ಆರೋಗ್ಯಕರ ಬೋಧನೆಯನ್ನು ನಿಮ್ಮ ಜೀವನದ ರೀತಿಯಾಗಿ ಮಾಡಿರಿ
“ದೈವಿಕ ಭಕ್ತಿಯು ಸಕಲ ವಿಧಗಳಲ್ಲಿ ಪ್ರಯೋಜನಕರ.”—1 ತಿಮೊಥೆಯ 4:8,
1, 2. ಜನರು ಎಷ್ಟರ ಮಟ್ಟಿಗೆ ತಮ್ಮ ಆರೋಗ್ಯಕ್ಕಾಗಿ ಚಿಂತೆಯನ್ನು ತೋರಿಸುತ್ತಾರೆ, ಮತ್ತು ಯಾವ ಪರಿಣಾಮದೊಂದಿಗೆ?
ಜೀವನದಲ್ಲಿರುವ ಅತ್ಯಮೂಲ್ಯವಾದ ಸ್ವತ್ತುಗಳಲ್ಲಿ ಒಳ್ಳೆಯ ಆರೋಗ್ಯವು ಒಂದಾಗಿದೆ ಎಂದು ಹೆಚ್ಚಿನ ಜನರು ಮನಃಪೂರ್ವಕವಾಗಿ ಒಪ್ಪಿಕೊಳ್ಳುವರು. ತಮ್ಮನ್ನು ಶಾರೀರಿಕವಾಗಿ ಸ್ವಸ್ಥರಾಗಿಟ್ಟುಕೊಳ್ಳಲು ಮತ್ತು ಅಗತ್ಯವಿದ್ದಾಗ ಯೋಗ್ಯವಾದ ವೈದ್ಯಕೀಯ ಲಕ್ಷ್ಯವನ್ನು ತಾವು ಪಡೆಯುತ್ತೇವೆಂಬುದನ್ನು ನಿಶ್ಚಯಮಾಡಿಕೊಳ್ಳಲು, ಅವರು ಸಮಯ ಮತ್ತು ಹಣದ ದೊಡ್ಡ ಮೊತ್ತವನ್ನು ಸಮರ್ಪಿಸುತ್ತಾರೆ. ಉದಾಹರಣೆಗೆ, ಅಮೆರಿಕದಲ್ಲಿ, ಇತ್ತೀಚೆಗಿನ ಒಂದು ವರ್ಷಕ್ಕಾಗಿ ವಾರ್ಷಿಕ ಆರೋಗ್ಯ ಪೋಷಣೆಯ ವೆಚ್ಚವು 900 ಬಿಲಿಯನ್ ಡಾಲರುಗಳಿಗಿಂತ ಹೆಚ್ಚಾಗಿತ್ತು. ಅದು ಒಂದು ವರ್ಷಕ್ಕೆ, ಆ ದೇಶದಲ್ಲಿರುವ ಪ್ರತಿಯೊಬ್ಬ ಪುರುಷ, ಸ್ತ್ರೀ, ಮತ್ತು ಮಗುವಿಗೆ 3,000 ಡಾಲರುಗಳಿಗಿಂತ ಹೆಚ್ಚಾಗಿದೆ, ಮತ್ತು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಪ್ರತಿಯೊಬ್ಬನಿಗಿರುವ ವೆಚ್ಚವು ಹೆಚ್ಚುಕಡಿಮೆ ಸಮನಾಗಿದೆ.
2 ಸಮಯ, ಶಕ್ತಿ, ಮತ್ತು ಹಣದ ಈ ವೆಚ್ಚವೆಲ್ಲವು ಏನನ್ನು ತಂದಿದೆ? ಒಟ್ಟಿನಲ್ಲಿ, ಇತಿಹಾಸದಲ್ಲಿ ಬೇರೆ ಯಾವುದೇ ಸಮಯಕ್ಕಿಂತ ಇಂದು ಅಧಿಕ ಮುಂದುವರಿದ ವೈದ್ಯಕೀಯ ಸೌಕರ್ಯಗಳು ಮತ್ತು ಒದಗಿಸುವಿಕೆಗಳು ನಮಗಿವೆ ಎಂಬ ಸಂಗತಿಯನ್ನು ಯಾರೂ ಖಂಡಿತ ನಿರಾಕರಿಸಲಾರರು. ಆದರೂ, ಇದು ತಾನಾಗಿಯೇ ಆರೋಗ್ಯಕರ ಜೀವಿತವಾಗಿ ರೂಪಾಂತರಗೊಳ್ಳುವುದಿಲ್ಲ. ವಾಸ್ತವವಾಗಿ, ಅಮೆರಿಕ ದೇಶಕ್ಕಾಗಿ ಒಂದು ಯೋಜಿತ ಆರೋಗ್ಯ ಪೋಷಣೆಯ ಕಾರ್ಯಕ್ರಮವನ್ನು ವಿವರಿಸುವ ಒಂದು ಭಾಷಣದಲ್ಲಿ, “ಈ ದೇಶದಲ್ಲಿರುವ ಹಿಂಸೆಯ ವಿಪರೀತ ನಷ್ಟಗಳಿಗೆ” ಕೂಡಿಸಿ, ಬೇರೆ ಯಾವುದೇ ಅಭಿವೃದ್ಧಿ ಹೊಂದಿರುವ ರಾಷ್ಟ್ರಕ್ಕಿಂತ ಅಮೆರಿಕದ ನಿವಾಸಿಗಳಲ್ಲಿ “ಏಯ್ಡ್ಸ್ನ, ಧೂಮಪಾನ ಮತ್ತು ಅತಿಯಾಗಿ ಕುಡಿಯುವುದರ, ಹದಿವಯಸ್ಕ ಗರ್ಭಧಾರಣೆಗಳ, ಹುಟ್ಟುವಾಗ ಕಡಿಮೆ ತೂಕವಿರುವ ಶಿಶುಗಳ ಅತಿಹೆಚ್ಚು ಪ್ರಮಾಣವಿದೆ” ಎಂದು ಅಧ್ಯಕ್ಷರು ಸೂಚಿಸಿದರು. ಅವರ ತೀರ್ಮಾನ? “ಒಂದು ಜನಾಂಗದೋಪಾದಿಯಲ್ಲಿ ನಾವು ಆರೋಗ್ಯವಂತರಾಗಿರಲು ನಿಜವಾಗಿಯೂ ಬಯಸುವುದಾದರೆ ನಮ್ಮ ರೀತಿನೀತಿಗಳನ್ನು ನಾವು ಬದಲಾಯಿಸಲೇಬೇಕು.”—ಗಲಾತ್ಯ 6:7, 8.
ಆರೋಗ್ಯಕರವಾದ ಒಂದು ಜೀವನ ರೀತಿ
3. ಪ್ರಾಚೀನ ಗ್ರೀಕ್ ಸಂಸ್ಕೃತಿಯ ನೋಟದಲ್ಲಿ, ಯಾವ ಸಲಹೆಯನ್ನು ಪೌಲನು ನೀಡಿದನು?
3 ಪ್ರಥಮ ಶತಮಾನದಲ್ಲಿ, ಶಾರೀರಿಕ ಅಭಿವೃದ್ಧಿ, ದೇಹವರ್ಧನೆ, ಮತ್ತು ಅಂಗಸಾಧನೆಯ ಸ್ಪರ್ಧೆಗಳಿಗಾಗಿದ್ದ ತಮ್ಮ ಆಸಕ್ತಿಗಾಗಿ ಗ್ರೀಕರು ಹೆಸರುವಾಸಿಯಾಗಿದ್ದರು. ಈ ಹಿನ್ನೆಲೆಯಲ್ಲಿ, ಯೌವನಸ್ಥನಾದ ತಿಮೊಥೆಯನಿಗೆ ಅಪೊಸ್ತಲ ಪೌಲನು ಹೀಗೆ ಬರೆಯಲು ಪ್ರೇರೇಪಿಸಲ್ಪಟ್ಟನು: “ದೈಹಿಕ ತರಬೇತು ಸ್ವಲ್ಪ ಮಟ್ಟಿಗೆ ಪ್ರಯೋಜನಕರ; ಆದರೆ ದೈವಿಕ ಭಕ್ತಿಯು ಸಕಲ ವಿಧಗಳಲ್ಲಿ ಪ್ರಯೋಜನಕರ. ಏಕೆಂದರೆ ಅದು ಈಗಿನ ಮತ್ತು ಬರಲಿರುವ ಜೀವನದ ವಾಗ್ದಾನಗಳನ್ನು ಹಿಡಿದಿರುತ್ತದೆ.” (1 ತಿಮೊಥೆಯ 4:8, NW) ಹೀಗೆ, ವೈದ್ಯಕೀಯ ಯಾ ಶಾರೀರಿಕ ಒದಗಿಸುವಿಕೆಗಳು ನಿಜವಾಗಿಯೂ ಆರೋಗ್ಯಕರವಾದ ಜೀವನ ರೀತಿಯ ಖಾತರಿಯನ್ನು ಕೊಡುವುದಿಲ್ಲ ಎಂಬ, ಜನರು ಇಂದು ಒಪ್ಪಿಕೊಳ್ಳುತ್ತಿರುವ ಸಂಗತಿಯನ್ನು ಪೌಲನು ಸೂಚಿಸುತ್ತಾ ಇದ್ದನು. ಆದರೂ, ಅನಿವಾರ್ಯವಾದ ವಿಷಯವು ಆತ್ಮಿಕ ಕ್ಷೇಮ ಮತ್ತು ದೈವಿಕ ಭಕ್ತಿಯ ವಿಕಸನವೆಂಬ ಆಶ್ವಾಸನೆಯನ್ನು ಪೌಲನು ನಮಗೆ ಕೊಡುತ್ತಾನೆ.
4. ದೈವಿಕ ಭಕ್ತಿಯ ಪ್ರಯೋಜನಗಳೇನು?
4 ಇಂತಹ ಮಾರ್ಗವು “ಈಗಿನ” ಜೀವನಕ್ಕೆ ಪ್ರಯೋಜನಕಾರಿಯಾಗಿದೆ ಯಾಕೆಂದರೆ, ದೇವಭಕ್ತಿರಹಿತ ಜನರು, ಯಾ ಕೇವಲ “ಭಕ್ತಿಯ ವೇಷ [ಯಾ, ತೋರಿಕೆ]” ವಿರುವವರು ತಮ್ಮ ಮೇಲೆ ಹೊರಿಸಿಕೊಳ್ಳುವ ಎಲ್ಲ ಹಾನಿಕಾರಕ ವಿಷಯಗಳಿಂದ ಅದು ಒಂದು ರಕ್ಷಣೆಯನ್ನು ಒದಗಿಸುತ್ತದೆ. (2 ತಿಮೊಥೆಯ 3:5; ಜ್ಞಾನೋಕ್ತಿ 23:29, 30; ಲೂಕ 15:11-16; 1 ಕೊರಿಂಥ 6:18; 1 ತಿಮೊಥೆಯ 6:9, 10) ದೈವಿಕ ಭಕ್ತಿಯು ತಮ್ಮ ಜೀವಿತಗಳನ್ನು ರೂಪಿಸುವಂತೆ ಅನುಮತಿಸುವವರೆಲ್ಲರಿಗೆ ದೇವರ ನಿಯಮಗಳಿಗಾಗಿ ಮತ್ತು ಆವಶ್ಯಕತೆಗಳಿಗಾಗಿ ಆರೋಗ್ಯಕರ ಗೌರವವಿದೆ, ಮತ್ತು ದೇವರ ಆರೋಗ್ಯಕರ ಬೋಧನೆಯನ್ನು ತಮ್ಮ ಜೀವನದ ರೀತಿಯಾಗಿ ಮಾಡುವಂತೆ ಅದು ಅವರನ್ನು ಪ್ರಚೋದಿಸುತ್ತದೆ. ಇಂತಹ ಒಂದು ಮಾರ್ಗವು ಅವರಿಗೆ ಆತ್ಮಿಕ ಹಾಗೂ ಶಾರೀರಿಕ ಆರೋಗ್ಯವನ್ನು, ಸಂತೃಪ್ತಿಯನ್ನು, ಮತ್ತು ಸಂತೋಷವನ್ನು ತರುತ್ತದೆ. ಮತ್ತು ಅವರು “ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ . . . ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳು” ತ್ತಿದ್ದಾರೆ.—1 ತಿಮೊಥೆಯ 6:19.
5. ತೀತನಿಗೆ ಬರೆದ ತನ್ನ ಪತ್ರದ ಎರಡನೆಯ ಅಧ್ಯಾಯದಲ್ಲಿ ಯಾವ ಉಪದೇಶಗಳನ್ನು ಪೌಲನು ಒದಗಿಸಿದನು?
5 ದೇವರ ಆರೋಗ್ಯಕರ ಬೋಧನೆಯ ಮೂಲಕ ಮಾರ್ಗದರ್ಶಿಸಲ್ಪಟ್ಟ ಜೀವಿತವು ಇಂತಹ ಆಶೀರ್ವಾದಗಳನ್ನು ಈಗ ಮತ್ತು ಭವಿಷ್ಯತ್ತಿನಲ್ಲಿ ತರುವುದರಿಂದ, ದೇವರ ಆರೋಗ್ಯಕರ ಬೋಧನೆಯನ್ನು ನಮ್ಮ ಜೀವನದ ರೀತಿಯಾಗಿ ಹೇಗೆ ಮಾಡಸಾಧ್ಯವಿದೆ ಎಂದು ಪ್ರಾಯೋಗಿಕ ಪರಿಭಾಷೆಯಲ್ಲಿ ನಾವು ತಿಳಿದುಕೊಳ್ಳುವ ಅಗತ್ಯವಿದೆ. ಉತ್ತರವನ್ನು ಅಪೊಸ್ತಲ ಪೌಲನು ತೀತನಿಗೆ ಬರೆದ ತನ್ನ ಪತ್ರದಲ್ಲಿ ಒದಗಿಸಿದನು. ಆ ಪುಸ್ತಕದ ಎರಡನೆಯ ಅಧ್ಯಾಯಕ್ಕೆ ವಿಶೇಷವಾದ ಗಮನವನ್ನು ನಾವು ಕೊಡುವೆವು, ಅಲ್ಲಿ ಅವನು ತೀತನಿಗೆ “ಸ್ವಸ್ಥಬೋಧನೆಗೆ ಅನುಗುಣವಾಗಿ ಉಪದೇಶಮಾಡು” ಎಂಬುದಾಗಿ ಉಪದೇಶಿಸಿದನು. ಖಂಡಿತವಾಗಿ ನಾವೆಲ್ಲರೂ, ಯುವ ಜನರು ಮತ್ತು ವೃದ್ಧರು, ಗಂಡಸರು ಮತ್ತು ಹೆಂಗಸರು, ಇಂತಹ “ಸ್ವಸ್ಥಬೋಧನೆ” ಯಿಂದ ಇಂದು ಪ್ರಯೋಜನ ಪಡೆಯಬಲ್ಲೆವು.—ತೀತ 1:4, 5; 2:1.
ವೃದ್ಧ ಪುರುಷರಿಗಾಗಿ ಸಲಹೆ
6. ಯಾವ ಸಲಹೆಯನ್ನು ಪೌಲನು “ವೃದ್ಧ ಪುರುಷ” ರಿಗೆ ನೀಡಿದನು, ಮತ್ತು ಹಾಗೆ ಮಾಡುವುದು ಅವನ ವತಿಯಿಂದ ದಯೆಯಾಗಿತ್ತು ಯಾಕೆ?
6 ಪ್ರಥಮವಾಗಿ, ಸಭೆಯಲ್ಲಿರುವ ವೃದ್ಧ ಪುರುಷರಿಗಾಗಿ ಪೌಲನಲ್ಲಿ ಸ್ವಲ್ಪ ಸಲಹೆಯಿತ್ತು. ದಯವಿಟ್ಟು ತೀತ 2:2 (NW)ನ್ನು ಓದಿರಿ. “ವೃದ್ಧರು” ಒಂದು ಗುಂಪಿನೋಪಾದಿಯಲ್ಲಿ, ಗೌರವಿಸಲ್ಪಡುತ್ತಾರೆ ಮತ್ತು ನಂಬಿಕೆ ಹಾಗೂ ನಿಷ್ಠೆಯ ಮಾದರಿಗಳಂತೆ ನೋಡಲ್ಪಡುತ್ತಾರೆ. (ಯಾಜಕಕಾಂಡ 19:32; ಜ್ಞಾನೋಕ್ತಿ 16:31) ಇದರಿಂದಾಗಿ, ಅತಿಯಾಗಿ ಗಂಭೀರವಾಗಿರುವುದಕ್ಕಿಂತ ಕಡಿಮೆಯಾಗಿರುವ ವಿಷಯಗಳಲ್ಲಿ ವೃದ್ಧ ಪುರುಷರಿಗೆ ಸಲಹೆಯನ್ನು ಯಾ ಸೂಚನೆಗಳನ್ನು ನೀಡಲು ಇತರರು ಹಿಂಜರಿಯಬಹುದು. (ಯೋಬ 32:6, 7; 1 ತಿಮೊಥೆಯ 5:1) ಆದುದರಿಂದ, ಪ್ರಥಮವಾಗಿ ವೃದ್ಧ ಪುರುಷರನ್ನು ಸಂಬೋಧಿಸಿದ್ದು ಪೌಲನ ವಿಷಯದಲ್ಲಿ ದಯೆಯಾಗಿದೆ, ಮತ್ತು ಪೌಲನ ಮಾತುಗಳನ್ನು ಅವರು ಹೃದಯಕ್ಕೆ ತೆಗೆದುಕೊಂಡು, ಪೌಲನಂತೆ ತಾವೂ ಅನುಕರಣಾರ್ಹರಾಗಿದ್ದೇವೆಂದು ದೃಢತೆಯಿಂದಿರುವುದು ಅವರಿಗಾಗಿ ಒಳ್ಳೆಯದಾಗಿರಬಹುದು.—1 ಕೊರಿಂಥ 11:1; ಫಿಲಿಪ್ಪಿ 3:17.
7, 8. (ಎ) “ಮಿತಸ್ವಭಾವಿ” ಗಳಾಗಿರುವುದು ಏನನ್ನು ಒಳಗೊಂಡಿದೆ? (ಬಿ) “ಗಂಭೀರ” ವಾಗಿರುವುದು “ಸ್ವಸ್ಥಮನಸ್ಸಿನವ” ರಾಗಿರುವುದರೊಂದಿಗೆ ಏಕೆ ಸರಿದೂಗಿಸಲ್ಪಡಬೇಕು?
7 ವೃದ್ಧ ಕ್ರೈಸ್ತ ಪುರುಷರು, ಪ್ರಥಮವಾಗಿ, “ಮಿತಸ್ವಭಾವಿಗಳು” ಆಗಿರತಕ್ಕದ್ದು. ಮೂಲ ಶಬ್ದವು ಕುಡಿಯುವ ಹವ್ಯಾಸಕ್ಕೆ ಸೂಚಿಸಬಲ್ಲದಾದರೂ, (“ಸಂಯಮವುಳ್ಳ,” ಕಿಂಗ್ಡಂ ಇಂಟರ್ಲಿನೀಯರ್), ಎಚ್ಚರವಾಗಿ, ಸ್ಪಷ್ಟದೃಷ್ಟಿ, ಯಾ ಜಾಗ್ರತೆಯಿಂದಿರುವುದರ ಅರ್ಥವು ಕೂಡ ಅದಕ್ಕಿದೆ. (2 ತಿಮೊಥೆಯ 4:5; 1 ಪೇತ್ರ 1:13) ಹೀಗೆ, ಕುಡಿಯುವ ವಿಷಯದಲ್ಲಾಗಲಿ ಇತರ ವಿಷಯಗಳಲ್ಲಾಗಲಿ, ವೃದ್ಧ ಪುರುಷರು ಇತಿಮಿತಿಯುಳ್ಳವರಾಗಿರಬೇಕು, ಅತಿರೇಕ ಯಾ ವಿಪರೀತ ಹವ್ಯಾಸದವರಾಗಿರಬಾರದು.
8 ತದನಂತರ, ಅವರು “ಗಂಭೀರ” ಮತ್ತು “ಸ್ವಸ್ಥಮನಸ್ಸಿನವರು” ಆಗಿರತಕ್ಕದ್ದು. ಗಂಭೀರ ಯಾ ಗೌರವವುಳ್ಳವರು, ಮಾನ್ಯ, ಮತ್ತು ಗೌರವಾರ್ಹರಾಗಿರುವುದು, ಸಾಧಾರಣವಾಗಿ ವಯಸ್ಸಿನೊಂದಿಗೆ ಬರುತ್ತದೆ. ಕೆಲವರಾದರೊ, ಬಹಳಷ್ಟು ಗಂಭೀರವಾಗಿದ್ದು, ಯುವ ಜನರ ಉತ್ಸಾಹವುಳ್ಳ ರೀತಿಗಳನ್ನು ಸಹಿಸದಿರುವ ಪ್ರವೃತ್ತಿಯುಳ್ಳವರಾಗಬಹುದು. (ಜ್ಞಾನೋಕ್ತಿ 20:29) ಆದುದರಿಂದಲೇ “ಗಂಭೀರ”ವು “ಸ್ವಸ್ಥಮನಸ್ಸಿ” ನೊಂದಿಗೆ ಸಮವಾಗಿಸಲ್ಪಟ್ಟಿದೆ. ವಯಸ್ಸಿಗೆ ಅನುಗುಣವಾಗಿರುವ ಗಾಂಭೀರ್ಯವನ್ನು ವೃದ್ಧ ಪುರುಷರು ಕಾಪಾಡಿಕೊಳ್ಳಬೇಕು, ಆದರೂ ಅದೇ ಸಮಯದಲ್ಲಿ ಅವರು ಸಮತೂಕವುಳ್ಳವರೂ, ತಮ್ಮ ಭಾವನೆಗಳ ಮತ್ತು ಪ್ರವೃತ್ತಿಗಳ ಪೂರ್ಣ ನಿಯಂತ್ರಣವನ್ನು ಹೊಂದಿರುವವರೂ ಆಗಿರಬೇಕು.
9. ವೃದ್ಧ ಪುರುಷರೇಕೆ ನಂಬಿಕೆ ಮತ್ತು ಪ್ರೀತಿ ಹಾಗೂ ವಿಶೇಷವಾಗಿ ತಾಳ್ಮೆಯಲ್ಲಿ ಆರೋಗ್ಯವಂತರಾಗಿರಬೇಕು?
9 ಕೊನೆಯದಾಗಿ, ವೃದ್ಧ ಪುರುಷರು “ನಂಬಿಕೆ ಪ್ರೀತಿ ತಾಳ್ಮೆ ಇವುಗಳಲ್ಲಿ ಸ್ವಸರೂ ಆಗಿರಬೇಕು.” ಅನೇಕ ಬಾರಿ ತನ್ನ ಬರಹಗಳಲ್ಲಿ ಪೌಲನು, ನಂಬಿಕೆ ಮತ್ತು ಪ್ರೀತಿಯನ್ನು ನಿರೀಕ್ಷೆಯೊಂದಿಗೆ ಪಟ್ಟಿಮಾಡಿದನು. (1 ಕೊರಿಂಥ 13:13; 1 ಥೆಸಲೊನೀಕ 1:3; 5:8) ಇಲ್ಲಿ ಅವನು “ನಿರೀಕ್ಷೆ” ಯನ್ನು “ತಾಳ್ಮೆ” ಯಿಂದ ಭರ್ತಿಮಾಡಿದನು. ಬಹುಶಃ, ಅದು ಮುಂದುವರಿಯುವ ವಯಸ್ಸಿನೊಂದಿಗೆ ಸರಳವಾಗಿ ನುಸುಳಬಲ್ಲ ಅನಿವಾರ್ಯತೆಯ ಅನಿಸಿಕೆಯ ಕಾರಣದಿಂದಿರಬೇಕು. (ಪ್ರಸಂಗಿ 12:1) ಹಾಗಿದ್ದರೂ, ಯೇಸು ಸೂಚಿಸಿದಂತೆ, “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:13) ಅದರೊಂದಿಗೆ, ವೃದ್ಧರು ಉಳಿದವರಿಗೆ ಕೇವಲ ತಮ್ಮ ವಯಸ್ಸು ಯಾ ಅನುಭವದಿಂದ ಮಾತ್ರವಲ್ಲ ಆದರೆ ತಮ್ಮ ಸ್ಫುಟವಾದ ಆತ್ಮಿಕ ಗುಣಗಳಾದ—ನಂಬಿಕೆ, ಪ್ರೀತಿ, ಮತ್ತು ತಾಳ್ಮೆ—ಯಿಂದ ಯೋಗ್ಯ ಮಾದರಿಗಳಾಗಿದ್ದಾರೆ.
ವೃದ್ಧ ಸ್ತ್ರೀಯರಿಗಾಗಿ
10. ಸಭೆಯಲ್ಲಿರುವ “ವೃದ್ಧ ಸ್ತ್ರೀಯರಿಗಾಗಿ” ಯಾವ ಸಲಹೆಯನ್ನು ಪೌಲನು ಒದಗಿಸುತ್ತಾನೆ?
10 ಪೌಲನು ಅನಂತರ ತನ್ನ ಗಮನವನ್ನು ಸಭೆಯಲ್ಲಿರುವ ವೃದ್ಧ ಸ್ತ್ರೀಯರ ಕಡೆಗೆ ತಿರುಗಿಸಿದನು. ದಯವಿಟ್ಟು ತೀತ 2:3 (NW)ನ್ನು ಓದಿರಿ. “ವೃದ್ಧ ಸ್ತ್ರೀಯರು,” “ವೃದ್ಧರ” ಹೆಂಡತಿಯರನ್ನು ಮತ್ತು ಇತರ ಸದಸ್ಯರ ತಾಯಂದಿರನ್ನು ಹಾಗೂ ಅಜ್ಜಿಯರನ್ನು ಸೇರಿಸಿ, ಸಭೆಯಲ್ಲಿರುವ ಸ್ತ್ರೀಯರಲ್ಲಿ ಹಿರಿಯ ಸದಸ್ಯರಾಗಿದ್ದಾರೆ. ಸಭೆಯಲ್ಲಿ, ಒಳ್ಳೆಯದಕ್ಕಾಗಲಿ ಯಾ ಕೆಟ್ಟದಕ್ಕಾಗಲಿ ಅವರು ಗಣನೀಯ ಪ್ರಭಾವವನ್ನು ಬೀರಬಲ್ಲರು. ಆದುದರಿಂದಲೇ ಪೌಲನು ತನ್ನ ಮಾತುಗಳನ್ನು “ಹಾಗೆಯೇ” ಎಂಬ ಪದದಿಂದ ಪರಿಚಯಿಸಿದನು, ಅಂದರೆ ಸಭೆಯಲ್ಲಿರುವ ತಮ್ಮ ಪಾತ್ರವನ್ನು ನೆರವೇರಿಸುವ ಸಲುವಾಗಿ “ವೃದ್ಧ ಸ್ತ್ರೀಯರು” ಕೂಡ ಕೆಲವು ನಿರ್ದಿಷ್ಟ ಜವಾಬ್ದಾರಿಗಳ ಅನುಸಾರವಾಗಿ ಬಾಳಬೇಕು.
11. ಭಕ್ತಿಯುಕ್ತ ವರ್ತನೆ ಎಂದರೇನು?
11 ಪ್ರಥಮವಾಗಿ, “ವೃದ್ಧ ಸ್ತ್ರೀಯರು ವರ್ತನೆಯಲ್ಲಿ ಭಕ್ತಿಯುಕ್ತರೂ . . . ಆಗಿರಲಿ,” ಎಂದು ಪೌಲನು ಹೇಳಿದನು. ನಡತೆ ಮತ್ತು ತೋರಿಕೆ—ಎರಡರಲ್ಲಿಯೂ ಪ್ರತಿಬಿಂಬಿಸಲ್ಪಟ್ಟಂತೆ, “ವರ್ತನೆ”ಯು ಒಬ್ಬ ವ್ಯಕ್ತಿಯ ಆಂತರಿಕ ಮನೋಭಾವ ಮತ್ತು ವ್ಯಕ್ತಿತ್ವದ ಬಾಹ್ಯ ಅಭಿವ್ಯಕ್ತಿಯಾಗಿದೆ. (ಮತ್ತಾಯ 12:34, 35) ಹಾಗಾದರೆ, ಒಬ್ಬಾಕೆ ವೃದ್ಧ ಕ್ರೈಸ್ತ ಸ್ತ್ರೀಯ ಮನೋಭಾವ ಯಾ ವ್ಯಕ್ತಿತ್ವವು ಏನಾಗಿರಬೇಕು? ಒಂದೇ ಮಾತಿನಲ್ಲಿ, “ಭಕ್ತಿಯುಕ್ತರು.” “ದೇವರಿಗೆ ಮೀಸಲಾಗಿಟ್ಟ ವ್ಯಕ್ತಿಗಳಲ್ಲಿ, ಕ್ರಿಯೆಗಳಲ್ಲಿ ಯಾ ವಸ್ತುಗಳಲ್ಲಿ ಯೋಗ್ಯವಾಗಿರುವಂತಹ” ಎಂಬ ಅರ್ಥ ಕೊಡುವ ಗ್ರೀಕ್ ಪದದಿಂದ ಇದು ಭಾಷಾಂತರಿಸಲಾಗಿದೆ. ಅವರು ಇತರರ ಮೇಲೆ, ವಿಶೇಷವಾಗಿ ಸಭೆಯಲ್ಲಿರುವ ಯುವತಿಯರ ಮೇಲೆ ಬೀರುವ ಪ್ರಭಾವದ ದೃಷ್ಟಿಯಲ್ಲಿ ಇದು ಖಂಡಿತವಾಗಿಯೂ ಸೂಕ್ತವಾದ ಸಲಹೆಯಾಗಿದೆ.—1 ತಿಮೊಥೆಯ 2:9, 10.
12. ನಾಲಿಗೆಯ ಯಾವ ಅಪಪ್ರಯೋಗವನ್ನು ಎಲ್ಲರು ತೊರೆಯಬೇಕು?
12 ಮುಂದೆ ಎರಡು ನಕಾರಾತ್ಮಕ ವೈಶಿಷ್ಟ್ಯಗಳು ಬರುತ್ತವೆ: “ಚಾಡಿಹೇಳುವವರೂ ದ್ರಾಕ್ಷಾಮದ್ಯಕ್ಕೆ ಅಡಿಯಾಳುಗಳೂ ಆಗಿರದೆ” ಇರುವವರು. ಇವೆರಡನ್ನು ಒಟ್ಟಿಗೆ ಸೇರಿಸಿರುವುದು ಆಶ್ಚರ್ಯಕರವಾಗಿದೆ. “ಪ್ರಾಚೀನ ಸಮಯಗಳಲ್ಲಿ, ದ್ರಾಕ್ಷಾಮದ್ಯವು ಏಕಮಾತ್ರ ಪಾನೀಯವಾಗಿದ್ದಾಗ,” ಪ್ರೊಫೆಸರ್ ಇ. ಎಫ್. ಸ್ಕಾಟ್ ಗಮನಿಸುವುದು, “ತಮ್ಮ ಚಿಕ್ಕ ಮದ್ಯ ಗೋಷ್ಠಿಗಳಲ್ಲಿ ವೃದ್ಧ ಸ್ತ್ರೀಯರು ತಮ್ಮ ನೆರೆಯವರ ಚಾರಿತ್ರ್ಯವನ್ನು ಛಿದ್ರಮಾಡುತ್ತಿದ್ದರು.” ಸಾಮಾನ್ಯವಾಗಿ ಪುರುಷರಿಗಿಂತ ಸ್ತ್ರೀಯರು ಜನರ ಕುರಿತು ಹೆಚ್ಚು ಚಿಂತಿಸುತ್ತಾರೆ, ಅದು ಪ್ರಸಂಶನೀಯ. ಆದರೆ ಚಿಂತೆಯು, ವಿಶೇಷವಾಗಿ ನಾಲಿಗೆ ಕುಡಿತದಿಂದ ಸಡಿಲಗೊಳಿಸಲ್ಪಟ್ಟಾಗ ಹರಟೆ ಮತ್ತು ಚಾಡಿಯಾಗಿಯೂ ಕೂಡ ಕ್ಷಯಿಸಬಲ್ಲದು. (ಜ್ಞಾನೋಕ್ತಿ 23:33) ಖಂಡಿತವಾಗಿಯೂ, ಆರೋಗ್ಯಕರ ಜೀವನ ರೀತಿಯನ್ನು ಬೆನ್ನಟ್ಟುತ್ತಿರುವವರೆಲ್ಲರು, ಪುರುಷರು ಮತ್ತು ಸ್ತ್ರೀಯರು, ಈ ಅಪಾಯಕ್ಕೆ ಜಾಗರೂಕರಾಗಿರುವುದು ಒಳ್ಳೆಯದು.
13. ವೃದ್ಧ ಸ್ತ್ರೀಯರು ಯಾವ ರೀತಿಗಳಲ್ಲಿ ಬೋಧಕರಾಗಿರಬಲ್ಲರು?
13 ಲಭ್ಯವಿರುವ ಸಮಯವನ್ನು ರಚನಾತ್ಮಕ ವಿಧದಲ್ಲಿ ಉಪಯೋಗಿಸಲಿಕ್ಕಾಗಿ, ವೃದ್ಧ ಸ್ತ್ರೀಯರು “ಸದ್ಬೋಧನೆ ಹೇಳುವವರು” ಆಗಿರುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. ಸಭೆಯಲ್ಲಿ ಸ್ತ್ರೀಯರು ಬೋಧಕರಾಗಿರಬಾರದೆಂಬ ಸ್ಪಷ್ಟವಾಗಿದ ಉಪದೇಶಗಳನ್ನು ಪೌಲನು ಬೇರೊಂದು ಕಡೆಯಲ್ಲಿ ಕೊಟ್ಟನು. (1 ಕೊರಿಂಥ 14:34; 1 ತಿಮೊಥೆಯ 2:12) ಹಾಗಿದ್ದರೂ, ಇದು ಅವರನ್ನು ದೇವರ ಅಮೂಲ್ಯ ಜ್ಞಾನವನ್ನು ತಮ್ಮ ಮನೆವಾರ್ತೆಯಲ್ಲಿ ಮತ್ತು ಸಾರ್ವಜನಿಕರಿಗೆ ನೀಡುವುದರಿಂದ ತಡೆಯುವುದಿಲ್ಲ. (2 ತಿಮೊಥೆಯ 1:5; 3:14, 15) ಮುಂದಿನ ವಚನಗಳು ತೋರಿಸುವಂತೆ, ಸಭೆಯಲ್ಲಿರುವ ಯುವ ಸ್ತ್ರೀಯರಿಗೆ ಕ್ರೈಸ್ತ ಮಾದರಿಗಳಾಗಿರುವ ಮೂಲಕ ಹೆಚ್ಚಿನ ಒಳಿತನ್ನು ಕೂಡ ಅವರು ಸಾಧಿಸಬಲ್ಲರು.
ಯುವ ಸ್ತ್ರೀಯರಿಗಾಗಿ
14. ತಮ್ಮ ಕೆಲಸಗಳನ್ನು ನೋಡಿಕೊಳ್ಳುವುದರಲ್ಲಿ ಯುವ ಕ್ರೈಸ್ತ ಸ್ತ್ರೀಯರು ಸಮತೂಕವನ್ನು ಹೇಗೆ ತೋರಿಸಬಲ್ಲರು?
14 “ಸದ್ಬೋಧನೆ ಹೇಳುವವರು” ಆಗಿರುವಂತೆ ವೃದ್ಧ ಸ್ತ್ರೀಯರನ್ನು ಉತ್ತೇಜಿಸುವಲ್ಲಿ, ಪೌಲನು ಪ್ರತ್ಯೇಕವಾಗಿ ಯುವ ಸ್ತ್ರೀಯರ ಕುರಿತು ಉಲ್ಲೇಖಿಸಿದನು. ದಯವಿಟ್ಟು ತೀತ 2:4, 5ನ್ನು ಓದಿರಿ. ಹೆಚ್ಚಿನ ಉಪದೇಶವು ಗೃಹಕೃತ್ಯದ ಕಾರ್ಯಗಳ ಮೇಲೆ ಕೇಂದ್ರೀಕರಿಸುತ್ತದಾದರೂ, ತಮ್ಮ ಜೀವಿತಗಳನ್ನು ಪ್ರಾಪಂಚಿಕ ಚಿಂತೆಗಳು ಆಳುವಂತೆ ಅನುಮತಿಸುತ್ತಾ, ಯುವ ಕ್ರೈಸ್ತ ಸ್ತ್ರೀಯರು ಅತಿರೇಕಕ್ಕೆ ಹೋಗಬಾರದು. ಬದಲಿಗೆ, ಅವರು “ಸ್ವಸ್ಥಮನಸ್ಸುಳ್ಳವರೂ, ಪತಿವ್ರತೆಯರೂ, . . . ಸುಶೀಲೆಯರೂ,” ಆಗಿರತಕ್ಕದ್ದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, “ದೇವರ ವಾಕ್ಯಕ್ಕೆ ದೂಷಣೆಯಾಗದಂತೆ” ಕ್ರೈಸ್ತ ತಲೆತನದ ಏರ್ಪಾಡನ್ನು ಅವರು ಬೆಂಬಲಿಸಲು ಸಿದ್ಧರಾಗಿರಬೇಕು.
15. ಸಭೆಯಲ್ಲಿರುವ ಅನೇಕ ಯುವ ಸ್ತ್ರೀಯರು ಯಾಕೆ ಪ್ರಶಂಸಿಸಲ್ಪಡಬೇಕು?
15 ಇಂದು, ಕುಟುಂಬದ ದೃಶ್ಯವು ಪೌಲನ ದಿನಗಳಲ್ಲಿದ್ದ ದೃಶ್ಯಕ್ಕಿಂತ ಗಣನೀಯವಾಗಿ ಬದಲಾಗಿದೆ. ನಂಬಿಕೆಯ ವಿಷಯದಲ್ಲಿ ಅನೇಕ ಕುಟುಂಬಗಳು ವಿಭಜಿತವಾಗಿವೆ, ಮತ್ತು ಇತರ ಕುಟುಂಬಗಳಲ್ಲಿ ಒಬ್ಬರೇ ಹೆತ್ತವರು ಇದ್ದಾರೆ. ಸಾಂಪ್ರದಾಯಿಕ ಕುಟುಂಬಗಳೆಂದು ಕರೆಯಲ್ಪಡುವ ಕುಟುಂಬಗಳಲ್ಲಿಯೂ ಕೂಡ, ಹೆಂಡತಿ ಯಾ ತಾಯಿಯು ಪೂರ್ಣ ಸಮಯದ ಗೃಹಿಣಿಯಾಗಿರುವುದು ಹೆಚ್ಚಾಗಿ ಅಸಾಮಾನ್ಯವಾಗಿದೆ. ಇದೆಲ್ಲವು ಯುವ ಕ್ರೈಸ್ತ ಸ್ತ್ರೀಯರ ಮೇಲೆ ಮಹತ್ತರವಾದ ಒತ್ತಡ ಮತ್ತು ಜವಾಬ್ದಾರಿಯನ್ನು ಹೇರುತ್ತವೆ, ಆದರೆ ಇದು ಅವರನ್ನು ತಮ್ಮ ಶಾಸ್ತ್ರೀಯ ಕರ್ತವ್ಯಗಳಿಂದ ಹೊರತು ಪಡಿಸುವುದಿಲ್ಲ. ಆದುದರಿಂದ, ತಮ್ಮ ಅನೇಕ ಕೆಲಸಗಳನ್ನು ಸರಿದೂಗಿಸಲು ಕಠಿನವಾಗಿ ಶ್ರಮಿಸುತ್ತಾ—ಕೆಲವರು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಆಕ್ಸಿಲಿಯರಿ ಯಾ ಕ್ರಮದ ಪಯನೀಯರರಾಗಿದ್ದು—ರಾಜ್ಯದ ಅಭಿರುಚಿಗಳನ್ನು ಇನ್ನೂ ಪ್ರಥಮವಾಗಿಡಲು ಪ್ರಯತ್ನಿಸುತ್ತಿರುವ ಅನೇಕ ನಂಬಿಗಸ್ತ ಯುವ ಸ್ತ್ರೀಯರನ್ನು ನೋಡುವುದು ಮಹಾ ಸಂತೋಷವಾಗಿದೆ. (ಮತ್ತಾಯ 6:33) ಅವರು ನಿಜವಾಗಿಯೂ ಪ್ರಶಂಸಾರ್ಹರು!
ಯುವ ಪುರುಷರಿಗಾಗಿ
16. ಯುವ ಪುರುಷರಿಗಾಗಿ ಯಾವ ಸಲಹೆ ಪೌಲನಲ್ಲಿತ್ತು, ಮತ್ತು ಯಾಕೆ ಇದು ಸಮಯೋಚಿತವಾಗಿದೆ?
16 ತೀತನನ್ನು ಸೇರಿಸಿ, ಪೌಲನು ಆಮೇಲೆ ಯುವ ಪುರುಷರ ಕಡೆಗೆ ತಿರುಗುತ್ತಾನೆ. ದಯವಿಟ್ಟು ತೀತ 2:6-8ನ್ನು ಓದಿರಿ. ಇಂದಿನ ಅನೇಕ ಯುವ ಜನರ ಬೇಜವಾಬ್ದಾರ ಮತ್ತು ನಾಶಕಾರಕ ವಿಧಗಳ—ಧೂಮಪಾನ, ಅಮಲೌಷಧ ಮತ್ತು ಮದ್ಯಪಾನದ ದುರುಪಯೋಗ, ನಿಷಿದ್ಧ ಕಾಮ, ಮತ್ತು ಘೋರ ಕ್ರೀಡೆಗಳು ಮತ್ತು ಕೀಳ್ಮಟ್ಟದ ಸಂಗೀತ ಹಾಗೂ ಮನೋರಂಜನೆಯಂತಹ ಇತರ ಲೌಕಿಕ ಬೆನ್ನಟ್ಟುವಿಕೆಗಳ—ನೋಟದಲ್ಲಿ ಇದು ನಿಜವಾಗಿಯೂ ಆರೋಗ್ಯಕರ ಹಾಗೂ ತೃಪ್ತಿದಾಯಕ ಜೀವನ ರೀತಿಯನ್ನು ಅನುಸರಿಸಲು ಬಯಸುವ ಕ್ರೈಸ್ತ ಯುವಕರಿಗೆ ಸಮಯೋಚಿತವಾದ ಬುದ್ಧಿವಾದವಾಗಿದೆ.
17. ಒಬ್ಬ ಯುವ ಪುರುಷನು “ಸ್ವಸ್ಥಮನಸ್ಸಿನವನು” ಮತ್ತು “ಸತ್ಕಾರ್ಯಮಾಡುವುದರಲ್ಲಿ ಮಾದರಿಯೂ” ಹೇಗೆ ಆಗಬಲ್ಲನು?
17 ಲೋಕದ ಯುವಕರಿಗೆ ವ್ಯತಿರಿಕ್ತವಾಗಿ, ಒಬ್ಬ ಯುವ ಕ್ರೈಸ್ತ ಮನುಷ್ಯನು “ಸ್ವಸಬುದ್ಧಿ” ಯುಳ್ಳವನು ಮತ್ತು “ಸತ್ಕಾರ್ಯಮಾಡುವದರಲ್ಲಿ . . . ಮಾದರಿ”ಯೂ ಆಗಿರಬೇಕು. ಸುಮ್ಮನೆ ಅಭ್ಯಾಸಮಾಡುವವರಿಂದ ಅಲ್ಲ ಆದರೆ “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಂದ” ಒಂದು ಸ್ವಸ್ಥ ಹಾಗೂ ಪ್ರೌಢ ಮನಸ್ಸನ್ನು ಪಡೆಯಬಹುದೆಂದು ಪೌಲನು ವಿವರಿಸಿದನು. (ಇಬ್ರಿಯ 5:14) ತಮ್ಮ ಯೌವನದ ಬಲವನ್ನು ಸ್ವಾರ್ಥ ಬೆನ್ನಟ್ಟುವಿಕೆಗಳಲ್ಲಿ ವ್ಯರ್ಥವಾಗಿಸುವ ಬದಲು, ಕ್ರೈಸ್ತ ಸಭೆಯಲ್ಲಿರುವ ಅನೇಕ ಕೆಲಸಗಳಲ್ಲಿ ಒಂದು ಪೂರ್ಣ ಪಾಲನ್ನು ಹೊಂದಲು ತಮ್ಮ ಸಮಯ ಹಾಗೂ ಶಕ್ತಿಯನ್ನು ಸ್ವಇಚ್ಛೆಯಿಂದ ವ್ಯಯಿಸುವ ಯುವ ಜನರನ್ನು ನೋಡುವುದು ಎಷ್ಟು ಅದ್ಭುತಕರವಾಗಿದೆ! ಹಾಗೆ ಮಾಡುವಲ್ಲಿ, ಅವರು, ತೀತನಂತೆ, ಕ್ರೈಸ್ತ ಸಭೆಯಲ್ಲಿ “ಸತ್ಕಾರ್ಯಗಳ” ಮಾದರಿಗಳಾಗಬಲ್ಲರು.—1 ತಿಮೊಥೆಯ 4:12.
18. ಉಪದೇಶದಲ್ಲಿ ಯಥಾರ್ಥವಾಗಿರುವುದು, ಕ್ರಿಯೆಯಲ್ಲಿ ಗಂಭೀರವಾಗಿರುವುದು, ಮತ್ತು ಮಾತಿನಲ್ಲಿ ಗೌರವವುಳ್ಳವರಾಗಿರುವುದರ ಅರ್ಥವೇನು?
18 ಯುವ ಪುರುಷರು “ಮಾಡುವ ಉಪದೇಶದಲ್ಲಿ ಯಥಾರ್ಥತ್ವವೂ ಗೌರವವೂ ಆಕ್ಷೇಪಣೆಗೆ ಆಸ್ಪದವಿಲ್ಲದಂಥ ಸ್ವಸಬುದ್ಧಿಯೂ ಇರಬೇಕು” ಎಂದು ಅವರು ಮರುಜ್ಞಾಪಿಸಲ್ಪಡುತ್ತಾರೆ. ‘ಯಥಾರ್ಥ’ ವಾಗಿರುವ ಬೋಧನೆಯು ದೇವರ ವಾಕ್ಯದ ಮೇಲೆ ಸ್ಥಿರವಾಗಿ ಆಧಾರಿಸಿರಬೇಕು; ಆದಕಾರಣ, ಯುವ ಪುರುಷರು ಬೈಬಲಿನ ಶ್ರಮಶೀಲ ವಿದ್ಯಾರ್ಥಿಗಳಾಗಿರಬೇಕು. ವೃದ್ಧ ಪುರುಷರಂತೆ, ಯುವ ಪುರುಷರು ಕೂಡ ಗಂಭೀರವಾಗಿರತಕ್ಕದ್ದು. ದೇವರ ವಾಕ್ಯದ ಶುಶ್ರೂಷಕರಾಗಿರುವುದು ಒಂದು ಗಂಭೀರವಾದ ಜವಾಬ್ದಾರಿಯಾಗಿದೆ ಎಂದು ಅವರು ಗ್ರಹಿಸುವ ಅಗತ್ಯವಿದೆ, ಮತ್ತು ಆದುದರಿಂದ ಅವರು “ಸುವಾರ್ತೆಗೆ ಯೋಗ್ಯರಾಗಿ ನಡೆದು” ಕೊಳ್ಳಬೇಕು. (ಫಿಲಿಪ್ಪಿ 1:27) ಹಾಗೆಯೇ ಅವರ ಮಾತು “ಗೌರವ” ವುಳ್ಳದ್ದಾಗಿರಬೇಕು ಮತ್ತು ವಿರೋಧಿಗಳಿಂದ ದೂರಿಗೆ ಯಾವುದೇ ಕಾರಣವನ್ನು ಅವರು ಕೊಡದಿರುವಂತೆ ಅದು “ಆಕ್ಷೇಪಣೆಗೆ ಆಸ್ಪದವಿಲ್ಲದಂಥ” ಮಾತಾಗಿರಬೇಕು.—2 ಕೊರಿಂಥ 6:3; 1 ಪೇತ್ರ 2:12, 15.
ದಾಸರಿಗೆ ಮತ್ತು ಸೇವಕರಿಗೆ
19, 20. ಇತರ ಜನರ ಊಳಿಗದಲ್ಲಿರುವವರು ಹೇಗೆ “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿರ” ಬಹುದು?
19 ಕೊನೆಯದಾಗಿ, ಇತರ ಜನರ ಊಳಿಗದಲ್ಲಿರುವವರ ಕಡೆಗೆ ಪೌಲನು ಗಮನ ಹರಿಸುತ್ತಾನೆ. ದಯವಿಟ್ಟು ತೀತ 2:9, 10ನ್ನು ಓದಿರಿ. ಇಂದು ನಮ್ಮಲ್ಲಿ ಅನೇಕರು ದಾಸರು ಯಾ ಸೇವಕರಾಗಿಲ್ಲ, ಆದರೆ ಅನೇಕರು ಇತರರಿಗೆ ಸೇವೆಯನ್ನು ಸಲ್ಲಿಸುತ್ತಿರುವ ನೌಕರರು ಮತ್ತು ಕೆಲಸಗಾರರು ಆಗಿದ್ದೇವೆ. ಹೀಗೆ, ಪೌಲನಿಂದ ನಮೂದಿಸಲಾದ ತತ್ವಗಳು ಹಾಗೆಯೇ ಇಂದು ಅನ್ವಯಿಸುತ್ತವೆ.
20 “ಎಲ್ಲಾದರಲ್ಲಿ ತಮ್ಮ ಯಜಮಾನರಿಗೆ ಅಧೀನ” ರಾಗಿರುವುದೆಂದರೆ, ಕ್ರೈಸ್ತ ನೌಕರರು ತಮ್ಮ ಯಜಮಾನರಿಗೆ ಹಾಗೂ ಮೇಲ್ವಿಚಾರಕರಿಗೆ ಯಥಾರ್ಥವಾದ ಗೌರವವನ್ನು ತೋರಿಸಬೇಕು. (ಕೊಲೊಸ್ಸೆ 3:22) ತಮ್ಮ ಯಜಮಾನರ ಋಣದಂತೆ ಪೂರ್ಣ ದಿನದ ಕೆಲಸವನ್ನು ಸಲ್ಲಿಸುತ್ತಾ, ಪ್ರಾಮಾಣಿಕ ಕೆಲಸಗಾರರ ಪ್ರಖ್ಯಾತಿಯನ್ನು ಸಹ ಅವರು ಹೊಂದಿರಬೇಕು. ಮತ್ತು ತಮ್ಮ ಕೆಲಸದ ಸ್ಥಳಗಳಲ್ಲಿ ಇತರರ ವರ್ತನೆ ಏನೇ ಆಗಿರಲಿ, ಕ್ರೈಸ್ತ ನಡತೆಯ ಉನ್ನತ ಮಟ್ಟವನ್ನು ಅವರು ಕಾಪಾಡಬೇಕು. ಇದೆಲ್ಲವು “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿರ” ಬೇಕೆಂಬ ಕಾರಣದಿಂದ. ತಮ್ಮ ಸಾಕ್ಷಿ ಜೊತೆಕೆಲಸಗಾರರ ಯಾ ನೌಕರರ ಉತ್ತಮ ನಡತೆಯಿಂದಾಗಿ ಪ್ರಾಮಾಣಿಕ ವೀಕ್ಷಕರು ಸತ್ಯಕ್ಕೆ ಪ್ರತಿಕ್ರಿಯಿಸುವಾಗ, ಬರುವ ಸಂತೋಷಕರ ಫಲಿತಾಂಶಗಳ ಕುರಿತು ನಾವು ಎಷ್ಟು ಬಾರಿ ಕೇಳುತ್ತೇವೆ! ತಮ್ಮ ಉದ್ಯೋಗದ ಸ್ಥಳಗಳಲ್ಲಿಯೂ ಕೂಡ ಯೆಹೋವನ ಆರೋಗ್ಯಕರ ಬೋಧನೆಯನ್ನು ಅನುಸರಿಸುವವರ ಮೇಲೆ ಆತನು ಸುರಿಸುವ ಬಹುಮಾನವಿದು.—ಎಫೆಸ 6:7, 8.
ಶುದ್ಧಗೊಳಿಸಲ್ಪಟ್ಟ ಒಂದು ಜನಾಂಗ
21. ಆರೋಗ್ಯಕರ ಬೋಧನೆಯನ್ನು ಯೆಹೋವನು ಯಾಕೆ ಒದಗಿಸಿದ್ದಾನೆ, ಮತ್ತು ನಾವು ಹೇಗೆ ಪ್ರತಿಕ್ರಿಯಿಸಬೇಕು?
21 ಪೌಲನು ಪ್ರತಿಪಾದಿಸಿದ ಆರೋಗ್ಯಕರ ಬೋಧನೆಯು, ನಾವು ಬಯಸಿದಂತೆ ಪರಾಮರ್ಶಿಸಬಹುದಾದ ನೀತಿಯ ತತ್ವಗಳ ಯಾ ನೈತಿಕ ವಿಚಾರಗಳ ಯಾವುದೊ ನಿಯಮಾವಳಿಯಾಗಿಲ್ಲ. ಅದರ ಉದ್ದೇಶವನ್ನು ವಿವರಿಸಲು ಪೌಲನು ಮುಂದುವರಿದನು. ದಯವಿಟ್ಟು ತೀತ 2:11, 12ನ್ನು ಓದಿರಿ. ನಮಗಾಗಿರುವ ಆತನ ಪ್ರೀತಿ ಮತ್ತು ಕೃಪೆಯಿಂದಾಗಿ, ಈ ಕಠಿನ ಹಾಗೂ ಅಪಾಯಕಾರಿ ಸಮಯಗಳಲ್ಲಿ ಒಂದು ಉದ್ದೇಶಪೂರ್ವಕ ಮತ್ತು ತೃಪ್ತಿದಾಯಕ ಜೀವಿತವನ್ನು ಜೀವಿಸಲು ನಾವು ಕಲಿಯುವಂತೆ, ಯೆಹೋವ ದೇವರು ಆರೋಗ್ಯಕರ ಬೋಧನೆಯನ್ನು ಒದಗಿಸಿದ್ದಾನೆ. ಆರೋಗ್ಯಕರ ಬೋಧನೆಯನ್ನು ಸ್ವೀಕರಿಸಿ ಅದನ್ನು ನಿಮ್ಮ ಜೀವನದ ರೀತಿಯಾಗಿ ಮಾಡಲು ನೀವು ಬಯಸುತ್ತೀರೊ? ಹಾಗೆ ಮಾಡುವುದು ನಿಮ್ಮ ರಕ್ಷಣೆಯ ಅರ್ಥದಲ್ಲಿರುವುದು.
22, 23. ಆರೋಗ್ಯಕರ ಬೋಧನೆಯನ್ನು ನಮ್ಮ ಜೀವನದ ರೀತಿಯಾಗಿ ಮಾಡುವ ಮೂಲಕ ಯಾವ ಆಶೀರ್ವಾದಗಳನ್ನು ನಾವು ಕೊಯ್ಯುತ್ತೇವೆ?
22 ಅದಕ್ಕಿಂತ ಹೆಚ್ಚಾಗಿ, ಆರೋಗ್ಯಕರ ಬೋಧನೆಯನ್ನು ನಮ್ಮ ಜೀವನದ ರೀತಿಯಾಗಿ ಮಾಡುವುದು, ನಮಗಾಗಿ ಒಂದು ಅಪೂರ್ವವಾದ ಸುಯೋಗವನ್ನು ಈಗ ಮತ್ತು ಭವಿಷ್ಯತ್ತಿಗಾಗಿ ಒಂದು ಸಂತೋಷದ ನಿರೀಕ್ಷೆಯನ್ನು ತರುತ್ತದೆ. ದಯವಿಟ್ಟು ತೀತ 2:13, 14ನ್ನು ಓದಿರಿ. ಆರೋಗ್ಯಕರ ಬೋಧನೆಯನ್ನು ನಮ್ಮ ಜೀವನದ ರೀತಿಯಾಗಿ ಮಾಡುವುದು, ನಿಶ್ಚಯವಾಗಿಯೂ ನಮ್ಮನ್ನು ಭ್ರಷ್ಟ ಮತ್ತು ನಶಿಸಿಹೋಗುತ್ತಿರುವ ಲೋಕದಿಂದ ಶುದ್ಧಗೊಳಿಸಲ್ಪಟ್ಟ ಜನಾಂಗದಂತೆ ಪ್ರತ್ಯೇಕಿಸುತ್ತದೆ. ಸೀನಾಯಿ ಪರ್ವತದಲ್ಲಿ ಇಸ್ರಾಯೇಲ್ಯರ ಪುತ್ರರಿಗೆ ಮೋಶೆಯು ಮಾಡಿದ ಮರುಜ್ಞಾಪನಗಳನ್ನು ಪೌಲನ ಮಾತುಗಳು ಸಾದೃಶ್ಯಗೊಳಿಸುತ್ತವೆ: “ಯೆಹೋವನೋ, . . . ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟುಮಾಡುವೆನೆಂದೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಯೆಹೋವನಿಗೋಸ್ಕರ ಮೀಸಲಾದ ಜನರಾಗುವರೆಂದೂ ಒಡಂಬಟ್ಟಿದ್ದಾನೆ.”—ಧರ್ಮೋಪದೇಶಕಾಂಡ 26:18, 19.
23 ಆರೋಗ್ಯಕರ ಬೋಧನೆಯನ್ನು ನಮ್ಮ ಜೀವನದ ರೀತಿಯಾಗಿ ಮಾಡುವ ಮೂಲಕ ಯೆಹೋವನ ಶುದ್ಧಗೊಳಿಸಲ್ಪಟ್ಟ ಜನಾಂಗವಾಗಿರುವ ಸುಯೋಗವನ್ನು ನಾವು ಎಂದಿಗೂ ಭದ್ರಪಡಿಸುವಂತಾಗಲಿ! ಹೀಗೆ ಯೆಹೋವನು ಇಂದು ಮಾಡಿಸುತ್ತಿರುವ ಮಹಾ ಕಾರ್ಯದಲ್ಲಿ ಉಪಯೋಗಿಸಲ್ಪಡಲು ಶುದ್ಧರಾಗಿ ಮತ್ತು ತಕ್ಕವರಾಗಿ ಉಳಿಯುತ್ತಾ, ಭಕ್ತಿಹೀನ ಹಾಗೂ ಲೌಕಿಕ ಅಭಿಲಾಷೆಗಳ ಯಾವುದೇ ವಿಧವನ್ನು ತೊರೆಯಲು ಯಾವಾಗಲೂ ಎಚ್ಚರವಾಗಿರ್ರಿ.—ಕೊಲೊಸ್ಸೆ 1:10.
ನಿಮಗೆ ನೆನಪಿದೆಯೊ?
▫ ದೈವಿಕ ಭಕ್ತಿಯು ಯಾಕೆ ಎಲ್ಲ ವಿಷಯಗಳಿಗೆ ಪ್ರಯೋಜನಕಾರಿಯಾಗಿದೆ?
▫ ವೃದ್ಧ ಕ್ರೈಸ್ತ ಪುರುಷರು ಮತ್ತು ಸ್ತ್ರೀಯರು ಆರೋಗ್ಯಕರ ಬೋಧನೆಯನ್ನು ಜೀವನದ ರೀತಿಯಂತೆ ಹೇಗೆ ಬೆನ್ನಟ್ಟಬಲ್ಲರು?
▫ ಸಭೆಯಲ್ಲಿರುವ ಯೌವನಸ್ಥ ಪುರುಷರಿಗೆ ಮತ್ತು ಸ್ತ್ರೀಯರಿಗೆ ಯಾವ ಆರೋಗ್ಯಕರ ಬೋಧನೆ ಪೌಲನಲ್ಲಿತ್ತು?
▫ ಆರೋಗ್ಯಕರ ಬೋಧನೆಯನ್ನು ನಮ್ಮ ಜೀವನದ ರೀತಿಯಾಗಿ ನಾವು ಮಾಡುವುದಾದರೆ, ಯಾವ ಸುಯೋಗ ಮತ್ತು ಆಶೀರ್ವಾದವು ನಮ್ಮದಾಗಬಲ್ಲವು?
[ಪುಟ 18 ರಲ್ಲಿರುವ ಚಿತ್ರಗಳು]
ಇಂದು ಅನೇಕರು ತೀತ 2:2-4 ರಲ್ಲಿರುವ ಸಲಹೆಯನ್ನು ಅನ್ವಯಿಸುತ್ತಿದ್ದಾರೆ