ಯೆಹೋವನ ಶಾಶ್ವತವಾದ ಹಸ್ತಗಳನ್ನು ನಿಮ್ಮ ಆಧಾರವಾಗಿ ಮಾಡಿರಿ
“ನಿತ್ಯನಾದ ದೇವರು ನಿಮ್ಮ ನಿವಾಸಸ್ಥಾನ, ಆತನ ಶಾಶ್ವತವಾದ ಹಸ್ತಗಳೇ ನಿಮಗೆ ಆಧಾರ.”—ಧರ್ಮೋಪದೇಶಕಾಂಡ 33:27, ಅಮೆರಿಕನ್ ಸ್ಟ್ಯಾಂಡರ್ಡ್ ವರ್ಶನ್.
1, 2. ಯೆಹೋವನ ಜನರು ಆತನ ಬೆಂಬಲದ ಕುರಿತು ಭರವಸೆಯಿಂದಿರ ಸಾಧ್ಯವಿದೆಯೇಕೆ?
ಯೆಹೋವನು ತನ್ನ ಜನರನ್ನು ಲಕ್ಷಿಸುತ್ತಾನೆ. ಇಸ್ರಾಯೇಲ್ಯರಿಗೆ ಬಂದ ಸಂಕಷ್ಟಗಳಲ್ಲಿಲ್ಲಾ “ಆತನೂ ಶ್ರಮೆಪಟ್ಟನು” ಎಂದು ಹೇಳಿದೆಯಲ್ಲಾ! ಪ್ರೀತಿಯಿಂದಲೂ ಕನಿಕರದಿಂದಲೂ ಆತನು, “ಅವರನ್ನು ಎತ್ತಿಕೊಂಡು ಹೊರುತ್ತಾ ಬಂದನು.” (ಯೆಶಾಯ 63:7-9) ಹೀಗೆ ನಾವು ದೇವರಿಗೆ ನಂಬಿಗಸ್ತರಾಗಿದ್ದರೆ, ಆತನ ಆಧಾರದ ನಿಶ್ಚಯತೆ ನಮಗಿರಬಲ್ಲದು.
2 ಪ್ರವಾದಿಯಾದ ಮೋಶೆಯು ಹೇಳಿದ್ದು: “ಆದಿಯಿಂದಲೂ ದೇವರೇ ನಿಮಗೆ ನಿವಾಸಸ್ಥಾನವಾಗಿದ್ದಾನಲ್ಲಾ. ಸದಾ ದೇವರ ಹಸ್ತವೇ ನಿಮಗೆ ಆಧಾರ.” (ಧರ್ಮೋಪದೇಶಕಾಂಡ 33:27) ಇನ್ನೊಂದು ಭಾಷಾಂತರವು ಹೇಳುವುದು: “ನಿತ್ಯನಾದ ದೇವರು ನಿಮಗೆ ನಿವಾಸಸ್ಥಾನ, ಆತನ ಶಾಶ್ವತವಾದ ಹಸ್ತಗಳೇ ನಿಮಗೆ ಆಧಾರ.” (ಅಮೆರಿಕನ್ ಸ್ಟ್ಯಾಂಡರ್ಡ್ ವರ್ಶನ್) ಆದರೆ ದೇವರ ಹಸ್ತಗಳು ಆತನ ಸೇವಕರಿಗೆ ಆಧಾರ ಕೊಡುವದು ಹೇಗೆ?
ಇಷ್ಟೊಂದು ಕಷ್ಟಗಳೇಕೆ?
3. ವಿಧೇಯ ಮಾನವರು ಯಾವಾಗ “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯನ್ನು” ಪೂರ್ಣವಾಗಿ ಆನಂದಿಸುವರು?
3 ಯೆಹೋವನ ಸೇವೆ ಮಾಡುವಿಕೆಯು ನಮ್ಮನ್ನು, ಅಸಂಪೂರ್ಣ ಮನುಷ್ಯರ ಮೇಲೆ ಬರುವ ಸಾಮಾನ್ಯ ಕಷ್ಟಗಳಿಂದ ತಪ್ಪಿಸಲಾರದು. ದೇವರ ಸೇವಕನಾದ ಯೋಬನು ಹೇಳಿದ್ದು: “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು.” (ಯೋಬ 14:1) “ನಮ್ಮ ಆಯುಷ್ಕಾಲದ” ಕುರಿತು ಕೀರ್ತನೆಗಾರನು, “ಕಷ್ಟಸಂಕಟಗಳೇ ಅದರ ಆಡಂಭರ” ಎಂದು ಹೇಳಿದ್ದಾನೆ. (ಕೀರ್ತನೆ 90:10) ‘ಈ ಸೃಷ್ಟಿಯು ನಾಶನದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವ ತನಕ’ ಜೀವಿತವು ಇದೇ ರೀತಿ ಇರುವುದು. (ರೋಮಾಪುರ 8:19-22) ಅದು ಕ್ರಿಸ್ತನ ಸಹಸ್ರ ವರ್ಷಗಳ ಆಳಿಕೆಯ ಸಮಯದಲ್ಲಿ ನಡೆಯುವುದು. ಯೇಸುವಿನ ವಿಮೋಚನಾ ಯಜ್ಞದ ಆಧಾರದಲ್ಲಿ, ಆಗ ರಾಜ್ಯದ ಕೆಳಗಿನ ಮಾನವ ಪ್ರಜೆಗಳು ಪಾಪ ಮತ್ತು ಮರಣದಿಂದ ವಿಮೋಚನೆಯನ್ನು ಅನುಭವಿಸುವರು. ಆ ಸಹಸ್ರ ವರ್ಷಗಳ ಆಳಿಕೆಯ ಅಂತ್ಯದೊಳಗೆ, ಕ್ರಿಸ್ತನೂ ಅವನ ರಾಜ-ಯಾಜಕರೂ ವಿಧೇಯ ಮಾನವರನ್ನು ಪರಿಪೂರ್ಣತೆಗೇರಿಸಲು ಸಹಾಯ ಮಾಡುವರು ಮತ್ತು ಸೈತಾನನಿಂದ ಮತ್ತು ಅವನ ದುರಾತ್ಮಗಳಿಂದ ಬರುವ ಆ ಕೊನೆಯ ಪರೀಕ್ಷೆಯಲ್ಲಿ ದೇವರಿಗೆ ನಿಷ್ಠಾವಂತರಾಗಿ ಉಳಿಯುವವರ ಹೆಸರುಗಳು, “ಜೀವಬಾಧ್ಯರ ಪುಸ್ತಕದಲ್ಲಿ” ಶಾಶ್ವತವಾಗಿ ಬರೆಯಲ್ಪಡುವವು. (ಪ್ರಕಟನೆ 20:12-15) ಆ ಮೇಲೆ ಅವರು ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯನ್ನು ಪೂರ್ಣವಾಗಿ ಆನಂದಿಸುವರು.
4. ಜೀವಿತದಲ್ಲಿ ನಮ್ಮ ಪಾಡಿನ ಕುರಿತು ದೂರುವುದರ ಬದಲಿಗೆ, ನಾವೇನು ಮಾಡಬೇಕು?
4 ಈ ನಡುವೆ, ಜೀವಿತದಲ್ಲಿ ನಮ್ಮ ಪಾಡಿನ ಕುರಿತು ದೂರುತ್ತಾ ಇರುವ ಬದಲಾಗಿ, ನಾವು ಯೆಹೋವನಲ್ಲಿ ಭರವಸೆಯನ್ನು ಇಡೋಣ. (1 ಸಮುವೇಲ 12:22; ಯೂದ 16) ನಮ್ಮ ಮಹಾ ಯಾಜಕನಾದ ಯೇಸು ಕ್ರಿಸ್ತನಿಗಾಗಿಯೂ ಕೃತಜ್ಞರಾಗಿರೋಣ ಯಾಕಂದರೆ ಆತನ ಮೂಲಕವಾಗಿಯೇ ನಾವು ದೇವರನ್ನು, “ಆತನ ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತ ಸಹಾಯವು ಸಿಗುವಂತೆಯೂ” ಗೋಚರಿಸ ಶಕ್ತರಾಗಿದ್ದೇವೆ. (ಇಬ್ರಿಯ 4:14-16) ಆದಾಮನಂತೆ ನಾವು ಎಂದಿಗೂ ಇರಬಾರದು. ತನಗೆ ದೇವರು ಕೆಟ್ಟ ಪತ್ನಿಯನ್ನು ಕೊಟ್ಟನು ಎಂಬ ತಪ್ಪು ಆರೋಪವನ್ನು ಅವನು ಯೆಹೋವನ ಮೇಲೆ ಕಾರ್ಯತಃ ಹೊರಿಸುತ್ತಾ, “ನನ್ನ ಜೊತೆಯಲ್ಲಿರುವುದಕ್ಕೆ ನೀನು ನನಗೆ ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು” ಅಂದಿದ್ದನು. (ಆದಿಕಾಂಡ 3:12) ದೇವರು ನಮಗೆ ಒಳ್ಳೇದನ್ನೇ ಕೊಡುತ್ತಾನೆ, ನಮ್ಮ ಮೇಲೆ ಕಷ್ಟಗಳನ್ನು ತರುವುದಿಲ್ಲ. (ಮತ್ತಾಯ 5:45; ಯಾಕೋಬ 1:17) ಪ್ರತಿಕೂಲ ಪರಿಸ್ಥಿತಿಗಳು ಬರುವುದು ಹೆಚ್ಚಾಗಿ ನಮ್ಮ ಸ್ವಂತ ವಿವೇಕದ ಕೊರತೆಯಿಂದಾಗಿ ಅಥವಾ ಬೇರೆಯವರ ತಪ್ಪುಗಳಿಂದಾಗಿ. ನಾವು ಪಾಪ ಪೂರ್ಣರಾಗಿರುವುದರಿಂದಲೂ ಮತ್ತು ಸೈತಾನನ ಅಧಿಕಾರದ ಕೆಳಗೆ ಬಿದ್ದಿರುವ ಲೋಕದಲ್ಲಿ ಜೀವಿಸುವುದರಿಂದಲೂ ಅವು ಬರಬಹುದು. (ಜ್ಞಾನೋಕ್ತಿ 19:3; 1 ಯೋಹಾನ 5:19) ಆದರೂ ಯೆಹೋವನ ಶಾಶ್ವತವಾದ ಹಸ್ತಗಳು, ಪ್ರಾರ್ಥನಾಪೂರ್ವಕವಾಗಿ ಆತನ ಮೇಲೆ ಆತುಕೊಳ್ಳುವ ಮತ್ತು ಆತನ ವಾಕ್ಯದ ಸೂಚನೆಗಳನ್ನು ವ್ಯಕ್ತಿಪರವಾಗಿ ಅನ್ವಯಿಸಿಕೊಳ್ಳುವ ನಿಷ್ಠಾವಂತ ಸೇವಕರನ್ನು ಯಾವಾಗಲೂ ಬೆಂಬಲಿಸುತ್ತವೆ.—ಕೀರ್ತನೆ 37:5; 119:105.
ಅಸ್ವಸ್ಥದ ಸಮಯದಲ್ಲಿ ಆಧಾರವಾಗಿರುವುದು
5. ಅಸ್ವಸ್ಥರಾಗಿರುವವರು ಕೀರ್ತನೆ 41:1-3ರಲ್ಲಿ ಯಾವ ಉತ್ತೇಜನವನ್ನು ಕಂಡುಕೊಳ್ಳಬಹುದು?
5 ಕೆಲವು ಸಾರಿ ಅಸ್ವಸ್ಥಗಳು ನಮಲ್ಲಿ ಹೆಚ್ಚಿನವರಿಗೆ ಬಹು ಮನೋವ್ಯಥೆಯನ್ನು ತರುತ್ತವೆ. ಆದರೂ ದಾವೀದನು ಅಂದದ್ದು: “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು. ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು; ಯೆಹೋವನೇ, ಅವನನ್ನು ಶತ್ರುಗಳ ಅಧೀನಕ್ಕೆ ಕೊಡಬೇಡ. ಅವನು ಅಸ್ವಸ್ಥನಾಗಿ ಹಾಸಿಗೆಯಲ್ಲಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು. ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟು ಮಾಡಿದಿಯಲ್ಲಾ.”—ಕೀರ್ತನೆ 41:1-3.
6, 7. ದಾವೀದನು ಅಸ್ವಸ್ಥನಾಗಿ ಹಾಸಿಗೆ ಹಿಡಿದಿದ್ದಾಗ ದೇವರು ಅವನಿಗೆ ಹೇಗೆ ಸಹಾಯ ಮಾಡಿದನು, ಮತ್ತು ಇದು ಯೆಹೋವನ ಸೇವಕರನ್ನು ಹೇಗೆ ಉತ್ತೇಜಿಸಬಲ್ಲದು?
6 ಪರಿಗಣನೆಯುಳ್ಳ ಒಬ್ಬ ವ್ಯಕ್ತಿಯು ಕೊರತೆಯುಳ್ಳವರಿಗೆ ಸಹಾಯ ಮಾಡುತ್ತಾನೆ. “ಆಪತ್ಕಾಲವು,” ಯಾವುದೇ ಆಪತ್ತಿನ ಒಂದು ಪ್ರಸಂಗವಾಗಿರಬಹುದು ಅಥವಾ ಒಬ್ಬ ವ್ಯಕ್ತಿಯನ್ನು ಬಲಹೀನಗೊಳಿಸುವ ದೀರ್ಘಾವಧಿಯ ಕಷ್ಟದೆಸೆಯಾಗಿರಬಲ್ಲದು. ಆ ಬಲಹೀನತೆಯ ಸಮಯದಲ್ಲಿ ತನ್ನನ್ನು ಕಾಯುವಂತೆ ಅವನು ದೇವರಲ್ಲಿ ಭರವಸೆ ಇಡುತ್ತಾನೆ, ಮತ್ತು ಯೆಹೋವನು ಅವನೊಂದಿಗೆ ಕನಿಕರದಿಂದ ವರ್ತಿಸುವ ವಾರ್ತೆಯನ್ನು ಹಬ್ಬಿಸುವದರಿಂದ, ಇತರರು ‘ಅವನು ದೇಶದಲ್ಲಿ ಧನ್ಯನೆಂದು ಹೇಳುವರು.’ ದಾವೀದನು “ಅಸ್ವಸ್ಥನಾಗಿ ಹಾಸಿಗೆಯಲ್ಲಿ ಬಿದ್ದುಕೊಂಡಿರುವಾಗ,” ಪ್ರಾಯಶಃ ತನ್ನ ಪುತ್ರ ಅಬ್ಷಾಲೋಮನು ಇಸ್ರಾಯೇಲ್ ಸಿಂಹಾಸನವನ್ನು ಕಿತ್ತುಕೊಳ್ಳನೋಡಿದಾಗ ದಾವೀದನಿಗುಂಟಾದ ಮನೋವ್ಯಥೆಯ ಸಮಯದಲ್ಲಿ, ದೇವರು ಅವನನ್ನು ಬಲಪಡಿಸಿರಬೇಕು.—2 ಸಮುವೇಲ 15:1-6.
7 ದಾವೀದನು ದಿಕ್ಕಿಲ್ಲದವರನ್ನು ಪರಾಮರಿಕೆ ಮಾಡಿದ್ದ ಕಾರಣ, ತಾನು ರೋಗದಿಂದ ಹಾಸಿಗೆಯಲ್ಲಿ ಸಹಾಯಶೂನ್ಯನಾಗಿ ಬಿದ್ದಿರುವಾಗ ಯೆಹೋವನು ತನ್ನನ್ನು ಬಲಪಡಿಸುವನೆಂದು ಭಾವಿಸಿದ್ದನು. (ಕೀರ್ತನೆ 18:24-26) ಮರಣಕರ ವ್ಯಾಧಿಯಲ್ಲಿರುವಾಗಲೂ, ದೇವರು ತನಗೆ ‘ಆರೋಗ್ಯವನ್ನುಂಟು’ ಮಾಡುವನೆಂಬ ಭರವಸೆಯು ಅವನಿಗಿತ್ತು, ರೋಗವನ್ನು ಅದ್ಭುತಕರವಾಗಿ ವಾಸಿಮಾಡಿ ಅಲ್ಲ, ಬದಲಿಗೆ ಆದರಣೆಯ ಮಾತುಗಳಿಂದ ಅವನನ್ನು ಬಲಪಡಿಸುವ ಮೂಲಕವೇ. ಯೆಹೋವನು ಅವನ ರೋಗದ ಹಾಸಿಗೆಯನ್ನು ಆರೋಗ್ಯಕರವಾದ ವಾಸಿಯ ಹಾಸಿಗೆಯಾಗಿ ಮಾರ್ಪಡಿಸಿದನೋ ಎಂಬಂತೆ ಅದಿತ್ತು. ತದ್ರೀತಿಯಲ್ಲಿ ದೇವರ ಸೇವಕರೋಪಾದಿ ನಾವು ಅನಾರೋಗ್ಯದಿಂದ ಬಳಲುತ್ತಿದ್ದರೆ, ದೇವರ ಶಾಶ್ವತವಾದ ಹಸ್ತಗಳು ನಮಗೆ ಆಧಾರವನ್ನು ಕೊಡುವವು.
ಖಿನ್ನರಾಗಿರುವವರಿಗೆ ಸಾಂತ್ವನ
8. ಒಬ್ಬ ಅಸ್ವಸ್ಥ ಕ್ರೈಸ್ತನು ದೇವರಲ್ಲಿ ತನ್ನ ಆತುಕೊಳ್ಳುವಿಕೆಯನ್ನು ತೋರಿಸಿದ್ದು ಹೇಗೆ?
8 ಅನಾರೋಗ್ಯವು ಮಾನಸಿಕ ಖಿನ್ನತೆಯನ್ನು ತರಬಹುದು. ಘೋರ ಕಾಯಿಲೆಗೆ ಗುರಿಯಾದ ಒಬ್ಬ ಕ್ರೈಸ್ತನಿಗೆ ಕೆಲವುಸಾರಿ ಓದಲು ಸಾಕಷ್ಟು ತ್ರಾಣವಿರುವುದಿಲ್ಲ. “ಇದು ನನ್ನ ಮನಸ್ಸಿನಲ್ಲಿ ಖಿನ್ನ ಭಾವನೆಗಳನ್ನು, ನಿಷ್ಪ್ರಯೋಜಕನು ನಾನೆಂಬ ಅನಿಸಿಕೆಗಳನ್ನು, ಕಣ್ಣೀರನ್ನೂ ತರುತ್ತದೆ” ಎಂದವನು ಹೇಳುತ್ತಾನೆ. ಈ ನಿರಾಶಜನಕ ಭಾವನೆಗಳ ಮೂಲಕ ಸೈತಾನನು ತನ್ನನ್ನು ಜಜ್ಜಿಬಿಡಲು ಪ್ರಯತ್ನಿಸುತ್ತಾನೆಂದು ತಿಳಿದವನಾಗಿ ಅವನು ಅದರ ವಿರುದ್ಧವಾಗಿ ಹೋರಾಡುತ್ತಾನೆ, ಯೆಹೋವನ ಸಹಾಯದೊಂದಿಗೆ ತಾನೆಂದೂ ಸೋಲಲಾರೆ ಎಂದವನ ನಂಬಿಕೆ. (ಯಾಕೋಬ 4:7) ಅವನು ದೇವರಲ್ಲಿ ಭರವಸೆ ಇಟ್ಟಿದ್ದಾನೆಂದು ತಿಳಿದವರಿಗೆ ಅವನೊಂದು ಉತ್ತೇಜನವಾಗಿದ್ದಾನೆ. (ಕೀರ್ತನೆ 29:11) ಆಸ್ಪತ್ರೆಯಲ್ಲಿರುವಾಗಲೂ ಅವನು ರೋಗಿಗಳಿಗೆ ಮತ್ತು ಇತರರಿಗೆ ಟೆಲಿಫೋನ್ ಮಾಡಿ ಅವರನ್ನು ಆತ್ಮಿಕ ರೀತಿಯಲ್ಲಿ ಬಲಪಡಿಸುತ್ತಾನೆ. ರಾಜ್ಯ ಸಂಗೀತಗಳ, ಈ ಪತ್ರಿಕೆಯ ಮತ್ತು ಇದರ ಜತೆಪತ್ರಿಕೆ ಅವೇಕ್!ನಲ್ಲಿನ ಲೇಖನಗಳ ಆಡಿಯೋಕ್ಯಾಸೆಟ್ ರೆಕಾರ್ಡಿಂಗ್ಗೆ ಕಿವಿಗೊಡುವ ಮೂಲಕ ಮತ್ತು ಜತೆಕ್ರೈಸ್ತರ ಸಹವಾಸದ ಮೂಲಕ ಅವನು ತನ್ನನ್ನು ತಾನೇ ಆತ್ಮಿಕ ರೀತಿಯಲ್ಲಿ ಬಲಪಡಿಸುತ್ತಿರುತ್ತಾನೆ. ಈ ಸಹೋದರನು ಅನ್ನುವುದು: “ನಾನು ಕ್ರಮವಾಗಿ ಯೆಹೋವನೊಂದಿಗೆ ಪ್ರಾರ್ಥನೆಯಲ್ಲಿ ಮಾತಾಡುತ್ತೇನೆ, ನನಗೆ ಬಲವನ್ನು, ಮಾರ್ಗದರ್ಶನೆಯನ್ನು, ಸಾಂತ್ವನವನ್ನು ಮತ್ತು ತಾಳಿಕೊಳ್ಳಲು ಬೇಕಾದ ಸಹಾಯವನ್ನು ಕೊಡುವಂತೆ ಬೇಡುತ್ತೇನೆ.” ಗಂಭೀರವಾದ ಅರೋಗ್ಯ ಸಮಸ್ಯೆ ಇರುವ ಕ್ರೈಸ್ತರು ನೀವಾಗಿದ್ದರೆ, ಯಾವಾಗಲೂ ಯೆಹೋವನಲ್ಲಿ ಭರವಸೆ ಇಡಿರಿ ಮತ್ತು ಆತನ ಶಾಶ್ವತವಾದ ಹಸ್ತಗಳನ್ನು ನಿಮ್ಮ ಆಧಾರವಾಗಿ ಮಾಡಿಕೊಳ್ಳಿರಿ.
9. ಮಾನಸಿಕ ಖಿನ್ನತೆಯು ಕೆಲವೊಮ್ಮೆ ದೇವಜನರನ್ನು ಬಾಧಿಸುತ್ತದೆಂದು ಯಾವ ಉದಾಹರಣೆಗಳು ತೋರಿಸುತ್ತವೆ?
9 ಖಿನ್ನತೆ ಒಂದು ಹಳೇ ಸಮಸ್ಯೆಯಾಗಿದೆ. ಪರೀಕ್ಷೆಯ ಕೆಳಗಿರುವಾಗ ಯೋಬನು ದೇವರಿಂದ ತ್ಯಜಿಸಿಬಿಡಲ್ಪಟ್ಟನೋ ಎಂಬ ಅನಿಸಿಕೆಯಿಂದ ಮಾತಾಡಿದನು. (ಯೋಬ 29:2-5) ಯೆರೂಸಲೇಮಿನ ಮತ್ತು ಅದರ ಗೋಡೆಗಳ ಹಾಳುಬಿದ್ದ ಸ್ಥಿತಿಯು ನೆಹೆಮೀಯನನ್ನು ಖಿನ್ನಗೊಳಿಸಿತ್ತು, ಮತ್ತು ಪೇತ್ರನು ಕ್ರಿಸ್ತ ಯೇಸುವನ್ನು ಅಲ್ಲಗಳೆದುದರ್ದ ಕುರಿತು ಎಷ್ಟು ಖಿನ್ನನಾದನೆಂದರೆ ಬಹು ಕಟುವಾಗಿ ಅತನ್ತು. (ನೆಹೆಮೀಯ 2:1-8; ಲೂಕ 22:62) ಎಪಫ್ರೊದೀತನು ತಾನು ಅಸ್ವಸ್ಥನಾಗಿದ್ದ ವರ್ತಮಾನವು ಫಿಲಿಪ್ಪಿಯ ಕ್ರೈಸ್ತರಿಗೆ ತಿಳಿದದ್ದಕ್ಕಾಗಿ ತುಂಬಾ ವ್ಯಥೆಪಟ್ಟನು. (ಫಿಲಿಪ್ಪಿಯ 2:25, 26) ಖಿನ್ನತೆಯು ಥೆಸಲೊನೀಕದ ಕೆಲವು ಕ್ರೈಸ್ತರನ್ನು ಬಾಧಿಸಿತ್ತು, ಆದುದರಿಂದಲೇ ಪೌಲನು ಅಲ್ಲಿನ ಸಹೋದರರಿಗೆ, “ಮನಗುಂದಿದವರನ್ನು ಧೈರ್ಯಪಡಿಸಿರಿ” ಎಂದು ಪ್ರೇರಿಸಿದ್ದನು. (1 ಥೆಸಲೊನೀಕ 5:14) ಹಾಗಾದರೆ ದೇವರು ಅಂಥ ವ್ಯಕ್ತಿಗಳಿಗೆ ಹೇಗೆ ಸಹಾಯ ಮಾಡುತ್ತಾನೆ?
10. ಮಾನಸಿಕ ಖಿನ್ನತೆಯನ್ನು ನಿಭಾಯಿಸಲು ಪ್ರಯತ್ನಿಸುವುದರಲ್ಲಿ ಯಾವುದು ಸಹಾಯಕಾರಿಯಾಗಬಹುದು?
10 ತೀವ್ರ ಖಿನ್ನತೆಗೆ ವೈದ್ಯಕೀಯ ಉಪಚಾರದ ಕುರಿತು ಒಂದು ವೈಯಕ್ತಿಕ ನಿರ್ಣಯವು ಮಾಡಲ್ಪಡಬೇಕು.a (ಗಲಾತ್ಯ 6:5) ತಕ್ಕದಾದ್ದ ವಿಶ್ರಾಂತಿ ಮತ್ತು ಸಮತೆಯುಳ್ಳ ಚಟುವಟಿಕೆಯು ಸಹಾಯಕಾರಿಯಾದೀತು. ಹಲವಾರು ಸಮಸ್ಯೆಗಳನ್ನು ಒಟ್ಟುಗೂಡಿಸಿ ಒಂದು ದೊಡ್ಡ ದಶೆಯಾಗಿ ವೀಕ್ಷಿಸುವ ಬದಲಿಗೆ ಅವನ್ನು ಒಂದೊಂದಾಗಿ ಪರಿಹರಿಸಲು ತೊಡಗುವುದು ಖಿನ್ನ ವ್ಯಕ್ತಿಗೆ ಸಹಾಯಕರವಾಗಿ ಕಾಣಬಹುದು. ಸಭಾ ಹಿರಿಯರಿಂದ ಸಾಂತಕ್ವರ ಸಹಾಯವು, ವಿಶೇಷವಾಗಿ ಈ ಆರೋಗ್ಯ ಸಮಸ್ಯೆಯು ಆತ್ಮಿಕ ವ್ಯಾಕುಲವನ್ನು ಉಂಟುಮಾಡುವಾಗ, ಅತ್ಯಂತ ಪ್ರಯೋಜನಕರವು. (ಯಾಕೋಬ 5:13-15) ಎಲ್ಲಕ್ಕಿಂತಲೂ ಹೆಚ್ಚಾಗಿ, ಯೆಹೋವನ ಮೇಲೆ ಆತುಕೊಳ್ಳುವುದು ಅತ್ಯಾವಶ್ಯವು, ‘ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ ಆತನು ನಿಮಗೋಸ್ಕರ ಚಿಂತಿಸುತ್ತಾನೆ.’ ಎಡೆಬಿಡದೆ ಮಾಡುವ ಮತ್ತು ಹೃದಯಪೂರ್ವಕವಾದ ಪ್ರಾರ್ಥನೆಯು, ‘ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವ ದೇವರ ಶಾಂತಿಯನ್ನು’ ನಿಮಗೆ ತರಬಲ್ಲದು.—1 ಪೇತ್ರ 5:6-11; ಪಿಲಿಪ್ಪಿಯ 4:6, 7.
ವಿಯೋಗನಷ್ಟವನ್ನು ತಾಳಿಕೊಳ್ಳಲು ಯೆಹೋವನು ನೆರವಾಗುತ್ತಾನೆ
11-13. ಒಬ್ಬ ಪ್ರಿಯ ವ್ಯಕ್ತಿಯ ಮರಣದ ಮೇಲಿನ ದುಃಖವನ್ನು ಯಾವುದು ನೀಗಿಸಬಹುದು?
11 ಇನ್ನೊಂದು ಮನೋವ್ಯಥೆಯ ಅನುಭವವು ಪ್ರಿಯಜನರಲ್ಲೊಬ್ಬರ ಮರಣವೇ. ಅಬ್ರಹಾಮನು ತನ್ನ ಪತ್ನಿಯಾದ ಸಾರಳ ಮರಣಕ್ಕಾಗಿ ಗೋಳಾಡಿದ್ದನು. (ಆದಿಕಾಂಡ 23:2) ತನ್ನ ಮಗನಾದ ಅಬ್ಷಾಲೋಮನು ಸತ್ತಾಗ ದಾವೀದನು ಅತ್ಯಂತ ದುಃಖ ಪೀಡಿತನಾದನು. (2 ಸಮುವೇಲ 18:33) ಯಾಕೆ, ಪರಿಪೂರ್ಣ ಮನುಷ್ಯನಾಗಿದ್ದ ಯೇಸುವು ಸಹಾ, ತನ್ನ ಮಿತ್ರ ಲಾಜರನ ಮರಣಕ್ಕಾಗಿ “ಕಣ್ಣೀರು ಬಿಟ್ಟ”ನಲ್ಲಾ. (ಯೋಹಾನ 11:35) ಹೀಗೆ, ಮರಣವು ಒಬ್ಬ ಪ್ರಿಯ ವ್ಯಕ್ತಿಯನ್ನು ತಕ್ಕೊಂಡಾಗ ಅಲ್ಲಿ ದುಃಖ ಉಂಟಾಗುತ್ತದೆ. ಆದರೆ ಅಂಥ ದುಃಖವನ್ನು ನಿವಾರಿಸಲು ಏನು ಸಹಾಯ ಮಾಡಬಲ್ಲದು?
12 ವಿಯೋಗನಷ್ಟದ ದುಃಖವನ್ನು ಸಹಿಸಿಕೊಳ್ಳಲು ದೇವರು ತನ್ನ ಜನರಿಗೆ ಸಹಾಯ ಮಾಡುತ್ತಾನೆ. ಒಂದು ಪುನರುತ್ಥಾನವು ಅಲ್ಲಿರುವುದೆಂದು ದೇವರ ವಾಕ್ಯವು ತಿಳಿಸುತ್ತದೆ. ಆದಕಾರಣ ನಾವು, “ನಿರೀಕ್ಷೆ ಇಲ್ಲದವರಂತೆ ದುಃಖಿಸು”ವದಿಲ್ಲ. (1 ಥೆಸಲೊನೀಕ 4:13; ಅಪೊಸ್ತಲರ ಕೃತ್ಯ 24:15) ತೀರಿಹೋದ ಪ್ರಿಯ ವ್ಯಕ್ತಿಯ ಕುರಿತಾದ ದುಃಖಿತ ವಿಚಾರಗಳಿಂದ ಭಾವಪರವಶರಾಗುವ ಬದಲಿಗೆ, ಯೆಹೋವನ ಆತ್ಮವು ನಮಗೆ ಸಮಾಧಾನ ಮತ್ತು ಭರವಸ ಇಡುವಂತೆ ಹಾಗೂ ಆತನ ವಾಕ್ಯದಲ್ಲಿ ವಾಗ್ದಾನಿಸಲ್ಪಟ್ಟ ಆಶ್ಚರ್ಯಕರ ಭವಿಷ್ಯದ ಕುರಿತು ಧ್ಯಾನಿಸುವಂತೆ ಸಹಾಯ ಮಾಡುತ್ತದೆ. ದೇವರ ವಾಕ್ಯವನ್ನು ಓದುವುದರಿಂದಲೂ ಮತ್ತು “ಎಲ್ಲಾ ಸಾಂತ್ವನಗಳ ದೇವರಿಗೆ” ಪ್ರಾರ್ಥಿಸುವುದರಿಂದಲೂ ಆದರಣೆಯು ದೊರಕಬಲ್ಲದು.—2 ಕೊರಿಂಥ 1:3, 4; ಕೀರ್ತನೆ 68:4-6.
13 ದೇವಭಕ್ತನಾದ ಯೋಬನಂತೆ ನಾವು ಸಹಾ, ಪುನರುತ್ಥಾನದ ನಿರೀಕ್ಷೆಯಲ್ಲಿ ಸಾಂತ್ವನವನ್ನು ಪಡಕೊಳ್ಳಬಹುದು. ಅವನು ಉದ್ಗರಿಸಿದ್ದು: “ನೀನು [ಯೆಹೋವ] ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟು ನಿನ್ನ ಕೋಪವು ಇಳಿಯುವ ಪರ್ಯಂತ ನನ್ನನ್ನು ಮರೆಮಾಡಿ ನನಗೆ ಅವಧಿಯನ್ನು ಗೊತ್ತುಮಾಡಿ ಕಡೆಯಲ್ಲಿ ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು. ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? ಹಾಗಾಗುವದಾದರೆ ನನಗೆ ಬಿಡುಗಡೆಯಾಗುವ ತನಕ ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾಯುತ್ತಿರುವೆನು. ನೀನು ಕರೆದರೆ ಉತ್ತರಕೊಡುವೆನು. ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.” (ಯೋಬ 14:13-15) ಒಬ್ಬ ಪ್ರಿಯ ಮಿತ್ರನು ಒಂದು ಪ್ರಯಾಣವನ್ನು ಕೈಕೊಳ್ಳುವಾಗ ಸಾಮಾನ್ಯವಾಗಿ ಕಡು ದುಃಖವು ಅನುಭವಿಸಲ್ಪಡುವದಿಲ್ಲ, ಯಾಕಂದರೆ ನಾವಾತನನ್ನು ಪುನಃ ನೋಡುವ ಅಪೇಕ್ಷೆ ಇದೆ. ಒಬ್ಬ ನಂಬಿಗಸ್ತ ಕ್ರೈಸ್ತನ ಮರಣವನ್ನು ನಾವು ಇದೇ ರೀತಿಯಲ್ಲಿ ವೀಕ್ಷಿಸುವುದಾದರೆ, ಒಂದುವೇಳೆ ನಮ್ಮ ದುಃಖವು ಕಡಿಮೆಯಾಗಬಹುದು. ಅವನಿಗೆ ಐಹಿಕ ನಿರೀಕ್ಷೆ ಇರುವುದಾದರೆ, ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ ಇಲ್ಲಿ ಭೂಮಿಯ ಮೇಲೆ ಅವನು ಮರಣವೆಂಬ ನಿದ್ರೆಯಿಂದ ಎಬ್ಬಿಸಲ್ಪಡುವನು. (ಯೋಹಾನ 5:28, 29; ಪ್ರಕಟನೆ 20:11-13) ಮತ್ತು ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆ ನಮಗಿದ್ದರೆ, ಪುನರುತ್ಥಾನವಾಗಿ ಬರುವ ನಮ್ಮ ಪ್ರಿಯ ಜನರನ್ನು ಸ್ವಾಗತಿಸಲು ನಾವಿಲ್ಲಿ ಇರಬಲ್ಲೆವು.
14. ಇಬ್ಬರು ಕ್ರೈಸ್ತ ವಿಧವೆಯರು ತಮ್ಮ ಗಂಡಂದಿರ ಮರಣದೊಂದಿಗೆ ಹೇಗೆ ನಿಭಾಯಿಸಿದರು?
14 ಒಬ್ಬ ಸಹೋದರಿ ತನ್ನ ಗಂಡನ ಮರಣದ ನಂತರ, ದೇವರ ಸೇವೆಯಲ್ಲಿ ತನ್ನ ಜೀವಿತವನ್ನು ಹೇಗಾದರೂ ಮುಂದರಿಸಲೇ ಬೇಕಾಗಿದೆ ಎಂಬದನ್ನು ತಿಳಿದಿದ್ದಳು. ಅವಳು ‘ಕರ್ತನ ಸೇವೆಯಲ್ಲಿ ಬಹಳಷ್ಟನ್ನು ಮಾಡಿದ್ದಲ್ಲದೆ,’ 800 ಬಟ್ಟೆತುಂಡುಗಳ ತೇಪೆಹೊಲಿದು ಒಂದು ರಜಾಯಿಯನ್ನೂ [ಮೇಲುಹಾಸಿಗೆ] ಮಾಡಿದಳು. (1 ಕೊರಿಂಥ 15:58) “ಅದೊಂದು ಒಳ್ಳೇ ಯೋಜನೆಯಾಗಿತ್ತು” ಅಂದಳಾಕೆ, “ಯಾಕಂದರೆ ನಾನು ಕೆಲಸ ಮಾಡುವಾಗಲ್ಲೆಲ್ಲಾ ರಾಜ್ಯ ಸಂಗೀತ ಮತ್ತು ಬೈಬಲ್ ಟೇಪುಗಳಿಗೆ ಕಿವಿಗೊಡುತ್ತಿದ್ದೆ ಮತ್ತು ಅವು ನನ್ನ ಮನಸ್ಸನ್ನು ತುಂಬುತ್ತಿದ್ದವು.” ಒಬ್ಬ ಅನುಭವಸ್ಧ ಹಿರಿಯ ಮತ್ತು ಅವನ ಪತ್ನಿಯ ಸಂದರ್ಶನೆಯನ್ನು ಆಕೆ ಮೆಚ್ಚಿನಿಂದ ಮರುಕಳಿಸುತ್ತಾಳೆ. ದೇವರು ನಿಜವಾಗಿಯೂ ವಿಧವೆಯರನ್ನು ಲಕ್ಷಿಸುತ್ತಾನೆ ಎಂಬದನ್ನು ಆ ಹಿರಿಯನು ಬೈಬಲ್ನಿಂದ ತೋರಿಸಿಕೊಟ್ಟನು. (ಯಾಕೋಬ 1:27) ಇನ್ನೊಬ್ಬ ಕ್ರೈಸ್ತ ಸ್ತ್ರೀಯು ತನ್ನ ಗಂಡನು ಸತ್ತಾಗ ಸ್ವಾನುಕಂಪಕ್ಕೆ ಎಡೆಗೊಡಲಿಲ್ಲ. ಸ್ನೇಹಿತರ ಬೆಂಬಲವನ್ನು ಅವಳು ಗಣ್ಯಮಾಡಿದಳು ಮತ್ತು ಬೇರೆಯವರಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸತೊಡಗಿದಳು. “ನಾನು ಹೆಚ್ಚೆಚ್ಚು ಬಾರಿ ಪ್ರಾರ್ಥನೆ ಮಾಡತೊಡಗಿದೆ ಮತ್ತು ಯೆಹೋವನೊಂದಿಗೆ ನಿಕಟ ಸಂಬಂಧವನ್ನು ವಿಕಾಸಿಸಿದೆನು” ಎನ್ನುತ್ತಾಳೆ ಆಕೆ. ಹೀಗೆ ದೇವರ ಶಾಶ್ವತವಾದ ಹಸ್ತಗಳ ಆಧಾರವನ್ನು ಪಡೆಯುವುದು ಅದೆಂಥಾ ಆಶೀರ್ವಾದ!
ನಾವು ತಪ್ಪು ಮಾಡುವಾಗ ಸಹಾಯ
15. ಕೀರ್ತನೆ 19:7-13ರ ದಾವೀದನ ಮಾತುಗಳ ಸಾರಾಂಶವೇನು?
15 ಯೆಹೋವನ ನಿಯಮವನ್ನು ನಾವು ಪ್ರೀತಿಸುತ್ತೇವಾದರೂ, ಕೆಲವೊಮ್ಮೆ ನಾವು ತಪ್ಪಿಬೀಳುತ್ತೇವೆ. ಇದು ನಮಗೆ ಮನೋವ್ಯಥೆಯನ್ನು ತರುತ್ತದೆ ಎಂಬದಕ್ಕೆ ಸಂದೇಹವಿಲ್ಲ. ಯಾರಿಗೆ ದೇವರ ನಿಯಮಗಳು, ಮರುನೆನಪುಗಳು, ಕಟ್ಟಳೆಗಳು ಮತ್ತು ನ್ಯಾಯವಿಧಿಗಳು ಬಂಗಾರಕ್ಕಿಂತಲೂ ಹೆಚ್ಚು ಅಪೇಕ್ಷಣೀಯವಾಗಿದ್ದವೋ ಆ ದಾವೀದನಿಗೂ ಹೀಗೆಯೇ ಆಗಿತ್ತು. ಅವನಂದದ್ದು: “ಅವುಗಳ ಮೂಲಕ ನಿನ್ನ ದಾಸನಿಗೆ ಎಚ್ಚರಿಕೆಯಾಗುತ್ತದೆ. ಅವುಗಳನ್ನು ಕೈಕೊಳ್ಳುವದರಿಂದ ಬಹಳ ಫಲವುಂಟಾಗುತ್ತದೆ. ತನ್ನ ತಪ್ಪುಗಳನ್ನೆಲ್ಲಾ ತಿಳುಕೊಳ್ಳುವವನು ಯಾವನು? ಮರೆಯಾದವುಗಳಿಂದ ನನ್ನನ್ನು ನಿರ್ಮಲಮಾಡು. ಅದಲ್ಲದೆ ಬೇಕೆಂದು ಪಾಪಮಾಡದಂತೆ ನಿನ್ನ ದಾಸನನ್ನು ಕಾಪಾಡು. ಅಂಥ ಪಾಪಗಳು ನಮ್ಮನ್ನು ಆಳದಿರಲಿ. ಆಗ ನಾನು ತಪ್ಪಿಲ್ಲದವನಾಗಿ ಮಹಾದ್ರೋಹಕ್ಕೆ ಒಳಗಾಗುವದಿಲ್ಲ.” (ಕೀರ್ತನೆ 19:7-13) ನಾವೀ ಮಾತುಗಳನ್ನು ವಿಶೇಷ್ಲಣೆ ಮಾಡೋಣ.
16. ನಾವು ದುರಹಂಕಾರವನ್ನು ಯಾಕೆ ವರ್ಜಿಸಬೇಕು?
16 ದುರಹಂಕಾರದ ಕೃತ್ಯಗಳು ತಪ್ಪುಗಳಿಗಿಂತ ಹೆಚ್ಚು ಗಂಭೀರತರದ ಪಾಪಗಳಾಗಿವೆ. ಸೌಲನು ರಾಜಪದದಿಂದ ತಿರಸ್ಕರಿಸಲ್ಪಟ್ಟದ್ದು ದುರಹಂಕಾರದಿಂದ ಸರ್ವಾಂಗ ಹೋಮ ಮಾಡಿದಕ್ಕಾಗಿ ಮತ್ತು ಅಮಾಲೇಕ್ಯ ಅರಸನಾದ ಆಗಾಗನ ಜೀವವನ್ನೂ ಶ್ರೇಷ್ಠವಾದ ಎಲ್ಲಾ ಪದಾರ್ಥಗಳನ್ನೂ ಉಳಿಸಿದ್ದಕ್ಕಾಗಿ; ಯಾಕಂದರೆ ದೇವರು ಅವನಿಗೆ ಅಮಾಲೇಕ್ಯರನ್ನು ಸಂಪೂರ್ಣವಾಗಿ ನಾಶಮಾಡಿಬಿಡಲು ಆಜ್ಞಾಪಿಸಿದ್ದನು. (1 ಸಮುವೇಲ 13:8-14; 15:8-19) ರಾಜ ಉಜ್ಜೀಯನು ದುರಭಿಮಾನದಿಂದ ಯಾಜಕಸೇವೆಯನ್ನು ಆಕ್ರಮಿಸಿದ ಕಾರಣ ಕುಷ್ಠರೋಗದಿಂದ ಬಾಧಿಸಲ್ಪಟ್ಟನು. (2 ಪೂರ್ವಕಾಲ 26:16-21) ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ಒಯ್ಯುತ್ತಿದ್ದಾಗ ಎತ್ತುಗಳು ಎಡವಿದರ್ದಿಂದ ಬಂಡಿಯು ಉರುಳಲಿಕ್ಕಿತ್ತು, ಆಗ ಉಜ್ಜನು ಅಗೌರವದಿಂದ ಕೈಚಾಚಿ ಅದನ್ನು ಹಿಡಿಯಲು ಪ್ರಯತ್ನಿಸಿದ್ದಕ್ಕಾಗಿ ದೇವರು ಅವನನ್ನು ಹತಮಾಡಿದ್ದನು. (2 ಸಮುವೇಲ 6:6, 7) ಆದುದರಿಂದ, ಏನು ಮಾಡಬೇಕೆಂದು ಒಂದುವೇಳೆ ನಮಗೆ ತಿಳಿಯದೆ ಇದ್ದರೆ ಅಥವಾ ಅದನ್ನು ಮಾಡುವ ಅಧಿಕಾರ ನಮಗುಂಟೋ ಇಲ್ಲವೋ ಎಂದು ಗೊತ್ತಿಲ್ಲವಾದರೆ, ಅಭಿಮಾನಮಿತಿಯನ್ನು ನಾವು ತೋರಿಸಬೇಕು ಮತ್ತು ವಿವೇಚನೆಯುಳ್ಳವರನ್ನು ವಿಚಾರಿಸಿ ತಿಳಿಯಬೇಕು. (ಜ್ಞಾನೋಕ್ತಿ 11:2; 13:10) ನಾವೆಂದಾದರೂ ದುರಹಂಕಾರಿಗಳಾಗಿದ್ದರೆ, ಕ್ಷಮೆಗಾಗಿ ಪ್ರಾರ್ಥಿಸಬೇಕು ಮತ್ತು ಮುಂದಕ್ಕೆ ಆ ರೀತಿಯಲ್ಲಿ ವರ್ತಿಸದಂತೆ ನಮ್ಮನ್ನು ಕಾಯಲು ದೇವರಿಂದ ಸಹಾಯವನ್ನು ಕೋರಬೇಕು.
17. ಬಚ್ಚಿಟ್ಟ ಪಾಪಗಳು ಒಬ್ಬನ ಮೇಲೆ ಹೇಗೆ ಪ್ರಭಾವಬೀರುತ್ತವೆ, ಆದರೂ ಕ್ಷಮೆ ಮತ್ತು ಪರಿಹಾರವನ್ನು ಹೇಗೆ ಪಡೆಯ ಸಾಧ್ಯವಿದೆ?
17 ಬಚ್ಚಿಡುವ ಪಾಪಗಳು ಸಹಾ ಮನೋವ್ಯಧೆಗೆ ಕಾರಣವಾಗಬಹುದು. ಕೀರ್ತನೆ 32:1-5ಕ್ಕನುಸಾರವಾಗಿ, ದಾವೀದನು ಪಾಪವನ್ನು ಅಡಗಿಸಲು ಪ್ರಯತ್ನಿಸಿದ್ದನು, ಆದರೆ ಅವನಂದದ್ದು: “ನಾನು ನನ್ನ ಪಾಪವನ್ನು ಅರಿಕೆ ಮಾಡದೆ ಇದ್ದಾಗ ದಿನವೆಲ್ಲಾ ನರಳುವದರಿಂದ ನನ್ನ ಎಲುಬುಗಳು ಸವೆದು ಹೋಗುತ್ತಿದ್ದವು. ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು. ಬೇಸಗೆಯ ನೀರಿನಂತೆ ನನ್ನ ಶರೀರದ ಸಾರವೆಲ್ಲಾ ಬತ್ತಿಹೋಯಿತು.” ಒಂದು ದೋಷಿ ಮನಸ್ಸಾಕ್ಷಿಯನ್ನು ಅದುಮಿಹಿಡಿಯುವ ಪ್ರಯತ್ನದಲ್ಲಿ ದಾವೀದನು ಬಳಲಿ ಹೋದನು, ಮತ್ತು ಮನೋಬೇಗುದಿಯು ಅವನ ಶಕ್ತಿಯನ್ನೆಲ್ಲಾ ಉಡುಗಿಸಿತು, ಅನಾವೃಷ್ಟಿಯಲ್ಲಿ ಅಥವಾ ಬೇಸಗೆಯ ಒಣಶಾಕದಲ್ಲಿ ಒಂದು ವೃಕ್ಷವು ತನ್ನ ಜೀವ-ದಾಯಕ ತೇವವನ್ನು ಕಳಕೊಳ್ಳುವ ಹಾಗೆ. ಅವನು ತನ್ನ ಪಾಪವನ್ನು ಅರಿಕೆ ಮಾಡದೆ ಇದ್ದಾಗ, ಮಾನಸಿಕವಾಗಿ ಮತ್ತು ದೈಹಿಕವಾಗಿ ಕೆಟ್ಟ ಪರಿಣಾಮಗಳನ್ನು ಅನುಭವಿಸಿರಬೇಕು ಮತ್ತು ಸಂತೋಷವನ್ನು ಕಳಕೊಂಡಿರಬೇಕು. ದೇವರಿಗೆ ಅರಿಕೆ ಮಾಡಿಕೊಳ್ಳುವ ಮೂಲಕ ಮಾತ್ರವೇ ಪಾಪಕ್ಷಮೆಯೂ ಪರಿಹಾರವೂ ಉಂಟಾಗುತ್ತದೆ. ದಾವೀದನು ಅಂದದ್ದು: “ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು. . . ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧ ಪಾಪಗಳನ್ನು ಪರಿಹರಿಸಿಬಿಟ್ಟೆ.” ಕ್ರೈಸ್ತ ಹಿರಿಯರಿಂದ ಪ್ರೀತಿಯುಳ್ಳ ಸಹಾಯವು ಆತ್ಮಿಕ ಸ್ವಾಸ್ಥ್ಯವನ್ನು ಪಡೆಯಲು ನೆರವಾಗಬಲ್ಲದು.—ಜ್ಞಾನೋಕ್ತಿ 28:13; ಯಾಕೋಬ 5:13-20.
18. ಪಾಪದ ಪರಿಣಾಮಗಳು ಬಹಳ-ಕಾಲ ಬಾಳಬಲ್ಲವು ಎಂಬದಕ್ಕೆ ಯಾವ ರುಜುವಾತು ಇದೆ, ಆದರೆ ಅಂಥ ಪರಿಸ್ಥಿತಿಗಳಲ್ಲಿ ಯಾವುದು ಸಾಂತ್ವನದ ಮೂಲವಾಗಬಲ್ಲದು?
18 ಪಾಪದ ಪರಿಣಾಮಗಳು ಬಹಳ-ಕಾಲ ಬಾಳಬಹುದು. ದಾವೀದನಿಗೆ ಅದು ಸಂಭವಿಸಿತು. ಅವನು ಬತ್ಷೆಬೆಯೊಂದಿಗೆ ವ್ಯಭಿಚಾರಗೈದನು, ಅವಳ ಗಂಡನು ಸಾಯುವಂತೆ ಹಂಚಿಕೆ ಹೂಡಿದನು, ಬಸಿರಾಗಿದ್ದ ವಿಧವೆಯನ್ನು ಮದುವೆಯಾದನು. (2 ಸಮುವೇಲ 11:1-27) ರಾಜ್ಯದ ಒಡಂಬಡಿಕೆ, ದಾವೀದನ ಪಶ್ಚಾತ್ತಾಪ ಮತ್ತು ಅವನು ಇತರರನ್ನು ಕನಿಕರದಿಂದ ಉಪಚರಿಸಿದ ಕಾರಣಗಳಿಂದಾಗಿ ದೇವರು ಅವನಿಗೆ ಕರುಣೆಯನ್ನು ತೋರಿಸಿದ್ದಾಗ್ಯೂ, ದಾವೀದನು ‘ತನ್ನ ಮನೆಯವರಿಂದಲೇ ಕೇಡನ್ನು’ ಅನುಭವಿಸಬೇಕಾಯಿತು. (2 ಸಮುವೇಲ 12:1-12) ಆ ಜಾರಜ ಮಗುವು ಸತ್ತು ಹೋಯಿತು. ದಾವೀದನ ಮಗನಾದ ಅಮ್ನೋನನು ತನ್ನ ಮಲತಂಗಿ ತಾಮಾರಳ ಮೇಲೆ ಬಲಾತ್ಕಾರ ಸಂಭೋಗ ನಡಿಸಿದನು ಮತ್ತು ಅವಳ ಅಣ್ಣ ಅಬ್ಷಾಲೋಮನ ಅಪ್ಪಣೆಯ ಪ್ರಕಾರ ಕೊಲ್ಲಲ್ಪಟ್ಟನು. (2 ಸಮುವೇಲ 12:15-23; 13:1-33) ದಾವೀದನ ಉಪಪತ್ನಿಯರನ್ನು ಸಂಗಮಿಸಿದ ಮೂಲಕ ಅಬ್ಷಾಲೋಮನು ದಾವೀದನನ್ನು ಅಪಮಾನಗೊಳಿಸಿದನು. ತಂದೆಯ ರಾಜ್ಯವನ್ನು ಕಿತ್ತುಕೊಳ್ಳ ಪ್ರಯತ್ನಿಸಿದನು, ಆದರೆ ಕೊಲ್ಲಲ್ಪಟ್ಟನು. (2 ಸಮುವೇಲ 15:1–18:33) ಪಾಪಕ್ಕೆ ಇನ್ನೂ ಫಲಾಂತರಗಳಿವೆ. ಉದಾಹರಣೆಗೆ, ಒಬ್ಬ ಬಹಿಷ್ಕೃತ ದುಷ್ಕರ್ಮಿಯು ಪಶ್ಚಾತ್ತಾಪ ಪಡಬಹುದು ಮತ್ತು ಸಭೆಗೆ ಪುನಃಸ್ಥಾಪಿಸಲ್ಪಡಬಹುದು, ಆದರೆ ಪಾಪದ ಫಲಿತಾಂಶವಾಗಿ ಬಂದ ಕಲಂಕಿತ ಹೆಸರನ್ನು ಮತ್ತು ಮಾನಸಿಕ ಗಾಯವನ್ನು ಪರಿಹರಿಸಲು ಅವನಿಗೆ ವರ್ಷಗಳು ತಗಲಬಹುದು. ಈ ಮಧ್ಯೆ ಯೆಹೋವನ ಕ್ಷಮೆ ಮತ್ತು ಆತನ ಶಾಶ್ವತವಾದ ಹಸ್ತಗಳ ಬೆಂಬಲವು ಇರುವುದು ಅದೆಷ್ಟು ಸಾಂತ್ವನಕಾರಿಯು!
ನಮ್ಮ ಮೇಲಿರುವ ಒತ್ತಡಗಳಿಂದ ಪರಿಹಾರ
19. ಕಷ್ಟಕರವಾದ ಶೋಧನೆಗೆ ಗುರಿಯಾದಾಗ ದೇವರಾತ್ಮವು ಹೇಗೆ ಸಹಾಯ ಮಾಡಬಲ್ಲದು?
19 ಕಷ್ಟಕರವಾದ ಶೋಧನೆಗಳಿಗೆ ಗುರಿಯಾದಾಗ, ಒಂದು ನಿರ್ಣಯವನ್ನು ಮಾಡಲು ಮತ್ತು ಅದನ್ನು ಪೂರೈಸಲು ಸಾಕಷ್ಟು ಬಲವೂ ವಿವೇಕವೂ ಒಂದುವೇಳೆ ನಮಗಿಲ್ಲದಿರಬಹುದು. ಅಂಥ ಸಂದರ್ಭದಲ್ಲಿ ದೇವರಾತ್ಮವು, “ನಮ್ಮ ಅಶಕ್ತಿಯನ್ನು ನೋಡಿ ಸಹಾಯ ಮಾಡುತ್ತದೆ ಹೇಗಂದರೆ ನಾವು ತಕ್ಕ ಪ್ರಕಾರ ಏನು ಬೇಡಿಕೊಳ್ಳಬೇಕೋ ಅದನ್ನು ಪವಿತ್ರಾತ್ಮವು ತಾನೇ ಮಾತಿಲ್ಲದಂಥ ನರಳಾಟದಿಂದ ನಮಗಾಗಿ ಬೇಡಿಕೊಳ್ಳುತ್ತದೆ.” (ರೋಮಾಪುರ 8:26) ಯೆಹೋವನು ಒಂದುವೇಳೆ ಪರಿಸ್ಥಿತಿಗಳಲ್ಲಿ ಬದಲಾವಣೆಯನ್ನು ತಂದರೆ, ನಾವದಕ್ಕಾಗಿ ಕೃತಜ್ಞರಾಗಿರುವೆವು. ಆದರೂ, ಆತನ ಹಸ್ತವು ನಮ್ಮನ್ನು ಇನ್ನೊಂದು ರೀತಿಯಲ್ಲಿ ರಕ್ಷಿಸಬಹುದು. ವಿವೇಕಕ್ಕಾಗಿ ನಾವು ಪ್ರಾರ್ಥಿಸುವುದಾದರೆ, ನಾವೇನು ಮಾಡಬೇಕೆಂದು ಯೆಹೋವನು ತನ್ನ ಆತ್ಮದ ಮೂಲಕ ಸೂಚಿಸಬಹುದು ಮತ್ತು ಅದನ್ನು ಮಾಡಲು ಬೇಕಾದ ಶಕ್ತಿಯನ್ನು ಒದಗಿಸಬಹುದು. (ಯಾಕೋಬ 1:5-8) ಆತನ ಸಹಾಯದಿಂದ ನಾವು, “ನಾನಾ ಕಷ್ಟಗಳಲ್ಲಿ ದುಃಖಿಸುವವರಾಗಿರುವಾಗಲೂ” ತಾಳಿಕೊಂಡಿರಬಲ್ಲೆವು ಮತ್ತು ಶೋಧಿತವಾದ ಮತ್ತು ಬಲವಾದ ನಂಬಿಕೆಯುಳ್ಳವರಾಗಿ ಪಾರಾಗುವೆವು.—1 ಪೇತ್ರ 1:6-8.
20. ನಾವು ನಿಜವಾಗಿಯೂ ಯೆಹೋವನ ಶಾಶ್ವತವಾದ ಹಸ್ತಗಳನ್ನು ನಮ್ಮ ಆಧಾರವಾಗಿ ಮಾಡಿದರೆ ಏನನ್ನು ಆನಂದಿಸುವೆವು?
20 ಆದುದರಿಂದ ಪ್ರಾರ್ಥನೆಯಲ್ಲಿ ದೇವರ ಕಡೆಗೆ ತಿರುಗುವುದಕ್ಕೆ ಎಂದೂ ದಣಿಯದಿರೋಣ. “ನನ್ನ ದೃಷ್ಟಿ ಯಾವಾಗಲೂ ಯೆಹೋವನಲ್ಲಿದೆ. ಆತನೇ ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸುವವನು” ಅಂದನು ದಾವೀದನು, “ನಾನು ಒಬ್ಬಂಟಿಗನೂ ಬಾಧೆಪಡುವವನೂ ಆಗಿದ್ದೇನೆ; ನೀನು ಕಟಾಕ್ಷಏಟ್ಟು ನನ್ನನ್ನು ಕರುಣಿಸು. ನನ್ನ ಮನೋವ್ಯಥೆಗಳನ್ನು ನಿವಾರಿಸು. ಸಂಕಟಗಳಿಂದ ನನ್ನನ್ನು ಬಿಡಿಸು. ನಾನು ಕುಗ್ಗಿರುವುದನ್ನೂ ಕಷ್ಟಪಡುವುದನ್ನೂ ನೋಡಿ ನನ್ನ ಎಲ್ಲಾ ಪಾಪಗಳನ್ನು ಪರಿಹರಿಸು.” (ಕೀರ್ತನೆ 25:15-18) ನಾವು ನಿಜವಾಗಿಯೂ ಯೆಹೋವನ ಶಾಶ್ವತವಾದ ಹಸ್ತಗಳನ್ನು ನಮ್ಮ ಆಧಾರವಾಗಿ ಮಾಡಿಕೊಂಡರೆ, ದಾವೀದನಂತೆ ನಾವೂ, ದೈವಿಕ ಬಿಡುಗಡೆ, ಪ್ರಸನ್ನತೆ ಮತ್ತು ಕ್ಷಮೆಯಲ್ಲಿ ಆನಂದಿಸುವೆವು. (w91 10/1)
[ಅಧ್ಯಯನ ಪ್ರಶ್ನೆಗಳು]
a ಮಾನಸಿಕ ಖಿನ್ನತೆಯ ಕುರಿತ ಲೇಖನಗಳನ್ನು ಅವೇಕ್! ಒಕ್ಟೋಬರ 22, 1987, ಪುಟ 2-16 ಮತ್ತು ನವಂಬರ 8, 1987, ಪುಟ 12-16ರಲ್ಲಿ ನೋಡಿರಿ
ಹೇಗೆ ಪ್ರತಿಕ್ರಿಯಿಸುವಿರಿ?
◻ ಅಸ್ವಸ್ಥರಾಗಿರಬಹುದಾದ ತನ್ನ ಸೇವಕರಿಗೆ ಯೆಹೋವನು ಹೇಗೆ ಸಹಾಯ ಮಾಡುತ್ತಾನೆ?
◻ ಮಾನಸಿಕ ಖಿನ್ನತೆಯನ್ನು ನಿಭಾಯಿಸಲು ಪ್ರಯತ್ನಿಸುವಾಗ ಏನು ಸಹಾಯಕಾರಿಯಾಗಬಹುದು?
◻ ಪ್ರಿಯಜನರಲ್ಲಿ ಒಬ್ಬರ ಮರಣದ ದುಃಖವನ್ನು ಶಮನಗೊಳಿಸಲು ಏನು ಸಹಾಯಕಾರಿಯಾಗಬಲ್ಲದು?
◻ ತಮ್ಮ ಪಾಪವನ್ನು ಬಚ್ಚಿಡುವವರಿಗೆ ಹೇಗೆ ಪರಿಹಾರವು ದೊರೆಯಬಹುದು?
◻ ಯೆಹೋವನ ಜನರು ಕಷ್ಟಕರವಾದ ಶೋಧನೆಗೆ ಗುರಿಯಾದಾಗ ಯಾವ ಸಹಾಯವು ಅಲ್ಲಿದೆ?
[ಪುಟ 16,17 ರಲ್ಲಿರುವಚಿತ್ರ]
ದೇವಭಕ್ತ ಯೋಬನಂತೆ ನಾವು ಪುನರುತ್ಥಾನದ ನಿರೀಕ್ಷೆಯಲ್ಲಿ ಸಾಂತ್ವನವನ್ನು ಪಡಕೊಳ್ಳ ಸಾಧ್ಯವಿದೆ