ಒಂದು ಅಪೂರ್ವ ಕ್ರೈಸ್ತ ಪರಂಪರೆ
ಬ್ಲಾಸಮ್ ಬ್ರಾಂಟ್‌ರಿಂದ ಹೇಳಲ್ಪಟ್ಟಂತೆ
ನಾನು ಹುಟ್ಟಿದ ದಿನ ಅಂದರೆ ಜನವರಿ 17, 1923 ರಂದು ಸಾನ್ ಆ್ಯಂಟೊನಿಯೊ, ಟೆಕ್ಸಾಸ್‌ನಲ್ಲಿ ಹಿಮ ಬೀಳುತ್ತಿತ್ತು. ಹೊರಗೆ ಬಹಳ ಚಳಿಯಿತ್ತು, ಆದರೆ ಪ್ರೀತಿಯ ಕ್ರೈಸ್ತ ಹೆತ್ತವರಾದ ಜಡ್ಜ್ ಮತ್ತು ಹೆಲೆನ್ ನಾರಿಸ್‌ರ ಬೆಚ್ಚಗೆನ ತೋಳತೆಕ್ಕೆಯೊಳಗೆ ನಾನು ಸ್ವಾಗತಿಸಲ್ಪಟ್ಟಿದೆನ್ದು. ನನ್ನ ಅತ್ಯಾರಂಭದ ಸ್ಮರಣೆಗಳಿಂದ, ನನ್ನ ಹೆತ್ತವರು ಮಾಡಿದ ಎಲ್ಲವೂ ಯೆಹೋವ ದೇವರ ಅವರ ಆರಾಧನೆಯ ಮೇಲೆ ಕೇಂದ್ರಿತವಾಗಿತ್ತು.
ಇಸವಿ 1910 ರಲ್ಲಿ ನನ್ನ ತಾಯಿ ಎಂಟು ವರ್ಷದವರಾಗಿದ್ದಾಗ, ಅವರ ಹೆತ್ತವರು ಪಿಟ್ಸ್‌ಬರ್ಗ್, ಪೆನ್ಸಿಲ್‌ವೇನಿಯದ ಹತ್ತಿರದಿಂದ ಆಲ್ವಿನ್, ಟೆಕ್ಸಾಸ್‌ನ ಹೊರಗಣ ಒಂದು ಹೊಲಮನೆಗೆ ಸ್ಥಳ ಬದಲಾಯಿಸಿದರು. ಅಲ್ಲಿ ಒಬ್ಬ ನೆರೆಯವರಿಂದ ಬೈಬಲ್ ಸತ್ಯಗಳನ್ನು ಕಲಿಯುವುದರಲ್ಲಿ ಅವರು ಉಲ್ಲಾಸಿಸಿದರು. ತಮ್ಮ ಉಳಿದ ಜೀವಿತವನ್ನು ಜನರನ್ನು ರಾಜ್ಯ ನಿರೀಕೆಯಲ್ಲಿ ಆಸಕ್ತಿಹುಟ್ಟಿಸುವುದಕ್ಕೆ ಅಮ್ಮ ಹುಡುಕುತ್ತಾ, ಕಳೆದರು. ಕುಟುಂಬವು ಹ್ಯೂಸ್ಟನ್, ಟೆಕ್ಸಾಸ್‌ಗೆ ಸ್ಥಳ ಬದಲಾಯಿಸಿದ ಅನಂತರ, 1912 ರಲ್ಲಿ ಅವರಿಗೆ ದೀಕ್ಷಾಸ್ನಾನವಾಯಿತು.
ತಾಯಿ ಮತ್ತು ಅವಳ ಹೆತ್ತವರು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್ ಟಿ. ರಸ್ಸಲ್‌ರನ್ನು ಮೊದಲಾಗಿ ಭೇಟಿಯಾದದ್ದು, ಹ್ಯೂಸ್ಟನ್‌ನಲ್ಲಿ ಅವರ ಸಭೆಯನ್ನು ಅವರು ಸಂದರ್ಶಿಸಿದಾಗಲೇ. ಆಗ ಪಿಲ್‌ಗ್ರಿಮ್ಸ್ [ಯಾತ್ರಿಕರು] ಎಂದು ಕರೆಯಲ್ಪಡುತ್ತಿದ್ದ ಸೊಸೈಟಿಯ ಸಂಚಾರ ಪ್ರತಿನಿಧಿಗಳನ್ನು, ಕುಟುಂಬವು ಆಗಿಂದಾಗ್ಗೆ ತಮ್ಮ ಮನೆಯಲ್ಲಿ ಸತ್ಕರಿಸುತ್ತಿತ್ತು. ಕೆಲವು ವರ್ಷಗಳ ಬಳಿಕ ಅಮ್ಮ ಅವರ ಹೆತ್ತವರೊಂದಿಗೆ ಚಿಕಾಗೊ, ಇಲಿನ್ಲೊಯಿಸ್‌ಗೆ ಸ್ಥಳ ಬದಲಾಯಿಸಿದರು, ಮತ್ತು ಸಹೋದರ ರಸ್ಸಲರು ಅಲ್ಲಿ ಸಹ ಸಭೆಯನ್ನು ಸಂದರ್ಶಿಸುತ್ತಿದ್ದರು.
ಇಸವಿ 1918 ರಲ್ಲಿ ಅಜಿಗ್ಜೆ ಸ್ಪಾನಿಷ್ ಫ್ಲೂ ತಗಲಿತು, ಮತ್ತು ಅವರ ಆರೋಗ್ಯದ ಮೇಲೆ ಅದರ ದುರ್ಬಲಕರ ಪರಿಣಾಮದಿಂದಾಗಿ, ಅವರು ಹೆಚ್ಚು ಬೆಚ್ಚಗೆನ ತಾಪಮಾನದಲ್ಲಿ ಜೀವಿಸುವುದನ್ನು ಡಾಕ್ಟರರು ಶಿಫಾರಸ್ಸು ಮಾಡಿದರು. ಅಜ್ಜ ಪುಲ್ಲ್‌ಮ್ಯಾನ್ ಟ್ರೈನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ, 1919 ರಲ್ಲಿ ಅವರು ಹಿಂದೆ ಟೆಕ್ಸಾಸ್‌ಗೆ ವರ್ಗಾವಣೆಯನ್ನು ಪಡಕೊಂಡರು. ಅಲ್ಲಿ, ಸಾನ್ ಆ್ಯಂಟೊನಿಯೊದಲ್ಲಿ, ಜಡ್ಜ್ ನಾರಿಸ್ ಎಂಬ ಹೆಸರಿನ ಒಬ್ಬ ಯುವಕನಾದ, ಹುರುಪಿನ ಸಭಾ ಸದಸ್ಯನನ್ನು ಅಮ್ಮ ಭೇಟಿಯಾದರು. ಅವರು ಆ ಕೂಡಲೆ ಒಬ್ಬರಿಗೊಬ್ಬರು ಆಕರ್ಷಿತರಾದರು, ಮತ್ತು ಸಕಾಲದಲ್ಲಿ ಅವರಿಗೆ ವಿವಾಹವಾಯಿತು, ಮತ್ತು ಜಡ್ಜ್ ನನ್ನ ತಂದೆಯಾದರು.
ತಂದೆ ಬೈಬಲ್ ಸತ್ಯ ಕಲಿಯುತ್ತಾರೆ
ಜಡ್ಜ್ [ನ್ಯಾಯಾಧೀಶ]ಗೆ ಅವನ ಅಸಾಮಾನ್ಯ ಹೆಸರು ಹುಟ್ಟಿನಲ್ಲೇ ಕೊಡಲ್ಪಟ್ಟಿತು. ಅವರ ಅಪ್ಪ ಅವರನ್ನು ಮೊದಲು ನೋಡಿದಾಗ ಅಂದದ್ದು: “ಆ ಮಗುವು ನ್ಯಾಯಾಧೀಶ [ಜಡ್ಜ್] ನಂತೆ ವಿಚಾರಪರನಾಗಿ ಕಾಣುತ್ತಾನೆ,” ಮತ್ತು ಅದೇ ಅವರ ಹೆಸರಾಯಿತು. ಇಸವಿ 1917 ರಲ್ಲಿ ಅಪ್ಪ 16 ವರ್ಷದವರಾದಾಗ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಮುದ್ರಿಸಲ್ಪಟ್ಟ, ಮೃತರು ಎಲ್ಲಿದ್ದಾರೆ? ಮತ್ತು ಆತ್ಮವೆಂದರೇನು? ಎಂಬ ಕಿರುಹೊತ್ತಗೆಗಳನ್ನು ಅವರಿಗೆ ಕೊಡಲಾಯಿತು. ಅಪ್ಪನ ತಂದೆಯವರು ಎರಡು ವರ್ಷಗಳ ಹಿಂದೆಯೆ ತೀರಿಕೊಂಡಿದ್ದರು, ಮತ್ತು ಮೃತರ ಸ್ಥಿತಿಯ ಕುರಿತು ಅವರು ಹುಡುಕುತ್ತಲಿದ್ದ ಉತ್ತರಗಳನ್ನು ಆ ಕಿರುಹೊತ್ತಗೆಗಳು ಅವರಿಗೆ ಒದಗಿಸಿದವು. ಆಮೇಲೆ ಬೇಗನೆ ಅವರು, ಆಗ ಬೈಬಲ್ ವಿದ್ಯಾರ್ಥಿಗಳೆಂದು ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗ ತೊಡಗಿದರು.
ಅಪ್ಪ ಆ ಕೂಡಲೆ ಸಭಾ ಚಟುವಟಿಕೆಗಳಲ್ಲಿ ಪಾಲುಗಾರರಾಗಲು ಬಯಸಿದರು. ತಾನು ಸಾರಲು ಸಾಧ್ಯವಾಗಿರುವ ಒಂದು ಟೆರಿಟೊರಿಯನ್ನು ಪಡಕೊಂಡು, ಕಿರುಹೊತ್ತಗೆಗಳನ್ನು ಹಂಚಲು ಶಾಲಾನಂತರ ಸೈಕಲಿನಲ್ಲಿ ಅಲ್ಲಿಗೆ ಸವಾರಿ ಮಾಡುತ್ತಿದ್ದರು. ರಾಜ್ಯ ನಿರೀಕ್ಷೆಯನ್ನು ಹಂಚುವುದರಲ್ಲಿ ಅವರು ಪೂರ್ಣವಾಗಿ ತಲ್ಲೀನರಾದರು, ಮತ್ತು ಮಾರ್ಚ್ 24, 1918 ರಲ್ಲಿ, ಅವರು ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸಂಕೇತವಾಗಿ ಸೂಚಿಸಿದರು.
ಮಾರಣೆಯ ವರ್ಷ ಅಮ್ಮ ಸಾನ್ ಆ್ಯಂಟೊನಿಯೊಕ್ಕೆ ಸ್ಥಳ ಬದಲಾಯಿಸಿದಾಗ, ಯಾವುದು ತಾನು ಕಂಡಿರುವುವುಗಳಲ್ಲಿ “ಅತ್ಯಂತ ಮಧುರ ಮಂದಹಾಸವು ಮತ್ತು ಅತಿ ನೀಲವರ್ಣದ ಕಣ್ಣುಗಳು” ಎಂದು ತಂದೆ ಬಣ್ಣಿಸಿದರೋ ಅದಕ್ಕೆ ಆಕರ್ಷಿತರಾದರು. ತಾವು ಮದುವೆಯಾಗ ಬಯಸುತ್ತೇವೆಂದು ಅವರು ಬಲುಬೇಗನೆ ತಿಳಿಯಪಡಿಸಿದರು, ಆದರೆ ತಾಯಿಯ ಹೆತ್ತವರನ್ನು ಮನವೊಪ್ಪಿಸಲು ಅವರಿಗೆ ಕಷ್ಟವಾಯಿತು. ಆದರೂ, ಎಪ್ರಿಲ್ 15, 1921 ರಲ್ಲಿ ಮದುವೆ ನಡೆಯಿತು. ಇಬ್ಬರ ಧ್ಯೇಯವೂ ಪೂರ್ಣ ಸಮಯದ ಶುಶ್ರೂಷೆಯಾಗಿತ್ತು.
ಶುಶ್ರೂಷೆಯಲ್ಲಿ ಬೇಗನೇ ಮುಂತೊಡಗುವಿಕೆ
ಅಮ್ಮ ಮತ್ತು ಅಪ್ಪ 1922 ರಲ್ಲಿ ಸೀಡರ್ ಪಾಯಿಂಟ್, ಒಹಾಯೊ ಅಧಿವೇಶನವನ್ನು ಹಾಜರಾಗಲು ಯೋಚಿಸುವುದರಲ್ಲಿ ಕಾರ್ಯಮಗ್ನರಾಗಿದ್ದಾಗ, ಅಮ್ಮ ಗರ್ಭಿಣಿಯೆಂದು ಅವರಿಗೆ ಗೊತ್ತಾಯಿತು. ನನ್ನ ಜನನದ ಅನಂತರ ಬೇಗನೆ, ಅಪ್ಪ ಕೇವಲ 22 ವಯಸ್ಸಿನವರಿದ್ದಾಗ, ಅವರು ಸಭೆಯ ಸೇವಾ ಡೈರೆಕ್ಟರರಾಗಿ ನೇಮಕಹೊಂದಿದರು. ಅವರು ಕ್ಷೇತ್ರ ಸೇವೆಯ ಎಲ್ಲಾ ಏರ್ಪಾಡುಗಳನ್ನು ಮಾಡುತ್ತಿದ್ದರೆಂದು ಇದರ ಅರ್ಥವಾಗಿತ್ತು. ನನ್ನ ಜನನದ ಕೇವಲ ಕೆಲವೇ ವಾರಗಳೊಳಗೆ, ನನ್ನ ಅಮ್ಮ ನನ್ನನ್ನು ಮನೆ-ಮನೆಯ ಶುಶ್ರೂಷೆಗೆ ಒಯ್ದರು. ವಾಸ್ತವದಲ್ಲಿ, ನನ್ನ ಅಜ್ಜ-ಅಜಿಯ್ಜಂದಿರು ಸಹ ನಾನು ಶುಶ್ರೂಷೆಯಲ್ಲಿ ಅವರೊಂದಿಗಿರುವದನ್ನು ಇಷ್ಟೈಸಿದ್ದರು.
ನಾನು ಕೇವಲ ಎರಡು ವರ್ಷದವಳಾಗಿದ್ದಾಗ, ನನ್ನ ಹೆತ್ತವರು ಡಲ್ಲಸ್, ಟೆಕ್ಸಾಸ್‌ಗೆ ಸ್ಥಳ ಬದಲಾಯಿಸಿದರು, ಮತ್ತು ಮೂರು ವರ್ಷಗಳ ಅನಂತರ ಪಯನೀಯರರಾಗಿ ಪೂರ್ಣ ಸಮಯದ ಸೇವೆಯನ್ನು ಅವರು ಪ್ರಾರಂಭಿಸಿದರು. ರಾತ್ರಿ ದಾರಿಬದಿಯಲ್ಲಿ ಅವರು ಒಂದು ಮಂಚದ ಮೇಲೆ ಮಲಗಿ, ನನ್ನನ್ನು ಕಾರಿನ ಹಿಂದಿನ ಸೀಟಿನಲ್ಲಿ ಹಾಕಿದರು. ಇದೆಲ್ಲವು ವಿನೋದವೆಂತ ನಾನೆಣಿಸಿಕೊಂಡೆ ನಿಶ್ಚಯ, ಆದರೆ ಅವರಿನ್ನೂ ಪಯನೀಯರ ಜೀವಿತಕ್ಕೆ ತಯಾರಾಗಿರಲಿಲ್ಲವೆಂದು ಬೇಗನೆ ತೋರಿಬಂತು. ಆದುದರಿಂದ ಅಪ್ಪ ಒಂದು ವ್ಯಾಪಾರವನ್ನು ಪ್ರಾರಂಭಿಸಿದರು. ತಕ್ಕ ಸಮಯದಲ್ಲಿ, ಪುನಃ ಪಯನೀಯರ ಸೇವೆಯನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿ ಅವರೊಂದು ಚಿಕ್ಕ ಟ್ರೆಯ್ಲ್‌ರನ್ನು ಕಟ್ಟಿದರು.
ನಾನು ಶಾಲೆ ಪ್ರಾರಂಭಿಸುವ ಮುಂಚೆಯೇ ತಾಯಿ ನನಗೆ ಓದುಬರಹವನ್ನು ಕಲಿಸಿದ್ದರು, ಮತ್ತು ಒಂದರಿಂದ ನಾಲ್ಕರ ತನಕದ ಗುಣಾಕಾರ ಮಗ್ಗಿಯು ನನಗೆ ತಿಳಿದಿತ್ತು. ಆಕೆಯ ಕೇಂದ್ರ ಬಿಂದುವು ಯಾವಾಗಲೂ ನಾನು ಕಲಿಯುವಂತೆ ಸಹಾಯ ಮಾಡುವುದಾಗಿತ್ತು. ಅವರು ಪಾತ್ರೆಗಳನ್ನು ತೊಳೆಯುತ್ತಾ ಇರುವಾಗ, ಅವನ್ನು ಒರಸಲು ನನಗೆ ಸಾಧ್ಯವಾಗುವಂತೆ ನನ್ನನ್ನು ತನ್ನ ಪಕ್ಕದ ಕುರ್ಚಿಯ ಮೇಲೆ ನಿಲ್ಲಿಸುತ್ತಿದ್ದರು, ಮತ್ತು ಶಾಸ್ತ್ರವಚನಗಳನ್ನು ಬಾಯಿಪಾಠ ಮಾಡಲು ಮತ್ತು ನಾವಾಗ ಸ್ತೋತ್ರ ಗೀತಗಳೆಂದು ಕರೆಯುತಿದ್ದ ರಾಜ್ಯ ಸಂಗೀತಗಳನ್ನು ಹಾಡುವಂತೆ ಅವರು ಕಲಿಸುತ್ತಿದ್ದರು.
ನನ್ನ ಹೆತ್ತವರೊಂದಿಗೆ ದೇವರನ್ನು ಸೇವಿಸುವುದು
ಎಲ್ಲಿ ನಾವು ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಪಡೆದೆವೋ ಆ ಕೊಲಂಬಸ್, ಒಹಾಯೊದ ರೋಮಾಂಚಕರ ಅಧಿವೇಶನವನ್ನು ನಾವೆಲ್ಲರೂ 1931 ರಲ್ಲಿ ಹಾಜರಾದೆವು. ನಾನು ಕೇವಲ ಎಂಟು ವರ್ಷದವಳಾಗಿದ್ದಾಗ್ಯೂ, ನಾನು ಕೇಳಿರುವ ಹೆಸರುಗಳಲ್ಲಿ ಅದು ಅತ್ಯಂತ ಮನೋಹರವೆಂದು ನನಗನ್ನಿಸಿತು. ನಾವು ಮನೆಗೆ ಹಿಂತಿರುಗಿದ ಸ್ವಲ್ಪದರಲ್ಲೇ, ಅಪ್ಪನ ವ್ಯಾಪಾರವು ಬೆಂಕಿಯಿಂದ ನಷ್ಟಗೊಂಡಿತು, ಮತ್ತು ತಾವು ಪಯನೀಯರ ಸೇವೆಯನ್ನು ಪುನಃ ಪ್ರಾರಂಭಿಸುವಂತೆ ಇದನ್ನು “ಕರ್ತನ ಚಿತ್ತ” ವಾಗಿ ಅಪ್ಪ ಮತ್ತು ಅಮ್ಮ ತೆಗೆದುಕೊಂಡರು. ಹೀಗೆ, 1932ರ ಬೇಸಗೆಯಲ್ಲಿ ಆರಂಭಿಸಿ, ನಾವು ಅನೇಕ ವರ್ಷಗಳ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಆನಂದಿಸಿದೆವು.
ಇನ್ನೂ ಸಾನ್ ಆ್ಯಂಟೊನಿಯೊದಲ್ಲಿದ್ದ ಅಮ್ಮನ ಹೆತ್ತವರ ಸಮೀಪ ಉಳಿಯುವಂತೆ ನನ್ನ ಹೆತ್ತವರು ಮಧ್ಯ ಟೆಕ್ಸಾಸ್‌ನಲ್ಲಿ ಪಯನೀಯರಿಂಗ್ ಮಾಡಿದರು. ಒಂದು ನೇಮಕದಿಂದ ಇನ್ನೊಂದು ನೇಮಕಕ್ಕೆ ಸ್ಥಳ ಬದಲಾಯಿಸುವುದು ನನಗೆ ಆಗಿಂದಾಗ್ಗೆ ಶಾಲೆಗಳನ್ನು ಬದಲಾಯಿಸುವ ಅರ್ಥದಲ್ಲಿತ್ತು. ಕೆಲವೊಮ್ಮೆ ವಿಚಾರಹೀನ ಮಿತ್ರರು, ನನ್ನ ಯೋಗ್ಯ ಪರಿಪಾಲನೆ ಮಾಡಲ್ಪಡುತ್ತಿರಲಿಲ್ಲವೋ ಎಂಬಂತೆ, “ನೀವು ಒಂದೇ ಸ್ಥಳದಲ್ಲಿ ನೆಲೆಸಿ, ಆ ಮಗುವಿಗಾಗಿ ಒಂದು ಮನೆಯನ್ನು ಏಕೆ ಮಾಡುವದಿಲ್ಲ?” ಎಂದನ್ನುತ್ತಿದ್ದರು. ಆದರೆ ನಮ್ಮ ಜೀವಿತವು ಉತ್ತೇಜಕವಾಗಿತ್ತೆಂದು ಮತ್ತು ನಾನು ಅಪ್ಪ ಮತ್ತು ಅಮ್ಮನಿಗೆ ಅವರ ಶುಶ್ರೂಷೆಯಲ್ಲಿ ನೆರವಾಗುತ್ತಿದ್ದೆನೆಂದು ಭಾವಿಸಿದ್ದೆ. ಕಾರ್ಯತಃ, ಯಾವುದು ಮುಂದಕ್ಕೆ ನನ್ನ ಸ್ವಂತ ಜೀವನ-ಶೈಲಿಯಾಗಲಿಕ್ಕಿತ್ತೋ ಅದಕ್ಕಾಗಿ ನಾನು ತರಬೇತು ಮಾಡಲ್ಪಡುತ್ತಿದ್ದೆ ಮತ್ತು ತಯಾರಿಸಲ್ಪಡುತ್ತಿದ್ದೆ.
ನನಗೆ ದೀಕ್ಷಾಸ್ನಾನವಾಗಬೇಕೆಂದು ನಾನು ತಿಂಗಳುಗಳಿಂದ ನನ್ನ ಅಪ್ಪ ಮತ್ತು ಅಮ್ಮನಿಗೆ ಹೇಳುತ್ತಾ ಇದ್ದೆನು, ಆ ಕುರಿತು ಅವರು ನನ್ನೊಂದಿಗೆ ಆಗಾಗ್ಗೆ ಮಾತಾಡುತ್ತಿದ್ದರು. ನನ್ನ ನಿರ್ಣಯವು ಎಷ್ಟು ಗಂಭೀರವೆಂದು ನಾನು ತಿಳಿಯುವಂತೆ ಖಾತರಿ ಮಾಡಲು ಅವರು ಬಯಸಿದ್ದರು. ನನ್ನ ಜೀವಿತದ ಈ ಸ್ಮರಣೀಯ ಘಟನೆಗಾಗಿ ದಶಂಬರ 31, 1934 ರಲ್ಲಿ ಆ ದಿನವು ಆಗಮಿಸಿತು. ಆದರೂ, ಆ ದಿನಕ್ಕೆ ಮುಂಚಿನ ರಾತ್ರಿ ನಾನು ಪ್ರಾರ್ಥನೆಯಲ್ಲಿ ಯೆಹೋವನ ಬಳಿಗೆ ತೆರಳುವಂತೆ ಅಪ್ಪ ಖಚಿತ ಮಾಡಿಕೊಂಡರು. ಅನಂತರ ಒಂದು ಸುಂದರವಾದ ಸಂಗತಿಯನ್ನು ಅವರು ಮಾಡಿದರು. ನಮ್ಮೆಲ್ಲರನ್ನು ಮೊಣಕಾಲೂರುವಂತೆ ಮಾಡಿ, ಅವರೊಂದು ಪ್ರಾರ್ಥನೆಯನ್ನು ಸಲ್ಲಿಸಿದರು. ತನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಲು ಅವರ ಚಿಕ್ಕ ಹುಡುಗಿಯ ನಿರ್ಣಯದ ಕುರಿತು ಅವರು ಬಹು ಸಂತೋಷ ಪಟ್ಟಿದ್ದಾರೆಂದು ಆತನಿಗೆ ತಿಳಿಸಿದರು. ಬರಲಿರುವ ಸಕಲ ಯುಗಗಳಲ್ಲಿ, ನಾನೆಂದೂ ಆ ರಾತ್ರಿಯನ್ನು ಮರೆಯೆನೆಂದು ನೀವು ಖಾತ್ರಿಯಿಂದಿರಬಲ್ಲಿರಿ!
ನನ್ನ ಅಜ್ಜ-ಅಜ್ಜಿಯರಿಂದ ತರಬೇತು
ಇಸವಿ 1928 ಮತ್ತು 1938ರ ನಡುವೆ, ನಾನು ಸಾನ್ ಆ್ಯಂಟೊನಿಯೊದಲ್ಲಿ ನನ್ನ ಅಜ್ಜ-ಅಜಿಯ್ಜರನ್ನು ಸಂದರ್ಶಿಸುವುದರಲ್ಲಿ ಹೆಚ್ಚು ಸಮಯ ಕಳೆದೆ. ಅವರೊಂದಿಗೆ ದಿನಚರ್ಯೆಯು ಬಹಳ ಮಟ್ಟಿಗೆ ನನ್ನ ಹೆತ್ತವರಲ್ಲಿದ್ದಂತೆಯೇ ಇತ್ತು. ಮುಂಚೆ ಪಯನೀಯರರನ್ನು ಕರೆಯುತ್ತಿದ್ದ ಕೊಲ್ಪೊರ್ಟರ್ ಆಗಿದ್ದರು ನನ್ನ ಅಜ್ಜಿ, ಅನಂತರ ಅವರು ಅಂಶ-ಕಾಲಿಕ ಪಯನೀಯರರಾದರು. ಅಜ್ಜ ದಶಂಬರ 1929 ರಲ್ಲಿ ಪಯನೀಯರರಾಗಿ ನೇಮಕ ಹೊಂದಿದರು, ಹೀಗೆ ಕ್ಷೇತ್ರ ಸೇವೆಯು ಯಾವಾಗಲೂ ಕ್ರಮದ ದಿನಚರ್ಯೆಯಾಗಿತ್ತು.
ಅಜ್ಜ ರಾತ್ರಿಯಲ್ಲಿ ನನ್ನನ್ನು ತೋಳುಗಳಲ್ಲೆತ್ತಿ, ನಕ್ಷತ್ರಗಳ ಹೆಸರುಗಳನ್ನು ಕಲಿಸಿಕೊಡುತ್ತಿದ್ದರು. ಸ್ಮರಣೆಯಿಂದ ಪದ್ಯಗಳನ್ನು ಕಂಠಪಾಠವಾಗಿ ನನಗೆ ಹೇಳುತ್ತಿದ್ದರು. ಅವರು ರೈಲೇಯ್ವಲ್ಲಿ ಕೆಲಸ ಮಾಡುತ್ತಿದ್ದಾಗ ನಾನು ಅವರೊಂದಿಗೆ ಪುಲ್‌ಮ್ಯಾನ್ಸ್ ಟ್ರೈನುಗಳಲ್ಲಿ ಅನೇಕ ತಿರುಗಾಟಗಳನ್ನು ಮಾಡಿದ್ದೆ. ತೊಂದರೆಯಾದಾಗ ನಾನು ಯಾವಾಗಲೂ ತಿರುಗ ಸಾಧ್ಯವಾಗಿದ್ದ ವ್ಯಕ್ತಿ ಅವರಾಗಿದ್ದರು; ಅವರು ನನ್ನನ್ನು ಸಂತೈಸಿ, ನನ್ನ ಕಣ್ಣೀರನ್ನೊರಸಿಬಿಡುತ್ತಿದ್ದರು. ಆದರೂ, ಅಯೋಗ್ಯ ವರ್ತನೆಗಾಗಿ ಶಿಕ್ಷಿಸಲ್ಪಟ್ಟಾಗ ನಾನವರಿಂದ ಸಾಂತ್ವನ ಹುಡುಕುತ್ತಾ ಹೋದಲ್ಲಿ, (ಆಗ ನನಗೆ ಅರ್ಥವಾಗದೆ ಇದ್ದರೂ ಅವುಗಳ ನಾದದಿಂದ ತೀರ ಸ್ಫುಟವಾಗಿದ್ದ) ಅವರ ಸರಳ ಮಾತನ್ನು ಆಡುತ್ತಿದ್ದರು: “ಮುದ್ದು ಮಗಳೇ, ಒಬ್ಬನು ತಪ್ಪುಗೈದಾಗ, ಕಷ್ಟಾನುಭವ ಪಡುತ್ತಾನೆ.”
ಹಿಂಸೆಯ ವರುಷಗಳು
ಇಸವಿ 1939 ರಲ್ಲಿ ಎರಡನೆಯ ಲೋಕ ಯುದ್ಧವು ಆರಂಭಿಸಿತು, ಮತ್ತು ಯೆಹೋವನ ಜನರು ಹಿಂಸೆ ಮತ್ತು ದೊಂಬಿ ಹಿಂಸಾಚಾರವನ್ನು ಅನುಭವಿಸಿದರು. ಇಸವಿ 1939ರ ಅಂತ್ಯದೊಳಗೆ, ಅಮ್ಮ ತೀರ ಅಸ್ವಸ್ಥರಾದರು ಮತ್ತು ಕೊನೆಗೆ ಶಸ್ತ್ರಕ್ರಿಯೆಯು ಅಗತ್ಯವಾದುದರಿಂದ ನಾವು ಸಾನ್ ಆ್ಯಂಟೊನಿಯೊಕ್ಕೆ ಹಿಂದೆ ಬಂದೆವು.
ಸಾನ್ ಆ್ಯಂಟೊನಿಯೊ ಬೀದಿಗಳಲ್ಲಿ ನಾವು ಪತ್ರಿಕಾ ಸೇವೆಯನ್ನು ಮಾಡುತ್ತಿರುವಾಗ ದೊಂಬಿಯು ಒಟ್ಟುಸೇರುತ್ತಿತ್ತು. ಆದರೆ ಪ್ರತಿ ವಾರ, ಕುಟುಂಬವಾಗಿ, ನಮ್ಮ ನೇಮಿತ ಮೂಲೆಯಲ್ಲಿ ಪ್ರತಿಯೊಬ್ಬರಾಗಿ, ನಾವಲ್ಲಿರುತ್ತಿದ್ದೆವು. ತಂದೆಯನ್ನು ಹಿಡಿದು ಪೊಲೀಸ್ ಠಾಣೆಗೆ ಅವರೊಯ್ಯುತ್ತಿದದ್ದನ್ನು ನಾನು ಆಗಿಂದಾಗ್ಗೆ ನೋಡುತ್ತಲಿದ್ದೆ.
ಅಮ್ಮ ಪಯನೀಯರ ಸೇವೆಯನ್ನು ನಿಲ್ಲಿಸಬೇಕಾದಾಗ್ಯೂ ಅಪ್ಪ ಅದನ್ನು ಮುಂದುವರಿಸ ಪ್ರಯತ್ನಿಸಿದರು. ಆದರೆ ಅಂಶ-ಕಾಲಿಕ ಕೆಲಸಮಾಡುತ್ತಾ ಸಾಕಷ್ಟು ಹಣ ಸಂಪಾದನೆಯಾಗದ್ದರಿಂದ, ಅವರಿಗೂ ಅದನ್ನು ನಿಲ್ಲಿಸಬೇಕಾಯಿತು. ಇಸವಿ 1939 ರಲ್ಲಿ ನಾನು ನನ್ನ ಶಾಲೆಯನ್ನು ಮುಗಿಸಿದೆ, ಮತ್ತು ನಾನೂ ಕೆಲಸ ಹಿಡಿದೆ.
ಆ ವರ್ಷಗಳಲ್ಲಿ ಅಪ್ಪನ ಜಡ್ಜ್ (ನ್ಯಾಯಾಧೀಶ) ಎಂಬ ಹೆಸರು ಉಪಯುಕ್ತವಾಗಿ ಪರಿಣಮಿಸಿತು. ಉದಾಹರಣೆಗೆ, ಸಾನ್ ಆ್ಯಂಟೊನಿಯೊ ತುಸು ಉತ್ತರದಲ್ಲಿದ್ದ ಒಂದು ಊರಿನಲ್ಲಿ ಮಿತ್ರರ ಒಂದು ಗುಂಪು ಸಾಕ್ಷಿ ಕಾರ್ಯಕ್ಕೆ ಹೋದಾಗ, ಷೆರೀಫ್ (ನಾಡಗೌಡ) ಅವರೆಲ್ಲರನ್ನು ಜೈಲಿನಲ್ಲಿ ಹಾಕತೊಡಗಿದನು. ಅವನು ನನ್ನ ಅಜ್ಜ-ಅಜಿಯ್ಜರ ಸಮೇತ ಸುಮಾರು 35 ಮಂದಿಯನ್ನು ಕೈದುಮಾಡಿದ್ದನು. ಅವರು ತಂದೆಗೆ ಸುದ್ದಿ ಕೊಟ್ಟಾಗ, ಅವರು ಕಾರಿನಲ್ಲಿ ಅಲ್ಲಿಗೆ ಬಂದರು. ಅವರು ಷೆರೀಫನ ಆಫೀಸಿಗೆ ನಡೆದು, ಅಂದದ್ದು: “ನಾನು ಸಾನ್ ಆ್ಯಂಟೊನಿಯೊದ ಜಡ್ಜ್ ನಾರಿಸ್.”
“ಸರಿ ಸಾರ್, ಜಡ್ಜ್‌ರೇ (ನ್ಯಾಯಾಧೀಶರೇ), ನಿಮಗಾಗಿ ನಾನೇನು ಮಾಡಲಿ,” ಕೇಳಿದನು ಷೆರೀಫ್.
“ಈ ಜನರನ್ನು ಜೈಲಿನಿಂದ ಹೊರ ತೆಗೆಯುವ ವಿಷಯವಾಗಿ ನೋಡಲು ನಾನು ಬಂದಿರುತ್ತೇನೆ,” ಎಂದು ಉತ್ತರಿಸಿದರು ಅಪ್ಪ. ಆಗ ಷೆರೀಫ್ ಅವರನ್ನು ಹೋಗಗೊಟ್ಟನು, ಜಾಮೀನಿಲ್ಲದೆ—ಮತ್ತು ಅಧಿಕ ಪ್ರಶ್ನೆಗಳೂ ಇಲ್ಲ!
ಅಪ್ಪ ಪೇಟೆಯ ಆಫೀಸು ಕಟ್ಟಡಗಳಲ್ಲಿ ಸೇವೆ ಮಾಡುವುದನ್ನು ಮೆಚ್ಚುತ್ತಿದ್ದರು ಮತ್ತು ವಿಶೇಷವಾಗಿ ನ್ಯಾಯಾಧಿಪತಿಗಳನ್ನು ಮತ್ತು ವಕೀಲರನ್ನು ಭೇಟಿಯಾಗುವುದು ಬಲು ಇಷ್ಟವಿತ್ತು. ಸ್ವಾಗತಕಾರ್ತಿಗೆ ಅವರು ಹೀಗನ್ನುತ್ತಿದ್ದರು: “ನಾನು ಜಡ್ಜ್ ನಾರಿಸ್. ಇಂಥಿಂಥ ನ್ಯಾಯಾಧೀಶರನ್ನು ಭೇಟಿಯಾಗಲು ಬಂದಿರುತ್ತೇನೆ.”
ತರುವಾಯ, ನ್ಯಾಯಾಧೀಶನನ್ನು ಭೇಟಿಯಾದಾಗ, ಅವರು ಯಾವಾಗಲೂ ಮೊದಲು ಹೀಗನ್ನುತ್ತಿದ್ದರು: “ನನ್ನ ಭೇಟಿಯ ಉದ್ದೇಶದ ಕುರಿತು ಮಾತಾಡುವ ಮುಂಚೆ, ನಾನು ನಿಮಗಿಂತ ಬಹಳ ಮುಂಚಿನಿಂದಲೇ ಜಡ್ಜ್ ಆಗಿರುವೆನೆಂದು ವಿವರಿಸ ಬಯಸುತ್ತೇನೆ. ನನ್ನ ಜೀವಮಾನವಿಡೀ ನಾನೊಬ್ಬ ಜಡ್ಜ್.” ಅನಂತರ ತನಗೆ ಆ ಹೆಸರು ದೊರೆತ ವಿಧವನ್ನು ಅವರು ವಿವರಿಸುತ್ತಿದ್ದರು. ಇದು ಅವರನ್ನು ಒಂದು ಮಿತ್ರತ್ವದ ಪ್ರಾರಂಭಕ್ಕೆ ನಡಿಸುತ್ತಿತ್ತು ಮತ್ತು ಅವರು ಆ ದಿನಗಳಲ್ಲಿ ನ್ಯಾಯಾಧೀಶರುಗಳೊಂದಿಗೆ ಅನೇಕ ಉತ್ತಮ ಸಂಬಂಧಗಳನ್ನು ಬೆಳೆಯಿಸಿಕೊಂಡರು.
ಹೆತ್ತವರ ಮಾರ್ಗದರ್ಶನಕ್ಕಾಗಿ ಕೃತಜ್ಞೆ
ನಾನು ಆ ಕೋಲಾಹಲದ ಹದಿಹರಯದ ವರ್ಷಗಳಲ್ಲಿದ್ದೆ ಮತ್ತು ಮುಂದೇನು ಮಾಡುವಳೋ ಎಂದು ಅಪ್ಪ ಮತ್ತು ಅಮ್ಮ ಕಾತುರದಿಂದ ಕಾಯುತ್ತಾ ಕಳವಳಪಡುತ್ತಾ ಇದ್ದರೆಂದು ನನಗೆ ಗೊತ್ತಿತ್ತು. ಅವರು ಬೇಡವೆನ್ನುತ್ತಾರೆಂದು ಮುಂಚೆಯೇ ಗೊತ್ತಿದ್ದರೂ, ಎಲ್ಲಿಗಾದರೂ ಹೋಗುವಂತೆ ಇಲ್ಲವೆ ಏನಾದರೂ ಮಾಡುವಂತೆ ನಾನು ಅಪ್ಪ ಮತ್ತು ಅಮ್ಮನನ್ನು, ಎಲ್ಲಾ ಮಕ್ಕಳು ಮಾಡುವಂತೆ, ಅನೇಕ ಸಾರಿ ಶೋಧಿಸುತ್ತಿದ್ದೆನು. ಕೆಲವು ಸಾರಿ ಕಣ್ಣೀರು ಬರುತ್ತಿತ್ತು. ಕಾರ್ಯತಃ, ಒಂದು ವೇಳೆ ಅವರೆಂದಾದರೂ ಹೀಗನ್ನುತ್ತಿದ್ದರೆ ನಾನು ಆಳವಾಗಿ ಕಲಕಿ ಹೋಗುತ್ತಿದ್ದೆನು: “ಹೋಗು, ನಿನಗೆ ಬೇಕಾದದ್ದನ್ನು ಮಾಡು. ನಮಗೇನಿಲ್ಲ.”
ಅವರ ಮಟ್ಟಗಳನ್ನು ಬದಲಾಯಿಸುವಂತೆ ನಾನು ಅವರನ್ನು ಪ್ರಭಾವಿಸ ಸಾಧ್ಯವಿಲ್ಲವೆಂದು ತಿಳಿಯುವುದು ನನಗೆ ಒಂದು ಭದ್ರತೆಯ ಭಾವವನ್ನು ಕೊಟ್ಟಿತು. ವಾಸ್ತವದಲ್ಲಿ, ಅಯೋಗ್ಯ ಮನೋರಂಜನೆಯನ್ನು ಇತರ ಯುವ ಜನರು ಸೂಚಿಸಿದಾಗ, ಇದು ನನಗೆ ಸುಲಭವನ್ನಾಗಿ ಮಾಡಿತು, ಯಾಕಂದರೆ ನಾನು ಹೀಗನ್ನ ಶಕ್ತಳಾಗಿದ್ದೆ: “ನನ್ನ ಅಪ್ಪ ನನಗೆ ಬಿಡುವುದಿಲ್ಲ.” ನನಗೆ 16 ವರ್ಷ ವಯಸ್ಸಾದಾಗ, ನಾನು ಡ್ರೈವಿಂಗ್ ಕಲಿಯುವಂತೆ ಮತ್ತು ನನಗೆ ಡ್ರೈವಿಂಗ್ ಲೈಸೆನ್ಸ್ ದೊರೆಯುವಂತೆ ಅಪ್ಪ ನಿಶ್ಚಯಿಸಿದರು. ಅಲ್ಲದೆ, ಇದೇ ಸಮಯದ ಸುಮಾರಿಗೆ ಮನೆಯ ಬೀಗದ ಕೈಯನ್ನೂ ಅವರು ನನಗೆ ಕೊಟ್ಟರು. ನನ್ನಲ್ಲಿ ಅವರ ಭರವಸೆಯು ನನ್ನನ್ನು ಬಹಳಷ್ಟು ಪ್ರಭಾವಿಸಿತು. ತುಂಬಾ ದೊಡ್ಡವಳಾದ ಅನಿಸಿಕೆ ನನಗಾಯಿತು ಮತ್ತು ಜವಾಬ್ದಾರಿಯ ಭಾವವನ್ನು ಮತ್ತು ಅವರ ಭರವಸೆಗೆ ದ್ರೋಹವೆಸಗದ ಅಪೇಕ್ಷೆಯನ್ನು ಅದು ನನಗೆ ಕೊಟ್ಟಿತು.
ಆ ದಿನಗಳಲ್ಲಿ ವಿವಾಹದ ಕುರಿತು ಹೆಚ್ಚಿನ ಶಾಸ್ತ್ರೀಯ ಹಿತೋಪದೇಶ ಕೊಡಲ್ಪಟ್ಟಿರಲಿಲ್ಲ, ಆದರೆ ಅಪ್ಪನಿಗೆ ಬೈಬಲ್ ತಿಳಿದಿತ್ತು ಮತ್ತು “ಕರ್ತನಲ್ಲಿ ಮಾತ್ರವೇ” ವಿವಾಹವಾಗುವುದರ ಕುರಿತು ಅದೇನಂದಿದೆಯೆಂದು ಗೊತ್ತಿತ್ತು. (1 ಕೊರಿಂಥ 7:39) ನಾನು ಒಬ್ಬ ಲೌಕಿಕ ಹುಡುಗನನ್ನು ಎಂದಾದರೂ ಮನೆಗೆ ತಂದರೆ ಅಥವಾ ಅವನ ಸ್ನೇಹ-ಭೇಟಿಯನ್ನು ಪರಿಗಣಿಸಿದರೂ ಕೂಡ, ಅವರ ನಿರಾಶೆಯು ತಡೆಯಲಸಾಧ್ಯವೆಂದು ಅವರು ನನಗೆ ಸ್ಪಷ್ಟಪಡಿಸಿದ್ದರು. ಅವರು ಸರಿಯೆಂದು ನನಗೆ ಗೊತ್ತಿತ್ತು ಯಾಕಂದರೆ ಅವರು “ಕರ್ತನಲ್ಲಿ”ಯೇ ವಿವಾಹವಾದ್ದರಿಂದ ಅವರ ಮದುವೆಯಲ್ಲಿದ್ದ ಸಂತೋಷ ಮತ್ತು ಐಕ್ಯತೆಯನ್ನು ನಾನು ನೋಡಿದ್ದೆ.
ಇಸವಿ 1941 ರಲ್ಲಿ ನಾನು 18 ವಯಸ್ಸಿನವಳಾದಾಗ, ಸಭೆಯ ಒಬ್ಬ ಯುವಕನೊಂದಿಗೆ ಪ್ರೇಮದಲ್ಲಿದ್ದೇನೆಂದು ನಾನು ಭಾವಿಸಿದೆ. ಅವನು ಒಬ್ಬ ಪಯನೀಯರನಾಗಿದ್ದ ಮತ್ತು ವಕೀಲನಾಗಲು ಕಲಿಯುತ್ತಿದ್ದ. ನಾನು ಪ್ರಚೋದಿತಳಾಗಿದ್ದೆ. ನಾವು ಮದುವೆಯಾಗಲು ಬಯಸಿದ್ದೇವೆಂದು ನನ್ನ ಹೆತ್ತವರಿಗೆ ನಾವು ಹೇಳಿದಾಗ, ಅಸಮ್ಮತಿ ಯಾ ನಿರುತ್ತೇಜನಗೊಳಿಸುವ ಬದಲಿಗೆ, ಅವರು ಬರೇ ಹೇಳಿದ್ದು: “ಒಂದು ವಿನಂತಿಯನ್ನು ನಿನಗೆ ನಾವು ಮಾಡಬಯಸುತ್ತೇವೆ, ಬ್ಲಾಸಮ್. ನೀನು ತೀರ ಚಿಕ್ಕವಳೆಂತ ನಮಗನಿಸುತ್ತದೆ, ಮತ್ತು ಒಂದು ವರ್ಷ ಕಾಯುವಂತೆ ನಾವು ನಿನ್ನನ್ನು ಕೇಳಬಯಸುವೆವು. ನೀನು ನಿಜವಾಗಿ ಅನುರಕ್ತಳಾಗಿದ್ದರೆ, ಒಂದು ವರ್ಷ ವ್ಯತ್ಯಾಸವನ್ನು ಮಾಡದು.”
ಆ ಸುಜ್ಞ ಸಲಹೆಗೆ ನಾನು ಕಿವಿಗೊಟ್ಟದಕ್ಕಾಗಿ ನಾನು ಬಹು ಕೃತಜ್ಞಳು. ಒಂದು ವರ್ಷದೊಳಗೆ ನಾನು ಸ್ವಲ್ಪ ಬಲಿತವಳಾಗಿ, ಒಳ್ಳೇ ವಿವಾಹ ಸಂಗಾತಿಯನ್ನಾಗಿ ಮಾಡುವ ಗುಣಗಳು ಈ ಯುವಕನಲ್ಲಿಲ್ಲವೆಂದು ಕಾಣಲಾರಂಭಿಸಿದೆ. ಅವನು ಕಟ್ಟಕಡೆಗೆ ಯೆಹೋವನ ಸಂಸ್ಥೆಯನ್ನು ಬಿಟ್ಟುಹೋದನು, ಮತ್ತು ನಾನು ನನ್ನ ಜೀವನದಲ್ಲಿ ಒಂದು ವಿಪತ್ತಾಗುತ್ತಿದ್ದ ವಿಷಯದಿಂದ ಪಾರಾದೆನು. ಯಾರ ತೀರ್ಮಾನದ ಮೇಲೆ ಆತುಕೊಳ್ಳ ಸಾಧ್ಯವೋ ಅಂಥ ಸುಜ್ಞ ಹೆತ್ತವರಿರುವುದು ಅದೆಷ್ಟು ಆಶ್ಚರ್ಯಕರವು!
ವಿವಾಹ ಮತ್ತು ಸಂಚಾರ ಸೇವೆ
ಇಸವಿ 1946ರ ಚಳಿಗಾಲದಲ್ಲಿ, ನಾನು ಆರು ವರ್ಷಗಳನ್ನು ಪಯನೀಯರಿಂಗ್ ಮತ್ತು ಅಂಶಕಾಲಿಕ ಕೆಲಸದಲ್ಲಿ ಕಳೆದ ಮೇಲೆ, ನಾನು ಭೇಟಿಯಾದವರಲ್ಲಿ ಅತ್ಯುತ್ತಮ ಯುವಕನೊಬ್ಬನು ನಮ್ಮ ರಾಜ್ಯ ಸಭಾಗೃಹವನ್ನು ಪ್ರವೇಶಿಸಿದನು. ಜೀನ್ ಬ್ರಾಂಟ್, ಆಗ ಬ್ರಾತೃಗಳ ಸಂಚಾರ ಸೇವಕರೆಂದು ಕರೆಯಲ್ಪಡುತ್ತಿದ್ದ ಸರ್ಕಿಟ್ ಮೇಲ್ವಿಚಾರಕರ ಸಂಗಡಿಗನಾಗಿ ನೇಮಕ ಹೊಂದಿದ್ದನು. ಅದು ಪರಸ್ಪರ ಆಕರ್ಷಣೆಯಾಗಿತ್ತು, ಮತ್ತು ಆಗಸ್ಟ್ 5, 1947 ರಲ್ಲಿ ನಾವು ವಿವಾಹವಾದೆವು.
ಕ್ಷಿಪ್ರದಲ್ಲೇ, ಅಪ್ಪ ಮತ್ತು ಜೀನ್ ಒಂದು ಎಕೌಂಟ್ ಆಫೀಸನ್ನು ತೆರೆದರು. ಆದರೆ ಅಪ್ಪ ಜೀನ್‌ಗೆ ಹೇಳಿದ್ದು: “ಈ ಆಫೀಸು ನಮ್ಮನ್ನು ಒಂದು ಕೂಟದಿಂದ ಯಾ ಒಂದು ದೇವಪ್ರಭುತ್ವ ನೇಮಕದಿಂದ ತಡೆಯುವ ಆ ದಿನವೇ ನಾನು ಈ ವ್ಯಾಪಾರವನ್ನು ಮುಚ್ಚಿಬಿಡುವೆನು.” ಯೆಹೋವನು ಈ ಆತ್ಮಿಕ ಹೊರನೋಟವನ್ನು ಆಶೀರ್ವದಿಸಿದನು, ಮತ್ತು ಆ ಆಫೀಸು ನಮ್ಮ ಭೌತಿಕ ಅಗತ್ಯತೆಗಳಿಗೆ ಸಾಕಷ್ಟನ್ನು ಒದಗಿಸಿತು ಮತ್ತು ಪಯನೀಯರಿಂಗ್ ಮಾಡಲು ಸಮಯ ಕೊಟ್ಟಿತು. ಅಪ್ಪ ಮತ್ತು ಜೀನ್ ಒಳ್ಳೇ ವ್ಯಾಪಾರಸ್ಥರಾಗಿದ್ದರು, ಮತ್ತು ನಾವು ಸುಲಭವಾಗಿಯೇ ಐಶ್ವರ್ಯವಂತರಾಗಬಹುದಿತ್ತು, ಆದರೆ ಇದೆಂದೂ ಅವರ ಧ್ಯೇಯವಾಗಿರಲಿಲ್ಲ.
ಇಸವಿ 1954 ರಲ್ಲಿ ಜೀನ್ ಸರ್ಕಿಟ್ ಕೆಲಸಕ್ಕೆ ಆಮಂತ್ರಿಸಲ್ಪಟ್ಟನು, ಇದು ನಮ್ಮ ಜೀವಿತಗಳಲ್ಲಿ ದೊಡ್ಡ ಬದಲಾವಣೆಯ ಅರ್ಥದಲ್ಲಿತ್ತು. ನನ್ನ ಹೆತ್ತವರು ಹೇಗೆ ಪ್ರತಿಕ್ರಿಯೆ ತೋರಿಸಲಿದ್ದರು? ಪುನೊಮ್ಮೆ ಅವರ ಗಮನವು ತಮಗಾಗಿ ಅಲ್ಲ, ದೇವರ ರಾಜ್ಯದ ಅಭಿರುಚಿಗಳಿಗಾಗಿ ಮತ್ತು ತಮ್ಮ ಮಕ್ಕಳ ಆತ್ಮಿಕ ಹಿತಾಸಕ್ತಿಗಾಗಿ ಇತ್ತು. ಅವರು ನಮಗೆ ಇಂತೆಂದೂ ಹೇಳಲಿಲ್ಲ: “ನೀವು ನಮಗೆ ಮೊಮ್ಮಕ್ಕಳನ್ನೇಕೆ ಕೊಡುವದಿಲ್ಲ?” ಬದಲಿಗೆ ಅದು ಯಾವಾಗಲೂ ಹೀಗಿರುತ್ತಿತ್ತು: “ಪೂರ್ಣ ಸಮಯದ ಸೇವೆಯಲ್ಲಿ ನಿಮಗೆ ನೆರವಾಗಲು ನಾವೇನು ಮಾಡ ಸಾಧ್ಯವಿದೆ?”
ಹೀಗೆ ನಮಗೆ ಹೊರಡುವ ದಿನ ಬಂದಾಗ, ಉತ್ತೇಜನದ ಮಾತುಗಳು ಮತ್ತು ನಮ್ಮ ಮಹಾ ಸುಯೋಗಕ್ಕಾಗಿ ಹರ್ಷಿಸುವಿಕೆ ಮಾತ್ರವೇ ಅಲ್ಲಿದ್ದವು. ನಾವು ಅವರನ್ನು ತ್ಯಜಿಸುತ್ತೇವೆಂಬ ಭಾವನೆಯನ್ನು ಅವರು ನಮಗೆಂದೂ ಕೊಡಲಿಲ್ಲ, ಬದಲಿಗೆ ಯಾವಾಗಲೂ ನಮಗೆ ಸಂಪೂರ್ಣ ಬೆಂಬಲವನ್ನು ಕೊಟ್ಟರು. ನಾವು ಹೋದ ಮೇಲೆ, ಇನ್ನೊಂದು ಹತ್ತು ವರ್ಷ ಅವರು ಪಯನೀಯರ ಸೇವೆಯಲ್ಲಿ ತಮ್ಮನ್ನು ಕಾರ್ಯಮಗ್ನರಿಟ್ಟರು. ಅಪ್ಪ ಸಾನ್ ಆ್ಯಂಟೊನಿಯೊದ ಸಿಟಿ (ಶಹರ) ಮೇಲ್ವಿಚಾರಕರಾಗಿ ನೇಮಿಸಲ್ಪಟ್ಟು, 30 ವರ್ಷ ಆ ಸ್ಥಾನದಲಿದ್ದರು. ಶಹರದಲ್ಲಿ 1920 ರಲ್ಲಿದ್ದ ಒಂದೇ ಸಭೆಯಿಂದ, 1991 ರಲ್ಲಿ ಅವರು ತೀರಿಕೊಳ್ಳುವ ಮುಂಚೆ 71 ಸಭೆಗಳು ಬೆಳೆಯುವುದನ್ನು ಕಾಣಲು ಅವರು ಸಂತೋಷಪಟ್ಟರು.
ಜೀನ್ ಮತ್ತು ನನಗೆ, ಜೀವಿತವು ಸಡಗರದಿಂದ ತುಂಬಿತ್ತು. 31 ಕ್ಕಿಂತಲೂ ಹೆಚ್ಚು ರಾಜ್ಯಗಳಲ್ಲಿ ಪ್ರಿಯ ಸಹೋದರ ಮತ್ತು ಸಹೋದರಿಯರ ಸೇವೆ ಮಾಡುವ ಹೇರಳ ಸಂತೋಷವು ನಮ್ಮದಾಯಿತು, ಎಲ್ಲದಕ್ಕಿಂತಲೂ ಪ್ರಾಯಶಃ ಅತ್ಯಂತ ಸ್ವಾರಸ್ಯವಾದದ್ದು, 1957 ರಲ್ಲಿ ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್‌ನ 29 ನೆಯ ತರಗತಿಯನ್ನು ಹಾಜರಾಗುವ ಸುಯೋಗವೇ. ತದನಂತರ ನಾವು ಸಂಚಾರ ಸೇವೆಗೆ ಹಿಂತಿರುಗಿದೆವು. 1984 ರಲ್ಲಿ, 30 ವರ್ಷಗಳ ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಸೇವೆಯ ಅನಂತರ, ಹೆತ್ತವರು 80ಕ್ಕೂ ಹೆಚ್ಚಿನ ವಯಸ್ಕರೂ ಅಸ್ವಸ್ಥರೂ ಆಗಿದ್ದ ಕಾರಣ, ಸೊಸೈಟಿಯು ದಯೆಯಿಂದ ಜೀನ್‌ಗೆ ಸಾನ್ ಆ್ಯಂಟೊನಿಯದಲ್ಲಿ ಒಂದು ಸರ್ಕಿಟ್ ನೇಮಕವನ್ನು ಕೊಟ್ಟಿತು.
ಹೆತ್ತವರ ಆರೈಕೆ ಮಾಡುವುದು
ನಾವು ಸಾನ್ ಆ್ಯಂಟೊನಿಯೊಕ್ಕೆ ಮರಳಿದ ಅನಂತರ ಒಂದೂವರೆ ವರ್ಷದಲ್ಲಿಯೇ ಅಮ್ಮ ಅರೆ ಅತಿಸುಪ್ತಿಗೆ ಬಿದ್ದರು ಮತ್ತು ತೀರಿಹೋದರು. ಅದು ಎಷ್ಟು ಕ್ಷಿಪ್ರವಾಗಿ ಸಂಭವಿಸಿತ್ತೆಂದರೆ, ನಾನು ಅವರಿಗೆ ಹೇಳಬಯಸಿದ್ದ ಕೆಲವು ಸಂಗತಿಗಳನ್ನು ನನಗೆ ಹೇಳಲಾಗಲಿಲ್ಲ. ಇದು ಅಪ್ಪನೊಂದಿಗೆ ಬಹಳಷ್ಟನ್ನು ಮಾತಾಡುವಂತೆ ನನಗೆ ಕಲಿಸಿತು. ವಿವಾಹದ 65 ವರ್ಷಗಳ ಅನಂತರ, ಅಮ್ಮನ ಅಗಲಿಕೆ ಅವರಿಗೆ ಬಹಳ ಭಾಸವಾಯಿತು, ಆದರೆ ಪ್ರೀತಿ ಮತ್ತು ಬೆಂಬಲವನ್ನು ಕೊಡಲು ನಾವಲ್ಲಿದ್ದೆವು.
ಅಪ್ಪನ ಜೀವಾವಧಿಯ ಕ್ರೈಸ್ತ ಕೂಟದ ಉಪಸ್ಥಿತಿ, ಅಭ್ಯಾಸ, ಮತ್ತು ಸೇವೆಯ ಮಾದರಿಯು ಅವರ ಮರಣದ ತನಕವೂ ಮುಂದುವರಿಯಿತು. ವಾಚನ ಅವರಿಗೆ ಬಹು ಇಷ್ಟವಿತ್ತು. ನಾವು ಸೇವೆಯಲ್ಲಿರುವಾಗ ಅವರು ಒಬ್ಬರೇ ಇರಬೇಕಿತ್ತಾದರ್ದಿಂದ, ಮನೆಗೆ ಬಂದಾಗ ನಾನು ಕೇಳುತ್ತಿದ್ದೆ: “ನಿಮಗೆ ಒಂಟಿತನ ಭಾಸವಾಯಿತೋ?” ಅವರು ವಾಚನ ಮತ್ತು ಅಧ್ಯಯನದಲ್ಲಿ ಎಷ್ಟು ಮಗ್ನರಿದ್ದರೆಂದರೆ ಅದರ ವಿಚಾರವೇ ಅವರ ಮನಸ್ಸಿಗೆ ಹೊಳೆದಿರಲಿಲ್ಲ.
ನಾವು ಕಾಪಾಡಿಕೊಂಡ ಇನ್ನೊಂದು ಜೀವಾವಧಿಯ ಹವ್ಯಾಸವು ಇತ್ತು. ಕುಟುಂಬವು ಒಂದುಗೂಡಿ ಊಟಮಾಡುವಂತೆ, ವಿಶೇಷವಾಗಿ ಬೆಳಿಗ್ಗಿನ ಉಪಹಾರದ ಸಮಯದಲ್ಲಿ ದೈನಂದಿನ ಶಾಸ್ತ್ರ ವಚನವು ಪರಿಗಣಿಸಲ್ಪಟ್ಟಾಗ ಒಟ್ಟುಗೂಡುವಂತೆ ಅಪ್ಪ ಯಾವಾಗಲೂ ಒತ್ತಾಯಪಡಿಸುತ್ತಿದ್ದರು. ಅದನ್ನು ಮಾಡದ ಹೊರತು ನಾನೆಂದೂ ಮನೆಯಿಂದ ಹೊರಡುವ ಅನುಮತಿ ಇರಲಿಲ್ಲ. ಕೆಲವೊಮ್ಮೆ ನಾನನ್ನುತ್ತಿದ್ದೆ: “ಆದರೆ ಅಪ್ಪಾ, ನನಗೆ ಶಾಲೆಗೆ (ಅಥವಾ ಕೆಲಸಕ್ಕೆ) ತಡವಾಗುತ್ತಿದೆ.”
“ನಿನಗೆ ತಡಮಾಡಿರುವುದು ದಿನದ ವಚನದ ಚರ್ಚೆಯಲ್ಲ: ನೀನು ಸಮಯಕ್ಕೆ ಸರಿಯಾಗಿ ಏಳದಿದ್ದದ್ದೇ,” ಅನ್ನುತ್ತಿದ್ದರು ಅವರು. ಮತ್ತು ನಾನು ನಿಂತು, ಅದನ್ನು ಆಲಿಸಬೇಕಿತ್ತು. ಈ ಒಳ್ಳೇ ಮಾದರಿಯು ಅವರ ಜೀವನದ ಕೊನೆಯ ದಿನಗಳ ತನಕ ಇರುವಂತೆ ಅವರು ಖಚಿತಮಾಡಿಕೊಂಡರು. ಅವರು ನನಗೆ ಬಿಟ್ಟುಹೋದ ಇನ್ನೊಂದು ಪರಂಪರೆ ಇದಾಗಿದೆ.
ಅಪ್ಪ ತನ್ನ ಅವಸಾನ ಕಾಲದ ತನಕ ಮಾನಸಿಕವಾಗಿ ಎಚ್ಚತ್ತೇ ಉಳಿದಿದ್ದರು. ಅವರ ಆರೈಕೆಯನ್ನು ಸುಲಭವಾಗಿ ಮಾಡಿದ್ದು ಯಾವದಂದರೆ ಅವರೆಂದೂ ಕೆರಳುತ್ತಿರಲಿಲ್ಲ, ಗುಣುಗುಟ್ಟುತ್ತಿರಲಿಲ್ಲ. ಕೆಲವೊಮ್ಮೆಯಾದರೋ ಅವರು ತಮ್ಮ ಸಂಧಿವಾತದ ಕುರಿತು ಹೇಳುತ್ತಿದ್ದರು, ಆದರೆ ಅವರಿಗೆ ನಿಜವಾಗಿ ಆಗಿರುವುದು ಆದಾಮವಾತ ಎಂದು ನಾನು ನೆನಪಿಸುತ್ತಿದ್ದಾಗ, ಅವರು ನಗುತ್ತಿದ್ದರು. ನವಂಬರ 30, 1991ರ ಬೆಳಗಾತ, ಜೀನ್ ಮತ್ತು ನಾನು ಅವರ ಪಕ್ಕದಲ್ಲಿ ಕೂತಿದ್ದಾಗ, ಅಪ್ಪ ಸಮಾಧಾನದಿಂದ ಮರಣದಲ್ಲಿ ನಿದ್ದೆಹೋದರು.
ನಾನೀಗ 70 ಕ್ಕೂ ಮಿಕ್ಕಿದ ಪ್ರಾಯದವಳು ಮತ್ತು ಇನ್ನೂ ನನ್ನ ಪ್ರೀತಿಯ ಕ್ರೈಸ್ತ ಹೆತ್ತವರ ಉತ್ತಮ ಮಾದರಿಯಿಂದ ಪ್ರಯೋಜನ ಪಡೆಯುತ್ತಿದ್ದೇನೆ. ಮತ್ತು ಬರಲಿರುವ ಸಕಲ ಯುಗಗಳಲ್ಲೂ ಅದನ್ನು ಯೋಗ್ಯವಾಗಿ ಉಪಯೋಗಿಸುವ ಮೂಲಕ ಈ ಪರಂಪರೆಗಾಗಿ ನನ್ನ ಪೂರ್ಣ ಗಣ್ಯತೆಯನ್ನು ನಾನು ರುಜುಪಡಿಸುವೆನೆಂಬುದೇ ಯಥಾರ್ಥವಾದ ನನ್ನ ಪ್ರಾರ್ಥನೆಯಾಗಿದೆ.—ಕೀರ್ತನೆ 71:17, 18.
[ಪುಟ 5 ರಲ್ಲಿರುವ ಚಿತ್ರ]
ಅಮ್ಮ ಮತ್ತು ನಾನು
[ಪುಟ 7 ರಲ್ಲಿರುವ ಚಿತ್ರಗಳು]
1. ನನ್ನ ಮೊದಲ ಅಧಿವೇಶನ: ಸಾನ್ ಮಾರ್ಕೊಸ್, ಟೆಕ್ಸಾಸ್, ಸಪ್ಟಂಬರ 1923
2. ಅಪ್ಪನ ಕೊನೆಯ ಅಧಿವೇಶನ: ಫೋರ್ಟ್ ವರ್ತ್, ಟೆಕ್ಸಾಸ್, ಜೂನ್ 1991 (ಕೂತವರು ಅಪ್ಪ)
[ಪುಟ 9 ರಲ್ಲಿರುವ ಚಿತ್ರ]
ಜೀನ್ ಮತ್ತು ಬ್ಲಾಸಮ್ ಬ್ರಾಂಟ್