ಸಜ್ಜನರು ಯಾಕ ಕಷ್ಟಾನುಭವಿಸುತ್ತಾರೆ?
ವರ್ಷ 1914 ಆಗಿತ್ತು, ಮತ್ತು ಲೋಕವು ಯುದ್ಧದೊಳಗೆ ತೊಡಗಿಸಿಕೊಂಡಿತ್ತು, ಫಕ್ಕನ ಸೆರ್ಬಿಯದ ಯುದ್ಧಬಂದಿಗಳ ಶಿಬಿರವೊಂದರಲ್ಲಿ ಟೈಪಸ್ ಜ್ವರ ಕಾಣಿಸಿಕೊಂಡಿತು. ಆದರೆ ಅದು ಕೇವಲ ಒಂದು ಆರಂಭವಾಗಿತ್ತು. ಈ ಭಯಂಕರ ರೋಗವು ನಾಗರಿಕರಲ್ಲೂ ಹರಡಿತು ಮತ್ತು ಕೇವಲ ಆರು ತಿಂಗಳುಗಳೊಳಗೆ 1,50,000 ಮಂದಿಗಳ ಮೃತ್ಯುವಿಗೆ ಕಾರಣವಾಯಿತು. ಯುದ್ಧಸಮಯಗಳ ಪರಿಸ್ಥಿತಿಗಳ ಮತ್ತು ಅದನ್ನು ಹಿಂಬಾಲಿಸಿ ರಶ್ಯಾದಲ್ಲಿ ಬಂದ ಕ್ರಾಂತಿಯ ನಡುವೆ, ಟೈಪಸ್ನಿಂದ ಮೂವತ್ತು ಲಕ್ಷದಷ್ಟು ಮಂದಿ ಸತ್ತರು. ಅನೇಕ ಸಜ್ಜನರು ಮತ್ತು ಅವರ ದುಃಖಾರ್ತ ಕುಟುಂಬ ಸದಸ್ಯರುಗಳು ಈ ಆಹುತಿಗೇಡಾದವರಲ್ಲಿ ಇದ್ದರು ಎಂದು ನೀವು ಸರಿಯಾಗಿಯೇ ತೀರ್ಮಾನಿಸಬಹುದು.
ಇದು ಮಾನವ ದುರಂತದ ಕೇವಲ ಒಂದು ಉದಾಹರಣೆಯಾಗಿರುತ್ತದೆ. ರೋಗಗಳಿಗೆ, ಅಪಫಾತಗಳಿಗೆ, ಮತ್ತು ಒಂದು ಯಾ ಮಗದೊಂದು ವಿಪತ್ತುಗಳಿಗೆ ಪ್ರಿಯರು ಆಹುತಿಯಾದಾಗ, ಉಂಟಾಗುವ ಫಲಿತಾಂಶಗಳಿಂದಾಗಿ ನೀವು ಸ್ವತಃ ಕಷ್ಟಾನುಭವಿಸಿರಬಹುದು. ಪ್ರಾಯಶಃ, ಗುಣಪಡಿಸಲಾಗದ ರೋಗದ ವೇದನೆಯಿಂದ ಒಬ್ಬ ನೀತಿಯ ವ್ಯಕ್ತಿಯು ನರಳುತ್ತಿರುವಾಗ, ನೀವು ಸಂಕಟಪಡಬಹುದು. ಸಜ್ಜನನೊಬ್ಬನು—ಪ್ರಾಯಶಃ ಕಷ್ಯಪಟ್ಟು ದುಡಿಯುವ ಕುಟುಂಬಸ್ಥನು—ಅಪಫಾತದಿಂದ ಕೊಲ್ಲಲ್ಪಟ್ಟಾಗ ನೀವು ದುಃಖಿತರಾಗಬಹುದು. ಮರಣವಿಯೋಗಗೊಂಡವರ ವಿಲಾಪವು ಅವರಿಗಾಗಿ ನಿಮ್ಮ ಹೃದಯದಲ್ಲಿ ಬೇನೆಯನ್ನು ಉಂಟುಮಾಡಿರಬಹುದು.
ಒಳ್ಳೆಯದನ್ನು ಮಾಡುವ ವ್ಯಕ್ತಿಯೊಬ್ಬನು ಕಷ್ಟಾನುಭವದ ಮುಕ್ತತೆಯ ಪ್ರತಿಫಲವನ್ನು ಹೊಂದಬೇಕೆಂದು ಅನೇಕರು ಭಾವಿಸುತ್ತಾರೆ. ಆಹುತಿಯಾದವನೊಬ್ಬನು ಕೆಟ್ಟವನಾಗಿರುವುದರ ಪುರಾವೆಯಾಗಿ ಕಷ್ಟಾನುಭವ ಇದೆ ಎಂದು ಸಹ ಕೆಲವರು ಎಣಿಸುತ್ತಾರೆ. ಇದು ಸುಮಾರು 3,600 ವರ್ಷಗಳ ಹಿಂದೆ ಜೀವಿಸಿದ್ದ ಮೂವರು ಪುರುಷರ ತರ್ಕಸರಣಿಯಾಗಿತ್ತು. ಸಜ್ಜನನಾಗಿದ್ದ ಯೋಬನೆಂಬ ಹೆಸರಿನವನ ಸಮಾಕಾಲೀನರು ಅವರಾಗಿದ್ದರು. ಸಜ್ಜನರು ಯಾಕೆ ಕಷ್ಟಾನುಭವಿಸುತ್ತಾರೆ ಎಂಬ ಪ್ರಶ್ನೆಗೆ ನಾವು ಉತ್ತರವನ್ನು ಹುಡುಕಲಾರಂಭಿಸುತ್ತಿರುವಂತೆಯೇ, ಅವರ ದಿನಗಳಿಗೆ ನಾವು ಹಿಂತೆರಳೋಣ.
ಯೋಬನ ಕಷ್ಟಾನುಭವಗಳು
ಯೋಬನ ಮೂವರು ಮಿತ್ರರೆನಿಸಿಕೊಳ್ಳುವವರು ಅವನನ್ನು ಭೇಟಿಮಾಡಿದಾಗ, ಅವನು ಅವರ್ಣನೀಯ ರೀತಿಯಲ್ಲಿ ನೋವು ಮತ್ತು ರೋಗದಿಂದ ಬಳಲುತ್ತಾ ಇದ್ದನು. ಅವನ ಹತ್ತು ಮಕ್ಕಳ ಮರಣವಿಯೋಗ ಮತ್ತು ಅವನ ಎಲ್ಲ ಪ್ರಾಪಂಚಿಕ ಸೊತ್ತುಗಳ ನಷ್ಟ ಅವನಿಗಾಗಿತ್ತು. ಯೋಬನನ್ನು ಪ್ರತಿಷ್ಠೆಯ ಸ್ಥಾನದಲ್ಲಿದ್ದವನಾಗಿ ವೀಕ್ಷಿಸುತ್ತಿದ್ದ ಜನರು ಅವನನ್ನು ಹೇಸಿದರು. ಅವನ ಹೆಂಡತಿಯೂ ಕೂಡ ಅವನಿಗೆ ಬೆಂಬಲಿಸುವದನ್ನು ನಿಲ್ಲಿಸಿದಳು ಮತ್ತು ಅವನು ದೇವರನ್ನು ಶಪಿಸಿ ಸಾಯುವಂತೆ ಒತ್ತಾಯಿಸಿದಳು.—ಯೋಬ 1:1-2:13; 19:13-19.
ಏಳು ದಿನಗಳ ವರೆಗೆ ಹಗಲಿರುಳೂ ಯೋಬನ ಸಂದರ್ಶಕರು ಅವನ ಕಷ್ಟಾನುಭವವನ್ನು ಮಾತಾಡದೆ ಅವಲೋಕಿಸಿದರು. ಅನಂತರ, ಅವನ ಅನೀತಿಯ ವರ್ತನೆಗಾಗಿ ಅವನು ಪ್ರಾಯಶಃ ದಂಡಿಸಲ್ಪಟ್ಟಿದ್ದಾನೆ ಎಂದು ಅವರಲ್ಲೊಬ್ಬನು ಆಪಾದಿಸಿದನು. “ನೀವು ಆಲೋಚನೆಮಾಡು,” ಎಲೀಫಜನು ಹೇಳಿದನು: “ನಿರಪರಾಧಿಯು ಎಂದಾದರೂ ನಾಶವಾದದ್ದುಂಟೇ, ಯಥಾರ್ಥರು ಅಳಿದುಹೋದದ್ದೆಲ್ಲಿ? ನಾನು ನೋಡಿರುವ ಮಟ್ಟಿಗೆ ಅಧರ್ಮವನ್ನು ಉತ್ತು ಕೇಡನ್ನು ಬಿತ್ತುವವರು ಕೇಡನ್ನೇ ಕೊಯ್ಯುವರು. ದೇವರ ಶ್ವಾಸದಿಂದ ನಾಶವಾಗುತ್ತಾರೆ, ಆತನ ಸಿಟ್ಟೆಂಬ ಗಾಳಿಯಿಂದ ಹಾಳಾಗುತ್ತಾರೆ.”—ಯೋಬ 4:7-9.
ಹೀಗೆ, ಅವನ ಪಾಪಗಳಿಗಾಗಿ ದೇವರು ಯೋಬನನ್ನು ಶಿಕ್ಷಿಸುತ್ತಾ ಇದ್ದಾನೆ ಎಂದು ಎಲೀಫಜನು ವಾದಿಸಿದನು. ಇಂದು ಕೂಡ, ವಿಪತ್ತುಗಳು ಕೆಟ್ಟತನಕ್ಕಾಗಿ ಜನರನ್ನು ದಂಡಿಸಲು ಉಂಟುಮಾಡಲ್ಪಟ್ಟ ದೇವರ ಕೃತ್ಯಗಳನ್ನು ಗೈದಿರುವುದಕ್ಕಾಗಿ ಯೆಹೋವನು ಯೋಬನನ್ನು ದಂಡಿಸುತ್ತಾ ಇರಲಿಲ್ಲ. ಇದನ್ನು ನಾವು ತಿಳಿದಿದ್ದೇವೆ, ಯಾಕೆಂದರೆ ದೇವರು ಕೊನೆಯಲ್ಲಿ ಎಲೀಫಜನಿಗೆ ಹೇಳಿದ್ದು: “ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀವು ಆಡಲಿಲ್ಲ.”—ಯೋಬ 42:7.
ತಪ್ಪು ದೇವರದ್ದಲ್ಲ
ಇಂದು, ಲಕ್ಷಾಂತರ ಜನರು—ಖಂಡಿತವಾಗಿಯೂ ಇವರಲ್ಲಿ ಅನೇಕರು ಸಜ್ಜನರು ಸೇರಿ—ದಾರಿದ್ರ್ಯತನಕ್ಕೊಳಗಾಗಿದ್ದಾರೆ ಮತ್ತು ಹೊಟ್ಟೆಗಿಲ್ಲದೆ ಸಾಯುವ ಅಂಚಿನಲ್ಲಿದ್ದಾರೆ. ಕೆಲವು ವ್ಯಕ್ತಿಗಳು ಕಹಿಮನಸ್ಕರಾಗಿದ್ದಾರೆ ಮತ್ತು ಅವರ ಕಷ್ಟಾನುಭವಕ್ಕಾಗಿ ದೇವರನ್ನು ತೆಗಳುತ್ತಾರೆ. ಆದರೆ ಕ್ಷಾಮಕ್ಕಾಗಿ ಅವನನ್ನು ತೆಗಳಬೇಕೆಂದಿಲ್ಲ. ವಾಸ್ತವದಲ್ಲಿ, ಮಾನವ ಕುಲಕ್ಕೆ ಆಹಾರವನ್ನು ಒದಗಿಸುವವನು ಆತನಾಗಿದ್ದಾನೆ.—ಕೀರ್ತನೆ 65:9.
ಸ್ಪಾರ್ಥ, ದುರಾಶೆ, ಮತ್ತು ಇತರ ಮಾನವ ವಿಷಯಗಳು ಹಸಿದವರಿಗೆ ಆಹಾರವು ತಲುಪುವದನ್ನು ತಡೆಗಟ್ಟಬಹುದು. ಕ್ಷಾಮದ ಕಾರಣಗಳಲ್ಲಿ ಯುದ್ಧ ಕಾರ್ಯಾಚರಣೆಯು ಸೇರಿದೆ. ಉದಾಹರಣೆಗೆ, ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಅನೇಕ ರೈತರು ತಮ್ಮ ಗದ್ದೆಗಳನ್ನು ತೊರೆದು, ಸೇನೆಗಳಲ್ಲಿ ಭರ್ತಿಯಾಗುವುದಾದರೆ, ಯುದ್ಧವು ಕ್ಷಾಮದಲ್ಲಿ ಪರಿವರ್ತಿತವಾಗಬಹುದು. ಕೆಲವೊಂದು ವಿದ್ಯಮಾನಗಳಲ್ಲಿ, ಶರಣಾಗತರಾಗಲು ವೈರಿಗಳನ್ನು ಹಸಿವೆಗೆ ನಡಿಸುವ ಕ್ಷಾಮವೊಂದನ್ನು ಬೇಕುಬೇಕೆಂದೇ ಸೇನೆಯು ಸೃಷ್ಟಿಸುತ್ತದೆ. ಸೇನೆಯು ದಾಸ್ತಾನಿಟ್ಟ ಆಹಾರವನ್ನು ಮತ್ತು ಬೆಳೆಯುತ್ತಿರುವ ಪೈರನ್ನು ನಾಶಮಾಡುತ್ತದೆ ಮತ್ತು ವೈರಿಯ ಆಹಾರ ಪೂರೈಕೆಯನ್ನು ನಿಲ್ಲಿಸಲು ತಡೆಗಟ್ಟನ್ನು ನಿರ್ಮಿಸುತ್ತದೆ. ನೈಜಿರೀಯಾದ ಆಂತರಿಕ ಯುದ್ಧದ ಸಮಯದಲ್ಲಿ (1967-70), ಬಿಯಾಫ್ರ ಪ್ರದೇಶಕ್ಕೆ ಆಹಾರದ ಸರಬರಾಜುಗಳನ್ನು ದಿಗ್ಬಂಧನಗಳು ಅಡ್ಡಿಗೈದವು. ಫಲವಾಗಿ ಕ್ಷಾಮವುಂಟಾಯಿತು, ಮತ್ತು ಹತ್ತು ಲಕ್ಷಕ್ಕಿಂತಲೂ ಹೆಚ್ಚು ಬಿಯಾಫ್ರದ ನಿವಾಸಿಗಳು ಪ್ರಾಯಶಃ ಹೊಟ್ಟೆಗಿಲ್ಲದೆ ಹೋದರು.”
ವಿಶೇಷವಾಗಿ ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಅನೇಕ ಸಜ್ಜನರು ಸಂಕಟಕ್ಕೀಡಾದಾಗ ಮತ್ತು ಸತ್ತಾಗ, ಕೆಲವರು ತಪ್ಪಾಗಿ ದೇವರನ್ನು ದೂಷಿಸಿದರು. ಆದರೂ, ದ್ವೇಷಿಸುವ ಮತ್ತು ಒಬ್ಬರಿಗೊಬ್ಬರು ಯುದ್ಧಮಾಡುವ ಮೂಲಕ ದೇವರ ನಿಯಮವನ್ನು ಜನರು ಮೀರುತ್ತಾರೆ. ಎಲ್ಲಾ ಆಜ್ಞೆಗಳಲ್ಲಿ “ಮೊದಲನೆಯದು” ಯಾವದು ಎಂದು ಯೇಸು ಕ್ರಿಸ್ತನಿಗೆ ಕೇಳಲ್ಪಟ್ಟಾಗ, ಅವನು ಉತ್ತರಿಸಿದ್ದು: “ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತನು ಒಬ್ಬನೇ ದೇವರು; ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ ಎರಡನೆಯ ಆಜ್ಞೆ. ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ.”—ಮಾರ್ಕ 12:28-31.
ಸಾಮೂಹಿಕ ಹತ್ಯೆಮಾಡಿ, ಮಾನವರು ದೇವರ ನಿಯಮವನ್ನು ಭಂಗಗೊಳಿಸುವಾಗ, ಅದರ ಫಲಿತಾಂಶವಾಗಿ ಬರುವ ಕಷ್ಟಾನುಭವಕ್ಕಾಗಿ ಅವನನ್ನು ಯೋಗ್ಯವಾಗಿ ಯಾರಾದರೂ ದೂಷಿಸಬಹುದೇ? ಅವರೊಳಗೆ ಜಗಳಮಾಡಿಕೊಳ್ಳಬಾರದೆಂದು ಹೆತ್ತವನೊಬ್ಬನು ತನ್ನ ಮಕ್ಕಳಿಗೆ ಹೇಳಿದರೆ, ಮತ್ತು ಅವನ ಒಳ್ಳೆಯ ಸಲಹೆಯನ್ನು ಅವರು ಅಲಕ್ಷಿಸಿ, ಅವರು ಗಾಯಗೊಂಡರೆ ಅವನದಕ್ಕೆ ಜವಾಬ್ದಾರನೋ? ದೈವಿಕ ನಿಯಮಗಳನ್ನು ಜನರು ಅಲಕ್ಷಿಸಿದಾಗ ಆಗುವ ಮಾನವ ಕಷ್ಟಾನುಭವಕ್ಕೆ, ದೇವರು ಎಷ್ಟೊಂದು ಜವಾಬ್ದಾರನಲ್ಲವೊ, ಅಷ್ಟೇ ಹೆತ್ತವನೂ ಆಗಿರುವದಿಲ್ಲ.
ಯೆಹೋವನ ನಿಯಮಗಳನ್ನು ಅಲಕ್ಷಿಸಿದಾಗ ಕಷ್ಟಾನುಭವ ಫಲಿತಾಂಶವಾಗಿ ಬರಬಹುದಾದರೂ, ಸಾಮಾನ್ಯವಾಗಿ ಸಂಭವಿಸುವ ವಿಪತ್ತುಗಳು, ದುಷ್ಟರನ್ನು ದಂಡಿಸಲು ದೇವರಿಂದ ರೂಪಿಸಲ್ಪಟ್ಟ ಕೃತ್ಯಗಳೆಂದು ಬೈಬಲು ಸೂಚಿಸುವದಿಲ್ಲ. ಮೊದಲನೆಯ ಮಾನವ ಜೋಡಿಯು ಪಾಪಗೈದಾಗ, ಅವನ ವಿಶೇಷ ಆಶೇರ್ವಾದ ಮತ್ತು ಸುರಕ್ಷೆಯನ್ನು ಅವರು ಕಳಕೊಂಡರು. ಯೆಹೋವನ ಉದ್ದೇಶಗಳನ್ನು ಪೂರೈಸಲು ದೈವಿಕ ಹಸ್ತಕ್ಷೇಪದ ವಿದ್ಯಮಾನಗಳ ಹೊರತಾಗಿ, ದಿನದಿಂದ ದಿನಕ್ಕೆ ಮಾನವ ಕುಲಕ್ಕೆ ಏನು ಸಂಭವಿಸಿದೆಯೋ ಅದು ಈ ಶಾಸ್ತ್ರಿಯ ಸೂತ್ರದಿಂದ ಆಳಲ್ಪಡುತ್ತದೆ: “ನಾನು ಲೋಕದಲ್ಲಿ ತಿರಿಗಿ ದೃಪ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು; ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.”—ಪ್ರಸಂ. 9:11.
ಸಜ್ಜನರೂ, ದುರ್ಜನರೂ ಇಬ್ಬರೂ ಕಷ್ಟಾನುಭವಿಸುತ್ತಾರೆ
ವಾಸ್ತವದಲ್ಲಿ, ಬಾಧ್ಯತೆಯಾಗಿ ಬಂದ ಪಾಪ ಮತ್ತು ಅಪರಿಪೂರ್ಣತೆಯ ಕಾರಣ ಸಜ್ಜನರೂ, ದುರ್ಜನರೂ ಇಬ್ಬರೂ ಕಷ್ಟಾನುಭವಿಸುತ್ತಾರೆ. (ರೋಮಾಪುರ 5:12) ಉದಾಹರಣೆಗೆ, ನೀತಿಯ ಹಾಗೂ ದುಷ್ಟ ಜನರು ಏಕಪ್ರಕಾರವಾಗಿ ವೇದನಾಮಯ ರೋಗಗಳನ್ನು ಅನುಭವಿಸುತ್ತಾರೆ. ನಂಬಿಗಸ್ತ ಕ್ರೈಸ್ತ ತಿಮೊಥೆಯನು “ಆಗಾಗ್ಗೆ ಉಂಟಾಗುವ ಅಸ್ವಸ್ಥತೆಯ” ಕಾರಣ ಬಾಧೆಪಟ್ಟಿದ್ದನು. (1 ತಿಮೊಥೆಯ 5:23) ಅಪೊಸ್ತಲ ಪೌಲನು ತನ್ನ ಸ್ವಂತ “ದೇಹದಲ್ಲಿ ಶೂಲ” (NW) ಕುರಿತು ಹೇಳಿದಾಗ, ಅವನು ಯಾವುದೋ ಒಂದು ದೈಹಿಕ ಯಾತನೆಯನ್ನು ಪರೋಕ್ಷವಾಗಿ ಹೇಳುತ್ತಿದ್ದಿರಬಹುದು. (2 ಕೊರಿಂಥ 12:7-9) ಅವನ ನಿಷ್ಠಾವಂತ ಸೇವಕರಿಗೂ ಕೊಡ, ದೇವರು ಬಾಧ್ಯತೆಯಾಗಿ ಬಂದ ದುರ್ಬಲತೆಗಳ ಯಾ ರೋಗಗಳಿಗೆ ಈಡಾಗುವಿಕೆಯನ್ನು ಈಗ ತೆಗೆಯುವುದಿಲ್ಲ.
ನ್ಯೂನ ನಿರ್ಣಯಗಳನ್ನು ಬಳಸುವದರಿಂದ ಯಾ ಕೆಲವೊಮ್ಮೆ ಶಾಸ್ತ್ರೀಯ ಬುದ್ಧಿವಾದವನ್ನು ಅನ್ವಯಿಸಲು ತಪ್ಪುವುದರಿಂದ ದೇವ ಜನರೂ ಕೂಡ ಸಂಕಟಕ್ಕೊಳಗಾಗಬಹುದು. ಉದಾಹರಿಸಲು: ದೇವರಿಗೆ ಅವಿಧೇಯನಾಗಿ ಒಬ್ಬನು ಅವಿಶ್ವಾಸಿಯನ್ನು ಮದುವೆಯಾಗುವುದಾದರೆ, ಅವನು ಹೋಗಲಾಡಿಸ ಸಾಧ್ಯವಿದ್ದಂಥಾ ವೈವಾಹಿಕ ತೊಂದರೆಗಳಿಂದ ಬಾಧಿತನಾಗಬಹುದು. (ಧರ್ಮೊಪದೇಶಕಾಂಡ 7:3, 4; 1 ಕೊರಿಂಥ 7:39) ಕ್ರೈಸ್ತನೊಬ್ಬನು ಯೋಗ್ಯವಾಗಿ ಊಟಮಾಡದಿದ್ದರೆ ಮತ್ತು ಬೇಕಾಗುವಷ್ಟು ವಿಶ್ರಾಂತಿ ತಕ್ಕೊಳ್ಳದಿದ್ದರೆ, ಅವನ ಆರೋಗ್ಯವು ಕೆಟ್ಟು ಹೋಗುವ ಕಾರಣ ಅವನು ಕಷ್ಟಾನುಭವಿಸಬಹುದು.
ನಾವು ದುರ್ಬಲತೆಗ ಈಡಾಗಿ ಮತ್ತು ತಪ್ಪು ವರ್ತನೆಯಲ್ಲಿ ತೊಡಗಿಸಿಕೊಳ್ಳುವದರ ಮೂಲಕ ಭಾವನಾತ್ಮಕವಾಗಿ ಸಂಕಟಪಡುವ ಫಲಿತಾಂಶವುಂಟಾಗಬಹುದು. ಬತ್ಸೇಬಳೊಂದಿಗೆ ರಾಜ ದಾವೀದನ ವ್ಯಭಿಚಾರವು ಅವನಿಗೆ ಬಹಳ ಸಂಕಟವನ್ನು ತಂದಿತು. (ಕೀರ್ತನೆ 51) ತಪ್ಪುಗೈದಿರುವುದನ್ನು ಅಡಗಿಸಿಕೊಳ್ಳಲು ಪ್ರಯತ್ನಿಸುವಾಗ, ಅವನು ಗಾಢವಾಗಿ ಸಂಕಟಪಟ್ಟನು. ಅವನಂದದ್ದು: “ನಾನು [ಪಾಪವನ್ನು] ಅರಿಕೆಮಾಡದೆ ಇದ್ದಾಗ ದಿನವೆಲ್ಲಾ ನರಳುವದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು. ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು; ಬೇಸಿಗೆಯ ನೀರಿನಂತೆ ನನ್ನ ಶರೀರದ ಸಾರವೆಲ್ಲಾ ಬತ್ತಿಹೋಯಿತು.” (ಕೀರ್ತನೆ 32:3, 4) ಅವನ ತಪ್ಪಿನ ಬೇಗುದಿಯು, ಮರವು ಅನಾವೃಷ್ಟಿಯಲ್ಲಿ ಯಾ ಬೇಸಗೆಯ ಒಣ ಬಿಸಿಯಿಂದ ಜೀವಕೊಡುವ ತೇವವನ್ನು ಕಳೆದುಕೊಳ್ಳುವಂತೆ, ದಾವೀದನ ಚಟುವಟಿಕಾಶಕ್ತಿಯನ್ನು ಕುಂಠಿತಗೊಳಿಸಿತು. ಅವನು ಮಾನಸಿಕವಾಗಿಯೂ, ದೈಹಿಕವಾಗಿಯೂ ನರಳುತ್ತಿದ್ದಿರಬಹುದು. ಆದರೆ ಕೀರ್ತನೆ 32 ತೋರಿಸುವುದೇನಂದರೆ ವ್ಯಕ್ತಿಯೊಬ್ಬನು ಪಶ್ಚಾತ್ತಾಪಪೂರ್ವಕವಾಗಿ ಪಾಪದ ಅರಿಕೆಯನ್ನು ಮಾಡುವುದರಿಂದ ಮತ್ತು ದೇವರ ಕ್ಷಮಾಪಣೆಯನ್ನು ಪಡೆಯುವುದರಿಂದ ಅಂಥ ಸಂಕಟವನ್ನು ನಿವಾರಿಸಬಹುದು.—ಜ್ಞಾನೋಕ್ತಿ 28:13.
ಕೆಟ್ಟ ಜನರು ವಿಷಯಲಂಪಟತನದ ಮಾರ್ಗವನ್ನು ಬೆನ್ನಟ್ಟುವದರಿಂದ ಆಗಾಗ್ಗ ಬಾಧೆಪಡುತ್ತಾರೆ, ಒಂದು ದೈವಿಕ ದಂಡನೆಯೋಪಾದಿ ಅಲ್ಲ. ದುಷ್ಟಚಟಗಳ ಕಾರಣ ಮಹಾ ಹೆರೋದನು ರೋಗ ಪೀಡಿತನಾಗಿದ್ದನು. ಅವನ ಕೊನೆಯ ದಿವಸಗಳಲ್ಲಿ, “ಭಯಂಕರ ಯಾತನೆಗಳನ್ನು ಅನುಭವಿಸಿದನು” ಎಂದು ಯೆಹೂದ್ಯ ಇತಿಹಾಸಕಾರ ಜೊಸೀಫನ್ ಹೇಳುತ್ತಾನೆ. “ಸ್ವತಃ ತನ್ನನ್ನು ಕೆರೆದುಕೊಳ್ಳುವ ಭಯಂಕರ ಹಂಬಲ ಅವನಿಗಿತ್ತು, ಅವನ ಕರುಳುಗಳು ಗಾಯಗೊಂಡಿದ್ದವು, ಮತ್ತು ಅವನ ಗುಪ್ತಾಂಗಗಳು ಅರ್ಬುದ ವ್ಯಾಧಿ ಮತ್ತು ಹುಳಗಳಿಂದ ತುಂಬಿದ್ದವು. ಕಾಲಿರ್ಹೋದ ಬೆಚ್ಚಗಿನ ಬುಗ್ಗೆಗಳಿಂದ ಅವನ ಮೇಲುಸಿರು ಮತ್ತು ಸೆಳವುಗಳಿಂದ ಮುಕ್ತಗೊಳ್ಳಲು ಅವನು ವ್ಯರ್ಥವಾದ ರೀತಿಯಲ್ಲಿ ಪ್ರಯತ್ನಿಸಿದನು. . . . ಅವನು ಎಷ್ಟೊಂದು ಭಯಂಕರವಾಗಿ ನರಳುತ್ತಿದ್ದನೆಂದರೆ ಸ್ವತಃ ತನ್ನನ್ನೇ ಇರಿದುಕೊಳ್ಳಲು ಪ್ರಯತ್ನಿಸಿದನು, ಆದರೆ ಅವನ ಸೋದರಬಂಧುವಿನಿಂದ ತಡೆಯಲ್ಪಟ್ಟನು.”—ಜೊಸಿಫಸ್: ದ ಎಸೆನ್ಸಿಯಲ್ ರೈಟಿಂಗ್ಸ್, ಪೌಲ್ ಎಲ್. ಮೈಇರ್ರಿಂದ ತರ್ಜುಮೆ ಮತ್ತು ಸಂಪಾದಕತನ ಮಾಡಲ್ಪಟ್ಟದ್ದು.
ದೇವರ ನಿಯಮಗಳಿಗೆ ಅಂಟಿಕೊಂಡಿರುವುದು ಲೈಂಗಿಕವಾಗಿ ರವಾನಿಸಲ್ಪಡುವ ರೋಗದಂತಹ ಸಂಗತಿಗಳ ವಿರುದ್ಧ ಕೆಲವೊಂದು ಸುರಕ್ಷೆಯನ್ನು ಒದಗಿಸುವದು. ಆದರೂ, ಅವನ ಮೆಚ್ಚಿಕೆಯನ್ನು ಪಡೆಯಲು ಹುಡುಕುವವರಿಗೆ ಅವರ ಪಾಲಿಗಿಂತಲೂ ಅಧಿಕ ಕಷ್ಟಾನುಭವವು ಇರುವಂತೆ ತೋರುವುದು ಯಾಕೆ?
ದೇವ ಜನರು ಕಷ್ಟಾನುಭವಿಸುವ ಕಾರಣ
ದೇವ ಜನರು ನೀತಿವಂತರಾಗಿರುವ ಕಾರಣ ಅವರು ಕಷ್ಟಾನುಭವಿಸುವ ಪ್ರಾಥಮಿಕ ಕಾರಣವಾಗಿದೆ. ಇದು ಮೂಲಪಿತೃನಾದ ಯಾಕೋಬನ ಮಗನಾದ ಯೋಸೇಫನ ವಿಷಯದಲ್ಲಿ ಉದಾಹರಿಸಲ್ಪಟ್ಟಿದೆ. ಎಡೆಬಿಡದೆ ಫೋಟೀಫರನ ಹೆಂಡತಿಯು ಅವನೋಡನೆ ಲೈಂಗಿಕ ಸಂಬಂಧಮಾಡುವದಕ್ಕೆ ಕರೆಯುತ್ತಿದ್ದರೂ, ಅವನು ಪ್ರಶ್ನಿಸಿದ್ದು: “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ?” (ಆದಿಕಾಂಡ 39:9) ಇದು ಅನ್ಯಾಯವಾದ ಸೆರೆಮನೆವಾಸಕ್ಕೆ ನಡಿಸಿತು, ಮತ್ತು ಯೋಸೇಫನು ಸತ್ಯವಂತನಾದ ಕಾರಣ ಅವನು ಬಾಧೆಪಟ್ಟನು.
ಆದರೆ ಅವನ ನಂಬಿಗಸ್ತ ಸೇವಕರು ಕಷ್ಟವನ್ನನುಭವಿಸುವಂತೆ ದೇವರು ಯಾಕೆ ಅನುಮತಿಸುತ್ತಾನೆ? ದಂಗೆಕೋರ ದೇವದೂತ, ಪಿಶಾಚನಾದ ಸೈತಾನನಿಂದ ಎಬ್ಬಿಸಲ್ಪಟ್ಟ ಒಂದು ವಿವಾದದಲ್ಲಿ ಉತ್ತರವು ಇರುತ್ತದೆ. ಈ ವಿವಾದದಲ್ಲಿ ದೇವರಿಗೆ ಯಥಾರ್ಥತೆಯು ಒಳಗೂಡಿರುತ್ತದೆ. ನಾವದನ್ನು ತಿಳಿದಿರುವುದು ಹೇಗೆ? ಇದು ಈ ಮೊದಲು ಉಲ್ಲೇಖಿಸಲ್ಪಟ್ಟ ನೀತವಂತ ಮನುಷ್ಯನಾದ ಯೋಬನ ವಿಚಾರದಲ್ಲಿ ತೋರಿಸಲ್ಪಟ್ಟಿದ್ದರಿಂದಲೇ.
ದೇವದೂತ ಪುತ್ರರುಗಳ ಪರಲೋಕದಲ್ಲಿನ ಕೂಟವೊಂದರಲ್ಲಿ, ಯೆಹೋವನು ಸೈತಾನನಿಗೆ ಕೇಳಿದ್ದು: “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ.” ಶೋಧನೆಯ ಕೆಳಗೆ ಮಾನವರು ಯೆಹೋವನಿಗೆ ಯಥಾರ್ಥತೆಯನ್ನು ಕಾಪಾಡಿಕೊಳ್ಳುವರೋ ಇಲ್ಲವೋ ಎಂಬ ಒಂದು ವಾದವು ಅಲ್ಲಿತ್ತು ಎಂದು ಸೈತಾನನ ಉತ್ತರವು ರುಜುಪಡಿಸುತ್ತದೆ. ಯೋಬನು ದೇವರನ್ನು ಸೇವಿಸುವದು, ಪ್ರಾಪಂಚಿಕ ಆಶೀರ್ವಾದಗಳನ್ನು ಆನಂದಿಸುವ ಕಾರಣದಿಂದಲೇ ಹೊರತು ಪ್ರೀತಿಯಿಂದಲ್ಲ ಎಂದು ಸೈತಾನನು ಸ್ವಸಮರ್ಥನೆ ಮಾಡಿದನು. ಅನಂತರ ಸೈತಾನನು ಅಂದುದ್ದು: “ಆದರೆ ಕೈನೀಡಿ ಅವನ [ಯೋಬನ] ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.” ಯೆಹೋವನು ಉತ್ತರಿಸಿದ್ದು: “ಅವನ ಸ್ವಾಸ್ಥ್ಯವೆಲ್ಲಾ ನಿನ್ನ ಕೈಯಲ್ಲಿದೆ, ನೋಡು. ಆದರೆ ಅವನ ಮೈಮೇಲೆ ಮಾತ್ರ ಕೈಹಾಕಬೇಡ.”—ಯೋಬ 1:6-12.
ಸೈತಾನನು ಸಾಧ್ಯವಿರುವದನ್ನೆಲ್ಲಾ ಮಾಡಿದರೂ, ಯೋಬನು ತನ್ನ ನೀತಿಯ ನಿಲುವನ್ನು ಕಾಪಾಡಿಕೊಂಡನು ಮತ್ತು ಪ್ರೀತಿಯಿಂದಲೇ ಯೆಹೋವನನ್ನು ತಾನು ಸೇವಿಸಿದ್ದೇನೆ ಎಂದು ರುಜುಪಡಿಸಿದನು. ಖಂಡಿತವಾಗಿಯೂ, ತನ್ನ ಆಪಾದಕರಿಗೆ ಯೋಬನು ಹೀಗೆ ಹೇಳಿದನು: “ನೀವು ನ್ಯಾಯವಂತರೆಂದು ನಾನು ಒಪ್ಪುವದು ದೂರವಾಗಿರಲಿ, ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು.” (ಯೋಬ 27:5) ಹೌದು, ಅಂತಹ ಯಥಾರ್ಥತ್ಪ ಪಾಲಕರು ನೀತಿಯ ಕಾರಣದಿಂದ ಬಾಧೆಪಡಲು ಯಾವಾಗಲೂ ಸಿದ್ಧರಾಗಿದ್ದಾರೆ. (1 ಪೇತ್ರ 4:14-16) ದೇವರಿಗಾಗಿ ಪರಾಜಯಗೊಳ್ಳದ ಪ್ರೀತಿಯಿದ್ದ ಮತ್ತು ಅವನನ್ನು ಗೌರವಿಸಲು ನೀತಿಯ ಜೀವಿತಗಳನ್ನು ಜೀವಿಸಿದ ಮತ್ತು ಯೆಹೋವನಿಂದ ಎಲ್ಲಾ ಮಾನವರನ್ನು ದೂರ ಸೆಳೆಯಲು ತನಗೆ ಸಾಧ್ಯವಿದೆ ಎಂಬ ಸೈತಾನನ ವಾದವನ್ನು ಸುಳ್ಳೆಂದು ರುಜುವಾಡಿದ ಅನೇಕರ ಕುರಿತು ಬೈಬಲ್ ಹೇಳುತ್ತದೆ. ದೇವರಿಗೆ ಯಥಾರ್ಥತೆಯನ್ನು ಕಾಪಾಡಿಕೊಳ್ಳುವ ಕಾರಣದಿಂದ ಕಷ್ಟವನ್ನನುಭವಿಸುವ ಪ್ರತಿಯೊಬ್ಬ ವ್ಯಕ್ತಿಯು, ಸೈತಾನನು ಸುಳ್ಳುಗಾರನೆಂದು ರುಜುಪಡಿಸುವದರಿಂದ, ಮತ್ತು ಯೆಹೋವನ ಹೃದಯವನ್ನು ಸಂತೋಷಗೊಳಿಸುವುದರಿಂದ ಆನಂದಿತನಾಗಿರಬಲ್ಲನು.—ಜ್ಞಾನೋಕ್ತಿ 27:11.
ತನ್ನ ನಂಬಿಗಸ್ತ ಸೇವಕರ ಕುರಿತು ದೇವರು ಚಿಂತೆಯಿಲ್ಲದಿರುವವನಲ್ಲ. ಕೀರ್ತನೆಗಾರ ದಾವೀದನು ಹೇಳಿದ್ದು: “ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.” (ಕೀರ್ತನೆ 145:14) ಯೆಹೋವನಿಗೆ ಸಮರ್ಪಿತರಾದವರು, ಅವನ ಜನರೋಪಾದಿ ತಾವು ಅನುಭವಿಸುವ ಜೀವಿತದ ಸಂಕಷ್ಟ ಮತ್ತು ಹಿಂಸೆಗಳೆನ್ನೆಲ್ಲಾ ತಾಳಿಕೊಳ್ಳಲು ಬೇಕಾಗುವಷ್ಟು ವೈಯಕ್ತಿಕ ಬಲದ ಕೊರತೆಯುಳ್ಳವರಾಗಿರಬಹುದು. ಆದರೆ ದೇವರು ಅವರ ಎಲ್ಲಾ ಶೋಧನೆಗಳನ್ನು ತಾಳಿಕೊಳ್ಳಲು ಅವರನ್ನು ಬಲಪಡಿಸುತ್ತಾನೆ ಮತ್ತು ಸಲಹತ್ತಾನೆ, ಮತ್ತು ಅವಶ್ಯವಾದ ವಿವೇಕವನ್ನು ಅವರಿಗೆ ಕೊಡುತ್ತಾನೆ. (ಕೀರ್ತನೆ 121:1-3; ಯಾಕೋಬ 1:5, 6) ಯೆಹೋವನ ನಿಷ್ಠೆಯುಳ್ಳ ಕೆಲವು ಸೇವಕರನ್ನು ಹಿಂಸಕರು ಕೊಂದರೆ, ಅವರಿಗೆ ದೇವದತ್ತ ಪುನರುತ್ಥಾನದ ನಿರೀಕ್ಷೆ ಇದೆ. (ಯೋಹಾನ 5:28, 29; ಅ. ಕೃತ್ಯಗಳು 24:15) ಅವನನ್ನು ಪ್ರೀತಿಸುವವರು ಅನುಭವಿಸುವ ಯಾವುದೇ ಸಂಕಷ್ಟವನ್ನು ಅಷ್ಟರ ಮಟ್ಟಿಗೂ ದೇವರು ವಿಪರ್ಯಸ್ತಗೊಳಿಸಬಲ್ಲನು. ಯೋಬನ ಸಂಕಷ್ಟಗಳಿಗೆ ಅಂತ್ಯವನ್ನು ಅವನು ತಂದನು ಮತ್ತು ಆ ನೀತಿವಂತ ಮನುಷ್ಯನನ್ನು ಹೇರಳವಾಗಿ ಆಶೀರ್ವದಿಸಿದನು. ಮತ್ತು ನಮ್ಮ ದಿನಗಳಲ್ಲಿ ತನ್ನ ಜನರನ್ನು ಯೆಹೋವನ್ನು ಕೈಬಿಡುವದಿಲ್ಲ ಎಂದು ನಾವು ದೃಢನಿಶ್ಚಯದಿಂದಿದರಬಲ್ಲೆವು.—ಯೋಬ 42:12-16; ಕೀರ್ತನೆ 94:14.
ಶೀಘ್ರದಲ್ಲಿಯೇ–ಸಂಕಷ್ಟ ಇನ್ನಿರದು!
ಹಾಗಾದರೆ, ಪ್ರತಿಯೊಬ್ಬರು ಬಾಧ್ಯತೆಯಾಗಿ ಬಂದ ಅಸಂಪೂರ್ಣತೆ ಮತ್ತು ನಮ್ಮ ಸುತ್ತಲಿನ ಈ ದುಷ್ಟ ವಿಷಯಗಳ ವ್ಯವಸ್ಥೆಯ ನಡುವಿನ ಜೀವಿತದ ಕಾರಣದಿಂದ ಕಷ್ಟವನ್ನನುಭವಿಸುತ್ತಾರೆ. ಯೆಹೋವನಿಗೆ ಯಥಾರ್ಥತೆಯನ್ನು ಕಾಪಾಡಿಕೊಳ್ಳುವುದರ ಕಾರಣ, ದೇವ ಜನರು ಕೂಡಾ ಕಷ್ಟವನ್ನನುಭವಿಸುವದನ್ನು ನಿರೀಕ್ಷಿಸಸಾಧ್ಯವಿದೆ. (2 ತಿಮೊಥೆಯ 3:12) ಆದರೆ ಅವರು ಸಂತೋಷಿಸ ಸಾಧ್ಯವಿದೆ, ಯಾಕಂದರೆ ಕಣ್ಣೀರು, ಮರಣ, ದುಃಖ, ಗೋಳಾಟ, ಮತ್ತು ವೇದನೆ ಇವುಗಳ ಅಂತ್ಯವನ್ನು ದೇವರು ಶೀಘ್ರದಲ್ಲಿಯೇ ತರುವನು. ಈ ವಿಷಯದಲ್ಲಿ, ಅಪೊಸ್ತಲ ಯೋಹಾನನು ಬರೆದದ್ದು:
“ತರುವಾಯ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು; ಇನ್ನು ಸಮುದ್ರವೂ ಇಲ್ಲ. ಇದಲ್ಲದೆ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮು ಪರಲೋಕದಿಂದ ದೇವರ ಬಳಿಯಿಂದ ಇಳಿದುಬರುವದನ್ನು ಕಂಡೆನು; ಅದು ತನ್ನ ಗಂಡನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು. ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು—ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು. ಆಗ ಸಿಂಹಾಸನದ ಮೇಲೆ ಕೂತಿದ್ದವನು—ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು. ಮತ್ತು ಒಬ್ಬನು ನನಗೆ—ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.”—ಪ್ರಕಟನೆ 21:1-5.
ಅದೇ ರೀತಿಯಲ್ಲಿ ಅಪೊಸ್ತಲ ಪೇತ್ರನು ಘೋಷಿಸಿದ್ದು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಅತಿ ಹತ್ತಿರದಲ್ಲಿಯೇ ಎಂಥ ಮಹತ್ತಾದ ಪ್ರತೀಕ್ಷೆಗಳು ಇರುತ್ತವೆ! ಪ್ರಮೋದವನದ ಭೂಮಿಯ ಮೇಲಿನ ಜೀವಿತಪು ನಿಮ್ಮ ಆನಂದಮಯ ಸುಯೋಗವಾಗಬಲ್ಲದು. (ಲೂಕ 23:43) ಆದ ಕಾರಣ, ಸದ್ಯದ ಸಂಕಷ್ಟಗಳು ನಿಮ್ಮನ್ನು ಕಹಿಗೊಳಿಸದಿರಲಿ. ಬದಲಾಗಿ, ಗೆಲವುನೋಟದಿಂದ ಭವಿಷ್ಯವನ್ನು ದೃಷ್ಟಿಸಿರಿ. ಅತಿ ಸಮೀಪದಲ್ಲಿರುವ ದೇವರ ಹೊಸ ಲೋಕದ ಮೇಲೆ ನಿಮ್ಮ ನಿರೀಕ್ಷೆ ಮತ್ತು ಭರವಸವನ್ನು ಇಡಿರಿ. ಯೆಹೋವ ದೇವರಿಗೆ ಸ್ವೀಕಾರಾರ್ಹವಾದ ಮಾರ್ಗವನ್ನು ಬೆನ್ನಟ್ಟಿರಿ, ಮತ್ತು ಎಲ್ಲಾ ಕಷ್ಟಾನುಭವಗಳಿಂದ ಮುಕ್ತವಾಗಿರುವ ಲೋಕವೊಂದರಲ್ಲಿ ನೀವು ಸದಾಕಾಲ ಜೀವಿಸಬಲ್ಲಿರಿ.
[ಪುಟ 4 ರಲ್ಲಿರುವ ಚಿತ್ರ]
ಯೋಬನು ಸಂಕಷ್ಟಕ್ಕೊಳಗಾದರೂ, ದೇವರಿಗೆ ಸ್ವೀಕಾರಾರ್ಹವಾದ ಮಾರ್ಗವನ್ನು ಬೆನ್ನಟ್ಟಿದನು
[ಪುಟ 7 ರಲ್ಲಿರುವ ಚಿತ್ರ]
ಎಲ್ಲಾ ಸಂಕಷ್ಟಗಳಿಂದ ಮುಕ್ತವಾಗಿರುವ ಲೋಕವೊಂದರಲ್ಲಿ ನೀವು ಜೀವಿಸಬಲ್ಲಿರಿ
[ಪುಟ 3 ರಲ್ಲಿರುವ ಚಿತ್ರ ಕೃಪೆ]
Collier’s Photographic History of the European War