ಕ್ರೂಜೆ—ಕ್ರೈಸ್ತತ್ವದ ಕುರುಹೋ?
ಶತಮಾನಗಳಿಂದ ಜನ ಸಮುದಾಯಗಳು ಕ್ರೂಜೆಯನ್ನು ಕ್ರೈಸ್ತತ್ವದ ಕುರುಹಾಗಿ ಸ್ವೀಕರಿಸಿರುತ್ತಾರೆ. ಆದರೆ ಅದು ನಿಜವಾಗಿ ಹಾಗಿದೆಯೇ? ಹಾಗೆಂದು ಪ್ರಾಮಾಣಿಕತೆಯಿಂದ ನಂಬಿದ್ದ ಅನೇಕರು, ಕ್ರೂಜೆಯು ಕ್ರೈಸ್ತ ಪ್ರಪಂಚಕ್ಕೆ ಎಷ್ಟು ಮಾತ್ರಕ್ಕೂ ಅಸದೃಶವಲ್ಲವೆಂದು ಕಂಡುಕೊಂಡಾಗ ತೀರಾ ಅಚ್ಚರಿಪಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ, ಲೋಕದಲ್ಲೆಲ್ಲೂ ಇರುವ ಕ್ರೈಸ್ತ್ಯೇತರ ಧರ್ಮಗಳಲ್ಲಿ ಅದು ಬಹು ವ್ಯಾಪಕವಾಗಿ ಬಳಸಲ್ಪಟ್ಟಿದೆ.
ದೃಷ್ಟಾಂತಕ್ಕಾಗಿ, 1500 ರುಗಳ ಆರಂಭದಲ್ಲಿ, ಅರ್ನನ್ ಕಾರ್ಟ್ಸ್ ಮತ್ತು ಅವನ “ಕ್ರೈಸ್ತ” ಸೇನೆಯು ಆ್ಯಸ್ಟೆಕ್ ಸಾಮ್ರಾಜ್ಯವನ್ನು ಆಕ್ರಮಿಸಲು ಸಿದ್ಧತೆ ಮಾಡಿದಾಗ, “ಪವಿತ್ರ ಕ್ರೂಜೆಯ ಕುರುಹನ್ನು ನಾವು ನಿಜ ನಂಬಿಕೆಯಲ್ಲಿ ಹಿಂಬಾಲಿಸೋಣ, ಯಾಕಂದರೆ ಈ ಕುರುಹಿನ ಕೆಳಗೆ ನಾವು ವಿಜೈಸುವೆವು” ಎಂದು ಘೋಷಿಸಿದ ಬಾವುಟಗಳನ್ನು ಅವರು ಒಯ್ದರು. ತಮ್ಮ ಸ್ವಂತದ್ದಕ್ಕೆ ಬೇರೆಯಾಗಿರದ ಒಂದು ಕ್ರೂಜೆಯನ್ನು ಅವರ ವಿಧರ್ಮಿ ಶತ್ರುಗಳೂ ಪೂಜಿಸುತ್ತಿದ್ದದ್ದನ್ನು ಕಾಣಲು ಅವರು ಆಶ್ಚರ್ಯಪಟ್ಟಿರಲೇಬೇಕು. ಗ್ರೇಟ್ ರಿಲಿಜನ್ಸ್ ಆಫ್ ದ ವರ್ಲ್ಡ್ ಪುಸ್ತಕವು ಹೇಳುವುದು: “ಆ್ಯಸ್ಟೆಕ್ರ ಮನುಷ್ಯ ಬಲಿಗಳಿಂದ ಮತ್ತು ಯಾವುದು ಕ್ರೈಸ್ತತ್ವದ ಸೈತಾನಿಕ ಅನುಕರಣೆಯೆಂತ ತೋರಿತೋ . . . ಆ ವಾಯು ಮತ್ತು ವೃಷ್ಟಿ ದೇವತೆಗಳ ಕ್ರೂಜೆಯಂತಹ ಕುರುಹುಗಳ ಪೂಜ್ಯಭಾವದಿಂದ, ಕಾರ್ಟ್ಸ್ ಮತ್ತು ಅವನ ಹಿಂಬಾಲಕರು ಹಿನ್ನೆಗೆದರು.”
ವಾರ್ತಾಪತ್ರ ಲಾ ನಸಿಯೊನ್ ನ ಒಂದು ಸಂಪಾದಕೀಯದಲ್ಲಿ, ಲೇಖಕ ಹೋಸ್ ಆಲ್ಬರ್ಟೊ ಫರ್ಕ್ ತೋರಿಸುವುದೇನಂದರೆ 18 ನೆಯ ಶತಮಾನದ ಉತ್ತರಾರ್ಧದಲ್ಲಿ, ಮಧ್ಯ ಮತ್ತು ದಕ್ಷಿಣ ಅಮೆರಿಕದ ಆಚೇಕಡೆ ಅವರು ಬಹಳವಾಗಿ ಕಾಣುತ್ತಿರುವ “ಕ್ರೂಜೆಯ ಕುರುಹುಗಳ ಮೂಲಗಳು ಮತ್ತು ಅದರ ಅರ್ಥದ ಮೇಲೆ ಮನುಷ್ಯಶಾಸ್ತ್ರಜ್ಞರ ಮತ್ತು ಅಗೆತಶಾಸ್ತ್ರಜ್ಞರ ನಡುವೆ ಒಂದು ಉಗ್ರ ಹಾಗೂ ಚೋದಕ ವಾಗ್ವಾದವು” ಆರಂಭಿಸಿತ್ತು. ಕ್ರೂಜೆಯ ದರ್ಜೆಯನ್ನು ಒಂದು ಏಕಮಾತ್ರ “ಕ್ರೈಸ್ತ” ಕುರುಹಾಗಿ ಕಾಪಾಡಲು ಕೆಲವರು ಎಷ್ಟು ಉತ್ಸುಕರಾಗಿದ್ದರೆಂದರೆ, ಕೊಲಂಬಸ್ನ ಮಹತ್ವದ ಸಮುದ್ರಯಾನಕ್ಕೆ ಮುಂಚೆಯೇ ಅಮೆರಿಕಗಳು ಹೇಗೋ ಕ್ರೈಸ್ತಮತಕ್ಕೆ ಒಲಿಸಲ್ಪಟ್ಟಿದ್ದವೆಂಬ ವಾದವನ್ನು ಅವರು ಪ್ರತಿಪಾದಿಸಿದರು! ಪ್ರಯಾಸದಿಂದ ಸಾಧಿಸಿದ ಈ ಕಲ್ಪನೆಯನ್ನು ನಿರಾಧಾರದ್ದಾಗಿ ನಿರಾಕರಿಸಬೇಕಾಯಿತು.
ಸಕಾಲದಲ್ಲಿ, ಈ ವಿಷಯದ ಸಂಬಂಧದಲ್ಲಿ ಅಧಿಕ ಕಂಡುಹಿಡಿಯುವಿಕೆಗಳು ಅಂಥ ಎಲ್ಲಾ ವಾದಗಳನ್ನು ಕೊನೆಗೊಳಿಸಿತು. ಫರ್ಕ್ ಗಮನಿಸುವುದು: “ಸ್ಮಿಥ್ಸೋನಿಯನ್ ಸಂಘದಿಂದ 1893 ರಲ್ಲಿ ಪ್ರಕಾಶಿತವಾದ ಒಂದು ಕೃತಿಯಲ್ಲಿ ಸ್ಥಾಪಿಸಲ್ಪಟ್ಟದ್ದೇನಂದರೆ, ಮೊದಲನೆಯ ಯೂರೋಪಿಯಾನರು ಉತ್ತರ ಅಮೆರಿಕದಲ್ಲಿ ಆಗಮಿಸುವ ಬಹಳ ಮುಂಚೆಯೇ . . . ಕ್ರೂಜೆಯು ಅಲ್ಲಿ ಪೂಜ್ಯವಾಗಿ ಎಣಿಸಲ್ಪಡುತ್ತಿತ್ತು . . . ಜೀವದ ಮೂಲ ಶಕ್ತಿಗಳ ಪಾಂಥಿಕ ಆರಾಧನೆಯ ಭಾಗವಾಗಿ ಎಲ್ಲಾ ಸಮಾಜಗಳಲ್ಲಿ ಅಂಥ ಒಂದು ಕುರುಹು ತೋರಿಬಂದಿತ್ತೆಂಬ ವಾದವನ್ನು ಇದು ದೃಢೀಕರಿಸುತ್ತದೆ.”
ಯೇಸುವು ಒಂದು ಸಾಂಪ್ರದಾಯಿಕ ಕ್ರೂಜೆಯ ಮೇಲೆ ಕೊಲ್ಲಲ್ಪಡಲೇ ಇಲ್ಲ, ಬದಲಾಗಿ, ಒಂದು ಸರಳವಾದ ಕಂಬದ ಮೇಲೆ, ಅಥವಾ ಸ್ಟಾವ್ರೊಸ್ ನಲ್ಲಿ ಎಂದು ಬೈಬಲ್ ತೋರಿಸುತ್ತದೆ. ಮತ್ತಾಯ 27:40 ರಲ್ಲಿ ತೋರಿಬರುವ ಈ ಗ್ರೀಕ್ ಪದವು, ತಳಪಾಯ ಕಟ್ಟುವುದರಲ್ಲಿ ಉಪಯೋಗಿಸುವಂಥ ಒಂದು ಸರಳವಾದ ನೇರ ತೊಲೆ ಅಥವಾ ಗಣೆ ಎಂಬ ಮೂಲಾರ್ಥ ಉಳ್ಳದ್ದಾಗಿದೆ. ಆದಕಾರಣ, ಕ್ರೂಜೆಯು ಎಂದೂ ನಿಜ ಕ್ರೈಸ್ತತ್ವವನ್ನು ಪ್ರತಿನಿಧಿಸಿರುವುದಿಲ್ಲ. ನಿಜ ಕ್ರೈಸ್ತತ್ವದ ನಿಜ ಕುರುಹನ್ನು, ಅಥವಾ “ಗುರುತನ್ನು” ಯೇಸು ಕ್ರಿಸ್ತನು ಗುರುತಿಸುತ್ತಾ, ತನ್ನ ಹಿಂಬಾಲಕರಿಗೆ ಅಂದದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:35.