ಅಪಾಯವು ಬೆದರಿಕೆಯನ್ನೊಡ್ಡುವಾಗ ನಿಮ್ಮನ್ನು ದೂರವಿರಿಸಿಕೊಳ್ಳಿರಿ
ಅಪಾಯಕ್ಕೆ ನಾವಿಕರಿಗಿಂತ ಹೆಚ್ಚು ಸೂಕ್ಷ್ಮವೇದಿಗಳಾಗಿರುವವರು ಕೊಂಚ ಜನ. ಹವಾಮಾನದಲ್ಲಿ, ಇಳಿತ ಭರತಗಳಲ್ಲಿ, ಮತ್ತು ಕರಾವಳಿಗೆ ಅವರ ಹಡಗದ ಸಾಮೀಪ್ಯತೆಯಲ್ಲಿ ಯಾವುದೇ ಬದಲಾವಣೆಗಳಿಗಾಗಿ ಅವರು ಎಚ್ಚತ್ತಿರಬೇಕಾಗಿದೆ. ಇಳಿತ ಭರತಗಳು ಮತ್ತು ಗಾಳಿಗಳು ಎರಡೂ ಹಡಗವನ್ನು ತೀರದೆಡೆಗೆ ತಳ್ಳಲು ಜತೆಸೇರುವಾಗ, ನಾವಿಕರು ಪರಿಶ್ರಮದ ಕೆಲಸ ಮತ್ತು ಅಪಾಯವನ್ನು ಎದುರಿಸುತ್ತಾರೆ.
ಗಾಳಿಮರೆಯ ಕಡೆ ಎಂದು ಜ್ಞಾತವಾಗಿರುವ—ಈ ಪರಿಸ್ಥಿತಿಗಳ ಕೆಳಗೆ, ನಾವಿಕನು ತನ್ನ ದೋಣಿಯ ಮತ್ತು ಕರಾವಳಿಯ ನಡುವೆ ತಿರುಗುವುದಕ್ಕೆ ಸಾಕಷ್ಟು ಅವಕಾಶವನ್ನು ಇಟ್ಟುಕೊಳ್ಳುತ್ತಾನೆ, ವಿಶೇಷವಾಗಿ ಅವನ ಹಡಗವು ಹಾಯಿಯಿಂದ ಮಾತ್ರವೇ ಮುಂದೂಡಲ್ಪಡುತ್ತದಾದರೆ. ಹಡಗುಸಂಚಾರ ಕೈಪಿಡಿಯೊಂದು ವಿವರಿಸುವುದೇನಂದರೆ ನಾವಿಕನು ತನ್ನನ್ನು ಕಂಡುಕೊಳ್ಳಬಲ್ಲ ‘ಪ್ರಾಯಶಃ ಅತಿ ಕೆಟ್ಟ ದಶೆಯು, ತಿರುಗಲು ಅವಕಾಶವಿರದ ಸಮುದ್ರ ಪ್ರದೇಶದಲ್ಲಿ ಬಿರುಗಾಳಿಗೆ ಸಿಕ್ಕಿಕೊಳ್ಳುವುದಾಗಿದೆ.’ ಶಿಫಾರಸ್ಸು ಮಾಡಲ್ಪಟ್ಟ ಪರಿಹಾರ? ‘ನಿಮ್ಮ ನಾವೆಯು ಅಂಥ ಒಂದು ಬಿಕ್ಕಟ್ಟಿನಲ್ಲಿ ಬೀಳುವಂತೆ ಎಂದೂ ಬಿಡಬೇಡಿರಿ.’ ಒಂದು ಮರಳತೀರದಲ್ಲಿ ಅಥವಾ ಬಂಡೇದಡದಲ್ಲಿ ಸಿಕ್ಕಿಕೊಳ್ಳುವುದನ್ನು ತಡೆಯುವ ಸುರಕ್ಷಿತ ವಿಧಾನವು ಅಪಾಯದಿಂದ ಸಾಕಷ್ಟು ಅಂತರವನ್ನು ಇಟ್ಟುಕೊಳ್ಳುವುದಾಗಿದೆ.
ಕ್ರೈಸ್ತರು ತಮ್ಮ ನಂಬಿಕೆಯನ್ನು ಹಡಗೊಡೆತಕ್ಕೆ ನಡಿಸಸಾಧ್ಯವಿರುವ ಅಪಾಯಗಳಿಗೆ ಸೂಕ್ಷ್ಮವೇದಿಗಳಾಗಿರತಕ್ಕದ್ದು. (1 ತಿಮೊಥೆಯ 1:19) ಈ ದಿನಗಳಲ್ಲಿ, ಒಂದು ಸ್ತಿಮತವಾದ ಮಾರ್ಗದಲ್ಲಿ ಉಳಿಯಲು ಪರಿಸ್ಥಿತಿಗಳು ಎಷ್ಟು ಮಾತ್ರವೂ ಆದರ್ಶವಾಗಿಲ್ಲ. ಗಾಳಿಗಳಿಂದ ಮತ್ತು ಇಳಿತ ಭರತಗಳಿಂದ ದೋಣಿಯೊಂದು ಹೇಗೆ ಮಾರ್ಗಚ್ಯುತಿಗೆ ತಳ್ಳಲ್ಪಡಬಹುದೋ ಹಾಗೆ ನಮ್ಮ ಸಮರ್ಪಿತ ಜೀವನಗಳು ಸಹ ನಮ್ಮ ಅಸಂಪೂರ್ಣ ಶರೀರದ ಎಡೆಬಿಡದ ಜಗ್ಗಿನ ಕಾರಣ ಮತ್ತು—ತೀವ್ರತೆಯಲ್ಲಿ ಈಗ ಬಹುಮಟ್ಟಿಗೆ ಬಿರುಗಾಳಿಯನ್ನೇ ಹೋಲುವ—ಲೋಕದಾತ್ಮದ ಪಟ್ಟುಬಿಡದ ಹೊಡೆತದಿಂದಾಗಿ ಮಾರ್ಗಚ್ಯುತಿಯನ್ನು ಹೊಂದಬಲ್ಲವು.
ಅಪಾಯಕಾರಿಯಾಗಿ ಜೀವಿಸಿದ ಒಬ್ಬ ಮನುಷ್ಯನು
ಅಪಾಯಕರವಾದ ಆತ್ಮಿಕ ನೀರುಗಳಲ್ಲಿ ಬೇಹುಷಾರಿನಿಂದ ಅಡಿಯಿಡುವುದು ಅದೆಷ್ಟು ಸುಲಭವಾಗಿದೆ!
ನೆಲಸುತ್ತುವರಿದ ಜಲಪ್ರದೇಶವಾದ ಮೃತ ಸಮುದ್ರದ ಬಳಿ ಸಂಭವಿಸಿದ ಒಂದು ಉದಾಹರಣೆಯನ್ನು ಪರಿಗಣಿಸಿರಿ. ಲೋಟನ ಉದಾಹರಣೆಗೆ ನಾವು ನಿರ್ದೇಶಿಸುತ್ತೇವೆ. ಸೊದೋಮಿನಲ್ಲಿ ನೆಲೆಸುವ ಅವನ ನಿರ್ಣಯವು ಅವನಿಗೆ ಅನೇಕ ಸಮಸ್ಯೆಗಳನ್ನು ಮತ್ತು ಬಹಳಷ್ಟು ದುಃಖವನ್ನು ತಂದವು. ಅವರವರ ದನಕಾಯುವವರ ನಡುವೆ ಹುಟ್ಟಿದ ಒಂದು ಜಗಳದನಂತರ, ಅಬ್ರಹಾಮ ಮತ್ತು ಲೋಟರು ಬೇರೆ ಬೇರೆ ಕ್ಷೇತ್ರಗಳಲ್ಲಿ ಜೀವಿಸಲು ಒಪ್ಪಿಕೊಂಡರು. ಲೋಟನು ಯೊರ್ದನ್ ಪ್ರಾಂತವನ್ನು ಆರಿಸಿಕೊಂಡು ಆ ಪ್ರಾಂತದ ಊರುಗಳಲ್ಲಿ ಗುಡಾರಹಾಕಿಕೊಂಡನೆಂದು ನಮಗೆ ಹೇಳಲ್ಪಟ್ಟಿದೆ. ಸೊದೋಮ್ಯರ ಜೀವನ ಶೈಲಿಯು ಅವನನ್ನು ವ್ಯಥೆಗೀಡು ಮಾಡಿದರೂ, ತದನಂತರ ಅವನು ಸೊದೋಮಿನಲ್ಲಿ ವಾಸಮಾಡಲು ನಿರ್ಣಯಿಸಿದನು.—ಆದಿಕಾಂಡ 13:5-13; 2 ಪೇತ್ರ 2:8.
ಯೆಹೋವನನ್ನು ಆಳವಾಗಿ ರೇಗಿಸಿದ್ದ ಮತ್ತು ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಜನರಿಂದ ಸಾರ್ವಜನಿಕ ಹುಯಿಲನ್ನೂ ಉಂಟುಮಾಡಿದ್ದ ಒಂದು ಕುಖ್ಯಾತಿಯ ಅನೈತಿಕ ಪಟ್ಟಣದಲ್ಲಿ ಲೋಟನು ವಾಸಿಸುತ್ತಾ ಹೋದದ್ದೇಕೆ? ಸೊದೋಮ್ ಸಮೃದ್ಧವಾಗಿತ್ತು, ಮತ್ತು ಲೋಟನ ಪತ್ನಿಯು ನಗರ ಜೀವಿತದ ಭೌತಿಕ ಪ್ರಯೋಜನಗಳಲ್ಲಿ ನಿಸ್ಸಂದೇಹವಾಗಿ ಆನಂದಿಸಿದ್ದಿರಬೇಕು. (ಯೆಹೆಜ್ಕೇಲ 16:49, 50) ಪ್ರಾಯಶಃ ಲೋಟನು ಕೂಡ ಸೊದೋಮಿನ ಸ್ಪಂದಕ ಆರ್ಥಿಕತೆಯಿಂದ ಆಕರ್ಷಿಸಲ್ಪಟ್ಟಿರಬಹುದು. ಅಲ್ಲಿ ಜೀವಿಸುವುದಕ್ಕೆ ಅವನ ಕಾರಣವು ಯಾವುದೇ ಇರಲಿ, ಅವನು ಮಾಡಿದ್ದಕ್ಕಿಂತ ಮೊದಲೇ ಅದನ್ನು ಬಿಟ್ಟುಹೋಗಬೇಕಿತ್ತು. ಯೆಹೋವನ ದೂತರ ಜರೂರಿಯ ಒತ್ತಾಯದಿಂದ ಮಾತ್ರವೇ ಲೋಟನ ಕುಟುಂಬವು ಕೊನೆಗೆ ಅಪಾಯ ಕ್ಷೇತ್ರವನ್ನು ತ್ಯಜಿಸಿತು.
ಆದಿಕಾಂಡದ ವೃತ್ತಾಂತವು ಹೇಳುವುದು: “ಹೊತ್ತು ಮೂಡುವದಕ್ಕೆ ಮುಂಚೆ ಆ ದೂತರು ಲೋಟನಿಗೆ—ನೀನೆದ್ದು ಇಲ್ಲಿರುವ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣು ಮಕ್ಕಳನ್ನೂ ಬೇಗ ಕರಕೊಂಡು ಹೋಗು; ಊರಿಗೆ ಉಂಟಾಗುವ ದಂಡನೆಯಿಂದ ನಿನಗೂ ನಾಶವುಂಟಾದೀತು ಎಂದು ಹೇಳಿ ತರ್ವೆಪಡಿಸಿದರು.” ಆದರೆ ಜರೂರಿಯ ಎಚ್ಚರಿಕೆಯ ಅನಂತರವೂ, ಲೋಟನು “ತಡಮಾಡು” ತ್ತಾ ನಿಂತನು. ಕೊನೆಗೆ ದೇವದೂತರು “ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಕೈಹಿಡಿದು ಹೊರಗೆ ತಂದು ಊರಾಚೆಗೆ ಬಿಟ್ಟರು.”—ಆದಿಕಾಂಡ 19:15, 16.
ಪಟ್ಟಣದ ಹೊರ ಅಂಚಿನಲ್ಲಿ, ದೇವದೂತರು ಲೋಟನ ಕುಟುಂಬಕ್ಕೆ ಕೆಲವು ಕೊನೆಯ ಸೂಚನೆಗಳನ್ನು ಕೊಟ್ಟರು: “ಓಡಿಹೋಗು, ಪ್ರಾಣವನ್ನು ಉಳಿಸಿಕೋ; ಹಿಂದಕ್ಕೆ ನೋಡಬೇಡ; ಈ ಪ್ರದೇಶದಲ್ಲಿ ಎಲ್ಲಿಯೂ ನಿಲ್ಲದೆ ಬೆಟ್ಟದ ಸೀಮೆಗೆ ಓಡಿಹೋಗು; ನಿನಗೂ ನಾಶವುಂಟಾದೀತು.” (ಆದಿಕಾಂಡ 19:17) ಆಗಲೂ ಕೂಡ, ಪ್ರಾಂತವನ್ನು ಪೂರ್ಣವಾಗಿ ತ್ಯಜಿಸಿ ಹೋಗುವ ಬದಲಾಗಿ ಸಮೀಪದ ಚೋಗರ್ ಊರಿಗೆ ಹೋಗಲು ಲೋಟನು ಅನುಮತಿ ಬೇಡಿದನು. (ಆದಿಕಾಂಡ 19:18-22) ಲೋಟನು ತನ್ನನ್ನು ಅಪಾಯ ಕ್ಷೇತ್ರದಿಂದ ಸಾಧ್ಯವಾದ ಮಟ್ಟಿಗೆ ದೂರವಿಟ್ಟುಕೊಳ್ಳಲು ಒಲ್ಲದೆ ಇದ್ದನೆಂಬದು ಸ್ಫುಟ.
ಚೋಗರಿಗೆ ಹೋಗುವ ದಾರಿಯಲ್ಲಿ, ಲೋಟನ ಪತ್ನಿಯು ತಾನು ಹಿಂದೆಬಿಟ್ಟಿದ್ದ ವಸ್ತುಗಳಿಗಾಗಿ ಪ್ರಾಯಶಃ ಹಂಬಲಿಸುತ್ತಾ, ಸೊದೋಮಿನೆಡೆಗೆ ಹಿಂತಿರುಗಿ ನೋಡಿದಳು. ದೇವದೂತರ ಸೂಚನೆಗಳನ್ನು ದುರ್ಲಕ್ಷಿಸಿದ ಕಾರಣ ಆಕೆ ತನ್ನ ಜೀವವನ್ನು ಕಳಕೊಂಡಳು. ನೀತಿವಂತನಾಗಿದ್ದ ಲೋಟನು ಪಟ್ಟಣದ ನಾಶನವನ್ನು ತನ್ನ ಇಬ್ಬರು ಕುಮಾರ್ತೆಯರೊಂದಿಗೆ ಪಾರಾದನು. ಆದರೆ ಅಪಾಯಕ್ಕೆ ಹತ್ತಿರವಾಗಿ ಜೀವಿಸಲು ಆರಿಸಿಕೊಂಡದ್ದಕ್ಕಾಗಿ ಅವನು ಎಂತಹ ಬೆಲೆಯನ್ನು ತೆತ್ತನು!—ಆದಿಕಾಂಡ 19:18-26; 2 ಪೇತ್ರ 2:7.
ಅಪಾಯ ಪರಿಸ್ಥಿತಿಯಿಂದ ದೂರವಿಟ್ಟುಕೊಳ್ಳುವುದು
ಒಂದು ಅಪಾಯಕರ ಪರಿಸರದಲ್ಲಿ ನಾವು ಇಳುಕೊಂಡರೆ ಅಥವಾ ಅದರ ಹತ್ತಿರಕ್ಕೆ ಬಂದರೆ ಏನಾಗಬಲ್ಲದೆಂದು ಲೋಟನ ಕಟು ಅನುಭವವು ತೋರಿಸುತ್ತದೆ. ಉತ್ತಮ ನಾವಿಕರಂತೆ, ಅಂಥ ಒಂದು ಬಿಕ್ಕಟ್ಟಿನೊಳಗೆ ಬೀಳುವಂತೆ ನಾವೆಂದೂ ನಮ್ಮನ್ನು ಬಿಟ್ಟುಕೊಡಬಾರದೆಂದು ವಿವೇಕವು ಆದೇಶ ಕೊಡುತ್ತದೆ. ನಾವು ನಮ್ಮನ್ನು ದೂರವಿಟ್ಟುಕೊಳ್ಳಬೇಕಾದ ಕೆಲವು ಅಪಾಯಕರವಾದ ಕ್ಷೇತ್ರಗಳು ಯಾವುವು? ಕೆಲವು ಕ್ರೈಸ್ತರು ವ್ಯಾಪಾರ ಚಟುವಟಿಕೆಗಳಲ್ಲಿ ತೀರ ಒಳಗೂಡಿಸಿಕೊಂಡ ಮೂಲಕ, ಲೌಕಿಕ ಸಹವಾಸಿಗಳೊಂದಿಗೆ ಆಪ್ತ ಸ್ನೇಹದಲ್ಲಿ ಪಾಲಿಗರಾದ ಮೂಲಕ, ಅಥವಾ ವಿವಾಹವಾಗಲು ಸ್ವತಂತ್ರರಿಲ್ಲದಾಗ ವಿರುದ್ಧ ಲಿಂಗ ಜಾತಿಯ ಒಬ್ಬರಿಗೆ ಭಾವನಾತ್ಮಕವಾಗಿ ಅನುರಕ್ತರಾಗಿ ಮಾಡಿಕೊಂಡ ಮೂಲಕ ದೂರ ತೊಲಗಿ ಹೋಗಿರುತ್ತಾರೆ.
ಪ್ರತಿಯೊಂದು ಸಂದರ್ಭದಲ್ಲಿ, ವಿವೇಕದ ಮಾರ್ಗವು, ಅಪಾಯದಿಂದ ನಮ್ಮನ್ನು ದೂರವಿರಿಸಿಕೊಳ್ಳುವುದೇ ಆಗಿದೆ. ಉದಾಹರಣೆಗಾಗಿ, ಸ್ವರ್ಣಾವಕಾಶವೆನಿಸಿಕೊಳ್ಳುವ ಒಂದು ವ್ಯಾಪಾರ ಸಂದರ್ಭವು ತರಸಾಧ್ಯವಿರುವ ಆತ್ಮಿಕ ಅಪಾಯಗಳಿಗೆ ನಾವು ಎಚ್ಚತ್ತವರಾಗಿದ್ದೇವೋ? ಕೆಲವು ಸಹೋದರರು ತಮ್ಮ ಕುಟುಂಬಗಳ, ತಮ್ಮ ಆರೋಗ್ಯದ, ಮತ್ತು ತಮ್ಮ ದೇವಪ್ರಭುತ್ವ ಜವಾಬ್ದಾರಿಗಳ ಹಾನಿಗಾಗಿ, ವ್ಯಾಪಾರೋದ್ಯಮಗಳಲ್ಲಿ ತಮ್ಮನ್ನು ಮುಳುಗಿಸಿಕೊಂಡಿದ್ದಾರೆ. ಹಣವು ತರಸಾಧ್ಯವಿರುವ ಹೆಚ್ಚು ಆರಾಮಕರ ಜೀವನ ಶೈಲಿಯು ಕೆಲವು ಸಲ ಸೆಳೆಯೆರೆಯಾಗಿದೆ. ಬೇರೆ ಸಮಯದಲ್ಲಿ ಅದು ಅವರ ವ್ಯಾಪಾರದ ಚೂಟಿಯ ಸತ್ವವನ್ನು ರುಜುಪಡಿಸುವ ಪಂಥಾಹ್ವಾನವಾಗಿರುತ್ತದೆ. ಅವರ ಹೇತುವು ಇತರ ಸಹೋದರರಿಗಾಗಿ ಕೆಲಸ ಒದಗಿಸುವುದು ಅಥವಾ ಲೋಕವ್ಯಾಪಕ ಕಾರ್ಯಕ್ಕೋಸ್ಕರ ಹೆಚ್ಚು ಉದಾರವಾಗಿ ದಾನಕೊಡಲು ಶಕ್ತರಾಗುವುದೇ ಆಗಿದೆಯೆಂದು ಕೆಲವರು ವಿವೇಚಿಸಬಹುದು. ವ್ಯಾಪಾರವು ಚೆನ್ನಾಗಿ ನಡೆಯುವಾಗ, ರಾಜ್ಯಾಭಿರುಚಿಗಳಿಗೆ ಮೀಸಲಾಗಿಡಲು ತಮ್ಮಲ್ಲಿ ಬಹಳಷ್ಟು ಸಮಯವಿರುವುದೆಂದು ಪ್ರಾಯಶಃ ಅವರು ನೆನಸಬಹುದು.
ಇರುವ ಕೆಲವು ಕಪ್ಪುಗುಳಿಗಳಾವುವು? ಅಸ್ಥಿರವಾದ ಆರ್ಥಿಕ ವಾತಾವರಣವು ಮತ್ತು “ಮುಂಗಾಣದ ಸಂಭವವು,” ಅತ್ಯುತ್ತಮವಾಗಿ ಯೋಜಿಸಲ್ಪಟ್ಟ ವ್ಯಾಪಾರೋದ್ಯಮವನ್ನು ಮುಳುಗಿಸಿಬಿಡಬಲ್ಲದು. (ಪ್ರಸಂಗಿ 9:11) ಸಾಲದ ಹೊರೆಯೊಂದಿಗೆ ಒದ್ದಾಡುವುದು ಬೇಗುದಿಯನ್ನು ತರಬಲ್ಲದು ಮತ್ತು ಆತ್ಮಿಕ ವಿಷಯಗಳನ್ನು ಹೊರಗಟ್ಟಬಹುದು. ಮತ್ತು ಒಂದು ವ್ಯಾಪಾರವು ಏಳಿಗೆಯಲ್ಲಿರುವಾಗಲೂ ಕೂಡ, ಅದು ಹೆಚ್ಚು ಸಮಯವನ್ನು ಮತ್ತು ಮಾನಸಿಕ ಶಕ್ತಿಯನ್ನು ಹೀರಿಬಿಡುವ ಸಂಭವನೀಯತೆ ಇರುವುದು, ಮತ್ತು ಅದು ಗಣನೀಯ ಲೌಕಿಕ ಸಹವಾಸವನ್ನೂ ಆವಶ್ಯಪಡಿಸೀತು.
ಸ್ಪೆಯ್ನ್ ದೇಶದ ಒಬ್ಬ ಕ್ರೈಸ್ತ ಹಿರಿಯನು ತೀವ್ರ ಆರ್ಥಿಕ ಸಂಕಷ್ಟಗಳಲ್ಲಿದ್ದಾಗ ಒಂದು ವಿಮಾ ಕಂಪೆನಿಯು ಅವನಿಗೊಂದು ಆಕರ್ಷಕ ಕೆಲಸವನ್ನು ನೀಡಿತು. ಸ್ವಯಂ-ನಾಯಕ ವಿಮಾ ಏಜೆಂಟಾಗಿ ತುಂಬಾ ಹಣ ಮಾಡುವ ಪ್ರತೀಕ್ಷೆಗಳು ಅಲ್ಲಿದ್ದರೂ, ಅವನು ಕಟ್ಟಕಡೆಗೆ ಆ ನೀಡಿಕೆಯನ್ನು ನಿರಾಕರಿಸಿದನು. “ಅದೊಂದು ಸುಲಭವಾದ ನಿರ್ಣಯವಾಗಿರಲಿಲ್ಲ, ಆದರೆ ಬೇಡವೆಂದು ಹೇಳಿದಕ್ಕಾಗಿ ನಾನು ಸಂತೋಷಿಸುತ್ತೇನೆ,” ಎಂದವನು ವಿವರಿಸುತ್ತಾನೆ. “ಒಂದು ವಿಷಯವೇನಂದರೆ, ನನ್ನ ದೇವಪ್ರಭುತ್ವ ಸಂಪರ್ಕಗಳ ಮೂಲಕ—ಅಪರೋಕ್ಷವಾಗಿಯಾದರೂ—ಹಣಮಾಡುವದಕ್ಕೆ ನನಗೆ ಮನಸ್ಸಿರಲಿಲ್ಲ. ಮತ್ತು ಸ್ವತಂತ್ರವಾಗಿ ಉದ್ಯೋಗ ನಡಿಸುವ ವಿಚಾರವು ನನಗೆ ಇಷ್ಟವಿದ್ದರೂ, ನನಗೆ ಬಹಳಷ್ಟು ಪ್ರಯಾಣವನ್ನು ಮಾಡಬೇಕಾಗುತ್ತಿತ್ತು ಮತ್ತು ಕೆಲಸದಲ್ಲಿ ಅನೇಕ ತಾಸುಗಳನ್ನು ಕಳೆಯಬೇಕಾಗುತ್ತಿತ್ತು. ಅದು ಅನಿವಾರ್ಯವಾಗಿ ನನ್ನ ಕುಟುಂಬವನ್ನು ಮತ್ತು ನನ್ನ ಸಭೆಯನ್ನು ಅಸಡ್ಡೆಮಾಡುವ ಅರ್ಥದಲ್ಲಿಯೂ ಇರುತ್ತಿತ್ತು. ಎಲ್ಲದಕ್ಕೂ ಹೆಚ್ಚಾಗಿ, ಒಂದು ವೇಳೆ ನಾನು ಆ ನೀಡಿಕೆಯನ್ನು ಸ್ವೀಕರಿಸಿದ್ದರೆ, ನನ್ನ ಜೀವದ ಮೇಲಿನ ಅಂಕೆಯನ್ನೇ ನಾನು ಕಳಕೊಳ್ಳುತ್ತಿದ್ದೆ ಎಂಬ ಮನವರಿಕೆ ನನಗಾಗಿದೆ.”
ತನ್ನ ಜೀವದ ಮೇಲಿನ ಅಂಕೆಯನ್ನು ಕಳಕೊಳ್ಳಲು ಯಾವ ಕ್ರೈಸ್ತನೂ ಶಕ್ತನಲ್ಲ. ಅಂಥ ಒಂದು ಮಾರ್ಗದ ದುರಂತಮಯ ಫಲಿತಾಂಶಗಳನ್ನು, ನಿವೃತ್ತನಾಗಿ, ಆರಾಮಕರ ಜೀವನ ನಡಿಸುವುದಕ್ಕೋಸ್ಕರ ಅಧಿಕಾಧಿಕ ಐಶ್ವರ್ಯವನ್ನು ಸಂಚಯಿಸಿದ ಒಬ್ಬ ಮನುಷ್ಯನ ದೃಷ್ಟಾಂತವನ್ನು ತಿಳಿಸಿದ ಮೂಲಕ ಯೇಸು ತೋರಿಸಿದನು. ಆದರೆ ಕೊನೆಗೆ, ತಾನು ಸಾಕಷ್ಟು ಹಣವನ್ನು ಸಂಗ್ರಹಿಸಿದ್ದೇನೆಂದು ಅವನು ನಿರ್ಣಯಿಸಿದ ಅದೇ ರಾತ್ರಿಯಲ್ಲಿ, ಅವನು ಸತ್ತನು. “ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ,” ಎಂದು ಎಚ್ಚರಿಸಿದನು ಯೇಸು.—ಲೂಕ 12:16-21; ಹೋಲಿಸಿ ಯಾಕೋಬ 4:13-17.
ಲೌಕಿಕ ಜನರೊಂದಿಗೆ ಲಂಬನೆಯ ಸಹವಾಸವನ್ನು ಮಾಡುವ ವಿರುದ್ಧವಾಗಿ ಸಹ ನಾವು ಎಚ್ಚರದಿಂದಿರಬೇಕು. ಪ್ರಾಯಶಃ ಅದು ಒಬ್ಬ ನೆರೆಯವನು, ಶಾಲಾ ಸ್ನೇಹಿತನು, ಸಹೋದ್ಯೋಗಿ, ಯಾ ಒಬ್ಬ ವ್ಯಾಪಾರದ ಜೊತೆಗಾರನು ಆಗಿರಲೂಬಹುದು. ನಾವು ವಿವೇಚಿಸಬಹುದು, ‘ಅವನು ಸಾಕ್ಷಿಗಳನ್ನು ಗೌರವಿಸುತ್ತಾನೆ, ಒಳ್ಳೇ ನೈತಿಕ ಜೀವನವನ್ನು ನಡಿಸುತ್ತಾನೆ, ನಾವು ಕೆಲವೊಮ್ಮೆ ಸತ್ಯದ ಕುರಿತೂ ಮಾತಾಡುತ್ತೇವೆ.’ ಆದಾಗ್ಯೂ, ಕಾಲಾನಂತರ ಅಂಥ ಲೌಕಿಕ ಸಹವಾಸವನ್ನು, ಒಬ್ಬ ಆತ್ಮಿಕ ಸಹೋದರ ಯಾ ಸಹೋದರಿಯ ಸಹವಾಸಕ್ಕಿಂತ ಹೆಚ್ಚು ಇಷ್ಟಪಡುವವರಾಗಿ ನಾವು ನಮ್ಮನ್ನು ಕಂಡುಕೊಳ್ಳಲೂಬಹುದೆಂದು ಇತರರ ಅನುಭವಗಳು ರುಜುಪಡಿಸುತ್ತವೆ. ಅಂಥ ಮಿತ್ರತ್ವದ ಕೆಲವು ಅಪಾಯಗಳು ಯಾವುವು?
ನಾವು ಜೀವಿಸುತ್ತಿರುವ ಸಮಯದ ಜರೂರಿಯನ್ನು ನಾವು ಕುಗ್ಗಿಸಲಾರಂಭಿಸಬಹುದು ಇಲ್ಲವೇ ಆತ್ಮಿಕ ವಿಷಯಗಳ ಬದಲಾಗಿ ಭೌತಿಕ ವಿಷಯಗಳಲ್ಲಿ ಬೆಳೆಯುವ ಆಸಕ್ತಿಯನ್ನು ತಕ್ಕೊಳ್ಳಬಹುದು. ನಮ್ಮ ಲೌಕಿಕ ಮಿತ್ರನನ್ನು ಅಪ್ರಸನ್ನಗೊಳಿಸುವ ಭಯದ ಕಾರಣ, ಪ್ರಾಯಶಃ ನಾವು ಲೋಕದಿಂದ ಸ್ವೀಕರಿಸಲ್ಪಡುವುದನ್ನು ಅಪೇಕ್ಷಿಸಲೂಬಹುದು. (ಹೋಲಿಸಿ 1 ಪೇತ್ರ 4:3-7.) ಕೀರ್ತನೆಗಾರನಾದ ದಾವೀದನು, ಇನ್ನೊಂದು ಕಡೆ, ಯೆಹೋವನನ್ನು ಪ್ರೀತಿಸಿದವರಾದ ಜನರೊಂದಿಗೆ ಸಹವಸಿಸುವುದನ್ನು ಇಷ್ಟಪಟ್ಟನು. “ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು,” ಎಂದು ಬರೆದನು ಆತನು. (ಕೀರ್ತನೆ 22:22) ನಮ್ಮನ್ನು ಆತ್ಮಿಕವಾಗಿ ಮೇಲೆತ್ತಬಲ್ಲ ಮಿತ್ರತ್ವವನ್ನು ಹುಡುಕುತ್ತಾ, ದಾವೀದನ ಮಾದರಿಯನ್ನು ನಾವು ಅನುಕರಿಸುವುದಾದರೆ ನಾವು ಕಾಪಾಡಲ್ಪಡುವೆವು.
ಇನ್ನೊಂದು ಅಪಾಯಕರ ಮಾರ್ಗವು, ಒಬ್ಬನು ವಿವಾಹವಾಗಲು ಸ್ವತಂತ್ರನಿಲ್ಲದಾಗ ವಿರುದ್ಧ ಲಿಂಗ ಜಾತಿಯ ಒಬ್ಬ ವ್ಯಕ್ತಿಯೊಂದಿಗೆ ಭಾವನಾತ್ಮಕವಾಗಿ ತೊಡಕಿಸಿಕೊಳ್ಳುವುದೇ ಅಗಿದೆ. ಯಾರು ಆಕರ್ಷಕನೋ, ಯಾರ ಸಂಭಾಷಣೆಯು ಚೇತನಕರವಾಗಿದೆಯೋ, ಯಾವನಲ್ಲಿ ತದ್ರೀತಿಯ ಹೊರನೋಟ ಮತ್ತು ವಿನೋದ ಪ್ರವೃತ್ತಿ ಸಹ ಇದೆಯೋ ಅವನೆಡೆಗೆ⁄ಅವಳೆಡೆಗೆ ಒಬ್ಬರು ಸೆಳೆಯಲ್ಪಡುವಾಗ ಅಪಾಯವು ಏಳಬಹುದಾಗಿದೆ. ಒಬ್ಬನು ಅವನ ಅಥವಾ ಅವಳ ಸಹವಾಸದಲ್ಲಿ ಆನಂದಿಸುತ್ತಾ, ವಿವೇಚಿಸಬಹುದು, ‘ಎಷ್ಟು ದೂರ ಹೋಗಬೇಕೆಂದು ನನಗೆ ಗೊತ್ತಿದೆ. ನಾವು ಬರೇ ಮಿತ್ರರಾಗಿದ್ದೇವೆ.’ ಆದರೂ, ಒಮ್ಮೆ ಉದ್ರೇಕಿಸಲ್ಪಟ್ಟ ಭಾವನೆಗಳನ್ನು ಅಂಕೆಯಲಿಡ್ಲುವುದು ಸುಲಭವಲ್ಲ.
ಒಬ್ಬಾಕೆ ಯುವ ವಿವಾಹಿತ ಸಹೋದರಿ, ಮೇರಿ, ಮೈಕಲ್ನ ಸಹವಾಸದಲ್ಲಿ ಆನಂದಿಸುತ್ತಿದ್ದಳು.a ಅವನೊಬ್ಬ ಒಳ್ಳೆಯ ಸಹೋದರನಾಗಿದ್ದ, ಆದರೆ ಸ್ನೇಹಮಾಡುವುದು ಅವನಿಗೆ ಕಷ್ಟಕರವಾಗಿತ್ತು. ಅವರಿಗೆ ಅನೇಕ ವಿಷಯಗಳಲ್ಲಿ ಸಾಮಾನ್ಯಾಸಕ್ತಿ ಇತ್ತು, ಒಟ್ಟಿಗೆ ವಿನೋದ ಮಾಡಲು ತಾವು ಶಕ್ತರೆಂದು ಅವರು ಕಂಡುಕೊಂಡರು. ಒಬ್ಬ ಅವಿವಾಹಿತ ಸಹೋದರನು ಅವಳಿಗೆ ಅಂತರಂಗವನ್ನು ಹೇಳಬಯಸುವ ವಿಷಯವು ಮೇರಿಯನ್ನು ಮಿತಿಮೀರಿ ಪ್ರೋತ್ಸಾಹಿಸಿತು. ಬಲುಬೇಗನೆ, ಯಾವುದು ಒಂದು ನಿಷ್ಕಪಟ ಮಿತ್ರತ್ವವಾಗಿ ಕಂಡಿತ್ತೋ ಅದು ಒಂದು ಆಳವಾದ ಭಾವನಾತ್ಮಕ ಅನುರಕ್ತಿಯಾಗಿ ಪರಿಣಮಿಸಿತು. ಅವರು ಹೆಚ್ಚು ಹೆಚ್ಚು ಸಮಯವನ್ನು ಒಟ್ಟುಗೂಡಿ ಕಳೆಯಲಾರಂಭಿಸಿದರು ಮತ್ತು ಕಟ್ಟಕಡೆಗೆ ಅನೈತಿಕತೆಯನ್ನು ನಡಿಸಿದರು. “ಆರಂಭದಲ್ಲೇ ನಾನು ಅಪಾಯವನ್ನು ಅರಿತುಕೊಳ್ಳಬೇಕಿತ್ತು,” ಎಂದು ನಿಟ್ಟುಸಿರು ಬಿಡುತ್ತಾಳೆ ಮೇರಿ. “ಒಮ್ಮೆ ಸ್ನೇಹವು ಅರಳಿದಾಗ, ಅದು ಸದಾ ನಮ್ಮನ್ನು ಹೆಚ್ಚೆಚ್ಚು ಆಳಕ್ಕೆ ಸೆಳೆಯುವ ಹೂಳು ನೆಲವಾಗಿ ಪರಿಣಮಿಸಿತು.”
ಬೈಬಲಿನ ಎಚ್ಚರಿಕೆಯನ್ನು ನಾವೆಂದೂ ಮರೆಯಬಾರದು: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” (ಯೆರೆಮೀಯ 17:9) ನಮ್ಮ ವಂಚಕ ಹೃದಯವು, ಹಾಯಿಹಡಗವನ್ನು ಬಂಡೆಗಳಿಗೆ ಢಿಕ್ಕಿಹೊಡಿಸುವ ಇಳಿತ ಭರತದಂತೆ, ವಿಪತ್ಕಾರಕ ಭಾವನಾತ್ಮಕ ಸಂಬಂಧದೊಳಗೆ ನಮ್ಮನ್ನು ತಳ್ಳಬಹುದು. ಪರಿಹಾರ? ವಿವಾಹವಾಗಲು ನೀವು ಸ್ವತಂತ್ರರಿರದಲ್ಲಿ, ಆಕರ್ಷಕರೆಂದು ನೀವೆಣಿಸುವ ಒಬ್ಬರಿಂದ ಭಾವನಾತ್ಮಕವಾಗಿ ದೂರವಿರಿಸಿಕೊಳ್ಳಲು ಬುದ್ಧಿಪೂರ್ವಕವಾಗಿ ಕಾರ್ಯನಡಿಸಿರಿ.—ಜ್ಞಾನೋಕ್ತಿ 10:23.
ಅಪಾಯದಿಂದ ತಪ್ಪಿಸಿಕೊಳ್ಳುವುದು ಮತ್ತು ಮುಕ್ತರಾಗಿ ಉಳಿಯುವುದು
ನಾವು ಈವಾಗಲೇ ನಮ್ಮನ್ನು ಆತ್ಮಿಕ ಅಪಾಯದಲ್ಲಿರುವುದಾಗಿ ಕಂಡರೆ ಆಗೇನು? ನಾವಿಕರು, ಗಾಳಿ ಮತ್ತು ಇಳಿತ ಭರತದಿಂದಾಗಿ ಬಂಡೆಯೆಡೆಗೆ ತಳ್ಳಲ್ಪಡುವಾಗ, ಸುರಕ್ಷಿತ ನೀರುಗಳಿಗೆ ತಲಪುವ ತನಕ ತಮ್ಮ ಹಡಗಗಳನ್ನು ಸಮುದ್ರಾಭಿಮುಖ ನಡಿಸಲಿಕ್ಕೆ, ಯಾ ದಡಬಿಟ್ಟು ಗಾಳಿಗೆದುರಾಗಿ ಚಲಿಸಲಿಕ್ಕಾಗಿ ಏನನ್ನೂ ಲಕ್ಷ್ಯಿಸದೆ ಕಾರ್ಯನಡಿಸುತ್ತಾರೆ. ತದ್ರೀತಿಯಲ್ಲಿ, ನಮ್ಮನ್ನು ಮುಕ್ತಗೊಳಿಸಲು ನಾವು ಹೋರಾಡಬೇಕಾಗಿದೆ. ಯೆಹೋವನ ಸಹಾಯಕ್ಕಾಗಿ ಮನಃಪೂರ್ವಕವಾಗಿ ಪ್ರಾರ್ಥಿಸುತ್ತಾ, ಶಾಸ್ತ್ರೀಯ ಹಿತೋಕ್ತಿಯನ್ನು ಪಾಲಿಸುವ ಮೂಲಕ, ಮತ್ತು ಪಕ್ವತೆಯುಳ್ಳ ಕ್ರೈಸ್ತ ಸಹೋದರರಿಂದ ಸಹಾಯವನ್ನು ಕೋರುವ ಮೂಲಕ, ನಾವು ಸುರಕ್ಷಿತವಾದ ಹಾದಿಗೆ ಮರಳಬಹುದು. ನಾವು ಪುನೊಮ್ಮೆ ಮನದ ಮತ್ತು ಹೃದಯದ ಶಾಂತಿಯಿಂದ ಆಶೀರ್ವದಿಸಲ್ಪಡುವೆವು.—1 ಥೆಸಲೊನೀಕ 5:17.
ನಮ್ಮ ಪರಿಸ್ಥಿತಿಗಳು ಏನೇ ಇರಲಿ, “ಲೋಕಕ್ಕೆ ಸೇರಿದ ವಿಷಯ” ಗಳಿಂದ ದೂರವಿರಿಸಿಕೊಳ್ಳುವುದು ನಮಗೆ ವಿವೇಕಪ್ರದವು. (ಗಲಾತ್ಯ 4:3, NW) ಲೋಟನೊಂದಿಗೆ ವೈದೃಶ್ಯದಲ್ಲಿ, ಅಬ್ರಹಾಮನು, ಅದು ಅನೇಕ ವರ್ಷಗಳ ತನಕ ಡೇರೆಗಳಲ್ಲಿ ವಾಸಮಾಡುವ ಅರ್ಥದಲ್ಲಿದ್ದರೂ, ಲೌಕಿಕರಾದ ಕಾನಾನ್ಯರಿಂದ ಪ್ರತ್ಯೇಕವಾಗಿ ಜೀವಿಸಲು ಆರಿಸಿಕೊಂಡನು. ಪ್ರಾಯಶಃ ಕೆಲವು ಭೌತಿಕ ಆರಾಮಗಳ ಕೊರತೆಯು ಅವನಿಗಾಗಿರಬಹುದು ಆದರೆ, ಅವನ ಸರಳ ಜೀವನ ಶೈಲಿಯು ಅವನನ್ನು ಆತ್ಮಿಕವಾಗಿ ಕಾಪಾಡಿತು. ತನ್ನ ನಂಬಿಕೆಯ ಹಡಗೊಡೆತವನ್ನು ಅನುಭವಿಸುವ ಬದಲಿಗೆ, ಅವನು “ನಂಬುವವರೆಲ್ಲರಿಗೂ . . . ಮೂಲತಂದೆಯಾಗಿ” ಪರಿಣಮಿಸಿದನು.—ರೋಮಾಪುರ 4:11.
ಯಾರ “ಆತ್ಮ” ಸದಾ ಬಲವಾಗಿರುತ್ತದೋ ಆ ಭೋಗಾಸಕ್ತ ಲೋಕದಿಂದ ನಾವು ಸುತ್ತುವರಿಯಲ್ಪಟ್ಟಿರುವುದರಿಂದ, ಅಬ್ರಹಾಮನ ಮಾದರಿಯನ್ನು ಪಾಲಿಸುವ ಅಗತ್ಯವು ನಮಗಿದೆ. (ಎಫೆಸ 2:2) ಎಲ್ಲಾ ವಿಷಯಗಳಲ್ಲಿ ಯೆಹೋವನ ಮಾರ್ಗದರ್ಶನವನ್ನು ನಾವು ಸ್ವೀಕರಿಸುವುದಾದರೆ, ಆತನ ಪ್ರೀತಿಯುಳ್ಳ ಕಾಪನ್ನು ನೇರವಾಗಿ ಅನುಭವಿಸುವ ಮೂಲಕ ನಾವು ಆಶೀರ್ವದಿಸಲ್ಪಡುವೆವು. ದಾವೀದನಿಗೆ ಆದಂತಹ ಅನುಭವವು ನಮಗೂ ಆಗುವುದು: “ನನ್ನ ಪ್ರಾಣವನ್ನು ಉಜ್ಜೀವಿಸಮಾಡಿ ತನ್ನ ಹೆಸರಿಗೆ ತಕ್ಕಂತೆ ನೀತಿಮಾರ್ಗದಲ್ಲಿ ನಮ್ಮನ್ನು ನಡಿಸುತ್ತಾನೆ. ನಿಶ್ಚಯವಾಗಿಯೂ ನನ್ನ ಜೀವಮಾನದಲ್ಲಿಲ್ಲಾ ಶುಭವೂ ಕೃಪೆಯೂ ನನ್ನನ್ನು ಹಿಂಬಾಲಿಸುವವು. ನಾನು ಸದಾಕಾಲವೂ ಯೆಹೋವನ ಮಂದಿರದಲ್ಲಿ ವಾಸಿಸುವೆನು.” ಅಪಾಯದ ಹಾದಿಗಳಿಗೆ ತಿರುಗುವ ಬದಲಾಗಿ “ನೀತಿಮಾರ್ಗದಲ್ಲಿ” ನಡೆಯುತ್ತಾ ಹೋಗುವುದು ಅನಂತ ಆಶೀರ್ವಾದಗಳನ್ನು ತರುವುದೆಂಬದರ ಕುರಿತು ಯಾವ ಸಂದೇಹವೂ ಇಲ್ಲ.—ಕೀರ್ತನೆ 23:3, 6.
[ಅಧ್ಯಯನ ಪ್ರಶ್ನೆಗಳು]
a ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
[ಪುಟ 24 ರಲ್ಲಿರುವ ಚಿತ್ರ]
ವಿವಾಹವಾಗಲು ನೀವು ಸ್ವತಂತ್ರರಿಲ್ಲದಲ್ಲಿ, ಆಕರ್ಷಕರಾಗಿ ನೀವು ಕಾಣುವ ಯಾರಾದರೊಬ್ಬರಿಂದ ನಿಮ್ಮನ್ನು ಭಾವನಾತ್ಮಕವಾಗಿ ದೂರಿವಿರಿಸಿಕೊಳ್ಳಿರಿ