“ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸಬೇಡಿರಿ”
“ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸಬೇಡಿರಿ.” ಹೀಗೆಂದು ಹೇಳಿದನು ಅಪೊಸ್ತಲ ಪೌಲನು. (ಎಫೆಸ 6:4) ಎಲ್ಲಿ ಹೆತ್ತವರು ಕೈಗಾರಿಕೋದ್ಯಮ ಸಮಾಜದ ಒತ್ತಡ ಮತ್ತು ಬಿಗುಪುಗಳಿಗೆ ಗುರಿಯಾಗಿದ್ದಾರೋ ಅಂಥಾ ಪಾಶ್ಚಿಮಾತ್ಯ ದೇಶಗಳಲ್ಲಿ, ಮಕ್ಕಳೊಡನೆ ದಯೆಯಿಂದ ವ್ಯವಹರಿಸುವುದು ಅವರಿಗೆ ಯಾವಾಗಲೂ ಸುಲಭ ಸಾಧ್ಯವಲ್ಲ. ವಿಕಾಸಗೊಳ್ಳುತ್ತಿರುವ ದೇಶಗಳಲ್ಲಿ ಸಹಾ ಮಕ್ಕಳ ಪರಿಪಾಲನೆಯು ಕಡಿಮೆ ಪಂಥಾಹ್ವಾನದ್ದಲ್ಲ. ಪಶ್ಚಿಮ ದೇಶಗಳಿಗಿಂತ ಇವರ ಜೀವನ ಗತಿಯು ಒಂದುವೇಳೆ ನಿಧಾನವಿರಬಹುದು, ನಿಜ. ಆದರೆ ದೀರ್ಘಕಾಲದಿಂದಿರುವ ಪದ್ಧತಿಗಳು ಮತ್ತು ಸಂಪ್ರದಾಯಗಳು, ಹೆತ್ತವರನ್ನು ತಮ್ಮ ಮಕ್ಕಳೊಂದಿಗೆ ಬಹಳ ಮಟ್ಟಿಗೆ ನಿಶ್ಚಯವಾಗಿಯೂ ಆಶಾಭಂಗ ಮತ್ತು ಕೋಪವನ್ನು ತರುವ ರೀತಿಯಲ್ಲಿ ವ್ಯವಹರಿಸುವಂತೆ ಪ್ರಭಾವಿಸ ಸಾಧ್ಯವಿದೆ.
ಕೆಲವು ವಿಕಾಸಗೊಳ್ಳುವ ದೇಶಗಳಲ್ಲಿ ಮಕ್ಕಳನ್ನು ಅತ್ಯಂತ ಕೀಳಾದ ಮಟ್ಟದಲ್ಲಿ ಗಣನೆಗೆ ತರಲಾಗುತ್ತದೆ ಮತ್ತು ಮಾನ್ಯ ಮಾಡಲಾಗುತ್ತದೆ. ಕೆಲವು ಸಂಸ್ಕೃತಿಗಳಲ್ಲಾದರೋ ಮಕ್ಕಳ ಮೇಲೆ, ಬೆದರಿಕೆಯ ಮತ್ತು ಅಧಿಕಾರದರ್ಪದ ಆಧಿಪತ್ಯವನ್ನು ನಡಿಸಲಾಗುತ್ತದೆ, ಅವರೆಡೆಗೆ ಕಿರಿಚಿ, ಮುಖಭಂಗ ಮಾಡಲ್ಪಡುತ್ತದೆ. ಪ್ರೌಢರು ತಮ್ಮ ಮಗುವಿಗೆ, “ದಯವಿಟ್ಟು” ಮತ್ತು “ಉಪಕಾರ” ಎಂಬ ಅನುನಯ ವಾಕ್ಯಗಳನ್ನು ಬಿಡಿ, ಅವರೊಡನೆ ಒಂದು ದಯೆಯುಳ್ಳ ಮಾತಾಡುವದನ್ನು ಕೇಳುವದೂ ಬಹಳ ಅಪರೂಪ. ತಂದೆಗಳು ತಮ್ಮ ಅಧಿಕಾರವನ್ನು ಭುಜಬಲದಲ್ಲಿ, ಕಠಿಣ ಶಬ್ದಗಳು ಕೂಡಿರುವ ಪೆಟ್ಟಿನ ಬಲದಿಂದಲೇ ಸ್ಥಾಪಿಸಲು ಬಯಸುತ್ತಾರೆ.
ಇನ್ನು ಕೆಲವು ಆಫ್ರಿಕನ್ ಸಂಸ್ಕೃತಿಗಳಲ್ಲಿ, ಒಂದು ಮಗುವು ತಾನಾಗಿಯೇ ಒಬ್ಬ ಪ್ರೌಢನಿಗೆ ವಂದನೆ ಹೇಳುವುದನ್ನು ಸಹಾ, ವಿನಯವಿಲ್ಲದ ವಿಷಯವಾಗಿ ನೋಡಲಾಗುತ್ತದೆ. ತಲೆಯ ಮೇಲೆ ಭಾರವಾದ ಹೊರೆಗಳನ್ನು ಹೊತ್ತಿರುವ ಎಳೆಯರು, ಪ್ರೌಢರ ಒಂದು ಗುಂಪನ್ನು ವಂದಿಸಲಿಕ್ಕೆ ಅನುಮತಿಯನ್ನು ಯಾಚಿಸುತ್ತಾ ತಾಳ್ಮೆಯಿಂದ ನಿಂತಿರುವುದೇನೂ ಅಲ್ಲಿ ಅಸಾಮಾನ್ಯ ಸಂಗತಿಯಲ್ಲ. ಪ್ರೌಢರು, ಎಳೇಯುವಕರನ್ನು ದುರ್ಲಕ್ಷಿಸುತ್ತಾ ತಮ್ಮ ಹರಟೆಯಲ್ಲೀ ತಲ್ಲೀನರಾಗಿ, ಕಡೆಗೆ ತಮ್ಮ ಮನಬಂದಾಗ ಅವರು ವಂದನೆ ಹೇಳುವಂತೆ ಅನುಮತಿಸುತ್ತಾರೆ. ಆ ವಂದನೆಗಳನ್ನು ನುಡಿದಾದ ನಂತರವೇ ಮಕ್ಕಳು ಮುಂದೆ ಹೋಗಲು ಬಿಡಲ್ಪಡುವರು.
ಮಕ್ಕಳ ಹಿತಚಿಂತನೆಗೆ ವಿರುದ್ಧವಾಗಿ ಕಾರ್ಯನಡಿಸುವ ಇನ್ನೊಂದು ವಿಷಯವು ಬಡತನವೇ. ಎಳೆಯರ ಆರೋಗ್ಯ ಮತ್ತು ವಿದ್ಯಾಭ್ಯಾಸವನ್ನು ಬಲಿಕೊಟ್ಟು, ಶಿಶು-ಕಾರ್ಮಿಕರಾಗಿ ದುಡಿಸಿ, ಅವರನ್ನು ದೋಚಲಾಗುತ್ತಿದೆ. ಮನೆಯಲ್ಲೂ ಮಕ್ಕಳ ಮೇಲೆ ಅಸಮಂಜಸವಾಗಿ ಭಾರವಾದ ಮನೆಗೆಲಸದ ಹೊರೆಯು ಹಾಕಲ್ಪಡಬಹುದು. ಮತ್ತು ಗ್ರಾಮೀಣ ಕ್ಷೇತ್ರಗಳ ಕುಟುಂಬಗಳು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ದೊಡ್ಡ ಶಹರಗಳಿಗೆ ಅವರ ಸಂಬಂಧಿಕರ ಪಾಲನೆಯ ಕೆಳಗೆ ಕಳುಹಿಸುವಾಗ, ಅಲ್ಲಿ ಅವರನ್ನು ಕಾರ್ಯತಃ ಗುಲಾಮರಂತೆ ಪ್ರಯೋಗಿಸಲಾಗುತ್ತದೆ. ಈ ಎಲ್ಲಾ ತುಚ್ಛ ಉಪಚಾರವು ಮಕ್ಕಳಿಗೆ ಕೋಪವನ್ನೆಬ್ಬಿಸುತ್ತದೆ, ನಿಶ್ಚಯ!
‘ಕೋಪವನ್ನೆಬ್ಬಿಸುವುದು’ ಎಂಬದರ ಅರ್ಥ
ಕೆಲವು ಹೆತ್ತವರು ಫಲಿತಾಂಶಗಳ ಪರಿವೆಯೇ ಇಲ್ಲದೆ, ಜನಪ್ರಿಯವಾದ ಮಕ್ಕಳ-ಪಾಲನೆ ಪೋಷಣೆ ಪದ್ಧತಿಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಆದರೂ, ಹೆತ್ತವರು ತಮ್ಮ ಮಕ್ಕಳ ಕೋಪವನ್ನೆಬ್ಬಿಸಬಾರದೆಂದು ದೇವರ ವಾಕ್ಯವು ಹೇಳಿರುವುದು ಸಕಾರಣದಿಂದಲೇ. “ಕೋಪವನ್ನೆಬ್ಬಿಸಬೇಡಿರಿ” ಎಂಬದು ಮೂಲ ಗ್ರೀಕಿನಲ್ಲಿ “ಸಿಟ್ಟೇರುವಂತೆ ಚಿತಾಯಿಸದಿರು” ಎಂಬ ಅಕ್ಷರಾರ್ಥವುಳ್ಳದ್ದಾಗಿದೆ. (ಕಿಂಗ್ಡಂ ಇಂಟರ್ಲಿನ್ಯರ್) ರೋಮಾಪುರ 10:19ರಲ್ಲಿ ಅದೇ ಕ್ರಿಯಾಪದವು “ತೀವ್ರ ಸಿಟ್ಟಿಗೆಬ್ಬಿಸುವಿಕೆ”ಯಾಗಿ ತರ್ಜುಮೆಯಾಗಿದೆ.
ಹೀಗೆ, ಟುಡೇಸ್ ಇಂಗ್ಲಿಷ್ ವರ್ಶನ್ ಹೇಳುವದು: “ನಿಮ್ಮ ಮಕ್ಕಳಿಗೆ ಕೋವನ್ನೆಬ್ಬಿಸುವ ರೀತಿಯಲ್ಲಿ ಉಪಚರಿಸಬೇಡಿರಿ.” ತದ್ರೀತಿ ಜೆರೂಸಲೇಮ್ ಬೈಬಲ್ ಹೇಳುವದು: “ನಿಮ್ಮ ಮಕ್ಕಳನ್ನು ಕೋಪಿಸಿಕೊಳ್ಳುವಂತೆ ಹೊಡೆದೆಬ್ಬಿಸಬೇಡಿರಿ.” ಇಲ್ಲಿ ಬೈಬಲು, ಹೆತ್ತವರು ಅಪೂರ್ಣತೆಯ ಕಾರಣ ಬೇಹುಷಾರಿನಿಂದ ತಮ್ಮ ಮಗುವಿಗೆ ಹುಟ್ಟಿಸುವ ಚಿಕ್ಕಪುಟ್ಟ ಸಿಟ್ಟುಗಳ ಕುರಿತು ಮಾತಾಡುವದಿಲ್ಲ, ನೀತಿಯಿಂದ ಅನ್ವಯಿಸಲ್ಪಡುವ ಶಿಸ್ತನ್ನೂ ಅದು ಖಂಡಿಸುವುದಿಲ್ಲ. ಲ್ಯಾಂಗ್ಸ್ ಕಾಮೆಂಟ್ರಿ ಆನ್ ದ ಹೋಲಿ ಸ್ಕ್ರಿಪ್ಚರ್ಸ್ ಅನುಸಾರ ಈ ಬೈಬಲ್ ವಚನವು, “ಮಕ್ಕಳನ್ನು ವಿರೋಧ, ಎದುರಾಟ ಮತ್ತು ನಿಷ್ಠುರದೋರುವ ಜುಗುಪ್ಸೆ ಮತ್ತು ಪಾಶಕ್ಕೆ ಚಿತಾಯಿಸುವುದಕ್ಕಾಗಿ . . . ಅವರನ್ನು ದುಡುಕಿನಿಂದ, ಒರಟಾಗಿ, ದುಮ್ಮಾನದಿಂದ ಉಪಚರಿಸುವುದರ” ಕುರಿತು ಹೇಳಿಯದೆ.
ಶಿಕ್ಷಕ ಜೆ. ಎಸ್. ಫಾರಂಟ್ ಅವಲೋಕಿಸಿದ್ದು: “ನಿಜಸಂಗತಿಯೇನಂದರೆ ಮಕ್ಕಳು ಮನುಷ್ಯರು. ಸಸ್ಯಗಳಂತೆ ಅವರು ತಮ್ಮ ಪರಿಸರಕ್ಕೆ ಜಡಪ್ರವೃತ್ತಿ ತೋರಿಸುವುದಿಲ್ಲ. ಅವರು ಪ್ರತಿಕ್ರಿಯಿಸುತ್ತಾರೆ.” ಮತ್ತು ಹೆಚ್ಚಾಗಿ, ಅನ್ಯಾಯದ ಉಪಚಾರಕ್ಕೆ ಪ್ರತಿಕ್ರಿಯೆಯಾಗಿ ಆತ್ಮಿಕ ಮತ್ತು ಭಾವೂದ್ರೇಕ ಅನಾಹುತಗಳು ಫಲಿಸುತ್ತವೆ. ಪ್ರಸಂಗಿ 7:7 ಹೇಳುವುದು: “ಕಸುಕೊಳ್ಳುವದು ಜ್ಞಾನಿಗೆ ಬುದ್ಧಿಗೇಡು.”
ದೇವರ ಶಿಸ್ತಿನಲ್ಲಿ ಮಕ್ಕಳನ್ನು ಬೆಳೆಸುವುದು
ತಮ್ಮ ಮಕ್ಕಳು ಸತ್ಯದಲ್ಲಿ ನಡಿಯುತ್ತಾ ಮುಂದೆ ಸಾಗಬೇಕೆಂದು ಬಯಸುವ ಹೆತ್ತವರು ಅವರ ಬೆಳವಣಿಗೆಯ ವಿಧಾನಕ್ಕಾಗಿ ಸಾಂಸ್ಕೃತಿಕ ಪದ್ಧತಿಗಳು ಮತ್ತು ಸಂಪ್ರದಾಯಗಳು ಮಾತ್ರವೇ ನಿರ್ಧಾರಕ ಮುಖಗಳಾಗಿ ಇರುವಂತೆ ಬಿಡಬಾರದು. (3 ಯೋಹಾನ 4 ಹೋಲಿಸಿ.) ಮಕ್ಕಳನ್ನು ಕೋಪವೆಬ್ಬಿಸುವ ಕುರಿತು ಹೆತ್ತವರನ್ನು ಎಚ್ಚರಿಸಿದ ಬಳಿಕ, ಪೌಲನು ಕೂಡಿಸಿದ್ದು: “ಯೆಹೋವನ ಮಾನಸಿಕ ಕ್ರಮದಿಂದಲೂ ಶಿಸ್ತಿನಿಂದಲೂ ಅವರನ್ನು ಸಾಕಿಸಲಹಿರಿ.” (ಎಫೆಸ 6:4, NW) ಹೀಗೆ ಯೆಹೋವನ ಮಟ್ಟಗಳು, ಸ್ಥಳೀಕ ಪದ್ಧತಿಗಳನ್ನು ಮತ್ತು ನೋಟಗಳನ್ನು ತಳ್ಳಿಹಾಕುತ್ತವೆ.
ನಿರ್ದಿಷ್ಟ ದೇಶಗಳಲ್ಲಿ ಮಕ್ಕಳನ್ನು ತುಚ್ಛವಾಗಿ ಅಥವಾ ಗುಲಾಮ ಚಾಕರರಾಗಿ ಉಪಚರಿಸುವುದು ಸಾಮಾನ್ಯವಾಗಿದೆಯಾದರೂ, ಬೈಬಲು ಕೀರ್ತನೆ 127:3ರಲ್ಲಿ ಹೇಳುವುದು: “ಪುತ್ರ ಸಂತಾನವು ಯೆಹೋವನಿಂದ ಬಂದ ಸ್ವಾಸ್ಥ್ಯವು. ಗರ್ಭಫಲವು ಆತನ ಬಹುಮಾನವೇ.” ಹೆತ್ತವನೊಬ್ಬನು ಆ ಸ್ವಾಸ್ಥ್ಯವನ್ನು ಅಪಪ್ರಯೋಗ ಮಾಡಿದಲ್ಲಿ ಅವನು ದೇವರೊಂದಿಗೆ ಸುಸಂಬಂಧವನ್ನು ಕಾಪಾಡಿಕೊಳ್ಳಶಕ್ತನೇ? ಇಲ್ಲ. ಮಕ್ಕಳು ಹೆತ್ತವರ ಅವಶ್ಯಕತೆಗಳಿಗಾಗಿ ಮಾತ್ರವೇ ಅಸ್ತಿತ್ವದಲ್ಲಿದ್ದಾರೆ ಎಂಬ ವೀಕ್ಷಣೆಗೂ ಅಲ್ಲಿ ಸ್ಥಳವಿರುವುದಿಲ್ಲ. 2 ಕೊರಿಂಥ 12:14ರಲ್ಲಿ ಬೈಬಲು ನಮಗೆ ಜ್ಞಾಪಕ ಕೊಡುವದು: “ಮಕ್ಕಳು ತಂದೆತಾಯಿಗಳಿಗೋಸ್ಕರ ಕೂಡಿಸಿಡುವುದು ಧರ್ಮವಲ್ಲ, ತಂದೆತಾಯಿಗಳು ಮಕ್ಕಳಿಗೆ ಕೂಡಿಸಿಡುವದೇ ಧರ್ಮ.”
ಮಕ್ಕಳು ಮನೆಗೆಲಸಗಳ ಮತ್ತು ಕರ್ತವ್ಯಗಳ ತಮ್ಮ ಪಾಲನ್ನು ಮಾಡುವದರಿಂದ ಮನ್ನಿಸಲ್ಪಡಬೇಕು ಎಂದಿದರ ಅರ್ಥವಲ್ಲ. ಆದರೆ ಮಗುವಿನ ಸ್ವಂತ ಹಿತಚಿಂತನೆಗಳು ಗಮನಕ್ಕೆ ತಕ್ಕೊಳಲ್ಪಡಬೇಡವೇ? ಉದಾಹರಣೆಗೆ, ಆಫ್ರಿಕಾದ ಯಆ ಎಂಬ ಹೆಸರಿನ ಒಬ್ಬ ಕ್ರೈಸ್ತ ಹುಡುಗಿಯನ್ನು, ಹೆತ್ತವರು ಅವಳಿಗಾಗಿ ಬಹಳವಾಗಿ ಏನು ಮಾಡಬೇಕೆಂದು ಅವಳು ಬಯಸುತ್ತಾಳೆಂದು ಕೇಳಲಾಗಿ, ಅವಳು ಉತ್ತರಿಸಿದ್ದು: “ನನಗೆ ಕ್ಷೇತ್ರ ಸೇವೆಮಾಡಲಿರುವ ದಿನಗಳಲ್ಲಿ ನನ್ನ ಮನೆಗೆಲಸವು ಕಡಿಮೆ ಮಾಡಲ್ಪಡಬೇಕೆಂದು ನನ್ನ ಅಪೇಕ್ಷೆ.” ಹೀಗೆ ಮನೆಗೆಲಸದ ಭಾರವಾದ ಹೊರೆಯಿಂದಾಗಿ ಶಾಲೆಗೆ ಅಥವಾ ಕೂಟಗಳಿಗೆ ಸರಿ ಸಮಯದಲ್ಲಿ ಹಾಜರಾಗಲು ಒಂದು ಮಗುವಿಗೆ ಕಷ್ಟವಾಗುವುದಾದರೆ, ಕೆಲವು ಬದಲಾವಣೆಗಳನ್ನು ಮಾಡುವುದು ಉತ್ತಮವಲ್ಲವೇ?
ಎಳೆಯರೊಂದಿಗೆ ವ್ಯವಹರಿಸುವುದು ಕಷ್ಟಕರವೆಂಬದು ಗ್ರಾಹ್ಯ. ಆದರೆ ದೂಷ್ಯವಲ್ಲದ ಮತ್ತು ಕೋಪವೆಬ್ಬಿಸದ ರೀತಿಯಲ್ಲಿ ಹೆತ್ತವರು ಅವರೊಂದಿಗೆ ಹೇಗೆ ವ್ಯವಹರಿಸಬಹುದು? ಜ್ಞಾನೋಕ್ತಿ 19:11 (NW) ಹೇಳುವುದು: “ಒಳನೋಟವುಳ್ಳ ವ್ಯಕ್ತಿಯು ಕೋಪಕ್ಕೆ ನಿಧಾನನು.” ಹೌದು ಮೊದಲಾಗಿ, ನಿಮ್ಮ ಮಗುವನ್ನು ಒಬ್ಬ ವ್ಯಕ್ತಿಯಾಗಿ ತಿಳುಕೊಳ್ಳ ಪ್ರಯತ್ನಿಸಿರಿ. ಪ್ರತಿಯೊಂದು ಮಗುವು ತನ್ನ ಸ್ವಂತ ಅಭಿರುಚಿಗಳಲ್ಲಿ, ಸಾಮರ್ಥ್ಯಗಳಲ್ಲಿ ಮತ್ತು ಅಗತ್ಯತೆಗಳಲ್ಲಿ ಅಸದೃಶ್ಯವಾಗಿರುತ್ತದೆ. ಅವು ಯಾವುವು? ನಿಮ್ಮ ಮಗುವನ್ನು ತಿಳಿಯಲು ಮತ್ತು ಈ ಪ್ರಶ್ನೆಗೆ ಉತ್ತರವನ್ನು ಕಲಿಯಲು ನೀವು ಸಮಯ ತಕ್ಕೊಂಡಿದ್ದೀರೋ? ಕೆಲಸ ಮತ್ತು ಭಕ್ತಿಯನ್ನು ಕೂಡಿ ಮಾಡುವುದು, ಕುಟುಂಬ ಮನೋರಂಜನೆಯಲ್ಲಿ ಭಾಗವಹಿಸುವುದು—ಈ ಸಂಗತಿಗಳು ಹೆತ್ತವರಿಗೆ ತಮ್ಮ ಮಕ್ಕಳೊಂದಿಗೆ ಆಪ್ತ ಸಂಬಂಧಕ್ಕೆ ಬರುವಂತೆ ಸಂದರ್ಭಗಳನ್ನು ಕೊಡುತ್ತವೆ.
ಪೌಲನು ತಿಮೊಥಿಗೆ, “ನೀನು ಯೌವನದ ಇಚ್ಛೆಗಳಿಗೆ ದೂರವಾಗಿರು” ಎಂದು 2 ತಿಮೊಥಿ 2:22ರಲ್ಲಿ ನುಡಿದಾಗ ಇನ್ನೊಂದು ರಸಕರವಾದ ಅವಲೋಕನೆಯನ್ನು ಮಾಡಿದ್ದಾನೆ. ಹೌದು, ಯೌವನವು ಒಂದು ಪ್ರಕ್ಷುಬ್ಧ ಸಮಯವೆಂದು ಪೌಲನು ಬಲ್ಲವನಾಗಿದ್ದನು. ಶಾರೀರಿಕ ಮತ್ತು ಭಾವಾತ್ಮಕ ಬದಲಾವಣೆಗಳು ಥಟ್ಟನೇ ಸಂಭವಿಸುತ್ತವೆ. ಗಂಡು-ಹೆಣ್ಣಿನ ಲೈಂಗಿಕ ಆಕರ್ಷಣೆಗಳು ಬೆಳೆಯುತ್ತವೆ. ಈ ಸಮಯದಲ್ಲಿ ಯುವಕರು ಗಂಭೀರತರದಲ್ಲಿ ಬಿದ್ದುಹೋಗದಂತೆ ತಡೆಯಲು ಬಲಿತ ಮತ್ತು ಪ್ರೀತಿಯುಳ್ಳ ಮಾರ್ಗದರ್ಶನೆ ಅತ್ಯಾವಶ್ಯಕ. ಆದರೆ ಅವರನ್ನು ಅನೈತಿಕತೆಯವರೋ ಎಂಬಂತೆ ಉಪಚರಿಸುವ ಅಗತ್ಯವಿಲ್ಲ. ಒಬ್ಬ ಕ್ರೈಸ್ತನ ಉದ್ರೇಕಿತ ಮಗಳು ಪ್ರಲಾಪಿಸಿದ್ದು: “ನಾನು ಜಾರತ್ವ ಮಾಡಲಿಲ್ಲ, ಆದರೆ ನನ್ನ ತಂದೆ ನನಗೆ ಅದರ ಆರೋಪ ಹೊರಿಸುತ್ತಾರೆ. ನಾನು ಹೋಗಿ ಅದನ್ನು ಮಾಡಿದರೂ ಹೆಚ್ಚು ಕೆಟ್ಟದ್ದಾಗದು.” ಕೆಟ್ಟ ಹೇತುಗಳ ಆರೋಪ ಹೊರಿಸುವ ಬದಲಾಗಿ, ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸವನ್ನು ತೋರಿಸಿರಿ. (2 ಥೆಸಲೊನೀಕ 3:4 ಹೋಲಿಸಿ.) ಟೀಕೆಯನ್ನೇ ಮಾಡುತ್ತಿರುವ ಬದಲಿಗೆ ಅನುತಾಪ ತೋರಿಸಿರಿ, ಮತ್ತು ಪ್ರೀತಿಯ, ಹೊಂದಿಕೆಯುಳ್ಳ ರೀತಿಯಲ್ಲಿ ವಿವೇಚನೆ ತೋರಿಸಿರಿ.
ಆದರೂ ಹೆತ್ತವರು, ತಮ್ಮ ಮಗುವು ಎದುರಿಸಬಹುದಾದ ನೈತಿಕ ಅಪಾಯಗಳನ್ನು ಮುಂಚಿತವಾಗಿಯೇ ಚರ್ಚಿಸುವುದಾದರೆ, ಅನೇಕ ಸಮಸ್ಯೆಗಳನ್ನು ತಪ್ಪಿಸ ಸಾಧ್ಯವಿದೆ. ತಮ್ಮ ಮಕ್ಕಳನ್ನು ದೇವರ ವಾಕ್ಯದಲ್ಲಿ ತರಬೇತು ಮತ್ತು ಶಿಕ್ಷಿಸುವರೆ ದೇವರು ಹೆತ್ತವರನ್ನು ಬದ್ಧಪಡಿಸುತ್ತಾನೆಂಬದನ್ನು ನೆನಪಿಡಿರಿ. (ಧರ್ಮೋಪದೇಶಕಾಂಡ 6:6, 7) ಇದಕ್ಕಾಗಿ ಗಮನಾರ್ಹವಾದ ಸಮಯ ಮತ್ತು ಪ್ರಯತ್ನವು ಬೇಕಾದೀತು. ಧೌರ್ಭಾಗ್ಯದಿಂದ ಕೆಲವು ಹೆತ್ತವರು ತಾಳ್ಮೆಯಲ್ಲಿ ಕೊರತೆಯುಳ್ಳವರಾಗಿರುವುದರಿಂದ, ತಮ್ಮ ಶಿಕ್ಷಣಾ ನೇಮಕವನ್ನು ಪೂರೈಸಲು ತಪ್ಪುತ್ತಾರೆ. ಅನೇಕ ವಿಕಾಸಗೊಳ್ಳುತ್ತಿರುವ ದೇಶಗಳಲ್ಲಿರುವ ನಿರಕ್ಷರತೆಯೂ ಇನ್ನೂ ಹೆಚ್ಚು ಹೆತ್ತವರಿಗೆ ತಡೆಗಟ್ಟಾಗಿದೆ.
ಕೆಲವು ಸಂದರ್ಭಗಳಲ್ಲಿ ಬಲಿತ ಕ್ರೈಸ್ತರನ್ನು ಸಹಾಯಕ್ಕಾಗಿ ಬರುವಂತೆ ಕೇಳಿಕೊಳ್ಳಬಹುದು. ಅದು ಕಡಿಮೆ ಅನುಭವವುಳ್ಳ ಹೆತ್ತವರಿಗೆ ಬರೇ ಸಲಹೆಗಳನ್ನು ಕೊಡುವ ಒಂದು ವಿಷಯವಾಗಿರ ಸಾಧ್ಯವಿದೆ. (ಜ್ಞಾನೋಕ್ತಿ 27:17) ಅಥವಾ ಕುಟುಂಬ ಅಭ್ಯಾಸದೊಂದಿಗೆ ಸಹಾಯ ನೀಡುವ ವಿಷಯವು ಅದರಲ್ಲಿ ಕೂಡಿರಬಹುದು. ಆದರೆ ಇದು ಹೆತ್ತವನನ್ನು ತನ್ನ ಮಕ್ಕಳಿಗೆ ದೇವರ ವಾಕ್ಯವನ್ನು ಕಲಿಸುವ ಜವಾಬ್ದಾರಿಕೆಯಿಂದ ಮುಕ್ತಗೊಳಿಸುವುದಿಲ್ಲ. (1 ತಿಮೊಥಿ 5:8) ಅವನು ತನ್ನ ಮಕ್ಕಳೊಂದಿಗೆ ಕೂಡಿ ಕ್ಷೇತ್ರ ಸೇವೆ ಮಾಡಲು ಮತ್ತು ಊಟದ ವೇಳೆ ಅಥವಾ ಇತರ ತಕ್ಕದಾದ್ದ ಸಮಯಗಳಲ್ಲಿ ಆತ್ಮಿಕ ವಿಷಯಗಳನ್ನು ಚರ್ಚಿಸುವುದಕ್ಕೆ ಪ್ರಯತ್ನಗಳನ್ನು ಮಾಡಶಕ್ತನು.
ಎಳೇ ಪ್ರಾಯದ ಯುವಕನು ಪ್ರಾಯದವನಾಗುವಾಗ ಸ್ವಾಭಾವಿಕವಾಗಿ ಹೆಚ್ಚು ಸ್ವಾತಂತ್ರ್ಯವನ್ನು ಅಪೇಕ್ಷಿಸಬಹುದು. ಇದನ್ನು ಹೆಚ್ಚಾಗಿ ಹೆತ್ತವರು ಅವಿಧೇಯತೆ ಅಥವಾ ಧಿಕ್ಕರಿಸುವಿಕೆಯಾಗಿ ತಪ್ಪರ್ಥ ಮಾಡುತ್ತಾರೆ. ಅವನ ಕ್ರಿಯೆಗಳಿಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡಲು ನಿರಾಕರಿಸಿ, ಅವನನ್ನು ಇನ್ನೂ ಚಿಕ್ಕ ಮಗುವಿನಂತೆ ಉಪಚರಿಸುವ ಮೂಲಕ ಹೆತ್ತವರು ಪ್ರತಿಕ್ರಿಯೆ ತೋರಿಸಿದರೆ, ಅದೆಷ್ಟು ವೈಮನಸ್ಯವನ್ನು ತಂದೀತು! ಅವನ ಜೀವಿತದ ಪ್ರತಿಯೊಂದು ಮುಖಗಳಲ್ಲಿ—ವಿದ್ಯೆ, ಉದ್ಯೋಗ, ಮದುವೆ ಮುಂತಾದವುಗಳಲ್ಲಿ—ಶಾಂತ ಮತ್ತು ಗೌರವಪೂರ್ವಕ ಭಾವದಿಂದ ಅವನೊಂದಿಗೆ ಮಾತಾಡಿ ನೋಡದೆ ತಾವಾಗಿಯೇ ನಿರ್ಧಾರವನ್ನು ಮಾಡುವದು ಸಹಾ ಅಷ್ಟೇ ಉದ್ರೇಕಕಾರಿಯು. (ಜ್ಞಾನೋಕ್ತಿ 15:22) ಅಪೊಸ್ತಲ ಪೌಲನು ಜೊತೆ ಕ್ರೈಸ್ತರನ್ನು, “ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗ” ಬೇಕೆಂದು ಪ್ರೇರಿಸಿದ್ದಾನೆ. (1 ಕೊರಿಂಥ 14:20) ತಮ್ಮ ಸ್ವಂತ ಮಕ್ಕಳು ಭಾವುಕತೆಯಲ್ಲಿ ಮತ್ತು ಆತ್ಮಿಕತೆಯಲ್ಲಿ ಬೆಳೆದು ದೊಡ್ಡವರಾಗುವಂತೆ ಹೆತ್ತವರು ಅಪೇಕ್ಷಿಸಲಾರರೇ? ಆದಾಗ್ಯೂ, ಒಬ್ಬ ಯುವಕನ “ಜ್ಞಾನೇಂದ್ರಿಯಗಳು” “ಸಾಧನೆಯಿಂದ” ಶಿಕ್ಷಿಸಿಕೊಳ್ಳುವ ಮೂಲಕ ಮಾತ್ರವೇ ತರಬೇತು ಹೊಂದುವದು. (ಇಬ್ರಿಯ 5:14) ಅವನ್ನು ಸಾಧನೆಯಿಂದ ಶಿಕ್ಷಿಸಿಕೊಳ್ಳಲು ಅವನಿಗೆ ನಿರ್ದಿಷ್ಟ ಪ್ರಮಾಣದ ಆಯ್ಕೆಯ ಸ್ವಾತಂತ್ರ್ಯವು ಕೊಡಲ್ಪಡಬೇಕು.
ಈ ಕಡೇ ದಿನಗಳಲ್ಲಿ ಮಕ್ಕಳನ್ನು ಸಾಕಿ ಸಲಹುವುದು ಅದೇನೂ ಸುಲಭ ಸಾಧ್ಯವಲ್ಲ. ಆದರೆ ದೇವರ ವಾಕ್ಯವನ್ನು ಅನುಸರಿಸುವ ಹೆತ್ತವರು ತಮ್ಮ ಮಕ್ಕಳನ್ನು “ಮನಗುಂದಿಸದಂತೆ,” ಅವರ ಕೋಪವೆಬ್ಬಿಸುವದಿಲ್ಲ ಯಾ ಕೆಣಕುವುದಿಲ್ಲ. (ಕೊಲೊಸ್ಸೆ 3:21) ಬದಲಾಗಿ ಅವರು ತಮ್ಮ ಮಕ್ಕಳನ್ನು ಸ್ನೇಹ, ತಿಳುವಳಿಕೆ ಮತ್ತು ಮಾನ್ಯತೆಯಿಂದ ಉಪಚರಿಸಲು ಪ್ರಯಾಸಪಡುವರು; ಅವರ ಮಕ್ಕಳು ನಡಿಸಲ್ಪಡುವರು, ಅಟ್ಟಲ್ಪಡುವದಿಲ್ಲ. ಪೋಷಿಸಲ್ಪಡುವರು, ದುರ್ಲಕ್ಷಿಸಲ್ಪಡುವದಿಲ್ಲ. ಪ್ರೀತಿಸುವಂತೆ ಪ್ರೇರೇಪಿಸಲ್ಪಡುತ್ತಾರೆ, ಕೋಪ ಮತ್ತು ಆಶಾಭಂಗಕ್ಕೆ ಚಿತಾಯಿಸಲ್ಪಡುವದಿಲ್ಲ. (w91 10/1)
[ಪುಟ 31 ರಲ್ಲಿರುವ ಚಿತ್ರ]
ಒವಾರೆ ಆಡುವುದು, ಘಾನಾದ ಒಂದು ಸ್ಥಳೀಕ ಮನೆಯೊಳಗಿನ ಆಟ, ಈ ಹೆತ್ತವರಿಗೆ ತಮ್ಮ ಮಕ್ಕಳೊಂದಿಗೆ ಸಹವಸಿಸುವದಕ್ಕೆ ಒಂದು ಸಂದರ್ಭವನ್ನು ಕೊಡುತ್ತದೆ