ಯೆಹೋವನ ರಕ್ಷಣಾ ಹಸ್ತದಲ್ಲಿ ಭರವಸೆಯನ್ನಿಡಿರಿ
“ಯೆಹೋವನೇ, . . . ಪ್ರತಿ ಮುಂಜಾನೆ ನಮಗೆ ಭುಜಬಲವಾಗಿಯೂ ಇಕ್ಕಟ್ಟಿನಲ್ಲಿ ನಮ್ಮ ರಕ್ಷಣೆಯಾಗಿಯೂ ಇರು.”—ಯೆಶಾಯ 33:2.
1. ಯಾವ ಅರ್ಥದಲ್ಲಿ ಯೆಹೋವನು ತ್ರಾಣವುಳ್ಳ ಹಸ್ತವುಳ್ಳಾತನು?
ಯೆಹೋವನು ತ್ರಾಣವುಳ್ಳ ಹಸ್ತವುಳ್ಳಾತನು. ಆದರೆ “ದೇವರು ಆತ್ಮಸ್ವರೂಪನು” ಆಗಿರುವುದರಿಂದ, ಅವು ಮಾಂಸಿಕ ಹಸ್ತಗಳಲ್ಲ ಎಂಬದು ನಿಶ್ಚಯ. (ಯೋಹಾನ 4:24) ಬೈಬಲಿನಲ್ಲಿ ಸಾಂಕೇತಿಕ ಭುಜವು, ಬಲವನ್ನು ಪ್ರಯೋಗಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಹೀಗೆ, ದೇವರು ತನ್ನ ಜನರನ್ನು ತನ್ನ ಭುಜಬಲ ಹಸ್ತಗಳಿಂದ ರಕ್ಷಿಸುತ್ತಾನೆ. ನಿಶಯ್ವವಾಗಿ, ‘ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು.’ (ಯೆಶಾಯ 40:11; ಕೀರ್ತನೆ 23:1-4.) ಯೆಹೋವನ ಜನರು ಆತನ ಪ್ರೀತಿಯುಳ್ಳ ಹಸ್ತಗಳಲ್ಲಿ ಎಷ್ಟೊಂದು ಸುರಕ್ಷೆಯನ್ನು ಅನುಭವಿಸುತ್ತಾರೆ!
2. ಯಾವ ಪ್ರಶ್ನೆಗಳು ಇಲ್ಲಿ ನಮ್ಮ ಗಮನಕ್ಕೆ ಯೋಗ್ಯವಾಗಿವೆ?
2 ಯೆಹೋವನ ಹಸ್ತವು ಗತಕಾಲದಲ್ಲಿ ಮತ್ತು ಪ್ರಚಲಿತ ಸಮಯದಲ್ಲಿ ಹೇಗೆ ಆತನ ಜನರನ್ನು ರಕ್ಷಿಸಿದೆ? ಸಭೆಯೋಪಾದಿ ಆತನು ಅವರಿಗೆ ಯಾವ ಸಹಾಯವನ್ನು ಕೊಟ್ಟಿದ್ದಾನೆ? ಮತ್ತು ತಮ್ಮೆಲ್ಲಾ ಕಷ್ಟಗಳಲ್ಲಿ ಆತನ ರಕ್ಷಣಾ ಭುಜಬಲದಲ್ಲಿ ಅವರೇಕೆ ಭರವಸೆ ಇಡಬಲ್ಲರು?
ದೇವರ ರಕ್ಷಣಾ ಹಸ್ತವು ಕ್ರಿಯೆಯಲ್ಲಿ
3. ಐಗುಪ್ತದಿಂದ ಇಸ್ರಾಯೇಲಿನ ಬಿಡುಗಡೆಗಾಗಿ ದೇವರ ವಾಕ್ಯವು ಯಾವುದಕ್ಕೆ ಶ್ರೇಯಸ್ಸನ್ನು ಕೊಡುತ್ತದೆ?
3 ಸುಮಾರು 3,500 ವರ್ಷಗಳ ಹಿಂದೆ, ಇಸ್ರಾಯೇಲ್ಯರನ್ನು ಐಗುಪ್ತದ ಬಂಧೀವಾಸದಿಂದ ಬಿಡಿಸುವ ಮುಂಚೆ, ದೇವರು ತನ್ನ ಪ್ರವಾದಿ, ಮೋಶೆಗೆ ಅಂದದ್ದು: “ನೀನು ಇಸ್ರಾಯೇಲ್ಯರಿಗೆ ಹೇಳಬೇಕಾದದ್ದೇನಂದರೆ—ನಾನು ಯೆಹೋವನು; ಐಗುಪ್ತ್ಯರು ನಿಮ್ಮಿಂದ ಮಾಡಿಸುವ ಬಿಟ್ಟೀಕೆಲಸವನ್ನು ನಾನು ತಪ್ಪಿಸಿ ಅವರಲ್ಲಿ ನಿಮಗಿರುವ ದಾಸ್ವತವನ್ನು ತೊಲಗಿಸಿ ನನ್ನ ಕೈಚಾಚಿ ಅವರಿಗೆ ಮಹಾ ಶಿಕ್ಷೆಗಳನ್ನು ವಿಧಿಸಿ ನಿಮ್ಮನ್ನು ರಕ್ಷಿಸುವೆನು.” (ವಿಮೋಚನಕಾಂಡ 6:6) ಅಪೊಸ್ತಲ ಪೌಲನಿಗನುಸಾರ ದೇವರು ಇಸ್ರಾಯೇಲ್ಯರನ್ನು ಐಗುಪ್ತದಿಂದ ಹೊರಗೆ ತಂದದ್ದು, ಆತನ “ಭುಜಬಲದಿಂದಲೇ.” (ಅಪೊಸ್ತಲರ ಕೃತ್ಯ 13:17) ಕೋರಹನ ಮಕ್ಕಳು ವಾಗ್ದಾನ ದೇಶದ ತಮ್ಮ ವಿಜಯಕ್ಕೆ ದೇವರಿಗೇ ಶ್ರೇಯಸ್ಸನ್ನು ಕೊಡುತ್ತಾ ಅಂದದ್ದು: “ನಮ್ಮ ಪಿತೃಗಳಿಗೆ ಕತ್ತಿಯೇ ಈ ದೇಶವನ್ನು ಸ್ವಾಧೀನ ಮಾಡಿಕೊಡಲಿಲ್ಲ. ಅವರ ಭುಜಬಲವೇ ಅವರಿಗೆ ಜಯವನ್ನು ಕೊಡಲಿಲ್ಲ. ನಿನ್ನ ಭುಜಬಲ, ಹಸ್ತ ಮತ್ತು ಪ್ರಸನ್ನತೆ ಇವೇ ಅವರಿಗೆ ಜಯವನ್ನುಂಟು ಮಾಡಿದವು.”—ಕೀರ್ತನೆ 44:3.
4. ಯೆಹೋವನ ರಕ್ಷಣಾ ಹಸ್ತದಲ್ಲಿ ಭರವಸೆಯು ಅಶ್ಶೂರ್ಯ ಆಕ್ರಮಣದ ಸಮಯದಲ್ಲಿ ಹೇಗೆ ಪ್ರತಿಫಲಕೊಟ್ಟಿತು?
4 ಯೆಹೋವನ ಭುಜಬಲವು ಅಶ್ಶೂರ್ಯರ ಆಕ್ರಮಣದ ದಿನಗಳಲ್ಲೂ ಆತನ ಜನರ ಸಹಾಯಕ್ಕೆ ಬಂದಿತ್ತು. ಆ ಸಮಯದಲ್ಲಿ ಪ್ರವಾದಿಯಾದ ಯೆಶಾಯನು ಪ್ರಾರ್ಥನೆ ಮಾಡಿದ್ದು: “ಯೆಹೋವನೇ, ಕರುಣಿಸು! ನಿನ್ನನ್ನು ಕಾದುಕೊಂಡಿದ್ದೇವೆ. ಪ್ರತಿ ಮುಂಜಾನೆ ನಮಗೆ ಭುಜಬಲವಾಗಿಯೂ ಇಕ್ಕಟ್ಟಿನಲ್ಲಿ ನಮ್ಮ ರಕ್ಷಣೆಯಾಗಿಯೂ ಇರು.” (ಯೆಶಾಯ 33:2) ಆ ಪ್ರಾರ್ಥನೆಯು, ಅಶ್ಶೂರ್ಯ ಪಾಳೆಯದ 1,85,000 ಮಂದಿಯನ್ನು ದೇವದೂತನು ಸಂಹರಿಸಿದಾಗ ಮತ್ತು ರಾಜ ಸನ್ಹೇರೀಬನನ್ನು “ನಾಚಿಕೆಯಿಂದ” ಯೆರೂಸಲೇಮಿನಿಂದ ಓಡುವಂತೆ ಮಾಡಿದಾಗ, ಉತ್ತರಿಸಲ್ಪಟ್ಟಿತು. (2 ಪೂರ್ವಕಾಲವೃತ್ತಾಂತ 32:21; ಯೆಶಾಯ 37:33-37) ಯೆಹೋವನ ರಕ್ಷಣಾ ಹಸ್ತದಲ್ಲಿ ಭರವಸೆಯನ್ನಿಡುವುದು ಯಾವಾಗಲೂ ಪ್ರತಿಫಲದಾಯಕವು!
5. Iನೇ ಲೋಕಯುದ್ಧದ ಸಮಯದಲ್ಲಿ ಹಿಂಸಿಸಲ್ಪಟ್ಟ ಕ್ರೈಸ್ತರಿಗೆ ದೇವರ ತ್ರಾಣವುಳ್ಳ ಹಸ್ತವು ಮಾಡಿದ್ದೇನು?
5 ದೇವರ ಆ ತ್ರಾಣವುಳ್ಳ ಹಸ್ತವು, 1ನೇ ಲೋಕಯುದ್ಧದ ಸಮಯದಲ್ಲಿ ಹಿಂಸಿತ ಅಭಿಷಿಕ್ತ ಕ್ರೈಸ್ತರನ್ನು ರಕ್ಷಿಸಿತ್ತು. 1918ರಲ್ಲಿ ಆಡಳಿತ ಮಂಡಲಿಯ ಮುಖ್ಯ ಕಾರ್ಯಾಲಯವು ಅವರ ಶತ್ರುಗಳಿಂದ ಆಕ್ರಮಿಸಲ್ಪಟ್ಟಿತು ಮತ್ತು ಹಲವಾರು ಖ್ಯಾತ ಸಹೋದರರು ಸೆರೆಮನೆಗೆ ಹಾಕಲ್ಪಟ್ಟರು. ಲೋಕಾಧಿಕಾರಗಳ ಭಯದಿಂದ, ಅಭಿಷಿಕ್ತರು ತಮ್ಮ ಸಾಕ್ಷಿಕಾರ್ಯವನ್ನು ಕಾರ್ಯತಃ ನಿಲ್ಲಿಸಿದರು. ಆದರೆ ಅವರು ಅದರ ಪುನರುಜ್ಜೀವನಕ್ಕಾಗಿ ಮತ್ತು ನಿಷ್ಕ್ರಿಯೆಯ ಪಾಪದಿಂದ ಮತ್ತು ಭಯದ ಅಶುದ್ಧತೆಯಿಂದ ಶುದ್ಧೀಕರಿಸಲ್ಪಡುವಂತೆ ಬೇಡಿಕೊಂಡರು. ಸೆರೆವಾಸಿಗಳಾಗಿದ್ದ ಸಹೋದರರನ್ನು ಬಿಡಿಸಿದ ಮೂಲಕ ದೇವರು ಪ್ರತಿಕ್ರಿಯೆ ತೋರಿಸಿದನು, ಮತ್ತು ಅನಂತರ, ಬೇಗನೇ ಅವರು ದೋಷಮುಕ್ತರಾಗಿ ಮಾಡಲ್ಪಟ್ಟರು. 1919ರ ಅವರ ಸಮ್ಮೇಲನದಲ್ಲಿ ಹೊರಡಿಸಲ್ಪಟ್ಟ ಸತ್ಯಗಳಿಂದಾಗಿ ಮತ್ತು ದೇವರ ಕ್ರಿಯಾಶೀಲ ಆತ್ಮದ ಸುರಿಸುವಿಕೆಯಿಂದಾಗಿ, ಅಭಿಷಿಕ್ತರು ಯೋವೇಲ 2:28-32ರ ಕೊನೆಯ ನೆರವೇರಿಕೆಯಲ್ಲಿ ಯೆಹೋವನ ನಿರ್ಭೀತ ಸೇವೆಗಾಗಿ ಪುನರುಜ್ಜೀವಿತ ಮಾಡಲ್ಪಟ್ಟರು.—ಪ್ರಕಟನೆ 11:7-12.
ಸಭೆಯಲ್ಲಿ ಸಹಾಯ
6. ಒಂದು ಸಭೆಯಲ್ಲಿ ಕಷ್ಟಕರ ಪರಿಸ್ಥಿತಿಯೊಂದನ್ನು ತಾಳಿಕೊಳ್ಳ ಸಾಧ್ಯವಿದೆ ಎಂದು ನಮಗೆ ತಿಳಿದಿರುವದು ಹೇಗೆ?
6 ದೇವರು ತನ್ನ ಸಂಸ್ಥೆಯನ್ನು ಇಡೀಯಾಗಿ ಬೆಂಬಲಿಸುತ್ತಿರುವಾಗ, ಆತನ ಹಸ್ತಬಲವು ಅದರಲ್ಲಿರುವ ವ್ಯಕ್ತಿಗಳಿಗೆ ಆಸರೆಯನ್ನು ನೀಡುತ್ತದೆ. ಯಾವುದೇ ಸಭೆಯಲ್ಲಾದರೂ ಪರಿಸ್ಥಿತಿಯು ಪರಿಪೂರ್ಣವಾಗಿರುವುದಿಲ್ಲ ನಿಶ್ಚಯ ಯಾಕಂದರೆ ಎಲ್ಲಾ ಮಾನವರು ಅಸಂಪೂರ್ಣರು. (ರೋಮಾಪುರ 5:12) ಆದುದರಿಂದ ಯೆಹೋವನ ಕೆಲವು ಸೇವಕರು ಕೆಲವೊಮ್ಮೆ ಒಂದು ಸಭೆಯಲ್ಲಿ ಕಷ್ಟಕರವಾದ ಸ್ಥಿತಿಗತಿಯನ್ನು ಅನುಭವಿಸಬಹುದು. ದೃಷ್ಟಾಂತಕ್ಕಾಗಿ, ಗಾಯನು, ಸಂದರ್ಶಿಸಿದ ಸಹೋದರರಿಗೆ ಸತ್ಕಾರ ಮಾಡುವದರಲ್ಲಿ “ನಂಬುವವನಿಗೆ ಯೋಗ್ಯವಾಗಿ ನಡೆದು” ಕೊಂಡಿದ್ದರೂ, ದಿಯೋತ್ರೇಫನು ಹಾಗೆ ಸತ್ಕರಿಸಲಿಲ್ಲ ಮಾತ್ರವಲ್ಲ, ಸತ್ಕಾರ ಮಾಡಿದವರನ್ನು ಸಭೆಯಿಂದ ಬಹಿಷ್ಕರಿಸಲೂ ಪ್ರಯತ್ನ ಮಾಡಿದನು. (3 ಯೋಹಾನ 5, 9, 10) ಆದಾಗ್ಯೂ, ರಾಜ್ಯದ-ಸಾರುವ ಕಾರ್ಯದ ಪರವಾಗಿ ಅತಿಥಿ ಸತ್ಕಾರವನ್ನು ತೋರಿಸುತ್ತಾ ಮುಂದರಿಯುವಂತೆ ಯೆಹೋವನು ಗಾಯನಿಗೆ ಮತ್ತು ಇತರರಿಗೆ ಸಹಾಯ ಮಾಡಿದನು. ದೇವರಲ್ಲಿ ಪ್ರಾರ್ಥನಾಪೂರ್ವಕ ಆತುಕೊಳ್ಳುವಿಕೆಯು ನಂಬಿಗಸ್ತ ಕೆಲಸವನ್ನು ಮಾಡುತ್ತಾ ಮುಂದರಿಯುವಂತೆ ನಮಗೆ ಸಹಾಯ ಮಾಡಬೇಕು, ಅದೇ ಸಮಯದಲ್ಲಿ ನಮ್ಮ ನಂಬಿಕೆಗೆ ಪರೀಕ್ಷೆಯಂತಿರುವ ಒಂದು ಸ್ಥಿತಿಗತಿಯನ್ನು ಸರಿಪಡಿಸುವಂತೆ ನಾವು ಆತನಿಗಾಗಿ ಕಾದುಕೊಂಡಿರಬೇಕು.
7. ಕೊರಿಂಥ ಸಭೆಯಲ್ಲಿದ್ದ ಯಾವ ಪರಿಸ್ಥಿತಿಗಳ ನಡುವೆಯೂ ಅಲ್ಲಿನ ನಿಷ್ಠಾವಂತ ಕ್ರೈಸ್ತರು ದೇವರಿಗೆ ತಮ್ಮ ಸಮರ್ಪಣೆಯನ್ನು ಪೂರೈಸಿದರು?
7 ನೀವು ಒಂದನೆಯ ಶತಮಾನದ ಕೊರಿಂಥ ಸಭೆಯೊಂದಿಗೆ ಜತೆಗೂಡಿದ್ದಿರೆಂದು ಭಾವಿಸಿಕೊಳ್ಳಿರಿ. ಒಂದು ಸಮಯದಲ್ಲಿ ಪಕ್ಷಭೇದಗಳು ಅದರ ಒಕ್ಕಟ್ಟನ್ನು ಮತ್ತು ಅನೈತಿಕತೆಯ ಇರಗೊಡಿಸುವಿಕೆಯು ಅದರ ಆತ್ಮವನ್ನು ಬೆದರಿಕೆಗೆ ಹಾಕಿತ್ತು. (1 ಕೊರಿಂಥ 1:10, 11; 5:1-5) ನಂಬಿಕೆಯಲ್ಲಿದ್ದವರು ಒಬ್ಬರನ್ನೊಬ್ಬರು ಲೌಕಿಕ ಕೋರ್ಟುಗಳಿಗೆ ಒಯ್ದರು, ಮತ್ತು ಕೆಲವರು ಹಲವಾರು ವಿಷಯಗಳ ಮೇಲೆ ಜಗಳವಾಡುತ್ತಿದ್ದರು. (1 ಕೊರಿಂಥ 6:1-8; 8:1-13) ಜಗಳ, ಹೊಟ್ಟೇಕಿಚ್ಚು, ಸಿಟ್ಟು ಮತ್ತು ಅಕ್ರಮ ನಡವಳಿಕೆಯು ಜೀವನವನ್ನು ಕಷ್ಟಕರವಾಗಿ ಮಾಡಿತ್ತು. ಕೆಲವರು ಪೌಲನ ಅಧಿಕಾರವನ್ನೂ ಪ್ರಶ್ನಿಸಿದರು ಮತ್ತು ಮಾತಾಡುವ ಅವನ ಸಾಮರ್ಥ್ಯವನ್ನು ಅಲ್ಪೀಕರಿಸಿದರು. (2 ಕೊರಿಂಥ 10:10) ಆದರೂ, ಆ ಸಭೆಯೊಂದಿಗೆ ಸಹವಾಸದಲ್ಲಿದ್ದ ನಿಷ್ಠೆಯುಳ್ಳ ಜನರು ಆ ಕಷ್ಟದ ಸಮಯದಲ್ಲೂ ದೇವರಿಗೆ ತಮ್ಮ ಸಮರ್ಪಣೆಗೆ ಅನುಗುಣವಾಗಿ ಜೀವಿಸಿದರು.
8, 9. ಸಭೆಯೊಂದರಲ್ಲಿ ಕಷ್ಟಕರ ಪರಿಸ್ಥಿತಿಯೊಂದು ನಮ್ಮನ್ನು ಎದುರಿಸುವಾಗ ನಾವೇನು ಮಾಡಬೇಕು?
8 ಒಂದು ಕಷ್ಟಕರ ಪರಿಸ್ಥಿತಿಯು ಎದುರಾದಲ್ಲಿ, ದೇವಜನರೊಂದಿಗೆ ನಾವು ಒತ್ತಾಗಿ ಅಂಟಿಕೊಳ್ಳುವ ಅಗತ್ಯವಿದೆ. (ಯೋಹಾನ 6:66-69 ಹೋಲಿಸಿ.) ನಾವು ಒಬ್ಬರೊಂದಿಗೊಬ್ಬರು ತಾಳ್ಮೆಯಿಂದ ಇರೋಣ ಯಾಕಂದರೆ “ಹೊಸ ವ್ಯಕ್ತಿತ್ವವನ್ನು” ಧರಿಸಿಕೊಳ್ಳಲು ಮತ್ತು ಕನಿಕರ, ದಯೆ, ದೀನಭಾವ, ಸಾತ್ವಿಕತೆ ಮತ್ತು ದೀರ್ಘಶಾಂತಿ ಎಂಬ ಗುಣಗಳನ್ನು ತೋರಿಸಲು ಕೆಲವರಿಗೆ ಬೇರೆಯವರಿಗಿಂತ ಹೆಚ್ಚು ಸಮಯ ತಗಲುತ್ತದೆ ಎಂಬದನ್ನು ಮನಗಾಣಿರಿ. ದೇವರ ಸೇವಕರ ಹಿನ್ನೆಲೆಗಳೂ ಭಿನ್ನಭಿನ್ನವಾಗಿರುವುದರಿಂದ, ನಾವೆಲ್ಲರೂ ಪ್ರೀತಿಯನ್ನು ತೋರಿಸುವ ಅಗತ್ಯವಿದೆ ಮತ್ತು ಒಬ್ಬರನ್ನೊಬ್ಬರು ಕ್ಷಮಿಸುವ ಅಗತ್ಯವಿದೆ.—ಕೊಲೊಸ್ಸೆ 3:10-14.
9 ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡಿದ ಮೇಲೆ ಒಬ್ಬ ಸಹೋದರನು ಅಂದದ್ದು: “ನನಗೆ ಅತ್ಯಂತ ಪ್ರಾಮುಖ್ಯವಾದ ಒಂದು ವಿಷಯವು, ಯೆಹೋವನ ದೃಶ್ಯ ಸಂಸ್ಥೆಗೆ ಒತ್ತಾಗಿ ಅಂಟಿಕೊಂಡಿರುವದೇ ಆಗಿದೆ. ಮಾನವ ವಿವೇಚನೆಯಲ್ಲಿ ಆತುಕೊಳ್ಳುವದು ಅದೆಷ್ಟು ಅನಾರೋಗ್ಯಕರವೆಂದು ನನ್ನ ಆರಂಭದ ಅನುಭವವು ನನಗೆ ಕಲಿಸಿತು. ಒಮ್ಮೆ ನನ್ನ ಮನಸ್ಸು ಆ ವಿಷಯದ ಮೇಲೆ ನಿರ್ಧಾರವನ್ನು ಮಾಡಿತೆಂದ ಮೇಲೆ, ನಂಬಿಗಸ್ತ ಸಂಸ್ಥೆಯೊಂದಿಗೇ ಉಳಿಯಲು ನಾನು ನಿರ್ಧಾರ ಮಾಡಿದೆನು. ಇಲ್ಲವಾದರೆ ಯೆಹೋವನ ಪ್ರಸನ್ನತೆ ಮತ್ತು ಆಶೀರ್ವಾದವನ್ನು ಒಬ್ಬನು ಪಡೆಯುವುದಾದರೂ ಹೇಗೆ?” ನೀವು ಕೂಡಾ ಯೆಹೋವನನ್ನು ಆತನ ಸಂತೋಷಭರಿತ ಜನರೊಂದಿಗೆ ಸೇವಿಸುವ ನಿಮ್ಮ ಸುಯೋಗವನ್ನು ಗಣನೆಗೆ ತರುತ್ತೀರೋ? (ಕೀರ್ತನೆ 100:2) ಹಾಗೆ ಮಾಡಿದ್ದಲ್ಲಿ, ದೇವರ ಸಂಸ್ಥೆಯಿಂದ ನಿಮ್ಮನ್ನು ಯಾವುದೇ ವಿಷಯವು ದೂರ ಸೆಳೆಯುವಂತೆ ನೀವು ಬಿಡಲಾರಿರಿ ಅಥವಾ ಯಾರ ಬಾಹುಬಲವು ಆತನನ್ನು ಪ್ರೀತಿಸುವವರೆಲ್ಲರನ್ನು ರಕ್ಷಿಸುತ್ತದೋ ಆತನೊಂದಿಗಿನ ನಿಮ್ಮ ಸಂಬಂಧವನ್ನು ನಾಶಗೊಳಿಸುವಂತೆ ಬಿಡಲಾರಿರಿ.
ಶೋಧನೆಗಳು ಆಕ್ರಮಿಸುವಾಗ ಸಹಾಯ
10. (ಎ) ಶೋಧನೆಯನ್ನು ಎದುರಿಸಲು ದೇವಜನರಿಗೆ ಪ್ರಾರ್ಥನೆಯು ಹೇಗೆ ಸಹಾಯ ಮಾಡುತ್ತದೆ? (ಬಿ) 1 ಕೊರಿಂಥ 10:13ರಲ್ಲಿ ಪೌಲನು ಯಾವ ಆಶ್ವಾಸನೆಯನ್ನು ಕೊಟ್ಟಿದ್ದಾನೆ?
10 ದೇವರ ಸಂಸ್ಥೆಯೊಂದಿಗೆ ಸಹವಸಿಸುವ ನಂಬಿಗಸ್ತ ಜನರೋಪಾದಿ, ಸಂಕಷ್ಟದ ಸಮಯದಲ್ಲಿ ನಮಗಾತನ ಸಹಾಯವು ಇರುವುದು. ದೃಷ್ಟಾಂತಕ್ಕಾಗಿ, ಶೋಧನೆಯು ನಮ್ಮನ್ನು ಆಕ್ರಮಿಸುವಾಗ, ಆತನಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ಆತನು ನಮಗೆ ಸಹಾಯ ಮಾಡುತ್ತಾನೆ. ಆದರೆ ನಾವು ಯೇಸುವಿನ ಮಾತುಗಳಾದ, “ನಮ್ಮನ್ನು ಶೋಧನೆಗೆ ಸೇರಿಸದೆ, ಕೆಡುಕನಿಂದ,” ಪಿಶಾಚನಾದ ಸೈತಾನನಿಂದ “ನಮ್ಮನ್ನು ತಪ್ಪಿಸು” ಎಂಬದಕ್ಕೆ ಹೊಂದಿಕೆಯಲ್ಲಿ ಪ್ರಾರ್ಥಿಸಬೇಕು ನಿಶ್ಚಯ. (ಮತ್ತಾಯ 6:9-13) ಕಾರ್ಯತಃ ನಾವು, ದೇವರಿಗೆ ಅವಿಧೇಯರಾಗಲು ಶೋಧಿಸಲ್ಪಡುವಾಗ ದೇವರು ನಮ್ಮನ್ನು ಬಿದ್ದುಹೋಗಲು ಬಿಡದಂತೆ ಹೀಗೆ ಬೇಡಿಕೊಳ್ಳುತ್ತೇವೆ. ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ಬೇಕಾದ ಜ್ಞಾನಕ್ಕಾಗಿ ಬೇಡುವಾಗಲೂ ಆತನು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ. (ಯಾಕೋಬ 1:5-8) ಮತ್ತು ಯೆಹೋವನ ಸೇವಕರು ಆತನ ಸಹಾಯದ ವಿಷಯದಲ್ಲಿ ನಿಶ್ಚಯತೆಯಿಂದಿರಬಲ್ಲರು, ಯಾಕಂದರೆ ಪೌಲನು ಅಂದದ್ದು: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ತನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ಬರಗೊಡಿಸದೆ ನೀವು ಅದನ್ನು ಸಹಿಸಲು ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” (1 ಕೊರಿಂಥ 10:13) ಅಂಥ ಶೋಧನೆಯ ಮೂಲವು ಯಾವುದು ಮತ್ತು ಅದರಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ದೇವರು ಸಿದ್ಧಮಾಡುವದು ಹೇಗೆ?
11, 12. ಯಾವ ಶೋಧನೆಗಳಿಗೆ ಇಸ್ರಾಯೇಲ್ಯರು ಬಲಿಬಿದ್ದರು, ಅವರ ಅನುಭವಗಳಿಂದ ನಾವು ಹೇಗೆ ಪ್ರಯೋಜನ ಹೊಂದಬಲ್ಲೆವು?
11 ದೇವರಿಗೆ ಅಪನಂಬಿಗಸ್ತರಾಗಲು ನಮ್ಮನ್ನು ಪ್ರೇರಿಸಬಲ್ಲ ಪರಿಸ್ಥಿತಿಗಳಿಂದ ನಮಗೆ ಶೋಧನೆಗಳು ಬರುತ್ತವೆ. ಪೌಲನು ಅಂದದ್ದು: “ಅವರು [ಇಸ್ರಾಯೇಲ್ಯರು] ಕೆಟ್ಟ ವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು. ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು ಎಂದು ಬರೆದದೆಯಲ್ಲಾ; ನೀವು ವಿಗ್ರಹಾರಾಧಕರಾಗಬೇಡಿರಿ. ಅವರಲ್ಲಿ ಕೆಲವರು ಜಾರತ್ವ ಮಾಡಿ ಒಂದೇ ದಿನದಲ್ಲಿ ಇಪ್ಪತ್ತಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವ ಮಾಡದೆ ಇರೋಣ. ಅವರಲ್ಲಿ ಕೆಲವರು ಕರ್ತನನ್ನು [ಯೆಹೋವನನ್ನು, NW] ಪರೀಕ್ಷಿಸಿ ಸರ್ಪಗಳಿಂದ ನಾಶವಾದಂತೆ ನಾವು ಪರೀಕ್ಷಿಸದೆ ಇರೋಣ. ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶವಾದರು; ನೀವು ಗುಣುಗುಟ್ಟಬೇಡಿರಿ.”—1 ಕೊರಿಂಥ 10:6-10.
12 ಇಸ್ರಾಯೇಲ್ಯರು ಕೆಟ್ಟ ವಿಷಯಗಳನ್ನು ಆಶಿಸಿದ್ದು, ದೇವರಿಂದ ಅದ್ಭುತಕರವಾಗಿ ಒದಗಿಸಲ್ಪಟ್ಟ ಲಾವಕ್ಕಿಗಳನ್ನು ಕೂಡಿಸುವುದರಲ್ಲಿ ಮತ್ತು ತಿನ್ನುವುದರಲ್ಲಿ ಅತ್ಯಾಶೆಯ ಶೋಧನೆಗೆ ಬಲಿಬಿದ್ದಾಗಲೇ. (ಅರಣ್ಯಕಾಂಡ 11:19, 20, 31-35) ಅದಕ್ಕೆ ಮೊದಲು ಸಹ, ಮೋಶೆಯ ಗೈರು ಹಾಜರಿಯಲ್ಲಿ ಬಸವನ ಭಕ್ತಿಯನ್ನು ಮಾಡುವ ಶೋಧನೆಗೆ ಬಲಿಬಿದ್ದಾಗ, ಅವರು ವಿಗ್ರಹಾರಾಧಕರಾಗಿ ಪರಿಣಮಿಸಿದ್ದರು. (ವಿಮೋಚನಕಾಂಡ 32:1-6) ಶೋಧನೆಗೆ ಒಳಗಾಗಿ ಮೋವಾಬ್ಯ ಸ್ತ್ರೀಯರೊಂದಿಗೆ ಜಾರತ್ವ ನಡಿಸಿದಾಗಲೂ ಸಾವಿರಾರು ಮಂದಿ ಸಾವಿಗೀಡಾದರು. (ಅರಣ್ಯಕಾಂಡ 25:1-9) ಇಸ್ರಾಯೇಲ್ಯರು ಶೋಧನೆಗೆ ಒಳಗಾಗಿ ದಂಗೆಕೋರರಾದ ಕೋರಹ, ದಾತಾನ್ ಮತ್ತು ಅಬೀರಾಮರ ಮತ್ತು ಅವರ ಜೊತೆಗಾರರ ನಾಶಕ್ಕಾಗಿ ಗುಣುಗುಟ್ಟಿದಾಗ, ದೇವರಿಂದ ಬಂದ ವ್ಯಾಧಿಯು 14,700 ಮಂದಿಯನ್ನು ಸಾಯಿಸಿತು. (ಅರಣ್ಯಕಾಂಡ 16:41-49) ಈ ಶೋಧನೆಗಳಲ್ಲಿ ಒಂದಾದರೂ ಇಸ್ರಾಯೇಲ್ಯರು ಎದುರಿಸಲಾರದಷ್ಟು ದೊಡ್ಡದಾಗಿರಲಿಲವ್ಲೆಂಬನ್ನು ನಾವು ಮನಗಾಣುವದಾದರೆ, ಇಂಥ ಅನುಭವಗಳಿಂದ ಪ್ರಯೋಜನ ಪಡೆಯಬಲ್ಲೆವು. ಅವರು ನಂಬಿಕೆಯನ್ನು ತೋರಿಸಿದ್ದಲ್ಲಿ, ದೇವರ ಪ್ರೀತಿಯುಳ್ಳ ಪರಾಮರಿಕೆಗೆ ಕೃತಜ್ಞರಾಗಿದ್ದಲ್ಲಿ ಮತ್ತು ಆತನ ನಿಯಮದ ಯುಕ್ತತೆಯನ್ನು ಗಣ್ಯಮಾಡಿದ್ದಲ್ಲಿ, ಅವರದನ್ನು ಎದುರಿಸಬಹುದಾಗಿತ್ತು. ಆಗ ಯೆಹೋವನ ಭುಜಬಲವು ಅವರನ್ನು ರಕ್ಷಿಸುತಿತ್ತು, ಅದು ನಮ್ಮನ್ನೂ ರಕ್ಷಿಸಬಲ್ಲದು.
13, 14. ದೇವರ ಸೇವಕರು ಶೋಧನೆಗಳನ್ನು ಎದುರಿಸುವಾಗ ಅವರು ತಪ್ಪಿಸಿಕೊಳ್ಳುವ ಮಾರ್ಗವನ್ನು ಯೆಹೋವನು ಸಿದ್ಧಮಾಡುವುದು ಹೇಗೆ?
13 ಕ್ರೈಸ್ತರಾದ ನಮಗೆ, ಮಾನವಕುಲಕ್ಕೆ ಸಾಮಾನ್ಯವಾಗಿ ಬರುವ ಶೋಧನೆಗಳೇ ಎದುರಾಗುತ್ತವೆ. ಆದರೂ, ದೇವರ ಸಹಾಯಕ್ಕಾಗಿ ಬೇಡುವ ಮೂಲಕ ಮತ್ತು ಶೋಧನೆಯನ್ನು ಎದುರಿಸಲು ಕಾರ್ಯನಡಿಸುವ ಮೂಲಕ ನಾವು ದೇವರಿಗೆ ನಂಬಿಗಸ್ತರಾಗಿ ಉಳಿಯಬಲ್ಲೆವು. ದೇವರು ನಂಬಿಗಸ್ತನು, ನಮ್ಮಿಂದ ಸಹಿಸಿಕೊಳ್ಳಲಾರದಷ್ಟು ದೊಡ್ಡದಾದ ಒಂದು ಶೋಧನೆಯು ನಮಗೆ ಬರುವಂತೆ ಆತನು ಬಿಡಲಾರನು. ನಾವು ಯೆಹೋವನಿಗೆ ನಿಷ್ಠರಾಗಿದ್ದಲ್ಲಿ, ಆತನ ಚಿತ್ತವನ್ನು ಮಾಡುವುದನ್ನೆಂದೂ ಅಶಕ್ಯವಾಗಿ ನಾವು ಕಾಣೆವು. ಆತನು ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವುದು ಹೇಗಂದರೆ ಆ ಶೋಧನೆಯನ್ನು ಜಯಿಸಲು ನಮಗೆ ಬಲವನ್ನು ಕೊಡುವ ಮೂಲಕವೇ. ದೃಷ್ಟಾಂತಕ್ಕಾಗಿ, ಹಿಂಸಿಸಲ್ಪಡುವಾಗ, ಯಾತನೆ ಅಥವಾ ಮರಣವನ್ನು ತಪ್ಪಿಸಿಕೊಳ್ಳುವ ಆಶೆಯಲ್ಲಿ ನಾವು ರಾಜಿಮಾಡಿಕೊಳ್ಳಲು ಶೋಧಿಸಲ್ಪಟ್ಟೇವು. ಆದರೆ ಯೆಹೋವನ ತ್ರಾಣವುಳ್ಳ ಹಸ್ತದಲ್ಲಿ ನಾವು ಭರವಸೆಯನ್ನಿಡುವುದಾದರೆ, ಆತನು ನಮ್ಮ ನಂಬಿಕೆಯನ್ನು ದೃಢಗೊಳಿಸಲಾರದ ಮತ್ತು ಸಮಗ್ರತೆಯನ್ನು ಕಾಪಾಡಲು ಸಾಕಷ್ಟು ಬಲಕೊಡಲಾಗದ ಆ ಬಿಂದುವಿಗೆ ಶೋಧನೆಯೆಂದೂ ತಲಪಲಾರದು. ಅಪೊಸ್ತಲ ಪೌಲನು ಹೇಳಿದಂತೆ, “ಸರ್ವ ವಿಧಗಳಲ್ಲಿ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿಸಂಕಟ ಪಡುವವರಲ್ಲ; ನಾವು ದಿಕ್ಕುಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ; ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ.”—2 ಕೊರಿಂಥ 4:8, 9
14 ತನ್ನ ಆತ್ಮವನ್ನು ಜ್ಞಾಪಕಕಾರನಾಗಿ ಮತ್ತು ಶಿಕ್ಷಕನಾಗಿ ಉಪಯೋಗಿಸುವ ಮೂಲಕವೂ ಯೆಹೋವನು ತನ್ನ ಜನರನ್ನು ಬಲಪಡಿಸುತ್ತಾನೆ. ಅದು ಶಾಸ್ತ್ರೀಯ ವಿಷಯಗಳನ್ನು ನಾವು ಮರುಕಳಿಸುವಂತೆ ಮಾಡುತ್ತದೆ ಮತ್ತು ಶೋಧನೆಯನ್ನು ಎದುರಿಸುವದಕ್ಕೋಸ್ಕರ ಅವನ್ನು ಹೇಗೆ ಅನ್ವಯಿಸಬಹುದೆಂದು ತೋರಿಸುತ್ತದೆ. (ಯೋಹಾನ 14:26) ಒಂದು ಶೋಧನೆಯಲ್ಲಿ ಒಳಗೂಡಿರುವ ವಿವಾದಗಳನ್ನು ಯೆಹೋವನ ನಂಬಿಗಸ್ತ ಸೇವಕರು ಬಲ್ಲವರಾಗಿದ್ದಾರೆ ಮತ್ತು ಒಂದು ತಪ್ಪು ಮಾರ್ಗವನ್ನು ಅನುಸರಿಸುವಂತೆ ಮೋಸಗೊಳಿಸಲ್ಪಡರು. ಶೋಧನೆಗೆ ಬಲಿಯಾಗದೇ ಮರಣದ ತನಕವೂ ತಾಳಿಕೊಳ್ಳುವಂತೆ ಶಕ್ತರಾಗಿ ಮಾಡುವ ಮೂಲಕ ದೇವರು ಅವರಿಗೆ ಪಾರಾಗುವ ಮಾರ್ಗವನ್ನು ಸಿದ್ಧಮಾಡಿದ್ದಾನೆ. (ಪ್ರಕಟನೆ 2:10) ಹೀಗೆ ತನ್ನಾತ್ಮದ ಮೂಲಕವಾಗಿ ತನ್ನ ಜನರಿಗೆ ಸಹಾಯ ಮಾಡುವದಲ್ಲದೆ, ಯೆಹೋವನು ತನ್ನ ದೇವದೂತರನ್ನೂ ತನ್ನ ಸಂಸ್ಥೆಯ ಪರವಾಗಿ ಉಪಯೋಗಿಸುತ್ತಾನೆ.—ಇಬ್ರಿಯ 1:14
ವ್ಯಕ್ತಿಪರ ವಿಷಯಗಳಲ್ಲಿ ಸಹಾಯ
15. ಸೊಲೊಮೋನನ ಪರಮ ಗೀತದಲ್ಲಿ ನಾವು ಯಾವ ವ್ಯಕ್ತಿಪರ ಸಹಾಯವನ್ನು ಕಂಡುಕೊಳ್ಳಬಹುದು?
15 ಯೆಹೋವನ ಸಂಸ್ಥೆಯೊಂದಿಗೆ ಸಹವಸಿಸುವವರಿಗೆ ವ್ಯಕ್ತಿಪರ ವಿಷಯಗಳಲ್ಲೂ ಆತನ ಸಹಾಯವಿದೆ. ಉದಾಹರಣೆಗೆ, ಕೆಲವರು ಕ್ರಿಸ್ತೀಯ ವಿವಾಹ ಜೊತೆಯನ್ನು ದೊರಕಿಸಿಕೊಳ್ಳಲು ಪ್ರಯತ್ನಿಸುತ್ತಿರಬಹುದು. (1 ಕೊರಿಂಥ 7:39) ಒಂದುವೇಳೆ ಅಲ್ಲಿ ಆಶಾಭಂಗವಾದಲ್ಲಿ, ಇಸ್ರಾಯೇಲಿನ ಅರಸನಾಗಿದ್ದ ಸೊಲೊಮೋನನನ್ನು ಲಕ್ಷ್ಯಕ್ಕೆ ತರುವುದು ಸಹಾಯಕರವು. ವಿವಾಹದಲ್ಲಿ ಒಬ್ಬ ಶೂಲೇಮ್ಯ ಕನ್ಯೆಯನ್ನು ಗಳಿಸಿಕೊಳ್ಳಲು ಅವನಿಂದಾಗಲಿಲ್ಲ ಯಾಕೆಂದರೆ ಅವಳು ಒಬ್ಬ ಬಡ ಕುರುಬರ ಹುಡುಗನನ್ನು ಪ್ರೇಮಿಸಿದ್ದಳು. ಈ ವಿಷಯದ ಕುರಿತಾಗಿ ಅರಸನು ಬರೆದ ದಾಖಲೆಯನ್ನು ಸೊಲೊಮೋನನ ಪ್ರೀತಿಯ ಆಶಾಭಂಗದ ಪರಮಗೀತ ಎಂದು ಕರೆಯಬಹುದು. ಒಂದು ನಿರ್ದಿಷ್ಟ ಸಂದರ್ಭದಲ್ಲಿ ನಮ್ಮ ಸ್ವಂತ ಪ್ರಣಯ-ಪ್ರೇಮ ಪ್ರಯತ್ನಗಳು ನಿಷ್ಪಲಗೊಳ್ಳುವಾಗ ನಾವು ಕಣ್ಣೀರನ್ನು ಸುರಿಸಬಹುದು. ಆದರೆ ಸೊಲೊಮೋನನು ಆ ಅಶಾಭಂಗದಿಂದ ಪಾರಾದನು, ನಾವು ಸಹಾ ಪಾರಾಗಬಲ್ಲೆವು. ಆತ್ಮಸಂಯಮವನ್ನು ಮತ್ತು ಇತರ ದೈವಿಕ ಗುಣಗಳನ್ನು ಪ್ರದರ್ಶಿಸುವುದಕ್ಕೆ ದೇವರಾತ್ಮವು ನಮಗೆ ಸಹಾಯ ಮಾಡಬಲ್ಲದು. ಯಾವನೇ ವ್ಯಕ್ತಿಯೆಡೆಗೆ ಒಬ್ಬನು ಪ್ರಣಯ-ಪ್ರೇಮ ತೋರಿಸ ಸಾಧ್ಯವಿಲ್ಲವೆಂಬ ಕಟುಸತ್ಯದ ನೋವನ್ನು ಅಂಗೀಕರಿಸಲು ದೇವರ ವಾಕ್ಯವು ನಮಗೆ ಸಹಾಯ ಮಾಡುವುದು. (ಪರಮಗೀತ 2:7; 3:5) ಆದರೂ, ನಮ್ಮನ್ನು ಅತಿಯಾಗಿ ಪ್ರೀತಿಸುವ ಒಬ್ಬ ಜೊತೆ ವಿಶ್ವಾಸಿಯನ್ನು ಕಂಡುಕೊಳ್ಳ ಶಕ್ಯವಾಗಬಹುದೆಂದು ಸೊಲೊಮೋನನ ಪರಮಗೀತಗಳು ತೋರಿಸುತ್ತವೆ. ಅತಿ ಪ್ರಾಮುಖ್ಯವಾಗಿ ಈ “ಪರಮಗೀತ”ವು, ಒಳ್ಳೇ ಕುರುಬನಾದ ಯೇಸು ಕ್ರಿಸ್ತನಿಗೆ ಆತನ “ವಧು”ವಾಗಿರುವ 1,44,000 ಅಭಿಷಿಕ್ತ ಹಿಂಬಾಲಕರಲ್ಲಿರುವ ಪ್ರೀತಿಯಲ್ಲಿ ನೆರವೇರಿಕೆಯನ್ನು ಪಡೆದಿದೆ.—ಪರಮಗೀತ 1:1; ಪ್ರಕಟನೆ 14:1-4; 21:2, 9; ಯೋಹಾನ 10:14.
16. ವಿವಾಹಿತ ಕ್ರೈಸ್ತರು ಅನುಭವಿಸಬಹುದಾದ “ಶರೀರ ಸಂಬಂಧವಾದ ಕಷ್ಟಗಳಲ್ಲಿ” ಏನೆಲ್ಲಾ ಕೂಡಿರಬಹುದು?
16 ನಂಬಿಕೆಯಲ್ಲಿರುವವರನ್ನು ವಿವಾಹವಾಗುವವರಿಗೆ ಸಹಾ “ಶರೀರ ಸಂಬಂಧವಾಗಿ ಕಷ್ಟ ಸಂಭವಿಸುವದು.” (1 ಕೊರಿಂಥ 7:28) ಗಂಡ, ಹೆಂಡತಿ, ಮತ್ತು ಅವರ ಮಕ್ಕಳನ್ನು ಒಳಗೂಡಿರುವ ಚಿಂತೆಗಳು ಮತ್ತು ಸಮಸ್ಯೆಗಳು ಅಲ್ಲಿರುವವು. (1 ಕೊರಿಂಥ 7:32-35) ಅಸೌಖ್ಯಗಳು ಹೊರೆಗಳನ್ನೂ ಒತ್ತಡಗಳನ್ನೂ ತರಬಹುದು. ಹಿಂಸೆಯು ಕ್ರೈಸ್ತ ತಂದೆಯೊಬ್ಬನಿಗೆ ಕುಟುಂಬದ ಜೀವನಾವಶ್ಯಕತೆಗಳನ್ನು ಒದಗಿಸುವುದನ್ನು ಕಷ್ಟಕರವಾಗಿ ಮಾಡೀತು. ಸೆರೆಮನೆವಾಸದಿಂದಾಗಿ ಹೆತ್ತವರು ಮತ್ತು ಮಕ್ಕಳು ಪ್ರತ್ಯೇಕಿತರಾಗಬಹುದು, ಮತ್ತು ಕೆಲವರು ಚಿತ್ರಹಿಂಸೆಗೂ, ಮರಣಕ್ಕೂ ಒಪ್ಪಿಸಲ್ಪಡಬಹುದು. ಆದರೆ ಇಂಥ ಎಲ್ಲಾ ಪರಿಸ್ಥಿತಿಗಳಲ್ಲಿ, ಯೆಹೋವನ ರಕ್ಷಣಾ ಹಸ್ತದಲ್ಲಿ ನಾವು ನಿಜವಾಗಿ ಭರವಸೆ ಇಟ್ಟರೆ ಮಾತ್ರವೇ, ನಂಬಿಕೆಯನ್ನು ಅಲ್ಲಗಳೆಯಲು ಬರುವ ಶೋಧನೆಗಳನ್ನು ಎದುರಿಸಲು ಶಕ್ತರಾಗುತ್ತೇವೆ.—ಕೀರ್ತನೆ 145:14.
17. ಯಾವ ಕುಟುಂಬ ಸಮಸ್ಯೆಯನ್ನು ತಾಳಿಕೊಳ್ಳುವಂತೆ ದೇವರು ಇಸಾಕ ಮತ್ತು ರೆಬೆಕ್ಕರನ್ನು ಶಕ್ತರನ್ನಾಗಿ ಮಾಡಿದನು?
17 ಕೆಲವು ಸಂಕಷ್ಟಗಳನ್ನು ದೀರ್ಘಕಾಲದ ತನಕ ನಮಗೆ ತಾಳಲಿಕ್ಕಿದ್ದೀತು. ಉದಾಹರಣೆಗೆ, ಮಗನು ಒಬ್ಬ ಅವಿಶ್ವಾಸಿಯನ್ನು ಮದುವೆಯಾಗುವ ಮೂಲಕ ತನ್ನ ದೇವಭಕ್ತ ಹೆತ್ತವರಿಗೆ ದುಃಖವನ್ನು ತರಬಹುದು. ಅದು ಮೂಲಪಿತೃ ಇಸಾಕ ಮತ್ತು ಅವನ ಪತ್ನಿ ರೆಬೆಕ್ಕಳ ಕುಟುಂಬದಲ್ಲಿ ನಡೆಯಿತು. ಅವರ 40 ವರ್ಷ ವಯಸ್ಸಿನ ಮಗನಾದ ಏಸಾವನು ಇಬ್ಬರು ಹಿತ್ತಿಯ ಸ್ತ್ರೀಯರನ್ನು ಮದುವೆಯಾದನು, “ಇವರ ದೆಸೆಯಿಂದ ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆ ಉಂಟಾಯಿತು.” ವಾಸ್ತವದಲ್ಲಿ, “ರೆಬೆಕ್ಕಳು ಇಸಾಕನಿಗೆ—ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಯಿತು. ಯಾಕೋಬ [ಅವರ ಬೇರೆ ಮಗ]ನೂ ಆ ದೇಶದವರಲ್ಲಿ ಹೆಣ್ಣನ್ನು ಆದುಕೊಂಡು ಇಂಥಾ ಹಿತ್ತಿಯ ಸ್ತ್ರೀಯನ್ನು ಮದುವೆ ಮಾಡಿಕೊಂಡರೆ ನಾನು ಇನ್ನೂ ಬದುಕುವದರಿಂದ ಪ್ರಯೋಜನವೇನು ಅಂದಳು.” (ಆದಿಕಾಂಡ 26:34, 35; 27:46) ಹೀಗೆ ಈ ಬಾಳುವ ಸಮಸ್ಯೆಯಿಂದಾಗಿ, ರೆಬೆಕ್ಕಳು ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ಕರಕರೆಗೊಂಡಿರಬೇಕೆಂಬದು ವ್ಯಕ್ತ. (2 ಪೇತ್ರ 2:7, 8) ಆದರೂ, ಯೆಹೋವನ ತ್ರಾಣವುಳ್ಳ ಹಸ್ತವು ಇಸಾಕ ಮತ್ತು ರೆಬೆಕ್ಕಳನ್ನು ಎತ್ತಿ ಬಲಪಡಿಸಿತು, ಮತ್ತು ಅವರು ಈ ಸಂಕಟವನ್ನು ತಾಳಿಕೊಳ್ಳುವಂತೆ ಶಕ್ತರನ್ನಾಗಿ ಮಾಡಿತು, ಅದೇ ಸಮಯದಲ್ಲಿ ಯೆಹೋವನೊಂದಿಗೆ ಒಂದು ಬಲವಾದ ಸಂಬಂಧವನ್ನೂ ಅವರು ಕಾಪಾಡಿಕೊಂಡರು.
18. ಸಿ. ಟಿ. ರಸ್ಸಲರು ಯಾವ ವೈಯಕ್ತಿಕ ಸಂಕಷ್ಟವನ್ನು ದೇವರ ಸಹಾಯದಿಂದ ತಾಳಿಕೊಂಡರು?
18 ಒಬ್ಬ ಸ್ನಾನಿತ ಕುಟುಂಬ ಸದಸ್ಯನು ದೇವರ ಸೇವೆಯಲ್ಲಿ ನಿಧಾನಿಸುತ್ತಾ ಬರುವುದನ್ನು ನೋಡುವದು ಸಹಾ ಮನೋವ್ಯಥೆಗೆ ಕಾರಣವಾಗುತ್ತದೆ. (2 ತಿಮೊಥಿ 2:15) ಆದರೂ ಕೆಲವರು, ವಾಚ್ ಟವರ್ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್ ಟಿ. ರಸ್ಸಲ್ರಂತೆ, ತಮ್ಮ ಜೊತೆಯ ಆತ್ಮಿಕ ನಷ್ಟವನ್ನು ಸಹಾ ಅನುಭವಿಸಿದ್ದಾರೆ. ಅವರ ಪತ್ನಿ ಸೊಸೈಟಿಯೊಂದಿಗೆ ತನ್ನ ಸಂಬಂಧವನ್ನು ಕಡಿದುಕೊಂಡಳು ಮತ್ತು ಸುಮಾರು 18 ವರ್ಷಗಳ ದಾಂಪತ್ಯ ಜೀವನದ ನಂತರ ಅವರನ್ನು 1897ರಲ್ಲಿ ತ್ಯಜಿಸಿಬಿಟಳ್ಟು. 1903ರಲ್ಲಿ ಅವಳು ಕಾನೂನು ಬದ್ಧ ಪ್ರತ್ಯೇಕವಾಸಕ್ಕಾಗಿ ದಾವೆ ಹೂಡಿದಳು. 1908ರಲ್ಲಿ ನ್ಯಾಯಬದ್ದ ಪ್ರತ್ಯೇಕವಾಸವನ್ನು ಕೊಡಲಾಯಿತು. ತದನಂತರ ಬೇಗನೇ ಅವರು ಅವಳಿಗೆ ಬರೆದ ಪತ್ರದಲ್ಲಿ, ತನ್ನ ಮನೋವ್ಯಥೆಯನ್ನು ವ್ಯಕ್ತಪಡಿಸಿದ್ದರು: “ನಿನ್ನ ಪರವಾಗಿ ನಾನು ಎಡೆಬಿಡದೆ ಕರ್ತನಿಗೆ ಪ್ರಾರ್ಥಿಸಿದ್ದೇನೆ. . . . ನನ್ನ ದುಃಖದ ವಿವರವನ್ನು ತಿಳಿಸಿ ನಾನು ನಿನ್ನ ಮೇಲೆ ಭಾರ ಹೊರಿಸಲಾರೆ ಹಾಗೂ ನನ್ನ ಭಾವುಕತೆಗಳನ್ನು ಸವಿಸ್ತಾರವಾಗಿ ತಿಳಿಸಿ ನಿನ್ನ ಬಾವುಕ ಸಹಾನುಭೂತಿಗಳನ್ನು ಎಬ್ಬಿಸಲಾರೆ. ಆಗಿಂದಾಗ್ಯೆ, ನಿನ್ನ ಉಡುಪುಗಳು ಮತ್ತು ಇತರ ವಸ್ತುಗಳು ನಿನ್ನ ಪೂರ್ವಸ್ವರೂಪವನ್ನು—ಕ್ರಿಸ್ತನಾತ್ಮವನ್ನು ಪ್ರದರ್ಶಿಸುವ ಎಷ್ಟೋ ಪ್ರೀತಿಪೂರ್ಣತೆ, ಸಹಾನುಭೂತಿ ಮತ್ತು ಸಹಾಯಕತೆಯನ್ನು ಸ್ವಷ್ಟವಾಗಿ ನನ್ನ ಮನಸ್ಸಿನ ಮುಂದೆ ತರುತ್ತವೆ. . . . ನಾನೀಗ ಹೇಳಲಿರುವುದನ್ನು ದಯವಿಟ್ಟು ಪ್ರಾರ್ಥನಾಪೂರ್ವಕವಾಗಿ ಗಮನಿಸು. ನನಗೆ ಅತ್ಯಂತ ದುಃಖಕರವಾದ, ಆಳವಾದ ಮನೋವ್ಯಥೆಯ ಸಂಗತಿಯು ನನ್ನ ಜೀವನಯಾತ್ರೆಯಲ್ಲಿ ಉಳಿದಿರುವ ಸಮಯದ ನನ್ನ ಸ್ವಂತ ಒಂಟಿಗತನವಲ್ಲ. ನೀನು ತಪ್ಪುದಾರಿಗೆ ಬಿದ್ದಿರುವುದೇ, ನನ್ನ ಪ್ರಿಯೇ, ನಿನ್ನ ನಿತ್ಯ ನಷ್ಟವೇ, ನನ್ನ ವ್ಯಥೆಯೆಂದು ನನಗೆ ತೋರಿಬರುತ್ತದೆ.” ಅಂಥ ಹೃದಯವೇದನೆ ಇದ್ದಾಗ್ಯೂ, ರಸ್ಸಲರಿಗೆ ತನ್ನ ಭೂಜೀವಿತದ ಅಂತ್ಯದ ತನಕ ದೇವರ ಬೆಂಬಲವು ದೊರಕಿತು. (ಕೀರ್ತನೆ 116:12-15) ಯೆಹೋವನು ಯಾವಾಗಲೂ ತನ್ನ ನಿಷ್ಠಾವಂತ ಸೇವಕರನ್ನು ಎತ್ತಿ ಆಸರೆ ಕೊಡುತ್ತಾನೆ.
ಎಲ್ಲಾ ಸಂಕಷ್ಟಗಳೊಳಗಿಂದ
19. ಕಷ್ಟಕರವಾದ ಸಮಸ್ಯೆಯು ಪಟ್ಟುಹಿಡಿದಲ್ಲಿ ನಾವು ಹೇಗೆ ಕ್ರಿಯೆಗೈಯಬೇಕು?
19 ಯೆಹೋವನ ಜನರು ಆತನನ್ನು, “ನಮ್ಮನ್ನು ರಕ್ಷಿಸುವ ದೇವರು” “ಅನುದಿನವೂ ನಮ್ಮ ಭಾರವನ್ನು ಹೊರುವ ಕರ್ತನಾಗಿ” ತಿಳಿದಿದ್ದಾರೆ. (ಕೀರ್ತನೆ 68:19, 20) ಆದುದರಿಂದ, ಆತನ ಐಹಿಕ ಸಂಸ್ಥೆಯೊಂದಿಗೆ ಸಹವಸಿಸುವ ಸಮರ್ಪಿತ ಜನರೋಪಾದಿ, ಸಂಕಟಕರ ಸಮಸ್ಯೆಗಳು ಪಟ್ಟುಹಿಡಿಯುವಾಗ ನಾವೆಂದೂ ಆಶಾಭಂಗವನ್ನು ಪಡೆಯದಿರೋಣ. “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ. ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು” ಎಂಬದನ್ನು ನೆನಪಿನಲ್ಲಿಡಿರಿ. (ಕೀರ್ತನೆ 46:1) ಆತನಲ್ಲಿ ನಮ್ಮ ಭರವಸೆಯು ಯಾವಾಗಲೂ ಪ್ರತಿಫಲದಾಯಕವು. “ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟನು” ಎಂದನು ದಾವೀದನು, “ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು. . . . ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.”—ಕೀರ್ತನೆ 34:4-6.
20. ಯಾವ ಪ್ರಶ್ನೆಗಳು ನಮ್ಮ ಚರ್ಚೆಗಾಗಿ ಇನ್ನೂ ಉಳಿದಿವೆ?
20 ಹೌದು, ನಮ್ಮ ಸ್ವರ್ಗೀಯ ತಂದೆಯು ತನ್ನ ಜನರನ್ನು ಎಲ್ಲಾ ಸಂಕಷ್ಟಗಳಿಂದ ರಕ್ಷಿಸಿ ಕಾಯುತ್ತಾನೆ. ತನ್ನ ಐಹಿಕ ಸಂಸ್ಥೆಯನ್ನು ಅವನು ಬೆಂಬಲಿಸುತ್ತಾನೆ, ಸಭಾ ಕಾರ್ಯಾಧಿಗಳಲ್ಲಿ ಮತ್ತು ವ್ಯಕ್ತಿಪರ ವಿಷಯಗಳಲ್ಲಿ ಆತನು ಸಹಾಯವನ್ನು ಒದಗಿಸುತ್ತಾನೆ. “ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವದಿಲ್ಲ” ನಿಶ್ಚಯ. (ಕೀರ್ತನೆ 94:14) ಆದರೆ ಯೆಹೋವನು ತನ್ನ ಜನರಿಗೆ ವ್ಯಕ್ತಿಪರವಾಗಿ ಸಹಾಯ ಮಾಡುವ ಇನ್ನಿತರ ವಿಷಯಗಳನ್ನು ನಾವು ಮುಂದಕ್ಕೆ ಚರ್ಚಿಸೋಣ. ಅಸ್ವಸ್ಥರಾದ, ಮಾನಸಿಕ ಖಿನ್ನತೆಯನ್ನು ಅನುಭವಿಸುವ, ವಿಯೋಗನಷ್ಟದಿಂದಾಗಿ ದುಃಖಾರ್ಥರಾದ ಅಥವಾ ತಮ್ಮ ಸ್ವಂತ ತಪ್ಪುಗಳಿಂದಾಗಿ ಮನೋವ್ಯಥೆಯಿಂದ ಕೂಡಿರುವ ತನ್ನ ಸೇವಕರನ್ನು ನಮ್ಮ ಸ್ವರ್ಗೀಯ ತಂದೆಯು ಹೇಗೆ ಬಲಪಡಿಸಿ ಪೋಷಿಸುತ್ತಾನೆ? ನಾವು ನೋಡಲಿರುವ ಪ್ರಕಾರ, ಈ ವಿಷಯಗಳಲ್ಲೂ, ಯೆಹೋವನ ತ್ರಾಣವುಳ್ಳ ಹಸ್ತದ ಮೇಲೆ ಆತುಕೊಳ್ಳುವ ಸಕಾರಣವು ನಮಗಿದೆ. (w91 10/1)
ಹೇಗೆ ಪ್ರತಿಕ್ರಿಯಿಸುವಿರಿ?
◻ ಹಿಂದಣ ಕಾಲದಲ್ಲಿ ದೇವರ ಭುಜಬಲವು ರಕ್ಷಣೆಯನ್ನು ತಂದದ್ದು ಹೇಗೆ?
◻ ಯೆಹೋವನು ಇಂದು ಸಭೆಗಳಲ್ಲಿ ತನ್ನ ಜನರಿಗೆ ಸಹಾಯ ಮಾಡುವುದು ಹೇಗೆ?
◻ ವ್ಯಕ್ತಿಪರ ವಿಷಯಗಳಲ್ಲಿ ದೇವರು ಯಾವ ಸಹಾಯವನ್ನು ಒದಗಿಸುತ್ತಾನೆ?
◻ ಕಷ್ಟಕರವಾದ ಸಮಸ್ಯೆಗಳು ಪಟ್ಟುಹಿಡಿದಲ್ಲಿ ನಾವೇನು ಮಾಡಬೇಕು?
[ಪುಟ 8,9 ರಲ್ಲಿರುವಚಿತ್ರ]
ದೇವರು ಇಸ್ರಾಯೇಲ್ಯರನ್ನು ಐಗುಪ್ತದೊಳಗಿಂದ ತನ್ನ “ಬಾಹುಬಲದಿಂದ” ಹೊರತಂದನು