ಈ ಭೋಜನ ನಿಮಗೆ ಅರ್ಥವುಳ್ಳದ್ದಾಗಿರಬಲದ್ಲೊ?
ಒಂದು ಪೂರ್ಣ ಚಂದ್ರನು ಮಂದ ಪ್ರಕಾಶದಿಂದ ದೇಶವನ್ನು ತೋಯಿಸುತ್ತಿದ್ದಾನೆ. ಪ್ರಾಚೀನ ಕಾಲದ ಯೆರೂಸಲೇಮಿನ ನಿವಾಸದ ಮೇಲಂತಸ್ತಿನ ಒಂದು ಕೊಠಡಿಯಲ್ಲಿ, ಮೇಜಿನ ಸುತ್ತಲೂ 12 ಪುರುಷರು ಒಟ್ಟಾಗಿ ಕೂಡಿದ್ದಾರೆ. ಅವರ ಬೋಧಕನು ಅರ್ಥವತ್ತಾದ ಉಚ್ಚ ಆಚರಣೆಯೊಂದನ್ನು ಪ್ರಸ್ತಾಪಿಸುತ್ತಾ, ಅತಿ ಮಹತ್ವಾರ್ಥದ ಮಾತುಗಳನ್ನು ಹೇಳುತ್ತಿರುವಾಗ, ಹನ್ನೊಂದು ಮಂದಿ ಏಕಾಗ್ರತೆಯಿಂದ ಗಮನ ನೀಡುತ್ತಿದ್ದಾರೆ. ಒಂದು ದಾಖಲೆ ಅನ್ನುವುದು:
“ಯೇಸು [ಕ್ರಿಸ್ತನು] ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಮುರಿದು ಶಿಷ್ಯರಿಗೆ ಕೊಟ್ಟು—ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ ಅಂದನು. ಆ ಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟು—ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ. ನಾನು ನನ್ನ ತಂದೆಯ ರಾಜ್ಯದಲ್ಲಿ ದ್ರಾಕ್ಷಾರಸವನ್ನು ನಿಮ್ಮ ಸಂಗಡ ಹೊಸದಾಗಿ ಕುಡಿಯುವ ದಿನದ ವರೆಗೂ ಇನ್ನು ಕುಡಿಯುವದೇ ಇಲ್ಲ ಎಂದು ನಿಮಗೆ ಹೇಳುತ್ತೇನೆ ಅಂದನು. ಬಳಿಕ ಅವರು ಕೀರ್ತನೆಯನ್ನು ಹಾಡಿ ಎಣ್ಣೆಯ ಮರಗಳ ಗುಡ್ಡಕ್ಕೆ ಹೊರಟುಹೋದರು.”—ಮತ್ತಾಯ 26:26-30.
ನಮ್ಮ ಸಾಮಾನ್ಯ ಶಕದ 33 ನೆಯ ವರ್ಷದಲ್ಲಿ ಯೆಹೂದ್ಯ ತಿಂಗಳ ನೈಸಾನಿನ 14 ನೆಯ ದಿನದ ಸೂರ್ಯಾಸ್ತಮಾನದ ನಂತರ ಇದು ಸಂಭವಿಸಿತು. ಸಾ.ಶ.ಪೂ. 16 ನೆಯ ಶತಕದಲ್ಲಿ ಐಗುಪ್ತ್ಯರ ಬಂದಿವಾಸದಿಂದ ಇಸ್ರಾಯೇಲಿನ ಬಿಡುಗಡೆಯ ಸ್ಮಾರಕಾಚರಣೆಯಲ್ಲಿ ಪಸ್ಕಹಬ್ಬವನ್ನು ಯೇಸು ಮತ್ತು ಅವನ ಅಪೊಸ್ತಲರು ಈಗ ತಾನೇ ಆಚರಿಸಿದ್ದರು. ಅವನ ವಿಶ್ವಾಸಘಾತ ಮಾಡಲಿದ್ದ ಇಸ್ಕರಿಯೋತ ಯೂದನನ್ನು ಕ್ರಿಸ್ತನು ಆಗಲೇ ಕಳುಹಿಸಿಬಿಟ್ಟಿದ್ದನು. ಆದುದರಿಂದ, ಕೇವಲ ಯೇಸು ಮತ್ತು ಅವನ ನಿಷ್ಠೆಯ 11 ಅಪೊಸ್ತಲರು ಮಾತ್ರ ಹಾಜರಿದ್ದರು.
ಈ ಭೋಜನವು ಯೆಹೂದ್ಯ ಪಸ್ಕಹಬ್ಬದ ಮುಂದರಿಯೋಣವಾಗಿರಲಿಲ್ಲ. ಅದು ಒಂದು ಹೊಸ ವಿಷಯವಾಗಿತ್ತು ಮತ್ತು ಕರ್ತನ ಸಂಧ್ಯಾ ಭೋಜನವೆಂದು ಕರೆಯಲ್ಪಡುವಂತೆ ಆಯಿತು. ಈ ಆಚರಣೆಯ ಕುರಿತಾಗಿ, ಯೇಸುವು ತನ್ನ ಅನುಯಾಯಿಗಳಿಗೆ ಆಜ್ಞಾಪಿಸಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19, 20; 1 ಕೊರಿಂಥ 11:24-26) ಇದನ್ನು ಅವನು ಹೇಳಿದ್ದು ಯಾಕೆ? ಮತ್ತು ಶತಮಾನಗಳ ಹಳೆಯ ಈ ಘಟನೆಯು ನಿಮಗೆ ಹೇಗೆ ಅರ್ಥವುಳ್ಳದ್ದಾಗಿರಬಲ್ಲದು?