ವಾಗ್ದಾನ ದೇಶದಿಂದ ದೃಶ್ಯಗಳು
ಸೀನಾಯಿಯಲ್ಲಿ ಆತನು ಇಸ್ರಾಯೇಲಿಗಾಗಿ ಒದಗಿಸಿದನು
ಲಕ್ಷಾಂತರ ಜನರು—ಪುರುಷರು, ಸ್ತ್ರೀಯರು ಮತ್ತು ಮಕ್ಕಳು—“ವಿಷಸರ್ಪಗಳೂ ಚೇಳುಗಳೂ ಇದ್ದ ಆ ಘೋರವಾದ ಮಹಾರಣ್ಯ ಮತ್ತು ನೀರುಬತ್ತಿಹೋದ ಭೂಮಿಗಳ” ಕಡೆಗೆ ಸಾಗುತ್ತಿದ್ದದ್ದನ್ನು ಊಹಿಸಿಕೊಳ್ಳಿರಿ!
ಧರ್ಮೋಪದೇಶಕಾಂಡ 8:15 ರಲ್ಲಿ ಕಂಡು ಬರುವ ಈ ಮಾತುಗಳು, ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಸೀನಾಯಿ ಅರಣ್ಯದ ಕಡೆಗೆ ಮುನ್ನಡೆದಾಗ ಒಂದು ಭೀಕರ ಪಯಣದ ಮಬ್ಬಾದ ರೂಪವು ಅವರ ಮುಂದೆ ದೃಶ್ಯ ಗೋಚರವಾಗುತ್ತದೆ. ಒಂದು ದುರ್ದಮ ಸಮಸ್ಯೆ: ಸಾಕಷ್ಟು ಆಹಾರ ಮತ್ತು ನೀರನ್ನು ಒದಗಿಸುವವರು ಯಾರು?
ಇಸ್ರಾಯೇಲ್ಯರು ಹಿಂದೆ ನೈಲ್ ನದೀಮುಖಜ ಭೂಮಿಯಲ್ಲಿ ದಾಸರಾಗಿದ್ದರು, ಆದರೆ ಅವರಿಗೆ ಆಹಾರದ ಕೊರತೆ ಇರಲಿಲ್ಲ. ಪುರಾತನ ಸಮಾಧಿಗಳಲ್ಲಿನ ಗೋಡೆಯ ವರ್ಣಚಿತ್ರಗಳು ತೆರತೆರದ ದ್ರಾಕ್ಷೆಗಳನ್ನು, ಕರ್ಬೂಜುಗಳನ್ನು ಮತ್ತು ಬೇರೆ ಫಲಗಳನ್ನು ಹಾಗೂ ಬಗೆಬಗೆಯ ಅಹಾರ ಅನುಪಾನಕ್ಕಾಗಿ ಮೀನು ಮತ್ತು ಕೋಳಿಗಳನ್ನು ಚಿತ್ರಿಸುತ್ತವೆ. ಹೀಗಿರಲಾಗಿ, ಅರಣ್ಯದಲ್ಲಿ ಅವರು ಅದಕ್ಕಾಗಿ ಹಂಬಲಿಸಿ ದೂರಿಟ್ಟದ್ದು ಅದೆಷ್ಟು ಸರಿಯಾದದ್ದು: “ಮಾಂಸವು ನಮಗೆ ಹೇಗೆ ಲಭಿಸೀತು? ಐಗುಪ್ತದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸವತೆಕಾಯಿ, ಕರ್ಬೂಜು, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವು ನೆನಪಿಗೆ ಬರುತ್ತವಲ್ಲಾ!”—ಅರಣ್ಯಕಾಂಡ 11:4, 5; 20:5.
ಇಸ್ರಾಯೇಲ್ಯರು ಕೆಂಪು ಸಮುದ್ರವನ್ನು ದಾಟಿದ ಮೇಲೆ ಸೀನಾಯಿಯ ವಾಸ್ತವಿಕತೆಯು ಅವರಿಗೆ ಬೇಗನೇ ಮನವರಿಕೆಯಾಯಿತು. ಅವರು ಉತ್ತರಕ್ಕೆ ಹೆಚ್ಚು ಸಂಚರಿತ ವ್ಯಾಪಾರ ಮಾರ್ಗವನ್ನು ತಕ್ಕೊಳ್ಳದೆ ತ್ರಿಕೋಣ ದ್ವೀಪಕಲ್ಪದ ತುದಿಯ ಕಡೆಗೆ ತಿರುಗಿದ್ದರು. ಅರಣ್ಯದಲ್ಲಿ ಸುಮಾರು 80 ಕಿಲೊಮೀಟರ್ ದೂರ ಹೋಗುವುದರೊಳಗೆ, ಅವರ ನೀರಿನ ಅಗತ್ಯತೆಯು ವಿಷಮವಾಗುವಂತೆ ಕಂಡಿತು. ಅವರಿಗೆ ಸಿಕ್ಕಿದ ನೀರನ್ನು ಅವರು ಕುಡಿಯಲಾರದೆ ಹೋದರು ಯಾಕಂದರೆ ಅದು ಕಹಿಯಾಗಿತ್ತು ಮತ್ತು ರೋಗಜನ್ಯವಾಗಿದ್ದಿರಲೂ ಬಹುದು. “ನಾವೇನು ಕುಡಿಯಬೇಕು?” ಎಂದವರು ಕೂಗತೊಡಗಿದರು. ದೇವರು ಮಧ್ಯೆಬಂದು, ನೀರನ್ನು ಸಿಹಿಗೊಳಿಸಿದನು.—ವಿಮೋಚನಕಾಂಡ 15:22-25.
ಮೇಲಿನ ಒಂಟೇಸಾಲುಗಳ ದೃಶ್ಯವನ್ನು ನೋಡಿರಿ. ಇಸ್ರಾಯೇಲ್ಯರು ಅರಣ್ಯ ಮಾರ್ಗವಾಗಿ ಸೀನಾಯಿ ಪರ್ವತದ ಕಡೆಗೆ ಹೇಗೆ ಪ್ರಯಾಣ ಮಾಡಶಕ್ತರೆಂಬ ಪ್ರಶ್ನೆಯನ್ನು ನೀವು ಗಣ್ಯಮಾಡ ಸಾಧ್ಯವಿದೆ. ಜೀವಂತರಾಗಿ ಉಳಿಯಲು ತಮಗಾಗಿ ಹಾಗೂ ತಮ್ಮ ದನಕುರಿಗಳಿಗಾಗಿ ಬೇಕಾದ ಸಾಕಷ್ಟು ನೀರನ್ನು—ಮತ್ತು ಆಹಾರವನ್ನು—ಅವರು ಕಂಡುಕೊಳ್ಳುತ್ತಾ ಹೋಗುವುದು ಹೇಗೆ?—ವಿಮೋಚನಕಾಂಡ 12:38.
ಅವರು ದಕ್ಷಿಣಾಭಿಮುಖವಾಗಿ ಇನ್ನೂ ಮುಂದೆ ಸಾಗಿದರು ಮತ್ತು ಬೇಗನೇ ಏಲೀಮಿನಲ್ಲಿ ಚೈತನ್ಯಕರವಾದ ನೀರನ್ನೂ ಆಹಾರವನ್ನೂ ಕಂಡುಕೊಂಡರು. (ವಿಮೋಚನಕಾಂಡ 15:27) ಆದರೂ ಅದು ಅವರ ಗಮ್ಯಸ್ಥಾನವಾಗಿರಲಿಲ್ಲ. ಅವರು ಸೀನಾಯಿ ಬೆಟ್ಟ ಎಂಬ “[ಸತ್ಯ] ದೇವರ ಬೆಟ್ಟದ” ಕಡೆಗೆ ಸಾಗುತ್ತಿದ್ದರು. (ವಿಮೋಚನಕಾಂಡ 3:1; 18:5; 19:2; 24:12-18) ಅದು 120 ಕಿಲೊಮೀಟರ್ ದೂರದ—ಒರಟೊರಟಾದ ಬೆಂಗಾಡಿನ ಪ್ರದೇಶವಾಗಿತ್ತು.
ಈ ದೊಡ್ಡ ಸಮೂಹವು ಸೀನಾಯಿ ಬೆಟ್ಟದ ಕಡೆಗೆ ಮುಂದರಿದಾಗ, ಫೇರನ್ ಎಂದು ಕರೆಯಲ್ಪಟ್ಟ ದೊಡ್ಡ ನೀರಿನ ಒರತೆಯ ಸಮೀಪ ಬಂದರು—ಅಲ್ಲಿ ಅವರು ತಂಗಿರಲೂ ಬಹುದು. ಎದುರು ಪುಟದ ಚಿತ್ರದಲ್ಲಿ ಇದರ ಒಂದು ಚಿಕ್ಕ ಭಾಗವು ದೃಶ್ಯಗೋಚರವಾಗಿದೆ.a ಅದು ಅರಣ್ಯದಲ್ಲಿನ ಒಂದು ಕಣಿವೆಯ ಮಾರ್ಗವಾಗಿ ಕೆಂಪು ಸಮುದ್ರ (ಸುಯೆಸ್ ಖಾರಿ) ದ ಕಡೆಗೆ ಹರಿಯುತ್ತದೆ. ಅಲ್ಲಿ ಎಂತಹ ಚೈತನ್ಯವನ್ನು ಅವರು ಪಡೆದಿದ್ದರಬೇಕು!
ಸೀನಾಯಿ ಅರಣ್ಯ ಪ್ರದೇಶವು ಒಂದು “ಘೋರವಾದ ಮಹಾರಣ್ಯ” ದ ವರ್ಣನೆಯನ್ನು ಸಾಮಾನ್ಯವಾಗಿ ಒಪ್ಪಬಹುದಾದರೂ, ಇಸ್ರಾಯೇಲ್ಯರು ಫೇರನ್ ಒರತೆಯ ಬಳಿಯಲ್ಲಿ ಎತ್ತರವಾದ ತಾಳೇ ಮರಗಳು ಮತ್ತು ಇತರ ವೃಕ್ಷಗಳ ನೆರಳನ್ನು ಆನಂದಿಸ ಶಕ್ತರಾಗಿದ್ದರು. ವಿಪುಲವಾದ ಸಿಹಿ ಖರ್ಜೂರ ಹಣ್ಣುಗಳು ಆ ಜಾಗದಲ್ಲೇ ದಿಢೀರ್ ಆಹಾರವನ್ನು ಒದಗಿಸುತ್ತಿದ್ದವು ಮತ್ತು ಅವರು ಅದರ ಸಂಗ್ರಹವನ್ನು ತಮ್ಮೊಂದಿಗೆ ಒಯ್ಯಶಕ್ತರಾಗಿದ್ದರು.
ಇದೆಲ್ಲವೂ ಶಕ್ಯವಾದದ್ದು ಫಾರಾನ್ನಲ್ಲಿ ತಳದ ನೀರು ಮೇಲ್ಮೈಯ ತನಕ ಏರುತ್ತಿದ್ದ ಕಾರಣದಿಂದಲೇ. ನೀವೊಂದು ಬೆಂಗಾಡಿನಲ್ಲಿ ಇದ್ದದ್ದಾದರೆ ಮತ್ತು ಕುಡಿಯಲು ತಿಳಿನೀರು ದಿಢೀರನೆ ದೊರೆತರೆ, ನಿಮಗೆ ಹೇಗೆನಿಸುವುದು ಎಂದು ಊಹಿಸಿರಿ! ಸೀನಾಯಿಯಲ್ಲಿ ಸಹ ನೀರನ್ನು ಪಡೆಯಸಾಧ್ಯವಿದ್ದ ಸ್ಥಳಗಳಿದ್ದವು ಎಂದು ಇದು ಸೂಚಿಸುತ್ತದೆ. ಕೆಲವು ಸಾರಿ ಬಾವಿಯನ್ನು ಬಹಳ ಆಳದ ತನಕ ಅಗೆಯ ಬೇಕಾಗಿತ್ತು. ಅನಂತರ ತೊಟ್ಟಿಗಳನ್ನು ಅಥವಾ ಜಾಡಿಗಳನ್ನು ಆ ಜೀವನಾವಶ್ಯಕ ದ್ರವದಿಂದ ತುಂಬಿಸಿ ಮೇಲೆ ಸೇದಲು ತುಂಬಾ ಕೆಲಸ ಅಲ್ಲಿತ್ತು, ವಿಶೇಷವಾಗಿ ಕುರಿ ದನಗಳಿಗೆ ನೀರುಕುಡಿಸುವ ಅಗತ್ಯವಿದ್ದಲ್ಲಿ. ಇಂದಿನ ದಿನಗಳ ತನಕವೂ ಸೀನಾಯಿಯ ಜಿಪ್ಸಿಗಳು ಎಲ್ಲಿ ತಮಗಾಗಿಯೂ ತಮ್ಮ ಒಂಟೆಗಳಿಗಾಗಿಯೂ ನೀರು ಸೇದಶಕ್ತರೋ ಆ ಬಾವಿಗಳ ಕಡೆಗೆ ಆಕರ್ಷಿಸಲ್ಪಡುತ್ತಾರೆ.—ಆದಿಕಾಂಡ 24:11-20 ಕ್ಕೆ ಹೋಲಿಸಿರಿ; 26:18-22.
ಹೌದು, ದುಸ್ತರವಾದ ಕೊರತೆಯೆಂಬಂತೆ ತೋರಿದ ವಿಷಯಕ್ಕಾಗಿ ಅವರು ಗುಣುಗುಟ್ಟಿದ್ದ ಸಂದರ್ಭಗಳಿದ್ದರೂ, ಇಸ್ರಾಯೇಲ್ಯರಿಗೆ ನೀರು ಮತ್ತು ಆಹಾರದ ಉಪಲಬವ್ಧಿತ್ತು. ಅವನ್ನು ಕೆಲವು ಸಾರಿ ದೇವರು ಅದ್ಭುತಕರವಾಗಿ ಒದಗಿಸಿದನು. (ವಿಮೋಚನಕಾಂಡ 16:11-18, 31; 17:2-6) ಬೇರೆ ಸಮಯಗಳಲ್ಲಿ ಆತನು ಅವರನ್ನು, ಎಲ್ಲಿ ನೈಸರ್ಗಿಕ ಸರಬರಾಯಿಗಳಿಂದ ಅವರ ನಿಜ ಅವಶ್ಯಕತೆಗಳನ್ನು ಪೂರೈಸಸಾಧ್ಯವಿತ್ತೋ ಅಂಥ “ಇಳುಕೊಳ್ಳತಕ್ಕ ಸ್ಥಳಕ್ಕೆ” ನಡಿಸಿರುವಂತೆ ತೋರುತ್ತದೆ. (ಅರಣ್ಯಕಾಂಡ 10:33-36) ಆ ಎಲ್ಲಾ ಸಮಯದಲ್ಲಿ, ನಂಬಿಗಸ್ತರಿಗಾಗಿ ವಾಗ್ದಾನ ದೇಶದಲ್ಲಿ ಕಾದಿದ್ದ ಸಮೃದ್ಧಿಯನ್ನು ಅವನು ಆವರ ಮುಂದಿಟ್ಟಿದ್ದನು.—ಧರ್ಮೋಪದೇಶಕಾಂಡ 11:10-15. (w92 5⁄1)
[ಅಧ್ಯಯನ ಪ್ರಶ್ನೆಗಳು]
a ಈ ಛಾಯಾಚಿತ್ರದ ದೊಡ್ಡ ಸೈಜ್ 1992 ಕ್ಯಾಲೆಂಡರ್ ಆಫ್ ಜೆಹೋವಸ್ ವಿಟ್ನೆಸಸ್ ನಲ್ಲಿ ದೊರೆಯುತ್ತದೆ
[ಪುಟ 24 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 24 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 24,25 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 25 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.