ಕೆಲವರು ಹೊಸದಾಗಿ ಹುಟ್ಟುವುದಕ್ಕೆ ಕಾರಣ
“ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು.” (ಯೋಹಾನ 3:3) ಯೇಸು ಕ್ರಿಸ್ತನು ಆ ಮಾತುಗಳನ್ನು ಸುಮಾರು 1,900 ವರ್ಷಕ್ಕಿಂತಲೂ ಹೆಚ್ಚು ಪೂರ್ವದಲ್ಲಿ ನುಡಿದಂದಿನಿಂದ ಅವು ಅನೇಕ ಜನರನ್ನು ರೋಮಾಂಚನ ಹಾಗೂ ತಬ್ಬಿಬ್ಬುಗೊಳಿಸಿವೆ.
ಹೊಸದಾಗಿ ಹುಟ್ಟುವ ಕುರಿತು ಯೇಸುವಿನ ಹೇಳಿಕೆಗಳ ಒಂದು ಯೋಗ್ಯ ತಿಳಿವಳಿಕೆಗಾಗಿ, ನಾವು ಮೊದಲಾಗಿ ಈ ಪ್ರಶ್ನೆಗಳನ್ನು ಉತ್ತರಿಸಬೇಕು. ಮಾನವ ಕುಲಕ್ಕಾಗಿ ದೇವರ ಉದ್ದೇಶವು ಏನು? ಮರಣದಲ್ಲಿ ಆತ್ಮಕ್ಕೆ ಏನು ಸಂಭವಿಸುತ್ತದೆ? ದೇವರ ರಾಜ್ಯವು ಏನನ್ನು ಮಾಡಲಿದೆ?
ಮಾನವಕುಲಕ್ಕಾಗಿ ದೇವರ ಉದ್ದೇಶ
ಮೊದಲನೆಯ ಮನುಷ್ಯ ಆದಾಮನು ದೇವರ ಒಬ್ಬ ಪರಿಪೂರ್ಣ ಮಾನವ ಪುತ್ರನಾಗಿ ನಿರ್ಮಿಸಲ್ಪಟ್ಟಿದ್ದನು. (ಲೂಕ 3:38) ಆದಾಮನು ಸಾಯಬೇಕೆಂದು ಯೆಹೋವ ದೇವರೆಂದೂ ಉದ್ದೇಶಿಸಿರಲಿಲ್ಲ. ಆದಾಮ ಮತ್ತು ಅವನ ಪತ್ನಿಯಾದ ಹವ್ವಳಿಗೆ, ಸದಾ ಜೀವಿಸುವ ಮತ್ತು ಒಂದು ಪರದೈಸ ಭೂಮಿಯನ್ನು ತುಂಬುವ ಒಂದು ಪಾಪರಹಿತ ಮಾನವ ಕುಟುಂಬವನ್ನು ಉತ್ಪಾದಿಸುವ ಪ್ರತೀಕ್ಷೆಯು ಇತ್ತು. (ಆದಿಕಾಂಡ 1:28) ಮರಣವು ಪುರುಷ ಮತ್ತು ಸ್ತ್ರೀಗಾಗಿ ದೇವರ ಮೂಲ ಉದ್ದೇಶದ ಭಾಗವಾಗಿರಲಿಲ್ಲ. ದೈವಿಕ ನಿಯಮದ ವಿರುದ್ಧ ದಂಗೆಯ ಫಲಿತಾಂಶವಾಗಿ ಮಾತ್ರವೇ ಅದು ಮಾನವ ದೃಶ್ಯವನ್ನು ಆಕ್ರಮಿಸಿತು.—ಆದಿಕಾಂಡ 2:15-17; 3:17-19.
ಈ ದಂಗೆಯು, ದೇವರ ಪರಮಾಧಿಕಾರದ ನ್ಯಾಯಪರತೆ ಮತ್ತು ಆತನ ನಿಯಮಕ್ಕೆ ನಂಬಿಗಸ್ತರಾಗಿ ಉಳಿಯಲು ಮಾನವರಿಗಿರುವ ಸಾಮರ್ಥ್ಯದಂತಹ ಮಹತ್ತಾದ ನೈತಿಕ ವಾದಗಳನ್ನು ಎಬ್ಬಿಸಿತು. ಈ ವಿವಾದಗಳನ್ನು ಇತ್ಯರ್ಥಗೊಳಿಸಲು ಸಮಯವು ಬೇಕಾಗಿರುವುದು. ಆದರೆ ಮಾನವಕುಲಕ್ಕಾಗಿ ಯೆಹೋವ ದೇವರ ಉದ್ದೇಶವು ಬದಲಾಗಲಿಲ್ಲ, ಮತ್ತು ಆತನು ಏನನ್ನು ಮಾಡಲು ಪ್ರಾರಂಭಿಸುತ್ತಾನೋ ಅದರಲ್ಲಿ ಸೋತುಹೋಗಲಾರನು. ಪರದೈಸದಲ್ಲಿ ನಿತ್ಯಜೀವವನ್ನು ಆನಂದಿಸುವ ಒಂದು ಪರಿಪೂರ್ಣ ಮಾನವ ಕುಟುಂಬದಿಂದ ಭೂಮಿಯನ್ನು ತುಂಬಿಸಲು ಆತನು ಪೂರ್ತಿಯಾಗಿ ಸಂಕಲ್ಪಿಸಿದ್ದಾನೆ. (ಕೀರ್ತನೆ 37:29; 104:5; ಯೆಶಾಯ 45:18; ಲೂಕ 23:43) ಹೊಸದಾಗಿ ಹುಟ್ಟುವ ಕುರಿತು ಯೇಸುವಿನ ಮಾತುಗಳನ್ನು ನಾವು ಪರಿಗಣಿಸುವಾಗ, ಈ ಮೂಲಭೂತ ಸತ್ಯವನ್ನು ನಾವು ಮನಸ್ಸಿನಲ್ಲಿಡಬೇಕು.
ಮರಣದಲ್ಲಿ ಆತ್ಮಕ್ಕೆ ಏನು ಸಂಭವಿಸುತ್ತದೆ?
ದೇವರ ಪವಿತ್ರ ಆತ್ಮವು ಬೈಬಲ್ ಲೇಖಕರಿಗೆ ಏನನ್ನು ಪ್ರಕಟಿಸಿತ್ತೋ ಅದರ ಪರಿಜ್ಞಾನವಿಲ್ಲದೆ, ಗ್ರೀಕ್ ತತ್ವಜ್ಞಾನಿಗಳು ಜೀವಿತದ ಅರ್ಥವನ್ನು ಕಂಡು ಹಿಡಿಯಲು ಪ್ರಯಾಸಪಟ್ಟರು. ಮನುಷ್ಯನು ಕೇವಲ ಕೆಲವೇ ವರ್ಷಗಳ ತನಕ, ಹೆಚ್ಚಾಗಿ ಶೋಚನೀಯ ಪರಿಸ್ಥಿತಿಗಳಲ್ಲಿ, ಬದುಕಲಿಕ್ಕಾಗಿ ಮತ್ತು ಅನಂತರ ಅಸ್ತಿತ್ವಹೀನನಾಗಿ ಹೋಗಲಿಕ್ಕಾಗಿ ಯೋಜಿಸಲ್ಪಟ್ಟಿದ್ದಾನೆಂಬದನ್ನು ಅವರಿಗೆ ನಂಬಲಾಗಲಿಲ್ಲ. ಇದರಲ್ಲಿ ಅವರು ಸರಿಯಾಗಿದ್ದರು. ಆದರೆ ಮರಣಾನಂತರ ಮನುಷ್ಯನ ಪ್ರತೀಕ್ಷೆಗಳ ಕುರಿತ ಅವರ ತೀರ್ಮಾನಗಳು ತಪ್ಪಾಗಿದ್ದವು. ಮರಣಾನಂತರ ಮಾನವ ಅಸ್ತಿತ್ವವು ಬೇರೊಂದು ರೂಪದಲ್ಲಿ ಮುಂದರಿಯುತ್ತದೆಂದೂ, ಪ್ರತಿಯೊಬ್ಬನೊಳಗೆ ಒಂದು ಆಮರ ಆತ್ಮವು ಇದೆ ಎಂದೂ ಅವರು ನಿರ್ಣಯಿಸಿದ್ದರು.
ಯೆಹೂದ್ಯರು ಮತ್ತು ಕ್ರೈಸ್ತರೆನಿಸಿಕೊಳ್ಳುವವರು ಅಂಥ ವೀಕ್ಷಣೆಗಳಿಂದ ಪ್ರಭಾವಿತರಾಗಿದ್ದರು. ಹೆವನ್—ಎ ಹಿಸ್ಟರಿ ಎಂಬ ಪುಸ್ತಕವು ಅನ್ನುವುದು: “ಚದರಿದ್ದ ಯೆಹೂದ್ಯರು ಗ್ರೀಕ್ ಪ್ರಜ್ಞಾಶಾಲಿಗಳನ್ನು ಭೇಟಿಯಾದಾಗಲೆಲ್ಲಾ, ಅಮರ ಆತ್ಮದ ಒಂದು ವಿಚಾರವು ತಲೆದೋರುತ್ತಿತ್ತು.” ಪುಸ್ತಕವು ಕೂಡಿಸಿದ್ದು: “ಆತ್ಮದ ಕುರಿತ ಗ್ರೀಕ್ ಬೋಧನೆಯು ಯೆಹೂದ್ಯ ಮತ್ತು ಕೊನೆಗೆ ಕ್ರೈಸ್ತ ನಂಬಿಕೆಗಳ ಮೇಲೆ ಒಂದು ಬಾಳುವ ಅಚ್ಚೊತ್ತನ್ನು ಹಾಕಿತು. . . . ಪ್ಲೇಟೋ ತತ್ವಜ್ಞಾನ ಮತ್ತು ಬೈಬಲ್ ಸಂಪ್ರದಾಯದ ಒಂದು ಅಪೂರ್ವ ಸಂಯೋಗವನ್ನು ನಿರ್ಮಿಸುವ ಮೂಲಕ, [ಅಲೆಕ್ಸಾಂಡ್ರಿಯದ ಒಂದನೆಯ ಶತಕದ ಒಬ್ಬ ಯೆಹೂದ್ಯ ತತ್ವಜ್ಞಾನಿ] ಫಿಲೋ, ತದನಂತರದ ಕ್ರೈಸ್ತ ಪರ್ಯಾಲೋಚಕರಿಗೆ ದಾರಿಯನ್ನು ತೆರೆದುಕೊಟ್ಟನು.”
ಫಿಲೋ ನಂಬಿದ್ದೇನು? ಅದೇ ಪುಸ್ತಕವು ಮುಂದುವರಿಸಿದ್ದು: “ಮರಣವು ಆತ್ಮವನ್ನು ಅದರ ಜನ್ಮ-ಪೂರ್ವದ ಮೂಲಸ್ಥಿತಿಗೆ ಪುನಃಸ್ಥಾಪಿಸುತ್ತದೆಂದೇ ಅವನ ಮತ. ಆತ್ಮವು ಆತ್ಮಿಕ ಲೋಕಕ್ಕೆ ಸೇರಿರುತ್ತದಾದರಿಂದ, ದೇಹದಲ್ಲಿನ ಜೀವವು ಸಂಕ್ಷಿಪ್ತವೂ, ಹೆಚ್ಚಾಗಿ ನಿರ್ಭಾಗ್ಯವೂ ಆದ ಘಟನಾವಳಿಯಲ್ಲದೆ ಬೇರೇನೂ ಅಲ್ಲ.” ಆದರೂ, ಆದಾಮನ “ಜನ್ಮ-ಪೂರ್ವ ಸ್ಥಿತಿಯು” ಅಸ್ತಿತ್ವರಹಿತವಾಗಿತ್ತು. ಬೈಬಲ್ ದಾಖಲೆಗನುಸಾರ, ಭೂಮಿಯು ಒಂದು ಮೇಲ್ಮಟ್ಟದ ಅಥವಾ ಒಂದು ಕೆಳಮಟ್ಟದ ಅಸ್ತಿತ್ವಕ್ಕಾಗಿ ಇರುವ ಕೇವಲ ಒಂದು ರಂಗಭೂಮಿಯೋ ಎಂಬಂತೆ, ಮರಣದಲ್ಲಿ ಬೇರೆ ಯಾವುದೋ ಒಂದು ಕ್ಷೇತ್ರಕ್ಕೆ ಯಾಂತ್ರಿಕವಾದ ಸ್ಥಳಾಂತರವನ್ನು ದೇವರು ಎಂದೂ ಉದ್ದೇಶಿಸಿರಲಿಲ್ಲ.
ಮಾನವ ಆತ್ಮವು ಅಮರವೆಂದು ದೇವರ ಆತ್ಮ-ಪ್ರೇರಿತ ವಾಕ್ಯವಾದ ಬೈಬಲ್ನಲ್ಲಿ ಕಲಿಸಿರುವುದಿಲ್ಲ. “ಅಮರ ಆತ್ಮ” ಎಂಬ ಪದಸರಣಿಯನ್ನು ಅದು ಒಮ್ಮೆಯಾದರೂ ಬಳಸಿರುವುದಿಲ್ಲ. ಆದಾಮನು ಒಂದು ಆತ್ಮ ವಾಗಿ ನಿರ್ಮಿಸಲ್ಪಟ್ಟನು, ಒಂದು ಆತ್ಮ ದೊಂದಿಗೆ ಅಲ್ಲ, ಎಂದು ಅದು ಹೇಳುತ್ತದೆ. ಆದಿಕಾಂಡ 2:7 ಹೇಳುವುದು: “ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿ [ಆತ್ಮ, NW] ಯಾದನು.” ಮಾನವಕುಲವು ಪರಲೋಕದಲ್ಲಿ ನಿತ್ಯಜೀವದ ಅಥವಾ ನರಕಾಗ್ನಿಯಲ್ಲಿ ನಿತ್ಯಯಾತನೆಯ ಪ್ರತೀಕ್ಷೆಯನ್ನು ಎಂದೂ ಎದುರಿಸಿರಲಿಲ್ಲ. ಮರ್ತ್ಯ ಆತ್ಮ ಅಥವಾ ವ್ಯಕ್ತಿಗೆ ಯಾವ ಪ್ರಜ್ಞಾಯುಕ್ತ ಅಸ್ತಿತ್ವವೂ ಇಲ್ಲ ಎಂದು ಬೈಬಲ್ ತೋರಿಸುತ್ತದೆ. (ಕೀರ್ತನೆ 146:3, 4; ಪ್ರಸಂಗಿ 9:5, 10; ಯೆಹೆಜ್ಕೇಲ 18:4) ಆದುದರಿಂದ, ತತ್ವಜ್ಞಾನಿಗಳು ಆತ್ಮದ ಕುರಿತು ಇಟ್ಟಿರುವ ನೋಟಗಳು ಅಶಾಸ್ತ್ರೀಯವಾಗಿವೆ. ಹೊಸದಾಗಿ ಹುಟ್ಟುವ ಕುರಿತಾದ ಯೇಸುವಿನ ಮಾತುಗಳ ನಮ್ಮ ತಿಳಿವಳಿಕೆಯನ್ನು ಮಬ್ಬುಗೊಳಿಸ ಶಕ್ತನಾದ ಈ ತಪ್ಪಭಿಪ್ರಾಯಗಳ ವಿರುದ್ಧ ನಾವು ಎಚ್ಚರವಿರುವ ಅಗತ್ಯವಿದೆ.
ಅರಸರಾಗಿ ಆಳುವುದಕ್ಕೆ ಹೊಸದಾಗಿ ಹುಟ್ಟಿದ್ದು
“ಹೊಸದಾಗಿ ಹುಟ್ಟುವವರು . . . ದೇವರ ರಾಜ್ಯವನ್ನು ಸೇರುವರು” ಎಂದು ಯೇಸು ನಿಕೊದೇಮನಿಗೆ ಹೇಳಿದನು. (ಯೋಹಾನ 3:3-5) ಆ ರಾಜ್ಯವು ಯಾವುದು? ಸಾಂಕೇತಿಕ ಭಾಷೆಯಲ್ಲಿ, ಒಂದು ವಿಶೇಷ “ಸಂತಾನ” ವನ್ನು—ಬರಲಿರುವ ಒಬ್ಬ ಅರಸನನ್ನು—ಪುರಾತನ ಸರ್ಪವಾದ ಪಿಶಾಚ ಸೈತಾನನ ತಲೆಯನ್ನು ಜಜ್ಜುವುದಕ್ಕೆ ಉಪಯೋಗಿಸುವ ತನ್ನ ಉದ್ದೇಶವನ್ನು ಯೆಹೋವ ದೇವರು ಮಾನವ ಇತಿಹಾಸದ ಆರಂಭದಲ್ಲಿ ತಿಳಿಯಪಡಿಸಿದನು. (ಆದಿಕಾಂಡ 3:15; ಪ್ರಕಟನೆ 12:9) ಶಾಸ್ತ್ರಗ್ರಂಥದಲ್ಲಿ ಪ್ರಗತಿಪೂರ್ವಕವಾಗಿ ಪ್ರಕಟಿಸಲ್ಪಟ್ಟ ಪ್ರಕಾರ, ಈ “ಸಂತಾನ” ಯೇಸು ಕ್ರಿಸ್ತನಾಗಿ ಗುರುತಿಸಲ್ಪಟ್ಟನು, ಇವನು ತನ್ನ ಜತೆ ಅರಸರೊಂದಿಗೆ ದೇವರ ಪರಮಾಧಿಕಾರದ ಒಂದು ಅಸದೃಶ ಅಭಿವ್ಯಂಜಕವಾದ ಮೆಸ್ಸೀಯ ರಾಜ್ಯದಲ್ಲಿ ಆಳುವನು. (ಕೀರ್ತನೆ 2:8, 9; ಯೆಶಾಯ 9:6, 7; ದಾನಿಯೇಲ 2:44; 7:13, 14) ಇದೇ ಪರಲೋಕ ರಾಜ್ಯವು, ದೇವರ ಪರಮಾಧಿಕಾರವನ್ನು ನಿರ್ದೋಷೀಕರಿಸಲಿರುವ ಮತ್ತು ಮಾನವ ಕುಲವನ್ನು ಪಾಪ ಮತ್ತು ಮರಣದ ಬಂಧನದಿಂದ ಬಿಡಿಸಲಿರುವ ಪರಲೋಕದಲ್ಲಿರುವ ಒಂದು ಸರಕಾರವಾಗಿದೆ.—ಮತ್ತಾಯ 6:9, 10.
ಯೇಸುವಿನೊಂದಿಗೆ ಜೊತೆ ಅರಸರಾಗಿ ಕೂಡಿರುವ 1,44,000 ಮಂದಿ ಮಾನವ ಕುಲದಿಂದ ತೆಗೆಯಲ್ಪಟ್ಟವರಾಗಿದ್ದಾರೆ. (ಪ್ರಕಟನೆ 5:9, 10; 14:1-4) ಕ್ರಿಸ್ತನೊಂದಿಗೆ ಆ ಮೆಸ್ಸೀಯ ರಾಜ್ಯದಲ್ಲಿ ಆಳುವ “ಪರಾತ್ಪರನ ಭಕ್ತಜನ” ರಾಗುವಂತೆ ದೇವರು ಆದಾಮನ ಅಸಂಪೂರ್ಣ ಮಾನವ ಕುಟುಂಬದಿಂದ ಈ ಕೆಲವರನ್ನು ಆರಿಸಿದ್ದಾನೆ. (ದಾನಿಯೇಲ 7:27; 1 ಕೊರಿಂಥ 6:2; ಪ್ರಕಟನೆ 3:21; 20:6) ಈ ಪುರುಷರು ಮತ್ತು ಸ್ತ್ರೀಯರು, ಅವರು “ಹೊಸದಾಗಿ ಹುಟ್ಟುವರು” ಎಂದು ಯಾರು ಹೇಳಿದ್ದನೋ ಆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುತ್ತಾರೆ. (ಯೋಹಾನ 3:5-7) ಹೇಗೆ ಮತ್ತು ಏಕೆ ಈ ಹುಟ್ಟುವಿಕೆಯು ಸಂಭವಿಸುತ್ತದೆ?
ಈ ವ್ಯಕ್ತಿಗಳು ಕ್ರಿಸ್ತನ ಹಿಂಬಾಲಕರೋಪಾದಿ ನೀರಿನಲ್ಲಿ ದೀಕ್ಷಾಸ್ನಾನವನ್ನು ಪಡೆದವರಾಗಿದ್ದಾರೆ. ದೇವರು ಅವರ ಪಾಪಗಳನ್ನು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದಿಂದ ಕ್ಷಮಿಸಿ, ಅವರನ್ನು ನೀತಿವಂತರೆಂದು ನಿರ್ಣಯಿಸಿದ್ದಾನೆ ಮತ್ತು ತನ್ನ ಆತ್ಮಿಕ ಪುತ್ರರಾಗಿ ಸ್ವೀಕಾರಮಾಡಿದ್ದಾನೆ. (ರೋಮಾಪುರ 3:23-26; 5:12-21; ಕೊಲೊಸ್ಸೆ 1:13, 14) ಅಂಥವರಿಗೆ ಅಪೊಸ್ತಲ ಪೌಲನು ಹೇಳುವುದು: “ನೀವು . . . ಮಗನ ಭಾವವನ್ನು ಹೊಂದಿದವರಾಗಿದ್ದೀರಿ. ಈ ಭಾವದಿಂದ ನಾವು ದೇವರನ್ನು ಅಪ್ಪಾ, ತಂದೆಯೇ, ಎಂದು ಕೂಗುತ್ತೇವೆ. ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತಾನೆ. ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು. ಹೇಗಂದರೆ ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗುವದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.” —ರೋಮಾಪುರ 8:15-17.
ಕ್ರಿಸ್ತನ ಹಿಂಬಾಲಕರೋಪಾದಿ, ಇವರಿಗೆ ಜೀವಿತದಲ್ಲಿ ಒಂದು ಹೊಸ ಹುಟ್ಟುವಿಕೆ, ಅಥವಾ ಹೊಸ ಪ್ರಾರಂಭವು ಸಿಕ್ಕಿರುತ್ತದೆ. ಅದು ಯೇಸುವಿನ ಸ್ವರ್ಗೀಯ ಬಾಧ್ಯತೆಯಲ್ಲಿ ಅವರು ಪಾಲುಗಾರರಾಗುವ ಒಂದು ಭರವಸೆಯಲ್ಲಿ ಪರಿಣಮಿಸಿದೆ. (ಲೂಕ 12:32; 22:28-30; 1 ಪೇತ್ರ 1:23) ಅಪೊಸ್ತಲ ಪೇತ್ರನು ಆ ಪುನರ್ಜನ್ಮವನ್ನು ಈ ರೀತಿಯಲ್ಲಿ ವರ್ಣಿಸಿದ್ದಾನೆ: “ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದರ್ದಲ್ಲಿ [ದೇವರು] ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರಿಗಿ ಜೀವಿಸುವಂತೆ [ಹೊಸದಾಗಿ ಹುಟ್ಟುವಂತೆ, NW] ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ ನಮ್ಮನ್ನು ಲಯ ಕಳಂಕ ಕ್ಷಯಗಳಿಲ್ಲದ ಬಾಧ್ಯತೆಯನ್ನು ಎದುರುನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಟ್ಟಿರುವುದು.” (1 ಪೇತ್ರ 1:3, 4) ಯೇಸುವನ್ನು ಪುನರುತ್ಥಾನ ಮಾಡಿದ ಹಾಗೆ ದೇವರು ಅವರನ್ನು ಪುನರುತ್ಥಾನ ಮಾಡುವುದರಿಂದ ಇಂಥ ವ್ಯಕ್ತಿಗಳಿಗೆ ಪರಲೋಕದಲ್ಲಿ ಈ ಹೊಸ ಜೀವಿತವು ಶಕ್ಯವಾಗಿ ಪರಿಣಮಿಸುವುದು.—1 ಕೊರಿಂಥ 15:42-49.
ಭೂಮಿಯ ಕುರಿತೇನು?
ವಿಧೇಯ ಮಾನವರು ಎಲ್ಲರೂ ಭೂಮಿಯಿಂದ ಪರಲೋಕಕ್ಕೆ ಹೋಗುವುದಕ್ಕೆ ಕಟ್ಟಕಡೆಗೆ ಹೊಸದಾಗಿ ಹುಟ್ಟುವರು ಎಂದು ಇದರ ಅರ್ಥವಲ್ಲ. ಅಂಥ ತಪ್ಪು ವಿಚಾರವು “ದೇಹದಲ್ಲಿನ ಜೀವವು ಒಂದು ಸಂಕ್ಷಿಪ್ತವಾದ, ಹೆಚ್ಚಾಗಿ ನಿರ್ಭಾಗ್ಯಕರ ಫಟನಾವಳಿಯಲ್ಲದೆ ಬೇರೇನೂ ಅಲ್ಲ” ಎಂದು ನೆನಸಿದ್ದ ಫಿಲೋನಂತಹ ತತ್ವಜ್ಞಾನಿಗಳಿಂದ ಹಿಡಿಯಲ್ಪಟ್ಟದ್ದಕ್ಕೆ ಸಮಾನವಾಗಿದೆ. ಆದರೆ ಯೆಹೋವ ದೇವರ ಆರಂಭದ ಐಹಿಕ ಸೃಷ್ಟಿಯಲ್ಲಿ ಏನೂ ದೋಷವಿರಲಿಲ್ಲ.—ಆದಿಕಾಂಡ 1:31; ಧರ್ಮೋಪದೇಶಕಾಂಡ 32:4.
ಮಾನವ ಜೀವವು ಸಂಕ್ಷಿಪ್ತವೂ ಸಂಕಟಕರವೂ ಆಗಿರುವಂತೆ ಎಂದೂ ಯೋಜಿಸಲ್ಪಟ್ಟಿರಲ್ಲಿಲ. ಸೈತಾನನ ದಂಗೆಯ ಆ ಹಾನಿಕರ ಫಲಿತಾಂಶಗಳನ್ನೆಲ್ಲಾ ಯೇಸು ಕ್ರಿಸ್ತನು ಮತ್ತು ಪರಲೋಕದಲ್ಲಿ ಆತನೊಂದಿಗೆ ರಾಜ-ಯಾಜಕರಾಗಿ ಆಳುವುದಕ್ಕಾಗಿ ಹೊಸದಾಗಿ ಹುಟ್ಟಿದವರು ತೆಗೆದು ಹಾಕುವರು. (ಎಫೆಸ 1:8-10) ವಾಗ್ದತ್ತ ‘ಅಬ್ರಹಾಮನ ಸಂತಾನ’ ವಾದ ಅವರ ಮೂಲಕ “ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವುಂಟಾಗುವದು.” (ಗಲಾತ್ಯ 3:29; ಆದಿಕಾಂಡ 22:18) ಇದು ವಿಧೇಯ ಮಾನವರಿಗೆ ಇಂದಿನ ಸಂಕ್ಷಿಪ್ತವಾದ, ವೇದನಾಯುಕ್ತ ಅಸ್ತಿತ್ವಕ್ಕಿಂತ ಎಷ್ಟೋ ಬೇರೆಯಾದ, ಒಂದು ಪರದೈಸ ಭೂಮಿಯ ಜೀವನದ ಅರ್ಥದಲ್ಲಿರುವುದು.—ಕೀರ್ತನೆ 37:11, 29; ಪ್ರಕಟನೆ 21:1-4.
ಯಾರು ಪ್ರಯೋಜನ ಹೊಂದುವರು?
ಮಾನವಕುಲದ ಆಶೀರ್ವಾದಕ್ಕಾಗಿರುವ ದೇವರ ಒದಗಿಸುವಿಕೆಯಿಂದ ಪ್ರಯೋಜನ ಹೊಂದುವವರಲ್ಲಿ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡುವ ಪುನರುತ್ಥಾನಗೊಂಡ ಮೃತರೂ ಸೇರಲಿರುವರು. (ಯೋಹಾನ 5:28, 29; ಅ. ಕೃತ್ಯಗಳು 24:15) ಅವರಲ್ಲಿ ಅಧಿಕ ಸಂಖ್ಯಾತರು ದೇವರ ಮತ್ತು ಕ್ರಿಸ್ತನ ಕುರಿತು ಎಂದೂ ಕಲಿತವರಲ್ಲ, ಆದುದರಿಂದ ಯೇಸುವಿನಲ್ಲಿ ನಂಬಿಕೆ ತೋರಿಸಲು ಶಕ್ತರಿರಲಿಲ್ಲ. ಆ ಪುನರುತಿಥ್ತರಲ್ಲಿ, ಯೇಸುವಿನ ಮರಣವು ಸ್ವರ್ಗೀಯ ಜೀವನಕ್ಕೆ ದಾರಿಯನ್ನು ತೆರೆಯುವ ಮುಂಚೆ ಸತ್ತಿರುವ ಸ್ನಾನಿಕನಾದ ಯೋಹಾನನಂತಹ ನಂಬಿಗಸ್ತ ಜನರು ಸಹ ಸೇರಿರುವರು. (ಮತ್ತಾಯ 11:11) ಇವರು ಮಾತ್ರವಲ್ಲದೆ, ‘ಯಜ್ಞದ ಕುರಿಯಾದ’ ಯೇಸು ಕ್ರಿಸ್ತನ ‘ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿರುವ ಸಕಲ ಜನಾಂಗಗಳಿಂದ ಬಂದ ಒಂದು ಮಹಾ ಸಮೂಹವೂ’ ಇದೆ. ಯೇಸುವಿನ ಹೊಸದಾಗಿ ಹುಟ್ಟಿದ “ಸಹೋದರ” ರಿಂದ ಈಗ ಮುಮ್ಮೊನೆಯಾಗಿ ನಡಿಸಲ್ಪಡುತ್ತಿರುವ ರಾಜ್ಯ-ಸಾರುವಿಕೆಯ ಕಾರ್ಯಕ್ಕೆ ಅವರು ಮೆಚ್ಚಿಕೆಯ ಪ್ರತಿವರ್ತನೆ ತೋರಿಸುತ್ತಾರೆ ಮತ್ತು ಒಂದು ಶುದ್ಧೀಕರಿಸಲ್ಪಟ್ಟ ಭೂಮಿಯಲ್ಲಿ ಜೀವಿಸಲಿಕ್ಕಾಗಿ ಅರ್ಮಗೆದೋನನ್ನು ಪಾರಾಗುವರು. (ಪ್ರಕಟನೆ 7:9-14; 16:14-16; ಮತ್ತಾಯ 24:14; 25:31-46) ಹೀಗಿರಲಾಗಿ, ದೇವರ ಏರ್ಪಾಡಿನಲ್ಲಿ, ಅವರು ಪರಲೋಕದಲ್ಲಿ ಕ್ರಿಸ್ತನೊಂದಿಗೆ ಆಳುವುದಕ್ಕೆ ಹೊಸದಾಗಿ ಹುಟ್ಟದಿದ್ದರೂ, ಲಕ್ಷಾಂತರ ಜನರು ರಕ್ಷಿಸಲ್ಪಡಲಿರುವರು.—1 ಯೋಹಾನ 2:1, 2.
ಒಂದು ಪರದೈಸ ಭೂಮಿಯಲ್ಲಿ ಜೀವವನ್ನು ಬಾಧ್ಯವಾಗಿ ಹೊಂದುವವರಲ್ಲಿ ನೀವು ಇರುವಿರೋ? ಯೇಸು ಕ್ರಿಸ್ತನ ಯಜ್ಞದಲ್ಲಿ ನೀವು ನಂಬಿಕೆಯನ್ನಿಡುವುದಾದರೆ ಮತ್ತು ನಿಜ ಕ್ರೈಸ್ತ ಸಭೆಯೊಂದಿಗೆ ಕ್ರಿಯಾಶೀಲರಾಗಿ ಸಹವಾಸ ಮಾಡುವವರಾದರೆ ಹಾಗೆ ಆಗಬಲ್ಲಿರಿ. ಅದು ತತ್ವಜ್ಞಾನಗಳಿಂದ ಭ್ರಷ್ಟವಾಗಿರುವುದಿಲ್ಲ, ಬದಲಾಗಿ, “ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿ” ಉಳಿದದೆ. (1 ತಿಮೊಥೆಯ 3:15; ಹೋಲಿಸಿರಿ ಯೋಹಾನ 4:24; 8:31, 32.) ಆಗ ನೀವು, ದೇವರ ಹೊಸತಾಗಿ ಹುಟ್ಟಿದ ಪುತ್ರರು ಪರಲೋಕದಲ್ಲಿ ಆಳುವ ಮತ್ತು ಒಂದು ಆಶ್ಚರ್ಯಕರ ಭೂ ಪರದೈಸದಲ್ಲಿ ದೇವರ ಐಹಿಕ ಮಕ್ಕಳೆಲ್ಲರೂ ಪರಿಪೂರ್ಣತೆಗೆ ಪುನಃಸ್ಥಾಪಿಸಲ್ಪಡುವ ಒಂದು ವಿಸ್ಮಯಕರ ಭವಿಷ್ಯವನ್ನು ಮುನ್ನೋಡಬಲ್ಲಿರಿ. ಆದ್ದರಿಂದ ನಿತ್ಯ ಆಶೀರ್ವಾದಗಳ ಆ ಹೊಸ ಲೋಕದಲ್ಲಿ ಜೀವಿತಕ್ಕಾಗಿ ನಿಮಗಿರುವ ಸಂದರ್ಭವನ್ನು ಬಿಗಿಯಾಗಿ ಹಿಡಿಯಿರಿ.—ರೋಮಾಪುರ 8:19-21; 2 ಪೇತ್ರ 3:13.
[ಪುಟ 6 ರಲ್ಲಿರುವ ಚಿತ್ರ]
ಪರಲೋಕದಲ್ಲಿ ಜೀವನ ಅಥವಾ ನರಕಾಗ್ನಿಯಲ್ಲಿ ನಿತ್ಯ ಯಾತನೆಯ ಬದಲಿಯು ಆದಾಮನಿಗೆಂದೂ ಕೊಡಲ್ಪಡಲಿಲ್ಲ