ಪ್ರಕಟಣೆ
ಆಡಳಿತ ಮಂಡಲಿಯ ಕಮಿಟಿಗಳಿಗಾಗಿ ಸಹಾಯ
ಸದ್ಯ ಹನ್ನೆರಡು ಮಂದಿ ಇರುವ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರು, ತಮ್ಮ ನೇಮಕಗಳಲ್ಲಿ ನಂಬಿಗಸ್ತಿಕೆಯಿಂದ ಸೇವೆ ನಡಿಸುವುದನ್ನು ಮುಂದುವರಿಸುತ್ತಾ ಇದ್ದಾರೆ. ವೃದ್ಧಿಯಾಗುತ್ತಾ ಇರುವ “ಮಹಾ ಸಮೂಹ” ದ ನಿಷ್ಠೆಯುಳ್ಳ ಸದಸ್ಯರ ಹುರುಪಿನ ಬೆಂಬಲಕ್ಕಾಗಿ ಅವರು ಯಾವಾಗಲೂ ಕೃತಜ್ಞರಾಗಿದ್ದಾರೆ. (ಪ್ರಕಟನೆ 7:9, 15) ವಿಶ್ವ-ವ್ಯಾಪಕವಾಗಿ ಪ್ರಚಂಡ ಅಭಿವೃದ್ಧಿಯ ನೋಟದಲ್ಲಿ, ಈ ಸಮಯದಲ್ಲಿ ಆಡಳಿತಾ ಮಂಡಲಿಗೆ ಸ್ವಲ್ಪ ಹೆಚ್ಚಿನ ಸಹಾಯವನ್ನು ಒದಗಿಸುವುದು ಯೋಗ್ಯವೆಂದು ಕಂಡುಬಂದಿದೆ. ಆದುದರಿಂದ ಆಡಳಿತ ಮಂಡಲಿಯ ಕಮಿಟಿಗಳಲ್ಲಿ ಅಂದರೆ, ಸಿಬ್ಬಂದಿ, ಪ್ರಕಾಶಕ, ಸೇವೆ, ಬೋಧನೆ ಮತ್ತು ಬರೆವಣಿಗೆಯ ಕಮಿಟಿಗಳ ಪ್ರತಿಯೊಂದರ ಕೂಟಗಳಲ್ಲಿ ಭಾಗವಹಿಸಲು, ಮುಖ್ಯವಾಗಿ ಮಹಾ ಸಮೂಹದವರೊಳಗಿಂದ ಹಲವಾರು ಸಹಾಯಕರನ್ನು ಆಮಂತ್ರಿಸಲು ನಿರ್ಣಯ ಮಾಡಲಾಗಿದೆ. ಹೀಗೆ ಈ ಪ್ರತಿಯೊಂದು ಕಮಿಟಿಯ ಕೂಟಗಳಿಗೆ ಹಾಜರಾಗುವವರ ಸಂಖ್ಯೆಯು ಏಳು ಅಥವಾ ಎಂಟು ಹೆಚ್ಚಾಗುವುದು. ಆಡಳಿತ ಮಂಡಲಿಯ ಕಮಿಟಿಯ ಸದಸ್ಯರ ಮಾರ್ಗದರ್ಶನೆಯ ಕೆಳಗೆ, ಈ ಸಹಾಯಕರು ಚರ್ಚೆಗಳಲ್ಲಿ ಭಾಗವಹಿಸುವರು ಮತ್ತು ಕಮಿಟಿಯಿಂದ ಅವರಿಗೆ ಕೊಡಲ್ಪಟ್ಟ ವಿವಿಧ ನೇಮಕಗಳನ್ನು ನಿರ್ವಹಿಸುವರು. ಈ ಹೊಸ ಏರ್ಪಾಡು ಮೇ 1, 1992 ಕ್ಕೆ ಜಾರಿಗೆ ಬರುವುದು.
ಈಗ ಅನೇಕ ವರ್ಷಗಳಿಂದ ಅಭಿಷಿಕ್ತ ಸಾಕ್ಷಿಗಳ ಉಳಿಕೆಯವರ ಸಂಖ್ಯೆಯು ಕಡಿಮೆಯಾಗುತ್ತಾ ಇದೆ, ಅದೇ ಸಮಯ ಮಹಾ ಸಮೂಹದವರ ಸಂಖ್ಯೆಯು ನಮ್ಮ ಮಹತ್ತಾದ ಅಪೇಕ್ಷೆಗಳಿಗೂ ಅತಿಶಯಿಸಿ ವೃದ್ಧಿಯಾಗಿದೆ. (ಯೆಶಾಯ 60:22) ಈ ಆಶ್ಚರ್ಯಕರ ಅಭಿವೃದ್ಧಿಗಾಗಿ ನಾವು ಯೆಹೋವನಿಗೆಷ್ಟು ಉಪಕಾರ ಹೇಳುತ್ತೇವೆ! ಯೆಹೋವನ ಸಾಕ್ಷಿಗಳೆಂಬ ಹೊಸ ಹೆಸರು 1931 ರಲ್ಲಿ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲ್ಪಟ್ಟಾಗ, ರಾಜ್ಯ ಪ್ರಚಾರಕರ ಉನ್ನತ ಸಂಖ್ಯೆಯು 39,372 ಆಗಿತ್ತು, ಇದರಲ್ಲಿ ಹೆಚ್ಚಿನವರು ಕ್ರಿಸ್ತನ ಅಭಿಷಿಕ್ತ ಸಹೋದರರೆಂದು ಹೇಳಿಕೊಳ್ಳುವವರಾಗಿದ್ದರು. (ಯೆಶಾಯ 43:10-12; ಇಬ್ರಿಯ 2:11) ಅರುವತ್ತು ವರ್ಷಗಳ ಅನಂತರ, 1991 ರಲ್ಲಿ, ಲೋಕ ವ್ಯಾಪಕವಾಗಿ ಪ್ರಚಾರಕರ ಉನ್ನತ ಸಂಖ್ಯೆಯು 42,78,820 ಆಗಿದೆ, ಇವರಲ್ಲಿ 8,850 ಮಂದಿ ಮಾತ್ರವೇ ಅಭಿಷಿಕ್ತ ಉಳಿಕೆಯವರಾಗಿರುತ್ತಾರೆ. ಶಾಸ್ತ್ರಗ್ರಂಥದ ತಿಳುವಳಿಕೆಯಲ್ಲಿ ಮುನ್ನೋಡಿದ್ದ ಪ್ರಕಾರ, “ಮಹಾ ಸಮೂಹ” ವು ಈಗ “ಚಿಕ್ಕ ಹಿಂಡಿ” ಗಿಂತ 480 ಕ್ಕೆ 1 ರ ಪ್ರಮಾಣಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಅತಿಶಯಿಸಿದೆ. (ಲೂಕ 12:32; ಪ್ರಕಟನೆ 7:4-9) ವಿಸ್ತರಿಸುತ್ತಿರುವ ರಾಜ್ಯಾಭಿರುಚಿಗಳ ನಿರ್ವಹಣೆಯಲ್ಲಿ ಮಹಾ ಸಮೂಹದವರ ಸಹಕಾರ ಮತ್ತು ಬೆಂಬಲವು ಉಳಿಕೆಯವರಿಗೆ ನಿಶ್ಚಯವಾಗಿ ಬೇಕು ಮತ್ತು ಅವರದನ್ನು ಗಣ್ಯಮಾಡುತ್ತಾರೆ.
ಈ ಕಾವಲಿನಬುರುಜು ಸಂಚಿಕೆಯಲ್ಲಿ ವಿವರಿಸಲ್ಪಟ್ಟ ಪ್ರಕಾರ, ಯೆಹೂದಿ ಉಳಿಕೆಯವರೊಂದಿಗೆ ಬಾಬೆಲಿನ ಸೆರೆವಾಸದಿಂದ ಹಿಂದಿರುಗಿದ ನೆತಿನಿಮರಿಗೆ ಮತ್ತು ಸೊಲೊಮೋನನ ದಾಸರ ಸಂತಾನದವರಿಗೆ ಹೋಲಿಕೆಯಾದ ಒಂದು ಗುಂಪು ಇಂದು ಆತ್ಮಿಕ ಇಸ್ರಾಯೇಲ್ಯರೊಂದಿಗೆ ಸೇವೆ ಮಾಡುತ್ತಿದೆ; ಆ ಇಸ್ರಾಯೇಲ್ಯೇತರರು ಹಿಂದಿರುಗಿದ ಲೇವಿಯರಿಗಿಂತಲೂ ಅಧಿಕ ಸಂಖ್ಯೆಯಲಿದ್ದರು. (ಎಜ್ರ 2:40-58.; 8:15-20) ಇಂದಿನ ಮಹಾ ಸಮೂಹದೊಳಗಿಂದ ಬಂದ “ವಶಮಾಡಲ್ಪಟ್ಟವರು,” ಬ್ರಾಂಚ್‌ಗಳಲ್ಲಿ, ಸಂಚಾರ ಸೇವೆಯಲ್ಲಿ ಮತ್ತು ಈಗ ಭೂಮಿಯಲ್ಲೆಲ್ಲೂ ಸ್ಥಾಪಿತವಾಗಿರುವ 66,000 ಸಭೆಗಳಲ್ಲಿ ಮೇಲ್ವಿಚಾರ ನಡಿಸಿದರಿಂದಾಗಿ ಗಮನಾರ್ಹ ಅನುಭವ ಪಡೆದಿರುವ ಬಲಿತ ಕ್ರೈಸ್ತ ಪುರುಷರಾಗಿದ್ದಾರೆ.
ಇತ್ತೀಚೆಗೆ ಮೇಲ್ವಿಚಾರಕರಿಗೆ ಮತ್ತು ಅವರ ಸಹಾಯಕರಾದ ಶುಶ್ರೂಷೆ ಸೇವಕರಿಗೆ ಉಪದೇಶ ನೀಡಲು ಭೂಲೋಕದಲ್ಲೆಲ್ಲೂ ಕಿಂಗ್‌ಡಂ ಮಿನಿಸ್ಟ್ರಿ ಶಾಲೆಗಳು ನಡಿಸಲ್ಪಟ್ಟವು. ಅಮೆರಿಕ ಒಂದರಲ್ಲಿಯೇ 59,420 ಮೇಲ್ವಿಚಾರಕರು ಹಾಜರಾದರು. ಈ “ಹಿರೀ ಪುರುಷರು” ಹೀಗೆ ತಮ್ಮ ಜವಾಬ್ದಾರಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಡಿಸಲು ಸನ್ನದ್ಧರಾದರು.—1 ಪೇತ್ರ 5:1-3; ಎಫೆಸ 4:8, 11ಕ್ಕೆ ಹೋಲಿಸಿ.
ಯೆಹೋವನ ಸಾಕ್ಷಿಗಳ ಬ್ರೂಕ್ಲಿನ್ ಮುಖ್ಯ ಕಾರ್ಯಾಲಯದಲ್ಲಿ ಕೆಲವು “ವಶಮಾಡಲ್ಪಟ್ಟವರು” ಅನೇಕ ವರ್ಷಗಳಿಂದ ಸೇವೆ ನಡಿಸಿರುತ್ತಾರೆ. ಇವರಲ್ಲಿ ಸಾಮರ್ಥ್ಯ ಮತ್ತು ಅನುಭವದ ಸಮೃದ್ಧಿಯನ್ನು ಪಡೆದ ಮಹಾ ಸಮೂಹದವರಾದ ಬಲಿತ ಮೇಲ್ವಿಚಾರಕರು ಸೇರಿದ್ದಾರೆ. ಹೀಗೆ, ಆಡಳಿತ ಮಂಡಲಿಯು, ಆಡಳಿತ ಮಂಡಲಿಯ ಕಮಿಟಿಗಳ ಕೂಟಗಳಲ್ಲಿ ನೆರವಾಗಲು ಇಂಥ ಕೆಲವು ಮೇಲ್ವಿಚಾರಕರನ್ನು ಆರಿಸಿಯದೆ. ದೀರ್ಘಕಾಲದ ಸೇವೆಯ ದಾಖಲೆಯಿರುವ ಪುರುಷರೇ ಇವರಾಗಿರುವ ಅವಶ್ಯವಿಲ್ಲ. ಬದಲಿಗೆ ಅವರು ಬಲಿತ, ಅನುಭವಸ್ಥ ಪುರುಷರಾಗಿದ್ದು ವಿಶಿಷ್ಟ ರಂಗಗಳಲ್ಲಿ ಸಹಾಯಕೊಡುವುದಕ್ಕಾಗಿ ಒಪ್ಪುವ ಯೋಗ್ಯತೆಗಳುಳ್ಳವರಾಗಿದ್ದಾರೆ. ಒಂದು ಕಮಿಟಿಯೊಂದಿಗೆ ಕೆಲಸ ಮಾಡಲು ಅವರ ನೇಮಕವು ಅವರಿಗೊಂದು ವಿಶೇಷ ಸ್ಥಾನವನ್ನು ಕೊಡುವುದಿಲ್ಲ. ಯೇಸು ತನ್ನ ಶಿಷ್ಯರ ಕುರಿತು ಹೇಳಿದಂತೆ, “ನೀವೆಲ್ಲರು ಸಹೋದರರು.” (ಮತ್ತಾಯ 23:8) ಆದರೂ, ಈ ಪುರುಷರ ವಶಕ್ಕೆ ಬಹಳವಾಗಿ ಕೊಡಲ್ಪಡುವುದು, ಫಲಿತಾಂಶವಾಗಿ ಅವರಿಂದ “ಬಹಳವಾಗಿ ನಿರೀಕ್ಷಿಸಲ್ಪಡುವದು.”—ಲೂಕ 12:48.
ಇಂದು ಯೆಹೋವನ ಸಂಸ್ಥೆಯ ಮುನ್ನಡೆಯಲ್ಲಿ ನಾವು ಉಲ್ಲಾಸಿಸುತ್ತೇವೆ. ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ಶುಶ್ರೂಷೆ ನಡಿಸುವವರ ಸಂಖ್ಯೆಯಲ್ಲಿ ಬಹುಮಟ್ಟಿಗೆ 100 ಪ್ರತಿಶತ ವೃದ್ಧಿಯು, ಮಹಾ ದಾವೀದನಾದ ಯೇಸು ಕ್ರಿಸ್ತನ ಪ್ರವಾದನೆಗೆ ಹೊಂದಿಕೆಯಲ್ಲಿದೆ: “ಆತನ ಆಡಳಿತ ಮತ್ತು ಶಾಂತಿಯ ಅಭಿವೃದ್ಧಿಗೆ ಅಂತ್ಯವಿರದು.” (ಯೆಶಾಯ 9:7, ಕಿಂಗ್ ಜೇಮ್ಸ್ ವಷನ್) ಯೆರೂಸಲೇಮಿನ ಗೋಡೆಗಳನ್ನು ದುರುಸ್ತಿ ಮಾಡಿದ್ದರಲ್ಲಿ ನೆತಿನಿಮರು ಯಾಜಕರೊಂದಿಗೆ ಕೆಲಸ ಮಾಡಿದ ರೀತಿಯಲ್ಲಿ, ಇಂದು ಯೆಹೋವನ ಸಂಸ್ಥೆಯ ಕುರಿತಾದ ಈ ಪ್ರವಾದನೆಯು ನೆರವೇರುತ್ತಲಿದೆ: “ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಕಟ್ಟುವರು.” (ಯೆಶಾಯ 60:10; ನೆಹೆಮೀಯ 3:22, 26) ಯೆಹೋವನ ಲೋಕವ್ಯಾಪಕ ಸಂಸ್ಥೆಯಲ್ಲಿ ನೇಮಿಸಲ್ಪಡಬಹುದಾದ ಯಾವುದೇ ಕೆಲಸ ಅಥವಾ ಸೇವೆಯಲ್ಲಿ “ಯೆಹೋವನ ಯಾಜಕರಿಗೆ” ಸಹಾಯ ಮಾಡುತ್ತಾ, ಸತ್ಯಾರಾಧನೆಯನ್ನು ಕಟ್ಟುವುದರಲ್ಲಿ ಅವರು ತೋರಿಸುವ ಹುರುಪಿಗಾಗಿ ಈ ಆಧುನಿಕ ನೆತಿನಿಮರನ್ನು ಪ್ರಶಂಸಿಸಲೇಬೇಕು.—ಯೆಶಾಯ 61:5, 6. (w92 4/15)