ಲೌಕಿಕ ಭ್ರಾಂತಿಗಳನ್ನು ನಿರಾಕರಿಸಿರಿ, ರಾಜ್ಯ ವಾಸ್ತವಿಕತೆಗಳನ್ನು ಬೆನ್ನಟ್ಟಿರಿ
“ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”—ಮತ್ತಾಯ 6:33.
1. ಸಾಂಕೇತಿಕ ಹೃದಯದ ಕುರಿತಾಗಿ ದೇವರ ವಾಕ್ಯವು ಯಾವ ಎಚ್ಚರಿಕೆಯನ್ನು ನೀಡುತ್ತದೆ, ಮತ್ತು ಅದು ನಮ್ಮನ್ನು ವಂಚಿಸುವ ಪ್ರಧಾನ ವಿಧಗಳಲ್ಲಿ ಒಂದು ಯಾವುದು?
“ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.” (ಜ್ಞಾನೋಕ್ತಿ 4:23) ಈ ಎಚ್ಚರಿಕೆಯನ್ನು ಕೊಡಲು ವಿವೇಕಿ ಅರಸ ಸೊಲೊಮೋನನಿಗೆ ಆವಶ್ಯಕವಾದದ್ದು ಯಾಕೆ? ಯಾಕಂದರೆ “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” (ಯೆರೆಮೀಯ 17:9) ನಾವು ಲೌಕಿಕ ಭ್ರಾಂತಿಗಳಲ್ಲಿ ತೊಡಗಿಸಿಕೊಳ್ಳುವಂತೆ ನಮಗೆ ಕಾರಣವಾಗುವುದರ ಮೂಲಕ, ನಮ್ಮ ಸಾಂಕೇತಿಕ ಹೃದಯವು ನಮ್ಮನ್ನು ವಂಚಿಸುವ ಪ್ರಧಾನ ವಿಧಾನಗಳಲ್ಲಿ ಒಂದಾಗಿರುತ್ತದೆ. ಆದರೆ ಭ್ರಾಂತಿಗಳು ಅಂದರೇನು? ಅವುಗಳು ಅವಾಸ್ತವಿಕತೆಯ ಊಹೆಗಳು, ಹಗಲುಗನಸುಗಳು, ಕೆಲಸವಿಲ್ಲದ ಮನಸ್ಸಿನ ಅಲೆದಾಟಗಳು. ಈ ಹಗಲುಗನಸುಗಳು ಲೌಕಿಕ ಭ್ರಾಂತಿಗಳಾದಾಗ, ಅವು ಕೇವಲ ಸಮಯವನ್ನು ಹಾಳುಗೆಡಹುವದಲ್ಲ, ಬದಲು ಅವು ಅತಿ ಹಾನಿಕಾರಕವೂ ಆಗಿವೆ. ಆದುದರಿಂದ, ನಾವು ಅವುಗಳನ್ನು ಪೂರ್ಣವಾಗಿ ನಿರಾಕರಿಸತಕ್ಕದ್ದು. ವಾಸ್ತವದಲ್ಲಿ, ಯೇಸುವು ಮಾಡಿದಂತೆ ನಾವು ಅಧರ್ಮವನ್ನು ದ್ವೇಷಿಸುವುದಾದರೆ, ಲೌಕಿಕ ಭ್ರಾಂತಿಗಳಲ್ಲಿ ತೊಡಗಿಸಿಕೊಳ್ಳುವುದರ ವಿರುದ್ಧ ನಮ್ಮ ಹೃದಯವನ್ನು ನಾವು ಕಾಪಾಡಿಕೊಳ್ಳುವೆವು.—ಇಬ್ರಿಯ 1:8, 9.
2. ಲೌಕಿಕ ಭ್ರಾಂತಿಗಳು ಏನಾಗಿವೆ, ಮತ್ತು ಅವುಗಳನ್ನು ನಾವು ಯಾಕೆ ನಿರಾಕರಿಸಬೇಕು?
2 ಆದರೆ ಲೌಕಿಕ ಭ್ರಾಂತಿಗಳು ಯಾವುವು? ಅವುಗಳು ಸೈತಾನನ ವಶದಲ್ಲಿರುವ ಈ ಲೋಕದ ವೈಶಿಷ್ಟ್ಯಗಳಿರುವ ಭ್ರಾಂತಿಗಳಾಗಿವೆ. ಅದರ ಕುರಿತು, ಅಪೊಸ್ತಲ ಯೋಹಾನನು ಬರೆದದ್ದು: “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.” (1 ಯೋಹಾನ 2:16; 5:19) ಲೌಕಿಕ ಭ್ರಾಂತಿಗಳನ್ನು ಕ್ರೈಸ್ತರು ಯಾಕೆ ನಿರಾಕರಿಸಬೇಕು? ಕಾರಣವೇನಂದರೆ ಅಂಥ ಭ್ರಾಂತಿಗಳು ಮನಸ್ಸು ಮತ್ತು ಹೃದಯದಲ್ಲಿ ಸ್ವಾರ್ಥದಾಶೆಗಳನ್ನು ಕೆರಳಿಸುತ್ತವೆ. ಯಾವುದು ಕೆಟ್ಟದ್ದಾಗಿರುವದೊ ಅದನ್ನು ಮಾಡುವ ಕುರಿತು ಹಗಲುಗನಸು ಕಾಣುವದು, ವ್ಯಕ್ತಿಯೊಬ್ಬನು ನೈಜವಾಗಿ ಏನು ಮಾಡಲಿರುವನೋ ಅದರ ಪುನರಾವರ್ತನೆಯನ್ನು ಮನಸ್ಸಿನಲ್ಲಿ ಮಾಡುವದಾಗಿದೆ. ಶಿಷ್ಯನಾದ ಯಾಕೋಬನು ನಮಗೆ ಎಚ್ಚರಿಸುವದು: “ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.”—ಯಾಕೋಬ 1:14, 15.
ಎಚ್ಚರಿಕೆಯ ಉದಾಹರಣೆಗಳು
3. ಯಾರ ವಿದ್ಯಮಾನವು ಸ್ವಾರ್ಥದ ಭ್ರಾಂತಿಗಳ ಹಾನಿಕಾರಕತೆಯ ಪ್ರಧಾನ ಎಚ್ಚರಿಕೆಯ ಉದಾಹರಣೆಯನ್ನು ಒದಗಿಸುತ್ತದೆ?
3 ಲೌಕಿಕ ಭ್ರಾಂತಿಗಳನ್ನು ಯಾಕೆ ನಿರಾಕರಿಸತಕ್ಕದ್ದು ಎಂದು ತೋರಿಸುವ ಉದಾಹರಣೆಗಳನ್ನು ನಾವೀಗ ಪರಿಗಣಿಸೋಣ. ಸ್ವಾರ್ಥದ ಭ್ರಾಂತಿಗಳಲ್ಲಿ ತೊಡಗುವುದರಿಂದ ಫಲಿತಾಂಶವಾಗಿ ಆಗುವ ಹಾನಿಯ ಬಗ್ಗೆ ಪ್ರಧಾನ ಉದಾಹರಣೆಯನ್ನು ಪಿಶಾಚನಾದ ಸೈತಾನನ ವಿದ್ಯಮಾನವು ಒದಗಿಸುತ್ತದೆ. ವಿಶ್ವ ಸಾರ್ವಭೌಮನೋಪಾದಿ ಇದ್ದ ಯೆಹೋವನ ಅಸದೃಶ ಸ್ಥಾನದ ಕುರಿತು ಅವನು ಅಸೂಯೆಪಡುವಷ್ಟು ಮತ್ತು ಆರಾಧಿಸಲ್ಪಡಲು ಬಯಸುವಷ್ಟು ತನ್ನ ಹೃದಯದಲ್ಲಿ ಸ್ವ ಪ್ರಾಮುಖ್ಯತೆಯ ಭಾವನೆಗೆ ಅವನು ಅವಕಾಶವನ್ನಿತ್ತನು. (ಲೂಕ 4:5-8) ಒಂದು ಅವಾಸ್ತವಿಕತೆಯ ಭ್ರಾಂತಿಯೋ? ಖಂಡಿತವಾಗಿಯೂ ಅದಾಗಿತ್ತು! ಒಂದು ಸಾವಿರ ವರ್ಷಗಳ ತನಕ ಸೈತಾನನನ್ನು ಬಂಧಿಸಿ ಮತ್ತು ವಿಶೇಷವಾಗಿ ಅವನನ್ನು ಎರಡನೆಯ ಮರಣದಲ್ಲಿ “ಬೆಂಕಿಯ ಕೆರೆಗೆ” ದೊಬ್ಬುವಾಗ, ಅದು ಪ್ರಶ್ನಾತೀತವಾಗಿ ರುಜುಪಡಿಸಲ್ಪಡುವದು.—ಪ್ರಕಟನೆ 20:1-3, 10.
4. ಸೈತಾನನು ಹವ್ವಳನ್ನು ಮೋಸಗೊಳಿಸಿದ್ದು ಹೇಗೆ?
4 ಮೊದಲನೆಯ ಸ್ತ್ರೀಯಾದ ಹವ್ವಳ ವಿಷಯದಲ್ಲಿ ನಮಗೆ ಇನ್ನೊಂದು ಎಚ್ಚರಿಕೆಯ ಉದಾಹರಣೆಯಿರುತ್ತದೆ. ತನ್ನ ಮಹತ್ವಾಕಾಂಕ್ಷೆಯನ್ನು ಪಡೆದುಕೊಳ್ಳುವ ಸೈತಾನನ ಪ್ರಯತ್ನದಲ್ಲಿ, ಅವಳು ನಿಷೇಧಿತ ಹಣ್ಣನ್ನು ತಿಂದಲ್ಲಿ, ಅವಳು ಸಾಯುವುದಿಲ್ಲ ಬದಲು ಒಳ್ಳೆಯದರ ಮತ್ತು ಕೆಟ್ಟದರ ಅರುಹು ತಿಳಿದುಕೊಂಡವಳಾಗಿ ದೇವರಂತೆ ಆಗಲಿರುವಳು ಎಂಬ ಭ್ರಾಂತಿಯನ್ನು ಅವಳ ಮನಸ್ಸಿನಲ್ಲಿ ಹಾಕುವುದರ ಮೂಲಕ ಅವನು ಹವ್ವಳನ್ನು ಮೋಸಗೊಳಿಸಿದನು. ಆ ಭ್ರಾಂತಿಯು ಅವಾಸ್ತವಿಕವಾಗಿತ್ತೊ, ಸ್ವಾರ್ಥದ್ದಾಗಿತ್ತೊ? ಖಂಡಿತವಾಗಿಯೂ ಅದಾಗಿತ್ತು, ವಿಚಾರಣೆಯನ್ನು ನಡಿಸಿ, ಹವ್ವ ಮತ್ತು ಅವಳ ಗಂಡನಾದ ಆದಾಮನನ್ನು ಖಂಡಿಸುವ ಯೆಹೋವನ ತೀರ್ಪಿನಿಂದ ಇದನ್ನು ನಾವು ಕಾಣಬಲ್ಲೆವು. ಇದರ ಫಲವಾಗಿ, ಅವರಿಗಾಗಿ ಮತ್ತು ಅವರ ಎಲ್ಲಾ ಅಪರಿಪೂರ್ಣ ಸಂತತಿಗಾಗಿ ಪರದೈಸದಲ್ಲಿ ಜೀವಿಸುವ ಹಕ್ಕನ್ನು ಅವರು ಕಳಕೊಂಡರು.—ಆದಿಕಾಂಡ 3:1-19; ರೋಮಾಪುರ 5:12.
5. ದೇವರ ಪುತ್ರರುಗಳಾಗಿದ್ದ ಕೆಲವು ದೇವದೂತರುಗಳ ಪತನವನ್ನು ಯಾವುದು ತಂದಿತು, ಮತ್ತು ಅವರಿಗೆ ಯಾವ ಫಲಿತಾಂಶದೊಂದಿಗೆ?
5 ದೇವರ ಪುತ್ರರುಗಳಾದ ಕೆಲವು ನಿರ್ದಿಷ್ಟ ದೇವದೂತರುಗಳ ಎಚ್ಚರಿಕೆಯ ಉದಾಹರಣೆಯು ಕೂಡ ನಮಗಿದೆ. (ಆದಿಕಾಂಡ 6:1-4) ಯೆಹೋವನ ಸ್ವರ್ಗೀಯ ಸನ್ನಿಧಿಯಲ್ಲಿ ಅವರು ಆನಂದಿಸುವ ಆಶೀರ್ವಾದಗಳೊಂದಿಗೆ ತೃಪ್ತಿಯಿಂದಿರುವದರ ಬದಲು, ಭೂಮಿಯ ಸ್ತ್ರೀಯರ ಕುರಿತಾಗಿ ಮತ್ತು ಅವರೊಂದಿಗೆ ಲೈಂಗಿಕ ಸಂಬಂಧಗಳಿರುವದು ಎಷ್ಟು ಆನಂದಕರವೆಂಬ ಭ್ರಾಂತಿಯುಳ್ಳವರಾದರು. ಅವಿಧೇಯ ದೇವದೂತರು ಈ ಭ್ರಾಂತಿಗಳಿಂದಾಗಿ ಕ್ರಿಯೆಗೈದದರಿಂದ ಈಗ ಟಾರ್ಟರಸ್ನ ಆತ್ಮಿಕ ಕತ್ತಲೆಗೆ ನಿರ್ಬಂಧಿಸಲ್ಪಟ್ಟಿದ್ದು, ಯೇಸು ಕ್ರಿಸ್ತನ ಸಾವಿರ ವರ್ಷದ ಆಳಿಕ್ವೆಯ ಅಂತ್ಯದಲ್ಲಿ ಅವರ ನಿರ್ಮೂಲನವನ್ನು ಮುನ್ನೋಡುತ್ತಿದ್ದಾರೆ.—2 ಪೇತ್ರ 2:4; ಯೂದ 6; ಪ್ರಕಟನೆ 20:10.
ಲೌಕಿಕ ಭ್ರಾಂತಿಗಳನ್ನು ನಿರಾಕರಿಸಿರಿ
6, 7. ಪ್ರಾಪಂಚಿಕ ಸಂಪತ್ತಿನ ಕುರಿತಾದ ಲೌಕಿಕ ಭ್ರಾಂತಿಗಳು ಯಾಕೆ ಹಾನಿಕಾರಕ ಮತ್ತು ಮೋಸಕಾರಿಯಾಗಿರುತ್ತವೆ?
6 ಸೈತಾನನಿಂದ ಪ್ರವರ್ತಿಸಲ್ಪಟ್ಟ ಅತಿ ಸಾಮಾನ್ಯ ಮತ್ತು ಅಪಾಯಕಾರೀ ಭ್ರಾಂತಿಗಳಲ್ಲೊಂದನ್ನು ನಾವೀಗ ಪರಿಗಣಿಸೋಣ. ಎಲ್ಲಾ ವಿಧದ ಮಾಧ್ಯಮದ ಮೂಲಕ ಲೌಕಿಕ ಭ್ರಾಂತಿಗಳಲ್ಲಿ ತೊಡಗಲು ನಾವು ಶೋಧನೆಗೊಳಪಡಿಸಲ್ಪಟ್ಟಿದ್ದೇವೆ. ಇವುಗಳು ಹೆಚ್ಚಾಗಿ ಸಂಪತ್ತುಗಳಿಗಾಗಿ ಹಾತೊರೆಯುವುದರಿಂದ ಉಂಟಾಗುತ್ತವೆ. ಸಂಪತ್ತು ಇರುವುದರಲ್ಲಿ ತಾನೇ ಯಾವುದೇ ತಪ್ಪಿರುವದಿಲ್ಲ. ದೇವಭಕ್ತಿಯ ಅಬ್ರಹಾಮ, ಯೋಬ, ಮತ್ತು ಅರಸ ದಾವೀದ, ಇವರು ಬಹಳ ಶ್ರೀಮಂತರಾಗಿದ್ದರು, ಆದರೆ ಅವರು ಪ್ರಾಪಂಚಿಕ ಐಶ್ವರ್ಯಕ್ಕಾಗಿ ಹಂಬಲಿಸಲಿಲ್ಲ. ಪ್ರಾಪಂಚಿಕತೆಯ ಭ್ರಾಂತಿಗಳು ಸಂಪತ್ತನ್ನು ಗಳಿಸಲು ವರ್ಷಗಟ್ಟಲೆ ಶ್ರಮಪಟ್ಟು ದುಡಿಯುವಂತೆ ಜನರನ್ನು ಪ್ರಚೋದಿಸುತ್ತವೆ. ಅಂಥ ಭ್ರಾಂತಿಗಳು ಕುದುರೆಗಳ ಮೇಲೆ ಪಂದ್ಯಕಟ್ಟುವ ಮತ್ತು ಲಾಟರಿ ಟಿಕೇಟುಗಳನ್ನು ಖರೀದಿಸುವ, ಹೀಗೆ ಎಲ್ಲಾ ತರಹದ ಜೂಜಾಟದಲ್ಲಿ ಲೋಲುಪರಾಗುವಂತೆ ಕೂಡ ಅವರನ್ನು ಪ್ರೇರಿಸುತ್ತದೆ. ಸಂಪತ್ತಿನ ಕುರಿತು ಯಾವುದೇ ಭ್ರಾಂತಿಗಳಿಗೆ ನಾವು ಎಡೆಗೊಡದೆ ಇರೋಣ. ಪ್ರಾಪಂಚಿಕ ಐಶ್ವರ್ಯವು ಭದ್ರತೆಯನ್ನು ಒದಗಿಸುವದು ಎಂದು ನಾವು ಯೋಚಿಸುವದಾದರೆ, ಈ ವಾಸ್ತವಿಕ ನಾಣ್ಣುಡಿಯನ್ನು ಗಮನಿಸೋಣ: “ಧನವು ಕೋಪದ ದಿನದಲ್ಲಿ ವ್ಯರ್ಥ; ಧರ್ಮವು ಮರಣವಿಮೋಚಕ.” (ಜ್ಞಾನೋಕ್ತಿ 11:4) ನಿಶ್ಚಯವಾಗಿಯೂ, “ಮಹಾ ಸಂಕಟದಲ್ಲಿ” ಪಾರಾಗಲು ಪ್ರಾಪಂಚಿಕ ಐಶ್ವರ್ಯವು ಯಾವುದೇ ಪ್ರಯೋಜನ ತರುವದಿಲ್ಲ.—ಮತ್ತಾಯ 24:21; ಪ್ರಕಟನೆ 7:9, 14.
7 ಐಹಿಕ ಸಂಪತ್ತುಗಳು ನಮ್ಮನ್ನು ಸುಲಭವಾಗಿಯೇ ವಂಚಿಸಬಹುದು. ಆದುದರಿಂದಲೇ ನಮಗೆ ಹೇಳಲ್ಪಟ್ಟದ್ದು: “ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದೂ ಎತ್ತರವಾದ ಗೋಡೆಯೆಂದೂ ಭಾವಿಸಿಕೊಳ್ಳುತ್ತಾನೆ.” (ಜ್ಞಾನೋಕ್ತಿ 18:11) ಹೌದು, ಕೇವಲ “ಅವನು ಭಾವಿಸಿಕೊಳ್ಳುತ್ತಾನೆ” ಯಾಕಂದರೆ ಹತೋಟಿ ಮೀರುವ ಬೆಲೆಯುಬ್ಬರದ, ಆರ್ಥಿಕ ಕುಸಿತದ, ರಾಜಕೀಯ ಉತ್ಪವ್ಲನದ, ಯಾ ಮಾರಕ ರೋಗಗಳ ಸಮಯಗಳಲ್ಲಿ, ಪ್ರಾಪಂಚಿಕ ಸಂಪತ್ತು ನೀಡುವ ಸಂರಕ್ಷಣೆ ಕೊಂಚವೇ. ಪ್ರಾಪಂಚಿಕ ಸಂಪತ್ತಿನಲ್ಲಿ ನಮ್ಮ ಭರವಸವಿಡುವುದರ ಮೂರ್ಖತನದ ವಿರುದ್ಧವಾಗಿ ಯೇಸು ಕ್ರಿಸ್ತನು ಎಚ್ಚರಿಸಿದ್ದಾನೆ. (ಲೂಕ 12:13-21) ಅಪೊಸ್ತಲ ಪೌಲನ ಎಚ್ಚರಿಕೆಯ ಮಾತುಗಳು ಕೂಡ ನಮಗಿವೆ: “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:10.
8. ಲೈಂಗಿಕ ಸ್ವಭಾವದ ಲೌಕಿಕ ಭ್ರಾಂತಿಗಳು ಎಷ್ಟೊಂದು ಪ್ರಚಲಿತವಾಗಿವೆ, ಮತ್ತು ಯಾವ ಅಪಾಯಗಳನ್ನು ಅವುಗಳು ಮುಂದಿಡುತ್ತವೆ?
8 ಇತರ ಭ್ರಾಂತಿಗಳು ನಿಷಿದ್ಧವಾದ ಲೈಂಗಿಕತೆಗೆ ಸಂಬಂಧಪಟ್ಟದ್ದಾಗಿರುತ್ತವೆ. ಮನುಷ್ಯನ ಪಾಪಪೂರ್ಣ ಪ್ರಕೃತಿ ಎಷ್ಟರ ಮಟ್ಟಿಗೆ ಲೈಂಗಿಕ ಭ್ರಾಂತಿಗಳ ಮೇಲೆ ನೆಲೆಸಲು ಬಯಸುತ್ತದೆಂಬುದು ನಿರ್ದಿಷ್ಟ ಟೆಲಿಫೊನ್ ನಂಬರುಗಳನ್ನೊತ್ತಿ ಅಶ್ಲೀಲ ಸಂದೇಶಗಳನ್ನು ಆಲಿಸಲು ಕೇಳುವುದರಲ್ಲಿ ದೊರೆಯುವ ಶಾಬ್ದಿಕ ಹೊಲಸಿನ ಜನಪ್ರಿಯತೆಯಲ್ಲಿ ತೋರಿಬರುತ್ತದೆ. ಅಮೆರಿಕದಲ್ಲಿ ಲಂಪಟತನದ ಸೇವೆಗಳು ಟೆಲಿಫೊನಿನ ಮೂಲಕ ದೊರಕುವದು ಅನೇಕ ಬಿಲ್ಯಾಂತರ ಡಾಲರುಗಳ ಒಂದು ವ್ಯವಹಾರವಾಗಿದೆ. ನಿಷಿದ್ಧವಾದ ಲೈಂಗಿಕತೆಯ ಮೇಲೆ ನೆಲಸುವಂತೆ ನಮ್ಮ ಮನಸ್ಸುಗಳನ್ನು ಬಿಡುವುದಾದರೆ, ಶುದ್ಧ ಕ್ರೈಸ್ತರೆಂದು ತೋರಿಸಿಕೊಳ್ಳುವ ಕಪಟಿಗಳು ನಾವಾಗಿರಲಾರವೇ? ಇಂಥ ಭ್ರಾಂತಿಗಳು ಅನೈತಿಕ ಅಕ್ರಮ ಸಂಬಂಧಗಳಿಗೆ ನಡಿಸಸಾಧ್ಯವಿರುವ ಅಪಾಯವು ಅಲ್ಲಿರುತ್ತದಲ್ಲವೊ? ಇದು ಸಂಭವಿಸಿದೆ ಮತ್ತು ಜಾರತ್ವ ಯಾ ವ್ಯಭಿಚಾರವನ್ನು ನಡಿಸಿದ್ದಕ್ಕಾಗಿ ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಡುವಂತೆ ಕೆಲವರು ನಡಿಸಲ್ಪಟ್ಟಿರುತ್ತಾರೆ. ಮತ್ತಾಯ 5:27, 28 ರಲ್ಲಿರುವ ಯೇಸುವಿನ ಮಾತುಗಳ ನೋಟದಲ್ಲಿ, ಇಂಥ ಭ್ರಾಂತಿಗಳಲ್ಲಿ ಅವಿರತವಾಗಿ ಲೋಲುಪರಾಗಿರುವವರೆಲ್ಲರೂ ಅವರ ಹೃದಯಗಳಲ್ಲಿ ವ್ಯಭಿಚಾರವನ್ನು ಗೈಯುವ ದೋಷಿಗಳಾಗಿರುತ್ತಾರಲ್ಲವೆ?
9. ಲೌಕಿಕ ಭ್ರಾಂತಿಗಳ ವಿರುದ್ಧವಾಗಿ ನಮ್ಮನ್ನು ಎಚ್ಚರಿಸಲು ಶಾಸ್ತ್ರವಚನಗಳಲ್ಲಿ ಯಾವ ಉತ್ತಮ ಹಿತೋಪದೇಶವು ಅಡಕವಾಗಿರುತ್ತದೆ?
9 ಅಂಥ ಭ್ರಾಂತಿಗಳಲ್ಲಿ ತೊಡಗುವುದರಿಂದ ನಮ್ಮ ಪಾಪಮಯ ಹೃದಯಗಳ ಪ್ರವೃತ್ತಿಯನ್ನು ಪ್ರತಿರೋಧಿಸಲು, ಪೌಲನ ಎಚ್ಚರಿಕೆಯನ್ನು ನಾವು ಮನಸ್ಸಿನಲ್ಲಿಡುವ ಜರೂರಿಯಿದೆ: “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ [ದೇವರ] ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.” (ಇಬ್ರಿಯ 4:13) ನಾವು ಎಲ್ಲಾ ಸಮಯಗಳಲ್ಲಿಯೂ ಮೋಶೆಯಂತೆ ಇರಲು ಬಯಸಬೇಕು, ಅವನು “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿಯ 11:27) ಹೌದು, ಲೌಕಿಕ ಭ್ರಾಂತಿಗಳು ಯೆಹೋವನನ್ನು ಮೆಚ್ಚಿಸುವದಿಲ್ಲ ಮತ್ತು ಸ್ವತಃ ನಮಗೆ ಹಾನಿಕರ ಫಲಿತಾಂಶವನ್ನು ಮಾತ್ರವೆ ತರಸಾಧ್ಯವಿದೆ ಎಂದು ನಮಗೆ ನಾವೇ ಹೇಳಿಕೊಳ್ಳುತ್ತಾ ಇರಬೇಕು. ದೇವರಾತ್ಮದ ಎಲ್ಲಾ ಫಲಗಳನ್ನು ವಿಶೇಷವಾಗಿ ದಮೆಯನ್ನು ಬೆಳೆಸುವ ಕುರಿತು ನಾವು ಚಿಂತಿತರಾಗಿರಬೇಕು ಯಾಕಂದರೆ ಶರೀರಭಾವದಿಂದ ನಾವು ಬಿತ್ತಿದರೆ, ಆ ಭಾವದಿಂದ ಭ್ರಷ್ಟತೆಯನ್ನು ನಾವು ಕೊಯ್ಯಲಿರುವೆವು ಎಂಬ ವಾಸ್ತವತೆಯನ್ನು ನಾವು ತಪ್ಪಿಸಿಕೊಳ್ಳಸಾಧ್ಯವಿಲ್ಲ.—ಗಲಾತ್ಯ 5:22, 23; 6:7, 8.
ರಾಜ್ಯದ ವಾಸ್ತವಿಕತೆಗಳು
10, 11. (ಎ) ನಿರ್ಮಾಣಿಕನ ವಾಸ್ತವಿಕತೆಯ ಪರವಾಗಿ ಯಾವ ನಿಜತ್ವಗಳು ವಾದಿಸುತ್ತವೆ? (ಬಿ) ಬೈಬಲ್ ವಾಸ್ತವದಲ್ಲಿ ದೇವರ ವಾಕ್ಯವಾಗಿದೆ ಎಂಬುದಕ್ಕೆ ಯಾವ ರುಜುವಾತು ಇದೆ? (ಸಿ) ದೇವರ ರಾಜ್ಯದ ರಾಜನ ವಾಸ್ತವತೆಯ ಕುರಿತು ಯಾವ ಪುರಾವೆ ಇದೆ?
10 ಲೌಕಿಕ ಭ್ರಾಂತಿಗಳನ್ನು ನಿರಾಕರಿಸುವ ಅತ್ಯುತ್ತಮ ಮಾರ್ಗವು ರಾಜ್ಯ ವಾಸ್ತವಿಕತೆಗಳ ಬೆನ್ನಟ್ಟುವಿಕೆಯನ್ನು ಮುಂದರಿಸುವದಾಗಿದೆ. ರಾಜ್ಯ ವಾಸ್ತವಿಕತೆಗಳು ದೇವರಿಂದ ಉತ್ಪಾದಿಸಲ್ಪಟ್ಟು, ಲೌಕಿಕ ಭ್ರಾಂತಿಗಳಿಗೆ ಮನತಟ್ಟುವ ವೈದೃಶ್ಯವಾಗಿ ನಿಲ್ಲುತ್ತವೆ. ದೇವರು ಒಂದು ವಾಸ್ತವಿಕತೆಯೆ? ಅವನ ಅಸ್ತಿತ್ವದ ಕುರಿತು ಅಲ್ಲಿ ಯಾವುದೇ ಪ್ರಶ್ನೆ ಇರುವುದಿಲ್ಲ. ದೃಶ್ಯಗೋಚರ ಸೃಷ್ಟಿಯು ಆ ವಾಸ್ತವಾಂಶವನ್ನು ರುಜುಪಡಿಸುತ್ತದೆ. (ರೋಮಾಪುರ 1:20) ವಾಚ್ ಟವರ್ ಸೊಸೈಟಿಯಿಂದ ಸುಮಾರು ನೂರು ವರ್ಷಗಳ ಹಿಂದೆ ಪ್ರಕಾಶಿಸಲ್ಪಟ್ಟ ದ ಡಿವೈನ್ ಪ್ಲಾನ್ ಆಫ್ ದಿ ಏಜೆಸ್ ಪುಸ್ತಕದಲ್ಲಿ ಹೇಳಿರುವಂಥದ್ದು ನಮ್ಮ ನೆನಪಿಗೆ ತರಲ್ಪಡುತ್ತದೆ. ಅದು ಹೇಳಿದ್ದು: “ದೂರದರ್ಶಕವೊಂದರಿಂದ ಯಾ ತನ್ನ ಸ್ವಾಭಾವಿಕ ಕಣ್ಣುಗಳಿಂದಲೂ ಕೂಡ ಗಗನವನ್ನು ನೋಡಶಕ್ತನಾಗುವವನೊಬ್ಬನು, ಸೃಷ್ಟಿಯ ಅಪಾರತೆ, ಅದರ ಸಮಸೂತ್ರತೆ, ಸೌಂದರ್ಯ, ಕ್ರಮ, ಸಾಮರಸ್ಯ ಮತ್ತು ವಿವಿಧತೆಯು ಅಲ್ಲಿರುವದನ್ನು ನೋಡಿದರೂ ಇವುಗಳ ಸೃಷ್ಟಿಕರ್ತನು ವಿವೇಕ ಮತ್ತು ಶಕ್ತಿ ಎರಡರಲ್ಲಿಯೂ ಅವನಿಗಿಂತ ಬಹಳವಾಗಿ ಶ್ರೇಷ್ಠನು ಎಂಬದನ್ನು ಸಂದೇಹಿಸುವುದಾದರೆ, ಇಲ್ಲವೆ ನಿರ್ಮಾಣಿಕನೊಬ್ಬನು ಇಲ್ಲದೆ, ಅಕಸ್ಮಾತ್ ಘಟನೆಯಿಂದ ಅಂತಹ ಕ್ರಮವು ಬಂದಿದೆ ಎಂದು ಒಂದು ಕ್ಷಣ ಭಾವಿಸುವವನಾದರೆ, ಅಂಥವನು ಇಷ್ಟರಲ್ಲಿಯೆ ವಿವೇಚನಾ ಶಕ್ತಿಯನ್ನು ಕಳಗೊಂಡಿರುತ್ತಾನೆ ಯಾ ಅಲಕ್ಷ್ಯಿಸಿರುತ್ತಾನೆ, ಆದುದರಿಂದ ಬೈಬಲ್ ಅವನನ್ನು ದುರ್ಮತಿ (ಹುಚ್ಚನು, NW, ವಿವೇಚನೆಯನ್ನು ಅಲಕ್ಷ್ಯಿಸುವವನು ಯಾ ಅದರ ನ್ಯೂನತೆಯುಳ್ಳವನು) ಎಂದು ಯೋಗ್ಯವಾಗಿ ಪರಿಗಣಿಸಿದೆ.”—ಕೀರ್ತನೆ 14:1.
11 ಪವಿತ್ರ ಬೈಬಲಿನಲ್ಲಿ ರಾಜ್ಯದ ಕುರಿತಾಗಿ ಎಲ್ಲವನ್ನು ನಾವು ಕಲಿಯುತ್ತೇವೆ. ಬೈಬಲ್ ವಾಸ್ತವವಾಗಿ ದೇವರ ಲಿಖಿತ ವಾಕ್ಯವೋ? ಅದರ ಸಾಮರಸ್ಯ, ವೈಜ್ಞಾನಿಕ ನಿಖರತೆ, ಮತ್ತು ಮನುಷ್ಯರ ಜೀವಿತಗಳನ್ನು ಪರಿವರ್ತಿಸಲು ಅದಕ್ಕಿರುವ ಶಕ್ತಿ ಮತ್ತು ವಿಶೇಷವಾದ ಅದರ ಪ್ರವಾದನೆಗಳ ನೆರವೇರಿಕೆ, ಇವುಗಳ ಮೂಲಕ ನೋಡಲಾಗುವಂತೆ ಅದು ಖಂಡಿತವಾಗಿಯೂ ದೇವರ ವಾಕ್ಯವೇ.a ದೇವರ ರಾಜ್ಯದ ರಾಜನಾದ ಯೇಸು ಕ್ರಿಸ್ತನ ಕುರಿತಾಗಿ ಏನು? ಅವನು ನಿಜವಾಗಿಯೂ ಅಸ್ತಿತ್ವದಲ್ಲಿದ್ದನೋ? ಸುವಾರ್ತೆಯ ದಾಖಲೆಗಳು ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥಗಳ ದೇವ ಪ್ರೇರಿತ ಪತ್ರಗಳು ನಿಸ್ಸಂದಿಗ್ಧವಾಗಿ ಮತ್ತು ವಾಗ್ವೈಖರಿಯಾಗಿ ಯೇಸು ಕ್ರಿಸ್ತನ ಐತಿಹಾಸಿಕತೆಯ ರುಜುವಾತುಗಳನ್ನೀಯುತ್ತವೆ. ಯೇಸುವಿನ ಐತಿಹಾಸಿಕತೆಯ ಕುರಿತಾಗಿ ಯೆಹೂದ್ಯರ ತಾಲ್ಮುದ್ನಲ್ಲಿ ಕೂಡ ಸಾಕ್ಷ್ಯಗಳು ಇದ್ದು, ಅವನನ್ನು ಒಬ್ಬ ವ್ಯಕ್ತಿಯಾಗಿ ಸೂಚಿಸಿವೆ. ಅದರಂತೆ ಸಾ.ಶ. ಮೊದಲನೆಯ ಶತಕದ ಯೆಹೂದಿ ಮತ್ತು ರೋಮನ್ ಇತಿಹಾಸಗಾರರು ಹಾಗೆಯೇ ಮಾಡಿದ್ದಾರೆ.
12, 13. ದೇವರ ರಾಜ್ಯದ ವಾಸ್ತವಿಕತೆಗೆ ಯಾವ ನಿಜಾಂಶಗಳು ಸಾಕ್ಷ್ಯವನ್ನೀಯುತ್ತವೆ?
12 ಸ್ವತಃ ರಾಜ್ಯದ ವಾಸ್ತವಿಕತೆಯ ಕುರಿತಾಗಿ ಏನು? ಕ್ರೈಸ್ತ ಪ್ರಪಂಚದಿಂದ ಅಧಿಕವಾಗಿ ಇದು ಅಲಕ್ಷಿಸಲ್ಪಟ್ಟಿದೆ, ಇದು ಒಬ್ಬ ಪ್ರಖ್ಯಾತ ಪ್ರೆಸ್ಬಿಟರಿಯೆನ್ನಿಂದ ಕೊಡಲ್ಪಟ್ಟ ಈ ದೂರಿನಿಂದ ತೋರಿಸಲ್ಪಟ್ಟಿದೆ: “ಅವರಿಗಾಗಿ ರಾಜ್ಯದ ವಾಸ್ತವಿಕತೆಯ ಕುರಿತು ಜನರಿಗೆ ವಿವರಿಸಲು ವೈದಿಕನೊಬ್ಬನು ಪ್ರಯತ್ನಿಸಿದ್ದನ್ನು ನಾನು ಕೇಳಿ ಖಂಡಿತವಾಗಿಯೂ ಮೂವತ್ತಕ್ಕಿಂತಲೂ ಹೆಚ್ಚು ವರ್ಷಗಳು ದಾಟಿರಬೇಕು.” ಆದರೂ, ದೇವರ ವಾಕ್ಯದ ಮುಖ್ಯ ಬೋಧೆಯು ರಾಜ್ಯದ ಮೂಲಕ ಯೆಹೋವನ ನಾಮವನ್ನು ಪವಿತ್ರೀಕರಿಸುವದೇ ಆಗಿದೆ. ಸ್ವತಃ ದೇವರು ಮೊದಲಾಗಿ ರಾಜ್ಯದ ವಾಗ್ದಾನವನ್ನು, ಹೀಗೆ ಹೇಳುವದರ ಮೂಲಕ ಮಾಡಿದನು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಇಸ್ರಾಯೇಲ್ಯ ಜನಾಂಗದಿಂದ, ವಿಶೇಷವಾಗಿ ರಾಜ ಸೊಲೊಮೋನನ ಆಳಿಕ್ವೆಯಲ್ಲಿ ರಾಜ್ಯವು ಮುನ್ಚಿತ್ರಿಸಲ್ಪಟ್ಟಿತು. (ಕೀರ್ತನೆ 72) ಇನ್ನೂ ಹೆಚ್ಚಾಗಿ, ಯೇಸುವಿನ ಸಾರುವಿಕೆಯ ಮುಖ್ಯವಿಷಯ ರಾಜ್ಯವಾಗಿತ್ತು. (ಮತ್ತಾಯ 4:17) ಮತ್ತಾಯ 13 ನೆಯ ಅಧ್ಯಾಯದಲ್ಲಿರುವಂತೆ, ಅವನು ತನ್ನ ಅನೇಕ ಉದಾಹರಣೆಗಳಲ್ಲಿ ಅದನ್ನು ಮುಖ್ಯ ನೋಟವಾಗಿ ತೋರಿಸಿದನು. ರಾಜ್ಯಕ್ಕಾಗಿ ಪ್ರಾರ್ಥಿಸುವಂತೆ ಮತ್ತು ಅದನ್ನು ಮೊದಲಾಗಿ ಹುಡುಕುವಂತೆ ಯೇಸುವು ನಮಗೆ ಹೇಳಿದ್ದಾನೆ. (ಮತ್ತಾಯ 6:9, 10, 33) ವಾಸ್ತವತೆಯಲ್ಲಿ, ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ದೇವರ ರಾಜ್ಯವು 150 ಬಾರಿಯಷ್ಟು ಉಲ್ಲೇಖಿಸಲ್ಪಟ್ಟಿದೆ.
13 ರಾಜ್ಯವು ಎಲ್ಲಾ ಶಕ್ತಿ ಮತ್ತು ಅಧಿಕಾರದಿಂದ ಕೂಡಿದ ಒಂದು ನೈಜ ಸರಕಾರವಾಗಿದೆ, ಮತ್ತು ಯೋಗ್ಯವಾದ ಎಲ್ಲಾ ನಿರೀಕ್ಷೆಗಳನ್ನು ಅದು ಪೂರೈಸಲಿರುವದು. ಅದಕ್ಕೆ ಬೈಬಲಿನಲ್ಲಿ ಕಂಡುಕೊಳ್ಳಬಹುದಾದ ಕಾನೂನುಗಳು ಇವೆ. ರಾಜ್ಯವು ಈಗಾಗಲೇ ಅನೇಕ ವಿಷಯಗಳನ್ನು ವಾಸ್ತವಿಕತೆಗೆ ತಂದಿರುತ್ತದೆ. ಅದಕ್ಕೆ ನಿಷ್ಠತೆಯುಳ್ಳ ಪ್ರಜೆಗಳಿದ್ದಾರೆ—40,00,000 ಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳು. ಮತ್ತಾಯ 24:14 ರ ನೆರವೇರಿಕೆಯಲ್ಲಿ, 211 ದೇಶಗಳಲ್ಲಿ ಅವರು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದಾರೆ. ಅವರ 1991 ನೆಯ ಸೇವಾವರ್ಷದಲ್ಲಿ ಅವರು 95,18,70,021 ತಾಸುಗಳನ್ನು ರಾಜ್ಯದ ಸಂದೇಶವನ್ನು ಸಾರಲು ವಿನಿಯೋಗಿಸಿದರು. ಜನಸ್ತೋಮದವರು ಬೈಬಲಿನ ಸತ್ಯದ “ಶುದ್ಧ ಭಾಷೆ”ಯನ್ನು ಕಲಿಯುತ್ತಿರುವಾಗ, ಈ ಚಟುವಟಿಕೆಯು ದೃಶ್ಯಗೋಚರವಾಗುವ, ಬಾಳುವ ಫಲಿತಾಂಶಗಳನ್ನು ಉತ್ಪಾದಿಸುತ್ತದೆ.—ಚೆಫನ್ಯ 3:9.
ರಾಜ್ಯ ವಾಸ್ತವಿಕತೆಗಳನ್ನು ಬೆನ್ನಟ್ಟುವದು
14. ರಾಜ್ಯದ ವಾಸ್ತವಿಕತೆಗಾಗಿ ನಮ್ಮ ಗಣ್ಯತೆಯನ್ನು ನಾವು ಹೇಗೆ ಬಲಪಡಿಸಬಹುದು?
14 ಹಾಗಾದರೆ, ರಾಜ್ಯದ ವಾಸ್ತವಿಕತೆಗಳನ್ನು ನಾವು ಹೇಗೆ ಬೆನ್ನಟ್ಟಬಹುದು? ನಮ್ಮ ನಿರೀಕ್ಷೆಯು ಬಲವಾದ ಮನವರಿಕೆಗಳ ಮೇಲೆ ಭದ್ರವಾಗಿ ತಳವೂರಿರಬೇಕು. ದೇವರ ವಾಗ್ದಾನಿತ ಹೊಸ ಲೋಕವು ನಮಗೆ ನೈಜವಾಗಿರಬೇಕು. (2 ಪೇತ್ರ 3:13) ಮತ್ತು ನಮಗೆ ಈ ವಾಗ್ದಾನದ ಮೇಲೆ ವಿಶ್ವಾಸವಿರಬೇಕು ಏನಂದರೆ ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” (ಪ್ರಕಟನೆ 21:4) ಇದೊಂದು ಭ್ರಾಂತಿಯಲ್ಲವೆಂದು ನಾವು ಹೇಗೆ ನಿಶ್ಚಯದಿಂದಿರಬಲ್ಲೆವು? ದೇವರ ಕ್ಲುಪ್ತ ಸಮಯದಲ್ಲಿ ಅದು ನೆರವೇರಲು ಬದ್ಧತೆಯುಳ್ಳದ್ದಾಗಿದೆ ಯಾಕಂದರೆ ಅವನಿಗೆ ಸುಳ್ಳಾಡಲು ಅಸಾಧ್ಯವಾಗಿದೆ. (ತೀತ 1:1, 2; ಇಬ್ರಿಯ 6:18) ಈ ವಾಗ್ದಾನಗಳ ಮೇಲೆ ನಾವು ಧ್ಯಾನಿಸುವುದರ ಆವಶ್ಯಕತೆಯಿದೆ. ದೇವರ ನೂತನ ಲೋಕದಲ್ಲಿ ನಮ್ಮನ್ನು ಚಿತ್ರಿಸಿಕೊಳ್ಳುವದು ಮತ್ತು ಅದರ ಆಶೀರ್ವಾದಗಳಲ್ಲಿ ಆನಂದಿಸುವದು ಒಂದು ಅವಾಸ್ತವಿಕತೆಯ ಭ್ರಾಂತಿಯಲ್ಲ, ಬದಲು ನಂಬಿಕೆಯ ಪುರಾವೆಯನ್ನು ಕೊಡುತ್ತದೆ. ಪೌಲನು ಅದನ್ನು ಹೀಗೆಂದು ಅರ್ಥವಿವರಿಸಿದ್ದಾನೆ, “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯಗಳನ್ನು ನಿಜವೆಂದು ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.” (ಇಬ್ರಿಯ 11:1) ದೇವರ ವಾಕ್ಯ ಮತ್ತು ಅದನ್ನು ತಿಳಿದುಕೊಳ್ಳಲು ಮತ್ತು ಅನ್ವಯಿಸಲು ನಮಗೆ ಸಹಾಯ ಮಾಡುವ ಕ್ರೈಸ್ತ ಸಾಹಿತ್ಯಗಳ ಮೂಲಕ ಕ್ರಮವಾಗಿ ನಮ್ಮನ್ನು ಉಣ್ಣಿಸಿಕೊಳ್ಳುವುದರ ಮೂಲಕ ನಮ್ಮ ನಂಬಿಕೆಯನ್ನು ದೃಢಪಡಿಸೋಣ. ಮತ್ತು ವಿಧಿವತ್ತಾಗಿ ಯಾ ಅವಿಧಿಯಾಗಿ, ರಾಜ್ಯದ ಕುರಿತಾಗಿ ಇತರರಿಗೆ ತಿಳಿಸಲು ಎಷ್ಟು ಹೆಚ್ಚು ಸಮಯವನ್ನು ವಿನಿಯೋಗಿಸುತ್ತೇವೊ ಅಷ್ಟೇ ಹೆಚ್ಚು ನಮ್ಮ ನಂಬಿಕೆಯನ್ನು ನಾವು ಬಲಗೊಳಿಸುತ್ತೇವೆ ಮತ್ತು ಅದರಲ್ಲಿ ನಮ್ಮ ನಿರೀಕ್ಷೆಯನ್ನು ಉಜ್ವಲಗೊಳಿಸುತ್ತೇವೆ.
15. ಕ್ರೈಸ್ತ ಶುಶ್ರೂಷೆಯ ಕುರಿತಾಗಿ ನಮಗೆ ಯಾವ ಹಂಗು ಇದೆ?
15 ನಮ್ಮ ಶುಶ್ರೂಷೆಯ ಗುಣಮಟ್ಟವನ್ನು ಪ್ರಗತಿಗೊಳಿಸುವದರ ಮೂಲಕ ರಾಜ್ಯ ವಾಸ್ತವಿಕತೆಗಳೊಂದಿಗೆ ಹೊಂದಿಕೆಯಲ್ಲಿ ಕಾರ್ಯವೆಸಗುವ ಅಗತ್ಯ ನಮಗಿದೆ. ಮಾಡಲು ಇನ್ನಷ್ಟು ಹೆಚ್ಚು ಇರುವದರಿಂದ, ಇದನ್ನು ನಾವು ಹೇಗೆ ಮಾಡಬಲ್ಲೆವು? (ಮತ್ತಾಯ 9:37, 38) ಕಲಿಯಲು ಒಬ್ಬನು ತೀರಾ ವೃದ್ಧನಲ್ಲ ಎಂಬ ಹೇಳಿಕೆಯು ಸತ್ಯ. ಸಾಕ್ಷಿ ಕಾರ್ಯದಲ್ಲಿ ಎಷ್ಟೇ ವರ್ಷಗಳಿಂದ ನಾವು ಪಾಲಿಗರಾಗುತ್ತಿರಲಿ, ನಾವು ಪ್ರಗತಿಮಾಡ ಸಾಧ್ಯವಿದೆ. ದೇವರ ವಾಕ್ಯವನ್ನು ಬೋಧಿಸುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗುವುದರ ಮೂಲಕ, ಅರಸನಾದ ಯೇಸು ಕ್ರಿಸ್ತನ ಸರ್ವವನ್ನು ಆಲಿಸಲು ಇತರರಿಗೆ ನೆರವಾಗಲು ನಾವು ಹೆಚ್ಚು ಸಾಮರ್ಥ್ಯವುಳ್ಳವರಾಗುತ್ತೇವೆ. (ಯೋಹಾನ 10:16 ಹೋಲಿಸಿರಿ.) ಜನರ ನಿತ್ಯ ಪರ್ಯವಸಾನಗಳು ಒಳಗೂಡಿರುವುದನ್ನು ನಾವು ಪರಿಗಣಿಸುವಾಗ, “ಕುರಿ” ಗಳೋ ಯಾ “ಆಡು” ಗಳೋ ಎಂಬ ಅವರ ನಿಲುವನ್ನು ಪ್ರದರ್ಶಿಸಲು ಅವರಿಗೆ ಪದೇ ಪದೇ ಅವಕಾಶಗಳನ್ನು ಕೊಡಲಾಗುವಂತೆ, ನಮ್ಮ ಟೆರಿಟೊರಿಯನ್ನು ಸಮಗ್ರವಾಗಿ ಆವರಿಸಲು ನಾವು ಬಯಸತಕ್ಕದ್ದು. (ಮತ್ತಾಯ 25:31-46) ಸಹಜವಾಗಿ, ಮನೆಯಲ್ಲಿ ಇಲ್ಲದವರ ಮತ್ತು ವಿಶೇಷವಾಗಿ ರಾಜ್ಯ ಸಂದೇಶಕ್ಕೆ ಆಸಕ್ತಿಯನ್ನು ತೋರಿಸಿದವರ ಜಾಗ್ರತೆಯ ದಾಖಲೆಗಳನ್ನು ಇಡಬೇಕೆಂದು ಇದರ ಅರ್ಥವಾಗಿದೆ.
ರಾಜ್ಯವನ್ನು ಬೆನ್ನಟ್ಟುತ್ತಾ ಇರ್ರಿ
16. ರಾಜ್ಯ ವಾಸ್ತವಿಕತೆಗಳನ್ನು ಬೆನ್ನಟ್ಟುವುದರಲ್ಲಿ ಯಾರು ಉತ್ತಮ ಉದಾಹರಣೆಯನ್ನು ಇಟ್ಟಿದ್ದಾರೆ, ಮತ್ತು ಅವರು “ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳುದು” ಹೇಗೆ?
16 ರಾಜ್ಯದ ವಾಸ್ತವಿಕತೆಗಳನ್ನು ಬೆನ್ನಟ್ಟುತ್ತಾ ಇರಬೇಕಾದರೆ ಶ್ರದ್ಧೆಯ ಪ್ರಯತ್ನ ಆವಶ್ಯಕವಾಗಿದೆ. ಉಳಿದಿರುವ ಅಭಿಷಿಕ್ತ ಕ್ರೈಸ್ತರ ಉತ್ಸುಕತೆಯ ಮಾದರಿಗಳಿಂದ ನಾವು ಹುರಿದುಂಬಿಸಲ್ಪಡುವದಿಲ್ಲವೆ? ದಶಕಗಳಿಂದ ಅವರು ರಾಜ್ಯ ವಾಸ್ತವಿಕತೆಗಳನ್ನು ಬೆನ್ನಟ್ಟುತ್ತಾ ಇದ್ದಾರೆ. ಯೇಸುವಿನ ಮಾತುಗಳಲ್ಲಿ ಈ ಬೆನ್ನಟ್ಟುವಿಕೆಯು ವರ್ಣಿಸಲ್ಪಟ್ಟಿದೆ: “ಇದಲ್ಲದೆ ಸ್ನಾನಿಕನಾದ ಯೋಹಾನನ ಕಾಲದಿಂದ ಈ ವರೆಗೂ ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿರುತ್ತದೆ; ಬಲಾತ್ಕಾರಿಗಳು (ಮುಂದೊತ್ತುವವರು, NW ) ನುಗ್ಗಿ ಅದನ್ನು ಸ್ವಾಧೀನಮಾಡಿಕೊಳ್ಳುತ್ತಾರೆ.” (ಮತ್ತಾಯ 11:12) ಶತ್ರುಗಳು ರಾಜ್ಯವನ್ನು ಸ್ವಾಧೀನಮಾಡಿಕೊಳ್ಳುವರು ಎಂದು ಇದರ ಯೋಚನೆಯಲ್ಲ. ಬದಲಾಗಿ, ರಾಜ್ಯದ ಸಾಲಿನಲ್ಲಿರುವವರ ಕಾರ್ಯಚಟುವಟಿಕೆಗೆ ಇದು ಸಂಬಂಧಿಸಿದೆ. ಒಬ್ಬ ಬೈಬಲ್ ವಿದ್ವಾಂಸನು ಅಂದದ್ದು: “ಸಮೀಪಿಸುತ್ತಿರುವ ಮೇಸ್ಸೀಯತ್ವದ ರಾಜ್ಯದ ಹಿಂದೆ, ಈ ರೀತಿಯ ಅತ್ಯಾಸಕ್ತಿಯ, ತಡೆಯಲಾಗದ ಹೆಣಗುವಿಕೆ ಮತ್ತು ಹೋರಾಟವನ್ನು ವರ್ಣಿಸಲಾಗಿದೆ.” ಅಭಿಷಿಕ್ತರು ರಾಜ್ಯವನ್ನು ತಮ್ಮ ಸ್ವಂತದ್ದಾಗಿ ಮಾಡುವುದರಲ್ಲಿ ಯಾವುದೇ ಪ್ರಯತ್ನವನ್ನು ಮಾಡದೆ ಬಿಡಲಿಲ್ಲ. ದೇವರ ಸ್ವರ್ಗೀಯ ರಾಜ್ಯದ ಐಹಿಕ ಪ್ರಜೆಗಳಾಗುವಂತೆ ಅರ್ಹರಾಗಲು “ಬೇರೆ ಕುರಿಗಳಿಂದ” ತದ್ರೀತಿಯ ಶ್ರಮಭರಿತ ಪ್ರಯತ್ನಗಳು ಅಪೇಕ್ಷಿಸಲ್ಪಟ್ಟಿವೆ.—ಯೋಹಾನ 10:16.
17. ಲೌಕಿಕ ಭ್ರಾಂತಿಗಳನ್ನು ಬೆನ್ನಟ್ಟುವವರ ಗತಿ ಏನಾಗಲಿರುವದು?
17 ನಿಜವಾಗಿಯೂ, ಸದವಕಾಶದ ವಿಶೇಷ ಸಮಯಾವಧಿಯೊಂದರಲ್ಲಿ ನಾವು ಜೀವಿಸುತ್ತಾ ಇದ್ದೇವೆ. ಲೌಕಿಕ ಭ್ರಾಂತಿಗಳನ್ನು ಬೆನ್ನಟ್ಟುವವರು ಒಂದು ದಿನ ಪಕ್ಕಾ ವಾಸ್ತವಿಕತೆಗೆ ಎಚ್ಚರಿಸಲ್ಪಡುವರು. ಅವರ ಗತಿಯು ಈ ಮಾತುಗಳಲ್ಲಿ ಚಲೋದಾಗಿ ವರ್ಣಿಸಲ್ಪಟ್ಟಿದೆ: “ಹಸಿದವನು ಕನಸು ಕಂಡು ಆಹಾ, ಉಣ್ಣುತ್ತೇನೆ ಎಂದುಕೊಂಡಂತಾಗುವದು; ಎಚ್ಚತ್ತಾಗ ಅವನ ಹೊಟ್ಟೆ ಬರಿದೇ. ಬಾಯಾರಿದವನು ಸ್ವಪ್ನದಲ್ಲಿ ಇಗೋ ಕುಡಿಯುತ್ತೇನೆ ಎಂದುಕೊಂಡ ಹಾಗೂ ಆಗುವದು; ನಿದ್ರೆತಿಳಿದಾಗ ಬಳಲಿ ನೀರನ್ನು ಬಯಸುವನು.” (ಯೆಶಾಯ 29:8) ಖಂಡಿತವಾಗಿಯೂ, ಲೋಕದ ಭ್ರಾಂತಿಗಳು ಯಾರೊಬ್ಬನಿಗೂ ಎಂದೂ ತೃಪ್ತಿ ಮತ್ತು ಸಂತೋಷವನ್ನುಂಟು ಮಾಡಶಕ್ಯವಲ್ಲ.
18. ರಾಜ್ಯದ ವಾಸ್ತವಿಕತೆಯ ನೋಟದಲ್ಲಿ, ಯಾವ ಮಾರ್ಗವನ್ನು ನಾವು ಬೆನ್ನಟ್ಟಬೇಕು, ಯಾವ ಪ್ರತೀಕ್ಷೆಯ ವೀಕ್ಷಣದೊಂದಿಗೆ?
18 ಯೆಹೋವನ ರಾಜ್ಯವು ಒಂದು ವಾಸ್ತವಿಕತೆಯಾಗಿದೆ. ಅದು ಕ್ರಿಯಾತ್ಮಕವಾಗಿ ಆಳುತ್ತಾ ಇದೆ, ಆದರೆ ಈ ದುಷ್ಟ ವಿಷಯಗಳ ವ್ಯವಸ್ಥೆಯ ತಪ್ಪಿಸಲಾಗದ, ಶಾಶ್ವತ ನಾಶನವನ್ನು ಎದುರಿಸುತ್ತಾ ಇದೆ. ಆದಕಾರಣ, ಪೌಲನ ಹಿತೋಪದೇಶವನ್ನು ಹೃದಯಕ್ಕೆ ತಕ್ಕೊಳ್ಳಿರಿ: “ಆದಕಾರಣ ನಾವು ಇತರರಂತೆ ನಿದ್ದೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.” (1 ಥೆಸಲೊನೀಕ 5:6) ರಾಜ್ಯ ವಾಸ್ತವಿಕತೆಗಳ ಮೇಲೆ ನಮ್ಮ ಹೃದಯ ಮತ್ತು ಮನಸ್ಸುಗಳನ್ನು ನಾವು ಕೇಂದ್ರಿಸಿಕೊಂಡು, ಈ ರೀತಿಯಲ್ಲಿ ಶಾಶ್ವತ ಆಶೀರ್ವಾದಗಳಲ್ಲಿ ಆನಂದಿಸೋಣ. ಮತ್ತು ಆ ರಾಜ್ಯದ ಅರಸನು ನಮಗೆ ಹೀಗೆ ಹೇಳುವದನ್ನು ಕೇಳುವ ಭಾಗ್ಯ ನಮ್ಮದಾಗಿರಲಿ: “ನನ್ನ ತಂದೆಯ ಆಶೀರ್ವಾದಗಳನ್ನು ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದು ಕೊಳ್ಳಿರಿ.”—ಮತ್ತಾಯ 25:34.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಪ್ರಕಾಶಿತ ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಪುಸ್ತಕವನ್ನು ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
▫ ಲೌಕಿಕ ಭ್ರಾಂತಿಗಳು ಅಂದರೇನು, ಮತ್ತು ಅವುಗಳನ್ನು ನಾವು ಯಾಕೆ ನಿರಾಕರಿಸಬೇಕು?
▫ ಲೌಕಿಕ ಭ್ರಾಂತಿಗಳಲ್ಲಿ ಲೋಲುಪರಾಗುವುದರ ಮೂರ್ಖತನವನ್ನು ಯಾವ ಉದಾಹರಣೆಗಳು ತೋರಿಸುತ್ತವೆ?
▫ ಸೃಷ್ಟಿಕರ್ತನ, ಅವನ ಲಿಖಿತ ವಾಕ್ಯದ, ಯೇಸು ಕ್ರಿಸ್ತನ, ಮತ್ತು ರಾಜ್ಯದ ವಾಸ್ತವಿಕತೆಯನ್ನು ಯಾವ ನಿಜಾಂಶಗಳು ರುಜುಪಡಿಸುತ್ತವೆ?
▫ ರಾಜ್ಯ ವಾಸ್ತವಿಕತೆಗಳಲ್ಲಿ ನಮ್ಮ ನಂಬಿಕೆಯನ್ನು ನಾವು ಹೇಗೆ ಬಲಗೊಳಿಸಬಹುದು?
[ಪುಟ 15 ರಲ್ಲಿರುವ ಚಿತ್ರ]
ಲೌಕಿಕ ಭ್ರಾಂತಿಗಳು ಹೆಚ್ಚಾಗಿ ಪ್ರಾಪಂಚಿಕ ಸಂಪತ್ತಿನ ಹಂಬಲಿಸುವಿಕೆಯಿಂದ ಉಂಟಾಗುತ್ತವೆ
[ಪುಟ 16 ರಲ್ಲಿರುವ ಚಿತ್ರ]
ರಾಜ್ಯ ವಾಸ್ತವಿಕತೆಗಳನ್ನು ಬೆನ್ನಟ್ಟುವ ಒಂದು ವಿಧ ಸುವಾರ್ತೆಯನ್ನು ಸಾರುವುದು
[ಪುಟ 17 ರಲ್ಲಿರುವ ಚಿತ್ರ]
ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಭ್ಯಾಸಿಸುವುದರ ಮೂಲಕ ರಾಜ್ಯ ವಾಸ್ತವಿಕತೆಗಳನ್ನು ನೀವು ಬೆನ್ನಟ್ಟುತ್ತೀರೊ?