ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ದೇವರು ಪಕ್ಷಪಾತಿಯಲ್ಲ”
ಹತ್ತೊಂಬತ್ತು ನೂರು ವರ್ಷಗಳ ಹಿಂದೆ, ಪ್ರೇರಿತ ಅಪೊಸ್ತಲ ಪೇತ್ರನು ಬರೆದದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” (ಅ. ಕೃತ್ಯಗಳು 10:34, 35) ಯೆಹೋವನ ಸಾಕ್ಷಿಗಳಲ್ಲಿ ಎಲ್ಲಾ ಕುಲಗಳ ಮತ್ತು ಧಾರ್ಮಿಕ ಹಿನ್ನೆಲೆಗಳ ಜನರು ಕಂಡುಬರುತ್ತಾರೆ. ಅವರು ನೀತಿಯನ್ನು ಬಯಸುತ್ತಾರೆ, ಮತ್ತು ಅವರು ದೇವರಿಗೆ ಭಯಪಡುತ್ತಾರೆ. ನೂತನ ಲೋಕ ಸಮಾಜದೊಳಗೆ, ಉದಾಹರಣೆಗೆ, ಚಾಡ್‌ನ ಒಬ್ಬಳು ನಿರ್ದಿಷ್ಟ ಹೆಂಗಸಿಗೆ ಮಾಡಿದಂತೆ, ಆತನು ಅವರೆಲ್ಲರನ್ನು ಸುಸ್ವಾಗತಿಸುತ್ತಾನೆ.
ಅವಳ ಧರ್ಮದಿಂದ ಈ ಸ್ತ್ರೀಯು ತೃಪ್ತಳಾಗಿರಲಿಲ್ಲ. ಹಲವಾರು ವರ್ಷಗಳ ಹಿಂದೆ ಅವಳು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಯುವರ್ ಯೂತ್—ಗೆಟ್ಟಿಂಗ್ ದ ಬೆಸ್ಟ್ ಔಟ್ ಆಫ್ ಇಟ್ ಪುಸ್ತಕದ ಒಂದು ಪ್ರತಿಯನ್ನು ಸ್ವೀಕರಿಸಿದ್ದಳು ಮತ್ತು ಆ ಪುಸ್ತಕದಲ್ಲಿರುವ ಉತ್ತಮ ಹಿತೋಕ್ತಿಯನ್ನು ಅವಳು ಗಣ್ಯಮಾಡಿದಳು. ಒಂದು ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಿತು, ಮತ್ತು ಅವಳು ಯಾವಾಗಲೂ ಅಧ್ಯಯನಕ್ಕಾಗಿ ಅಲ್ಲಿರುತ್ತಿದ್ದಳು. ಆದಾಗ್ಯೂ, ರಾಜ್ಯ ಸಭಾಗೃಹದ ಕೂಟಗಳಿಗೆ ಹಾಜರಾಗಲು ಅವಳು ಉತ್ತೇಜಿಸಿದಾಗ, ಆ ಹೆಂಗಸು ಪ್ರತಿವರ್ತಿಸಲಿಲ್ಲ. ಯಾಕೆ? ಅವಳು ಅಧ್ಯಯನ ಮಾಡುವುದನ್ನು ಅವಳ ಗಂಡನು ವಿರೋಧಿಸದಿದ್ದರೂ ಕೂಡ ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಹಾಜರಾಗುವುದಕ್ಕೆ ಅವಳಿಗೆ ಅನುಮತಿಯನ್ನೀಯಲು ಅವನು ನಿರಾಕರಿಸಿದನು.
ಸರ್ಕಿಟ್ ಸಮ್ಮೇಳನವೊಂದಕ್ಕೆ ಹೆಂಡತಿಯು ಹಾಜರಾಗಲು ಬಯಸಿದಾಗ, ಅಧ್ಯಯನವನ್ನು ನಡಿಸುತ್ತಿದ್ದ ಸಾಕ್ಷಿಯು, ಸಾದರಪಡಿಸಲ್ಪಡಲಿರುವ ಉತ್ತಮ ಹಿತೋಪದೇಶವನ್ನು ಎತ್ತಿಹೇಳುತ್ತಾ ಗಂಡನಿಗೆ ಕಾರ್ಯಕ್ರಮವೊಂದನ್ನು ತೋರಿಸಿದಳು. “ಕೇವಲ ಒಮ್ಮೆ ಮಾತ್ರ” ಹೋಗಲು ತನ್ನ ಹೆಂಡತಿಗೆ ಅವನು ಒಪ್ಪಿಗೆಯನ್ನಿತ್ತನು. ಅವಳು ಹಾಜರಾದಳು ಮತ್ತು ಸಮಗ್ರವಾಗಿ ಕಾರ್ಯಕ್ರಮದಲ್ಲಿ ಆನಂದಿಸಿದಳು. ಅವಳೇನು ಕಲಿತಳೋ ಅದನ್ನು ತನ್ನ ಗಂಡನಿಗೆ ಅವಳು ವಿವರಿಸಿದಾಗ, ಇತರ ಕೂಟಗಳಿಗೆ ಅವಳು ಹಾಜರಾಗುವುದನ್ನು ಅವನು ವಿರೋಧಿಸಲಿಲ್ಲ. ಒಬ್ಬರು ಇನ್ನೊಬ್ಬರ ಹಿತಾಸಕ್ತಿಗಳನ್ನು ಆಳವಾಗಿ ಪರಾಂಬರಿಸುವ ಭಿನ್ನ ಕುಲವರ್ಣೀಯ ಜನರಿಂದ ಸಭೆಯು ಒಳಗೂಡಿರುವ ವಾಸ್ತವಾಂಶದಿಂದ ಅವಳು ಪ್ರಭಾವಿತಳಾದಳು. ತದನಂತರ ಅವಳು ಜಿಲ್ಲಾ ಅಧಿವೇಶನಕ್ಕೆ ಹಾಜರಾದಳು ಮತ್ತು ಬೇರೆ ದೇಶಗಳ ಸಾಕ್ಷಿಗಳ ಮಡಿಲಲ್ಲಿ ತನ್ನ ಮಕ್ಕಳು ಕೂತುಕೊಂಡಿರುವುದನ್ನು ಕಂಡಾಗ ಅವಳು ಭಾವಪರವಶಳಾದಳು. ಸಾಕ್ಷಿಗಳು ಮಕ್ಕಳೊಂದಿಗೆ ಊಟದಲ್ಲಿ ಪಾಲಿಗರಾದರು ಮತ್ತು ಪರಿವಾರದವರಂತೆ ಅವರನ್ನು ಉಪಚರಿಸಿದರು. ಇದು ಅವಳಿಗೆ ಒಂದು ತಿರುಗುಬಿಂದುವಾಗಿತ್ತು.
ಆದರೆ ವಿರೋಧವು ಹಿಂಬಾಲಿಸಿ ಬಂತು. ಸ್ವಭಾವತಃ ಅಂಜುಬುರುಕಳಾಗಿದ್ದಾಗ್ಯೂ, ಕೂಟದಲ್ಲಿ ಹೇಳಿಕೆಗಳನ್ನು ನೀಡಲು ಮತ್ತು ಅವಳ ಸಂಬಂಧಿಕರಿಂದ ಮತ್ತು ನೆರೆಯವರಿಂದ ಮಾಡಲ್ಪಟ್ಟ ನಕಾರಾತ್ಮಕ ಹೇಳಿಕೆಗಳನ್ನು ಧೈರ್ಯದಿಂದ ಎದುರಿಸಲು ಅವಳು ಆರಂಭಿಸಿದಳು. ಅವಳ ಗಂಡನೊಂದಿಗೆ ಹಲವಾರು ವರ್ಷಗಳಿಂದ ಜೀವಿಸಿದ್ದರೂ ಕೂಡ, ಅವರದ್ದು ಬರೇ ಸಾಂಪ್ರದಾಯಿಕ ರೀತಿಯ ಒಮ್ಮತದ ಮದುವೆಯಾಗಿತ್ತು. ಕಾನೂನುಬದ್ಧವಾಗಿ ಮದುವೆಯಾಗುವ ವಿಷಯವನ್ನು ಅವಳು ಪ್ರಸ್ತಾಪಿಸುವುದು ಹೇಗೆ? ಯಥಾರ್ಥತೆಯಿಂದ ಯೆಹೋವನಿಗೆ ಪ್ರಾರ್ಥಿಸಿದ ನಂತರ, ಗಂಡನೊಡನೆ ಅವಳು ಮಾತಾಡಿದಳು, ಅವನು ಆ ವಿಷಯ ನೋಡುತ್ತೇನೆಂದು ಹೇಳಿದನು. ಕೊನೆಗೆ ಅವನದನ್ನು ಮಾಡಿದನು, ಮತ್ತು ದಂಪತಿಗಳು ಕಾನೂನುಬದ್ಧವಾಗಿ ವಿವಾಹಿತರಾದರು.
ಅವರೊಂದಿಗೆ ವಾಸಿಸುತ್ತಿದ್ದ ನಾದಿನಿಯೊಬ್ಬಳು ಅನೇಕ ಸಮಸ್ಯೆಗಳನ್ನುಂಟುಮಾಡಿದಳು, ಆದರೆ ತನ್ನ ಹೆಂಡತಿಯ ಪರವಾಗಿ ಗಂಡನು ನಿಲುವನ್ನು ತೆಗೆದುಕೊಂಡನು. ಅನಂತರ ಗಂಡನ ತಂದೆಯು ಭೇಟಿ ನೀಡಲು ಬಂದನು. ಅವಳು ತನ್ನ ಧರ್ಮವನ್ನು ಬದಲಾಯಿಸಿದರ್ದಿಂದ, ತನ್ನ ಹೆಂಡತಿಯನ್ನು ವಿಚ್ಛೇದಿಸುವಂತೆ ಅವನು ಮಗನಿಗೆ ಆಜ್ಞೆಯನ್ನಿತ್ತನು. ಒಂದು “ಹೆಚ್ಚು ಉತ್ತಮ ಹೆಂಡತಿ” ಗಾಗಿ ವಧುಬೆಲೆಯನ್ನು ತಾನು ಕೊಡುತ್ತೇನೆಂದು ತಂದೆಯು ಮಗನಿಗೆ ಹೇಳಿದನು. ಮಗನ ಉತ್ತರ ಇದಾಗಿತ್ತು: “ಇಲ್ಲ, ನಾನದನ್ನು ಮಾಡುವುದಿಲ್ಲ. ಅವಳು ಉತ್ತಮ ಹೆಂಡತಿಯಾಗಿದ್ದಾಳೆ. ಅವಳು ಹೋಗಲು ಮನಸ್ಸು ಮಾಡಿದ್ದರೆ, ಅದು ಬೇರೆಯೇ ಸಂಗತಿ, ಆದರೆ ಅವಳಿಗೆ ಹೋಗಲು ನಾನು ಹೇಳುವುದಿಲ್ಲ.” ಅವಳ ಮಾವನಿಗೆ ಹೆಂಡತಿಯು ಅತಿ ವಿನೀತಳಾಗಿದ್ದಳು, ಮತ್ತು ಅವನಿಗೆ ತನ್ನ ವರ್ತನೆಯ ಕುರಿತು ನಾಚಿಕೆಯಾಯಿತು. ಆದಾಗ್ಯೂ, ಅವನು ತನ್ನ ಗ್ರಾಮಕ್ಕೆ ಹಿಂತೆರಳಿದಾಗ, ಅವನು ತನ್ನ ಮಗನಿಗೆ ಬರೆದು, ಈಗ ಸಮಯದ ಗಡುವನ್ನು ಕೊಟ್ಟನು. ಒಂದು ವೇಳೆ ಅವನ ಮಗನು ಅವನ ಹೆಂಡತಿಯನ್ನು ಕಳುಹಿಸಲು ನಿರಾಕರಿಸಿದರೆ, ಅವನು ಇನ್ನು ಮುಂದೆ ಅವನ ಮಗನಲ್ಲವೆಂದು ಹೇಳಿದನು. ಪುನಃ ಮಗನು ತನ್ನ ಹೆಂಡತಿಯ ಪಕ್ಷದಲ್ಲಿ ನಿಂತನು. ಅಂತಹ ಒಂದು ನಿಶ್ಚಿತ ನಿಲುವನ್ನು ಅವಳ ಗಂಡನು ತೆಗೆದುಕೊಳ್ಳುವುದನ್ನು ಕಾಣುವದರಲ್ಲಿ ಹೆಂಡತಿಗಾದ ಆನಂದವನ್ನು ಊಹಿಸಿರಿ.
ಈಗ ಅವರ ಇಬ್ಬರು ಚಿಕ್ಕ ಪುತ್ರರು ಅವರ ತಾಯಿಯ ಜತೆಯಲ್ಲಿ ರಾಜ್ಯ ಸಭಾಗೃಹಕ್ಕೆ ಹೋಗುವುದನ್ನು ಪ್ರೀತಿಸುತ್ತಾರೆ. ತಮ್ಮ ಕಂಠ ಬಂಧ (ನೆಕ್‌ಟೈ) ಗಳಿಗಾಗಿ ಅವರ ತಂದೆಯನ್ನು ಅವರು ಕೇಳಿದರು ಕೂಡ, ಯಾಕಂದರೆ ಭಾಷಣವನ್ನು ಕೊಡುವ ಎಲ್ಲಾ ಸಹೋದರರು ಅವುಗಳನ್ನು ಧರಿಸುವುದನ್ನು ಅವರು ನೋಡಿದ್ದರು. ಇಂದು ಈ ಹೆಂಗಸು ಒಬ್ಬ ದೀಕ್ಷಾಸ್ನಾನ ಪಡೆದ ಸಹೋದರಿಯಾಗಿದ್ದಾಳೆ.
ಯೆಹೋವನ ರಾಜ್ಯದ ಸುವಾರ್ತೆಯನ್ನು ಚಾಡ್‌ನಲ್ಲಿ ಸಾರುವ 345 ಆನಂದಿತ ಸಾಕ್ಷಿಗಳಲ್ಲಿ ಅವಳೊಬ್ಬಳಾಗಿದ್ದಾಳೆ ಮತ್ತು ನಿಜವಾಗಿಯೂ “ದೇವರು ಪಕ್ಷಪಾತಿಯಲ್ಲ” ಎಂದು ಗಣ್ಯಮಾಡುತ್ತಾಳೆ.