“ಎಲ್ಲಾ ಒಳ್ಳೇ ದಾನಗಳ” ದಾತನು
“ಒಂದು ಸಂದರ್ಭದಲ್ಲಿ ರಿಫಾರ್ಮ್‌ಡ್ ಚರ್ಚಿನ ಒಬ್ಬ ಪಾದ್ರಿಯು ನನ್ನನ್ನು ಸಂದರ್ಶಿಸಿದರು. ನನ್ನ ಚರ್ಚನ್ನು ನಾನು ಹೇಗೆ ನಿರ್ವಹಿಸುತ್ತಿದ್ದೇನೆಂದು ಅವರು ತಿಳಿಯಲು ಬಯಸಿದರು. ನಾನು ಅವರಿಗಂದದ್ದು: . . . ‘ನಾವು ಸಂಬಳಗಳನ್ನು ಕೊಡುವುದಿಲ್ಲ; ಜನರು ಜಗಳವಾಡುವಂತೆ ಮಾಡುವ ಯಾವುದೂ ಅಲ್ಲಿಲ್ಲ. ನಾವೆಂದೂ ಕಾಣಿಕೆ ವಸೂಲು ಮಾಡುವುದಿಲ್ಲ.’ ‘ನಿಮಗೆ ಹಣ ಹೇಗೆ ಸಿಗುತ್ತದೆ?’ ಎಂದು ಕೇಳಿದರು ಅವರು. ನಾನು ಉತ್ತರಿಸಿದ್ದು, ‘ನೋಡಿ, ಡಾಕ್ಟರ್ . . , ಯಾವುದು ಅತ್ಯಂತ ಸರಳ ಸತ್ಯವೋ ಅದನ್ನು ನಾನು ನಿಮಗೆ ತಿಳಿಸಿದಲ್ಲಿ, ನೀವದನ್ನು ಸ್ವಲ್ಪವೂ ನಂಬಲು ಶಕ್ತರಾಗಲಿಕ್ಕಿಲ್ಲ. ಜನರು ಈ ರೀತಿ ಆಸಕ್ತರಾಗಿ ಪರಿಣಮಿಸುವಾಗ, ವಿಧಿರೂಪದ ಯಾವ ಕಾಣಿಕೆ ಪೆಟ್ಟಿಗೆಯೂ ತಮಗೆ ದಾಟಿಸಲ್ಪಡದೆ ಇರುವುದನ್ನು ಅವರು ಕಾಣುತ್ತಾರೆ. ಆದರೆ ಖರ್ಚುಗಳು ಇರುವುದನ್ನು ಅವರು ನೋಡುತ್ತಾರೆ. ಅವರು ತಮಗೆ ಹೇಳಿಕೊಳ್ಳುವದು, ‘ಈ ಸಭಾಗೃಹಕ್ಕೆ ಏನಾದರೂ ವೆಚ್ಚತಗಲುತ್ತದೆ. . . . ಈ ಉದ್ದೇಶಕ್ಕಾಗಿ ನಾನು ಸ್ವಲ್ಪ ಹಣವನ್ನು ಕಾಣಿಕೆಯಾಗಿ ಹೇಗೆ ಕೊಡಬಲ್ಲೆ?’ ‘ನನ್ನನ್ನು ಏನೆಂದು ನೆನಸುತ್ತೀರಿ ನೀವು, ತಿಳಿಗೇಡಿಯೆಂದೋ?’ ಎಂದು ಯೋಚಿಸುತ್ತಾರೋ ಎಂಬಂತೆ, ಅವರು ನನ್ನನ್ನು ನೋಡತೊಡಗಿದರು. ನಾನಂದದ್ದು, ‘ನೋಡಿ, ಡಾಕ್ಟರ್ . . ., ನಾನು ನಿಮಗೆ ಸರಳವಾದ ಸತ್ಯವನ್ನು ಹೇಳುತ್ತಾ ಇದ್ದೇನೆ. . . . ಒಬ್ಬನಿಗೆ ಒಂದು ಆಶೀರ್ವಾದ ಸಿಕ್ಕುವಾಗ ಮತ್ತು ಅವನಿಗೆ ಯಾವುದೇ ಐಹಿಕ ಅನುಕೂಲತೆಗಳಿರುವಾಗ ಅವನದನ್ನು ಕರ್ತನಿಗಾಗಿ ಉಪಯೋಗಿಸಲು ಬಯಸುತ್ತಾನೆ. ಅವನಿಗೆ ಅನುಕೂಲತೆಗಳಿರದಿದ್ದಲ್ಲಿ, ಅದಕ್ಕಾಗಿ ಅವನನ್ನು ನಾವೇಕೆ ಪೀಡಿಸಬೇಕು?’”
—ವಾಚ್ ಟವರ್ ಸೊಸೈಟಿಯ ಮೊದಲನೆಯ ಅಧ್ಯಕ್ಷ, ಚಾರ್ಲ್ಸ್ ಟಿ. ರಸ್ಸಲ್, “ದ ವಾಚ್‌ಟವರ್,” ಜುಲೈ 15, 1915.
ನಾವು ಕೊಡುತ್ತೇವೆ ಯಾಕಂದರೆ ಮೊದಲು ಕೊಟ್ಟವನು ಯೆಹೋವ ದೇವರು. ಅವನ ಕೊಡುವಿಕೆಯು ಗಣನಾತೀತ ಕಾಲಗಳ ಹಿಂದೆ ಸೃಷ್ಟಿಯಿಂದ—ಅವನ ಅತಿ ಪ್ರಥಮ ಸೃಷ್ಟಿಯಾದ “ಏಕ-ಜಾತ ಪುತ್ರ” ನಿಂದ ಪ್ರಾರಂಭಿಸಿತ್ತು. (ಯೋಹಾನ 3:16, NW) ಪ್ರೀತಿಯಿಂದಲೇ ಆತನು ಇತರರಿಗೆ ಜೀವದ ದಾನವನ್ನು ಕೊಟ್ಟನು.
ದೇವರ ಕುಮಾರನಾದ ಯೇಸು ಕ್ರಿಸ್ತನು, ನಮಗಾಗಿ ಯೆಹೋವನ ಮಹಾ ದಾನವಾಗಿದ್ದಾನೆ. ಆದರೆ ದೇವರ ಕುಮಾರನು, ತನ್ನಲ್ಲಿ ತಾನೇ, ದೇವರ ದಾನದ ಕೊನೆಯಲ್ಲ. “ದೇವರ ಅತಿಶಯವಾದ ಕೃಪೆ” ಯನ್ನು ಅಪೊಸ್ತಲ ಪೌಲನು “ವರ್ಣಿಸಲಶಕ್ಯವಾದ ವರ” ಎಂದು ಕರೆಯುತ್ತಾನೆ. (2 ಕೊರಿಂಥ 9:14, 15) ಈ ವರದಾನವು ಪ್ರತ್ಯಕ್ಷವಾಗಿ ಯೇಸುವಿನ ಮೂಲಕ ದೇವರು ತನ್ನ ಜನರಿಗೆ ನೀಡುವ ಎಲ್ಲಾ ಒಳ್ಳೇತನ ಮತ್ತು ಕೃಪೆಯ ಒಟ್ಟು ತಾತ್ಪರ್ಯವನ್ನು ಒಳಗೂಡಿದೆ. ಅಂಥ ಕೃಪೆಯು ಎಷ್ಟು ವಿಸ್ಮಯಕರವೆಂದರೆ ಅದು ಮಾನವ ವರ್ಣನಾಶಕ್ತಿಗೆ ಅಥವಾ ಅಭಿವ್ಯಕ್ತಿಗೆ ಅತೀತವಾಗಿದೆ. ಆದರೂ, ದೇವರ ಕೊಡುವಿಕೆಗೆ ಇನ್ನೂ ಬೇರೆ ವಿಭಾಗಗಳು ಇವೆ.
ಬಹು ಪೂರ್ವ ಕಾಲದಲ್ಲಿ ಒಬ್ಬ ಅರಸನು, ತಾನು ದಾನವಾಗಿ ಕೊಟ್ಟ ಯಾವುವೇ ಒಳ್ಳೇ ವಸ್ತುಗಳು ನಿಜವಾಗಿ ಯೆಹೋವನವೇ ಎಂದು ವಿವೇಕದಿಂದ ಮತ್ತು ನಮ್ರತೆಯಿಂದ ಅಂಗೀಕರಿಸಿದನು. ಅವನಂದದ್ದು: “ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ. ಯೆಹೋವನೇ, ರಾಜ್ಯವು ನಿನ್ನದು; ನೀನು ಮಹೋನ್ನತನಾಗಿ ಸರ್ವವನ್ನೂ ಆಳುವವನಾಗಿರುತ್ತೀ. . . . ಆದದರಿಂದ ನಾವು ಈ ಪ್ರಕಾರ ಸ್ವೇಚ್ಛೆಯಿಂದ ಕಾಣಿಕೆಗಳನ್ನು ಸಮರ್ಪಿಸಲು ಶಕ್ತಿಹೊಂದಿದ್ದಕ್ಕೆ ನಾನಾಗಲಿ ನನ್ನ ಪ್ರಜೆಗಳಾಗಲಿ ಎಷ್ಟರವರು? ಸಮಸ್ತವು ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.”—1 ಪೂರ್ವಕಾಲವೃತ್ತಾಂತ 29:11-14.
ದೇವರ ಮಾದರಿ
ಯಾವುದು ಪ್ರತಿಯೊಂದು ರೀತಿಯಲ್ಲಿ ಪೂರ್ಣವಾಗಿ ಒಳ್ಳೆಯದಾಗಿದೆಯೋ ಅದರ ಮೂಲನು ಯೆಹೋವ ದೇವರೆಂದು ಯೇಸು ಕ್ರಿಸ್ತನ ಒಬ್ಬ ಶಿಷ್ಯನಾದ ಯಾಕೋಬನಿಗೆ ತಿಳಿದಿತ್ತು: “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ. ಆತನಲ್ಲಿ ಚಂಚಲತವ್ವೇನೂ ಇಲ್ಲ, ವ್ಯತ್ಯಾಸದ ಸೂಚನೆಯೂ ಇಲ್ಲ.”—ಯಾಕೋಬ 1:17.
ದಾನಕೊಡುವ ವಿಷಯದಲ್ಲೂ, ಯೆಹೋವ ದೇವರು ಮಾನವರಿಗಿಂತ ಹೇಗೆ ಬೇರೆಯಾಗಿದ್ದಾನೆಂಬದನ್ನು ಯಾಕೋಬನು ಕಂಡನು. ಮನುಷ್ಯರು ಒಳ್ಳೇ ದಾನಗಳನ್ನು ಕೊಡಶಕ್ತರು ಆದರೆ ಹಾಗೆ ಯಾವಾಗಲೂ ಮಾಡುವುದಿಲ್ಲ. ಈ ಕೊಡುಗೆಗಳು ಒಂದು ಸ್ವಾರ್ಥ ಹೇತುವಿನಿಂದಾಗಿ ಉದ್ಭವಿಸಬಹುದು, ಅಥವಾ ಏನಾದರೂ ಕೆಟ್ಟದನ್ನು ಮಾಡುವಂತೆ ಒಬ್ಬ ವ್ಯಕ್ತಿಯನ್ನು ಪ್ರೇರೇಪಿಸಲು ಅವನನ್ನು ಉಪಯೋಗಿಸಬಹುದು. ಯೆಹೋವನಲ್ಲಿಯಾದರೋ ಚಂಚಲತವ್ವೇನೂ ಇಲ್ಲ; ವ್ಯತ್ಯಾಸದ ಸೂಚನೆಯೂ ಇಲ್ಲ. ಆದುದರಿಂದ ಅವನ ಕೊಡುಗೆಗಳ ವಿಧಾನಗಳು ಬದಲಾಗುವುದಿಲ್ಲ. ಅವು ಯಾವಾಗಲೂ ಶುದ್ಧವಾಗಿರುತ್ತವೆ. ಅವು ಯಾವಾಗಲೂ ಮಾನವ ಕುಲದ ಸುಕ್ಷೇಮ ಮತ್ತು ಸಂತೋಷವನ್ನು ಪ್ರವರ್ಧಿಸುತ್ತವೆ. ಅವು ಯಾವಾಗಲೂ ಉಪಕಾರಶೀಲವೂ ಸಹಾಯಕಾರಿಯೂ ಆಗಿವೆ, ಎಂದೂ ನಾಶಕಾರಕವಲ್ಲ.
ದಾನಗಳನ್ನು ಕೊಡುವ ಹೇತುಗಳು
ಯೇಸುವಿನ ದಿನಗಳಲ್ಲಿ ಜನಪ್ರಿಯ ಧಾರ್ಮಿಕ ಮುಖಂಡರು ಜನರಿಂದ ನೋಡಲ್ಪಡುವುದಕ್ಕಾಗಿಯೇ ದಾನಧರ್ಮಗಳನ್ನು ಮಾಡುತ್ತಿದ್ದರು. ಅವರು ದುರುದ್ದೇಶದಿಂದ ದಾನಕೊಟ್ಟರು. ಜನರಿಂದ ಹೊಗಳಿಸಿಕೊಳ್ಳುವುದಕ್ಕೆ ಆತುರಪಟ್ಟು, ಅವರು ತಮ್ಮ ನೀತಿಯುಳ್ಳ ಮಟ್ಟಗಳನ್ನು ಬಿಟ್ಟುಕೊಟ್ಟರು. ಆದರೆ, ಕ್ರೈಸ್ತರು ಬೇರೆಯಾಗಿರಬೇಕಿತ್ತು. ಯೇಸು ಅವರಿಗೆ ಬುದ್ಧಿಹೇಳಿದ್ದು: “ಆದುದರಿಂದ ನೀನು ಧರ್ಮಕೊಡುವಾಗ ನಿನ್ನ ಮುಂದೆ ಕೊಂಬೂದಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀನಾದರೆ ಧರ್ಮಕೊಡುವಾಗ ನೀನು ಧರ್ಮಕೊಟ್ಟದ್ದು ಅಂತರಂಗವಾಗುವ ಹಾಗೆ ನಿನ್ನ ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ. ಅಂತರಂಗದಲ್ಲಿ ನಡಿಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.”—ಮತ್ತಾಯ 6:2-4.
ಕ್ರೈಸ್ತನೊಬ್ಬನ ಧರ್ಮಕಾರ್ಯಕ್ಕೆ ಕಾರಣವು ಇತರರ ಒಂದು ಕೊರತೆಯನ್ನು ನೀಗಿಸಲು ಸಹಾಯಕ್ಕಾಗಿ ಅಥವಾ ಅವರನ್ನು ಸಂತೋಷಗೊಳಿಸಲಿಕ್ಕಾಗಿ ಇಲ್ಲವೆ ಸತ್ಯಾರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ಆಗಿದೆ. ಅದು ಆತ್ಮ ಶ್ಲಾಘನೆಗಾಗಿ ಅಲ್ಲ. ಎಷ್ಟೆಂದರೂ, ಯೆಹೋವನ ನೇತ್ರಗಳು, ನಮ್ಮ ಹೃದಯದಾಳದ ಕಟ್ಟಕಡೆಗೆ ತೂರಬಲ್ಲವು. ನಮ್ಮ ದಯೆಯ ಕಾಣಿಕೆಗಳ ಹಿಂದಿರುವ ಅತ್ಯಂತ ಅಂತರಿಕ ಹೇತುವನ್ನು ಆತನು ಕಾಣಶಕ್ತನು.
ಯೆಹೋವನ ಸಾಕ್ಷಿಗಳು ದಾನ ಕೊಡುವುದರಲ್ಲಿ ಯೆಹೋವನ ಮತ್ತು ಆತನ ಕುಮಾರನ ಮಾದರಿಯನ್ನು ಪಾಲಿಸಲು ಪ್ರಯತ್ನಪಡುತ್ತಾರೆ. ತಮ್ಮಲ್ಲಿ ಏನಿದೆಯೋ ಅದರಿಂದ ಅವರು ಕೊಡುತ್ತಾರೆ. ಅವರಲ್ಲಿ ರಾಜ್ಯದ ಸುವಾರ್ತೆಯು ಇದೆ, ಮತ್ತು ಇದನ್ನು ಇತರರ ಆಶೀರ್ವಾದಕ್ಕಾಗಿ ಅವರು ಕೊಡುತ್ತಾರೆ. ಜ್ಞಾನೋಕ್ತಿ 3:9 ಹೀಗನ್ನುತ್ತದೆಂದು ಅವರಿಗೆ ಗೊತ್ತಿದೆ: “ನಿನ್ನ ಆದಾಯದಿಂದಲೂ ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು.” ಪ್ರತಿಯೊಂದು ವಾಚ್ ಟವರ್ ಬ್ರಾಂಚ್ ಕಚೇರಿ, ಸಭೆ, ಮತ್ತು ವ್ಯಕ್ತಿಯು ಎಲ್ಲರ ಹಿತಚಿಂತನೆಗಾಗಿ ಕಾಣಿಕೆ ಕೊಡಲು ಮನಃಪೂರ್ವಕವಾಗಿ ಹುಡುಕುವುದರಿಂದ, ಇಡೀ ಸಹೋದರತ್ವವು ಆತ್ಮಿಕವಾಗಿ ದೃಢವೂ ಸಮೃದ್ಧವೂ ಅಗಿ ಮಾಡಲ್ಪಡುತ್ತದೆ. ಐಹಿಕ ಸಮೃದ್ಧಯು ಆತ್ಮಿಕ ಸಮೃದ್ಧಿಗೆ ನಡಿಸುವುದಿಲ್ಲ, ಆದರೆ ಆತ್ಮಿಕ ಸಮೃದ್ಧಯು ಯೆಹೋವನ ಕಾರ್ಯದ ಅಗತ್ಯಗಳಿಗಾಗಿ ಸಾಕಷ್ಟು ಐಹಿಕ ಸಮೃದ್ಧಿಯನ್ನು ತರುತ್ತದೆ.
ಪಾಲಿಗರಾಗುವ ದಾರಿಗಳು
ಸುವಾರ್ತೆಯನ್ನು ಬೆಂಬಲಿಸುವುದಕ್ಕಾಗಿ ಪ್ರತಿಯೊಬ್ಬನೂ ನೆರವಾಗಬಲ್ಲ ಅನೇಕ ದಾರಿಗಳಿವೆ. ಒಂದು ದಾರಿಯು ರಾಜ್ಯ ಸಭಾಗೃಹಗಳ ಸಂಬಂಧದಲ್ಲಿದೆ. ಸಭೆಯ ಎಲ್ಲಾ ಸದಸ್ಯರು ರಾಜ್ಯ ಸಭಾಗೃಹವನ್ನು ಉಪಯೋಗಿಸುತ್ತಾರೆ. ಅದರ ಕಟ್ಟಡಕ್ಕಾಗಿ ಯಾ ಬಾಡಿಗೆಗೆ, ದೀಪಗಳಿಗೆ, ತಾಪಮಾನ ನಿಯಂತ್ರಣಕ್ಕೆ, ಮತ್ತು ದುರಸ್ತಿಗಾಗಿ ಯಾರೋ ಹಣವನ್ನು ಒದಗಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬನಿಂದ ಸಭೆಯ ಬೆಂಬಲವು ಆವಶ್ಯಕವಾಗಿರುವುದರಿಂದ, ಕಾಣಿಕೆ ಪೆಟ್ಟಿಗೆಗಳು ರಾಜ್ಯ ಸಭಾಗೃಹಗಳಲ್ಲಿ ಇಡಲ್ಪಡುತ್ತವೆ ಮತ್ತು ದೊರೆತ ಸ್ವಇಚ್ಛೆಯ ಕಾಣಿಕೆಗಳು ಸಭೆಯ ವೆಚ್ಚಗಳನ್ನು ನಿರ್ವಹಿಸಲು ಉಪಯೋಗಿಸಲ್ಪಡುತ್ತವೆ. ಮಿಗುತಾಯದಿಂದ, ಸ್ಥಳೀಕ ವಾಚ್ ಟವರ್ ಬ್ರಾಂಚ್‌ಗೆ, ಸಭೆಯ ನಿರ್ಣಯಕ್ಕನುಸಾರವಾಗಿ ಕಾಣಿಕೆಗಳನ್ನು ಕಳುಹಿಸಬಹುದು.
ಎಲ್ಲಿ ಸುವಾರ್ತೆಯು ಸಾಮಾನ್ಯ ಜನತೆಯನ್ನು ತಲಪಿರುವುದಿಲ್ಲವೋ ಲೋಕದ ಆ ಭಾಗಗಳಲ್ಲಿ ಮಿಷನೆರಿಗಳನ್ನು ಮತ್ತು ವಿಶೇಷ ಪಯನೀಯರರನ್ನು ತರಬೇತು ಮತ್ತು ಪೋಷಣೆಮಾಡಲಿಕ್ಕಾಗಿ ಕಾಣಿಕೆಗಳನ್ನು ನೇರವಾಗಿ ಸೊಸೈಟಿಯ ಬ್ರಾಂಚ್‌ಗೆ ಕಳುಹಿಸಸಾಧ್ಯವಿದೆ. ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಬೇರೆ ಖರ್ಚುಗಳು ಸಂಚಾರ ಮೇಲ್ವಿಚಾರಕರ ಕೆಲಸದ ಸಂಬಂಧದಲ್ಲಿವೆ. ಒಂದನೆಯ ಶತಮಾನದಲ್ಲಿ ಸಂಚಾರ ಸೇವೆಯಲ್ಲಿ ಮಾದರಿಯನ್ನಿಟ್ಟ ಅಪೊಸ್ತಲ ಪೌಲನು, ಫಿಲಿಪ್ಪಿಯ ಸಭೆಯನ್ನು ಪ್ರಶಂಸಿಸಿದ್ದನು: “ನೀವು ಒಂದೆರಡು ಸಾರಿ ನನ್ನ ಕೊರತೆಯನ್ನು ನೀಗಿಸುವದಕ್ಕಾಗಿ ಕೊಟ್ಟು ಕಳುಹಿಸಿದರಲ್ಲಾ.” (ಫಿಲಿಪ್ಪಿ 4:14-16) ಎಲ್ಲಾ ಬ್ರಾಂಚ್‌ಗಳಿಗೆ ಈ ಪೂರ್ಣ-ಸಮಯದ ಸೇವಾ ವಿಭಾಗಗಳಿಗಾಗಿ ವೆಚ್ಚವು ಮಾತ್ರವಲ್ಲದೆ, ಪ್ರತಿಯೊಂದು ಬೆತೆಲ್ ಮನೆಯ ಮತ್ತು ಅಲ್ಲಿ ವಾಸಿಸುವವರ ಮತ್ತು ಕೆಲಸಮಾಡುವವರ ಸಂರಕ್ಷಣೆಯನ್ನೂ ಮಾಡಲಿಕ್ಕಿದೆ. ಸುವಾರ್ತೆಯ ಅಂದವಾದ ಸಂದೇಶವನ್ನೊಳಗೊಂಡ ಸಾಹಿತ್ಯದ ಬರೆವಣಿಗೆ ಮತ್ತು ಮುದ್ರಣವು ನಿಶ್ಚಯವಾಗಿ ದೇವರಿಂದ ಕೊಡಲ್ಪಟ್ಟ ಸುಯೋಗಗಳಾಗಿವೆ, ಆದರೆ ಸಾಹಿತ್ಯದ ವಿತರಣೆಯು ಸಹ ಆವಶ್ಯಕ, ಮತ್ತು ಅದಕ್ಕೆ ಖರ್ಚು ತಗಲುತ್ತದೆ. ಅಲ್ಲದೆ ಸಮ್ಮೇಳನಗಳ ಮತ್ತು ಅಧಿವೇಶನಗಳ ಖರ್ಚು ಇದೆ, ‘ಸುವಾರ್ತೆಯ ವಿಷಯದಲ್ಲಿ ಪ್ರತಿವಾದಿಸಿ ನ್ಯಾಯಬದ್ಧವಾಗಿ ಸ್ಥಾಪಿಸಲು’ ಹೋರಾಡಿರುವ ಕೋರ್ಟ್ ವ್ಯಾಜ್ಯಗಳ ವೆಚ್ಚದ ಕುರಿತು ಹೇಳಬೇಕಾದುದಿಲ್ಲ.—ಫಿಲಿಪ್ಪಿ 1:7.
ಯೆಹೋವನ ಪ್ರತಿಯೊಬ್ಬ ಸೇವಕನಿಂದ ಸುವಾರ್ತೆಯನ್ನು ಸಾರುವುದರಲ್ಲಿ ಕಳೆಯುವ ಸಮಯವು ಸ್ವಯಂಸೇವೆಯಾಗಿದೆ, ಮತ್ತು ಅವನ ಐಹಿಕ ನಿಧಿಗಳ ಕೊಡುವಿಕೆ ಸಹ ಅದೇ ರೀತಿ ಇದೆ. ಸತ್ಯಾರಾಧನೆಯ ವಿಸ್ತರಣೆಯ ಬೆಂಬಲದಲ್ಲಿ ಉಪಯೋಗಿಸಲ್ಪಡಲು ಹಣವನ್ನು ಕ್ರಮವಾಗಿ ಬದಿಗಿಡುವಿಕೆಯು ಅಪೊಸ್ತಲ ಪೌಲನಿಂದ ಸೂಚಿಸಲ್ಪಟ್ಟಿದೆ: “ದೇವಜನರಿಗೋಸ್ಕರ ಹಣ ವಸೂಲುಮಾಡುವದನ್ನು ಕುರಿತು ನಾನು ಹೇಳುವದೇನಂದರೆ, . . . ನಿಮ್ಮಲ್ಲಿ ಪ್ರತಿಯೊಬ್ಬನು ತನಗೆ ಬಂದ ಸಂಪಾದನೆಯ ಮೇರೆಗೆ ವಾರವಾರದ ಮೊದಲನೆಯ ದಿನದಲ್ಲಿ ಗಂಟುಮಾಡಿ ತನ್ನ ಮನೆಯಲ್ಲಿ ಇಟ್ಟುಕೊಂಡಿರಬೇಕು.”—1 ಕೊರಿಂಥ 16:1, 2.
ಒಬ್ಬ ವ್ಯಕ್ತಿಯು ಒಂದು ದಾನವನ್ನು ಮಾಡುವಾಗ, ಅದು ನಿಖರವಾಗಿ ಹೇಗೆ ಉಪಯೋಗಿಸಲ್ಪಡಲಿದೆ ಎಂಬದನ್ನು ಅವನು ಯಾವಾಗಲೂ ತಿಳಿದಿರುವುದಿಲ್ಲ, ಆದರೆ ರಾಜ್ಯದ ಸಾರುವಿಕೆಯ ವಿಸ್ತಾರ್ಯದಲ್ಲಿ ಅವನು ಫಲಿತಾಂಶಗಳನ್ನು ಕಾಣುತ್ತಾನೆ. ರಾಜ್ಯದ ಸುವಾರ್ತೆಯು ಈಗ 45,00,000 ಕ್ಕಿಂತಲೂ ಹೆಚ್ಚು ಕ್ರೈಸ್ತ ಶುಶ್ರೂಷಕರಿಂದ 200 ಕ್ಕಿಂತಲೂ ಹೆಚ್ಚು ದೇಶ ಮತ್ತು ದ್ವೀಪಗಳಲ್ಲಿ ಸಾರಲ್ಪಡುತ್ತಿದೆಯೆಂದು 1993ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕದ ವರದಿಗಳು ತೋರಿಸುತ್ತವೆ. ಈ ವರದಿಗಳು ಹೃದಯವನ್ನು ಹುರಿದುಂಬಿಸುತ್ತವೆ. ಹೀಗಿರಲಾಗಿ, ಎಷ್ಟು ಮೊತ್ತದ್ದೇ ಆಗಿರಲಿ, ಯಾವುದೇ ಕೊಡುಗೆಯು ಸುವಾರ್ತೆಯನ್ನು ಜಗದ್ವ್ಯಾಪಕವಾಗಿ ಹಬ್ಬಿಸುವುದರಲ್ಲಿ ಸಹಾಯ ಮಾಡುತ್ತದೆ.
ಎಲ್ಲರ ಸಂಯುಕ್ತ ದಾನದಿಂದಾಗಿ ಈ ಕಾರ್ಯಕ್ಕೆ ಹಣಕಾಸು ಒದಗಿಸಲ್ಪಡುತ್ತದೆ. ಕೆಲವರು ಹೆಚ್ಚನ್ನು ಕೊಡಲು ಶಕ್ತರಾಗಿದ್ದಾರೆ, ಹೆಚ್ಚು ಪ್ರಮಾಣದ ಸಾರುವ ಕಾರ್ಯಕ್ಕೆ ಇದು ನೆರವಾಗುತ್ತದೆ. ಇತರರು ಕಡಿಮೆ ಕೊಡುತ್ತಾರೆ. ಆದರೆ ಮಿತವಾದ ದಾನಗಳನ್ನು ಮಾಡುವವರು ಅದಕ್ಕಾಗಿ ನಾಚುವ ಅಥವಾ ತಮ್ಮ ಪಾಲು ತೀರ ಅಲ್ಪವಾದದ್ದೆಂದು ಭಾವಿಸುವ ಅಗತ್ಯವಿಲ್ಲ. ಯೆಹೋವನು ಖಂಡಿತವಾಗಿಯೂ ಹಾಗೆ ಭಾವಿಸುವುದಿಲ್ಲ. ಯೆಹೋವನು ವಿಧವೆಯ ಅಲ್ಪ ಕಾಣಿಕೆಯನ್ನು ಎಷ್ಟು ಗಣ್ಯಮಾಡಿದನೆಂದು ತೋರಿಸಿದಾಗ ಯೇಸು ಇದನ್ನು ತೀರ ಸ್ಪಷ್ಟಮಾಡಿದ್ದಾನೆ. “ಆಗ ಒಬ್ಬ ಬಡ ವಿಧವೆಯು ಬಂದು ಎರಡು ಕಾಸುಗಳನ್ನು ಹಾಕಲು ಆತನು ಅದನ್ನು ನೋಡಿ—ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತ ಹೆಚ್ಚು ಹಾಕಿದ್ದಾಳೆ. ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದರ್ದಲ್ಲಿ ಕಾಣಿಕೆಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟಳು ಅಂದನು.”—ಲೂಕ 21:2-4.
ನಮ್ಮ ಆರ್ಥಿಕ ಪರಿಸ್ಥಿತಿಯು ಹೇಗೆಯೇ ಇರಲಿ, ಯೆಹೋವನನ್ನು ಸಂತೋಷಪಡಿಸುವ ವಿಧಗಳಲ್ಲಿ ನಾವು ದಾನಕೊಡಬಲ್ಲೆವು. ನಮ್ಮ ರಾಜ ಮತ್ತು ನ್ಯಾಯಾಧಿಪತಿಗೆ ಘನವನ್ನು ನಾವು ಹೇಗೆ ಕೊಡಬಹುದೆಂಬದನ್ನು ಕೀರ್ತನೆಗಾರನು ಚೆನ್ನಾಗಿ ಸಾರಾಂಶಿಸಿದ್ದಾನೆ. ಅವನಂದದ್ದು: “ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ; ಕಾಣಿಕೆಯೊಡನೆ ಆತನ ಅಂಗಳಗಳಿಗೆ ಬನ್ನಿರಿ.” (ಕೀರ್ತನೆ 96:8) ಆದುದರಿಂದ, ಸಂತೋಷವಾಗಿ ನಮ್ಮ ಕಾಣಿಕೆಯನ್ನು ಕೊಡುವ ಮೂಲಕ ನಾವು ನಮ್ಮ ಸ್ವರ್ಗೀಯ ತಂದೆಯ ಪ್ರೀತಿಯುಳ್ಳ ಮಾದರಿಯನ್ನು ಅನುಸರಿಸುವಂತಾಗಲಿ ಯಾಕಂದರೆ ನಮಗೆ ಮೊದಲು ಕೊಟ್ಟವನು ಆತನೇ.
[ಪುಟ 30 ರಲ್ಲಿರುವ ಚೌಕ]
ಕೆಲವರು ರಾಜ್ಯ-ಸಾರುವ ಕಾರ್ಯಕ್ಕೆ ದಾನಗಳನ್ನು ಮಾಡುವ ವಿಧ
▫ ಜಗದ್ವ್ಯಾಪಕ ಕಾರ್ಯಕ್ಕಾಗಿ ಕಾಣಿಕೆಗಳು: ಅನೇಕರು ಒಂದು ಮೊಬಲಗನ್ನು ಬದಿಗಿಟ್ಟು ಅಥವಾ ಆಯವ್ಯಯದ ಅಂದಾಜುಪಟ್ಟಿಮಾಡಿ, ಈ ಗುರುತುಪಟ್ಟಿಯ ಪೆಟ್ಟಿಗೆಗಳಿಗೆ ಹಾಕುತ್ತಾರೆ: “ಸೊಸೈಟಿಯ ಜಗದ್ವ್ಯಾಪಕ ಕಾರ್ಯಕ್ಕೋಸ್ಕರ ಕಾಣಿಕೆಗಳು—ಮತ್ತಾಯ 24:14.” ಪ್ರತಿ ತಿಂಗಳು ಸಭೆಗಳು ಈ ಮೊಬಲಗುಗಳನ್ನು ವಾಚ್‌ಟವರ್ ಸೊಸೈಟಿಯ ಅತಿ ಸಮೀಪದ ಬ್ರಾಂಚ್ ಆಫೀಸಿಗೆ ಕಳುಹಿಸುತ್ತವೆ.
▫ ಕೊಡುಗೆಗಳು: ಸ್ವ-ಇಷ್ಟದಿಂದ ಮಾಡುವ ಹಣದಾನಗಳನ್ನು ನೇರವಾಗಿ, Watch Tower Bible and Tract Society of India, H-58 Old Khandala Road, Lonavla, 410 401, Mah., ಇವರಿಗೆ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಕಳುಹಿಸಬಹುದು. ಆಭರಣಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನೂ ದಾನಕೊಡಬಹುದು. ಇಂಥ ದಾನಗಳೊಂದಿಗೆ, ಇದು ನೇರವಾಗಿ ಮಾಡಿರುವ ದಾನ ಎಂದು ಹೇಳುವ ಒಂದು ಸಂಕ್ಷಿಪ್ತ ಪತ್ರವು ಜತೆಗೂಡಿರಬೇಕು.
▫ ಷರತ್ತು-ದಾನದ ಏರ್ಪಾಡು: ವಾಚ್‌ಟವರ್ ಸೊಸೈಟಿಗೆ ದಾನಿಯ ಮರಣದ ತನಕ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಹಣವನ್ನು ಕೊಡಬಹುದು, ದಾನಿಗೆ ಒಂದುವೇಳೆ ವೈಯಕ್ತಿಕ ಅಗತ್ಯಬಿದ್ದರೆ ಅದನ್ನು ಅವನಿಗೆ ಹಿಂದೆ ಕೊಡುವ ಷರತ್ತಿನೊಂದಿಗೆ.
▫ ವಿಮೆ: ಜೀವವಿಮಾ ಪಾಲಿಸಿ ಅಥವಾ ನಿವೃತ್ತಿ ⁄ ಪೆನ್‌ಷ್‌ನ್ ಯೋಜನೆಯಲ್ಲಿ ವಾಚ್ ಟವರ್ ಸೊಸೈಟಿಯನ್ನು ಫಲಾನುಭವಿಯಾಗಿ ಹೆಸರಿಸಬಹುದು. ಇಂಥ ಯಾವುದೇ ಏರ್ಪಾಡನ್ನು ಸೊಸೈಟಿಗೆ ತಿಳಿಸತಕ್ಕದು.
▫ ಬ್ಯಾಂಕ್ ಅಕೌಂಟ್‌ಗಳು: ಬ್ಯಾಂಕ್ ಅಕೌಂಟ್‌ಗಳು, ಠೇವಣಾತಿ ಸರ್ಟಿಫಿಕೇಟ್‌ಗಳು ಅಥವಾ ವೈಯಕ್ತಿಕ ನಿವೃತ್ತಿ ಅಕೌಂಟ್‌ಗಳನ್ನು ಸ್ಥಳೀಕ ಬ್ಯಾಂಕ್ ಆವಶ್ಯಕತೆಗೆ ಹೊಂದಿಕೆಯಲ್ಲಿ, ವಾಚ್ ಟವರ್ ಸೊಸೈಟಿ ಟ್ರಸ್ಟಿನಲ್ಲಿಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣ ಹೊಂದುವಲ್ಲಿ ವಾಚ್ ಟವರ್ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು. ಇಂಥ ಯಾವುದೇ ಏರ್ಪಾಡುಗಳನ್ನು ಸೊಸೈಟಿಗೆ ತಿಳಿಸಬೇಕು.
▫ ಸ್ಟಾಕ್ ಮತ್ತು ಬಾಂಡ್: ಸ್ಟಾಕ್ ಮತ್ತು ಬಾಂಡ್‌ಗಳನ್ನು ಒಂದು ನೇರವಾದ ಕೊಡುಗೆಯಾಗಿ ಇಲ್ಲವೆ ಆದಾಯವು ದಾನಿಗೆ ಸಲ್ಲುತ್ತಾ ಇರುವಂಥ ಒಂದು ಏರ್ಪಾಡಿನೊಂದಿಗೆ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು.
▫ ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ ಇಲ್ಲವೆ ದಾನಿ ಅವನ ⁄ ಅವಳ ಜೀವಮಾನಕಾಲ ಅಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು. ಒಬ್ಬನು ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರ ಮಾಡುವ ಮೊದಲು ಸೊಸೈಟಿಯನ್ನು ಸಂಪರ್ಕಿಸಬೇಕು.
▫ ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಇಚ್ಛಾ-ಪತ್ರಗಳ ಮೂಲಕವಾಗಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಇವರಿಗೆ ಬಿಟ್ಟುಬಿಡಬಹುದು ಅಥವಾ ಸೊಸೈಟಿಯನ್ನು ಒಂದು ಟ್ರಸ್ಟ್-ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನಕಾರಿಯಾದ ಒಂದು ಟ್ರಸ್ಟ್, ನಿರ್ದಿಷ್ಟ ತೆರಿಗೆ ಸವಲತ್ತನ್ನು ಒದಗಿಸಬಹುದು. ಉಯಿಲಿನ ಅಥವಾ ಟ್ರಸ್ಟಿನ ಒಪ್ಪಿಗೆಪತ್ರದ ನಕಲುಪ್ರತಿಯನ್ನು ಸೊಸೈಟಿಗೆ ಕಳುಹಿಸಬೇಕು.
ಇಂಥ ವಿಷಯಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, Watch Tower Bible and Tract Society of India, H-58 Old Khandala Road, Lonavla, 410 401, Mah., ಇವರಿಗೆ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ.
[ಪುಟ 31 ರಲ್ಲಿರುವ ಚಿತ್ರಗಳು]
ನಿಮ್ಮ ದಾನಗಳು ಉಪಯೋಗಿಸಲ್ಪಡುವ ವಿಧ:
1. ಬೆತೆಲ್ ಸ್ವಯಂಸೇವಕರು
2. ಬ್ರಾಂಚ್ ಆಫೀಸ್ ಕಟ್ಟಡ ರಚನೆ
3. ವಿಪತ್ಕಾಲಿಕ ಪರಿಹಾರ
4. ರಾಜ್ಯ ಸಭಾಗೃಹಗಳು
5. ಮಿಷನೆರಿಗಳು