ಮನುಷ್ಯನ “ಹೊಸ ಲೋಕ ವ್ಯವಸ್ಥೆ” ಸಮೀಪವಿದೆಯೇ?
1. ಇತ್ತೀಚಿಗಿನ ವರ್ಷಗಳಲ್ಲಿ ಹೆಚ್ಚಿನ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಅಪೇಕ್ಷೆಯು ಹೇಗೆ ವ್ಯಕ್ತಪಡಿಸಲ್ಪಟ್ಟಿರುತ್ತದೆ?
ಇಂದು ಲಕ್ಷಾಂತರ ಜನರು ಸುಳ್ಳು ಧರ್ಮಕ್ಕೆ ಸೆರೆಯಾಗಿದ್ದಾರೆ, ಮತ್ತು ಅನೇಕರು ಆ ರೀತಿಯಲ್ಲಿ ಉಳಿಯಲು ಆರಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ಅಧಿಕಾಧಿಕ ಜನರು ರಾಜಕೀಯ ಸ್ವಾತಂತ್ರ್ಯಕ್ಕಾಗಿ ತಗಾದೆ ಮಾಡುತ್ತಾರೆ. ಪೂರ್ವ ಯೂರೋಪ್ ಮತ್ತು ಬೇರೆ ಕಡೆಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆದ ಅಸಾಮಾನ್ಯ ಫಟನಾವಳಿಗಳು ಜನರಿಗೆ ಹೆಚ್ಚು ಸ್ವತಂತ್ರತರದ ಸರಕಾರ ಬೇಕೆಂಬದನ್ನು ಪ್ರದರ್ಶಿಸಿವೆ. ಫಲಿತಾಂಶವಾಗಿ, ಒಂದು ಸ್ವಾತಂತ್ರ್ಯದ ಹೊಸ ಯುಗವು ಸಮೀಪಿಸಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಅಮೆರಿಕದ ಪ್ರೆಸಿಡೆಂಟರು ಅದನ್ನು “ಒಂದು ಹೊಸ ಲೋಕ ವ್ಯವಸ್ಥೆ” ಎಂದು ಕರೆದರು. ನಿಶ್ಚಯವಾಗಿಯೂ ಶೀತಲ ಯುದ್ಧ ಮತ್ತು ಶಸ್ತ್ರಾಸ್ತ್ರದೋಟವು ಮುಗಿಯಿತು ಮತ್ತು ಮಾನವ ಕುಲಕ್ಕಾಗಿ ಶಾಂತಿಯ ಒಂದು ಹೊಸ ಯುಗವು ಉದಯಿಸಿದೆ ಎಂದು ಎಲ್ಲೆಲ್ಲಿಯೂ ಇರುವ ಲೋಕ ಧುರೀಣರು ಹೇಳುತ್ತಿದ್ದರು.—1 ಥೆಸಲೊನೀಕ 5:3 ಕ್ಕೆ ಹೋಲಿಸಿ.
2, 3. ಯಾವ ಪರಿಸ್ಥಿತಿಗಳು ನಿಜ ಸ್ವಾತಂತ್ರ್ಯದ ವಿರುದ್ಧವಾಗಿ ಕಾರ್ಯನಡಿಸುತ್ತವೆ?
2 ಆದರೂ, ಮನುಷ್ಯನ ಪ್ರಯತ್ನಗಳು ಶಸ್ತ್ರಗಳ ಇಳಿತದಲ್ಲಿ ಮತ್ತು ಹೆಚ್ಚು ಸ್ವತಂತ್ರ ತರದ ಆಳಿಕೆಯಲ್ಲಿ ಪರಿಣಮಿಸಿದರೂ ಸಹ, ನಿಜ ಸ್ವಾತಂತ್ರ್ಯವು ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ? ಇಲ್ಲ, ಯಾಕಂದರೆ ಎಲ್ಲಿ ಬಡಜನರ ಸಂಖ್ಯೆಯು ವೃದ್ಧಿಯಾಗುತ್ತಾ ಬರುತ್ತದೋ ಮತ್ತು ಆರ್ಥಿಕವಾಗಿ ಪಾರಾಗಲು ಲಕ್ಷಾಂತರ ಜನರು ಹೋರಾಟ ನಡಿಸುತ್ತಾರೋ ಆ ಎಲ್ಲಾ ರಾಷ್ಟ್ರಗಳಲ್ಲಿ, ಪ್ರಜಾಪ್ರಭುತ್ವಗಳಲ್ಲಿ ಸಹ, ಎದೆಗುಂದಿಸುವ ಸಮಸ್ಯೆಗಳು ಅಸ್ತಿತ್ವದಲ್ಲಿವೆ. ವಿಜ್ಞಾನ ಮತ್ತು ವೈದ್ಯಕೀಯ ರಂಗದಲ್ಲಿ ಪ್ರಗತಿಗಳಾದಾಗ್ಯೂ, ಲೋಕವ್ಯಾಪಕವಾಗಿ ಪ್ರತಿ ದಿನ 40,000 ಮಕ್ಕಳು ನ್ಯೂನಪೋಷಣೆಯಿಂದ ಅಥವಾ ನಿವಾರಣೀಯ ರೋಗಗಳಿಂದ ಸಾಯುತ್ತಿದ್ದಾರೆ ಎಂದು ಸಂಯುಕ್ತ ರಾಷ್ಟ್ರ ಸಂಘದ ಒಂದು ವರದಿಯು ತಿಳಿಸುತ್ತದೆ. ಈ ರಂಗದಲ್ಲಿ ಪರಿಣತನೊಬ್ಬನು ಹೇಳಿದ್ದು: “ಬಡತನವು ಮಾನವತ್ವದ ಭವಿಷ್ಯತ್ತನ್ನು ನಿಜವಾಗಿ ಬೆದರಿಸುತ್ತಿರುವ ಒಂದು ವಿಲಕ್ಷಣ ಸ್ವರೂಪವನ್ನು ತಕ್ಕೊಳ್ಳುತ್ತಾ ಇದೆ.”
3 ಅದಲ್ಲದೆ, ಅಧಿಕಾಧಿಕ ಕ್ರೂರವಾಗುತ್ತಿರುವ ಪಾತಕಗಳಿಗೆ ಎಂದಿಗಿಂತಲೂ ಹೆಚ್ಚು ಜನರು ಗುರಿಯಾಗುತ್ತಿದ್ದಾರೆ. ಜಾತೀಯ, ರಾಜಕೀಯ, ಮತ್ತು ಧಾರ್ಮಿಕ ದ್ವೇಷಗಳು ಹಲವಾರು ದೇಶಗಳನ್ನು ತುಂಡುತುಂಡಾಗಿ ಒಡೆದಿವೆ. ಕೆಲವು ದೇಶಗಳಲ್ಲಿ ಪರಿಸ್ಥಿತಿಯು ಜೆಕರ್ಯ 14:13 ರಲ್ಲಿ ವರ್ಣಿಸಲಾದ ಆ ಭವಿಷ್ಯತ್ತಿನ ಸಮಯಕ್ಕಿಂತ ಕೊಂಚವೂ ದೂರವಿಲ್ಲ; ಆಗ ಜನರು “ಎಷ್ಟು ಗಲಿಬಿಲಿ ಮತ್ತು ಭಯದಿಂದ ಕೂಡಿರುವರೆಂದರೆ ಪ್ರತಿಯೊಬ್ಬನು ತನ್ನ ಪಕ್ಕದವನ ಮೇಲೆ ಬಿದ್ದು ಅವನನ್ನು ಆಕ್ರಮಿಸುವನು.” (ಟುಡೇಸ್ ಇಂಗ್ಲಿಷ್ ವರ್ಶನ್) ಅಮಲೌಷಧದ ದುರುಪಯೋಗ ಮತ್ತು ಲೈಂಗಿಕವಾಗಿ ಸಾಗಿಸಲ್ಪಡುವ ರೋಗಗಳು ಸರ್ವವ್ಯಾಪಿ ವ್ಯಾಧಿಯಾಗಿವೆ. ಲಕ್ಷಾಂತರ ಜನರು ಏಯ್ಡ್ಸ್ ರೋಗದಿಂದ ಬಾಧಿತರಾಗಿದ್ದಾರೆ. ಅಮೆರಿಕ ಒಂದರಲ್ಲಿಯೇ ಸುಮಾರು 1,20,000 ಜನರು ಈವಾಗಲೇ ಅದರಿಂದ ಸತ್ತಿರುತ್ತಾರೆ.
ಪಾಪ ಮತ್ತು ಮರಣಕ್ಕೆ ದಾಸ್ಯ
4, 5. ಇಂದು ಅಸ್ತಿತ್ವದಲ್ಲಿರುವ ಸ್ವಾತಂತ್ರ್ಯಗಳ ಮಧ್ಯೆಯೂ, ಯಾವ ರೀತಿಯ ದಾಸ್ಯವು ಪ್ರತಿಯೊಬ್ಬನನ್ನು ಬಿಗಿಯಾಗಿ ಹಿಡಿದದೆ?
4 ಆದರೂ, ಆ ಕೆಟ್ಟ ಪರಿಸ್ಥಿತಿಗಳಲ್ಲಿ ಯಾವುದೂ ಅಸ್ತಿತ್ವದಲ್ಲಿರದಿದ್ದರೂ, ಜನರಿಗೆ ನಿಜ ಸ್ವಾತಂತ್ರ್ಯವು ಮತ್ತೂ ಅಲ್ಲಿರಲಾರದು. ಎಲ್ಲರೂ ಇನ್ನೂ ದಾಸ್ಯದಲ್ಲೇ ಇರುವರು. ವಿಷಯವು ಹಾಗಿದೆ ಏಕೆ? ದೃಷ್ಟಾಂತಕ್ಕಾಗಿ: ಯಾವನಾದರೂ ಒಬ್ಬ ಸರ್ವಾಧಿಕಾರಿಯು ಭೂಮಿಯ ಪ್ರತಿಯೊಬ್ಬನನ್ನು ದಾಸನಾಗಿ ಹಿಡಿದು ಅವರೆಲ್ಲರನ್ನು ಕೊಂದಲ್ಲಿ ಆಗೇನು? ನಮ್ಮ ಪ್ರಥಮ ಮಾತಾಪಿತರು ದೇವರ ವಿರುದ್ಧವಾಗಿ ದಂಗೆಯೆದ್ದಾಗ ಮತ್ತು ಪಿಶಾಚನ ದಬ್ಬಾಳಿಕೆಯ ಆಡಳಿತಕ್ಕೆ ದಾಸರಾಗಿ ಪರಿಣಮಿಸಿದಾಗ ವಾಸ್ತವದಲ್ಲಿ ಸಂಭವಿಸಿದ್ದು ಅದೇ.—2 ಕೊರಿಂಥ 4:4
5 ಆದಿಕಾಂಡ 1 ನೆಯ ಮತ್ತು 2 ನೆಯ ಅಧ್ಯಾಯಗಳು ತೋರಿಸುವ ಪ್ರಕಾರ, ದೇವರು ಮನುಷ್ಯರನ್ನು ನಿರ್ಮಿಸಿದಾಗ ಅವರು ಭೂಮಿಯ ಮೇಲೆ ಪರಿಪೂರ್ಣತೆಯಲ್ಲಿ ಪರದೈಸದಲ್ಲಿ ಸದಾ ಜೀವಿಸುವಂತೆ ಉದ್ದೇಶಿಸಿದ್ದನು. ಆದರೆ ನಮ್ಮ ಪೂರ್ವಜನಾದ ಆದಾಮನು ದೇವರ ವಿರುದ್ಧವಾಗಿ ದಂಗೆ ಎದದ್ದರಿಂದಾಗಿ, ನಾವೆಲ್ಲರೂ ಗರ್ಭದಾರಂಭದಿಂದಲೇ ಮರಣ ಶಿಕ್ಷೆಯ ಕೆಳಗೆ ಬಂದಿರುತ್ತೇವೆ: “ಒಬ್ಬ ಮನುಷ್ಯ [ಆದಾಮ, ಮಾನವ ಕುಲದ ಕುಟುಂಬತಲೆ] ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದವು.” ಬೈಬಲು ಅನ್ನುವಂತೆ, “ಮರಣವು ರಾಜನಾಗಿ ಆಳಿಕೆ ನಡಿಸುತ್ತಿತ್ತು.” (ರೋಮಾಪುರ 5:12, 14, NW) ಹೀಗೆ ವೈಯಕ್ತಿಕವಾಗಿ ನಮಗೆಷ್ಟೇ ಸ್ವಾತಂತ್ರ್ಯವು ಇದ್ದಿರಲಿ, ನಾವೆಲ್ಲರೂ ಪಾಪ ಮತ್ತು ಮರಣಕ್ಕೆ ದಾಸ್ಯದಲ್ಲಿದ್ದೇವೆ.
6. ಕೀರ್ತನೆ 90:10 ಬರೆಯಲ್ಪಟ್ಟಂದಿನಿಂದ ಜೀವಿತದ ಆಯುಸ್ಸಿನಲ್ಲಿ ಕೊಂಚವೇ ಪ್ರಗತಿಯಾಗಿದೆಯೇಕೆ?
6 ಅಷ್ಟಲ್ಲದೆ, ಇಂದು ನಮಗಿರುವ ಜೀವಿತವು ಅತ್ಯಂತ ಸೀಮಿತವಾಗಿದೆ. ಭಾಗ್ಯವಂತರಿಗೆ ಸಹ ಕೇವಲ ಕೆಲವೇ ದಶಮಾನಗಳು ಮಾತ್ರ. ದುರ್ಭಾಗ್ಯವಂತರಿಗಾದರೋ ಕೆಲವೇ ವರ್ಷಗಳು, ಅಥವಾ ಅದಕ್ಕಿಂತಲೂ ಕಡಿಮೆ. ಮತ್ತು ಒಂದು ಹೊಸ ಅಧ್ಯಯನವು ಹೇಳುವುದು: “ವಿಜ್ಞಾನ ಮತ್ತು ವೈದ್ಯಕೀಯ ರಂಗವು ಮಾನವನ ಆಯುಷ್ಕಾಲವನ್ನು ಅದರ ಸಹಜವಾದ ಸೀಮಿತಕ್ಕೆ ದೂಡಿದೆ.” ಇದು ಯಾಕಂದರೆ ನಮ್ಮ ಅನುವಂಶೀಯ ವ್ಯವಸ್ಥೆಗೆ ಆದಾಮನ ಪಾಪದ ಫಲವಾಗಿ ಅಪೂರ್ಣತೆ ಮತ್ತು ಮರಣವು ಕಟ್ಟಲ್ಪಟ್ಟಿದೆ. ನಾವು ಒಂದುವೇಳೆ 70 ಅಥವಾ 80 ವರ್ಷ ಜೀವಿಸಿದ್ದಾದರೆ, ಹೆಚ್ಚು ಜ್ಞಾನವಂತರೂ ಹೆಚ್ಚು ಜೀವಿತಾನಂದವನ್ನು ಪಡೆಯ ಶಕ್ತರೂ ಆಗುವ ಬದಲಿಗೆ, ನಮ್ಮ ದೇಹಗಳು ಭಗ್ನಗೊಳ್ಳುವುದೂ ಮಣ್ಣಾಗಿ ಕೊನೆಗೊಳ್ಳುವುದೂ ಅದೆಷ್ಟು ಖೇಧಕರವು!—ಕೀರ್ತನೆ 90:10.
7. ನಮಗೆ ಬೇಕಾದ ಮತ್ತು ನಾವು ಬಯಸುವ ನಿಜ ಸ್ವಾತಂತ್ರ್ಯಗಳಿಗೆ ಮಾನವರೆಂದೂ ಮೂಲವಾಗಿರ ಶಕ್ತರಲ್ಲವೇಕೆ?
7 ಈ ಪಾಪ ಮತ್ತು ಮರಣದ ದಾಸ್ಯವನ್ನು ಯಾವ ರೀತಿಯ ಮಾನವ ಆಳಿಕೆಯು ತಡೆಯಬಲ್ಲದು? ಯಾವುದೂ ಇಲ್ಲ. ಅನಾರೋಗ್ಯ, ವೃದ್ಧಾಪ್ಯ ಮತ್ತು ಮರಣದ ಶಾಪದಿಂದ ನಮ್ಮನ್ನು ಯಾವ ಸರಕಾರಿ ಅಧಿಕಾರಿಗಳಾಗಲಿ, ವಿಜ್ಞಾನಿಗಳಾಗಲಿ, ಯಾ ವೈದ್ಯರುಗಳಾಗಲಿ ಮುಕ್ತಗೊಳಿಸ ಶಕ್ತರಲ್ಲ, ಅಲ್ಲದೆ ಅಭದ್ರತೆ, ಅನ್ಯಾಯ, ಪಾತಕ, ಹಸಿವು ಮತ್ತು ಬಡತನವನ್ನು ಸಹ ಯಾರೂ ನಿರ್ಮೂಲಗೊಳಿಸ ಶಕ್ತನಲ್ಲ. (ಕೀರ್ತನೆ 89:48) ಮನುಷ್ಯರು ಎಷ್ಟೇ ಸದುದ್ದೇಶವುಳ್ಳವರಾಗಿರಲಿ, ನಾವು ಬಯಸುವ ಮತ್ತು ನಮಗೆ ಬೇಕಾದ ನಿಜ ಸ್ವಾತಂತ್ರ್ಯಗಳ ಮೂಲವಾಗುವುದಕ್ಕೆ ಅವರಿಗೆ ಅಶಕ್ಯವಾಗಿದೆ.—ಕೀರ್ತನೆ 146:3.
ಚಿತ್ತ ಸ್ವಾತಂತ್ರ್ಯದ ದುರುಪಯೋಗ
8, 9. ಮಾನವ ಕುಲವನ್ನು ಅದರ ಪ್ರಚಲಿತ ಖೇಧಕರ ಪರಿಸ್ಥಿತಿಯಲ್ಲಿ ಹಾಕಿದ್ದು ಯಾವುದು?
8 ಆದಾಮ ಮತ್ತು ಹವ್ವರು ತಮ್ಮ ಚಿತ್ತ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿದ್ದರಿಂದಾಗಿ ಮಾನವ ಕುಟುಂಬವು ಈ ಶೋಚನೀಯ ಪರಿಸ್ಥಿತಿಯಲ್ಲಿದೆ. ದ ಜೆರೂಸಲೇಮ್ ಬೈಬಲ್ಗೆ ಅನುಸಾರವಾಗಿ, ಒಂದನೆಯ ಪೇತ್ರ 2:16 ಹೇಳುವುದು: “ಸ್ವತಂತ್ರರಂತೆ ನಡೆದುಕೊಳ್ಳಿರಿ. ಆದರೆ ಕೆಟ್ಟತನವನ್ನು ಮರೆಮಾಜುವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ.” ಹೀಗೆ ಮನುಷ್ಯನ ಸ್ವಾತಂತ್ರ್ಯವು ಅಸೀಮಿತವಾಗಿರಲು ದೇವರು ಉದ್ದೇಶಿಸಿರಲಿಲ್ಲವೆಂದು ಸ್ಪಷ್ಟವಾಗಿಗುತ್ತದೆ. ಅದು ದೇವರ ನೀತಿಯುಳ್ಳ ಮತ್ತು ಪ್ರತಿಯೊಬ್ಬನಿಗೆ ಪ್ರಯೋಜನವನ್ನು ತರುವ ನಿಯಮಗಳ ಮೇರೆಯೊಳಗೆ ಬಳಸಲ್ಪಡಬೇಕಿತ್ತು. ಮತ್ತು ಆ ಮೇರೆಗಳು ಹೆಚ್ಚಿನ ವೈಯಕ್ತಿಕ ಇಚ್ಛಾ ಸ್ವಾತಂತ್ರ್ಯಕ್ಕೆ ಅನುಮತಿಸಲು ಸಾಕಷ್ಟು ವಿಸ್ತಾರ್ಯವಾಗಿದ್ದವು, ಹೀಗೆ ದೇವರ ಆಳಿಕೆಯು ಎಂದೂ ದಬ್ಬಾಳಿಕೆಯಾಗಿರ ಸಾಧ್ಯವಿರಲಿಲ್ಲ.—ಧರ್ಮೋಪದೇಶಕಾಂಡ 32:4.
9 ಆದರೂ ನಮ್ಮ ಪ್ರಥಮ ಹೆತ್ತವರು ಯಾವುದು ಯೋಗ್ಯ ಮತ್ತು ಯಾವುದು ಅಯೋಗ್ಯ ಎಂಬದನ್ನು ತಮಗಾಗಿ ತಾವೇ ನಿರ್ಣಯಿಸಲು ಆರಿಸಿಕೊಂಡರು. ಅವರು ಬುದ್ಧಿಪೂರ್ವಕವಾಗಿ ದೇವರ ಆಳಿಕೆಯ ಹೊರಗೆ ಹೋದದ್ದರಿಂದ ದೇವರು ತನ್ನ ಬೆಂಬಲವನ್ನು ಅವರಿಂದ ಹಿಂತೆಗೆದನು. (ಆದಿಕಾಂಡ 3:17-19) ಅವರು ಹೀಗೆ ಅಪೂರ್ಣರಾಗಿ ಪರಿಣಮಿಸಿದರು, ಫಲಿತಾಂಶವಾಗಿ ಅನಾರೋಗ್ಯ ಮತ್ತು ಮರಣವು ಬಂತು. ಸ್ವತಂತ್ರರಾಗುವ ಬದಲಿಗೆ ಮಾನವ ಕುಲವು ಪಾಪ ಮತ್ತು ಮರಣದ ದಾಸ್ಯದೊಳಗೆ ಬಂತು. ಅಸಂಪೂರ್ಣ ಮತ್ತು ಆಗಿಂದಾಗ್ಯೆ ಕ್ರೂರರೂ ಆದ ಮಾನವ ಆಧಿಪತಿಗಳ ಕೊಂಕಾಟಗಳಿಗೂ ಅವರು ಗುರಿಯಾದರು.—ಧರ್ಮೋಪದೇಶಕಾಂಡ 32:5.
10. ಯೆಹೋವನು ಹೇಗೆ ಪ್ರೀತಿಯಿಂದ ವಿಷಯಗಳನ್ನು ನಿರ್ವಹಿಸಿದ್ದಾನೆ?
10 ಪೂರ್ಣ ಸ್ವಾತಂತ್ರ್ಯವೆಂದು ಎಣಿಸಲ್ಪಟ್ಟ ಈ ಪ್ರಯೋಗದಲ್ಲಿ ದೇವರು ಮಾನವರನ್ನು ಒಂದು ಸೀಮಿತ ಅವಧಿಯ ತನಕ ಮಾತ್ರವೇ ಬಿಟ್ಟಿರುತ್ತಾನೆ. ಮಾನವಾಳಿಕೆಯು ದೇವರಿಂದ ಸ್ವತಂತ್ರವಾಗಿ ಸಾಫಲ್ಯಗೊಳ್ಳಲಾರದು ಎಂಬದನ್ನು ಫಲಿತಾಂಶಗಳು ನಿಸ್ಸಂದೇಹವಾಗಿ ಪ್ರದರ್ಶಿಸುವುವು ಎಂದಾತನಿಗೆ ಗೊತ್ತಿತ್ತು. ಯೋಗ್ಯವಾಗಿ ಬಳಸಲ್ಪಟ್ಟಲ್ಲಿ ಚಿತ್ತ ಸ್ವಾತಂತ್ರ್ಯವು ಒಂದು ಎಷ್ಟು ದೊಡ್ಡ ನಿಕ್ಷೇಪವಾಗಿದೆಯೆಂದರೆ, ದೇವರು ತನ್ನ ಪ್ರೀತಿಯಲ್ಲಿ ಆ ಚಿತ್ತ ಸ್ವಾತಂತ್ರ್ಯದ ವರವನ್ನು ಹಿಂದಕ್ಕೆ ತಕ್ಕೊಳ್ಳುವ ಬದಲಿಗೆ ಏನು ಸಂಭವಿಸಿತೋ ಅದನ್ನು ತಾತ್ಕಾಲಿಕವಾಗಿ ಹಾಗೆಯೇ ಮುಂದುವರಿಯುವಂತೆ ಬಿಟ್ಟನು.
‘ಮನುಷ್ಯನು ಸರಿಯಾದ ಕಡೆಗೆ ಹೆಜ್ಜೆಯನ್ನಿಡಲಾರನು’
11. ಇತಿಹಾಸವು ಬೈಬಲಿನ ನಿಷ್ಕೃಷ್ಟತೆಯನ್ನು ಹೇಗೆ ಬೆಂಬಲಿಸಿದೆ?
11 ಇತಿಹಾಸದ ದಾಖಲೆಯು ಯೆರೆಮೀಯ 10 ನೆಯ ಅಧ್ಯಾಯ, 23 ಮತ್ತು 24 ನೆಯ ವಚನಗಳ ನಿಷ್ಕೃಷ್ಟತೆಯನ್ನು ತೋರಿಸಿಯದೆ, ಅದನ್ನುವುದು: “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು. ಯೆಹೋವನೇ, ನನ್ನನ್ನು ಶಿಕ್ಷಿಸು.” ಪ್ರಸಂಗಿ 8:9 ರ ಸತ್ಯತೆಯನ್ನು ಸಹ ಇತಿಹಾಸವು ತೋರಿಸಿದೆ, ಅದನ್ನುವುದು: “ಮನುಷ್ಯನು ಮನುಷ್ಯನ ಮೇಲೆ ಅವನ ಹಾನಿಗಾಗಿ ಅಧಿಕಾರ ನಡಿಸಿದ್ದಾನೆ.” ಅದೆಷ್ಟು ಸತ್ಯವು! ಮಾನವ ಕುಟುಂಬವು ಒಂದು ಕೇಡಿನಿಂದ ಇನ್ನೊಂದು ಕೇಡಿಗೆ ತೆರಳುತ್ತಾ, ಕೊನೆಯಲ್ಲಿ ಎಲ್ಲರಿಗೂ ಸಮಾಧಿಯೇ ಅಂತ್ಯಫಲವಾಗಿದೆ. ರೋಮಾಪುರ 8:22 ರಲ್ಲಿ ಅಪೊಸ್ತಲ ಪೌಲನು ಸನ್ನಿವೇಶವನ್ನು ಸರಿಯಾಗಿಯೇ ದಾಖಲೆ ಮಾಡುತ್ತಾ ಅಂದದ್ದು: “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವ ವೇದನೆ ಪಡುತ್ತಾ ಇರುತ್ತದೆಂದು ನಾವು ಬಲ್ಲೆವು.” ಹೌದು, ದೇವರ ನಿಯಮಗಳಿಂದ ಸ್ವತಂತ್ರತೆಯು ವಿಪತ್ಕಾರಕವಾಗಿ ಪರಿಣಮಿಸಿದೆ.
12. ಪರಿಪೂರ್ಣ ಸ್ವಾತಂತ್ರ್ಯದ ಕುರಿತು ಕೆಲವು ಐಹಿಕ ಮೂಲಗಳು ಹೇಳುವುದೇನು?
12 ಇನ್ಕಿಸ್ವಿಷನ್ ಆ್ಯಂಡ್ ಲಿಬರ್ಟಿ ಎಂಬ ಪುಸ್ತಕವು ಸ್ವಾತಂತ್ರ್ಯದ ಕುರಿತು ಈ ಹೇಳಿಕೆಯನ್ನಿತ್ತಿದೆ: “ಸ್ವಾತಂತ್ರ್ಯವು ತನ್ನಲ್ಲಿ ತಾನೇ ಒಂದು ಸದ್ಗುಣವಲ್ಲ; ಅಧಿಕ ಯೋಗ್ಯತೆಗಳಿರದ ಹೊರತು ಅದೊಂದು ಹೆಮ್ಮೆ ಪಡತಕ್ಕ ವಿಷಯವಲ್ಲ. ವಾಸ್ತವದಲ್ಲಿ ಅದು ಸ್ವಾರ್ಥತೆಯ ಕೇವಲ ಒಂದು ಕೆಳಮಟ್ಟದ ರೂಪವಾಗಿರಲೂ ಬಹುದು. . . . ಮನುಷ್ಯನು ಒಂದು ಪೂರ್ಣ ರೀತಿಯಲ್ಲಿ ಸ್ವಾತಂತ್ರ್ಯಪರ ಜೀವಿಯಲ್ಲ ಮತ್ತು ಅಸಂಬದ್ಧತೆಯ ಹೊರತು ಹಾಗಿರಲು ಹಾರೈಸುವಾತನೂ ಅಲ್ಲ.” ಮತ್ತು ಇಂಗ್ಲೆಂಡಿನ ರಾಜಕುವರ ಫಿಲಿಪ್ಪ್ ಒಮ್ಮೆ ಅಂದದ್ದು: “ಪ್ರತಿಯೊಂದು ಚಪಲದಲ್ಲಿ ಮತ್ತು ಪ್ರವೃತ್ತಿಯಲ್ಲಿ ಮನಬಂದಂತೆ ವರ್ತಿಸುವ ಸ್ವಾತಂತ್ರ್ಯವು ಹಿತಕರವಾಗಿ ಕಾಣಬಹುದು. ಆದರೆ ಆತ್ಮ-ನಿಗ್ರಹವಿಲ್ಲದ ಸ್ವಾತಂತ್ರ್ಯ . . . ಮತ್ತು ಇತರರಿಗಾಗಿ ಪರಿಗಣನೆಯಿಲ್ಲದ ವರ್ತನೆಯು ಒಂದು ಸಮಾಜದ ಜೀವಿತ ದರ್ಜೆಯನ್ನು, ಅದೆಷ್ಟೇ ಸಂಪನ್ನವಾಗಿರಲಿ, ನಾಶಗೊಳಿಸುವ ಖಂಡಿತವಾದ ಮಾರ್ಗವೆಂದು ಅನುಭವವು ಪದೇ ಪದೇ ಕಲಿಸುತ್ತದೆ.”
ಯಾರಿಗೆ ಹೆಚ್ಚು ತಿಳಿದದೆ?
13, 14. ಮಾನವ ಕುಟುಂಬಕ್ಕೆ ಯಾರು ಮಾತ್ರವೇ ನಿಜ ಸ್ವಾತಂತ್ರ್ಯವನ್ನು ಒದಗಿಸಬಲ್ಲನು?
13 ಒಂದು ಮನೆಯನ್ನು ಹೇಗೆ ಸಂಘಟಿಸಬೇಕೆಂದು ಹೆಚ್ಚು ತಿಳಿದಿರುವವರು ಯಾರು—ಪ್ರೀತಿಯುಳ್ಳ, ನುರಿತ, ಅನುಭವಸ್ಥ ಹೆತ್ತವರೋ ಅಥವಾ ಎಳೆಯ ಮಕ್ಕಳೋ? ಉತ್ತರವು ಸ್ಫುಟವಾಗಿದೆ. ಅದೇ ರೀತಿಯಲ್ಲಿ, ಮಾನವರ ನಿರ್ಮಾಣಕರ್ತನಾದ ನಮ್ಮ ಸ್ವರ್ಗೀಯ ತಂದೆಗೆ ನಮಗೆ ಯಾವುದು ಯುಕ್ತವು ಎಂಬದರ ಕುರಿತು ಹೆಚ್ಚು ತಿಳಿದದೆ. ಮಾನವ ಸಮಾಜವು ಹೇಗೆ ಸಂಘಟಿಸಲ್ಪಡಬೇಕು ಮತ್ತು ಹೇಗೆ ಆಳಲ್ಪಡಬೇಕು ಎಂದಾತನಿಗೆ ಗೊತ್ತಿದೆ. ನಿಜ ಸ್ವಾತಂತ್ರ್ಯದ ಪ್ರಯೋಜನಗಳನ್ನು ಪ್ರತಿಯೊಬ್ಬನಿಗೆ ತರುವುದಕ್ಕೆ ಚಿತ್ತ ಸ್ವಾತಂತ್ರ್ಯವನ್ನು ಹೇಗೆ ಕ್ರಮಪಡಿಸಬೇಕೆಂದು ಆತನಿಗೆ ತಿಳಿದದೆ. ಮಾನವ ಕುಟುಂಬವನ್ನು ಅದರ ಬಂಧನದೊಳಗಿಂದ ಹೇಗೆ ಬಿಡಿಸಬೇಕು ಮತ್ತು ಎಲ್ಲರಿಗೆ ನಿಜ ಸ್ವಾತಂತ್ರ್ಯವನ್ನು ಹೇಗೆ ಒದಗಿಸಬೇಕು ಎಂಬದು ಸರ್ವಶಕ್ತನಾದ ಯೆಹೋವ ದೇವರಿಗೆ ಮಾತ್ರವೇ ತಿಳಿದದೆ.—ಯೆಶಾಯ 48:17-19.
14 ತನ್ನ ವಾಕ್ಯದಲ್ಲಿ, ರೋಮಾಪುರ 8:21 ರಲ್ಲಿ, ಯೆಹೋವನು ಈ ಪ್ರೇರೇಪಕ ವಾಗ್ದಾನವನ್ನು ನೀಡಿದ್ದಾನೆ: “ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.” ಹೌದು, ಮಾನವ ಕುಲವನ್ನು ಅದರ ಪ್ರಚಲಿತ ದುಃಖಾರ್ತ ಪರಿಸ್ಥಿತಿಯೊಳಗಿಂದ ಪೂರ್ಣವಾಗಿ ಮುಕ್ತಗೊಳಿಸಲು ದೇವರು ವಾಗ್ದಾನಿಸಿದ್ದಾನೆ. ಇದು ಹೇಗೆ ಸಂಭವಿಸುವುದೆಂದು ಮುಂದಿನ ಲೇಖನವು ಚರ್ಚಿಸಲಿದೆ. (w92 4/1)
ನೀವು ಹೇಗೆ ಉತ್ತರಿಸುವಿರಿ?
(ಪುಟ 3 ರಿಂದ 8 ರ ತನಕದ ಪುನರಾವರ್ತನೆ)
▫ ಸ್ವಾತಂತ್ರ್ಯದ ಕುರಿತು ಮಾನವರಿಗೆ ಬಲವಾದ ಅನಿಸಿಕೆ ಏಕೆ?
▫ ಯಾವ ವಿಧಗಳಲ್ಲಿ ಜನರು ಇತಿಹಾಸದಲ್ಲೆಲ್ಲೂ ದಾಸರಾಗಿ ಪರಿಣಮಿಸಿದ್ದಾರೆ?
▫ ಚಿತ್ತ ಸ್ವಾತಂತ್ರ್ಯದ ದುರುಪಯೋಗವನ್ನು ಯೆಹೋವನು ಇಷ್ಟು ದೀರ್ಘಕಾಲ ಬಿಟ್ಟದ್ದೇಕೆ?
▫ ಸಕಲ ಮಾನವ ಕುಲಕ್ಕೆ ಯಾರು ಮಾತ್ರವೇ ನಿಜ ಸ್ವಾತಂತ್ರ್ಯವನ್ನು ತರಬಲ್ಲನು, ಮತ್ತು ಏಕೆ?
[ಪುಟ 7 ರಲ್ಲಿರುವ ಚಿತ್ರ]
ಮನುಷ್ಯನ ಆಯುಷ್ಕಾಲವು ಕೀರ್ತನೆ 90:10 ರಲ್ಲಿ 3,500 ವರ್ಷಗಳ ಹಿಂದೆ ಹೇಳಿದಂತೆ ಸರಿಸುಮಾರು ಅಷ್ಟೇ ಇದೆ
[ಕೃಪೆ]
Courtesy of The British Museum