ಯೆಹೋವನನ್ನು ಸೇವಿಸಲು ಆಕೆ ತೀರ ವೃದ್ಧೆಯಾಗಿರಲಿಲ್ಲ
ಅನೇಕ ವಯಸ್ಸಾದ ಜನರಿಗೆ, ತಮ್ಮ ಉಳಿದಿರುವ ವರ್ಷಗಳು ಸಂತೋಷದ ಅಲ್ಪ ನಿರೀಕ್ಷೆಯನ್ನು ಹೊಂದಿವೆ ಎಂಬುದಾಗಿ ಅನಿಸುತ್ತದೆ. ವೃದ್ಧೆಯಾಗುತ್ತಿದ್ದ ಒಬ್ಬಾಕೆ ಸುಪ್ರಸಿದ್ಧ ನಟಿಯು, “ನನ್ನ ಜೀವಿತವನ್ನು ನಾನು ಅಸ್ತವ್ಯಸ್ತಪಡಿಸಿಕೊಂಡಿದ್ದೇನೆ, ಮತ್ತು ಅದನ್ನು ಪರಿವರ್ತಿಸಲು ಹೊತ್ತು ಮೀರಿದೆ . . . ನಾನೊಬ್ಬಳೆ ತಿರುಗಾಡಲು ಹೋದಾಗ, ನನ್ನ ಜೀವಿತದ ಕುರಿತು ನಾನು ಪುನರಾಲೋಚಿಸುತ್ತೇನೆ, ಮತ್ತು ಅದನ್ನು ರೂಪಿಸಿದ ರೀತಿಯಿಂದ ನಾನು ಸಂತುಷ್ಟಳಾಗಿಲ್ಲ . . . ಎಲ್ಲೆಡೆಯೂ ನಾನು ತಳಮಳಿಸುತ್ತಿರುತ್ತೇನೆ ಮತ್ತು ಶಾಂತಳಾಗಿರಲು ಅಶಕ್ತಳಾಗಿದ್ದೇನೆ,” ಎಂದು ಸಹ ಅವಳು ಹೇಳಿದಳು.
ಸುಮಾರು 2,000 ವರ್ಷಗಳ ಹಿಂದೆ ಜೀವಿಸಿದ ಒಬ್ಬಾಕೆ ವೃದ್ಧ ಹೆಂಗಸಿಗೆ, ಆ ರೀತಿಯ ಯಾವ ಸಮಸ್ಯೆಯೂ ಇರಲಿಲ್ಲ. ಅವಳು 84 ವರ್ಷ ವಯಸ್ಸಿನ ವಿಧವೆಯಾಗಿದ್ದಳು, ಆದರೆ ಸಕ್ರಿಯಳೂ, ಸಂತುಷ್ಟಳೂ, ಮತ್ತು ದೇವರ ಮೂಲಕ ಅದ್ಭುತಕರವಾಗಿ ಅನುಗ್ರಹ ಪಡೆದವಳೂ ಆಗಿದ್ದಳು. ಅವಳ ಹೆಸರು ಅನ್ನ ಎಂಬುದಾಗಿತ್ತು, ಮತ್ತು ಆನಂದಿಸಲು ಅವಳಲ್ಲಿ ಒಂದು ವಿಶೇಷ ಕಾರಣವಿತ್ತು. ಅದು ಏನಾಗಿತ್ತು?
“ದೇವಾಲಯದಿಂದ ಎಂದೂ ತಪ್ಪಿಸಿಕೊಳ್ಳು” ತಿರ್ತಲಿಲ್ಲ
ಸುವಾರ್ತಾ ಬರಹಗಾರನಾದ ಲೂಕನು ನಮಗೆ ಅನ್ನಳನ್ನು ಪರಿಚಯಿಸುತ್ತಾನೆ. “ಇದಲ್ಲದೆ,” ಅವನು ಹೇಳುವುದು, ಇಸ್ರಾಯೇಲಿನಲ್ಲಿ “ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು.” ಒಬ್ಬಾಕೆ ಪ್ರವಾದಿನಿಯಂತೆ ಅವಳಿಗೆ, ವಿಶೇಷವಾದೊಂದು ಅರ್ಥದಲ್ಲಿ ದೇವರ ಪವಿತ್ರ ಆತ್ಮದ, ಯಾ ಕ್ರಿಯಾಶೀಲ ಶಕ್ತಿಯ ಕೊಡುಗೆಯಿತ್ತು. ಮತ್ತು ಗಮನಾರ್ಹವಾದ ಒಂದು ಸಂದರ್ಭದಲ್ಲಿ ಪ್ರವಾದಿಸಲು ಅನ್ನಳಿಗೆ ಒಂದು ಮಹಾ ಅವಕಾಶವಿತ್ತು.
ಲೂಕನು ವರದಿಸುವುದು: “ಆಕೆ ಬಹಳ ಮುಪ್ಪಿನವಳು; ಆಕೆ ತನ್ನ ಕನ್ಯಾವಸ್ಥೆ ಕಳೆದ ತರುವಾಯ ಗಂಡನ ಕೂಡ ಏಳು ವರುಷ ಬಾಳುವೆಮಾಡಿ ಎಂಭತ್ತುನಾಲ್ಕು ವರುಷ ವಿಧವೆಯಾಗಿದ್ದಳು.” (ಲೂಕ 2:36, 37) ಬಹುಶಃ ಅನ್ನಳು ಬಹಳ ಎಳೆಯವಳಿದ್ದಾಗ ವಿಧವೆಯಾಗಿದ್ದಳು. ಒಬ್ಬ ಪ್ರಿಯ ಗಂಡನನ್ನು ಮರಣದಲ್ಲಿ ಕಳೆದುಕೊಳ್ಳುವುದು ಎಷ್ಟು ಮನೋವೇದಕವಾಗಿದೆ ಎಂದು ಯಾವುದೇ ವಯಸ್ಸಿನ ವಿಧವೆಯರಾದ ಕ್ರೈಸ್ತ ಹೆಂಗಸರಿಗೆ ಗೊತ್ತಿದೆ. ಹಾಗಿದ್ದರೂ, ನಮ್ಮ ದಿನದ ಅನೇಕ ದೈವಭಕ್ತಿಯುಳ್ಳ ಹೆಂಗಸರಂತೆ, ಈ ದುಃಖಕರ ಅನುಭವವು ದೇವರೆಡೆಗೆ ಆಕೆಯ ಸೇವೆಯನ್ನು ನಿಲ್ಲಿಸುವಂತೆ ಅನ್ನಳು ಬಿಡಲಿಲ್ಲ.
ಅನ್ನಳು ಯೆರೂಸಲೇಮಿನಲ್ಲಿದ್ದ “ದೇವಾಲಯದಿಂದ ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ” ಎಂದು ಲೂಕನು ನಮಗೆ ಹೇಳುತ್ತಾನೆ. (ಲೂಕ 2:37, NW) ದೇವರ ಮನೆಯಲ್ಲಿ ಮಾಡುವ ಸೇವೆಯಿಂದ ಫಲಿಸುವ ಸಂತೋಷವನ್ನು ಅವಳು ಆಳವಾಗಿ ಗಣ್ಯಮಾಡಿದಳು. ಅವಳ ಕ್ರಿಯೆಗಳು, ಇಸ್ರಾಯೇಲಿನ ಕೀರ್ತನೆಗಾರ ಅರಸನಾದ ದಾವೀದನಂತೆ, ಅವಳಿಗೆ ಯೆಹೋವನಿಂದ ಕೇಳಿಕೊಳ್ಳಲು ಒಂದೇ ಒಂದು ವರವು ಮಾತ್ರ ಇತ್ತೆಂಬುದನ್ನು ಪ್ರಕಟಿಸಿದವು. ಅದು ಏನಾಗಿತ್ತು? ದಾವೀದನು ಹಾಡಿದ್ದು: “ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು.” (ಕೀರ್ತನೆ 27:4) ಈ ವಿಷಯದಲ್ಲಿಯೂ ಕೂಡ, ಅನ್ನಳು ಯೆಹೋವನ ಆರಾಧನಾ ಸ್ಥಳಕ್ಕೆ ಕ್ರಮವಾದ ಹಾಜರಿಯಲ್ಲಿ ಹರ್ಷವನ್ನು ಇಂದು ಕಂಡುಕೊಳ್ಳುವ ಕ್ರೈಸ್ತ ಹೆಂಗಸರಂತೆ ಇದ್ದಾಳೆ.
ಅನ್ನಳು ಯೆಹೋವನಿಗೆ ರಾತ್ರಿ ಮತ್ತು ಹಗಲು ಪವಿತ್ರ ಸೇವೆಯನ್ನು ಸಲ್ಲಿಸಿದಳು. ಶೋಕ ಮತ್ತು ತೀವ್ರವಾದ ಬಯಕೆಯನ್ನು ಸೂಚಿಸುವ, “ಉಪವಾಸ ವಿಜ್ಞಾಪನೆ” ಗಳೊಂದಿಗೆ ಇದನ್ನು ಅವಳು ಮಾಡಿದಳು. (ಲೂಕ 2:37) ದೇವಾಲಯವನ್ನೂ ಅದರ ಯಾಜಕತ್ವವನ್ನೂ ತಲಪಿದ ಕ್ಷೀಣವಾಗುತ್ತಿರುವ ಧಾರ್ಮಿಕ ಪರಿಸ್ಥಿತಿಗಳು ಮತ್ತು ಅನ್ಯಜನಾಂಗದ ಶಕಿಗ್ತಳಿಗೆ ಶತಮಾನಗಳಷ್ಟು ದೀರ್ಘವಾದ ಯೆಹೂದಿ ಅಧೀನತೆಯು, ಯೆಹೋವನಿಗೆ ಅನ್ನಳ ಉಪವಾಸಗಳಿಗೆ ಮತ್ತು ವಿಜ್ಞಾಪನೆಗಳಿಗೆ ಕಾರಣವಾಗಿರಬಹುದು. ಆದರೆ ವಿಶೇಷವಾಗಿ ಸಾ.ಶ.ಪೂ 2 ನೆಯ ವರ್ಷದ ನಿಜವಾಗಿಯೂ ವಿಶೇಷ ಘಟನೆಗಳುಳ್ಳ ಒಂದು ದಿನದಂದು ಸಂಭವಿಸಿದ ಯಾವುದೋ ಅಸಾಧಾರಣ ಸಂಗತಿಯಿಂದಾಗಿ, ಸಂತೋಷವಾಗಿರಲು ಸಹ ಅವಳಿಗೆ ಕಾರಣವಿತ್ತು.
ಒಂದು ಅನಿರೀಕ್ಷಿತವಾದ ಆಶೀರ್ವಾದ
ವಿಶೇಷವಾಗಿ ಪ್ರಾಮುಖ್ಯವಾದ ಈ ದಿನದಂದು, ಯೆರೂಸಲೇಮಿನ ಮಂದಿರಕ್ಕೆ ಶಿಶುವಾಗಿದ್ದ ಯೇಸುವನ್ನು, ಅವನ ತಾಯಿಯಾದ ಮರಿಯಳ ಮತ್ತು ಅವನ ದತ್ತು ತಂದೆಯಾದ ಯೊಸೇಫನ ಮೂಲಕ ತರಲಾಯಿತು. ವೃದ್ಧನಾದ ಸಿಮೆಯೋನನು ಶಿಶುವನ್ನು ನೋಡಿದನು ಮತ್ತು ಆ ಸಂದರ್ಭದಲ್ಲಿ ಪ್ರವಾದನಾ ಮಾತುಗಳನ್ನು ಆಡಿದನು. (ಲೂಕ 2:25-35) ವಾಡಿಕೆಯಂತೆ ಅನ್ನಳು ದೇವಾಲಯದಲ್ಲಿದ್ದಳು. “ಆಕೆ ಅದೇ ಗಳಿಗೆಯಲ್ಲಿ,” ಲೂಕನು ವರದಿಸುತ್ತಾನೆ, “ಹತ್ತರಕ್ಕೆ ಬಂದಳು.” (ಲೂಕ 2:38) ಅನ್ನಳ ಮುಪ್ಪಾಗುತ್ತಿರುವ ಕಣ್ಣುಗಳು ಭವಿಷ್ಯತ್ತಿನ ಮೆಸ್ಸೀಯನನ್ನು ಕಂಡಾಗ, ಅವಳೆಷ್ಟು ರೋಮಾಂಚಗೊಂಡಿರಬೇಕು!
ನಲ್ವತ್ತು ದಿನಗಳ ಮುಂಚೆ, “ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ,” ಎಂಬ ಮಾತುಗಳಿಂದ ಬೇತ್ಲೆಹೇಮಿನ ಬಳಿಯಲ್ಲಿದ್ದ ಕುರುಬರು ಬೆಚ್ಚಿಬೀಳುವಂತೆ ದೇವರ ದೂತನು ಮಾಡಿದ್ದನು. ಪರಲೋಕಸೈನ್ಯದವರ ಒಂದು ದೊಡ್ಡ ಗುಂಪು ಯೆಹೋವನನ್ನು ಸ್ತುತಿಸಿತು ಮತ್ತು ಕೂಡಿಸಿ ಹೇಳಿದ್ದು: “ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ.” (ಲೂಕ 2:8-14) ಅಂತೆಯೇ, ಮೆಸ್ಸೀಯನಾಗುವವನ ಕುರಿತು ಸಾಕ್ಷಿಯನ್ನು ಕೊಡುವಂತೆ ಅನ್ನಳು ಈಗ ಪ್ರೇರೇಪಿಸಲ್ಪಟ್ಟಳು!
ಶಿಶುವಾಗಿದ್ದ ಯೇಸುವನ್ನು ಕಂಡೊಡನೆ, ಅನ್ನಳು “ದೇವರಿಂದಾದ ಉಪಕಾರವನ್ನು ನೆನಸಿ ಕೊಂಡಾಡಿದ್ದಲ್ಲದೆ ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ ವಿಷಯವಾಗಿ ಮಾತಾಡುವವಳಾದಳು.” (ಲೂಕ 2:38) ಶಿಶುವಾಗಿದ್ದ ಯೇಸುವನ್ನು ದೇವಾಲಯದಲ್ಲಿ ನೋಡುವ ಸುಯೋಗವಿದ್ದ ವೃದ್ಧ ಸಿಮೆಯೋನನಂತೆಯೇ, ಅವಳು ಕೂಡ ನಿಸ್ಸಂದೇಹವಾಗಿ ವಾಗ್ದಾನಿಸಲ್ಪಟ್ಟ ರಕ್ಷಕನಿಗಾಗಿ ಹಾತೊರೆಯುತ್ತಿದ್ದಳು, ಪ್ರಾರ್ಥಿಸುತ್ತಿದ್ದಳು ಮತ್ತು ಕಾಯುತ್ತಿದ್ದಳು. ಅವಳಿಗೆ, ಯೇಸು ವಾಗ್ದಾನಿಸಲ್ಪಟ್ಟ ರಕ್ಷಕನೆಂಬ ಸುವಾರ್ತೆಯು ಇತರರಿಗೆ ಹೇಳದಂತೆ ಇಟ್ಟುಕೊಳ್ಳಲು ಸಾಧ್ಯವಾಗದಂತಹ ವಾರ್ತೆಯಾಗಿತ್ತು.
ಯೇಸು ದೊಡ್ಡವನಾದಾಗ ಜೀವಂತಳಾಗಿರಲು ಅನ್ನಳು ನಿರೀಕ್ಷಿಸದೆ ಇದ್ದಿರಬಹುದಾದರೂ, ಅವಳು ಏನು ಮಾಡಿದಳು? ಬರುವಂತಹ ಈ ಮೆಸ್ಸೀಯನ ಮೂಲಕ ಪರಿಣಮಿಸಲಿಕ್ಕಿದ್ದ ಬಿಡುಗಡೆಯ ಕುರಿತು ಅವಳು ಎಲ್ಲರಿಗೂ ಆನಂದದಿಂದ ಸಾಕ್ಷಿನೀಡಿದಳು.
ಅನ್ನಳ ಉತ್ತಮ ಮಾದರಿ
ಲೋಕದ ಧಾರ್ಮಿಕ ಜನರಲ್ಲಿ ಎಷ್ಟು ಮಂದಿ ಇಂತಹ ಒಂದು ಸಾಕ್ಷಿಯನ್ನು ನೀಡುವರು ಅಥವಾ 84ರ ಪ್ರಾಯದಲ್ಲಿ ರಾತ್ರಿ ಮತ್ತು ಹಗಲು ಇನ್ನೂ ಆರಾಧನೆಯನ್ನು ಸಲ್ಲಿಸುತ್ತಿರುವರು? ಬಹುಶಃ ಅನೇಕ ವರ್ಷಗಳ ಮುಂಚಿತವಾಗಿಯೇ ಅವರು ವಿಶ್ರಾಂತಿ ವೇತನಕ್ಕಾಗಿ ಕೇಳಿಕೊಳ್ಳುತ್ತಿದ್ದರು. ಅನ್ನ ಮತ್ತು ಸಿಮೆಯೋನರು ಭಿನ್ನರಾಗಿದ್ದರು. ಯೆಹೋವನ ಎಲ್ಲಾ ವೃದ್ಧ ಸೇವಕರಿಗೆ ಅವರು ಉತ್ತಮ ಮಾದರಿಗಳನ್ನು ಸ್ಥಾಪಿಸಿದರು. ಖಂಡಿತವಾಗಿಯೂ, ಅವರು ಯೆಹೋವನ ಆರಾಧನಾ ಗೃಹವನ್ನು ಪ್ರೀತಿಸಿದರು ಮತ್ತು ಆತನನ್ನು ತಮ್ಮ ಪೂರ್ಣ ಹೃದಯದಿಂದ ಸ್ತುತಿಸಿದರು.
ಅನ್ನಳಲ್ಲಿ ನಮಗೆ ಒಬ್ಬಾಕೆ ದೈವಭಕ್ತಿಯುಳ್ಳ ವಿಧವೆಯ ಅತ್ಯುತ್ಕೃಷವ್ಟಾದ ಮಾದರಿಯಿದೆ. ವಾಸ್ತವದಲ್ಲಿ, ಈ ದೀನ ವೃದ್ಧೆಯ ಕುರಿತಾದ ಲೂಕನ ವರ್ಣನೆಯು 1 ತಿಮೊಥೆಯ 5:3-16 ರಲ್ಲಿ ರೂಪಿಸಲಾದ ಒಬ್ಬಾಕೆ ಯೋಗ್ಯ ವಿಧವೆಯ ಅರ್ಹತೆಗಳೊಂದಿಗೆ ಸರಿಯಾಗಿ ಹೋಲುತ್ತದೆ. ಅಂತಹ ಒಬ್ಬಾಕೆ ವಿಧವೆಯು “ಹಗಲಿರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು,” “ಒಬ್ಬ ಗಂಡನಿಗೆ ಮಾತ್ರ ಹೆಂಡತಿ” ಆಗಿರುವಳು ಮತ್ತು ‘ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳೂ,’ ಆಗಿರುವಳೆಂದು ಅಲ್ಲಿ ಅಪೊಸ್ತಲ ಪೌಲನು ಹೇಳುತ್ತಾನೆ. ಅನ್ನ ಆ ರೀತಿಯ ಹೆಂಗಸಾಗಿದ್ದಳು.
ಭೂಮಿಯ ಎಲ್ಲ ಕಡೆಗಳಲ್ಲಿಯೂ, ಯೆಹೋವನ ಸಾಕ್ಷಿಗಳ ಸಾವಿರಾರು ಸಭೆಗಳಲ್ಲಿ ಇಂದು, ದೇವರಿಗೆ ಹಗಲಿರುಳು ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ನಂಬಿಗಸ್ತ ವೃದ್ಧ ವಿಧವೆಯರನ್ನು ನಾವು ಕಾಣುತ್ತೇವೆ. ನಮ್ಮ ಮಧ್ಯದಲ್ಲಿ ಈ ಆಧುನಿಕ ದಿನದ “ಅನ್ನರು” ಇರುವುದನ್ನು ನಾವು ಎಷ್ಟು ಗಣ್ಯಮಾಡುತ್ತೇವೆ!
ಮುಂದುವರಿದ ವಯಸ್ಸಿನಲ್ಲಿಯೂ ಕೂಡ, ಪುರುಷರು ಮತ್ತು ಸ್ತ್ರೀಯರು ದೇವರಿಗೆ ಸಮರ್ಪಣೆಯನ್ನು ಮಾಡಬಲ್ಲರು ಮತ್ತು ಇದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಬಲ್ಲರು. ಯೆಹೋವನನ್ನು ಸೇವಿಸಲು ಮತ್ತು ಪರಲೋಕದಲ್ಲಿ ಈಗ ಸ್ಥಾಪಿಸಲ್ಪಟ್ಟ ಮತ್ತು ಬೇಗನೆ ವಿಧೇಯ ಮಾನವಕುಲಕ್ಕೆ ಸಮೃದ್ಧ ಆಶೀರ್ವಾದಗಳನ್ನು ತರಲಿರುವ ಮೆಸ್ಸೀಯನ ರಾಜ್ಯದ ಕುರಿತು ಸಾಕ್ಷಿನೀಡಲು ವಯಸ್ಸಾದವರು ಎಂದೂ ತೀರ ವೃದ್ಧರಲ್ಲ. ಶತಮಾನಗಳ ಹಿಂದೆ ಅನ್ನಳು ವಿಶೇಷವಾಗಿ ಆಶೀರ್ವದಿಸಲ್ಪಟ್ಟಂತೆ, ದೇವರಿಗೆ ಇಂದು ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ವಯಸ್ಸಾದ ಜನರು, ಅವರ ಮೇಲೆ ಯೆಹೋವನ ಆಶೀರ್ವಾದಕ್ಕೆ ಸಾಕ್ಷಿಯಾಗಿರಬಲ್ಲರು. ಯೆಹೋವನನ್ನು ಸೇವಿಸಲು ಮತ್ತು ಆತನ ಪವಿತ್ರ ನಾಮವನ್ನು ಸ್ತುತಿಸಲು ಅವಳು ತೀರ ವೃದ್ಧೆಯಾಗಿರಲಿಲ್ಲ—ಮತ್ತು ಅವರು ಸಹ ವೃದ್ಧರಾಗಿರುವುದಿಲ್ಲ.