ದೇವರ ಸ್ವಾತಂತ್ರ್ಯದ ಹೊಸ ಲೋಕವನ್ನು ಸ್ವಾಗತಿಸುವುದು
“[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:4.
1, 2. ಯಾರು ಮಾತ್ರವೇ ನಿಜ ಸ್ವಾತಂತ್ರ್ಯವನ್ನು ತರಬಲ್ಲನು, ಮತ್ತು ಬೈಬಲ್ನಲ್ಲಿ ನಾವಾತನ ಕುರಿತು ಏನನ್ನು ಕಲಿಯಬಲ್ಲೆವು?
ಪ್ರವಾದಿಯಾದ ಯೆರೆಮೀಯನು ಏನಂದನೋ ಅದನ್ನು ಇತಿಹಾಸವು ಸತ್ಯವೆಂದು ರುಜುಪಡಿಸಿದೆ: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” ಮಾನವನ ಹೆಜ್ಜೆಗಳನ್ನು ಯಾರು ಮಾತ್ರವೇ ಸರಿಯಾಗಿ ಮಾರ್ಗದರ್ಶಿಸ ಶಕ್ತನು? ಯೆರೆಮೀಯ ಮುಂದುವರಿಸುತ್ತಾ ಅಂದದ್ದು: “ಯೆಹೋವನೇ, ನನ್ನನ್ನು ಶಿಕ್ಷಿಸು.” (ಯೆರೆಮೀಯ 10:23, 24) ಹೌದು, ಮಾನವ ಕುಟುಂಬವನ್ನು ಬಾಧಿಸುತ್ತಿರುವ ಸಮಸ್ಯೆಗಳಿಂದ ಯೆಹೋವನು ಮಾತ್ರವೇ ನಿಜ ಬಿಡುಗಡೆಯನ್ನು ತರಬಲ್ಲನು.
2 ತನ್ನನ್ನು ಸೇವಿಸುವವರಿಗೆ ಬಿಡುಗಡೆಯನ್ನು ತರುವುದಕ್ಕೆ ಯೆಹೋವನಿಗಿರುವ ಸಾಮರ್ಥ್ಯದ ಅನೇಕ ದೃಷ್ಟಾಂತಗಳು ಬೈಬಲ್ನಲ್ಲಿ ಅಡಕವಾಗಿವೆ. “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ಸುಳ್ಳು ಆರಾಧನೆಯ ವಿರುದ್ಧವಾಗಿ ಯೆಹೋವನ ತೀರ್ಪುಗಳು ಸಹ ದಾಖಲೆಯಾಗಿವೆ ಮತ್ತು ಇವು “ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ” ಕಾರ್ಯನಡಿಸುತ್ತವೆ.—1 ಕೊರಿಂಥ 10:11.
ತನ್ನ ಜನರನ್ನು ಮುಕ್ತಗೊಳಿಸುವುದು
3. ಐಗುಪ್ತದಲ್ಲಿದ್ದ ತನ್ನ ಜನರನ್ನು ಬಿಡುಗಡೆ ಮಾಡಲು ದೇವರು ತನ್ನ ಸಾಮರ್ಥ್ಯವನ್ನು ತೋರಿಸಿದ್ದು ಹೇಗೆ?
3 ಮಿಥ್ಯಾರಾಧನೆಯ ವಿರುದ್ಧವಾಗಿ ತೀರ್ಪನ್ನು ನಿರ್ವಹಿಸುವುದಕ್ಕೆ ಮತ್ತು ತನ್ನ ಚಿತ್ತವನ್ನು ಮಾಡುವವರನ್ನು ಸ್ವತಂತ್ರಗೊಳಿಸುವುದಕ್ಕೆ ದೇವರಿಗಿರುವ ಸಾಮರ್ಥ್ಯದ ಒಂದು ದೃಷ್ಟಾಂತವು, ಪ್ರಾಚೀನ ಕಾಲದ ಆತನ ಜನರು ಐಗುಪ್ತದಲ್ಲಿ ದಾಸ್ಯದಲ್ಲಿದ್ದ ಸಮಯದಲ್ಲಿ ಸಂಭವಿಸಿತು. ವಿಮೋಚನಕಾಂಡ 2:23-25 ಹೇಳುವುದು: “ತಾವು ಮಾಡಬೇಕಾದ ಬಿಟ್ಟೀಕೆಲಸಕ್ಕಾಗಿ ನಿಟ್ಟುಸಿರುಬಿಟ್ಟು ಗೋಳಾಡುತ್ತಾ ಇದ್ದರು. ಆ ಗೋಳು ದೇವರಿಗೆ ಮುಟ್ಟಿತು.” ಐಗುಪ್ತದ ಸುಳ್ಳು ದೇವರುಗಳ ಮೇಲೆ ತನ್ನ ಶ್ರೇಷ್ಠತ್ವದ ಘನಗಂಭೀರ ಪ್ರದರ್ಶನೆಯಲ್ಲಿ, ಸರ್ವಶಕ್ತನಾದ ದೇವರು ಆ ರಾಷ್ಟ್ರದ ಮೇಲೆ ಹತ್ತು ಬಾಧೆಗಳನ್ನು ತಂದನು. ಪ್ರತಿಯೊಂದು ಬಾಧೆಯು ಐಗುಪ್ತದ ಒಬ್ಬೊಬ್ಬ ದೇವರನ್ನು ಅವರು ಸುಳ್ಳರೆಂತಲೂ ಮತ್ತು ತಮ್ಮ ಭಕ್ತರಾದ ಐಗುಪ್ತ್ಯರಿಗೆ ಸಹಾಯ ಮಾಡಶಕ್ತರಲ್ಲವೆಂತಲೂ ತೋರಿಸಿ ಅವರನ್ನು ಅವಮಾನಿತರಾಗಿ ಮಾಡಲು ರಚಿಸಲ್ಪಟ್ಟಿತ್ತು. ಹೀಗೆ ದೇವರು ತನ್ನ ಜನರನ್ನು ಸ್ವತಂತ್ರಗೊಳಿಸಿದನು ಮತ್ತು ಫರೋಹನನ್ನೂ ಅವನ ಸೇನೆಯನ್ನೂ ಕೆಂಪು ಸಮುದ್ರದಲ್ಲಿ ನಾಶಗೊಳಿಸಿದನು.—ವಿಮೋಚನಕಾಂಡ ಅಧ್ಯಾಯ 7 ರಿಂದ 14.
4. ಕಾನಾನ್ಯರ ವಿರುದ್ಧವಾಗಿ ತನ್ನ ತೀರ್ಪುಗಳನ್ನು ನಿರ್ವಹಿಸಿದರಲ್ಲಿ ದೇವರು ಅನ್ಯಾಯಸ್ಥನಲ್ಲವೇಕೆ?
4 ದೇವರು ಇಸ್ರಾಯೇಲ್ಯರನ್ನು ಕಾನಾನ್ ದೇಶದೊಳಗೆ ಕರತಂದಾಗ, ಅದರಲ್ಲಿದ್ದ ದೆವ್ವಾರಾಧಕ ನಿವಾಸಿಗಳು ನಾಶಮಾಡಲ್ಪಟ್ಟರು ಮತ್ತು ದೇಶವನ್ನು ದೇವಜನರಿಗೆ ಕೊಡಲಾಯಿತು. ವಿಶ್ವದ ಪರಮಾಧಿಕಾರಿಯಾದ ಯೆಹೋವನಿಗೆ ಕೀಳ್ಮಟ್ಟದ ಧರ್ಮಗಳ ಮೇಲೆ ತನ್ನ ತೀರ್ಪನ್ನು ವಿಧಿಸುವುದಕ್ಕೆ ನ್ಯಾಯವಾದ ಹಕ್ಕಿದೆ. (ಆದಿಕಾಂಡ 15:16) ಮತ್ತು ಕಾನಾನ್ಯ ಧರ್ಮದ ಕುರಿತು ಹ್ಯಾಲೀಸ್ ಬೈಬಲ್ ಹ್ಯಾಂಡ್ಬುಕ್ ಹೇಳುವುದು: “ಕಾನಾನ್ಯ ದೇವರುಗಳ . . . ಆರಾಧನೆಯಲ್ಲಿ ಅತ್ಯಂತ ಸ್ವೇಚ್ಛಾಚಾರದ ಕಾಮಕೇಳಿಯು ಅಡಕವಾಗಿತ್ತು. ಅವರ ದೇವಸ್ಥಾನಗಳು ದುರಾಚಾರಗಳ ಕೇಂದ್ರಗಳಾಗಿದ್ದವು. . . . ಕಾನಾನ್ಯರು ತಮ್ಮ ದೇವರುಗಳ ಮುಂದೆ ಅನೈತಿಕ ಲೋಲುಪತೆಯನ್ನು ಒಂದು ಧಾರ್ಮಿಕ ವಿಧಿಯಾಗಿ ನಡಿಸಿ ಆರಾಧಿಸುತ್ತಿದ್ದರು, ಮತ್ತು ಅನಂತರ ತಮ್ಮ ಚೊಚ್ಚಲು ಮಕ್ಕಳನ್ನು ಕೊಂದು, ಅವೇ ದೇವರುಗಳಿಗೆ ಬಲಿಯಾಗಿ ಅರ್ಪಿಸುತ್ತಿದ್ದರು. ಹೀಗೆ ಕಾನಾನ್ದೇಶವು ವಿಶಾಲಾರ್ಥದಲ್ಲಿ ಒಂದು ರಾಷ್ಟ್ರೀಯ ಪ್ರಮಾಣದ ಸೋದೋಮ್ ಮತ್ತು ಗಮೋರದಂತೆ ಪರಿಣಮಿಸಿತ್ತೆಂದು ತೋರುತ್ತದೆ.” ಅವನು ಮತ್ತೂ ಅಂದದ್ದು: “ಅಂಥ ಅಸಹ್ಯಕರ ಹೊಲಸು ಮತ್ತು ಕ್ರೌರ್ಯದ ಒಂದು ನಾಗರಿಕತೆಗೆ ಹೆಚ್ಚು ಕಾಲ ಬಾಳಲು ಯಾವ ಹಕ್ಕಾದರೂ ಇದೆಯೇ? . . . ಆ ಸಮಯಕ್ಕೆ ಮುಂಚೆಯೇ ದೇವರು ಅವರನ್ನು ಏಕೆ ನಾಶಮಾಡಲಿಲ್ಲವೆಂದು ಕಾನಾನ್ಯ ಪಟ್ಟಣಗಳ ಅವಶೇಷಗಳನ್ನು ಅಗೆದು ತೆಗೆಯುವ ಅಗೆತ ಶಾಸ್ತ್ರಜ್ಞರಿಗೆ ಬೆಕ್ಕಸ.”
5. ತನ್ನ ಪುರಾತನ ಜನರನ್ನು ದೇವರು ಸ್ವತಂತ್ರಗೊಳಿಸಿದ್ದು ನಮ್ಮ ಕಾಲಕ್ಕೆ ಒಂದು ಮಾದರಿಯಾಗಿ ಕಾರ್ಯನಡಿಸುತ್ತದೆ ಹೇಗೆ?
5 ಮಿಥ್ಯಾರಾಧನೆಯ ವಿರುದ್ಧವಾಗಿ ದೇವರು ಕ್ರಿಯೆಕೈಕೊಂಡು, ತನ್ನ ಜನರನ್ನು ಸ್ವತಂತ್ರಗೊಳಿಸಿ, ಅವರಿಗೊಂದು ವಾಗ್ದಾನ ದೇಶವನ್ನು ಒದಗಿಸಿದ ಈ ದಾಖಲೆಯು ಬರಲಿರುವ ವಿಷಯಗಳಿಗೆ ಒಂದು ಮಾದರಿಯಾಗಿ ಕಾರ್ಯನಡಿಸುತ್ತದೆ. ಅದು ಯಾವಾಗ ದೇವರು ಈ ಲೋಕದ ಸುಳ್ಳು ಧರ್ಮಗಳನ್ನು ಮತ್ತು ಅವುಗಳ ಬೆಂಬಲಿಗರನ್ನು ಜಜ್ಜಿ, ತನ್ನ ಆಧುನಿಕ-ದಿನದ ಸೇವಕರನ್ನು ಒಂದು ನೀತಿಯುಳ್ಳ ಹೊಸ ಲೋಕದೊಳಗೆ ತರಲಿರುವನೋ ಆ ಅತಿ ಹತ್ತಿರದ ಭವಿಷ್ಯತ್ತಿಗೆ ಕೈತೋರಿಸುತ್ತದೆ.—ಪ್ರಕಟನೆ 7:9, 10, 13, 14; 2 ಪೇತ್ರ 3:10-13.
ದೇವರ ಹೊಸ ವ್ಯವಸ್ಥೆಯಲ್ಲಿ ನಿಜ ಸ್ವಾತಂತ್ರ್ಯ
6. ಹೊಸ ಲೋಕದಲ್ಲಿ ದೇವರು ಒದಗಿಸಲಿರುವ ಕೆಲವು ಆಶ್ಚರ್ಯಕರ ಬಿಡುಗಡೆಗಳು ಯಾವುವು?
6 ಹೊಸ ಲೋಕದಲ್ಲಿ ದೇವರು ತನ್ನ ಜನರನ್ನು ಮಾನವ ಕುಟುಂಬಕ್ಕಾಗಿ ತಾನು ಉದ್ದೇಶಿಸಿದ ಸ್ವಾತಂತ್ರ್ಯದ ಎಲ್ಲಾ ಆಶ್ಚರ್ಯಕರ ವಿಧಗಳಿಂದ ಆಶೀರ್ವದಿಸುವನು. ರಾಜಕೀಯ, ಆರ್ಥಿಕ ಮತ್ತು ಸುಳ್ಳು ಧರ್ಮದ ಘಟಕಗಳ ದಬ್ಬಾಳಿಕೆಯಿಂದ ಅಲ್ಲಿ ಸ್ವಾತಂತ್ರ್ಯವು ಇರುವುದು. ಜನರಿಗೆ ಭೂಮಿಯಲ್ಲಿ ಸದಾ ಜೀವಿಸುವ ಪ್ರತೀಕ್ಷೆಯೊಂದಿಗೆ ಪಾಪ ಮತ್ತು ಮರಣದಿಂದಲೂ ಅಲ್ಲಿ ಬಿಡುಗಡೆ ಇರುವುದು. “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29; ಮತ್ತಾಯ 5:5.
7, 8. ಹೊಸ ಲೋಕದಲ್ಲಿ ಪೂರ್ಣ ಆರೋಗ್ಯವನ್ನು ಪುನಃಪಡೆಯುವುದರಲ್ಲಿ ಏನು ಅನುಭವಿಸಲ್ಪಡುವುದು?
7 ಹೊಸ ಲೋಕವು ಒಳತರಲ್ಪಟ್ಟ ತುಸು ಸಮಯದನಂತರ ಅದರ ನಿವಾಸಿಗಳು ಆಶ್ಚರ್ಯಕರವಾಗಿ ಪರಿಪೂರ್ಣ ಆರೋಗ್ಯಕ್ಕೆ ಪುನಃಸ್ಥಾಪಿಸಲ್ಪಡುವರು. ಯೋಬ 33:25 ಹೇಳುವುದು: “ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು, ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.” ಯೆಶಾಯ 35:5, 6 ವಚನ ಕೊಡುವುದು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷದ್ವನಿಗೈಯುವದು.”
8 ವೃದ್ಧಾಪ್ಯದಿಂದ ಅಥವಾ ಅನಾರೋಗ್ಯದಿಂದ ಶಾರೀರಿಕ ಬೇನೆಗಳಿರುವ ನೀವು, ಹೊಸ ಲೋಕದಲ್ಲಿ ಸುಸೌಖ್ಯದಿಂದ ಮತ್ತು ಹುರುಪಿನ ದೇಹಸ್ಥಿತಿಯಿಂದ ಪ್ರತಿದಿನ ಬೆಳಿಗ್ಗೆ ಏಳುವುದನ್ನು ಊಹಿಸಿಕೊಳ್ಳಿರಿ. ನಿಮ್ಮ ಸುಕ್ಕುಗಳು ಹೋಗಿ ನಯವಾದ ಆರೋಗ್ಯಕರ ತಚ್ವೆ ಬಂದಿರುತ್ತದೆ— ತಚ್ವೆ-ಲೋಷನ್ಗಳ ಅಗತ್ಯ ಇನ್ನಿರದು. ನಿಮ್ಮ ಮಂದವಾದ ಅಥವಾ ಕುರುಡಾದ ಕಣ್ಣುಗಳು ಪರಿಪೂರ್ಣ ದೃಷ್ಟಿಗೆ ಪುನಃ ತರಲ್ಪಟ್ಟಿವೆ—ಕನ್ನಡಕಗಳ ಅವಶ್ಯ ಇನ್ನಿರದು. ಕಿವಿಗಳು ಪೂರ್ಣವಾಗಿ ಕೇಳಿಸುವಂತೆ ನೆಟ್ಟಗೆ ಮಾಡಲ್ಪಟ್ಟಿರುವುವು—ಆ ಕರ್ಣ-ಸಹಾಯಕಗಳನ್ನು ಹೊರಗೆಸೆಯಿರಿ. ಕುಂಟಾದ ಅಂಗಗಳು ಈಗ ಪೂರ್ಣವೂ ಸುದೃಢವೂ ಆಗಿವೆ—ಕೈಕೋಲುಗಳನ್ನು, ಊರುಗೋಲುಗಳನ್ನು ಮತ್ತು ಗಾಲಿಕುರ್ಚಿಗಳನ್ನು ತೆಗೆದುಬಿಡಿರಿ. ರೋಗಗಳು ಇನ್ನಿಲ್ಲ—ಆ ಔಷಧಗಳನ್ನೆಲ್ಲಾ ಹೊರಗೆಸೆದು ಬಿಡಿರಿ. ಹೀಗೆಂದು ಯೆಶಾಯ 33:24 ಮುಂತಿಳಿಸುತ್ತದೆ: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ಅವನು ಇದನ್ನೂ ಹೇಳಿದ್ದಾನೆ: “ಅವರು ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರೆಕರೆಯೂ ತೊಲಗಿಹೋಗುವವು.”—ಯೆಶಾಯ 35:10.
9. ಯುದ್ಧವು ಶಾಶ್ವತವಾಗಿ ಅಂತ್ಯಗೊಳಿಸಲ್ಪಡುವುದು ಹೇಗೆ?
9 ಇನ್ನು ಮುಂದೆ ಯಾರೂ ಯುದ್ಧಕ್ಕೆ ಬಲಿಯಾಗಲಾರನು. “[ದೇವರು] ಲೋಕದ ಎಲ್ಲಾ ಭಾಗಗಳಲ್ಲಿ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ. ರಥಗಳನ್ನು ದಹಿಸಿಬಿಟ್ಟಿದ್ದಾನೆ.” (ಕೀರ್ತನೆ 46:9) ಯಾರನ್ನು ಯೆಶಾಯ 9:6 “ಸಮಾಧಾನ [ಶಾಂತಿ, NW] ದ ಪ್ರಭು” ಎಂದು ಕರೆಯುತ್ತದೋ ಆ ದೇವರ ರಾಜ್ಯದ ಅಧಿಪತಿ ಕ್ರಿಸ್ತ ಯೇಸುವಿನಿಂದ ಯುದ್ಧ ಶಸ್ತ್ರಗಳು ಪುನಃ ಇನ್ನೆಂದೂ ಅನುಮತಿಸಲ್ಪಡವು. 7 ನೆಯ ವಚನವು ಕೂಡಿಸುವುದು: “ಇನ್ನು ಮುಂದೆ ಅರಸನ ಆಡಳಿತದ ಅಭಿವೃದ್ಧಿಗೆ ಮತ್ತು ಶಾಂತಿಗೆ ಅಂತ್ಯವಿರದು.”
10, 11. ಪರಿಪೂರ್ಣ ಶಾಂತಿಯು ಲೋಕಕ್ಕೆ ಯಾವ ಅರ್ಥದಲ್ಲಿರುವುದು?
10 ಯುದ್ಧದ ಶಸ್ತ್ರಾಸ್ತ್ರಗಳಿಂದ ಮುಕ್ತರಾಗಿ ಇರುವುದು ಮಾನವ ಕುಲಕ್ಕೆ ಮತ್ತು ಈ ಭೂಮಿಗೆ ಎಂಥ ಒಂದು ಆಶೀರ್ವಾದವಾಗಿರುವುದು! ಏಕೆ, ಪ್ರಚಲಿತ ಸಮಯದಲ್ಲಿ, ಹಿಂದಣ ಯುದ್ಧಗಳಲ್ಲಿ ಬಳಸಲ್ಪಟ್ಟ ಶಸ್ತ್ರಗಳು ಇನ್ನೂ ಮನುಷ್ಯರನ್ನು ನಾಶಗೊಳಿಸುತ್ತಾ ಇವೆ. ಹಿಂದಣ ಯುದ್ಧಗಳಲ್ಲಿ ಬಿಟ್ಟುಬಿಡಲ್ಪಟ್ಟ ಸ್ಫೋಟಕಗಳನ್ನು ತೆಗೆದುಹಾಕುವಾಗ, ಪ್ರಾನ್ಸ್ ದೇಶ ಒಂದರಲ್ಲಿಯೇ, 1945 ರಲ್ಲಿ ಸುಮಾರು 600 ಕ್ಕಿಂತಲೂ ಹೆಚ್ಚು ಬಾಂಬ್-ತೊಲಗಿಸುವ ಪರಿಣತರು ಕೊಲ್ಲಲ್ಪಟ್ಟಿದ್ದಾರೆ. ಅಲ್ಲಿಯ ಬಾಂಬ್-ತೊಲಗಿಸುವ ತಂಡದ ಮುಖ್ಯಸ್ಥನು ಹೇಳಿದ್ದು: “1870 ರ ಫ್ರಾಂಕೊ-ಪ್ರಷನ್ ಯುದ್ಧದ ಇನ್ನೂ ಸಿಡಿದಿಲ್ಲದ ಫಿರಂಗಿ ಗುಂಡುಗಳು ನಮಗಿನ್ನೂ ಸಿಗುತ್ತವೆ. 1 ನೆಯ ಲೋಕಯುದ್ಧದ ವಿಷಕಾರಿ ಸಿಡಿಗುಂಡುಗಳಿಂದ ತುಂಬಿರುವ ಕೊಳಗಳು ಅಲ್ಲಿವೆ. ಎಷ್ಟೋ ಸಲ, ರೈತನೊಬ್ಬನು ಟ್ರಾಕ್ಟರ್ನಲ್ಲಿ 2 ನೆಯ ಲೋಕ ಯುದ್ಧದ ಟ್ಯಾಂಕು-ವಿನಾಶಕ ಗಣಿಯ ಮೇಲೆ ಉರುಳುತ್ತಾನೆ, ಆಗ ಅದು ಥಟ್ಟನೆ ಸಿಡಿದು ಅವನನ್ನು ಕೊಲ್ಲುತ್ತದೆ. ಇವು ಎಲ್ಲಾ ಕಡೆಗಳಲ್ಲಿ ಇವೆ.” ಎರಡು ವರ್ಷಗಳ ಹಿಂದೆ ದ ನ್ಯೂ ಯಾರ್ಕ್ ಟೈಮ್ಸ್ ಹೇಳಿದ್ದು: “2 ನೆಯ ಲೋಕ ಯುದ್ಧಾಂತ್ಯದಿಂದ 45 ವರ್ಷಗಳಲ್ಲಿ [ಬಾಂಬ್-ತೊಲಗಿಸುವ ತಂಡಗಳು] [ಫ್ರೆಂಚ್] ನಾಡಿನಿಂದ 1 ಕೋಟಿ 60 ಲಕ್ಷ ಸಿಡಿಮದ್ದಿನ ಕೋಶಗಳನ್ನು, 4,90,000 ಬಾಂಬುಗಳನ್ನು ಮತ್ತು 6,00,000 ಜಲಾಂತರ ಗಣಿಗಳನ್ನು ನಿರ್ಮೂಲಗೊಳಿಸಿವೆ. . . . ಮೊಣಕಾಲುದ್ದ ಆಳದಲ್ಲಿ ಶಸ್ತ್ರಗಳಿಂದ ತುಂಬಿರುವ ಲಕ್ಷಾಂತರ ಎಕ್ರೆ ಜಮೀನು ಸುತ್ತು-ಬೇಲಿ ಹಾಕಲ್ಪಟ್ಟು, “ಮುಟ್ಟ ಬೇಡಿ, ಪ್ರಾಣಾಪಾಯ!” ಎಂದು ಎಚ್ಚರಿಸುವ ಪ್ರಕಟನಾ ಚೀಟಿಗಳಿಂದ ಆವರಿತವಾಗಿವೆ.”
11 ಹೊಸ ಲೋಕವು ಇದಕ್ಕಿಂತ ಎಷ್ಟು ಬೇರೆಯಾಗಿರುವುದು! ಪ್ರತಿಯೊಬ್ಬನಿಗೆ ಒಳ್ಳೇ ಮನೆ, ಸಮೃದ್ಧವಾದ ಆಹಾರ, ಮತ್ತು ಇಡೀ ಭೂಮಿಯನ್ನು ಪರದೈಸವಾಗಿ ಮಾರ್ಪಡಿಸುವ ಪ್ರತಿಫಲದಾಯಕವಾದ, ಶಾಂತಿಯುಕ್ತ ಕೆಲಸವು ಅಲ್ಲಿರುವುದು. (ಕೀರ್ತನೆ 72:16; ಯೆಶಾಯ 25:6; 65:17-25) ಪುನಃ ಇನ್ನೆಂದೂ ಜನರು ಮತ್ತು ಭೂಮಿಯು ಲಕ್ಷಾಂತರ ಸ್ಫೋಟಕ ಬಾಂಬುಗಳ ಸತತವಾದ ಹೊಡೆತಕ್ಕೆ ಗುರಿಯಾಗವು. ಯೇಸು ಅವನಲ್ಲಿ ನಂಬಿಕೆ ತೋರಿಸಿದ ಒಬ್ಬನಿಗೆ, “ನೀನು ನನ್ನ ಸಂಗಡ ಪರದೈಸದಲ್ಲಿರುವಿ” ಎಂದು ಹೇಳಿದಾಗ ಆತನ ಮನಸ್ಸಿನಲ್ಲಿದ್ದದ್ದು ಅಂಥ ಒಂದು ಹೊಸ ಲೋಕವೇ.—ಲೂಕ 23:43.
ಜೀವಕ್ಕಾಗಿ ವಿಶ್ವ-ವ್ಯಾಪಕ ಶಿಕ್ಷಣ
12, 13. ನಮ್ಮ ಕಾಲಕ್ಕಾಗಿ ಯಾವ ವಿಶ್ವ-ವ್ಯಾಪಕ ಶಿಕ್ಷಣ ಕಾರ್ಯವನ್ನು ಯೇಸು ಮತ್ತು ಯೆಶಾಯರು ಮುಂತಿಳಿಸಿದ್ದರು?
12 ಒಬ್ಬ ವ್ಯಕ್ತಿಯು ದೇವರ ಹೊಸ ಲೋಕದ ಕುರಿತು ಕಲಿಯುವಾಗ, ನಮ್ಮ ದಿನಗಳಲ್ಲಿ ಸತ್ಯಾರಾಧನೆಗಾಗಿ ಸಂಸ್ಥಾಪಿಸಲ್ಪಟ್ಟ ಒಂದು ವಿಶ್ವವ್ಯಾಪಕ ಸಭೆಯನ್ನೂ ಯೆಹೋವನು ಉತ್ಪಾದಿಸಿದ್ದಾನೆಂದು ಅವನು ಕಲಿಯುತ್ತಾನೆ. ಅದು ಹೊಸ ಲೋಕದ ಕೇಂದ್ರಬಿಂದುವಾಗಿರುವುದು ಮತ್ತು ತನ್ನ ಉದ್ದೇಶಗಳ ಕುರಿತಾಗಿ ಇತರರಿಗೆ ಕಲಿಸಲು ದೇವರು ಈಗ ಅದನ್ನು ಉಪಯೋಗಿಸುತ್ತಿದ್ದಾನೆ. ಈ ಕ್ರೈಸ್ತ ಸಂಘಟನೆಯು ಹಿಂದೆಂದೂ ಕಂಡುಬರದ ಒಂದು ವಿಧಾನ ಮತ್ತು ಗಾತ್ರದಲ್ಲಿ ಒಂದು ವಿಶ್ವ-ವ್ಯಾಪಕ ಶಿಕ್ಷಣ ಕಾರ್ಯವನ್ನು ನಡಿಸುತ್ತಾ ಇದೆ. ಇದು ನಡಿಸಲ್ಪಡುವುದೆಂದು ಯೇಸು ಮುಂತಿಳಿಸಿದ್ದನು. ಆತನಂದದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವ ಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು. ಆಗ ಅಂತ್ಯವು ಬರುವದು.”—ಮತ್ತಾಯ 24:14.
13 ಯೆಶಾಯನು ಸಹ ಈ ವಿಶ್ವವ್ಯಾಪಕ ಶಿಕ್ಷಣ ಕಾರ್ಯದ ಕುರಿತು ಮಾತಾಡಿದ್ದನು: “ಅಂತ್ಯಕಾಲದಲ್ಲಿ [ನಮ್ಮ ಸಮಯದಲ್ಲಿ] ಯೆಹೋವನ ಮಂದಿರದ ಬೆಟ್ಟವು [ಉನ್ನತಕ್ಕೇರಿದ ಆತನ ಸತ್ಯಾರಾಧನೆ] ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು. . . . ಆಗ ಸಕಲ ದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು.”—ಯೆಶಾಯ 2:2, 3.
14. ಇಂದು ದೇವ ಜನರನ್ನು ನಾವು ಹೇಗೆ ಗುರುತಿಸಬಲ್ಲೆವು?
14 ಆದಕಾರಣ, ದೇವರ ರಾಜ್ಯದ ಕುರಿತು ಸಾಕ್ಷಿಕೊಡುವ ಈ ವಿಶ್ವವ್ಯಾಪಕ ಕಾರ್ಯವು ನಾವೀ ದುಷ್ಟ ವ್ಯವಸ್ಥೆಯ ಅಂತ್ಯಕ್ಕೆ ಹತ್ತಿರವಾಗಿದ್ದೇವೆಂಬದಕ್ಕೆ ಮತ್ತು ನಿಜ ಸ್ವಾತಂತ್ರ್ಯವು ಸಮೀಪಿಸಿದೆ ಎಂಬದಕ್ಕೆ ಬಲವಾದ ರುಜುವಾತಾಗಿದೆ. ದೇವರ ಹೊಸ ಲೋಕದ ನಿರೀಕ್ಷೆ-ತುಂಬಿದ ಸಂದೇಶದೊಂದಿಗೆ ಜನರನ್ನು ಸಂದರ್ಶಿಸುವವರನ್ನು ಅಪೊಸ್ತಲರ ಕೃತ್ಯಗಳು 15:14, NW ನಲ್ಲಿ “ [ದೇವರ] ಹೆಸರಿಗಾಗಿರುವ ಒಂದು ಜನರು” ಎಂದು ವರ್ಣಿಸಿಯದೆ. ಯೆಹೋವನ ನಾಮವನ್ನು ಧರಿಸಿದವರೂ ಮತ್ತು ಯೆಹೋವ ಮತ್ತು ಆತನ ರಾಜ್ಯದ ಕುರಿತು ಈ ವಿಶ್ವ-ವ್ಯಾಪಕ ಸಾಕ್ಷಿಕೊಡುವವರೂ ಯಾರು? 20 ನೆಯ ಶತಮಾನದ ಐತಿಹಾಸಿಕ ದಾಖಲೆಯು ಉತ್ತರಿಸುವುದು: ಯೆಹೋವನ ಸಾಕ್ಷಿಗಳು ಮಾತ್ರವೇ. ಇಂದು ಅವರು ಭೂಲೋಕದಲ್ಲೆಲ್ಲೂ 66,000 ಕ್ಕಿಂತಲೂ ಹೆಚ್ಚು ಸಭೆಗಳಲ್ಲಿ 40 ಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದಾರೆ.—ಯೆಶಾಯ 43:10-12; ಅ.ಕೃತ್ಯಗಳು 2:21.
15. ರಾಜಕೀಯ ಕಾರ್ಯಾಧಿಗಳ ಸಂಬಂಧದಲ್ಲಿ, ದೇವರ ನಿಜ ಸೇವಕರನ್ನು ನಾವು ಹೇಗೆ ಗುರುತಿಸ ಸಾಧ್ಯವಿದೆ?
15 ಯೆಹೋವನ ಸಾಕ್ಷಿಗಳು ರಾಜ್ಯ-ಸಾರುವಿಕೆಯ ಕುರಿತಾದ ಪ್ರವಾದನೆಗಳನ್ನು ನೆರವೇರಿಸುತ್ತಾರೆಂಬದಕ್ಕೆ ಇನ್ನೊಂದು ರುಜುವಾತು ಯೆಶಾಯ 2:4, NW, ರಲ್ಲಿ ಗಮನಿಸಲ್ಪಟ್ಟಿದೆ: “ಅವರು ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಅವರು ಯುದ್ಧಾಭ್ಯಾಸವನ್ನು ಕಲಿಯುವದೇ ಇಲ್ಲ.” ಹೀಗೆ ಯಾರು ದೇವರ ರಾಜ್ಯಾಡಳಿತದ ಕುರಿತು ವಿಶ್ವ-ವ್ಯಾಪಕ ಸಾಕ್ಷಿಕಾರ್ಯವನ್ನು ನಡಿಸುತ್ತಾರೋ ಅವರು ‘ಯುದ್ಧಾಭ್ಯಾಸವನ್ನು ಕಲಿಯಲೇ’ ಬಾರದು. ಅವರು “ಲೋಕದ ಭಾಗವಾಗಿರದೆ” ಇರಬೇಕು ಎಂದು ಯೇಸು ಹೇಳಿರುತ್ತಾನೆ. (ಯೋಹಾನ 17:16) ಅವರು ರಾಜಕೀಯ ಕಾರ್ಯಾಧಿಗಳಲ್ಲಿ ತಟಸ್ಥರಾಗಿರಬೇಕು, ರಾಷ್ಟ್ರಗಳ ವಾಗ್ವಾದಗಳಲ್ಲಿ ಮತ್ತು ಯುದ್ಧಗಳಲ್ಲಿ ಪಕ್ಷವಹಿಸಬಾರದು ಎಂದೇ ಇದರ ಅರ್ಥವು. ಲೋಕದ ಭಾಗವಾಗದೆ ಇರುವವರೂ ಮತ್ತು ಯುದ್ಧಾಭ್ಯಾಸವನ್ನು ಕಲಿಯದೆ ಇರುವವರೂ ಯಾರವರು? 20 ನೆಯ ಶತಮಾನದ ಚಾರಿತ್ರಿಕ ದಾಖಲೆಯು ಪುನಃ ಸಾಕ್ಷ್ಯ ನೀಡುವುದು: ಯೆಹೋವನ ಸಾಕ್ಷಿಗಳು ಮಾತ್ರವೇ.
16. ದೇವರ ವಿಶ್ವ-ವ್ಯಾಪಕ ಶಿಕ್ಷಣ ಕಾರ್ಯವು ಎಷ್ಟು ಪೂರ್ತಿಯಾಗಿ ನಡೆಯಲಿರುವುದು?
16 ಯೆಹೋವನ ಸಾಕ್ಷಿಗಳ ವಿಶ್ವ-ವ್ಯಾಪಕ ಶಿಕ್ಷಣ ಕಾರ್ಯವು ಈ ಪ್ರಚಲಿತ ದುಷ್ಟಲೋಕದ ಅಂತ್ಯವನ್ನು ದೇವರು ಬರಮಾಡಿದ ಅನಂತರವೂ ಮುಂದುವರಿಯಲಿದೆ. ಯೆಶಾಯ 54:13 ಹೇಳುವುದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು.” ಈ ಶಿಕ್ಷಣವು ಎಷ್ಟು ಪೂರ್ಣವಾಗಿರುವುದೆಂದರೆ ಯೆಶಾಯ 11:9 ಮುಂತಿಳಿಸುವುದು: “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” ಈ ಸತತವಾದ ಶಿಕ್ಷಣವು ಈ ಹಳೇ ಲೋಕದ ಅಂತ್ಯವನ್ನು ಪಾರಾಗುವವರಿಗಾಗಿ ಮತ್ತು ಹೊಸ ಲೋಕದಲ್ಲಿ ಜನಿಸಬಹುದಾದ ಮಕ್ಕಳಿಗಾಗಿ ಮಾತ್ರವೇ ಅಲ್ಲ ಪುನುರುತ್ಥಾನದಲ್ಲಿ ಜೀವಿತರಾಗಿ ಹಿಂದೆ ಬರುವ ಕೋಟ್ಯಾಂತರ ಜನರಿಗಾಗಿಯೂ ಬೇಕಾಗಿರುವುದು. ಕಟ್ಟಕಡೆಗೆ, ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಯೂ ದೇವರ ನಿಯಮಗಳ ಮೇರೆಗಳೊಳಗೆ ತನ್ನ ಚಿತ್ತ ಸ್ವಾತಂತ್ರ್ಯವನ್ನು ಯೋಗ್ಯವಾಗಿ ನಿರ್ವಹಿಸಲು ಕಲಿಸಲ್ಪಡುವನು. ಫಲಿತಾಂಶವೇನಾಗಲಿದೆ? “ದೀನರು ದೇಶವನ್ನು ಅನುಭವಿಸುವರು; ಅವರು ಮಹಾ ಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.
ಈಗಲೂ ಮಹಾ ಸ್ವಾತಂತ್ರ್ಯಗಳು
17. ದೇವರ ಪುರಾತನ ಜನರು ಏನು ಮಾಡುವಂತೆ ಮೋಶೆಯು ಬೋಧಿಸಿದನು?
17 ಪ್ರಾಚೀನ ಇಸ್ರಾಯೇಲ್ಯರು ವಾಗ್ದಾನ ದೇಶವನ್ನು ಪ್ರವೇಶಿಸುವ ಬಾಗಲಲ್ಲೇ ಇದ್ದಾಗ, ಮೋಶೆಯು ಅವರೊಂದಿಗೆ ಮಾತಾಡುತ್ತಾ ಅಂದದ್ದು: “ನೀವು ಸ್ವಾಧೀನ ಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ. ಇವುಗಳನ್ನು ಕೈಕೊಂಡು ಅನುಸರಿಸಿರಿ. ಅನುಸರಿಸಿದರೇ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು. ನಾವು ನಮ್ಮ ದೇವರಾದ ಯೆಹೋವನಿಗೆ ಮೊರೆಯಿಡುವಾಗೆಲ್ಲಾ ಆತನು ಸಮೀಪವಾಗಿಯೇ ಇದ್ದಾನಲ್ಲಾ; ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪವಾಗಿರುವನು?”—ಧರ್ಮೋಪದೇಶಕಾಂಡ 4:5-7.
18. ಯಾರು ದೇವರನ್ನು ಸೇವಿಸುತ್ತಾರೋ ಅವರಿಗೆ ಈಗ ಸಹ ಯಾವ ಮಹಾ ಸ್ವಾತಂತ್ರ್ಯಗಳು ಬರುತ್ತವೆ?
18 ಇಂದು ಯೆಹೋವನನ್ನು ಸೇವಿಸುತ್ತಿರುವ ಲಕ್ಷಾಂತರ ಜನರು ಸಹ ಒಂದು ವಾಗ್ದತ್ತ ದೇಶದ—ಹೊಸ ಲೋಕದ ಬಾಗಲಲ್ಲೇ ಇದ್ದಾರೆ. ಅವರು ದೇವರ ನಿಯಮವನ್ನು ಪಾಲಿಸುವುದರಿಂದ ಆತನು ಅವರ ಸಮೀಪವಾಗಿಯೇ ಇದ್ದಾನೆ ಮತ್ತು ಅವರು ಬೇರೆಲ್ಲಾ ಜನರಿಗಿಂತ ಎದ್ದು ಕಾಣುತ್ತಾರೆ. ಈವಾಗಲೇ ದೇವರು ಅವರನ್ನು ಸುಳ್ಳು ಧಾರ್ಮಿಕ ವಿಚಾರಗಳು, ಜಾತಿಭೇದ, ನಿಷಿದ್ಧ ಔಷದ ಸೇವನೆ, ರಾಷ್ಟ್ರೀಯತೆ, ಯುದ್ಧ, ಮತ್ತು ಲೈಂಗಿಕವಾಗಿ ಸಾಗಿಸಲ್ಪಡುವ ರೋಗಗಳ ಸರ್ವವ್ಯಾಪಿ ವ್ಯಾಧಿಗಳಿಂದ ಸ್ವತಂತ್ರಗೊಳಿಸಿದ್ದಾನೆ. ಅಷ್ಟಲ್ಲದೆ, ಆತನು ಅವರನ್ನು ಒಂದು ಅಖಂಡವಾದ ಅಂತರ್ರಾಷ್ಟ್ರೀಯ ಸಹೋದರತ್ವದ ಪ್ರೀತಿಯಲ್ಲಿ ಐಕ್ಯಗೊಳಿಸಿದ್ದಾನೆ. (ಯೋಹಾನ 13:35) ಅವರು ಭವಿಷ್ಯದ ಕುರಿತು ಕಳವಳಪಡುವುದಿಲ್ಲ, ಬದಲಿಗೆ “ಹೃದಯಾನಂದದಿಂದ ಹರ್ಷದ್ವನಿಗೈಯುವರು.” (ಯೆಶಾಯ 65:14) ದೇವರನ್ನು ಅರಸನಾಗಿ ಸೇವಿಸುವ ಮೂಲಕ ಅವರು ಈಗಲೂ ಎಂಥ ಮಹಾ ಸ್ವಾತಂತ್ರ್ಯಗಳಲ್ಲಿ ಆನಂದಿಸುತ್ತಾರೆ!—ಅ.ಕೃತ್ಯಗಳು 5:29, 32; 2 ಕೊರಿಂಥ 4:7; 1 ಯೋಹಾನ 5:3.
ಸುಳ್ಳು ನಂಬಿಕೆಗಳಿಂದ ಇತರರನ್ನು ಸ್ವತಂತ್ರಗೊಳಿಸುವುದು
19, 20. ಮೃತರ ಸ್ಥಿತಿಯ ಕುರಿತಾದ ಬೈಬಲ್ ಬೋಧನೆಯಿಂದ ಜನರು ಬಿಡುಗಡೆ ಹೊಂದಿದ್ದು ಹೇಗೆ?
19 ಯೆಹೋವನ ಸಾಕ್ಷಿಗಳು ಯಾರಿಗೆ ಸಾರುತ್ತಾರೋ ಅಂಥ ಅನೇಕರು ಸಹ ಈ ಸ್ವಾತಂತ್ರ್ಯಗಳನ್ನು ಕಂಡುಕೊಳ್ಳಲು ಬರುತ್ತಿದ್ದಾರೆ. ಉದಾಹರಣೆಗಾಗಿ, ಪೂರ್ವಜರ ಆರಾಧನೆಯು ನಡಿಸಲ್ಪಡುತ್ತಿರುವ ದೇಶಗಳಲ್ಲಿ, ಸತ್ತವರು ಜೀವಿತರಿಲ್ಲ ಮತ್ತು ಜೀವಿತರಿಗೆ ಅವರು ಹಾನಿಮಾಡಶಕ್ತರಲ್ಲವೆಂದು ಯೆಹೋವನ ಸಾಕ್ಷಿಗಳು ಇತರರಿಗೆ ತಿಳಿಯಪಡಿಸುತ್ತಿದ್ದಾರೆ. “ಜೀವಿತರಿಗೋ ಸಾಯುತ್ತೇವೆಂಬ ತಿಳುವಳಿಕೆ ಉಂಟಷ್ಟೇ. ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಹೇಳುವ ಪ್ರಸಂಗಿ 9:5 ರ ವಚನವನ್ನು ಸಾಕ್ಷಿಗಳು ತೋರಿಸುತ್ತಾಂ. ಒಬ್ಬ ವ್ಯಕ್ತಿಯು ಸತ್ತಾಗ “ಅವನು ಮಣ್ಣಿಗೆ ಸೇರುತ್ತಾನೆ. ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು” ಎಂಬ ಕೀರ್ತನೆ 146:4 ರ ವಚನಕ್ಕೂ ಅವರು ಸೂಚಿಸುತ್ತಾರೆ. ಹೀಗೆ, ರೋಗವಾಸಿಗಳನ್ನು ಮಾಡಲು ಮತ್ತು ಜೀವಿತರನ್ನು ಹೆದರಿಸಲು ಯಾವ ಭೂತಾತ್ಮಗಳಾಗಲಿ ಅಮರಾತ್ಮಗಳಾಗಲಿ ಅಲ್ಲಿಲ್ಲವೆಂದು ಬೈಬಲ್ ತೋರಿಸುತ್ತದೆ. ಆದುದರಿಂದ ಮಂತ್ರವೈದ್ಯರ ಅಥವಾ ಪುರೋಹಿತರ ಸಹಾಯವನ್ನು ಖರೀದಿಸಲು ಕಷ್ಟಪಟ್ಟು ದುಡಿದ ಹಣವನ್ನು ದುಂದು ಮಾಡುವ ಯಾವ ಅಗತ್ಯವೂ ಅಲ್ಲಿರುವುದಿಲ್ಲ.
20 ಅಂಥ ನಿಷ್ಕೃಷ್ಟ ಬೈಬಲ್ ಜ್ಞಾನವು ಜನರನ್ನು ನರಕಾಗ್ನಿ ಮತ್ತು ಪರ್ಗೆಟರಿಯ ಸುಳ್ಳು ಬೋಧನೆಗಳಿಂದ ಬಿಡುಗಡೆ ಮಾಡುತ್ತದೆ. ಸತ್ತವರು ಒಂದು ಗಾಢ ನಿದ್ರೆಯಲ್ಲಿ ಹೇಗೋ ಹಾಗೆ ಪ್ರಜ್ಞಾರಹಿತರು ಎಂಬ ಬೈಬಲ್ ಸತ್ಯವನ್ನು ಜನರು ಕಲಿಯುವಾಗ, ಮೃತರಾದ ತಮ್ಮ ಪ್ರಿಯ ಜನರಿಗೆ ಏನು ಸಂಭವಿಸಿತೋ ಎಂಬ ಚಿಂತೆಯನ್ನು ಇನ್ನು ಮುಂದೆ ಮಾಡುವುದಿಲ್ಲ. ಬದಲಿಗೆ ಅವರು ಅಪೊಸ್ತಲ ಪೌಲನು ಒಂದು ವಿಸ್ಮಯಕರ ಸಮಯದ ಕುರಿತು ತಿಳಿಸಿದಾಗ ಏನಂದನೋ ಅದಕ್ಕಾಗಿ ಮುನ್ನೋಡುತ್ತಾರೆ: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.”—ಅ.ಕೃತ್ಯಗಳು 24:15.
21. ಪುನರುತ್ಧಾನ ಹೊಂದುವವರಲ್ಲಿ ಯಾರು ನಿಸ್ಸಂದೇಹವಾಗಿ ಒಳಗೂಡಲಿರುವರು, ಮತ್ತು ಅವರ ಪ್ರತಿಕ್ರಿಯೆಯು ಹೇಗಿರುವ ಸಂಭವವಿದೆ?
21 ಪುನರುತ್ಥಾನದಲ್ಲಿ ಮೃತರು ಬಾಧ್ಯತೆಯಾಗಿ ಬಂದ ಆದಾಮನ ಪಾಪದಿಂದ ಸದಾ ಮುಕ್ತವಾದ ಒಂದು ಭೂಮಿಯ ಮೇಲೆ ಜೀವಿತರಾಗಿ ಹಿಂದೆಬರುವರು. ಪುನರುತ್ಥಾನಗೊಳ್ಳುವ ಆ ಜನರಲ್ಲಿ ಮೋಲೆಕನಂಥ ಕಾನಾನ್ಯ ದೇವರುಗಳಿಗೆ ಅರ್ಪಿಸಲ್ಪಟ್ಟ ಮಕ್ಕಳು, ಆ್ಯಸ್ಟೆಕ್ ದೇವರುಗಳಿಗೆ ಬಲಿಯರ್ಪಿಸಲ್ಪಟ್ಟ ಯೌವನಸ್ಧರು ಮತ್ತು ಸಮರ ದೇವರಿಗೆ ಅರ್ಪಿತರಾದ ಲಕ್ಷಾಂತರ ಅಗಣಿತ ಜನರೂ ಕೂಡಿರುವವರೆಂಬದಕ್ಕೆ ಸಂದೇಹವಿಲ್ಲ. ಸುಳ್ಳು ನಂಬಿಕೆಗಳಿಗೆ ಬಲಿಯಾದ ಆ ಹಿಂದಣ ಜನರು ಎಷ್ಟು ಆಶ್ಚರ್ಯ ಮತ್ತು ಸಂತೋಷಕ್ಕೆ ಈಡಾಗಲಿರುವರು! ಅಂಥ ಪುನರುತಿತ್ಥ ಜನರು ಆಗ ಹರ್ಷದಿಂದ ಹೀಗೆ ಘೋಷಿಸಬಲ್ಲರು. “ಮರಣವೇ, ನಿನ್ನ ಉಪದ್ರವಗಳೆಲ್ಲಿ? ಪಾತಾಳವೇ, [ಶಿಯೋಲೇ, NW] ನೀನು ಮಾಡುವ ನಾಶನವೆಲ್ಲಿ?”—ಹೋಶೇಯ 13:14.
ಯೆಹೋವನನ್ನು ಹುಡುಕಿರಿ
22. ದೇವರ ಹೊಸ ಲೋಕದಲ್ಲಿ ನಾವು ಜೀವಿಸ ಬಯಸುವುದಾದರೆ, ನಾವೇನನ್ನು ಮನಸ್ಸಿನಲ್ಲಿಡಬೇಕು?
22 ಎಲ್ಲಿ ನಿಜ ಸ್ವಾತಂತ್ರ್ಯವಿರುವುದೋ ಆ ದೇವರ ನೀತಿಯ ಹೊಸ ಲೋಕದಲ್ಲಿ ಜೀವಿಸಲು ನೀವು ಬಯಸುತ್ತೀರೋ? ಬಯಸುವುದಾದರೆ, 2 ಪೂರ್ವಕಾಲ 15:2 ರ ಮಾತುಗಳನ್ನು ಹೃದಯಕ್ಕೆ ತಕ್ಕೊಳ್ಳಿರಿ: “ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು. ನೀವು ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.” ಮತ್ತು ದೇವರ ಕುರಿತು ಕಲಿಯಲು ಮತ್ತು ಆತನನ್ನು ಮೆಚ್ಚಿಸಲು ನೀವು ಮಾಡುವ ಪ್ರಾಮಾಣಿಕ ಪ್ರಯತ್ನಗಳು ಲಕ್ಷ್ಯಕ್ಕೆ ತರಲ್ಪಡದಿರಲಾರವು ಎಂಬದನ್ನು ನೆನಪಿನಲ್ಲಿಡಿರಿ. ದೇವರು “ತನ್ನನ್ನು [ಮನಃಪೂರ್ವಕವಾಗಿ NW] ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂದು ಇಬ್ರಿಯರಿಗೆ 11:6 ಹೇಳುತ್ತದೆ. ಮತ್ತು ರೋಮಾಪುರ 10:11 ಹೇಳುವುದು: “ಆತನ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದಿಲ್ಲ.”
23. ದೇವರ ಸ್ವಾತಂತ್ರ್ಯದ ಹೊಸ ಲೋಕವನ್ನು ನಾವೇಕೆ ಸ್ವಾಗತಿಸಬೇಕು?
23 ನಿಜ ಸ್ವಾತಂತ್ರ್ಯದ ದೇವರ ಹೊಸ ಲೋಕವು ದಿಗಂತದಲ್ಲೇ ಇದೆ. ಅಲ್ಲಿ “ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ [ಸ್ವಾತಂತ್ರ್ಯದಲ್ಲಿ, NW] ಪಾಲು ಹೊಂದು” ವುದು. ಮತ್ತು “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು, ಇನ್ನು ಮರಣವಿರುವದಿಲ್ಲ, ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” (ರೋಮಾಪುರ 8:21; ಪ್ರಕಟನೆ 21:4) ಆಗ ಯೆಹೋವನ ಸೇವಕರೆಲ್ಲರೂ ತಮ್ಮ ತಲೆಗಳನ್ನೆತ್ತಿ, ‘ಯೆಹೋವನೇ, ಕಟ್ಟಕಡೆಗೆ ನಿಜ ಸ್ವಾತಂತ್ರ್ಯಕ್ಕಾಗಿ ನಿನಗೆ ಉಪಕಾರ!’ ಎಂದು ಉದ್ಗರಿಸುವ ಮೂಲಕ ದೇವರ ಸ್ವಾತಂತ್ರ್ಯದ ಹೊಸ ಲೋಕವನ್ನು ಹರ್ಷೋಲ್ಲಾಸದಿಂದ ಸ್ವಾಗತಿಸುವರು. (w92 4/1)
ನೀವು ಹೇಗೆ ಉತ್ತರಿಸುವಿರಿ?
▫ ತನ್ನ ಜನರನ್ನು ಸ್ವತಂತ್ರಗೊಳಿಸಲು ಯೆಹೋವನು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು ಹೇಗೆ?
▫ ದೇವರ ಹೊಸ ಲೋಕದಲ್ಲಿ ಯಾವ ಆಶ್ಚರ್ಯಕರ ಬಿಡುಗಡೆಗಳು ಇರಲಿವೆ?
▫ ಜನರಿಗೆ ಜೀವಕ್ಕಾಗಿ ಶಿಕ್ಷಣವನ್ನು ಯೆಹೋವನು ಕೊಡುತ್ತಿರುವುದು ಹೇಗೆ?
▫ ಯೆಹೋವನನ್ನು ಸೇವಿಸುವ ಮೂಲಕ ಈಗ ಸಹ ದೇವಜನರು ಯಾವ ಕೆಲವು ಸ್ವಾತಂತ್ರ್ಯಗಳಲ್ಲಿ ಆನಂದಿಸುತ್ತಾರೆ?
[ಪುಟ 10 ರಲ್ಲಿರುವ ಚಿತ್ರ]
ತನ್ನ ಆರಾಧಕರನ್ನು ಬಿಡುಗಡೆ ಮಾಡಿದ ಮೂಲಕ ಯೆಹೋವನು ಐಗುಪ್ತದ ಸುಳ್ಳು ದೇವರುಗಳ ಮೇಲೆ ತನ್ನ ಶ್ರೇಷ್ಠತ್ವವನ್ನು ತೋರಿಸಿದನು
[ಪುಟ 12,13 ರಲ್ಲಿರುವಚಿತ್ರ]
ಇಂದು ದೇವರ ನಿಜ ಆರಾಧಕರು ಆತನ ವಿಶ್ವ-ವ್ಯಾಪಕ ಶಿಕ್ಷಣ ಕಾರ್ಯವನ್ನು ನಡಿಸುವ ಮೂಲಕ ಮತ್ತು ಆತನ ಹೆಸರನ್ನು ಧರಿಸಿಕೊಳ್ಳುವ ಮೂಲಕ ಗುರುತಿಸಲ್ಪಡುತ್ತಾರೆ