ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 3/15 ಪು. 21-23
  • “ಪಾದಗಳಿಗಲ್ಲ, ಬಾಯಿಗೆ ಉಣಿಸಿರಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಪಾದಗಳಿಗಲ್ಲ, ಬಾಯಿಗೆ ಉಣಿಸಿರಿ”
  • ಕಾವಲಿನಬುರುಜು—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಾಂಪ್ರದಾಯಿಕ ಶವಸಂಸ್ಕಾರ ಪದ್ಧತಿಗಳು
  • ಸಾಂಪ್ರದಾಯಿಕ ಆಫ್ರಿಕನ್‌ ನಂಬಿಕೆಗಳು
  • ಬೈಬಲ್‌ ಹೇಳುವ ವಿಷಯ
  • ಭಿನ್ನರಾಗಿರುವುದೇಕೆ?
  • ಮೃತರಿಗೆ ಗೌರವ ಸಲ್ಲಿಸಬೇಕೊ?
    ಎಚ್ಚರ!—1999
  • ಶವಸಂಸ್ಕಾರಗಳ ಕುರಿತಾದ ಕ್ರಿಸ್ತೀಯ ನೋಟ
    ಕಾವಲಿನಬುರುಜು—1998
  • ದೇವರನ್ನು ಅಪ್ರಸನ್ನಗೊಳಿಸುವ ಪದ್ಧತಿಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಗೌರವಯುತ, ಸರಳ ಮತ್ತು ದೇವರು ಮೆಚ್ಚುವಂಥ ಶವಸಂಸ್ಕಾರಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ಕಾವಲಿನಬುರುಜು—1994
w94 3/15 ಪು. 21-23

“ಪಾದಗಳಿಗಲ್ಲ, ಬಾಯಿಗೆ ಉಣಿಸಿರಿ”

ಸಾಂಪ್ರದಾಯಿಕ ಆಫ್ರಿಕನ್‌ ಶವಸಂಸ್ಕಾರದ ಪದ್ಧತಿಗಳ ಕಡೆಗೆ ಒಂದು ನೋಟ

“ಅವರು ತಮ್ಮ ಸತ್ತವರನ್ನು ಹೂಳುವುದಿಲ್ಲ!” ಇದು ಪಶ್ಚಿಮ ಆಫ್ರಿಕದಲ್ಲಿ ಯೆಹೋವನ ಸಾಕ್ಷಿಗಳ ಕುರಿತು ಸಾಮಾನ್ಯವಾಗಿ ಮಾಡಲ್ಪಡುವ ಹೇಳಿಕೆ ಆಗಿದೆ. ಆದರೂ, ವಾಸ್ತವದಲ್ಲಿ ಸಾಕ್ಷಿಗಳು ತಮ್ಮ ಸತ್ತವರನ್ನು ಹೂಳುತ್ತಾರೆಂಬುದು ಗೊತ್ತಿರುವ ವಿಷಯವಾಗಿದೆ.

ಯೆಹೋವನ ಸಾಕ್ಷಿಗಳು ತಮ್ಮ ಸತ್ತವರನ್ನು ಹೂಳುವುದಿಲ್ಲವೆಂದು ಜನರು ಯಾಕೆ ಹೇಳುತ್ತಾರೆ? ಅವರು ಹಾಗೆ ಮಾಡುತ್ತಾರೆ ಯಾಕೆಂದರೆ, ಪ್ರಸಿದ್ಧ ಸ್ಥಳೀಯ ಶವಸಂಸ್ಕಾರದ ಪದ್ಧತಿಗಳಲ್ಲಿ ಹೆಚ್ಚಿನವುಗಳನ್ನು ಸಾಕ್ಷಿಗಳು ಆಚರಿಸುವುದಿಲ್ಲ.

ಸಾಂಪ್ರದಾಯಿಕ ಶವಸಂಸ್ಕಾರ ಪದ್ಧತಿಗಳು

ಆಲಿಯೂ, ಮಧ್ಯ ನೈಜೀರಿಯದ ಒಂದು ಸಣ್ಣ ಹಳ್ಳಿಯಲ್ಲಿ ಜೀವಿಸುತ್ತಾನೆ. ಅವನ ತಾಯಿ ಸತ್ತಾಗ, ಅವನು ತನ್ನ ಸಂಬಂಧಿಕರಿಗೆ ಆಕೆಯ ಮರಣದ ಕುರಿತು ತಿಳಿಸಿದನು ಮತ್ತು ಆಮೇಲೆ ಆಕೆಯ ಮನೆಯಲ್ಲಿ ಶಾಸ್ತ್ರೀಯ ಭಾಷಣವೊಂದನ್ನು ಕೊಡಲಾಗುವಂತೆ ಏರ್ಪಡಿಸಿದನು. ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯಲ್ಲಿನ ಒಬ್ಬ ಹಿರಿಯನಿಂದ ಕೊಡಲ್ಪಟ್ಟ ಭಾಷಣವು, ಸತ್ತವರ ಪರಿಸ್ಥಿತಿಯ ಮೇಲೆ ಮತ್ತು ಬೈಬಲಿನಲ್ಲಿ ಸೂಚಿಸಲ್ಪಟ್ಟ ಹುರಿದುಂಬಿಸುವ ಪುನರುತ್ಥಾನದ ನಿರೀಕ್ಷೆಯ ಮೇಲೆ ಕೇಂದ್ರಿತವಾಗಿತ್ತು. ಭಾಷಣದ ಅನಂತರ, ಆಲಿಯೂವಿನ ತಾಯಿಯನ್ನು ಹೂಳಲಾಯಿತು.

ಸಂಬಂಧಿಕರು ಅತಿಯಾಗಿ ಕೋಪಗೊಂಡಿದ್ದರು. ವ್ಯಕ್ತಿಯೊಬ್ಬನು ಸತ್ತ ದಿನದ ರಾತ್ರಿಯಂದು ಸಾಮಾನ್ಯವಾಗಿ ನಡೆಸಲ್ಪಡುವ ಜಾಗರಣೆ ಇಲ್ಲದೆ ಯಾವ ಶವಸಂಸ್ಕಾರವೂ ಅವರಿಗೆ ಪೂರ್ಣವಲ್ಲ. ಆಲಿಯೂವಿನ ಸಮುದಾಯದಲ್ಲಿ, ಜಾಗರಣೆಯು ದುಃಖಿಸುವ ಸಮಯವಲ್ಲ, ಉತ್ಸವದ ಸಮಯವಾಗಿದೆ. ಶವಕ್ಕೆ ಸ್ನಾನ ಮಾಡಿಸಲಾಗುತ್ತದೆ, ಬಿಳಿ ಬಟ್ಟೆ ಹಾಕಲಾಗುತ್ತದೆ, ಮತ್ತು ಒಂದು ಮಂಚದ ಮೇಲೆ ಮಲಗಿಸಲಾಗುತ್ತದೆ. ವಿಯೋಗಿಗಳು ಸಂಗೀತಗಾರರನ್ನು ಕರೆಸುತ್ತಾರೆ, ಬಿಯರ್‌ನ ಭರಣಿಗಳನ್ನು ಹಾಗೂ ತಾಳೆಯ ಮದ್ಯದ ಪಾತ್ರೆಗಳನ್ನು ಕೊಂಡುಕೊಳ್ಳುತ್ತಾರೆ, ಮತ್ತು ಬಲಿ ಅರ್ಪಿಸಲು ಒಂದು ಗೂಳಿಯನ್ನೊ, ಒಂದು ಆಡನ್ನೊ ಏರ್ಪಡಿಸುತ್ತಾರೆ. ಬಳಿಕ, ಮರು ದಿನ ಬೆಳಕು ಹರಿಯುವ ತನಕ ಹಾಡಲು, ಕುಣಿಯಲು, ತಿನ್ನಲು ಮತ್ತು ಕುಡಿಯಲು ಸಂಬಂಧಿಕರು ಹಾಗೂ ಗೆಳೆಯರು ಬರುತ್ತಾರೆ.

ಈ ಉತ್ಸವಗಳ ಸಮಯದಲ್ಲಿ, ಆಹಾರವು ಶವದ ಪಾದದ ಕಡೆಗೆ ಇಡಲ್ಪಡುತ್ತದೆ. ಸತ್ತ ವ್ಯಕ್ತಿಯ ಕೂದಲು, ಕೈಬೆರಳಿನ ಉಗುರುಗಳು, ಮತ್ತು ಕಾಲು ಬೆರಳುಗಳ ಉಗುರುಗಳ ಭಾಗಗಳನ್ನು ಕತ್ತರಿಸಿ, “ಎರಡನೆಯ ಶವಸಂಸ್ಕಾರ” ಕ್ಕಾಗಿ ಬದಿಗಿಡಲಾಗುತ್ತದೆ. ಅದು ದಿನಗಳು, ವಾರಗಳು, ಯಾ ವರ್ಷಗಳಾನಂತರವೂ ನಡೆಯುತ್ತದೆ.

ಜಾಗರಣೆಯ ಮರುದಿನ ಶವವನ್ನು ಹೂಳಲಾದರೂ, ಶವಸಂಸ್ಕಾರದ ಆಚಾರವಿಧಿಗಳು ಒಂದು ವಾರ ಯಾ ಇನ್ನು ಹೆಚ್ಚು ಕಾಲದ ವರೆಗೆ ಮುಂದುವರಿಯುತ್ತವೆ. ತದನಂತರ, ಎರಡನೆಯ ಶವಸಂಸ್ಕಾರವು ಜರಗುತ್ತದೆ. ಬಿಳಿ ಬಟ್ಟೆಯಲ್ಲಿ ಸುತ್ತಲ್ಪಟ್ಟ ಕೂದಲು, ಕೈಬೆರಳಿನ ಉಗುರುಗಳು, ಮತ್ತು ಕಾಲಬೆರಳಿನ ಉಗುರುಗಳ ಭಾಗಗಳನ್ನು ಐದು ಯಾ ಆರು ಅಡಿ ಉದ್ದವಾದ ಕಟ್ಟಿಗೆಯ ಹಲಗೆಗೆ ಕಟ್ಟಲಾಗುತ್ತದೆ. ಹಾಡು ಮತ್ತು ಕುಣಿತದ ಒಂದು ಮೆರವಣಿಗೆಯಲ್ಲಿ, ಹಲಗೆಯನ್ನು ಸಮಾಧಿಯ ಸ್ಥಳಕ್ಕೆ ಹೊತ್ತುಕೊಂಡು ಹೋಗಲಾಗುತ್ತದೆ ಮತ್ತು ಅದು ಅದನ್ನು ಪ್ರತಿನಿಧಿಸುವ ವ್ಯಕ್ತಿಯ ಹತ್ತಿರ ಹೂಳಲ್ಪಡುತ್ತದೆ. ಮತ್ತೊಮ್ಮೆ, ಬಹಳಷ್ಟು ಸಂಗೀತ, ಕುಡಿತ, ಮತ್ತು ಉತ್ಸವವು ಅಲ್ಲಿರುತ್ತದೆ. ಉತ್ತರಕ್ರಿಯೆಯ ಕಾರ್ಯಾಚರಣೆಗಳನ್ನು ಸಮಾಪ್ತಿಗೊಳಿಸಲು, ಆಕಾಶದ ಕಡೆಗೆ ಸಿಡಿಗುಂಡನ್ನು ಒಮ್ಮೆ ಹಾರಿಸಲಾಗುತ್ತದೆ.

ಆಲಿಯೂ ಈ ವಿಷಯಗಳಲ್ಲಿ ಯಾವುದನ್ನೂ ಅನುಮತಿಸಲಿಲ್ಲವಾದುದರಿಂದ, ಸತ್ತವರಿಗಾಗಿ ಯಾ ಅವರನ್ನು ಘನಪಡಿಸುವ ಸಂಪ್ರದಾಯಗಳಿಗಾಗಿ ಗೌರವವೇ ಇಲ್ಲವೆಂದು ಅವನ ಮೇಲೆ ದೋಷಾರೋಪಣೆ ಮಾಡಲಾಯಿತು. ಆದರೆ ಯೆಹೋವನ ಒಬ್ಬ ಸಾಕ್ಷಿಯಾದ ಆಲಿಯೂ, ಸಂಪ್ರದಾಯದೊಂದಿಗೆ ಸಮ್ಮತಿಸಲು ನಿರಾಕರಿಸಿದನೇಕೆ? ಏಕೆಂದರೆ ಈ ಸಂಪ್ರದಾಯಗಳು ಆಧಾರಿಸಿರುವ ಧಾರ್ಮಿಕ ವಿಚಾರಗಳನ್ನು ಆತ್ಮಸಾಕ್ಷಿಯಾಗಿ ಸ್ವೀಕರಿಸಲು ಅವನಿಗೆ ಸಾಧ್ಯವಿರಲಿಲ್ಲ.

ಸಾಂಪ್ರದಾಯಿಕ ಆಫ್ರಿಕನ್‌ ನಂಬಿಕೆಗಳು

ಆಫ್ರಿಕದ ಉದ್ದಕ್ಕೂ, ಎಲ್ಲಾ ಮಾನವರು ಆತ್ಮಲೋಕದಿಂದ ಬಂದರೆಂದು ಮತ್ತು ಅಲ್ಲಿಗೆ ಹಿಂದಿರುಗುವರೆಂದು ಜನರು ನಂಬುತ್ತಾರೆ. ನೈಜೀರಿಯದ ಯೋರಬ ಜನರು ಹೇಳುವುದು: “ಭೂಮಿಯು ಒಂದು ಮಾರುಕಟ್ಟೆಯಾಗಿದೆ, ಆದರೆ ಪರಲೋಕವು ಮನೆಯಾಗಿದೆ.” ಮತ್ತು ಇಗ್‌ಬೊ ಹೇಳಿಕೆಯು, “ಈ ಲೋಕದೊಳಗೆ ಬರುವ ಪ್ರತಿಯೊಬ್ಬನು, ಭೂಮಿಯ ಮೇಲೆ ಎಷ್ಟೇ ದೀರ್ಘ ಕಾಲ ತಂಗಿದರೂ, ಮನೆಗೆ ಹಿಂದಿರುಗಲೇ ಬೇಕು” ಎಂಬುದಾಗಿದೆ.

ಈ ಹಿಂದೆ ತಿಳಿಸಲ್ಪಟ್ಟ ಪದ್ಧತಿಗಳನ್ನು ಪರಿಗಣಿಸಿರಿ. ಜಾಗರಣೆಯ ಉದ್ದೇಶವು ಆತ್ಮಕ್ಕೆ ಒಳ್ಳೆಯ ಬೀಳ್ಕೊಡುವಿಕೆಯನ್ನು ಕೊಡುವುದೇ ಆಗಿದೆ. ಬಿಳಿಯ ಬಟ್ಟೆಯು ಆತ್ಮಲೋಕಕ್ಕೆ ತಕ್ಕದಾದ ಉಡಿಗೆ ಎಂದು ಪರಿಗಣಿಸಲ್ಪಡುತ್ತದೆ. ಆಹಾರವನ್ನು ಪಾದಗಳಲ್ಲಿ ಇಡುವುದು, ಶವವು ಕಾಲುಗಳ ಮೂಲಕ ತಿನ್ನುತ್ತದೆ ಮತ್ತು ಪೂರ್ವಜರ ದೇಶದ ಕಡೆಗೆ ಪಯಣಿಸುವಾಗ ಹಸಿವಾಗಬಾರದೆಂಬ ಕಾರಣಕ್ಕಾಗಿ ಅವನು ಉಣಿಸಲ್ಪಡಬೇಕು ಎಂಬ ವಿಚಾರದೊಂದಿಗೆ ಸೇರಿದೆ.

ಇನ್ನೂ ಹೆಚ್ಚಾಗಿ, ಆತ್ಮವು ದೇಹವನ್ನು ಬಿಟ್ಟಾಗ, ಅದು ಜೀವಿತರ ಹತ್ತಿರ ಬಳಸಾಡುತ್ತದೆ ಮತ್ತು ಎರಡನೆಯ ಶವಸಂಸ್ಕಾರದ ಮೂಲಕ ಅದು ಕೊನೆಯದಾಗಿ ಬಿಡುಗಡೆ ಹೊಂದುವ ತನಕ ಪೂರ್ವಜರ ಕಡೆಗೆ ಹಿಂದಿರುಗುವುದಿಲ್ಲ ಎಂದು ಸಾಮಾನ್ಯವಾಗಿ ಜನರು ನಂಬುತ್ತಾರೆ. ಎರಡನೆಯ ಶವಸಂಸ್ಕಾರವು ನಡೆಸಲ್ಪಡುವ ತನಕ, ಆತ್ಮವು ಕೋಪಗೊಂಡು ಜೀವಿತರನ್ನು ರೋಗ ಯಾ ಮರಣದಿಂದ ಪೀಡಿಸುವುದೆಂದು ಜನರು ಭಯ ಪಡುತ್ತಾರೆ. ಗುಂಡನ್ನು ಹಾರಿಸುವುದು “ಆತ್ಮವನ್ನು” ಪರಲೋಕಕ್ಕೆ “ಕಳುಹಿಸುವುದಾಗಿದೆ.”

ಶವಸಂಸ್ಕಾರದ ಪದ್ಧತಿಗಳು ಆಫ್ರಿಕದಲ್ಲಿ ಸ್ಥಳದಿಂದ ಸ್ಥಳಕ್ಕೆ ಬಹಳ ಭಿನ್ನವಾಗಿದ್ದರೂ, ದೇಹದ ಮರಣದ ಅನಂತರ ಆತ್ಮವು ಬದುಕಿ ಉಳಿಯುತ್ತದೆ ಎಂಬುದು ಸಾಮಾನ್ಯವಾಗಿ ಮುಖ್ಯ ವಿಚಾರವಾಗಿರುತ್ತದೆ. “ಮನೆಯ ಕರೆಗೆ” ಆತ್ಮವು ಪ್ರತಿಕ್ರಿಯಿಸುವಂತೆ ಸಹಾಯಮಾಡುವುದೇ ಧರ್ಮಾಚರಣೆಗಳ ಮುಖ್ಯ ಉದ್ದೇಶವಾಗಿದೆ.

ಈ ನಂಬಿಕೆಗಳು ಮತ್ತು ಆಚರಣೆಗಳು ಕ್ರೈಸ್ತಪ್ರಪಂಚದ ಮಾನವ ಆತ್ಮದ ಅಮರತ್ವದ ತತ್ವ ಮತ್ತು ಆಕೆಯಿಂದ ನಡೆಸಲ್ಪಡುವ “ಸಂತ”ರ ಪೂಜೆಯ ಮೂಲಕ ಉತ್ತೇಜಿಸಲ್ಪಟ್ಟಿವೆ. ಯೇಸುವು ಬಂದದ್ದು ಸಾಂಪ್ರದಾಯಿಕ ನಂಬಿಕೆಗಳನ್ನು ನಾಶ ಮಾಡಲು ಅಲ್ಲ, ಅವುಗಳನ್ನು ನೆರವೇರಿಸಲು ಯಾ ದೃಢಪಡಿಸಲು ಎಂಬುದಾಗಿ ಹೇಳಿದ ಸ್ವಾಜಿಲ್ಯಾಂಡ್‌ನ ಒಬ್ಬ ಸೈನ್ಯ ಪಾದ್ರಿಯ ಹೇಳಿಕೆಯು ಪ್ರತಿನಿಧಿರೂಪವಾಗಿದೆ. ವೈದಿಕರು ಸಾಮಾನ್ಯವಾಗಿ ಶವಸಂಸ್ಕಾರದ ಕಾರ್ಯಾಚರಣೆಗಳಲ್ಲಿ ಅಧ್ಯಕ್ಷರಾಗುವುದರಿಂದ, ಸಾಂಪ್ರದಾಯಿಕ ನಂಬಿಕೆಗಳನ್ನು ಮತ್ತು ಅವುಗಳಿಂದ ಹೊರಬರುವ ಪದ್ಧತಿಗಳನ್ನು ಬೈಬಲ್‌ ಬೆಂಬಲಿಸುತ್ತದೆ ಎಂದು ಅನೇಕ ಜನರಿಗೆ ಅನಿಸುತ್ತದೆ.

ಬೈಬಲ್‌ ಹೇಳುವ ವಿಷಯ

ಈ ನಂಬಿಕೆಗಳನ್ನು ಬೈಬಲ್‌ ಬೆಂಬಲಿಸುತ್ತದೊ? ಸತ್ತವರ ಸ್ಥಿತಿಯ ಕುರಿತು ಪ್ರಸಂಗಿ 3:20 ಹೇಳುವುದು: “ಎಲ್ಲಾ ಪ್ರಾಣಿಗಳು [ಮಾನವರೂ ಪಶುಗಳೂ] ಒಂದೇ ಸ್ಥಳಕ್ಕೆ ಹೋಗುವವು; ಎಲ್ಲಾ ಮಣ್ಣಿನಿಂದಾದವು, ಎಲ್ಲಾ ಮಣ್ಣಿಗೆ ಪುನಃ ಸೇರುವವು.” ಶಾಸ್ತ್ರವಚನಗಳು ಇನ್ನೂ ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ಅವರು ಸತ್ತಾಗಲೇ ಅವರ ಪ್ರೀತಿಯೂ ಹಗೆಯೂ ಹೊಟ್ಟೇಕಿಚ್ಚೂ ಅಳಿದು ಹೋದವು; . . . ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”—ಪ್ರಸಂಗಿ 9:5, 6, 10.

ಸತ್ತವರಿಗೆ ನಮ್ಮನ್ನು ನೋಡಲು ಯಾ ನಮಗೆ ಕಿವಿಗೊಡಲು ಯಾ ನಮಗೆ ಸಹಾಯಮಾಡಲು ಯಾ ನಮಗೆ ಹಾನಿಮಾಡಲು ಸಾಧ್ಯವಿಲ್ಲವೆಂದು ಇವು ಮತ್ತು ಬೇರೆ ಶಾಸ್ತ್ರವಚನಗಳು ಸೃಷ್ಟಗೊಳಿಸುತ್ತವೆ. ನೀವು ವೀಕ್ಷಿಸಿದ ವಿಷಯದೊಂದಿಗೆ ಇದು ಹೊಂದಾಣಿಕೆಯಲ್ಲಿಲ್ಲವೊ? ಸತ್ತು ಹೋಗಿರುವ ಒಬ್ಬ ಧನವಂತ ಹಾಗೂ ಪ್ರಭಾವಕಾರಿ ಮನುಷ್ಯನ ಬಗ್ಗೆ ಮತ್ತು ಎಲ್ಲಾ ವಾಡಿಕೆಯ ಉತ್ತರಕ್ರಿಯೆ ಕಾರ್ಯಾಚರಣೆಗಳನ್ನು ಪೂರ್ಣವಾಗಿ ನಡೆಸಿದರೂ, ತದನಂತರ ಕಷ್ಟಾನುಭವಿಸಿದ ಅವನ ಕುಟುಂಬದ ಬಗ್ಗೆ ನಿಮಗೆ ಗೊತ್ತಿರಬಹುದು. ಆ ಮನುಷ್ಯನು ಆತ್ಮಲೋಕದಲ್ಲಿ ಜೀವಂತನಾಗಿದ್ದರೆ, ಅವನ ಕುಟುಂಬಕ್ಕೆ ಅವನೇಕೆ ಸಹಾಯ ಮಾಡುವುದಿಲ್ಲ? ಅವನು ಹಾಗೆ ಮಾಡಲು ಸಾಧ್ಯವಿಲ್ಲ ಯಾಕೆಂದರೆ ಸತ್ತವರು ನಿಜವಾಗಿಯೂ ನಿರ್ಜೀವವಾಗಿದ್ದಾರೆ, “ಮರಣದಲ್ಲಿ ಬಲಹೀನರಾಗಿದ್ದಾರೆ” ಎಂಬುದಾಗಿ ಬೈಬಲ್‌ ಹೇಳುವುದು ಸತ್ಯವಾಗಿದೆ, ಮತ್ತು ಆದುದರಿಂದ ಯಾರಿಗೂ ಸಹಾಯಿಸಲು ಅಶಕ್ತರು.—ಯೆಶಾಯ 26:14, NW.

ಇದು ಸತ್ಯವೆಂದು ದೇವರ ಮಗನಾದ ಯೇಸು ಕ್ರಿಸ್ತನಿಗೆ ತಿಳಿದಿತ್ತು. ಲಾಜರನ ಮರಣಾನಂತರ ಸಂಭವಿಸಿದ್ದನ್ನು ಪರಿಗಣಿಸಿರಿ. ಬೈಬಲ್‌ ಹೇಳುವುದು: “ಅವರಿಗೆ [ಶಿಷ್ಯರಿಗೆ] ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಾನೆ; ನಾನು [ಯೇಸು] ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ ಎಂದು ಹೇಳಿದನು. ಅದಕ್ಕೆ ಶಿಷ್ಯರು—ಸ್ವಾಮೀ, ಅವನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು ಅಂದರು. ಯೇಸು ಅವನ ಮರಣವನ್ನು ಸೂಚಿಸಿ ಅದನ್ನು ಹೇಳಿದ್ದನು.”—ಯೋಹಾನ 11:11-13.

ಯೇಸು ಮರಣವನ್ನು ನಿದ್ರೆಗೆ, ವಿಶ್ರಾಂತಿಗೆ ಹೋಲಿಸಿದನೆಂಬುದನ್ನು ಗಮನಿಸಿರಿ. ಬೇಥಾನ್ಯಕ್ಕೆ ಅವನ ಆಗಮನದ ತರುವಾಯ, ಲಾಜರನ ಸಹೋದರಿಯರಾದ ಮರಿಯ ಮತ್ತು ಮಾರ್ಥರನ್ನು ಅವನು ಸಂತೈಸಿದನು. ಅನುಕಂಪದಿಂದ ಮನಕರಗಿದವನಾಗಿ, ಯೇಸು ಕಣ್ಣೀರು ಬಿಟ್ಟನು. ಆದರೂ, ಲಾಜರನಿಗೆ ಜೀವಂತವಿರುವ ಆತ್ಮವು ಇದ್ದು, ಅವನ ಪೂರ್ವಜರ ದೇಶವನ್ನು ತಲಪಲು ಸಹಾಯವನ್ನು ಕೋರುವುದಾಗಿ ಸೂಚಿಸುವ ಯಾವುದೇ ವಿಷಯವನ್ನು ಅವನು ಹೇಳಲಿಲ್ಲ ಯಾ ಮಾಡಲಿಲ್ಲ. ಬದಲಿಗೆ, ಯೇಸು ತಾನು ಮಾಡುವೆನೆಂದು ಹೇಳಿದ ಸಂಗತಿಯನ್ನು ಮಾಡಿದನು. ಪುನರುತ್ಥಾನದ ಮೂಲಕ ಮರಣದ ನಿದ್ರೆಯಿಂದ ಅವನು ಲಾಜರನನ್ನು ಎಬ್ಬಿಸಿದನು. ಸಮಾಧಿಗಳಲ್ಲಿ ಇರುವವರೆಲ್ಲರನ್ನು ಪುನರುತ್ಥಾನಗೊಳಿಸಲು ದೇವರು ಕಟ್ಟಕಡೆಗೆ ಯೇಸುವನ್ನು ಉಪಯೋಗಿಸುವನೆಂಬ ಪ್ರಮಾಣವನ್ನು ಇದು ನೀಡಿತು.—ಯೋಹಾನ 11:17-44; 5:28, 29.

ಭಿನ್ನರಾಗಿರುವುದೇಕೆ?

ಅಶಾಸ್ತ್ರೀಯ ನಂಬಿಕೆಗಳ ಮೇಲೆ ಆಧಾರಿತವಾಗಿರುವ ಉತ್ತರಕ್ರಿಯೆಯ ಪದ್ಧತಿಗಳೊಂದಿಗೆ ಸಮ್ಮತಿಸುವುದರಲ್ಲಿ ಯಾವ ತಪ್ಪಾದರೂ ಇದೆಯೊ? ಆಲಿಯೂ ಮತ್ತು ಬೇರೆ ಲಕ್ಷಾಂತರ ಯೆಹೋವನ ಸಾಕ್ಷಿಗಳು ತಪ್ಪಿದೆ ಎಂದು ನಂಬುತ್ತಾರೆ. ಸುಳ್ಳು ಮತ್ತು ದಾರಿತಪ್ಪಿಸುವ ತತ್ವಗಳ ಮೇಲೆ ಸ್ಪಷ್ಟವಾಗಿಗಿ ಆಧಾರಿತವಾಗಿರುವ ಯಾವುದೇ ಆಚರಣೆಯನ್ನು ಬೆಂಬಲಿಸುವುದು ತಪ್ಪಾಗಿರುವುದು—ಕಪಟವಾಗಿಯೂ ಸಹ ಇರುವುದೆಂದು ಅವರಿಗೆ ಗೊತ್ತಿದೆ. ಧಾರ್ಮಿಕ ಕಪಟತನಕ್ಕೆ ಯೇಸು ಖಂಡಿಸಿದ ಶಾಸ್ತ್ರಿಗಳು ಮತ್ತು ಫರಿಸಾಯರಂತೆ ಇರಲು ಅವರು ಬಯಸುವುದಿಲ್ಲ.—ಮತ್ತಾಯ 23:1-36.

ತನ್ನ ಜೊತೆಕೆಲಸಗಾರನಾದ ತಿಮೊಥೆಯನಿಗೆ ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿಗಿ ಹೇಳುತ್ತಾನೆ.” (1 ತಿಮೊಥೆಯ 4:1) ಮಾನವಕುಲದ ಮೃತರು ಆತ್ಮಲೋಕದಲ್ಲಿ ಜೀವಂತರಾಗಿದ್ದಾರೆ ಎಂಬ ಕಲ್ಪನೆಯು ದೆವ್ವಗಳ ಒಂದು ಬೋಧನೆಯಾಗಿದೆಯೊ?

ಹೌದು, ದೆವ್ವಗಳ ಬೋಧನೆಯಾಗಿದೆ. “ಸುಳ್ಳಿಗೆ ಮೂಲಪುರುಷ” ನಾಗಿರುವ ಪಿಶಾಚನಾದ ಸೈತಾನನು, ಹವ್ವಳು ಶರೀರದಲ್ಲಿ ಜೀವಿಸುತ್ತಾ ಇರುವಳೆಂದು ಸೂಚಿಸುತ್ತಾ, ಅವಳು ಸಾಯುವುದಿಲ್ಲವೆಂದು ಹೇಳಿದನು. (ಯೋಹಾನ 8:44; ಆದಿಕಾಂಡ 3:3, 4) ದೇಹದ ಮರಣದ ತರುವಾಯ ಅಮರ ಆತ್ಮವು ಜೀವಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳುವುದಕ್ಕೆ ಅದು ಸಮಾನವಾಗಿರಲಿಲ್ಲ. ಹಾಗಿದ್ದರೂ, ಮರಣದ ತರುವಾಯ ಜೀವವು ಮುಂದುವರಿಯುತ್ತದೆ ಎಂಬ ವಿಚಾರವನ್ನು ಪ್ರವರ್ತಿಸುವ ಮೂಲಕ ದೇವರ ವಾಕ್ಯದ ಸತ್ಯದಿಂದ ಜನರನ್ನು ತಿರುಗಿಸಲು ಸೈತಾನನು ಮತ್ತು ಅವನ ದೆವ್ವದೂತರು ಹೆಣಗಾಡುತ್ತಾರೆ. ಬೈಬಲಿನಲ್ಲಿ ದೇವರು ಹೇಳಿರುವ ವಿಷಯವನ್ನು ಅವರು ನಂಬುವುದರಿಂದ, ಸೈತಾನನ ಸುಳ್ಳುಗಳನ್ನು ಬೆಂಬಲಿಸುವ ದೃಷ್ಟಿಕೋನ ಮತ್ತು ಆಚರಣೆಗಳಲ್ಲಿ ಯೆಹೋವನ ಸಾಕ್ಷಿಗಳಿಗೆ ಯಾವುದೇ ಪಾಲು ಇರುವುದಿಲ್ಲ.—2 ಕೊರಿಂಥ 6:14-18.

ಅಶಾಸ್ತ್ರೀಯ ಶವಸಂಸ್ಕಾರದ ಆಚರಣೆಗಳನ್ನು ತೊರೆಯುವುದರಿಂದ, ತಮ್ಮ ದೃಷ್ಟಿಕೋನಗಳಲ್ಲಿ ಭಾಗಿಗಳಾಗದ ಕೆಲವರ ದ್ವೇಷಕ್ಕೆ ಯೆಹೋವನ ಸೇವಕರು ಬಲಿಯಾಗಿದ್ದಾರೆ. ಕೆಲವು ಸಾಕ್ಷಿಗಳ ಪಿತ್ರಾರ್ಜಿತ ಸ್ವತ್ತುಗಳು ಅಪಹರಿಸಲ್ಪಟ್ಟಿವೆ. ಇತರರು ತಮ್ಮ ಕುಟುಂಬದವರಿಂದ ಹೊರಹಾಕಲ್ಪಟ್ಟಿದ್ದಾರೆ. ಆದರೂ ನಿಜ ಕ್ರೈಸ್ತರಂತೆ, ದೇವರಿಗೆ ನಂಬಿಗಸ್ತ ವಿಧೇಯತೆಯು ಲೋಕದ ಅನಾದರಣೆಯನ್ನು ತರುತ್ತದೆ ಎಂದು ಅವರು ಗ್ರಹಿಸುತ್ತಾರೆ. ಯೇಸು ಕ್ರಿಸ್ತನ ನಿಷ್ಠಾವಂತ ಅಪೊಸ್ತಲರಂತೆ, ಅವರು “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು” ಎಂದು ನಿಶ್ಚಯಿಸಿದ್ದಾರೆ.—ಅ. ಕೃತ್ಯಗಳು 5:29; ಯೋಹಾನ 17:14.

ಮರಣದಲ್ಲಿ ನಿದ್ರೆ ಹೋಗುತ್ತಿರುವ ಅವರ ಪ್ರಿಯ ಜನರ ನೆನಪನ್ನು ಆದರಿಸುವಾಗ, ಜೀವಿಸುತ್ತಿರುವವರಿಗಾಗಿ ಪ್ರೀತಿಯನ್ನು ಪ್ರದರ್ಶಿಸಲು ನಿಜ ಕ್ರೈಸ್ತರು ಹೆಣಗಾಡುತ್ತಾರೆ. ಉದಾಹರಣೆಗೆ, ತನ್ನ ತಂದೆ ಸತ್ತ ಅನಂತರ ಆಲಿಯೂ ತನ್ನ ತಾಯಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದನು ಮತ್ತು ಆಕೆಯ ಜೀವನದ ಉಳಿದ ದಿನಗಳಿಗಾಗಿ ಅವಳನ್ನು ಉಣಿಸಿ ಪೋಷಿಸಿದ್ದನು. ಜನಪ್ರಿಯ ಪದ್ಧತಿಗನುಸಾರ ಆಲಿಯೂ ತನ್ನ ತಾಯಿಯನ್ನು ಹೂಳಲಿಲ್ಲ ಎಂಬ ಕಾರಣದಿಂದ ಆಲಿಯೂಗೆ ತನ್ನ ತಾಯಿಯ ಮೇಲೆ ಪ್ರೀತಿ ಇರಲಿಲ್ಲವೆಂದು ಇತರರು ಹೇಳುವಾಗ, ಅವನ ಜನರೊಳಗೆ ಸಾಮಾನ್ಯವಾಗಿ ಹೇಳಲ್ಪಡುವ ಈ ಹೇಳಿಕೆಯನ್ನು ಅವನು ಸೂಚಿಸುತ್ತಾನೆ: “ನನ್ನ ಪಾದಗಳನ್ನು ಉಣಿಸುವ ಮೊದಲು ನನ್ನ ಬಾಯನ್ನು ಉಣಿಸಿರಿ.” ಹಿಂದೆ ವಿವರಿಸಲ್ಪಟ್ಟ ಮತ್ತು ವ್ಯಕ್ತಿಯು ಸತ್ತ ಬಳಿಕ ಜಾಗರಣೆಯೊಂದಿಗೆ ಜೊತೆಗೂಡಿರುವ ಆಚರಣೆಯಾದ ಪಾದಗಳನ್ನು ಉಣಿಸುವುದಕ್ಕಿಂತ ಬಾಯನ್ನು ಉಣಿಸುವುದು ಯಾ ವ್ಯಕ್ತಿಗಾಗಿ, ಅವನು ಯಾ ಅವಳು ಜೀವಂತವಿರುವಾಗ ಚಿಂತಿಸುವುದು ಅಧಿಕ ಪ್ರಾಮುಖ್ಯವಾಗಿದೆ. ಪಾದಗಳನ್ನು ಉಣಿಸುವುದು, ವಾಸ್ತವದಲ್ಲಿ ಸತ್ತವ್ಯಕ್ತಿಯನ್ನು ಪ್ರಯೋಜನಪಡಿಸುವುದೇ ಇಲ್ಲ.

ಆಲಿಯೂ ತನ್ನ ಟೀಕಾಕಾರರನ್ನು ಕೇಳುವುದು, ‘ನೀವು ಯಾವುದನ್ನು ಇಷ್ಟಪಡುವಿರಿ—ನಿಮ್ಮ ಮುಪ್ಪಿನ ವಯಸ್ಸಿನಲ್ಲಿ ನಿಮ್ಮ ಕುಟುಂಬವು ನಿಮಗಾಗಿ ಚಿಂತಿಸುವುದನ್ನೊ ಯಾ ನೀವು ಸತ್ತ ಬಳಿಕ ಒಂದು ದೊಡ್ಡ ಉತ್ಸವವನ್ನು ನಡೆಸುವುದನ್ನೊ?’ ತಾವು ಇನ್ನೂ ಜೀವಂತವಿರುವಾಗ ಪೋಷಿಸಲ್ಪಡುವಂತೆ ಅನೇಕರು ಆಯ್ದುಕೊಳ್ಳುತ್ತಾರೆ. ಅವರ ಮರಣದ ಸಮಯದಲ್ಲಿ, ಗಂಭೀರವಾದ ಬೈಬಲಾಧಾರಿತ ಸ್ಮಾರಕ ಆಚರಣೆಯು ಮತ್ತು ಯೋಗ್ಯವಾದ ಶವಸಂಸ್ಕಾರವು ಅವರಿಗಿರುವುದೆಂದು ತಿಳಿದಿರುವುದನ್ನು ಸಹ ಅವರು ಗಣ್ಯಮಾಡುತ್ತಾರೆ.

ತಮ್ಮ ಪ್ರಿಯ ಜನರಿಗಾಗಿ ಅದನ್ನೇ ಮಾಡಲು ಯೆಹೋವನ ಸಾಕ್ಷಿಗಳು ಪ್ರಯತ್ನಿಸುತ್ತಾರೆ. ಅವರು ಪಾದಗಳನ್ನಲ್ಲ ಬಾಯನ್ನು ಉಣಿಸುತ್ತಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ