ಯುವಜನರೇ—ಯಾರ ಬೋಧನೆಗೆ ನೀವು ಕಿವಿಗೊಡುತ್ತೀರಿ?
“ಕೆಲವರು . . . ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರು.”—1 ತಿಮೊಥೆಯ 4:1.
ಯುವ ಜನರಿಗೆ ಇಲ್ಲಿ ಸಂಬೋಧಿಸಲ್ಪಟ್ಟ ಪ್ರಶ್ನೆಯು, ನೀವು ಯಾರ ಬೋಧನೆಗೆ ಕಿವಿಗೊಡುತ್ತೀರಿ? ಎಂಬುದಾಗಿದೆ. ಎಳೆಯರಾದ ನಿಮಗೆ ಒಂದು ಆಯ್ಕೆ ಇದೆ ಎಂಬುದನ್ನು ಇದು ಸೂಚಿಸುತ್ತದೆ. ಆಯ್ಕೆಯು ದೈವಿಕ ಬೋಧನೆಗೆ ಪ್ರತಿಕ್ರಿಯಿಸುವುದು ಮತ್ತು ದೆವ್ವಗಳ ಬೋಧನೆಗಳನ್ನು ಹಿಂಬಾಲಿಸುವುದು—ಇವುಗಳಲ್ಲಿ ಒಂದಾಗಿದೆ. ಯೆಹೋವನು ತನ್ನ ವಾಕ್ಯವಾದ ಬೈಬಲ್ ಮೂಲಕ ಅಷ್ಟೇ ಅಲ್ಲದೆ ಭೂಮಿಯ ಮೇಲೆ ತನ್ನ ಪ್ರತಿನಿಧಿಗಳಂತೆ ಆತನು ಉಪಯೋಗಿಸುವವರ ಶುಶ್ರೂಷೆಯ ಮುಖಾಂತರವೂ ಕಲಿಸುತ್ತಾನೆ. (ಯೆಶಾಯ 54:13; ಅ. ಕೃತ್ಯಗಳು 8:26-39; ಮತ್ತಾಯ 24:45-47) ಆದರೆ ದೆವ್ವಗಳು ಕೂಡ ಕಲಿಸುತ್ತವೆ ಎಂಬ ಸಂಗತಿಯಿಂದ ನೀವು ಆಶ್ಚರ್ಯಗೊಳ್ಳುತ್ತೀರೊ?
2. ವಿಶೇಷವಾಗಿ ಈ ಸಮಯದಲ್ಲಿ, ದೆವ್ವಗಳ ಬೋಧನೆಗಳ ವಿರುದ್ಧ ಎಚ್ಚರದಿಂದಿರುವುದು ಯಾಕೆ ಪ್ರಾಮುಖ್ಯವಾಗಿದೆ?
2 ಅಪೊಸ್ತಲ ಪೌಲನು ಬರೆದದ್ದು: “ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರು.” (1 ತಿಮೊಥೆಯ 4:1) ಸೈತಾನನು ಮತ್ತು ಅವನ ದೆವ್ವಗಳು ವಿಶೇಷವಾಗಿ ಸಕ್ರಿಯವಾಗಿರುವ “ಕಡೇ ದಿನಗಳಲ್ಲಿ” ನಾವು ಜೀವಿಸುತ್ತಿರುವುದರಿಂದ, ನೀವು ಯಾರ ಬೋಧನೆಗೆ ಕಿವಿಗೊಡುತ್ತೀರಿ? ಎಂಬ ಪ್ರಶ್ನೆಯನ್ನು ನಾವು ಯಾಕೆ ಕೇಳುತ್ತೇವೆಂದು ನಿಮಗೆ ಅರ್ಥವಾಗುತ್ತದೊ? (2 ತಿಮೊಥೆಯ 3:1-5; ಪ್ರಕಟನೆ 12:7-12) ಸೈತಾನನು ಮತ್ತು ಅವನ ದೆವ್ವಗಳು ತಮ್ಮ ಕಾರ್ಯನಿರ್ವಹಣೆಯ ವಿಧಾನಗಳಲ್ಲಿ ಬಹಳ ಕುತಂತ್ರಿಗಳೂ, ಬಹಳ ಆಕರ್ಷಿಸುವುವುಗಳೂ ಆಗಿರುವುದರಿಂದ, ಈ ಪ್ರಶ್ನೆಗೆ ಜಾಗರೂಕತೆಯ ಪರಿಗಣನೆಯನ್ನು ನೀವು ಕೊಡುವುದು ಪ್ರಾಮುಖ್ಯವಾಗಿದೆ.—2 ಕೊರಿಂಥ 11:14, 15.
ದೆವ್ವಗಳು ಮತ್ತು ಅವುಗಳ ಬೋಧನೆಗಳು
3. ದೆವ್ವಗಳು ಯಾರು, ಅವುಗಳ ಉದ್ದೇಶವೇನು, ಮತ್ತು ಅದನ್ನು ಸಾಧಿಸಲು ಅವು ಹೇಗೆ ಪ್ರಯತ್ನಿಸುತ್ತವೆ?
3 ದೆವ್ವಗಳು ಒಂದು ಸಮಯದಲ್ಲಿ ಯೆಹೋವನ ದೂತರಾಗಿ ಇದ್ದವು, ಆದರೆ ಅವು ತಮ್ಮ ಸೃಷ್ಟಿಕರ್ತನ ವಿರುದ್ಧ ದಂಗೆ ಎದ್ದವು ಮತ್ತು ಹೀಗೆ ಸೈತಾನನ ಬೆಂಬಲಿಗರಾದವು. (ಮತ್ತಾಯ 12:24) ಜನರನ್ನು ಭ್ರಷ್ಟಗೊಳಿಸಿ, ದೇವರನ್ನು ಸೇವಿಸುವುದರಿಂದ ಅವರನ್ನು ದೂರ ಮಾಡುವುದೇ ಅವುಗಳ ಉದ್ದೇಶವಾಗಿದೆ. ಇದನ್ನು ಸಾಧಿಸಲು, ದೆವ್ವಗಳು ಮಾನವ ಬೋಧಕರನ್ನು, ಯೆಹೋವನ ಮೂಲಕ ಖಂಡಿಸಲ್ಪಟ್ಟಿರುವ ಸ್ವಾರ್ಥ, ಅನೈತಿಕ ಜೀವನ ಮಾರ್ಗವನ್ನು ಪ್ರವರ್ತಿಸಲು ಉಪಯೋಗಿಸುತ್ತವೆ. (ಹೋಲಿಸಿ 2 ಪೇತ್ರ 2:1, 12-15.) ಪೂರ್ವದಲ್ಲಿ ನಂಬಿಗಸ್ತರಾಗಿದ್ದ ದೇವದೂತರು ಹೇಗೆ ದೆವ್ವಗಳಾದರೆಂಬ ವಿಷಯದ ಪುನರ್ವಿಮರ್ಶೆಯು, ಅವುಗಳ ಬೋಧನೆಗಳನ್ನು ಮತ್ತು ಈ ಬೋಧನೆಗಳು ಪ್ರವರ್ತಿಸುವ ಜೀವನ ಕ್ರಮವನ್ನು ಗುರುತಿಸುವಂತೆ ನಿಮಗೆ ಸಹಾಯ ಮಾಡುವವು.
4. (ಎ) ನೋಹನ ದಿನದಲ್ಲಿ ಅವಿಧೇಯ ದೇವದೂತರು ಯಾಕೆ ಭೂಮಿಗೆ ಬಂದರು? (ಬಿ) ಜಲಪ್ರಳಯದ ಸಮಯದಲ್ಲಿ ದುಷ್ಟ ದೇವದೂತರಿಗೆ ಮತ್ತು ಅವರ ಸಂತಾನಕ್ಕೆ ಏನು ಸಂಭವಿಸಿತು?
4 ನೋಹನ ದಿನಗಳಲ್ಲಿ, ಮನುಷ್ಯರ ಸುಂದರ ಪುತ್ರಿಯರಿಂದ ಕೆಲವು ದೇವದೂತರು ಎಷ್ಟು ಆಕರ್ಷಿಸಲ್ಪಟ್ಟರೆಂದರೆ, ಈ ಆತ್ಮಿಕ ಜೀವಿಗಳು ಭೂಮಿಗೆ ಬರಲು ಸ್ವರ್ಗದಲ್ಲಿದ್ದ ತಮ್ಮ ಸ್ಥಾನಗಳನ್ನು ತ್ಯಜಿಸಿದರು. ಸ್ತ್ರೀಯರೊಂದಿಗೆ ಅವರ ಲೈಂಗಿಕ ಸಂಯೋಗವು, ನೆಫೀಲಿಯರೆಂಬುದಾಗಿ ಕರೆಯಲಾದ ಮಿಶ್ರ ಸಂತಾನವನ್ನು ಫಲಿಸಿತು. ಆತ್ಮಿಕ ಜೀವಿಗಳು ಮನುಷ್ಯರೊಂದಿಗೆ ಸಹಜೀವನ ನಡೆಸುವುದು ಅಸ್ವಾಭಾವಿಕವಾಗಿರುವುದರಿಂದ, ಆ ಸ್ತ್ರೀಯರೊಂದಿಗೆ ಈ ಅವಿಧೇಯ ದೇವದೂತರು ಮಾಡಿದ ಕ್ರಿಯೆಯು ತದನಂತರ ಸೊದೋಮಿನ ಪುರುಷರ ಮತ್ತು ಹುಡುಗರ ಮೂಲಕ ನಡೆಸಲಾದ ಸಲಿಂಗೀಕಾಮದ ಕೃತ್ಯಗಳಂತೆಯೇ ತಪ್ಪಾಗಿದ್ದವು. (ಆದಿಕಾಂಡ 6:1-4; 19:4-11; ಯೂದ 6, 7) ಜಲಪ್ರಳಯದಲ್ಲಿ ದೇವದೂತರ ಸಂಗಾತಿಗಳು ತಮ್ಮ ಮಿಶ್ರ ಮಕ್ಕಳೊಂದಿಗೆ ನಾಶವಾದರೂ, ದುಷ್ಟ ದೇವದೂತರು ತಮ್ಮ ರೂಪಾಂತರಗೊಂಡ ಶಾರೀರಿಕ ದೇಹಗಳನ್ನು ತೊರೆದರು ಮತ್ತು ಸ್ವರ್ಗಕ್ಕೆ ಹಿಂದಿರುಗಿದರು; ಅಲ್ಲಿ ಅವರು ಪಿಶಾಚನಾದ ಸೈತಾನನ ದೆವ್ವ ಸಂಗಾತಿಗಳಾದರು.—2 ಪೇತ್ರ 2:4.
5. ದೆವ್ವಗಳು ಯಾವ ರೀತಿಯ ಜೀವಿಗಳಾಗಿವೆ, ಮತ್ತು ದೇವರ ನಿಯಮಗಳನ್ನು ಮುಗುಚಲು ಅವು ಹೇಗೆ ಪ್ರಯತ್ನಿಸುತ್ತವೆ?
5 ಈ ಐತಿಹಾಸಿಕ ಹಿನ್ನೆಲೆಯ ನೋಟದಲ್ಲಿ, ದೆವ್ವಗಳು ನಿಜವಾಗಿಯೂ ಯಾವ ರೀತಿಯ ಜೀವಿಗಳಾಗಿವೆ ಎಂದು ನಿಮಗೆ ಗೊತ್ತಾಗುತ್ತದೊ? ಅವು ಕಾಮದ ಅಪಪ್ರಯೋಗ ಮಾಡುವ, ಕಾಮಲಂಪಟತೆಯಲ್ಲಿ ಮುಳುಗಿರುವ ಈ ಲೋಕದ ಅದೃಶ್ಯ ನಿರ್ವಾಹಕಗಳು. ಮನುಷ್ಯರಂತೆ ಪುನಃ ರೂಪಾಂತರಗೊಳ್ಳುವುದರಿಂದ ಅವು ತಡೆಯಲ್ಪಟ್ಟಿರುವುದಾದರೂ, ಭೂಮಿಯ ಮೇಲೆ ಅವು ಭ್ರಷ್ಟಗೊಳಿಸಬಲ್ಲ ಜನರ ಲೈಂಗಿಕ ಅಪಪ್ರಯೋಗದಿಂದ ಆನಂದವನ್ನು ಪಡೆಯುತ್ತವೆ. (ಎಫೆಸ 6:11, 12) ಶುದ್ಧತೆ ಮತ್ತು ನೈತಿಕತೆಯ ವಿಷಯದಲ್ಲಿರುವ ಯೆಹೋವನ ನಿಯಮಗಳನ್ನು ಅನಾವಶ್ಯಕವಾಗಿ ನಿರ್ಬಂಧಿಸುವಂತಹ ನಿಯಮಗಳ ಹಾಗೆ ತೋರುವಂತೆ ಮಾಡುವ ಮೂಲಕ, ಅವುಗಳನ್ನು ಮುಗುಚಲು ದೆವ್ವಗಳು ಪ್ರಯತ್ನಿಸುತ್ತವೆ. ಲೈಂಗಿಕ ಅನೈತಿಕತೆಯನ್ನು ಈ ದುಷ್ಟ ದೇವದೂತರು, ಒಂದು ಸಾಮಾನ್ಯವಾದ, ಹಿತಕರವಾದ ಜೀವನ ಕ್ರಮದಂತೆ ಸಮರ್ಥಿಸುತ್ತಾರೆ.
ದೆವ್ವಗಳ ಬೋಧನೆಗಳನ್ನು ಪ್ರವರ್ತಿಸುವುದು
6. ದೆವ್ವಗಳು ತಮ್ಮ ಬೋಧನೆಗಳನ್ನು ನವಿರಾದ ರೀತಿಯಲ್ಲಿ ಪ್ರವರ್ತಿಸುತ್ತವೆ ಎಂಬ ಸಂಗತಿಯಿಂದ ನಾವು ಯಾಕೆ ಆಶ್ಚರ್ಯಗೊಳ್ಳಬಾರದು?
6 ದೆವ್ವಗಳು ತಮ್ಮ ಬೋಧನೆಗಳನ್ನು ನವಿರಾದ ರೀತಿಯಲ್ಲಿ ಪ್ರವರ್ತಿಸುವವು ಎಂಬುದು ನಮ್ಮನ್ನು ಆಶ್ಚರ್ಯಗೊಳಿಸಬಾರದು ಯಾಕೆಂದರೆ, ಹವ್ವಳನ್ನು ವಂಚಿಸುವುದರಲ್ಲಿ ಅವರ ನಾಯಕ, ಪಿಶಾಚನಾದ ಸೈತಾನನು ಉಪಯೋಗಿಸಿದ ವಿಧಾನವು ಇದೇ ಆಗಿತ್ತು. ಅವನು ಸಹಾಯ ಮಾಡಲು ಬಯಸುವವನಂತೆ ಅವಳೊಂದಿಗೆ ಮಾತಾಡಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ?” ಎಂದು ಸೈತಾನನು ಕೇಳಿದನು. ನಿಷೇಧಿಸಿದ ಮರದಿಂದ ತಿನ್ನುವುದರಿಂದ ಹವ್ವಳು ಪ್ರಯೋಜನ ಪಡೆಯುವಳು ಎಂಬುದಾಗಿ ಅವಳಿಗೆ ಹೇಳುವ ಮೂಲಕ ದೇವರ ಬೋಧನೆಯನ್ನು ಒಳಸಂಚಿನಿಂದ ಕೆಡಿಸಲು ಅವನು ಪ್ರಯತ್ನಿಸಿದನು. “ನೀವು ಇದರ ಹಣ್ಣನ್ನು ತಿಂದಾಗಲೇ,” ಪಿಶಾಚನು ವಾಗ್ದಾನಿಸಿದ್ದು, “ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ.” (ಆದಿಕಾಂಡ 3:1-5) ಹೀಗೆ ಹವ್ವಳು ಸೆಳೆಯಲ್ಪಟ್ಟಳು, ಹೌದು ದೇವರಿಗೆ ಅವಿಧೇಯತೆ ತೋರಿಸುವಂತೆ ತಪ್ಪು ದಾರಿಗೆ ಎಳೆಯಲ್ಪಟ್ಟಳು.—2 ಕೊರಿಂಥ 11:3; 1 ತಿಮೊಥೆಯ 2:13, 14.
7. ದೆವ್ವಗಳ ನವಿರಾದ ಬೋಧನೆಗಳ ಪರಿಣಾಮವೇನಾಗಿದೆ, ಮತ್ತು ಇದು ಯಾವ ಎಚ್ಚರಿಕೆಯನ್ನು ಒದಗಿಸುತ್ತದೆ?
7 ಇತ್ತೀಚೆಗಿನ ಸಮಯಗಳಲ್ಲಿಯೂ ಕೂಡ, ಅನೇಕರು ದುರ್ಮಾರ್ಗಕ್ಕೆ ಎಳೆಯಲ್ಪಟ್ಟಿದ್ದಾರೆ. ಲೈಂಗಿಕ ಅನೈತಿಕತೆಯನ್ನು ದೆವ್ವಗಳು ಎಷ್ಟು ಮೋಸದಿಂದ ಪ್ರವರ್ತಿಸಿವೆ ಎಂದರೆ, ಹಿಂದೆ ಅದನ್ನು ಖಂಡಿಸಿದ ಅನೇಕರಿಂದ ಅದು ಸ್ವೀಕರಿಸಲ್ಪಟ್ಟಿದೆ. ಉದಾಹರಣೆಗೆ, ಅಮೆರಿಕದಲ್ಲಿರುವ ಒಬ್ಬಾಕೆ ಸುಪ್ರಸಿದ್ಧ ಸಲಹಾ ಅಂಕಣಕಾರ್ತಿ, ಅವಿವಾಹಿತ ಜನರು ಸಂಭೋಗ ಮಾಡುವ ವಿಷಯದ ಕುರಿತು ಒಂದು ಪತ್ರಕ್ಕೆ ಉತ್ತರವನ್ನು ಕೊಟ್ಟಾಗ, ಆಕೆ ಬರೆದದ್ದು: “ಈ ವಿವಾದಾಂಶದ ಕುರಿತು ನನ್ನ ಯೋಚನೆಯನ್ನು ಬದಲಾಯಿಸುವೆನೆಂದು ನಾನು ಎಂದಿಗೂ ಯೋಚಿಸಿರಲಿಲ್ಲ, ಆದರೆ ವಿವಾಹದ ಕುರಿತು ಗಂಭೀರವಾಗಿರುವ ದಂಪತಿಗಳು ತಮ್ಮ ಸಾಂಗತ್ಯವನ್ನು ಪರೀಕ್ಷಿಸಲು ಕೆಲವೊಂದು ವಾರಾಂತ್ಯದ ಸಂಚಾರಗಳನ್ನು ಒಟ್ಟಿಗೆ ಕೈಗೊಳ್ಳಬೇಕೆಂದು ನಾನೀಗ ನಂಬುತ್ತೇನೆ.” ಅನಂತರ ಅವಳು ಕೂಡಿಸಿದ್ದು: “ಅದನ್ನು ನಾನು ಬರೆದೆನೆಂದು ನಂಬಲಿಕ್ಕೆ ನನಗೆ ಸಾಧ್ಯವಿಲ್ಲ!” ಅವಳೂ ಹಾದರವನ್ನು ಶಿಫಾರಸ್ಸು ಮಾಡಿದ್ದಳೆಂದು ಅವಳಿಗೆ ನಂಬಲಿಕ್ಕೆ ಆಗಲಿಲ್ಲ, ಆದರೆ ಅವಳು ಹಾಗೆ ಮಾಡಿದ್ದಳು! ಸ್ಪಷ್ಟವಾಗಿಗಿಯೆ, ದೇವರು ಖಂಡಿಸುವ ಆಚರಣೆಗಳ ಕುರಿತು ನಮ್ಮ ದೃಷ್ಟಿಕೋನವನ್ನು ದೆವ್ವಗಳ ಬೋಧನೆಗಳು ಪ್ರಭಾವಿಸದಂತೆ ನಾವು ಎಚ್ಚರವುಳ್ಳವರಾಗಿರಬೇಕು.—ರೋಮಾಪುರ 1:26, 27; ಎಫೆಸ 5:5, 10-12.
8. (ಎ) “ಲೋಕ” ಎಂಬ ಶಬ್ದವನ್ನು ಬೈಬಲಿನಲ್ಲಿ ಹೇಗೆ ಉಪಯೋಗಿಸಲಾಗಿದೆ? (ಬಿ) ಲೋಕವನ್ನು ಯಾರು ಆಳುತ್ತಾರೆ, ಮತ್ತು ಯೇಸುವಿನ ಹಿಂಬಾಲಕರು ಲೋಕವನ್ನು ಹೇಗೆ ವೀಕ್ಷಿಸಬೇಕು?
8 ಸೈತಾನನು “ಇಹಲೋಕಾಧಿಪತಿ” ಎಂಬುದನ್ನು ನಾವು ಎಂದೂ ಮರೆಯಬಾರದು. ವಾಸ್ತವದಲ್ಲಿ, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ” ಎಂಬುದಾಗಿ ಅಪೊಸ್ತಲ ಯೋಹಾನನು ಹೇಳಿದನು. (ಯೋಹಾನ 12:31; 1 ಯೋಹಾನ 5:19) ಯೇಸು ಕೆಲವೊಮ್ಮೆ “ಲೋಕ” ಎಂಬ ಶಬ್ದವನ್ನು ಎಲ್ಲ ಮಾನವಜಾತಿಗೆ ಸೂಚಿಸಲು ಉಪಯೋಗಿಸಿದನು, ನಿಜ. (ಮತ್ತಾಯ 26:13; ಯೋಹಾನ 3:16; 12:46) ಆದರೆ ಅನೇಕ ಬಾರಿ, “ಲೋಕ” ಎಂಬ ಶಬ್ದವನ್ನು ಸತ್ಯ ಕ್ರೈಸ್ತ ಸಭೆಯ ಹೊರಗೆ ಇರುವ ಎಲ್ಲ ಸಂಘಟಿತ ಮಾನವ ಸಮಾಜವನ್ನು ಸೂಚಿಸಲು ಅವನು ಉಪಯೋಗಿಸಿದನು. ಉದಾಹರಣೆಗೆ, ತನ್ನ ಹಿಂಬಾಲಕರು “ಲೋಕದ ಭಾಗವಾಗಿರಬಾರದು” (ಅನೀತಿಯ ಮಾನವ ಸಮಾಜ) ಎಂದು, ಮತ್ತು ಅವರು ಲೋಕದ ಭಾಗವಾಗಿರದ ಕಾರಣ, ಲೋಕವು ಅವರನ್ನು ದ್ವೇಷಿಸುವುದೆಂದು ಯೇಸು ಹೇಳಿದನು. (ಯೋಹಾನ 15:19; 17:14-16) ಸೈತಾನನ ಮೂಲಕ ಆಳಲ್ಪಡುವ ಈ ಲೋಕದ ಗೆಳೆಯರಾಗುವುದರಿಂದ ನಾವು ದೂರವಿರಬೇಕೆಂದು ಬೈಬಲ್ ಇನ್ನೂ ಹೆಚ್ಚಾಗಿ ಎಚ್ಚರಿಸಿತು.—ಯಾಕೋಬ 4:4.
9, 10. (ಎ) ಅಯೋಗ್ಯವಾದ ಲೈಂಗಿಕ ಅಭಿಲಾಷೆಯನ್ನು ಯಾವ ಲೌಕಿಕ ವಿಷಯಗಳು ಪ್ರಚೋದಿಸುತ್ತವೆ? (ಬಿ) ಲೋಕದ ಮನೋರಂಜನೆಯು ಕಲಿಸುವ ವಿಷಯದ ಹಿಂದೆ ಇರುವವರನ್ನು ಹೇಗೆ ಗುರುತಿಸಲು ಸಾಧ್ಯ?
9 ಅಪೊಸ್ತಲ ಯೋಹಾನನು ಪ್ರೋತ್ಸಾಹಿಸಿದ್ದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ.” ಅವನು ಮತ್ತೂ ಹೇಳಿದ್ದು: “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ” ಹುಟ್ಟದವುಗಳಾಗಿವೆ. (1 ಯೋಹಾನ 2:15, 16) ಇದರ ಕುರಿತು ಯೋಚಿಸಿರಿ. ತಪ್ಪಾದ ಅಭಿಲಾಷೆಯನ್ನು, ಉದಾಹರಣೆಗೆ ನಿಷಿದ್ಧ ಕಾಮವನ್ನು ಪ್ರಚೋದಿಸುವಂಥ ಯಾವ ಸಂಗತಿಯು ಇಂದು ಲೋಕದಲ್ಲಿದೆ? (1 ಥೆಸಲೊನೀಕ 4:3-5) ಲೋಕದ ಹೆಚ್ಚಿನ ಸಂಗೀತದ ಕುರಿತೇನು? ಕ್ಯಾಲಿಫೋರ್ನಿಯದ ಒಬ್ಬಾಕೆ ಪೊಲೀಸ್ ಅಧಿಕಾರಿಯು ಹೇಳಿದ್ದು: “ಮೂಲಭೂತವಾಗಿ, ನೀವು ನಿಮ್ಮ ಹೆತ್ತವರಿಗೆ ಕಿವಿಗೊಡಬೇಕಾಗಿಲ್ಲವೆಂದು, ಮತ್ತು ನೀವು ಬಯಸುವ ರೀತಿಯಲ್ಲಿ ಜೀವಿತವನ್ನು ಜೀವಿಸಬೇಕೆಂದು ಸಂಗೀತವು ಕಲಿಸುತ್ತದೆ.” ಇಂತಹ ಸಂಗೀತದ ಮೂಲಕ ಒದಗಿಸಲ್ಪಡುವ ಬೋಧನೆಯ ಮೂಲವನ್ನು ನೀವು ಗ್ರಹಿಸುತ್ತೀರೊ?
10 ಕಾರ್ಯತಃ ಸೈತಾನನು ಹವ್ವಳಿಗೆ, ‘ನೀನು ಯಾವುದೊ ಆಸಕ್ತಿಕರ ವಿಷಯವನ್ನು ಕಳೆದುಕೊಳ್ಳುತ್ತಿರುವೆ. ನೀನು ಬಯಸುವ ರೀತಿಯಲ್ಲಿ ಜೀವಿತವನ್ನು ಜೀವಿಸು. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ವಿಷಯದಲ್ಲಿ ಸ್ವತಃ ನೀನೇ ನಿರ್ಣಯ ಮಾಡು. ದೇವರಿಗೆ ಕಿವಿಗೊಡುವ ಅಗತ್ಯವಿಲ್ಲ,’ ಎಂಬುದಾಗಿ ಹೇಳಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. (ಆದಿಕಾಂಡ 3:1-5) ಲೋಕದ ಹೆಚ್ಚಿನ ಸಂಗೀತದಲ್ಲಿ ಕಂಡುಕೊಳ್ಳಲ್ಪಡುವಂಥ ಸಂದೇಶವು ಇದೇ ರೀತಿಯ ಸಂದೇಶವಾಗಿಲ್ಲವೊ? ಆದರೆ ದೆವ್ವಗಳು ಕೇವಲ ಸಂಗೀತದ ವಿಧಾನದ ಮೂಲಕ ಮಾತ್ರ ಕಲಿಸುವುದಿಲ್ಲ. ಕಲಿಸಲು, ಅವು ವಾಣಿಜ್ಯದ ಟೆಲಿವಿಷನ್ ಕಾರ್ಯಕ್ರಮಗಳನ್ನು, ಚಲನಚಿತ್ರಗಳನ್ನು, ಮತ್ತು ವಿಡಿಯೊಗಳನ್ನು ಕೂಡ ಉಪಯೋಗಿಸುತ್ತವೆ. ಅದು ಹೇಗೆ? ಒಳ್ಳೆಯದು, ದೇವರ ನೈತಿಕ ಬೋಧನೆಗಳು ದಬ್ಬಾಳಿಕೆ ಮಾಡುವಂಥ ಬೋಧನೆಗಳೆಂದು ತೋರುವ ಮನೋರಂಜನೆಯನ್ನು, ಲೋಕದ ಸಂಸರ್ಗ ಮಾಧ್ಯಮಗಳು ಪ್ರಸಾರ ಮಾಡುತ್ತವೆ. ಹಾದರಕ್ಕೆ ಪ್ರಾಧಾನ್ಯವನ್ನು ಕೊಡುವ ಮತ್ತು ಅದನ್ನು ಅಪೇಕ್ಷಣೀಯ ಸಂಗತಿಯಂತೆ ಸಾದರ ಪಡಿಸುವ ಮೂಲಕ, ಅದನ್ನು ಅವರು ಸಮರ್ಥಿಸುತ್ತಾರೆ.
11. ನೈತಿಕವಾಗಿ ಮಾತಾಡುವುದಾದರೆ, ಟೆಲಿವಿಷನ್ ಅನೇಕ ವೇಳೆ ಏನನ್ನು ಕಲಿಸುತ್ತದೆ?
11 ಯು.ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ [ಇಂಗ್ಲಿಷ್ನಲ್ಲಿ] ಎಂಬ ಪತ್ರಿಕೆಯು ಹೇಳಿದ್ದು: “ಇಸವಿ 1993 ರಲ್ಲಿ, ಮೂರು [ಅಮೆರಿಕದ] ನೆಟ್ವರ್ಕ್ಗಳು 10,000 ಕ್ಕಿಂತಲೂ ಹೆಚ್ಚಿನ ಲೈಂಗಿಕ ಘಟನೆಗಳನ್ನು ಪ್ರಧಾನ ಸಮಯದಲ್ಲಿ (ಸಂಜೆಯ ಸಮಯದಲ್ಲಿ) ಪ್ರದರ್ಶಿಸಿದವು; ವಿವಾಹಿತರ ನಡುವೆ ಲೈಂಗಿಕ ಸಂಭೋಗವನ್ನು ಚಿತ್ರಿಸಿದ ಪ್ರತಿಯೊಂದು ದೃಶ್ಯಕ್ಕೆ, ವಿವಾಹದ ಹೊರಗೆ ಕಾಮದ 14 ದೃಶ್ಯಗಳನ್ನು ನೆಟ್ವರ್ಕ್ಗಳು ತೋರಿಸಿದವು.” ಒಂದು ವರ್ಷದಲ್ಲಿ, ನಿಷಿದ್ಧ ಕಾಮದ 9,000 ಕ್ಕಿಂತಲೂ ಹೆಚ್ಚಿನ ಘಟನೆಗಳನ್ನು ಪ್ರಧಾನ ಸಮಯದಲ್ಲಿ ತೋರಿಸುವ ಮೂಲಕ, ಟೆಲಿವಿಷನ್ ಏನನ್ನು ಕಲಿಸುತ್ತಿದೆ ಎಂದು ನೀವು ಹೇಳುವಿರಿ? “ಪ್ರಧಾನ ಸಮಯದ ಟೆಲಿವಿಷನ್ನಲ್ಲಿ ಕಾಮ: 1979 ಪ್ರತಿ 1989,” ಎಂಬ ವರದಿಯನ್ನು ಬರೆದ ಸಹಲೇಖಕ, ಬ್ಯಾರಿ ಎಸ್. ಸ್ಯಾಪೊಲ್ಸ್ಕಿ, ಹೇಳಿದ್ದು: “ಸ್ಪಷ್ಟವಾಗಿದ ಲೈಂಗಿಕ ವರ್ತನೆಯಲ್ಲಿ ಜನರು ತೊಡಗುವ ದೃಶ್ಯಗಳನ್ನು ಟಿವಿಯಲ್ಲಿ ಅನೇಕ ವರ್ಷಗಳ ಕಾಲ ಒಬ್ಬ ತರುಣ ಯಾ ತರುಣಿಯು ವೀಕ್ಷಿಸುವುದಾದರೆ, ಕಾಮವು ಹಿತಕರವಾಗಿದೆ ಮತ್ತು ಯಾವುದೆ ಪರಿಣಾಮಗಳಿಲ್ಲದೆ ಇದೆ ಎಂಬುದನ್ನು ಅನೇಕ ವರ್ಷಗಳ ಈ ಸಾವಿರಾರು ಪ್ರತಿಬಿಂಬಗಳು ಅವರಿಗೆ ಕಲಿಸುವವು.” ಇದರ ಕುರಿತು ಯಾವ ಸಂದೇಹವೂ ಇರುವುದಿಲ್ಲ: ಯಾವುದೇ ನಿಯಮಗಳಿಲ್ಲವೆಂದು, ಹಾದರವು ಸ್ವೀಕರಣೀಯವಾಗಿದೆ ಎಂದು, ಮತ್ತು ದೇವರು ಖಂಡಿಸುವ ರೀತಿಯಲ್ಲಿ ಜೀವಿಸುವುದರಿಂದ ಯಾವುದೇ ಕೆಟ್ಟ ಪರಿಣಾಮಗಳು ಇಲ್ಲವೆಂದು, ಲೋಕದ ಮನೋರಂಜನೆಯು ಯುವ ಜನರಿಗೆ ಕಲಿಸುತ್ತದೆ.—1 ಕೊರಿಂಥ 6:18; ಎಫೆಸ 5:3-5.
12. ಲೋಕದ ಮನೋರಂಜನೆಯು ವಿಶೇಷವಾಗಿ ಕ್ರೈಸ್ತ ಯುವ ಜನರಿಗೆ ಯಾಕೆ ಒಂದು ಬೆದರಿಕೆಯನ್ನು ಒಡ್ಡುತ್ತದೆ?
12 ಲೋಕದ ಸಂಗೀತ, ಚಲನಚಿತ್ರಗಳು, ವಿಡಿಯೊಗಳು, ಮತ್ತು ಟೆಲಿವಿಷನ್ ಯುವ ಜನರ ಮನವೊಲಿಸಲು ರಚಿಸಲ್ಪಟ್ಟಿವೆ. ಅವು ದೆವ್ವಗಳ ಭ್ರಷ್ಟ ಬೋಧನೆಗಳನ್ನು ಪ್ರಸಾರ ಮಾಡುತ್ತವೆ! ಆದರೆ ಇದು ಆಶ್ಚರ್ಯವನ್ನುಂಟುಮಾಡುವ ವಿಷಯವಾಗಿರಬೇಕೊ? ಇದರ ಕುರಿತು ಯೋಚಿಸಿರಿ. ಸುಳ್ಳು ಧರ್ಮ ಮತ್ತು ರಾಜಕೀಯವು ಸೈತಾನನ ಲೋಕದ ಭಾಗವಾಗಿದ್ದಲ್ಲಿ—ಮತ್ತು ಅವು ಸ್ಪಷ್ಟವಾಗಿಗಿ ಲೋಕದ ಭಾಗವಾಗಿವೆ—ಲೋಕದ ಮೂಲಕ ಪ್ರವರ್ತಿಸಲ್ಪಡುವ ಮನೋರಂಜನೆಯು ದೆವ್ವಗಳ ಪ್ರಭಾವದಿಂದ ಮುಕ್ತವಾಗಿದೆ ಎಂದು ನಂಬುವುದು ಅರ್ಥಪೂರ್ಣವಾಗಿದೆಯೊ? “ನಿಮ್ಮ ಸುತ್ತಲೂ ಇರುವ ಲೋಕವು ನಿಮ್ಮನ್ನು ಅದರ ಅಚಿನ್ಚೊಳಗೆ ಒತಲ್ತು” ಬಿಡದಂತೆ ಯುವ ಜನರಾದ ನೀವು ವಿಶೇಷವಾಗಿ ಎಚ್ಚರದಿಂದಿರಬೇಕು.—ರೋಮಾಪುರ 12:2, ಜೆ. ಬಿ. ಫಿಲಿಪ್ಸ್ರ ದ ನ್ಯೂ ಟೆಸ್ಟಮೆಂಟ್ ಇನ್ ಮಾಡರ್ನ್ ಇಂಗ್ಲಿಷ್.
ಸ್ವಪರೀಕ್ಷೆಯನ್ನು ಮಾಡಿರಿ
13. ಯಾವ ಸ್ವಪರೀಕ್ಷೆಯನ್ನು ನಾವು ಮಾಡಬೇಕು?
13 ನೀವು ಯಾರ ಬೋಧನೆಗಳಿಗೆ ಕಿವಿಗೊಡುತ್ತೀರಿ ಎಂಬ ವಿಷಯವು ನಿಮ್ಮ ಮಾತುಗಳಿಂದ ಮಾತ್ರವಲ್ಲ ನಿಮ್ಮ ಕ್ರಿಯೆಗಳಿಂದ ಕೂಡ ನಿಶ್ಚಯಿಸಲ್ಪಡುತ್ತದೆ. (ರೋಮಾಪುರ 6:16) ಆದುದರಿಂದ ನಿಮ್ಮನ್ನೇ ಕೇಳಿಕೊಳ್ಳಿ, ‘ಲೋಕದ ಪ್ರಸಾರ ಮಾಧ್ಯಮಗಳ ಮೂಲಕ ನಾನು ಕಲಿಯುವ ವಿಷಯಗಳಿಂದ ನನ್ನ ಮನೋಭಾವ ಮತ್ತು ಜೀವನ ಕ್ರಮವು ಅನುಚಿತವಾಗಿ ಪ್ರಭಾವಿಸಲ್ಪಡುತ್ತಿದೆಯೊ? ದೆವ್ವಗಳ ಬೋಧನೆಗಳು ನನ್ನ ಜೀವಿತದಲ್ಲಿ ಅತಿಕ್ರಮಣವನ್ನು ಮಾಡುತ್ತಿರಬಹುದೊ?’ ಇಂತಹ ಪ್ರಶ್ನೆಗಳನ್ನು ಉತ್ತರಿಸಲು ನಿಮಗೆ ಸಹಾಯ ಮಾಡುವಂತೆ, ಬೈಬಲನ್ನು ಅಭ್ಯಸಿಸುವುದರಲ್ಲಿ, ಕ್ರೈಸ್ತ ಕೂಟಗಳನ್ನು ಹಾಜರಾಗುವುದರಲ್ಲಿ, ಮತ್ತು ದೇವರ ರಾಜ್ಯದ ಕುರಿತು ಇತರರೊಂದಿಗೆ ಮಾತಾಡುವುದರಲ್ಲಿ ನೀವು ವ್ಯಯಿಸಿದ ಸಮಯ ಮತ್ತು ಪ್ರಯತ್ನದ ಮೊತ್ತವನ್ನು ಟಿವಿ ವೀಕ್ಷಿಸುವುದರಲ್ಲಿ, ಸಂಗೀತವನ್ನು ಆಲಿಸುವುದರಲ್ಲಿ, ನಿಮ್ಮ ಅಚ್ಚುಮೆಚ್ಚಿನ ಕ್ರೀಡೆಯಲ್ಲಿ ಭಾಗವಹಿಸುವುದರಲ್ಲಿ, ಅಥವಾ ತದ್ರೀತಿಯ ಚಟುವಟಿಕೆಯಲ್ಲಿ ತೊಡಗಿರುವುದರಲ್ಲಿ ಕಳೆದ ಸಮಯದೊಂದಿಗೆ ಯಾಕೆ ಹೋಲಿಸಬಾರದು? ಇಷ್ಟೊಂದು—ನಿಜವಾಗಿಯೂ, ನಿಮ್ಮ ಜೀವಿತವೇ—ಅಪಾಯದಲ್ಲಿರುವುದರಿಂದ, ಪ್ರಾಮಾಣಿಕವಾದ ಸ್ವಪರೀಕ್ಷೆಯನ್ನು ಮಾಡಿರಿ.—2 ಕೊರಿಂಥ 13:5.
14. ನಮ್ಮ ಆತ್ಮಿಕ ಆರೋಗ್ಯವನ್ನು ಯಾವ ಸಂಗತಿಯು ಪ್ರಭಾವಿಸುವುದು, ಮತ್ತು ಯಾವ ಗಂಭೀರವಾದ ಯೋಚನೆಯನ್ನು ನಾವು ಮನಸ್ಸಿನಲ್ಲಿಡಬೇಕು?
14 ನೀವು ತಿನ್ನುವ ಭೌತಿಕ ಆಹಾರವು ನಿಮ್ಮ ಶಾರೀರಿಕ ಆರೋಗ್ಯವನ್ನು ಪ್ರಭಾವಿಸುತ್ತದೆಂದು ನಿಮಗೆ ಚೆನ್ನಾಗಿ ಗೊತ್ತಿದೆ. ಅದೇ ರೀತಿಯಲ್ಲಿ, ನಿಮ್ಮ ಮನಸ್ಸು ಮತ್ತು ಹೃದಯವನ್ನು ಉಣಿಸುವ ವಿಷಯಗಳಿಂದ ನಿಮ್ಮ ಆತ್ಮಿಕ ಆರೋಗ್ಯವು ಪ್ರಭಾವಿಸಲ್ಪಡುತ್ತದೆ. (1 ಪೇತ್ರ 2:1, 2) ನಿಮ್ಮ ನಿಜವಾದ ಅಭಿರುಚಿಗಳು ಏನಾಗಿವೆ ಎಂಬ ವಿಷಯದಲ್ಲಿ ನೀವು ಸ್ವತಃ ನಿಮ್ಮನ್ನು ವಂಚಿಸಿಕೊಳ್ಳಬಹುದಾದರೂ, ನಮ್ಮ ನ್ಯಾಯಾಧೀಶನಾದ ಯೇಸು ಕ್ರಿಸ್ತನನ್ನು ವಂಚಿಸಲು ನಿಮಗೆ ಸಾಧ್ಯವಿಲ್ಲ. (ಯೋಹಾನ 5:30) ಆದುದರಿಂದ ನಿಮ್ಮನ್ನು ಕೇಳಿಕೊಳ್ಳಿರಿ, ‘ಯೇಸು ಭೂಮಿಯಲ್ಲಿರುವುದಾದರೆ, ನನ್ನ ಸಂಗೀತವನ್ನು ಆಲಿಸಲು ಅಥವಾ ನಾನು ವೀಕ್ಷಿಸುತ್ತಿರುವುದನ್ನು ನೋಡಲು ಅವನು ನನ್ನ ಕೋಣೆಯೊಳಗೆ ಬರುವುದಾದರೆ, ನಾನು ಕಂಗೆಡುವೆನೊ?’ ಗಂಭೀರವಾದ ನಿಜತ್ವವೇನೆಂದರೆ, ಯೇಸು ಗಮನಿಸುತ್ತಾ ಇದ್ದಾನೆ ಮತ್ತು ನಮ್ಮ ಕೃತ್ಯಗಳನ್ನು ಅರಿತವನಾಗಿದ್ದಾನೆ.—ಪ್ರಕಟನೆ 3:15.
ದೆವ್ವಗಳ ಬೋಧನೆಗಳನ್ನು ಪ್ರತಿರೋಧಿಸಿರಿ
15. ದೆವ್ವಗಳ ಬೋಧನೆಗಳನ್ನು ಪ್ರತಿರೋಧಿಸಲು ಕ್ರೈಸ್ತರು ಯಾಕೆ ಕಠಿನವಾಗಿ ಹೋರಾಡಬೇಕು?
15 ತಮ್ಮ ಬೋಧನೆಗಳನ್ನು ಆಲಿಸುವಂತೆ ಎಳೆಯರ ಮೇಲೆ ದೆವ್ವಗಳು ಪ್ರಯೋಗಿಸುವ ಒತ್ತಡವು ಮಹತ್ತರವಾಗಿದೆ. ಈ ದುಷ್ಟಾತ್ಮಗಳು ತತ್ಕ್ಷಣ ಸುಖಾನುಭವ ಕೊಡುವ ಜೀವಿತವನ್ನು—ತಮಾಷೆ ಹಾಗೂ ವಿಷಯಲಂಪಟದ ಜೀವಿತವನ್ನು ನೀಡುವಂತೆ ತೋರುತ್ತದೆ. ದೇವರನ್ನು ಮೆಚ್ಚಿಸುವ ಸಲುವಾಗಿ, ಫರೋಹನ ಮನೆವಾರ್ತೆಯ ಪ್ರಧಾನ ಸದಸ್ಯನೋಪಾದಿ, ಹಳೆಯ ಕಾಲದ ಮೋಶೆಯು “ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವುದನ್ನು” ತಿರಸ್ಕರಿಸಿದನು. (ಇಬ್ರಿಯ 11:24-27) ದೆವ್ವಗಳು ನೀಡುವುದನ್ನು ತಿರಸ್ಕರಿಸುವುದು ಸುಲಭವಲ್ಲ, ಆದುದರಿಂದ ಸರಿಯಾದದ್ದನ್ನು ಮಾಡಲು ನೀವು ಕಷ್ಟಪಟ್ಟು ಶ್ರಮಿಸಬೇಕು. ಇದು ವಿಶೇಷವಾಗಿ ಸತ್ಯವಾಗಿದೆ ಯಾಕೆಂದರೆ ನಮ್ಮಲ್ಲಿ ಪಿತ್ರಾರ್ಜಿತವಾಗಿ ಬಂದ ಪಾಪವಿದೆ ಮತ್ತು ನಮ್ಮ ಹೃದಯಗಳು ಅನೇಕ ವೇಳೆ ಕೆಟ್ಟದ್ದನ್ನು ಮಾಡಲು ಹಾತೊರೆಯುತ್ತವೆ. (ಆದಿಕಾಂಡ 8:21; ರೋಮಾಪುರ 5:12) ಪಾಪಪೂರ್ಣ ಪ್ರವೃತ್ತಿಗಳಿಂದಾಗಿ, ಅಪೊಸ್ತಲ ಪೌಲನು ಕೂಡ ತನ್ನ ವಿಷಯವಾಗಿಯೇ ಗಡುಸಾಗಬೇಕಿತ್ತು ಮತ್ತು ತನ್ನ ಶಾರೀರಿಕ ಆಶೆಗಳು ತನ್ನನ್ನು ಆಳುವಂತೆ ಅನುಮತಿಸಬಾರದಿತ್ತು.—1 ಕೊರಿಂಥ 9:27; ರೋಮಾಪುರ 7:21-23.
16. ಅನೈತಿಕ ನಡತೆಯಲ್ಲಿ ತೊಡಗಲಿಕ್ಕಾಗಿರುವ ಒತ್ತಡಗಳನ್ನು ಯುವ ಜನರು ಹೇಗೆ ಪ್ರತಿರೋಧಿಸಬಲ್ಲರು?
16 “ದುಷ್ಕಾರ್ಯವನ್ನು ಮಾಡುವುದಕ್ಕಾಗಿ ಸಮೂಹವನ್ನು ಅನುಸರಿಸು” ವಂತೆ ನೀವು ಮೋಹಗೊಳಿಸಲ್ಪಟ್ಟಾಗ್ಯೂ, ಅವರ ತಪ್ಪು ಮಾರ್ಗವನ್ನು ಬೆನ್ನಟ್ಟುವಂತೆ ನಿಮ್ಮ ಸಮಾನಸ್ಕಂಧರಿಂದ ಬರುವ ಒತ್ತಡವನ್ನು ನೀವು ಪ್ರತಿರೋಧಿಸಲು, ದೇವರು ಸಹಾಯ ಮಾಡಬಲ್ಲನು. (ವಿಮೋಚನಕಾಂಡ 23:2; 1 ಕೊರಿಂಥ 10:13) ಆದರೆ ದೇವರ ಮಾತುಗಳನ್ನು ನಿಮ್ಮ ಹೃದಯದಲ್ಲಿ ಭದ್ರಪಡಿಸುತ್ತಾ, ಆತನ ನಿರ್ದೇಶನಕ್ಕೆ ನೀವು ಕಿವಿಗೊಡಬೇಕು. (ಕೀರ್ತನೆ 119:9, 11) ಯುವ ಜನರು ತಮ್ಮನ್ನು ಪ್ರತ್ಯೇಕಿಸಿಕೊಳ್ಳುವಾಗ, ಲೈಂಗಿಕ ಅಭಿಲಾಷೆಗಳು ಬೆಳೆದು, ದೇವರ ನಿಯಮದ ಉಲ್ಲಂಘನೆಗೆ ನಡೆಸಬಲ್ಲವೆಂದು ನೀವು ಗ್ರಹಿಸುವ ಅಗತ್ಯವಿದೆ. “ನನ್ನ ಗೆಳೆಯನೊಂದಿಗೆ ನಾನು ಒಬ್ಬಂಟಿಗಳಾಗಿರುವಾಗ, ನನ್ನ ದೇಹವು ಒಂದು ಕಾರ್ಯವನ್ನು ಮಾಡಲು ಇಚ್ಛಿಸುತ್ತದೆ, ನನ್ನ ಮಿದುಳು ಮತ್ತೊಂದನ್ನು ಮಾಡಲು ಹೇಳುತ್ತದೆ,” ಎಂಬುದಾಗಿ ಒಬ್ಬಾಕೆ ಯುವತಿಯು ಒಪ್ಪಿಕೊಂಡಳು. ಆದುದರಿಂದ ನಿಮ್ಮ ಇತಿಮಿತಿಗಳನ್ನು ಗುರುತಿಸಿರಿ ಮತ್ತು ನಿಮ್ಮ ಹೃದಯವು ವಂಚಕವೆಂದು ಗ್ರಹಿಸಿರಿ. (ಯೆರೆಮೀಯ 17:9) ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಡಿರಿ. (ಜ್ಞಾನೋಕ್ತಿ 18:1) ಪ್ರೀತಿಯ ಅಭಿವ್ಯಕ್ತಿಗಳ ಮೇಲೆ ಮಿತಿಗಳನ್ನು ಇರಿಸಿರಿ. ಯೆಹೋವನನ್ನು ಪ್ರೀತಿಸುವವರೊಂದಿಗೆ ಮತ್ತು ಆತನ ನಿಯಮಕ್ಕಾಗಿ ಆಳವಾದ ಗೌರವ ಇರುವವರೊಂದಿಗೆ ಮಾತ್ರ ನಿಕಟವಾದ ಒಡನಾಟವನ್ನಿಟ್ಟುಕೊಳ್ಳುವುದು, ವಿಶೇಷ ಮಹತ್ವವುಳ್ಳದ್ದಾಗಿದೆ.—ಕೀರ್ತನೆ 119:63; ಜ್ಞಾನೋಕ್ತಿ 13:20; 1 ಕೊರಿಂಥ 15:33.
17. ದೆವ್ವಗಳ ಬೋಧನೆಗಳನ್ನು ಪ್ರತಿರೋಧಿಸಲಿಕ್ಕಾಗಿ ಬಲವನ್ನು ಪಡೆಯುವಂತೆ ಯಾವ ಸಂಗತಿಯು ಕ್ರೈಸ್ತ ಯುವಜನರಿಗೆ ಸಹಾಯ ಮಾಡಬಲ್ಲದು?
17 ನಿಮ್ಮ ಆತ್ಮಿಕ ಬಲಪಡಿಸುವಿಕೆಗಾಗಿ ತಯಾರಿಸಲಾದ ಕ್ರಿಸ್ತೀಯ ಪ್ರಕಾಶನಗಳ ಜಾಗರೂಕತೆಯ ಅಭ್ಯಾಸವು ನಿಮಗೆ ಸಹಾಯ ಮಾಡುವುದು. ಉದಾಹರಣೆಗೆ, ಕಾವಲಿನಬುರುಜು ಮತ್ತು ಎಚ್ಚರ! ದಲ್ಲಿ ಲೇಖನಗಳಿವೆ ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದಲ್ಲಿ, “ಸಮರ್ಪಕವಾಗಿರುವುದನ್ನು ಮಾಡಲು ಹೋರಾಟ” ಎಂಬ ಅಧ್ಯಾಯವಿದೆ. ಒದಗಿಸಲ್ಪಟ್ಟ ಶಾಸ್ತ್ರೀಯವಾದ ಉಪದೇಶವು ನಿಮ್ಮ ಮನಸ್ಸು ಹಾಗೂ ಹೃದಯಗಳಲ್ಲಿ ಆಳವಾಗಿ ಇಳಿಯಲಿ, ಮತ್ತು ಇದು ನಿಮ್ಮನ್ನು ಬಲಪಡಿಸುವುದು. ನೀವು ಮರೆಯಲೇ ಬಾರದಂತಹ ಒಂದು ನಿಜತ್ವವು ಏನಾಗಿದೆ ಎಂದರೆ, ಈ ದೆವ್ವ ನಿಯಂತ್ರಿತ ಲೋಕದಲ್ಲಿ ಸರಿಯಾದದ್ದನ್ನು ಮಾಡುವುದು ಸುಲಭವಲ್ಲ. ಆದುದರಿಂದ ಕಷ್ಟಪಟ್ಟು ಹೋರಾಡಿರಿ. (ಲೂಕ 13:24) ನಿಮ್ಮ ಆತ್ಮಿಕ ಬಲವನ್ನು ಬೆಳೆಸಿಕೊಳ್ಳಿ. ಸಮೂಹವನ್ನು ಅನುಸರಿಸುವ ಬಲಹೀನ, ಭಯಭೀತ ಜನರನ್ನು ಅನುಕರಿಸಬೇಡಿರಿ.
ದೈವಿಕ ಬೋಧನೆಯಿಂದ ಪ್ರಯೋಜನ ಪಡೆಯಿರಿ
18. ದೈವಿಕ ಬೋಧನೆಗೆ ಕಿವಿಗೊಡುವುದರ ಕೆಲವು ಪ್ರಯೋಜನಗಳೇನು?
18 ಯೆಹೋವನ ಬೋಧನೆಗೆ ಕಿವಿಗೊಡುವ ಮೂಲಕ ಯಾವುದೇ ಯೋಗ್ಯವಾದ ವಿಷಯವನ್ನು ನೀವು ಕಳೆದುಕೊಳ್ಳುವುದೇ ಇಲ್ಲವೆಂಬುದನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಿ. ಆತನು ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಾನೆ, ಮತ್ತು ಆ ಕಾರಣಕ್ಕಾಗಿಯೆ ಆತನು “ನಿನಗೆ ವೃದ್ಧಿಮಾರ್ಗವನ್ನು ಬೋಧಿಸು” ತ್ತಿದ್ದಾನೆ. (ಯೆಶಾಯ 48:17) ಆದುದರಿಂದ ಯೆಹೋವನ ಬೋಧನೆಗೆ ಕಿವಿಗೊಡಿರಿ, ಮತ್ತು ಹಾಳಾದ ಒಂದು ಮನಸ್ಸಾಕ್ಷಿಯ ಮನೋವ್ಯಥೆಯನ್ನು, ಸ್ವಗೌರವದ ನಷ್ಟವನ್ನು, ಬೇಡವಾದ ಗರ್ಭಧಾರಣೆಗಳನ್ನು, ರತಿ ರವಾನಿತ ರೋಗಗಳನ್ನು, ಅಥವಾ ಸಮನಾದ ದುರಂತಗಳನ್ನು ತೊರೆಯಿರಿ. ಪರೀಕ್ಷೆಯ ಕೆಳಗೆ ಮಾನವರು ದೇವರಿಗೆ ನಂಬಿಗಸ್ತರಾಗಿ ಉಳಿಯುವುದಿಲ್ಲವೆಂಬ ಸೈತಾನನ ಸವಾಲಿಗೆ ಆತನ ಸೇವಕರು ಉತ್ತರವೊಂದನ್ನು ಆತನಿಗೆ ಒದಗಿಸಿದಾಗ, ಯೆಹೋವನು ಹರ್ಷಿಸುತ್ತಾನೆ. (ಯೋಬ 1:6-12) ಯೆಹೋವನಿಗೆ ನಂಬಿಗಸ್ತರಾಗಿರುವ ಮೂಲಕ ಆತನ ಹೃದಯವನ್ನು ನೀವು ಸಂತೋಷ ಪಡಿಸುವುದಾದರೆ, ಈ ಲೋಕದ ವಿರುದ್ಧ ಆತನು ವ್ಯತಿರಿಕ್ತವಾದ ನ್ಯಾಯತೀರ್ಪನ್ನು ನೀಡುವಾಗ, ನೀವು ಬದುಕಿ ಉಳಿಯುವಿರಿ ಆದರೆ ಆತನ ನಿಯಮಗಳನ್ನು ಕಡೆಗಣಿಸುವವರೆಲ್ಲರು ನಾಶವಾಗುವರು.—ಜ್ಞಾನೋಕ್ತಿ 27:11; 1 ಕೊರಿಂಥ 6:9, 10; 1 ಯೋಹಾನ 2:17.
19. ಯೆಹೋವನ ಬೋಧನೆಯ ಪ್ರಯೋಜನಗಳನ್ನು ಗಣ್ಯಮಾಡುವವರೊಂದಿಗೆ ಸೇರುವುದರ ಮಹತ್ವವೇನು?
19 ಯೆಹೋವನು ಮಾಡಿರುವ ವಿಷಯಗಳಿಗೆ ಗಣ್ಯತೆಯನ್ನು ತೋರಿಸುವವರೊಂದಿಗೆ ನೀವು ಸೇರುವುದಾದರೆ, ಅವರ ಅನುಭವದಿಂದ ನೀವು ಕಲಿಯಬಲ್ಲಿರಿ. ಹಿಂದೆ ಅಮಲೌಷಧಗಳ ದುರಭ್ಯಾಸಕ್ಕೆ ವಶವಾಗಿದ್ದ ಮತ್ತು ಅನೈತಿಕತೆಯನ್ನು ಆಚರಿಸಿದ್ದ ಒಬ್ಬಾಕೆ ವಿವರಿಸಿದ್ದು: “ಯೆಹೋವನಿಗೆ ನಾನು ಕಿವಿಗೊಡದಿರುತ್ತಿದ್ದರೆ, ಮರಣ ಹೊಂದಿರುತ್ತಿದ್ದೆ. ನಾನು ಮದುವೆಯಾಗಬೇಕಿದ್ದ ವ್ಯಕ್ತಿ ಏಯ್ಡ್ಸ್ನಿಂದ ಸತ್ತನು. ನನ್ನ ಎಲ್ಲಾ ಹಿಂದಿನ ನಿಕಟ ಲೌಕಿಕ ಸ್ನೇಹಿತರು ಏಯ್ಡ್ಸ್ನಿಂದ ಮರಣ ಹೊಂದಿದ್ದಾರೆ ಯಾ ಮರಣ ಹೊಂದುವ ಮಾರ್ಗದಲ್ಲಿದ್ದಾರೆ. ನಾನು ಅವರನ್ನು ಅನೇಕ ವೇಳೆ ರಸ್ತೆಬದಿಗಳಲ್ಲಿ ನೋಡುತ್ತೇನೆ, ಮತ್ತು ಯೆಹೋವನ ಜನರನ್ನು ಆಳುವ ಮತ್ತು ಅವುಗಳನ್ನು ಅನ್ವಯಿಸುವುದಾದರೆ ಮಾತ್ರ ನಮ್ಮನ್ನು ಪವಿತ್ರರನ್ನಾಗಿಡುವ ಆತನ ನಿಯಮಗಳಿಗಾಗಿ ನಾನು ಪ್ರತಿದಿನ ಆತನಿಗೆ ಉಪಕಾರ ಸಲ್ಲಿಸುತ್ತೇನೆ. ಜೀವನದಲ್ಲಿ ಇಷ್ಟು ಸಂತೋಷವಾಗಿ, ತೃಪ್ತವಾಗಿ, ಮತ್ತು ಭದ್ರವಾಗಿ ನಾನು ಎಂದೂ ಇರಲಿಲ್ಲ.” ಸತ್ಯವಾಗಿ, ಯೆಹೋವನ ಬೋಧನೆಯನ್ನು ಆಲಿಸುವುದು ನಮ್ಮನ್ನು ಯಾವಾಗಲೂ ಪ್ರಯೋಜನ ಪಡಿಸುತ್ತದೆ!
ಸರಿಯಾದ ಆಯ್ಕೆಯನ್ನು ಮಾಡಿರಿ
20, 21. (ಎ) ಯಾವ ಎರಡು ಆಯ್ಕೆಗಳು ಯುವಜನರಿಗಿವೆ? (ಬಿ) ದೈವಿಕ ಬೋಧನೆಗೆ ಕಿವಿಗೊಡುವುದರಿಂದ ಯಾವ ಬಾಳುವ ಪ್ರಯೋಜನವು ಲಭಿಸುವುದು?
20 ಯೆಹೋವನನ್ನು ಸೇವಿಸುವ ಮೂಲಕ ಸರಿಯಾದ ಆಯ್ಕೆಯನ್ನು ಮಾಡಿರಿ, ಎಂಬುದಾಗಿ ಎಳೆಯವರಾದ ನಿಮ್ಮನ್ನು ನಾವು ಪ್ರೋತ್ಸಾಹಿಸುತ್ತೇವೆ. ತದನಂತರ ಆ ನಿರ್ಣಯಕ್ಕೆ ಅಂಟಿಕೊಂಡಿರುವಲ್ಲಿ ದೃಢನಿಶ್ಚಯವುಳ್ಳವರಾಗಿರ್ರಿ. (ಯೆಹೋಶುವ 24:15) ನಿಜವಾಗಿಯೂ, ಎರಡು ಆಯ್ಕೆಗಳಲ್ಲಿ ನೀವು ಒಂದನ್ನು ಮಾತ್ರ ಮಾಡಬಲ್ಲಿರಿ. ದೊಡ್ಡ ಹಾಗೂ ಅಗಲವಾದ ದಾರಿ—ತನಗೆ ಹಿತವೆನಿಸುವ ಕಾರ್ಯಗಳನ್ನು ಮಾಡುವ ಸುಲಭ ಆಯ್ಕೆ—ಇದೆ ಎಂದು ಯೇಸು ಹೇಳಿದನು. ಆ ದಾರಿಯು ನಿಲುಕೊನೆಗೆ ನಾಶನಕ್ಕೆ ನಡೆಸುತ್ತದೆ. ಮತ್ತೊಂದು ದಾರಿಯು ಇಕ್ಕಟ್ಟಾಗಿದೆ. ಈ ಅನೈತಿಕ, ದೆವ್ವ ನಿಯಂತ್ರಿತ ಲೋಕದಲ್ಲಿ ಪ್ರಯಾಣಿಸಲು, ಇದು ಕಷ್ಟಕರವಾದ ದಾರಿಯಾಗಿದೆ. ಆದರೆ ಆ ದಾರಿಯು ಕಟ್ಟಕಡೆಗೆ, ಅದರಲ್ಲಿ ಪ್ರಯಾಣಿಸುತ್ತಿರುವವರನ್ನು ದೇವರ ಅದ್ಭುತಕರವಾದ ಹೊಸ ಲೋಕದೊಳಗೆ ಕೊಂಡೊಯ್ಯವುದು. (ಮತ್ತಾಯ 7:13, 14) ಯಾವ ದಾರಿಯನ್ನು ನೀವು ಬಳಸುವಿರಿ? ನೀವು ಯಾರ ಬೋಧನೆಗೆ ಕಿವಿಗೊಡುವಿರಿ?
21 ಆಯ್ಕೆಯನ್ನು ಯೆಹೋವನು ನಿಮಗೆ ಬಿಟ್ಟಿದ್ದಾನೆ. ಆತನನ್ನು ನೀವು ಸೇವಿಸುವಂತೆ ಒತ್ತಾಯಿಸಲು ಆತನು ಪ್ರಯತ್ನಿಸುವುದಿಲ್ಲ. “ಜೀವವನ್ನೇ ಆದುಕೊಳ್ಳಿರಿ,” ಎಂದು ಒತ್ತಯಾ ಪಡಿಸುತ್ತಾ, “ಜೀವಮರಣಗಳನ್ನೂ . . . ನಿಮ್ಮ ಮುಂದೆ ಇಟ್ಟಿದೇನ್ದೆ,” ಎಂದು ದೇವರ ಪ್ರವಾದಿಯಾದ ಮೋಶೆಯು ಹೇಳಿದನು. ಈ ಆಯ್ಕೆಯು, “ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿ, ಆತನನ್ನು ಹೊಂದಿಕೊಂಡು ಇರುವ” ಮೂಲಕ ಮಾಡಲ್ಪಡುತ್ತದೆ. (ಧರ್ಮೋಪದೇಶಕಾಂಡ 29:2; 30:19, 20) ದೈವಿಕ ಬೋಧನೆಗೆ ಕಿವಿಗೊಡಲು ನೀವು ವಿವೇಕಪೂರ್ಣವಾಗಿ ಆಯ್ದುಕೊಂಡು, ದೇವರ ಮಹಿಮಾಭರಿತ ಹೊಸ ಲೋಕದಲ್ಲಿ ಅಂತ್ಯವಿಲ್ಲದ ಜೀವಿತವನ್ನು ಅನುಭವಿಸುವಂತಾಗಲಿ.
ನೀವು ಹೇಗೆ ಉತ್ತರಿಸುವಿರಿ?
▫ ದೆವ್ವಗಳು ಯಾರು, ಮತ್ತು ಅವು ಏನನ್ನು ಕಲಿಸುತ್ತವೆ?
▫ ದೆವ್ವಗಳು ತಮ್ಮ ಬೋಧನೆಗಳನ್ನು ಇಂದು ಹೇಗೆ ಪ್ರವರ್ತಿಸುತ್ತವೆ?
▫ ದೆವ್ವಗಳ ಬೋಧನೆಗಳನ್ನು ಹೇಗೆ ಪ್ರತಿರೋಧಿಸಸಾಧ್ಯವಿದೆ?
▫ ಯೆಹೋವನ ಬೋಧನೆಗೆ ಕಿವಿಗೊಡುವುದರ ಪ್ರಯೋಜನಗಳೇನು?
1. (ಎ) ಯಾವ ಆಯ್ಕೆ ಯುವಜನರಿಗಿದೆ? (ಬಿ) ಯೆಹೋವನು ಹೇಗೆ ಕಲಿಸುತ್ತಾನೆ?
[ಪುಟ 16 ರಲ್ಲಿರುವ ಚಿತ್ರ]
ಜಲಪ್ರಳಯದ ಮುಂಚೆ, ಅವಿಧೇಯ ದೇವದೂತರು ಮತ್ತು ಅವರ ಸಂತಾನದವರು ಹಿಂಸೆ ಮತ್ತು ವಿಷಯಲಂಪಟತನವನ್ನು ಪ್ರವರ್ತಿಸಿದರು
[ಪುಟ 18 ರಲ್ಲಿರುವ ಚಿತ್ರ]
ನಿಮ್ಮ ಅಚ್ಚುಮೆಚ್ಚಿನ ಸಂಗೀತವನ್ನು ಯೇಸು ಆಲಿಸುವುದಾದರೆ, ನೀವು ಕಂಗೆಡುವಿರೊ?