ಆರಾಧಕರ ಕೊಯ್ಲು!
ಅಪೊಸ್ತಲ ಯೋಹಾನನಿಗೆ, “ಕರ್ತನ ದಿನದಲ್ಲಿ” ಸಂಭವಿಸುವ ಲೋಕವನ್ನೇ ನಡುಗಿಸುವ ಘಟನೆಗಳ ಒಂದು ದರ್ಶನವನ್ನು ಕೊಡಲಾಯಿತು. ಸ್ವರ್ಗೀಯ ಕರ್ತನಾದ ಯೇಸು ಕ್ರಿಸ್ತನು, ಬಿಳಿ ಕುದುರೆಯಿಂದ ಚಿತ್ರಿಸಲ್ಪಟ್ಟ ನೀತಿಯುಳ್ಳ ಯುದ್ಧಕ್ಕಾಗಿ—“ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ” ಹೊರಡುವದನ್ನು ಅವನು ಕಂಡನು. ಆತನು ಮಾಡಿದ ಮೊದಲನೆಯ ಸಂಗತಿಯು ದೇವರ ಪ್ರಧಾನ ಶತ್ರುವಾದ ಸೈತಾನನನ್ನು ಪರಲೋಕದಿಂದ ಕೆಳಗೆ ಈ ಭೂಮಿಯ ಸಮೀಪಕ್ಕೆ ದೊಬ್ಬಿ ಬಿಟ್ಟದ್ದೇ. ಸಾಂಕೇತಿಕ ಕುದುರೆ ಸವಾರರು ಮತ್ತು ಅವರ—ಕೆಂಪು, ಕಪ್ಪು, ಮತ್ತು ಬೂದಿ ಬಣ್ಣದ ಕುದುರೆಗಳಿಂದ ಚಿತ್ರಿಸಲ್ಪಟ್ಟ ಅಭೂತಪೂರ್ವ ಸಂಹಾರ, ಕ್ಷಾಮ, ರೋಗಗಳಿಂದ ಮಾನವ ಕುಲವನ್ನು ಬಾಧಿಸಿದ ಮೂಲಕ, ಸೈತಾನನು ಅದಕ್ಕೆ ಪ್ರತಿಕ್ರಿಯೆಯನ್ನು ತೋರಿಸಿದನು. (ಪ್ರಕಟನೆ 1:10; 6:1-8; 12:9-12) ಈ ಉಪದ್ರವಗಳು ಮೊತ್ತಮೊದಲಾಗಿ 1914 ನೆಯ ವರ್ಷದಲ್ಲಿ ಸ್ಫೋಟಗೊಂಡವು ಮತ್ತು ಆ ಸಮಯದಿಂದ ಹಿಡಿದು ಅವು ವೃದ್ಧಿಯಾಗುತ್ತಾ ಬಂದಿವೆ. ಶೀಘ್ರದಲ್ಲೇ ಅವು, ಯೇಸು ಯಾವದನ್ನು “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ. ಇನ್ನು ಮೇಲೆಯೂ ಆಗುವದಿಲ್ಲ” ಎಂದು ವರ್ಣಿಸಿದ್ದನೋ ಅದರಲ್ಲಿ ತುತ್ತತುದಿಯನ್ನೇರುವವು.—ಮತ್ತಾಯ 24:3-8, 21.
ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಹೇಗೆ ಮುಂದುವರಿಯುವರು? ಈ ಆರಾಧಕರು ಒಟ್ಟುಗೂಡಿಸಲ್ಪಡುವ ತನಕ ನಾಶನದ ಗಾಳಿಗಳನ್ನು ದೇವದೂತ ಸೇನೆಗಳು “ಗಟ್ಟಿಯಾಗಿ ಹಿಡಿದಿರುವ” (NW) ಕುರಿತಾಗಿ ಪ್ರಕಟನೆ 7 ನೆಯ ಅಧ್ಯಾಯ, 1-10 ನೆಯ ವಚನಗಳು ಮಾತಾಡುತ್ತವೆ. 1914 ರಿಂದ ದಾಟಿದ ಕಾಲಾವಧಿಯಲ್ಲಿ, 1,44,000 ಮಂದಿ ಆತ್ಮಿಕ ಇಸ್ರಾಯೇಲ್ಯರಲ್ಲಿ ಭೂಮಿಯಲ್ಲಿ ಉಳಿದಿರುವ ಕೊನೆಯವರು ಒಟ್ಟುಗೂಡಿಸಲ್ಪಟ್ಟಿದ್ದಾರೆ. ಇವುಗಳಾದ ಮೇಲೆ “ಇಗೋ, ಸಕಲ ಜನಾಂಗ, ಕುಲ, ಭಾಷೆ ಮತ್ತು ಜನರಿಂದ ಬಂದವರಾದ ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು.” ಈ ಮಹಾ ಸಮೂಹದವರು ಈವಾಗಲೇ ಲಕ್ಷಾಂತರ ಸಂಖ್ಯೆಗೇರಿರುತ್ತಾರೆ. ನಿರ್ದೋಷಿ ಕುರಿಮರಿಯಾಗಿ ಕೊಯ್ಯಲ್ಪಟ್ಟ ಯೇಸುವಿನ ವಿಮೋಚನಾ ರಕ್ತದಲ್ಲಿ ನಂಬಿಕೆಯನ್ನಿಟ್ಟ ಕಾರಣ ಅವರು ದೇವರ ಸಿಂಹಾಸನದ ಮುಂದೆ ಅನುಗ್ರಹಿತ ಸ್ಥಾನದಲ್ಲಿ ನಿಂತಿರುತ್ತಾರೆ. “ಮತ್ತು ಅವರು—ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ ಎಂದು ಮಹಾ ಶಬ್ದದಿಂದ ಕೂಗಿದರು.” ಈ ಉತ್ಸಾಹಿತ ಆರಾಧಕರು, ಇನ್ನು ಬೇರೆಯವರಿಗೆ “ಬಾ!” ಅನ್ನುತ್ತಾರೆ, ಮತ್ತು ಹೀಗೆ ಸರದಿಯಲ್ಲಿ, ಅವರು “ಮಹಾ ಸಂಕಟ” ದೊಳಗಿಂದ ಹೊರಬಂದು ರಕ್ಷಣೆಗಾಗಿ ಒಟ್ಟುಗೂಡಿಸಲ್ಪಡುವರು.—ಪ್ರಕಟನೆ 7:14-17; 22:17.
“ಭೂಮಿಯಲ್ಲೆಲ್ಲಾ”
ಆ ದೇವಭಕ್ತ ಆರಾಧಕರ ಕುರಿತಾಗಿ ಇದನ್ನು ಹೇಳ ಸಾಧ್ಯವಿದೆ: “ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು ಅವರ ನುಡಿಗಳು ಭೂಮಿಯ ಕಟ್ಟಕಡೆಯ ವರೆಗೂ ವ್ಯಾಪಿಸಿದವು.” (ರೋಮಾಪುರ 10:18) ಅವರ ಪರಿಶ್ರಮದ ಕೆಲಸವು ಗಮನಾರ್ಹವಾದ ಪ್ರತಿಫಲದೊಂದಿಗೆ ಆಶೀರ್ವದಿಸಲ್ಪಟ್ಟಿತು. ಉದಾಹರಣೆ:
ಮೆಕ್ಸಿಕೊ ಈಗ ಯೆಹೋವನ 3,35,965 ಕ್ರಿಯಾಶೀಲ ಪ್ರಚಾರಕರ ವರದಿಯನ್ನು ಮಾಡಿದೆ, ಕೇವಲ ಮೂರು ವರ್ಷಗಳಲ್ಲಿ ಒಂದು ನೂರು ಸಾವಿರ (ಒಂದು ಲಕ್ಷ ) ಪ್ರಚಾರಕರ ವೃದ್ಧಿ! ಯಾಕೆ ಅಷ್ಟು ಮಹತ್ತಾದ ವಿಸ್ತರಣ? ಕೆಳಗಿನ ವರದಿಯು ವಿವರಿಸಲು ಸಹಾಯ ಮಾಡೀತು. ಅರೇಲ್ಯೊ ಎಂಬ ಯುವಕನು ಕ್ಯಾಥ್‌ಲಿಕ್ ಚರ್ಚಿನಲ್ಲಿ ಪಾರುಪತ್ಯಗಾರನಾಗಿದ್ದನು. ಪ್ರತಿ ಸಾರಿ ಯೆಹೋವನ ಸಾಕ್ಷಿಗಳು ಹಳ್ಳಿಗೆ ಬಂದಾಗ ಅವರಿಗೆ ಯಾರೂ ಕಿವಿಗೊಡುವದನ್ನು ನಿರುತ್ತೇಜಿಸಲು ಅವನು ಚರ್ಚ್ ಗಂಟೆಗಳನ್ನು ಬಾರಿಸುತ್ತಿದ್ದನು. ತಕ್ಕ ಸಮಯದಲ್ಲಿ ಅವನು ಒಂದು ಕ್ಯಾಥ್‌ಲಿಕ್ ಜೆರೂಸಲೇಮ್ ಬೈಬಲ್ ಖರೀದಿಸಿ ಅದನ್ನು ಓದಲು ಸುರುಮಾಡಿದ, ಆದರೆ ಅದು ಅವನಿಗೆ ಅರ್ಥವಾಗಲಿಲ್ಲ. ಅನಂತರ ಒಂದು ದಿನ ಅವನ ಮಿತ್ರನ ಕಂಕುಳಡಿಯಲ್ಲಿ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲನ್ನು ಕಂಡನು. ಅರೇಲ್ಯೊ ಮಿತ್ರನ ಬೈಬಲು ಸುಳ್ಳೆಂದು ಜರೆದನು, ಮತ್ತು “ನಿಜ” ಬೈಬಲನ್ನು ತೋರಿಸಲು ಅವನನ್ನು ತನ್ನ ಸ್ವಂತ ಮನೆಗೊಯ್ದನು. ಅವನ ಮಿತ್ರನು ಹೇಳಿದ್ದು: “ವಿಮೋಚನಕಾಂಡ 20ನ್ನು ಓದು,” ಮತ್ತು ಅವನು ಹೊರಟು ಹೋದನು.
ಅಧ್ಯಾಯ 1 ರಿಂದ ಹಿಡಿದು, ಪಾರುಪತ್ಯಗಾರನು ವಿಮೋಚನಕಾಂಡ 20:4, 5ಕ್ಕೆ ಬರುವ ತನಕ ಪೂರಾ ಓದಲು ತೊಡಗಿದನು. ವಿಗ್ರಹಗಳ ಕುರಿತು ತನ್ನ ಕ್ಯಾಥ್‌ಲಿಕ್ ಬೈಬಲ್ ಹೇಳಿದ ವಿಷಯವು ಅವನಿಗೆ ಧಕ್ಕೆ ತಗಲಿಸಿತು. ಮಾರಣೆ ಭಾನುವಾರ ಪೂಜೆಯ [ಮಾಸ್‌ನ] ನಂತರ, ವಿಗ್ರಹಗಳ ಕುರಿತಾದ ಶಾಸ್ತ್ರ ವಚನಗಳ ಬಗ್ಗೆ ಪಾದ್ರಿಯನ್ನು ಪ್ರಶ್ನಿಸಿದನು. ತಾನು ಸ್ವತಾಃ ವಿಗ್ರಹಗಳನ್ನು ಕೇವಲ ಪೂಜ್ಯತೆಯಿಂದ ನೋಡುತ್ತೇನೆ; ಅವನ್ನು ಆರಾಧಿಸುವುದಿಲ್ಲ ಎಂದನು ಪಾದ್ರಿ ಮೊದಲಲ್ಲಿ. ಇದು ಅರೇಲ್ಯೊವನ್ನು ತೃಪ್ತಿಪಡಿಸಲಿಲ್ಲವೆಂಬುದನ್ನು ಕಂಡ ಪಾದ್ರಿಯು ಅವನು ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಾಸಿಸುತ್ತಿರಬೇಕೆಂದು ದೂರಿದನು. ಅರೇಲ್ಯೊ ಇದನ್ನು ಅಲ್ಲಗಳೆದನು, ಆದರೆ ಕೂಡಿಸಿದ್ದು: “ಈಗ ಅದನ್ನೇ ಮಾಡಲಿರುವೆ!”
ಇನ್ನೊಂದು ಸಲ ಸಾಕ್ಷಿಗಳು ಹಳ್ಳಿಗೆ ಬಂದಾಗ, ಅರೇಲ್ಯೊ ಅವರನ್ನು ಸಂಪರ್ಕಿಸಿದನು ಮತ್ತು ಅವರೊಂದಿಗೆ ಬೈಬಲ್ ಅಧ್ಯಯನ ಮಾಡ ತೊಡಗಿದನು. ಚರ್ಚಿನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದನು ಮತ್ತು ಮೂರು ತಿಂಗಳಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಬಹಿರಂಗ ಶುಶ್ರೂಷೆ ಮಾಡಲು ಯೋಗ್ಯತೆ ಪಡೆದನು. ಅವನು ಸಂದರ್ಶಿಸಿದ ಮೊದಲನೆ ಮನೆಯು ಒಬ್ಬ ಪಾದ್ರಿಯದ್ದಾಗಿತ್ತು. ಮಾಜಿ ಪಾರುಪತ್ಯಗಾರನನ್ನು ರಾಜ್ಯದ ಪ್ರಚಾರಕನ ಪಾತ್ರದಲ್ಲಿ ಕಂಡಾಗ ಅವನು ತನ್ನ ಕಣ್ಣನ್ನು ತಾನೇ ನಂಬಲಾರದೆ ಹೋದನು. ಪಾದ್ರಿಯು ಅವನಿಗೆ ಬಹಿಷ್ಕಾರದ ಬೆದರಿಕೆ ಹಾಕಿದನು, ಆದರೆ ಅದರ ಅವಶ್ಯವಿಲ್ಲವೆಂದು ಅರೇಲ್ಯೊ ಹೇಳಿದನು ಯಾಕಂದರೆ ತಾನು ಈ ಮೊದಲೆ ಚರ್ಚನ್ನು ತ್ಯಜಿಸಿದ್ದೇನೆ ಎಂದನು. ಅವನ ಧೈರ್ಯದ ನಿಲುವು, ಯೆಹೋವನ ಸಾಕ್ಷಿಗಳೊಂದಿಗೆ ಈವಾಗಲೇ ಅಭ್ಯಾಸ ಮಾಡುತ್ತಿದ್ದ ಅನೇಕ ಹಳ್ಳಿಗರಿಗೆ ಉತ್ತೇಜನವನ್ನು ಕೊಟ್ಟಿತು. ಮುಂದಿನ ಜಿಲ್ಲಾ ಅಧಿವೇಶನದಲ್ಲಿ ಅರೇಲ್ಯೊ ಮತ್ತು 21 ಮಂದಿ ಇತರರಿಗೆ ದೀಕ್ಷಾಸ್ನಾನವಾಯಿತು. ಈ ಕ್ಷೇತ್ರದಲ್ಲಿ ಬೆಳವಣಿಗೆ ಎಷ್ಟು ಹೆಚ್ಚಾಗಿತ್ತೆಂದರೆ ದೀಕ್ಷಾಸ್ನಾನದ ಅಭ್ಯರ್ಥಿಗಳ ಪ್ರಶ್ನೆಗಳನ್ನು ಈ ಗುಂಪಿನೊಂದಿಗೆ ಪರಾಮರ್ಶಿಸಲು ಕೇವಲ ಒಬ್ಬನೆ ಹಿರಿಯನು ಅಲ್ಲಿದ್ದನು.
“ಅವರ ಧ್ವನಿ ಪ್ರಸರಿಸಿತು”
ರಾಜ್ಯದ ಸಾರುವಿಕೆಯಿಂದ ಯಾವ ಪಾರಾಗುವಿಕೆಯೂ ಇಲ್ಲ. ಒಬ್ಬ ಇಟ್ಯಾಲಿಯನ್ ಕ್ಯಾಥ್‌ಲಿಕ್ ಪ್ರತಿ ಸಾರಿ ಯೆಹೋವನ ಸಾಕ್ಷಿಗಳು ಸಂದರ್ಶಿಸಿದಾಗ ಕೆರಳುತ್ತಿದ್ದನು. ಹೀಗೆ ಅವನ ಕಂಪೆನಿ ಅವನನ್ನು ಸಿಂಗಾಪುರಕ್ಕೆ ವರ್ಗಾಯಿಸಿದಾಗ, ಹೇಗೂ ಕೊನೆಗೆ ಅವರ ಪೀಡೆ ತಪ್ಪಿತು ಎಂದು ಭಾವಿಸಿಕೊಂಡ. ಆದರೆ ಸಾಕ್ಷಿಗಳು ಅಲ್ಲಿ ಕೂಡ ಇದ್ದದ್ದನ್ನು ಕಂಡು ಅವನಿಗೆ ಆಶ್ಚರ್ಯ. ಆದ್ದರಿಂದ ಸಾಕ್ಷಿಗಳು ಬಂದರೆ ಅವರನ್ನು ಆಕ್ರಮಿಸುವದಕ್ಕಾಗಿ ಎರಡು ಕ್ರೂರ ನಾಯಿಗಳನ್ನು ಪಡಕೊಂಡನು. ಇಬ್ಬರು ಸಾಕ್ಷಿಗಳು ಅವನ ಮನೆಯನ್ನು ಸಂದರ್ಶಿದಾಗ, ಹಾರಿದವು ಹೊರಗೆ ಆ ನಾಯಿಗಳು. ದಿಗಿಲುತಪ್ಪಿದ ಆ ಹೆಂಗಸರು ಬೀದಿ ಚೌಕದ ಇಕ್ಕಡೆಗೆ ಜೀವಬಿಟ್ಟು ಓಡಿದರು. ನಾಯಿಗಳಲ್ಲೊಂದು ಸಾಕ್ಷಿಗಳಲ್ಲಿ ಒಬ್ಬಳ ಬೆನ್ನು ಹಿಡಿದಾಗ, ಆಕೆ ದಿಕ್ಕುತೋಚದೆ ಎರಡು ಬ್ರೊಷರ್‌ಗಳನ್ನು ಬ್ಯಾಗ್‌ನಿಂದ ಸೆಳೆದು ತೆಗೆದು ನಾಯಿಯ ತೆರೆದ ಬಾಯೊಳಗೆ ತುರುಕಿಸಿದಳು. ಆಗ ನಾಯಿ ಆಕೆಯ ಬೆನ್ನಟ್ಟುವದನ್ನು ನಿಲ್ಲಿಸಿತು, ಹಿಂತಿರುಗಿ ಮನೆಯ ಕಡೆಗೆ ಕುಕ್ಕುಲೋಟ ಹಾಕಿತು.
ಮರುವಾರದಲ್ಲಿ, ಆ ಇಬ್ಬರು ಸಾಕ್ಷಿಗಳು ಆ ರಸ್ತೆಯ ಆಚೆ ಪಕ್ಕದ ಒಂದು ಮನೆಗೆ ಪುನಃಸಂದರ್ಶನೆ ಮಾಡುತ್ತಿದ್ದರು. ನಾಯಿಗಳ ಮಾಲಕನು ತನ್ನ ತೋಟದಲ್ಲಿದ್ದನು, ಅವನು ಆ ಸ್ತ್ರೀಯರನ್ನು ವಂದಿಸಿ, ಅವರನ್ನು ತನ್ನ ಮನೆಯೊಳಗೆ ಆಮಂತ್ರಿಸಿದಾಗ ಅವರಿಗೆ ಆಶ್ಚರ್ಯ. ತಾನು ಯೆಹೋವನ ಸಾಕ್ಷಿಗಳೊಂದಿಗೆ ಎಂದೂ ಮಾತಾಡಿಲ್ಲವೆಂದೂ ಅವರ ಯಾವುದೇ ಪ್ರಕಾಶನವನ್ನು ಓದಲಿಲ್ಲವೆಂದೂ ಅವನಂದನು. ಆದರೆ ತನ್ನ ನಾಯಿಗಳಲ್ಲೊಂದರ ಬಾಯಲ್ಲಿ ಬ್ರೊಷರುಗಳನ್ನು ಕಂಡು ಅವನಿಗೆ ಅಚ್ಚರಿಯಾಗಿತ್ತು. ಅದೇ ಸಂಜೆ ಅವನು ಬ್ರೊಷರ್‌ಗಳನ್ನೋದಿದನು ಮತ್ತು ಅವುಗಳಿಂದ ಪ್ರಭಾವಿತನಾದನು. ಅವನು ತನ್ನಿಡೀ ಜೀವಮಾನ ಕ್ಯಾಥ್‌ಲಿಕನಾಗಿದ್ದರೂ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಧ್ಯಯನ ಮಾಡುವ ಒಂದು ಅಪೇಕ್ಷೆಯನ್ನು ಈಗ ವ್ಯಕ್ತಪಡಿಸಿದನು.
ಈ ಮನುಷ್ಯನು ಪುನಃ ಇಟೆಲಿಗೆ ಹಿಂದೆ ವರ್ಗಾಯಿಸಲ್ಪಟ್ಟದರಿಂದ, ಯೆಹೋವನ ಸಾಕ್ಷಿಗಳು ಅವನೊಂದಿಗೆ ಅಲ್ಲಿ ಅಭ್ಯಾಸ ಮಾಡುವಂತೆ ಏರ್ಪಾಡನ್ನು ಮಾಡಲಾಯಿತು. ಅವನೂ ಅವನ ಪತ್ನಿಯೂ ಕೂಟಕ್ಕೆ ಹಾಜರಾಗಲು ಆರಂಭಿಸಿದಾಗ, ಅಲ್ಲಿನ ನಿವಾಸಿ ಪಾದ್ರಿ ಕೋಪದಿಂದ ಅವರಿಗೆ ಬೆದರಿಕೆಗಳನ್ನು ಹಾಕಿದನು. ಅವರ ತೋಟಕ್ಕೆ ಯಾರೋ ಬೆಂಕಿಕೊಟ್ಟಾಗ, ದಂಪತಿಗಳು ಚರ್ಚಿನೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಬಿಟ್ಟರು. ಈ ಮನುಷ್ಯನು ಈಗ ಹೇಳುವದು: “ನಾನು ಈವಾಗಲೇ ನನ್ನ ಕುಟುಂಬದ ಅನೇಕ ಸದಸ್ಯರಿಗೆ ಸಾಕ್ಷಿಕೊಡುತ್ತಲಿದ್ದೇನೆ ಯಾಕಂದರೆ ಯೆಹೋವನೊಬ್ಬನೇ ಸತ್ಯದೇವರೆಂದು ಅವರು ತಿಳಿಯುವಂತೆ ಮಾಡಲು ನಾನು ಬಯಸುತ್ತೇನೆ.”
“ಲೋಕದ ಕಟ್ಟಕಡೆಯ ವರೆಗೂ ವ್ಯಾಪಿಸಿದವು”
ಭೂಮಿಯ ಕಟ್ಟಕಡೆಯಿಂದ ಬಂದ ಇನ್ನೊಂದು ಅನುಭವವು ರಾಜ್ಯದ ಸಂದೇಶವು ಹೇಗೆ ಗಣ್ಯ ಮಾಡಲ್ಪಡುತ್ತದೆ ಮತ್ತು ಜೀವಿತಗಳನ್ನು ಮಾರ್ಪಡಿಸಲು ಹೇಗೆ ನೆರವಾಗುತ್ತದೆಂಬದನ್ನು ತೋರಿಸುತ್ತದೆ. ಆಸ್ಟ್ರೇಲಿಯದ ಒಬ್ಬ ಸಾಕ್ಷಿಯು ಒಂದು ಹುಟ್ಟುಪೂರ್ವದ ವರ್ಗವನ್ನು ಹಾಜರಾದಾಗ, ಅನೇಕ ದುರಭ್ಯಾಸಗಳಿದ್ದ, ಬಸುರಿನ ಸ್ಥಿತಿಯಲ್ಲೂ ದೂಮ್ರಪಾನ ಬಿಟ್ಟುಬಿಡಲು ನಿರಾಕರಿಸಿದ್ದ ಒಬ್ಬಾಕೆ ಸ್ತ್ರೀಯು ಅವಳಿಗೆ ಭೇಟಿಯಾದಳು. ಅವಳ ಮನೋಭಾವದಿಂದಾಗಿ ಸಾಕ್ಷಿಯು ಬಹಳ ಬೇಸರಗೊಂಡಳು. ಆಕಸ್ಮಿಕವಾಗಿ ಅವರ ಹೆರಿಗೆಯು ಒಂದೇ ಸಮಯದಲ್ಲಿ ಮತ್ತು ಆಸ್ಪತ್ರೆಯ ಒಂದೇ ವಾರ್ಡಿನಲ್ಲಿ ನಡೆಯಿತ್ತಾದ್ದರಿಂದ, ಮಾತಾಡುವ ಒಂದು ಸಂದರ್ಭವು ಅವರಿಗೆ ದೊರಕಿತು. ಚಿಕ್ಕಂದಿನಲ್ಲಿ ಆ ಸ್ತ್ರೀಗೆ ಅನೇಕ ಸಮಸ್ಯೆಗಳಿದ್ದದ್ದಾಗಿ ತೋರಿಬಂತು ಮತ್ತು ಈಗ ಆಕೆಯ ಮದುವೆ ಒಡೆದು ಹೋಗುವದರಲ್ಲಿತ್ತು. ಹೀಗೆ, ಆಸ್ಪತ್ರೆಯಿಂದ ಹೊರಬಂದ ಮೇಲೆ ಸಾಕ್ಷಿಯು ಆ ಸ್ತ್ರೀಯನ್ನು ಭೇಟಿ ಮಾಡಿ, ಮೇಕಿಂಗ್ ಯುವರ್ ಫ್ಯಾಮಿಲಿ ಲೈಫ್ ಹೆಪ್ಪಿ ಪುಸ್ತಕವನ್ನುಪಯೋಗಿಸಿ ಒಂದು ಬೈಬಲಧ್ಯಯನ ಪ್ರಾರಂಭಿಸಿದಳು.
ಆ ಸ್ತ್ರೀಯ ಗಂಡನು ಸತ್ಯ ಧರ್ಮವನ್ನು ಕಂಡುಕೊಳ್ಳುವಂತೆ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದನು, ಈ ಶರತ್ತನ್ನು ಕೂಡಿಸಿದ್ದನು: “ಎಷ್ಟರ ತನಕ ಅದು ಯೆಹೋವನ ಸಾಕ್ಷಿಗಳಲ್ಲವೊ ಆ ತನಕ!” ಆದಾಗ್ಯೂ, ತನ್ನ ಪತ್ನಿ ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಾಸಿಸುವದನ್ನು ಆತನು ಕಂಡಾಗ, ಪ್ರಶ್ನೆಗಳನ್ನು ಕೇಳತೊಡಗಿದನು ಮತ್ತು ಅಭ್ಯಾಸದಲ್ಲಿ ಸೇರುವಂತೆ ಅವನನ್ನು ಆಮಂತ್ರಿಸಲಾಯಿತು. ಅವನು ಹಾಗೆ ಮಾಡಿದನು ಮತ್ತು ಬೇಗನೇ ಸಭಾಕೂಟಗಳಿಗೆ ಹಾಜರಾಗ ತೊಡಗಿದನು. ಈಗ ಗಂಡ ಹೆಂಡತಿ ಇಬ್ಬರೂ ದೀಕ್ಷಾಸ್ನಾನ ಪಡೆದಿದ್ದಾರೆ ಮತ್ತು ಅವರ ದಾಂಪತ್ಯ ಸ್ಥಿತಿಗತಿಯೂ ಬಹಳವಾಗಿ ಸುಧಾರಣೆ ಹೊಂದಿರುವದು ವ್ಯಕ್ತವಾಗಿದೆ.
ಅಂಥ ಸಾಹಿತ್ಯದಲ್ಲಿ ಆಧಾರಿತವಾದ ಮನೆ ಬೈಬಲಭ್ಯಾಸಗಳು ಅನೇಕ ಹೊಸ ಆರಾಧಕರ ಒಟ್ಟುಗೂಡಿಸುವಿಕೆಯಲ್ಲಿ ಫಲಿಸಿವೆ. ಎಲ್ಲಿ ಯೆಹೋವನ ಸಾಕ್ಷಿಗಳಿಗೆ ಕ್ರಾಂತಿಗಳನ್ನು, ಒಳಯುದ್ಧಗಳನ್ನು ಅಥವಾ ಸರಕಾರಿ ನಿರ್ಬಂಧಗಳನ್ನು ಎದುರಿಸಲಿಕ್ಕಿದೆಯೇ ಅಲ್ಲಿ ಮನೆ ಬೈಬಲಭ್ಯಾಸಗಳು ಬಲು ವೃದ್ಧಿಯನ್ನು ಪಡೆದಿವೆ. ಅಂಗೋಲದಲ್ಲಿ ಒಳಯುದ್ಧಗಳು ಅನೇಕ ವರ್ಷಗಳ ತನಕ ನಡೆದವು ಮತ್ತು ಸಾಕ್ಷಿಗಳು ಬಹಳ ಹಿಂಸೆ ಮತ್ತು ಕಷ್ಟವನ್ನು ಅನುಭವಿಸಿದರು. ಕಳೆದ ವರ್ಷದಾರಂಭದಲ್ಲಿ, ಪ್ರತಿಯೊಬ್ಬ ಪ್ರಚಾರಕನು ಸರಾಸರಿಯಾಗಿ ಹೆಚ್ಚು ಕಡಿಮೆ ಮೂರು ಮನೆ ಬೈಬಲಭ್ಯಾಸಗಳನ್ನು ವರದಿ ಮಾಡಿದ್ದರು, ಆದರೆ ಪ್ರಚಾರಕರಲ್ಲಿ ಇದ್ದ ಬೈಬಲ್ ಸಾಹಿತ್ಯ ಕೊಂಚವೇ. ಸಂಚಾರ ಮೇಲ್ವಿಚಾರಕರು ಪ್ರತಿ ದಿನ ಒಂದು ಚಿಕ್ಕ ಗುಂಪನ್ನು ಸಂದರ್ಶಿಸಿ, ದಿನದ ಹೊತ್ತಿನಲ್ಲಿ ಕ್ಷೇತ್ರ ಸೇವೆಯನ್ನು ಮತ್ತು ಪ್ರತಿ ಸಂಜೆ ಕೂಟಗಳನ್ನು ಏರ್ಪಡಿಸುತ್ತಿದ್ದರು! ವಿರೋಧಗಳು ಕೊನೆಗೊಂಡಾಗ ಮತ್ತು ಬಹಳಷ್ಟು ಬೇಕಾಗಿದ್ದ 42 ಟನ್ ಬೈಬಲ್ ಸಾಹಿತ್ಯವು ದಕ್ಷಿಣ ಆಫ್ರಿಕಾದಿಂದ ಬಂದಾಗ, ಅಲ್ಲಾದ ಸಂತೋಷವೆಷ್ಟು! ನಿಶ್ಚಯವಾಗಿಯೂ, ಆ ಸಹೋದರರೀಗ “ಹೆಚ್ಚು ಮಹತ್ವದ ಸಂಗತಿಗಳು ಯಾವವೆಂದು ನಿಶ್ಚೈಸಲು” ಶಕ್ತರಾಗಿರುವುದರಿಂದ ಅವರ ಪ್ರೀತಿಯು “ಹೆಚ್ಚುತ್ತಾ ಹೆಚ್ಚುತ್ತಾ ನಿಷ್ಕೃಷ್ಟ ಜ್ಞಾನದಿಂದಲೂ ಪೂರ್ಣ ವಿವೇಚನೆಯಿಂದಲೂ” ಕೂಡಿರುವದಾಗುವುದು. (ಫಿಲಿಪ್ಪಿ 1:9, 10) ಯಾರಲ್ಲಿ ವಿಪುಲವಾದ ಬೈಬಲಭ್ಯಾಸ ಸಹಾಯಕಗಳ ಸಂಗ್ರಹವಿದೆಯೇ ಅವರು ಯೆಹೋವನು ಅಷ್ಟು ದಯೆಯಿಂದ ಕೊಡುತ್ತಿರುವ ಒದಗಿಸುವಿಕೆಗಳ ಪೂರ್ಣ ಸದುಪಯೋಗವನ್ನು ಮಾಡಲು ಇದೆಂಥ ಪ್ರೇರೇಪಣೆಯನ್ನು ಕೊಡಬೇಕು!—1 ತಿಮೊಥಿ 4:15, 16.
ಈ ನಂಬಿಗಸ್ತ ಆರಾಧಕರ ಸಂತೋಷವು ಪರ್ವತ ಪ್ರಸಂಗದಲ್ಲಿ ಯೇಸುವಿನ ಮಾತುಗಳ ಜ್ಞಾಪಕವನ್ನು ನಮಗೆ ಕೊಡುತ್ತದೆ: “ತಮ್ಮ ಆತ್ಮಿಕ ಅವಶ್ಯಕತೆಯ ಪ್ರಜ್ಞೆಯುಳ್ಳವರು ಧನ್ಯರು ಯಾಕಂದರೆ ಪರಲೋಕ ರಾಜ್ಯವು ಅವರದು. . . . ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಟ್ಟವರು ಧನ್ಯರು ಯಾಕಂದರೆ ಪರಲೋಕ ರಾಜ್ಯವು ಅವರದು. . . . ಉಲ್ಲಾಸಪಡಿರಿ, ಸಂತೋಷದಿಂದ ನಲಿದಾಡಿರಿ; ಯಾಕಂದರೆ ಪರಲೋಕದಲ್ಲಿ ನಿಮಗಿರುವ ಬಹುಮಾನ ದೊಡ್ಡದು.” (ಮತ್ತಾಯ 5:3:12, NW) ಎಂಥ ಕೊಯ್ಲು ಅಂಗೋಲದಲ್ಲಿ ಈವಾಗಲೇ ಒಟ್ಟುಗೂಡಿಸಲ್ಪಟ್ಟಿದೆ!
ಲೋಕದ ಇತರ ಕ್ಷೇತ್ರಗಳಲ್ಲಿ, ಯೆಹೋವನ ಸಾಕ್ಷಿಗಳ ಮೇಲಿದ್ದ ನಿರ್ಬಂಧಗಳು ಕಡಿಮೆ ಮಾಡಲ್ಪಟ್ಟಿವೆ ಯಾ ತೆಗೆಯಲ್ಪಟ್ಟಿವೆ. ಯೇಸು ತನ್ನ ದಿನಗಳಲ್ಲಿ ಹೇಳಿದ್ದು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ.” (ಮತ್ತಾಯ 9:37) ಇದು ಇಂದು ಎಷ್ಟು ಸತ್ಯವಾಗಿದೆ! ಹೆಚ್ಚು ಕೆಲಸಗಾರರಿಗಾಗಿ ಅಗತ್ಯವು ಅಲ್ಲಿ ಯಾವಾಗಲೂ ಇದೆ. ನಮ್ಮ ಆರಾಧನೆಯಲ್ಲಿ ಕೊಯ್ಲಿನ ಒಟ್ಟುಗೂಡಿಸುವ ಕೆಲಸವೂ ಸೇರಿರುವುದಕ್ಕಾಗಿ ನಾವು ಸಂತೋಷಿತರು. ಯೆಹೋವನಿಗೆ ನಮ್ಮ ಫಲದಾಯಕ ಸಮರ್ಪಿತ ಸೇವೆಗಿಂತ ಮಿಗಿಲಾದ ಸಂತೋಷವು ಇಂದು ಲೋಕದಲ್ಲಿ ಬೇರೆ ಯಾವದರಲ್ಲಿಯೂ ಕಂಡು ಬರದು.
ಆದರೂ ಯೆಹೋವನ ಸೇವಕರು ಅಂಥ ಸಂತೋಷ ಮತ್ತು ಉತ್ಸಾಹವನ್ನು ತೋರಿಸುವಂತೆ ಅವರನ್ನು ಹುರಿದುಂಬಿಸುವುದಾದರೂ ಯಾವುದು? ನಾವು ನೋಡೋಣ. (w92 1/1)