ಯೆಹೋವನನ್ನು ಆತನ ವಾಕ್ಯದ ಮೂಲಕ ತಿಳಿಯಿರಿ
“ಒಬ್ಬನೇ ಸತ್ಯದೇವರಾದ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.
1, 2. (ಎ) ಶಾಸ್ತ್ರದಲ್ಲಿ ಉಪಯೋಗಿಸಿರುವಂತೆ, “ತಿಳಿ” ಮತ್ತು “ಜ್ಞಾನ” ದ ಅರ್ಥವೇನು? (ಬಿ) ಈ ಅರ್ಥವನ್ನು ಯಾವ ಉದಾಹರಣೆಗಳು ಸ್ಪಷ್ಟೀಕರಿಸುತ್ತವೆ?
ಕೇವಲ ಪರಿಚಯಸ್ಥನಾಗಿ ಒಬ್ಬನನ್ನು ತಿಳಿಯುವುದು ಯಾ ಒಂದು ಸಂಗತಿಯ ವಿಷಯದಲ್ಲಿ ಕೇವಲ ಬಾಹ್ಯ ಜ್ಞಾನವಿರುವುದು, ಶಾಸ್ತ್ರಗ್ರಂಥಗಳಲ್ಲಿ ಉಪಯೋಗಿಸಿರುವ “ತಿಳಿ” ಮತ್ತು “ಜ್ಞಾನ” ಎಂಬ ಪದಗಳ ಅರ್ಥದ ಗುರಿಯನ್ನು ಮುಟ್ಟುವುದಿಲ್ಲ. ಬೈಬಲಿನಲ್ಲಿ, “ಅನುಭವದ ಮೂಲಕ ತಿಳಿಯುವ ಕ್ರಿಯೆ,” “ವ್ಯಕ್ತಿಗಳ ಮಧ್ಯೆ ಭರವಸೆಯ ಒಂದು ಸಂಬಂಧ” ವನ್ನು ವ್ಯಕ್ತಪಡಿಸುವ ಒಂದು ಜ್ಞಾನವು ಇದರಲ್ಲಿ ಒಳಗೊಂಡಿದೆ. (ದ ನ್ಯೂ ಇಂಟರ್ನ್ಯಾಷನಲ್ ಡಿಕ್ಷನೆರಿ ಆಫ್ ನ್ಯೂ ಟೆಸ್ಟಮೆಂಟ್ ಥಿಯಾಲೊಜಿ) ಇದರಲ್ಲಿ, ಯೆಹೆಜ್ಕೇಲನ ಪುಸ್ತಕದಲ್ಲಿ, ದೇವರು ತಪ್ಪಿತಸ್ಥರ ವಿರುದ್ಧ “ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ” ಹೇಳಿ ನ್ಯಾಯತೀರಿಸಿದಂತಹ, ನಿರ್ದಿಷ್ಟ ಕೃತ್ಯಗಳನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ಯೆಹೋವನನ್ನು ತಿಳಿಯುವುದು ಸೇರಿದೆ.—ಯೆಹೆಜ್ಕೇಲ 38:23.
2 “ತಿಳಿ” ಮತ್ತು “ಜ್ಞಾನ”—ಇವುಗಳನ್ನು ಬಳಸಿರುವ ವಿವಿಧ ವಿಧಗಳನ್ನು ಕೆಲವು ಉದಾಹರಣೆಗಳ ಮೂಲಕ ಸೃಷ್ಟಗೊಳಿಸಸಾಧ್ಯವಿದೆ. ತನ್ನ ಹೆಸರಿನಲ್ಲಿ ವರ್ತಿಸಿದವರೆಂದು ಹೇಳಿಕೊಂಡವರಿಗೆ ಯೇಸು, “ನಿಮ್ಮ ಗುರುತು ಕಾಣೆನು” ಎಂದು ಹೇಳಿದಾಗ ಅವನಿಗೆ ಅವರ ಸಂಬಂಧವೇ ಇಲ್ಲವೆಂಬ ಅರ್ಥದಲ್ಲಿ ಹೇಳಿದನು. (ಮತ್ತಾಯ 7:23) ಎರಡನೆಯ ಕೊರಿಂಥ 5:21 ರಲ್ಲಿ ಕ್ರಿಸ್ತನಿಗೆ “ಪಾಪಜ್ಞಾನ” ಇರಲಿಲ್ಲವೆಂದು ಹೇಳುತ್ತದೆ. ಇದರ ಅರ್ಥವು ಅವನಿಗೆ ಪಾಪದ ಪ್ರಜ್ಞೆ ಇರಲಿಲ್ಲವೆಂದಲ್ಲ, ಅದರೊಂದಿಗೆ ಅವನು ವ್ಯಕ್ತಿಪರವಾಗಿ ಒಳಗೊಂಡಿರಲಿಲ್ಲ ಎಂದಾಗಿದೆ. ತದ್ರೀತಿ, ಯೇಸು: “ಒಬ್ಬನೇ ಸತ್ಯದೇವರಾದ ನಿನ್ನನ್ನೂ ನೀನು ಕಳುಹಿಸಿ ಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು” ಎಂದು ನುಡಿದಾಗ, ದೇವರ ಮತ್ತು ಕ್ರಿಸ್ತನ ಬಗೆಗೆ ಕೇವಲ ಕೊಂಚವನ್ನು ತಿಳಿಯುವುದಕ್ಕೂ ಹೆಚ್ಚಿನದ್ದು ಸೇರಿಕೊಂಡಿದೆ.—ಹೋಲಿಸಿರಿ ಮತ್ತಾಯ 7:21.
3. ಸತ್ಯದೇವರನ್ನು ಗುರುತಿಸುವ ಒಂದು ಗುರುತನ್ನು ಯೆಹೋವನು ಪ್ರದರ್ಶಿಸುತ್ತಾನೆಂದು ಯಾವುದು ರುಜುಪಡಿಸುತ್ತದೆ?
3 ಯೆಹೋವನ ಅನೇಕ ಗುಣಲಕ್ಷಣಗಳನ್ನು ಆತನ ವಾಕ್ಯವಾದ ಬೈಬಲಿನ ಮೂಲಕ ತಿಳಿಯಬಹುದು. ಅವುಗಳಲ್ಲೊಂದು, ನಿಷ್ಕೃಷ್ಟತೆಯಿಂದ ಪ್ರವಾದಿಸುವ ಸಾಮರ್ಥ್ಯವೇ. ಇದು ಸತ್ಯ ದೇವರ ಒಂದು ಗುರುತಾಗಿದೆ: “ತಮ್ಮ ನ್ಯಾಯಗಳನ್ನು ಮುಂದಕ್ಕೆ ತರಲಿ, ಭವಿಷ್ಯತ್ತನ್ನು ನಮಗೆ ತಿಳಿಸಲಿ; ನಡೆದ ಸಂಗತಿಗಳನ್ನು ವಿಶೇಷವಾಗಿ ಸೂಚಿಸಿರಿ. ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಗ್ರಹಿಸುವೆವು; ಅಥವಾ ಭವಿಷ್ಯತ್ತುಗಳನ್ನು ಅರುಹಿರಿ. ನೀವು ದೇವರುಗಳೆಂದು ನಮಗೆ ಅರಿವು ಹುಟ್ಟುವಂತೆ ಮುಂದಾಗತಕ್ಕವುಗಳನ್ನು ತಿಳಿಸಿರಿ.” (ಯೆಶಾಯ 41:22, 23) ಯೆಹೋವನು ಆತನ ವಾಕ್ಯದಲ್ಲಿ ಭೂಸೃಷ್ಟಿ ಮತ್ತು ಅದರ ಮೇಲಿರುವ ಜೀವದ ಕುರಿತು ಮೊದಲನೆಯ ವಿಷಯಗಳನ್ನು ತಿಳಿಸುತ್ತಾನೆ. ಮುಂದೆ ಆಗಲಿರುವ ಸಂಗತಿಗಳನ್ನು ಎಷ್ಟೋ ಹಿಂದೆಯೇ ಆತನು ಹೇಳಿದನು, ಮತ್ತು ಅವು ನೆರವೇರಿದವು. ಮತ್ತು ಈಗಲೂ ಆತನು “ಭವಿಷ್ಯತ್ತುಗಳನ್ನು,” ವಿಶೇಷವಾಗಿ, ಈ “ಕಡೇ ದಿವಸಗಳಲ್ಲಿ” ನಡೆಯುವ ಸಂಗತಿಗಳನ್ನು ‘ಅರುಹುತ್ತಾನೆ.’—2 ತಿಮೊಥೆಯ 3:1-5, 13; ಆದಿಕಾಂಡ 1:1-30; ಯೆಶಾಯ 53:1-12; ದಾನಿಯೇಲ 8:3-12, 20-25; ಮತ್ತಾಯ 24:3-21; ಪ್ರಕಟನೆ 6:1-8; 11:18.
4. ಯೆಹೋವನು ತನ್ನ ಶಕ್ತಿಯ ಗುಣವನ್ನು ಹೇಗೆ ಪ್ರದರ್ಶಿಸಿದ್ದಾನೆ, ಮತ್ತು ಪ್ರದರ್ಶಿಸಲಿರುವನು?
4 ಯೆಹೋವನ ಇನ್ನೊಂದು ಗುಣವು ಶಕ್ತಿ. ಆಕಾಶದಲ್ಲಿ ನಕ್ಷತ್ರಗಳು ಮಹಾ ಒಂದುಗೂಡಿಕೆಯ ಕುಲುಮೆಗಳಾಗಿ ಬೆಳಕನ್ನೂ ಶಾಖವನ್ನೂ ಕೊಡುವುದರಿಂದ ಇದು ಕಾಣಬರುತ್ತದೆ. ದಂಗೆಕೋರ ಮಾನವರು ಯಾ ದೇವದೂತರು ಯೆಹೋವನ ಪರಮಾಧಿಕಾರವನ್ನು ಪಂಥಾಹ್ವಾನಿಸುವಾಗ, ಆತನು ತನ್ನ ಶಕ್ತಿಯನ್ನು “ಯುದ್ಧಶೂರ” ನಂತೆ ಪ್ರಯೋಗಿಸಿ, ತನ್ನ ಸುನಾಮವನ್ನು ಮತ್ತು ನೀತಿಯ ಮಟ್ಟಗಳನ್ನು ಸಮರ್ಥಿಸುತ್ತಾನೆ. ಇಂಥ ಸಂದರ್ಭಗಳಲ್ಲಿ, ನೋಹನ ದಿನಗಳ ಜಲಪ್ರಳಯದಂತೆ, ಸೋದೋಮ್ ಮತ್ತು ಗೊಮೋರಗಳ ನಾಶದಂತೆ, ಮತ್ತು ಇಸ್ರಾಯೇಲನ್ನು ಕೆಂಪು ಸಮುದ್ರದಿಂದ ಬಿಡುಗಡೆ ಮಾಡಿದಂತೆ, ಆತನು ತನ್ನ ಶಕ್ತಿಯನ್ನು ವಿಪತ್ಕಾರಕವಾಗಿ ಪ್ರಯೋಗಿಸಲು ಹಿಂಜರಿಯುವುದಿಲ್ಲ. (ವಿಮೋಚನಕಾಂಡ 15:3-7; ಆದಿಕಾಂಡ 7:11, 12, 24; 19:24, 25) ದೇವರು ಬೇಗನೇ ಆತನ ಶಕ್ತಿಯನ್ನು, “ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿ” ಬಿಡಲು ಉಪಯೋಗಿಸುವನು.—ರೋಮಾಪುರ 16:20.
5. ಶಕ್ತಿಯೊಂದಿಗೆ, ಯಾವ ಗುಣವು ಸಹ ಯೆಹೋವನಲ್ಲಿದೆ?
5 ಆದರೆ ಈ ಅಮಿತವಾದ ಶಕಿಯ್ತಿದ್ದರೂ ಆತನಲ್ಲಿ ನಮ್ರತೆಯಿದೆ. ಕೀರ್ತನೆ 18:35, 36, (NW) ಹೇಳುವುದು: “ನಿನ್ನ ಸ್ವಂತ ನಮ್ರತೆಯು ನನ್ನನ್ನು ಮಹತ್ತಾಗಿ ಮಾಡುವುದು. ನೀನು ನನ್ನ ಹೆಜ್ಜೆಗಳ ಕೆಳಗೆ ಸಾಕಷ್ಟು ವಿಶಾಲವಾದ ಸ್ಥಳವನ್ನು ಮಾಡುವಿ.” ದೇವರ ನಮ್ರತೆಯು ಆತನನ್ನು, “ಆಕಾಶವನ್ನೂ ಭೂಮಿಯನ್ನೂ ನೋಡಲಿಕ್ಕೆ ಬಾಗು” ವಂತೆ ಮಾಡಿ, “ಆತನು ದೀನರನ್ನು ಧೂಳಿಯಿಂದ ಎಬ್ಬಿಸಿ ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ.”—ಕೀರ್ತನೆ 113:6, 7.
6. ಯೆಹೋವನ ಯಾವ ಗುಣವು ಜೀವರಕ್ಷಕವಾಗಿದೆ?
6 ಮಾನವನೊಂದಿಗೆ ವ್ಯವಹರಿಸಿದ್ದರಲ್ಲಿ ಯೆಹೋವನು ತೋರಿಸಿದ ಕರುಣೆ ಜೀವರಕ್ಷಕವಾಗಿದೆ. ಮನಸ್ಸೆಯು ಭಯಂಕರ ಘೋರಕೃತ್ಯಗಳನ್ನು ಮಾಡಿದ್ದರೂ ಅವನು ಕ್ಷಮಿಸಲ್ಪಟ್ಟಾಗ, ಎಂತಹ ಕರುಣೆ ತೋರಿಸಲ್ಪಟ್ಟಿತು! ಯೆಹೋವನು ಹೇಳುವುದು: “ನಾನು ದುಷ್ಟನಿಗೆ—ನೀನು ಸತ್ತೇ ಸಾಯುವಿ ಎಂದು ಹೇಳಲು ಅವನು ತನ್ನ ಪಾಪವನ್ನು ಬಿಟ್ಟು ನೀತಿನ್ಯಾಯಗಳನ್ನು ನಡಿಸುವ ಪಕ್ಷದಲ್ಲಿ . . . ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು; ನೀತಿನ್ಯಾಯಗಳನ್ನು ನಡಿಸುತ್ತಿದ್ದಾನಲ್ಲಾ; ಬಾಳೇ ಬಾಳುವನು.” (ಯೆಹೆಜ್ಕೇಲ 33:14, 16; 2 ಪೂರ್ವಕಾಲವೃತ್ತಾಂತ 33:1-6, 10-13) ಯೇಸು 77 ಬಾರಿ ಕ್ಷಮಿಸುವಂತೆ, ಒಂದು ದಿನಕ್ಕೆ ಏಳು ಬಾರಿಯೂ ಕ್ಷಮಿಸುವಂತೆ ಪ್ರೋತ್ಸಾಹಿಸಿದಾಗ, ಅವನು ಯೆಹೋವನನ್ನು ಪ್ರತಿಬಿಂಬಿಸಿದನು!—ಕೀರ್ತನೆ 103:8-14; ಮತ್ತಾಯ 18:21, 22; ಲೂಕ 17:4.
ಸಹಾನುಭೂತಿಯ ದೇವರು
7. ಯೆಹೋವನು ಗ್ರೀಕ್ ದೇವತೆಗಳಿಂದ ಹೇಗೆ ವಿಭಿನ್ನನು, ಮತ್ತು ಯಾವ ಅಮೂಲ್ಯ ಸುಯೋಗವು ನಮಗೆ ತೆರೆದಿದೆ?
7 ಎಪಿಕ್ಯೂರಿಯನರಂತಹ ಗ್ರೀಕ್ ತತ್ವಜ್ಞಾನಿಗಳು ದೇವತೆಗಳನ್ನು ನಂಬಿದರೂ ಅವರು ಮನುಷ್ಯನಲ್ಲಿ ಆಸಕ್ತಿ ತೋರಿಸಲು ಯಾ ಅವರ ಅನಿಸಿಕೆಗಳಿಂದ ಪ್ರಭಾವಿತರಾಗಲು ಭೂಮಿಯಿಂದ ತೀರಾ ದೂರದಲ್ಲಿದ್ದಾರೆಂದು ವೀಕ್ಷಿಸಿದರು. ಆದರೆ ಯೆಹೋವ ಮತ್ತು ಆತನ ನಂಬಿಗಸ್ತ ಸಾಕ್ಷಿಗಳ ಮಧ್ಯೆ ಈ ಸಂಬಂಧ ಎಷ್ಟು ಭಿನ್ನವಾಗಿದೆ! “ಯೆಹೋವನು ತನ್ನ ಪ್ರಜೆಗೆ ಪ್ರಸನ್ನನಾದನು.” (ಕೀರ್ತನೆ 149:4) ಜಲಪ್ರಳಯದ ಹಿಂದಿನ ದುಷ್ಟರು ಆತನು ವಿಷಾದ ಪಡುವಂತೆ, “ಹೃದಯದಲ್ಲಿ ನೊಂದು” ಕೊಳ್ಳುವಂತೆ ಮಾಡಿದರು. ಇಸ್ರಾಯೇಲು ಅದರ ಅಪನಂಬಿಗಸ್ತಿಕೆಯ ಕಾರಣ ಯೆಹೋವನಿಗೆ ನೋವನ್ನು ಮತ್ತು ವ್ಯಥೆಯನ್ನು ತಂದಿತು. ಕ್ರೈಸ್ತರು ತಮ್ಮ ಅವಿಧೇಯತೆಯ ಮೂಲಕ ಯೆಹೋವನ ಆತ್ಮವನ್ನು ನೋಯಿಸಬಲ್ಲರು; ಅವರ ನಂಬಿಗಸ್ತಿಕೆಯ ಮೂಲಕವೂ ಆತನಿಗೆ ಆನಂದವನ್ನು ತರಬಲ್ಲರು. ಭೂಮಿಯ ಕ್ಷುಲ್ಲಕನಾದ ಮನುಷ್ಯನು ವಿಶ್ವದ ಸೃಷ್ಟಿಕರ್ತನನ್ನು ನೋಯಿಸಬಲ್ಲನು ಯಾ ಸಂತೋಷಿಸಬಲ್ಲನೆಂದು ಯೋಚಿಸುವುದು ಎಷ್ಟು ವಿಸ್ಮಯಕಾರಕ! ಆತನು ನಮಗೆ ಮಾಡುವ ಸಕಲ ವಿಷಯಗಳ ವೀಕ್ಷಣದಲ್ಲಿ, ಆತನಿಗೆ ಸಂತೋಷವನ್ನು ತರುವ ಅಮೂಲ್ಯ ಸುಯೋಗ ನಮಗಿರುವುದು ಎಷ್ಟೊಂದು ಆಶ್ಚರ್ಯಕರ!—ಆದಿಕಾಂಡ 6:6; ಕೀರ್ತನೆ 78:40, 41; ಜ್ಞಾನೋಕ್ತಿ 27:11; ಯೆಶಾಯ 63:10; ಎಫೆಸ 4:30.
8. ಅಬ್ರಹಾಮನು ತನ್ನ ವಾಕ್ ಸರಳತೆಯನ್ನು ಯೆಹೋವನೊಂದಿಗೆ ಹೇಗೆ ಉಪಯೋಗಿಸಿದನು?
8 ಯೆಹೋವನ ಪ್ರೀತಿಯು ನಮಗೆ ಮಹಾ “ವಾಕ್ ಸರಳತೆ” ಯನ್ನು ಅನುಮತಿಸುತ್ತದೆಂದು ದೇವರ ವಾಕ್ಯ ತೋರಿಸುತ್ತದೆ. (1 ಯೋಹಾನ 4:17, NW) ಯೆಹೋವನು ಸೋದೋಮನ್ನು ನಾಶಮಾಡಲು ಬಂದಾಗ ಅಬ್ರಹಾಮನೊಂದಿಗೆ ನಡೆದ ಸಂಗತಿಯನ್ನು ಗಮನಿಸಿರಿ. ಅಬ್ರಹಾಮನು ಯೆಹೋವನಿಗೆ ಹೇಳಿದ್ದು: “ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ? ಒಂದು ವೇಳೆ ಈ ಊರೊಳಗೆ ಐವತ್ತು ಮಂದಿ ನೀತಿವಂತರಿದ್ದಾರು; ಅದರಲ್ಲಿ ಐವತ್ತು ಮಂದಿ ನೀತಿವಂತರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯಾ? . . . ನಿನ್ನಿಂದ ಎಂದಿಗೂ ಆಗಬಾರದು; ಸರ್ವಲೋಕಕ್ಕೆ ನ್ಯಾಯ ತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ.” ದೇವರೊಂದಿಗೆ ಆಡಲು ಎಂತಹ ಮಾತುಗಳಿವು! ಆದರೂ 50 ಮಂದಿ ನೀತಿವಂತರು ಅಲ್ಲಿರುವಲ್ಲಿ ಯೆಹೋವನು ಸೋದೋಮನ್ನು ರಕ್ಷಿಸಲು ಸಮ್ಮತಿಸಿದನು. ಅಬ್ರಹಾಮನು ಮುಂದುವರಿಯುತ್ತಾ ಆ ಸಂಖ್ಯೆಯನ್ನು 50 ರಿಂದ 20 ಕ್ಕೆ ಕೆಳಗಿಳಿಸಿದನು. ತಾನು ತೀರಾ ಒತ್ತಾಯಪಡಿಸುತ್ತಿದೇನ್ದೋ ಏನೋ ಎಂದು ಅವನು ಹೆದರಿದನು. ಅವನು ಹೇಳಿದ್ದು: “ಸ್ವಾಮೀ, ನಿನಗೆ ಸಿಟ್ಟಾಗಬಾರದು, ಇನ್ನು ಒಂದೇ ಸಾರಿ ಮಾತಾಡುತ್ತೇನೆ; ಒಂದು ವೇಳೆ ಹತ್ತು ಮಂದಿ ಸಿಕ್ಕಾರು.” ಪುನಃ ಯೆಹೋವನು ಒಪ್ಪಿಕೊಂಡನು: “ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುವೆನು, ನಾಶಮಾಡುವದಿಲ್ಲ.”—ಆದಿಕಾಂಡ 18:23-33.
9. ಅಬ್ರಹಾಮನು ಹಾಗೆ ಮಾತಾಡುವಂತೆ ಯೆಹೋವನು ಬಿಟ್ಟದ್ದೇಕೆ, ಮತ್ತು ನಾವು ಇದರಿಂದ ಏನು ಕಲಿಯಬಲ್ಲೆವು?
9 ಅಬ್ರಹಾಮನು ಅಷ್ಟು ವಾಕ್ ಸರಳತೆಯಿಂದ ಹಾಗೆ ಮಾತಾಡುವಂತೆ ಯೆಹೋವನು ಬಿಟ್ಟದ್ದೇಕೆ? ಒಂದು ಸಂಗತಿಯೇನಂದರೆ, ಅಬ್ರಹಾಮನ ಮನೋವ್ಯಥೆಗಳು ಯೆಹೋವನಿಗೆ ತಿಳಿದಿದ್ದವು. ಅಬ್ರಹಾಮನ ಸೋದರಳಿಯನಾದ ಲೋಟನು ಸೋದೋಮಿನಲ್ಲಿ ಜೀವಿಸುತ್ತಿದ್ದನೆಂದೂ ಅವನ ಭದ್ರತೆಯ ವಿಷಯದಲ್ಲಿ ಅಬ್ರಹಾಮನು ಚಿಂತಿತನಾಗಿದ್ದನೆಂದೂ ಆತನಿಗೆ ಗೊತ್ತಿತ್ತು. ಅಬ್ರಹಾಮನು ದೇವರ ಸ್ನೇಹಿತನೂ ಆಗಿದ್ದನು. (ಯಾಕೋಬ 2:23) ಯಾವನಾದರೂ ಗಡುಸಾಗಿ ನಮ್ಮೊಂದಿಗೆ ಮಾತಾಡುವಾಗ, ನಾವು ಅವನ ಮಾತುಗಳ ಹಿಂದಿರುವ ಅನಿಸಿಕೆಗಳನ್ನು ವಿವೇಚಿಸಿ—ವಿಶೇಷವಾಗಿ ಅವನು ನಮ್ಮ ಸ್ನೇಹಿತನಾಗಿದ್ದು ಯಾವುದೋ ರೀತಿಯ ಭಾವಾತ್ಮಕ ಒತ್ತಡದಲ್ಲಿರುವುದಾದರೆ—ಅದನ್ನು ಲಘುವಾಗಿ ಕಾಣುತ್ತೇವೊ? ನಮ್ಮ ವಾಕ್ ಸರಳತೆಯ ಉಪಯೋಗವನ್ನು ಯೆಹೋವನು, ಅಬ್ರಹಾಮನಿಗೆ ಮಾಡಿದಂತೆ, ಗ್ರಹಿಕೆಯಿಂದ ಕಾಣುವನೆಂದು ನೋಡುವುದು ನೆಮ್ಮದಿಯನ್ನು ಕೊಡುವುದಿಲ್ಲವೊ?
10. ಪ್ರಾರ್ಥನೆಯಲ್ಲಿ ವಾಕ್ ಸರಳತೆ ನಮಗೆ ಹೇಗೆ ಸಹಾಯ ಮಾಡುತ್ತದೆ?
10 ವಿಶೇಷವಾಗಿ ನಾವು ಆತನನ್ನು “ಪ್ರಾರ್ಥನೆಯನ್ನು ಕೇಳುವ” ವ್ಯಕ್ತಿಯಾಗಿ ಹುಡುಕುವಾಗ, ಈ ವಾಕ್ ಸರಳತೆಯು, ನಾವು ಅತಿಯಾದ ಕ್ಲೇಶದಿಂದ ಮತ್ತು ಭಾವಾತ್ಮಕವಾಗಿ ಕಳವಳಗೊಂಡಿರುವಾಗ ನಮ್ಮ ಆತ್ಮವನ್ನು ಆತನಿಗೆ ಬರಿದು ಮಾಡುವಂತೆ ಬಯಸುತ್ತೇವೊ? (ಕೀರ್ತನೆ 51:17; 65:2, 3) ಮಾತೇ ಸಿಕ್ಕದ ಸಮಯದಲ್ಲಿಯೂ, “ಪವಿತ್ರಾತ್ಮನು ತಾನೇ ಮಾತಿಲ್ಲದ ನರಳಾಟದಿಂದ ನಮಗೋಸ್ಕರ ಬೇಡಿಕೊಳ್ಳುತ್ತಾನೆ,” ಮತ್ತು ಯೆಹೋವನು ಆಲಿಸುತ್ತಾನೆ. ಆತನು ನಮ್ಮ ಯೋಚನೆಗಳನ್ನು ತಿಳಿಯಬಲ್ಲನು: “ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ. ಯೆಹೋವನೇ, ನನ್ನ ನಾಲಿಗೆಯ ಮಾತುಗಳಲ್ಲಿ ನೀನು ಅರಿಯದೆ ಇರುವಂಥದು ಒಂದೂ ಇಲ್ಲ.” ಹೀಗಿರುವುದಾದರೂ, ನಾವು ಕೇಳುತ್ತಾ, ಹುಡುಕುತ್ತಾ, ಮತ್ತು ತಟ್ಟುತ್ತಾ ಇರಬೇಕು.—ರೋಮಾಪುರ 8:26; ಕೀರ್ತನೆ 139:2, 4; ಮತ್ತಾಯ 7:7, 8.
11. ಯೆಹೋವನು ನಮ್ಮ ವಿಷಯ ನಿಜವಾಗಿಯೂ ಚಿಂತಿಸುತ್ತಾನೆಂದು ಹೇಗೆ ತೋರಿಸಲ್ಪಟ್ಟಿದೆ?
11 ಯೆಹೋವನು ಚಿಂತಿಸುತ್ತಾನೆ. ತಾನು ಸೃಷ್ಟಿಸಿದ ಜೀವಗಳಿಗೆ ಆತನು ಒದಗಿಸುತ್ತಾನೆ. “ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ. ನೀನು ಅವುಗಳಿಗೆ ಹೊತ್ತುಹೊತ್ತಿಗೆ ಆಹಾರ ಕೊಡುತ್ತೀ. ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.” (ಕೀರ್ತನೆ 145:15, 16) ಆತನು ಮರಗಳಲ್ಲಿರುವ ಪಕ್ಷಿಗಳನ್ನು ಹೇಗೆ ಉಣಿಸುತ್ತಾನೆಂದು ನೋಡಲು ನಾವು ಆಮಂತ್ರಿಸಲ್ಪಡುತ್ತೇವೆ. ಹೊಲದ ಲಿಲಿ ಹೂವುಗಳನ್ನು ನೋಡಿರಿ, ಆತನು ಅವುಗಳನ್ನು ಹೇಗೆ ಅಂದವಾಗಿ ತೊಡಿಸುತ್ತಾನೆಂದು ನೋಡಿರಿ. ದೇವರು ಅವುಗಳಿಗೆ ಮಾಡುವಷ್ಟನ್ನು ಮತ್ತು ಅದಕ್ಕಿಂತಲೂ ಹೆಚ್ಚಿನದನ್ನು ನಮಗಾಗಿ ಮಾಡುವನೆಂದು ಯೇಸು ಕೂಡಿಸಿ ಹೇಳಿದನು. ಆದುದರಿಂದ ನಾವು ಏಕೆ ವ್ಯಾಕುಲ ಪಡಬೇಕು? (ಧರ್ಮೋಪದೇಶಕಾಂಡ 32:10; ಮತ್ತಾಯ 6:26-32; 10:29-31) ಒಂದನೆಯ ಪೇತ್ರ 5:7, “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ,” ಎಂದು ಹೇಳಿ ನಮ್ಮನ್ನು ಆಮಂತ್ರಿಸುತ್ತದೆ.
“ಆತನ ಸ್ವರೂಪದ್ದೇ ಆದ ನಿಷ್ಕೃಷ್ಟ ಪ್ರಾತಿನಿಧ್ಯ”
12, 13. ಸೃಷ್ಟಿಯ ಮೂಲಕ ಮತ್ತು ಬೈಬಲಿನಲ್ಲಿ ದಾಖಲಿಸಿರುವ ಆತನ ಕೃತ್ಯಗಳ ಮೂಲಕವಲ್ಲದೆ, ಇನ್ನಾವ ರೀತಿಯಲ್ಲಿ ನಾವು ಆತನನ್ನು ನೋಡಿ, ಕೇಳಬಲ್ಲೆವು?
12 ನಾವು ಯೆಹೋವ ದೇವರನ್ನು ಆತನ ಸೃಷ್ಟಿಯ ಮೂಲಕ ನೋಡಬಲ್ಲೆವು; ಬೈಬಲಿನಲ್ಲಿ ಆತನ ಕಾರ್ಯಗಳ ಕುರಿತು ಓದುವ ಮೂಲಕ ನಾವು ಆತನನ್ನು ನೋಡಬಲ್ಲೆವು; ಯೇಸು ಕ್ರಿಸ್ತನ ವಿಷಯದಲ್ಲಿ ದಾಖಲೆಯಾಗಿರುವ ಮಾತುಗಳು ಮತ್ತು ಕಾರ್ಯಗಳ ಮೂಲಕವೂ ನಾವು ಆತನನ್ನು ನೋಡಬಲ್ಲೆವು. “ನನ್ನನ್ನು ನೋಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನು ನೋಡುವವನಾಗಿದ್ದಾನೆ,” ಎಂದು ಯೇಸು ತಾನೇ ಯೋಹಾನ 12:45 ರಲ್ಲಿ ಹೇಳುತ್ತಾನೆ. ಮತ್ತೆ, ಯೋಹಾನ 14:9 ರಲ್ಲಿ, “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ,” ಎಂದು ಹೇಳುತ್ತಾನೆ. ಕೊಲೊಸ್ಸೆ 1:15 ಹೇಳುವುದು: “[ಯೇಸು] ಅದೃಶ್ಯನಾದ ದೇವರ ಪ್ರತಿರೂಪನು.” ಇಬ್ರಿಯ 1:3, (NW) ತಿಳಿಯಪಡಿಸುವುದು: “[ಯೇಸು] ದೇವರ ಪ್ರಭಾವದ ಪ್ರತಿಬಿಂಬವೂ ಆತನ ಸ್ವರೂಪದ್ದೇ ಆದ ನಿಷ್ಕೃಷ್ಟ ಪ್ರಾತಿನಿಧ್ಯವೂ” ಆಗಿದ್ದಾನೆ.
13 ಯೆಹೋವನು ತನ್ನ ಕುಮಾರನನ್ನು ಪ್ರಾಯಶ್ಚಿತವ್ತನ್ನು ಒದಗಿಸಲು ಮಾತ್ರವಲ್ಲ, ನುಡಿ, ನಡೆಗಳಲ್ಲಿ ಅನುಕರಿಸಲ್ಪಡುವಂತೆ ಮಾದರಿಯನ್ನಿಡಲಿಕ್ಕಾಗಿಯೂ ಕಳುಹಿಸಿದನು. ಯೇಸು ದೇವರ ಮಾತುಗಳನ್ನಾಡಿದನು. ಅವನು ಯೋಹಾನ 12:50 ರಲ್ಲಿ ಹೇಳಿದ್ದು: “ನಾನು ಮಾತಾಡುವದನ್ನೆಲ್ಲಾ ತಂದೆ ನನಗೆ ಹೇಳಿದ ಮೇರೆಗೆ ಮಾತಾಡುತ್ತೇನೆ.” ಅವನು ತನ್ನ ಸ್ವಂತ ವಿಷಯವನ್ನೇ ಮಾಡದೆ ದೇವರು ಮಾಡಲು ಹೇಳಿದ್ದನ್ನು ಮಾಡಿದನು. ಯೋಹಾನ 5:30 ರಲ್ಲಿ ಅವನಂದದ್ದು: “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು.”—ಯೋಹಾನ 6:38.
14. (ಎ) ಯಾವ ದೃಶ್ಯಗಳು ಯೇಸುವು ಕರುಣೆಯಿಂದ ಪ್ರಚೋದಿಸಲ್ಪಡುವಂತೆ ಮಾಡಿದವು? (ಬಿ) ಯೇಸು ಮಾತಾಡಿದ ವಿಧವು ಜನರು ಗುಂಪಾಗಿ ಬಂದು ಅವನನ್ನು ಆಲಿಸುವಂತೆ ಏಕೆ ಮಾಡಿತು?
14 ಯೇಸು ಕುಷ್ಠ ಹಿಡಿದಿದ್ದ, ಶಕ್ತಿಗುಂದಿದ್ದ, ಕಿವುಡರಾಗಿದ್ದ, ಕುರುಡರಾಗಿದ್ದ, ದೆವ್ವ ಹಿಡಿದಿದ್ದ ಮತ್ತು ತಮ್ಮ ಸತ್ತಿದ್ದವರಿಗಾಗಿ ದುಃಖಿಸುತ್ತಿದ್ದ ಜನರನ್ನು ನೋಡಿದನು. ಕರುಣೆಯಿಂದ ಪ್ರಚೋದಿತನಾಗಿ, ಅವನು ರೋಗಿಗಳನ್ನು ಗುಣಮಾಡಿ, ಸತ್ತವರನ್ನು ಎಬ್ಬಿಸಿದನು. ಆತ್ಮಿಕವಾಗಿ ಸುಲಿಯಲ್ಪಟ್ಟು ಕೆಡವಲ್ಪಟ್ಟ ಜನಸ್ತೋಮವನ್ನು ನೋಡಿ, ಅವರಿಗೆ ಅನೇಕ ವಿಷಯಗಳನ್ನು ಕಲಿಸಲಾರಂಭಿಸಿದನು. ಅವನು ಸರಿಯಾದ ಮಾತುಗಳಿಂದ ಮಾತ್ರವಲ್ಲ, ತನ್ನ ಹೃದಯದಿಂದ ಬಂದ ಮತ್ತು ನೇರವಾಗಿ ಇತರರ ಹೃದಯಕ್ಕೆ ಹೋಗಿ ಅವರನ್ನು ಅವನ ಕಡೆಗೆ ಆಕರ್ಷಿಸಿದ, ಅವನನ್ನು ಆಲಿಸಲಿಕ್ಕಾಗಿ ಅವರು ಸಮಯಕ್ಕೆ ಮೊದಲೇ ದೇವಾಲಯಕ್ಕೆ ಬರುವಂತೆ ಮಾಡಿದ, ಅವನಿಗೆ ಅವರು ಅಂಟಿಕೊಳ್ಳುವಂತೆ ಮಾಡಿದ, ಅವರು ಆನಂದದಿಂದ ಅವನನ್ನು ಆಲಿಸುವಂತೆ ಮಾಡಿದ ಒಲಿಸುವ ಮಾತುಗಳಿಂದಲೂ ಕಲಿಸಿದನು. ಅವರು ಅವನನ್ನು ಆಲಿಸಲು ಗುಂಪು ಗುಂಪಾಗಿ ಕೂಡಿಬಂದು, ‘ಇನ್ನಾವ ಪುರುಷನೂ ಇವನಂತೆ ಮಾತಾಡಿದ್ದಿಲ್ಲ’ ಎಂದು ಹೇಳುತ್ತಿದ್ದರು. ಅವನ ಕಲಿಸುವ ವಿಧವನ್ನು ನೋಡಿ ಅವರು ಅತ್ಯಾಶ್ಚರ್ಯಪಟ್ಟರು. (ಯೋಹಾನ 7:46; ಮತ್ತಾಯ 7:28, 29; ಮಾರ್ಕ 11:18; 12:37; ಲೂಕ 4:22; 19:48; 21:38) ಮತ್ತು ಅವನ ವೈರಿಗಳು ಪ್ರಶ್ನೆಗಳಿಂದ ಅವನನ್ನು ಸಿಕ್ಕಿಸಿ ಹಾಕಲು ನೋಡಿದಾಗ, ಸ್ಥಿತಿಯನ್ನು ವಿಪರ್ಯಾಸ ಮಾಡಿ ಅವರ ಬಾಯಿ ಮುಚ್ಚಿಸಿದನು.—ಮತ್ತಾಯ 22:41-46; ಮಾರ್ಕ 12:34; ಲೂಕ 20:40.
15. ಯೇಸುವಿನ ಸಾರುವಿಕೆಯ ಕೇಂದ್ರ ವಿಷಯವು ಏನಾಗಿತ್ತು, ಮತ್ತು ಅದನ್ನು ಹಬ್ಬಿಸುವುದರಲ್ಲಿ ಅವನು ಇತರರನ್ನು ಎಷ್ಟರ ಮಟ್ಟಿಗೆ ಸೇರಿಸಿದನು?
15 “ಪರಲೋಕರಾಜ್ಯವು ಸಮೀಪಿಸಿತು” ಎಂದು ಅವನು ಘೋಷಿಸಿ, “ರಾಜ್ಯವನ್ನು ಪ್ರಥಮವಾಗಿ ಹುಡುಕು” ವಂತೆ ಅವನು ಆಲಿಸುವವರನ್ನು ಪ್ರೋತ್ಸಾಹಿಸಿದನು. ಇತರರು ಹೋಗಿ “ಪರಲೋಕ ರಾಜ್ಯವು ಸಮೀಪವಾಯಿತು” ಎಂದು ಸಾರುವಂತೆಯೂ, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡುವಂತೆಯೂ, “ಭೂಲೋಕದ ಕಟ್ಟಕಡೆಯ ವರೆಗೂ” ಕ್ರಿಸ್ತನ ಸಾಕ್ಷಿಗಳಾಗಿರುವಂತೆಯೂ ಅವನು ಕಳುಹಿಸಿದನು. ಇಂದು ಸುಮಾರು 45 ಲಕ್ಷ ಯೆಹೋವನ ಸಾಕ್ಷಿಗಳು ಆ ವಿಷಯಗಳನ್ನು ಮಾಡುತ್ತಾ ಅವನ ಹೆಜ್ಜೆಜಾಡಿನಲ್ಲಿ ನಡೆಯುತ್ತಿದ್ದಾರೆ.—ಮತ್ತಾಯ 4:17; 6:33; 10:7; 28:19; ಅ. ಕೃತ್ಯಗಳು 1:8.
16 ಯೆಹೋವನ ಗುಣವಾದ ಪ್ರೀತಿಯು ತೀವ್ರ ಪರೀಕೆಗ್ಷೊಳಗಾದದ್ದು ಹೇಗೆ, ಮತ್ತು ಅದು ಮಾನವ ಕುಲಕ್ಕಾಗಿ ಏನು ಸಾಧಿಸಿತು?
16 “ದೇವರು ಪ್ರೀತಿಸ್ವರೂಪಿಯು” ಎಂದು 1 ಯೋಹಾನ 4:8 ರಲ್ಲಿ ನಮಗೆ ಹೇಳಲಾಗಿದೆ. ಆತನ ಈ ಎದ್ದುಕಾಣುವ ಗುಣವು, ಆತನ ಏಕಜಾತ ಪುತ್ರನನ್ನು ಸಾಯಲಿಕ್ಕಾಗಿ ಆತನು ಭೂಮಿಗೆ ಕಳುಹಿಸಿದಾಗ ಭಾವಿಸಸಾಧ್ಯವಿರುವ ಯಾತನೆಗಳಲ್ಲಿ ಅತ್ಯಂತ ಯಾತನೆಯ ಪರೀಕೆಗ್ಷೆ ಹಾಕಲ್ಪಟ್ಟಿತು. ಈ ಪ್ರಿಯ ಪುತ್ರನು ಅನುಭವಿಸಿದ ಸಂಕಟ ಮತ್ತು ತನ್ನ ಸ್ವರ್ಗೀಯ ತಂದೆಗೆ ಆತನು ಮಾಡಿದ ಬಿನ್ನಹಗಳು, ತೀವ್ರ ಪರೀಕ್ಷೆಯಲ್ಲಿ ತಮ್ಮ ಸಮಗ್ರತೆಯನ್ನು ಭದ್ರವಾಗಿ ಹಿಡಿದುಕೊಳ್ಳುವ ಜನರು ಭೂಮಿಯ ಮೇಲೆ ಯೆಹೋವನಿಗಿರಲಾರರು ಎಂಬ ಸೈತಾನನ ಪಂಥಾಹ್ವಾನವನ್ನು ಯೇಸು ಸುಳ್ಳಾಗಿಸಿದರೂ, ಯೆಹೋವನಿಗೆ ಅತೀವ ಸಂಕಟ ಮತ್ತು ನೋವನ್ನು ಉಂಟುಮಾಡಿದಿರ್ದಬೇಕು. ಯೇಸುವಿನ ಯಜ್ಞದ ಮಹತ್ವವನ್ನೂ ನಾವು ಗಣ್ಯ ಮಾಡಬೇಕು, ಏಕೆಂದರೆ ದೇವರು ಅವನನ್ನು ನಮಗಾಗಿ ಸಾಯಲಿಕ್ಕಾಗಿ ಕಳುಹಿಸಿದನು. (ಯೋಹಾನ 3:16) ಇದು ಸುಗಮವಾದ, ಫಕ್ಕನೆ ಬಂದ ಮರಣವಾಗಿರಲಿಲ್ಲ. ದೇವರಿಗೂ ಯೇಸುವಿಗೂ ಇದಕ್ಕೆ ತಗಲಿದ ವೆಚ್ಚವನ್ನು ಗಣ್ಯಮಾಡಲು ಮತ್ತು ಹೀಗೆ ಅವರ ತ್ಯಾಗದ ಮಹತ್ವವನ್ನು ನಾವು ಗ್ರಹಿಸುವಂತೆ ಮಾಡಲು, ಕಾರ್ಯವಿಧಾನಗಳ ಬೈಬಲಿನ ದಾಖಲೆಯನ್ನು ಪರೀಕ್ಷಿಸೋಣ.
17-19. ಯೇಸು ತನ್ನ ಮುಂದಿದ್ದ ಉಗ್ರ ಪರೀಕ್ಷೆಯನ್ನು ಹೇಗೆ ವರ್ಣಿಸಿದನು?
17 ಎಷ್ಟು ಕೊಂಚವೆಂದರೂ ನಾಲ್ಕು ಸಲ, ಯೇಸು ತನ್ನ ಅಪೊಸ್ತಲರಿಗೆ ಮುಂದೆ ಸಂಭವಿಸಲಿರುವುದನ್ನು ವರ್ಣಿಸಿದನು. ಅದು ಸಂಭವಿಸುವುದಕ್ಕೆ ಕೆಲವೇ ದಿನಗಳ ಮೊದಲು, ಅವನು ಹೇಳಿದ್ದು: “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ. ಮತ್ತು ಮನುಷ್ಯಕುಮಾರನನ್ನು ಮಹಾಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಹಿಡುಕೊಡುವರು. ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅನ್ಯರ ಕೈಗೆ ಒಪ್ಪಿಸುವರು. ಇವರು ಅವನನ್ನು ಅಪಹಾಸ್ಯ ಮಾಡುವರು, ಅವನ ಮೇಲೆ ಉಗುಳುವರು, ಅವನನ್ನು ಕೊರಡೆಗಳಿಂದ ಹೊಡೆಯುವರು, ಕೊಂದುಹಾಕುವರು. ಅವನು ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವನು.”—ಮಾರ್ಕ 10:33, 34.
18 ರೋಮನ್ ಚಾವಟಿಯ ಭೀಕರತೆಯನ್ನು ತಿಳಿದಿದ್ದ ಯೇಸುವಿಗೆ ತನ್ನ ಮುಂದಿರುವ ಸಂಗತಿಯ ಒತ್ತಡದ ಅರಿವಾಯಿತು. ಹೊಡೆಯಲು ಉಪಯೋಗಿಸುತ್ತಿದ್ದ ಚಾವಟಿಯ ಚರ್ಮದ ಬಾರಿನಲ್ಲಿ ಲೋಹದ ಚೂರುಗಳು ಮತ್ತು ಕುರಿಯ ಎಲುಬಿನ ಚೂರುಗಳು ನಾಟಿಸಲ್ಪಟ್ಟಿದ್ದವು. ಈ ಕಾರಣದಿಂದ ಹೊಡೆತ ಮುಂದುವರಿದಾಗ ಬೆನ್ನು ಮತ್ತು ಕಾಲುಗಳು ರಕ್ತ ಸುರಿಯುವ ಮಾಂಸದ ಚಿಂದಿಯಾಗುತ್ತಿದ್ದವು. ತಿಂಗಳುಗಳ ಮೊದಲೇ, ಮುಂದಿದ್ದ ಈ ಉಗ್ರ ಪರೀಕ್ಷೆ ಅವನಲ್ಲಿ ಹುಟ್ಟಿಸುತ್ತಿದ್ದ ಭಾವಾತ್ಮಕ ಒತ್ತಡವನ್ನು, ಲೂಕ 12:50 ರಲ್ಲಿ ನಾವು ಓದುವಂತೆ, ಹೀಗೆ ಹೇಳಿ ಸೂಚಿಸಿದನು: “ಆದರೆ ನಾನು ಹೊಂದತಕ್ಕ ದೀಕ್ಷಾಸ್ನಾನ ಒಂದುಂಟು. ಅದು ನೆರವೇರುವ ತನಕ ನಾನು ಎಷ್ಟೋ ಬಿಕ್ಕಟ್ಟಿನಲ್ಲಿದ್ದೇನೆ.“
19 ಸಮಯ ಹತ್ತರಿಸಿದಂತೆ ಒತ್ತಡ ಜಾಸ್ತಿಯಾಯಿತು. ಅವನು ತನ್ನ ಸ್ವರ್ಗೀಯ ತಂದೆಗೆ ಅದರ ಕುರಿತು ಮಾತಾಡಿದನು: “ಈಗ ನನ್ನ ಪ್ರಾಣವು ತತ್ತರಿಸುತ್ತದೆ; ಮತ್ತು ನಾನೇನು ಹೇಳಲಿ? ತಂದೆಯೇ, ಈ ಕಾಲದೊಳಗಿಂದ ನನ್ನನ್ನು ತಪ್ಪಿಸು. ಆದರೆ ಇದಕ್ಕಾಗಿಯೇ ಈ ಕಾಲ ಸೇರಿದೆನು.” (ಯೋಹಾನ 12:27) ತನ್ನ ಏಕಜಾತ ಪುತ್ರನ ಈ ಬಿನ್ನಹದಿಂದ ಯೆಹೋವನ ಮೇಲೆ ಎಂಥ ಪರಿಣಾಮವಾಗಿದ್ದಿರಬೇಕು. ಗೆತ್ಸೇಮನೆಯಲ್ಲಿ ಯೇಸು ತನ್ನ ಮರಣಕ್ಕೆ ಕೆಲವೇ ತಾಸುಗಳ ಮೊದಲು ತೀರಾ ಬಾಧೆಪಡುವವನಾಗಿ ಪೇತ್ರ, ಯಾಕೋಬ ಮತ್ತು ಯೋಹಾನರಿಗೆ ಹೀಗಂದನು: “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ.” ನಿಮಿಷಗಳಾನಂತರ, ಅವನು ಈ ವಿಷಯದಲ್ಲಿ ತನ್ನ ಅಂತಿಮ ಪ್ರಾರ್ಥನೆಯನ್ನು ಯೆಹೋವನಿಗೆ ಮಾಡಿದನು: “ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು; ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ ಅಂದನು. ಆವನು ಮನೋವ್ಯಥೆಯುಳ್ಳವನಾಗಿ ಇನ್ನೂ ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ ಆವನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು.” (ಮತ್ತಾಯ 26:38; ಲೂಕ 22:42, 44) ವೈದ್ಯಕೀಯವಾಗಿ ಹೀಮಟಿಡ್ರೋಸಿಸ್ ಎಂದು ಪರಿಚಿತವಾಗಿರುವ ಸಂಗತಿ ಇದಾಗಿದ್ದಿರಬಹುದು. ಇದು ವಿರಳವಾದರೂ ತೀರಾ ಭಾವಾತ್ಮಕ ಸ್ಥಿತಿಗಳಲ್ಲಿ ಸಂಭವಿಸಬಲ್ಲದು.
20. ಅವನ ಉಗ್ರ ಪರೀಕ್ಷೆಯನ್ನು ಪಾರಾಗಲು ಯೇಸುವಿಗೆ ಯಾವುದು ಸಹಾಯ ಮಾಡಿತು?
20 ಗೆತ್ಸೇಮನೆಯಲ್ಲಿ ಈ ಸಮಯದ ಬಗ್ಗೆ ಇಬ್ರಿಯ 5:7 ಹೇಳುವುದು: “ಕ್ರಿಸ್ತನು ತಾನು ಭೂಲೋಕದಲ್ಲಿದ್ದಾಗ ಮರಣಕ್ಕೆ ತಪ್ಪಿಸಿ ಕಾಪಾಡ ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.” ಆದರೆ “ಮರಣಕ್ಕೆ ತಪ್ಪಿಸಿ ಕಾಪಾಡ ಶಕ್ತನಾಗಿರುವಾತನು” ಅವನನ್ನು ಕಾಪಾಡದೆ ಇದ್ದುದರಿಂದ, ಅವನ ಪ್ರಾರ್ಥನೆ ಸಮ್ಮತಿಸೂಚಕವಾಗಿ ಕೇಳಲ್ಪಟ್ಟದ್ದು ಯಾವ ಅರ್ಥದಲ್ಲಿ? ಲೂಕ 22:43 ಉತ್ತರ ಹೇಳುವುದು: “ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು ಆತನನ್ನು ಬಲಪಡಿಸಿದನು.” ದೇವರು ಕಳುಹಿಸಿದ ದೇವದೂತನು ಆ ಉಗ್ರ ಪರೀಕ್ಷೆಯನ್ನು ಯೇಸು ತಾಳುವಂತೆ ಅವನನ್ನು ಬಲಪಡಿಸುವ ಅರ್ಥದಲ್ಲಿ ಆ ಪ್ರಾರ್ಥನೆ ಉತ್ತರಿಸಲ್ಪಟ್ಟಿತು.
21. (ಎ) ಯೇಸು ಈ ಉಗ್ರ ಪರೀಕ್ಷೆಯಲ್ಲಿ ವಿಜಯಿಯಾದನೆಂದು ಯಾವುದು ತೋರಿಸುತ್ತದೆ? (ಬಿ) ನಮ್ಮ ಪರೀಕ್ಷೆಗಳು ತೀಕ್ಷೈವಾಗುವಾಗ, ನಾವು ಹೇಗೆ ಮಾತಾಡಲು ಶಕ್ತರಾಗಬಯಸುವೆವು?
21 ನಡೆದ ಫಲಿತಾಂಶದಿಂದ ಇದು ವ್ಯಕ್ತವಾಯಿತು. ಅವನ ಆಂತರಿಕ ಹೋರಾಟವು ಮುಗಿದ ಬಳಿಕ, ಯೇಸು ಎದ್ದು ಪೇತ್ರ, ಯಾಕೋಬ, ಮತ್ತು ಯೋಹಾನರ ಬಳಿಗೆ ಹೋಗಿ, “ಏಳಿರಿ, ಹೋಗೋಣ” ಎಂದು ಹೇಳಿದನು. (ಮಾರ್ಕ 14:42) ಅವನು ಕಾರ್ಯತಃ ಹೇಳಿದ್ದೇನಂದರೆ, ‘ನಾನು ಒಂದು ಮುದ್ದಿನಿಂದ ವಂಚಿಸಲ್ಪಡಲು, ಜನಜಂಗುಳಿಯಿಂದ ದಸ್ತಗಿರಿ ಮಾಡಲ್ಪಡಲು, ಅಶಾಸನಬದ್ಧವಾಗಿ ನ್ಯಾಯವಿಚಾರಿಸಲ್ಪಡಲು, ತಪ್ಪಾಗಿ ದಂಡಿಸಲ್ಪಡಲು ಹೋಗುವಂತೆ ಬಿಡಿರಿ. ಕೆಣಕಲ್ಪಡಲು, ಉಗುಳಲ್ಪಡಲು, ಚಾವಟಿಯಿಂದ ಹೊಡೆಯಲ್ಪಡಲು, ಮತ್ತು ಶೂಲಕ್ಕೆ ಹೊಡೆಯಲ್ಪಡಲು ಹೋಗುವಂತೆ ಬಿಡಿರಿ.’ ಅವನು ಆರು ತಾಸು, ಅತಿ ಯಾತನೆಯ ನೋವಿನಿಂದ, ಅಂತ್ಯದ ತನಕ ತಾಳುತ್ತಾ ಅಲ್ಲಿ ತೂಗಾಡಿದನು. ಅವನು ಸಾಯುತ್ತಿದ್ದಾಗ, “ತೀರಿತು” ಎಂದು ವಿಜಯೋತ್ಸವದಿಂದ ಕೂಗಿದನು. (ಯೋಹಾನ 19:30) ಅವನು ದೃಢತೆ ತೋರಿಸಿದ್ದನು ಮತ್ತು ಯೆಹೋವನ ಪರಮಾಧಿಕಾರವನ್ನು ಸಮರ್ಥಿಸುವುದರಲ್ಲಿ ತನ್ನ ಸಮಗ್ರತೆಯನ್ನು ರುಜು ಮಾಡಿದ್ದನು. ಯೆಹೋವನು ಅವನನ್ನು ಯಾವುದಕ್ಕಾಗಿ ಭೂಮಿಗೆ ಕಳುಹಿಸಿದ್ದನೋ ಆ ಸಕಲ ಸಂಗತಿಗಳನ್ನು ಅವನು ಪೂರೈಸಿದ್ದನು. ನಾವು ಸಾಯುವಾಗ ಯಾ ಅರ್ಮಗೆದೋನ್ ಹೊಡೆಯುವಾಗ, ಯೆಹೋವನಿಗೆ ನಮ್ಮ ಸಮರ್ಪಣೆಯ ಕುರಿತು, “ತೀರಿತು” ಎಂದು ನಾವು ಹೇಳಶಕ್ತರಾಗುವೆವೊ?
22. ಯೆಹೋವನ ಜ್ಞಾನದ ಹರಡುವಿಕೆಯ ವಿಸ್ತಾರ್ಯವನ್ನು ಯಾವುದು ತೋರಿಸುತ್ತದೆ?
22 ಹೇಗಿದ್ದರೂ, ವೇಗಗತಿಯಿಂದ ಸಮೀಪಿಸುತ್ತಿರುವ ಯೆಹೋವನ ಕ್ಲುಪ್ತ ಸಮಯದಲ್ಲಿ, “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ” ಸಕಲ “ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವುದು.”—ಯೆಶಾಯ 11:9.
ನಿಮಗೆ ನೆನಪಿದೆಯೆ?
▫ ತಿಳಿಯುವುದು ಮತ್ತು ಜ್ಞಾನವಿರುವುದು ಎಂಬುದರ ಅರ್ಥವೇನು?
▫ ಯೆಹೋವನ ವಾಕ್ಯದಲ್ಲಿ ಆತನ ಕರುಣೆ ಮತ್ತು ಕ್ಷಮೆ ಹೇಗೆ ತೋರಿಸಲ್ಪಟ್ಟಿವೆ?
▫ ಅಬ್ರಹಾಮನು ತನ್ನ ವಾಕ್ ಸರಳತೆಯನ್ನು ಯೆಹೋವನೊಂದಿಗೆ ಹೇಗೆ ಉಪಯೋಗಿಸಿದನು?
▫ ನಾವು ಯೇಸುವನ್ನು ಯಾಕೆ ನೋಡಬಲ್ಲೆವು, ಮತ್ತು ಅವನಲ್ಲಿ ಯೆಹೋವನ ಗುಣಗಳನ್ನು ಕಾಣಬಲ್ಲೆವು?