿ ಅತ್ಯಾವಶ್ಯಕವಾದ ಪಾಠಗಳನ್ನು ಅವು ಒದಗಿಸುತ್ತವೆ.
ಕಳೆದುಹೋದವುಗಳಿಗಾಗಿ ಚಿಂತನೆ
15, 16. ಲೂಕ 15ರ ದೃಷ್ಟಾಂತಗಳನ್ನು ಕೊಡಲು ಯೇಸುವನ್ನು ಪ್ರೇರೇಪಿಸಿದ್ದು ಯಾವುದು?
15 ಪಾಪಿಗಳಲ್ಲಿ ದೇವರಿಗಿರುವ ಕರುಣಾಮಯ ಆಸಕ್ತಿಯನ್ನು ಆ ದೃಷ್ಟಾಂತಗಳು ರುಜುಪಡಿಸುತ್ತವೆ, ಮತ್ತು ಅನುಕರಿಸಲಿಕ್ಕಾಗಿ ನಮಗೆ ಒಂದು ಹೊಂದಿಕೆಯುಳ್ಳ ಚಿತ್ರವನ್ನು ರಚಿಸುತ್ತವೆ. ಆ ಸಾಮ್ಯಗಳ ದೃಶ್ಯವನ್ನು ಪರಿಗಣಿಸಿರಿ: “ಯೇಸುವಿನ ಉಪದೇಶವನ್ನು ಕೇಳಬೇಕೆಂದು ಎಲ್ಲಾ ಸುಂಕದವರೂ ಪಾಪಿಗಳೂ ಆತನ [ಯೇಸುವಿನ] ಬಳಿಗೆ ಬರುತ್ತಾ ಇರಲು ಫರಿಸಾಯರೂ ಶಾಸ್ತ್ರಿಗಳೂ—ಇವನು ಪಾಪಿಗಳನ್ನು ಸೇರಿಸಿಕೊಂಡು ಅವರ ಜೊತೆಯಲ್ಲಿ ಊಟ ಮಾಡುತ್ತಾನೆ ಎಂದು ಹೇಳಿಕೊಂಡು ಗುಣುಗುಟ್ಟುತ್ತಿದ್ದರು.”—ಲೂಕ 15:1, 2.
16 ಅದರಲ್ಲಿ ಒಳಗೂಡಿದವರೆಲ್ಲರೂ ಯೆಹೂದ್ಯರಾಗಿದ್ದರು. ಫರಿಸಾಯರು ಮತ್ತು ಶಾಸ್ತ್ರಿಗಳು ಮೋಶೆಯ ನಿಯಮಶಾಸ್ತ್ರದ ಕಟ್ಟುನಿಟ್ಟಿನ ಪರಿಪಾಲಕರು ತಾವೆಂದು ಎಣಿಸುತ್ತಾ, ಒಂದು ರೀತಿಯ ನ್ಯಾಯಬದ್ಧ ನೀತಿಯನ್ನು ಗಳಿಸಿದ್ದರೆಂಬ ಅಭಿಮಾನದಿಂದಿದ್ದರು. ಆದರೆ, ಸ್ವಂತವಾಗಿ ಘೋಷಿಸಲ್ಪಟ್ಟ ಅಂಥಹ ನೀತಿಯುಕ್ತತೆಯನ್ನು ದೇವರು ಒಪ್ಪಿರಲಿಲ್ಲ. (ಲೂಕ 16:15) ಅಲ್ಲಿ ತಿಳಿಸಲ್ಪಟ್ಟ ಸುಂಕದವರು ರೋಮಿಗಾಗಿ ಸುಂಕ ವಸೂಲು ಮಾಡುತ್ತಿದ್ದ ಯೆಹೂದ್ಯರಾಗಿದ್ದರೆಂಬದು ವ್ಯಕ್ತ. ಅವರಲ್ಲಿ ಅನೇಕರು ಜೊತೆ ಯೆಹೂದ್ಯರಿಂದ ಅತಿರೇಕ ಹಣ ಸುಲಿಯುತ್ತಿದ್ದ ಕಾರಣ ಸುಂಕದವರನ್ನು ಒಂದು ತುಚ್ಛ ಗುಂಪಾಗಿ ನೋಡಲಾಗುತ್ತಿತ್ತು. (ಲೂಕ 19:2, 8) ಅನೈತಿಕ ಜನರು, ವೇಶ್ಯೆಗಳು ಸಹಾ ಸೇರಿದ್ದ “ಪಾಪಿಗಳ” ಗುಂಪಿನಲ್ಲಿ ಅವರನ್ನು ಸೇರಿಸಲಾಗಿತ್ತು. (ಲೂಕ 5:27-32; ಮತ್ತಾಯ 21:32) ಆದರೆ ಯೇಸು, ದೂರಿಡುತ್ತಿದ್ದ ಆ ಧಾರ್ಮಿಕ ಮುಖಂಡರನ್ನು ಕೇಳಿದ್ದು:
17. ಲೂಕ 15ರ ಯೇಸುವಿನ ಮೊದಲನೆಯ ದೃಷ್ಟಾಂತವು ಯಾವುದು?
17 “ನಿಮ್ಮೊಳಗೆ ಯಾವ ಮನುಷ್ಯನಾದರೂ ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ಕಳೆದು ಹೋದರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದು ಹೋದದ್ದು ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದೆ ಇದ್ದಾನೇ? ಸಿಕ್ಕಿದ ಮೇಲೆ ಅವನು ಸಂತೋಷಪಡುತ್ತಾ ಅದನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಮನೆಗೆ ಬಂದು ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕೂಡಿಸಿ—ಕಳೆದು ಹೋಗಿದ್ದ ಕುರಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಹೇಳುವನಲ್ಲವೇ? ಅದರಂತೆ ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು ನಾನು ನಿಮಗೆ ಹೇಳುತ್ತೇನೆ.” ಆ ಧಾರ್ಮಿಕ ಮುಖಂಡರಿಗೆ ಆ ದೃಷ್ಟಾಂತದ ಅರ್ಥವು ಆಗಿರಬೇಕು ಯಾಕೆಂದರೆ ಕುರಿಗಳ ಮತ್ತು ಕುರುಬರ ದೃಶ್ಯವು ಅಲ್ಲಿ ಸರ್ವ ಸಾಮಾನ್ಯವಾಗಿತ್ತು. ಚಿಂತೆಯಿಂದ ಕೂಡಿದವನಾಗಿ ಆ ಕುರುಬನು, ಚಿರಪರಿಚಿತ ಹೊಲದಲ್ಲಿ ತನ್ನ 99 ಕುರಿಗಳನ್ನು ಮೇಯಲು ಬಿಟ್ಟು, ತಪ್ಪಿಹೋದ ಆ ಒಂದು ಕುರಿಯನ್ನು ಹುಡುಕಲಿಕ್ಕಾಗಿ ಹೊರಟನು. ಅದು ಸಿಕ್ಕುವ ತನಕ ಹುಡುಕುವುದನ್ನು ಬಿಡದೆ, ಬೆದರಿಹೋಗಿದ್ದ ಆ ಕುರಿಯನ್ನು ಮೃದುವಾಗಿ ಎತ್ತಿಕೊಂಡು, ಮರಳಿ ಹಿಂಡಿಗೆ ಸೇರಿಸಿದನು.—ಲೂಕ 15:4-7.
18. ಲೂಕ 15ರ ಯೇಸುವಿನ ಎರಡನೆಯ ದೃಷ್ಟಾಂತದಲ್ಲಿ ಎತ್ತಿಹೇಳಲ್ಪಟ್ಟ ಪ್ರಕಾರ, ಸಂತೋಷಕ್ಕೆ ಕಾರಣಕೊಟ್ಟದ್ದು ಯಾವುದು?
18 ಯೇಸು ಎರಡನೆಯ ದೃಷ್ಟಾಂತವನ್ನು ಅದಕ್ಕೆ ಜೋಡಿಸಿದನು: “ಯಾವ ಹೆಂಗಸು ತನ್ನಲ್ಲಿ ಹತ್ತು ಪಾವಲಿಗಳಿರಲಾಗಿ ಒಂದು ಪಾವಲಿ ಹೋದರೆ ದೀಪಾಹಚ್ಚಿ ಮನೆಯನ್ನು ಗುಡಿಸಿ ಸಿಕ್ಕುವ ತನಕ ಅದನ್ನು ಎಚ್ಚರದಿಂದ ಹುಡುಕದೆ ಇದ್ದಾಳು? ಸಿಕ್ಕಿದ ಮೇಲೆ ಆಕೆಯು ತನ್ನ ಗೆಣತಿಯರನ್ನೂ ನೆರೆಹೊರೆಯವರನ್ನೂ ಕೂಡಿಸಿ—ಹೋಗಿದ್ದ ಪಾವಲಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಹೇಳುತ್ತಾಳಲ್ಲವೇ. ಅದರಂತೆ ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವದೆಂದು ನಿಮಗೆ ಹೇಳುತ್ತೇನೆ.” (ಲೂಕ 15:8-10) ಆ ಪಾವಲಿಯು ಒಬ್ಬ ಕೂಲಿಯಾಳಿಗೆ ಇಡೀ ದಿನದ ಸಂಬಳದಷ್ಟು ಬೆಲೆಯುಳ್ಳದ್ದಾಗಿತ್ತು. ಆ ಹೆಂಗಸಿನ ಪಾವಲಿಯು ಒಂದುವೇಳೆ ಕುಲಧನವಾಗಿದ್ದಿರ ಬಹುದು ಅಥವಾ ಆಭರಣವಾಗಿ ಮಾಡಲ್ಪಟ್ಟ ಒಂದು ಒಡವೆಯ ಭಾಗವಾಗಿದ್ದಿರ ಬಹುದು. ಅದು ಕಳೆದು ಹೋದಾಗ, ಅದು ಸಿಕ್ಕುವ ತನಕ ಆಕೆ ಕಷ್ಟಪಟ್ಟು ಹುಡುಕಾಡಿದಳು ಮತ್ತು ಅದು ದೊರೆತಾಗ ಅವಳೂ ಅವಳ ಗೆಳತಿಯರೂ ಉಲ್ಲಾಸಿಸಿದರು. ಇದು ದೇವರ ಕುರಿತು ನಮಗೇನನ್ನು ತಿಳಿಸುತ್ತದೆ?
ಪರಲೋಕದಲ್ಲಿ ಸಂತೋಷ—ಯಾವುದಕ್ಕಾಗಿ?
19, 20. ಲೂಕ 15ರ ಯೇಸುವಿನ ಮೊದಲಿನ ಎರಡು ದೃಷ್ಟಾಂತಗಳು ಮುಖ್ಯವಾಗಿ ಯಾರ ಕುರಿತಾಗಿ ಇತ್ತು, ಮತ್ತು ಯಾವ ಕೇಂದ್ರ ಬಿಂದುವನ್ನು ಅವು ಎತ್ತಿಹೇಳಿದವು?
19 ಈ ಎರಡು ದೃಷ್ಟಾಂತಗಳು, ತನ್ನ ಕುರಿಗಳಿಗಾಗಿ ತನ್ನ ಪ್ರಾಣವನ್ನು ಕೊಡುವ “ಒಳ್ಳೇ ಕುರುಬನು” ತಾನು ಎಂದು ಕೆಲವು ತಿಂಗಳ ಹಿಂದೆ ಯೇಸು ತನ್ನನ್ನು ಗುರುತಿಸಿಕೊಂಡಾಗ, ಉಂಟಾದ ಠೀಕೆಗೆ ಉತ್ತರವಾಗಿ ಕೊಡಲ್ಪಟ್ಟಿದ್ದವು. (ಯೋಹಾನ 10:11-15) ಆದರೂ, ಈ ದೃಷ್ಟಾಂತಗಳು ಮುಖ್ಯವಾಗಿ ಯೇಸುವಿನ ಕುರಿತಾಗಿ ಅಲ್ಲ. ಶಾಸ್ತ್ರಿಗಳು ಮತ್ತು ಫರಿಸಾಯರು ಕಲಿಯ ಬೇಕಾಗಿದ್ದ ಪಾಠಗಳು ದೇವರ ಮನೋಭಾವ ಮತ್ತು ಮಾರ್ಗಗಳ ಮೇಲೆ ಕೇಂದ್ರಿತವಾಗಿದ್ದವು. ಆದ್ದರಿಂದಲೇ, ಪಶ್ಚಾತ್ತಾಪಪಡುವ ಪಾಪಿಗಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು ಯೇಸು ಹೇಳಿದ್ದನು. ಆ ಧಾರ್ಮಿಕರು ಯೆಹೋವನನ್ನು ಸೇವಿಸುತ್ತೇವೆಂದು ಹೇಳುತ್ತಿದ್ದರು, ಆದರೂ ಆತನನ್ನು ಅನುಕರಿಸತ್ತಿರಲಿಲ್ಲ. ಇನ್ನೊಂದು ಕಡೆ, ಯೇಸುವಿನ ಕರುಣಾಮಯ ಮಾರ್ಗಗಳಾದರೋ ಆತನ ತಂದೆಯ ಚಿತ್ತವನ್ನು ಪ್ರತಿನಿಧಿಸಿದ್ದವು.—ಲೂಕ 18:10-14; ಯೋಹಾನ 8:28, 29; 12:47-50; 14:7-11.
20 ನೂರರಲ್ಲಿ ಒಬ್ಬನು ಅಷ್ಟು ಸಂತೋಷಕ್ಕೆ ಮೂಲನಾಗಿದ್ದರೆ, ಹತ್ತು ಪಾವಲಿಗಳಲ್ಲಿ ಒಂದು ಇನ್ನೂ ಹೆಚ್ಚು ಸಂತೋಷದಾಯಕವು. ಇಂದು ಸಹಾ, ಆ ಪಾವಲಿಯು ಸಿಕ್ಕುವಾಗ ಸ್ತ್ರೀಜನರ ಭಾವುಕತೆಗಳು ಉಲ್ಲಾಸಗೊಳ್ಳುವುದನ್ನು ನಾವು ಕಾಣಬಹುದು! ಇಲ್ಲಿ ಸಹಾ ಪಾಠವು, ಪರಲೋಕದ ಮೇಲೆ ಕೇಂದ್ರಿತವಾಗಿದೆ ಹೇಗಂದರೆ, “ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ” ಯೆಹೋವನೊಂದಿಗೆ “ದೇವದೂತರು” ಸಂತೋಷ ಪಡುವದರ ಕುರಿತು ಹೇಳಲಾಗಿದೆ. “ದೇವರ ಕಡೆಗೆ ತಿರುಗಿಕೊಳ್ಳುವದು” ಎಂಬ ಆ ಕೊನೆಯ ಮಾತನ್ನು ಗಮನಿಸಿರಿ. ಈ ದೃಷ್ಟಾಂತಗಳು, ನಿಜವಾಗಿ ಪಶ್ಚಾತ್ತಾಪಡುವ ಪಾಪಿಗಳ ಕುರಿತಾಗಿ ಅದೆ. ಮತ್ತು ಅವರ ಪಶ್ಚಾತ್ತಾಪಕ್ಕಾಗಿ ಸಂತೋಷಪಡುವ ಯುಕ್ತತೆಯನ್ನು ಎರಡೂ ಒತ್ತಿಹೇಳಿರುವುದನ್ನು ನೀವು ಕಾಣಬಹುದು.
21. ಲೂಕ 15ರ ಯೇಸುವಿನ ದೃಷ್ಟಾಂತಗಳಿಂದ ನಾವು ಯಾವ ಪಾಠವನ್ನು ಕಲಿಯಬೇಕು?
21 ಧರ್ಮಶಾಸ್ತ್ರಕ್ಕೆ ಬಾಹ್ಯರೀತಿಯ ಹೊಂದಿಕೆಯಲ್ಲಿರುವುದರಲ್ಲಿ ತೃಪ್ತರಾಗಿದ್ದ ಆ ತಪ್ಪುದಾರಿಗೆಳೆಯಲ್ಪಟ್ಟ ಧಾರ್ಮಿಕ ಮುಖಂಡರು, ದೇವರ “ಕನಿಕರ, ದಯೆ, . . . ದೋಷಾಪರಾಧಪಾಪಗಳನ್ನು ಕ್ಷಮಿಸುವಿಕೆ”ಯನ್ನು ಅಸಡ್ಡೆ ಮಾಡಿದ್ದರು. (ವಿಮೋಚನಕಾಂಡ 34:6, 7) ದೇವರ ಮಾರ್ಗಗಳ ಮತ್ತು ಆತನ ವ್ಯಕ್ತಿತ್ವದ ಈ ಮುಖವನ್ನು ಅವರು ಅನುಕರಿಸಿದದ್ದಾದರೆ, ಪಶ್ಚಾತ್ತಾಪಪಟ್ಟ ಪಾಪಿಗಳ ಕಡೆಗೆ ಯೇಸು ತೋರಿಸಿದ್ದ ಕನಿಕರವನ್ನು ಅವರು ಗಣ್ಯಮಾಡುತ್ತಿದ್ದರು. ನಮ್ಮ ಕುರಿತೇನು? ನಾವೀ ಪಾಠವನ್ನು ಹೃದಯಕ್ಕೆ ತಕ್ಕೊಂಡು ಅದನ್ನು ಅನ್ವಯಿಸಿಕೊಳ್ಳುತೇವ್ತೋ? ಒಳ್ಳೇದು, ಯೇಸುವಿನ ಮೂರನೆಯ ದೃಷ್ಟಾಂತವನ್ನು ಗಮನಿಸಿರಿ.
ಪಶ್ಚಾತ್ತಾಪ ಮತ್ತು ಕರುಣೆಯು ಕ್ರಿಯೆಯಲ್ಲಿ
22. ಲೂಕ 15ರಲ್ಲಿ ಯೇಸು ಏನನ್ನು ಮೂರನೆಯ ದೃಷ್ಟಾಂತವಾಗಿ ಕೊಟ್ಟನೆಂದು ಸಂಕ್ಷೇಪವಾಗಿ ತಿಳಿಸಿರಿ.
22 ಇದನ್ನು ಹೆಚ್ಚಾಗಿ ತಪ್ಪಿಹೋದ ಮಗನ ಸಾಮ್ಯವೆಂಬದಾಗಿ ಕರೆಯಲಾಗುತ್ತದೆ. ಆದರೂ ಅದನ್ನೋದುವಾಗ, ಕೆಲವರು ಅದನ್ನು ತಂದೆಯ ಪ್ರೀತಿಯ ಕುರಿತಾದ ಸಾಮ್ಯವೆಂದು ನೆನಸುವುದೇಕೆಂಬದನ್ನು ನೀವು ಕಂಡುಕೊಳ್ಳುವಿರಿ. ಕುಟುಂಬದ ಕಿರಿಯ ಮಗನು ತನ್ನ ತಂದೆಯಿಂದ ತನ್ನ ಆಸ್ತಿಯ ಪಾಲನ್ನು ಪಡೆಯುವ ಕುರಿತು ಅದು ತಿಳಿಸುತ್ತದೆ. (ಧರ್ಮೋಪದೇಶಕಾಂಡ 21:17ಕ್ಕೆ ಹೋಲಿಸಿ.) ಈ ಮಗನು ಒಂದು ದೂರದ ಊರಿಗೆ ಹೊರಟು ಹೋಗುತ್ತಾನೆ ಮತ್ತು ಆಸ್ತಿಯನ್ನೆಲ್ಲಾ ಲಂಪಟತನದಿಂದ ಪೋಲುಮಾಡುತ್ತಾನೆ, ಹಂದಿಗಳನ್ನು ಮೇಯಿಸುವ ಕೆಲಸವನ್ನು ಅವನು ತಕ್ಕೊಳ್ಳಬೇಕಾಗುತ್ತದೆ, ಹಂದಿಗಳ ಮೇವಿಗಾಗಿ ಆಶೆಪಡುವಷ್ಟು ಅವಸ್ಥೆಗೂ ಅವನು ಇಳಿಯುತ್ತಾನೆ. ಕೊನೆಗೆ, ಬುದ್ಧಿ ಸ್ವಾಸ್ಥ್ಯಕ್ಕೆ ಬಂದು ತನ್ನ ಮನೆಗೆ ಹಿಂದಿರುಗಲು ನಿರ್ಧರಿಸುತ್ತಾನೆ, ತಂದೆಯ ಕೂಲಿಯಾಳುಗಳಲ್ಲಿ ಒಬ್ಬನಾಗಿರುವ ಕೆಲಸವನ್ನಾದರೂ ಮಾಡೇನು ಎಂದು ಯೋಚಿಸಿದನು. ಮನೆಗೆ ಹತ್ತರಿಸುವಾಗ ತಂದೆಯು ಅವನನ್ನು ಸ್ವಾಗತಿಸಲು ಸಕಾರಾತ್ಮಕ ಹೆಜ್ಜೆಯನ್ನು ತಕ್ಕೊಳ್ಳುತ್ತಾನೆ, ಒಂದು ಔತಣವನ್ನೂ ಏರ್ಪಡಿಸುತ್ತಾನೆ. ಮನೆಯಲ್ಲೇ ಇದ್ದು ಕೆಲಸಮಾಡುತ್ತಿದ್ದ ಹಿರಿಯ ಮಗನು, ತೋರಿಸಲ್ಪಟ್ಟ ಆ ಕರುಣೆಯಿಂದ ಕೋಪಗೊಳ್ಳುತ್ತಾನೆ. ಆದರೆ ಅವರು ಸಂತೋಷಪಡಬೇಕೆಂದು ತಂದೆ ಹೇಳುತ್ತಾನೆ ಯಾಕಂದರೆ ಮಗನು ಸತ್ತು ಹೋದವನಾಗಿದ್ದನು, ಈಗ ತಿರುಗಿ ಬದುಕಿ ಬಂದಿದ್ದಾನೆ.—ಲೂಕ 15:11-32.
23. ತಪ್ಪಿಹೋದ ಮಗನ ದೃಷ್ಟಾಂತದಿಂದ ನಾವೇನನ್ನು ಕಲಿಯಬೇಕು?
23 ಕೆಲವು ಶಾಸ್ತ್ರಿಗಳು ಮತ್ತು ಫರಿಸಾಯರು ತಾವು, ಕಿರಿಯ ಮಗನಂತಿರುವ ಪಾಪಿಗಳಿಗೆ ತುಲನೆಯಲ್ಲಿ, ಹಿರಿಯ ಮಗನಿಗೆ ಹೋಲಿಸಲ್ಪಟ್ಟವರೆಂದು ಒಂದುವೇಳೆ ಭಾವಿಸಿರಬಹುದು. ಆದರೂ, ದೃಷ್ಟಾಂತದ ಮುಖ್ಯ ಬಿಂದುವನ್ನು ಅವರು ಗ್ರಹಿಸಿದ್ದರೋ, ನಾವು ಗ್ರಹಿಸಿದ್ದೇವೋ? ಅದು ನಮ್ಮ ಕರುಣಾಮಯ ಸ್ವರ್ಗೀಯ ತಂದೆಯ ಒಂದು ಮಹತ್ತಾದ ಗುಣವನ್ನು, ಒಬ್ಬ ಪಾಪಿಯ ಹೃದಯಪೂರ್ವಕ ಪಶ್ಚಾತ್ತಾಪ ಮತ್ತು ಮಾನಸಾಂತರದ ಆಧಾರದ ಮೇಲೆ ಕ್ಷಮೆಯನ್ನು ನೀಡುವ ಸಿದ್ಧಮನಸ್ಸನ್ನು ಎತ್ತಿಹೇಳುತ್ತದೆ. ಅದು ಪಶ್ಚಾತ್ತಾಪ ಪಟ್ಟ ಪಾಪಿಗಳ ವಿಮೋಚನೆಯು ಆಲೈಸುವವರನ್ನು ಸಂತೋಷದಿಂದ ಪ್ರತಿಕ್ರಿಯಿಸುವಂತೆ ಪ್ರೇರಿಸಬೇಕಿತ್ತು. ಆ ರೀತಿಯಲ್ಲೇ ದೇವರು ವಿಷಯಗಳನ್ನು ವೀಕ್ಷಿಸುತ್ತಾನೆ ಮತ್ತು ಕ್ರಿಯೆ ನಡಿಸುತ್ತಾನೆ, ಮತ್ತು ಅವನನ್ನು ಅನುಕರಿಸುವವರೂ ಅದೇ ರೀತಿ ಮಾಡುತ್ತಾರೆ.—ಯೆಶಾಯ 1:16, 17; 55:6, 7.
24, 25. ದೇವರ ಯಾವ ಮಾರ್ಗಗಳನ್ನು ನಾವು ಅನುಕರಿಸಲು ಹುಡುಕಬೇಕು?
24 ದೇವರ ಮಾರ್ಗಗಳೆಲ್ಲವುಗಳಲ್ಲಿ ನ್ಯಾಯವು ತೋರಿಬರುತ್ತದೆ, ಆದ್ದರಿಂದ ಯೆಹೋವನನ್ನು ಅನುಕರಿಸ ಬಯಸುವವರೆಲ್ಲರು ನ್ಯಾಯವನ್ನು ನೆಚ್ಚುವರು ಮತ್ತು ಅದನ್ನು ಬೆನ್ನಟ್ಟುವರು. ಆದರೂ ನಮ್ಮ ದೇವರು ಕೇವಲ ಭಾವನಾರೂಪದ ಯಾ ಅತಿನಿಷ್ಠೆಯ ನ್ಯಾಯದಿಂದ ಪ್ರೇರಿತನಾಗುವುದಿಲ್ಲ. ಆತನ ಕರುಣೆ ಮತ್ತು ಪ್ರೀತಿಯು ಮಹತ್ತಮವಾದದ್ದು. ನಿಜ ಪಶ್ಚಾತ್ತಾಪ ಪಡುವವರನ್ನು ಕ್ಷಮಿಸಲು ಸಿದ್ಧನಾಗಿರುವ ಮೂಲಕ ಆತನಿದನ್ನು ತೋರಿಸುತ್ತಾನೆ. ಹೀಗಿರಲಾಗಿ ಪೌಲನು, ನಮ್ಮ ಕ್ಷಮಾಭಾವವನ್ನು ದೇವರ ಅನುಕರಣೆಗೆ ಜೋಡಿಸಿರುವುದು ಯಥೋಚಿತವು: “ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ. ಆದದರಿಂದ ದೇವರ ಪ್ರಿಯರಾದ ಮಕ್ಕಳ ಹಾಗೆ ಆತನನ್ನು ಅನುಕರಿಸುವವರಾಗಿರಿ, ಪ್ರೀತಿಯಲ್ಲಿ ನಡೆದುಕೊಳ್ಳಿರಿ.”—ಎಫೆಸ 4:32–5:2.
25 ನಿಜ ಕ್ರೈಸ್ತರು ಬಹಳ ಕಾಲದಿಂದ ಯೆಹೋವನ ನ್ಯಾಯವನ್ನು ಹಾಗೂ ಆತನ ಕರುಣೆ ಮತ್ತು ಕ್ಷಮಿಸುವ ಸಿದ್ಧ ಮನಸ್ಸನ್ನು ನಕಲು ಮಾಡಲು ಪ್ರಯತ್ನಿಸಿದ್ದಾರೆ. ನಾವು ಆತನನ್ನು ಹೆಚ್ಚಾಗಿ ತಿಳಿದಷ್ಟಕ್ಕೆ, ಆತನನ್ನು ಈ ವಿಷಯಗಳಲ್ಲಿ ಅನುಕರಿಸುವುದೂ ಹೆಚ್ಚು ಸುಲಭವಾಗಿರಬೇಕು. ಹೀಗಿರಲಾಗಿ, ಪಾಪದ ಮಾರ್ಗವನ್ನು ಬೆನ್ನಟ್ಟಿದ್ದಕ್ಕಾಗಿ ತೀವ್ರ ತಿದ್ದುಪಾಟಿಗೆ ನ್ಯಾಯವಾಗಿ ಗುರಿಯಾದ ಒಬ್ಬ ವ್ಯಕ್ತಿಯ ಕಡೆಗೆ ನಾವಿದನ್ನು ಹೇಗೆ ಅನ್ವಯಿಸಬಹುದು? ನಾವದನ್ನು ನೋಡೋಣ. (w91 4/15)
[ಅಧ್ಯಯನ ಪ್ರಶ್ನೆಗಳು]
a ಬಹಿಷ್ಕಾರದ ಅತ್ಯಂತ ಸಾಮಾನ್ಯ ಅರ್ಥವು, ಒಂದು ಪಂಗಡವು ಒಮ್ಮೆ ಒಳ್ಳೇ ನಿಲುವಿನಲ್ಲಿದ್ದ ಸದಸ್ಯರಿಗೆ ತನ್ನ ಸದಸ್ಯತನದ ಸುಯೋಗವನ್ನು ಬುದ್ಧಿಪೂರ್ವಕವಾಗಿ ನಿರಾಕರಿಸುವುದು ಎಂದಾಗಿದೆ. . . ಒಂದು ಧಾರ್ಮಿಕ ಸಮಾಜವು ಯಾವುದರ ಮೂಲಕ ತಪ್ಪಿತಸ್ಥರಿಗೆ ಮತಸಂಸ್ಕಾರ, ಸಭಾ ಆರಾಧನೆ ಮತ್ತು ಯಾವುದೇ ರೀತಿಯ ಸಾಮಾಜಿಕ ಸಂಪರ್ಕದ ಸಂಭಾವ್ಯತೆಯನ್ನು ನಿರಾಕರಿಸುತ್ತದೋ ಆ ಒಂದು ಹೊರಗೆ ಹಾಕುವ ಕ್ರಿಯೆಗೆ ನಿರ್ದೇಶಿಸಲಿಕ್ಕಾಗಿ ಬಹಿಷ್ಕಾರವು ಕ್ರೈಸ್ತ ಯುಗದೊಳಗೆ ಬಂತು.”—ದಿ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ.
ನೀವು ಏನು ಕಲಿತಿರಿ?
◻ ಇಸ್ರಾಯೇಲ್ ಮಂಡಲಿಯಲ್ಲಿ ಮತ್ತು ಕ್ರೈಸ್ತ ಸಭೆಯಲ್ಲಿ ದೇವರ ನ್ಯಾಯವು ಹೇಗೆ ಪ್ರದರ್ಶಿಸಲ್ಪಟ್ಟಿತ್ತು?
◻ ದೇವರ ನ್ಯಾಯವನ್ನಲ್ಲದೆ ಆತನ ಕರುಣೆಯನ್ನೂ ನಾವೇಕೆ ಅನುಕರಿಸಬೇಕು?
◻ ಲೂಕ ಅಧ್ಯಾಯ 15ರ ದೃಷ್ಟಾಂತಗಳನ್ನು ಕೊಡಲಿಕ್ಕೆ ಕಾರಣವಾದದ್ದು ಯಾವುದು, ಮತ್ತು ಅವು ನಮಗೆ ಯಾವ ಪಾಠಗಳನ್ನು ಕಲಿಸಬೇಕು?
[ಪುಟ 22,23 ರಲ್ಲಿರುವಚಿತ್ರ]
ಸೀನಾಯಿ ಬೆಟ್ಟದ ಮುಂದಿರುವ ಎರ್-ರಾಹಾ ಬಯಲು (ಹಿನ್ನೆಲೆಯ ಎಡದಲ್ಲಿ)
[ಕೃಪೆ]
Pictorial Archive (Near Eastern History) Est.
[ಪುಟ 21 ರಲ್ಲಿರುವ ಚಿತ್ರ ಕೃಪೆ]
Garo Nalbandian
[ಪುಟ 24 ರಲ್ಲಿರುವ ಚಿತ್ರ ಕೃಪೆ]
Garo Nalbandian