ಮೆಸ್ಸೀಯನು—ಒಂದು ನಿಜ ನಿರೀಕ್ಷೆಯೊ?
ತನ್ನನ್ನು ಸ್ವತಃ ಮೋಶೆ ಎಂದು ಕರೆಯಿಸಿಕೊಂಡನು. ಆದರೂ, ಅವನ ನಿಜ ಹೆಸರು ಇತಿಹಾಸದಲ್ಲಿ ಮರೆಯಲ್ಪಟ್ಟಿದೆ. ಸಾ.ಶ. ಐದನೆಯ ಶತಮಾನದಲ್ಲಿ, ಅವರು ಕಾದಿರುವ ಮೆಸ್ಸೀಯನು ತಾನಾಗಿದ್ದೇನೆಂದು ಅಲ್ಲಿನ ಯೆಹೂದ್ಯರಿಗೆ ಮನವರಿಕೆ ಮಾಡುತ್ತಾ, ಅವನು ಕ್ರೇತ ದ್ವೀಪದಲ್ಲೆಲ್ಲಾ ಸಂಚರಿಸಿದನು. ಬಲುಬೇಗನೆ ಅವರ ದಬ್ಬಾಳಿಕೆಯು, ಅವರ ದೇಶಭ್ರಷ್ಟತೆ ಮತ್ತು ಬಂದಿವಾಸವು ತೀರುವುದು ಎಂದು ಅವನು ಅವರಿಗೆ ಹೇಳಿದನು. ಅವರು ನಂಬಿದರು. ಅವರ ವಿಮೋಚನೆಯ ದಿನವು ಬಂದಾಗ, ಯೆಹೂದ್ಯರು ಭೂಮಧ್ಯ ಸಮುದ್ರಕ್ಕೆ ದೃಷ್ಟಿಹರಿಸಬಹುದಾದ ಒಂದು ಭೂಶಿರಕ್ಕೆ “ಮೋಶೆ”ಯನ್ನು ಹಿಂಬಾಲಿಸಿದರು. ಅವರು ತಮ್ಮನ್ನು ಸಮುದ್ರಕ್ಕೆ ಕೇವಲ ಎಸೆದುಕೊಳ್ಳಬೇಕು ಮತ್ತು ಅದು ಅವರ ಮುಂದೆಯೇ ಇಬ್ಭಾಗಗೊಳ್ಳುವದು ಎಂದವನು ಅವರಿಗೆ ಹೇಳಿದನು. ಅನೇಕರು ವಿಧೇಯರಾಗಿ, ಇಬ್ಭಾಗಗೊಳ್ಳಲು ಇಚ್ಛಿಸದ ಸಮುದ್ರಕ್ಕೆ ಧುಮುಕಿದರು. ಅವರಲ್ಲಿ ಅನೇಕರು ಮುಳುಗಿಹೋದರು; ಕೆಲವರನ್ನು ನಾವಿಕರು ಮತ್ತು ಬೆಸ್ತರು ಸಂರಕ್ಷಿಸಿದರು. ಆದಾಗ್ಯೂ, ಮೋಶೆ ಎಲ್ಲಿಯೂ ಕಾಣಸಿಗಲಿಲ್ಲ. ಆ ಮೆಸ್ಸೀಯನು ಹೋಗಿಬಿಟ್ಟನು.
ಮೆಸ್ಸೀಯ ಅಂದರೆ ಏನು? “ಉದ್ಧಾರಕ,” “ವಿಮೋಚಕ,” ಮತ್ತು “ನಾಯಕ” ಶಬ್ದಗಳು ಮನಸ್ಸಿಗೆ ಬರಬಹುದು. ತನ್ನ ಅನುಯಾಯಿಗಳಲ್ಲಿ ನಿರೀಕ್ಷೆ ಮತ್ತು ಭಕ್ತಿಯನ್ನು ಪ್ರಚೋದಿಸುವ, ದಬ್ಬಾಳಿಕೆಯಿಂದ ಸ್ವಾತಂತ್ರ್ಯಕ್ಕೆ ಅವರನ್ನು ನಡಿಸುವನೆಂಬ ಆಶ್ವಾಸನೆಯನ್ನೀಯುವ ವ್ಯಕ್ತಿಯು ಒಬ್ಬ ಮೆಸ್ಸೀಯನೆಂದು ಅನೇಕ ಜನರು ನೆನಸುತ್ತಾರೆ. ಮಾನವ ಇತಿಹಾಸವು ಬಹುತೇಕ ದಬ್ಬಾಳಿಕೆಯ ಇತಿಹಾಸವಾಗಿರುವದರಿಂದ, ಶತಮಾನಗಳಲ್ಲಿ ಅಂತಹ ಮೆಸ್ಸೀಯರು ಕೊಂಚಕ್ಕಿಂತ ಸ್ವಲ್ಪ ಹೆಚ್ಚೇ ಉದಯಿಸಿರುತ್ತಾರೆಂಬದೇನೂ ಆಶ್ಚರ್ಯವಲ್ಲ. (ಹೋಲಿಸಿ ಪ್ರಸಂಗಿ 8:9.) ಆದರೆ ಸ್ವಯಂ-ಆರೋಪಿತ ಕ್ರೇತದ ಮೋಶೆಯಂತೆ, ಅಧಿಕವಾಗಿ ಈ ಮೆಸ್ಸೀಯರುಗಳು ತಮ್ಮ ಅನುಯಾಯಿಗಳನ್ನು ವಿಮೋಚನೆಯ ಬದಲಿಗೆ, ಆಶಾಭಂಗಕ್ಕೆ ಮತ್ತು ವಿಪತ್ತಿಗೆ ನಡಿಸಿದ್ದಾರೆ.
“ಇವನು ಅರಸ ಮೆಸ್ಸೀಯನು!” ಹೀಗೆಂದು ಮಾನ್ಯ ರಬ್ಬಿ ಅಕಿವ ಬೆನ್ ಜೊಸೆಫ್ ಸಾ.ಶ. 132 ರಲ್ಲಿ ಸಿಮ್ಯೆನ್ ಬಾರ್ ಕೊಕ್ಬನನ್ನು ವಂದಿಸಿದನು. ಒಂದು ಬಲಾಢ್ಯ ಸೈನ್ಯದ ಸೇನಾನಿ ಶಕ್ತಿಶಾಲಿ ವ್ಯಕ್ತಿ ಬಾರ್ ಕೊಕ್ಬ ಆಗಿದ್ದನು. ರೋಮನ್ ಲೋಕ ಶಕ್ತಿಯ ಹಸ್ತಗಳಡಿಯ ಅವರ ದೀರ್ಘಕಾಲದ ದಬ್ಬಾಳಿಕೆಯನ್ನು ಅಂತ್ಯಗೊಳಿಸುವ ಒಬ್ಬ ವ್ಯಕ್ತಿ ಕೊನೆಗೂ ಇಲ್ಲಿದ್ದಾನೆ ಎಂದು ಅನೇಕ ಯೆಹೂದ್ಯರು ನೆನಸಿದರು. ಬಾರ್ ಕೊಕ್ಬ ಪರಾಜಯಗೊಂಡನು; ಆ ಪರಾಜಯದ ಕಾರಣದಿಂದ ಲಕ್ಷಾಂತರ ಅವನ ದೇಶಸ್ಥರು ಸತ್ತರು.
ಹನ್ನೆರಡನೆಯ ಶತಮಾನದಲ್ಲಿ, ಇನ್ನೊಬ್ಬ ಯೆಹೂದಿ ಮೆಸ್ಸೀಯ ತಲೆದೋರಿದನು, ಈ ಬಾರಿ ಯೆಮೆನ್ನಲ್ಲಿ. ಅವನ ಮೇಸ್ಸೀಯತ್ವದ ಕುರಿತು ಕಲೀಪ, ಯಾ ದೊರೆಯು ಒಂದು ಚಿಹ್ನೆಯನ್ನು ಕೇಳಿದಾಗ, ಕಲೀಪನು ತನ್ನ ತಲೆಯನ್ನು ಕತ್ತರಿಸಲು ಮತ್ತು ಅವನ ತಕ್ಷಣದ ಪುನರುತ್ಥಾನವು ಒಂದು ಚಿಹ್ನೆಯಾಗಿ ಇರಲಿ ಎಂಬ ಪ್ರಸ್ತಾಪವನ್ನು ಈ ಮೆಸ್ಸೀಯನು ಇಟ್ಟನು. ಕಲೀಪನು ಈ ಯೋಜನೆಯನ್ನು ಸಮ್ಮತಿಸಿದನು—ಮತ್ತು ಅದು ಯೆಮೆನ್ ಮೆಸ್ಸೀಯನ ಅಂತ್ಯವಾಗಿತ್ತು. ಅದೇ ಶತಮಾನದಲ್ಲಿ ಡೇವಿಡ್ ಅಲ್ರೊಯ್ ಎಂಬ ಹೆಸರಿನ ಮನುಷ್ಯನು, ಪುಣ್ಯ ಭೂಮಿಗೆ ದೇವದೂತರುಗಳ ರೆಕ್ಕೆಗಳ ಮೇಲೆ ಹಿಂದಿರುಗಲು ತನ್ನನ್ನು ಹಿಂಬಾಲಿಸಲು ಸಿದ್ಧರಾಗುವಂತೆ ಮಧ್ಯಪೂರ್ವದ ಯೆಹೂದ್ಯರಿಗೆ ಹೇಳಿದನು. ಅವನು ಮೆಸ್ಸೀಯನೇ ಆಗಿದ್ದನು ಎಂದು ಅನೇಕರು ನಂಬಿದರು. ಕಳ್ಳರು ಅವರ ಸೊತ್ತುಗಳನ್ನು ದರೋಡೆಮಾಡುವಾಗ, ಬಾಗ್ದಾದಿನ ಯೆಹೂದ್ಯರು ತಮ್ಮ ಮಾಳಿಗೆಗಳ ಮೇಲೆ, ನಿರಾತಂಕವಾಗಿ ಮತ್ತು ಅರಿವಿಲ್ಲದೆ ತಾಳ್ಮೆಯಿಂದ ಕಾದುನಿಂತರು.
ಸಬ್ಬಟಿ ಟ್ಸೆಬ ಸ್ಮುರ್ನದಿಂದ 17 ನೆಯ ಶತಮಾನದಲ್ಲಿ ಎದ್ದನು. ಯೂರೋಪಿನಲ್ಲೆಲ್ಲಾ ಯೆಹೂದ್ಯರಿಗೆ ತನ್ನ ಮೇಸ್ಸೀಯತ್ವವನ್ನು ಅವನು ಘೋಷಿಸಿದನು. ಕ್ರೈಸ್ತರು ಕೂಡ, ಅವನನ್ನು ಆಲಿಸಿದರು. ಟ್ಸೆಬನು ತನ್ನ ಅನುಯಾಯಿಗಳಿಗೆ ವಿಮೋಚನೆಯನ್ನು ವಾಗ್ದಾನಿಸಿದನು—ಯಾವುದೇ ನಿರ್ಬಂಧವಿಲ್ಲದೆ ಪಾಪವನ್ನು ಆಚರಿಸಲು ಅವನು ಅವರನ್ನು ಬಿಟ್ಟನೆಂದು ವ್ಯಕ್ತವಾಗುತ್ತದೆ. ಅವನ ನಿಕಟ ಅನುಯಾಯಿಗಳು ಕಾಮಕೇಳಿಗಳನ್ನು, ನಗ್ನತೆಯನ್ನು, ಜಾರತ್ವವನ್ನು, ಮತ್ತು ಅಗಮ್ಯಗಮನವನ್ನು ನಡಿಸಿದರು, ಅನಂತರ ಚಾವಟಿಯೇಟುಗಳಿಂದ ಹೊಡೆದು ಕೊಳ್ಳುವದರಿಂದ, ಹಿಮದ ಮೇಲೆ ಬತ್ತಲೆಯಾಗಿ ಉರುಳಿಸಿಕೊಳ್ಳುವದರಿಂದ, ಮತ್ತು ತಣ್ಣಗಿನ ಭೂಮಿಯಲ್ಲಿ ಕೊರಳಿನ ತನಕ ಹುಗಿದುಕೊಳ್ಳುವದರಿಂದ ತಮ್ಮನ್ನೇ ದಂಡಿಸಿಕೊಂಡರು. ಅವನು ಟರ್ಕಿಗೆ ಪ್ರಯಾಣಿಸಿದಾಗ, ಟ್ಸೆಬನನ್ನು ಸೆರೆಹಿಡಿಯಲಾಯಿತು ಮತ್ತು ಅವನು ಒಂದೇ ಇಸ್ಲಾಮಿಗೆ ಮತಾಂತರಗೊಳ್ಳಬೇಕು ಯಾ ಸಾಯಬೇಕು ಎಂದು ಹೇಳಲಾಯಿತು. ಅವನು ಮತಾಂತರಹೊಂದಿದನು. ಅವನ ಅನೇಕ ಭಕ್ತರಿಗೆ ಭಗ್ನತೆಯುಂಟಾಯಿತು. ಆದರೂ, ನಂತರದ ಎರಡು ಶತಮಾನಗಳ ವರೆಗೆ, ಟ್ಸೆಬನು ಕೆಲವು ಜನರಿಂದ ಇನ್ನೂ ಮೆಸ್ಸೀಯನೆಂದು ಕರೆಯಲ್ಪಟ್ಟನು.
ಕ್ರೈಸ್ತಪ್ರಪಂಚವು ಮೆಸ್ಸೀಯರುಗಳ ತನ್ನ ಅಂಶವನ್ನು ಕೂಡ ಉತ್ಪಾದಿಸಿರುತ್ತದೆ. ಹನ್ನೆರಡನೆಯ ಶತಮಾನದಲ್ಲಿ, ಟನ್ಕೆಲ್ಮ್ ಎಂಬ ಹೆಸರಿನ ಪುರುಷನು ಅನುಯಾಯಿಗಳ ಸೇನೆಯೊಂದನ್ನು ಕಟ್ಟಿದನು ಮತ್ತು ಆಂಟ್ವರ್ಪ್ ನಗರದ ಮೇಲೆ ಪ್ರಭುತ್ವ ಸಾಧಿಸಿದನು. ಈ ಮೆಸ್ಸೀಯನು ತನ್ನನ್ನು ಸ್ವತಃ ದೇವರೆಂದು ಕರೆಯಿಸಿಕೊಂಡನು; ತಾನು ಮಿಂದ ನೀರನ್ನು ಸಹ ಪವಿತ್ರ ಸಂಸ್ಕಾರದೋಪಾದಿ ಅವನ ಹಿಂಬಾಲಕರು ಕುಡಿಯಲು ಅವನು ಮಾರಿದನು! ಇನ್ನೊಬ್ಬ “ಕ್ರೈಸ್ತ” ಮೆಸ್ಸೀಯನು 16 ನೆಯ ಶತಕದ ಜರ್ಮನಿಯ ತೋಮಸ್ ಮ್ಯುನ್ಟ್ಸರ್ ಆಗಿದ್ದನು. ಅವನು ಸ್ಥಳೀಯ ನಾಗರಿಕ ಅಧಿಕಾರಿಗಳ ವಿರುದ್ಧ, ಇದೊಂದು ಅರ್ಮಗೆದೋನ್ ಯುದ್ಧವೆಂದು ತನ್ನ ಅನುಯಾಯಿಗಳಿಗೆ ಹೇಳುತ್ತಾ, ಬಂಡಾಯವನ್ನೆಬ್ಬಿಸಿದನು. ತನ್ನ ಜುಬ್ಬದ ತೋಳುಗಳಲ್ಲಿ ಶತ್ರುಗಳ ಫಿರಂಗಿಗುಂಡುಗಳನ್ನು ಹಿಡಿಯುವೆನು ಎಂದು ವಚನಿಸಿದನು. ಬದಲಿಗೆ ಅವನ ಜನರು ಸಾಮೂಹಿಕವಾಗಿ ಹತಿಸಲ್ಪಟ್ಟರು, ಮತ್ತು ಮ್ಯುನ್ಟ್ಸರ್ನ ತಲೆ ಹಾರಿಸಲಾಯಿತು. ಅಂತಹ ಇತರ ಅನೇಕ ಮೆಸ್ಸೀಯರುಗಳು ಶತಮಾನಗಳಲ್ಲಿ ಕ್ರೈಸ್ತ ಪ್ರಪಂಚದಲ್ಲಿ ತಲೆದೋರಿದರು.
ಇತರ ಮತಗಳಲ್ಲಿ ಕೂಡ, ಅವರ ಮೆಸ್ಸೀಯನೀಕ ವ್ಯಕ್ತಿಗಳು ಇದ್ದಾರೆ. ಇಸ್ಲಾಂ ಮಾದಿ, ಯಾ ಯುಕ್ತವಾಗಿ ಮಾರ್ಗದರ್ಶಿಲ್ಪಟ್ಟವನು, ನ್ಯಾಯದ ಯುಗವೊಂದನ್ನು ಒಳತರಲಿದ್ದಾನೆ ಎಂದು ನಿರ್ದೇಶಿಸುತ್ತದೆ. ಹಿಂದೂ ಮತದಲ್ಲಿ, ತಾವು ವಿವಿಧ ದೇವರುಗಳ ಅವತಾರಿಗಳು ಯಾ ರೂಪಾಂತರಿಗಳೆಂದು ಕೆಲವರು ಹೇಳಿಕೊಂಡಿದ್ದಾರೆ. ಮತ್ತು, ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಗಮನಿಸಿದಂತೆ, “ಮೆಸ್ಸೀಯನೀಕವಲ್ಲದ ಬೌದ್ಧಮತದಂತಹದ್ದು ಕೂಡ, ಅದರ ಮಹಾಯಾನ ಗುಂಪುಗಳಲ್ಲಿ, ಭಾವೀ ಬುದ್ಧ ಮೈತ್ರೇಯನು ತನ್ನ ಸ್ವರ್ಗೀಯ ಬೀಡಿನಿಂದ ಕೆಳಗಿಳಿದು ಬಂದು, ನಂಬಿಗಸ್ತರನ್ನು ಪ್ರಮೋದವನಕ್ಕೆ ತರುವನು ಎಂಬ ನಂಬಿಕೆಯನ್ನು ಉತ್ಪಾದಿಸಿದೆ.”
20-ನೆಯ ಶತಕದ ಮೆಸ್ಸೀಯರುಗಳು
ನಮ್ಮ ಇದೇ ಶತಕದಲ್ಲಿ, ಹಿಂದೆಂದಿಗಿಂತಲೂ ಒಬ್ಬ ಸಾಚಾ ಮೆಸ್ಸೀಯನ ಜರೂರಿಯು ಅತಿ ಹೆಚ್ಚು ಆವಶ್ಯಕತೆಯದ್ದಾಗಿದೆ; ಹಾಗಾದರೆ, ಅಂತಹ ಬಿರುದನ್ನು ಅನೇಕರು ತಮ್ಮದಾಗಿ ವಾದಿಸಿದ್ದರಲ್ಲೇನೂ ಆಶ್ಚರ್ಯವಿಲ್ಲ. ಆಫ್ರಿಕನ್ ಕಾಂಗೋದಲ್ಲಿ 1920 ರುಗಳಲ್ಲಿ, 1930 ರುಗಳಲ್ಲಿ, ಮತ್ತು 1940 ರುಗಳಲ್ಲಿ, ಸಿಮೊನ್ ಕಿಂಬಂಗು ಮತ್ತು ಅವನ ಉತ್ತರಾಧಿಕಾರಿ ಅಂಡ್ರ “ಜೀಸಸ್” ಮಟ್ಸ್ರುಗಳು ಮೆಸ್ಸೀಯರೆಂದು ಜಯಕಾರಗೈಯಲ್ಪಟ್ಟರು. ಅವರು ಸತ್ತರು, ಆದರೆ ಅವರು ಹಿಂತೆರಳುವರು ಮತ್ತು ಒಂದು ಆಫ್ರಿಕನ್ ಸಹಸ್ರವರ್ಷಗಳಾಳಿಕ್ವೆಯನ್ನು ತರುವರೆಂದು ಅವರ ಹಿಂಬಾಲಕರು ಇನ್ನೂ ನಿರೀಕ್ಷಿಸುತ್ತಿದ್ದಾರೆ.
ನ್ಯೂ ಗಿನಿ ಮತ್ತು ಮಲನೆಸಿಯದಲ್ಲಿ, “ಸರಕು ಪಂಥಗಳ” ಏದೇಳ್ದುವಿಕೆಯನ್ನು ಕೂಡ ಈ ಶತಮಾನವು ಕಂಡಿದೆ. ಅವರನ್ನು ಸಿರಿವಂತರನ್ನಾಗಿ ಮಾಡುವ ಮೆಸ್ಸೀಯರಂಥ ಬಿಳಿ ಪುರುಷರುಗಳಿಂದ ಚಲಿಸಲ್ಪಡುವ ಒಂದು ಹಡಗು ಯಾ ವಿಮಾನವು ಬರುತ್ತದೆ, ಮತ್ತು ಸಂತಸದ ಯುಗವೊಂದನ್ನು ಒಳತರುವರು, ಆಗ ಸತ್ತವರು ಕೂಡ ಏಳುತ್ತಾರೆ ಎಂದು ಸದಸ್ಯರು ನಿರೀಕ್ಷಿಸುತ್ತಾರೆ.
ಕೈಗಾರಿಕಾ ದೇಶಗಳಲ್ಲಿ ಕೂಡ ಅವರದ್ದೇ ಮೆಸ್ಸೀಯರುಗಳು ಇದ್ದರು. ತನ್ನ ಭಕ್ತರ ಏಕೀಕೃತ ಪರಿವಾರದ ಮೂಲಕ ಲೋಕವನ್ನು ಶುದ್ಧೀಕರಿಸುವ ಧ್ಯೇಯವುಳ್ಳ, ಯೇಸು ಕ್ರಿಸ್ತನ ಸ್ವಯಂ-ಘೋಷಿತ ಉತ್ತರಾಧಿಕಾರಿ, ಸನ್ ಮಿಯುನ್ ಮುನ್ನಂತಹ ಧಾರ್ಮಿಕ ಮುಂದಾಳುಗಳು ಕೆಲವರು. ರಾಜಕೀಯ ಧುರೀಣರು ಕೂಡ ಮೆಸ್ಸೀಯನೀಕ ಅಂತಸ್ತನ್ನು ಪಡೆಯಲು ಪ್ರಯತ್ನಿಸಿದ್ದಾರೆ. ಒಂದು ಸಾವಿರ ವರ್ಷದ ರೀಕ್ [ಜರ್ಮನ್ ರಾಷ್ಟದ] ಕುರಿತಾದ ಪಟಾಟೋಪದ ಅವನ ಭಾಷಣದೊಂದಿಗೆ ಆಡಲ್ಫ್ ಹಿಟ್ಲರನು ಶತಮಾನದ ಒಂದು ಕರಾಳ ನಿದರ್ಶನವಾಗಿದ್ದಾನೆ.
ರಾಜಕೀಯ ತತ್ವಗಳು ಮತ್ತು ಸಂಸ್ಥಾಪನೆಗಳು ತದ್ರೀತಿಯಲ್ಲಿ ಮೆಸ್ಸೀಯನೀಕ ಅಂತಸ್ತನ್ನು ಸಾಧಿಸಿವೆ. ಉದಾಹರಣೆಗೆ, ದ ಎನ್ಸೈಕ್ಲೊಪೀಡಿಯ ಅಮೆರಿಕಾನ ಗಮನಿಸುವುದೇನಂದರೆ ಮಾರ್ಕಿಸ್ಟ್-ಲೆನಿನಿಸ್ಟ್ ರಾಜಕೀಯ ಕಲ್ಪನೆಗೆ ಮೆಸ್ಸೀಯನೀಕ ಅನುರಣನವಿದೆ. ಮತ್ತು ಸಂಯುಕ್ತ ರಾಷ್ಟ್ರ ಸಂಘವು, ಲೋಕದ ಶಾಂತಿಗಾಗಿ ಏಕಮಾತ್ರ ನಿರೀಕ್ಷೆಯೆಂದು ಜಯಕಾರವೆತ್ತಲ್ಪಟ್ಟು, ಅನೇಕರ ಮನಸ್ಸುಗಳಲ್ಲಿ ಒಂದು ರೀತಿಯ ಮೆಸ್ಸೀಯ ಬದಲಿರೂಪವಾಗಿದೆ ಎಂದು ಭಾಸವಾಗುತ್ತದೆ.
ಒಂದು ನಿಜ ನಿರೀಕ್ಷೆ?
ಈ ಸಂಕ್ಷಿಪ್ತ ಮೇಲ್ನೋಟವು, ಮೆಸ್ಸೀಯನೀಕ ಚಳುವಳಿಗಳ ಇತಿಹಾಸವು ಅಧಿಕಾಂಶ ಭ್ರಮೆಯ, ನುಚ್ಚುನೂರಾದ ನಿರೀಕ್ಷೆಗಳ ಮತ್ತು ಅನುಚಿತ ಕನಸುಗಳ ಇತಿಹಾಸವೆಂದು ಅತಿ ಸರಳವಾಗಿ ಸೃಷ್ಟಗೊಳಿಸುತ್ತದೆ. ಹಾಗಾದರೆ, ಮೆಸ್ಸೀಯನೊಬ್ಬನ ನಿರೀಕ್ಷೆಯ ಕುರಿತು ಅನೇಕ ಜನರು ಇಂದು ಸಿನಿಕಭಾವದವರಾಗಿರುವುದರಲ್ಲೇನೂ ಆಶ್ಚರ್ಯವಿಲ್ಲ.
ಆದರೂ, ಮೆಸ್ಸೀಯನೀಕ ನಿರೀಕ್ಷೆಯನ್ನು ಪೂರ್ತಿಯಾಗಿ ತಳ್ಳಿಹಾಕುವ ಮೊದಲು, ಅದು ಎಲ್ಲಿಂದ ಬರುತ್ತದೆ ಎಂದು ನಾವು ಕಲಿಯತಕ್ಕದ್ದು. ವಾಸ್ತವದಲ್ಲಿ, “ಮೆಸ್ಸೀಯ” ಎಂಬುದು ಒಂದು ಬೈಬಲ್ ಶಬ್ದವಾಗಿದೆ. ಮ·ಶಿ΄ಅಕ್, ಯಾ “ಅಭಿಷಿಕ್ತನು” ಹೀಬ್ರು ಶಬ್ದವಾಗಿದೆ. ಬೈಬಲ್ ಸಮಯಗಳಲ್ಲಿ, ಕೆಲವೊಮ್ಮೆ ತಲೆಯ ಮೇಲೆ ಸುಗಂಧತೈಲವನ್ನು ಸುರಿಯುವ ಒಂದು ಅಭಿಷೇಕದ ಆಚರಣೆಯ ಮೂಲಕ ಅವರ ಸ್ಥಾನಗಳಿಗೆ ಅರಸರು ಮತ್ತು ಯಾಜಕರುಗಳನ್ನು ನೇಮಕಮಾಡಲಾಗುತ್ತಿತ್ತು. ಆದಕಾರಣ, ಮ·ಶಿ΄ಅಕ್ ಶಬ್ದವನ್ನು ಅವರಿಗೆ ಯುಕ್ತವಾಗಿಯೇ ಅನ್ವಯಿಸಲಾಗಿತ್ತು. ಯಾವುದೇ ಅಭಿಷೇಕದ ಆಚರಣೆಯಿಲ್ಲದೆ ಕೂಡ ವಿಶೇಷ ಹುದ್ದೆಗೆ ಪುರುಷರನ್ನು ಅಭಿಷೇಕಿಸಲಾಗುತ್ತಿತ್ತು, ಯಾ ನೇಮಿಸಲಾಗುತ್ತಿತ್ತು. ಮೋಶೆಯು “ಕ್ರಿಸ್ತನು,” ಯಾ “ಅಭಿಷಿಕ್ತನು” ಎಂದು ಇಬ್ರಿಯ 11:24-26 ರಲ್ಲಿ ಕರೆಯಲ್ಪಟ್ಟಿದ್ದಾನೆ, ಯಾಕಂದರೆ ದೇವರ ಪ್ರವಾದಿಯಾಗಿ ಮತ್ತು ಪ್ರತಿನಿಧಿಯಾಗಿ ಅವನನ್ನು ಆರಿಸಲಾಗಿತ್ತು.
“ಅಭಿಷಿಕ್ತ”ನೋಪಾದಿ ಮೆಸ್ಸೀಯನ ಈ ಅರ್ಥನಿರೂಪಣೆಯು, ಬೈಬಲಿನ ಮೆಸ್ಸೀಯರುಗಳನ್ನು, ನಾವು ಚರ್ಚಿಸಿದಂತಹ ಸುಳ್ಳು ಮೆಸ್ಸೀಯರುಗಳಿಂದ ವಿಶಿಷ್ಟವಾಗಿ ಪ್ರತ್ಯೇಕಿಸುತ್ತದೆ. ಬೈಬಲಿನ ಮೆಸ್ಸೀಯರುಗಳು ಸ್ವಯಂ-ಆಗಿ ನೇಮಿಸಿಕೊಂಡವರಲ್ಲ; ಇಲ್ಲವೆ ಪೂಜ್ಯಭಾವದ ಅನುಯಾಯಿಗಳ ಸಮೂಹದಿಂದ ಅವರು ಆರಿಸಲ್ಪಟ್ಟವರೂ ಅಲ್ಲ. ಇಲ್ಲ, ಅವರ ನೇಮಕವು ಮೇಲಿನಿಂದ, ಸ್ವತಃ ಯೆಹೋವ ದೇವರಿಂದ ಉಗಮಿಸಿದವು.
ಅನೇಕ ಮೆಸ್ಸೀಯರುಗಳ ಕುರಿತು ಬೈಬಲ್ ಮಾತಾಡುವುದಾದರೂ, ಒಬ್ಬನನ್ನು ಇತರ ಎಲ್ಲರಿಗಿಂತ ಬಹಳ ಉನ್ನತಕ್ಕೆ ಅದು ಏರಿಸಿದೆ. (ಕೀರ್ತನೆ 45:7) ಬೈಬಲಿನ ಪ್ರವಾದನೆಯಲ್ಲಿ ಈ ಮೆಸ್ಸೀಯನು ಕೇಂದ್ರ ಬಿಂಬವಾಗಿದ್ದಾನೆ, ಬೈಬಲಿನ ಅತಿ ಪ್ರೇರಕ ವಾಗ್ದಾನಗಳ ನೆರವೇರಿಕೆಗೆ ಕೀಲಿಕೈಯಾಗಿದ್ದಾನೆ. ಮತ್ತು ಈ ಮೆಸ್ಸೀಯನು, ನಾವಿಂದು ಎದುರಿಸುತ್ತಿರುವ ಸಮಸ್ಯೆಗಳೊಂದಿಗೆ ನಿಜವಾಗಿಯೂ ಹೋರಾಡುತ್ತಾನೆ.
ಮಾನವಕುಲದ ಉದ್ಧಾರಕನು
ಬೈಬಲಿನ ಮೆಸ್ಸೀಯನು ಮಾನವಕುಲದ ಸಮಸ್ಯೆಗಳ ಮೂಲಗಳಿಗೆ ಹೋಗುವ ಮೂಲಕ ಅವುಗಳೊಂದಿಗೆ ವ್ಯವಹರಿಸುತ್ತಾನೆ. ನಮ್ಮ ಮೊದಲ ಹೆತ್ತವರಾದ ಆದಾಮ, ಹವ್ವರು, ಸೈತಾನನೆಂಬ ದಂಗೆಕೋರ ಆತ್ಮ ಜೀವಿಯ ಪ್ರಚೋದನೆಯಿಂದ ನಿರ್ಮಾಣಿಕನ ವಿರುದ್ಧ ದಂಗೆಯೆದ್ದಾಗ, ಅವರು ಕಾರ್ಯತಃ ಸರಕಾರದ ಅಂತಿಮ ಹಕ್ಕು ತಮ್ಮದಾಗಿರಿಸಲು ಸೊಕ್ಕಿನಿಂದ ಹಕ್ಕುಸಾಧಿಸುತ್ತಿದ್ದರು. ಸರಿ ಏನು ಮತ್ತು ತಪ್ಪೇನು ಎಂದು ತೀರ್ಮಾನಿಸುವವರಾಗಿ ತಾವು ಇರಬೇಕೆಂದು ಅವರು ಬಯಸಿದರು. ಆ ಮೂಲಕ ಅವರು ಯೆಹೋವನ ಪ್ರೀತಿಯ, ಭದ್ರತೆಯ ಸರಕಾರದಡಿಯಿಂದ ಹೊರಗೆ ಹೆಜ್ಜೆಯನ್ನಿಟ್ಟರು ಮತ್ತು ಮಾನವ ಕುಟುಂಬವನ್ನು ಸ್ವಯಂ-ಆಳಿಕೆ, ಅಪರಿಪೂರ್ಣತೆ ಮತ್ತು ಮರಣದ ಗೊಂದಲ ಮತ್ತು ದುರವಸ್ಥೆಯೊಳಗೆ ಧುಮುಕಿಸಿದರು.—ರೋಮಾಪುರ 5:12.
ಮಾನವ ಇತಿಹಾಸದ ಅಂತಹ ಅಂಧಕಾರದ ಕ್ಷಣದಲ್ಲಿ ಎಲ್ಲಾ ಮಾನವಕುಲಕ್ಕೆ ನಿರೀಕ್ಷೆಯ ಕಿರಣವೊಂದನ್ನು ಒದಗಿಸಲು ಯೆಹೋವ ದೇವರು ಆಗ ಆರಿಸಿದ್ದು, ಎಷ್ಟು ಪ್ರೀತಿಯುಕ್ತವು. ಮಾನವ ದಂಗೆಕೋರರ ಮೇಲೆ ಶಿಕ್ಷೆಯನ್ನು ಉಚ್ಚರಿಸುವಾಗ, ಅವರ ಸಂತತಿಗೆ ಬಿಡುಗಡೆಗೊಳಿಸುವವನೊಬ್ಬನು ಇರುವನು ಎಂದು ದೇವರು ಮುನ್ನುಡಿದನು. ಅವನನ್ನು “ಸಂತಾನ” ಎಂದು ಸೂಚಿಸುತ್ತಾ, ಈ ಉದ್ಧಾರಕನು, ಏದೆನಿನಲ್ಲಿ ಸೈತಾನನು ಗೈದ ಭಯಂಕರ ಕಾರ್ಯವನ್ನು ಕಿತ್ತೆಸೆಯಲು ಬರುವನು; ಸಂತಾನವು ಆ “ಸರ್ಪ”ನನ್ನು, ಸೈತಾನನನ್ನು ತಲೆಯಲ್ಲಿ ಜಜ್ಜುವನು, ಆ ಮೂಲಕ ಅವನನ್ನು ಅಸ್ತಿತ್ವದಿಂದ ಇಲ್ಲದಂತೆ ಮಾಡುವನು.—ಆದಿಕಾಂಡ 3:14, 15.
ಪ್ರಾಚೀನ ಕಾಲಗಳಿಂದಲೂ, ಈ ಪ್ರವಾದನೆಯನ್ನು ಮೆಸ್ಸೀಯನೀಕದೋಪಾದಿ ಯೆಹೂದ್ಯರು ವೀಕ್ಷಿಸಿದರು. ಮೊದಲನೆಯ ಶತಕದಲ್ಲಿ ಸಾಮಾನ್ಯವಾಗಿ ಉಪಯೋಗಿಸಲ್ಪಟ್ಟ ಪವಿತ್ರ ಬರಹಗಳ ಯೆಹೂದ್ಯ ಭಾವಾನುವಾದಗಳಾದ ಅನೇಕ ಟಾರ್ಗಮ್ಗಳಲ್ಲಿ, ಈ ಪ್ರವಾದನೆಯು “ಅರಸ ಮೆಸ್ಸೀಯನ ದಿನಗಳಲ್ಲಿ” ನೆರವೇರಲಿರುವುದು ಎಂದು ವಿವರಿಸಲ್ಪಟ್ಟಿದೆ.
ಹಾಗಾದರೆ, ಅತಿ ಆರಂಭದಿಂದಲೇ, ನಂಬುಗೆಯ ಮನುಷ್ಯರು ಬರಲಿರುವ ಸಂತಾನವೊಂದರ, ಯಾ ಉದ್ಧಾರಕನ ಈ ವಾಗ್ದಾನದಿಂದಾಗಿ ರೋಮಾಂಚನಗೊಂಡದರ್ದಲ್ಲಿ ಆಶ್ಚರ್ಯವೇನೂ ಇಲ್ಲ. ಅವನ ಸ್ವಂತ ವಂಶಾವಳಿಯ ಮೂಲಕ ಆ ಸಂತಾನವು ಬರಲಿದೆ ಮತ್ತು “ಭೂಮಿಯ ಎಲ್ಲಾ ಜನಾಂಗಗಳಿಗೂ”—ಕೇವಲ ಅವನ ಸ್ವಂತ ವಂಶಜರಿಗಲ್ಲ—ಆ ಸಂತಾನದ ಮೂಲಕ “ಆಶೀರ್ವಾದವುಂಟಾಗುವದು” ಎಂದು ಯೆಹೋವ ದೇವರು ಅಬ್ರಹಾಮನಿಗೆ ಹೇಳಿದಾಗ, ಅವನ ಭಾವನೆಗಳನ್ನು ತುಸು ಊಹಿಸಿರಿ.—ಆದಿಕಾಂಡ 22:17, 18.
ಮೆಸ್ಸೀಯನು ಮತ್ತು ಸರಕಾರವು
ಉತ್ತಮ ಸರಕಾರ ಪ್ರತೀಕ್ಷೆಯನ್ನು ಈ ನಿರೀಕ್ಷೆಯೊಂದಿಗೆ ನಂತರದ ಪ್ರವಾದನೆಗಳು ಜೋಡಿಸಿದವು. ಆದಿಕಾಂಡ 49:10 ರಲ್ಲಿ, ಅಬ್ರಹಾಮನ ಮರಿಮಗನಾದ ಯೆಹೂದನಿಗೆ ಹೇಳಲ್ಪಟ್ಟದ್ದು: “ರಾಜದಂಡವನ್ನು ಹಿಡಿಯತಕ್ಕವನು [ಶಿಲೋವನೆಂಬವನು, NW] ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವದಿಲ್ಲ, ಮುದ್ರೆಕೋಲು ಅವನ ಪಾದಗಳ ಬಳಿಯಿಂದ ಕದಲುವದಿಲ್ಲ; ಅವನಿಗೆ ಅನ್ಯಜನಗಳೂ ವಿಧೇಯರಾಗಿರುವರು.” ಸ್ಪಷ್ಟವಾಗಿಗಿಯೇ, ಈ “ಶಿಲೋ” ಆಳಲಿಕ್ಕಿದ್ದಾನೆ—ಮತ್ತು ಕೇವಲ ಯೆಹೂದ್ಯರನ್ನು ಅಲ್ಲ, ಬದಲಾಗಿ “ಅನ್ಯಜನಗಳ”ನ್ನೂ ಕೂಡ. (ಹೋಲಿಸಿ ದಾನಿಯೇಲ 7:13, 14.) ಶಿಲೋವನ್ನು ಪುರಾತನ ಯೆಹೂದ್ಯರು ಮೆಸ್ಸೀಯನೊಂದಿಗೆ ಗುರುತಿಸಿದ್ದರು; ವಾಸ್ತವದಲ್ಲಿ, ಕೆಲವು ಯೆಹೂದಿ ಟಾರ್ಗಮ್ಗಳು “ಶಿಲೋ” ಶಬ್ದವನ್ನು “ಮೆಸ್ಸೀಯ” ಯಾ “ಅರಸ ಮೆಸ್ಸೀಯ” ದಿಂದ ಸರಳವಾಗಿ ಸ್ಥಾನಪಲ್ಲಟಗೊಳಿಸಿದ್ದಾರೆ.
ಪ್ರೇರಿತ ಪ್ರವಾದನೆಯ ಬೆಳಕು ಇನ್ನಷ್ಟು ಪ್ರಕಾಶಗೊಂಡಂತೆ, ಈ ಮೆಸ್ಸೀಯನ ಆಳಿಕೆಯ ಕುರಿತು ಇನ್ನಷ್ಟು ಪ್ರಕಟಿಸಲ್ಪಟ್ಟಿತು. (ಜ್ಞಾನೋಕ್ತಿ 4:18) ಯೆಹೂದ್ಯ ವಂಶಜನಾದ ರಾಜ ದಾವೀದನಿಗೆ 2 ಸಮುವೇಲ 7:12-16 ರಲ್ಲಿ, ಅವನ ವಂಶದಿಂದ ಸಂತಾನವು ಬರಲಿಕ್ಕಿದ್ದಾನೆ ಎಂದು ಹೇಳಲ್ಪಟ್ಟಿತು. ಇನ್ನೂ ಮುಂದಕ್ಕೆ, ಈ ಸಂತಾನವು ಒಂದು ಅಸಾಮಾನ್ಯ ಅರಸನಾಗಲಿರುವನು. ಅವನ ಸಿಂಹಾಸನವು, ಯಾ ಪ್ರಭುತ್ವವು ಸದಾಕಾಲಕ್ಕೂ ಬಾಳುವುದು! ಈ ವಿಷಯವನ್ನು ಯೆಶಾಯ 9:6, 7 ಬೆಂಬಲಿಸುತ್ತದೆ: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು [“ಸರಕಾರ” ಕಿಂಗ್ ಜೇಮ್ಸ್ ವರ್ಷನ್] ಅವನ ಬಾಹುವಿನ ಮೇಲಿರುವದು; . . . ಅವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು, ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವದು; ಸೇನಾಧೀಶ್ವರನಾದ ಯೆಹೋವನ ಆಗ್ರಹವು ಇದನ್ನು ನೆರವೇರಿಸುವದು.”
ಅಂತಹ ಒಂದು ಸರಕಾರವನ್ನು ನೀವು ಊಹಿಸಬಲ್ಲಿರೋ? ಶಾಂತಿಯನ್ನು ಸ್ಥಾಪಿಸುವ ಮತ್ತು ಸದಾಕಾಲಕ್ಕೂ ಆಳುವ ಒಬ್ಬ ನ್ಯಾಯಿ, ನೀತಿಯ ಅರಸನು. ಇತಿಹಾಸದ ಸುಳ್ಳು ಮೆಸ್ಸೀಯರುಗಳ ವಿಷಾದನೀಯ ಪರಂಪರೆಯಿಂದ ಇದು ಎಷ್ಟೊಂದು ಭಿನ್ನವಾಗಿರುವುದು! ಭ್ರಾಂತಿಯ, ಸ್ವಯಂ-ನೇಮಿತ ನಾಯಕನಾಗಿರುವ ಬದಲಿಗೆ, ಬೈಬಲ್ ಮೆಸ್ಸೀಯನು ಲೋಕ ಪರಿಸ್ಥಿತಿಗಳನ್ನು ಬದಲಾಯಿಸಲು ಆವಶ್ಯಕವಾದ ಎಲ್ಲಾ ಶಕ್ತಿ ಮತ್ತು ಅಧಿಕಾರವಿರುವಾತನಾಗಿದ್ದಾನೆ.
ನಮ್ಮ ಸಂಕಟಮಯ ಸಮಯಗಳಲ್ಲಿ ಈ ಪ್ರತೀಕ್ಷೆಯು ಗಾಢವಾದ ಅರ್ಥವುಳ್ಳದ್ದಾಗಿದೆ. ಅಂತಹ ಒಂದು ನಿರೀಕ್ಷೆಯ ಹೆಚ್ಚು ಉತ್ಕಟವಾದ ಜರೂರಿಯ ಸಮಯ ಮಾನವ ಕುಲಕ್ಕೆ ಹಿಂದೆಂದೂ ಇರಲಿಲ್ಲ. ಸುಲಭವಾಗಿಯೇ ಒಬ್ಬನು ಸುಳ್ಳು ನಿರೀಕ್ಷೆಗಳ ಮೇಲೆ ಆತುಕೊಳ್ಳಬಹುದಾಗಿರುವದರಿಂದ ಕೂಡ, ಈ ಪ್ರಶ್ನೆಯ ಜಾಗ್ರತೆಯ ಅಧ್ಯಯನವನ್ನು ನಮ್ಮಲ್ಲಿ ಪ್ರತಿಯೊಬ್ಬನು ಮಾಡುವುದು ಅತ್ಯಾವಶ್ಯಕವಾಗಿದೆ: ಅನೇಕರು ನಂಬುತ್ತಿರುವಂತೆ, ನಜರೇತಿನ ಯೇಸುವು ಮುಂತಿಳಿಸಲ್ಪಟ್ಟ ಮೆಸ್ಸೀಯನೋ? ಮುಂದಿನ ಲೇಖನವು ಆ ವಿಷಯವನ್ನು ಪರಿಗಣಿಸಲಿರುವುದು.
[ಪುಟ 6 ರಲ್ಲಿರುವ ಚೌಕ]
ಬ್ರೂಕ್ಲಿನ್ನಲ್ಲಿ ಒಬ್ಬ ಮೆಸ್ಸೀಯ?
ಇಸ್ರಾಯೇಲಿನಲ್ಲಿ ಭಿತ್ತಿಪತ್ರಗಳು, ಜಾಹೀರಾತು ಫಲಕಗಳು, ಮತ್ತು ನಿಯಾನ್ ಬೆಳಕಿನ ಸೂಚಕಗಳು ಇತ್ತೀಚೆಗೆ “ಮೆಸ್ಸೀಯನ ಬರೋಣಕ್ಕೆ ಸಿದ್ಧಗೊಳಿಸಿರಿ” ಎಂಬುದಾಗಿ ಘೋಷಿಸಿದವು. ಈ 4,00,000 ಅಮೆರಿಕನ್ ಡಾಲರುಗಳ ಪ್ರಚಾರ ಚಳುವಳಿಯು ಹೆಸಿಡಿಕ್ ಯೆಹೂದ್ಯರ ಉಗ್ರಸಾಂಪ್ರದಾಯಿಕ ಪಂಥವಾದ ಲುಬವಿಚರ್ಸ್ರಿಂದ ಪ್ರಚೋದಿಸಲ್ಪಟ್ಟಿತ್ತು. ಈ ಗುಂಪಿನ 2,50,000 ಸದಸ್ಯರುಗಳಲ್ಲಿ, ನ್ಯೂ ಯಾರ್ಕ್ ಬ್ರೂಕ್ಲಿನ್ನ ಅವರ ಮಹಾ ರಬ್ಬಿ, ಮೆನಶಿಮ್ ಮೆಂಡಲ್ ಶ್ನೀರ್ಸನ್ ಮೆಸ್ಸೀಯನು ಎಂಬ ವ್ಯಾಪಕವಾದ ನಂಬಿಕೆ ಇದೆ. ಯಾಕೆ? ಈ ಸಂತತಿಯಲ್ಲಿ ಮೆಸ್ಸೀಯನು ಬರುವನು ಎಂದು ಶ್ನೀರ್ಸನ್ ಕೂಡ ಕಲಿಸುತ್ತಿದ್ದಾನೆ. ಮತ್ತು ನ್ಯೂಸ್ವೀಕ್ ಪತ್ರಿಕೆಗನುಸಾರ, ಮೆಸ್ಸೀಯನು ಬರುವ ಮೊದಲು ಈ 90-ವರ್ಷ ಪ್ರಾಯದ ರಬ್ಬಿ ಸಾಯುವುದಿಲ್ಲ ಎಂದು ಲುಬವಿಚರ್ ಅಧಿಕಾರಿಗಳು ಪಟ್ಟುಹಿಡಿಯುತ್ತಾರೆ. ಶತಮಾನಗಳಿಂದಲೂ, ಈ ಪಂಥವು ಕಲಿಸಿದೆಯೇನಂದರೆ ಕಡಿಮೆ ಪಕ್ಷ ಒಬ್ಬ ಮನುಷ್ಯನು ಮೆಸ್ಸೀಯನಾಗಲು ಯೋಗ್ಯತೆ ಪಡೆಯುವಂತೆ ಪ್ರತಿಯೊಂದು ಸಂತತಿಯು ಉತ್ಪಾದಿಸುತ್ತದೆ. ಶ್ನೀರ್ಸನ್ ಅಂತಹ ಒಬ್ಬ ಮನುಷ್ಯನು ಎಂದು ಅವನ ಅನುಯಾಯಿಗಳಿಗೆ ಭಾಸವಾಗುತ್ತದೆ, ಮತ್ತು ಅವನು ಯಾರೇ ಉತ್ತರಾಧಿಕಾರಿಯನ್ನು ನೇಮಕಾತಿ ಮಾಡಿಲ್ಲ. ಆದರೂ, ಅನೇಕ ಯೆಹೂದ್ಯರು ಮೆಸ್ಸೀಯನೋಪಾದಿ ಅವನನ್ನು ಅಂಗೀಕರಿಸುವುದಿಲ್ಲ, ಅನ್ನುತ್ತದೆ ನ್ಯೂಸ್ವೀಕ್. ನ್ಯೂಸ್ಡೇ ವೃತ್ತಪತ್ರಕ್ಕನುಸಾರ, ಪ್ರತಿದ್ವಂದ್ವಿ ರಬ್ಬಿ, 96-ವರ್ಷ ಪ್ರಾಯದ ಎಲಿಯೇಸರ್ ಸ್ಕಕ್ ಅವನನ್ನು ಒಬ್ಬ “ಸುಳ್ಳು ಮೆಸ್ಸೀಯ” ಎಂದು ಕರೆದಿರುತ್ತಾನೆ.
[ಪುಟ 7 ರಲ್ಲಿರುವ ಚಿತ್ರ]
ಕ್ರೇತದ ಮೋಶೆಯು ಒಬ್ಬ ಮೆಸ್ಸೀಯನಾಗಿದ್ದನು ಎಂಬ ನಂಬಿಕೆಯಿಂದ ಅನೇಕ ಜನರು ತಮ್ಮ ಜೀವವನ್ನು ತೆರಬೇಕಾಗಿಬಂತು