ದೇವರ ಮುಯ್ಯಿತೀರಿಸುವ ದಿನ
ಹಿಂದಿನ ಲೇಖನದಲ್ಲಿ ನಾವು ನೋಡಿದ ಪ್ರಕಾರ, ಪ್ರತೀಕಾರವನ್ನು ಸಲ್ಲಿಸುವುದು ನಮಗೇಕೆ ತಪ್ಪು ಎಂಬದಕ್ಕೆ ಹಲವಾರು ಕಾರಣಗಳು ಅಲ್ಲಿವೆ. ಅದು ತಪ್ಪು ಯಾಕಂದರೆ ಅಂತ್ಯಫಲದಲ್ಲಿ ಅದೇನನ್ನೂ ಬಗೆಹರಿಸಲಾರದು. ಅದು ತಪ್ಪು ಯಾಕಂದರೆ ಅದು ಸ್ನೇಹದ ಒಂದುಗೂಡಿಸುವ ಬಂಧಗಳನ್ನು ಕಟ್ಟುವ ಬದಲು ವೈರತ್ವವನ್ನು ಖಾಯಂಗೊಳಿಸುತ್ತದೆ. ಮತ್ತು ಅದು ತಪ್ಪಾಗಿದೆ ಯಾಕಂದರೆ ಸೇಡುತೀರಿಸುವ ಆಲೋಚನೆಗಳಿಗೆ ಎಡೆಗೊಡುವ ವ್ಯಕ್ತಿಗೆ ಅದು ವೈಯಕ್ತಿಕವಾಗಿ ಹಾನಿಕಾರಕವು.
ಆದರೂ, ಮಾನವ ಪ್ರತೀಕಾರವು ತಪ್ಪೆಂಬದಕ್ಕೆ ಅತ್ಯಂತ ಪ್ರಾಮುಖ್ಯ ಕಾರಣವು ಇಸ್ರಾಯೇಲ್ಯರಿಗೆ ಮೋಶೆಯಂದ ಮಾತುಗಳಲ್ಲಿ ತೋರಿಬರುತ್ತದೆ: “ನಿಮ್ಮ ದೇವರಾದ ಯೆಹೋವನು ಕನಿಕರವುಳ್ಳ ದೇವರಾಗಿದ್ದಾನೆ.” (ಧರ್ಮೋಪದೇಶಕಾಂಡ 4:31) ದೇವರು ಕನಿಕರವುಳ್ಳಾತನಾಗಿರುವುದರಿಂದ ನಾವು ಸಹಾ ಆತನಂತೆ ಕನಿಕರವುಳ್ಳವರಾಗಿರಬೇಕು. ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ನಿಮ್ಮ ತಂದೆ ಕರುಣವುಳ್ಳವನಾಗಿರುವ ಪ್ರಕಾರವೇ ನೀವೂ ಕರುಣವುಳ್ಳವರಾಗಿರಿ.”—ಲೂಕ 6:36.
ಆದಾಗ್ಯೂ ಬೈಬಲು ಯೆಹೋವನನ್ನು, “ಮುಯ್ಯಿತೀರಿಸುವ ದೇವರಾಗಿ”ಯೂ ವರ್ಣಿಸುತ್ತದೆ. (ಕೀರ್ತನೆ 94:1) “ಯೆಹೋವನು ನೇಮಿಸಿರುವ ಶುಭವರುಷ” ಮತ್ತು “ನಮ್ಮ ದೇವರು ಮುಯ್ಯಿ ತೀರಿಸುವ ದಿನದ” ಕುರಿತು ಪ್ರವಾದಿ ಯೆಶಾಯನು ಮಾತಾಡಿದ್ದಾನೆ. (ಯೆಶಾಯ 61:2) ದೇವರು ಕನಿಕರವುಳ್ಳಾತನೂ ಮುಯ್ಯಿತೀರಿಸುವಾತನೂ ಎರಡೂ ಆಗಿರುವುದು ಹೇಗೆ ಸಾಧ್ಯ? ಮತ್ತು ನಾವು ದೇವರ ಕನಿಕರವನ್ನು ಅನುಕರಿಸ ಬೇಕಾದರೆ, ಮುಯ್ಯಿ ತೀರಿಸುವುದರಲ್ಲಿ ಸಹಾ ನಾವೇಕೆ ಆತನನ್ನು ಅನುಕರಿಸಬಾರದು?
ಮೊದಲನೆಯ ಪ್ರಶ್ನೆಯನ್ನು ಉತ್ತರಿಸಲಿಕ್ಕಾಗಿ, ದೇವರು ಕನಿಕರವುಳ್ಳಾತನು ಯಾಕಂದರೆ ಆತನು ಮಾನವ ಕುಲವನ್ನು ಪ್ರೀತಿಸುತ್ತಾನೆ ಮತ್ತು ತನ್ನಿಂದಾದಷ್ಟು ಹೆಚ್ಚು ಸಲ ಮತ್ತು ಹೆಚ್ಚು ಸಮಯದ ತನಕ ಅವರನ್ನು ಕ್ಷಮಿಸುತ್ತಾನೆ ಯಾಕಂದರೆ ಮಾನವರು ತಮ್ಮ ದುರ್ವರ್ತನೆಯನ್ನು ತೊರೆದು ಸನ್ಮಾರ್ಗಕ್ಕೆ ಬರಲು ಸಂದರ್ಭವನ್ನು ಕೊಡಲಿಕ್ಕಾಗಿಯೇ. ಅನೇಕರು, ಅಪೊಸ್ತಲ ಪೌಲನಂತೆ, ಈ ಕನಿಕರದ ಸದುಪಯೋಗವನ್ನು ಮಾಡಿರುತ್ತಾರೆ. ಆದರೆ ದೇವರು ಮುಯ್ಯಿ ತೀರಿಸುವವನೂ ಆಗಿದ್ದಾನೆ—ಅಂದರೆ ನ್ಯಾಯವನ್ನು ಆವಶ್ಯಪಡಿಸುವ ಅರ್ಥದಲ್ಲಿ—ಯಾಕಂದರೆ ಅಂಥ ಕನಿಕರವು ಅಷ್ಟು ದೀರ್ಘಕಾಲದ ತನಕ ಮಾತ್ರವೇ ಮುಂದರಿಯಬಲ್ಲದು. ಕೆಲವರು ತಮ್ಮ ಮಾರ್ಗಗಳನ್ನು ಎಂದೂ ಬದಲಾಯಿಸಲಾರರು ಎಂದು ತೋರಿಸಿಕೊಟ್ಟ ಮೇಲೆ, ದೇವರು ತನ್ನ ತೀರ್ಪನ್ನು, ಆತನ ಮುಯ್ಯಿ ತೀರಿಸುವ ದಿನವೆಂದು ಕರೆಯಲ್ಪಟ್ಟ ಆ ದಿನದಲ್ಲಿ ನಿರ್ವಹಿಸುವನು.
ಎರಡನೆಯ ಪ್ರಶ್ನೆಗೆ ಉತ್ತರವಾಗಿ, ದೇವರು ಪ್ರತೀಕಾರವನ್ನು ಆವಶ್ಯಪಡಿಸುವ ಕಾರಣ ನಾವು ಸಹಾ ಪ್ರತೀಕಾರವನ್ನು ಸಲ್ಲಿಸುವುದರಲ್ಲಿ ನಿರ್ದೋಷಿಗಳಾಗಿ ತೋರಿಬರಲಾರೆವು. ಯೆಹೋವನು ಪರಿಪೂರ್ಣ ನ್ಯಾಯವಂತನು. ಮನುಷ್ಯರು ಹಾಗಿರುವುದಿಲ್ಲ. ದೇವರು ಒಂದು ವಿಷಯದ ಎಲ್ಲಾ ಮುಖಗಳನ್ನು ನೋಡುತ್ತಾನೆ ಮತ್ತು ಯಾವಾಗಲೂ ನೀತಿಯುಳ್ಳ ನಿರ್ಣಯವನ್ನೇ ಮಾಡುತ್ತಾನೆ. ಅದೇ ರೀತಿ ಮಾಡಲು ನಮ್ಮ ಮೇಲೆ ಭರವಸವಿಡಲು ನಾವು ಅರ್ಹರಲ್ಲ. ಆದುದರಿಂದಲೇ ಪೌಲನು ಸೂಚಿಸಿದ್ದು: “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವುದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆಂದು ಬರೆದದೆ.” (ರೋಮಾಪುರ 12:19) ನಮ್ಮ ಸ್ವಂತ ಹಿತಕ್ಕೋಸ್ಕರ ನಾವು ಪ್ರತೀಕಾರ ಮಾಡುವುದನ್ನು ಯೆಹೋವನಿಗೆ ಬಿಟ್ಟುಕೊಡಬೇಕು.
ಒಂದು ಮುಯ್ಯಿತೀರಿಸುವ ದಿನವೇಕೆ?
ಆದಾಗ್ಯೂ, ಪಶ್ಚಾತ್ತಾಪಪಡದ ದುಷ್ಕರ್ಮಿಗಳಿಗೆ ಲೆಕ್ಕತೀರಿಸುವ ಅಗತ್ಯವನ್ನು ಬೈಬಲು ಅನೇಕ ಸಂದರ್ಭಗಳಲ್ಲಿ ಅಂಗೀಕರಿಸಿಯದೆ. ಉದಾಹರಣೆಗೆ, ದೇವರು ಯೇಸುವಿನ ಮೂಲಕ, “ದೇವರನ್ನರಿಯದವರಿಗೂ ನಮ್ಮ ಕರ್ತನಾದ ಯೇಸುವಿನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರ ಸಲ್ಲಿಸುವನು” ಎಂಬದಾಗಿ ಅಪೊಸ್ತಲ ಪೌಲನು ಮುಂತಿಳಿಸಿದ್ದಾನೆ. (2 ಥೆಸಲೊನೀಕ 1:8) ಆ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವದಕ್ಕೆ ನಮಗೆ ಸಕಾರಣವದೆ. ಯಾಕೆ?
ಇಂದಿನ ಅಧಿಕಾಂಶ ಜನರು ನಿರ್ಮಾಣಿಕನ ಸಾರ್ವಭೌಮತ್ವವನ್ನು ಪ್ರತಿಭಟಿಸುವುದೇ ಅದಕ್ಕೆ ಒಂದು ಕಾರಣವು. ಆತನ ನೀತಿಯ ನಿಯಮಗಳನ್ನು ಅವರು ದುರ್ಲಕ್ಷಿಸುತ್ತಾರೆ. ಅವರು ದೇವರನ್ನು ನಂಬಲಿ ಅಥವಾ ನಂಬದಿರಲಿ, ದೇವರಿಗೆ ಲೆಕ್ಕ ಕೊಡಲಿದೆ ಎಂಬ ಅನಿಸಿಕೆ ಅವರಲ್ಲಿಲ್ಲವೆಂಬದು ಅವರ ನಡವಳಿಕೆಯಿಂದ ಸ್ಪಷ್ಟವಾಗಿಗಿ ತೋರಿಬರುತ್ತದೆ. ಅಂಥವರೆಲ್ಲರಿಗೆ ಕೀರ್ತನೆಗಾರನ ಮಾತುಗಳು ಅನ್ವಯಿಸುತ್ತವೆ: “ದುಷ್ಟನು ನಿನ್ನನ್ನು ಯಾಕೆ ಅಲಕ್ಷ್ಯಮಾಡಬೇಕು? ದೇವರು ವಿಚಾರಿಸುವದೇ ಇಲ್ಲವೆಂದು ಅವನು ಹೇಳಿಕೊಳ್ಳುವದೇಕೆ?” (ಕೀರ್ತನೆ 10:13) ಈ ರೀತಿಯಾಗಿ ದೂಷಿಸಲ್ಪಡಲು ಯೆಹೋವನು ತನ್ನನ್ನು ಸದಾಕಾಲಕ್ಕೂ ಬಿಟ್ಟುಕೊಡಲಾರನು. ಆತನು ಪ್ರೀತಿಯ ದೇವರಾಗಿರುವುದಾದರೂ, ನ್ಯಾಯಕ್ಕಾಗಿ ನಿಜವಾಗಿ ಹಂಬಲಿಸುವ ಜನರ ಕೂಗುಗಳಿಗೆ ಆತನು ಕಿವಿಗೊಡುವನು: “ಯೆಹೋವನೇ, ಏಳು; ದೇವರೇ, ಕುಗ್ಗಿದವರನ್ನು ಮರೆಯಬೇಡ; ಅವನನ್ನು ರಕ್ಷಿಸುವದಕ್ಕೆ ಕೈಚಾಚು.”—ಕೀರ್ತನೆ 10:12.
ಅದಲ್ಲದೆ, ನಿಯಮ-ಭಂಜಕರಾದ ಜನರು ನಾವು ಜೀವಿಸುತ್ತಿರುವ ಸಾಕ್ಷತ್ ಭೂಮಿಯನ್ನು ಧ್ವಂಸಮಾಡುತ್ತಿದ್ದಾರೆ. ವಾತಾವರಣ, ನೀರು ಮತ್ತು ನೆಲವನ್ನು ಮಲಿನ ಮಾಡಿರುತ್ತಾರೆ; ಭೂಮಿಯನ್ನೂ ಅನ್ಯಾಯ ಮತ್ತು ಕ್ರೂರತ್ವದಿಂದ ತುಂಬಿಸುತ್ತಾರೆ. ಮತ್ತು ಮಾನವ ಕುಲದ ಬದುಕಿರುವಿಕೆಯನ್ನೇ ಬೆದರಿಸುವುದಕ್ಕೆ ಸಾಕಷ್ಟು ರಾಸಾಯನಿಕ, ಪರಮಾಣು ಮತ್ತು ಇತರ ಮಾರಕ ಶಸ್ತ್ರಗಳ ಸಂಚಯವನ್ನು ಮಾಡಿರುತ್ತಾರೆ. ವಿಧೇಯ ಮಾನವರಿಗೆ ಒಂದು ಸುಭದ್ರ ಭವಿಷ್ಯತ್ತಿನ ಖಾತ್ರಿಗಾಗಿ ದೈವಿಕ ಹಸ್ತಕ್ಷೇಪವು ಅತ್ಯಾವಶ್ಯಕವು. (ಪ್ರಕಟನೆ 11:18) ಈ ಮಧ್ಯ-ಪ್ರವೇಶಿಸುವಿಕೆಯನ್ನು ತಾನೇ ಯೆಶಾಯನು ಮುಯ್ಯಿತೀರಿಸುವ ದಿನವೆಂದು ಸೂಚಿಸಿರುತ್ತಾನೆ.
ದೇವರ ಮುಯ್ಯಿ ತೀರಿಸುವ ದಿನವು ಏನನ್ನು ಪೂರೈಸುವುದು?
ವೈನ್ಸ್ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್‌ಗೆ ಅನುಸಾರವಾಗಿ, ಗ್ರೀಕ್ ಶಾಸ್ತ್ರದಲ್ಲಿ, ದೇವರಿಗೆ ಸಂಬಂಧಿಸಿದ ಪ್ರತೀಕಾರಕ್ಕೆ ಉಪಯೋಗಿಸಲ್ಪಟ್ಟ ಶಬ್ದವು ಅಕ್ಷರಶಃ “‘ನ್ಯಾಯಪರತೆಯಿಂದ ಹೊರಡುವಂಥ ಕಾರ್ಯವಿಧಾನ’ ಎಂಬರ್ಥವುಳ್ಳದ್ದಾಗಿದೆ. ಮಾನುಷ ಪ್ರತೀಕಾರವು ಹೆಚ್ಚಾಗಿ ಹೀಗಿಲ್ಲ, ಅದು ನೋವಿನಿಂದಾಗಿ ಅಥವಾ ಕೇವಲ ಕ್ರೋಧದಿಂದಾಗಿ ಮಾಡಲ್ಪಡುತ್ತದೆ.” ಹೀಗೆ ತನ್ನ ವೈರಿಗಳ ವಿರುದ್ಧವಾದ ದೇವರ ಪ್ರತೀಕಾರವು ವೈಯಕ್ತಿಕ ಸೇಡು ತೀರಿಸುವಿಕೆಯಂತಿರದು, ಅನಿಯಂತ್ರಿತ ರಕ್ತಪಾತದ ಸಮಯವಾಗದು. “ಯೆಹೋವನು ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವುದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ,” ಎಂದು ಬೈಬಲು ನಮಗೆ ಹೇಳುತ್ತದೆ.—2 ಪೇತ್ರ 2:9.
ದೇವರ ಸೇವಕರು ದೇವರ ಮುಯ್ಯಿತೀರಿಸುವ ದಿನವನ್ನು, ಒಳ್ಳೇ ನಡವಳಿಕೆಯು ಸಮರ್ಥಿಸಲ್ಪಡುವ ಹಾಗೂ ನೀತಿವಂತರು ದುಷ್ಟರ ದಬ್ಬಾಳಿಕೆಯಿಂದ ವಿಮೋಚಿಸಲ್ಪಡುವ ಸಮಯವಾಗಿ ಮುನ್ನೋಡುತ್ತಾರೆ. ಇದರ ಅರ್ಥವು ಅವರು ಹಗೆ ಸಾಧಿಸುವವರು ಅಥವಾ ಸೇಡುತೀರಿಸುವವರೆಂದಲ್ಲ. “ಪರರ ವಿಪತ್ತಿಗೆ ಹಿಗ್ಗುವವನು ದಂಡನೆಯನ್ನು ಹೊಂದದಿರನು,” ಎಂದು ಬೈಬಲ್ ಎಚ್ಚರಿಸುತ್ತದೆ. (ಜ್ಞಾನೋಕ್ತಿ 17:5) ಅದಕ್ಕೆ ಪ್ರತಿಯಾಗಿ, ದಯೆ ಮತ್ತು ಕನಿಕರವನ್ನು ಬೆಳೆಸುತ್ತಾ ಅವರು ಪ್ರತೀಕಾರದ ವಿಷಯವಾದ ಯಾವುದೇ ನಿರ್ಣಯಗಳನ್ನು ಮಾಡುವುದನ್ನು ದೇವರಿಗೇ ಒಪ್ಪಿಸುತ್ತಾರೆ.
ಕೋಷ್ಟಿರಾದ ವ್ಯಕ್ತಿಗಳಿಗೆ ಈ ರೀತಿ ಕ್ರಿಯೆ ನಡಿಸುವದೇನೂ ಸುಲಭವಲ್ಲ, ನಿಜ. ಆದರೆ ಅದು ಶಕ್ಯ, ಮತ್ತು ಅನೇಕರು ಅದನ್ನು ಮಾಡಿದ್ದಾರೆ. ದೃಷ್ಟಾಂತಕ್ಕಾಗಿ ಪೆದ್ರು ಎಂಬ ವ್ಯಕ್ತಿ, ಒಂದು ಅಸಂತೋಷದ ಬಾಲ್ಯವನ್ನು ಅನುಭವಿಸಿದ್ದನು, ಅವನ ಹಿರಿಯಣ್ಣನಿಂದ ಆಗಿಂದಾಗ್ಯೆ ಪೆಟ್ಟುಗಳು ಬೀಳುತ್ತಿದ್ದವು. ಹೀಗೆ ಅವನು ಹಿಂಸಾಚಾರಿಯಾಗಿ ಬೆಳೆದನು, ಸದಾ ಪೊಲೀಸರೊಂದಿಗೆ ತೊಂದರೆಯಲ್ಲಿ ಬೀಳುತ್ತಿದ್ದನು ಮತ್ತು ತನ್ನ ಅಣ್ಣನ ಮೇಲಿನ ಕೋಪವನ್ನು ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ತೆಗೆಯುತ್ತಿದ್ದನು. ಕೊನೆಗೆ ಒಬ್ಬ ಯೆಹೋವನ ಸಾಕ್ಷಿಗೆ ಅವನು ಕಿವಿಗೊಟ್ಟನು ಮತ್ತು ಒಂದು ಬೈಬಲಧ್ಯಯನವನ್ನು ಆರಂಭಿಸಿದನು. “ಯೆಹೋವನ ಸಹಾಯದಿಂದ,” ಅವನು ಹೇಳುವದು, “ನಾನು ಬದಲಾದೆ, ಮತ್ತು ಈಗ, ಜನರೊಂದಿಗೆ ಜಗಳವಾಡುವ ಬದಲಿಗೆ, ಕ್ರೈಸ್ತ ಹಿರಿಯನೋಪಾದಿ ಅವರಿಗೆ ನೆರವಾಗುತ್ತೇನೆ.” ಹೀಗೆ, ಬೈಬಲಿನ ಮತ್ತು ಪವಿತ್ರಾತ್ಮದ ಸಹಾಯದಿಂದ ಅಸಂಖ್ಯಾತ ಜನರು, ಹಗೆಸಾಧನೆಯಿಂದ ಅಥವಾ ಸೇಡು ತೀರಿಸುವುದರಿಂದ, ಇತರರ ಕಡೆಗೆ ಪ್ರೀತಿ ಮತ್ತು ತಾಳ್ಮೆಯನ್ನು ತೋರಿಸುವದಕ್ಕೆ ಮಾರ್ಪಟ್ಟಿರುವರು.
ನೀವೇನು ಮಾಡುವಿರಿ?
ಬರಲಿರುವ ದೇವರ ಮುಯ್ಯಿತೀರಿಸುವ ದಿನವನ್ನು ಮನಸ್ಸಲ್ಲಿಡುವ ಮೂಲಕ ಯೆಹೋವನ ತಾಳ್ಮೆಯ ಸದುಪಯೋಗ ಮಾಡುವಂತೆ ನಮಗೆ ಸಹಾಯವಾಗುವದು. ಆದರೆ ಹಾಗೆ ಮಾಡಲು ಇರುವ ಸಂದರ್ಭವು ಅಸೀಮಿತವಲ್ಲ. ಶೀಘ್ರದಲ್ಲೇ ಆ ದಿನವು ಆಗಮಿಸುವುದು. ಈವಾಗಲೇ ಅದೇಕೆ ಬರಲಿಲ್ಲವೆಂಬದನ್ನು ಅಪೊಸ್ತಲ ಪೇತ್ರನು ತೋರಿಸಿದ್ದಾನೆ: “ಯೆಹೋವನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ತಡಮಾಡುತ್ತಾನೆಂದು ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಅವನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.”—2 ಪೇತ್ರ 3:9.
ಆದುದರಿಂದ ದೇವರ ವಾಕ್ಯವನ್ನು ಅಧ್ಯಯನಿಸುವ ಮೂಲಕ ಮತ್ತು ಅದರ ಸೂಚನೆಗಳನ್ನು ಅನ್ವಯಿಸುವ ಮೂಲಕ ದೇವರ ಲೆಕ್ಕ ತೀರಿಸುವ ದಿನಕ್ಕಾಗಿ ಈಗಲೇ ತಯಾರಿಸುವುದು ಅತ್ಯಂತ ಜರೂರಿಯದ್ದು. ಇದು ನಮಗೆ ಕೀರ್ತನೆಗಾರನ ಈ ಮಾತುಗಳನ್ನು ಅನುಸರಿಸಲು ಸಹಾಯ ಮಾಡುವದು: “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು. ಕೆಡುಕರು ತೆಗೆದು ಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.”—ಕೀರ್ತನೆ 37:8, 9. (w91 11/1)
[ಪುಟ 7 ರಲ್ಲಿರುವ ಚಿತ್ರ]
ದೇವರ ಮುಯ್ಯಿತೀರಿಸುವ ದಿನದ ಅನಂತರ, ‘ಯೆಹೋವನನ್ನು ನಿರೀಕ್ಷಿಸುವವರಾದ ಜನರು ದೇಶವನ್ನು ಅನುಭವಿಸುವರು’