ಕ್ರೈಸ್ತ ಮಿಷನೆರಿ ಕೆಲಸದ ಒಂದು ಪ್ರೇರಿತ ಮಾದರಿ
“ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.”—1 ಕೊರಿಂಥ 11:1.
1. ತನ್ನ ಹಿಂಬಾಲಕರು ಅನುಕರಿಸುವಂತೆ ಯೇಸು ಇಟ್ಟ ಎದ್ದುಕಾಣುವ ಮಾದರಿಯಲ್ಲಿ ಕೆಲವು ವಿಧಗಳಾವುವು? (ಫಿಲಿಪ್ಪಿ 2:5-9)
ಯೇಸು ತನ್ನ ಶಿಷ್ಯರಿಗೆ ಎಂಥ ಎದ್ದು ಕಾಣುವ ಮಾದರಿಯನ್ನಿಟ್ಟನು! ಅವನು ಭೂಮಿಗೆ ಬಂದು ಪಾಪಿಗಳಾದ ಮಾನವರೊಂದಿಗೆ ಜೀವಿಸಲಿಕ್ಕಾಗಿ ತನ್ನ ಸ್ವರ್ಗೀಯ ಮಹಿಮೆಯನ್ನು ಸಂತೋಷದಿಂದ ತೊರೆದನು. ಮಾನವಕುಲದ ರಕ್ಷಣೆಗಾಗಿ, ಮತ್ತು ಹೆಚ್ಚು ಪ್ರಾಮುಖ್ಯವಾಗಿ, ತನ್ನ ಸ್ವರ್ಗೀಯ ಪಿತನ ನಾಮದ ಪವಿತ್ರೀಕರಣಕ್ಕಾಗಿ ಅವನು ಮಹಾ ಬಾಧೆಯನ್ನು ಅನುಭವಿಸಲು ಇಷ್ಟಪಟ್ಟನು. (ಯೋಹಾನ 3:16; 17:4) ತನ್ನ ಜೀವನಷ್ಟವಾಗಲಿದ್ದ ನ್ಯಾಯವಿಚಾರಣೆಯ ಸಮಯದಲ್ಲಿ ಯೇಸು ಧೈರ್ಯದಿಂದ ಪ್ರಕಟಿಸಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.”—ಯೋಹಾನ 18:37.
2. ತಾನು ಆರಂಭಿಸಿದ ಕೆಲಸವನ್ನು ಮುಂದುವರಿಸುವಂತೆ ಪುನರುತ್ಥಾನ ಹೊಂದಿದ ಯೇಸು ತನ್ನ ಶಿಷ್ಯರಿಗೆ ಏಕೆ ಆಜ್ಞಾಪಿಸಸಾಧ್ಯವಿತ್ತು?
2 ತನ್ನ ಶಿಷ್ಯರು ರಾಜ್ಯಸತ್ಯಕ್ಕೆ ಸಾಕ್ಷಿ ಕೊಡುವ ಕೆಲಸದಲ್ಲಿ ಮುಂದುವರಿಯಲಾಗುವಂತೆ ಯೇಸು ತನ್ನ ಮರಣಕ್ಕೆ ಮೊದಲೇ ಅವರಿಗೆ ಉತ್ಕೃಷ್ಟ ತರಬೇತನ್ನು ಒದಗಿಸಿದನು. (ಮತ್ತಾಯ 10:5-23; ಲೂಕ 10:1-16) ಹೀಗೆ, ಪುನರುತ್ಥಾನಾನಂತರ ಯೇಸು ಈ ಆಜ್ಞೆಯನ್ನು ಕೊಡಶಕ್ತನಾದನು: “ನೀವು ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿ ಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”—ಮತ್ತಾಯ 28:19, 20.
3. ಶಿಷ್ಯನಿರ್ಮಾಣ ಕೆಲಸ ಹೇಗೆ ವಿಸ್ತರಿಸಿತು, ಆದರೆ ಅದು ಮುಖ್ಯವಾಗಿ ಯಾವ ಪ್ರದೇಶಗಳಲ್ಲಿ ಕೇಂದ್ರೀಕರಿಸಿತ್ತು?
3 ಮುಂದಿನ ಮೂರೂವರೆ ವರ್ಷಗಳಲ್ಲಿ, ಯೇಸುವಿನ ಶಿಷ್ಯರು ಈ ಆಜೆಗ್ಞೆ ವಿಧೇಯರಾದರೂ ತಮ್ಮ ಶಿಷ್ಯರಾಗಿ ಮಾಡುವ ಕೆಲಸವನ್ನು ಯೆಹೂದ್ಯರಿಗೆ, ಯೆಹೂದಿ ಮತಾವಲಂಬಿಗಳಿಗೆ ಮತ್ತು ಸುನ್ನತಿ ಹೊಂದಿದ ಸಮಾರ್ಯದವರಿಗೆ ಸೀಮಿತವಾಗಿರಿಸಿದರು. ಆ ಬಳಿಕ, ಸಾ.ಶ. 36 ರಲ್ಲಿ, ಸುನ್ನತಿಯಾಗಿರದ ಕೊರ್ನೇಲ್ಯನಿಗೂ ಅವನ ಕುಟುಂಬಕ್ಕೂ ಸುವಾರ್ತೆ ಸಾರುವಂತೆ ದೇವರು ನಿರ್ದೇಶಿಸಿದನು. ಮುಂದಿನ ದಶಕದಲ್ಲಿ, ಇತರ ಅನ್ಯರು ಸಭೆಯೊಳಗೆ ತರಲ್ಪಟ್ಟರು. ಆದರೂ, ಹೆಚ್ಚಿನ ಕೆಲಸ ಪೂರ್ವ ಮೆಡಿಟರೇನಿಯನ್ ಪ್ರದೇಶಗಳಿಗೆ ಸೀಮಿತವಾಗಿತ್ತೆಂದು ತೋರಿಬರುತ್ತದೆ.—ಅ. ಕೃತ್ಯಗಳು 10:24, 44-48; 11:19-21.
4. ಸುಮಾರು ಸಾ.ಶ. 47-48 ರಲ್ಲಿ ಯಾವ ಗಮನಾರ್ಹ ಬೆಳವಣಿಗೆ ನಡೆಯಿತು?
4 ದೂರ ಪ್ರದೇಶಗಳ ಯೆಹೂದ್ಯ ಮತ್ತು ಅನ್ಯರನ್ನು ಶಿಷ್ಯರಾಗಿ ಮಾಡುವಂತೆ ಕ್ರೈಸ್ತರನ್ನು ಪ್ರಚೋದಿಸಲು ಯಾ ಸಾಧ್ಯ ಮಾಡಲು ಏನೋ ಬೇಕಾಗಿತ್ತು. ಇದಕ್ಕಾಗಿ ಸುಮಾರು ಸಾ.ಶ. 47-48 ರಲ್ಲಿ ಸಿರಿಯದ ಅಂತಿಯೋಕ್ಯ ಸಭೆಯ ಹಿರಿಯರು ಈ ದೈವಿಕ ಸಂದೇಶವನ್ನು ಪಡೆದರು: “ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ.” (ಅ. ಕೃತ್ಯಗಳು 13:2) ಪೌಲನು ಆಗ ಸೌಲನೆಂಬ ಅವನ ಮೂಲ ಹೆಸರಿಂದ ತಿಳಿಯಲ್ಪಟ್ಟಿದ್ದನು ಎಂಬುದನ್ನು ಗಮನಿಸಿರಿ. ದೇವರು ಬಾರ್ನಬನನ್ನು, ಪ್ರಾಯಶಃ ಅವನು ಆ ಇಬ್ಬರಲ್ಲಿ ಹಿರಿಯನೆಂದು ವೀಕ್ಷಿಸಲ್ಪಡುತ್ತಿದ್ದುದರಿಂದ ಮೊದಲಾಗಿ ಹೆಸರಿಸಿದನೆಂದೂ ಗಮನಿಸಿರಿ.
5. ಪೌಲ, ಬಾರ್ನಬರ ಮಿಷನೆರಿ ಪ್ರಯಾಣದ ದಾಖಲೆ ಇಂದು ಕ್ರೈಸ್ತರಿಗೆ ಏಕೆ ಅತಿ ಮೌಲ್ಯದ್ದಾಗಿದೆ?
5 ಪೌಲ ಮತ್ತು ಬಾರ್ನಬರ ಮಿಷನೆರಿ ಪ್ರಯಾಣದ ಸವಿವರವಾದ ದಾಖಲೆ ಯೆಹೋವನ ಸಾಕ್ಷಿಗಳಿಗೆ, ವಿಶೇಷವಾಗಿ, ಪರ ಸಮುದಾಯಗಳಲ್ಲಿ ದೇವರನ್ನು ಸೇವಿಸಲಿಕ್ಕಾಗಿ ತಮ್ಮ ಸ್ವಂತ ಊರುಗಳನ್ನು ಬಿಟ್ಟುಹೋದ ಮಿಷನೆರಿ ಮತ್ತು ಪಯನೀಯರರಿಗೆ ಮಹಾ ಉತ್ತೇಜನವಾಗಿದೆ. ಇದಲ್ಲದೆ, ಅ. ಕೃತ್ಯಗಳು 13 ಮತ್ತು 14 ನೆಯ ಅಧ್ಯಾಯಗಳ ಪರಾಮರ್ಶೆಯು, ಪೌಲ ಮತ್ತು ಬಾರ್ನಬರನ್ನು ಇನ್ನೂ ಹೆಚ್ಚು ಜನರು ಅನುಕರಿಸಿ, ಶಿಷ್ಯರನ್ನಾಗಿ ಮಾಡುವ ಸರ್ವ ಪ್ರಾಮುಖ್ಯ ಕೆಲಸದಲ್ಲಿ ತಮ್ಮ ಭಾಗವನ್ನು ವಿಕಸಿಸುವಂತೆ ಅವರನ್ನು ನಿಶ್ಚಯವಾಗಿ ಪ್ರಚೋದಿಸುವುದು.
ಸೈಪ್ರಸ್ ದ್ವೀಪ
6. ಸೈಪ್ರಸಿನಲ್ಲಿ ಮಿಷನೆರಿಗಳು ಯಾವ ಮಾದರಿಯನ್ನಿಟ್ಟರು?
6 ತಡಮಾಡದೆ ಮಿಷನೆರಿಗಳು ಸಿರಿಯದ ಸೆಲ್ಯೂಕ್ಯ ಬಂದರಿನಿಂದ ಸೈಪ್ರಸ್ ದ್ವೀಪಕ್ಕೆ ಹಡಗು ಹತ್ತಿದರು. ಸಲಮೀಸ್ನಲ್ಲಿ ಇಳಿದಾಗ ಅವರು ಅಪಕರ್ಷಿಕರಾಗದೆ “ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಪ್ರಸಿದ್ಧಿಪಡಿಸಿದರು.” ಕ್ರಿಸ್ತನ ಮಾದರಿಯಂತೆ ಅವರು ಆ ನಗರದಲ್ಲಿ ನೆಲೆಸಿ ಜನರು ತಮ್ಮ ಬಳಿಗೆ ಬರುವಂತೆ ಕಾಯಲು ತೃಪ್ತರಾಗಲಿಲ್ಲ. ಬದಲಿಗೆ, “ಅವರು ದ್ವೀಪದಲ್ಲೆಲ್ಲಾ” ಸಂಚಾರ ಮಾಡಿದರು. ಸೈಪ್ರಸ್ ದೊಡ್ಡ ದ್ವೀಪವಾಗಿರುವುದರಿಂದ, ಇದರಲ್ಲಿ ತುಂಬ ನಡಗೆ ಮತ್ತು ವಸತಿಗಳಲ್ಲಿ ಬದಲಾವಣೆ ಬೇಕಾಗಿತ್ತೆಂಬುದು ನಿಶ್ಚಯ. ಮತ್ತು ಅವರ ಪ್ರಯಾಣವು ಅವರನ್ನು ಆ ದ್ವೀಪದ ಅತಿ ದೊಡ್ಡ ವಿಭಾಗದ ಉದ್ದಕ್ಕೂ ಕೊಂಡೊಯ್ಯಿತು.—ಅ. ಕೃತ್ಯಗಳು 13:5, 6.
7. (ಎ) ಪಾಫೋಸಿನಲ್ಲಿ ಯಾವ ಪ್ರಮುಖ ಘಟನೆ ನಡೆಯಿತು? (ಬಿ) ಈ ದಾಖಲೆಯು ನಾವು ಯಾವ ಮನೋಭಾವವುಳ್ಳವರಾಗಿರಬೇಕೆಂದು ಪ್ರೋತ್ಸಾಹಿಸುತ್ತದೆ?
7 ಅವರ ಅಲ್ಲಿಯ ವಾಸದಂತ್ಯದಲ್ಲಿ, ಈ ಇಬ್ಬರು ಪುರುಷರಿಗೆ ಒಂದು ಆಶ್ಚರ್ಯಕರವಾದ ಅನುಭವ ಪಾಫೋಸ್ ನಗರದಲ್ಲಿ ಪ್ರತಿಫಲಿಸಿತು. ದ್ವೀಪದ ಆಡಳಿತಗಾರನಾದ ಸೆರ್ಗ್ಯಪೌಲನು ಸಂದೇಶವನ್ನು ಕೇಳಿ “ನಂಬುವವನಾದನು.” (ಅ. ಕೃತ್ಯಗಳು 13:7, 12) ಪೌಲನು ಆ ಬಳಿಕ ಬರೆದುದು: “ಸಹೋದರರೇ, ದೇವರು ನಿಮ್ಮನ್ನು ಕರೆದಾಗ . . . ನಿಮ್ಮೊಳಗೆ ಲೌಕಿಕ ದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಅಧಿಕಾರಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ.” (1 ಕೊರಿಂಥ 1:26) ಆದರೂ, ಅಧಿಕಾರಿಗಳಲ್ಲಿ ಪ್ರತಿವರ್ತನೆ ತೋರಿಸಿದವರಲ್ಲಿ ಸೆರ್ಗ್ಯಪೌಲನು ಒಬ್ಬನು. ಈ ಅನುಭವ ಸಕಲರನ್ನೂ—ವಿಶೇಷವಾಗಿ ಮಿಷನೆರಿಗಳನ್ನು—ಅವರು ಸರಕಾರಿ ಅಧಿಕಾರಿಗಳಿಗೆ ಸಾಕ್ಷಿಕೊಡುವಾಗ, 1 ತಿಮೊಥೆಯ 2:1-4 ರಲ್ಲಿ ಕೂಡ ನಮಗೆ ಪ್ರೋತ್ಸಾಹಿಸಿರುವಂತೆ, ಸಕಾರಾತ್ಮಕ ಮನೋಭಾವವುಳ್ಳವರಾಗಲು ಪ್ರೋತ್ಸಾಹಿಸಬೇಕು. ಅಧಿಕಾರಿಗಳು ಕೆಲವು ಸಲ ದೇವರ ಸೇವಕರಿಗೆ ಮಹಾ ಸಹಾಯವನ್ನು ನೀಡಿದ್ದಾರೆ.—ನೆಹೆಮೀಯ 2:4-8.
8. (ಎ) ಈ ಸಮಯ ಮೊದಲ್ಗೊಂಡು ಬಾರ್ನಬ, ಪೌಲರ ಮಧ್ಯೆ ಯಾವ ಪರಿವರ್ತಿತ ಸಂಬಂಧ ಕಂಡುಬರುತ್ತದೆ? (ಬಿ) ಬಾರ್ನಬನು ಯಾವ ವಿಧದಲ್ಲಿ ಉತ್ತಮ ಮಾದರಿಯಾಗಿದ್ದನು?
8 ಯೆಹೋವನ ಆತ್ಮದ ಪ್ರಭಾವದಿಂದ, ಸೆರ್ಗ್ಯಪೌಲನ ಪರಿವರ್ತನೆಯಲ್ಲಿ ಪೌಲನು ದೊಡ್ಡ ರೀತಿಯಲ್ಲಿ ಭಾಗವಹಿಸಿದನು. (ಅ. ಕೃತ್ಯಗಳು 13:8-12) ಅಲ್ಲದೆ, ಈ ಸಮಯ ಮೊದಲ್ಗೊಂಡು, ಪೌಲನು ನಾಯಕತ್ವ ವಹಿಸತೊಡಗಿದನೆಂದು ತೋರಿಬರುತ್ತದೆ. (ಅ. ಕೃತ್ಯಗಳು 13:7 ನ್ನು ಅ. ಕೃತ್ಯಗಳು 13:15, 16, 43 ಕ್ಕೆ ಹೋಲಿಸಿ.) ಇದು, ಪೌಲನ ಪರಿವರ್ತನೆಯ ಸಮಯದಲ್ಲಿ ಅವನಿಗೆ ದೊರೆತಿದ್ದ ದೈವಿಕಾಜೆಗ್ಞೆ ಹೊಂದಿಕೆಯಾಗಿತ್ತು. (ಅ. ಕೃತ್ಯಗಳು 9:15) ಪ್ರಾಯಶಃ ಇಂಥ ಬೆಳವಣಿಗೆ ಬಾರ್ನಬನ ನಮ್ರತೆಯನ್ನು ಪರೀಕ್ಷಿಸಿದ್ದಿರಬೇಕು. ಆದರೂ, ಈ ಬದಲಾವಣೆ ತನಗೆ ಸ್ವಂತ ಅಪಮಾನವೆಂದೆಣಿಸದೆ, ಬಾರ್ನಬನು “ಧೈರ್ಯದಾಯಕ” [ಸಾಂತ್ವನದ ಪುತ್ರ, NW] ಎಂಬ ತನ್ನ ಹೆಸರಿನ ಅರ್ಥಾನುಸಾರ ನಡೆದಿರುವುದು ಮತ್ತು ಮಿಷನೆರಿ ಪ್ರಯಾಣದಲ್ಲಿ ಮತ್ತು ಆ ಬಳಿಕ ಕೆಲವು ಯೆಹೂದಿ ಕ್ರೈಸ್ತರು ಅವರು ಮಾಡುತ್ತಿದ್ದ ಸುನ್ನತಿಯಿಲ್ಲದ ಅನ್ಯರ ಸೇವೆಯನ್ನು ಪಂಥಾಹ್ವಾನಿಸಿದಾಗ ಪೌಲನನ್ನು ನಿಷ್ಠೆಯಿಂದ ಬೆಂಬಲಿಸಿರುವುದು ಸಂಭಾವ್ಯ. (ಅ. ಕೃತ್ಯಗಳು 15:1, 2) ಇದು ನಮ್ಮೆಲ್ಲರಿಗೆ, ಮಿಷನೆರಿ ಮತ್ತು ಬೆತೆಲ್ ಭವನಗಳಲ್ಲಿರುವವರಿಗೂ ಎಂಥ ಉತ್ತಮ ಮಾದರಿ! ದೇವಪ್ರಭುತ್ವದ ಅಳವಡಿಸುವಿಕೆಗಳನ್ನು ಅಂಗೀಕರಿಸಲು ನಾವು ಸದಾ ಇಷ್ಟಪಟ್ಟು ನಮ್ಮಲ್ಲಿ ನಾಯಕತ್ವ ವಹಿಸಲು ನೇಮಿಸಲ್ಪಟ್ಟವರಿಗೆ ಪೂರ್ಣ ಬೆಂಬಲವನ್ನು ಕೊಡಬೇಕು.—ಇಬ್ರಿಯ 13:17.
ಏಸ್ಯಾ ಮೈನರಿನ ಪ್ರಸ್ಥಭೂಮಿ
9. ಪಿಸಿದ್ಯದ ಅಂತಿಯೋಕ್ಯಕ್ಕೆ ಪ್ರಯಾಣಿಸಲು ಪೌಲ, ಬಾರ್ನಬರು ತೋರಿಸಿದ ಸಿದ್ಧ ಮನಸ್ಸಿನಿಂದ ನಾವೇನು ಕಲಿಯುತ್ತೇವೆ?
9 ಸೈಪ್ರಸಿನಿಂದ ಪೌಲ ಮತ್ತು ಬಾರ್ನಬರು ಉತ್ತರ ದಿಕ್ಕಿಗೆ ಏಸ್ಯಾ ಭೂಖಂಡಕ್ಕೆ ಹಡಗು ಹತ್ತಿದರು. ಯಾವುದೊ ತಿಳಿಯಪಡಿಸದಿರುವ ಕಾರಣಕ್ಕಾಗಿ, ಮಿಷನೆರಿಗಳು ಕರಾವಳಿ ಪ್ರದೇಶದಲ್ಲಿ ಉಳಿಯದೆ ಏಸ್ಯಾ ಮೈನರಿನ ಕೇಂದ್ರ ಪ್ರಸ್ಥಭೂಮಿಯಲ್ಲಿರುವ ಪಿಸಿದ್ಯದ ಅಂತಿಯೋಕ್ಯಕ್ಕೆ ಸುಮಾರು 180 ಕಿಲೊಮೀಟರ್ ಉದ್ದದ ಮತ್ತು ಅಪಾಯಕರವಾದ ಪ್ರಯಾಣವನ್ನು ಬೆಳೆಸಿದರು. ಇದರಲ್ಲಿ ಒಂದು ಬೆಟ್ಟದ ಕಣಿವೆಯನ್ನು ಹತ್ತಿ ಸಮುದ್ರ ಮಟ್ಟದಿಂದ 1,100 ಮೀಟರ್ ಇಳಿದು ಸಮತಟ್ಟಾದ ಸ್ಥಳಕ್ಕೆ ಬರುವುದು ಸೇರಿತ್ತು. ಬೈಬಲ್ ತಜ್ಞ ಜೆ. ಎಸ್. ಹಾಸನ್ ಹೇಳುವುದು: “ದಕ್ಷಿಣ ಕರಾವಳಿಯ ಬಯಲಿನಿಂದ ಪ್ರಸ್ಥಭೂಮಿಯನ್ನು ಪ್ರತ್ಯೇಕಿಸುವ ಆ ಬೆಟ್ಟಗಳ ಜನರ ನಿಯಮರಹಿತ ಮತ್ತು ಸೂರೆ ಮಾಡುವ ಅಭ್ಯಾಸಗಳು . . . ಪ್ರಾಚೀನ ಇತಿಹಾಸದ ಎಲ್ಲ ಭಾಗಗಳಲ್ಲಿ ಕುಪ್ರಸಿದ್ಧ.” ಇದಕ್ಕೆ ಸೇರಿಸಿ, ಮಿಷನೆರಿಗಳು ಪ್ರಕೃತಿಶಕ್ತಿಗಳಿಂದ ಅಪಾಯವನ್ನೆದುರಿಸಿದರು. ಹಾಸನ್ ಹೇಳುವುದು: “ಏಸ್ಯಾ ಮೈನರಿನ ಯಾವ ಜಿಲ್ಲೆಯೂ ‘ಜಲ ನೆರೆ’ ಗಳಿಗೆ ಪಿಸಿದ್ಯದ ಬೆಟ್ಟ ಪ್ರದೇಶದಷ್ಟು ಅದ್ವಿತೀಯವಾಗಿಲ್ಲ. ಇಲ್ಲಿ ನದಿಗಳು ಮಹಾ ಪ್ರಪಾತಗಳ ಬುಡದಿಂದ ಹೊರನುಗ್ಗುತ್ತವೆ ಯಾ ಕಡಿದಾದ ಕಮರಿಗಳ ಮಧ್ಯದಿಂದ ಹುಚ್ಚಾಬಟ್ಟೆ ಧಾವಿಸಿ ಬರುತ್ತವೆ.” ಸುವಾರ್ತೆಯನ್ನು ಹಬ್ಬಿಸುವ ಸಲುವಾಗಿ ಮಿಷನೆರಿಗಳು ಯಾವ ವಿಧದ ಪ್ರಯಾಣಗಳನ್ನು ಕೈಕೊಳ್ಳಲು ಇಷ್ಟಪಟ್ಟರೆಂದು ಚಿತ್ರಿಸಿಕೊಳ್ಳಲು ಈ ವಿವರಗಳು ನಮಗೆ ಸಹಾಯ ಮಾಡುತ್ತವೆ. (2 ಕೊರಿಂಥ 11:26) ಇದೇ ರೀತಿ, ಇಂದೂ ಯೆಹೋವನ ಅನೇಕ ಸೇವಕರು ಜನರನ್ನು ತಲುಪಿ ಅವರೊಂದಿಗೆ ಸುವಾರ್ತೆಯಲ್ಲಿ ಪಾಲಿಗರಾಗಲು ಸಕಲ ವಿಧವಾದ ತಡೆಗಳನ್ನು ಎದುರಿಸುತ್ತಾರೆ.
10, 11. (ಎ) ಪೌಲನು ತನ್ನ ಸಭಿಕರೊಂದಿಗೆ ಉಭಯ ಸಾಮಾನ್ಯ ಪಕ್ಷವನ್ನು ಹೇಗೆ ಇಟ್ಟುಕೊಂಡನು? (ಬಿ) ಮೆಸ್ಸೀಯನ ಕಷ್ಟಾನುಭವಗಳ ಕುರಿತು ಕೇಳಲು ಅನೇಕ ಯೆಹೂದ್ಯರು ದಿಗಿಲುಪಟ್ಟಿರುವುದು ಏಕೆ ಸಂಭಾವ್ಯ? (ಸಿ) ತನ್ನ ಕೇಳುಗರ ಮುಂದೆ ಪೌಲನು ಯಾವ ರೀತಿಯ ರಕ್ಷಣೆಯನ್ನು ಇಟ್ಟನು?
10 ಪಿಸಿದ್ಯದ ಅಂತಿಯೋಕ್ಯದಲ್ಲಿ ಒಂದು ಯೆಹೂದಿ ಸಭಾಮಂದಿರವಿದ್ದುದರಿಂದ, ಮಿಷನೆರಿಗಳು ಮೊದಲಾಗಿ ಅಲ್ಲಿಗೆ, ದೇವರ ವಾಕ್ಯದ ಅತಿ ಸುಪರಿಚಿತರಾದ ಅವರಿಗೆ ಸುವಾರ್ತೆಯನ್ನು ಅಂಗೀಕರಿಸುವ ಅವಕಾಶವನ್ನು ಕೊಡುವ ಸಲುವಾಗಿ ಹೋದರು. ಮಾತನಾಡಲು ಆಮಂತ್ರಿಸಲ್ಪಟ್ಟಾಗ, ಪೌಲನು ಎದ್ದುನಿಂತು ಒಂದು ನಿಪುಣತೆಯ ಸಾರ್ವಜನಿಕ ಭಾಷಣವನ್ನು ಕೊಟ್ಟನು. ಭಾಷಣದಾದ್ಯಂತ ಅವನು ಸಭೆಯಲ್ಲಿದ್ದ ಯೆಹೂದ್ಯರು ಮತ್ತು ಮತಾವಲಂಬಿಗಳೊಂದಿಗೆ ಉಭಯ ಸಾಮಾನ್ಯ ಪಕ್ಷವನ್ನಿಟ್ಟುಕೊಂಡನು. (ಅ. ಕೃತ್ಯಗಳು 13:13-16, 26) ಪೀಠಿಕೆಯ ನಂತರ, ಪೌಲನು ಯೆಹೂದ್ಯರ ಪ್ರಖ್ಯಾತ ಇತಿಹಾಸವನ್ನು ಪುನರ್ವಿಮರ್ಶಿಸುತ್ತಾ, ಯೆಹೋವನು ಅವರ ಪೂರ್ವಿಕರನ್ನು ಆಯ್ದುಕೊಂಡದ್ದನ್ನೂ ಅವರನ್ನು ಐಗುಪ್ತದಿಂದ ಬಿಡುಗಡೆ ಮಾಡಿದುದನ್ನೂ ಮತ್ತು ವಾಗ್ದಾನ ದೇಶದ ನಿವಾಸಿಗಳನ್ನು ಸೋಲಿಸಲು ದೇವರು ಸಹಾಯ ಮಾಡಿದುದನ್ನೂ ನೆನಪು ಹುಟ್ಟಿಸಿದನು. ಬಳಿಕ ಪೌಲನು ದಾವೀದನೊಂದಿಗೆ ದೇವರ ವ್ಯವಹಾರಗಳನ್ನು ಎತ್ತಿ ತೋರಿಸಿದನು. ಇಂಥ ಮಾಹಿತಿ ಒಂದನೆಯ ಶತಕದ ಯೆಹೂದ್ಯರಿಗೆ ಚಿಂತೆಯದ್ದಾಗಿತ್ತು, ಏಕೆಂದರೆ ದೇವರು ದಾವೀದನ ವಂಶಸ್ಥನೊಬ್ಬನನ್ನು ರಕ್ಷಕನೂ ನಿತ್ಯರಾಜನೂ ಆಗಿ ಎಬ್ಬಿಸುವನೆಂದು ಅವರು ನಿರೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಪೌಲನು ಧೈರ್ಯದಿಂದ ಪ್ರಕಟಿಸಿದ್ದು: “ಅವನ [ದಾವೀದನ] ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲ್ಯರಿಗೆ ಒಬ್ಬ ರಕ್ಷಕನನ್ನು ಹುಟ್ಟಿಸಿದ್ದಾನೆ. ಆ ರಕ್ಷಕನೇ ಯೇಸು.”—ಅ. ಕೃತ್ಯಗಳು 13:17-24ಎ.
11 ಆದರೂ ಅನೇಕ ಯೆಹೂದ್ಯರು, ಅವರನ್ನು ರೋಮನ್ ಪ್ರಭುತ್ವದಿಂದ ರಕ್ಷಿಸಿ ಯೆಹೂದಿ ಜನಾಂಗವನ್ನು ಉಳಿದ ಎಲ್ಲರಿಗಿಂತ ಮೇಲೆತ್ತುವ ವಿಧದ ರಕ್ಷಕನಾದ ಮಿಲಿಟರಿ ವೀರನನ್ನು ಕಾಯುತ್ತಿದ್ದರು. ಆದುದರಿಂದ, ಮೆಸ್ಸೀಯನು ಅವರ ಸ್ವಂತ ಧಾರ್ಮಿಕ ನಾಯಕರಿಂದ ವಧೆಗಾಗಿ ಒಪ್ಪಿಸಲ್ಪಟ್ಟಿದ್ದನೆಂದು ಹೇಳಿದಾಗ ಅವರು ದಿಗಿಲುಪಟ್ಟದ್ದು ನಿಸ್ಸಂದೇಹ. “ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು” ಎಂದು ಪೌಲನು ಧೈರ್ಯದಿಂದ ಪ್ರಕಟಿಸಿದನು. ಅವನ ಉಪನ್ಯಾಸದ ಅಂತ್ಯದಲ್ಲಿ, ಅವನ ಸಭಿಕರು ಒಂದು ಆಶ್ಚರ್ಯಕರವಾದ ರಕ್ಷಣೆಯನ್ನು ಪಡೆಯಬಹುದೆಂದು ಅವನು ತೋರಿಸಿದನು. “ಆತನ ಮೂಲಕವಾಗಿ ಪಾಪಪರಿಹಾರವು ದೊರೆಯುತ್ತದೆಂಬದು ನಿಮಗೆ ಸಾರೋಣವಾಗುತ್ತದೆಂದು ನಿಮಗೆ ತಿಳಿದಿರಲಿ. ಮೋಶೆಯ ಧರ್ಮಶಾಸ್ತ್ರದ ಮೂಲಕ ನೀವು ಬಿಡುಗಡೆ ಹೊಂದಲಾಗದ ಎಲ್ಲಾ ಪಾಪಗಳಿಂದ ನಂಬುವವರೆಲ್ಲರು ಆತನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರೆನಿಸಿಕೊಳ್ಳುತ್ತಾರೆ” ಎಂದವನು ಹೇಳಿದನು. ಪೌಲನು ತನ್ನ ಉಪನ್ಯಾಸವನ್ನು, ರಕ್ಷಣೆಯ ಈ ಅದ್ಭುತಕರವಾದ ಒದಗಿಸುವಿಕೆಯನ್ನು ಅಸಡ್ಡೆ ಮಾಡುವರೆಂದು ದೇವರು ಮುಂತಿಳಿಸಿದ ಅನೇಕರ ವರ್ಗದಲ್ಲಿ ಅವರಿರಬಾರದೆಂದು ಒತ್ತಾಯಿಸಿ ಮುಗಿಸುತ್ತಾನೆ.—ಅ. ಕೃತ್ಯಗಳು 13:30-41.
12. ಪೌಲನ ಉಪನ್ಯಾಸದ ಪರಿಣಾಮವೇನಾಯಿತು, ಮತ್ತು ಇದು ನಮ್ಮನ್ನು ಹೇಗೆ ಪ್ರೋತ್ಸಾಹಿಸಬೇಕು?
12 ಎಂಥ ಸಲಕ್ಷಣವಾಗಿ ಹೇಳಿದ ಶಾಸ್ತ್ರಾಧಾರಿತ ಪ್ರವಚನವದು! ಮತ್ತು ಸಭಿಕರು ಹೇಗೆ ಪ್ರತಿವರ್ತಿಸಿದರು? “ಯೆಹೂದ್ಯರಲ್ಲಿಯೂ ದೇವಭಕ್ತರಾಗಿದ್ದ ಯೆಹೂದ್ಯ ಮತಾವಲಂಬಿಗಳಲ್ಲಿಯೂ ಅನೇಕರು ಪೌಲ ಬಾರ್ನಬರನ್ನು ಹಿಂಬಾಲಿಸಿದರು.” (ಅ. ಕೃತ್ಯಗಳು 13:43) ನಮಗೆ ಇದು ಇಂದು ಎಷ್ಟು ಉತ್ತೇಜನೀಯ! ನಾವು ಸಹ, ಇದೇ ರೀತಿ, ಸಾರ್ವಜನಿಕ ಸೇವೆಯಲ್ಲಾಗಲಿ, ಸಭಾ ಕೂಟಗಳಲ್ಲಿ ಮಾಡುವ ಹೇಳಿಕೆ, ಭಾಷಣಗಳಲ್ಲಾಗಲಿ, ಸತ್ಯವನ್ನು ಫಲಕಾರಿಯಾಗಿ ನೀಡಲು ಸಾಧ್ಯವಿರುವಷ್ಟು ಸರ್ವೋತ್ತಮವಾದುದನ್ನು ಮಾಡುವಂತಾಗಲಿ.—1 ತಿಮೊಥೆಯ 4:13-16.
13. ಪಿಸಿದ್ಯದ ಅಂತಿಯೋಕ್ಯವನ್ನು ಮಿಷನೆರಿಗಳು ಏಕೆ ಬಿಡಬೇಕಾಯಿತು, ಮತ್ತು ಹೊಸ ಶಿಷ್ಯರ ಕುರಿತು ಯಾವ ಪ್ರಶ್ನೆಗಳೇಳುತ್ತವೆ?
13 ಪಿಸಿದ್ಯದ ಅಂತಿಯೋಕ್ಯದಲ್ಲಿದ್ದ ಹೊಸ ಆಸಕ್ತರು ಈ ಸುವಾರ್ತೆಯನ್ನು ತಮ್ಮಲ್ಲಿಯೆ ಇಟ್ಟುಕೊಳ್ಳಶಕ್ತರಾಗಲಿಲ್ಲ. ಇದರ ಪರಿಣಾಮವಾಗಿ “ಮುಂದಿನ ಸಬ್ಬತ್ದಿನದಲ್ಲಿ ಸ್ವಲ್ಪಕಡಿಮೆ ಊರೆಲ್ಲಾ ದೇವರ ವಾಕ್ಯವನ್ನು ಕೇಳುವದಕ್ಕೆ ಕೂಡಿಬಂತು.” ಮತ್ತು ಬೇಗನೆ ಸಂದೇಶವು ಪಟ್ಟಣದಾಚೆಯೂ ಹರಡಿತು. ವಾಸ್ತವವಾಗಿ, “ಕರ್ತನ [ಯೆಹೋವನ, NW] ವಾಕ್ಯವು ಆ ಸೀಮೆಯ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಾ ಬಂತು.” (ಅ. ಕೃತ್ಯಗಳು 13:44, 49) ಈ ನಿಜತ್ವವನ್ನು ಸ್ವಾಗತಿಸುವ ಬದಲು ಅಸೂಯೆಗೊಂಡ ಯೆಹೂದ್ಯರು ಆ ಮಿಷನೆರಿಗಳನ್ನು ಪಟ್ಟಣದಿಂದ ಹೊರದೊಬ್ಬುವದರಲ್ಲಿ ಜಯಶಾಲಿಗಳಾದರು. (ಅ. ಕೃತ್ಯಗಳು 13:45, 50) ಇದು ಹೊಸ ಶಿಷ್ಯರನ್ನು ಹೇಗೆ ಬಾಧಿಸಿತು? ಅವರು ನಿರುತ್ತೇಜನಗೊಂಡು ಸುವಾರ್ತೆಯನ್ನು ತ್ಯಜಿಸಿದರೊ?
14. ಮಿಷನೆರಿಗಳು ಆರಂಭಿಸಿದ ಕೆಲಸವನ್ನು ವಿರೋಧಿಗಳೇಕೆ ಇಲ್ಲದಂತೆ ಮಾಡಸಾಧ್ಯವಿರಲಿಲ್ಲ, ಮತ್ತು ನಾವು ಇದರಿಂದ ಏನು ಕಲಿಯುತ್ತೇವೆ?
14 ಇಲ್ಲ, ಏಕೆಂದರೆ ಇದು ದೇವರ ಕೆಲಸವಾಗಿತ್ತು. ಅಲ್ಲದೆ, ಮಿಷನೆರಿಗಳು ಪುನರುತ್ಥಾನಹೊಂದಿದ್ದ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯ ದೃಢ ಅಸ್ತಿವಾರವನ್ನು ಹಾಕಿದ್ದರು. ಆದುದರಿಂದ, ಹೊಸ ಶಿಷ್ಯರು ಮಿಷನೆರಿಗಳನ್ನಲ್ಲ, ಕ್ರಿಸ್ತನನ್ನು ತಮ್ಮ ನಾಯಕನಾಗಿ ವೀಕ್ಷಿಸಿದರೆಂಬುದು ವ್ಯಕ್ತ. ಹೀಗೆ, “ಶಿಷ್ಯರಾದವರು ಸಂತೋಷಪೂರ್ಣರೂ ಪವಿತ್ರಾತ್ಮಭರಿತರೂ ಆದರು” ಎಂದು ನಾವು ಓದುತ್ತೇವೆ. (ಅ. ಕೃತ್ಯಗಳು 13:52) ಇದು ಇಂದಿನ ಮಿಷನೆರಿಗಳಿಗೂ ಇತರ ಶಿಷ್ಯನಿರ್ಮಾಣಿಕರಿಗೂ ಎಷ್ಟು ಪ್ರೋತ್ಸಾಹಕರ! ನಾವು ನಮ್ರತೆಯಿಂದಲೂ ಹುರುಪಿನಿಂದಲೂ ನಮ್ಮ ಭಾಗವನ್ನು ಮಾಡುವುದಾದರೆ, ಯೆಹೋವ ದೇವರೂ ಯೇಸು ಕ್ರಿಸ್ತನೂ ನಮ್ಮ ಶುಶ್ರೂಷೆಯನ್ನು ಆಶೀರ್ವದಿಸುವರು.—1 ಕೊರಿಂಥ 3:9.
ಇಕೋನ್ಯ, ಲುಸ್ತ್ರ, ಮತ್ತು ದೆರ್ಬೆ
15. ಇಕೋನ್ಯದಲ್ಲಿ ಮಿಷನೆರಿಗಳು ಯಾವ ಕ್ರಮವಿಧಾನಗಳನ್ನು ಅನುಸರಿಸಿದರು, ಮತ್ತು ಪರಿಣಾಮಗಳೇನು?
15 ಪೌಲ, ಬಾರ್ನಬರು ಈಗ ಮುಂದಿನ ನಗರವಾದ ಇಕೋನ್ಯಕ್ಕೆ ಆಗ್ನೇಯವಾಗಿ 140 ಕಿಲೊಮೀಟರ್ ಪ್ರಯಾಣಿಸಿದರು. ಹಿಂಸೆಯ ಭಯ, ಅಂತಿಯೋಕ್ಯದ ಕ್ರಮವಿಧಾನವನ್ನೇ ಅನುಸರಿಸುವುದನ್ನು ಅವರು ನಿಲ್ಲಿಸುವಂತೆ ಮಾಡಲಿಲ್ಲ. ಇದರ ಪರಿಣಾಮವಾಗಿ, “ಯೆಹೂದ್ಯರಲ್ಲಿಯೂ ಗ್ರೀಕರಲ್ಲಿಯೂ ಬಹುಮಂದಿ ನಂಬುವವರಾದರು” ಎಂದು ಬೈಬಲು ಹೇಳುತ್ತದೆ. (ಅ. ಕೃತ್ಯಗಳು 14:1) ಪುನಃ, ಸುವಾರ್ತೆಯನ್ನು ಸ್ವೀಕರಿಸದ ಯೆಹೂದ್ಯರು ವಿರೋಧವನ್ನೆಬ್ಬಿಸಿದರು. ಆದರೆ ಮಿಷನೆರಿಗಳು ಇದನ್ನು ಸಹಿಸಿಕೊಂಡು ಇಕೋನ್ಯದಲ್ಲಿ ಹೊಸ ಶಿಷ್ಯರಿಗೆ ಸಹಾಯ ಮಾಡುತ್ತಾ ಬಹಳ ಸಮಯವನ್ನು ಕಳೆದರು. ಆ ಬಳಿಕ, ಯೆಹೂದಿ ವಿರೋಧಿಗಳು ತಮಗೆ ಕಲ್ಲೆಸೆಯಲಿದ್ದಾರೆಂದು ತಿಳಿದಾಗ, ಪೌಲ, ಬಾರ್ನಬರು ವಿವೇಕದಿಂದ ಮುಂದಿನ ಟೆರಿಟೊರಿಯಾದ, “ಲುಸ್ತ್ರ ದೆರ್ಬೆ ಎಂಬ ಊರುಗಳಿಗೂ ಅವುಗಳಿಗೆ ಸೇರಿರುವ ಸೀಮೆಗೂ” ಓಡಿಹೋದರು.—ಅ. ಕೃತ್ಯಗಳು 14:2-6.
16, 17. (ಎ) ಲುಸ್ತ್ರದಲ್ಲಿ ಪೌಲನಿಗೆ ಏನು ಸಂಭವಿಸಿತು? (ಬಿ) ಅಪೊಸ್ತಲನೊಂದಿಗೆ ದೇವರು ವರ್ತಿಸಿದ ವಿಧಗಳು ಲುಸ್ತ್ರದ ಯುವಕನೊಬ್ಬನನ್ನು ಹೇಗೆ ಬಾಧಿಸಿತು?
16 ಅವರು ಧೈರ್ಯದಿಂದ ಮೊದಲನೆಯ ಸಲ ಈ ಹೊಸ ಅಕೃಷ್ಟ ಟೆರಿಟೊರಿಯಲ್ಲಿ “ಸುವಾರ್ತೆಯನ್ನು ಸಾರಿದರು.” (ಅ. ಕೃತ್ಯಗಳು 14:7) ಪಿಸಿದ್ಯದ ಅಂತಿಯೋಕ್ಯದ ಮತ್ತು ಇಕೋನ್ಯದ ಯೆಹೂದ್ಯರು ಇದನ್ನು ಕೇಳಲಾಗಿ, ಅವರು ಲುಸ್ತ್ರದ ವರೆಗೂ ಬಂದು ಜನರ ಗುಂಪು ಪೌಲನಿಗೆ ಕಲ್ಲೆಸೆಯುವರೆ ಪ್ರೇರಿಸಿದರು. ಪಲಾಯನಕ್ಕೆ ಸಮಯವಿಲ್ಲದ್ದಿದ ಪೌಲನಿಗೆ ಕಲ್ಲೆಸೆಯಲಾಯಿತು. ಪೌಲನು ಸತ್ತನೆಂದು ಅವನ ವಿರೋಧಿಗಳು ನಂಬಿದರು. ಅವನನ್ನು ಪಟ್ಟಣದ ಹೊರಕ್ಕೆ ಎಳೆದುಕೊಂಡು ಹೋಗಲಾಯಿತು.—ಅ. ಕೃತ್ಯಗಳು 14:19.
17 ಇದರಿಂದ ಹೊಸ ಶಿಷ್ಯರಿಗಾದ ವ್ಯಥೆಯನ್ನು ನೀವು ಊಹಿಸಬಲ್ಲಿರೊ? ಆದರೆ ಅತ್ಯಾಶ್ಚರ್ಯದ ವಿಷಯವೇನಂದರೆ, ಅವರು ಅವನ ಸುತ್ತ ನಿಂತಾಗ, ಅವನು ಎದ್ದು ನಿಂತನು! ಈ ಹೊಸ ಶಿಷ್ಯರಲ್ಲಿ ತಿಮೊಥೆಯನೆಂಬ ಯುವಕನಿದ್ದನೋ ಇಲ್ಲವೋ ಎಂದು ಬೈಬಲು ಹೇಳುವುದಿಲ್ಲ. ಹೇಗೂ ದೇವರು ಪೌಲನೊಂದಿಗೆ ವರ್ತಿಸಿದ ವಿಧಗಳು ಅವನಿಗೆ ಯಾವಾಗಲೋ ಗೊತ್ತಾಗಿ ಅವನ ಎಳೆಯ ಮನಸ್ಸಿನಲ್ಲಿ ಅದು ಆಳವಾಗಿ ಅಚ್ಚೊತ್ತಿದ್ದಿರಬೇಕು. ಪೌಲನು ತಿಮೊಥೆಯನಿಗೆ ಎರಡನೆಯ ಪತ್ರದಲ್ಲಿ ಬರೆದುದು: “ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು ನನ್ನ ಬೋಧನೆ ನಡತೆ . . . ಅಂತಿಯೋಕ್ಯ ಇಕೋನ್ಯ ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು; ಅವೆಲ್ಲವುಗಳೊಳಗಿಂದ ಕರ್ತನು ನನ್ನನ್ನು ಬಿಡಿಸಿದನು.” (2 ತಿಮೊಥೆಯ 3:10, 11) ಪೌಲನಿಗೆ ಕಲ್ಲೆಸೆದ ಒಂದು ಯಾ ಎರಡು ವರ್ಷಗಳಲ್ಲಿ ಅವನು ಲುಸ್ತ್ರಕ್ಕೆ ತಿರಿಗಿ ಬಂದಾಗ ಯುವ ತಿಮೊಥೆಯನು ಆದರ್ಶಪ್ರಾಯನಾದ ಕ್ರೈಸ್ತನೆಂದೂ ಅವನ ವಿಷಯ “ಲುಸ್ತ್ರದಲ್ಲಿಯೂ ಇಕೋನ್ಯದಲ್ಲಿಯೂ ಇದ್ದ ಸಹೋದರರು ಒಳ್ಳೇ ಸಾಕ್ಷಿ ಹೇಳುತ್ತಿದ್ದರು” ಎಂದೂ ಕಂಡುಕೊಂಡನು. (ಅ. ಕೃತ್ಯಗಳು 16:1, 2) ಆದುದರಿಂದ ಪೌಲನು ಅವನನ್ನು ಪ್ರಯಾಣದ ಸಂಗಾತಿಯಾಗಿ ಆಯ್ದುಕೊಂಡನು. ಇದು, ತಿಮೊಥೆಯನು ಆತ್ಮಿಕೋನ್ನತಿಯಲ್ಲಿ ಬೆಳೆಯುವಂತೆ ಸಹಾಯ ಮಾಡಿತು, ಮತ್ತು ಸಕಾಲದಲ್ಲಿ ವಿವಿಧ ಸಭೆಗಳ ಭೇಟಿಗೆ ಪೌಲನಿಂದ ಕಳುಹಿಸಲ್ಪಡಲು ಅವನು ಅರ್ಹನಾದನು. (ಫಿಲಿಪ್ಪಿ 2:19, 20; 1 ತಿಮೊಥೆಯ 1:3) ತದ್ರೀತಿ ಇಂದು, ದೇವರ ಹುರುಪಿನ ಸೇವಕರು ಯುವಜನರ ಮೇಲೆ ಅದ್ಭುತಕರವಾದ ಪ್ರಭಾವವನ್ನು ಬೀರುವ ಕಾರಣ ಇವರಲ್ಲಿ ಅನೇಕರು ತಿಮೊಥೆಯನಂತೆ ದೇವರ ಅಮೂಲ್ಯ ಸೇವಕರಾಗಿ ಬೆಳೆಯುತ್ತಾರೆ.
18. (ಎ) ದೆರ್ಬೆಯಲ್ಲಿ ಮಿಷನೆರಿಗಳಿಗೆ ಏನು ಸಂಭವಿಸಿತು? (ಬಿ) ಈಗ ಅವರಿಗೆ ಯಾವ ಸಂದರ್ಭ ತೆರೆದಿತ್ತು, ಆದರೆ ಅವರು ಯಾವ ಮಾರ್ಗವನ್ನಾರಿಸಿದರು?
18 ಲುಸ್ತ್ರದಲ್ಲಿ ಅವನು ಮರಣದಿಂದ ತಪ್ಪಿದ ಮರು ಬೆಳಗ್ಗೆ, ಪೌಲನು ಬಾರ್ನಬನೊಂದಿಗೆ ದೆರ್ಬೆಗೆ ಹೊರಟನು. ಈ ಬಾರಿ ಯಾವ ವಿರೋಧಿಗಳೂ ಅವರನ್ನು ಹಿಂಬಾಲಿಸಲಿಲ್ಲ, ಮತ್ತು ಅವರು ‘ಅನೇಕರನ್ನು ಶಿಷ್ಯರಾಗ ಮಾಡಿದರೆಂದು’ ಬೈಬಲು ಹೇಳುತ್ತದೆ. (ಅ. ಕೃತ್ಯಗಳು 14:20, 21) ದೆರ್ಬೆಯಲ್ಲಿ ಒಂದು ಸಭೆಯನ್ನು ಸ್ಥಾಪಿಸಿದ ಪೌಲ, ಬಾರ್ನಬರಿಗೆ ಒಂದು ನಿರ್ಣಯವನ್ನು ಮಾಡಬೇಕಾಗಿ ಬಂತು. ಒಂದು ಸದುಪಯೋಗಿಸಲ್ಪಡುತ್ತಿದ್ದ ರೋಮನ್ ರಸ್ತೆ ದೆರ್ಬೆಯಿಂದ ತಾರ್ಸಕ್ಕೆ ಹೋಗುತ್ತಿತ್ತು. ಅಲ್ಲಿಂದ ಸಿರಿಯನ್ ಅಂತಿಯೋಕ್ಯಕ್ಕೆ ಹಿಂದೆ ಬರಲು ತುಸು ಪ್ರಯಾಣವೇ ಇತ್ತು. ಅದು ಹಿಂದೆ ಬರಲು ಅತ್ಯನುಕೂಲ ಮಾರ್ಗವಾಗಿದ್ದಿರಬಹುದು, ಮತ್ತು ಆ ಮಿಷನೆರಿಗಳು ತಾವೀಗ ವಿಶ್ರಾಂತಿಗೆ ಅರ್ಹರೆಂದು ಅಭಿಪ್ರಯಿಸಬಹುದಿತ್ತು. ಆದರೆ, ತಮ್ಮ ಒಡೆಯನನ್ನು ಅನುಕರಿಸಿದ ಪೌಲ, ಬಾರ್ನಬರು ಹೆಚ್ಚು ಅಗತ್ಯವಿರುವ ವಿಷಯವೊಂದನ್ನು ಕಂಡರು.—ಮಾರ್ಕ 6:31-34.
ದೇವರ ಕೆಲಸವನ್ನು ಪೂರ್ತಿಯಾಗಿ ನೆರವೇರಿಸುವುದು
19, 20. (ಎ) ಮಿಷನೆರಿಗಳು ಲುಸ್ತ್ರ, ಇಕೋನ್ಯ, ಮತ್ತು ಅಂತಿಯೋಕ್ಯಕ್ಕೆ ಹಿಂದಿರುಗಿದ್ದಕ್ಕಾಗಿ ಯೆಹೋವನು ಅವರನ್ನು ಹೇಗೆ ಆಶೀರ್ವದಿಸಿದನು? (ಬಿ) ಇದು ಇಂದು ಯೆಹೋವನ ಸಾಕ್ಷಿಗಳಿಗೆ ಯಾವ ಪಾಠವನ್ನು ಒದಗಿಸುತ್ತದೆ?
19 ಹತ್ತಿರದ ದಾರಿಯಿಂದ ಮನೆಗೆ ಹಿಂದಿರುಗುವ ಬದಲು ಮಿಷನೆರಿಗಳು ಧೈರ್ಯದಿಂದ ಹಿಂದೆ ಹೋಗಿ ತಮ್ಮ ಜೀವಗಳು ಅಪಾಯಕ್ಕೊಳಗಾಗಿದ್ದ ಪಟ್ಟಣಗಳನ್ನೇ ಪುನರ್ಭೇಟಿ ಮಾಡಿದರು. ಹೊಸ ಕುರಿಗಳ ಕಡೆಗೆ ಅವರಿಗಿದ್ದ ಈ ನಿಸ್ವಾರ್ಥ ಚಿಂತೆಯ ಕಾರಣ ದೇವರು ಅವರನ್ನು ಆಶೀರ್ವದಿಸಿದನೊ? ಹೌದು, ನಿಶ್ಚಯವಾಗಿ, ಏಕೆಂದರೆ ಅವರು “ಶಿಷ್ಯರ ಮನಸ್ಸುಗಳನ್ನು ದೃಢ” ಪಡಿಸುವುದರಲ್ಲಿ ಸಾಫಲ್ಯ ಪಡೆದರೆಂದು ವೃತ್ತಾಂತ ತಿಳಿಸುತ್ತದೆ. ಯೋಗ್ಯವಾಗಿಯೇ, ಅವರು ಹೊಸ ಶಿಷ್ಯರಿಗೆ, “ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕು” ಎಂದು ಹೇಳಿದರು. (ಅ. ಕೃತ್ಯಗಳು 14:21, 22) ಪೌಲ, ಬಾರ್ನಬರು ಅವರಿಗೆ, ಬರಲಿರುವ ದೇವರ ರಾಜ್ಯದಲ್ಲಿ ಸಹಬಾಧ್ಯಸ್ಥರಾಗುವ ಅವರ ಕರೆಯನ್ನೂ ಜ್ಞಾಪಕ ಹುಟ್ಟಿಸಿದರು. ಇಂದು, ನಾವು ಹೊಸ ಶಿಷ್ಯರಿಗೆ ಇದೇ ರೀತಿಯ ಪ್ರೋತ್ಸಾಹನೆಯನ್ನು ಕೊಡಬೇಕು. ಪೌಲ ಮತ್ತು ಬಾರ್ನಬರು ಯಾವುದನ್ನು ಸಾರಿದರೋ ಅದೇ ದೇವರ ರಾಜ್ಯದ ಕೆಳಗೆ ಭೂಮಿಯಲ್ಲಿ ನಿತ್ಯಜೀವದ ಪ್ರತೀಕ್ಷೆಯನ್ನು ಅವರ ಮುಂದೆ ಎತ್ತಿಹಿಡಿಯುತ್ತಾ ಅವರು ಶೋಧನೆಗಳನ್ನು ತಾಳುವಂತೆ ನಾವು ಅವರನ್ನು ಬಲಪಡಿಸಬಲ್ಲೆವು.
20 ಪ್ರತಿಯೊಂದು ಪಟ್ಟಣವನ್ನು ಬಿಟ್ಟು ಹೋಗುವ ಮೊದಲು, ಸ್ಥಳೀಕ ಸಭೆ ಹೆಚ್ಚು ಸಂಘಟಿತವಾಗುವಂತೆ ಪೌಲ, ಬಾರ್ನಬರು ಸಹಾಯ ಮಾಡಿದರು. ಅವರು ಅರ್ಹರಾದ ಪುರುಷರನ್ನು ತರಬೇತುಗೊಳಿಸಿ, ನಾಯಕತ್ವ ವಹಿಸುವಂತೆ ನೇಮಿಸಿದರೆಂಬುದು ವ್ಯಕ್ತ. (ಅ. ಕೃತ್ಯಗಳು 14:23) ಇದು ಇನ್ನೂ ಹೆಚ್ಚು ವಿಸ್ತರಣಕ್ಕೆ ಸಹಾಯ ಮಾಡಿತೆಂಬುದು ನಿಸ್ಸಂಶಯ. ಇದರಂತೆಯೇ, ಇಂದೂ ಮಿಷನೆರಿಗಳು ಮತ್ತು ಇತರರು, ಅನನುಭವಿಗಳು ಜವಾಬ್ದಾರಿ ತೆಗೆದುಕೊಳ್ಳಲು ಪ್ರಗತಿ ಮಾಡುವಂತೆ ಅವರಿಗೆ ಸಹಾಯ ಮಾಡಿದ ಬಳಿಕ, ಕೆಲವು ಸಲ ಅಗತ್ಯ ಹೆಚ್ಚಿರುವ ಇತರ ಸ್ಥಳಗಳಲ್ಲಿ ತಮ್ಮ ಒಳ್ಳೆಯ ಕೆಲಸವನ್ನು ಮುಂದುವರಿಸಲು ಹೋಗುತ್ತಾರೆ.
21, 22. (ಎ) ಪೌಲ, ಬಾರ್ನಬರು ಮಿಷನೆರಿ ಪ್ರಯಾಣವನ್ನು ಮುಗಿಸಿದ ಮೇಲೆ ಏನಾಯಿತು? (ಬಿ) ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?
21 ಮಿಷನೆರಿಗಳು ಕೊನೆಯದಾಗಿ ಸಿರಿಯನ್ ಅಂತಿಯೋಕ್ಯಕ್ಕೆ ಹಿಂದಿರುಗಿದಾಗ ಅವರಿಗೆ ಆಳವಾದ ತೃಪ್ತಿಪಡೆಯಲು ಸಾಧ್ಯವಾಯಿತು. ದೇವರು ಅವರಿಗೆ ಕೊಟ್ಟಿದ್ದ ಕೆಲಸವನ್ನು ಅವರು “[ಪೂರ್ತಿಯಾಗಿ, NW] ನೆರವೇರಿಸಿ” ದರೆಂದು ಬೈಬಲ್ ದಾಖಲೆ ನುಡಿಯುತ್ತದೆ. (ಅ. ಕೃತ್ಯಗಳು 14:26) ಗ್ರಹಿಸಸಾಧ್ಯವಾಗುವಂತೆ, ಇವರ ಅನುಭವಗಳ ಹೇಳಿಕೆಯಿಂದ ಅವರು “ಅವರೆಲ್ಲರನ್ನು ಬಹಳವಾಗಿ ಸಂತೋಷಪಡಿಸಿದರು.” (ಅ. ಕೃತ್ಯಗಳು 15:3) ಆದರೆ ಭವಿಷ್ಯದ ವಿಷಯವೇನು? ಅವರೀಗ ಸುಮ್ಮಗೆ ಕುಳಿತು ತಮ್ಮ ಪ್ರಶಸ್ತಿಯಲ್ಲಿ ತೃಪ್ತರಾದಾರೊ? ಇಲ್ಲವೇ ಇಲ್ಲ. ಸುನ್ನತಿಯ ವಿವಾದಾಂಶದಲ್ಲಿ ನಿರ್ಣಯ ಪಡೆಯಲು ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿಯನ್ನು ಭೇಟಿ ಮಾಡಿದ ಬಳಿಕ, ಈ ಇಬ್ಬರು ಪುನಃ ಮಿಷನೆರಿ ಪ್ರಯಾಣಗಳನ್ನು ಬೆಳೆಸಿದರು. ಈ ಸಲ ಅವರು ಪ್ರತ್ಯೇಕ ದಿಕ್ಕುಗಳಿಗೆ ಹೋದರು. ಬಾರ್ನಬನು ಯೋಹಾನ ಮಾರ್ಕನನ್ನು ಕರೆದುಕೊಂಡು ಸೈಪ್ರಸಿಗೆ ಹೋದಾಗ ಪೌಲನು ಹೊಸದಾಗಿ ಕಂಡುಕೊಂಡ ಸಂಗಾತಿಯಾದ ಸೀಲನೊಂದಿಗೆ ಸಿರಿಯ, ಸಿಲಿಸ್ಯಗಳಲ್ಲಿ ಪ್ರಯಾಣಿಸಿದನು. (ಅ. ಕೃತ್ಯಗಳು 15:39-41) ಅವನು ಯುವ ತಿಮೊಥೆಯನನ್ನು ಆಯ್ದುಕೊಂಡು ಕರೆದುಕೊಂಡು ಹೋದದ್ದು ಈ ಪ್ರಯಾಣದಲ್ಲಿಯೇ.
22 ಬಾರ್ನಬನ ದ್ವಿತೀಯ ಪ್ರಯಾಣದ ಪರಿಣಾಮವನ್ನು ಬೈಬಲು ತಿಳಿಸುವುದಿಲ್ಲ. ಪೌಲನಾದರೋ, ಯೂರೋಪಿನ ಹೊಸ ಕ್ಷೇತ್ರಗಳಿಗೆ ಹೋಗಿ ಕಡಮೆ ಪಕ್ಷ ಐದು ನಗರ—ಫಿಲಿಪ್ಪಿ, ಬೆರೋಯ, ಥೆಸಲೊನೀಕ, ಕೊರಿಂಥ, ಮತ್ತು ಎಫೆಸ—ಗಳಲ್ಲಿ ಸಭೆಗಳನ್ನು ಸ್ಥಾಪಿಸಿದನು. ಪೌಲನ ಗಮನಾರ್ಹ ಯಶಸ್ವಿಯ ಕೀಲಿಕೈ ಯಾವುದು? ಇಂದಿನ ಕ್ರೈಸ್ತ ಶಿಷ್ಯನಿರ್ಮಾಣಿಕರಿಗೂ ಅವೇ ಮೂಲಸೂತ್ರಗಳು ಕೆಲಸ ನಡೆಸುತ್ತವೆಯೆ?
ನಿಮಗೆ ನೆನಪಿದೆಯೆ?
▫ ಯೇಸು ಅನುಕರಿಸಲು ಎದ್ದುಕಾಣುವ ಮಾದರಿಯೇಕೆ?
▫ ಬಾರ್ನಬನು ಯಾವ ರೀತಿಯಲ್ಲಿ ಒಂದು ಮಾದರಿಯಾಗಿದ್ದನು?
▫ ಪಿಸಿದ್ಯದ ಅಂತಿಯೋಕ್ಯದಲ್ಲಿ ಪೌಲನು ಕೊಟ್ಟ ಉಪನ್ಯಾಸದಿಂದ ನಾವೇನು ಕಲಿಯುತ್ತೇವೆ?
▫ ಪೌಲ, ಬಾರ್ನಬರು ತಮ್ಮ ನೇಮಕವನ್ನು ಪೂರ್ತಿಯಾಗಿ ನೆರವೇರಿಸಿದ್ದು ಹೇಗೆ?
[ಪುಟ 15 ರಲ್ಲಿರುವ ಚಿತ್ರ]
ಅಪೊಸ್ತಲ ಪೌಲನು ಹಿಂಸೆಯನ್ನು ತಾಳಿಕೊಂಡದ್ದು, ಯುವಕ ತಿಮೊಥೆಯನಲ್ಲಿ ಬಾಳಿಕೆ ಬರುವ ಪರಿಣಾಮವನ್ನು ಉಂಟುಮಾಡಿತು