“ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ” ಆತನು ಮರೆಯುವುದಿಲ್ಲ
“ನೀವು ದೇವಜನರಿಗೆ ಉಪಚಾರಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” (ಇಬ್ರಿಯ 6:10) ಅಪೊಸ್ತಲ ಪೌಲನ ಈ ಮಾತುಗಳು ಪೌರ್ವಾತ್ಯ ಯೂರೋಪಿನ ಯೆಹೋವನ ಸಾಕ್ಷಿಗಳಿಗೆ ಸತ್ಯವೆಂದು ಘಣಘಣಿಸುತ್ತವೆ. ದೇವರ ನಾಮದ ಅಭಿರುಚಿಗಳಲ್ಲಿ ನಂಬಿಗಸತ್ತೆಯಿಂದ ಸೇವಿಸುತ್ತಾ, ಗತಕಾಲದ ಸೋವಿಯೆಟ್-ನಿಯಂತ್ರಣದ ಸರಕಾರಗಳಿಂದ ಹೇರಲ್ಪಟ್ಟ ನಿರ್ಬಂಧಗಳ ಕೆಳಗೆ ದೀರ್ಘಕಾಲ ಹಾಗೂ ಕಠಿಣಕರವಾಗಿ ಅವರು ದಶಕಗಳಿಂದಲೂ ದುಡಿದಿರುತ್ತಾರೆ. ಯೆಹೋವನು ಅವರ ಸತ್ಕಾರ್ಯಗಳನ್ನು ನೆನಪಿಸುತ್ತಾನೆ ಮತ್ತು ರಾಜ್ಯದ ಆಶೀರ್ವಾದಗಳನ್ನು ಅವರ ಮೇಲೆ ಸುರಿಸುತ್ತಾನೆ. ಉದಾಹರಣೆಗೆ, ಆ ಪ್ರದೇಶಗಳ ಕೇವಲ ಮೂರರ ಗತವರ್ಷದ ವರದಿಯನ್ನು ನಾವೀಗ ಗಮನಿಸೋಣ.
ಗತಕಾಲದ ಸೋವಿಯೆಟ್ ಒಕ್ಕೂಟದ ಕಾರ್ಯಕ್ಷೇತ್ರಗಳು
ಗತಕಾಲದ ಸೋವಿಯೆಟ್ ಒಕ್ಕೂಟದ ಕಾರ್ಯಕ್ಷೇತ್ರಗಳು ವರದಿಸುವುದೇನಂದರೆ 1992 ರ ಸೇವಾ ವರ್ಷದಲ್ಲಿ, ರಾಜ್ಯ ಪ್ರಚಾರಕರ ಉಚ್ಚ ಸಂಖ್ಯೆಯು 33 ಪ್ರತಿಶತದಷ್ಟು ಅಭಿವೃದ್ಧಿಗೊಂಡಿದೆ—49,171 ರಿಂದ 65,486! ಆದರೆ ಎಲ್ಲಾ ಇಷ್ಟೇ ಅಲ್ಲ, ಆ ಪ್ರಚಾರಕರು ಬಹಳ ಕ್ರಿಯಾಶೀಲರಾಗಿದ್ದುದರಿಂದ, ಪತ್ರಿಕೆಗಳ ಸಹಿತವಾಗಿ ಬೈಬಲ್ ಸಾಹಿತ್ಯಗಳ ನೀಡುವಿಕೆಗಳಲ್ಲಿ ಉತ್ತಮವಾದ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಅವರು 12,76,108 ಪ್ರತಿಗಳನ್ನು ನೀಡುತ್ತಾ, ಬ್ರೊಷರ್ಗಳ ಮತ್ತು ಪುಸ್ತಿಕೆಗಳ ಸದುಪಯೋಗವನ್ನು ಮಾಡಿದ್ದಾರೆ. ಅದು ಕಳೆದ ವರ್ಷದ 4,77,235 ಕ್ಕಿಂತ ಎರಡು ಪಟ್ಟುಗಳಿಗಿಂತಲೂ ಅಧಿಕವಾಗಿರುತ್ತದೆ! ಇವೆಲ್ಲಾ ನೀಡುವಿಕೆಗಳಿಗೆ ಪ್ರತಿವರ್ತನೆಯೇನು? ಮನೆ ಬೈಬಲ್ ಅಧ್ಯಯನಗಳ ಸಂಖ್ಯೆಯಲ್ಲಿ ಇಮ್ಮಡಿಯಾಗುವಿಕೆಯೇ ಆಗಿದೆ. ಈಗ 67,555 ಬೈಬಲ್ ಅಧ್ಯಯನಗಳು ನಡಿಸಲ್ಪಡುತ್ತವೆ.
ಸಹಾಯಕ ಪಯನೀಯರ್ ಸೇವೆಯಲ್ಲಿ ಭಾಗವಹಿಸುವಿಕೆಯು ಕೂಡ 94 ಪ್ರತಿಶತ ಏರಿರುತ್ತದೆ. ಇದು ಹೊಸತಾಗಿ ದೀಕ್ಷಾಸ್ನಾನಿತ ಶಿಷ್ಯರ ಎದ್ದುಕಾಣುವ 18,087 ಅಂಕೆಗೆ ನೆರವಾಗಿದೆ ಎಂದು ಸ್ಫುಟವಾಗುತ್ತದೆ, ಕಳೆದ ವರ್ಷದ 6,570 ಅಂಕೆಗೆ ಹೋಲಿಸುವಾಗ ಇದು ಬೆರಗುಗೊಳಿಸುವ 175-ಪ್ರತಿಶತ ಅಭಿವೃದ್ಧಿಯಾಗಿದೆ!
ಈ ಹೊಸ ಸ್ನಾನಿತರಲ್ಲಿ ಕೆಲವರು ಸುವಾರ್ತೆಯಲ್ಲಿ ಮೊದಲಾಗಿ ಆಸಕ್ತಿ ಪಡೆದದ್ದು ಹೇಗೆ? ಅಧ್ಯಯನ ನಡಿಸುವ ಸಾಕ್ಷಿಯ ಆಳವಾದ ಚಿಂತನೆಯು ಕೆಲವೊಮ್ಮೆ ಕಾರಣವಾಗಿತ್ತು. ಮೊಲ್ಡೊವದ ಅಧ್ಯಕ್ಷ ಮೇಲ್ವಿಚಾರಕನೊಬ್ಬನು ವರ್ಣಿಸುವುದು:
“ನನ್ನ ಹೆಂಡತಿ ಮತ್ತು ನಾನು ಬೈಬಲ್ ಸತ್ಯದಲ್ಲಿ ಈ ಮುಂಚೆ ಆಸಕ್ತಿಯನ್ನು ತೋರಿಸಿದ್ದ ಸ್ತ್ರೀಯನ್ನು ಭೇಟಿಯಾದೆವು. ಅವಳೊಂದಿಗೆ ಬೈಬಲ್ ಅಧ್ಯಯನವೊಂದು ಆರಂಭಿಸಲ್ಪಟ್ಟಿತು. ಆದಾಗ್ಯೂ, ಅವಳ ಗಂಡನು ಕಿಂಚಿತ್ತೂ ಆಸಕ್ತಿಯನ್ನು ತೋರಿಸಲೇ ಇಲ್ಲ. ಒಂದು ದಿನ ನಮ್ಮ ಅಧ್ಯಯನವನ್ನು ಮುಂದರಿಸಲು ಅವಳನ್ನು ಸಂದರ್ಶಿಸುವ ಉದ್ದೇಶದಿಂದ ನಾವು ಹೋಗುತ್ತಿರುವಾಗ, ಹವಾಮಾನವು ಅತೀವ ತಣ್ಣಗೆ ಮತ್ತು ಹಿಮಭರಿತವೂ ಆಗಿತ್ತು. ರಸ್ತೆಗಳಲ್ಲಿ ಯಾರೂ ಇರಲಿಲ್ಲ, ಆದರೆ ನಮ್ಮ ನಿಗದಿತ ಸಮಯಕ್ಕೆ ಸರಿಯಾಗಿ ನಾವು ಅವಳ ಮನೆಯಲ್ಲಿದ್ದೆವು. ಅವಳು ತನ್ನ ಗಂಡನಿಗೆ ಹೇಳಿದ್ದು: ‘ಈ ಜನರು ನಮ್ಮ ಕುರಿತು ಎಷ್ಟೊಂದು ಚಿಂತಿಸುತ್ತಾರೆಂದು ನೀವು ನೋಡುತ್ತಿರಲ್ಲಾ? ಹಿಮವಿದ್ದರೂ ಕೂಡ ಅವರು ಕಾಲನಿಷ್ಠೆಯುಳ್ಳವರಾಗಿದ್ದಾರೆ.’ ಈ ಪ್ರಸಂಗವು ಅವಳ ಗಂಡನನ್ನು ಯೋಚಿಸುವಂತೆ ಮಾಡಿತು. ಅವನು ತನ್ನ ಮನಸ್ಸನ್ನು ಬದಲಾಯಿಸಿ, ಅಭ್ಯಾಸದೊಂದಿಗೆ ಜತೆಗೂಡಿದನು, ಮತ್ತು ಈಗ ಅವನು ಮತ್ತು ಅವನ ಹೆಂಡತಿಯು ದೀಕ್ಷಾಸ್ನಾನ ಪಡೆದ ಸಾಕ್ಷಿಗಳಾಗಿರುತ್ತಾರೆ.”
ಬೇರೆ ಸಮಯಗಳಲ್ಲಿ, ಸಾಕ್ಷಿಯ ವಿನಯದ ನಡೆನುಡಿಯು ಸುವಾರ್ತೆಯಲ್ಲಿ ಅಭಿರುಚಿಯನ್ನು ಕೆರಳಿಸಬಹುದು. ಅದೇ ಮೊಲ್ಡೊವದ ಹಿರಿಯನೊಬ್ಬನಿಗೆ ಈ ಅನುಭವ ದೊರಕಿತು:
“ನನ್ನ ಸಾರುವ ಕಾರ್ಯಕ್ಷೇತ್ರದಲ್ಲಿ ನಾನು ಭೇಟಿ ನೀಡಿದ ಒಬ್ಬ ಮನುಷ್ಯನಿಗೆ ಯೆಹೋವನ ಸಾಕ್ಷಿಗಳಲ್ಲಿ ಅಭಿರುಚಿಯಿರಲಿಲ್ಲ. ಅವನ ತಂದೆ ಮತ್ತು ಅಜ್ಜನಂತೆ, ತಾನೂ ಈಸರ್ನ್ಟ್ ಆರ್ತೊಡಾಕ್ಸ್ ಚರ್ಚಿನ ಸದಸ್ಯನಾಗಿದ್ದೇನೆ ಎಂದವನು ಹೇಳಿದನು. ಆದುದರಿಂದ ಕಟ್ಟಡವನ್ನು ಬಿಟ್ಟುಹೋಗುವಂತೆ ಅವನು ನನ್ನನ್ನು ಕೇಳಿಕೊಂಡನು. ಆದಾಗ್ಯೂ. ನಾನು ಬಿಟ್ಟುಹೋಗುವಾಗ, ನನ್ನ ಭೇಟಿಯ ಕಾರಣವೇನು ಎಂದು ಅವನಿಗೆ ಹೇಳಲು ಒಂದು ಅವಕಾಶವನ್ನು ನನಗೆ ಕೊಟ್ಟನು. ನಾನು ಮತ್ತಾಯ 28:19ಕ್ಕೆ ತೋರಿಸಿದೆ, ಅಲ್ಲಿ ಹೇಳುವುದು: ‘ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿರಿ.’ ಅನಂತರ ನಾನು ನಮ್ಮ ಕೂಟದ ವಿಳಾಸವನ್ನು ಅವನಿಗೆ ಕೊಟ್ಟು, ಹೊರಟುಬಂದೆನು. ನನ್ನ ಆಶ್ಚರ್ಯಕ್ಕೆ, ಒಂದು ವಾರದ ಬಳಿಕ ಈ ಮನುಷ್ಯನು ನಮ್ಮ ಕೂಟಗಳಿಗೆ ಬಂದನು! ಕಾರ್ಯಕ್ರಮ ಮುಗಿಯುವ ತನಕ ಅವನು ನಿಂತನು. ನನ್ನೊಂದಿಗೆ ಅಷ್ಟೊಂದು ಸ್ನೇಹತನವಿಲ್ಲದ ರೀತಿಯಲ್ಲಿ ವರ್ತಿಸಿದ ಕಾರಣ ಇಡೀ ವಾರ ಅವನಿಗೆ ಮನದಳುಕು ಉಂಟಾಗಿತ್ತು ಎಂದವನು ವಿವರಿಸಿದನು. ಕೂಡಲೇ ಒಂದು ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಿತು, ಮತ್ತು ಈಗ ಅವನು ನಮ್ಮ ಸಹೋದರರಲ್ಲಿ ಒಬ್ಬನಾಗಿದ್ದಾನೆ.”
ಸೇವಾ ವರ್ಷದ ಇನ್ನೊಂದು ಎದ್ದುತೋರುವ ವೈಶಿಷ್ಟ್ಯವೆಂದರೆ, ಆ ಪ್ರದೇಶದಲ್ಲಿರುವ ಸಹೋದರರ ಆವಶ್ಯಕತೆಗಳಿಗೆ ಅತಿ ವಿಶೇಷವಾದ ಪ್ರತಿವರ್ತನೆಯೇ. ಆ 1991 ⁄ 1992ರ ಚಳಿಗಾಲದ ಸಮಯದಲ್ಲಿ, ಆವಶ್ಯಕತೆಯಿದ್ದ ಪುರುಷ, ಸ್ತ್ರೀ ಮತ್ತು ಮಕ್ಕಳಿಗೆ 400 ಟನ್ನುಗಳಷ್ಟು ಆಹಾರಸಾಮಗ್ರಿಗಳು, ಮತ್ತು ಬಹುಮೊತ್ತದ ಉಡುಪುಗಳು ಕಳುಹಿಸಲ್ಪಟ್ಟವು. ಕಾರ್ಯತಃ, ಹಿಂದಿನ ಸೋವಿಯೆಟ್ ಒಕ್ಕೂಟದ ಪ್ರದೇಶದ ಭಾಗಗಳಲ್ಲೆಲ್ಲಾ, ಜಪಾನಿಗೆ ಸಮೀಪದ ಸೈಬಿರೀಯದ ಇರ್ಕುಟ್ಸ್ಕ್ ಮತ್ತು ಖಬರೊವಿಸ್ಕ್ನಷ್ಟು ದೂರದಲ್ಲೂ ಕೂಡ, ಈ ಸರಬರಾಯಿಗಳನ್ನು ವಿತರಿಸಲಾಯಿತು. ಅವನ ನಾಮಕ್ಕಾಗಿ ನಮ್ಮ ಸಹೋದರರು ತೋರಿಸಿದ ಪ್ರೀತಿಯನ್ನು ಯೆಹೋವನು ಮರೆತಿಲ್ಲ ಎಂಬುದರ ಮನತಟ್ಟುವ ಒಂದು ನಿಜ ಸೂಚಕವೇ ಸರಿ! ಯೆಹೋವನ ಆತ್ಮದಿಂದ ಪ್ರಚೋದಿಸಲ್ಪಟ್ಟ ಸಹೋದರರ ಪ್ರೀತಿಯ ಈ ಪುರಾವೆಯು, ಅವರ ಲೋಕವ್ಯಾಪಕ ಕುಟುಂಬದೊಂದಿಗೆ ಅವರನ್ನು ಏಕೀಕರಿಸುವ ಫಲಿತಾಂಶವನ್ನೂ ಕೂಡ ತಂದಿತು. ಉದಾಹರಣೆಗೆ, ಉಕ್ರೈನಿನ ಒಬ್ಬ ಸಹೋದರಿಯು ಬ್ರಾಂಚ್ ಆಫೀಸಿಗೆ ಬರೆದದ್ದು:
“ನೀವು ನೀಡಿದ ನೆರವು ನಮ್ಮ ಭಾವನೆಗಳನ್ನು ಆಳವಾಗಿ ತಟ್ಟಿತು. ನಾವು ಆನಂದಬಾಷ್ಪಗಳನ್ನು ಸುರಿಸುವಂತೆ ಮತ್ತು ನಮ್ಮನ್ನು ಮರೆಯದಿರುವುದಕ್ಕಾಗಿ ಯೆಹೋವ ದೇವರಿಗೆ ಉಪಕಾರ ಹೇಳಲು ನಮ್ಮನ್ನು ನಡಿಸಿತು. ನಿಜ, ಈಗ ಸದ್ಯಕ್ಕೆ, ನಮಗೆ ಪ್ರಾಪಂಚಿಕ ಕಷ್ಟದೆಸೆಗಳಿವೆ, ಆದರೆ ಪಾಶ್ಚಾತ್ಯದ ನಮ್ಮ ಸಹೋದರರಿಂದ ಬಂದ ಸಹಾಯಕ್ಕಾಗಿ ಉಪಕಾರಗಳು, ಪ್ರಾಪಂಚಿಕ ರೀತಿಯಲ್ಲಿ ನಾವು ಪುನಃ ಎದ್ದು ನಿಲ್ಲಲು ಶಕ್ತರಾದೆವು. ಈ ನಿಮ್ಮ ಸಹಾಯದ ಕಾರಣ, ಯೆಹೋವನ ಸೇವೆಯಲ್ಲಿ ನಮ್ಮ ಪರಿವಾರವು ಹೆಚ್ಚು ಸಮಯ ವ್ಯಯಿಸುವಂತೆ ಸಾಧ್ಯವಾಗುವುದು. ಯೆಹೋವನ ಚಿತ್ತವಿರುವುದಾದರೆ, ನನ್ನ ಮಗಳು ಮತ್ತು ನಾನು ಬೇಸಗೆಯ ತಿಂಗಳುಗಳಲ್ಲಿ ಸಹಾಯಕ ಪಯನೀಯರರಾಗುತ್ತೇವೆ.”
ಇದಕ್ಕೆ ಕೂಡಿಸಿ, ಪರಿಹಾರದ ಪ್ರಯತ್ನಗಳು ಹೊರಗಿನವರಿಗೆ ಒಂದು ಸಾಕ್ಷಿಯನ್ನು ಒದಗಿಸಿದವು, ಯಾಕಂದರೆ ಸಾಕ್ಷಿಗಳು ತಮ್ಮ ಕಾರ್ಯಗಳಿಂದ ಪ್ರೀತಿಯನ್ನು ಪ್ರದರ್ಶಿಸುತ್ತಾರೆಂದು ವೀಕ್ಷಕರು ಕಾಣಶಕ್ತರಾದರು. ಬೇರೊಂದು ಸಭೆಯ ಕುಟುಂಬವೊಂದು ಬರೆದದ್ದು: “ಆಹಾರಸಾಮಗ್ರಿ ಮತ್ತು ಉಡುಪುಗಳ ತೆರದಲ್ಲಿ ನಮಗೆ ಪ್ರಾಪಂಚಿಕ ಸಹಾಯ ದೊರಕಿತು. ಅದು ಎಷ್ಟೊಂದು ಹೇರಳವಾಗಿತ್ತು! ನಾವು ಕೂಡ ಇತರರಿಗೆ ಒಳಿತನ್ನು ಮಾಡತಕ್ಕದ್ದು ಎಂಬ ಪಾಠವನ್ನು ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹನೆ ನಮಗೆ ಕಲಿಸಿತು. ಈ ಪ್ರೀತಿಯ ಕೃತ್ಯವು ಅವಿಶ್ವಾಸಿಗಳಿಂದ, ಹಾಗೂ ಆಸಕ್ತಿಯ ವ್ಯಕ್ತಿಗಳಿಂದ ಮತ್ತು ಅವರ ಕುಟುಂಬಗಳಿಂದ ಗಮನಿಸಲ್ಪಡದೇ ಹೋಗಲಿಲ್ಲ; ನಿಜ ಭ್ರಾತೃತ್ವದ ಕುರಿತಾದ ಒಂದು ಮಹಾ ಸಾಕ್ಷಿ ಅದಾಗಿತ್ತು.”
“ಬೆಳಕು ವಾಹಕರು” ಎಂಬ ಮುಖ್ಯ ವಿಷಯದ ಮೇಲೆ ಈ ಕಳೆದ ಜೂನ್ ಮತ್ತು ಜುಲೈಯಲ್ಲಿ ಜರುಗಿದ ಐದು ಜಿಲ್ಲಾ ಅಧಿವೇಶನಗಳು ಮತ್ತು ಒಂದು ಅಂತಾರಾಷ್ಟ್ರೀಯ ಅಧಿವೇಶನವು, ಅವನ ಸಾಕ್ಷಿಗಳ ಕಠಿಣ ಕೆಲಸದ ಮತ್ತು ಅವನ ಹೆಸರನ್ನು ಪ್ರಖ್ಯಾತಗೊಳಿಸುವುದರಲ್ಲಿ ಅವರು ತೋರಿಸಿದ ಪ್ರೀತಿಯ ಮೇಲೆ ಯೆಹೋವನ ಆಶೀರ್ವಾದದ ಇನ್ನೊಂದು ಪುರಾವೆಯಾಗಿದೆ. ಈ ಅಧಿವೇಶನಗಳಿಗೆ 91,673 ವ್ಯಕ್ತಿಗಳು ಹಾಜರಾದರು ಮತ್ತು 8,562 ಮಂದಿ ದೀಕ್ಷಾಸ್ನಾನ ಪಡೆದರು. ಅತಿ ದೊಡ್ಡ ಹಾಜರಿಯು ಅಂತಾರಾಷ್ಟ್ರೀಯ ಅಧಿವೇಶನದ ಸ್ಥಳವಾದ ಸೆಂಟ್ ಪೀಟರ್ಸ್ಬರ್ಗ್ನಲ್ಲಿ, 46,214 ಮಂದಿ—ಲೋಕದ ಸುತ್ತಲಿನ 30 ದೇಶಗಳಿಂದ ಬಂದ ಪ್ರತಿನಿಧಿಗಳ ಸಹಿತ—ಕಿರೊವ್ ಕ್ರೀಡಾಂಗಣದಲ್ಲಿ ನೆರೆದಿದ್ದರು.
ಸೈಬಿರೀಯದಲ್ಲಿ 60 ವರ್ಷ ಪ್ರಾಯದ ಒಬ್ಬ ಮನುಷ್ಯನು ಇರ್ಕುಟ್ಸ್ಕ್ನ ಅಧಿವೇಶನದ ಬಯಲಿಗೆ ಕೇವಲ ನೋಡಲು ಬಂದನು. ಅವನಂದದ್ದು: “ಹಾಜರಾದವರೆಲ್ಲರೂ ಚೆನ್ನಾಗಿ ಉಡುಪು ಧರಿಸಿದ್ದರು, ನಗುಮೊಗದವರು, ಮತ್ತು ಒಬ್ಬರು ಇನ್ನೊಬ್ಬರೊಂದಿಗೆ ದಯಾಭರಿತರಾಗಿದ್ದರು. ಈ ಜನರು ಒಂದು ಐಕ್ಯ ಕುಟುಂಬದೋಪಾದಿ ಇದ್ದಾರೆ. ಅವರು ಕೇವಲ ಕ್ರೀಡಾಂಗಣದಲ್ಲಿ ಮಿತ್ರರಾಗಿರುವುದು ಮಾತ್ರವಲ್ಲ, ಅವರ ಜೀವಿತಗಳಲ್ಲೂ ಕೂಡ ಆಗಿರುತ್ತಾರೆಂದು ಒಬ್ಬನು ಅರಿತುಕೊಳ್ಳಬಹುದು. ನಾನು ಅತ್ಯುತ್ಕೃಷ್ಟ ಬೈಬಲ್ ಸಾಹಿತ್ಯಗಳನ್ನು ಪಡೆದೆನು ಮತ್ತು ಇದು ಯಾವ ತೆರದ ಸಂಸ್ಥಾಪನೆಯೆಂದು ಇನ್ನಷ್ಟು ಉತ್ತಮವಾಗಿ ಕಲಿತೆನು. ಯೆಹೋವನ ಸಾಕ್ಷಿಗಳೊಡನೆ ಸಂಪರ್ಕವನ್ನಿಟ್ಟುಕೊಳ್ಳಲು ಮತ್ತು ಅವರೊಂದಿಗೆ ಬೈಬಲನ್ನು ಅಭ್ಯಾಸಿಸಲು ನಾನು ಬಯಸುತ್ತೇನೆ.”
ಎಲ್ಲಿ 5,051 ಹಾಜರಾದರೋ, ಆ ಇರ್ಕುಟ್ಸ್ಕ್ನ ಅಧಿವೇಶನದಲ್ಲಿ ಸೈಬಿರೀಯದ ಯಾಕುಟ್ ರಿಪಬ್ಲಿಕ್ನ ಒಬ್ಬ ಆಸಕ್ತ ಹೆಂಗಸು, ಹೇಳಿದ್ದು: “ನಾನು ಜನರೆಡೆಗೆ ನೋಡುತ್ತೇನೆ, ಮತ್ತು ಆನಂದದ ಕಣ್ಣೀರು ಸುರಿಸಲು ಬಯಸುತ್ತೇನೆ. ಅಂತಹ ಜನರನ್ನು ತಿಳಿದು ಕೊಳ್ಳಲು ನನಗೆ ಅವನು ಸಹಾಯ ಮಾಡಿದ್ದಕ್ಕಾಗಿ, ನಾನು ಯೆಹೋವನಿಗೆ ಅತಿಯಾಗಿ ಆಭಾರಿಯಾಗಿದ್ದೇನೆ. ಇಲ್ಲಿ ಈ ಅಧಿವೇಶನದಲ್ಲಿ, ನಾನು ಸಾಹಿತ್ಯಗಳನ್ನು ಪಡೆದೆನು, ಮತ್ತು ಅದರ ಕುರಿತು ನಾನು ಇತರರಿಗೆ ಹೇಳಲು ಬಯಸುತ್ತೇನೆ. ಯೆಹೋವನ ಒಬ್ಬ ಆರಾಧಕಳಾಗಲು ನಾನು ಅತೀವವಾಗಿ ಆಶಿಸುತ್ತೇನೆ.”
ಎಲ್ಲಿ ಅಧಿವೇಶನಕ್ಕೆ 6,605 ಮಂದಿ ಹಾಜರಾದರೋ, ಆ ಆಲ್ಮ ಆಟಾ, ಕಸಕಸ್ತಾನ್ದ ಸೆಂಟ್ರಲ್ ಕ್ರೀಡಾಂಗಣದ ನಿರ್ದೇಶಕರು ಹೀಗೆ ಹೇಳಿದರು: “ನಿಮ್ಮ ಮನೋಭಾವದಿಂದ ನಾನು ರೋಮಾಂಚನಗೊಂಡೆನು. ನೀವೆಲ್ಲರೂ, ಎಳೆಯರು ಮತ್ತು ವೃದ್ಧರು, ಗೌರವಾನಿತ್ವ ವ್ಯಕ್ತಿಗಳು ಎಂದು ನನಗೆ ಈಗ ಮನವರಿಕೆಯಾಗಿದೆ. ನಾನು ದೇವರನ್ನು ನಂಬುತ್ತೇನೆಂದು ನಾನು ಹೇಳಲಾರೆ, ಆದರೆ ನಿಮ್ಮ ಸಹೋದರತ್ವದಿಂದ, ಆತ್ಮಿಕ ಮತ್ತು ಐಹಿಕ ಮೌಲ್ಯಗಳ ಕಡೆಗಿನ ನಿಮ್ಮ ಮನೋಭಾವದಲ್ಲಿ ತೋರಿಸಲ್ಪಟ್ಟ ಪವಿತ್ರ ಸಂಗತಿಗಳಲ್ಲಿ ನಾನು ಖಂಡಿತ ನಂಬುತ್ತೇನೆ.”
ಆಲ್ಮ ಆಟಾ ಅಧಿವೇಶನದಲ್ಲಿನ ಒಬ್ಬ ಪೊಲೀಸ್ ಆಫೀಸರ್ ಅವಲೋಕಿಸಿದ್ದು: “ಪ್ರತಿಯೊಂದು ಸಲ ಅಧಿವೇಶನದಲ್ಲಿ ನಾನು ನಿಮ್ಮ ಜನರೊಂದಿಗೆ ಎರಡು ಬಾರಿ ಸಂಪರ್ಕಕ್ಕೆ ಬಂದಿರುತ್ತೇನೆ. ಯೆಹೋವನ ಸಾಕ್ಷಿಗಳೊಂದಿಗೆ ಕಾರ್ಯ ನಿರ್ವಹಿಸುವುದು ಅತಿ ಆಹ್ಲಾದತೆಯದ್ದಾಗಿರುತ್ತದೆ.”
ರೊಮೇನಿಯ
ಅವನ ಹೆಸರಿಗಾಗಿ ರೊಮೇನಿಯದ ಸಹೋದರರು ತೋರಿಸಿದ ಪ್ರೀತಿಯನ್ನು ಸಹಾ ಯೆಹೋವನು ಮರೆಯುತ್ತಿಲ್ಲ. ಈ ಗತ ಸೇವಾ ವರ್ಷವು ಸಾಕ್ಷಿಗಳಿಗೆ ಅನೇಕ ಆನಂದದ ಸಂಗತಿಗಳನ್ನು ತಂದಿತು. ಮೊದಲನೆಯದಾಗಿ, ಬುಕಾರೆಸ್ಟ್ನಲ್ಲಿ ಪುನೊಮ್ಮೆ ಬ್ರಾಂಚ್ ಆಫೀಸ್ ಒಂದು ಸ್ಥಾಪಿಸಲ್ಪಟ್ಟಿತು. ಈ ಹಿಂದೆ ಕಾನೂನುಬದ್ಧವಾದ ಕಾರ್ಯವು 1949 ರಲ್ಲಿ ಅಂತ್ಯಗೊಂಡಿತ್ತು. ಆಫೀಸಿನಲ್ಲಿ ಸುಮಾರು 20 ಸಹೋದರ, ಸಹೋದರಿಯರು ಹೊಸ ಸವಲತ್ತುಗಳೊಂದಿಗೆ ಕೆಲಸಮಾಡುತ್ತಿದ್ದಾರೆ. ಬ್ರಾಂಚ್ ಆಫೀಸ್ 24,752 ಪ್ರಚಾರಕರಿಗೆ—ಕಳೆದ ವರುಷದ ಸರಾಸರಿಗಿಂತ 21-ಪ್ರತಿಶತವನ್ನು ಪ್ರತಿನಿಧಿಸುವ ಅತ್ಯುಚ್ಚಾಂಕವಾಗಿದೆ—ಸೇವೆ ಸಲ್ಲಿಸುತ್ತದೆ.
ಗುಪ್ತ ಸಾರುವಿಕೆಯ ವರ್ಷಗಳ ನಂತರ, ಬಹಿರಂಗ ಮನೆಯಿಂದ ಮನೆಯ ಸಾಕ್ಷಿ ಕಾರ್ಯಕ್ಕೆ ಪ್ರಚಾರಕರು ಉತ್ತಮವಾಗಿ ಹೊಂದಿಸಿಕೊಳ್ಳುತ್ತಿದ್ದಾರೆ. ಪ್ರಯಾಣಿಸುತ್ತಿರುವಾಗಲೂ ಕೂಡ ಅವರು ಇತರರಿಗೆ ಸಾರುವ ಯಾವುದೇ ಅವಕಾಶದ ಸದುಪಯೋಗವನ್ನು ಕೆಲವು ಸಾಕ್ಷಿಗಳು ಹೇಗೆ ಮಾಡುತ್ತಿದ್ದಾರೆ ಎಂದು ಮುರೆಸ್ ಕೌಂಟಿಯ ಒಂದು ಅನುಭವವು ತೋರಿಸುತ್ತದೆ. ಬ್ರಾಂಚ್ ಆಫೀಸ್ ಬರೆಯುವುದು:
“ಪ್ರಚಾರಕನೊಬ್ಬನು ರೈಲೆಯ್ವ ಒಂದು ಕಂಪಾರ್ಟ್ಮೆಂಟಿನಿಂದ ಇನ್ನೊಂದಕ್ಕೆ ಸಾರಲು ನಿರ್ಧರಿಸಿದನು. ಸಾಮಾನ್ಯವಾಗಿ ಜನರ ಪ್ರತಿಕ್ರಿಯೆಯು ಮೆಚ್ಚುಗೆಯದ್ದಾಗಿತ್ತು, ಆದರೆ ಕೊನೆಯ ಕಂಪಾರ್ಟ್ಮೆಂಟಿನಲ್ಲಿ ತೊಂದರೆಗಳು ತಲೆದೋರಿದವು. ನಮ್ಮ ಪತ್ರಿಕೆಗಳ ಒಂದು ಪ್ರತಿಯನ್ನು ಕೂಡ ಪ್ರಯಾಣಿಕರಲ್ಲಿ ಯಾರೊಬ್ಬನೂ ಸ್ವೀಕರಿಸಲು ಇಚ್ಛಿಸಲಿಲ್ಲ. ಕೊನೆಗೆ, ಒಬ್ಬ ಮನುಷ್ಯನು ಬಹಳಷ್ಟು ಕ್ಷೋಭೆಗೊಂಡವನಾಗಿ, ಎದ್ದುನಿಂತು ಅರಚಲಾರಂಭಿಸಿದನು: ‘ಕಿಟಕಿಯಿಂದ ನಿನ್ನ ಎಲ್ಲಾ ಪತ್ರಿಕೆಗಳನ್ನು ನಾನು ಹೊರಗೆ ಎಸೆಯುವೆ! ನಿನ್ನ ಮತದಿಂದ ನಮ್ಮನ್ನು ಅಷ್ಟೊಂದು ನೀನು ಯಾಕೆ ಸತಾಯಿಸುತ್ತಿ?’ ಅವನು ಪತ್ರಿಕೆಗಳನ್ನು ಹೊರೆಗೆಸೆದರೆ, ಅವನ ಕೃತ್ಯದಿಂದ ಕೆಲವರಾದರೂ—ಪತ್ರಿಕೆಗಳನ್ನು ಎತ್ತಿಕೊಳ್ಳುವವರು—ಪ್ರಯೋಜನ ಪಡೆಯುವರು ಎಂದು ಪ್ರಚಾರಕನು ದಯಾಪೂರಿತನಾಗಿ ಉತ್ತರಿಸಿದನು. ಪ್ರಚಾರಕನ ಪ್ರಶಾಂತತೆಯನ್ನು ಗಮನಿಸಿ, ಆ ಮನುಷ್ಯನು ಎಷ್ಟೊಂದು ಪ್ರಭಾವಿತನಾದನೆಂದರೆ, ಅವನು ಪತ್ರಿಕೆಗಳನ್ನು ತೆಗೆದುಕೊಂಡು, ಕಂಪಾರ್ಟ್ಮೆಂಟಿನಲ್ಲಿ ತಾನಾಗಿಯೆ ಇತರ ಪ್ರಯಾಣಿಕರಿಗೆ ಅವುಗಳನ್ನು ಹಂಚಲು ಆರಂಭಿಸಿದನು. ಆಶ್ಚರ್ಯಕರವಾಗಿಯೇ, ಅವರೆಲ್ಲರೂ ಒಂದು ಪತ್ರಿಕೆಯನ್ನು ತಕ್ಕೊಂಡರು. ಅವುಗಳನ್ನು ವಿತರಿಸಿಯಾದ ನಂತರ, ಆ ಮನುಷ್ಯನಿಗೆ ಒಂದು ಪ್ರತಿಯೂ ಉಳಿದಿರಲಿಲ್ಲ. ಆದಕಾರಣ, ಪ್ರಚಾರಕನು ಅವನಿಗೆ ವಿಚಾರಿಸಿದ್ದು: ‘ಸರ್, ನಿಮಗಾಗಿ ಯಾವುದೇ ಪ್ರತಿ ಬೇಡವೇ?’ ಆಗ ಆ ಮನುಷ್ಯನು ಎರಡು ಪ್ರತಿಗಳಿದ್ದ ಒಬ್ಬ ಪ್ರಯಾಣಿಕನಿಂದ ಒಂದು ಪತ್ರಿಕೆಯನ್ನು ಎಳೆದುತಕ್ಕೊಂಡು, ಅಂದದ್ದು: ‘ಈಗ ಒಂದು ಪ್ರತಿ ನನಗೆ ಕೂಡ ತಲುಪಿದೆ!’”
ಯೆಹೋವನ ಸಾಕ್ಷಿಗಳ ಸಾರುವ ಕಾರ್ಯವು ಅನೇಕ ದೇಶಗಳಲ್ಲಿ ಕೆಲವೊಮ್ಮೆ ಕ್ರೈಸ್ತಪ್ರಪಂಚದ ವೈದಿಕರ ವಿರೋಧವನ್ನು ಪ್ರಚೋದಿಸಿದೆ. ರೊಮೇನಿಯದಲ್ಲಿ, ಆರ್ತೊಡಾಕ್ಸ್ ಚರ್ಚಿನ ಪಾದ್ರಿಗಳು ಕೆಲವು ಸಾರಿ ಸಾಕ್ಷಿಗಳೊಂದಿಗೆ ಕೋಪೋದ್ರಿಕ್ತರಾಗುತ್ತಾರೆ. ಆದರೆ, ಆತನ ನಾಮಕ್ಕಾಗಿ ಅವರು ತೋರಿಸಿದ ಪ್ರೀತಿಗಾಗಿ ತನ್ನ ಜನರನ್ನು ಯೆಹೋವನು ಆಶೀರ್ವದಿಸುವುದನ್ನು ಇದು ತಡೆಯಲಾರದು. ಒಬ್ಬ ಸರ್ಕಿಟ್ ಮೇಲ್ವಿಚಾರಕನು ಬರೆಯುವುದು:
“ಸ್ಥಳೀಕ ಸಭೆಯೊಂದಿಗೆ, ಗ್ರಾಮ್ಯಪ್ರದೇಶಗಳಲ್ಲಿ ಸೇವೆ ಮಾಡಲು ನಾವು ಹೋದೆವು. ಸುಮಾರು ನೂರು ಸಹೋದರರು ಇದ್ದರು. ನಾವು ಒಂದು ಬಸ್ಸನ್ನು ಬಾಡಿಗೆಗೆ ಗೊತ್ತುಮಾಡಿದೆವು, ಅದು ನಮ್ಮನ್ನು ಸುಮಾರು 50 ಕಿಲೊಮೀಟರುಗಳಷ್ಟು ದೂರವಿರುವ, ಗ್ರಾಮಾಂತರ ಪ್ರದೇಶದ ಒಂದು ಸಣ್ಣ ಪಟ್ಟಣಕ್ಕೆ ಕೊಂಡೊಯ್ಯಿತು. ನಾವು ಸಾಂಸ್ಕೃತಿಕ ಗೃಹದಲ್ಲಿ ಏರ್ಪಡಿಸಿದ ಒಂದು ಸಾರ್ವಜನಿಕ ಭಾಷಣಕ್ಕೆ ಅನೇಕರನ್ನು ಆಮಂತ್ರಿಸಿದೆವು. ಕೂಟವು ಆರಂಭಗೊಂಡ ಕೂಡಲೇ, ಆರ್ತೊಡಾಕ್ಸ್ ಪಾದ್ರಿಯು ನಮ್ಮ ಕೂಟವನ್ನು ಭಂಗಗೊಳಿಸಲು ಆಗಮಿಸಿದನು. ಪೊಲೀಸ್ ಅಧಿಕಾರಿಗಳು ಪಾದ್ರಿಯನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದಾಗ್ಯೂ, ಅವನು ಶಾಂತನಾಗಲು ನಿರಾಕರಿಸಿದನು. ಮುಖ್ಯ ಪ್ರವೇಶದ್ವಾರದ ಗಾಜನ್ನು ಅವನು ಒಡೆದಾಗ, ಕೂಟವನ್ನು ನಿಲ್ಲಿಸುವುದರಲ್ಲಿ ಅವನು ಯಶಸ್ವಿಯಾದನು. ಆದಾಗ್ಯೂ, ಪಾದ್ರಿಯ ವರ್ತನೆಯನ್ನು ಅನೇಕ ಸ್ಥಳೀಕ ನಿವಾಸಿಗಳು ಎಷ್ಟಕ್ಕೂ ಒಪ್ಪಲೇ ಇಲ್ಲ. ಆಗ ಹಾಜರಿಯಲ್ಲಿದ್ದ ಎಲ್ಲರಿಗೂ ಅನಂತರ ಸಮಗ್ರವಾದ ಸಾಕ್ಷಿಯನ್ನು ಕೊಡಲು ಸಾಧ್ಯವಾಯಿತು, ಮತ್ತು ದೊಡ್ಡ ಪ್ರಮಾಣದ ಸಾಹಿತ್ಯವನ್ನು ವಿತರಿಸಲಾಯಿತು.”
ದೌರ್ಭಾಗ್ಯವಶಾತ್, ದೇಶದ ಕೆಲವು ಭಾಗಗಳಲ್ಲಿ ಕೇವಲ ಕೊಂಚ ಸಾಕ್ಷಿಗಳು ಇದ್ದಾರೆ. ಓಲ್ಟ್ ಕೌಂಟಿಗೆ ಮೊದಲು ಒಬ್ಬ ಕ್ರಮದ ಪಯನೀಯರ್ ಬಂದಾಗ, ಇಡೀ ಕೌಂಟಿಯಲ್ಲಿ ಕೇವಲ ಒಂಬತ್ತು ಸಹೋದರರನ್ನು ಮತ್ತು ಸಾರಲು ಬಹು ವಿಸ್ತಾರವಾದ ಕಾರ್ಯಕ್ಷೇತ್ರವನ್ನು ಕಂಡುಕೊಂಡನು. ಒಂದು ವರ್ಷದ ನಂತರ, ಸಾಕ್ಷಿಗಳ ಸಂಖ್ಯೆಯು 27ಕ್ಕೆ ಏರಿತು, ಇವರಲ್ಲಿ ಐವರು ಪುನಃ ಸಕ್ರಿಯಗೊಳಿಸಲ್ಪಟ್ಟ ಪ್ರಚಾರಕರಾಗಿದ್ದರು. ಪಯನೀಯರನು ತನ್ನ ವಸತಿಯನ್ನು ಕೊರಬಿಯ ನಗರದಲ್ಲಿ ಸ್ಥಾಪಿಸಿದನು, ಇಲ್ಲಿ ಸಾಕ್ಷಿಗಳೇ ಇರಲಿಲ್ಲ. ಸಾಕ್ಷಿಗಳು ಅಲ್ಲಿದ್ದು ಕೇವಲ 45 ದಿನಗಳಾದ ನಂತರ, ಕ್ರೆಯೊವ ನಗರದ ರೇಡಿಯೋದ ಮೂಲಕ ಅವರ ಕಾರ್ಯದ ವಿರೋಧವಾಗಿ ಸ್ಥಳೀಕ ಚರ್ಚಿನ ಪಾದ್ರಿಯೊಬ್ಬನು ಪ್ರತಿಭಟಿಸಿದನು. ಅವರ ಬೋಧನೆಗಳ ಮೂಲಕ, ಜನರು ತಮ್ಮ ಮತವನ್ನು ಬದಲಾಯಿಸುವಂತೆ ಅವರು ಪ್ರಯತ್ನಿಸುತ್ತಾ, ಕೊರಬಿಯ ನಗರವನ್ನು ಅವರು “ದಾಳಿಮಾಡಿದ್ದಾರೆ” ಎಂದು ಅವನು ಹೇಳಿದನು. ಕಾರ್ಯವನ್ನು ನಿಲ್ಲಿಸುವ ಮತ್ತು ಆ ಪ್ರದೇಶದಲ್ಲಿ ಸಾಕ್ಷಿಗಳ ಸತ್ಕೀರ್ತಿಯನ್ನು ನಾಶಮಾಡುವ ಹೇತುವಿನಿಂದ, ಈ ಆಕ್ರಮಣವು ಮುಂದರಿಯಿತು. ಇದೆಲ್ಲವೂ ಜಿಲ್ಲಾ ಅಧಿವೇಶನಕ್ಕಾಗಿ ಸಹೋದರರು ಬುಕಾರೆಸ್ಟ್ನಲ್ಲಿ ಒಟ್ಟಾದಾಗ, ಪರಾಕಾಷ್ಠೆಗೇರಿತು. ಕೊರಬಿಯದ ಆರ್ತೊಡಾಕ್ಸ್ ಪಾದ್ರಿಯು, ಅವನ ಚರ್ಚ್ ಪೂಜೆಯ ನಂತರ, ಒಂದು ಬಲವಾದ ಪ್ರಕಟನೆಯನ್ನು ಮಾಡಿದನು: “ಅವರ ಪ್ರಕಾಶನಗಳಿಂದ ನಮ್ಮ ಇಡೀ ಪ್ರದೇಶವನ್ನು ವ್ಯಾಧಿಪೀಡಿತವಾಗಿ ಮತ್ತು ಜನರನ್ನು ವಿಷಭರಿತರನ್ನಾಗಿ ಮಾಡಿರುವ ಸಾಕ್ಷಿಗಳ ವಿರುದ್ಧವಾಗಿ ಕ್ರಮಕೈಗೊಳ್ಳುವಂತೆ ಪೊಲೀಸರನ್ನು ಪ್ರಚೋದಿಸಲು ನಾವು ರಸ್ತೆಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸತಕ್ಕದ್ದು.” ಆದರೆ ಆ ಕೂಟವು ಜರುಗಲಿರುವ ಮೊದಲ ರಾತ್ರಿಯಲ್ಲಿ ಒಂದು ಅಸಾಮಾನ್ಯ ಘಟನೆಯೊಂದು ಸಂಭವಿಸಿತು. ವಿಧ್ವಂಸಕರ ಒಂದು ತಂಡವು ಕತೀಡ್ರಲ್ನ್ನು ಮತ್ತು ನಗರದ ಸಾಂಸ್ಕೃತಿಕ ಗೃಹವನ್ನು ನಾಶಗೊಳಿಸಿತು. ಆದಕಾರಣ, ಪ್ರತಿಭಟನೆಯ ಕೂಟವು ನಡೆಯಲೇ ಇಲ್ಲ!
ಯುಗೊಸ್ಲಾವಿಯ
ಯುಗೊಸ್ಲಾವಿಯ ಪ್ರದೇಶದಲ್ಲಿರುವ ಸಹೋದರರಿಗೆ 1992 ನೆಯ ಸೇವಾ ವರುಷವು ಅತಿ ಕಷ್ಟಕರ ವರ್ಷವಾಗಿತ್ತು. ಆದಾಗ್ಯೂ, ಅದೇ ಸಮಯದಲ್ಲಿ, ಅವರಿಗೆ ಕೆಲವು ಆನಂದಭರಿತ ಅನುಭವಗಳು ದೊರಕಿದವು. ಕೃತಜ್ಞತಾಪೂರ್ವಕವಾಗಿಯೇ, ಅವರ ಕಾರ್ಯವನ್ನೂ, ಮತ್ತು ಆತನ ನಾಮಕ್ಕಾಗಿ ಅವರು ತೋರಿಸಿದ ಪ್ರೀತಿಯನ್ನೂ ಯೆಹೋವನು ಮರೆಯುವುದಿಲ್ಲ.
ಸ್ಲೊವೇನಿಯದಲ್ಲಿ ಮೊದಲು, ಅನಂತರ ಕ್ರೋಏಷಿಯದಲ್ಲಿ, ಮತ್ತು ತದನಂತರ ಬಾಸ್ನಿಯ ಮತ್ತು ಹೆರ್ಸಗೋವಿನದಲ್ಲಿ ಯುದ್ಧವು ಆರಂಭಗೊಂಡಿತು. ಒಂದು ವರ್ಷದೊಳಗೆ, ಒಂದು ರಿಪಬ್ಲಿಕ್ನಿಂದ, ಐದು ಹೊಸ ರಾಷ್ಟ್ರಗಳು ತಮ್ಮ ಸ್ವಂತ ಗಡಿಗಳನ್ನು, ಕಾನೂನುಗಳನ್ನು, ಮತ್ತು ಹಣಚಲಾವಣೆಗಳನ್ನು ಸ್ಥಾಪಿಸಲು ಪ್ರಯತ್ನಿಸತೊಡಗಿದವು. ನೂರಾರು ಸಾಕ್ಷಿಗಳು ಅವರ ಮನೆಗಳನ್ನು ತೊರೆದು ಪಲಾಯನಗೈಯಬೇಕಾಯಿತು ಮತ್ತು ಇತರ ಸ್ಥಳಗಳಲ್ಲಿರುವ ತಮ್ಮ ಸಹೋದರರಲ್ಲಿ ಆಶ್ರಯವನ್ನು ಕಂಡುಕೊಳ್ಳಬೇಕಾಯಿತು. ಇತರ ಪೌರ್ವಾತ್ಯ ಯೂರೋಪಿನ ದೇಶಗಳಿಗೆ ಸರಿಸಮಾನವಾಗಿ, ಜರೂರಿಯುಳ್ಳ ನಮ್ಮ ಸಹೋದರರಿಗಾಗಿ ವಸತಿಯ, ಆಹಾರದ, ಮತ್ತು ಉಡುಪುಗಳ ಪರಾಮರಿಕೆಯನ್ನು ನೋಡಿಕೊಳ್ಳಲು, ದೊಡ್ಡ ನಗರಗಳಲ್ಲಿ ತುರ್ತುಸ್ಥಿತಿಯ ಕಮಿಟಿಗಳು ನೇಮಿಸಲ್ಪಟ್ಟವು. ಸೇವಾ ವರ್ಷದ ಸಮಯದಲ್ಲಿ, ತೊಂದರೆಪೀಡಿತ ಪ್ರದೇಶಗಳೊಳಗೆ ಇರುವ ಸಭೆಗಳ ಸಹೋದರರಿಗೆ ಸುಮಾರು 55 ಟನ್ನುಗಳಷ್ಟು ಆಹಾರವನ್ನು ವಿತರಿಸಲಾಯಿತು. ಗಣ್ಯತೆಯ ಅನೇಕ ಪತ್ರಗಳನ್ನು ಪಡೆಯಲಾಗಿದೆ.
ಡುಬ್ರೊವ್ನಿಕ್ನಲ್ಲಿ ಸಹೋದರರು, ಅವರು ಕೊಟ್ಟ ಸಹಾಯಕ್ಕಾಗಿ ಎಷ್ಟು ಆಭಾರಿಗಳಾಗಿದ್ದಾರೆಂದು ವರ್ಣಿಸಿದರು. ಆಹಾರದ ಅವಳ ಪಾಲಿನ ಕಟ್ಟಿನೊಂದಿಗೆ ಒಬ್ಬ ಸಹೋದರಿ ಮನೆಗೆ ಹೋದಾಗ, ಮೊಟ್ಟೆಗಳನ್ನು ಎಲ್ಲಿಂದ ಅವಳು ಖರೀದಿಸಿದಳು ಎಂದು ನೆರೆಯವಳೊಬ್ಬಳು ವಿಚಾರಿಸಿದಳು. ಇನ್ನೊಂದು ವಿಭಾಗದಲ್ಲಿರುವ ಅವಳ ಆತ್ಮಿಕ ಸಹೋದರರು ಅವನ್ನು ಕಳುಹಿಸಿದರು ಎಂದು ಸಹೋದರಿ ಹೇಳಿದಳು. ನೆರೆಯವಳಿಗೆ ಆಶ್ಚರ್ಯವಾಯಿತು. ಇನ್ನೊಂದು ವಿದ್ಯಮಾನದಲ್ಲಿ, ಸ್ಲೊವೇನಿಯದ ಒಬ್ಬ ಅಪರಿಚಿತ ಮನುಷ್ಯನು ಹಿರಿಯನಿಗೆ ಕರೆಕೊಟ್ಟು, ಹೇಳಿದ್ದು: “ತಮ್ಮ ಸಹೋದರರಿಂದ ಪಡೆದಂತಹ ಆಹಾರವನ್ನು ಯೆಹೋವನ ಸಾಕ್ಷಿಗಳು ಯೋಗ್ಯವಾದ ರೀತಿಯಲ್ಲಿ ವಿತರಣೆ ಮಾಡುತ್ತಾರೆಂದು ನಾನು ಕೇಳಿದೆನು. ನಾನು ಅನೇಕ ಕಟ್ಟುಗಳನ್ನು ಜನರಿಗೆ ಕಳುಹಿಸಿದ್ದೆ; ಆದಾಗ್ಯೂ, ಅವು ನಿಶ್ಚಯಿಸಿದ ಸ್ಥಳಗಳಿಗೆ ಬಂದು ಮುಟ್ಟಲೇ ಇಲ್ಲ. ನಿಮಗೆ ನಾನು ಅಂತಹ ಪರಿಹಾರದ ಸಾಮಗ್ರಿಗಳನ್ನು ಕಳುಹಿಸಬಹುದೋ, ಮತ್ತು ನೀವು ಅವುಗಳನ್ನು ವಿತರಣೆ ಮಾಡಬಲ್ಲಿರೋ?” ನಮ್ಮ ಪರಿಹಾರ ಕಾರ್ಯದ ಕುರಿತು ವಾರ್ತಾಪತ್ರಗಳು ಮತ್ತು ರೇಡಿಯೋ ಶ್ಲಾಘನೀಯವಾಗಿ ವರದಿಸಿದವು.
ಸೆಗ್ರೆಬ್ನ 1991ರ ಅಂತಾರಾಷ್ಟ್ರೀಯ ಅಧಿವೇಶನವೊಂದರಲ್ಲಿ ದೀಕ್ಷಾಸ್ನಾನ ಹೊಂದಿದ ಒಬ್ಬ ಸಹೋದರನು ಏರುತ್ತಿರುವ ತೊಂದರೆಗಳ ಪ್ರಜ್ಞೆಯುಳ್ಳವನಾಗಿ, ಆಹಾರದ ಇಡೀ ಮಳಿಗೆಯನ್ನು ಖರೀದಿಸಿದನು. ಯುದ್ಧ ಪ್ರದೇಶಕ್ಕೆ ಸಮೀಪವಿದ್ದ ತನ್ನ ಮನೆಗೆ ಅವನು ಆಹಾರವನ್ನೆಲ್ಲಾ ಕೊಂಡೊಯ್ದನು. ಆಹಾರದ ಕೊರತೆಯು ಹೆಚ್ಚು ತೀವ್ರವಾದಂತೆಯೇ, ಈ ಸರಬರಾಯಿ ಸಹೋದರರಿಗೆ ಒಂದು ನಿಜ ಆಶೀರ್ವಾದವಾಗಿ ರುಜುವಾಯಿತು.
ಸರಾಯೆವೊದಲ್ಲಿ ಸುತ್ತುವರಿಯಲ್ಪಟ್ಟ ಸಹೋದರರಿಗಾಗಿ ಕಚ್ಚಾ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು ಒಂದು ದೊಡ್ಡ ಟ್ರಕ್ಗಾಗಿ ಪರವಾನಗಿಯನ್ನು ಪಡೆಯಲು ಸಾಧ್ಯವಾಗಿತ್ತು. ಸರಬರಾಜನ್ನು ಯಶಸ್ವಿಯಾಗಿ ಮಾಡಲಾಯಿತು ಎಂದು ಹೇಳಲು ನಮಗೆ ಸಂತೋಷವಾಗುತ್ತದೆ.
ಹೋರಾಟವು ನಾಗರಿಕರ ಆಹುತಿಯನ್ನು ತಕ್ಕೊಂಡಿದೆ. ದುಃಖಕರವಾಗಿಯೆ, ಸೇವಾ ವರ್ಷದ ಅಂತ್ಯದೊಳಗೆ, ನಮ್ಮ ಸಹೋದರ ಮತ್ತು ಸಹೋದರಿಯರುಗಳಲ್ಲಿ ಆರು ಮಂದಿ ಮತ್ತು ಆಸಕ್ತ ವ್ಯಕ್ತಿಗಳಲ್ಲಿ ಇಬ್ಬರು ತಮ್ಮ ಜೀವಗಳನ್ನು ಕಳಗೊಂಡರು, ಮತ್ತು ಕೆಲವರು ಗಾಯಗೊಂಡರು.
ಆದಾಗ್ಯೂ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವುದು ಸಂರಕ್ಷಣೆಯಾಗಿದೆ ಎಂದು ಪ್ರಧಾನವಾಗಿ ಅನೇಕ ಅನುಭವಗಳು ತೋರಿಸುತ್ತವೆ. ಒಂದು ವಿದ್ಯಮಾನದಲ್ಲಿ, ಬೆಲ್ಗ್ರೆಡ್ನ ಒಂದು ಜಿಲ್ಲಾ ಅಧಿವೇಶನಕ್ಕೆ ಸಹೋದರರು ಪಯಣಿಸುತ್ತಿದ್ದಾಗ, ಬಸ್ಸು ಸೈನಿಕರಿಂದ ತಡೆಹಿಡಿಯಲಾಯಿತು, ಅವರ ನಡುವೆ ಒಂದು ನಿರ್ದಿಷ್ಟ ಮತದ ಸದಸ್ಯರು ಇದ್ದಾರೋ ಎಂದು ವಿಚಾರಿಸಲಾಯಿತು. ಯಾರೂ ಇಲ್ಲ ಎಂದು ಸಹೋದರರು ಉತ್ತರಿಸಿದರು. ತಮ್ಮ ಗುರುತು ಚೀಟಿಗಳನ್ನು ಅವರು ತೋರಿಸಬೇಕಿತ್ತು, ಮತ್ತು ಕೆಲವರ ಹೆಸರುಗಳು ಆ ಮತಕ್ಕೆ ಸೇರಿದವರಾಗಿರಬಹುದೆಂದು ತೋರಿಸುತ್ತಿತ್ತು. ಸುಳ್ಳು ಹೇಳುತ್ತಾರೆಂದು ಸೈನಿಕರು ಅವರನ್ನು ಆಪಾದಿಸಿದರು, ಆದರೆ ಆ ಚರ್ಚಿನಿಂದ ಅವರ ಹಿಂದೆಗೆದುಕೊಳ್ಳುವಿಕೆಯ ಸೂಚನಪತ್ರಗಳು ಅವರೊಂದಿಗೆ ಇದ್ದವು; ಅವರು ಆ ಮತದಲ್ಲಿ ಹುಟ್ಟಿದವರಾಗಿದ್ದರೂ ಕೂಡ, ಈಗ ಅವರು ಯೆಹೋವನ ಸಾಕ್ಷಿಗಳಾಗಿದ್ದು, ಅವರ ಅಧಿವೇಶನಕ್ಕೆ ಪ್ರಯಾಣಿಸುತ್ತಾ ಇದ್ದಾರೆ ಎಂದವರು ಹೇಳಿದರು. ಇದರಿಂದ ಸೈನಿಕರು ಪ್ರಯಾಣವನ್ನು ಮುಂದರಿಸಲು ಅವರಿಗೆ ಬಿಟ್ಟರು.
ಪಯನೀಯರರುಗಳು ಅವರ ಸೇವೆಯನ್ನು ಕುಗ್ಗದ ಹುರುಪಿನಿಂದ ಮುಂದರಿಸುತ್ತಿದ್ದಾರೆ, ಮತ್ತು ಇದು ಕಾರ್ಯಕ್ಕೆ ಒಂದು ನಿಜ ಉದ್ದೀಪಕವಾಗಿ ರುಜುವಾಗಿದೆ. ದ ವಾಚ್ಟವರ್ [ಕಾವಲಿನಬುರುಜು], ಪ್ರಸನ್ನತೆಯ ಪೂರ್ಣವರ್ಣದ ಅದರ ಆವರಣ ಪುಟಗಳೊಂದಿಗೆ, ಆ ಪ್ರದೇಶದ ಎಲ್ಲಾ ಪ್ರಧಾನ ಭಾಷೆಗಳಲ್ಲಿ ತರ್ಜುಮೆಗೊಳ್ಳಲ್ಪಡುತ್ತದೆ. ಅದು ಕ್ರಮಭರಿತವಾಗಿ ಸತ್ಯ ಮತ್ತು ನೀತಿಯನ್ನು ಪ್ರೀತಿಸುವವರಿಗೆ ಅವರ ಆತ್ಮಿಕ “ಹೊತ್ತುಹೊತ್ತಿಗೆ ಆಶನಕ್ಕೆ ಬೇಕಾದದ್ದನ್ನು ಅಳೆದು” ಕೊಡುತ್ತಾ ಇದೆ. (ಲೂಕ 12:42) ಸಾವಿರದ ಒಂಭೈನೂರ ತೊಂಬತ್ತೆರಡನೆಯ ಸೇವಾ ವರ್ಷದಲ್ಲಿ, 674 ಹೊಸ ಸಹೋದರ ಮತ್ತು ಸಹೋದರಿಯರು ದೀಕ್ಷಾಸ್ನಾನ ಪಡೆದರು.
ನಿಶ್ಚಯವಾಗಿಯೂ, ಪೌರ್ವಾತ್ಯ ಯೂರೋಪಿನಲ್ಲಿ ನಮ್ಮ ಸಹೋದರರ ಕೆಲಸವನ್ನು ಮತ್ತು ಆತನ ನಾಮಕ್ಕಾಗಿ ಅವರು ತೋರಿಸಿದ ಪ್ರೀತಿಯನ್ನು ದೇವರು ಮರೆತಿರುವುದಿಲ್ಲ. ಇನ್ನೂ ಹೆಚ್ಚಾಗಿ, ಅವನ ಎಲ್ಲಾ ಆರಾಧಕರು, ಅವರು ಎಲ್ಲಿಯೇ ಜೀವಿಸಲಿ, ಇಬ್ರಿಯ 6:11 ರಲ್ಲಿ ಪೌಲನು ಕೊಟ್ಟ ತದನಂತರದ ಉತ್ತಮ ಹಿತೋಪದೇಶವನ್ನು ಅನುಸರಿಸುವಂತೆ ಅವನು ಬಯಸುತ್ತಾನೆ, ಅದು ಹೇಳುವುದು: “ನೀವು ಉಪಚಾರಮಾಡುವದರಲ್ಲಿ ಯಾವ ಆಸಕ್ತಿಯನ್ನು ತೋರಿಸಿದ್ದೀರೋ ನಿಮ್ಮ ನಿರೀಕ್ಷೆ ದೃಢಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ಅಪೇಕ್ಷಿಸುತ್ತೇವೆ.” (w93 1⁄1)