ಒಳ್ಳೆಯದರ ಪ್ರತಿ ಕೆಟ್ಟದ್ದು—ದೀರ್ಘಕಾಲದ ಒಂದು ಹೋರಾಟ
ಗತಕಾಲದ ಚಲನಚಿತ್ರಗಳಲ್ಲಿ, “ಸತ್ಪುರುಷನು” ಯಾವಾಗಲೂ ದುಷ್ಟಶಕ್ತಿಗಳನ್ನು ಸೋಲಿಸುತ್ತಾನೆ. ಆದರೆ ವಾಸ್ತವ್ಯವೆಂದೂ ಅಷ್ಟು ಸರಳವಲ್ಲ. ವಾಸ್ತವ ಜಗತ್ತಿನಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ, ಕೆಟ್ಟದ್ದು ಮೇಲುಗೈಯಾಗಿರುವಂತೆ ಭಾಸವಾಗುತ್ತದೆ.
ರಾತ್ರಿಯ ವಾರ್ತೆಗಳಲ್ಲಿ ಕೆಟ್ಟ ಕೃತ್ಯಗಳ ಕುರಿತಾದ ಭೀತಿಗೊಳಿಸುವ ವರದಿಗಳು ಒಂದು ಕ್ರಮಾನುಗತ ಲಕ್ಷಣವಾಗಿದೆ. ಅಮೆರಿಕದ ಉತ್ತರ ಭಾಗದಲ್ಲಿ, ಒಬ್ಬ ಮಿಲ್ವೌಕಿ ಮನುಷ್ಯನು 11 ಜನರ ಹತ್ಯೆ ಮಾಡುತ್ತಾನೆ ಮತ್ತು ಅವರ ತುಂಡರಿಸಲ್ಪಟ್ಟ ದೇಹಗಳ ಉಳಿದ ಭಾಗಗಳನ್ನು ತನ್ನ ಶೀತಕದಲ್ಲಿ ಶೇಖರಿಸಿಡುತ್ತಾನೆ. ಕೆಳಗೆ ದಕ್ಷಿಣದಲ್ಲಿ, ಅಪರಿಚಿತನೊಬ್ಬನು ಟೆಕ್ಸಾಸ್ನ ಭೋಜನಾಲಯಕ್ಕೆ ದಢಾರನೇ ನುಗ್ಗುತ್ತಾನೆ ಮತ್ತು ಗೊತ್ತುಗುರಿಯಿಲ್ಲದೆ ಹತ್ತು ನಿಮಿಷಗಳ ತನಕ ಪಿಸ್ತೂಲಿನಿಂದ ಗುಂಡುಗಳನ್ನು ಹೊಡೆದು, ಸ್ವತಃ ತನ್ನ ಸಹಿತ 23 ಜನರನ್ನು ಕೊಲ್ಲುತ್ತಾನೆ. ಕೊರಿಯದಲ್ಲಿ ಒಬ್ಬ ಅತೃಪ್ತ ವಿರೋಧಿಯು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವೊಂದಕ್ಕೆ ಬೆಂಕಿಯಿಟ್ಟು, 14 ಆರಾಧಕರನ್ನು ಕೊಲ್ಲುತ್ತಾನೆ.
ಕೆಟ್ಟತನದ ಈ ವಿರಳ ಸ್ಫೋಟನಗಳು ಮಾತ್ರವೇ ಅಲ್ಲ, ಲೋಕವನ್ನು ಬಾಧಿಸುವ ಇನ್ನೊಂದು ಭೀಕರ ಕೆಟ್ಟತನ ಇದೆ—ಕುಲವೊಂದರ ಸಾಮೂಹಿಕ ಸಂಹಾರ. ಈ ಶತಕವೊಂದರಲ್ಲಿಯೇ, ಹತ್ತು ಲಕ್ಷ ಆರ್ಮೆನಿಯರು, ಆರ್ವತ್ತು ಲಕ್ಷ ಯೆಹೂದ್ಯರು, ಮತ್ತು ಹತ್ತು ಲಕ್ಷಕ್ಕಿಂತಲೂ ಹೆಚ್ಚು ಕೆಂಬೋಡಿಯನರು ಕುಲವರ್ಣೀಯ ಮತ್ತು ರಾಜಕೀಯ ಶುದ್ಧೀಕರಣದಲ್ಲಿ ನಿರ್ಮೂಲಗೊಳಿಸಲ್ಪಟ್ಟರು. ಕುಲಸಂಬಂಧೀ ಶುದ್ಧೀಕರಣವೆಂದು ಕರೆಯಲ್ಪಡುವಂತಹದ್ದು ಹಿಂದಿನ ಯುಗೋಸ್ಲಾವಿಯದಲ್ಲಿ ಅನೇಕರನ್ನು ತಟ್ಟಿದೆ. ಭೂಸುತ್ತಲೂ ಎಷ್ಟು ಲಕ್ಷ ನಿರಪರಾಧಿ ಜನರು ಕ್ರೂರವಾಗಿ ಹಿಂಸಿಸಲ್ಪಟ್ಟಿರುತ್ತಾರೆಂದು ಯಾರಿಗೂ ತಿಳಿದಿಲ್ಲ.
ಇಂತಹ ದುರಂತಗಳು ಕ್ಲೇಶವನ್ನುಂಟುಮಾಡುವ ಪ್ರಶ್ನೆಯೊಂದನ್ನು ನಾವು ಎದುರಿಸುವಂತೆ ಬಲಾತ್ಕರಿಸುತ್ತವೆ, ಜನರು ಈ ರೀತಿಯಲ್ಲಿ ಯಾಕೆ ವರ್ತಿಸುತ್ತಾರೆ? ಇಂತಹ ಪರಮಪಾಶವೀ ಕೃತ್ಯಗಳನ್ನು ಕೇವಲ ಕೆಲವು ಬುದ್ಧಿವಿಕಲಿತ ಮನಸ್ಸುಗಳ ಉತ್ಪಾದನೆಯೆಂದು ನಾವು ವಜಾಗೊಳಿಸಸಾಧ್ಯವಿಲ್ಲ. ನಮ್ಮ ಶತಕದಲ್ಲಿ ಮಾಡಲ್ಪಟ್ಟ ದುಷ್ಟತನದ ವ್ಯಾಪ್ತಿಯು ತಾನೇ ಅಂತಹ ವಿವರಣೆಯನ್ನು ಸುಳ್ಳಾಗಿಸುತ್ತದೆ.
ನೈತಿಕವಾಗಿ ತಪ್ಪಾಗಿರುವುದನ್ನು ಕೆಟ್ಟ ಕೃತ್ಯವೆಂದು ಅರ್ಥವಿವರಿಸಲಾಗಿದೆ. ಅದು ಒಳ್ಳೆಯದನ್ನು ಯಾ ಕೆಟ್ಟದನ್ನು ಮಾಡುವುದರ ನಡುವಣ ಆರಿಸಲು ಶಕ್ತನಾಗಿರುವವನೊಬ್ಬನಿಂದ ಗೈಯಲ್ಪಟ್ಟ ಒಂದು ಕೃತ್ಯವಾಗಿದೆ. ಹೇಗೊ ಅವನ ನೈತಿಕ ನ್ಯಾಯನಿರ್ಣಯಿಸುವಿಕೆ ವಕ್ರಗೊಳಿಸಲ್ಪಡುತ್ತದೆ ಮತ್ತು ಕೆಟ್ಟದು ಜಯಗಳಿಸುತ್ತದೆ. ಆದರೆ ಇದು ಯಾಕೆ ಮತ್ತು ಹೇಗೆ ಸಂಭವಿಸುತ್ತದೆ?
ಕೆಟ್ಟದ್ದರ ಧಾರ್ಮಿಕ ವಿವರಣೆಗಳು ಆಗಾಗ್ಗೆ ತೃಪ್ತಿದಾಯಕವಾಗಿರುವುದಿಲ್ಲ. ಕ್ಯಾತೊಲಿಕ್ ತತ್ವಜ್ಞಾನಿ ತೋಮಸ್ ಅಕಿನ್ವಾಸ್ ವಾದಿಸಿದ್ದೇನಂದರೆ “ದೇವರು ಕೆಟ್ಟದ್ದು ಅಸ್ತಿತ್ವದಲ್ಲಿಲ್ಲದಂತೆ ಮಾಡಿದರೆ, ಅನೇಕ ಒಳ್ಳೆಯ ಸಂಗತಿಗಳು ತೆಗೆಯಲ್ಪಡುತ್ತವೆ.” ಅನೇಕ ಪ್ರಾಟೆಸ್ಟಾಂಟ್ ತತ್ವಜ್ಞಾನಿಗಳು ತದ್ರೀತಿಯ ನೋಟವನ್ನು ಹೊಂದಿದ್ದಾರೆ. ಉದಾಹರಣೆಗೆ, ದ ಎನ್ಸೈಕ್ಲೊಪೀಡಿಯಾ ಬ್ರಿಟ್ಯಾನಿಕದಲ್ಲಿ ನಮೂದಿಸಲ್ಪಟ್ಟಂತೆ, ಕೆಟ್ಟದು “ಲೋಕದಲ್ಲಿ ಒಳ್ಳೇದನ್ನು ಬಿಡುಗಡೆಗೊಳಿಸಲು ಕೇವಲ ಇದ್ದು, ಅದು ವಿಪರ್ಯಸ್ತವಾಗಿ ಏರುತ್ತದೆ” ಎಂದು ಗಾಟ್ಫ್ರಿಯ್ಡ್ ಲಿಪ್ನಿಟ್ಸ್ ಪರಿಗಣಿಸಿದ್ದಾನೆ. ಬೇರೆ ಮಾತುಗಳಲ್ಲಿ, ಒಳ್ಳೆಯದನ್ನು ನಾವು ಗಣ್ಯಮಾಡಲು ಸಾಧ್ಯವಾಗುವಂತೆ ನಮಗೆ ಕೆಟ್ಟದ್ದು ಆವಶ್ಯಕ ಎಂದು ಅವನು ನಂಬಿದನು. ಅಂಥ ವಿವೇಚನೆಯು, ಒಬ್ಬ ಕ್ಯಾನ್ಸರ್ ರೋಗಿಗೆ ಬೇರೊಬ್ಬನು ನಿಜವಾಗಿಯೂ ಸಜೀವವಿದ್ದಾನೆ ಮತ್ತು ಒಳ್ಳೆಯದಾಗಿ ಇದ್ದಾನೆ ಎಂದು ಭಾವಿಸಲು ಶಕ್ಯವಾಗುವಂತೆ, ಅವನ ರೋಗವು ಆವಶ್ಯಕವಾಗಿದೆ ಎಂದು ಹೇಳುವುದಕ್ಕೆ ಸಮಾನವಾಗಿದೆ.
ಕೆಟ್ಟ ಹೇತುಗಳು ಬೇರೆಲ್ಲಿಂದಲೋ ಬರತಕ್ಕದ್ದು. ದೇವರು ಪರೋಕ್ಷವಾಗಿ ದೂಷ್ಯರ್ಹನೋ? ಬೈಬಲ್ ಉತ್ತರಿಸುವುದು: “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ—ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” ದೇವರು ಜವಾಬ್ದಾರನಲ್ಲವಾದರೆ, ಯಾರು ಜವಾಬ್ದಾರನು? ಮುಂದಿನ ವಚನಗಳು ಉತ್ತರವನ್ನು ಕೊಡುತ್ತವೆ: “ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.” (ಯಾಕೋಬ 1:13-15) ಹೀಗೆ, ಒಂದು ಕೆಟ್ಟ ಆಶೆಯನ್ನು ನಿರಾಕರಿಸುವ ಬದಲು ಪೋಷಿಸಿದಾಗ, ಒಂದು ಕೆಟ್ಟ ಕೃತ್ಯವು ಜನಿಸುತ್ತದೆ. ಆದಾಗ್ಯೂ, ಇದು ಇಡೀ ಚಿತ್ರಣವೇನಲ್ಲ.
ಮಾನವ ಕುಲದಲ್ಲಿ ಒಂದು ಮೂಲಭೂತ ದೋಷ—ಬಾಧ್ಯತೆಯಾಗಿ ಪಡೆದ ಅಪರಿಪೂರ್ಣತೆ ಇರುವ ಕಾರಣ ಕೆಟ್ಟ ಆಶೆಗಳು ಉದ್ಭವಿಸುತ್ತವೆ ಎಂದು ಶಾಸ್ತ್ರವಚನಗಳು ವಿವರಿಸುತ್ತವೆ. ಅಪೊಸ್ತಲ ಪೌಲನು ಬರೆದದ್ದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಬಾಧ್ಯತೆಯಾಗಿ ಪಡೆದ ಪಾಪದ ಕಾರಣ, ಸ್ವಾರ್ಥವು ನಮ್ಮ ಯೋಚನೆಗಳಿಂದ ದಯೆಯನ್ನು ತಳ್ಳಿಹಾಕುವ ಸಾಧ್ಯತೆ ಇದೆ, ಮತ್ತು ಕ್ರೂರತನವು ಕನಿಕರವನ್ನು ತಿರಸ್ಕರಿಸಬಹುದು.
ನಿರ್ದಿಷ್ಟ ನಡವಳಿಕೆಯು ತಪ್ಪು ಎಂದು ಅಧಿಕ ಜನರು ಸಹಜವಾಗಿ ತಿಳಿದಿರುತ್ತಾರೆಂಬುದು ನಿಜ. ಅವರ ಮನಸ್ಸಾಕ್ಷಿ—ಯಾ ಪೌಲನು ಅದನ್ನು ‘ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ಅವರ ಹೃದಯದಲ್ಲಿ ಬರೆದದೆ’ ಎಂದು ಕರೆದಿದ್ದಾನೆ—ಕೆಟ್ಟ ಕೃತ್ಯವನ್ನು ಗೈಯದಂತೆ ಅವರನ್ನು ತಡೆಯುತ್ತದೆ. (ರೋಮಾಪುರ 2:15) ಆದರೂ, ಒಂದು ಕ್ರೂರ ಪರಿಸರ ಅಂತಹ ಭಾವನೆಗಳನ್ನು ಅದುಮಬಹುದು ಮತ್ತು ಮನಸ್ಸಾಕ್ಷಿಯನ್ನು ಪದೇಪದೇ ಅಲಕ್ಷಿಸುವುದಾದರೆ ಅದು ಸಾಯಬಲ್ಲದು.a—ಹೋಲಿಸಿರಿ 1 ತಿಮೊಥೆಯ 4:2.
ನಮ್ಮ ದಿನಗಳ ಚೆನ್ನಾಗಿ ಏರ್ಪಡಿಸಲ್ಪಟ್ಟ ಕೆಟ್ಟತನವನ್ನು ಕೇವಲ ಮಾನವ ಅಪರಿಪೂರ್ಣತೆಯು ಮಾತ್ರ ವಿವರಿಸಬಹುದೇ? ಇತಿಹಾಸಜ್ಞ ಜೆಫ್ರೇ ಬರ್ಟನ್ ರಸ್ಸೆಲ್ ಅವಲೋಕಿಸಿದ್ದು: “ನಮ್ಮ ಪ್ರತಿಯೊಬ್ಬರಲ್ಲಿ ಕೆಟ್ಟದ್ದು ಇದೆಯೆಂಬುದೇನೋ ಸತ್ಯ, ಆದರೆ ವೈಯಕ್ತಿಕ ಕೆಟ್ಟತನಗಳ ದೊಡ್ಡ ಸಂಖ್ಯೆಗಳ ಒಟ್ಟುಗೂಡಿಸುವಿಕೆಯೂ ಔಶ್ವಿಟ್ಸ್ ಒಂದನ್ನು ವಿವರಿಸಲಾರದು. . . . ಈ ಪ್ರಮಾಣದ ಕೆಟ್ಟತನ ಗುಣಮಟ್ಟದಲ್ಲಿ ಮತ್ತು ಗಾತ್ರತೆಯಲ್ಲಿ ಭಿನ್ನವೆಂದು ಭಾಸವಾಗುತ್ತದೆ.” ಗುಣಮಟ್ಟದಲ್ಲಿ ಕೆಟ್ಟತನದ ಈ ಭಿನ್ನ ಉಗಮವೊಂದರ ಕಡೆಗೆ ನಿರ್ದೇಶಿಸಿದವನು ಯೇಸು ಕ್ರಿಸ್ತನಲ್ಲದೆ ಬೇರೆ ಯಾರೂ ಅಲ್ಲ.
ಅವನ ಮರಣದ ತುಸು ಮೊದಲು, ಅವನನ್ನು ಕೊಲ್ಲಲು ಯೋಜಿಸಿದ ಪುರುಷರು, ಅವರ ಸ್ವಂತ ಸಂಕಲ್ಪದಿಂದ ಪೂರ್ಣವಾಗಿ ವರ್ತಿಸುತ್ತಿಲ್ಲವೆಂದು ಯೇಸುವು ವಿವರಿಸಿದನು. ಒಂದು ಅಗೋಚರ ಶಕ್ತಿಯು ಅವರನ್ನು ಮಾರ್ಗದರ್ಶಿಸಿತು. ಯೇಸುವು ಅವರಿಗಂದದ್ದು: “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ.” (ಯೋಹಾನ 8:44) “ಇಹಲೋಕಾಧಿಪತಿ” ಯೆಂದು ಯೇಸುವು ಕರೆದ ಪಿಶಾಚನಿಗೆ ಕೆಟ್ಟದ್ದನ್ನು ಉತ್ತೇಜಿಸುವುದರಲ್ಲಿ ಸ್ಪಷ್ಟವಾಗಿಗಿ ಒಂದು ಪ್ರಧಾನ ಪಾತ್ರವಿದೆ.—ಯೋಹಾನ 16:11; 1 ಯೋಹಾನ 5:19.
ಮಾನವ ಅಪರಿಪೂರ್ಣತೆ ಮತ್ತು ಸೈತಾನೀಕ ಪ್ರಭಾವ ಇವೆರಡೂ ಸಾವಿರಾರು ವರುಷಗಳ ಬಹಳಷ್ಟು ನರಳಾಟವನ್ನು ಫಲಿಸಿವೆ. ಮತ್ತು ಮಾನವ ಕುಲದ ಮೇಲೆ ಅವುಗಳ ಬಿಗಿಹಿಡಿತವು ಸಡಿಲಿಸುತ್ತಿದೆಂಬುದರ ಯಾವುದೇ ಸಂಕೇತವೂ ಇಲ್ಲ. ಕೆಟ್ಟದ್ದು ಇಲ್ಲಿ ಸದಾ ಇರುವುದೋ? ಯಾ ಒಳ್ಳೆಯ ಶಕ್ತಿಗಳು ಕಟ್ಟಕಡೆಗೆ ಕೆಟ್ಟದ್ದನ್ನು ನಿರ್ಮೂಲಗೊಳಿಸಲಿರುವವೋ?
[ಅಧ್ಯಯನ ಪ್ರಶ್ನೆಗಳು]
a ಟೆಲಿವಿಷನ್ ಮೇಲಿನ ವ್ಯಕ್ತ ಹಿಂಸಾಚಾರ ಮತ್ತು ಬಾಲಕರ ಪಾತಕದ ನಡುವಣ ಸಂಬಂಧವೊಂದನ್ನು ಸಂಶೋಧಕರು ಇತ್ತೀಚೆಗೆ ಕಂಡಿರುತ್ತಾರೆ. ಅಧಿಕ ಪಾತಕದ ಪ್ರದೇಶಗಳು ಮತ್ತು ಛಿದ್ರಗೊಂಡ ಮನೆಗಳು ಕೂಡ ಸಮಾಜವಿರೋಧಿ ನಡವಳಿಕೆಗೆ ವಾಸ್ತವಾಂಶಗಳಾಗಿವೆ. ನಾಸೀ ಜರ್ಮನಿಯಲ್ಲಿ ಎಡೆ ಬಿಡದ ಕುಲವರ್ಣೀಯ ಪ್ರಚಾರಕಾರ್ಯವು ಯೆಹೂದ್ಯರ ಮತ್ತು ಸ್ಲಾವರ ವಿರುದ್ಧದ ಅತಿ ಕ್ರೂರತೆಗಳನ್ನು ನ್ಯಾಯೀಕರಿಸಲು—ಮತ್ತು ಶ್ಲಾಘಿಸಲು ಕೂಡ—ಕೆಲವರನ್ನು ನಡಿಸಿದೆ.
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: U.S. Army photo
[ಪುಟ 3 ರಲ್ಲಿರುವ ಚಿತ್ರ ಕೃಪೆ]
U.S. Army photo