ತ್ರಯೈಕ್ಯ—ಬೈಬಲಿನಲ್ಲಿ ಅದು ಕಲಿಸಲ್ಪಟ್ಟಿದೆಯೇ?
“ಕ್ಯಾತೊಲಿಕ್ ವಿಶ್ವಾಸವೆಂದರೆ ಇದು, ನಾವು ತ್ರಯೈಕ್ಯದಲ್ಲಿ ಏಕ ದೇವರನ್ನು ಮತ್ತು ಐಕ್ಯತೆಯಲ್ಲಿ ತ್ರಯೈಕ್ಯವನ್ನು ಆರಾಧಿಸುತ್ತೇವೆ. . . . ಹೀಗೆ ಪಿತನು ದೇವರು, ಪುತ್ರನು ದೇವರು, ಮತ್ತು ಪವಿತ್ರಾತ್ಮನು ದೇವರು ಆಗಿದ್ದಾನೆ. ಆದರೂ ಅವರು ಮೂವರು ದೇವರುಗಳಲ್ಲ, ಬದಲಿಗೆ ಒಬ್ಬ ದೇವರಾಗಿದ್ದಾನೆ.”
ಈ ಮಾತುಗಳಲ್ಲಿ ಕ್ರೈಸ್ತಪ್ರಪಂಚದ ಕೇಂದ್ರ ತ್ತತ್ವ—ತ್ರಯೈಕ್ಯ—ವನ್ನು ಅಥನಾಸಿಯನ್ ವಿಶ್ವಾಸಪ್ರಮಾಣವು ವರ್ಣಿಸುತ್ತದೆ.a ನೀವು ಒಬ್ಬ ಚರ್ಚ್ ಸದಸ್ಯರಾಗಿದ್ದಲ್ಲಿ—ಕ್ಯಾತೊಲಿಕ್ ಯಾ ಪ್ರಾಟೆಸ್ಟಂಟ್—ನೀವು ನಂಬಬೇಕಾದ ಅತಿ ಪ್ರಾಮುಖ್ಯವಾದ ಬೋಧನೆ ಇದಾಗಿದೆ ಎಂದು ನಿಮಗೆ ಹೇಳಲ್ಪಡಬಹುದು. ಆದರೆ ಈ ತ್ತತ್ವವನ್ನು ನೀವು ವಿವರಿಸಶಕ್ತರೋ? ಈ ತ್ರಯೈಕ್ಯವನ್ನು ತಿಳಿದುಕೊಳ್ಳುವದರಲ್ಲಿ ಕ್ರೈಸ್ತ ಪ್ರಪಂಚದ ಅತಿ ಬುದ್ಧಿಮತ್ತೆಯ ವ್ಯಕ್ತಿಗಳಲ್ಲಿ ಕೆಲವರು ಅವರ ಅಸಾಮರ್ಥ್ಯತೆಯನ್ನು ಒಪ್ಪಿಕೊಂಡಿದ್ದಾರೆ.
ಹಾಗಿರುವುದಾದರೆ, ಅವರು ಅದನ್ನು ಯಾಕೆ ನಂಬುತ್ತಾರೆ? ಈ ತ್ತತ್ವವನ್ನು ಬೈಬಲ್ ಕಲಿಸುವ ಕಾರಣದಿಂದಲೋ? ‘ದೇವರಿಗೆ ಪ್ರಾಮಾಣಿಕತೆ’ (Honest to God) ಎಂಬ ಅವನ ಅತ್ಯುತ್ತಮ ಮಾರಾಟವಾದ ಪುಸ್ತಕದಲ್ಲಿ, ಈ ಪ್ರಶ್ನೆಗೆ ವಿಚಾರ-ಪ್ರೇರಕ ಉತ್ತರವೊಂದನ್ನು ಗತ ಆಂಗ್ಲಿಕನ್ ಬಿಷಪ್ ಜಾನ್ ರಾಬಿನ್ಸನ್ ಕೊಡುತ್ತಾರೆ. ಅವರು ಬರೆಯುವುದು:
“ಆಚರಣೆಯಲ್ಲಿ ಜನಪ್ರಿಯ ಸಾರುವಿಕೆ ಮತ್ತು ಕಲಿಸುವಿಕೆಯು, ಹೊಸ ಒಡಂಬಡಿಕೆಯಿಂದ ಕ್ರಿಸ್ತನ ರುಜುಮಾಡಲಾಗದ ಅಲೌಕಿಕ ನೋಟವನ್ನು ಪ್ರಸ್ತುತಪಡಿಸುತ್ತದೆ. ಯೇಸುವು ದೇವರು ಆಗಿದ್ದನು ಎಂದು ಹೇಳುವ ವಿಧಾನದಿಂದ, ‘ಕ್ರಿಸ್ತನು’ ಮತ್ತು ‘ದೇವರು’ ಎಂಬ ಪದಗಳು ಅದಲುಬದಲು ಮಾಡಶಕ್ಯವಾದವುಗಳು ಎಂಬಂತೆ ಅದನ್ನು ಅಷ್ಟೊಂದು ಸರಳವಾಗಿ ಹೇಳುತ್ತವೆ. ಆದರೆ ಆ ರೀತಿಯಲ್ಲಿ ಬೈಬಲಿನಲ್ಲಿ ಎಲ್ಲಿಯೂ ಬಳಕೆಯಾಗಿರುವುದಿಲ್ಲ. ಯೇಸುವು ದೇವರ ವಾಕ್ಯವಾಗಿದ್ದನು ಎಂದು ಹೊಸ ಒಡಂಬಡಿಕೆಯು ಹೇಳುತ್ತದೆ, ಕ್ರಿಸ್ತನಲ್ಲಿ ದೇವರು ಇದ್ದನು ಎಂದು ಅದು ಹೇಳುತ್ತದೆ, ಯೇಸುವು ದೇವರ ಮಗನಾಗಿದ್ದನು ಎಂದು ಅದು ಹೇಳುತ್ತದೆ; ಆದರೆ ಯೇಸುವು ದೇವರಾಗಿದ್ದನು ಎಂದೂ, ಸರಳವಾಗಿ ಆ ರೀತಿಯಲ್ಲಿ ಅದು ಹೇಳುವುದಿಲ್ಲ.”
ಜಾನ್ ರೊಬಿನಸನ್ ಆಂಗ್ಲಿಕನ್ ಚರ್ಚ್ನಲ್ಲಿ ಒಬ್ಬ ವಿವಾದಾತ್ಮಕ ವ್ಯಕ್ತಿಯಾಗಿದ್ದನು. ಆದಾಗ್ಯೂ, “ಹೊಸ ಒಡಂಬಡಿಕೆ” ಯಲ್ಲಿ ಎಲ್ಲಿಯೂ ಕೂಡ “ಯೇಸುವು ದೇವರಾಗಿದ್ದನು ಎಂದೂ, ಸರಳವಾಗಿ ಆ ರೀತಿಯಲ್ಲೂ” ಹೇಳುವುದಿಲ್ಲ ಎಂದು ಹೇಳುವುದರಲ್ಲಿ ಅವನು ಸರಿಯಾಗಿದ್ದನೋ?
ಬೈಬಲು ಏನನ್ನು ಹೇಳುತ್ತದೆ
ಯೋಹಾನನ ಸುವಾರ್ತೆ ಪುಸ್ತಕದ ಆರಂಭವನ್ನು ಮಾಡುವ ವಚನಗಳನ್ನು ಉಲ್ಲೇಖಿಸುವುದರ ಮೂಲಕ ಕೆಲವರು ಈ ಪ್ರಶ್ನೆಯನ್ನು ಉತ್ತರಿಸಬಹುದು: “ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು.” (ಯೋಹಾನ 1:1, ಕಿಂಗ್ ಜೇಮ್ಸ್ ವರ್ಷನ್) ಇದು ಆಂಗ್ಲಿಕನ್ ಬಿಷಪ್ ಹೇಳಿದ್ದನ್ನು ಪ್ರತಿಷೇಧಿಸುವುದಿಲ್ಲವೇ? ವಾಸ್ತವದಲ್ಲಿ ಅಲ್ಲ. ನಿಸ್ಸಂದೇಹವಾಗಿ ಜಾನ್ ರಾಬಿನ್ಸನ್ ತಿಳಿದಿರುವಂತೆ, ಕೆಲವು ಆಧುನಿಕ ಭಾಷಾಂತರಕಾರರು ಆ ವಚನದ ಕಿಂಗ್ ಜೇಮ್ಸ್ ವರ್ಷನ್ನ ತರ್ಜುಮೆಯೊಂದಿಗೆ ಸಹಮತಿಸುವುದಿಲ್ಲ. ಯಾಕೆ? ಮೂಲ ಗ್ರೀಕ್ನಲ್ಲಿ “ಆ ವಾಕ್ಯವು ದೇವರಾಗಿತ್ತು” ಎಂಬ ವಾಕ್ಸರಣಿಯಲ್ಲಿ “ದೇವರು” ಎಂಬ ಶಬ್ದಕ್ಕೆ ನಿರ್ದೇಶಕ ಗುಣವಾಚಿ “the” [ದ] ಇರುವುದಿಲ್ಲ. “ಆ ವಾಕ್ಯವು ದೇವರ ಬಳಿಯಲ್ಲಿತ್ತು” ಎಂಬ ಮೊದಲಿನ ವಾಕ್ಸರಣಿಯಲ್ಲಿ, “ದೇವರು” ಎಂಬುದಾಗಿರುವ ಶಬ್ದವು ನಿಷ್ಕೃಷ್ಟವಾಗಿದೆ, ಅಂದರೆ ಅದಕ್ಕೆ ನಿರ್ದೇಶಕ ಗುಣವಾಚಿ ಇದೆ. ಇದು ಎರಡು ಶಬ್ದಗಳಿಗೆ ಅದೇ ಮಹ್ತತ್ವವಿರುವುದನ್ನು ಅಸಂಭವನೀಯವಾಗಿ ಮಾಡುತ್ತದೆ.
ಆದಕಾರಣ, ಅವರ ಭಾಷಾಂತರಗಳಲ್ಲಿ ಗುಣಾತ್ಮಕ ಅಂಶವನ್ನು ತರಲು, ಉದಾಹರಣೆಗಾಗಿ ಈ ವಾಕ್ಸರಣಿಯನ್ನು ಕೆಲವು ತರ್ಜುಮೆಗಳು “ವಾಕ್ಯವು ದೈವಿಕವಾಗಿತ್ತು” ಎಂದು ಭಾಷಾಂತರಿಸಿವೆ. (ಆ್ಯನ್ ಅಮೆರಿಕನ್ ಟ್ರಾನ್ಸ್ಲೇಶನ್, ಸ್ಕೊನ್ಫೀಲ್ಡ್) ಮೊಫಟ್ ಅದನ್ನು “ಲೊಗೊಸ್ ದೈವಿಕವಾಗಿತ್ತು” ಎಂದು ತರ್ಜುಮಿಸಿದೆ. ಆದಾಗ್ಯೂ, “ದೈವಿಕ,” ಇಲ್ಲಿ ಅತಿ ಸೂಕ್ತವಾದ ತರ್ಜುಮೆಯಾಗದೇ ಇರಬಹುದಾದರೂ, ಒಂದುವೇಳೆ ಯೋಹಾನನು ಅದನ್ನು ಒತ್ತಿಹೇಳಲು ಬಯಸಿದ್ದಲ್ಲಿ, ಅವನು ಗ್ರೀಕ್ ಶಬ್ದವಾದ ಥಿಯೊ’ಸ್ ಅನ್ನು ಬಳಸುತ್ತಿದ್ದನು ಎಂದು ಜಾನ್ ರಾಬಿನ್ಸನ್ ಮತ್ತು ಬ್ರಿಟಿಷ್ ಗ್ರಂಥ ಪಾಠದ ವಿಮರ್ಶಕ ಸರ್ ಫ್ರೆಡರಿಕ್ ಕೆನ್ಯನ್ ಇಬ್ಬರೂ ನಿರ್ದೇಶಿಸಿದರು. “ದೇವರು” ಎಂಬ ಶಬ್ದವನ್ನು ಅನಿರ್ದೇಶಕವೆಂದು ಸರಿಯಾಗಿಯೇ ವೀಕ್ಷಿಸುತ್ತಾ, ಹಾಗೂ ಗ್ರೀಕ್ ರಚನೆಯಿಂದ ಸೂಚಿತವಾದ ಗುಣಾತ್ಮಕ ಅಂಶವನ್ನು ಹೊರತರುತ್ತಾ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಅದನ್ನು ಇಂಗ್ಲಿಷಿನಲ್ಲಿ ಅನಿರ್ದೇಶಕ ಗುಣವಾಚಿಯನ್ನು ಬಳಸಿಕೊಂಡು ತರ್ಜುಮಿಸುತ್ತದೆ: “ವಾಕ್ಯವು ಒಬ್ಬ ದೇವರಾಗಿದ್ದನು.”
ನ್ಯೂ ಇಂಗ್ಲಿಷ್ ಬೈಬಲ್ನ ಯೋಜನೆಯ ನಿರ್ದೇಶಕರಾದ ಪ್ರೊಫೆಸರ್ ಸಿ. ಏಚ್. ಡೊಡ್, ಈ ಪ್ರಸ್ತಾಪದ ಮೇಲೆ ಹೇಳಿಕೆಯನ್ನೀಯುವುದು: “ಒಂದು ಶಕ್ಯವಾಗಿರುವ ತರ್ಜುಮೆ . . . ಏನಂದರೆ, ‘ವಾಕ್ಯವು ಒಬ್ಬ ದೇವರಾಗಿದ್ದನು.’ ಶಬ್ದಕ್ಕೆ ಶಬ್ದದ ತರ್ಜುಮೆಯಲ್ಲಿ ಅದರಲ್ಲಿ ತಪ್ಪನ್ನು ಕಂಡುಕೊಳ್ಳಸಾಧ್ಯವಿಲ್ಲ.” ಆದಾಗ್ಯೂ, ದಿ ನ್ಯೂ ಇಂಗ್ಲಿಷ್ ಬೈಬಲ್ ಆ ವಚನವನ್ನು ಆ ರೀತಿಯಲ್ಲಿ ತರ್ಜುಮಿಸುವುದಿಲ್ಲ. ಬದಲಾಗಿ, ಯೋಹಾನ 1:1 ಆ ಭಾಷಾಂತರದಲ್ಲಿ ಓದುವುದು: “ಎಲ್ಲಾ ಸಂಗತಿಗಳು ಆರಂಭಿಸಲ್ಪಡುವಾಗ, ವಾಕ್ಯವು ಈಗಾಗಲೇ ಇತ್ತು. ವಾಕ್ಯವು ದೇವರೊಂದಿಗೆ ವಾಸವಾಗಿತ್ತು, ಮತ್ತು ದೇವರು ಏನಾಗಿದ್ದನೋ, ವಾಕ್ಯವು ಅದಾಗಿತ್ತು.” ಸರಳವಾದ ತರ್ಜುಮೆಯನ್ನು ಭಾಷಾಂತರ ಸಮಿತಿಯು ಯಾಕೆ ಆಯ್ಕೆ ಮಾಡಲಿಲ್ಲ? ಪ್ರೊಫೆಸರ್ ಡೊಡ್ ಉತ್ತರಿಸುವುದು: “ಅದು ಅಸ್ವೀಕರಣೀಯವಾಗಿರುವ ಕಾರಣವೇನಂದರೆ ಅದು ಯೋಹಾನನ ವಿಚಾರಧಾರೆಗೆ ಮತ್ತು ಕ್ರೈಸ್ತ ಯೋಚನೆಗೆ ಸಮಗ್ರವಾಗಿ ವಿರುದ್ಧವಾಗಿ ಹೋಗುತ್ತದೆ.”—ಬೈಬಲ್ ತರ್ಜುಮೆಗಾರನಿಗೆ ತಾಂತ್ರಿಕ ಲೇಖಗಳು [ಟೆಕ್ನಿಕಲ್ ಪೇಪರ್ಸ್ ಫಾರ್ ದಿ ಬೈಬಲ್ ಟ್ರಾನ್ಸ್ಲೇಟರ್] ಸಂಪುಟ 28, ಜನವರಿ 1977.
ಶಾಸ್ತ್ರವಚನದ ಸರಳ ಅರ್ಥ
ಯೇಸುವು ಒಬ್ಬ ದೇವರಾಗಿದ್ದನು ಮತ್ತು ಸೃಷ್ಟಿಕರ್ತನಾಗಿರುವ ದೇವರೋಪಾದಿ ಅಲ್ಲ ಎಂಬ ಕಲ್ಪನೆಯು ಯೋಹಾನನ (ಅಂದರೆ ಅಪೊಸ್ತಲ ಯೋಹಾನನ) ವಿಚಾರಧಾರೆಗೆ ಹಾಗೂ ಕ್ರೈಸ್ತ ಯೋಚನೆಗೆ ಸಮಗ್ರವಾಗಿ ವಿರುದ್ಧವಾಗಿ ಹೋಗುತ್ತದೆ ಎಂದು ನಾವು ಹೇಳಬಹುದೇ? ಯೇಸು ಮತ್ತು ದೇವರಿಗೆ ಸೂಚಿಸಿರುವ ಕೆಲವು ಬೈಬಲ್ ವಚನಗಳನ್ನು ನಾವೀಗ ಪರೀಕ್ಷಿಸೋಣ, ಮತ್ತು ಅಥನೇಸಿಯನ್ ವಿಶ್ವಾಸ ಪ್ರಮಾಣವು ಸೂತ್ರೀಕರಿಸಲ್ಪಡುವ ಮೊದಲು ಜೀವಿಸಿದ್ದ ಕೆಲವು ವ್ಯಾಖ್ಯಾನಕಾರರು ಆ ವಚನಗಳ ಕುರಿತು ಏನು ಯೋಚಿಸಿದ್ದರೆಂದು ನಾವೀಗ ನೋಡೋಣ.
“ನಾನು ತಂದೆಯೂ ಒಂದಾಗಿದ್ದೇವೆ.”—ಯೋಹಾನ 10:30.
ನವೆಶನ್ (ಸುಮಾರು ಸಾ.ಶ. 200-258) ಇದರ ಮೇಲೆ ಹೇಳಿಕೆಯನ್ನಿತ್ತದ್ದು: “ಮತ್ತು ಅವನು ‘ಒಂದು’ ಸಂಗತಿ [b] ಯನ್ನು ಹೇಳಿದ್ದರಿಂದ, ಅವನು ‘ಒಬ್ಬ’ ವ್ಯಕ್ತಿ ಎಂದು ಹೇಳಲಿಲ್ಲ ಎಂದು ಪಾಷಂಡಿಗಳು ತಿಳಿದುಕೊಳ್ಳಲಿ. ಒಂದು ನಪುಂಸಕ ಲಿಂಗದಲ್ಲಿದ್ದುಕೊಂಡು, ಸಾಮಾಜಿಕ ಹೊಂದಿಕೆಯನ್ನು ಸೂಚಿಸುತ್ತದೆ, ವ್ಯಕ್ತಿಗತ ಐಕ್ಯತೆಯನ್ನಲ್ಲ. . . . ಇನ್ನೂ ಹೆಚ್ಚಾಗಿ, ಅವನು ಒಂದು ಹೇಳುವಾಗ, ಸಮ್ಮತಿಗೆ ಸೂಚಕವಿದೆ, ಮತ್ತು ನ್ಯಾಯತೀರ್ಪಿನಲ್ಲಿ ಅನನ್ಯತೆ, ಮತ್ತು ಸ್ವತಃ ಪ್ರೀತಿಯ ಸಾಹಚರ್ಯ, ಸಮಂಜಸವಾಗಿ ತಂದೆ ಮತ್ತು ಮಗನು ಸಹಮತಿಯಲ್ಲಿ, ಪ್ರೀತಿಯಲ್ಲಿ, ಮತ್ತು ವಾತ್ಸಲ್ಯದಲ್ಲಿ ಒಂದಾಗಿದ್ದಾರೆ.”—ತ್ರಯೈಕ್ಯದ ಕುರಿತು ಪ್ರಕರಣ ಗ್ರಂಥ [ಟ್ರೀಟಿಸ್ ಕನ್ಸರ್ನಿಂಗ್ ದಿ ಟ್ರಿನಿಟಿ], ಅಧ್ಯಾಯ 27.
“ತಂದೆಯು ನನಗಿಂತ ದೊಡ್ಡವನು.”—ಯೋಹಾನ 14:28.
ಐರಿನಿಯಸ್ (ಸುಮಾರು ಸಾ.ಶ. 130-200): “ಎಲ್ಲಾ ಸಂಗತಿಗಳಿಗಿಂತಲೂ ತಂದೆಯು ಮೇಲಿನವನು ಎಂದು ನಾವು ಆತನ [ಕ್ರಿಸ್ತನ] ಮೂಲಕ ಕಲಿಯಬಹುದು. ಯಾಕಂದರೆ ಅವನು ಹೇಳುವುದೇನಂದರೆ ‘ತಂದೆಯು ನನಗಿಂತ ದೊಡ್ಡವನು.’ ಆದಕಾರಣ, ತಂದೆಯು ಜ್ಞಾನದ ವಿಷಯದಲ್ಲಿ ಅತ್ಯುತ್ಕೃಷನ್ಟಾಗಿರುವನೆಂದು ನಮ್ಮ ಕರ್ತನಿಂದ ಘೋಷಿಸಲ್ಪಟ್ಟಿದೆ.”—ಪಾಷಂಡಿತನದ ವಿರುದ್ಧ [ಅಗೇನ್ಸ್ಟ್ ಹೆರೆಸೀಸ್], ಪುಸ್ತಕ II, ಅಧ್ಯಾಯ 28.8.
“ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯ ಜೀವವು.”—ಯೋಹಾನ 17:3.
ಅಲೆಕ್ಸಾಂಡ್ರಿಯದ ಕೆಮ್ಲಂಟ್ (ಸುಮಾರು ಶಾ.ಸ. 150-215): “ನಿತ್ಯವು ಏನಾಗಿದೆಯೋ ಅದರ ದಾತನಾದ ನಿತ್ಯ ದೇವರನ್ನು, ಮತ್ತು ಪ್ರಥಮನೂ, ಮತ್ತು ಅತ್ಯುನ್ನತನೂ, ಮತ್ತು ಒಬ್ಬನೂ, ಮತ್ತು ಒಳ್ಳೆಯವನೂ ಆಗಿರುವ ದೇವರನ್ನು ಜ್ಞಾನದಿಂದ ಮತ್ತು ಗ್ರಹಿಕೆಯಿಂದ ಹೊಂದಲು ತಿಳಿಯುವುದಾಗಿದೆ. . . . ನಿಜ ಜೀವವನ್ನು ಜೀವಿಸುವ ವ್ಯಕ್ತಿಯು, ಮೊದಲು ದೇವರನ್ನು ತಿಳಿದುಕೊಳ್ಳುವ ಆವಶ್ಯಕತೆಯಿದೆ, ಆ ದೇವರ ಕುರಿತು ‘ಮಗನು (ಅವನನ್ನು) ಪ್ರಕಟಪಡಿಸಿದ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ.’ (ಮತ್ತಾ. 11:27) ಅವನ ನಂತರ, ರಕ್ಷಕನ ಮಹತ್ವವನ್ನು ಕಲಿಯಬೇಕಾಗಿದೆ.”—ರಕ್ಷಿಸಲ್ಪಡುವ ಶ್ರೀಮಂತ ಮನುಷ್ಯನು ಯಾರು? [ಹೂ ಇಸ್ ದ ರಿಚ್ ಮ್ಯಾನ್ ದ್ಯಾಟ್ ಷಲ್ ಬಿ ಸೇವ್ಡ್?] VII, VIII.
“ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲಿರುವವನೂ ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ ಎಲ್ಲರಲ್ಲಿ ವಾಸಿಸುವನೂ ಆಗಿದ್ದಾನೆ.”—ಎಫೆಸ 4:6.
ಐರಿನಿಯಸ್: “ಮತ್ತು ಈ ರೀತಿಯಲ್ಲಿ ಎಲ್ಲರ ಮೇಲಿರುವವನೂ, ಮತ್ತು ಎಲ್ಲರ ಮುಖಾಂತರ ಮತ್ತು ಎಲ್ಲರಲ್ಲಿಯೂ ಇರುವ ತಂದೆಯಾದ ಒಬ್ಬ ದೇವರನ್ನು ಘೋಷಿಸಲಾಗಿದೆ. ತಂದೆಯು ಖಂಡಿತವಾಗಿಯೂ ಎಲ್ಲರಿಗಿಂತಲೂ ಮೇಲಿನವನು, ಮತ್ತು ಅವನು ಕ್ರಿಸ್ತನ ಶಿರಸ್ಸು ಆಗಿದ್ದಾನೆ.”—ಪಾಷಂಡಿತನದ ವಿರುದ್ಧ [ಅಗೇನ್ಸ್ಟ್ ಹೆರೆಸೀಸ್], ಪುಸ್ತಕ V, ಅಧ್ಯಾಯ 18.2.
ಈ ವಚನಗಳು ತಂದೆಯನ್ನು ಅತಿ ಶ್ರೇಷ್ಠನೂ, ಎಲ್ಲದರ ಮತ್ತು ಯೇಸು ಕ್ರಿಸ್ತನ ಸಹಿತ ಎಲ್ಲರ ಮೇಲಿನವನೂ ಎಂದು ವರ್ಣಿಸುತ್ತವೆ ಎಂದು ಆರಂಭದ ಈ ಲೇಖಕರು ಸ್ಪಷ್ಟವಾಗಿಗಿ ತಿಳಿದುಕೊಂಡಿದ್ದರು. ಅವರು ತ್ರಯೈಕ್ಯವೊಂದನ್ನು ನಂಬಿದ್ದರೆಂದು ಅವರ ಹೇಳಿಕೆಗಳು ಯಾವುದೇ ಸುಳಿವನ್ನು ಕೊಡುವುದಿಲ್ಲ.
ಎಲ್ಲಾ ಸತ್ಯವನ್ನು ಪವಿತ್ರ ಆತ್ಮವು ಪ್ರಕಟಿಸುತ್ತದೆ
ಪವಿತ್ರಾತ್ಮವನ್ನು ಸಹಾಯಕನೋಪಾದಿ ಅವನ ಮರಣ ಮತ್ತು ಪುನರುತ್ಥಾನದ ನಂತರ ಅವರಿಗೆ ಕೊಡಲ್ಪಡುವುದೆಂದು ಯೇಸುವು ತನ್ನ ಶಿಷ್ಯರಿಗೆ ವಚನವನ್ನಿತ್ತಿದ್ದನು. ಅವನು ಆಶ್ವಾಸನೆಯನ್ನಿತ್ತದ್ದು: “ಸತ್ಯದ ಆತ್ಮನು ಬಂದಾಗ, ಆತನು ನಿಮ್ಮನ್ನು ನಡಿಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು. . . . ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ ತಿಳಿಸುವನು.”—ಯೋಹಾನ 14:16, 17; 15:26; 16:13.
ಯೇಸುವಿನ ಮರಣಾನಂತರ, ಆ ವಾಗ್ದಾನವು ನೆರವೇರಲ್ಪಟ್ಟಿತು. ಪವಿತ್ರಾತ್ಮದ ಸಹಾಯದ ಮೂಲಕ ಕ್ರೈಸ್ತ ಸಭೆಗೆ ಹೊಸ ಬೋಧನೆಗಳು ಹೇಗೆ ಪ್ರಕಟಿಸಲ್ಪಟ್ಟವು ಯಾ ಸ್ಪಷ್ಟೀಕರಿಸಲ್ಪಟ್ಟವು ಎಂದು ಬೈಬಲ್ ದಾಖಲಿಸುತ್ತದೆ. ಈ ಹೊಸ ಉಪದೇಶಗಳು ಕ್ರೈಸ್ತ ಗ್ರೀಕ್ ಬರಹಗಳು ಯಾ “ಹೊಸ ಒಡಂಬಡಿಕೆ” ಆದ ಬೈಬಲಿನ ಎರಡನೆಯ ಭಾಗವಾಗಿ ತದನಂತರ ಪುಸ್ತಕಗಳಲ್ಲಿ ಬರೆಯಲ್ಪಟ್ಟವು. ಹೊಸ ಬೆಳಕಿನ ಈ ಹೊನಲಿನಲ್ಲಿ ತ್ರಯೈಕ್ಯವೊಂದರ ಅಸ್ತಿತ್ವದ ಯಾವುದಾದರೂ ಪ್ರಕಟನೆಯು ಅಲ್ಲಿದೆಯೇ? ಇಲ್ಲ. ದೇವರ ಮತ್ತು ಯೇಸುವಿನ ಕುರಿತು ಪವಿತ್ರಾತ್ಮವು ಅತಿ ಭಿನ್ನವಾದುದನ್ನು ಪ್ರಕಟಿಸುತ್ತದೆ.
ಉದಾಹರಣೆಗೆ, ಸಾ.ಶ. 33ರ ಪಂಚಾಶತ್ತಮದಲ್ಲಿ, ಪವಿತ್ರಾತ್ಮವು ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಶಿಷ್ಯರ ಮೇಲೆ ಬಂದಾಗ, ಹೊರಗಡೆಯಿದ್ದ ಜನಸಂದಣಿಗೆ ಯೇಸುವಿನ ಕುರಿತು ಅಪೊಸ್ತಲ ಪೇತ್ರನು ಸಾಕ್ಷಿಯನ್ನಿತ್ತನು. ಅವನು ತ್ರಯೈಕ್ಯವೊಂದರ ಕುರಿತು ಮಾತಾಡಿದನೋ? ಅವನ ಕೆಲವೊಂದು ಹೇಳಿಕೆಗಳನ್ನು ಪರಿಗಣಿಸಿ, ನೀವಾಗಿಯೇ ತೀರ್ಮಾನಿಸಿರಿ: “ಯೇಸು . . . ದೇವರು ನಿಮಗೂ ತಿಳಿದಿರುವಂತೆ ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನು ನಿಮ್ಮಲ್ಲಿ ನಡಿಸಿ ಆತನನ್ನು ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು.” “ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ.” “ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ.” (ಅ. ಕೃತ್ಯಗಳು 2:22, 32, 36) ತ್ರಯೈಕ್ಯವೊಂದನ್ನು ಕಲಿಸುವ ಬದಲಾಗಿ, ಪವಿತ್ರಾತ್ಮ ಭರಿತನಾದ ಪೇತ್ರನ ಈ ಅಭಿವ್ಯಕ್ತಿಗಳು, ತನ್ನ ತಂದೆಗೆ ಯೇಸುವಿನ ಅಧೀನತೆಯನ್ನೂ, ದೇವರ ಚಿತ್ತದ ನೆರವೇರಿಕೆಗಾಗಿ ಅವನೊಬ್ಬ ಸಾಧನವಾಗಿದ್ದಾನೆಂದೂ ಎತ್ತಿತೋರಿಸುತ್ತವೆ.
ಅದರ ನಂತರ ಕೂಡಲೇ, ಯೇಸುವಿನ ಕುರಿತಾಗಿ ಇನ್ನೊಬ್ಬ ನಂಬಿಗಸ್ತ ಕ್ರೈಸ್ತನು ಮಾತಾಡಿದನು. ಸೆಫ್ತನನನ್ನು ಆರೋಪಗಳನ್ನುತರ್ತಿಸಲು ಹಿರೀಸಭೆಯ [ಸನ್ಹೇದ್ರಿನ್] ಮುಂದೆ ತರಲ್ಪಟ್ಟನು. ಪ್ರತಿಯಾಗಿ ಸೆಫ್ತನನು ಸನ್ನಿವೇಶವನ್ನು ತಿರುಗಿಸಿ, ಅವರ ದಂಗೆಕೋರ ಪೂರ್ವಜರಂತೆ ಅವನ ಆಪಾದಕರನ್ನು ದೋಷಿಗಳನ್ನಾಗಿ ಆಪಾದಿಸಿದನು. ಕಟ್ಟಕಡೆಗೆ, ದಾಖಲೆಯು ಅನ್ನುವುದು: “ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು—ಅಗೋ, ಆಕಾಶವು ತೆರೆದಿರುವುದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನೋಡುತ್ತೇನೆ ಅಂದನು.” (ಅ. ಕೃತ್ಯಗಳು 7:55, 56) ದೇವರ ಬಲಗಡೆಯಲ್ಲಿ ಕೇವಲ “ಮನುಷ್ಯಕುಮಾರ” ನಾಗಿ ಯೇಸುವು ನಿಂತಿರುವುದನ್ನು ಮತ್ತು ಆತನ ತಂದೆಯೊಂದಿಗೆ ದೇವಶಿರಸ್ಸುತನದ ಒಂದು ಭಾಗವಾಗಿರದೆ ಇರುವುದನ್ನು ಪವಿತ್ರಾತ್ಮವು ಪ್ರಕಟಿಸಿದ್ದು ಯಾಕೆ? ಸ್ಪಷ್ಟವಾಗಿಗಿ, ಸೆಫ್ತನನಿಗೆ ತ್ರಯೈಕ್ಯವೊಂದರ ಕಲ್ಪನೆಯು ಇರಲಿಲ್ಲ.
ಯೇಸುವಿನ ಕುರಿತ ಸುವಾರ್ತೆಯನ್ನು ಕೊರ್ನೇಲ್ಯನ ಬಳಿಗೆ ಪೇತ್ರನು ಕೊಂಡೊಯ್ದಾಗ, ತ್ರಯೈಕ್ಯ ತ್ತತ್ವವನ್ನು ಪ್ರಕಟಿಸಲು ಅಲ್ಲಿ ಇನ್ನೊಂದು ಅವಕಾಶವು ಇತ್ತು. ಏನು ಸಂಭವಿಸಿತು? ಪೇತ್ರನು ವಿವರಿಸಿದ್ದು: ಯೇಸುವು “ಎಲ್ಲಾ ಜನಗಳಿಗೂ ಕರ್ತನಾಗಿ” ದ್ದಾನೆ. ಆದರೆ ಅವನ ಈ ಕರ್ತತವ್ವು ಒಂದು ಉನ್ನತ ಮೂಲದಿಂದ ಬಂದಿದೆಯೆಂದು ವಿವರಿಸುತ್ತಾ ಅವನು ಮುಂದರಿದನು. ಯೇಸುವು “ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು” ಆಗಿದ್ದನು. ಯೇಸುವಿನ ಪುನರುತ್ಥಾನದ ಅನಂತರ, ಅವನ ತಂದೆಯು ಆತನ ಹಿಂಬಾಲಕರಿಗೆ “ಪ್ರತ್ಯಕ್ಷನಾಗುವಂತೆ ಮಾಡಿದನು [ಅವನಿಗೆ ಅನುಮತಿಯನ್ನಿತ್ತನು].” ಮತ್ತು ಪವಿತ್ರಾತ್ಮ? ಈ ಸಂಭಾಷಣೆಯಲ್ಲಿ ಅದು ಗೋಚರವಾಗುವುದಾದರೂ, ತ್ರಯೈಕ್ಯವೊಂದರ ಮೂರನೆಯ ವ್ಯಕ್ತಿಯೋಪಾದಿ ಅಲ್ಲ. ಬದಲಾಗಿ, “ದೇವರು [ಯೇಸುವನ್ನು] ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು.” ಹೀಗೆ, ಪವಿತ್ರಾತ್ಮವು ಒಂದು ವ್ಯಕ್ತಿಯಾಗಿರುವ ಬದಲು, ವ್ಯಕ್ತಿಸ್ವರೂಪವಿಲ್ಲದ ಯಾವುದೋ ಒಂದಾಗಿದೆ, ಆ ವಚನದಲ್ಲಿ ಉಲ್ಲೇಖಿಸಲ್ಪಟ್ಟಂತೆ ಸಹ “ಬಲ” ದೋಪಾದಿ ತೋರಿಸಲ್ಪಟ್ಟಿದೆ. (ಅ. ಕೃತ್ಯಗಳು 10:36, 38, 40, 42) ಬೈಬಲನ್ನು ಜಾಗರೂಕತೆಯಿಂದ ಪರೀಕ್ಷಿಸಿರಿ, ಮತ್ತು ಪವಿತ್ರಾತ್ಮವು ಒಂದು ವ್ಯಕ್ತಿತ್ವವಲ್ಲ ಬದಲು ಜನರಲ್ಲಿ ತುಂಬಿಸಸಾಧ್ಯವಿರುವ, ಅವರನ್ನು ಪ್ರಚೋದಿಸುವ, ಪ್ರಜ್ವಲವಾಗಿರುವಂತೆ ಅವರನ್ನು ಮಾಡಲು ಕಾರಣವಾಗುವ, ಮತ್ತು ಅವರ ಮೇಲೆ ಸುರಿಸಬಹುದಾದ ಒಂದು ಕ್ರಿಯಾಶಾಲಿ ಶಕ್ತಿಯಾಗಿದೆ ಎಂಬುದಕ್ಕೆ ಇನ್ನಷ್ಟು ಹೆಚ್ಚಿನ ಪುರಾವೆಯನ್ನು ನೀವು ಕಾಣುವಿರಿ.
ಕೊನೆಯಲ್ಲಿ, ತ್ರಯೈಕ್ಯದ ಬಗ್ಗೆ—ಅದೊಂದು ಸತ್ಯ ತತ್ವವಾಗಿದ್ದಲ್ಲಿ—ಅಥೇನೆಯರಿಗೆ ಅವನು ಸಾರುತ್ತಿದ್ದಾಗ, ಅಪೊಸ್ತಲ ಪೌಲನಿಗೆ ವಿವರಿಸಲು ಉತ್ತಮ ಸಂದರ್ಭವಿತ್ತು. ಅವನ ಭಾಷಣದಲ್ಲಿ ಅವರ “ತಿಳಿಯದ ದೇವರಿಗೆ” ಎಂಬ ಬಲಿಪೀಠಕ್ಕೆ ಅವನು ಸೂಚಿಸಿ, ಹೇಳಿದ್ದು: “ಆದಕಾರಣ ನೀವು ಯಾವದನ್ನು ತಿಳಿಯದೆ ಪೂಜಿಸುತ್ತೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ.” ಅವನು ತ್ರಯೈಕ್ಯವೊಂದನ್ನು ಪ್ರಚುರಿಸಿದನೋ? ಇಲ್ಲ. ಅವನು “ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯ” ನಾಗಿರುವವನನ್ನು ವರ್ಣಿಸಿದನು. ಆದರೆ ಯೇಸುವಿನ ಕುರಿತಾಗಿ ಏನು? “[ದೇವರು] ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ.” (ಅ. ಕೃತ್ಯಗಳು 17:23, 24, 31) ತ್ರಯೈಕ್ಯವೊಂದರ ಯಾವುದೇ ಸುಳಿವೂ ಅಲ್ಲಿಲ್ಲ!
ವಾಸ್ತವ್ಯದಲ್ಲಿ, ದೇವರ ಉದ್ದೇಶಗಳ ಕುರಿತಾಗಿ ಪೌಲನು ವಿವರಿಸಿದ ಕೆಲವು ಸಂಗತಿಗಳು, ಯೇಸುವು ಮತ್ತು ಅವನ ತಂದೆಯು ತ್ರಯೈಕ್ಯವೊಂದರ ಸರಿಸಮಾನ ಭಾಗಗಳಾಗಲು ಅಸಾಧ್ಯವನ್ನಾಗಿ ಮಾಡುತ್ತದೆ. ಅವನು ಬರೆದದ್ದು: “ದೇವರು ಸಮಸ್ತವನ್ನೂ ಆತನ [ಯೇಸುವಿನ] ಪಾದಗಳ ಕೆಳಗೆ ಹಾಕಿ ಆತನಿಗೆ ಅಧೀನಮಾಡಿದ್ದಾನೆಂಬದಾಗಿ ಹೇಳಿಯದೆಯಲ್ಲಾ. ಸಮಸ್ತವೂ ಆತನಿಗೆ ಅಧೀನಮಾಡಲ್ಪಟ್ಟಿದೆ ಎಂದು ಹೇಳುವಾಗ ಸಮಸ್ತವನ್ನು ಅಧೀನಮಾಡಿ ಕೊಟ್ಟಾತನು ಅದರಲ್ಲಿ ಸೇರಲಿಲ್ಲವೆಂಬದು ಸ್ಪಷ್ಟವಾಗಿಗಿದೆ. ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.” (1 ಕೊರಿಂಥ 15:27, 28) ಹೀಗೆ, ದೇವರು ಇನ್ನೂ ಯೇಸುವಿನ ಸಹಿತ, ಎಲ್ಲರ ಮೇಲೆ ಇರುವನು.
ಹಾಗಾದರೆ, ಬೈಬಲಿನಲ್ಲಿ ತ್ರಯೈಕ್ಯವು ಕಲಿಸಲ್ಪಟ್ಟಿದೆಯೇ? ಇಲ್ಲ. ಜಾನ್ ರಾಬಿನ್ಸನ್ ಸರಿಯಾಗಿದ್ದನು. ಅದು ಬೈಬಲಿನಲ್ಲಿ ಇಲ್ಲ, ಯಾ ಅದು “ಕ್ರೈಸ್ತ ಯೋಚನೆ”ಯ ಭಾಗವಾಗಿಯೂ ಇಲ್ಲ. ಇದು ನಿಮ್ಮ ಆರಾಧನೆಗೆ ಪ್ರಾಮುಖ್ಯವೆಂಬುದಾಗಿ ನೀವು ಎಣಿಸುತ್ತೀರೋ? ನೀವು ಎಣಿಸತಕ್ಕದ್ದು. ಯೇಸುವು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯ ಜೀವವು.” (ಯೋಹಾನ 17:3) ದೇವರ ನಮ್ಮ ಆರಾಧನೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಾದರೆ, ಅವನು ನಿಜವಾಗಿ ಏನಾಗಿದಾನ್ದೋ, ಅವನು ನಮಗೆ ಸ್ವತಃ ಪ್ರಕಟಿಸಿಕೊಂಡಂತೆ ಅವನನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ. ಆಗಮಾತ್ರವೇ, “ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಸತ್ಯಾರಾಧಕರ” ನಡುವೆ ನಾವು ಇದ್ದೇವೆ ಎಂದು ನಾವು ಸತ್ಯವಾಗಿ ಹೇಳಬಲ್ಲೆವು.—ಯೋಹಾನ 4:23, NW.
[ಅಧ್ಯಯನ ಪ್ರಶ್ನೆಗಳು]
a ದ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯದ 1907 ಆವೃತ್ತಿ, ಸಂಪುಟ 2, ಪುಟ 33 ಕ್ಕನುಸಾರ.
b ಈ ವಚನದಲ್ಲಿ ವಾಕ್ಯವು ನಪುಸಂಕ ಲಿಂಗದಲ್ಲಿ “ಒಂದು” ಎಂಬ ವಾಸ್ತವಾಂಶಕ್ಕೆ ನವೆಶನ್ ಸೂಚಿಸುತ್ತಿದ್ದಾನೆ. ಆದಕಾರಣ, ಅದರ ಸ್ವಾಭಾವಿಕ ಅರ್ಥವು “ಒಂದು ಸಂಗತಿ” ಯಾಗಿದೆ. ಎಲ್ಲಿ “ಒಂದು” ಎಂಬುದಕ್ಕಾಗಿರುವ ಗ್ರೀಕ್ ಶಬ್ದವನ್ನು ನಿಷ್ಕೃಷ್ಟವಾಗಿ ಸಮಾನಾಂತರದಲ್ಲಿ ಬಳಸಲಾಗಿದೆಯೋ ಆ ಯೋಹಾನ 17:21ನ್ನು ಸರಿದೂಗಿಸಿರಿ. ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ (1967 ಆವೃತ್ತಿ) ನವೆಶಿಯನನ ಡಿ ಟ್ರಿನಿಟೊಟ್ ಅನ್ನು ಸಾಮಾನ್ಯವಾಗಿ ಸಹಮತಿಸುತ್ತದಾದರೂ, ಆಸಕ್ತಕರವಾಗಿ ಅದು ಗಮನಿಸುವುದೇನಂದರೆ ಅದರಲ್ಲಿ “ದೈವಿಕ ವ್ಯಕ್ತಿಯಾಗಿ ಪವಿತ್ರಾತ್ಮನನ್ನು ಪರಿಗಣಿಸಿಲ್ಲ.”
[ಪುಟ 28 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯೇಸು ಮತ್ತು ಅವನ ತಂದೆಯು ಏಕ ದೇವರಾಗಿರುವುದಿಲ್ಲವೆಂದು ಶಾಸ್ತ್ರಗ್ರಂಥದ ಸರಳ ಭಾವವು ಸ್ಪಷ್ಟವಾಗಿಗಿ ತೋರಿಸುತ್ತದೆ
[ಪುಟ 29 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಸಾ.ಶ. 33ರ ಪಂಚಾಶತ್ತಮದ ನಂತರ ಯೇಸುವು ದೇವರಾಗಿದ್ದನು ಎಂದು ಪವಿತ್ರಾತ್ಮವು ಯಾಕೆ ಪ್ರಕಟಿಸಲಿಲ್ಲ?