ಆಫ್ರಿಕನ್ ಬೈಬಲ್ ಭಾಷಾಂತರಗಳು
ಆಫ್ರಿಕದ ಭಾಷೆಗೆ ಮಾಡಲ್ಪಟ್ಟ ಇಡೀ ಬೈಬಲಿನ ಅತಿ ಆದಿಯ ಭಾಷಾಂತರಗಳು ಈಜಿಪ್ಟಿನಲ್ಲಿ ಮಾಡಲ್ಪಟ್ಟವು. ಕಾಪ್ಟಿಕ್ ವರ್ಷನ್ಸ್ ಎಂದು ಕರೆಯಲಾದ ಇವು, ಸಾ.ಶ. ಮೂರು ಯಾ ನಾಲ್ಕನೆಯ ಶತಮಾನದಲ್ಲಿ ಮಾಡಲ್ಪಟ್ಟವೆಂದು ಅಭಿಪ್ರಯಿಸಲಾಗುತ್ತದೆ. ಸುಮಾರು ಮೂರು ಶತಮಾನಗಳ ಬಳಿಕ ಬೈಬಲನ್ನು ಇಥಿಯೋಪಿಕ್ ಭಾಷೆಗೆ ಅನುವಾದಿಸಲಾಯಿತು.
ಇಥಿಯೋಪಿಯ ಮತ್ತು ಸಹಾರದ ದಕ್ಷಿಣ ಭಾಗದಲ್ಲಿ ಮಾತಾಡಲಾಗುವ ನೂರಾರು ಅಲಿಖಿತ ಭಾಷೆಗಳು ಹತ್ತೊಂಬತ್ತನೆಯ ಶತಮಾನದಲ್ಲಿ ಮಿಷನೆರಿಗಳು ಬರುವ ತನಕ ಕಾಯಬೇಕಾಯಿತು. ರಾಬರ್ಟ್ ಮೇಫಟ್, 1857 ರಲ್ಲಿ ಆಫ್ರಿಕದ ದಕ್ಷಿಣ ಭಾಗದ ಭಾಷೆಯಾದ ಟ್ವ್ಸಾನದಲ್ಲಿ ಒಂದು ಭಾಷಾಂತರವನ್ನು ಮುಗಿಸಿದಾಗ ಒಂದು ಗಮನಾರ್ಹ ಗುರಿಯನ್ನು ಮುಟ್ಟಿದಂತಾಯಿತು. ಅವನು ಅದರ ಭಾಗಗಳನ್ನು ಕೈಮುದ್ರಣ ಯಂತ್ರದಲ್ಲಿಯೂ ಮುದ್ರಿಸಿದನು. ಇದು ಆಫ್ರಿಕದಲ್ಲಿ ಮುದ್ರಿಸಲ್ಪಟ್ಟ ಪ್ರಥಮ ಪೂರ್ತಿ ಬೈಬಲಾಗಿದ್ದುದು ಮಾತ್ರವಲ್ಲ ಈ ಮೊದಲು ಅಲಿಖಿತವಾಗಿದ್ದ ಆಫ್ರಿಕನ್ ಭಾಷೆಯಲ್ಲಿ ಪ್ರಥಮ ಪೂರ್ತಿ ಭಾಷಾಂತರವಾಗಿತ್ತು. ಸ್ವಾರಸ್ಯಕರವಾಗಿ, ಮೇಫಟ್ ತನ್ನ ಭಾಷಾಂತರದಲ್ಲಿ ಯೆಹೋವ ಎಂಬ ದೈವಿಕ ಹೆಸರನ್ನು ಉಪಯೋಗಿಸಿದನು. ಬ್ರಿಟಿಷ್ ಆ್ಯಂಡ್ ಫಾರಿನ್ ಬೈಬಲ್ ಸೊಸೈಟಿ ಪ್ರಕಟಿಸಿದ 1872 ರ ಭಾಷಾಂತರದಲ್ಲಿ, ಯೆಹೋವ ಎಂಬ ಹೆಸರು, ಮತ್ತಾಯ 4:10 ಮತ್ತು ಮಾರ್ಕ 12:29, 30 ರಲ್ಲಿ ಯೇಸುವಿನ ಮುಖ್ಯ ಹೇಳಿಕೆಗಳಲ್ಲಿ ಉಪಯೋಗಿಸಲ್ಪಟ್ಟಿದೆ.
ಇಡೀ ಬೈಬಲನ್ನು, 1990 ರೊಳಗೆ, 119 ಆಫ್ರಿಕನ್ ಭಾಷೆಗಳಿಗೆ ಭಾಷಾಂತರಿಸಲಾಗಿತ್ತು. ಅದರ ಭಾಗಗಳು ಇನ್ನು 434 ಭಾಷೆಗಳಲ್ಲಿ ದೊರೆಯುತ್ತಿದ್ದವು.