ಯೆಹೋವನು ನನ್ನನ್ನು ಉತ್ತಮವಾಗಿ ಪರಾಮರಿಸಿದ್ದಾನೆ
ನಾನು ಯೆಹೋವನನ್ನು, ಮಿತವಾಗಿ ಹೇಳುವುದಾದರೆ, ಒಂದು ವಿಚಿತ್ರ ರೀತಿಯಲ್ಲಿ ಸೇವಿಸಲಾರಂಭಿಸಿದೆ. ನಾನು ನ್ಯೂ ಸೀಲೆಂಡಿನ ಅತಿ ಉತ್ತರದ, ನನ್ನಂಥ ಮಾವೊರಿ ಜನರೇ ಮುಖ್ಯವಾಗಿ ವಾಸಿಸುತ್ತಿದ್ದ ಸುಂದರ ಗ್ರಾಮೀಣ ಪ್ರದೇಶದಲ್ಲಿ ಬೆಳೆದೆ. ಒಮ್ಮೆ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದಾಗ ರಸ್ತೆಯಲ್ಲಿ ಬೆನ್ ಎಂಬ ನನ್ನ ಸೋದರ ಮಾವನ ಮಗ (ಕಸ್ನ್) ನನ್ನನ್ನು ಸಮೀಪಿಸಿದ. ಇದು 1942 ರ ಶರತ್ಕಾಲ (ದಕ್ಷಿಣಾರ್ಧ ಗೋಲ, ಉತ್ತರಾರ್ಧ ಗೋಲದಲ್ಲಿ ವಸಂತಕಾಲ) ದಲ್ಲಿ. ನನಗೆ ಆಗ 27 ವರ್ಷ ವಯಸ್ಸು ಮತ್ತು ನಾನು ಆಗ ಚರ್ಚ್ ಆಫ್ ಇಂಗ್ಲೆಡಿನ ಕಾರ್ಯಶೀಲ ಸದಸ್ಯ.
ಬೆನ್ ಅನೇಕ ವರ್ಷಗಳಿಂದ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಆಗಿನ ಅಧ್ಯಕ್ಷ ಜಡ್ಜ್ ರಥರ್ಫೋರ್ಡರ ಪುಸ್ತಕಗಳನ್ನು ಓದುತ್ತಿದ್ದ. ಮತ್ತು ಈಗ ಅವನ ಕೈಯಲ್ಲಿ ನ್ಯೂ ಸೀಲೆಂಡಿನ ಮುಖ್ಯ ಕಚೇರಿಯಿಂದ ಬಂದಿದ್ದ ಒಂದು ಪತ್ರವಿತ್ತು. ಸ್ಥಳೀಕರನ್ನು ಒಂದು ಸ್ಥಳದಲ್ಲಿ ಕರ್ತನ ರಾತ್ರಿ ಭೋಜನವನ್ನು ಆಚರಿಸಲಿಕ್ಕಾಗಿ ಆಮಂತ್ರಿಸಬೇಕೆಂದು ಅದು ಹೇಳಿತು. ಇದಲ್ಲದೆ, ಆ ಆರಾಧನೆಯನ್ನು ನಡಿಸಲು ಬೆನ್ ಯಾರನ್ನಾದರೂ ಏರ್ಪಡಿಸಬೇಕೆಂದೂ ಅದು ಹೇಳಿತು. ನನ್ನನ್ನು ನೋಡಿ, “ನೀನೇ ಆ ವ್ಯಕ್ತಿ” ಎಂದ ಬೆನ್. ಅರ್ಹನೆಂದು ಎಣಿಸಿದುದಕ್ಕೆ ಅಭಿಮಾನಪಟ್ಟ—ಚರ್ಚಿನಲ್ಲಿ ಈ ಸಂಸ್ಕಾರದಲ್ಲಿ ಭಾಗವಹಿಸುತ್ತಿದ್ದೆ—ನಾನು ಅದಕ್ಕೆ ಒಪ್ಪಿದೆ.
ಚರ್ಚಾ ವಿಷಯದ ಸಾಯಂಕಾಲ, ನಮ್ಮ ಕರ್ತನ ಮರಣವನ್ನು ಆಚರಿಸಲು ಸುಮಾರು 40 ಜನರು ಬೆನ್ನ ಮನೆಯಲ್ಲಿ ಸೇರಿಬಂದರೂ ಅವರಲ್ಲಿ ಒಬ್ಬನೂ ಸಾಕ್ಷಿಯಾಗಿರಲಿಲ್ಲ. ನಾನು ಹೋದಾಗ ನನ್ನ ಸೋದರಬಂಧು ನನಗೆ ಆ ಭಾಷಣದ ಹೊರಮೇರೆಯನ್ನು ಕೊಟ್ಟ. ಅಲ್ಲಿ ಕೊಟ್ಟಿದ್ದ ಸಂಗೀತ ಹಾಡುವುದನ್ನು ಬಿಟ್ಟುಬಿಟ್ಟು ಬೆನ್ನ ಭಾವನು ಆರಂಭದ ಪ್ರಾರ್ಥನೆ ಮಾಡುವಂತೆ ನಾನು ಕೇಳಿಕೊಂಡೆ. ಆ ಬಳಿಕ, ಹೊರಮೇರೆಯಲ್ಲಿ ಕೊಟ್ಟಿದ್ದ ವಿಷಯವನ್ನು ನಿರೂಪಿಸಿದೆ. ಅದರಲ್ಲಿ ಅನೇಕ ಪ್ರಶ್ನೆಗಳೂ ಅವುಗಳಿಗೆ ಶಾಸ್ತ್ರಾಧಾರಿತ ಉತ್ತರಗಳೂ ಇದ್ದವು. ಹಾಜರಾಗಿದ್ದ ಸ್ಥಳೀಕ ಪಾದ್ರಿ ಆಕ್ಷೇಪಗಳನ್ನೆತ್ತಿ ತಡೆಮಾಡಿದಾಗ, ಹೊರಮೇರೆಯಲ್ಲಿದ್ದ ಶಾಸ್ತ್ರವಚನಗಳನ್ನು ಓದಿ ಅವುಗಳಿಗೆ ಉತ್ತರ ಕೊಡಲಾಯಿತು.
ಹೊರಮೇರೆಯಲ್ಲಿದ್ದ ಪ್ರಶ್ನೆಗಳಲ್ಲಿ ಒಂದು, ಈ ಸಂಭವವನ್ನು ವರ್ಷದ ಯಾವ ಸಮಯದಲ್ಲಿ ಆಚರಿಸಬೇಕು ಎಂಬುದಾಗಿತ್ತು ಎಂಬ ಜ್ಞಾಪಕ ನನಗಿದೆ. ಹಾಜರಿದ್ದ ಎಲ್ಲರೂ ಕಿಟಿಕಿಯಿಂದ ಪೂರ್ಣಿಮೆಯ ಚಂದ್ರನನ್ನು ನೋಡಿದಾಗ ಅದೆಷ್ಟು ಸಂತೃಪ್ತಿಕರವಾಗಿತ್ತು. ನೈಸಾನ್ 14 ಆ ತಾರೀಕೆಂಬುದು ಸ್ಪಷ್ಟವಾಗಿಯಿತು.
ಅದೆಂಥ ರಾತ್ರಿ! ನಮ್ಮ ಆಚರಣೆ ನಾಲ್ಕು ತಾಸು ದೀರ್ಘವಾಗಿತ್ತು! ಅನೇಕ ಪ್ರಶ್ನೆಗಳು ಎತ್ತಲ್ಪಟ್ಟವು, ಮತ್ತು ಸೊಸೈಟಿಯ ಹೊರಮೇರೆಯಲ್ಲಿದ್ದ ಶಾಸ್ತ್ರವಚನಗಳಿಂದ ಅವುಗಳಿಗೆ ಉತ್ತರ ಕೊಡಲಾಯಿತು. ಹಿನ್ನೋಡುವಾಗ, ನಾನು ಆ ಸಮಯದಲ್ಲಿ ಸಮರ್ಪಿತ ಸಾಕ್ಷಿಯಾಗಿಲದ್ಲಿದ್ದರೂ, ಯೆಹೋವನ ಪ್ರೀತಿಯ ಪರಾಮರಿಕೆಯಲ್ಲದಿದ್ದರೆ ನಾನು ಆ ಅನುಭವವನ್ನು ಪಾರಾಗುತ್ತಿರಲಿಲ್ಲವೆಂದು ನನಗೆ ಗೊತ್ತು. ಆದರೂ, 1942 ರ ಆ ಸ್ಮಾರಕ ರಾತ್ರಿಯಲ್ಲಿ ನನ್ನ ಜೀವನದ ಉದ್ದೇಶವನ್ನು ನಾನು ಕಂಡುಕೊಂಡೆ.
ಆರಂಭದ ಜೀವನ
ನನ್ನ ಜನನ 1914 ರಲ್ಲಾಯಿತು. ನನ್ನ ತಂದೆ ನನ್ನ ಜನನಕ್ಕೆ ಸುಮಾರು ನಾಲ್ಕು ತಿಂಗಳು ಮೊದಲೇ ಸತ್ತಿದ್ದರು. ಪ್ರೀತಿಸಲು ತಂದೆಗಳಿದ್ದ ಇತರ ಮಕ್ಕಳನ್ನು ನೋಡಿ ಚಿಕ್ಕವನಾಗಿದ್ದಾಗ ಅಸೂಯೆಪಡುತ್ತಿದ್ದುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇದು ನನಗೆ ತುಂಬ ವಿಷಾದ ತರುತ್ತಿತ್ತು. ನನ್ನ ತಾಯಿಗಾದರೋ ಗಂಡನಿಲ್ಲದ ಜೀವಿತ ಕಠಿಣ ಹೋರಾಟವಾಗಿತ್ತು. ಪ್ರಥಮ ಲೋಕ ಯುದ್ಧದ ದೂರವ್ಯಾಪಕ ಪರಿಣಾಮ ಇದನ್ನು ಇನ್ನೂ ಕಷ್ಟವಾಗಿ ಮಾಡಿತ್ತು.
ಯುವಕನಾಗಿದ್ದಾಗ, ಆ್ಯಗ್ನೆಸ್ ಕೋಪ್ ಎಂಬ ಯುವತಿಯನ್ನು ನಾನು ಮದುವೆಯಾದೆ, ಮತ್ತು ಕಳೆದ 58 ಕ್ಕೂ ಹೆಚ್ಚು ವರ್ಷಕಾಲ ಆಕೆ ನನ್ನ ಜೀವನ ಸಹಭಾಗಿಯಾಗಿದ್ದಾಳೆ. ಆರಂಭದಲ್ಲಿ ಜೀವನ ಸಾಫಲ್ಯಕ್ಕಾಗಿ ನಾವಿಬ್ಬರೂ ಕೂಡಿ ಹೋರಾಡಿದೆವು. ತೀರಾ ಅನಾವೃಷ್ಟಿಯ ಕಾರಣ ನಾನು ಬೇಸಾಯದಲ್ಲಿ ಸೋತುಹೋದೆ. ಕ್ರೀಡೆಗಳಲ್ಲಿ ನನಗೆ ತುಸು ಬಿಡುಗಡೆ ಸಿಕ್ಕಿದರೂ, 1942 ರ ಆ ಸ್ಮಾರಕಾನುಭವದ ವರೆಗೆ, ನನಗೆ ಜೀವನದಲ್ಲಿ ನಿಜ ಉದ್ದೇಶವಿರಲಿಲ್ಲ.
ಸಂಬಂಧಿಗಳಿಗೆ ಸಾಕ್ಷಿ ನೀಡುವುದು
ಆ ಸ್ಮಾರಕದ ಬಳಿಕ ನಾನು ಬೈಬಲನ್ನು ಶ್ರದ್ಧಾಪೂರ್ವಕವಾಗಿ ಅಭ್ಯಸಿಸಿದೆ. ವಾಚ್ ಟವರ್ ಸೊಸೈಟಿಯು ಪ್ರಕಾಶಿಸಿದ ಬೈಬಲ್ ಸಾಹಿತ್ಯಗಳನ್ನು ನನ್ನ ಕೆಲವು ಸೋದರಬಂಧುಗಳೊಡನೆ ಚರ್ಚಿಸಿದೆ. ಮತ್ತು ಸಪ್ಟಂಬರ 1943 ರಲ್ಲಿ ಇನ್ನೊಂದು ಪ್ರದೇಶದ ಕೆಲವು ಯೆಹೋವನ ಸಾಕ್ಷಿಗಳು ನಮ್ಮ ದೂರದ ಸಮಾಜವನ್ನು ಭೇಟಿ ಮಾಡಲು ಬಂದರು. ನಮ್ಮ ಮಧ್ಯೆ ಒಂದು ತೀವ್ರ, ನಾಲ್ಕು ತಾಸುಗಳ ಚರ್ಚೆ ನಡೆಯಿತು. ಮರು ಮುಂಜಾನೆ ಅವರು ಹೋಗಲಿದ್ದಾರೆ ಎಂದು ಕೇಳಿದ ನಾನು, “ಈಗ ದೀಕ್ಷಾಸ್ನಾನವಾಗುವುದರಿಂದ ನನ್ನನ್ನು ಯಾವುದು ತಡೆಯುತ್ತದೆ?” ಎಂದು ಕೇಳಿದೆ. ನನ್ನ ಇಬ್ಬರು ಸೋದರಬಂಧುಗಳು ಮತ್ತು ನಾನು ಬೆಳಿಗ್ಗೆ ಒಂದೂವರೆ ಗಂಟೆಗೆ ನೀರಿನಲ್ಲಿ ಮುಳುಗಿಸಲ್ಪಟ್ಟೆವು.
ಅಂದಿನಿಂದ, ನಾನು ನನ್ನ ಸಂಬಂಧಿಗಳಿಗೆ ಸಾಕ್ಷಿ ನೀಡಲು ಸವಿಸ್ತಾರವಾಗಿ ಪ್ರಯಾಣ ಮಾಡಿದೆ. ಕೆಲವರು ಅಂಗೀಕರಿಸಿದರು, ಮತ್ತು ಇವರೊಂದಿಗೆ ನಾನು ಮತ್ತಾಯ 24 ನೆಯ ಅಧ್ಯಾಯವನ್ನು ಆಧಾರಮಾಡಿ ಚರ್ಚಿಸಿದೆ. ಇತರರು ಸ್ವೀಕರಿಸಲಿಲ್ಲ, ಮತ್ತು ಇವರಿಗೆ, ಮತ್ತಾಯ 23 ರಲ್ಲಿ ಯೇಸು ಫರಿಸಾಯರಿಗೆ ಹೇಳಿದ ಮಾತುಗಳನ್ನು ಉಪಯೋಗಿಸಿದೆ. ಆದರೆ ಸಮಯಾನಂತರ, ನಮ್ಮ ದಯಾಪರನೂ ಪ್ರೀತಿಪೂರ್ಣನೂ ಆದ ಸ್ವರ್ಗೀಯ ಪಿತನನ್ನು ಅನುಕರಿಸಿ, ನಾನು ಸಮಯೋಚಿತ ನಯದಿಂದ ಮಾತಾಡಲು ಕಲಿತೆ.—ಮತ್ತಾಯ 5:43-45.
ಮೊದಮೊದಲು ಯೆಹೋವನನ್ನು ಸೇವಿಸುವ ನನ್ನ ಬಯಕೆಯನ್ನು ನನ್ನ ಹೆಂಡತಿ ವಿರೋಧಿಸಿದಳು. ಆದರೂ, ಆಕೆ ಬೇಗನೆ ನನ್ನ ಜೊತೆ ಸೇರಿ, ಡಿಸೆಂಬರ್ 1943 ರಲ್ಲಿ ಸಮರ್ಪಿತ ಸ್ನಾತ ಸಂಗಾತಿಯಾದಳು. ಆ ಸ್ಮರಣಯೋಗ್ಯ ದಿನದಲ್ಲಿ, ನಮ್ಮ ವೈಮ ಹಳ್ಳಿಯಿಂದ ಇನ್ನು ಐವರು ಅವಳೊಂದಿಗೆ ದೀಕ್ಷಾಸ್ನಾನ ಪಡೆದರು, ಮತ್ತು ಇದು ಆ ಸ್ಥಳದಲ್ಲಿ ರಾಜ್ಯಪ್ರಚಾರಕರ ಸಂಖ್ಯೆಯನ್ನು ಒಟ್ಟು ಒಂಬತ್ತಕ್ಕೆ ತಂದಿತು.
ವಿರೋಧಗಳ ಎದುರಲ್ಲಿಯೂ ಆಶೀರ್ವಾದಗಳು
ಪುನಃ 1944 ರಲ್ಲಿ ಹೊರಗಿನ ಸಹೋದರರು ನಮ್ಮನ್ನು ಭೇಟಿಮಾಡಿದರು, ಮತ್ತು ಈ ಬಾರಿ ಅವರು ವಿಧಿವಿಹಿತ ಮನೆ ಮನೆಯ ಸೇವೆಯಲ್ಲಿ ನಮಗೆ ಅಗತ್ಯವಿದ್ದ ತರಬೇತನ್ನು ಒದಗಿಸಿದರು. ಸಮಾಜದಲ್ಲಿ ನಮ್ಮ ಇರುವಿಕೆ ಹೆಚ್ಚು ಸುವ್ಯಕ್ತವಾದಷ್ಟಕ್ಕೆ, ಕ್ರೈಸ್ತಪ್ರಪಂಚದ ಪ್ರತಿನಿಧಿಗಳಿಂದ ವಿರೋಧವೂ ಹೆಚ್ಚಿತು. (ಯೋಹಾನ 15:20) ಸ್ಥಳೀಕ ಪಾದ್ರಿಗಳೊಂದಿಗೆ ಪುನಃ ಪುನಃ ಮುಕಾಬಿಲೆಗಳು ನಡೆದ ಕಾರಣ ದೀರ್ಘ ತಾತ್ವಿಕ ಚರ್ಚೆಗಳು ನಡೆದವು. ಆದರೆ ಯೆಹೋವನು ಜಯವನ್ನು ಕೊಡಲಾಗಿ, ನನ್ನ ಸಹೋದರಿ ಸಹಿತ, ಸಮಾಜದ ಇತರ ಸದಸ್ಯರು ಯೆಹೋವನ ಪ್ರೀತಿಯ ಆರೈಕೆಯೊಳಗೆ ಬಂದರು.
ಜೂನ್ 1944 ರಲ್ಲಿ ವೈಮದಲ್ಲಿ ಒಂದು ಸಭೆ ರಚಿಸಲ್ಪಟ್ಟಿತು. ಧಾರ್ಮಿಕ ಹಿಂಸೆ ಮತ್ತು ಹಗೆತನ ಹೆಚ್ಚಾಯಿತು. ಸ್ಥಳೀಕ ಸ್ಮಶಾನದಲ್ಲಿ ಯೆಹೋವನ ಸಾಕ್ಷಿಗಳಿಗೆ ಸಮಾಧಿ ಮಾಡುವುದನ್ನು ಅಲ್ಲಗಳೆಯಲಾಯಿತು. ಕೆಲವು ಸಲ, ವಿರೋಧವು ಹಿಂಸಾತ್ಮಕವಾಗಿ ಪರಿಣಮಿಸಿತು. ಶಾರೀರಿಕ ಮುಕಾಬಿಲೆಗಳೂ ನಡೆದವು. ನನ್ನ ಕಾರು ಮತ್ತು ಅದಿನ್ನಿಟ್ಟಿದ್ದ ಗ್ಯಾರೇಜನ್ನು ಸುಟ್ಟು ಹಾಕಲಾಯಿತು. ಆದರೂ, ಮೂರು ತಿಂಗಳೊಳಗೆ, ಯೆಹೋವನ ಆಶೀರ್ವಾದದಿಂದ, ನಾವು ಒಂದು ಟ್ರಕ್ಕನ್ನು ಖರೀದಿಸಿದೆವು. ಮತ್ತು ನನ್ನ ಹೆಚ್ಚುತ್ತಿದ್ದ ಕುಟುಂಬವನ್ನು ಕೂಟಗಳಿಗೆ ಕೊಂಡೊಯ್ಯಲು ನಾನೊಂದು ಕುದುರೆ ಬಂಡಿಯನ್ನು ಉಪಯೋಗಿಸಿದೆ.
ಒಡನಾಡಿಗಳಲ್ಲಿ ಆದ ವೃದ್ಧಿಯ ಕಾರಣ, ಕೂಟಕ್ಕಾಗಿ ಹೆಚ್ಚು ದೊಡ್ಡ ಸ್ಥಳವು ತೀರ ಜರೂರಿಯದ್ದಾಗಿದ್ದುದರಿಂದ ನಾವು ವೈಮದಲ್ಲಿ ಒಂದು ರಾಜ್ಯ ಸಭಾಗೃಹವನ್ನು ಕಟ್ಟಲು ನಿರ್ಣಯಿಸಿದೆವು. ಇದು ನ್ಯೂ ಸೀಲೆಂಡಿನಲ್ಲಿ ಕಟ್ಟಲ್ಪಟ್ಟ ಪ್ರಥಮ ರಾಜ್ಯ ಸಭಾಗೃಹ. ಡಿಸೆಂಬರ್ 1, 1949 ರಲ್ಲಿ, ಪ್ರಥಮ ಮರಗಳನ್ನು ಕಡಿದಾದ ಬಳಿಕ ನಾಲ್ಕು ತಿಂಗಳುಗಳಲ್ಲಿ, ಆ ಹೊಸ 260 ಆಸನಗಳ ಸಭಾಂಗಣದಲ್ಲಿ ಒಂದು ಸಂಯುಕ್ತ ಸಮ್ಮೇಳನ ಮತ್ತು ಸಮರ್ಪಣೆ ನಡೆಯಿತು. ಆ ದಿವಸಗಳಲ್ಲಿ ಅದೊಂದು ದೊಡ್ಡ, ಯೆಹೋವನ ಸಹಾಯದಿಂದ ಸಾಧಿಸಲ್ಪಟ್ಟ ನಿರ್ವಹಣವಾಗಿತ್ತು.
ಯೆಹೋವನ ಪರಾಮರಿಕೆಯ ಹೆಚ್ಚಿನ ಸಾಕ್ಷ್ಯಗಳು
ನ್ಯೂ ಸೀಲೆಂಡಿನ ದೂರೋತ್ತರದಲ್ಲಿ ರಾಜ್ಯ ಘೋಷಕರ ಸಂಖ್ಯೆ ವೃದ್ಧಿಯಾದಂತೆ, ಸಂಚಾರ ಮೇಲ್ವಿಚಾರಕರು, ಅವಶ್ಯ ಹೆಚ್ಚಿರುವ ಸ್ಥಳಗಳಲ್ಲಿ ಸೇವೆಮಾಡಲು ಪ್ರೋತ್ಸಾಹ ನೀಡಿದರು. ಇದಕ್ಕೆ ಪ್ರತ್ಯುತ್ತರವಾಗಿ, ನಾನು 1956 ರಲ್ಲಿ ಆಕ್ಲೆಂಡಿನ ದಕ್ಷಿಣಕ್ಕಿರುವ ಪೂಕಿಕೋಹಿಗೆ ನನ್ನ ಕುಟುಂಬವನ್ನು ಸಾಗಿಸಿದೆ. ನಾವು ಅಲ್ಲಿ 13 ವರ್ಷ ಸೇವೆ ಮಾಡಿದೆವು.—ಅ. ಕೃತ್ಯಗಳು 16:9 ಹೋಲಿಸಿ.
ಈ ಸಮಯದಲ್ಲಿ, ಯೆಹೋವನ ಪರಾಮರಿಕೆಯ ಎರಡು ದೃಷ್ಟಾಂತಗಳು ನನ್ನ ಜ್ಞಾಪಕದಲ್ಲಿ ಎದ್ದು ನಿಲ್ಲುತ್ತವೆ. ಕೌಂಟಿ ಕೌನ್ಸಿಲಿನಲ್ಲಿ ನಾನು ಟ್ರಕ್ ಡ್ರೈವರ್ ಮತ್ತು ಮಶೀನ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ, ಆಕ್ಲೆಂಡಿನಲ್ಲಿದ್ದ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಲ್ಲಿ, ಕಿಂಗ್ಡಮ್ ಮಿನಿಸ್ಟ್ರಿ ಸ್ಕೂಲಿನ ನಾಲ್ಕು ವಾರಗಳ ಕೋರ್ಸಿಗಾಗಿ ನನ್ನನ್ನು ಆಮಂತ್ರಿಸಲಾಯಿತು. ಈ ಉದ್ದೇಶದಿಂದ ನಾನು ನಾಲ್ಕು ವಾರಗಳ ರಜೆಯನ್ನು ವಿನಂತಿಸಿದಾಗ, ಅಲ್ಲಿಯ ಚೀಫ್ ಎಂಜಿನಿಯರ್, “ಅವಶ್ಯವಾಗಿ ಹೋಗಿ. ಇನ್ನೂ ಹೆಚ್ಚು ಜನರು ನಿಮ್ಮಂತೆ ಇರುತ್ತಿದ್ದರೆ ಒಳ್ಳೆಯದಿತ್ತು. ಹಿಂದೆ ಬಂದಾಗ ನನ್ನನ್ನು ಆಫೀಸಿನಲ್ಲಿ ಬಂದು ನೋಡಿ.” ನಾನು ತರುವಾಯ ಅವರ ಆಫೀಸಿಗೆ ಹೋಗಲಾಗಿ, ನಾನು ಇಲ್ಲದೆ ಇದ್ದ ನಾಲ್ಕು ವಾರಗಳ ಸಂಬಳವನ್ನು ಪಡೆದೆನು. ಹೀಗೆ ನನ್ನ ಕುಟುಂಬದ ಪ್ರಾಪಂಚಿಕ ಆವಶ್ಯಕತೆಗಳು ಪೂರೈಸಲಾದುವು.—ಮತ್ತಾಯ 6:33.
ಇದು ಮೊದಲ ದೃಷ್ಟಾಂತ. ಎರಡನೆಯದ್ದು ಸಂಭವಿಸಿದ್ದು, ನಾನು ಮತ್ತು ನನ್ನ ಹೆಂಡತಿ 1968 ರಲ್ಲಿ ಕ್ರಮದ ಪಯನೀಯರ್ ಸೇವೆಯಲ್ಲಿ ತೊಡಗಿದಾಗ. ಇಲಿಯ್ಲೂ ನಾವು ಆಸರೆಗಾಗಿ ಯೆಹೋವನಲ್ಲಿ ಭರವಸೆ ಇಡಲಾಗಿ ಆತನು ನಮಗೆ ಪ್ರತಿಫಲವನ್ನಿತ್ತನು. ಒಂದು ದಿನ ಬೆಳಿಗ್ಗೆ ಮೊದಲೂಟ ಮುಗಿಸಿ, ನನ್ನ ಹೆಂಡತಿ ಫ್ರಿಜ್ ತೆರೆಯಲಾಗಿ ಒಳಗೆ ಅರ್ಧ ಪೌಂಡ್ ಬೆಣ್ಣೆಯಲ್ಲದೆ ಇನ್ನೇನನ್ನೂ ಕಾಣಲಿಲ್ಲ. “ಸಾರ್ನ್, ಊಟಕ್ಕೆ ಏನೂ ಉಳಿದಿರುವುದಿಲ್ಲ. ನಾವು ಇಂದು ಸಹ ಸೇವೆಗೆ ಹೋಗಬೇಕೊ?” ಎಂದು ಅವಳು ಕೇಳಿದಳು. “ಹೌದು!” ಎಂಬುದು ನನ್ನ ಉತ್ತರವಾಗಿತ್ತು.
ಪ್ರಥಮ ಮನೆಯಲ್ಲಿ, ಮನೆಯವನು ನಾವು ನೀಡಿದ ಪುಸ್ತಕಗಳನ್ನು ತೆಗೆದುಕೊಂಡು ಸ್ನೇಹಭಾವದಿಂದ ಕೆಲವು ಡಜನ್ ಮೊಟ್ಟೆಗಳನ್ನು ವಂತಿಗೆಯಾಗಿ ಕೊಟ್ಟನು. ನಾವು ಭೇಟಿ ಮಾಡಿದ ಎರಡನೆಯ ವ್ಯಕ್ತಿ ತರಕಾರಿಗಳನ್ನು—ಕುಮರ (ಗೆಣಸು), ಕಾಲಿ ಫವ್ಲರ್, ಮತ್ತು ಕ್ಯಾರಟ್—ದಾನವನ್ನು ಕೊಟ್ಟನು. ಆ ದಿನ ನಾವು ಮನೆಗೆ ತಂದ ಇತರ ಆಹಾರ ಪದಾರ್ಥಗಳು ಮಾಂಸ ಮತ್ತು ಬೆಣ್ಣೆ. ನಮ್ಮ ವಿಷಯದಲ್ಲಿ ಯೇಸುವಿನ ಮಾತುಗಳು ಎಷ್ಟು ಸತ್ಯವಾಗಿದ್ದವು: “ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜದಲ್ಲಿ ತುಂಬಿಟ್ಟುಕೊಳ್ಳುವದಿಲ್ಲ. ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?”—ಮತ್ತಾಯ 6:26.
ದೇಶಾಂತರದಲ್ಲಿ ಸೇವಾನೇಮಕ
ಕುಕ್ ದ್ವೀಪಗಳ ರಾರೊಟೊಂಗ! ಇದು 1970 ರಲ್ಲಿ ನಮ್ಮ ಸ್ಪೆಷಲ್ ಪಯನೀಯರ್ ಸೇವಾನೇಮಕವಾಯಿತು. ಇದು ಮುಂದಿನ ನಾಲ್ಕು ವರ್ಷಗಳಲ್ಲಿ ನಮ್ಮ ಮನೆಯಾಗಲಿತ್ತು. ಇಲ್ಲಿದ್ದ ಮೊದಲನೆಯ ಪಂಥಾಹ್ವಾನವು ಹೊಸ ಭಾಷೆಯೊಂದನ್ನು ಕಲಿಯುವುದೇ. ಆದರೂ, ನ್ಯೂ ಸೀಲೆಂಡ್ ಮಾವೊರಿ ಮತ್ತು ಕುಕ್ ಐಲೆಂಡ್ ಮಾವೊರಿಯ ಮಧ್ಯೆ ಸಮಾನತೆ ಇದ್ದುದರಿಂದ, ನಾನು ಬಂದು ಐದು ವಾರಗಳೊಳಗೆ ನನ್ನ ಪ್ರಥಮ ಸಾರ್ವಜನಿಕ ಭಾಷಣವನ್ನು ಕೊಡಶಕ್ತನಾದೆ.
ಕುಕ್ ಐಲೆಂಡ್ಗಳಲ್ಲಿ ಕೆಲವೇ ರಾಜ್ಯ ಪ್ರಚಾರಕರಿದ್ದರು ಮತ್ತು ನಮಗೆ ಕೂಡಿಬರಲು ಸ್ಥಳವಿರಲಿಲ್ಲ. ಇಲಿಯ್ಲೂ, ನಮ್ಮ ಪ್ರಾರ್ಥನೆಗೆ ಉತ್ತರವಾಗಿ, ಯೆಹೋವನು ನಮ್ಮ ಆವಶ್ಯಕತೆಗಳನ್ನು ಪೂರೈಸಿದನು. ಒಬ್ಬ ಅಂಗಡಿಯವನೊಂದಿಗೆ ಮಾಡಿದ ಆಕಸ್ಮಿಕ ಸಂಭಾಷಣೆ, ನಾವು ಯೋಗ್ಯ ಜಮೀನನ್ನು ಗೇಣಿಗೆ ಪಡೆಯುವಂತೆ ಮಾಡಿತು, ಮತ್ತು ಒಂದು ವರ್ಷದೊಳಗೆ ನಾವು ಒಂದು ಸಣ್ಣ ಮನೆ ಮತ್ತು 140 ಆಸನಗಳ ಒಂದು ರಾಜ್ಯ ಸಭಾಗೃಹವನ್ನು ಪಡೆದುಕೊಂಡೆವು. ಅಂದಿನಿಂದ ನಮಗೆ ಆಶೀರ್ವಾದದ ಮೇಲೆ ಆಶೀರ್ವಾದ, ಯೆಹೋವನ ಸ್ತೋತ್ರಕ್ಕಾಗಿ ದೊರಕಿತು.
ನಮಗೆ ಕೊಡಲ್ಪಟ್ಟ ದ್ವೀಪದ ಅತಿಥಿ ಸತ್ಕಾರವನ್ನು ನಾವು ವಿಶೇಷವಾಗಿ ಗಣ್ಯ ಮಾಡಿದೆವು. ಶುಶ್ರೂಷೆಯಲ್ಲಿರುವಾಗ, ಆಗಾಗ್ಗೆ, ನಮಗೆ ಬಿಸಿಯಾದ ಮತ್ತು ತೇವವಿರುವ ಹವಾಮಾನದಲ್ಲಿ ಅತಿ ಇಷ್ಟಕರವಾದ ಚೈತನ್ಯದಾಯಕ ಪಾನೀಯಗಳನ್ನು ನೀಡಲಾಯಿತು. ಅನೇಕ ವೇಳೆ, ನಾವು ಮನೆಗೆ ಬಂದಾಗ ಬಾಳೆ ಹಣ್ಣು, ಪಪಾ, ಮಾವಿನ ಹಣ್ಣು, ಮತ್ತು ಕಿತ್ತಳೆ ಹಣ್ಣುಗಳು ನಮ್ಮ ಬಾಗಿಲಮೆಟ್ಟಲ್ಲಲಿ ಇಡಲ್ಪಡುತ್ತಿದ್ದುವು.
ನನ್ನ ಪತ್ನಿ ಮತ್ತು ನಾನು, ರಾರೊಟೊಂಗದ ಇತರ ಮೂವರು ಪ್ರಚಾರಕರೊಂದಿಗೆ, 1971 ರಲ್ಲಿ ಸುಂದರ ಹರವಿಗೆ ಪ್ರಸಿದ್ಧವಾದ ಐಟಟಾಕಿ ದ್ವೀಪಕ್ಕೆ ಪ್ರಯಾಣ ಬೆಳೆಸಿದೆವು. ಇಲ್ಲಿ ಅತಿಥಿ ಸತ್ಕಾರದ ನಿವಾಸಿಗಳ ಮಧ್ಯೆ ನಾವು ದೇವವಾಕ್ಯ ಪ್ರಿಯರನ್ನು ಕಂಡುಕೊಂಡು ನಾಲ್ಕು ಮನೆಯ ಬೈಬಲ್ ಅಧ್ಯಯನಗಳನ್ನು ಆರಂಭಿಸಿ, ಇವನ್ನು ರಾರೊಟೊಂಗಕ್ಕೆ ಹಿಂದೆ ಬಂದ ಬಳಿಕ ನಾವು ಪತ್ರದ ಮುಖೇನ ಮುಂದುವರಿಸಿದೆವು. ಸಕಾಲದಲ್ಲಿ ಐಟಟಾಕಿಯ ಆ ವಿದ್ಯಾರ್ಥಿಗಳು ದೀಕ್ಷಾಸ್ನಾನಪಟ್ಟು ಅಲ್ಲಿ ಒಂದು ಸಭೆ ರಚಿಸಲ್ಪಟ್ಟಿತು. ಕುಕ್ ಐಲೆಂಡ್ಸಿನ ಎರಡನೆಯ ರಾಜ್ಯ ಸಭಾಗೃಹ 1978 ರಲ್ಲಿ ಕಟ್ಟಲ್ಪಟ್ಟಿತು. ನಮ್ಮ ನೆಡುವ ಮತ್ತು ನೀರು ಹೊಯ್ಯುವ ಕಾರ್ಯಕ್ಕೆ ಉತ್ತರವಾಗಿ ಯೆಹೋವನು ವಿಷಯಗಳು ಬೆಳೆಯುವಂತೆ ಮಾಡಿದನು.—1 ಕೊರಿಂಥ 3:6, 7.
ಕುಕ್ ದ್ವೀಪಸಮುದಾಯದಲ್ಲಿ ಹತ್ತು ದ್ವೀಪಗಳನ್ನು, ಅನೇಕ ವೇಳೆ ಕಷ್ಟಕರ ಪರಿಸ್ಥಿತಿಗಳಲ್ಲಿ, ಸಂದರ್ಶಿಸುವ ಸುಯೋಗ ನನಗಿತ್ತು. ಆಟೀಯು ದ್ವೀಪ, 180 ಕಿಲೊಮೀಟರ್ ದೂರದಲ್ಲಿದ್ದರೂ, ತುಫಾನು ಮತ್ತು ಕ್ಷುಬ್ಧ ಸಮುದ್ರದಿಂದಾಗಿ ದೋಣಿಯ ಪ್ರಯಾಣಕ್ಕೆ ಆರಕ್ಕೂ ಹೆಚ್ಚು ದಿನ ಹಿಡಿಯಿತು. (2 ಕೊರಿಂಥ 11:26 ಹೋಲಿಸಿ.) ಆಹಾರ ಸರಬರಾಯಿ ಮಿತವಾಗಿದ್ದರೂ, ಅನೇಕರು ಸಮುದ್ರಪಿತ್ತದಿಂದ ಬಾಧಿಸಲ್ಪಟ್ಟರೂ, ಯೆಹೋವನ ಪರಾಮರಿಕೆಯಿಂದಾಗಿ ನಾನು ನನ್ನ ಗಮ್ಯಸ್ಥಾನವನ್ನು ಸುಭದ್ರವಾಗಿ ಮುಟ್ಟುವಂತಾಯಿತು. ಇದಕ್ಕಾಗಿ ನಾನು ಕೃತಜ್ಞನಾದೆ.
ಕುಕ್ ದ್ವೀಪಗಳಲ್ಲಿ ಉಳಿಯಲು 1974 ರಲ್ಲಿ ನಮಗೆ ಪರ್ಮಿಟ್ ನಿರಾಕರಿಸಲ್ಪಟ್ಟ ಕಾರಣ ನಾವು ನ್ಯೂ ಸೀಲೆಂಡಿಗೆ ಹಿಂದಿರುಗಬೇಕಾಯಿತು. ಅಷ್ಟರೊಳಗೆ ಆ ದ್ವೀಪಗಳಲ್ಲಿ ಮೂರು ಸಭೆಗಳಿದ್ದವು.
ಹೆಚ್ಚಿನ ಸೇವಾಸುಯೋಗಗಳು—ಮತ್ತು ಒಂದು ಪರೀಕ್ಷೆ
ನ್ಯೂ ಸೀಲೆಂಡಿನಲ್ಲಿ ಹೊಸ ಸಂದರ್ಭದ್ವಾರಗಳು ತೆರೆದವು. (1 ಕೊರಿಂಥ 16:9) ಕಾವಲಿನ ಬುರುಜು ಪತ್ರಿಕೆ ಮತ್ತು ಇತರ ಬೈಬಲ್ ಸಾಹಿತ್ಯಗಳನ್ನು ಕುಕ್ ಐಲೆಂಡ್ ಮಾವೊರಿ ಭಾಷೆಗೆ ತರ್ಜುಮೆ ಮಾಡಲು ಸೊಸೈಟಿಗೆ ಜನ ಬೇಕಾಗಿತ್ತು. ನನಗೆ ಈ ಸುಯೋಗ ಕೊಡಲ್ಪಟ್ಟಿತು, ಮತ್ತು ಅದು ಇಂದಿನ ವರೆಗೂ ನನ್ನದಾಗಿದೆ. ಬಳಿಕ ನನಗೆ, ಮೊದಲು ಸರ್ಕಿಟ್ ಮೇಲ್ವಿಚಾರಕನಾಗಿ, ಅನಂತರ ಬದಲಿ ಡಿಸ್ಟ್ರಿಕ್ಟ್ ಮೇಲಿಚಾರಕನಾಗಿ, ಕುಕ್ ಐಲೆಂಡ್ ಸಹೋದರರನ್ನು ಕ್ರಮವಾಗಿ ಭೇಟಿಮಾಡುವ ಸುಯೋಗ ದೊರಕಿತು.
ಇಂಥ ಒಂದು ಭೇಟಿಯಲ್ಲಿ, ರಾರೊಟೊಂಗದ ಸ್ಪೆಷಲ್ ಪಯನೀಯರ್, ಸಹೋದರ ಆಲಿಕ್ಸ್ ನಾಪ ನನ್ನೊಂದಿಗೆ ಉತ್ತರ ಕುಕ್ ದ್ವೀಪಗಳಾದ ಮಾನಹಿಕಿ, ರಾಕಾಹಂಗ, ಮತ್ತು ಪೆನ್ರಿನ್ಗಳಿಗೆ 23 ದಿನಗಳ ಸಮುದ್ರ ಪಯಣದಲ್ಲಿ ಬಂದರು. ಪ್ರತಿಯೊಂದು ದ್ವೀಪದಲ್ಲಿಯೂ, ಯೆಹೋವನು ಆದರ ಸ್ವಭಾವದ ಸ್ಥಳೀಕರ ಹೃದಯಗಳನ್ನು, ಅವರು ನಮಗೆ ವಸತಿಯನ್ನು ಒದಗಿಸುವಂತೆಯೂ ಹೆಚ್ಚು ಬೈಬಲ್ ಸಾಹಿತ್ಯಗಳನ್ನು ಪಡೆದುಕೊಳ್ಳುವಂತೆಯೂ ಪ್ರೇರಿಸಿದನು. (ಅ. ಕೃತ್ಯಗಳು 16:15) ಈ ದ್ವೀಪಗಳಲ್ಲಿ ಮುತ್ತು ಸಿಂಪಿಗಳು ಧಾರಾಳ, ಮತ್ತು ಅನೇಕ ಸಂದರ್ಭಗಳಲ್ಲಿ, ಲೋಕವ್ಯಾಪಕ ಸಾರುವ ಕೆಲಸದ ಖರ್ಚಿಗಾಗಿ ಜನರು ಮುತ್ತುಗಳನ್ನು ವಂತಿಗೆಯಾಗಿ ಕೊಟ್ಟರು. ಹೀಗೆ ನಾವು ಆತ್ಮಿಕ ಮುತ್ತುಗಳನ್ನು ಕೊಟ್ಟಷ್ಟಕ್ಕೆ ಅಕ್ಷರಾರ್ಥದ ಕೆಲವನ್ನು ಸ್ವೀಕರಿಸಿದೆವು.—ಮತ್ತಾಯ 13:45, 46.
ಜಗತ್ತಿನ ಈ ಚದರಿರುವ ಭಾಗ ಅದೆಷ್ಟು ಸುಂದರ! ಮಹಾ ಬಿಳಿಯ ಷಾರ್ಕುಗಳು ಹರವಿನಲ್ಲಿ ಮಕ್ಕಳೊಂದಿಗೆ ಈಜುವುದನ್ನು ಭಾವಿಸಿ! ರಾತ್ರಿಯ ಆಕಾಶಮಂಡಲವು ಅದೆಂಥ ಶೋಭಾಯಮಾನ ದೃಶ್ಯವನ್ನು ಪ್ರದರ್ಶಿಸಿತು! ಕೀರ್ತನೆಗಾರನ ಮಾತುಗಳು ಅವೆಷ್ಟು ಸತ್ಯ: “ದಿನವು ದಿನಕ್ಕೆ ಪ್ರಕಟಿಸುತ್ತಿರುವದು, ರಾತ್ರಿಯು ರಾತ್ರಿಗೆ ಅರುಹುತ್ತಿರುವದು.”—ಕೀರ್ತನೆ 19:2.
ಆ ಮೇಲೆ, ಒಂಬತ್ತು ವರ್ಷಗಳ ಹಿಂದೆ, ಸಮಗ್ರತೆಯ ನಿಜ ಪರೀಕ್ಷೆಯೊಂದು ಬಂದಿತು. ಮಿದುಳಿನ ರಕ್ತಸ್ರಾವದಿಂದಾಗಿ ನನ್ನ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಶಸ್ತ್ರಚಿಕಿತ್ಸೆ ಬೇಕಾಯಿತಾದರೂ ಡಾಕ್ಟರರು ರಕ್ತವಿಲ್ಲದೆ ಶಸ್ತ್ರ ಚಿಕಿತ್ಸೆಗೆ ಒಪ್ಪಲಿಲ್ಲ. ದೇವರ ನಿಯಮವನ್ನು ಉಲ್ಲಂಘಿಸುವ ಕ್ರಮವಿಧಾನವನ್ನು ನಾನಾಗಲಿ, ನನ್ನ ಪತ್ನಿಯಾಗಲಿ ಶುದ್ಧಾಂತಃಕರಣದಿಂದ ಒಪ್ಪಸಾಧ್ಯವಿರಲಿಲ್ಲ. ಆದರೆ ಸರ್ಜನನ ಆತ್ಮಸಾಕ್ಷಿಯು, ಜೀವವನ್ನು ಉಳಿಸಲು ಸಾಧ್ಯವಿರುವುದನ್ನೆಲ್ಲ, ರಕ್ತಕೊಡುವುದನ್ನೂ ಸೇರಿಸಿ, ಮಾಡಬೇಕೆಂದು ಹೇಳಿತು.
ನನ್ನ ಪತ್ನಿಯ ಆರೋಗ್ಯ ಹೆಚ್ಚೆಚ್ಚು ಕೆಡುತ್ತಿತ್ತು, ಮತ್ತು ಅವಳನ್ನು ತೀವ್ರಾರೈಕೆಯ, ಕೇವಲ ಸೀಮಿತವಾದ ಭೇಟಿಯ ವಾರ್ಡಿನಲ್ಲಿ ಹಾಕಲಾಯಿತು. ಕಿವಿಯ ಹರೆಯ ಮೇಲೆ ಒತ್ತಡದ ಕಾರಣ ಶ್ರವಣ ಸಾಮರ್ಥ್ಯ ನಷ್ಟವಾಯಿತು. ಪರಿಸ್ಥಿತಿ ಸಂದಿಗ್ಧವಾಗಿತ್ತು. ಒಂದು ಭೇಟಿಯ ನಂತರ ನಾನು ಕಾರಿಗೆ ಹೋಗುತ್ತಿದ್ದಾಗ ಒಬ್ಬ ಡಾಕ್ಟರರು ನನ್ನ ಹಿಂದಿನಿಂದ ಬಂದು, ರಕ್ತವಿರುವ ಶಸ್ತ್ರ ಚಿಕಿತ್ಸೆ ಮಾತ್ರ ನನ್ನ ಹೆಂಡತಿಗಿರುವ ಏಕಮಾರ್ಗವೆಂದು ಹೇಳಿ, ಅದಕ್ಕೆ ಒಪ್ಪಬೇಕೆಂದು ಬೇಡಿದರು. ಹೀಗಿದ್ದರೂ, ನನ್ನ ಹೆಂಡತಿಯೂ ನಾನೂ, ಯೆಹೋವನ ನಿಯಮಕ್ಕೆ ವಿಧೇಯತೆಯು ಈಗಿನ ಜೀವಿತದಲ್ಲಿ ಕೆಲವು ವರ್ಷಗಳನ್ನು ನಷ್ಟಗೊಳಿಸುವ ಸಂಭವವಿದ್ದರೂ, ಆತನಲ್ಲೇ ಭರವಸವಿಟ್ಟೆವು.
ಥಟ್ಟನೆ, ನನ್ನ ಹೆಂಡತಿಯ ಸ್ಥಿತಿಯಲ್ಲಿ ಸ್ಪಷ್ಟವಾಗಿದ ಸುಧಾರಣೆ ಕಂಡುಬಂತು. ಒಂದು ದಿನ ನಾನು ಬಂದಾಗ ಅವಳು ಮಂಚದಲ್ಲಿ ಕುಳಿತು ಓದುತ್ತಿದ್ದಳು. ಮುಂದಿನ ದಿವಸಗಳಲ್ಲಿ ಅವಳು ಇತರ ರೋಗಿಗಳಿಗೂ ನರ್ಸ್ಗಳಿಗೂ ಸಾಕ್ಷಿಕೊಡಲು ತೊಡಗಿದಳು. ಬಳಿಕ ನನ್ನನ್ನು ಸರ್ಜನರ ಆಫೀಸಿಗೆ ಕರೆಕಳುಹಿಸಿದರು. ಅವರು ಹೇಳಿದ್ದು: “ಶ್ರೀ ಹ್ವಾರೆರೊ, ನೀವು ಭಾಗ್ಯಶಾಲಿಗಳು! ನಿಮ್ಮ ಹೆಂಡತಿಯ ಸಮಸ್ಯೆ ವಾಸಿಯಾಗಿದೆ ಎಂದು ನಮ್ಮ ನಂಬಿಕೆ.” ಅನಿರೀಕ್ಷಿತವಾಗಿ, ಅವಳ ರಕ್ತದೊತ್ತಡ ಸ್ಥಿರೀಕರಿಸಿತ್ತು. ನನ್ನ ಪತ್ನಿಯೂ ನಾನೂ ಯೆಹೋವನಿಗೆ ಉಪಕಾರ ಹೇಳಿ ಆತನ ಸೇವೆಯಲ್ಲಿ ನಮಗೆ ಸಾಧ್ಯವಿರುವುದನ್ನೆಲ್ಲ ಮಾಡಲು ನಮ್ಮ ದೃಢತೆಯನ್ನು ನವೀಕರಿಸಿದೆವು.
ಈಗ ನಾನು ಪುನಃ ಕುಕ್ ಐಲೆಂಡ್ಸಿಗೆ ನೇಮಿಸಲ್ಪಟ್ಟಿದ್ದು ರಾರೊಟೊಂಗದಲ್ಲಿ ಸೇವೆ ಮಾಡುತ್ತಾ ಇದ್ದೇನೆ. ಎಂಥ ಆನಂದಕರವಾದ ಸುಯೋಗ! ಹಿನ್ನೋಟದಲ್ಲಿ, ಹೆಂಡತಿಯೂ ನಾನೂ ಸುಮಾರು ಐದು ದಶಕಗಳ ಸೇವೆಯಲ್ಲಿ, ನಮ್ಮ ಮೇಲಿದ್ದ ಯೆಹೋವನ ಪರಾಮರಿಕೆಗೆ ಆಭಾರಿಗಳು. ಲೌಕಿಕವಾಗಿ, ನಾವು ಎಂದೂ ಜೀವನಾವಶ್ಯಕತೆರಹಿತರಾಗಿರಲಿಲ್ಲ. ಆತ್ಮಿಕ ಅರ್ಥದಲ್ಲಿ, ಆಶೀರ್ವಾದಗಳು ಕಥನಕ್ಕೆ ಅಸಂಖ್ಯಾತವಾಗಿವೆ. ಸತ್ಯವನ್ನು ಅವಲಂಬಿಸಿದ ನನ್ನ ಶರೀರಸಂಬಂಧಿಗಳ ಸಂಖ್ಯೆ ಇವುಗಳಲ್ಲಿ ಒಂದು. ಈಗ ಸ್ನಾತ ಯೆಹೋವನ ಸಾಕ್ಷಿಗಳಾಗಿರುವ 200 ಮಂದಿಯನ್ನು ನಾನು ಎಣಿಸಬಲ್ಲಿ. ಇವರಲ್ಲಿ 65 ಜನರು ನನ್ನ ನೇರ ಸಂಬಂಧಿಗಳು. ನನ್ನ ಒಬ್ಬ ಮೊಮ್ಮಗ ನ್ಯೂ ಸೀಲೆಂಡ್ ಬೆತೆಲ್ ಕುಟುಂಬದ ಒಬ್ಬ ಸದಸ್ಯ. ನನ್ನ ಒಬ್ಬ ಮಗಳು ಮತ್ತು ಅವಳ ಗಂಡ ಮತ್ತು ನನ್ನ ಇಬ್ಬರು ಗಂಡು ಮಕ್ಕಳು ಬ್ರಾಂಚ್ಗಳಲ್ಲಿ ಕಟ್ಟಡದ ಕೆಲಸ ಮಾಡುತ್ತಿದ್ದಾರೆ.—3 ಯೋಹಾನ 4.
ಮುನ್ನೋಟದಲ್ಲಿ, ಪ್ರಮೋದವನದಲ್ಲಿ ಜೀವಿಸುವ ಪ್ರತೀಕ್ಷೆಯನ್ನು ನಾನು ಅಮೂಲ್ಯವೆಂದೆಣಿಸುತ್ತೇನೆ. ಆಗ ಭೂವ್ಯಾಪಕವಾಗಿ, ಸೌಂದರ್ಯವು ನಾನು ಹುಟ್ಟಿದ ಸುಂದರವಾದ ಹಸಿರು ಕಣಿವೆಯ ಸೌಂದರ್ಯವನ್ನೂ ಮೀರುವುದು. ಪುನರುತ್ಥಾನದಲ್ಲಿ ನನ್ನ ತಂದೆತಾಯಿಗಳನ್ನು ಸ್ವಾಗತಿಸಿ, ಅವರಿಗೆ ಪ್ರಾಯಶ್ಚಿತ್ತ, ರಾಜ್ಯ, ಮತ್ತು ಯೆಹೋವನ ಪರಾಮರಿಕೆಯ ಇತರ ಎಲ್ಲ ವಿಷಯಗಳನ್ನು ತಿಳಿಸುವುದು ಎಂಥ ಸುಯೋಗ.
ದೇವರು ನನ್ನನ್ನು ಪರಾಮರಿಸುತ್ತಾನೆ ಎಂಬ ಜ್ಞಾನದಿಂದ ಪೋಷಿಸಲ್ಪಡುವ ನನ್ನ ದೃಢನಿರ್ಧಾರವು ಕೀರ್ತನೆಗಾರನು ಕೀರ್ತನೆ 104:33 ರಲ್ಲಿ ಹೇಳಿದಂತಿದೆ: “ನಾನು ಬದುಕಿರುವ ವರೆಗೂ ಯೆಹೋವನನ್ನು ಕೀರ್ತಿಸುತ್ತಿರುವೆನು; ಜೀವಮಾನವೆಲ್ಲಾ ನನ್ನ ದೇವರನ್ನು ಭಜಿಸುತ್ತಿರುವೆನು.”—ಸಾರ್ನ್ ಹ್ವಾರೆರೊ ಎಂಬವರ ಹೇಳಿಕೆಯಂತೆ.
[Picture of Sarn Wharerau on page 26]
[ಪುಟ 28 ರಲ್ಲಿರುವ ಚಿತ್ರ]
ನ್ಯೂ ಸೀಲೆಂಡಿನಲ್ಲಿ ಕಟ್ಟಲ್ಪಟ್ಟ ಮೊದಲನೆಯ ರಾಜ್ಯ ಸಭಾಗೃಹ, 1950