ಸ್ಪರ್ಧಾತ್ಮಕ ಸಮಾಜವೊಂದರಲ್ಲಿ ಮನಶ್ಶಾಂತಿ
“ಯಾವನಾದರೂ ಮೊದಲಿನವನಾಗಬೇಕೆಂದಿದ್ದರೆ” ಯೇಸು ತನ್ನ ಅಪೊಸ್ತಲರಿಗೆ ಬುದ್ಧಿವಾದವನ್ನಿತ್ತದ್ದು, “ಅವನು ಎಲ್ಲರಲ್ಲಿ ಕಡೆಯವನೂ ಎಲ್ಲರ ಆಳೂ ಆಗಿರಬೇಕು.” ಅವರಲ್ಲಿ ಅತಿ ದೊಡ್ಡವನು ಯಾರೆಂದು ಅಪೊಸ್ತಲರು ತಮ್ಮೊಳಗೆ ವಾಗ್ವಾದಮಾಡಿಕೊಳ್ಳುತ್ತಿದ್ದರು. ಅಂತಹ ಒಂದು ಆತ್ಮವನ್ನು ಯೇಸು ಹೇಸುತ್ತಿದ್ದನು ಎಂದವರು ತಿಳಿದಿದ್ದರು. ಆತ್ಮಿಕ ಪ್ರಗತಿಯನ್ನು ಪ್ರವರ್ಧಿಸಲು ತನ್ನ ಶಿಷ್ಯರನ್ನು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಅವನು ಎಂದೂ ಪ್ರತಿಸ್ಪರ್ಧಿಗಳಾಗಿ ಮಾಡಲಿಲ್ಲ.—ಮಾರ್ಕ 9:33-37.
ಭೂಮಿಗೆ ಬರುವ ಮೊದಲು, ಮೊದಲ ಮಾನವ ದಂಪತಿಗಳನ್ನು ನಿರ್ಮಾಣಮಾಡುವುದರಲ್ಲಿ ಯೇಸು ಕ್ರಿಸ್ತನು ಪಾಲಿಗನಾದನು ಮತ್ತು ಅವರು ಹೇಗೆ ಸೃಷ್ಟಿಸಲ್ಪಟ್ಟಿದ್ದರೆಂದು ಬಲ್ಲಾತನಾಗಿದ್ದನು. (ಕೊಲೊಸ್ಸೆ 1:15, 16) ಇತರರೊಂದಿಗೆ ಕನಿಕರರಹಿತವಾಗಿ ಸ್ಪರ್ಧಿಸದೆ ಪ್ರಗತಿಮಾಡುವ ಸಾಮರ್ಥ್ಯದೊಂದಿಗೆ ಮೊದಲ ಮಾನವರು ಸೃಷ್ಟಿಸಲ್ಪಟ್ಟಿದ್ದರು. ಅವರಲ್ಲಿ ಶಿರಸ್ಸು ಯಾರು ಎಂದು ನಿರ್ಧರಿಸಲು ಅವರು ತಮ್ಮೊಳಗೆ ಕಾದಾಡುವ ಆವಶ್ಯಕತೆಯೇನೂ ಮಾನವರಿಗೆ ಇರಲಿಲ್ಲ, ಯಾ ಒಂದು ಉಳಿಯುವಿಕೆಯ ಹೋರಾಟದಲ್ಲಿ ಪ್ರಾಣಿಗಳೊಂದಿಗೆ ಅವರು ಕಾದಾಡಿದ್ದೂ ಇಲ್ಲ.—ಆದಿಕಾಂಡ 1:26; 2:20-24; 1 ಕೊರಿಂಥ 11:3.
ಸ್ಪರ್ಧಾತ್ಮಕ ಆತ್ಮದ ಮೂಲ
ಹಾಗಾದರೆ, ಘಾತುಕ ಸ್ಪರ್ಧಾತ್ಮಕ ಆತ್ಮವು ಮಾನವ ಸಮಾಜದಲ್ಲಿ ಅಷ್ಟೊಂದು ಪ್ರಭುತ್ವನಡಿಸುವ ಶಕ್ತಿ ಆದದ್ದು ಹೇಗೆ? ಮಾನವ ಇತಿಹಾಸದಲ್ಲಿ ಮೊದಲ ಕೊಲೆಯ ವಿದ್ಯಮಾನವು ಒಂದು ಸುಳಿವನ್ನು ಕೊಡುತ್ತದೆ. ಮೊದಲ ಮಾನವ ದಂಪತಿಗಳ ಹಿರೀ ಮಗನಾದ ಕಾಯಿನನ ವತಿಯಿಂದ ಸ್ಪರ್ಧಾತ್ಮಕ ಆತ್ಮವು ಈ ದುರಂತಕ್ಕೆ ನಡಿಸಿತು. ಕಾಯಿನನು ತನ್ನ ಸಹೋದರನಾದ ಹೇಬೆಲನ ಕೊಲೆಮಾಡಿದನು ಯಾಕಂದರೆ ಹೇಬೆಲನ ಯಜ್ಞವು ದೇವರಿಗೆ ಮೆಚ್ಚಿಕೆಯಾಯಿತು, ಆದರೆ ಕಾಯಿನನದ್ದು ಆಗಲಿಲ್ಲ. ಮತ್ತು ಬೈಬಲು ಹೇಳುವುದೇನಂದರೆ ಕಾಯಿನನು “ಕೆಡುಕನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದುಹಾಕಿ” ದನು.—1 ಯೋಹಾನ 3:12; ಆದಿಕಾಂಡ 4:4-8.
ಹೌದು, ಕೆಡುಕನಾದ ಪಿಶಾಚ ಸೈತಾನನು ಸ್ಪರ್ಧಾತ್ಮಕ ಆತ್ಮದ ಜನ್ಮದಾತನೂ, ಪ್ರವರ್ತಕನೂ ಆಗಿದ್ದಾನೆ. ಅವನು ಉನ್ನತ ಸುಯೋಗಗಳಿರುವ ದೇವರ ದೇವದೂತ ಪುತ್ರನಾಗಿದ್ದರೂ, ಇನ್ನಷ್ಟನ್ನು ಅವನು ಆಶಿಸಿದನು. (ಹೋಲಿಸಿರಿ ಯೆಹೆಜ್ಕೇಲ 28:14, 15.) ಅವನು ಹವ್ವಳನ್ನು ಮೋಸಗೊಳಿಸಿದಾಗ, ಅವನು ತನ್ನ ಸ್ವಂತ ಆಶೆಯನ್ನು ಬಯಲುಮಾಡಿದನು. ನಿಷೇಧಿತ ಹಣ್ಣನ್ನು ತಿನ್ನುವದರ ಮೂಲಕ, ಅವಳು “ದೇವರಂತೆ ಆಗ” ಲಿದ್ದಾಳೆ ಎಂದು ಅವನಂದನು. (ಆದಿಕಾಂಡ 3:4, 5) ಯೆಹೋವನನ್ನು ಪ್ರತಿಸ್ಪರ್ಧಿಸಿ ದೇವರಂತೆ ಆಗಲು ನಿಜವಾಗಿಯೂ ಬಯಸಿದವನು ಸೈತಾನನಾಗಿದ್ದನು. ದೇವರ ವಿರುದ್ಧ ಸ್ಪರ್ಧಿಸುವ ಆತ್ಮವೊಂದು ದಂಗೆಗೆ ಅವನನ್ನು ಪ್ರಚೋದಿಸಿತು.—ಯಾಕೋಬ 1:14, 15.
ಈ ಆತ್ಮವು ಸೋಂಕಿನಂತೆ ಇದೆ. ಸೈತಾನನ ಪ್ರಭಾವದ ಕೆಳಗೆ, ಮೂಲ ಕುಟುಂಬ ಏರ್ಪಾಡಿನ ದೇವದತ್ತ ಶಾಂತಿಯು ನಷ್ಟಗೊಂಡಿತು. (ಆದಿಕಾಂಡ 3:6, 16) ದೇವರ ವಿರುದ್ಧದ ಅವನ ದಂಗೆಯಂದಿನಿಂದ, ಪಿಶಾಚನಾದ ಸೈತಾನನು ಮಾನವ ಕುಲದ ಮೇಲೆ ಪ್ರಭುತ್ವ ನಡಿಸುತ್ತಾ, ಪೈಪೋಟಿತನದ ಆತ್ಮವನ್ನು ಪೋಷಿಸುತ್ತಿದ್ದಾನೆ, ಹೀಗೆ ಘಾತುಕ ಸ್ಪರ್ಧೆಯು ಸಾಫಲ್ಯಕ್ಕೆ ಕೀಲಿ ಕೈ ಎಂದು ಗಂಡಸರು, ಹೆಂಗಸರು ನಂಬುವದರಲ್ಲಿ ಮೋಸಗೊಳಿಸುತ್ತಲೂ ಇದ್ದಾನೆ. ಆದಾಗ್ಯೂ, ಬೈಬಲು ವಿವರಿಸುವುದು: “ಮತ್ಸರವೂ ಪಕ್ಷಭೇದವೂ ಇರುವ ಕಡೆ ಗಲಿಬಿಲಿಯೂ ಸಕಲವಿಧ ನೀಚಕೃತ್ಯಗಳೂ ಇರುವವು.” (ಯಾಕೋಬ 3:14-16) ಹೀಗೆ ಸೈತಾನನು ಮಾನವನಿಂದ ಅವನ ಸಂತೋಷ ಮತ್ತು ಮನಶ್ಶಾಂತಿಯನ್ನು ಕಸಿದುಕೊಂಡಿದ್ದಾನೆ.
ಸ್ಪರ್ಧೆಯ ಹೊರತಾಗಿ ಸಾಫಲ್ಯ
ಸೈತಾನನ ಮನವೊಲಿಸುವಿಕೆಯೊಂದಿಗೆ ವಿಪರ್ಯಸ್ತವಾಗಿ, ಸ್ಪರ್ಧೆಯ ಹೊರತಾಗಿ ಸಾಫಲ್ಯದ ಉದಾಹರಣೆಗಳನ್ನು ಬೈಬಲು ಕೊಡುತ್ತದೆ. ಇದರಲ್ಲಿ ಮುಖ್ಯವಾದದ್ದು ಯೇಸು ಕ್ರಿಸ್ತನದ್ದಾಗಿದೆ. ದೇವರ ರೂಪದಲ್ಲಿ ಇರುವುದಾದರೂ, ದೇವರಿಗೆ ಸರಿಸಮಾನನಾಗಬೇಕೆಂದು ಎಂದಿಗೂ ಆತನು ಯೋಚಿಸಲಿಲ್ಲ, ಬದಲಾಗಿ ದಾಸನ ರೂಪವನ್ನು ತೆಗೆದುಕೊಂಡು ಭೂಮಿಗೆ ಬಂದನು. ಅದಕ್ಕಿಂತಲೂ ಹೆಚ್ಚಾಗಿ, ಅವನು ತನ್ನನ್ನು ವಿನೀತನನ್ನಾಗಿ ಮಾಡಿಕೊಂಡು, ಯಾತನಾ ಸ್ತಂಭದ ಮೇಲೆ ಸಾಯುವಷ್ಟು ವಿಧೇಯನಾದನು. ಪೈಪೋಟಿತನದ ಯಾವುದೇ ಆತ್ಮವಿಲ್ಲದ, ಈ ವಿಧೇಯ ಮನೋಭಾವವು ದೈವಿಕ ಪ್ರಸನ್ನತೆಯನ್ನು ಗಳಿಸುವಂತೆ ಅವನನ್ನು ನಡಿಸಿತು. “ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.” (ಫಿಲಿಪ್ಪಿ 2:5-9) ಅದಕ್ಕಿಂತಲೂ ಹೆಚ್ಚಿನ ಯಾವ ಸಾಫಲ್ಯವನ್ನು ಯಾವನೇ ಸೃಷ್ಟಿಜೀವಿಯು ಸಾಧಿಸಬಲ್ಲನು? ಬೇರೆ ಯಾವ ಸೃಷ್ಟಿಜೀವಿಯೂ ಮಾಡಸಾಧ್ಯವಿಲ್ಲದ ಮಟ್ಟಿಗೆ ತನ್ನ ತಂದೆಯನ್ನು ಅವನು ಪ್ರಸನ್ನಗೊಳಿಸಿದನು, ಮತ್ತು ಅವನಿದನ್ನು ಯಾವುದೇ ಪೈಪೋಟಿತನದ ಯಾ ಸ್ಪರ್ಧೆಯ ಆತ್ಮವಿಲ್ಲದೆ ಮಾಡಿದನು.—ಜ್ಞಾನೋಕ್ತಿ 27:11.
ಪರಲೋಕದಲ್ಲಿ ಬಹು ಸಂಖ್ಯಾಕ ನಂಬಿಗಸ್ತ ದೇವದೂತರು ಇದೇ ಮನೋಭಾವವನ್ನು ತೋರಿಸುತ್ತಾರೆ. ದೇವದೂತರುಗಳ ಶಿರಸ್ಸಾಗಿ ಇದ್ದ ಯೇಸು ಭೂಮಿಗೆ ಬಂದಾಗ ಅವರಿಗಿಂತ ಸ್ವಲ್ಪ ಕಡಿಮೆಯವನಾದರೂ, ಅವನ ಆವಶ್ಯಕತೆಗಳನ್ನು ಅವರು ಸ್ವಇಚ್ಛೆಯಿಂದ ಪೂರೈಸಿದರು. ಸ್ಪಷ್ಟವಾಗಿಗಿ, ಸನ್ನಿವೇಶದ ದುರುಪಯೋಗಮಾಡುವ ಮತ್ತು ಪ್ರಧಾನ ದೂತನಾದ ಅವನನ್ನು ದುರಾಕ್ರಮಣಮಾಡಲು ಪ್ರಯತ್ನಿಸುವ ಯಾವುದೇ ಯೋಚನೆಯನ್ನು ಅವರು ಪೋಷಿಸಲಿಲ್ಲ.—ಮತ್ತಾಯ 4:11; 1 ಥೆಸಲೊನೀಕ 4:16; ಇಬ್ರಿಯ 2:7.
ಕೆಲವು ಅಪರಿಪೂರ್ಣ ಮಾನವರನ್ನು ಅಮರತ್ವದ ಆತ್ಮ ಜೀವನಕ್ಕೇರಿಸಲು—ಆ ಸ್ಥಿತಿಯಲ್ಲಿ ಅವರು “ದೇವದೂತರಿಗೂ ತೀರ್ಪುಮಾಡು” ವರು—ಇದ್ದ ದೇವರ ಉದ್ದೇಶಕ್ಕವರು ಪ್ರತಿವರ್ತಿಸಿದ ವಿಧಾನವನ್ನು ನಾವು ಪರಿಗಣಿಸುವಾಗ, ಸ್ಪರ್ಧಾತ್ಮಕ ಮನೋಭಾವಗಳ ಕಡೆಗಿನ ಅವರ ಹೇವರಿಕೆಯು ಇನ್ನಷ್ಟು ವಿದಿತವಾಗುತ್ತದೆ. (1 ಕೊರಿಂಥ 6:3) ಯೆಹೋವನನ್ನು ಸೇವಿಸುವುದರಲ್ಲಿ ದೇವದೂತರುಗಳಿಗೆ ಅನುಭವದ ವಿಪುಲತೆ ಇದೆ ಮತ್ತು ಅಪರಿಪೂರ್ಣ ಮಾನವರು ಮಾಡುವದಕ್ಕಿಂತಲೂ ಒಳ್ಳಿತನ್ನು ಉತ್ತಮವಾಗಿ ನಿರ್ವಹಿಸುವ ಅಧಿಕ ಸಾಮರ್ಥ್ಯವು ಇದೆ. ಆದರೂ, ಅವರು ಏನು ಪಡೆಯಲಿದ್ದಾರೋ ಅದರ ಬಗ್ಗೆ ಎಂದಿಗೂ ಮತ್ಸರಿಗಳಾಗಿರದೆ, ಭೂಮಿಯ ಮೇಲಿರುವ ಅಭಿಷಿಕ್ತರ ಸೇವೆಯನ್ನು ಸಂತೋಷದಿಂದ ದೇವದೂತರುಗಳು ಮಾಡುತ್ತಿದ್ದಾರೆ. (ಇಬ್ರಿಯ 1:14) ಅವರ ಉತ್ತಮ, ಸ್ಪರ್ಧಾತ್ಮಕವಲ್ಲದ ಮನೋಭಾವವು ಸಾರ್ವಭೌಮ ಕರ್ತ ಯೆಹೋವನ ಸಿಂಹಾಸನದ ಮುಂದೆ ಸೇವಿಸುವುದನ್ನು ಮುಂದರಿಸಲು ಅವರನ್ನು ಶಕ್ತರನ್ನಾಗಿ ಮಾಡುತ್ತದೆ.
ಅದಲ್ಲದೆ, ಭೂಮಿಯ ಮೇಲೆ ಪುನರುತ್ಥಾನಗೊಳಿಸಲ್ಪಡುವ ಪುರಾತನ ನಂಬಿಗಸ್ತ ದೇವರ ಸೇವಕರ ಕುರಿತು ಯೋಚಿಸಿರಿ. ನಂಬಿಕೆಯ ಎದ್ದುಕಾಣುವ ಉದಾಹರಣೆಯಾಗಿ ಅಬ್ರಹಾಮನಿದ್ದನು ಮತ್ತು “ಅವನು ನಂಬುವವರೆಲ್ಲರಿಗೂ . . . ಮೂಲತಂದೆ” ಎಂದು ಕರೆಯಲ್ಪಟ್ಟನು. (ರೋಮಾಪುರ 4:9, 11) ಯೋಬನು ತಾಳ್ಮೆಯ ಅತ್ಯುತ್ಕೃಷ್ಟ ಆದರ್ಶವನ್ನಿಟ್ಟನು. (ಯಾಕೋಬ 5:11) ಮೋಶೆಯು, “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು,” ಇಸ್ರಾಯೇಲ್ ಜನಾಂಗವನ್ನು ವಿಮೋಚನೆಗೆ ನಡಿಸಿದನು. (ಅರಣ್ಯಕಾಂಡ 12:3) ಅಪರಿಪೂರ್ಣ ಮಾನವರಲ್ಲಿ ಈ ಮನುಷ್ಯರಿಗಿಂತ ನಂಬಿಕೆ, ತಾಳ್ಮೆ, ಮತ್ತು ಸಾತ್ವಿಕತೆಯ ಉತ್ತಮ ಮಾದರಿಯನ್ನು ಬೇರೆ ಯಾರು ಇಟ್ಟಿದ್ದಾರೆ? ಆದಾಗ್ಯೂ, ದೇವರ ರಾಜ್ಯದ ಕೆಳಗೆ ಐಹಿಕ ಕ್ಷೇತ್ರವನ್ನು ಸ್ವಾಸ್ಥ್ಯವಾಗಿ ಪಡೆಯುವ ಸಾಲಿನಲ್ಲಿ ಅವರಿದ್ದಾರೆ. (ಮತ್ತಾಯ 25:34; ಇಬ್ರಿಯ 11:13-16) ಸ್ನಾನಿಕನಾದ ಯೋಹಾನನಂತೆ, ಅವರು “ಪರಲೋಕರಾಜ್ಯದಲ್ಲಿರುವ ಚಿಕ್ಕವ” ನಿಗಿಂತಲೂ ಕೆಳಮಟ್ಟದಲ್ಲಿರುವರು. (ಮತ್ತಾಯ 11:11) ಪರಲೋಕದಲ್ಲಿ ಜೀವಿತವನ್ನು ಪಡೆದವರಿಗಿಂತಲೂ ಅವರ ನಂಬಿಕೆ, ತಾಳ್ಮೆ, ಯಾ ಸಾತ್ವಿಕತೆ ಸರಿಸಮಾನವಾಗಿ ಯಾ ಕೆಲವು ವಿದ್ಯಮಾನಗಳಲ್ಲಿ ಅವರದ್ದನ್ನು ಮೀರುತ್ತದೆ ಎಂದು ಪಟ್ಟು ಹಿಡಿದು, ಅವರೆಂದಾದರೂ ದೂರುವುದನ್ನು ಯೋಚಿಸುವರೋ? ಖಂಡಿತವಾಗಿಯೂ, ಇಲ್ಲ! ಅವರು ದೇವರ ರಾಜ್ಯದ ಆನಂದಿತ ಐಹಿಕ ಪ್ರಜೆಗಳಾಗುವರು.
ಇಂದು ಕೂಡ, ಪೈಪೋಟಿತನದ ಮನೋಭಾವವಿಲ್ಲದ ಜನರೊಂದಿಗೆ ಇರುವುದು ಆಹ್ಲಾದಕರವಾಗಿದೆ. ಮೊದಲನೆಯ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಯಾಸೂ, ಚಿನ್ನದ ಮೇಲೆ ಹಣತೊಡಗಿಸುವ ಮೂಲಕ ಆಳವಾಗಿ ಸಾಲಕ್ಕೀಡಾದನು ಮತ್ತು ಅವನ ಎಲ್ಲಾ ಆಸ್ತಿಯನ್ನು ಕಳೆದುಕೊಂಡನು. ಅವನ “ಸ್ನೇಹಿತರು” ಅವನನ್ನು ತೊರೆದರು. ಅವನ ಹೆಂಡತಿಯು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಅಧ್ಯಯನವನ್ನು ಮಾಡಲು ಆರಂಭಿಸಿದಾಗ, ಅವನ ಕುಟುಂಬದಲ್ಲಿ ಅವನು ಕಾರಣನಾದ ಸಂಕಟಕ್ಕಾಗಿ ತೀಕ್ಷೈ ಪರಿತಾಪದ ಭಾವನೆಯುಳ್ಳ ಕಾರಣ ಅವರ ಕೂಟಗಳಿಗೆ ಅವನು ಹೋಗಲಾರಂಭಿಸಿದನು. ಕ್ರಮೇಣ, ಅವನು ತನ್ನಲ್ಲಿದ್ದ ಪೈಪೋಟಿತನವನ್ನು ತೆಗೆದುಬಿಟ್ಟನು ಮತ್ತು ಯೆಹೋವನ ಸಾಕ್ಷಿಗಳಲ್ಲೊಬ್ಬನಾದನು. ಸಂಕಟದ ಸಮಯಗಳಲ್ಲಿ ಅವನಿಗೆ ಸಹಾಯ ಮಾಡಲು ಇಚ್ಛೆಯುಳ್ಳ ವಿಧದ ಜನರಾದ ಕ್ರೈಸ್ತ ಸ್ನೇಹಿತರುಗಳಿಂದ ಆವೃತನಾಗಿರುವದರಲ್ಲಿ ಅವನು ಈಗ ಸಂತೋಷಿಸುತ್ತಾನೆ.
ಮನಶ್ಶಾಂತಿಯನ್ನು ಕಾಪಾಡಿಕೊಳ್ಳುವ ವಿಧ
ನಿಷ್ಕರುಣೆಯ, ಸ್ಪರ್ಧಾತ್ಮಕ ಸಮಾಜವೊಂದರಲ್ಲಿ ಮನಶ್ಶಾಂತಿಯನ್ನು ಕಾಪಾಡಿಕೊಳ್ಳುವುದು ಯಾವಾಗಲೂ ಸುಲಭವಲ್ಲ. ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗಲು ಜನರನ್ನು ತಡೆಗಟ್ಟುವ “ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ ಮತ್ಸರ” ವನ್ನು “ಶರೀರಭಾವದ ಕರ್ಮಗಳು” ಎಂದು ಬೈಬಲು ಖಂಡಿಸುತ್ತದೆಂದು ನಾವು ಗಮನಿಸುವುದರಲ್ಲಿ ಒಳಿತನ್ನು ಮಾಡುತ್ತೇವೆ. ಸ್ಪರ್ಧಾತ್ಮಕ ಭಾವದೊಂದಿಗೆ ಇವೆಲ್ಲಾ ಕರ್ಮಗಳು ಒಟ್ಟೊಟ್ಟಿಗೆ ಹೋಗುತ್ತವೆ. ಅಪೊಸ್ತಲ ಪೌಲನು ಗಲಾತ್ಯದವರಿಗೆ ಉತ್ತೇಜಿಸಿದರ್ದಲ್ಲಿ ಏನೂ ಆಶ್ಚರ್ಯವಿಲ್ಲ: “ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.”—ಗಲಾತ್ಯ 5:19-21, 26.
ಈ ಪೂರ್ವಾಪರದಲ್ಲಿ, ಸ್ವಾರ್ಥಸಾಧನೆಯ ಸ್ಪರ್ಧೆಯೊಂದಿಗೆ ನಿಭಾಯಿಸುವ ಕೀಲಿ ಕೈಯನ್ನು ಪೌಲನ ಪತ್ರದಲ್ಲಿ ತೋರಿಸಲಾಗಿದೆ. ಅವನಂದದ್ದು: “ಪ್ರೀತಿ ಸಂತೋಷ ಸಮಾಧಾನ ಧೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ. ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ.” (ಗಲಾತ್ಯ 5:22, 23) ನಮ್ಮ ಮನಸ್ಸುಗಳಿಂದ ಪೈಪೋಟಿತನವನ್ನು ತೊಲಗಿಸಿಬಿಡಲು ಆತ್ಮದ ಫಲಗಳು ನಮಗೆ ಸಹಾಯ ಮಾಡುತ್ತವೆ. ಉದಾಹರಣೆಗೆ, ಪ್ರೀತಿಯ ಗುಣವನ್ನು, ಪರಿಗಣಿಸಿರಿ. “ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ,” ವಿವರಿಸುತ್ತಾನೆ ಪೌಲನು. “ಉಬ್ಬಿಕೊಳ್ಳುವದಿಲ್ಲ; ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೇಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ.” (1 ಕೊರಿಂಥ 13:4-7) ಪ್ರೀತಿಯನ್ನು ಬೆಳೆಸುವುದರ ಮೂಲಕ, ನಾವು ಸ್ಪರ್ಧೆಯ ಆತ್ಮದ ಚಾಲಕ ಶಕ್ತಿಯಾದ ಮತ್ಸರವನ್ನು ನಿರ್ಮೂಲಗೊಳಿಸಬಲ್ಲೆವು. ಆತ್ಮದ ಇತರ ಫಲಗಳು ಕೂಡ, ಘಾತುಕ, ಸ್ಪರ್ಧಾತ್ಮಕ ಭಾವದ ಉಳಿದುಬಿಟ್ಟಿರುವ ಯಾವುದೇ ಕುರುಹುಗಳನ್ನು ನಮ್ಮ ಹೃದಯ-ಮನಗಳಿಂದ ತೊಳೆದುಬಿಡಲು ಕೂಡ ನಮಗೆ ಸಹಾಯ ಮಾಡುತ್ತವೆ. ಯಾಕೆ, ಯಾವುದೇ ಬೆಲೆ ತೆತ್ತಾದರೂ ಯಶಸ್ವಿಯಾಗುವಂತೆ ಇತರರೊಡನೆ ಸ್ಪರ್ಧಿಸಲು ಏಳಬಹುದಾದ ಪ್ರೇರಣೆಯನ್ನು ದಮೆಯಿಂದ ಬೇಗನೆ ದಮನಿಸಬಹುದು!—ಜ್ಞಾನೋಕ್ತಿ 17:27.
ಆದಾಗ್ಯೂ, ಈ ಗುಣಗಳನ್ನು ಬೆಳಸಲಿಕ್ಕಾಗಿ, ದೇವರ ಆತ್ಮವು ನಮ್ಮ ಮೇಲೆ ಕಾರ್ಯನಡಿಸಲು ನಾವು ಅನುಮತಿಸಬೇಕಾಗಿದೆ. ಪ್ರಾರ್ಥನೆಯಲ್ಲಿ ನಿರತರಾಗಿರುವದರಿಂದ ಮತ್ತು ನಮಗೆ ಸಹಾಯ ಮಾಡಲು ದೇವರ ಆತ್ಮಕ್ಕಾಗಿ ಬೇಡುವುದರಿಂದ, ಪವಿತ್ರಾತ್ಮದ ಈ ಆರೋಗ್ಯಕರ ಕಾರ್ಯಸಾಧನೆಯನ್ನು ನಾವು ಹುರಿದುಂಬಿಸಬಲ್ಲೆವು. (ಲೂಕ 11:13) ನಮ್ಮ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆಯಲ್ಲಿ, ದೇವರು ನಮಗೇನನ್ನು ದಯಪಾಲಿಸುವನು? ಬೈಬಲು ಉತ್ತರಿಸುವುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”—ಫಿಲಿಪ್ಪಿ 4:6, 7.
ಯೇಸುವಿನ ಅಪೊಸ್ತಲರ ವಿದ್ಯಮಾನದಲ್ಲಿ ಇದು ವ್ಯಕ್ತವಾಗಿತ್ತು. ಅಪೊಸ್ತಲರೊಂದಿಗೆ ತನ್ನ ಕೊನೇ ರಾತ್ರಿಯಲ್ಲಿ ಕರ್ತನ ರಾತ್ರಿ ಭೋಜನವನ್ನು ಯೇಸು ಆರಂಭಿಸಿದ ಅನಂತರವೂ, ಅವರಲ್ಲಿ ಅತಿ ದೊಡ್ಡವನು ಯಾರು ಎಂಬುದರ ಮೇಲೆ ಅವರು ಇನ್ನೂ ಕಾದಾಡುತ್ತಿದ್ದರು. (ಲೂಕ 22:24-27) ಅವರ ಆಲೋಚನೆಯನ್ನು ಸರಿಪಡಿಸಲು ಅವರಿಗೆ ಸಹಾಯ ಮಾಡಲು, ಯೇಸು ವಿವಿಧ ಸಂದರ್ಭಗಳಲ್ಲಿ ಪ್ರಯತ್ನಿಸಿದ್ದನು, ಆದರೆ ಈ ಸ್ಪರ್ಧಾತ್ಮಕ ಮನೋಭಾವವು ಅವರಲ್ಲಿ ಆಳವಾಗಿ ಬೇರೂರಿತ್ತು. (ಮಾರ್ಕ 9:34-37; 10:35-45; ಯೋಹಾನ 13:12-17) ಆದಾಗ್ಯೂ, ಆ ವಿವಾದದ ಸುಮಾರು 50 ದಿನಗಳ ಅನಂತರ, ಅವರಿಗೆ ಒಮ್ಮೆ ಪವಿತ್ರಾತ್ಮವು ದೊರಕಿದಾಗ, ಅವರ ಮನೋಭಾವವು ಬದಲಾವಣೆಗೊಂಡಿತು. ಪಂಚಾಶತ್ತಮದ ಆ ದಿನದಲ್ಲಿ ಒಟ್ಟುಗೂಡಿದ ಕುತೂಹಲವುಳ್ಳ ಗುಂಪಿಗೆ ಮಾತಾಡುವುದರಲ್ಲಿ ಅವರನ್ನು ಯಾರು ಪ್ರತಿನಿಧಿಸುವರೆಂಬ ವಿಷಯದಲ್ಲಿ ಯಾವ ವಿವಾದವೂ ಅಲ್ಲಿರಲಿಲ್ಲ.—ಅ. ಕೃತ್ಯಗಳು 2:14-21.
ಕ್ರೈಸ್ತ ಸಭೆಯ ಮೇಲೆ ಯಾವುದೇ ಮಾನವ ಪ್ರಭುತ್ವಕ್ಕೆ ಏನೂ ವಿನಾಯಿತಿ ಇರಲಿಲ್ಲ. ಸುನ್ನತಿಯ ಕುರಿತು ಸಮಸ್ಯೆಯೊಂದನ್ನು ಅವರಿಗೆ ಬಗೆಹರಿಸಲು ಇದ್ದಾಗ, ಯೇಸುವಿನ ಮರಣದ ಸಮಯದಲ್ಲಿ ಒಬ್ಬ ಶಿಷ್ಯನೂ ಆಗಿರದಿದ್ದ ಯಾಕೋಬನು ಆ ಪ್ರಾಮುಖ್ಯ ಕೂಟದ ಮೇಲೆ ಅಧ್ಯಕ್ಷತೆ ವಹಿಸಿದನು. ಕ್ರೈಸ್ತ ಸಭೆಯ ಆಡಳಿತ ಮಂಡಳಿಯ ಆ ಕೂಟದಲ್ಲಿ ಯಾರು ಮುಂದಾಳುತನ ವಹಿಸುವರು ಎಂಬುದರ ಮೇಲೆ ವಿವಾದವಾದ ಯಾವ ಚಿಹ್ನೆಯೂ ಇಲ್ಲ. ಅಪೊಸ್ತಲರು ಸ್ಪರ್ಧಾತ್ಮಕ ಆತ್ಮದಿಂದ ಕಲುಷಿತಗೊಂಡಿದ್ದ ಸಮಯದಂದಿನಿಂದ ಎಂತಹ ಒಂದು ಪರಿವರ್ತನೆ! ಪವಿತ್ರಾತ್ಮದ ಸಹಾಯದೊಂದಿಗೆ, ಅವರು ಯೇಸುವಿನ ಬೋಧನೆಗಳನ್ನು ನೆನಪಿಗೆ ತಂದುಕೊಂಡರು ಮತ್ತು ಅವನ ಪಾಠಗಳ ಅರ್ಥವನ್ನು ಮನದಟ್ಟುಮಾಡಿಕೊಳ್ಳಲು ಆರಂಭಿಸಿದರು.—ಯೋಹಾನ 14:26.
ನಮ್ಮ ವಿಷಯದಲ್ಲೂ ಇದು ಸತ್ಯವಾಗಿರಬಲ್ಲದು. ಪವಿತ್ರಾತ್ಮದ ಸಹಾಯದೊಂದಿಗೆ, ಅವರ ವೆಚ್ಚದಲ್ಲಿ ಪ್ರಗತಿಯನ್ನು ಮಾಡಲಾಗುವಂತೆ ಇತರರೊಂದಿಗೆ ಸ್ಪರ್ಧಿಸಲು ಉಳಿದುಕೊಂಡಿರುವ ಯಾವುದೇ ಪ್ರೇರಣೆಯನ್ನು ನಾವು ಜಯಿಸಬಲ್ಲೆವು. ಬದಲಾಗಿ, ಎಲ್ಲಾ ಯೋಚನೆಗಳನ್ನು ಮೀರುವ ಮನಶ್ಶಾಂತಿಯನ್ನು ನಾವು ಸಂಪಾದಿಸಬಲ್ಲೆವು. ಘಾತುಕ ಸ್ಪರ್ಧೆಯ ಮೂಲನಾದ, ಪಿಶಾಚ ಸೈತಾನನು, ಶೀಘ್ರದಲ್ಲಿಯೇ ಅಧೋಲೋಕಕ್ಕೆ ದೊಬ್ಬಲ್ಪಟ್ಟು ನಿಷ್ಕ್ರಿಯನಾಗಿ ಮಾಡಲ್ಪಡುವನು ಎಂದು ಬೈಬಲು ನಮಗೆ ಆಶ್ವಾಸನೆಯನ್ನೀಯುತ್ತದೆ. (ಪ್ರಕಟನೆ 20:1-3) ನೆರೆಯವರ ನಡುವೆ ಪೈಪೋಟಿತನ ಇನ್ನು ಮುಂದೆ ಅಸ್ತಿತ್ವದಲ್ಲಿರದು. ಯಾವುದೇ ಪ್ರಗತಿ ಇಲ್ಲದ ಸಮಾಜವೊಂದು ಫಲಿಸುವುದೋ? ಎಂದಿಗೂ ಹಾಗಿರದು! ಮಾನವರು ಪರಿಪೂರ್ಣತೆಗೇರುವರು, ತಮ್ಮೊಳಗಿನ ಯಾವುದೇ ಸ್ಪರ್ಧೆಯ ಮೂಲಕವಲ್ಲ, ಬದಲಾಗಿ ಅವರೆಡೆಗೆ ಯೇಸುವಿನ ವಿಮೋಚನಾ ಯಜ್ಞದ ಅನ್ವಯಿಸುವಿಕೆಯ ಮೂಲಕ.—1 ಯೋಹಾನ 2:1, 2.
ಹಿಂದೆ ತಿಳಿಸಲ್ಪಟ್ಟ ಲಿಖಾವಟ್ಟು ಸಂಖ್ಯೆಯ ಕಾರುಗಳನ್ನು ಮಾರುವುದರ ಮೂಲಕ ಒಮ್ಮೆ ಲೌಕಿಕ ಸಾಫಲ್ಯದ ಮಹಿಮೆಯನ್ನು ಅನುಭವಿಸಿದ ಕಾನೊಸ್ಕಿ ತನ್ನನ್ನು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಸ್ವತಃ ದಣಿಸಿಕೊಂಡನು, ಆದರೆ ಅವನು ಕೊನೆಗೆ ತನ್ನ ಕೆಲಸವನ್ನು ತೊರೆದನು. “ಈಗ, ನನ್ನ ಜೀವಿತವು ನಿಜ ಸಂತೋಷದಿಂದ ತುಂಬಿರುತ್ತದೆ,” ಎಂದವನು ಅನ್ನುತ್ತಾನೆ. ಯೇಸುವಿನ ಜೀವಿತವು ನಿಜ ಸಾಫಲ್ಯದಿಂದ ಗುರುತಿಸಲ್ಪಟ್ಟದ್ದು ಯಾಕೆ ಎಂದು ಅವನು ತಿಳಿದುಕೊಳ್ಳಶಕ್ತನಾದನು. ದೇವರ ಲೋಕವ್ಯಾಪಕ ಸಭೆಯಲ್ಲಿ ಅವನು ಏನನ್ನು ಮಾಡಲು ಶಕ್ತನೋ ಅದನ್ನು ಮಾಡುವುದರಲ್ಲಿ ಅವನೀಗ ಚೈತನ್ಯವನ್ನು ಕಂಡುಕೊಳ್ಳುತ್ತಾನೆ. ಎಲ್ಲಿ ಸ್ಪರ್ಧೆಯಿರುವುದಿಲ್ಲವೋ ಆ ಹೊಸ ಲೋಕಕ್ಕಾಗಿ ಅವನು ಹೀಗೆ ತಯಾರಿಸಲ್ಪಡುತ್ತಿದ್ದಾನೆ. ನಿಮ್ಮ ವಠಾರದಲ್ಲಿರುವ ರಾಜ್ಯ ಸಭಾಗೃಹವೊಂದಕ್ಕೆ ಭೇಟಿನೀಡಿ, ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸ ಮಾಡುವುದರ ಮೂಲಕ, ಈ ಹೊಸ ಲೋಕ ಸಮಾಜದ ಮುನ್ನೋಟವು ನಿಮಗೂ ಇರಸಾಧ್ಯವಿದೆ.
[ಪುಟ 7 ರಲ್ಲಿರುವ ಚಿತ್ರ]
ದೇವರ ಹೊಸ ಲೋಕದಲ್ಲಿ ಮಾನವ ಸಮಾಜದಿಂದ ಶಾಂತಿ ಮತ್ತು ಸಹಕಾರವು ಆನಂದಿಸಲ್ಪಡುವುದು