ಯಾವ ಮೇಜಿನಲ್ಲಿ ನೀವು ಉಣ್ಣುತ್ತಿದ್ದೀರಿ?
“ನೀವು ‘ಯೆಹೋವನ ಮೇಜು’ ಮತ್ತು ದೆವ್ವಗಳ ಮೇಜಿನಲ್ಲಿ ಪಾಲಿಗರಾಗುತ್ತಿರಲಾರಿರಿ.”—1 ಕೊರಿಂಥ 10:21, NW.
1. ನಮ್ಮ ಮುಂದೆ ಯಾವ ಮೇಜುಗಳು ಇಡಲ್ಪಟ್ಟಿವೆ, ಮತ್ತು ಅವುಗಳ ಕುರಿತು ಅಪೊಸ್ತಲ ಪೌಲನು ಯಾವ ಎಚ್ಚರಿಕೆಯನ್ನು ಕೊಡುತ್ತಾನೆ?
ಅಪೊಸ್ತಲ ಪೌಲನ ಈ ಪ್ರೇರಿತ ಮಾತುಗಳು ಮಾನವಕುಲದ ಮುಂದೆ ಎರಡು ಸಾಂಕೇತಿಕ ಮೇಜುಗಳು ಇಡಲ್ಪಟ್ಟಿವೆ ಎಂಬದನ್ನು ತೋರಿಸುತ್ತವೆ. ಪ್ರತಿಯೊಂದು ಮೇಜು ಅದರ ಮೇಲೆ ಇಡಲ್ಪಟ್ಟಿರುವ ಸಾಂಕೇತಿಕ ಆಹಾರದಿಂದ ಗುರುತಿಸಲ್ಪಟ್ಟಿದೆ, ಮತ್ತು ನಾವೆಲ್ಲರೂ ಅವುಗಳಲ್ಲೊಂದರಲ್ಲಿ ಅಥವಾ ಇನ್ನೊಂದರಲ್ಲಿ ಊಟಮಾಡುತ್ತೇವೆ. ಆದರೆ, ನಾವು ದೇವರನ್ನು ಮೆಚ್ಚಿಸಲು ಬಯಸುವುದಾದರೆ, ಆತನ ಮೇಜಿನಲ್ಲಿ ನಾವು ಊಟಮಾಡುವುದು ಮತ್ತು ಅದೇ ಸಮಯದಲ್ಲಿ ದೆವ್ವಗಳ ಮೇಜಿನಲ್ಲಿ ಸ್ವಲ್ಪ ಸ್ವಲ್ಪವಾಗಿ ಕಚ್ಚಿ ತಿನ್ನುವುದು—ಇವೆರಡನ್ನೂ ಮಾಡಲಾರೆವು. ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ ದೆವ್ವಗಳಿಗೆ ಅರ್ಪಿಸುತ್ತಾರೆಂದು ನನ್ನ ಅಭಿಪ್ರಾಯವು. ನೀವು ದೆವ್ವಗಳೊಡನೆ ಭಾಗಿಗಳಾಗಿರಬೇಕೆಂಬದು ನನ್ನ ಇಷ್ಟವಲ್ಲ. ನೀವು ಕರ್ತನ [ಯೆಹೋವನ, NW] ಪಾತ್ರೆ ಮತ್ತು ದೆವ್ವಗಳ ಪಾತ್ರೆ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಕುಡಿಯಲಾರಿರಿ; ಕರ್ತನ ಪಂಕ್ತಿ [ಯೆಹೋವನ ಮೇಜು, NW] ಮತ್ತು ದೆವ್ವಗಳ ಪಂಕ್ತಿ [ಮೇಜು, NW] ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟಮಾಡಲಾರಿರಿ.”—1 ಕೊರಿಂಥ 10:20, 21.
2. (ಎ) ಪುರಾತನ ಇಸ್ರಾಯೇಲಿನ ದಿನಗಳಲ್ಲಿ ಯೆಹೋವನ ಯಾವ ಮೇಜು ಅಸ್ತಿತ್ವದಲ್ಲಿತ್ತು, ಮತ್ತು ಸಮಾಧಾನ (ಸಹಭಾಗಿತ್ವ) ಯಜ್ಞಗಳಲ್ಲಿ ಯಾರು ಪಾಲಿಗರಾಗುತ್ತಿದ್ದರು? (ಬಿ) ಇಂದು ಯೆಹೋವನ ಮೇಜಿನಲ್ಲಿ ಪಾಲಿಗರಾಗುವುದರ ಅರ್ಥವೇನು?
2 ಪೌಲನ ಮಾತುಗಳು ಯೆಹೋವನ ನಿಯಮದ ಕೆಳಗೆ ಪುರಾತನ ಇಸ್ರಾಯೇಲ್ಯರು ಅರ್ಪಿಸುತ್ತಿದ್ದ ಸಮಾಧಾನ [ಸಹಭಾಗಿತ್ವ, NW] ಯಜ್ಞಗಳ ಮರುಜ್ಞಾಪನವನ್ನು ನಮಗೆ ಕೊಡುತ್ತದೆ. ದೇವರ ಯಜ್ಞವೇದಿಯನ್ನು ಒಂದು ಮೇಜು ಎಂದು ಕರೆಯಲಾಗಿತ್ತು, ಮತ್ತು ಯಜ್ಞವಾಗಿ ಅರ್ಪಿಸಲು ಪಶುವನ್ನು ತರುವ ಒಬ್ಬನು ಯೆಹೋವನೊಂದಿಗೆ ಮತ್ತು ಯಾಜಕರೊಂದಿಗೆ ಸಹಭಾಗಿಯಾಗುತ್ತಾನೆಂದು ಹೇಳಲಾಗುತ್ತಿತ್ತು. ಹೇಗೆ? ಮೊದಲಾಗಿ, ಯೆಹೋವನು ಯಜ್ಞದಲ್ಲಿ ಸಹಭಾಗಿಯಾಗುತ್ತಿದ್ದನು ಯಾಕಂದರೆ ಆತನ ವೇದಿಯ ಮೇಲೆ ರಕ್ತವು ಚಿಮುಕಿಸಲ್ಪಡುತ್ತಿತ್ತು ಮತ್ತು ಕೊಬ್ಬು ಕೆಳಗಣ ಜ್ವಾಲೆಗಳಿಂದ ದಹಿಸಲ್ಪಡುತ್ತಿತ್ತು. ಎರಡನೆದಾಗಿ, ಯಾಜಕನು ಅದರಲ್ಲಿ ಭಾಗಿಯಾಗುತ್ತಿದ್ದನು ಹೇಗಂದರೆ ಅವನು (ಮತ್ತು ಅವನ ಕುಟುಂಬದವರು) ಯಜ್ಞಪಶುವಿನ ಸುಟ್ಟ ಎದೆಯ ಭಾಗ ಮತ್ತು ಬಲದೊಡೆಯನ್ನು ತಿನ್ನುತ್ತಿದ್ದರು. ಮತ್ತು ಮೂರನೆಯದಾಗಿ, ಅರ್ಪಣೆಮಾಡಿದವನು ಉಳಿದದ್ದನ್ನು ತಿನ್ನುವ ಮೂಲಕ ಅದರಲ್ಲಿ ಸಹಭಾಗಿಯಾಗುತ್ತಿದ್ದನು. (ಯಾಜಕಕಾಂಡ 7:11-36) ಇಂದು, ಯೆಹೋವನ ಮೇಜಿನಲ್ಲಿ ಭಾಗಿಗಳಾಗುವುದು ಎಂದರೆ ನಾವಾತನಿಗೆ ಆತನು ಅವಶ್ಯಪಡಿಸುವ ಆರಾಧನೆಯನ್ನು, ಯೇಸು ಮತ್ತು ಅಪೊಸ್ತಲರಿಂದ ಉದಾಹರಿಸಲ್ಪಟ್ಟ ಪ್ರಕಾರ, ಕೊಡುತ್ತೇವೆ ಎಂದರ್ಥ. ಇದನ್ನು ಮಾಡುವುದಕ್ಕಾಗಿ, ಯೆಹೋವನು ತನ್ನ ವಾಕ್ಯ ಮತ್ತು ಸಂಸ್ಥೆಯ ಮೂಲಕ ಏನನ್ನು ಒದಗಿಸುತ್ತಾನೊ ಅದನ್ನು ನಾವು ಆತ್ಮಿಕವಾಗಿ ಉಣ್ಣಬೇಕು. ಯೆಹೋವನೊಂದಿಗೆ ಆತನ ಮೇಜಿನಲ್ಲಿ ವಿಶೇಷ ಸಹಭಾಗಿತ್ವದಲ್ಲಿ ಆನಂದಿಸಿದ ಇಸ್ರಾಯೇಲ್ಯರು, ದೆವ್ವಗಳ ಮೇಜಿನಲ್ಲಿ ಅವುಗಳಿಗೆ ಬಲಿಗಳನ್ನರ್ಪಿಸಲು ನಿಷೇಧಿಸಲ್ಪಟ್ಟಿದ್ದರು. ಇಂದು, ಆತ್ಮಿಕ ಇಸ್ರಾಯೇಲ್ಯರು ಮತ್ತು ಅವರ “ಬೇರೆಕುರಿ” ಸಂಗಡಿಗರು ಅದೇ ದೈವಿಕ ನಿಷೇಧದ ಕೆಳಗಿದ್ದಾರೆ.—ಯೋಹಾನ 10:16.
3. ನಮ್ಮ ದಿನಗಳಲ್ಲಿ ಒಬ್ಬನು ದೆವ್ವಗಳ ಮೇಜಿನಲ್ಲಿ ಪಾಲಿಗನಾಗುವ ದೋಷಕ್ಕೆ ಒಳಗಾಗಸಾಧ್ಯವಿದೆ ಹೇಗೆ?
3 ನಮ್ಮ ದಿನಗಳಲ್ಲಿ ಒಬ್ಬನು ದೆವ್ವಗಳ ಮೇಜಿನಲ್ಲಿ ಭಾಗಿಯಾಗುವ ವಿಷಯದಲ್ಲಿ ಹೇಗೆ ದೋಷಿಯಾಗಸಾಧ್ಯವಿದೆ? ಯೆಹೋವನಿಗೆ ವಿರುದ್ಧವಾದ ಯಾವುದೇ ಅಭಿರುಚಿಗಳನ್ನು ಸೇವಿಸುವ ಮೂಲಕ. ದೆವ್ವಗಳ ಮೇಜು, ನಮ್ಮನ್ನು ತಪ್ಪುದಾರಿಗೆಳೆಯಲು ಮತ್ತು ಯೆಹೋವನಿಂದ ನಮ್ಮನ್ನು ದೂರತೊಲಗಿಸಲು ರಚಿಸಲಾದ ಎಲ್ಲಾ ಪೈಶಾಚಿಕ ಅಪಪ್ರಚಾರವನ್ನು ಒಳಗೂಡಿರುತ್ತದೆ. ಅಂಥ ವಿಷದಿಂದ ತನ್ನ ಹೃದಯ ಮತ್ತು ಮನಸ್ಸನ್ನು ಯಾರು ಉಣಿಸಬಯಸಾನು? ಇಂದು ಹೆಚ್ಚಿನ ಜನರು ಯುದ್ಧ ಮತ್ತು ಐಶ್ವರ್ಯದ ದೇವರುಗಳಿಗೆ ಅರ್ಪಿಸುವ ಬಲಿಗಳಲ್ಲಿ ಪಾಲಿಗರಾಗಲು ನಿಜ ಕ್ರೈಸ್ತರು ನಿರಾಕರಿಸುತ್ತಾರೆ.—ಮತ್ತಾಯ 6:24.
“ದೆವ್ವಗಳ ಮೇಜನ್ನು” ವರ್ಜಿಸುವುದು
4. ನಾವೆಲ್ಲರೂ ಯಾವ ಪ್ರಶ್ನೆಯನ್ನು ಎದುರಿಸುತ್ತೇವೆ, ಮತ್ತು ದೆವ್ವಗಳ ಮೇಜಿನಲ್ಲಿ ಬುದ್ಧಿಪೂರ್ವಕವಾಗಿ ಪಾಲಿಗರಾಗಲು ನಾವು ಬಯಸೆವು ಏಕೆ?
4 ನಾವೆಲ್ಲರೂ ಎದುರಿಸುವ ಪ್ರಶ್ನೆಯು—ನಾನು ಯಾವ ಮೇಜಿನಲ್ಲಿ ಉಣ್ಣುತ್ತಿದ್ದೇನೆ? ಎಂಬದು. ಒಂದಲ್ಲ ಒಂದು ಮೇಜಿನಲ್ಲಿ ನಾವು ಉಣ್ಣುವ ಹಂಗಿನಲ್ಲಿದ್ದೇವೆಂಬ ನಿಜತ್ವವನ್ನು ನಾವು ಪಾರಾಗಲಾರೆವು. (ಹೋಲಿಸಿ ಮತ್ತಾಯ 12:30) ನಾವು ಬುದ್ಧಿಪೂರ್ವಕವಾಗಿ ದೆವ್ವಗಳ ಮೇಜಿನಲ್ಲಿ ಸಹಭಾಗಿಗಳಾಗಲು ಬಯಸೆವು. ಅದನ್ನು ಮಾಡುವುದು ಒಬ್ಬನೇ ಸತ್ಯ ಮತ್ತು ಜೀವಂತ ದೇವರಾದ ಯೆಹೋವನ ಮೆಚ್ಚಿಕೆಯನ್ನು ನಾವು ಕಳೆದುಕೊಳ್ಳುವಂತೆ ನಡಿಸುವುದು. ಇನ್ನೊಂದು ಕಡೆ, ಯೆಹೋವನ ಮೇಜಿನಲ್ಲಿ ಮಾತ್ರವೆ ಆಹಾರದಲ್ಲಿ ಭಾಗಿಗಳಾಗುವುದು ನಮ್ಮನ್ನು ನಮ್ಮ ನಿತ್ಯಜೀವನದ ಸಂತೋಷಕ್ಕೆ ನಡಿಸುತ್ತದೆ! (ಯೋಹಾನ 17:3) ಒಬ್ಬ ವ್ಯಕ್ತಿಯು ಏನನ್ನು ತಿನ್ನುತ್ತಾನೊ ಅದೇ ಆಗಿರುತ್ತಾನೆ ಎಂಬ ಗಾದೆಯೊಂದಿದೆ. ಹೀಗಿರಲಾಗಿ, ಒಳ್ಳೆಯ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಇಟ್ಟುಕೊಳ್ಳಲು ಬಯಸುವ ಯಾವನಾದರೂ ತನ್ನ ಪಥ್ಯವನ್ನು ಕಾದುಕೊಳ್ಳಬೇಕಾಗಿದೆ. ಹೆಚ್ಚು-ಕೊಬ್ಬಿನ ಕಚಡ-ತಿಂಡಿಯು ರಾಸಾಯನಿಕ ಸೇರಿಕೆಗಳೊಂದಿಗೆ ರುಚಿಕರವಾಗಿ ತಯಾರಿಸಲ್ಪಟ್ಟರೂ, ನಮ್ಮ ಸತತವಾದ ಶಾರೀರಿಕ ಆರೋಗ್ಯಕ್ಕೆ ನೆರವಾಗುವುದಿಲ್ಲ, ಹಾಗೆಯೆ ಪೈಶಾಚಿಕ ವಿಚಾರಗಳಿಂದ ಹೆಣೆಯಲ್ಪಟ್ಟ ಈ ಲೋಕದ ಅಪಪ್ರಚಾರವು ನಮ್ಮ ಮನಸ್ಸುಗಳನ್ನು ಭ್ರಷ್ಟಗೊಳಿಸುವ ಕೆಟ್ಟದಾದ ಸಾಂಕೇತಿಕ ಕಚಡ-ತಿಂಡಿಯಾಗಿರುತ್ತದೆ.
5. ಇಂದು ನಾವು ಪೈಶಾಚಿಕ ಬೋಧನೆಗಳನ್ನು ಸೇವಿಸುವುದನ್ನು ಹೇಗೆ ವರ್ಜಿಸಬಲ್ಲೆವು?
5 ಕಡೇ ದಿನಗಳಲ್ಲಿ ಜನರು “ದೆವ್ವಗಳ ಬೋಧನೆಗಳ” ಮೂಲಕ ದಾರಿತಪ್ಪಿಸಲ್ಪಡುವರೆಂದು ಅಪೊಸ್ತಲ ಪೌಲನು ಮುಂತಿಳಿಸಿದ್ದಾನೆ. (1 ತಿಮೊಥೆಯ 4:1) ಅಂಥ ಪೈಶಾಚಿಕ ಬೋಧನೆಗಳು ಸುಳ್ಳು ಧಾರ್ಮಿಕ ನಂಬಿಕೆಗಳಲ್ಲಿ ಕಂಡುಬರುತ್ತವೆ ಮಾತ್ರವಲ್ಲ ಬೇರೆ ವಿಧಗಳಲ್ಲೂ ಅವು ವ್ಯಾಪಕವಾಗಿ ಪ್ರಸಾರಮಾಡಲ್ಪಡುತ್ತವೆ. ಉದಾಹರಣೆಗೆ, ನಾವು ಮತ್ತು ನಮ್ಮ ಮಕ್ಕಳು ಯಾವ ಪುಸ್ತಕಗಳನ್ನು ಮತ್ತು ಪತ್ರಿಕೆಗಳನ್ನು ಓದುತ್ತೇವೆ, ಯಾವ ಟೆಲಿವಿಷನ್ ಕಾರ್ಯಕ್ರಮಗಳನ್ನು ವೀಕ್ಷಿಸುತ್ತೇವೆ, ಮತ್ತು ಯಾವ ನಾಟಕಗಳನ್ನು ಮತ್ತು ಚಲನ ಚಿತ್ರಗಳನ್ನು ನೋಡುತ್ತೇವೆ ಎಂಬದನ್ನು ನಾವು ವಿಶೇಷ್ಲಿಸುವ ಮತ್ತು ತೂಗಿನೋಡುವ ಅಗತ್ಯವಿದೆ. (ಜ್ಞಾನೋಕ್ತಿ 14:15) ಮನೋರಂಜನೆಗಾಗಿ ನಾವು ಕಾದಂಬರಿಯನ್ನು ಓದುವುದಾದರೆ, ಅದು ಬುದ್ಧಿಗೆಟ್ಟ ಹಿಂಸಾಚಾರವನ್ನು, ನಿಷಿದ್ಧ ಕಾಮವನ್ನು, ಅಥವಾ ಯಾಕ್ಷಿಣಿಕ ಪದ್ಧತಿಗಳನ್ನು ಪ್ರಮುಖ ರಸವಾಗಿ ಇಡುತ್ತದೋ? ತಿಳಿವಳಿಕೆಗಾಗಿ ನಾವು ಸತ್ಯಕಥೆಗಳನ್ನು ಓದುವುದಾದರೆ, “ಕ್ರಿಸ್ತನನ್ನು ಅನುಸರಿಸದ” ಒಂದು ತತ್ವಜ್ಞಾನವನ್ನು ಅಥವಾ ಜೀವಿತಮಾರ್ಗವನ್ನು ಅದು ಪ್ರತಿಪಾದಿಸುತ್ತದೋ? (ಕೊಲೊಸ್ಸೆ 2:8) ನಿರರ್ಥಕವಾದ ಊಹಾಪೋಹಗಳು ನೀಡಲ್ಪಟ್ಟಿವೆಯೆ, ಅಥವಾ ಐಹಿಕವಾದ ಸಾಮಾಜಿಕ ಚಳವಳಿಗಳಲ್ಲಿ ಒಳಗೂಡುವಿಕೆಯು ಸಮರ್ಥಿಸಲ್ಪಟಿದೆಯೆ? ಅತಿ ಐಶ್ವರ್ಯವಂತರಾಗುವ ದೃಢನಿಶ್ಚಯವನ್ನು ಅದು ಬೆಳೆಸುತ್ತದೊ? (1 ತಿಮೊಥೆಯ 6:9) ಕ್ರಿಸ್ತ ಅಸದೃಶ್ಯವಾದ ವಿಭಾಗಿಸುವ ಬೋಧನೆಗಳನ್ನು ಕುಟಿಲವಾಗಿ ನೀಡುವ ಒಂದು ಸಾಹಿತ್ಯವು ಅದಾಗಿದೆಯೆ? ಉತ್ತರ ಹೌದಾದರೆ ಮತ್ತು ನಾವು ಅಂಥ ಮಾಹಿತಿಯನ್ನು ಓದುವುದನ್ನು ಮತ್ತು ವೀಕ್ಷಿಸುವುದನ್ನು ಮುಂದರಿಸಿದರೆ, ದೆವ್ವಗಳ ಮೇಜಿನಲ್ಲಿ ಊಟಮಾಡುವ ಕೇಡಿಗೆ ನಮ್ಮನ್ನು ಒಡ್ಡುತ್ತೇವೆ. ಇಂದು ಹೊಚ್ಚ ಹೊಸದೂ ಬಹಳ ಜ್ಞಾನಭರಿತವೂ ಆಗಿರುವಂತೆ ಕಾಣುವ ಐಹಿಕ ತತ್ವಜ್ಞಾನವನ್ನು ಪ್ರವರ್ಧಿಸುವಂತಹ ಲಕ್ಷಾಂತರ ಸಾಹಿತ್ಯಗಳು ಇರುತ್ತವೆ. (ಪ್ರಸಂಗಿ 12:12) ಆದರೆ ಈ ಅಪಪ್ರಚಾರದಲ್ಲಿ ಯಾವುದೂ ನಿಜವಾಗಿ ಹೊಸದಲ್ಲ; ಅಲ್ಲದೆ ಒಬ್ಬನ ಪ್ರಯೋಜನಕ್ಕಾಗಿ ಮತ್ತು ಮೇಲ್ಮೆಗಾಗಿ ಅದು ಕಾರ್ಯನಡಿಸುವುದೂ ಇಲ್ಲ, ಹೇಗೆ ಸೈತಾನನು ಕುಟಿಲತನದಿಂದ ಹವ್ವಳಿಗೆ ಹೇಳಿದ ಸಂಗತಿಯು ಅವಳ ಮೇಲ್ಮೆಗಾಗಿ ಕಾರ್ಯನಡಿಸದೆ ಹೋಯಿತೊ ಹಾಗೆ.—2 ಕೊರಿಂಥ 11:3.
6. ತನ್ನ ಪೈಶಾಚಿಕ ಕಚಡ-ತಿಂಡಿಯನ್ನು ಸವಿಯುವಂತೆ ಸೈತಾನನು ನಮ್ಮನ್ನು ಆಮಂತ್ರಿಸುವಾಗ, ಕಾರ್ಯತಃ, ನಾವು ಹೇಗೆ ಪ್ರತಿಕ್ರಿಯಿಸಬೇಕು?
6 ಆದುದರಿಂದ, ತನ್ನ ಪೈಶಾಚಿಕ ಕಚಡ-ತಿಂಡಿಯನ್ನು ಸವಿಯುವಂತೆ ಸೈತಾನನು ನಮ್ಮನ್ನು ಆಮಂತ್ರಿಸುವಾಗ, ನಾವು ಹೇಗೆ ಪ್ರತಿಕ್ರಿಯಿಸಬೇಕು? ಕಲ್ಲುಗಳನ್ನು ರೊಟ್ಟಿಯನ್ನಾಗಿ ಮಾಡುವಂತೆ ಸೈತಾನನಿಂದ ಶೋಧಿಸಲ್ಪಟ್ಟಾಗ ಯೇಸು ಮಾಡಿದಂತೆಯೆ. ಯೇಸು ಉತ್ತರಿಸಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ. ದೇವರ [ಯೆಹೋವನ, NW] ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ.” ಮತ್ತು ಅವನು ಸೈತಾನನಿಗೆ ಅಡಬ್ಡಿದ್ದು ಒಂದು ಆರಾಧನಾ ಕ್ರಿಯೆಯನ್ನು ನಡಿಸುವುದಾದರೆ ಪಿಶಾಚನು ಯೇಸುವಿಗೆ “ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ಕೊಡುವೆನೆಂದು ಹೇಳಿದಾಗ, ಯೇಸು ಪ್ರತಿಕ್ರಿಯಿಸಿದ್ದು: “ಸೈತಾನನೇ, ನೀನು ತೊಲಗಿ ಹೋಗು. ನಿನ್ನ ದೇವರಾಗಿರುವ ಕರ್ತನಿಗೆ [ಯೆಹೋವನಿಗೆ, NW] ಅಡಬ್ಡಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ.”—ಮತ್ತಾಯ 4:3, 4, 8-10.
7. ಯೆಹೋವನ ಮೇಜಿನಲ್ಲಿ ಮತ್ತು ದೆವ್ವಗಳ ಮೇಜಿನಲ್ಲಿ ಎರಡರಲ್ಲೂ ಯಶಸ್ವಿಯಾಗಿ ಉಣ್ಣಬಲ್ಲೆವೆಂದು ನಾವು ನೆನಸುವುದಾದರೆ, ನಮ್ಮನ್ನು ಮೋಸಗೊಳಿಸುತ್ತಿದ್ದೇವೆ ಏಕೆ?
7 ಯೆಹೋವನ ಮೇಜು ಮತ್ತು ಆತನ ಪೈಶಾಚಿಕ ಶತ್ರುಗಳಿಂದ ಬಡಿಸಲ್ಪಟ್ಟ ಮೇಜು ಎಂದಿಗೂ ರಾಜಿಯಾಗಲಾರವು! ಓಹೊ, ಹೌದು, ಅದನ್ನು ಮುಂಚೆ ಪ್ರಯತ್ನಿಸಿ ನೋಡಲಾಗಿದೆ. ಪ್ರವಾದಿಯಾದ ಎಲೀಯನ ದಿನಗಳ ಪುರಾತನ ಇಸ್ರಾಯೇಲ್ಯರನ್ನು ನೆನಪಿಗೆ ತನ್ನಿರಿ. ಜನರು ಯೆಹೋವನನ್ನು ಆರಾಧಿಸುವುದಾಗಿ ಹೇಳಿಕೊಂಡಿದ್ದರು, ಆದರೆ ಬಾಳನಂತಹ ಬೇರೆ ದೇವರುಗಳು ಸಮೃದ್ಧಿಯನ್ನು ಕೊಡುತ್ತಾರೆಂತಲೂ ಅವರು ನಂಬಿದ್ದರು. ಎಲೀಯನು ಜನರನ್ನು ಸಮೀಪಿಸಿ ಅಂದದ್ದು: “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಯೆಹೋವನು [ಸತ್ಯ] ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ.” ನಿಸ್ಸಂದೇಹವಾಗಿ, ಇಸ್ರಾಯೇಲ್ಯರು ಒಮ್ಮೆ “ಒಂದು ಕಾಲಿನಲ್ಲಿ ಅನಂತರ ಇನ್ನೊಂದರಲ್ಲಿ” ತಡವರಿಸುತ್ತಿದ್ದರು. (1 ಅರಸುಗಳು 18:21; ದ ಜೆರೂಸಲೇಮ್ ಬೈಬಲ್) ತಮ್ಮ ದೇವರ ದೇವತ್ವವನ್ನು ರುಜುಪಡಿಸಲು ಬಾಳನ ಯಾಜಕರನ್ನು ಎಲೀಯನು ಪಂಥಕ್ಕೆ ಕರೆದನು. ಒಂದು ಬಲಿಯರ್ಪಣೆಯ ಮೇಲೆ ಪರಲೋಕದಿಂದ ಬೆಂಕಿಯನ್ನು ತರಶಕ್ತನಾದ ದೇವರು ಸತ್ಯದೇವರಾಗಿ ಪರಿಣಮಿಸಲಿದ್ದನು. ಬಹಳ ಪ್ರಯತ್ನವನ್ನು ಮಾಡಿದಾಗ್ಯೂ, ಬಾಳನ ಯಾಜಕರು ಸೋತುಹೋದರು. ಅನಂತರ ಎಲೀಯನು ಕೇವಲ ಪ್ರಾರ್ಥಿಸಿದ್ದು: “ಯೆಹೋವನೇ, ಕಿವಿಗೊಡು; ಯೆಹೋವನಾದ ನೀನೊಬ್ಬನೇ [ಸತ್ಯ] ದೇವರೂ ಆಗಿರುತ್ತೀ ಎಂಬದನ್ನು ಇವರಿಗೆ ತಿಳಿಯಪಡಿಸು.” ಕೂಡಲೆ ಯೆಹೋವನ ಕಡೆಯಿಂದ ಬೆಂಕಿಯು ಪರಲೋಕದಿಂದ ಇಳಿದುಬಂದು ನೀರು-ತೊಯ್ದ ಯಜ್ಞಮಾಂಸವನ್ನು ದಹಿಸಿಬಿಟ್ಟಿತು. ಯೆಹೋವನ ದೇವತ್ವದ ಮನತಟ್ಟುವ ಪ್ರದರ್ಶನದಿಂದ ಪ್ರೇರೇಪಿತರಾಗಿ, ಜನರು ಎಲೀಯನಿಗೆ ವಿಧೇಯರಾದರು ಮತ್ತು ಬಾಳನ 450 ಪ್ರವಾದಿಗಳನ್ನೆಲ್ಲಾ ಸಂಹರಿಸಿಬಿಟ್ಟರು. (1 ಅರಸುಗಳು 18:24-40) ಆದುದರಿಂದ ಅಂತೆಯೆ ಇಂದು, ನಾವು ಯೆಹೋವನನ್ನು ಸತ್ಯ ದೇವರಾಗಿ ಅಂಗೀಕರಿಸಬೇಕು ಮತ್ತು ಈ ಮೊದಲೆ ನಾವು ಹಾಗೆ ಮಾಡಿರದಿದ್ದಲ್ಲಿ ಕೇವಲ ಆತನ ಮೇಜಿನಲ್ಲಿ ಮಾತ್ರ ಊಟಮಾಡಲು ದೃಢನಿಶ್ಚಯದಿಂದ ತಿರುಗಬೇಕು.
‘ನಂಬಿಗಸ್ತ ಆಳು’ ಯೆಹೋವನ ಮೇಜಿನಲ್ಲಿ ಬಡಿಸುತ್ತಾನೆ
8. ತನ್ನ ಸಾನ್ನಿಧ್ಯದ ಸಮಯದಲ್ಲಿ ತನ್ನ ಶಿಷ್ಯರನ್ನು ಆತ್ಮಿಕವಾಗಿ ಉಣಿಸಲು ಯಾವ ಆಳನ್ನು ಉಪಯೋಗಿಸುವೆನೆಂದು ಯೇಸು ಮುಂತಿಳಿಸಿದನು, ಮತ್ತು ಆ ಆಳಿನ ಗುರುತೇನು?
8 ತನ್ನ ಸಾನ್ನಿಧ್ಯದ ಸಮಯದಲ್ಲಿ ಒಬ್ಬ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ತನ್ನ ಶಿಷ್ಯರಿಗೆ ಆತ್ಮಿಕ ಆಹಾರವನ್ನು ಒದಗಿಸುವನು ಎಂದು ಕರ್ತನಾದ ಯೇಸು ಕ್ರಿಸ್ತನು ಮುಂತಿಳಿಸಿದನು: “ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಅಳು ಧನ್ಯನು. ಅಂಥವನನ್ನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು ಎಂದು ನಿಜವಾಗಿ ಹೇಳುತ್ತೇನೆ.” (ಮತ್ತಾಯ 24:45-47) ಈ ಆಳು ಯಾವನೇ ಒಬ್ಬ ಏಕ ವ್ಯಕ್ತಿಯಲ್ಲ ಬದಲಿಗೆ ಸಮರ್ಪಿತ, ಅಭಿಷಿಕ್ತ ಕ್ರೈಸ್ತರ ಒಂದು ವರ್ಗವಾಗಿ ಪರಿಣಮಿಸಿದ್ದಾನೆ. ಈ ವರ್ಗವು ಯೆಹೋವನ ಮೇಜಿನಲ್ಲಿ ಅಭಿಷಿಕ್ತ ಉಳಿಕೆಯವರಿಗೆ ಮತ್ತು “ಮಹಾ ಸಮೂಹ” ದವರಿಗೆ ಇಬ್ಬರಿಗೂ ಅತ್ಯುತ್ತಮವಾದ ಆತ್ಮಿಕ ಆಹಾರವನ್ನು ಬಡಿಸಿರುತ್ತದೆ. ಈಗ 40 ಲಕ್ಷಕ್ಕಿಂತಲೂ ಹೆಚ್ಚು ಪ್ರಬಲವಾದ ಮಹಾ ಸಮೂಹದವರು ಅಭಿಷಿಕ್ತ ಉಳಿಕೆಯವರೊಂದಿಗೆ ಯೆಹೋವ ದೇವರ ವಿಶ್ವ ಪರಮಾಧಿಕಾರಕ್ಕಾಗಿ ಮತ್ತು ಯಾವುದರ ಮೂಲಕ ಅವನು ತನ್ನ ಪವಿತ್ರ ನಾಮವನ್ನು ಪವಿತ್ರೀಕರಿಸಲಿರುವನೊ ಆತನ ಆ ರಾಜ್ಯಕ್ಕಾಗಿ ತಮ್ಮ ನಿಲುವನ್ನು ತೆಗೆದುಕೊಂಡಿದ್ದಾರೆ.—ಪ್ರಕಟನೆ 7:9-17.
9. ಯೆಹೋವನ ಸಾಕ್ಷಿಗಳಿಗೆ ಆತ್ಮಿಕ ಆಹಾರವನ್ನು ಒದಗಿಸಲು ಆಳು ವರ್ಗವು ಯಾವ ಸಾಧನವನ್ನು ಉಪಯೋಗಿಸುತ್ತಿದೆ, ಮತ್ತು ಅವರ ಆತ್ಮಿಕ ಔತಣವು ಹೇಗೆ ಪ್ರವಾದನಾರೂಪವಾಗಿ ವರ್ಣಿಸಲ್ಪಟ್ಟಿದೆ?
9 ಈ ನಂಬಿಗಸ್ತ ಆಳು ವರ್ಗವು ಯೆಹೋವನ ಸಾಕ್ಷಿಗಳೆಲ್ಲರಿಗೆ ಆತ್ಮಿಕ ಪೋಷಣೆಯನ್ನು ಒದಗಿಸುವುದಕ್ಕಾಗಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯನ್ನು ಉಪಯೋಗಿಸುತ್ತಲಿದೆ. ಕ್ರೈಸ್ತಪ್ರಪಂಚ ಮತ್ತು ಉಳಿದ ಈ ವಿಷಯಗಳ ವ್ಯವಸ್ಥೆಯ ಜೀವದಾಯಕ ಆತ್ಮಿಕ ಆಹಾರದ ಕೊರತೆಯಿಂದಾಗಿ ಹಸಿದಿರುವಾಗ, ಯೆಹೋವನ ಸಾಕ್ಷಿಗಳಾದರೋ ಔತಣದೂಟವನ್ನು ಮಾಡುತ್ತಿದ್ದಾರೆ. (ಆಮೋಸ 8:11) ಇದು ಯೆಶಾಯ 25:6ರ ಪ್ರವಾದನೆಯ ನೆರವೇರಿಕೆಯಾಗಿದೆ: “ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.” ವಚನಗಳು 7 ಮತ್ತು 8 ತೋರಿಸುವ ಪ್ರಕಾರ, ಈ ಔತಣವು ನಿರಂತರವಾಗಿ ಮುಂದುವರಿಯಲಿದೆ. ಈಗ ಯೆಹೋವನ ದೃಶ್ಯ ಸಂಸ್ಥೆಯಲ್ಲಿರುವ ಎಲ್ಲರಿಗೆ ಇದೆಂಥ ಒಂದು ಆಶೀರ್ವಾದವು, ಮತ್ತು ಭವಿಷ್ಯತ್ತಿನಲ್ಲಿ ಇದು ಎಂಥ ಒಂದು ಆಶೀರ್ವಾದವಾಗಿ ಮುಂದುವರಿಯಲಿದೆ!
ದೆವ್ವಗಳ ಮೇಜಿನ ವಿಷಕಾರಿ ಆಹಾರದ ವಿಷಯ ಎಚ್ಚರವಾಗಿರ್ರಿ
10. (ಎ) ಕೆಟ್ಟ ಆಳು ವರ್ಗದಿಂದ ಯಾವ ವಿಧದ ಆಹಾರವು ನೀಡಲ್ಪಟ್ಟಿರುತ್ತದೆ ಮತ್ತು ಅವರ ಪ್ರಚೋದನೆ ಏನು? (ಬಿ) ಕೆಟ್ಟ ಆಳು ತಮ್ಮ ಮುಂಚಿನ ಜೊತೆ ಆಳುಗಳನ್ನು ಹೇಗೆ ಉಪಚರಿಸುತ್ತದೆ?
10 ದೆವ್ವಗಳ ಮೇಜಿನಲ್ಲಿರುವ ಆಹಾರವು ವಿಷಕಾರಿಯಾಗಿದೆ. ಉದಾಹರಣೆಗೆ, ಕೆಟ್ಟ ಆಳು ವರ್ಗದಿಂದ ಮತ್ತು ಧರ್ಮಭ್ರಷ್ಟರಿಂದ ಒದಗಿಸಲ್ಪಡುವ ಆಹಾರವನ್ನು ಗಮನಿಸಿರಿ. ಅದು ಪೋಷಿಸುವುದೂ ಇಲ್ಲ; ಅಥವಾ ಭಕ್ತಿವೃದ್ಧಿ ಮಾಡುವುದೂ ಇಲ್ಲ. ಅದು ಆರೋಗ್ಯಕರವಾದುದಲ್ಲ. ಅದು ಹಾಗಿರಸಾಧ್ಯವಿಲ್ಲ, ಯಾಕಂದರೆ ಮತಭ್ರಷ್ಟರು ಯೆಹೋವನ ಮೇಜಿನ ಮೇಲೆ ಉಣ್ಣುವುದನ್ನು ನಿಲ್ಲಿಸಿದ್ದಾರೆ. ಫಲಿತಾಂಶವಾಗಿ, ಅವರು ವಿಕಸಿಸಿಕೊಂಡಿದ್ದ ಹೊಸ ವ್ಯಕ್ತಿತ್ವದ ಯಾವುದೇ ವಿಷಯವು ಹೋಗಿಬಿಟ್ಟಿದೆ. ಅವರನ್ನು ಪ್ರಚೋದಿಸುವಂಥಾದ್ದು ಪವಿತ್ರ ಆತ್ಮವಲ್ಲ, ಬದಲಿಗೆ ತೀಕ್ಷೈವಾದ ನಿಷ್ಟುರತೆ. ಅವರ ಮನಸ್ಸನ್ನು ಆಕ್ರಮಿಸಿರುವ ಒಂದೇ ಗುರಿಯು—ಯೇಸು ಮುಂತಿಳಿಸಿದಂತೆ, ತಮ್ಮ ಮುಂಚಿನ ಜೊತೆ ಆಳುಗಳನ್ನು ಹೊಡೆಯುವುದೇ ಆಗಿದೆ.—ಮತ್ತಾಯ 24:48, 49.
11. ಆತ್ಮಿಕ ಆಹಾರದ ಒಬ್ಬನ ಆಯ್ಕೆಯ ಬಗ್ಗೆ ಸಿ.ಟಿ. ರಸೆಲರು ಬರೆದದ್ದೇನು ಮತ್ತು ಯೆಹೋವನ ಮೇಜನ್ನು ತ್ಯಜಿಸುವವರನ್ನು ಅವರು ಹೇಗೆ ವರ್ಣಿಸಿದರು?
11 ಉದಾಹರಣೆಗೆ, 1909 ರಷ್ಟು ಹಿಂದೆ, ವಾಚ್ ಟವರ್ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಸಿ.ಟಿ. ರಸೆಲ್, ಯೆಹೋವನ ಮೇಜನ್ನು ಬಿಟ್ಟುಹೋದವರೂ ಮತ್ತು ಅನಂತರ ಅವರ ಮುಂಚಿನ ಜೊತೆ ಆಳುಗಳನ್ನು ಸತಾಯಿಸಲಾರಂಭಿಸಿದವರೂ ಆದವರ ಕುರಿತು ಬರೆದರು. ಅಕ್ಟೋಬರ 1, 1909ರ ದ ವಾಚ್ ಟವರ್ ಹೇಳಿದ್ದು: “ಯಾರು ತಮ್ಮನ್ನು ಅಭಿವೃದ್ಧಿಗೊಳಿಸುವ ಅಥವಾ ಇತರರನ್ನು ನಂಬಿಕೆಯಲ್ಲಿ ಮತ್ತು ಆತ್ಮದ ಫಲಗಳ ವಿಕಸನದಲ್ಲಿ ಕಟ್ಟುವ ಬದಲಿಗೆ, ಸೊಸೈಟಿಯಿಂದ ಮತ್ತು ಅದರ ಕಾರ್ಯದಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತಾರೊ ಅವರೆಲ್ಲರು, ವಿರುದ್ಧವಾದುದನ್ನು ಮಾಡುವಂತೆ ತೋರಿಬರುತ್ತಾರೆ—ಒಮ್ಮೆ ಯಾವುದಕ್ಕಾಗಿ ಅವರು ದುಡಿದಿದ್ದರೊ ಅದೇ ಹೇತುವಿಗೆ ಕೇಡುಮಾಡಲು ಯತ್ನಿಸಿ, ಹೆಚ್ಚು ಯಾ ಕಡಿಮೆ ಗದ್ದಲದೊಂದಿಗೆ, ಕೇವಲ ತಮಗೆ ಮತ್ತು ತದ್ರೀತಿಯ ಜಗಳಗಂಟಿ ಸ್ವಭಾವವುಳ್ಳ ಇತರರಿಗೆ ಹಾನಿಮಾಡುತ್ತಾ, ಕ್ರಮೇಣ ವಿಸ್ಮೃತಿಯನ್ನು ಹೊಂದುತ್ತಾರೆ. . . . ಬೇರೆ ಮೇಜುಗಳಲ್ಲಿ ಇಷ್ಟೇ ಒಳ್ಳೆಯ ಯಾ ಇದಕ್ಕಿಂತ ಉತ್ತಮ ಆಹಾರವನ್ನು ತಾವು ಪಡೆಯಬಲ್ಲರೆಂದು, ಅಥವಾ ಅಷ್ಟೇ ಉತ್ತಮವಾಗಿರುವುದನ್ನು ಯಾ ಅದಕ್ಕಿಂತಲೂ ಉತ್ತಮವಾಗಿರುವುದನ್ನು ತಾವೇ ಉತ್ಪಾದಿಸಶಕ್ತರೆಂದು ಕೆಲವರು ನೆನಸುವುದಾದರೆ—ಅವರು ತಮ್ಮ ದಾರಿಯನ್ನು ಹಿಡಿಯಲಿ. . . . ಆದರೆ ಇತರರು ತಮ್ಮ ಮೆಚ್ಚಿನ ಆಹಾರ ಮತ್ತು ಬೆಳಕನ್ನು ಪಡೆಯಲಿಕ್ಕಾಗಿ ಎಲ್ಲಾದರೂ ಮತ್ತು ಎಲ್ಲೆಲ್ಲೂ ಹೋಗುವಂತೆ ನಾವು ಇಚ್ಛಿಸುವುದಾದರೂ, ಆಶ್ಚರ್ಯಕರವಾಗಿ, ನಮ್ಮ ವಿರೋಧಿಗಳಾದವರು ಒಂದು ಅತಿ ಭಿನ್ನವಾದ ಮಾರ್ಗವನ್ನು ತೆಗೆದುಕೊಳ್ಳುತ್ತಾರೆ. ‘ನನಗಿಷ್ಟವಾದ ಸಂಗತಿಯನ್ನು ನಾನು ಕಂಡುಕೊಂಡಿದ್ದೇನೆ; ಶುಭಮಸ್ತು!’ ಎಂದು ಲೋಕದ ಪೌರುಷ ಭಾವದಲ್ಲಿ ಹೇಳಿಬಿಡುವ ಬದಲಿಗೆ, ಐಹಿಕ ಜನರು ತೋರಿಸುವುದಾಗಿ ನಾವೆಂದೂ ತಿಳಿಯದಷ್ಟು ಮಟ್ಟಿಗಿನ ‘ಶರೀರಭಾವದ ಮತ್ತು ಪಿಶಾಚನ ಕೃತ್ಯಗಳಾದ’ ಕೋಪ, ಹಗೆಸಾಧನೆ, ದ್ವೇಷ, ಕಲಹವನ್ನು ಅವರು ಪ್ರದರ್ಶಿಸುತ್ತಾರೆ. ಅವರು ಹುಚ್ಚಿನಿಂದ, ಸೈತಾನಿಕ ಉನ್ಮತ್ತತೆಯಿಂದ ಪೀಡಿತರಾದವರಂತೆ ಕಾಣುತ್ತಾರೆ. ಅವರಲ್ಲಿ ಕೆಲವರು ನಮ್ಮನ್ನು ಸದೆಬಡಿಯುತ್ತಾರೆ ಮತ್ತು ಅನಂತರ ಸದೆಬಡಿದವರು ನಾವೆಂದು ವಾದಿಸುತ್ತಾರೆ. ಕ್ಷುದ್ರವಾದ ಸುಳ್ಳುಗಳನ್ನು ಹೇಳಲು ಮತ್ತು ಬರೆಯಲು ಅವರು ಸಿದ್ಧರಾಗಿರುತ್ತಾರೆ ಮತ್ತು ನೀಚತನವನ್ನು ನಡಿಸಲೂ ಇಳಿಯುತ್ತಾರೆ.”
12. (ಎ) ಮತಭ್ರಷ್ಟರು ತಮ್ಮ ಜೊತೆ ಆಳುಗಳನ್ನು ಹೊಡೆಯುವುದು ಹೇಗೆ? (ಬಿ) ಮತಭ್ರಷ್ಟರ ಬರಹಗಳಲ್ಲಿ ಕುತೂಹಲದಿಂದ ಪಾಲಿಗರಾಗುವುದು ಏಕೆ ಅಪಾಯಕಾರಿಯಾಗಿದೆ?
12 ಹೌದು, ವಕ್ರತೆಗಳು, ಅರೆಸತ್ಯಗಳು, ಮತ್ತು ಶುದ್ಧಸುಳ್ಳಿಗೆ ಯತ್ನೈಸುವ ಸಾಹಿತ್ಯವನ್ನು ಮತಭ್ರಷ್ಟರು ಪ್ರಕಾಶಿಸುತ್ತಾರೆ. ಅಜಾಗರೂಕರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾ, ಸಾಕ್ಷಿ ಅಧಿವೇಶನಗಳಲ್ಲೂ ಅವರು ವಿರೋಧ ಪ್ರದರ್ಶನ ಮಾಡುತ್ತಾರೆ. ಆದುದರಿಂದ ಅಂಥ ಬರಹಗಳನ್ನು ಉಣ್ಣಲು ಮತ್ತು ಅವರ ದೂಷಣೆಯ ಮಾತನ್ನು ಕೇಳಲು ನಮ್ಮ ಕುತೂಹಲವು ನಮ್ಮನ್ನು ಪ್ರೇರಿಸುವಂತೆ ಬಿಡುವುದು ಅಪಾಯಕರ ಸಂಗತಿಯಾಗಿದೆ! ಅದು ವೈಯಕ್ತಿಕವಾಗಿ ನಮಗೆ ಒಂದು ಕೇಡೆಂದು ನಾವು ನೆನಸದೆ ಇರಬಹುದಾದರೂ, ಅಲ್ಲಿ ಕೇಡಿದೆ. ಏಕೆ? ಒಂದು ವಿಷಯವೇನಂದರೆ, ಮತಭ್ರಷ್ಟ ಸಾಹಿತ್ಯದಲ್ಲಿ ಕೆಲವು “ನಯದ ನುಡಿಗಳಿಂದಲೂ,” “ಹೊಗಳಿಕೆಯ [ಖೋಟಾ, NW] ಮಾತುಗಳಿಂದಲೂ” ಸುಳ್ಳನ್ನು ನಿರೂಪಿಸುತ್ತವೆ. (ರೋಮಾಪುರ 16:17, 18; 2 ಪೇತ್ರ 2:3) ದೆವ್ವಗಳ ಮೇಜಿನಿಂದ ನೀವು ನಿರೀಕ್ಷಿಸುವುದು ಇದನ್ನೇ ಅಲ್ಲವೆ? ಮತಭ್ರಷ್ಟರು ಕೆಲವು ನಿಜತ್ವಗಳನ್ನು ಸಹ ನೀಡಬಹುದಾದರೂ, ಇವು ಸಾಮಾನ್ಯವಾಗಿ ಇತರರನ್ನು ಯೆಹೋವನ ಮೇಜಿನಿಂದ ದೂರ ಸೆಳೆಯುವ ಹೇತುವಿನಿಂದ ಪೂರ್ವಾಪರ ಸಂದರ್ಭವಿಲ್ಲದೆ ತೆಗೆದದ್ದಾಗಿರುತ್ತವೆ. ಅವರ ಎಲ್ಲಾ ಬರಹಗಳು ಕೇವಲ ಟೀಕಿಸುತ್ತವೆ ಮತ್ತು ಹೆಸರು ಕೆಡಿಸುತ್ತವೆ! ಭಕ್ತಿವೃದ್ಧಿ ಮಾಡುವಂಥದ್ದು ಏನೂ ಇಲ್ಲ.
13, 14. ಮತಭ್ರಷ್ಟರ ಮತ್ತು ಅವರ ಅಪಪ್ರಚಾರದ ಫಲಗಳು ಯಾವುವು?
13 ಯೇಸುವಂದದ್ದು: “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ.” (ಮತ್ತಾಯ 7:16) ಹಾಗಾದರೆ ಮತಭ್ರಷ್ಟರ ಮತ್ತು ಅವರ ಪ್ರಕಾಶನಗಳ ಫಲಗಳು ಯಾವುವು? ಅವರ ಅಪಪ್ರಚಾರವನ್ನು ನಾಲ್ಕು ವಿಷಯಗಳು ಗುರುತಿಸುತ್ತವೆ. (1) ಚತುರತೆ. ಎಫೆಸ 4:14 ಹೇಳುವುದೇನಂದರೆ ಅವರು “ತಪ್ಪನ್ನು ಹೆಣೆಯುವುದರಲ್ಲಿ ಕುತಂತ್ರಿಗಳಾಗಿದ್ದಾರೆ.” (2) ಅಹಂಭಾವದ ಬುದ್ಧಿವಂತಿಕೆ. (3) ಪ್ರೀತಿಯ ಅಭಾವ. (4) ವಿವಿಧ ವಿಧಾನಗಳಲ್ಲಿ ಅಪ್ರಾಮಾಣಿಕತೆ. ದೆವ್ವಗಳ ಮೇಜಿನ ಮೇಲಿರುವ ಆಹಾರದ ಘಟಂಕಾಂಶಗಳೇ ಇವು, ಇವೆಲ್ಲವು ಯೆಹೋವನ ಜನರ ನಂಬಿಕೆಯನ್ನು ಕೆಡವಿಹಾಕಲಿಕ್ಕಾಗಿ ರಚಿಸಲ್ಪಟ್ಟಿವೆ.
14 ಮತ್ತು ಇನ್ನೊಂದು ವೈಶಿಷ್ಟ್ಯವಿದೆ. ಮತಭ್ರಷ್ಟರು ಯಾವುದಕ್ಕೆ ಹಿಮ್ಮರಳಿದ್ದಾರೆ? ಹೆಚ್ಚಿನ ಸಂದರ್ಭಗಳಲ್ಲಿ, ಕ್ರೈಸ್ತಪ್ರಪಂಚದ ಮತ್ತು ಅದರ ಬೋಧನೆಗಳ ಅಂಧಕಾರವನ್ನು, ಕ್ರೈಸ್ತರೆಲ್ಲರೂ ಪರಲೋಕಕ್ಕೆ ಹೋಗುವರೆಂಬಂಥ ನಂಬಿಕೆಯನ್ನು ಅವರು ಪುನಃಪ್ರವೇಶಿಸಿದ್ದಾರೆ. ಅದಲ್ಲದೆ, ರಕ್ತ, ತಾಟಸ್ಥ್ಯ, ಮತ್ತು ದೇವರ ರಾಜ್ಯದ ಕುರಿತು ಸಾಕ್ಷಿಕೊಡುವ ಅಗತ್ಯದ ಕುರಿತು ಒಂದು ದೃಢವಾದ ನಿಲುವನ್ನು ಹೆಚ್ಚಿನವರು ಇನ್ನು ಮುಂದೆ ತೆಗೆದುಕೊಳ್ಳುವುದಿಲ್ಲ. ನಾವಾದರೊ ಮಹಾ ಬಾಬೆಲಿನ ಅಂಧಕಾರವನ್ನು ಪಾರಾಗಿದ್ದೇವೆ, ಮತ್ತು ನಾವೆಂದೂ ಅದಕ್ಕೆ ಹಿಂದಿರುಗಲು ಬಯಸುವುದಿಲ್ಲ. (ಪ್ರಕಟನೆ 18:2, 4) “ಸ್ವಸ್ಥಬೋಧನಾ ವಾಕ್ಯಗಳನ್ನು” ಸೇವಿಸಲಿಕ್ಕೆ ನಮಗೆ ಯಾರು ನೆರವಾಗುತ್ತಿದ್ದಾರೊ ಅವರನ್ನು ಈಗ ಯಾರು ಶಾಬ್ದಿಕವಾಗಿ ಹೊಡೆಯುತ್ತಾರೋ ಅಂತಹ ಯೆಹೋವನ ಮೇಜನ್ನು ಧಿಕ್ಕರಿಸುವವರಾದ ಇವರಿಂದ ಮಾಡಲ್ಪಡುವ ಅಪಪ್ರಚಾರದೆಡೆಗೆ, ನಾವು ಇಣುಕಲು ಬಯಸುವುದಾದರೂ ಏತಕ್ಕೆ?—2 ತಿಮೊಥೆಯ 1:13.
15. ಮತಭ್ರಷ್ಟರು ಮಾಡುವ ದೋಷಾರೋಪಗಳನ್ನು ನಾವು ಕೇಳುವಾಗ, ಯಾವ ಬೈಬಲ್ ತತ್ವವು ವಿವೇಕದ ಮಾರ್ಗವನ್ನು ತೆಗೆದುಕೊಳ್ಳಲು ನಮಗೆ ನೆರವಾಗುತ್ತದೆ?
15 ಮತಭ್ರಷ್ಟರು ಮಾಡುವಂತಹ ದೋಷಾರೋಪಗಳ ಕುರಿತು ತಿಳಿದುಕೊಳ್ಳುವ ಕುತೂಹಲ ಕೆಲವರಿಗಿರಬಹುದು. ಅದರೆ ಧರ್ಮೋಪದೇಶಕಾಂಡ 12:30, 31 ರಲ್ಲಿರುವ ತತ್ವವನ್ನು ನಾವು ಹೃದಯಕ್ಕೆ ತೆಗೆದುಕೊಳ್ಳಬೇಕು. ವಾಗ್ದತ್ತ ದೇಶದ ವಿಧರ್ಮಿ ನಿವಾಸಿಗಳನ್ನು ಒಮ್ಮೆ ಹೊರಗಟ್ಟಿದ ಮೇಲೆ ಏನನ್ನು ವರ್ಜಿಸಬೇಕು ಎಂಬುದರ ಕುರಿತು ಇಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಮೋಶೆಯ ಮೂಲಕ ಎಚ್ಚರಿಸಿದನು. “ನೀವು ಭ್ರಮೆಗೊಂಡು ನಿಮ್ಮ ಎದುರಿನಿಂದ ನಾಶವಾಗಿ ಹೋದವರ ದುಷ್ಪದ್ಧತಿಗಳನ್ನು ಅನುಸರಿಸಬಾರದು ನೋಡಿರಿ. ನೀವು—ಈ ದೇಶದ ಜನರು ತಮ್ಮ ದೇವರುಗಳನ್ನು ಹೇಗೆ ಸೇವಿಸುತ್ತಿದ್ದರು? ಹಾಗೆಯೇ ನಾವೂ ಸೇವಿಸುವೆವು ಎಂದು ಹೇಳಿಕೊಳ್ಳುವವರಾಗಿ ಅವರ ದೇವರುಗಳ ವಿಷಯದಲ್ಲಿ ವಿಚಾರಣೆಯನ್ನು ಎಷ್ಟು ಮಾತ್ರವೂ ಮಾಡಬಾರದು. ನೀವು ನಿಮ್ಮ ದೇವರಾದ ಯೆಹೋವನನ್ನು ಹಾಗೆ ಸೇವಿಸಲೇ ಬಾರದು.” ಹೌದು, ಮಾನವ ಕುತೂಹಲವು ಹೇಗೆ ಕಾರ್ಯನಡಿಸುತ್ತದೆಂದು ಯೆಹೋವನು ಬಲ್ಲನು. ಹವ್ವಳನ್ನು, ಮತ್ತು ಲೋಟನ ಹೆಂಡತಿಯನ್ನೂ ನೆನಪಿಸಿರಿ! (ಲೂಕ 17:32; 1 ತಿಮೊಥೆಯ 2:14) ಮತಭ್ರಷ್ಟರು ಏನು ಹೇಳುತ್ತಿದ್ದಾರೆ ಯಾ ಮಾಡುತ್ತಿದ್ದಾರೆ ಎಂಬದಕ್ಕೆ ನಾವೆಂದೂ ಕಿವಿಗೊಡದಿರೋಣ. ಬದಲಿಗೆ ನಾವು ಜನರ ಭಕ್ತಿವೃದ್ಧಿ ಮಾಡುವುದರಲ್ಲಿ ಮಗ್ನರಾಗಿರೋಣ ಮತ್ತು ಯೆಹೋವನ ಮೇಜಿನಲ್ಲಿ ನಿಷ್ಠೆಯಿಂದ ಉಣ್ಣುತ್ತಿರೋಣ!
ಯೆಹೋವನ ಮೇಜು ಮಾತ್ರ ಉಳಿಯುವುದು
16. (ಎ) ಸೈತಾನನಿಗೆ, ಅವನ ದೆವ್ವಗಳಿಗೆ, ಮತ್ತು ಲೋಕದ ರಾಷ್ಟ್ರಗಳು ಯಾವುದರಲ್ಲಿ ಉಣ್ಣುತ್ತಿವೆಯೊ ಆ ಸಾಂಕೇತಿಕ ಮೇಜಿಗೆ ಬೇಗನೆ ಏನು ಸಂಭವಿಸುವುದು? (ಬಿ) ದೆವ್ವಗಳ ಮೇಜಿನಲ್ಲಿ ಉಣ್ಣುವುದನ್ನು ಮುಂದುವರಿಸುವ ಮಾನವರಿಗೆಲ್ಲಾ ಏನು ಸಂಭವಿಸಲಿದೆ?
16 ಬೇಗನೆ, ಮಹಾ ಸಂಕಟವು ಥಟ್ಟನೆ ಪ್ರಾರಂಭಿಸಿ, “ಸರ್ವಶಕ್ತನಾದ ದೇವರ ಮಹಾ ದಿನದ ಯುದ್ಧ” ದಲ್ಲಿ ಒಂದು ಪರಾಕಾಷ್ಠೆಗೆ ಕ್ಷಿಪ್ರವಾಗಿ ಚಲಿಸುವುದು. (ಪ್ರಕಟನೆ 16:14, 16) ಈ ವಿಷಯಗಳ ವ್ಯವಸ್ಥೆಯನ್ನು ಮತ್ತು ಯಾವುದರಲ್ಲಿ ಲೋಕದ ರಾಷ್ಟ್ರಗಳು ಉಣ್ಣುತ್ತಿವೆಯೊ ಆ ಸಾಂಕೇತಿಕ ಮೇಜನ್ನು ಯೆಹೋವನು ನಾಶಮಾಡುವಾಗ, ಅದು ಒಂದು ಉತ್ಕರ್ಷವನ್ನೇರುವುದು. ಯೆಹೋವನು ಪಿಶಾಚನಾದ ಸೈತಾನನ ಇಡೀ ಅದೃಶ್ಯ ಸಂಘಟನೆಯನ್ನು ಸಹ ಅದರ ದೆವ್ವ ಸೇನೆಯೊಂದಿಗೆ ನಾಶಗೊಳಿಸುವನು. ಯಾರು ಸೈತಾನನ ಆತ್ಮಿಕ ಮೇಜಾದ ದೆವ್ವಗಳ ಮೇಜಿನಲ್ಲಿ ಉಣ್ಣುವುದನ್ನು ಮುಂದುವರಿಸುತ್ತಾರೊ ಅವರು ಒಂದು ಅಕ್ಷರಾರ್ಥಕ ಊಟದಲ್ಲಿ ಉಪಸ್ಥಿತರಿರಲು ಒತ್ತಾಯಿಸಲ್ಪಡುವರು, ಅಲ್ಲ, ಸಹಭಾಗಿಗಳಾಗಿ ಅಲ್ಲ, ಬದಲಿಗೆ ಮುಖ್ಯ ಭಕ್ಷ್ಯದೋಪಾದಿ ಅವರ ನಾಶನಕ್ಕೆ!—ನೋಡಿ ಯೆಹೆಜ್ಕೇಲ 39:4; ಪ್ರಕಟನೆ 19:17, 18.
17. ಯಾರು ಯೆಹೋವನ ಮೇಜಿನಲ್ಲಿ ಒಂದರಲ್ಲಿಯೆ ಉಣ್ಣುತ್ತಾರೊ ಅವರಿಗೆ ಯಾವ ಆಶೀರ್ವಾದಗಳು ಬರುವುವು?
17 ಕೇವಲ ಯೆಹೋವನ ಮೇಜು ಉಳಿಯುವುದು. ಅದರಲ್ಲಿ ಯಾರು ಗಣ್ಯತಾಪೂರ್ವಕವಾಗಿ ಉಣ್ಣುತ್ತಿದ್ದಾರೋ ಅವರು ಕಾಪಾಡಿ ಉಳಿಸಲ್ಪಡುವರು ಮತ್ತು ಅಲ್ಲಿ ನಿರಂತರವಾಗಿ ಉಣ್ಣುವ ಸುಯೋಗವನ್ನು ಹೊಂದುವರು. ಯಾವುದೇ ವಿಧದ ಆಹಾರದ ಅಭಾವಗಳು ಪುನಃ ಎಂದೂ ಅವರನ್ನು ಬೆದರಿಸವು. (ಕೀರ್ತನೆ 67:6; 72:16) ಪರಿಪೂರ್ಣ ಆರೋಗ್ಯದಲ್ಲಿ ಅವರು ಯೆಹೋವ ದೇವರನ್ನು ಪ್ರಮೋದವನದಲ್ಲಿ ಸೇವಿಸುವರು! ಕಟ್ಟಕಡೆಗೆ ಪ್ರಕಟನೆ 21:4ರ ಭಾವೋದ್ರೇಕಗೊಳಿಸುವ ಮಾತುಗಳು ಮಹಿಮಾಯುಕ್ತವಾಗಿ ನೆರವೇರುವುವು: “[ಅವನು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” ಇನ್ನು ಮುಂದೆ ಯಾವ ವಿರೋಧವೂ ಇಲ್ಲದಿರುವುದರಿಂದ, ಪ್ರಮೋದವನ ಭೂಮಿಯನ್ನು ನಿವಾಸಿಸುವ ವಿಮೋಚಿತ ಮಾನವಕುಲದ ಮೇಲೆ ಅನಂತ ದೈವಿಕ ಅನುಗ್ರಹವು ಸುರಿಯುವಾಗ, ಯೆಹೋವ ದೇವರ ವಿಶ್ವ ಪರಮಾಧಿಕಾರವು ಎಲ್ಲೆಡೆಗಳಲ್ಲಿ ಮತ್ತು ಸದಾ ಸರ್ವಕಾಲಕ್ಕೂ ಪ್ರಚಲಿತವಾಗಿರುವುದು. ಈ ಬಹುಮಾನವನ್ನು ಸಂಪಾದಿಸಲಿಕ್ಕಾಗಿ, ಅತ್ಯುತ್ತಮವಾದ ಆತ್ಮಿಕ ಆಹಾರದಿಂದ ತುಳುಕುತ್ತಿರುವ ಯೆಹೋವನ ಮೇಜಿನಲ್ಲಿ ಒಂದರಲ್ಲಿಯೆ ಸಹಭಾಗಿಗಳಾಗಲು ನಾವೆಲ್ಲರೂ ದೃಢನಿಶ್ಚಯವನ್ನು ಮಾಡೋಣ!
ನೀವು ಹೇಗೆ ಉತ್ತರಿಸುವಿರಿ?
▫ ಪೈಶಾಚಿಕ ಬೋಧನೆಗಳಿಂದ ಮೋಸಗೊಳಿಸಲ್ಪಡುವುದನ್ನು ನಾವು ಹೇಗೆ ವರ್ಜಿಸಬಲ್ಲೆವು?
▫ ಯೆಹೋವನ ಮೇಜಿನಲ್ಲಿ ಮತ್ತು ದೆವ್ವಗಳ ಮೇಜಿನಲ್ಲಿ ಎರಡರಲ್ಲೂ ಏಕೆ ನಾವು ಯಶಸ್ವಿಯಾಗಿ ಉಣ್ಣಲಾರೆವು?
▫ ಮತಭ್ರಷ್ಟರಿಂದ ಯಾವ ವಿಧದ ಆಹಾರವು ನೀಡಲ್ಪಡುತ್ತದೆ?
▫ ಮತಭ್ರಷ್ಟರ ಆರೋಪಗಳ ಕುರಿತು ಕುತೂಹಲದಿಂದಿರುವುದು ಏಕೆ ಅಪಾಯಕಾರಿಯಾಗಿದೆ?
▫ ಮತಭ್ರಷ್ಟರ ಫಲಗಳು ಯಾವುವು?
[ಪುಟ 10 ರಲ್ಲಿರುವ ಚಿತ್ರ]
ಯೆಹೋವನ ಮೇಜು ಅತ್ಯುತ್ತಮವಾದ ಆತ್ಮಿಕ ಆಹಾರದಿಂದ ತುಳುಕುತ್ತಿದೆ