ದೇವದತ್ತ ಸ್ವಾತಂತ್ರ್ಯ ಪ್ರಿಯರೊಂದಿಗೆ ಕೂಡಿಬರುವುದು
ಯೆಹೋವನ ಸಾಕ್ಷಿಗಳು ಎಷ್ಟೋ ಅನೇಕ ವಿಧಗಳಲ್ಲಿ ಅಸದೃಶ್ಯರು. “ಶುದ್ಧ ಭಾಷೆ”ಯನ್ನು ಮಾತಾಡುವವರು ಅವರೊಬ್ಬರೇ ಆಗಿರುತ್ತಾರೆ. (ಚೆಫೆನ್ಯ 3:9) ಯೇಸು ಕ್ರಿಸ್ತನಿಂದ ವಿವರಿಸಲ್ಪಟ್ಟ ಆ ವೈಶಿಷ್ಟ್ಯವುಳ್ಳ ಗುರುತಾದ ಪ್ರೀತಿ ಉಳ್ಳವರಾಗಿ ಐಕ್ಯತೆಯಿಂದ ಇರುವವರು ಅವರು ಮಾತ್ರವೇ. (ಯೋಹಾನ 13:35) ಮತ್ತು ಯೇಸು ಕ್ರಿಸ್ತನಿಂದ ಹೇಳಲ್ಪಟ್ಟ ಸತ್ಯವು ತರುವ ಸ್ವಾತಂತ್ರ್ಯದಲ್ಲಿ ಆನಂದಿಸುವವರು ಅವರು ಮಾತ್ರವೇ, ಯೋಹಾನ 8:32ರಲ್ಲಿ ದಾಖಲೆಯಾದ ಪ್ರಕಾರ ಅದನ್ನುವುದು: “ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು.”
ಆತನ ಶಿಷ್ಯರಿಗೆ ಮಾರ್ಗದರ್ಶಿತವಾದ ದೇವರ ಕುಮಾರನಾದ ಯೇಸು ಕ್ರಿಸ್ತನ ಆ ಮಾತುಗಳು, ಸತ್ಯವಾಗಿ ರುಜುವಾಗಿವೆ. ಮತ್ತು ಅವು “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನಗಳಿಗೆ ಹಾಜರಾದ ಯೆಹೋವನ ಸಾಕ್ಷಿಗಳೆಲ್ಲರಿಂದ ಎಂದಿಗಿಂತಲೂ ಹೆಚ್ಚಾಗಿ ಗಣ್ಯಮಾಡಲ್ಪಡುತ್ತಿವೆ. ಸಮ್ಮೇಳನ ಕಾರ್ಯಕ್ರಮವು ಅವರ ಸ್ವಾತಂತ್ರ್ಯದ ಹಲವಾರು ಮುಖಗಳನ್ನು ಅಂದರೆ ಅವರು ಅದನ್ನು ಉಪಯೋಗಿಸುವ ವಿಧ, ಅವರ ಸ್ವಾತಂತ್ರ್ಯದೊಂದಿಗೆ ಬರುವ ಹೊಣೆಗಾರಿಕೆ ಮತ್ತು ಸ್ವತಂತ್ರ ಜನರಾಗಿರುವುದಕ್ಕಾಗಿ ಅವರೆಷ್ಟು ಆಶೀರ್ವದಿತರು ಮುಂತಾದವುಗಳನ್ನು ಅವರಿಗೆ ಮಂದಟ್ಟು ಮಾಡಿಸಿವೆ.
ಈ ಕಾಲೋಚಿತ ಮತ್ತು ವ್ಯಾವಹಾರ್ಯ ಅಧಿವೇಶನಗಳು ಉತ್ತರ ಗೋಲಾರ್ಧದಲ್ಲಿ ಪ್ರಾರಂಭಿಸಿದ್ದು ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಲಾಸ್ ಏಂಜಲಿಸ್ನಲ್ಲಿ ಜೂನ್ 7, 1991ರಂದು. ಕಾರ್ಯಕ್ರಮವು ಮುಂಜಾನೆ 10:20ಕ್ಕೆ ಸಂಗೀತ ವಾದನ ನೀಡಿಕೆಯೊಂದಿಗೆ ಪ್ರಾರಂಭಿಸಿ, ಒಂದು ಗೀತ ಮತ್ತು ಪ್ರಾರ್ಥನೆಯಿಂದ ಹಿಂಬಾಲಿಸಿತು. ಆರಂಭದ ಭಾಷಣವು ಯಾಕೋಬ 1:20ರಲ್ಲಿ ಆಧಾರಿತವಾದ ಪ್ರಭಾವಯುಕ್ತ ಸಂದೇಶದಿಂದ ಕೂಡಿತ್ತು. ಜೆರೂಸಲೇಮ್ ಬೈಬಲ್ಗೆ ಅನುಸಾರವಾಗಿ ಆ ವಚನವು ಹೀಗೆ ಓದುತ್ತದೆ: “ಯಾರು ಬಿಡುಗಡೆಯನ್ನುಂಟು ಮಾಡುವ ಪರಿಪೂರ್ಣ ನಿಯಮವನ್ನು ಲಕ್ಷ್ಯವಿಟ್ಟು ನೋಡುತ್ತಾ ಅದನ್ನು ತನ್ನ ಹವ್ಯಾಸವಾಗಿ ಮಾಡುವನೋ—ಕೇಳಿ ಮರೆತು ಹೋಗುವವನಾಗಿರದೆ ಅದನ್ನು ಕ್ರಿಯಾಶೀಲತೆಯಿಂದ ಕಾರ್ಯರೂಪಕ್ಕೆ ಹಾಕುವನೋ ಅವನು ತಾನು ಮಾಡುವ ಎಲ್ಲದರಲ್ಲಿ ಸಂತೋಷಿತನಾಗುವನು.” ನಮ್ಮ ತೋರಿಕೆಯಲ್ಲಿ ಎಲ್ಲಿ ಪ್ರಗತಿ ಮಾಡುವ ಅಗತ್ಯವಿದೆ ಎಂದು ನೋಡುವುದಕ್ಕೆ ಕನ್ನಡಿಯನ್ನು ನಾವು ನೋಡುವ ಹಾಗೆ, ನಮ್ಮ ವ್ಯಕ್ತಿತ್ವದಲ್ಲಿ ಎಲ್ಲಿ ಬದಲಾವಣೆ ಅಗತ್ಯ ಎಂದು ಕಂಡುಹಿಡಿಯಲು ದೇವರ ಬಿಡುಗಡೆಯನ್ನುಂಟು ಮಾಡುವ ಪರಿಪೂರ್ಣ ನಿಯಮದೊಳಗೆ ಪಟ್ಟುಹಿಡಿದು ಇಣಿಕಿನೋಡುವ ಅಗತ್ಯ ನಮಗಿದೆ. ಮತ್ತು ನಾವು ಆ ಕನ್ನಡಿಯೊಳಗೆ ನೋಡುವದನ್ನು ಪಟ್ಟು ಹಿಡಿದು
ಮಾಡತಕ್ಕದ್ದು.
ಅನಂತರ ಬಂತು ಅಧ್ಯಕ್ಷರ ಭಾಷಣ, “ಸ್ವಾತಂತ್ರ್ಯ ಪ್ರಿಯರೆಲ್ಲರಿಗೆ ಸುಸ್ವಾಗತ.” ಯೆಹೋವನ ಸಾಕ್ಷಿಗಳು ಸ್ವಾತಂತ್ರ್ಯ ಪ್ರೇಮಿಗಳು, ಮತ್ತು ಅವರು ಸ್ವತಂತ್ರರಾಗಿ ಉಳಿಯಲು ಬಯಸುತ್ತಾರೆ. ನಿಯಮದ ಹೊರತು ಸ್ವಾತಂತ್ರ್ಯವು ಇರಸಾಧ್ಯವಿಲ್ಲವೆಂದು ತೋರಿಸಿದ ನ್ಯಾಯಾಂಗ ಅಧಿಕಾರಿಗಳನ್ನು ಭಾಷಣಕರ್ತನು ಉಲ್ಲೇಖಿಸಿದನು. ಹೌದು, ಕ್ರೈಸ್ತರು ತಮಗಿಷ್ಟ ಬಂದಂತೆ ಮಾಡಲು ಸ್ವತಂತ್ರರಿಲ್ಲ, ಆದರೆ ಯೆಹೋವನ ಚಿತ್ತವನ್ನು ಮಾಡಲು ಸ್ವತಂತ್ರರು. ತಮ್ಮ ಸ್ವಾತಂತ್ರ್ಯದ ಪೂರ್ಣ ಉಪಯೋಗವನ್ನು ಮಾಡಲು ಅವರು ಬಯಸುತ್ತಾರೆ, ಅದರ ದುರುಪಯೋಗವನ್ನಲ್ಲ. ವಿಶೇಷವಾಗಿ 1919ರಿಂದ ಯೆಹೋವನ ಸಾಕ್ಷಿಗಳು ಹೆಚ್ಚಿನ ಸ್ವಾತಂತ್ರ್ಯದಲ್ಲಿ ಆನಂದಿಸುತ್ತಾ ಇದ್ದಾರೆ. ಅಧಿವೇಶನಗಳ ಮುಖ್ಯ ವಿಷಯಗಳಲ್ಲಿ ಮತ್ತು ಕ್ರೈಸ್ತ ಸಾಹಿತ್ಯಗಳಲ್ಲಿ ಸ್ವಾತಂತ್ರ್ಯಕ್ಕೆ ಹಾಕಿದ್ದ ಒತ್ತನ್ನು ಭಾಷಣ ಕರ್ತನು ನಿರೂಪಿಸಿದನು. ದೇವದತ್ತ ಸ್ವಾತಂತ್ರ್ಯದ ಕುರಿತು ಮತ್ತು ಅದನ್ನು ಉಪಯೋಗಿಸುವ ವಿಧಾನದ ಕುರಿತು ಎಲ್ಲಾ ಅಧಿವೇಶನಗಾರರು ಹೆಚ್ಚನ್ನು ಕಲಿಯಲಿರುವರು.
ಆ ಸಮಯೋಚಿತ ಹೇಳಿಕೆಗಳನ್ನು ಅಧಿವೇಶನಕ್ಕೆ ಹಾಜರಿರಲು ಉಲ್ಲಾಸಿಸಿದ್ದ ಸ್ವಾತಂತ್ರ್ಯ ಪ್ರಿಯರ ಸಾಕ್ಷತ್ ದರ್ಶನ (ಇಂಟರ್ವ್ಯೂ) ಗಳು ಹಿಂಬಾಲಿಸಿದವು. ಅಂಥ ಅಧಿವೇಶನಗಳು ಹರ್ಷಿಸುವ ಸಮಯಗಳಾಗಿವೆ, ಪುರಾತನ ಕಾಲದ ಇಸ್ರಾಯೇಲ್ಯರ ಮೂರು ವಾರ್ಷಿಕ ಹಬ್ಬಗಳೂ ಮಹಾ ಸಂತೋಷದ ಸಂದರ್ಭಗಳಾಗಿದ್ದವು. ಅಧಿವೇಶನಗಳು ಆತ್ಮಿಕವಾಗಿ ಬಲಗೊಳ್ಳುವ ಉಲ್ಲಾಸದ ಸಮಯಗಳೆಂದು ಹಲವಾರು ಸಾಕ್ಷತ್ ದರ್ಶನಗಳು ರುಜುಪಡಿಸಿದವು.
ಅನಂತರ “ನಮ್ಮ ದೇವದತ್ತ ಸ್ವಾತಂತ್ರ್ಯದ ಉದ್ದೇಶ ಮತ್ತು ಉಪಯೋಗ” ಎಂಬ ಪ್ರಧಾನ ಉಪನ್ಯಾಸ ಕೊಡಲ್ಪಟ್ಟಿತು. ಯೆಹೋವನೊಬ್ಬನೇ ಪರಿಪೂರ್ಣ ಸ್ವಾತಂತ್ರ್ಯವುಳ್ಳವನು ಯಾಕಂದರೆ ಆತನು ಪರಮಾಧಿಕಾರವುಳ್ಳವನು ಮತ್ತು ಸರ್ವಶಕ್ತನು ಎಂದು ಅಧಿವೇಶನಗಾರರು ಈ ಭಾಷಣದಿಂದ ಕಲಿತರು. ಆದರೂ, ತನ್ನ ನಾಮಕ್ಕಾಗಿ ಮತ್ತು ಸೃಷ್ಟಿಜೀವಿಗಳ ಪ್ರಯೋಜನಕ್ಕಾಗಿ ಆತನು ಮಂದ ಕ್ರೋಧವನ್ನು ಮತ್ತು ಆತ್ಮ ಸಂಯಮವನ್ನು ತೋರಿಸುವ ಮೂಲಕ ಕೆಲವೊಮ್ಮೆ ತನ್ನ ಸ್ವಾತಂತ್ರ್ಯವನ್ನು ಸೀಮಿತಗೊಳಿಸುತ್ತಾನೆ. ಆತನ ಬುದ್ಧಿಯುಳ್ಳ ಸೃಷ್ಟಿಜೀವಿಗಳಿಗೆಲ್ಲಾ ಸಂಬಂಧಿತ ಸ್ವಾತಂತ್ರ್ಯವಿದೆ, ಯಾಕಂದರೆ ಅವರು ಯೆಹೋವನಿಗೆ ಅಧೀನರು ಮತ್ತು ಆತನ ಭೌತಿಕ ಮತ್ತು ನೈತಿಕ ನಿಯಮಗಳಿಂದ ಸೀಮಿತಗೊಳಿಸಲ್ಪಟ್ಟಿದ್ದಾರೆ. ಯೆಹೋವನು ಅವರ ಸಂತೋಷಕ್ಕಾಗಿ ಅವರಿಗೆ ಸ್ವಾತಂತ್ರ್ಯವನ್ನು ಕೊಟ್ಟಿರುತ್ತಾನೆ, ಆದರೆ ವಿಶೇಷವಾಗಿ ಕೊಟ್ಟದ್ದು ಆತನನ್ನು ಆರಾಧಿಸುವ ಮೂಲಕ ಅವರು ಆತನಿಗೆ ಗೌರವವನ್ನೂ ಆನಂದವನ್ನೂ ತರುವಂತೆಯೇ. ತಮ್ಮ ಸ್ವಾತಂತ್ರ್ಯದ ಸದುಪಯೋಗವನ್ನು ಮಾಡುವ ಕಾರಣ ಯೆಹೋವನ ಸಾಕ್ಷಿಗಳು ತಮ್ಮ ಶುಶ್ರೂಷೆಯಲ್ಲಿ ಒಳ್ಳೇ ನಡವಳಿಕೆ ಮತ್ತು ಹುರುಪಿಗಾಗಿ ಜಗದ್ವ್ಯಾಪಕ ಕೀರ್ತಿಯನ್ನು ಗಳಿಸಿರುತ್ತಾರೆ.
ಶುಕ್ರವಾರ ಮಧ್ಯಾಹ್ನ
“ನಿರ್ಜೀವ ಕ್ರಿಯೆಗಳಲ್ಲಿ ಕಾರ್ಯ ಮಗ್ನರೋ ಅಥವಾ ಯೆಹೋವನ ಸೇವೆಯಲ್ಲಿಯೋ?” ಎಂಬದು ಶುಕ್ರವಾರ ಮಧ್ಯಾಹ್ನದ ಕಾರ್ಯಕ್ರಮದ ಆರಂಭದ ವಿಚಾರ-ಪ್ರೇರಕ ಭಾಷಣದ ಶೀರ್ಷಿಕೆಯಾಗಿತ್ತು. ನಿರ್ಜೀವ ಕ್ರಿಯೆಗಳು ಶರೀರಭಾವದ ಕೃತ್ಯಗಳು ಮಾತ್ರವೇ ಅಲ್ಲ, ಆತ್ಮಿಕವಾಗಿ ಮರ್ತ್ಯವೂ ವ್ಯರ್ಥವೂ ನಿಷ್ಫಲವೂ ಆಗಿರುವ—ಹಣ-ಮಾಡುವ ಹಂಚಿಕೆಗಳೇ ಮೊದಲಾದವುಗಳು. ಈ ವಿಷಯದಲ್ಲಿ, ನಾವು ದೇವರ ರಾಜ್ಯವನ್ನು ಪ್ರಥಮವಾಗಿ ಹುಡುಕುತ್ತೇವೋ ಎಂದು ನಿರ್ಧರಿಸಲು ಪ್ರಾಮಾಣಿಕವಾದ ಆತ್ಮ-ಪರೀಕ್ಷಣೆಯು ಅತ್ಯಾವಶ್ಯಕ.
ಹಿಂಬಾಲಿಸಿದ ಭಾಷಣವಾದ, “ದೇವರ ಶುಶ್ರೂಷಕರಾಗಿ ನಮ್ಮ ನಿಯೋಗವನ್ನು ಪೂರೈಸುವುದು” ಎಂಬ ಭಾಷಣವು ಸಾಧಾರಣ ಅದೇ ಗುರಿಗೆ ಒತ್ತನ್ನು ಹಾಕಿತ್ತು. ಕ್ರೈಸ್ತರು ಕೇವಲ ನಾಮಮಾತ್ರದ ಸೇವೆಯಿಂದ ಅಥವಾ ತಾಸಿನ ಗುರಿಯನ್ನು ಮುಟ್ಟುವುದರಲ್ಲಿ ತೃಪ್ತರಾಗಬಾರದು. ತಮ್ಮ ಕ್ರೈಸ್ತ ಶುಶ್ರೂಷೆಯ ಎಲ್ಲಾ ಮುಖಗಳಲ್ಲಿ ಪರಿಣಾಮಕಾರಿಗಳಾಗಿರಲು ಅವರು ಬಯಸಬೇಕು. ಈ ವಿಷಯಗಳನ್ನು ದೃಶ್ಯಗಳ ಮತ್ತು ಸಾಕ್ಷತ್ ದರ್ಶನಗಳ ಮೂಲಕ ಸಭಿಕರ ಮನಸ್ಸಿಗೆ ಅಚ್ಚೊತ್ತಲಾಯಿತು. ಶಕ್ಯವಾದಷ್ಟು ಪೂರ್ಣವಾಗಿ ತಮ್ಮ ಶುಶ್ರೂಷೆಯನ್ನು ನಿರ್ವಹಿಸುವಂತೆ ಎಲ್ಲರಿಗೆ ಉಪದೇಶವನ್ನು ನೀಡಲಾಯಿತು.
“ಸ್ವತಂತ್ರ ಜನರು ಆದರೆ ಹೊಣೆಗಾರಿಕೆಯುಳ್ಳವರು,” ಎಂಬ ಭಾಷಣದಲ್ಲಿ ಭಾಷಣಕರ್ತನು ಒತ್ತಿಹೇಳಿದ್ದೇನಂದರೆ, ಸತ್ಯವು ತಂದಿರುವ ಸ್ವಾತಂತ್ರ್ಯವನ್ನು ಯೆಹೋವನ ಸಾಕ್ಷಿಗಳು ಆನಂದಿಸುವುದಾದರೂ, ಅದರೊಂದಿಗೆ ಹೊಣೆಗಾರಿಕೆಯೂ ಬರುತ್ತದೆಂಬದನ್ನು ಅವರು ನೆನಪಿನಲ್ಲಡಬೇಕು. ಅವರು ತಮ್ಮ ಸ್ವಾತಂತ್ರ್ಯವನ್ನು, ತಮ್ಮ ದುರ್ನಡತೆಗೆ ನೆವನವಾಗಿ ಅಲ್ಲ, ಯೆಹೋವನ ಸ್ತುತಿಗಾಗಿ ಬಳಸಬೇಕು. ಕ್ರೈಸ್ತರಾದ ಅವರು, “ಮೇಲಧಿಕಾರಿಗಳಿಗೆ” ಲೆಕ್ಕ ಒಪ್ಪಿಸಲಿಕ್ಕದೆ ಮತ್ತು ಸಭಾ ಹಿರಿಯರೊಂದಿಗೆ ಸಹಾ ಸಹಕರಿಸಬೇಕು. (ರೋಮಾಪುರ 13:1) ಅದಲ್ಲದೆ ಅವರು ತಮ್ಮ ಉಡುಪು, ನೀಟುತನ ಮತ್ತು ನಡವಳಿಕೆಗಾಗಿಯೂ ಜವಾಬ್ದಾರರಾಗಿದ್ದಾರೆ. “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರ ಕೊಡಬೇಕು” ಎಂಬದನ್ನು ಅವರೆಂದೂ ಮರೆಯಬಾರದು.—ರೋಮಾಪುರ 14:12; 1 ಪೇತ್ರ 2:16.
ಎಲ್ಲಾ ಕ್ರೈಸ್ತರು “ಈ ಲೋಕಾಂತ್ಯವು ಹತ್ತರಿಸುತ್ತಿರಲಾಗಿ ನಿರ್ಭೀತರಾಗಿ” ಇರುವ ಅಗತ್ಯವನ್ನು ಒತ್ತಿಹೇಳಿದ ಒಂದು ಚರ್ಚೆಯು ಅನಂತರ ಹಿಂಬಾಲಿಸಿತು. ಭವಿಷ್ಯತ್ತು ಏನನ್ನು ತರಲಿದೆಯೋ ಎಂದು ಮಾನವ ಕುಲವು ಭಯಪಡುತ್ತಿರುವಾಗ, ಕ್ರೈಸ್ತರಾದರೋ ತಮ್ಮ ಶುಶ್ರೂಷೆಯನ್ನು ನಿರ್ಭೀತಿಯಿಂದ ನಿರ್ವಹಿಸಬೇಕು. ಯೆಹೋವನಲ್ಲಿ ಭರವಸವು ಭಯರಾಹಿತ್ಯವನ್ನು ಕೊಡುತ್ತದೆ, ಯಾಕಂದರೆ ದೇವರನ್ನು ಅಪ್ರಸನ್ನಗೊಳಿಸಲು ಕ್ರೈಸ್ತನು ಎಷ್ಟು ಹೆಚ್ಚಾಗಿ ಹೆದರುತ್ತಾನೋ ಅಷ್ಟು ಕಡಿಮೆಯಾಗಿ ಸೃಷ್ಟಿಜೀವಿಗಳಿಗೆ ಭಯಪಡುವನು. ಸಾಂತ್ವನಕಾರಿ ಶಾಸ್ತ್ರವಚನಗಳನ್ನು ಕಂಠಪಾಠ ಮಾಡುವುದು ಒಬ್ಬ ವ್ಯಕ್ತಿಯನ್ನು ನಿರ್ಭೀತನಾಗಲು ಬಲಪಡಿಸಬಲ್ಲದು. ಆತ್ಮಿಕವಾಗಿ ಬಲಗೊಳ್ಳಲು ಮತ್ತು ನಿರ್ಭೀತರಾಗಿರಲು, ದೇವರ ಸೇವಕರು ಜತೆ ವಿಶ್ವಾಸಿಗಳೊಂದಿಗೆ ಕೂಡಿಬರಲು ಇರುವ ಸಂದರ್ಭಗಳ ಸದುಪಯೋಗವನ್ನು ಮಾಡುವ ಅಗತ್ಯವೂ ಇದೆ. ನಿರ್ಭೀತರಾಗಿರುವುದರಲ್ಲಿ ಪ್ರಾರ್ಥನೆಯು ವಹಿಸುವ ಪಾತ್ರವನ್ನು ಸಹ ಪ್ರತಿಯೊಬ್ಬನು ನೆನಪು ಮಾಡುವ ಅಗತ್ಯವಿದೆ. ನಿರ್ಭೀತರಾಗಿ ಉಳಿಯುವ ಮೂಲಕ ಕ್ರೈಸ್ತರು ಯೆಹೋವ ದೇವರೊಂದಿಗೆ ಒಂದು ಸುಸಂಬಂಧವನ್ನು ಕಾಪಾಡಿಕೊಳ್ಳುವರು.
ಮೊದಲನೆಯ ದಿನದ ಕಾರ್ಯಕ್ರಮವು ಒಂದು ಅತ್ಯಂತ ಬೋಧಪ್ರದ ಡ್ರಾಮಾ “ಸತ್ಯಾರಾಧನೆಯನ್ನು ಪ್ರವರ್ಧಿಸಲು ಸ್ವತಂತ್ರ ಮಾಡಲ್ಪಟ್ಟದ್ದು” ಎಂಬದರಿಂದ ಮುಕ್ತಾಯವಾಯಿತು. ಯೆರೂಲೇಮಿಗೆ ಹಿಂತಿರುಗಲಿಕ್ಕಾಗಿ ತ್ಯಾಗಗಳನ್ನು ಮಾಡಿದ್ದ ಎಜ್ರ ಮತ್ತು ಅವನ 7,000 ಜೊತೆಗಾರರಿಂದ ಒಂದು ಆಧುನಿಕ ಕುಟುಂಬವು ಹೇಗೆ ಪಾಠವನ್ನು ಕಲಿಯಿತೆಂಬದನ್ನು ಅದು ತೋರಿಸಿತು. ಪ್ರತಿಯೊಬ್ಬ ಅಧಿವೇಶನಗಾರನು ತನ್ನ ಪ್ರಥಮತೆಗಳನ್ನು ಪರೀಕ್ಷಿಸುವಂತೆ ಮತ್ತು ತನ್ನ ಸೇವಾ ಸುಯೋಗಗಳನ್ನು ಹೇಗೆ ಹೆಚ್ಚಿಸಬಹುದೆಂದು ಕಾಣುವಂತೆ ಅದು ಶಕ್ಯಮಾಡಿತು. ಈ ಡ್ರಾಮಾದಲ್ಲಿ ವೃದ್ಧರಿಗೂ ಎಳೆಯರಿಗೂ ಉಪಯುಕ್ತವಾದ ವಿಷಯಗಳಿದ್ದವು.
ಶನಿವಾರ ಬೆಳಿಗ್ಗೆ
ಒಂದು ಸಂಗೀತ ಕಾರ್ಯಕ್ರಮ, ಹಾಡು, ಪ್ರಾರ್ಥನೆ ಮತ್ತು ದೈನಿಕ ಬೈಬಲ್ ವಚನದ ಚರ್ಚೆಯಾದ ಮೇಲೆ, ಶನಿವಾರ ಬೆಳಿಗ್ಗೆಯ ಕಾರ್ಯಕ್ರಮವು “ಕುಟುಂಬ ಚಕ್ರದಲ್ಲಿ ಜವಾಬ್ದಾರಿಕೆಯೊಂದಿಗೆ ಸ್ವಾತಂತ್ರ್ಯ” ಎಂಬ ಭಾಷಣ ಮಾಲೆಯನ್ನು ನೀಡಿತು. ಮೊದಲನೆಯ ಭಾಗವಾದ, “ತಂದೆಗಳು ಯೆಹೋವನನ್ನು ಅನುಕರಿಸಬಲ್ಲ ವಿಧ” ಎಂಬ ಭಾಷಣದಲ್ಲಿ ತಂದೆಗಳಿಗೆ ತಮ್ಮ ಸ್ವರ್ಗೀಯ ತಂದೆಯನ್ನು ಅನುಕರಿಸಬಲ್ಲ ಹಲವಾರು ವಿಧಾನಗಳು ಸೂಚಿಸಲ್ಪಟ್ಟವು. ಅವರು ಭೌತಿಕವಾಗಿ ಮಾತ್ರವಲ್ಲ ಆತ್ಮಿಕವಾಗಿಯೂ ಒದಗಿಸುವಂತೆ 1 ತಿಮೊಥಿ 5:8 ಅವಶ್ಯಪಡಿಸುತ್ತದೆ. ತಮ್ಮ ಕುಟುಂಬಕ್ಕೆ ಒಳ್ಳೇ ಕಲಿಸುವವರಾಗುವ ಮೂಲಕ ಮತ್ತು ಬೇಕಾದಾಗ ಪ್ರೀತಿಯುಳ್ಳ ಶಿಸ್ತನ್ನು ನಿರ್ವಹಿಸುವ ಮೂಲಕ ಅವರು ಯೆಹೋವನನ್ನು ಅನುಕರಿಸ ಶಕ್ತರು. ಈ ವಿಷಯಗಳು ಹಲವಾರು ಸಾಕ್ಷತ್ ದರ್ಶನಗಳ ಮೂಲಕ ದೃಷ್ಟಾಂತಿಸಲ್ಪಟ್ಟವು.
“ಹೆಂಡತಿಯ ಬೆಂಬಲಿಸುವ ಪಾತ್ರವು” ಎಂಬದು ಈ ಭಾಷಣಮಾಲೆಯ ಮುಂದಿನ ಭಾಗ. ಬೆಂಬಲ ಕೊಡುವಂಥ ಒಂದು ಗಂಭೀರ ಸ್ಥಾನವನ್ನು ಪತ್ನಿಯು ಕ್ರೈಸ್ತ ಕುಟುಂಬದಲ್ಲಿ ನಿರ್ವಹಿಸುತ್ತಾಳೆಂದು ಒತ್ತಿಹೇಳುವ ಮೂಲಕ ಅದು ಪ್ರಾರಂಭಿಸಿತು. ಇದು ಅವಳಿಂದ ಏನನ್ನು ಕೇಳಿಕೊಳ್ಳುತ್ತದೆ? ಅವಳು ಯೋಗ್ಯ ಅಧೀನತೆಯಿಂದಿರುವಂತೆ, ತನಗೆ ಬೇಕಾದದ್ದನ್ನೇ ಮಾಡಲು ಗಂಡನನ್ನು ಎಂದೂ ಒತ್ತಡಕ್ಕೆ ಹಾಕದಿರುವಂತೆಯೇ. ತನ್ನ ಗಂಡನ ಮತ್ತು ಮಕ್ಕಳ ಕಡೆಗಿನ ಹಂಗುಗಳನ್ನು ಚೆನ್ನಾಗಿ ನೋಡಿಕೊಳ್ಳುವ ಅಗತ್ಯ ಅವಳಿಗಿದೆ ಮತ್ತು ತನ್ನ ಮನೆಯನ್ನು ಶುಚಿಯಾಗಿಯೂ ನೀಟಾಗಿಯೂ ಇಡುವ ಮೂಲಕ ಅವಳು ನಿಜ ಸಂತೃಪ್ತಿಯನ್ನು ಪಡೆಯ ಸಾಧ್ಯವಿದೆ. ಕ್ರೈಸ್ತ ಶುಶ್ರೂಷಕಳಾಗಿ, ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವ ಅನೇಕ ಸಂದರ್ಭಗಳು ಅವಳಿಗಿರಬಹುದು. ಅಂಥ ಶಾಸ್ತ್ರೀಯ ಸೂಚನೆಯ ವಿವೇಕವನ್ನು ಒಂದು ಕುಟುಂಬದೊಂದಿಗೆ ಮಾಡಿದ ಸಾಕ್ಷತ್ ದರ್ಶನವು ಒತ್ತಿಹೇಳಿತು.
“ಕಿವಿಗೊಡುವ ಮತ್ತು ಕಲಿಯುವ ಮಕ್ಕಳು” ಎಂಬ ಭಾಗದಲ್ಲಿ ಯುವ ಜನರ ಕಡೆಗೆ ಗಮನ ಕೊಡಲಾಯಿತು. ತಮ್ಮ ಮಕ್ಕಳಿಗೆ ಕಿವಿಗೊಡಲು ಮತ್ತು ಕಲಿಯಲು ತರಬೇತು ಮಾಡುವ ಮೂಲಕ, ಹೆತ್ತವರು ಯೆಹೋವನಿಗೆ ಗೌರವವನ್ನು ತರುತ್ತಾರೆ ಮತ್ತು ತಮ್ಮ ಆತ್ಮಿಕ ಸಹೋದರರಿಗೆ ಮತ್ತು ತಮ್ಮ ಸ್ವಂತ ಕುಟುಂಬಕ್ಕೆ ಪ್ರೀತಿಯನ್ನು ತೋರಿಸುತ್ತಾರೆ. ಗುಣಮಟ್ಟದ ಸಮಯವನ್ನು ಒಟ್ಟುಗೂಡಿ ಕಳೆಯುವುದಾದರೆ ಹೆತ್ತವರು ಮತ್ತು ಮಕ್ಕಳ ನಡುವೆ ಒಂದು ಬಲವಾದ ಬಂಧವು ಬೆಳೆಯುವುದು. ತಮ್ಮ ಮಕ್ಕಳ ಪ್ರಶ್ನೆಯನ್ನು ಉತ್ತರಿಸಲು ಹೆತ್ತವರು ಸನ್ನದ್ಧರಾಗಿರಬೇಕು ಮತ್ತು ಜ್ಞಾನಕ್ಕಾಗಿ ಅವರಿಗಿರುವ ದಾಹವನ್ನು ಪ್ರಚೋದಿಸಬೇಕು. ಪುನಹಾ, ಇವನ್ನು ಮಾಡಬಹುದಾದ ವಿಧಾನವನ್ನು ಸಾಕ್ಷತ್ ದರ್ಶನಗಳು ತೋರಿಸಿದವು.
ಅನಂತರ, “ಯೆಹೋವನನ್ನು ಸೇವಿಸಲು ನಿಮ್ಮನ್ನು ಸ್ವತಂತ್ರವಾಗಿಡಿರಿ” ಎಂಬ ಉತ್ತಮ ಸೂಚನೆಯು ನೀಡಲ್ಪಟ್ಟಿತು. ಇದನ್ನು ಮಾಡುವುದು ಹೇಗೆ? ಲೌಕಿಕ ಕಸುಬುಗಳನ್ನು ಬೆನ್ನಟ್ಟುವುದರಿಂದ, ಸಮಯ-ವ್ಯಯದ ಹವ್ಯಾಸಗಳಿಂದ ನಮ್ಮನ್ನು ಸ್ವತಂತ್ರವಾಗಿಡುವ ಮೂಲಕವೇ. ಆತ್ಮ-ತ್ಯಾಗದ ಭಾವದಲ್ಲಿ ಯೇಸು ಮತ್ತು ಅಪೊಸ್ತಲ ಪೌಲನು ಉತ್ತಮ ಮಾದರಿಗಳನ್ನು ಇಟ್ಟರು. ಒಂದು ಸರಳವಾದ ನೇತ್ರವನ್ನು, ರಾಜ್ಯದಭಿರುಚಿಗಳ ಮೇಲೆ ಕೇಂದ್ರೀಕರಿಸುವ ಅಗತ್ಯವು ಯೆಹೋವನ ಜನರಿಗಿದೆ. ಐಹಿಕ ವಸ್ತುಗಳನ್ನು ಸಂಪಾದಿಸುವ ವಿಷಯದಲ್ಲಿ, ಈಗ ಖರೀದಿಸಿ ಅನಂತರ ಹಣತೆರುವ ಬದಲಿಗೆ ಈಗ ಉಳಿತಾಯ ಮಾಡಿ ಅನಂತರ ಖರೀದು ಮಾಡುವದು ವಿವೇಕಪ್ರದವು. ಯುವಕರು ಲೈಂಗಿಕ ಅಭಿಲಾಷೆಗಳು ಮತ್ತು ಐಹಿಕ ಕೆಲಸಗಳ ಕುರಿತು ವಿಪರೀತ ಭಾವನೆ ತಾಳದಂತೆ ಜಾಗ್ರತೆ ವಹಿಸಬೇಕು. ಅವಿವಾಹಿತ ಪಯನೀಯರನೊಬ್ಬನ ಸಾಕ್ಷತ್ ದರ್ಶನವು ಯೆಹೋವನನ್ನು ಸೇವಿಸಲು ಒಬ್ಬನು ತನ್ನನ್ನು ಸ್ವತಂತ್ರವಾಗಿಡುವ ಮೂಲಕ ಬರುವ ಆಶೀರ್ವಾದಗಳನ್ನು ತೋರಿಸಿದವು.
ಶನಿವಾರ ಬೆಳಗ್ಗಿನ ಕಾರ್ಯಕ್ರಮವು “ಸಮರ್ಪಣೆ ಮತ್ತು ದೀಕ್ಷಾಸ್ನಾನದ ಮೂಲಕ ಸ್ವಾತಂತ್ರ್ಯದೊಳಗೆ ಪ್ರವೇಶಿಸಿರಿ” ಎಂಬ ಭಾಷಣದೊಂದಿಗೆ ಕೊನೆಗೊಂಡಿತು. ಆದಾಮನ ದಂಗೆಯಿಂದಾಗಿ ಸೃಷ್ಟಿಯು ದಾಸತ್ವದೊಳಗೆ ಬಿದ್ದರೂ, ಮಹಾ ವಿಮೋಚಕನಾದ ಯೇಸು ಕ್ರಿಸ್ತನು ತನ್ನ ಯಜ್ಞದ ಮೂಲಕ ಸ್ವಾತಂತ್ರ್ಯಕ್ಕೆ ಮಾರ್ಗವನ್ನು ತೆರೆದನು ಎಂಬ ಮರುಜ್ಞಾಪಕವನ್ನು ದೀಕ್ಷಾಸ್ನಾನದ ಅಭ್ಯರ್ಥಿಗಳಿಗೆ ಕೊಡಲಾಯಿತು. ದೇವರ ಚಿತ್ತವನ್ನು ಮಾಡಲು ಸ್ವತಂತ್ರರಾಗುವುದರಲ್ಲಿ ಏನೆಲ್ಲಾ ಕೂಡಿದೆ ಎಂದು ಭಾಷಣಕರ್ತನು ತೋರಿಸಿದನು ಮತ್ತು ದೀಕ್ಷಾಸ್ನಾನವಾಗುವವರಿಗೆ ಸಿಗಲಿರುವ ಆಶೀರ್ವಾದಗಳನ್ನು ಎತ್ತಿಹೇಳಿದನು.
ಶನಿವಾರ ಮಧ್ಯಾಹ್ನ
ಶನಿವಾರ ಮಧ್ಯಾಹ್ನದ ಕಾರ್ಯಕ್ರಮವು “ಯಾರ ಪ್ರಯೋಜನವನ್ನು ನೀವು ಹುಡುಕುತ್ತೀರಿ?” ಎಂಬ ಆತ್ಮ-ಪರೀಕ್ಷಣೆಯ ಪ್ರಶ್ನೆಯೊಂದಿಗೆ ಆರಂಭಿಸಿತು. ಲೋಕವು ಪಿಶಾಚನ ಸ್ವಾರ್ಥಾನ್ವೇಷಕ ಆತ್ಮವನ್ನು ಪ್ರತಿಬಿಂಬಿಸುತ್ತದೆ. ಆದರೆ ಕ್ರೈಸ್ತರು ಯೇಸು ಕ್ರಿಸ್ತನ ಆತ್ಮ-ತ್ಯಾಗದ ಭಾವವನ್ನು ಹುಡುಕುವವರಾಗಿರಬೇಕು. ಆತನು ಎಂಥ ಉತ್ತಮ ಉದಾಹರಣೆಯನ್ನು ಇಟ್ಟನು! ತನ್ನ ಸ್ವರ್ಗೀಯ ಮಹಿಮೆಯನ್ನು ತ್ಯಜಿಸಿದನು ಮತ್ತು ತನ್ನ ಮಾನವ ಜೀವವನ್ನು ನಮ್ಮ ಪ್ರಯೋಜನಾರ್ಥವಾಗಿ ಕೊಟ್ಟನು. ಯಾರ ಪ್ರಯೋಜನವನ್ನು ನೀವು ಹುಡುಕುತ್ತೀರಿ ಎಂಬ ಪಂಥಾಹ್ವಾನಗಳು ಮೇಲೆ ಬರುವುದು ವ್ಯಾಪಾರದಲ್ಲಿ ಅಥವಾ ಆರ್ಥಿಕ ವ್ಯವಹಾರಗಳಲ್ಲಿ ಕ್ರೈಸ್ತರ ನಡುವೆ ಮನಸ್ತಾಪಗಳು ಬರುವಾಗ ಮತ್ತು ಅಲ್ಲಿ ವ್ಯಕ್ತಿತ್ವದ ಘರ್ಷಣೆಗಳೇ ಮುಂತಾದವುಗಳು ಇರುವಾಗ. ಅಂಥ ವಿಷಯಗಳು ಕ್ರೈಸ್ತನ ಪ್ರೀತಿಯನ್ನು ಪರೀಕೆಗ್ಷೆ ಹಾಕುತ್ತವೆ. ಆದರೆ ಬೇರೆಯವರ ಪ್ರಯೋಜನವನ್ನು ಹುಡುಕುವ ಮೂಲಕ, ಒಬ್ಬ ವ್ಯಕ್ತಿಯು ಕೊಡುವುದರಲ್ಲಿರುವ ಮಹಾ ಆಶೀರ್ವಾದವನ್ನು ಖಂಡಿತವಾಗಿ ಮನಗಾಣುವನು ಮತ್ತು ಯೆಹೋವನ ಅನುಗ್ರಹವನ್ನು ಸಂಪಾದಿಸುವನು.
ಅನಂತರ ಹಿಂಬಾಲಿಸಿದ್ದು ನಿಕಟವಾಗಿ ಸಂಬಂಧಿಸಿದ ಮುಖ್ಯ ವಿಷಯವಾದ “ಆತ್ಮಿಕ ಬಲಹೀನತೆಗಳನ್ನು ಮನಗಾಣುವುದು ಮತ್ತು ಪರಿಹರಿಸುವುದು.” ಈ ಭಾಷಣವು ಆತ್ಮಿಕ ಬಲಹೀನತೆಯ ಲಕ್ಷಣಗಳನ್ನು ಗುರುತಿಸುವ ಅಗತ್ಯವನ್ನು ಮತ್ತು ಅನಂತರ ಸೈತಾನನ ಮತ್ತು ಅವನ ಪಾಶಗಳನ್ನು ಪರಿಹರಿಸುವ ಹೋರಾಟದಲ್ಲಿ ನಿರ್ಧಾರದಿಂದ ಕೃತಿಗೈಯುವ ಅಗತ್ಯವನ್ನು ಒತ್ತಿಹೇಳಿತು. ಯೆಹೋವನ ಸೇವಕರು ಆತನಿಗಾಗಿ ಆಳವಾದ ಪ್ರೀತಿಯನ್ನು ಮತ್ತು ಕೆಟ್ಟತನದ ಕಡೆಗೆ ದ್ವೇಷವನ್ನು ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಕ್ರಮದ ಮತ್ತು ಉದ್ದೇಶಪೂರ್ಣವಾದ ವೈಯಕ್ತಿಕ ಮತ್ತು ಕುಟುಂಬ ಬೈಬಲಧ್ಯಯನದ ಮೂಲಕ ಯೆಹೋವನನ್ನು ತಿಳುಕೊಳ್ಳುವ ಅವಶ್ಯಕತೆ ಇದೆ. ಹಿಂಸಾಚಾರವನ್ನು ಮತ್ತು ಅನೈತಿಕತೆಯನ್ನು ಮಹಿಮೆಗೇರಿಸುವ ಎಲ್ಲಾ ರೀತಿಯ ಮನೋರಂಜನೆಯನ್ನು ಅವರು ವರ್ಜಿಸಬೇಕು. (ಎಫೆಸ 5:3-5) ಕ್ರಮದ ಪ್ರಾರ್ಥನೆ ಮತ್ತು ಕೂಟಗಳಲ್ಲಿ ಹಾಜರಿಯು ಸಹಾ ಆತ್ಮಿಕ ಬಲಹೀನತೆಗಳನ್ನು ಪರಿಹರಿಸುವುದರಲ್ಲಿ ಸಾಫಲ್ಯಕ್ಕೆ ಮೂಲಭೂತವು.
ಅಧಿವೇಶನದಲ್ಲಿ ಕೊಟ್ಟ ಪ್ರಾಯಶಃ ಬೇರೆ ಯಾವುದೇ ಭಾಷಣಕ್ಕಿಂತ ಹೆಚ್ಚು ಖಾಸಗಿ ಮಾತುಕತೆಯನ್ನು ಉಂಟುಮಾಡಿದ್ದು “ಮದುವೆಯು ಸಂತೋಷಕ್ಕೆ ಕೀಲಿಕೈಯಾಗಿದೆಯೇ?” ಎಂಬ ಶೀರ್ಷಿಕೆಯ ಭಾಷಣ. ಎಷ್ಟೋ ಯುವ ಜನರು ಹಾಗೆಂದು ನೆನಸುತ್ತಾರೆ! ಆದರೆ ಅಸಂಖ್ಯಾತ ನಂಬಿಗಸ್ತ ಆತ್ಮಿಕ ಜೀವಿಗಳು ವಿವಾಹರಹಿತರಾಗಿಯೇ ಸಂತೋಷದಿಂದಿದ್ದಾರೆಂದೂ, ಅದೇ ರೀತಿ ಅನೇಕ ಸಮರ್ಪಿತ ಕ್ರೈಸ್ತರು ವಿವಾಹದ ನೊಗವನ್ನು ಕಟ್ಟಿಕೊಳ್ಳದಿದ್ದರೂ ಅತ್ಯಂತ ಸಂತೋಷದಿಂದ ಇದ್ದಾರೆಂದೂ ಭಾಷಣಕರ್ತನು ಸ್ಪಷ್ಟಪಡಿಸಿದನು. ಅದಲ್ಲದೆ, ಅನೇಕ ವಿವಾಹಿತ ದಂಪತಿಗಳು ಸಂತೋಷವಾಗಿರುವುದಿಲ್ಲ, ವಿವಾಹ ವಿಚ್ಛೇದದ ಅತಿವೃದ್ಧಿಯ ಗತಿಯಿಂದ ಇದು ಸೂಚಿತವಾಗಿದೆ. ಮದುವೆಯು ಒಂದು ಆಶೀರ್ವಾದವಾಗಿರಬಹುದಾದರೂ, ಅದು ಸಂತೋಷಕ್ಕೆ ಕೀಲಿಕೈಯಲ್ಲ ಎಂಬದನ್ನು ಮನಗಾಣಲು, ಎಲ್ಲಾ ಸಮರ್ಪಿತ ಕ್ರೈಸ್ತರು ಆನಂದಿಸುವ ಅನೇಕ ಆಶೀರ್ವಾದಗಳನ್ನು ಒಬ್ಬನು ಕೇವಲ ಜ್ಞಾಪಕಕ್ಕೆ ತಂದುಕೊಳ್ಳುವುದಷ್ಟೇ ಸಾಕು.
ಇದನ್ನು, “ನಮ್ಮ ದಿನಗಳಲ್ಲಿ ಕ್ರೈಸ್ತ ಸ್ವಾತಂತ್ರ್ಯ” ಎಂಬ ಭಾಷಣಮಾಲೆಯು ಹಿಂಬಾಲಿಸಿತು. ಮೊದಲನೆಯ ಭಾಷಣಕರ್ತನು “ನಮ್ಮ ಕ್ರಿಸ್ತೀಯ ಸ್ವಾತಂತ್ರ್ಯದ ಮುಖಗಳನ್ನು ತೂಗಿನೋಡುವುದು” ಎಂಬದನ್ನು ಚರ್ಚಿಸಿದನು. ಇವುಗಳಲ್ಲಿ ಸುಳ್ಳು ಧಾರ್ಮಿಕ ಬೋಧನೆಗಳಾದ ತ್ರಿಯೈಕತ್ವ, ಮಾನವಾತ್ಮದ ಅಮರತ್ವ ಮತ್ತು ನಿತ್ಯ ಯಾತನೆಯೇ ಮುಂತಾದವುಗಳಿಂದ ಬಿಡುಗಡೆಯು ಒಳಗೂಡಿವೆ. ಅದಲ್ಲದೆ, ಪಾಪದ ದಾಸ್ಯದ ಬಂಧನದೊಳಗಿಂದ ಬಿಡುಗಡೆಯೂ ಅಲ್ಲಿದೆ. ಕ್ರೈಸ್ತರು ಅಪೂರ್ಣರಾಗಿದ್ದಾಗ್ಯೂ, ದೂಮ್ರಪಾನ, ಜೂಜು, ಕುಡಿಕತನ, ಮತ್ತು ಲೈಂಗಿಕ ಸ್ವೇಚ್ಛಾ ಸಂಪರ್ಕ ಮುಂತಾದ ದುರಭ್ಯಾಸಗಳಿಂದ ಅವರು ಮುಕ್ತರು. ಆಶಾಭಂಗಗಳಿಂದಲೂ ಮುಕ್ತತೆಯು ಅಲ್ಲಿದೆ, ಯಾಕಂದರೆ ಪರದೈಸದ ಕುರಿತಾದ ಅವರ ಭವ್ಯ ನಿರೀಕ್ಷೆಯು ಅದರ ಕುರಿತು ಇತರರಿಗೆ ತಿಳಿಸುವಂತೆ ಅವರನ್ನು ಪ್ರಚೋದಿಸುತ್ತದೆ.
“ನೀವು ವೈಯಕ್ತಿಕವಾಗಿ ಅಂಥ ಸ್ವಾತಂತ್ರ್ಯವನ್ನು ನೆಚ್ಚುತ್ತೀರೋ?” ಎಂಬ ಪ್ರಶ್ನೆಯನ್ನು ಕೇಳಿದನು ಮುಂದಿನ ಭಾಷಣಕರ್ತನು. ನೆಚ್ಚುವುದು ಅಂದರೆ ಪ್ರೀತಿ ಪಾತ್ರವಾಗಿಡುವುದು, ಪರಾಮರಿಕೆಯಿಂದ ಪೋಷಿಸುವುದು ಎಂದರ್ಥ. ಅದನ್ನು ಮಾಡಲು ದೇವರ ಸೇವಕನು ಕ್ರೈಸ್ತ ಸ್ವಾತಂತ್ರ್ಯದ ಸೀಮಿತಗಳಿಗಿಂತ ಆಚೇಕಡೆ ಹೋಗುವ ಶೋಧನೆಯ ವಿರುದ್ಧ ತನ್ನನ್ನು ಕಾದುಕೊಳ್ಳಬೇಕು. ಲೋಕದ ಸ್ವಾತಂತ್ರ್ಯವು ಒಂದು ಮೋಸಕಾರಕ ಮಿಥ್ಯೆ, ಯಾಕಂದರೆ ಅದು ಪಾಪ ಮತ್ತು ಭ್ರಷ್ಟತೆಯ ದಾಸ್ವತಕ್ಕೆ ನಡಿಸುತ್ತದೆ.
ಈ ಭಾಷಣಮಾಲೆಯ ಕೊನೆಯ ಭಾಷಣಕರ್ತನು “ಸ್ವಾತಂತ್ರ್ಯ ಪ್ರಿಯರೇ ದೃಢವಾಗಿ ನಿಲ್ಲಿರಿ” ಎಂಬ ವಿಷಯದ ಮೇಲೆ ಮಾತಾಡಿದನು. ಅದನ್ನು ಮಾಡಲು ಕ್ರೈಸ್ತರು ತಮ್ಮ ದಿವ್ಯ ಹೆತ್ತವರಾದ ಯೆಹೋವ ದೇವರು ಮತ್ತು ಆತನ ಪತ್ನಿಯಂಥಾ ಸಂಸ್ಥೆಗೆ ಅಂಟಿಕೊಂಡಿರಬೇಕು. ಯೆಹೋವನ ಜನರು ತಮ್ಮನ್ನು ಧರ್ಮಭ್ರಷ್ಟ ಸುಳ್ಳುಪ್ರಚಾರದಿಂದ ವಿಮಾರ್ಗಕ್ಕಿಳಿಯುವಂತೆ ಬಿಟ್ಟುಕೊಡ ಸಾಧ್ಯವಿಲ್ಲ. ಅನೈತಿಕ ಪ್ರಸ್ತಾಪಗಳೊಂದಿಗೆ ಬರುವವರನ್ನು ಅವರು ತಿರಸ್ಕರಿಸಲೇ ಬೇಕು. ಆ ದಿವ್ಯ ಸ್ವಾತಂತ್ರ್ಯದಲ್ಲಿ ದೃಢವಾಗಿ ನಿಲ್ಲುವಂತೆ ಕ್ರೈಸ್ತರು “ಆತ್ಮನಿಂದ ಜೀವಿಸುತ್ತಿರ” ಬೇಕಾಗಿದೆ.—ಗಲಾತ್ಯ 5:25.
ದಿನದ ಕೊನೆಯ ಭಾಷಣವು ಒಂದು ನಿಜ ಸಂತೋಷದ ಮೂಲವಾಗಿತ್ತು. “ಭೂಮಿಯಲ್ಲಿ ಜೀವಿಸಿದವರಲ್ಲಿ ಅತ್ಯಂತ ಮಹಾನ್ ಪುರುಷ” ಎಂದು ಅದರ ಶೀರ್ಷಿಕೆ. ಯೇಸು ಕ್ರಿಸ್ತನು ಆ ಅತ್ಯಂತ ಮಹಾ ಪುರುಷನು, ಯಾಕಂದರೆ ಆತನು ಎಲ್ಲಾ ಸೈನ್ಯಗಳು, ಜಲಸೇನೆಗಳು, ಶಾಸನಸಭೆಗಳು ಮತ್ತು ಅರಸರು ಮಾನವ ಕುಲದ ಜೀವಿತದ ಮೇಲೆ ಹಾಕಿದ ಒಟ್ಟು ಪರಿಣಾಮಕ್ಕಿಂತ ಹೆಚ್ಚು ಪ್ರಭಾವಶಾಲಿಯಾದ ಪರಿಣಾಮವನ್ನು ಹಾಕಿರುತ್ತಾನೆ. ಅವನು ದೇವರ ಕುಮಾರನು, ಈ ಭೂಮಿಗೆ ಬರುವ ಮುಂಚೆ ಪರಲೋಕದಲ್ಲಿ ಅಸ್ತಿತ್ವದಲ್ಲಿದ್ದವನು. ಯೇಸು ತನ್ನ ಸ್ವರ್ಗೀಯ ತಂದೆಯನ್ನು ಎಷ್ಟು ಚೆನ್ನಾಗಿ ಅನುಕರಿಸಿದ್ದನೆಂದರೆ, ತನ್ನ ಮಾತುಗಳಲ್ಲಿ, ಕಲಿಸುವಿಕೆಯಲ್ಲಿ ಮತ್ತು ಜೀವಿತಕ್ರಮದಲ್ಲಿ ಹೀಗೆ ಹೇಳ ಶಕ್ತನಾದನು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.” (ಯೋಹಾನ 14:9) “ದೇವರು ಪ್ರೀತಿ ಸ್ವರೂಪನು” ಎಂಬದನ್ನು ಯೇಸು ಎಷ್ಟು ಚೆನ್ನಾಗಿ ಪ್ರದರ್ಶಿಸಿ ತೋರಿಸಿದ್ದನು! (1 ಯೋಹಾನ 4:8) ಯೇಸುವಿನ ಗುಣಗಳ ಕುರಿತು ಬಹಳಷ್ಟನ್ನು ತಿಳಿಸಿದ ಬಳಿಕ, “ಯೇಸುವಿನ ಜೀವನ ಮತ್ತು ಶುಶ್ರೂಷೆ” ಎಂಬ ಶೀರ್ಷಿಕೆಯ ಲೇಖನಮಾಲೆಯು ಏಪ್ರಿಲ್ 1985ರಿಂದ ವಾಚ್ಟವರ್ನಲ್ಲಿ ಪ್ರಕಾಶಿತವಾಗುತ್ತಿದ್ದ ವಿಷಯಕ್ಕೆ ಭಾಷಣಕರ್ತನು ಗಮನ ಸೆಳೆದನು. ಅನೇಕ ವಿನಂತಿಗಳಿಗೆ ಪ್ರತಿಕ್ರಿಯೆಯಲ್ಲಿ, ಸೊಸೈಟಿಯು ಈಗ “ಜೀವಿಸಿದವರಲ್ಲಿ ಅತ್ಯಂತ ಮಹಾನ್ ಪುರುಷ” ಎಂಬ ಹೊಸ ಪುಸ್ತಕವನ್ನು ಹೊರಡಿಸಿಯದೆ. ಅದರಲ್ಲಿ 133 ಅಧ್ಯಾಯಗಳಿವೆ ಮತ್ತು ಪೂರ್ಣವರ್ಣರಂಜಿತ ಮುದ್ರಣವಾಗಿದೆ. ಲೇಖನಮಾಲೆಯ ಸಮಾಚಾರವನ್ನು ಪರಿಷ್ಕರಿಸಿ, ಪುಸ್ತಕದ 448 ಪುಟಗಳಲ್ಲಿ ಅವೆಲ್ಲವನ್ನು ಸಂಘಟಿಸಲಾಗಿದೆ. ನಿಜವಾಗಿಯೂ ಈ ಅಧಿವೇಶನದ ದಿನವು ಒಂದು ವಿಶೇಷ ಮೇಲ್ಮಟ್ಟದ ಸಂತಸದೊಂದಿಗೆ ಕೊನೆಗೊಂಡಿತು!
ಭಾನುವಾರ ಮುಂಜಾನೆ
ಭಾನುವಾರ ಬೆಳಿಗ್ಗಿನ ಆರಂಭದಲ್ಲಿಯೇ “ಮನುಷ್ಯರನ್ನು ಹಿಡಿಯುವ ಬೆಸ್ತರಾಗಿ ಸೇವೆಮಾಡುವುದು” ಎಂಬ ಭಾಷಣಮಾಲೆಯು ಸುರುವಾಯಿತು. “ಮೀನು ಹಿಡಿಯುವುದು—ಅಕ್ಷರಾರ್ಥ ಮತ್ತು ಸಾಂಕೇತಿಕ” ಎಂಬ ಭಾಷಣವು ಹಿಂಬಾಲಿಸಲಿದ್ದ ಭಾಷಣಗಳಿಗೆ ತಳಪಾಯವನ್ನು ಹಾಕಿತು. ಒಂದು ಅದ್ಭುತಕರವಾದ ಮೀನು ಹಿಡಿಯುವಿಕೆಯನ್ನು ನಡಿಸಿಕೊಟ್ಟ ಮೇಲೆ, ಯೇಸು ಆ ಬೆಸ್ತರನ್ನು ಮನುಷ್ಯರನ್ನು ಹಿಡಿಯವುದರಲ್ಲಿ ಒಳಗೂಡಲು ಆಮಂತ್ರಿಸಿದನು ಎಂದು ಭಾಷಣಕರ್ತನು ತೋರಿಸಿದನು. ಸ್ವಲ್ಪ ಸಮಯದ ತನಕ ಯೇಸು ತನ್ನ ಶಿಷ್ಯರಿಗೆ ಮನುಷ್ಯರನ್ನು ಹಿಡಿಯುವ ಬೆಸ್ತರಾಗುವ ತರಬೇತನ್ನು ಕೊಟ್ಟನು. ಮತ್ತು ಸಾ.ಶ. 33ರ ಪಂಚಾಶತ್ತಮದಿಂದ ಆರಂಭಿಸಿ, ಅವರು ಪುರುಷ ಮತ್ತು ಸ್ತ್ರೀಯರ ಗುಂಪುಗಳನ್ನು ಶಿಷ್ಯರಾಗುವಂತೆ ಸಹಾಯ ಕೊಡುವುದರಲ್ಲಿ ಸಾಫಲ್ಯ ಪಡೆದರು.
ಮುಂದಿನ ಭಾಷಣಕರ್ತನು ಮತ್ತಾಯ 13:47-50ರಲ್ಲಿ ದಾಖಲೆಯಾದ ಮೀನುಬಲೆಯ ಸಾಮ್ಯದ ಕುರಿತು ಮಾತಾಡಿದನು. ಸಾಂಕೇತಿಕ ಮೀನುಬಲೆಯಲ್ಲಿ ಅಭಿಷಿಕ್ತ ಕ್ರೈಸ್ತರು ಮತ್ತು ಕ್ರೈಸ್ತ ಪ್ರಪಂಚದವರು ಸೇರಿದ್ದರು, ಕ್ರೈಸ್ತ ಪ್ರಪಂಚದವರು ಯಾಕಂದರೆ ಬೈಬಲ್ ತರ್ಜುಮೆಯಲ್ಲಿ, ಪ್ರಕಾಶನದಲ್ಲಿ ಮತ್ತು ವಿತರಣೆಯಲ್ಲಿ ಅವರು ಮಾಡಿದ ಕೆಲಸಗಳ ಕಾರಣದಿಂದಲೇ; ಆದರೂ ಅವರ ಪ್ರಯತ್ನಗಳು ಅಯೋಗ್ಯ ಮೀನುಗಳ ಮಹಾ ಸಮೂಹವನ್ನು ಒಳತಂದಿತು. ವಿಶೇಷವಾಗಿ 1919ರಿಂದ ಒಂದು ಬೇರ್ಪಡಿಸುವ ಕೆಲಸವು ಅಲ್ಲಿ ನಡೆಯಿತು, ಅಯೋಗ್ಯ ಮೀನುಗಳನ್ನು ಹೊರಗೆಸೆಯಲಾಯಿತು, ಒಳ್ಳೇ ಮೀನುಗಳನ್ನು ಪಾತ್ರೆಗಳಂಥ ಸಭೆಗಳಿಗೆ ತುಂಬಿಸಲಾಯಿತು, ನಿಜ ಕ್ರೈಸ್ತರನ್ನು ದೈವಿಕ ಸೇವೆಗಾಗಿ ಕಾಪಾಡಲು ಮತ್ತು ಉಳಿಸಿಕೊಳ್ಳಲು ಅದು ನೆರವಾಯಿತು.
“ಜಗದ್ವ್ಯಾಪಕ ನೀರುಗಳಲ್ಲಿ ಮನುಷ್ಯರನ್ನು ಹಿಡಿಯುವುದು” ಎಂಬ ಮೂರನೆಯ ಭಾಷಣವು, ಲೋಕವ್ಯಾಪಕ ಮೀನುಗಾರಿಕೆಯಲ್ಲಿ ಭಾಗವಹಿಸಲು ಸಮರ್ಪಿತ ಕ್ರೈಸ್ತರೆಲ್ಲರ ಹಂಗನ್ನು ಒತ್ತಿಹೇಳಿತು. ಈಗ 40,00,000ಕ್ಕಿಂತಲೂ ಹೆಚ್ಚು ಮಂದಿ 200ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಈ ಕೆಲಸದಲ್ಲಿ ಪಾಲಿಗರಾಗುತ್ತಿದ್ದಾರೆ, ಮತ್ತು ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕವಾಗಿ 2,30,000ಕ್ಕಿಂತಲೂ ಹೆಚ್ಚು ಮಂದಿಗೆ ದೀಕ್ಷಾಸ್ನಾನವಾಗುತ್ತಲಿದೆ. ಯೆಹೋವನ ಜನರೆಲ್ಲರೂ ತಮ್ಮ ಮೀನುಗಾರಿಕೆಯ ನೈಪುಣ್ಯವನ್ನು ಹೆಚ್ಚಿಸುವಂತೆ ಪ್ರಚೋದಿಸಲ್ಪಟ್ಟರು ಮತ್ತು ಹಲವಾರು ವಿಶಿಷ್ಟ ಸಾಫಲ್ಯಯುಕ್ತ “ಬೆಸ್ತರ” ಸಾಕ್ಷತ್ ದರ್ಶನವನ್ನು ಮಾಡಲಾಯಿತು.
“ಈ ಅಂತ್ಯಕಾಲದಲ್ಲಿ ಎಚ್ಚರದಿಂದಿರುವುದು” ಎಂಬ ಮುಂದಿನ ಭಾಷಣದಲ್ಲಿ ಭಾಷಣಕರ್ತನು ದೇವ ಜನರು ಎಚ್ಚರವಾಗಿ ಉಳಿಯಲು ನೆರವಾಗುವ ಏಳು ಸಹಾಯಕಗಳನ್ನು ವಿವರಿಸಿದನು: ಅಪಕರ್ಷಣೆಗಳನ್ನು ಹೋರಾಡುವುದು, ಯಥಾರ್ಥಚಿತ್ತದಿಂದ ಪ್ರಾರ್ಥಿಸುವುದು, ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತು ಎಚ್ಚರಿಕೆ ಕೊಡುವುದು, ಆತ್ಮ-ಪರೀಕ್ಷಣೆ ಮಾಡುವುದು, ನೆರವೇರಿದ ಪ್ರವಾದನೆಗಳನ್ನು ಮನನ ಮಾಡುವುದು ಮತ್ತು ವಿಶ್ವಾಸಿಗಳಾದ ಸಮಯಕ್ಕಿಂತ ಈಗ ನಮ್ಮ ರಕ್ಷಣೆ ಸಮೀಪವಾಗಿದೆಂಬದನ್ನು ಮನಸ್ಸಿನಲ್ಲಿಡುವುದು.
ಬೆಳಗ್ಗಿನ ಕಾರ್ಯಕ್ರಮವು “ಆ ಸಂಕಟದ ಸಮಯವನ್ನು ಯಾರು ಪಾರಾಗುವರು?” ಎಂಬ ಚರ್ಚೆಯೊಂದಿಗೆ ಕೊನೆಗೊಂಡಿತು. ಯೋವೇಲ ಪ್ರವಾದನೆಯು ಅಪೊಸ್ತಲರ ಸಮಯದಲ್ಲಿ ಅಂಶಿಕವಾಗಿ ಹೇಗೆ ನೆರವೇರಿತ್ತೆಂದೂ, ಈಗ ಹೇಗೆ ಹೆಚ್ಚಿನ ನೆರವೇರಿಕೆಯನ್ನು ಪಡೆಯುತ್ತಿದೆ ಎಂದೂ ಮತ್ತು ಭವಿಷ್ಯದಲ್ಲಿ ಬೇಗನೇ ಪೂರ್ಣ ನೆರವೇರಿಕೆಯನ್ನು ಹೇಗೆ ಪಡೆಯುವದೆಂದೂ ಭಾಷಣಕರ್ತನು ತೋರಿಸಿದನು.
ಭಾನುವಾರ ಮಧ್ಯಾಹ್ನ
ಮಧ್ಯಾಹ್ನದ ಕಾರ್ಯಕ್ರಮವು “ದೇವರ ಸ್ವಾತಂತ್ರ್ಯದ ಹೊಸಲೋಕಕ್ಕೆ ಜಯಕಾರವೆತ್ತುವುದು!” ಎಂಬ ಬಹಿರಂಗ ಭಾಷಣದೊಂದಿಗೆ ಆರಂಭಿಸಿ, ಅಧಿವೇಶನದ ಮುಖ್ಯ ವಿಷಯವಾದ ಸ್ವಾತಂತ್ರ್ಯದ ಕುರಿತು ತಿಳಿಸಿತು. ಸುಳ್ಳು ಧರ್ಮ, ರಾಜಕೀಯ, ಆರ್ಥಿಕ ಮತ್ತು ಜಾತೀಯ ಘಟಕಗಳಿಂದ ಬರುವ ದಬ್ಬಾಳಿಕೆಯಿಂದ ಎಲ್ಲಿ ಬಿಡುಗಡೆ ಇರುವುದೋ ಆ ಹೊಸ ಲೋಕವೊಂದನ್ನು ದೇವರ ವಾಕ್ಯ ಮುಂತಿಳಿಸಿದೆ ಎಂದು ತಿಳಿಸಲಾಯಿತು. ಪಾಪ ಮತ್ತು ಮರಣದಿಂದ ಅಲ್ಲಿ ಬಿಡುಗಡೆ ಇರುವುದು. ಪರಿಪೂರ್ಣ ಆರೋಗ್ಯವು ಪುನಃಸ್ಥಾಪಿಸಲ್ಪಡುವುದರಿಂದ ಜನರು ಪರದೈಸ ಭೂಮಿಯಲ್ಲಿ ಸದಾ ಸಂತೋಷದಿಂದ ಜೀವಿಸ ಶಕ್ತರಾಗುವರು. ಹೀಗೆ, ನೀತಿಪ್ರಿಯರು ಹೊಸ ಲೋಕದ ನಿರ್ಮಾಣಿಕನಿಗೆ, “ಉಪಕಾರ, ಯೆಹೋವನೇ, ಕಟ್ಟಕಡೆಗೆ ತಂದ ನಿಜ ಸ್ವಾತಂತ್ರ್ಯಕ್ಕಾಗಿ!” ಎಂದು ಉದ್ಗರಿಸುತ್ತಾ ಕೀರ್ತಿಸಲು ಸಕಾರಣವಿರುವುದು.
ಬಹಿರಂಗ ಭಾಷಣವನ್ನು ಹಿಂಬಾಲಿಸಿ, ಜಿಲ್ಲಾ ಅಧಿವೇಶನಗಳಿಗೆ ಹೊಸ ಒಂದು ವಿಷಯವಾದ—ವಾರದ ಕಾವಲಿನಬುರುಜು ಪಾಠದ ಚರ್ಚೆಯು ಬಂತು. ಅನಂತರ ಒಂದು ಹುರಿದುಂಬಿಸುವ ಮತ್ತು ಬೋಧಪ್ರದ ಭಾಷಣವಾದ “ಸ್ವಾತಂತ್ರ್ಯ ಪ್ರಿಯರೇ, ಮುಂದೆ ಸಾಗಿರಿ” ಎಂಬದರಿಂದ ಅಧಿವೇಶನವು ಕೊನೆಗೊಂಡಿತು. ಅಧಿವೇಶನದ ಮುಖ್ಯ ವಿಷಯವಾದ ಸ್ವಾತಂತ್ರ್ಯದ ಕುರಿತಾದ ಪ್ರಧಾನ ವಿಷಯಗಳನ್ನು ಭಾಷಣ ಕರ್ತನು ಸಂಕ್ಷೇಪವಾಗಿ ತಿಳಿಸಿದನು. ಅವರಿಗಿರುವ ಸ್ವಾತಂತ್ರ್ಯಕ್ಕಾಗಿ ಯೆಹೋವನ ಜನರು ಪಡುವ ಸಂತೋಷ, ಕ್ರೈಸ್ತರು ಪ್ರಗತಿ ಮಾಡುತ್ತಾ ಬಂದ ಅನೇಕ ವಿಧಾನಗಳನ್ನು ಅವನು ಒತ್ತಿಹೇಳಿದನು ಮತ್ತು ಅಧಿಕ ಆಶೀರ್ವಾದಗಳನ್ನು ಕೊಯ್ಯುವಂತೆ ಅವರು ಐಕ್ಯತೆಯಿಂದ ಪ್ರಗತಿ ಮಾಡುತ್ತಾ ಮುಂದೆ ಸಾಗುವಂತೆ ಪ್ರೇರೇಪಿಸಿದನು. ಅವನು ಕೊನೆಗೊಳಿಸಿದ್ದು ಈ ಮಾತುಗಳಿಂದ: “ನಾವಿದನ್ನು ಮಾಡುತ್ತಿರುವಾಗ, ಸ್ವಾತಂತ್ರ್ಯ ಪ್ರಿಯರಾಗಿ ಪ್ರಗತಿ ಮಾಡುತ್ತಾ ಮುಂದುವರಿಯಲಾಗುವಂತೆ ಯೆಹೋವನು ನಮ್ಮೆಲ್ಲರನ್ನು ಆಶೀರ್ವದಿಸುತ್ತಾ ಇರಲಿ.” (w92 1/15)
“ಸೃಷ್ಟಿಯು ವ್ಯರ್ಥತ್ವಕ್ಕೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಮೂಲಕವಾಗಿಯೇ; ಆದರೂ ಅದಕ್ಕೊಂದು ನಿರೀಕ್ಷೆ ಉಂಟು ಏನಂದರೆ ಆ ಸೃಷ್ಟಿಯು ಭ್ರಷ್ಟತೆಯ ದಾಸತ್ವದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ಬಿಡುಗಡೆಯನ್ನು ಹೊಂದುವದೇ.”—ರೋಮಾಪುರ 8:20, 21.
[ಪುಟ 25 ರಲ್ಲಿರುವ ಚಿತ್ರಗಳು]
ಒಬ್ಬ ಎಳೆಯ ಅಧಿವೇಶನ ಪ್ರತಿನಿಧಿ, ಜೆಕಸ್ಲೊವೇಕಿಯದ ಪ್ರಾಗ್ನಲ್ಲಿ
[ಪುಟ 26 ರಲ್ಲಿರುವ ಚಿತ್ರಗಳು]
1. ಅಭ್ಯರ್ಥಿಗಳು ದೀಕ್ಷಾಸ್ನಾನದ ಸ್ಥಳಕ್ಕೆ ಹೊರಡುವುದು, ಜೆಕಸ್ಲೊವೇಕಿಯದ ಪ್ರಾಗ್ನಲ್ಲಿ
2. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ದೀಕ್ಷಾಸ್ನಾನ ಪಡೆಯುವುದು, ಇಸ್ಟೋನಿಯದ ಟಾಲಿನ್ನಲ್ಲಿ
3. ಹೊಸ ಪ್ರಕಾಶನಗಳು ಅಧಿವೇಶನಗಾರರಿಗೆ ಸಂತೋಷವನ್ನು ತಂದದ್ದು, ಸೈಬೀರಿಯದ ಯುಸೋಲಿ-ಸಿಬಿರೋಸ್ಕೆಯಲ್ಲಿ
4. ಪ್ರಾಗ್ ಅಧಿವೇಶನದಲ್ಲಿ “ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್”ನ್ನು ಜೆಕ್ ಮತ್ತು ಸ್ಲೋವಕ್ ಭಾಷೆಯಲ್ಲಿ ಹೊರಡಿಸಿದ್ದು