ಜೊತೆ ಕ್ರೈಸ್ತರಿಗೆ ಹಣ ಸಾಲ ಕೊಡುವುದು
ಪೆದ್ರೊ ಮತ್ತು ಕಾರ್ಲಸ್ ಒಳ್ಳೇ ಸ್ನೇಹಿತರಾಗಿದ್ದರು.a ಅವರು ಜೊತೆ ಕ್ರೈಸ್ತರು, ಮತ್ತು ಅವರವರ ಕುಟುಂಬಗಳು ಒಬ್ಬರೊಂದಿಗೊಬ್ಬರು ಬೆಚ್ಚನೆಯ ಸಹವಾಸದಲ್ಲಿ ಆಗಿಂದಾಗ್ಯೆ ಆನಂದಿಸಿದ್ದರು. ಹೀಗೆ ಕಾರ್ಲಸ್ಗೆ ತನ್ನ ವ್ಯಾಪಾರಕ್ಕಾಗಿ ಹಣಬೇಕಾದಾಗ, ಪೆದ್ರೊ ಅವನಿಗೆ ಸಾಲಕೊಡಲು ಮುಂದಾಗಲು ಹಿಂಜರಿಯಲಿಲ್ಲ. “ನಾವು ಒಳ್ಳೇ ಸ್ನೇಹಿತರಾಗಿದದ್ದರಿಂದ,” ಪೆದ್ರೊ ವಿವರಿಸುವುದು, “ನನಗೇನೂ ಅಡ್ಡಿ ಇರಲಿಲ್ಲ.”
ಆದರೂ ಎರಡೇ ತಿಂಗಳೊಳಗೆ, ಕಾರ್ಲಸ್ನ ವ್ಯಾಪಾರ ಕುಸಿದುಬಿತ್ತು, ಮತ್ತು ಸಾಲ ಹಿಂತಿರುಗಿಸುವಿಕೆ ನಿಂತುಹೋಯಿತು. ಕಾರ್ಲಸನು ತಾನು ಸಾಲವಾಗಿ ಪಡೆದ ಹೆಚ್ಚಿನ ಹಣವನ್ನು ವ್ಯಾಪಾರ್ಯೇತರ ಸಾಲಗಳನ್ನು ಮರುಪಾವತಿ ಮಾಡಲು ಮತ್ತು ದುಬಾರಿ ಜೀವನಶೈಲಿ ನಡಿಸಲು ಬಳಸಿದ್ದನೆಂದು ಕೇಳಿದಾಗ ಪೆದ್ರೊಗೆ ಆಶ್ಚರ್ಯ. ಭೇಟಿಗಳನ್ನು ಮಾಡಿ ಮತ್ತು ಪತ್ರಗಳನ್ನು ಕಳುಹಿಸಿ ವರ್ಷ ಸಂದರೂ ವಿಷಯವು ಪೆದ್ರೊನ ತೃಪ್ತಿಗನುಸಾರ ನಿರ್ಣಯವಾಗಲಿಲ್ಲ. ಎದೆಗುಂದಿಹೋದ ಪೆದ್ರೊ ಅಧಿಕಾರಿಗಳ ಬಳಿಗೆ ಹೋಗಿ, ತನ್ನ ಮಿತ್ರನೂ, ಜೊತೆ ಕ್ರೈಸ್ತನೂ ಆಗಿದ್ದ ಕಾರ್ಲಸನನ್ನು—ಸೆರೆಮನೆಗೆ ಹಾಕಿಸಿದನು.b ಇದು ತಕ್ಕೊಳ್ಳತಕ್ಕ ಯೋಗ್ಯ ಮಾರ್ಗವಾಗಿತ್ತೋ? ನಾವು ನೋಡೋಣ.
ಭೂಸುತ್ತಲೂ ಇರುವ ಜನರಲ್ಲಿ ಹಣ ಸಾಲಗಳ ಮೇಲೆ ಅಸಮ್ಮತಿಗಳು ಮತ್ತು ತಪ್ಪು ತಿಳುವಳಿಕೆಗಳು ಆಗಿಂದಾಗ್ಯೆ ಸ್ನೇಹ-ನಷ್ಟಗಳನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ಜೊತೆ ಕ್ರೈಸ್ತರೊಳಗೆ ಮನಸ್ತಾಪಕ್ಕೂ ಅದು ಕಾರಣವಾಗಬಹುದು. ಅನೇಕ ದೇಶಗಳಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯುವದು ಕಷ್ಟಸಾಧ್ಯ, ಆದ್ದರಿಂದ ಆರ್ಥಿಕ ಕೊರತೆಯುಳ್ಳ ಜನರು ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಗೋಚರಿಸುವುದು ಸರ್ವಸಾಮಾನ್ಯ. ಪೆದ್ರೊ ಮತ್ತು ಕಾರ್ಲಸರ ವಿಷಾಧಕರ ಅನುಭವವಾದರೋ, ಬೈಬಲ್ ತತ್ವಗಳು ಸಾಲಿಗ ಮತ್ತು ಸಾಲಗಾರ ಇಬ್ಬರಿಂದಲೂ ಜೋಕೆಯಿಂದ ಪಾಲಿಸಲ್ಪಡದೇ ಇದ್ದಲ್ಲಿ, ಗಂಭೀರವಾದ ಸಮಸ್ಯೆಗಳು ಏಳಬಹುದೆಂಬದನ್ನು ಚಿತ್ರಿಸುತ್ತವೆ. ಹೀಗಿರಲಾಗಿ, ಜೊತೆ ಕ್ರೈಸ್ತನು ಒಂದು ಸಾಲಕ್ಕಾಗಿ ವಿನಂತಿಸಿದ್ದಲ್ಲಿ, ಅದನ್ನು ನಿರ್ವಹಿಸುವ ಯೋಗ್ಯ ವಿಧಾನವು ಯಾವುದು?
ಸಾಲದ ವೆಚ್ಚಗಳನ್ನು ಲೆಕ್ಕಿಸುವುದು
ಅನಾವಶ್ಯಕವಾಗಿ ಸಾಲ ಮಾಡುವುದನ್ನು ಬೈಬಲು ನಿರುತ್ತೇಜಿಸುತ್ತದೆ. “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು,” ಎಂದು ಬೋಧಿಸುತ್ತಾನೆ ಅಪೊಸ್ತಲ ಪೌಲನು. (ರೋಮಾಪುರ 13:8) ಆದುದರಿಂದ, ಒಂದು ಸಾಲವನ್ನು ತಕ್ಕೊಳ್ಳುವ ಮುಂಚಿತವಾಗಿ, ಅದರಿಂದಾಗುವ ವೆಚ್ಚವನ್ನು ಲೆಕ್ಕಮಾಡಿ ನೋಡಿರಿ. (ಲೂಕ 14:28ಕ್ಕೆ ಹೋಲಿಸಿ.) ಹಣವನ್ನು ಸಾಲವಾಗಿ ಪಡೆಯುವ ನಿಜವಾದ ಒಂದು ಅಗತ್ಯತೆಯು ಅಲ್ಲಿದೆಯೇ? ನಿಮ್ಮ ಕುಟುಂಬ ಪೋಷಣೆಗೋಸ್ಕರ ನಿಮ್ಮ ಜೀವನೋದ್ಯಮವನ್ನು ಕಾಪಾಡುವ ಒಂದು ವಿಷಯವು ಅದೋ? (1 ತಿಮೊಥಿ 5:8) ಅಥವಾ, ಲೋಭದ ಒಂದಂಶವು ಅದರಲ್ಲಿ ಕೂಡಿದೆಯೇ—ಪ್ರಾಯಶಃ ಅಧಿಕ ಸುಖಭೋಗದಿಂದ ಜೀವಿಸುವ ಒಂದು ಅಪೇಕ್ಷೆಯಿಂದಲೋ?—1 ತಿಮೊಥಿ 6:9, 10.
ಸಾಲ ಮಾಡುವಿಕೆಯು ನಿಮ್ಮನ್ನು ಹೆಚ್ಚು ತಾಸುಗಳ ಕೆಲಸವನ್ನು ಮಾಡಲು ಒತ್ತಾಯ ಪಡಿಸುತ್ತದೋ ಎಂಬದು ಇನ್ನೊಂದು ಗಮನಾರ್ಹ ಸಂಗತಿಯು; ಪ್ರಾಯಶಃ ಕೂಟಗಳನ್ನು ಅಥವಾ ಕ್ಷೇತ್ರ ಸೇವೆಯನ್ನು ಅಲಕ್ಷಿಸುವಂತೆ ಅದು ಮಾಡಬಹುದು. ಅದಲ್ಲದೆ, ಬೇರೊಬ್ಬನ ಹಣವನ್ನು ಈಡಾಗಿಡುವ ಹೊಣೆಯನ್ನು ಹೊರಲು ನೀವು ನಿಜವಾಗಿ ಸಮರ್ಥರೋ? ನಿಮ್ಮ ವ್ಯಾಪಾರ ಅಥವಾ ಯೋಜನೆಯು ವೈಫಲ್ಯಗೊಂಡರೆ ಆಗೇನು? “ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು” ಎಂಬದನ್ನು ನೆನಪಿನಲ್ಲಿಡಿರಿ.—ಕೀರ್ತನೆ 37:21.
ಸಾಲಿಗರಿಗೆ ‘ಸತ್ಯವನ್ನೇ ಆಡಿರಿ’
ಇಂಥ ವಿಷಯಗಳನ್ನೆಲ್ಲಾ ಪರಿಗಣಿಸಿದ ಮೇಲೆ, ಒಂದು ವ್ಯಾಪಾರಿಕ ಸಾಲವು ಆವಶ್ಯ ಬೇಕೆಂದು ನಿಮಗಿನ್ನೂ ಅನಿಸಬಹುದು. ಐಹಿಕ ಮೂಲಗಳಿಂದ ಅದನ್ನು ಪಡೆಯ ಶಕ್ಯವಿಲ್ಲವಾದರೆ, ಜೊತೆ ಕ್ರೈಸ್ತನನ್ನು ಗೋಚರಿಸುವುದು ತಪ್ಪಾಗಿರುವ ಅಗತ್ಯವಿಲ್ಲ, ಯಾಕಂದರೆ ಲೂಕ 11:5ರಲ್ಲಿ ಯೇಸು ಗಮನಿಸಿದ ಪ್ರಕಾರ, ಕೊರತೆಯ ಸಮಯದಲ್ಲಿ ಸ್ನೇಹಿತರ ಕಡೆಗೆ ತಿರುಗುವುದು ಸರ್ವ ಸಾಮಾನ್ಯ. ಆದರೂ ಒಬ್ಬನು “ಸತ್ಯವನ್ನೇ ಆಡಲು” ಶ್ರಮವಹಿಸಬೇಕು. (ಎಫೆಸ 4:25) ಒಳಗೂಡಿರುವ ಎಲ್ಲಾ ನಿಜತ್ವಗಳನ್ನು—ಅದರಲ್ಲಿರುವ ನಷ್ಟದ ಭಯ, ತೋರಬಹುದಾದ ಲವಲೇಶ ಭಯವನ್ನು ಸಹಾ ಪ್ರಾಮಾಣಿಕತೆಯಿಂದ ವಿವರಿಸಿ ಹೇಳಿರಿ. ವಿಷಯದ ಸ್ಪಷ್ಟ ಚಿತ್ರವು ಸಿಗುವಂತೆ ಭಾವೀ ಸಾಲಿಗನು ಹಲವಾರು ಚೂಪಾದ ಪ್ರಶ್ನೆಗಳನ್ನು ಕೇಳುವಾಗಲೂ ಸಿಟ್ಟಾಗದಿರ್ರಿ.c
ಒಂದು ಕಾರಣಕ್ಕಾಗಿ ಸಾಲಪಡಕೊಂಡು ಮತ್ತು ಆ ಹಣವನ್ನು ಮತ್ತೊಂದು ಕಾರಣಕ್ಕಾಗಿ ಉಪಯೋಗಿಸುವುದು, ಸತ್ಯವನ್ನಾಡುವುದಾಗಿರುವುದೋ? ಇಲ್ಲವೇ ಇಲ್ಲ. ಒಬ್ಬ ಲ್ಯಾಟಿನ್ ಅಮೆರಿಕನ್ ಬ್ಯಾಂಕರನು ವಿವರಿಸುವುದು: “ಬ್ಯಾಂಕ್ ನಿಮ್ಮ ಸಾಲವನ್ನು ರದ್ದು ಮಾಡುವುದು, ಮತ್ತು ಆ ಸಾಲವನ್ನು ಕೂಡಲೇ ಸಲ್ಲಿಸದಿದ್ದಲ್ಲಿ, ಕೋರ್ಟ್ಕ್ರಮವನ್ನು ಕೈಕೊಂಡು ನಿಮ್ಮ ಸೊತ್ತುಗಳನ್ನು ಜಪ್ತಿಮಾಡುವ ಆದೇಶವನ್ನು ಪಡೆಯುವುದು.” ಒಂದು ವ್ಯಾಪಾರದ ಲಾಭದಾಯಕತ್ವವನ್ನು ಹೆಚ್ಚಿಸುವ ವಚನದ ಮೇಲೆ ಹಣವು ಸಾಲವಾಗಿ ಕೊಡಲ್ಪಟ್ಟಲ್ಲಿ, ಅದನ್ನು ಇನ್ನೊಂದು ಉದ್ದೇಶಕ್ಕಾಗಿ ಉಪಯೋಗಿಸುವುದು ಕಾರ್ಯಥಃ ಸಾಲಿಗನಿಗೆ ಸಾಲವು ಮರುಪಾವತಿ ಮಾಡಲ್ಪಡುವದೆಂಬ ಅವನ ಆಶ್ವಾಸನೆಯನ್ನು ಅಪಹರಿಸುವುದು. ಒಬ್ಬ ಜೊತೆ ಕ್ರೈಸ್ತನಿಂದ ಸಾಲಪಡೆಯುವಾಗ ನ್ಯಾಯಾಂಗ ಪ್ರತೀಕಾರದ ವಿಷಯವಾಗಿ ನೀವು ಒಂದುವೇಳೆ ಹೆದರದೆ ಇರಬಹುದು, ನಿಜ. ಆದರೂ, “ಸಾಲಗಾರನು ಸಾಲಕೊಟ್ಟವನಿಗೆ ಸೇವಕ”ನಾಗಿದ್ದಾನೆ ಮತ್ತು ಅವನೊಂದಿಗೆ ಪ್ರಾಮಾಣಿಕತೆಯಿಂದಿರಲು ನೀವು ಹಂಗಿಗರು.—ಜ್ಞಾನೋಕ್ತಿ 22:7.
ವ್ಯಾಪಾರದಲ್ಲಿ ಸುವರ್ಣ ನಿಯಮವನ್ನು ಅನ್ವಯಿಸುವುದು
ಯೇಸುವಂದದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಜೊತೆ ವಿಶ್ವಾಸಿಯೊಂದಿಗೆ ಒಂದು ವ್ಯಾಪಾರವನ್ನು ಮಾಡುವಾಗ ಈ ನಿಯಮವು ಬಳಕೆಯಲ್ಲಿರುವಂತೆ ನೋಡುವದು ಅದೆಷ್ಟು ಮಹತ್ವವು! ಉದಾಹರಣೆಗೆ, ಸಾಲಕ್ಕಾಗಿ ನಿಮ್ಮ ವಿನಂತಿಯನ್ನು ಸಹೋದರನೊಬ್ಬನು ನಿರಾಕರಿಸಿದರೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ನಿಮ್ಮ ಸ್ನೇಹಕ್ಕೆ ದ್ರೋಹ ಬಗೆದನೆಂದು ನೀವು ಭಾವಿಸುವಿರೋ? ಅಥವಾ, ಒಂದುವೇಳೆ ಅವನಿಗೇ ಹಣದ ಅಗತ್ಯವಿರುವದರಿಂದ ಅಥವಾ ಅದರಲ್ಲಿರುವ ಭಯವು ನಿಮ್ಮ ಅಂದಾಜಿಗಿಂತ ಹೆಚ್ಚು ಗಂಭೀರವೆಂದು ಅವನು ನೆನಸುವುದರಿಂದ, ನಿಮ್ಮ ವಿನಂತಿಯನ್ನು ನಿರಾಕರಿಸಲು ಅವನಿಗಿರುವ ಹಕ್ಕನ್ನು ನೀವು ಗೌರವಿಸುವಿರೋ? ಹಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಿಮ್ಮ ಸಾಮರ್ಥ್ಯದ ಬಗ್ಗೆ ಅವನು ಪ್ರಾಮಾಣಿಕತೆಯಿಂದ ಸಂದೇಹಿಸಲೂಬಹುದು. ಅಂಥ ಒಂದು ಪರಿಸ್ಥಿತಿಯಲ್ಲಿ. ಅವನ ನಿರಾಕರಣೆಯು ವ್ಯಾವಹಾರ್ಯವೂ ಪ್ರೀತಿಯೂ ಉಳ್ಳದ್ದಾಗಿರಬಲ್ಲದು.—ಜ್ಞಾನೋಕ್ತಿ 27:6.
ಒಬ್ಬ ಮಿತ್ರನು ನಿಮಗೆ ಹಣ ಸಾಲ ಕೊಡಲು ಒಪ್ಪಿದಾದ್ದರೆ ಅದರ ಸವಿವರಗಳನ್ನು ಸ್ಪಷ್ಟವಾಗಿಗಿ ಬರೆದು ತಿಳಿಸಬೇಕು. ಎಷ್ಟು ಹಣವನ್ನು ಸಾಲವಾಗಿ ಕೊಡಲಾಗಿದೆ, ಆ ಹಣವನ್ನು ಯಾವುದಕ್ಕಾಗಿ ಬಳಸಲಾಗುತ್ತದೆ, ಸಾಲಕ್ಕೆ ಆಧಾರವಾಗಿ ಯಾವ ಸ್ವತ್ತುಗಳು ಅಲ್ಲಿವೆ, ಮತ್ತು ಅದನ್ನು ಯಾವಾಗ ಮತ್ತು ಹೇಗೆ ಹಿಂದೆ ಸಲ್ಲಿಸಬೇಕು ಮುಂತಾದವು ಅದರಲ್ಲಿ ಸೇರಿರುತ್ತದೆ. ಕೆಲವು ಸಂದರ್ಭಗಳಲ್ಲಿ, ವಕೀಲರ ಮೂಲಕ ಕರಾರುಪತ್ರವನ್ನು ಬರೆಸಿ ಉಸ್ತುವಾರಿ ನಡಿಸುವುದು ಮತ್ತು ಅಧಿಕಾರಿಗಳ ಫೈಲಿಗೆ ಅದನ್ನು ದಾಖಲೆ ಮಾಡುವದೂ ವಿವೇಕಪ್ರದವು. ಹೇಗೂ, ಒಮ್ಮೆ ಕರಾರು ಪತ್ರಕ್ಕೆ ಸಹಿ ಹಾಕಿದ ಮೇಲೆ, “ನಿಮ್ಮ ಮಾತು ಹೌದು ಎಂದಾದರೆ ಹೌದು ಅಲ್ಲ ಎಂದಾದರೆ ಅಲ್ಲವಾಗಿರಬೇಕು.” (ಮತ್ತಾಯ 5:37) ಒಂದು ಬ್ಯಾಂಕಿನೆಡೆಗೆ ಹೇಗೋ ಅದೇ ಗಂಭೀರತೆಯಿಂದ ನಿಮ್ಮ ಸ್ನೇಹಿತನ ಕಡೆಗೂ ನಿಮ್ಮ ಹಂಗನ್ನು ತೋರಿಸಲು ತಪ್ಪುವ ಮೂಲಕ, ಅವನ ಒಳ್ಳೇತನದ ದುರುಪಯೋಗವನ್ನು ಮಾಡದಿರ್ರಿ.
ಹುಶಾರಿ ಸಾಲಿಗರು
ಸಾಲಕ್ಕಾಗಿ ನಿಮ್ಮನ್ನು ಗೋಚರಿಸಿದಲ್ಲಿ ಆಗೇನು? ಒಳಗೂಡಿರುವ ಪರಿಸ್ಥಿತಿಗಳ ಮೇಲೆ ಹೆಚ್ಚು ಆಧರಿಸಿರುವುದು. ಉದಾಹರಣೆಗೆ, ಕ್ರೈಸ್ತ ಸಹೋದರನೊಬ್ಬನು, ತನ್ನ ಯಾವುದೇ ತಪ್ಪಿನಿಂದಲ್ಲದಿದ್ದರೂ, ಒಂದು ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗುತ್ತಾನೆಂದು ನೆನಸೋಣ. ನಿಮಗೆ ಹಾಗೆ ಮಾಡುವ ಅನುಕೂಲವಿದ್ದಲ್ಲಿ, ‘ಅವನಿಗೆ ದೇಹಕ್ಕೆ ಬೇಕಾದದ್ದನ್ನು ಕೊಡಲು’ ಕ್ರೈಸ್ತ ಪ್ರೀತಿಯು ನಿಮ್ಮನ್ನು ಪ್ರೇರೇಪಿಸುವುದು.—ಯಾಕೋಬ 2:15, 16.
ಅಂಥ ಒಂದು ಸಂದರ್ಭದಲ್ಲಿ ಸಾಲಕ್ಕೆ ಬಡ್ಡಿಯನ್ನು ಹಾಕುವ ಮೂಲಕ ಸಹೋದರನ ದುರವಸ್ಥೆಯ ದುರುಪಯೋಗ ಮಾಡುವುದು ಅದೆಷ್ಟು ಪ್ರೀತಿರಾಹಿತ್ಯವು! ಯೇಸು ಪ್ರೇರೇಪಿಸಿದ್ದು: “ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರ ಮಾಡಿರಿ. ಪ್ರತಿಫಲಕ್ಕಾಗಿ ಆಶೆಪಡದೆ ಬಡ್ಡಿರಹಿತ ಸಾಲಕೊಡಿರಿ.”—ಲೂಕ 6:35, NW; ಯಾಜಕಕಾಂಡ 25:35-38ಕ್ಕೆ ಹೋಲಿಸಿ.
ಒಂದುವೇಳೆ, ಬರೇ ಒಂದು ವ್ಯಾಪಾರ ಉದ್ಯಮಕ್ಕಾಗಿ ಅಥವಾ ಒಂದು ಸಾಲಕ್ಕಾಗಿ ಹಣಕೊಡುವಂತೆ ಕೇಳಲ್ಪಟ್ಟಲ್ಲಿ ಆಗೇನು? ಸಾಧಾರಣವಾಗಿ, ಅಂಥ ವಿಷಯಗಳನ್ನು ಅರ್ಥಿಕ ಬಂಡವಾಳವಾಗಿ ಗೋಚರಿಸುವುದು ಒಳ್ಳೆಯದು. ಬೈಬಲ್ ಸ್ಪಷ್ಟವಾಗಿಗಿ ಎಚ್ಚರಿಕೆಗಾಗಿ ಕೇಳಿಕೊಳ್ಳುತ್ತದೆ: “ಕೈಮೇಲೆ ಕೈಹಾಕಿ ಸಾಲಕ್ಕೆ ಹೊಣೆಯಾಗಿರುವರಲ್ಲಿ ನೀನೂ ಒಬ್ಬನಾಗಬೇಡ.”—ಜ್ಞಾನೋಕ್ತಿ 22:26.
ವಿಷಯವು ಹಾಗಿದ್ದರೆ, ಉದ್ಯಮದಲ್ಲಿ ಹಣ ಹಾಕಲು ನಿಮಗೆ ನಿಜವಾಗಿ ಅನುಕೂಲ ಇದೆಯೇ ಎಂಬದನ್ನು ನೀವು ಮೊದಲಾಗಿ ನಿರ್ಧರಿಸಬೇಕು. ವ್ಯಾಪಾರವು ದಿವಾಳಿಯಾದಲ್ಲಿ ಅಥವಾ ಸಾಲಗಾರನು ತಕ್ಕ ಸಮಯದಲ್ಲಿ ಸಾಲವನ್ನು ತೀರಿಸಲಾರದೆ ಹೋದಲ್ಲಿ, ನಿಮಗೆ ಅರ್ಥಿಕ ಬಿಕ್ಕಟ್ಟು ಉಂಟಾಗಬಹುದೋ? ಸಾಲಕೊಡಲು ನೀವು ಶಕ್ತರಿದ್ದಲ್ಲಿ ಮತ್ತು ಲಾಭವು ಸಿಕ್ಕಲಿದೆಯಾದರೆ, ನಿಮ್ಮ ಸಾಲಕ್ಕೆ ನ್ಯಾಯಸಮ್ಮತ ಬಡ್ಡಿಯನ್ನು ಹಾಕುವ ಮೂಲಕ, ನಿಮಗೂ ಅದರಲ್ಲಿ ಪಾಲಿಗರಾಗುವ ಹಕ್ಕಿದೆ. (ಲೂಕ 19:22, 23ಕ್ಕೆ ಹೋಲಿಸಿ.) ಜ್ಞಾನೋಕ್ತಿ 14:15 ಎಚ್ಚರಿಸುವುದು: “ಮೂಢನು ಯಾವ ಮಾತನ್ನಾದರೂ ನಂಬುವನು. ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” ಕೆಲವು ಸಾಧಾರಣ ಚತುರ ವ್ಯಾಪಾರಸ್ಥರು ಜೊತೆ ಕ್ರೈಸ್ತರೊಂದಿಗೆ ವ್ಯಾಪಾರಕ್ಕಿಳಿದಾಗ ಮುಂಜಾಗ್ರತೆಯಿಲ್ಲದೆ ಕ್ರಿಯೆಗೈದಿದ್ದಾರೆ. ಹೆಚ್ಚು ಬಡ್ಡಿಯ ಮೋಹವು ಅವರನ್ನು ಅವಿಚಾರದಿಂದ ಉದ್ಯಮದಲ್ಲಿ ಹಣಹಾಕುವಂತೆ ಸೆಳೆದು, ತಮ್ಮ ಹಣವನ್ನೂ ಜತೆ ಕ್ರೈಸ್ತರೊಂದಿಗಿನ ತಮ್ಮ ಸ್ನೇಹವನ್ನೂ ಎರಡನ್ನೂ ಕಳಕೊಳ್ಳುವಂತೆ ಮಾಡಿರುತ್ತದೆ.
ಸ್ವಾರಸ್ಯಕರವಾಗಿಯೇ, ಒಂದು ಸಾಲವು ಎಷ್ಟು ನಷ್ಟಭಯವುಳ್ಳದ್ದು ಎಂದು ತೂಗಿನೋಡುವಲ್ಲಿ ಮೂರು ಮುಖ್ಯ ಸಂಗತಿಗಳನ್ನು ಬ್ಯಾಂಕರುಗಳು ಹೆಚ್ಚಾಗಿ ಗಮನಿಸುತ್ತಾರೆ: (1) ಸಾಲವನ್ನು ವಿನಂತಿಸುವ ವ್ಯಕ್ತಿಯ ಗುಣಲಕ್ಷಣಗಳು, (2) ಹಣ ಹಿಂದೆ ಸಲ್ಲಿಸಲು ಅವನಿಗಿರುವ ಸಾಮರ್ಥ್ಯ ಮತ್ತು (3) ಅವನ ವ್ಯಾಪಾರ ಗತಿಯಲ್ಲಿ ನೆಲೆಸಿರುವ ಪರಿಸ್ಥಿತಿಗಳು. ಹೀಗಿರಲಾಗಿ, ನೀವು ಕಷ್ಟದಿಂದ ಸಂಪಾದಿಸಿದ ಹಣವನ್ನು ಬೇರೊಬ್ಬನಿಗೆ ಸಾಲವಾಗಿ ಕೊಡುವುದನ್ನು ಪರಿಗಣಿಸುವಾಗ, ವಿಷಯಗಳನ್ನು ತದ್ರೀತಿಯಲ್ಲಿ ತೂಗಿನೋಡುವುದು “ವ್ಯಾವಹಾರ್ಯ ಜ್ಞಾನವನ್ನು” ತೋರಿಸದೇ?—ಜ್ಞಾನೋಕ್ತಿ 3:21.
ದೃಷ್ಟಾಂತಕ್ಕಾಗಿ, ಹಣವನ್ನು ಕೇಳುವ ಸಹೋದರನ ಸಚ್ಚಾರಿತ್ರವು ಹೇಗಿದೆ? ಅವನು ಭರವಸಯೋಗ್ಯನೂ ನಂಬಲರ್ಹನೂ ಆಗಿದ್ದಾನೋ, ಇಲ್ಲವೇ ಎಚ್ಚರಗೇಡಿಯೂ ಅಸ್ಥಿರಚಿತ್ತನೋ? (1 ತಿಮೊಥಿ 3:7ಕ್ಕೆ ಹೋಲಿಸಿ.) ತನ್ನ ವ್ಯಾಪಾರವನ್ನು ಅವನು ವಿಸ್ತರಿಸ ಬಯಸುತ್ತಾನಾದರೆ, ಈ ಬಿಂದುವಿನ ತನಕ ಅವನದನ್ನು ಸಾಫಲ್ಯದಿಂದ ನಡಿಸಿರುವನೋ? (ಲೂಕ 16:10) ಇಲ್ಲವಾದರೆ, ಸರಿಯಾಗಿ ನಿರ್ವಹಿಸಲಾಗದ ಹಣ ಸಾಲಕ್ಕಿಂತ, ಹಣ ನಿರ್ವಹಣೆಯಲ್ಲಿ ವ್ಯಾವಹಾರಿಕ ಸಹಾಯವು ಅವನಿಗೆ ಮುಂದಕ್ಕೆ ಹೆಚ್ಚು ಸಹಾಯಕಾರಿಯಾಗಬಲ್ಲದು.
ಇನ್ನೊಂದು ಸಂಗತಿಯು, ಸಹೋದರನ ಹಣ ಹಿಂದೆ ಸಲ್ಲಿಸುವ ಸಾಮರ್ಥ್ಯ. ಅವನ ಆದಾಯವೆಷ್ಟು? ಬೇರೆ ಯಾವ ಸಾಲಗಳು ಅವನಿಗಿವೆ? ಅವನು ನಿಮ್ಮೊಂದಿಗೆ ಮರೆಮಾಜದೆ ಅದನ್ನು ಹೇಳುವುದು ತೀರಾ ನ್ಯಾಯಸಮ್ಮತ. ಆದರೂ, ಕ್ರೈಸ್ತ ಪ್ರೀತಿಯು ಮತ್ತೂ ಬಳಕೆಯಲ್ಲಿರಬೇಕು. ಉದಾಹರಣೆಗೆ, ಸಹೋದರನ ವಿಕ್ರಯಯೋಗ್ಯ ಸ್ವತ್ತುಗಳ ಆಧಾರದಮೇಲೆ ಸಾಲಕೊಡಲು ನೀವು ಮನಸ್ಸು ಮಾಡಬಹುದು. ಸಾಲವನ್ನು ಕೊಡುವಾಗ ಒತ್ತೆಯಾಗಿ, ಒಬ್ಬ ಮನುಷ್ಯನ ಜೀವನೋಪಾಯದ ಸಾಧನಗಳನ್ನು ಇಲ್ಲವೇ ಅವನ ಜೀವಾಧಾರದ ಮೂಲಾವಶ್ಯಕ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಮೋಶೆಯ ನಿಯಮವು ಖಂಡಿಸಿತ್ತು. (ಧರ್ಮೋಪದೇಶಕಾಂಡ 24:6, 10-12) ಹೀಗೆ, ಸಹೋದರನ ವಿಕ್ರಯಯೋಗ್ಯ ಸ್ವತ್ತುಗಳ ಮೊತ್ತದ ಅರ್ಧದಷ್ಟೇ ಹಣವನ್ನು ನಾನು ಸಾಲವಾಗಿ ಕೊಡುತ್ತೇನೆ ಎಂದು ಒಬ್ಬ ದಕ್ಷಿಣ ಅಮೆರಿಕದ ಒಬ್ಬ ವ್ಯಾಪಾರಿ ಸಹೋದರನು ಹೇಳುತ್ತಾನೆ. “ಮತ್ತು ಅವನ ಕಸುಬಿನ ಉಪಕರಣಗಳನ್ನು ಅಥವಾ ಮನೆಯನ್ನು ವಿಕ್ರಯಯೋಗ್ಯ ಸ್ವತ್ತಾಗಿ ನಾನು ನೋಡುವುದಿಲ್ಲ,” ಎಂದವನು ವಿವರಿಸುತ್ತಾನೆ. “ನನ್ನ ಹಣವನ್ನು ಪುನಃ ಪಡೆಯುವುದಕ್ಕಾಗಿ ನಾನು ನನ್ನ ಸಹೋದರನ ಮನೆಯನ್ನು ಸ್ವಾಧೀನ ಪಡಿಸಿಕೊಂಡು ಅವನು ದಾರಿಯಲ್ಲಿ ಬೀಳುವಂತೆ ನಿಶ್ಚಯವಾಗಿಯೂ ಮಾಡಲಾರೆ.”
ಕೊನೆಯದಾಗಿ, ನೀವು ಜೀವಿಸುವ ಸ್ಥಳದಲ್ಲಿ ವ್ಯಾಪಾರದ ಸಾಮಾನ್ಯ ಸ್ಥಿತಿಗತಿಗಳನ್ನು ನೀವು ವಾಸ್ತವಿಕವಾಗಿ ಗಮನಿಸತಕ್ಕದ್ದು. “ಮನುಷ್ಯರು ಹಣದಾಸೆಯವರೂ . . . ದ್ರೋಹಿಗಳೂ” ಆಗಿರುವ “ಕಡೇ ದಿವಸಗಳಲ್ಲಿ” ನಾವಿಂದು ಜೀವಿಸುತ್ತಿದ್ದೇವೆ. (2 ತಿಮೊಥಿ 3:1-4) ನಿಮ್ಮ ಸ್ನೇಹಿತನು ಮತ್ತು ಸಹೋದರನಾಗಿರುವವನು ಪ್ರಾಮಾಣಿಕನಾಗಿದ್ದರೂ, ಅವನ ಸಹಭಾಗಿಗಳು ಮತ್ತು ಗಿರಾಕಿಗಳು ಹಾಗಿರಲಿಕ್ಕಿಲ್ಲ. ಕ್ರೈಸ್ತನೋಪಾದಿ ಅವನು, ತನ್ನ ಪ್ರತಿಸ್ಪರ್ಧಿಗಳು ಸದುಪಯೋಗಕ್ಕೆ ಹಾಕಬಹುದಾದ—ಲಂಚ ಮತ್ತು ಸುಳ್ಳಾಡುವಿಕೆ ಮುಂತಾದ ಕೆಟ್ಟ ಪ್ರವೃತ್ತಿಗಳಿಗೆ ಇಳಿಯ ಸಾಧ್ಯವಿಲ್ಲ. “ಕಾಲ ಮತ್ತು ಮುಂಗಾಣದ ಸಂಭವಗಳ” ಹಾವಳಿಗಳನ್ನು ಸಹಾ ಗಮನಕ್ಕೆ ತಕ್ಕೊಳ್ಳಲಿಕ್ಕಿದೆ. (ಪ್ರಸಂಗಿ 9:11, NW) ಮಾರಾಟದ ವಸ್ತುಗಳ ಬೆಲೆ ದಿಢೀರನೇ ಬಿದ್ದುಹೋಗಬಹುದು. ಬೆಲೆಯುಬ್ಬರದ ಓಟವು ಒಂದು ವ್ಯಾಪಾರವನ್ನು ದಿವಾಳಿ ತೆಗೆಯಬಹುದು ಅಥವಾ ನಿಮ್ಮ ಸಾಲದ ಬೆಲೆಯನ್ನು ತೊಡೆದು ಹಾಕಬಹುದು. ಕಳ್ಳತನ, ಅಪಘಾತಗಳು, ವಿಧ್ವಂಸಕತೆ ಮತ್ತು ನಷ್ಟಗಳು ಕೂಡಾ ವ್ಯಾಪಾರದ ಅಹಿತಕರ ವಾಸ್ತವಾಂಶಗಳು. ನಿಮ್ಮ ನಿರ್ಣಯವನ್ನು ಮಾಡುವಲ್ಲಿ ನೀವು ಈ ಎಲ್ಲಾ ವಿಷಯಗಳನ್ನು ಗಮನಕ್ಕೆ ತರತಕ್ಕದ್ದು.
ತಪ್ಪಿಹೋಗುವುದು
ಕೆಲವೊಮ್ಮೆ, ಮುಂಜಾಗ್ರತೆ ವಹಿಸಿದಾಗ್ಯೂ, ಕ್ರೈಸ್ತನು ತನ್ನ ಸಾಲವನ್ನು ಹಿಂದೆ ಕೊಡಶಕ್ತನಾಗದೇ ಇರುತ್ತಾನೆ. ತನ್ನ ಸಾಲಿಗನೊಡನೆ ಕ್ರಮವಾಗಿ ಸಂಪರ್ಕಿಸುವಂತೆ ಸುವರ್ಣ ನಿಯಮವು ಅವನನ್ನು ಪ್ರೇರೇಪಿಸಬೇಕು. ಪ್ರಾಯಶಃ ಸ್ವಲ್ಪ ಸ್ವಲ್ಪ ಹಣವನ್ನು ಮಾತ್ರವೇ ಅವನು ಸಲ್ಲಿಸ ಶಕ್ತನಾಗಬಹುದು. ಆದರೂ, ನಾಮಮಾತ್ರದ ಆ ಸಲ್ಲಿಸುವಿಕೆಯು, ತನ್ನ ಹಂಗುಗಳನ್ನು ಪೂರೈಸಲು ನಿಜ ತ್ಯಾಗಗಳನ್ನು ಮಾಡುವದರಿಂದ ತನ್ನನ್ನು ತಪ್ಪಿಸುತ್ತದೆ ಎಂದು ಆ ಕ್ರೈಸ್ತನು ಭಾವಿಸಬಾರದು. (ಕೀರ್ತನೆ 15:4) ಕ್ರೈಸ್ತನಾಗಿರುವ ಸಾಲಿಗನು ಕೂಡಾ ಪ್ರೀತಿಯನ್ನು ತೋರಿಸುವ ಹಂಗುಳ್ಳಾತನು. ತನ್ನೊಂದಿಗೆ ವಂಚನೆಯ ವ್ಯವಹಾರ ಮಾಡಲಾಗಿದೆ ಎಂದು ಅವನು ಭಾವಿಸುವುದಾದರೆ, ಮತ್ತಾಯ 18:15-17ರ ಸೂಚನೆಯನ್ನು ಅವನು ಅನ್ವಯಿಸ ಸಾಧ್ಯವಿದೆ.
ಆರಂಭದಲ್ಲಿ ತಿಳಿಸಿದ ಪೆದ್ರೊ ಮಾಡಿದಂತೆ, ಐಹಿಕ ಅಧಿಕಾರಿಗಳನ್ನು ಇದರಲ್ಲಿ ಒಳಗೂಡಿಸುವುದು ಸ್ಪಲ್ಪವೂ ಯುಕ್ತವಲ್ಲ. ಅಪೊಸ್ತಲ ಪೌಲನು ಹೇಳುವದು: “ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ ದೇವಜನರ ಮುಂದೆ ಹೋಗದೆ ಅನ್ಯಜನರ ಮುಂದೆ ಹೋಗುವದಕ್ಕೆ ಅವನಿಗೆ ಧೈರ್ಯವುಂಟೋ? . . . ಏನು ಸಹೋದರರ ಮಧ್ಯದಲ್ಲಿ ನ್ಯಾಯವನ್ನು ಬಗೆಹರಿಸಬಲ್ಲವನಾದ ಒಬ್ಬನಾದರೂ ನಿಮ್ಮಲ್ಲಿ ಇಲ್ಲವೋ? ಸಹೋದರನು ಸಹೋದರನ ಮೇಲೆ ವ್ಯಾಜ್ಯ ಮಾಡುವದು ಅಲ್ಲದೆ ಅದನ್ನು ಕ್ರಿಸ್ತಭಕ್ತರಲ್ಲದ ಮುಂದೆ ತೆಗೆದುಕೊಂಡು ಹೋಗುವದು ಸರಿಯೋ? ನಿಮ್ಮ ನಿಮ್ಮಲ್ಲಿ ವ್ಯಾಜ್ಯವಾಡುವದೇ ನೀವು ಸೋತವರೆಂದು ಗುರುತು. ಅದಕ್ಕಿಂತ ಅನ್ಯಾಯವನ್ನು ಯಾಕೆ ಸಹಿಸಬಾರದು? ಆಸ್ತಿಯ ನಷ್ಟವನ್ನು ಯಾಕೆ ತಾಳಬಾರದು?”—1 ಕೊರಿಂಥ 6:1-7.
ಒಂದುವೇಳೆ ಕೆಲವು ಪರಿಸ್ಥಿತಿಗಳು—ಅವಿಶ್ವಾಸಿ ಸಹಭಾಗಿಗಳು, ಐಹಿಕ ಸರಬರಾಯಿಗಳು ಅಥವಾ ವಿಮೆಗೆ ಸಂಬಂಧಿಸಿದ ವಿಷಯಗಳು ಒಳಗೂಡಿರುವಲ್ಲಿ, ಐಹಿಕ ನ್ಯಾಯಾಲಯಗಳಲ್ಲಿ ಅಥವಾ ಸರಕಾರಿ ಕಾರ್ಯಭಾರಿಯ ಮೂಲಕ ಅವನ್ನು ಬಗೆಹರಿಸಲ್ಪಡುವ ಆವಶ್ಯಕತೆ ಉಂಟಾಗುವಂತೆ ತೋರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಸಾಲ ಸಲ್ಲಿಸಲಾರದ್ದಕ್ಕಾಗಿ ಒಬ್ಬ ಸಹೋದರನನ್ನು ಕಾನೂನು ಕ್ರಮದ ಕೆಳಗೆ ತರುವ ಮೂಲಕ ಸಭೆಯನ್ನು ನಿಂದೆಗೆ ಅಧೀನಪಡಿಸುವ ಬದಲಿಗೆ ಕ್ರೈಸ್ತನೊಬ್ಬನು ತುಸು ಆರ್ಥಿಕ ನಷ್ಟವನ್ನು ಅನುಭವಿಸುವುದು ಎಷ್ಟೋ ಮೇಲು.
ಹೆಚ್ಚಿನ ಸಂದರ್ಭಗಳಲ್ಲಿ ಅಂಥ ಉಗ್ರ ಅಂತ್ಯಫಲಗಳನ್ನು ವರ್ಜಿಸ ಸಾಧ್ಯವಿದೆ. ಹೇಗೆ? ಒಬ್ಬ ಸಹೋದರನಿಗೆ ಸಾಲಕೊಡುವ ಅಥವಾ ಅವನಿಂದ ಸಾಲಪಡೆಯುವ ಮೊದಲು, ಸಂಭವನೀಯವಾದ ಅಪಾಯಗಳನ್ನು ಅರಿತುಕೊಳ್ಳಿರಿ. ಎಚ್ಚರವನ್ನೂ ವಿವೇಕವನ್ನೂ ಉಪಯೋಗಿಸಿರಿ. ಎಲ್ಲಾದಕ್ಕಿಂತ ಹೆಚ್ಚಾಗಿ, “ನೀವು ಮಾಡುವದನ್ನೆಲ್ಲಾ,” ವ್ಯಾಪಾರದ ಕಾರ್ಯಾಧಿಗಳನ್ನು ಸಹಾ, “ಪ್ರೀತಿಯಿಂದ ಮಾಡಿರಿ.”—1 ಕೊರಿಂಥ 16:14. (w91 10/15)
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳನ್ನು ಬದಲಾಯಿಸಲಾಗಿದೆ.
b ಕೆಲವು ದೇಶಗಳಲ್ಲಿ ದಿವಾಳಿತನ ಮತ್ತು ಸಾಲ ಹಿಂದೆ ಸಲ್ಲಿಸಲು ತಪ್ಪಿಸುವಿಕೆಯು ಸಾಮಾನ್ಯವಾಗಿ ಇನ್ನೂ ಸೆರೆಮನೆವಾಸದಲ್ಲಿ ಅಂತ್ಯಗೊಳ್ಳುತ್ತದೆ.
c ಕೆಲವರು ಸ್ವಲ್ಪ ಸ್ವಲ್ಪ ಹಣವನ್ನು ಅನೇಕ ಸಾಲಿಗರಿಂದ ಸಾಲತಕ್ಕೊಳ್ಳುತ್ತಾರೆ. ಪ್ರತಿಯೊಬ್ಬ ಸಾಲಿಗನು, ಇಡೀ ಪರಿಸ್ಥಿತಿಯ ಪೂರ್ಣ ನಿಜತ್ವಗಳನ್ನು ಪಡೆಯದೆ, ಸಾಲಗಾರನು ಸುಲಭವಾಗಿಯೇ ಮರುಪಾವತಿ ಮಾಡಶಕ್ತನು ಎಂದು ನೆನಸಬಹುದು.