ಪಾಪವನ್ನು ನೀವು ಹೇಗೆ ವೀಕ್ಷಿಸುತ್ತೀರಿ?
“ಅವಳು ಪ್ರಾರ್ಥನೆಯಲ್ಲಿ ನಮ್ಮ ಪಾಪಗಳ ಕ್ಷಮಾಪಣೆಗಾಗಿ ಬೇಡುತ್ತಿರುವುದು ಯಾಕೆ?” ಎಂದು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನವನ್ನು ಪಡಕೊಳ್ಳುತ್ತಿದ್ದ ಒಬ್ಬಾಕೆ ಗೃಹಿಣಿಯು ದೂರಿದಳು. “ನಾನು ಒಬ್ಬಾಕೆ ಅಪರಾಧಿಯೋ ಎಂಬ ಭಾವನೆಯನ್ನದು ಉಂಟು ಮಾಡುತ್ತದೆ.” ಈ ಹೆಂಗಸಿನಂತೆಯೇ, ಇಂದು ಅನೇಕರಿಗೆ ಅವರೊಂದು ಅಪರಾಧಗೈಯದ ಹೊರತು ಪಾಪಗಳ ಅರಿವು ಅವರಿಗಿಲ್ಲ.
ಯೆಹೂದ್ಯ-ಕ್ರೈಸ್ತ ಧರ್ಮಗಳಲ್ಲಿ ಕಲಿಸಲ್ಪಟ್ಟಂತೆ, ಸಾಂಪ್ರದಾಯಿಕವಾಗಿ ಜನರಿಗೆ ಅನುವಂಶೀಯ ಪಾಪದ ಭಾವವು ಎಲ್ಲಿ ಇಲ್ಲವೋ ಆ ಪೌರಸ್ತ್ಯ ದೇಶಗಳಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. (ಆದಿಕಾಂಡ 3:1-5, 16-19; ರೋಮಾಪುರ 5:12) ಉದಾಹರಣೆಗಾಗಿ, ತುದಿಯಲ್ಲಿ ಕಾಗದ ಯಾ ನಾರುಬಟ್ಟೆಯನ್ನು ಜೋಡಿಸಿರುವ ಪೂಜಾರಿಯ ಬೆತ್ತದ ಬೀಸುವಿಕೆಯ ಮೂಲಕ ಸುಲಭವಾಗಿ ಒರಸಿ ಹಾಕಬಹುದಾದ ಹೊಲಸಿನೊಂದಿಗೆ ಪಾಪವನ್ನು ಷಿಂಟೋ ಮತಾನುಯಾಯಿಗಳು ಗುರುತಿಸುತ್ತಾರೆ. ಈ ಕಾರ್ಯಗತಿಯಲ್ಲಿ ಗೈಯಲ್ಪಟ್ಟ ತಪ್ಪಿಗೆ ಪಶ್ಚಾತ್ತಾಪದ ಆವಶ್ಯಕತೆ ಇರುವುದಿಲ್ಲ. ಯಾಕೆ? “ದುಷ್ಟ ಕೃತ್ಯಗಳು ಮಾತ್ರವಲ್ಲ, ಹತೋಟಿಯಲ್ಲಿಡಲ್ಪಡಲಾಗದ ನೈಸರ್ಗಿಕ ವಿಪತ್ತುಗಳು ಕೂಡ, ಟ್ಸುಮಿ ಎಂದು ಕರೆಯಲ್ಪಟ್ಟಿವೆ,” ಎಂದು ಕೊಡಾನ್ಸ ಎನ್ಸೈಕ್ಲೊಪೀಡಿಯ ಆಫ್ ಜಪಾನ್ ವಿವರಿಸುತ್ತದೆ. ನೈಸರ್ಗಿಕ ಆಪತ್ತುಗಳು, ಮನುಷ್ಯರ ಜವಾಬ್ದಾರಿಯಲ್ಲದ ಟ್ಸುಮಿಗಳು, ಶುದ್ಧೀಕರಣ ಸಂಸ್ಕಾರಗಳಿಂದಾಗಿ ಅಸ್ತಿತ್ವದಲ್ಲಿರದಂತೆ ಮಾಡುವ ಪಾಪಗಳೆಂದು ಪರಿಗಣಿಸಲಾಗುತಿದ್ದವು.
ಯಾವುದೇ ಪಾಪ, ಇಚ್ಛಾಪೂರ್ವಕವಾಗಿ ಗೈದ ದುಷ್ಟ ಕೃತ್ಯಗಳನ್ನು ಕೂಡ (ಕಾನೂನಿನ ಮೂಲಕ ಶಿಕ್ಷಾರ್ಹ ಅಪರಾಧ ಕೃತ್ಯಗಳನ್ನು ಬಿಟ್ಟು) ಶುದ್ಧೀಕರಣ ಸಂಸ್ಕಾರಗಳ ಮೂಲಕ ಒರಸಿ ಹಾಕಬಹುದೆಂಬ ಆಲೋಚನೆಗೆ ಇದು ನಡೆಸಿತು. “ಜಪಾನಿನಲ್ಲಿ ರಾಜಕೀಯ ಶುದ್ಧೀಕರಣದ ಮತಾಚರಣೆ” ಎಂಬ ಶೀರ್ಷಿಕೆಯ ಕೆಳಗೆ, ದ ನ್ಯೂ ಯೋರ್ಕ್ ಟಯಿಮ್ಸ್ ಅಂಥ ಒಂದು ಮನೋಭಾವವನ್ನು ಉಲ್ಲೇಖಿಸಿತು ಮತ್ತು ಅಪನಿಂದೆಯ ಪ್ರಸಂಗಗಳಲ್ಲಿ ಒಳಗೂಡಿರುವಂಥ ಜಪಾನಿನಲ್ಲಿನ ರಾಜಕಾರಣಿಗಳು ಮತದಾನಿಗಳಿಂದ ಪುನಃ ಚುನಾಯಿತರಾದಾಗ ತಮ್ಮನ್ನು ತಾವೇ “ಶುದ್ಧೀಕರಿಸಲ್ಪಟ್ಟವರು” ಎಂದು ಪರಿಗಣಿಸುತ್ತಾರೆ ಎಂದು ವಿವರಿಸಿತು. ಹೀಗೆ, ನಿಜವಾಗಿ ತಪ್ಪು ತಿದ್ದಲ್ಪಡುವುದಿಲ್ಲ, ಮತ್ತು ಅಂಥ ಅಪನಿಂದೆಗಳು ಮರುಕೊಳಿಸಬಹುದು.
ಸಂಸಾರ, ಯಾ ಪುನರ್ಜನ್ಮದಲ್ಲಿ ಮತ್ತು ಕರ್ಮದ ತತ್ವದಲ್ಲಿ ನಂಬಿಕೆಯನ್ನಿಡುವ ಬೌದ್ಧರು ವಿಭಿನ್ನ ದೃಷ್ಟಿರೂಪಣವನ್ನು ಹೊಂದಿರುತ್ತಾರೆ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟಾನಿಕ ವಿವರಿಸುವುದು, “ಕರ್ಮ ತತ್ವದ ಪ್ರಕಾರ, ಒಳ್ಳೇ ನಡವಳಿಕೆಯು ಆಹ್ಲಾದತೆ ಮತ್ತು ಸಂತೋಷವನ್ನು ತರುತ್ತದೆ ಮತ್ತು ಅಂತಹದ್ದೇ ಒಳ್ಳೇ ಕೃತ್ಯಗಳ ಕಡೆಗೆ ಒಲವನ್ನು ಹುಟ್ಟಿಸುವಾಗ, ಕೆಟ್ಟ ನಡವಳಿಕೆಯು ದುಷ್ಟ ಫಲಿತಾಂಶವನ್ನು ತರುತ್ತದೆ ಮತ್ತು ಪುನರಾವರ್ತಿತ ದುಷ್ಟ ಕೃತ್ಯಗಳ ಕಡೆಗೆ ಒಲವನ್ನು ಹುಟ್ಟಿಸುತ್ತದೆ.” ಬೇರೆ ಮಾತುಗಳಲ್ಲಿ, ಪಾಪಭರಿತ ನಡತೆಯು ಕೆಟ್ಟ ಫಲವನ್ನು ಕೊಡುತ್ತದೆ. ಕೆಲವು ಕರ್ಮಗಳು ಕ್ರಿಯೆಗೈಯಲ್ಪಟ್ಟಿರುವ ಜೀವಿತದಿಂದ ಅನೇಕ ವರ್ಷಗಳ ನಂತರದ ಜೀವಿತಗಳಲ್ಲಿ ಫಲ ಕೊಡುತ್ತದೆಂದು ಹೇಳಲಾಗಿರುವುದರಿಂದ, ಕರ್ಮದ ಬೋಧನೆಗಳು ಪುನರ್ಜನ್ಮ ಬೋಧನೆಗಳೊಂದಿಗೆ ಒತ್ತಾಗಿ ಜೋಡಿಸಲ್ಪಟ್ಟಿವೆ.
ನಂಬುವವರ ಮೇಲೆ ಈ ಬೋಧನೆಯು ಹೇಗೆ ಪರಿಣಾಮ ಬೀರುತ್ತದೆ? ಕರ್ಮದಲ್ಲಿ ಸಾಚಾವಾಗಿ ನಂಬಿದ್ದ ಒಬ್ಬಾಕೆ ಬೌದ್ಧಳು ಹೇಳಿದ್ದು: “ಹುಟ್ಟಿನಲ್ಲಿಯೇ ನನ್ನಲ್ಲಿದ್ದ ಮತ್ತು ನನಗೆ ಯಾವ ಪ್ರಜ್ಞೆಯೂ ಇದ್ದಿಲ್ಲದ ಒಂದು ವಿಷಯಕ್ಕೆ ಕಷ್ಟಪಡುವುದು ಅರ್ಥವಿಲ್ಲದ ವಿಷಯವೆಂದು ನಾನು ಯೋಚಿಸಿದೆ. ಅದು ನನ್ನ ಹಣೆಬರಹವೆಂದು ನಾನು ಸ್ವೀಕರಿಸಬೇಕಾಗಿತ್ತು. ಸೂತ್ರಗಳ ಮಂತ್ರಪಠನ ಮಾಡುವುದು ಮತ್ತು ಒಂದು ಒಳ್ಳೆಯ ಜೀವಿತವನ್ನು ಜೀವಿಸಲು ಕಷ್ಟದ ಪ್ರಯತ್ನ ಮಾಡುವುದು ನನ್ನ ಸಮಸ್ಯೆಗಳನ್ನು ಬಗೆಹರಿಸಲಿಲ್ಲ. ನಾನು ರೇಗು ಸ್ವಭಾವದವಳು ಮತ್ತು ಅತೃಪಳ್ತು, ಯಾವಾಗಲೂ ಗೊಣಗುವವಳು ಆದೆನು.” ಕೆಟ್ಟ ನಡತೆಯ ಫಲಿತಾಂಶಗಳ ಬೌದ್ಧ ಬೋಧನೆಗಳು ಅವಳಿಗೆ ಅಯೋಗ್ಯಳೆಂಬ ಭಾವನೆಯನ್ನು ಹೊಂದಿರುವಂತೆ ಮಾಡಿತು.
ಇನ್ನೊಂದು ಪ್ರಾಚ್ಯ ಧರ್ಮವಾದ ಕನ್ಫ್ಯೂಷಿಯನಿಸಮ್, ಮಾನವ ದುಷ್ಟತನದೊಂದಿಗೆ ವ್ಯವಹರಿಸಲು ಮತ್ತೊಂದು ಮಾರ್ಗವನ್ನು ಬೋಧಿಸಿತು. ಮೂರು ಮಹಾ ಕನ್ಫ್ಯೂಷಿಯನ್ ತತ್ವಜ್ಞಾನಿಗಳಲ್ಲೊಬ್ಬರಾದ ಶೂನ್ಸುವಿಗನುಸಾರ, ಮಾನವನ ಸಹಜ ಗುಣವು ಕೆಟ್ಟದ್ದಾಗಿದೆ ಮತ್ತು ಸ್ವಾರ್ಥದ ಕಡೆಗೆ ಬಾಗಿದೆ. ಪಾಪಪೂರ್ಣ ಪ್ರವೃತ್ತಿಯೊಂದಿಗಿನ ಮಾನವರಲ್ಲಿ ಸಾಮಾಜಿಕ ಕ್ರಮವನ್ನು ಕಾಪಾಡುವಲ್ಲಿ ಯುಕ್ತತೆ, ವಿನಯತೆ, ಮತ್ತು ವಿಷಯಗಳ ಕ್ರಮತೆ ಎಂಬರ್ಥವಿರುವ ಲೀ ಯ ಪ್ರಾಮುಖ್ಯತೆಯನ್ನು ಆತನು ಒತ್ತಿ ಹೇಳಿದನು. ಮೆಂಗ್ಸು ಎಂಬ ಇನ್ನೊಬ್ಬ ಕನ್ಫ್ಯೂಷಿಯನ್ ತತ್ವಜ್ಞಾನಿಯು, ಮಾನವ ಸಹಜತೆಯ ಒಂದು ತದ್ವಿರುದ್ಧ ನೋಟವನ್ನು ಹೇಳುತ್ತಾನಾದರೂ, ಸಾಮಾಜಿಕ ಕೆಡುಕುಗಳ ಅಸ್ತಿತ್ವವನ್ನು ಗುರುತಿಸುತ್ತಾನೆ ಮತ್ತು, ಮನುಷ್ಯರ ಒಳ್ಳೆಯದಾಗಿರುವುದರ ಸ್ವಾಭಾವಿಕತೆಯನ್ನು ನಂಬುತ್ತಾ, ಪರಿಹಾರಕ್ಕಾಗಿ ಸ್ವಪ್ರಗತಿಯ ಮೇಲೆ ಆತುಕೊಂಡಿರುತ್ತಾನೆ. ಎರಡೂ ವಿಧಗಳಲ್ಲಿ, ಕನ್ಫ್ಯೂಷಿಯನ್ ತತ್ವಜ್ಞಾನಿಗಳು ಲೋಕದೊಳಗಿನ ಪಾಪವನ್ನು, ಜಯಿಸಲು ವಿದ್ಯೆ ಮತ್ತು ತರಬೇತಿಯ ಪ್ರಾಮುಖ್ಯತೆಯನ್ನು ಕಲಿಸಿದರು. ಅವರ ಬೋಧನೆಗಳು ಲೀ ಯ ಆವಶ್ಯಕತೆಯನ್ನು ಒಪ್ಪುವುದಾದರೂ, ಪಾಪ ಮತ್ತು ಕೆಟ್ಟದ್ದರ ಅವರ ಕಲ್ಪನೆ ಅಸ್ಪಷ್ಟವಾಗಿಗಿದೆ.—ಹೋಲಿಸಿರಿ ಕೀರ್ತನೆ 14:3; 51:5.
ಪಾಶ್ಚಾತ್ಯ ದೇಶಗಳಲ್ಲಿ ಮರೆಯಾಗುವ ಪಾಪದ ಭಾವ
ಪಾಶ್ಚಾತ್ಯ ದೇಶಗಳಲ್ಲಿ, ಪಾಪದ ಮೇಲಿನ ದೃಷ್ಟಿಕೋನಗಳು ಸಾಂಪ್ರದಾಯಿಕವಾಗಿ ನಿಷ್ಕೃಷ್ಟವಾಗಿದ್ದುವು, ಮತ್ತು ಪಾಪ ಅಸ್ತಿತ್ವದಲ್ಲಿದೆ ಮತ್ತು ಅದನ್ನು ತೊರೆಯಬೇಕು ಎಂದು ಹೆಚ್ಚಿನ ಜನರು ಒಪ್ಪಿರುತ್ತಾರೆ. ಪಾಪದ ಕಡೆಗಿನ ಪಾಶ್ಚಾತ್ಯ ಮನೋಭಾವವು ಬದಲಾಗುತ್ತಿದೆ. ಮನಸ್ಸಾಕ್ಷಿಯ ಸರ್ವವನ್ನು ತಪ್ಪಿಸಿಕೊಳ್ಳಬೇಕಾದ ಒಂದು “ಅಪರಾಧ ಪ್ರಜ್ಞೆಯ ಪ್ರವಾಸ,” ಎಂದು ವರ್ಗೀಕರಿಸಿ ಅನೇಕರು ಪಾಪದ ಎಲ್ಲಾ ಅರಿವನ್ನು ಬದಿಗೆಸೆಯುತ್ತಾರೆ. ನಲವತ್ತು ವರ್ಷಗಳಿಗಿಂತಲೂ ಹೆಚ್ಚು ಹಿಂದೆ, ಪೋಪ್ ಪಾಯಸ್ XII ಪ್ರಲಾಪಿಸಿದ್ದು: “ಪಾಪದ ಎಲ್ಲಾ ಅರಿವನ್ನು ಕಳೆದುಕೊಳ್ಳುವಿಕೆಯೆ ಈ ಶತಮಾನದ ಪಾಪವಾಗಿದೆ.” ಕ್ಯಾಥೊಲಿಕ್ ಸಾಪ್ತಾಹಿಕ ಲೆ ಪೆಲೆರನ್ನಲ್ಲಿ ಪ್ರಕಟಿಸಲಾದ ಸಮೀಕ್ಷೆಯ ಪ್ರಕಾರ, ಎಲ್ಲಿ ಹೆಚ್ಚಿನ ಜನರು ತಾವು ರೋಮನ್ ಕ್ಯಾಥೊಲಿಕರು ಎಂದು ಹೇಳಿಕೊಳ್ಳುತ್ತಾರೋ, ಆ ಫ್ರಾನ್ಸಿನ ಜನಸಂಖ್ಯೆಯಲ್ಲಿ ಆಶ್ಚರ್ಯಗೊಳಿಸುವ 90 ಸೇಕಡ ಪಾಪದಲ್ಲಿ ನಂಬುವುದಿಲ್ಲ.
ನಿಶ್ಚಯವಾಗಿ, ಪ್ರಾಚ್ಯ ಮತ್ತು ಪಾಶ್ಚಾತ್ಯ ದೇಶಗಳಲ್ಲಿ, ಈಗ ಹೆಚ್ಚಿನ ಜನರು ಪಾಪದ ಒಂದು ಅರಿವಿನ ಮೂಲಕ ಬಾಧೆಗೊಳಗಾಗದೆ ಅನುಕೂಲವಾದ ನಿರಾತಂಕತೆಯಲ್ಲಿ ಜೀವಿಸುವಂತೆ ಕಾಣುತ್ತದೆ. ಹಾಗಿದ್ದರೂ, ಪಾಪವು ಅಸ್ತಿತ್ವದಲ್ಲಿಲ್ಲವೆಂಬುದು ಅದರ ಅರ್ಥವೋ? ನಾವದನ್ನು ಸುರಕ್ಷಿತವಾಗಿ ಕಡೆಗಣಿಸಬಲ್ಲೆವೊ? ಪಾಪವು ಎಂದಾದರೂ ಅದೃಶ್ಯವಾಗುವುದೋ?