ಸತ್ಯದಲ್ಲಿ ಜೊತೆ ಕೆಲಸಗಾರರಂತೆ ನಡೆಯಿರಿ
2ನೇ ಮತ್ತು 3ನೇ ಯೋಹಾನ ಪತ್ರಗಳ ಮುಖ್ಯಾಂಶಗಳು
ಸತ್ಯದ ಜ್ಞಾನವು ಯೆಹೋವನ ಆರಾಧಕರ ಒಂದು ಗುರುತು ಚಿಹ್ನೆ. (ಯೋಹಾನ 8:31, 32.; 17:17) ದೈವಿಕ ಸತ್ಯದಲ್ಲಿ ನಡಿಯುವದು ರಕ್ಷಣೆಗೆ ಅತ್ಯಾವಶ್ಯಕ. ಮತ್ತು ದೇವರ ಸೇವಕರು ಸತ್ಯದಲ್ಲಿ ಜೊತೆ ಕೆಲಸಗಾರರಾಗಿರಲೇಬೇಕು.
ಅಪೊಸ್ತಲ ಯೋಹಾನನ ಎರಡನೆಯ ಮತ್ತು ಮೂರನೆಯ ಪ್ರೇರಿತ ಪತ್ರಗಳು “ಸತ್ಯವಂತರಾಗಿ ನಡೆಯುವ” ಕುರಿತು ಮಾತಾಡಿವೆ. (2 ಯೋಹಾನ 4; 3 ಯೋಹಾನ 3, 4) 3ನೇ ಯೋಹಾನ ಪತ್ರವು “ಸತ್ಯದಲ್ಲಿ ಜೊತೆ ಕೆಲಸಗಾರರಾಗಿ” ಸಹಕರಿಸುವುದನ್ನೂ ಪ್ರೋತ್ಸಾಹಿಸುತ್ತದೆ. (3 ಯೋಹಾನ 5-8) ಎರಡೂ ಪತ್ರಗಳು ಸಾ.ಶ. 98ರ ಸುಮಾರಿಗೆ ಎಫೆಸದಲ್ಲಿ ಅಥವಾ ಅದರ ಸಮೀಪ ಬರೆಯಲ್ಪಟ್ಟಿದ್ದಿರಬೇಕು. ಆದರೆ ಅವು ತಿಳಿಸುವ ವಿಷಯಗಳು ಇಂದು ಯೆಹೋವನ ಜನರಿಗೆ ಪ್ರಯೋಜನವನ್ನು ತರಬಲ್ಲವು.
ಎರಡನೆಯ ಯೋಹಾನ ಸತ್ಯವನ್ನು ಒತ್ತಿ ಹೇಳುತ್ತದೆ
ಎರಡನೆಯ ಯೋಹಾನ ಪತ್ರವು ಸತ್ಯ ಮತ್ತು ಪ್ರೀತಿಯನ್ನು ಮೊದಲು ಒತ್ತಿಹೇಳಿ, “ಕ್ರಿಸ್ತ ವಿರೋಧಿ”ಯ ವಿರುದ್ಧ ಎಚ್ಚರಿಕೆ ನೀಡಿದೆ. (1-7ನೇ ವಚನಗಳು) ಈ ಪತ್ರವು, “ಆದುಕೊಂಡ ಅಮ್ಮನವರಿಗೆ” ಅಂದರೆ ಪ್ರಾಯಶಃ ಒಬ್ಬ ವ್ಯಕ್ತಿಗೆ ಬರೆಯಲ್ಪಟ್ಟಿದೆ. ಆದರೆ, ಅದು ಒಂದು ಸಭೆಗೆ ಬರೆಯಲ್ಪಟ್ಟದ್ದಾಗಿದ್ದರೆ, ಆಕೆಯ ಮಕ್ಕಳು ಸ್ವರ್ಗೀಯ ಜೀವಿತಕ್ಕಾಗಿ ದೇವರಾದುಕೊಂಡ ಆತ್ಮ-ಜಾತ ಕ್ರೈಸ್ತರಾಗಿದ್ದಿರಬೇಕು. (ರೋಮಾಪುರ 8:16, 17; ಫಿಲಿಪ್ಪಿ 3:12-14) ಕೆಲವು ಜನರು “ಸತ್ಯದಲ್ಲಿ ನಡೆಯುವದನ್ನು” ಮತ್ತು ಹೀಗೆ ಧರ್ಮಭ್ರಷ್ಟತೆಯನ್ನು ಎದುರಿಸುವುದನ್ನು ಕಂಡು ಯೋಹಾನನಿಗೆ ಸಂತೋಷವಾಗಿತ್ತು. ಆದರೂ ಅವರಿಗೆ, “ಕ್ರಿಸ್ತ ವಿರೋಧಿ”ಯ ಅಂದರೆ ಯೇಸುವು ಶರೀರದಲ್ಲಿ ಬಂದದ್ದನ್ನು ಅಲ್ಲಗಳೆಯುವವರ ವಿರುದ್ಧ ಎಚ್ಚರಿಕೆ ನೀಡುವ ಅಗತ್ಯವಿತ್ತು. ಧರ್ಮಭ್ರಷ್ಟತೆಯ ವಿರುದ್ಧ ಅಂತಹ ಎಚ್ಚರಿಕೆಗಳನ್ನು ಇಂದು ಯೆಹೋವನ ಸಾಕ್ಷಿಗಳು ಪಾಲಿಸುತ್ತಾರೆ.
ಅನಂತರ ಯೋಹಾನನು ಧರ್ಮಭ್ರಷ್ಟರೊಂದಿಗೆ ವ್ಯವಹರಿಸುವ ಕುರಿತು ಸೂಚನೆಯನ್ನು ಕೊಡುತ್ತಾ, ಒಂದು ವೈಯಕ್ತಿಕ ಇಚ್ಛೆ ಮತ್ತು ವಂದನೆಗಳೊಂದಿಗೆ ಕೊನೆಗೊಳಿಸುತ್ತಾನೆ. (8-13 ವಚನಗಳು) ಅವನ ಮತ್ತು ಇತರರ ಸಾರುವಿಕೆಯೇ ಮುಂತಾದ ಪ್ರಯಾಸದ ಕೆಲಸಗಳ ಫಲಿತಾಂಶವಾಗಿ ಮತಾಂತರಗೊಂಡಿದ್ದವರಿಗೆ ಅವನೀ ಪತ್ರವನ್ನು ಕಳುಹಿಸಿದ್ದನು. ತಮ್ಮನ್ನು ಆತ್ಮಿಕವಾಗಿ ‘ಜಾಗರೂಕರಾಗಿ’ ಇರಿಸಿಕೊಂಡರೆ ಮಾತ್ರ ಅವರು “ಪೂರ್ಣ ಫಲವನ್ನು ಹೊಂದ”ಲಿಕ್ಕಿದ್ದರು; ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಗಾಗಿ ಕಾದಿರಿಸಲಾದ ಸ್ವರ್ಗೀಯ “ಜಯಮಾಲೆ”ಯೂ ಅದರಲ್ಲಿ ಕೂಡಿದೆಯೆಂಬದು ವ್ಯಕ್ತ. (2 ತಿಮೊಥಿ 4:7, 8) ‘ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದ’ ಯಾವನಾದರೂ ಅವರ ಬಳಿಗೆ ಬಂದರೆ, ಅವನ “ದುಷ್ಕೃತ್ಯಗಳಲ್ಲಿ” ಪಾಲಿಗರಾಗುವುದರಿಂದ ದೂರವಿರುವಂತೆ ಅವರು ‘ಅವನನ್ನು ಮನೆಯೊಳಗೆ ಸೇರಿಸಬಾರದಿತ್ತು, ಅವನಿಗೆ ಶುಭವಾಗಲಿ ಎಂದು ಹೇಳಬಾರದಿತ್ತು. ತಾನು ಬಂದು ಆ ಜೊತೆಗೆಲಸದವರೊಂದಿಗೆ ಮುಖಾಮುಖಿಯಾಗಿ ಮಾತಾಡುವ ನಿರೀಕ್ಷೆಯನ್ನು ವ್ಯಕ್ತ ಪಡಿಸುತ್ತಾ, ಯೋಹಾನನು ವಂದನೆಯೊಂದಿಗೆ ಸಮಾಪ್ತಿಗೊಳಿಸುತ್ತಾನೆ.
3ನೇ ಯೋಹಾನ ಸಹಕಾರವನ್ನು ಒತ್ತಿ ಹೇಳುತ್ತದೆ
ಮೂರನೆಯ ಪತ್ರವು ಗಾಯನಿಗೆ ಬರೆಯಲ್ಪಟ್ಟಿದೆ ಮತ್ತು ಅವನು ತನ್ನ ಜತೆವಿಶ್ವಾಸಿಗಳಿಗಾಗಿ ಮಾಡಿದ್ದನ್ನು ಮೊದಲಾಗಿ ಗಮನಕ್ಕೆ ತಂದಿದೆ. (3 ಯೋಹಾನ 1-8ನೇ ವಚನಗಳು) ಗಾಯನು ಕ್ರೈಸ್ತ ಬೋಧನೆಗಳ ಎಲ್ಲಾ ವಿಷಯಗಳನ್ನು ಪಾಲಿಸುವ ಮೂಲಕ “ಸತ್ಯದಲ್ಲಿ ನಡಿಯುತ್ತಿದ್ದನು.” ಸಂದರ್ಶಿಸುವ ಸಹೋದರರಿಗೆ ನೆರವಾಗುವುದರಲ್ಲೂ ಅವನು “ನಂಬುವವರಿಗೆ ಯೋಗ್ಯವಾಗಿ” ನಡೆಯುತ್ತಿದ್ದನು. ಯೋಹಾನನು ಬರೆದದ್ದು: “ಆದದರಿಂದ ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ ಅಂಥವರನ್ನು ಸೇರಿಸಿಕೊಳ್ಳುವ (ಸತ್ಕರಿಸುವ, NW) ಹಂಗಿನಲ್ಲಿದ್ದೇವೆ.” ಯೆಹೋವನ ಸಾಕ್ಷಿಗಳು ತದ್ರೀತಿಯ ಸತ್ಕಾರವನ್ನು ಇಂದು ಸಂಚಾರ ಮೇಲ್ವಿಚಾರಕರಿಗೆ ನೀಡುತ್ತಿದ್ದಾರೆ.
ದೇಮೇತ್ರಿಯನಿಗೆ ಹೋಲಿಕೆಯಲ್ಲಿ ದಿಯೊತ್ರೇಫನ ಕೆಟ್ಟ ನಡತೆಯನ್ನು ತಿಳಿಸಿದ ನಂತರ, ಯೋಹಾನನು ತನ್ನ ಪತ್ರವನ್ನು ಸಮಾಪ್ತಿಗೊಳಿಸುತ್ತಾನೆ. (9-14ನೇ ವಚನಗಳು) ಸ್ವತಃ ಪ್ರಾಮುಖ್ಯತೆ ಹುಡುಕಿದ ದಿಯೊತ್ರೇಫನು ಯೋಹಾನನಿಗೆ ಯಾವ ಗೌರವವನ್ನೂ ತೋರಿಸಲಿಲ್ಲ ಮತ್ತು ಸಹೋದರರಿಗೆ ಅತಿಥಿ ಸತ್ಕಾರ ಮಾಡುವವರನ್ನು ಸಭೆಯಿಂದ ಹೊರಗಟ್ಟಲೂ ಪ್ರಯತ್ನಿಸಿದ್ದನು. ದೇಮೇತ್ರಿಯನೆಂಬವನಾದರೋ ಒಳ್ಳೇ ಮಾದರಿಯಾಗಿ ತಿಳಿಸಲ್ಪಟ್ಟಿದ್ದಾನೆ. ಗಾಯನನ್ನು ಬೇಗನೇ ನೋಡುವಂತೆ ಯೋಹಾನನು ನಿರೀಕ್ಷಿಸಿದ್ದನು ಮತ್ತು ಗಾಯನು ಶಾಂತಿಯಲ್ಲಿರುವಂತೆ ಕೋರುತ್ತಾ, ವಂದನೆಗಳೊಂದಿಗೆ ಮುಕ್ತಾಯಗೊಳಿಸುತ್ತಾನೆ. (w91 4/15)
[ಪುಟ 31 ರಲ್ಲಿರುವ ಚೌಕ/ಚಿತ್ರಗಳು]
ಮಸಿ, ಕಾಗದ ಮತ್ತು ಲೇಖಣಿಯೊಂದಿಗೆ: “ದೇವರಾದುಕೊಂಡ ಅಮ್ಮನವರು” ಮತ್ತು ಅವರ “ಮಕ್ಕಳಿಗೆ” ಅನೇಕ ಸಂಗತಿಗಳನ್ನು ಮಸಿಯಿಂದ ಕಾಗದದ ಮೇಲೆ ಬರೆದು ತಿಳಿಸುವುದಕ್ಕಿಂತಲೂ ಅವರನ್ನು ಮುಖಾಮುಖಿಯಾಗಿ ಸಂದರ್ಶಿಸಲು ಯೋಹಾನನು ಬಯಸಿದನು. “ಮಸಿ ಲೇಖಣಿಗಳನ್ನು ತೆಗೆದು” ಗಾಯನಿಗೆ ಬರೆಯುವದಕ್ಕಿಂತಲೂ ಅವನನ್ನು ಬೇಗನೇ ನೋಡಲು ಅಪೊಸ್ತಲನು ನಿರೀಕ್ಷಿಸಿದ್ದನು. (2 ಯೋಹಾನ 1, 12; 3 ಯೋಹಾನ 1, 13, 14) “ಲೇಖಣಿ” (ಕ’ಲಾ-ಮೊಸ್) ಎಂದು ಭಾಷಾಂತರಿಸಲ್ಪಟ್ಟ ಗ್ರೀಕ್ ಪದ ಬೆತ್ತ ಅಥವಾ ಹುಲ್ಲುಕಡ್ಡಿಗೆ ಸೂಚಿಸುತ್ತದೆ ಮತ್ತು ಅದನ್ನು “ಬರೆಯುವ ಕಡ್ಡಿಯಾಗಿ” ನಿರ್ದೇಶಿಸಬಹುದು. ಗ್ರೀಕರಲ್ಲಿ ಮತ್ತು ರೋಮನರಲ್ಲಿ ಈ ಹುಲ್ಲು ಕಡ್ಡಿ ಚೂಪಾಗಿ, ಅನಂತರದ ಗರಿ ಲೇಖನಿಗಳಂತೆ ಸೀಳಾಗಿತ್ತು. “ಮಸಿ”ಯಾಗಿ ತರ್ಜುಮೆಯಾದ ಗ್ರೀಕ್ ಪದ ಮೇ’ಲನ್, “ಕಪ್ಪು” ಆಗಿ ತರ್ಜುಮೆಯಾದ ಪುಲ್ಲಿಂಗ ನಾಮವಿಶೇಷಣ ಮೇ’ಲಾಸ್ನ ಅಕರ್ಮಕ ರೂಪ. ಪುರಾತನ ಮಸಿಗಳಲ್ಲಿ ವರ್ಣದ್ರವ್ಯವು ಇದ್ದಲಿನಂತೆ ಕಪ್ಪಾಗಿದ್ದು—ತೈಲ ಯಾ ಮರ ಸುಡುವಿಕೆಯಿಂದ ಸಿಗುವ ಮಸಿ ಅಥವಾ ಸಸ್ಯ ಅಥವಾ ಪ್ರಾಣಿ ಮೂಲಗಳಿಂದ ದೊರೆಯುವ ಸ್ಫಟಿಕದಂಥ ಇದ್ದಲುಕರಿಯಾಗಿತ್ತು. ಸಾಮಾನ್ಯವಾಗಿ ಮಸಿಗಳನ್ನು ಒಣಗಿದ ತುಂಡುಗಳಾಗಿ ಯಾ ಬಿಲ್ಲಿಗಳಾಗಿ ಸಂಗ್ರಹಿಸಲಾಗುತ್ತಿತ್ತು. ಲೇಖಕನು ಅದನ್ನು ಕೊಂಚ ನೆನೆಸಿ, ತನ್ನ ಕುಂಚದಿಂದ ಅಥವಾ ಹುಲ್ಲುಕಡ್ಡಿಯಿಂದ ಲೇಪಿಸುತ್ತಾನೆ. ಆ ಕಾಲದ ಕಾಗದಗಳು ಪಪೈರಸ್ ಸಸ್ಯದಿಂದ ಪಡೆಯಲಾದ ಪಟ್ಟೆಗಳಿಂದ ಹಾಳೆಗಳಾಗಿ ಹೆಣೆದ ತೆಳ್ಳನೆಯ ಸಾಮಗ್ರಿಯಾಗಿತ್ತು. ಆದಿ ಕ್ರೈಸ್ತರು ಅಂಥ ಕಾಗದವನ್ನು ಪತ್ರಗಳಿಗಾಗಿ, ಸುರುಳಿಗಳಿಗಾಗಿ ಮತ್ತು ಇಷ್ಟಪತ್ರಗಳಿಗಾಗಿ ಉಪಯೋಗಿಸುತ್ತಿದ್ದರು.