ನಿಮ್ಮ ಮನೆವಾರ್ತೆಯವರ ರಕ್ಷಣೆಗಾಗಿ ಕಷ್ಟಪಟ್ಟು ಕೆಲಸಮಾಡಿರಿ
“ಅವರನ್ನು ಯೆಹೋವನ ನೀತಿಶಿಕ್ಷೆ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸುತ್ತಾ ಹೋಗಿರಿ.”—ಎಫೆಸ 6:4, NW.
1, 2. ಯಾವ ಸವಾಲುಗಳನ್ನು ಹೆತ್ತವರು ಇಂದು ಎದುರಿಸುತ್ತಾರೆ?
ಒಂದು ಜನಪ್ರಿಯ ಪತ್ರಿಕೆಯು ಅದನ್ನೊಂದು ಕ್ರಾಂತಿಯೆಂದಿತು. ಇತ್ತೀಚೆಗಿನ ವರ್ಷಗಳಲ್ಲಿ ಕುಟುಂಬದಲ್ಲಿ ಆಗಿರುವಂತಹ ಆಶ್ಚರ್ಯಕರ ಬದಲಾವಣೆಗಳನ್ನು ವರ್ಣಿಸಿದ ಲೇಖನದಲ್ಲಿ ಈ ವಿಷಯವಿತ್ತು. ಇವು “ವಿವಾಹ ವಿಚ್ಛೇದ, ಪುನರ್ವಿವಾಹ, ಪುನರ್ವಿಚ್ಛೇದನ, ಜಾರತನ, ಮತ್ತು ಅಖಂಡ ಕುಟುಂಬಗಳೊಳಗೆ ಹೊಸ ಜಂಜಾಟಗಳ ಒಂದು ಸಾಂಕ್ರಾಮಿಕದ ಫಲಿತಾಂಶವಾಗಿವೆ.” ಇಂತಹ ಒತ್ತಡಗಳು ಮತ್ತು ಜಂಜಾಟಗಳು ಆಶ್ಚರ್ಯಗೊಳಿಸುವಂತಹ ವಿಷಯಗಳಾಗಿಲ್ಲ ಯಾಕೆಂದರೆ, ಈ “ಕಡೇ ದಿವಸಗಳಲ್ಲಿ” ಜನರು “ಕಠಿನ ಸಮಯಗಳನ್ನು” ಎದುರಿಸುವರೆಂದು ಬೈಬಲ್ ಮುಂತಿಳಿಸಿತು.—2 ತಿಮೊಥೆಯ 3:1-5.
2 ಆದುದರಿಂದ ಹಿಂದಿನ ಸಂತತಿಗಳಿಗೆ ತಿಳಿಯದ ಸವಾಲುಗಳನ್ನು ಹೆತ್ತವರು ಇಂದು ಎದುರಿಸುತ್ತಾರೆ. ನಮ್ಮಲ್ಲಿ ಕೆಲವು ಹೆತ್ತವರು ತಮ್ಮ ಮಕ್ಕಳನ್ನು “ಬಾಲ್ಯಾವಸ್ಥೆಯಿಂದ” ದಿವ್ಯ ಮಾರ್ಗಗಳಲ್ಲಿ ಬೆಳೆಸಿದ್ದಾರಾದರೂ, ಅನೇಕ ಕುಟುಂಬಗಳು ಕೇವಲ ಇತ್ತೀಚೆಗೆ “ಸತ್ಯವನ್ನನುಸರಿಸಿ ನಡೆಯ”ಲು ತೊಡಗಿವೆ. (2 ತಿಮೊಥೆಯ 3:15; 3 ಯೋಹಾನ 4) ಹೆತ್ತವರು ಅವರಿಗೆ ದೇವರ ಮಾರ್ಗಗಳನ್ನು ಕಲಿಸಲು ತೊಡಗಿದಾಗ, ಅವರ ಮಕ್ಕಳು ದೊಡ್ಡವರಾಗಿದ್ದಿರಬಹುದು. ಇನ್ನೂ ಅಧಿಕವಾಗಿ, ಒಂಟಿ ಹೆತ್ತವರ ಕುಟುಂಬಗಳ ಮತ್ತು ಮಲಕುಟುಂಬಗಳ ಹೆಚ್ಚಾಗುತ್ತಿರುವ ಸಂಖ್ಯೆಗಳು ನಮ್ಮ ಮಧ್ಯದಲ್ಲಿ ಕಂಡುಕೊಳ್ಳಲ್ಪಡುತ್ತಿವೆ. ನಿಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ಅಪೊಸ್ತಲ ಪೌಲನ ಬುದ್ಧಿವಾದವು ಅನ್ವಯಿಸುತ್ತದೆ: “ಅವರನ್ನು ಯೆಹೋವನ ನೀತಿಶಿಕ್ಷೆ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸುತ್ತಾ ಹೋಗಿರಿ.”—ಎಫೆಸ 6:4, NW.
ಕ್ರೈಸ್ತ ಹೆತ್ತವರು ಮತ್ತು ಅವರ ಪಾತ್ರಗಳು
3, 4. (ಎ) ಯಾವ ಅಂಶಗಳು ತಂದೆಗಳ ಪಾತ್ರವು ಕುಗ್ಗುವಂತೆ ಮಾಡಿವೆ? (ಬಿ) ಕ್ರೈಸ್ತ ತಂದೆಗಳೇಕೆ ಅನ್ನಸಂಪಾದಿಸುವವರಿಗಿಂತ ಹೆಚ್ಚಿನವರಾಗಿರಬೇಕು?
3 ಎಫೆಸ 6:4 ರಲ್ಲಿರುವ ತನ್ನ ಮಾತುಗಳನ್ನು ಪೌಲನು ಪ್ರಥಮವಾಗಿ “ತಂದೆ” ಗಳಿಗೆ ಸಂಬೋಧಿಸಿದನೆಂದು ಗಮನಿಸಿರಿ. ಹಿಂದಿನ ಸಂತತಿಗಳಲ್ಲಿ “ತಂದೆಗಳು ತಮ್ಮ ಮಕ್ಕಳ ನೈತಿಕ ಹಾಗೂ ಆತ್ಮಿಕ ಪಾಲನೆಗಾಗಿ ಜವಾಬ್ದಾರರಾಗಿದ್ದರು; ತಂದೆಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಜವಾಬ್ದಾರರಾಗಿದ್ದರು. . . . ಆದರೆ ಔದ್ಯೋಗಿಕ ಕ್ರಾಂತಿಯು ಈ ಅನ್ಯೋನ್ಯತೆಯನ್ನು ಕಿತ್ತುಹಾಕಿತು; ತಂದೆಗಳು ತಮ್ಮ ಹೊಲಗಳನ್ನು ಮತ್ತು ಅಂಗಡಿಗಳನ್ನು ಬಿಟ್ಟರು, ಕಾರ್ಖಾನೆಗಳಲ್ಲಿ ಮತ್ತು ತದನಂತರ ಆಫೀಸುಗಳಲ್ಲಿ ಕೆಲಸಮಾಡಲು ತಮ್ಮ ಮನೆಗಳನ್ನು ಬಿಟ್ಟರು. ತಂದೆಗಳು ಒಮ್ಮೆ ಜವಾಬ್ದಾರರಾಗಿದ್ದ ಅನೇಕ ಕರ್ತವ್ಯಗಳನ್ನು ತಾಯಂದಿರು ವಹಿಸಿಕೊಂಡರು. ಹೆಚ್ಚೆಚ್ಚಾಗಿ, ಪಿತೃತ್ವವು ಒಂದು ಅಮೂರ್ತ ಪರಿಕಲ್ಪನೆಯಾಯಿತು,” ಎಂದು ಒಬ್ಬ ಬರಹಗಾರನು ವಿವರಿಸುತ್ತಾನೆ.
4 ಕ್ರೈಸ್ತ ಪುರುಷರು: ನಿಮ್ಮ ಮಕ್ಕಳ ತರಬೇತಿ ಮತ್ತು ಪೋಷಣೆಯನ್ನೆಲ್ಲಾ ನಿಮ್ಮ ಹೆಂಡತಿಯರಿಗೆ ಬಿಡುತ್ತಾ, ಕೇವಲ ಅನ್ನಸಂಪಾದಿಸುವವರಾಗಿರುವುದರಲ್ಲಿ ತೃಪ್ತರಾಗಿರಬೇಡಿರಿ. ಪ್ರಾಚೀನ ಸಮಯಗಳ ತಂದೆಗಳನ್ನು ಜ್ಞಾನೋಕ್ತಿ 24:27 ಉತ್ತೇಜಿಸಿದ್ದು: “ನಿನ್ನ ಕೆಲಸದ ಸಾಮಾನುಗಳನ್ನು ಸುತ್ತಲು ಅಣಿಮಾಡು, ನಿವೇಶನದಲ್ಲಿ ಸಿದ್ಧಪಡಿಸು, ಆಮೇಲೆ ನಿನ್ನ ಮನೆಯನ್ನು ಕಟ್ಟು.” ಹಾಗೆಯೇ ಇಂದು, ಕೆಲಸಮಾಡುವವರೋಪಾದಿ, ಜೀವನೋಪಾಯಕ್ಕಾಗಿ ದೀರ್ಘವಾಗಿ ಮತ್ತು ಕಠಿನವಾಗಿ ಶ್ರಮಿಸುವ ಅಗತ್ಯ ನಿಮಗಿರಬಹುದು. (1 ತಿಮೊಥೆಯ 5:8) ಹಾಗಿದ್ದರೂ ತದನಂತರ, “ನಿಮ್ಮ ಮನೆಯನ್ನು ಕಟ್ಟ”ಲು—ಭಾವನಾತ್ಮಕವಾಗಿ ಹಾಗೂ ಆತ್ಮಿಕವಾಗಿ—ಸಮಯವನ್ನು ದಯವಿಟ್ಟು ತೆಗೆದುಕೊಳ್ಳಿ.
5. ಕ್ರೈಸ್ತ ಹೆಂಡತಿಯರು ತಮ್ಮ ಮನೆವಾರ್ತೆಗಳ ರಕ್ಷಣೆಗಾಗಿ ಹೇಗೆ ಕೆಲಸಮಾಡಬಲ್ಲರು?
5 ಕ್ರೈಸ್ತ ಹೆಂಡತಿಯರು: ನಿಮ್ಮ ಮನೆವಾರ್ತೆಯವರ ರಕ್ಷಣೆಗಾಗಿ ನೀವು ಕೂಡ ಕಷ್ಟಪಟ್ಟು ಕೆಲಸಮಾಡಬೇಕು. ಜ್ಞಾನೋಕ್ತಿ 14:1 ಹೇಳುವುದು: “ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು.” ಮದುವೆಯ ಜೊತೆಗಾರರಂತೆ, ನೀವು ಮತ್ತು ನಿಮ್ಮ ಗಂಡನು ನಿಮ್ಮ ಸಂತಾನದ ತರಬೇತಿಯ ಹೊಣೆಯನ್ನು ಹಂಚಿಕೊಳ್ಳಿರಿ. (ಜ್ಞಾನೋಕ್ತಿ 22:6; ಮಲಾಕಿಯ 2:14) ಇದು ನಿಮ್ಮ ಮಕ್ಕಳನ್ನು ಶಿಕ್ಷಿಸುವುದನ್ನು, ಅವರನ್ನು ಕ್ರೈಸ್ತ ಕೂಟಗಳಿಗೆ ಮತ್ತು ಕ್ಷೇತ್ರ ಶುಶ್ರೂಷೆಗೆ ಸಿದ್ಧಮಾಡುವುದನ್ನು, ಯಾ ನಿಮ್ಮ ಗಂಡನಿಗೆ ಮಾಡಲು ಸಾಧ್ಯವಾಗಿರದಿದ್ದಲ್ಲಿ ಕುಟುಂಬ ಅಭ್ಯಾಸವನ್ನೂ ನಡೆಸುವುದನ್ನು ಒಳಗೊಳ್ಳಬಹುದು. ನಿಮ್ಮ ಮಕ್ಕಳಿಗೆ ಮನೆವಾರ್ತೆಯ ಕೌಶಲಗಳನ್ನು, ಒಳ್ಳೆಯ ನಡವಳಿಯನ್ನು, ಶಾರೀರಿಕ ಆರೋಗ್ಯ ಸೂತ್ರಗಳನ್ನು, ಮತ್ತು ಇತರ ಅನೇಕ ಸಹಾಯಕಾರಿ ವಿಷಯಗಳನ್ನು ಕಲಿಸಲು ಕೂಡ ನೀವು ಹೆಚ್ಚಿನದನ್ನು ಮಾಡಸಾಧ್ಯವಿದೆ. (ತೀತ 2:5) ಈ ರೀತಿಯಲ್ಲಿ ಗಂಡಂದಿರು ಮತ್ತು ಹೆಂಡತಿಯರು ಒಟ್ಟಾಗಿ ಕೆಲಸಮಾಡುವಾಗ, ತಮ್ಮ ಮಕ್ಕಳ ಅಗತ್ಯಗಳನ್ನು ಅವರು ಉತ್ತಮವಾಗಿ ಪೂರೈಸಬಲ್ಲರು. ಆ ಅಗತ್ಯಗಳಲ್ಲಿ ಕೆಲವು ಯಾವುವು?
ಅವರ ಭಾವನಾತ್ಮಕ ಅಗತ್ಯಗಳಿಗೆ ಲಕ್ಷ್ಯಕೊಡುವುದು
6. ತಾಯಂದಿರು ಮತ್ತು ತಂದೆಗಳು ತಮ್ಮ ಮಕ್ಕಳ ಭಾವನಾತ್ಮಕ ವಿಕಸನದಲ್ಲಿ ಯಾವ ಪಾತ್ರವನ್ನು ವಹಿಸುತ್ತಾರೆ?
6 “ತಾಯಿಯು ತನ್ನ ಮಕ್ಕಳನ್ನು ಪೋಷಿಸು” ವಾಗ ಅವರಿಗೆ ಸುರಕ್ಷಿತ, ಭದ್ರ, ಪ್ರೀತಿಸಲ್ಪಡುವ ಅನಿಸಿಕೆ ಉಂಟಾಗುತ್ತದೆ. (1 ಥೆಸಲೊನೀಕ 2:7; ಕೀರ್ತನೆ 22:9) ತಮ್ಮ ಶಿಶುಗಳ ಮೇಲೆ ಅಪರಿಮಿತ ಗಮನವನ್ನು ಹರಿಸುವ ಉತ್ತೇಜನವನ್ನು ಕೊಂಚ ತಾಯಂದಿರು ತಡೆಯಬಲ್ಲರು. ಪ್ರವಾದಿಯಾದ ಯೆಶಾಯನು ಕೇಳಿದ್ದು: “ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ?” (ಯೆಶಾಯ 49:15) ಹೀಗೆ ತಾಯಂದಿರು ಮಕ್ಕಳ ಭಾವನಾತ್ಮಕ ಬೆಳವಣಿಗೆಯಲ್ಲಿ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಆದರೂ, ತಂದೆಗಳು ಕೂಡ ಈ ವಿಷಯದಲ್ಲಿ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಕುಟುಂಬ ಶಿಕ್ಷಕ ಪೌಲ್ ಲೂಯಿಜ್ ಹೇಳುವುದು: “ತನ್ನ ತಂದೆಯೊಂದಿಗೆ ಒಂದು ಆರೋಗ್ಯಕರ ಸಂಬಂಧವನ್ನು ವರದಿಸಿದ ಒಬ್ಬ [ಬಾಲಾಪರಾಧಿ] ಮಗುವನ್ನು ಎಂದಾದರೂ ಭೇಟಿಯಾದ ಯಾವುದೇ ಕೇಸು ನಿರ್ವಾಹಕನನ್ನು ನಾನು ಎಂದಿಗೂ ಕೇಳಿರುವುದಿಲ್ಲ. ನೂರರುಗಳಲ್ಲಿ ಒಂದು ಮಗು ಕೂಡ ಇಲ್ಲ.”
7, 8. (ಎ) ಯೆಹೋವ ದೇವರ ಮತ್ತು ಆತನ ಮಗನ ನಡುವೆ ಒಂದು ಬಲವಾದ ಬಂಧದ ಯಾವ ಪ್ರಮಾಣವಿದೆ? (ಬಿ) ತಂದೆಗಳು ತಮ್ಮ ಮಕ್ಕಳೊಂದಿಗೆ ಒಂದು ಪ್ರೀತಿಯ ಬಂಧವನ್ನು ಹೇಗೆ ರೂಪಿಸಬಲ್ಲರು?
7 ಆದುದರಿಂದ ಕ್ರೈಸ್ತ ತಂದೆಗಳು ಜಾಗರೂಕವಾಗಿ ತಮ್ಮ ಮಕ್ಕಳೊಂದಿಗೆ ಒಂದು ಪ್ರೀತಿಪರ ಬಂಧವನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಉದಾಹರಣೆಗೆ, ಯೆಹೋವ ದೇವರು ಮತ್ತು ಯೇಸು ಕ್ರಿಸ್ತನನ್ನು ಪರಿಗಣಿಸಿರಿ. ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ, ಯೆಹೋವನು ಘೋಷಿಸಿದ್ದು: “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ.” (ಲೂಕ 3:22) ಆ ಕೆಲವೇ ಮಾತುಗಳಲ್ಲಿ ಎಷ್ಟೊಂದು ವ್ಯಕ್ತಪಡಿಸಲಾಗಿದೆ! ಯೆಹೋವನು (1) ತನ್ನ ಮಗನನ್ನು ಅಂಗೀಕರಿಸಿದನು, (2) ಯೇಸುವಿಗಾಗಿರುವ ತನ್ನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದನು, ಮತ್ತು (3) ಯೇಸುವಿನ ಕುರಿತು ಮೆಚ್ಚಿಗೆಯನ್ನು ತಿಳಿಯಪಡಿಸಿದನು. ಆದರೂ, ಯೆಹೋವನು ತನ್ನ ಮಗನಿಗಾಗಿ ಆತನ ಪ್ರೀತಿಯನ್ನು ವ್ಯಕ್ತಪಡಿಸಿದ್ದು ಇದೊಂದೇ ಬಾರಿಯಲ್ಲ. ಯೇಸು ತದನಂತರ ತನ್ನ ತಂದೆಗೆ ಹೇಳಿದ್ದು: “ಲೋಕವು ಹುಟ್ಟುವದಕ್ಕಿಂತ ಮುಂಚೆಯೇ ನೀನು ನನ್ನನ್ನು ಪ್ರೀತಿಸಿ”ದಿ. (ಯೋಹಾನ 17:24) ಹಾಗಿರುವಲ್ಲಿ, ನಿಜವಾಗಿಯೂ ಎಲ್ಲ ವಿಧೇಯ ಗಂಡು ಮತ್ತು ಹೆಣ್ಣು ಮಕ್ಕಳಿಗೆ ತಮ್ಮ ತಂದೆಗಳಿಂದ ಅಂಗೀಕಾರ, ಪ್ರೀತಿ, ಮತ್ತು ಮೆಚ್ಚಿಗೆಯ ಅಗತ್ಯವಿರುವುದಿಲ್ಲವೊ?
8 ನೀವೊಬ್ಬ ತಂದೆಯಾಗಿರುವಲ್ಲಿ, ಬಹುಶಃ ಪ್ರೀತಿಯ ಯೋಗ್ಯವಾದ ಶಾರೀರಿಕ ಮತ್ತು ಶಾಬ್ದಿಕ ಅಭಿವ್ಯಕ್ತಿಗಳನ್ನು ಕ್ರಮವಾಗಿ ಮಾಡುವುದರ ಮೂಲಕ ನಿಮ್ಮ ಮಕ್ಕಳೊಂದಿಗೆ ಒಂದು ಪ್ರೀತಿಪರ ಬಂಧವನ್ನು ರೂಪಿಸಲು ಹೆಚ್ಚಿನದನ್ನು ನೀವು ಮಾಡಬಲ್ಲಿರಿ. ವಿಶೇಷವಾಗಿ ಅವರು ತಮ್ಮ ಸ್ವಂತ ತಂದೆಗಳಿಂದ ಮುಕ್ತವಾಗಿ ಪ್ರೀತಿಯನ್ನು ಎಂದಿಗೂ ಪಡೆಯದಿರುವಲ್ಲಿ, ತಮ್ಮ ಪ್ರೀತಿಯನ್ನು ತೋರಿಸುವುದು ಕೆಲವು ಪುರುಷರಿಗೆ ಕಠಿನವಾಗಿರುತ್ತದೆ ಎಂಬುದು ನಿಜ. ಆದರೆ ನಿಮ್ಮ ಮಕ್ಕಳಿಗೆ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ವಕ್ರವಾದ ಪ್ರಯತ್ನವೂ ಕೂಡ ಶಕ್ತಿಶಾಲಿಯಾದ ಪ್ರಭಾವವನ್ನು ಬೀರಬಲ್ಲದು. ಏನೇ ಆದರೂ, “ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.” (1 ಕೊರಿಂಥ 8:1) ನಿಮ್ಮ ತಂದೆಯಂತಹ ಪ್ರೀತಿಯಿಂದ ನಿಮ್ಮ ಮಕ್ಕಳಲ್ಲಿ ಭದ್ರತೆಯ ಅನಿಸಿಕೆ ಇರುವುದಾದರೆ, ‘ನಿಜವಾದ ಪುತ್ರರು ಮತ್ತು ಪುತ್ರಿಯರು’ ಆಗಿರಲು ಅವರು ಹೆಚ್ಚಿನ ಒಲವುಳ್ಳವರಾಗಿರುವರು ಮತ್ತು ನಿಮ್ಮಲ್ಲಿ ಅಂತರಂಗವನ್ನು ಹೇಳಿಕೊಳ್ಳಲು ಅವರು ಹಿಂಜರಿಯರು.—ಜ್ಞಾನೋಕ್ತಿ 4:3.
ಅವರ ಆತ್ಮಿಕ ಅಗತ್ಯಗಳಿಗೆ ಲಕ್ಷ್ಯಕೊಡುವುದು
9. (ಎ) ದೇವ ಭಯವಿದ್ದ ಇಸ್ರಾಯೇಲ್ಯ ಹೆತ್ತವರು ತಮ್ಮ ಕುಟುಂಬಗಳ ಆತ್ಮಿಕ ಅಗತ್ಯಗಳಿಗೆ ಹೇಗೆ ಲಕ್ಷ್ಯನೀಡಿದರು? (ಬಿ) ತಮ್ಮ ಮಕ್ಕಳಿಗೆ ಅನೌಪಚಾರಿಕವಾಗಿ ಕಲಿಸಲು ಯಾವ ಅವಕಾಶಗಳು ಕ್ರೈಸ್ತರಿಗಿವೆ?
9 ಮಕ್ಕಳಿಗೆ ಆತ್ಮಿಕ ಅಗತ್ಯಗಳು ಕೂಡ ಇವೆ. (ಮತ್ತಾಯ 5:3) ಮೋಶೆ ಇಸ್ರಾಯೇಲ್ಯ ಹೆತ್ತವರನ್ನು ಪ್ರೋತ್ಸಾಹಿಸಿದ್ದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆಕಟ್ಟಿಕೊಳ್ಳಬೇಕು.” (ಧರ್ಮೋಪದೇಶಕಾಂಡ 6:6, 7) ನೀವೊಬ್ಬ ಕ್ರೈಸ್ತ ಹೆತ್ತವರಾಗಿರುವುದಾದರೆ, ಉಪದೇಶಿಸುವುದರಲ್ಲಿ ಹೆಚ್ಚಿನದನ್ನು ನೀವು ಅನೌಪಚಾರಿಕವಾಗಿ, “ದಾರಿನಡೆಯುವಾಗ” ಮಾಡಬಲ್ಲಿರಿ. ಒಟ್ಟಿಗೆ ಪ್ರಯಾಣ ಮಾಡುವಾಗ, ಖರೀದಿ ಮಾಡುವಾಗ, ಯಾ ನಿಮ್ಮ ಮಕ್ಕಳೊಂದಿಗೆ ಕ್ರೈಸ್ತ ಶುಶ್ರೂಷೆಯಲ್ಲಿ ಮನೆಯಿಂದ ಮನೆಗೆ ಜೊತೆಯಾಗಿ ನಡೆಯುವಾಗ ವ್ಯಯಿಸಿದ ಸಮಯವು, ವಿಶ್ರಾಂತ ಹಿನ್ನೆಲೆಯಲ್ಲಿ ಉಪದೇಶವನ್ನು ನೀಡುವ ಹಿತಕರ ಅವಕಾಶಗಳನ್ನು ಒದಗಿಸುತ್ತದೆ. ಊಟದ ಸಮಯಗಳು ವಿಶೇಷವಾಗಿ ಮಾತಾಡಲು ಕುಟುಂಬಗಳಿಗೆ ಒಳ್ಳೆಯ ಸಮಯವಾಗಿದೆ. “ದಿನದಲ್ಲಿ ಆದ ವಿಷಯಗಳ ಕುರಿತು ಮಾತಾಡಲು ನಾವು ಊಟದ ಸಮಯನ್ನು ಉಪಯೋಗಿಸುತ್ತೇವೆ,” ಎಂದು ಒಬ್ಬ ಹೆತ್ತವರು ವಿವರಿಸುತ್ತಾರೆ.
10. ಕುಟುಂಬ ಅಧ್ಯಯನವು ಕೆಲವೊಮ್ಮೆ ಒಂದು ಸವಾಲಾಗಿದೆ ಏಕೆ, ಮತ್ತು ಯಾವ ದೃಢ ಸಂಕಲ್ಪವನ್ನು ಹೆತ್ತವರು ಹೊಂದಿರಬೇಕು?
10 ಹಾಗಿದ್ದರೂ, ನಿಮ್ಮ ಮಕ್ಕಳೊಂದಿಗೆ ಕ್ರಮವಾದ ಬೈಬಲ್ ಅಧ್ಯಯನದ ಮೂಲಕ ನೀಡುವ ಔಪಚಾರಿಕ ಉಪದೇಶವೂ ಕೂಡ ಪ್ರಾಮುಖ್ಯವಾಗಿದೆ. “ಮೂರ್ಖತನವು” ಮಕ್ಕಳ “ಮನಸ್ಸಿಗೆ ಸಹಜ” ಎಂಬುದು ಒಪ್ಪಿಕೊಳ್ಳತಕ್ಕ ವಿಷಯ. (ಜ್ಞಾನೋಕ್ತಿ 22:15) ಕುಟುಂಬ ಅಧ್ಯಯನವನ್ನು ತಮ್ಮ ಮಕ್ಕಳು ಸುಲಭವಾಗಿ ತಡೆಯಬಲ್ಲರೆಂದು ಕೆಲವು ಹೆತ್ತವರು ಹೇಳುತ್ತಾರೆ. ಹೇಗೆ? ಅಸ್ತಿಮಿತವಾಗಿ ಮತ್ತು ಬೇಸರವಾದಂತೆ ವರ್ತಿಸುವ ಮೂಲಕ, ಕಿರುಕುಳಪಡಿಸುವ (ಸೋದರ ಸೋದರಿಗಳೊಂದಿಗೆ ಜಗಳಗಳಂತಹ) ಅಪಕರ್ಷಣೆಗಳನ್ನು ಸೃಷ್ಟಿಸುವ ಮೂಲಕ, ಅಥವಾ ಮೂಲಭೂತ ಬೈಬಲ್ ಸತ್ಯಗಳ ಕುರಿತು ಅಜ್ಞಾನವನ್ನು ನಟಿಸುವ ಮೂಲಕ. ಇದು ಯಾರಿಗೆ ಹೆಚ್ಚು ಬಲಾಢ್ಯವಾದ ಇಚ್ಛಾಶಕ್ತಿ ಇದೆಯೆನ್ನುವಷ್ಟರ ಮಟ್ಟಿಗೆ ಹೋಗುವುದಾದರೆ, ಒಬ್ಬ ಹೆತ್ತವನ ಇಚ್ಛಾಶಕ್ತಿಯು ಹೆಚ್ಚು ಬಲವುಳ್ಳದ್ದಾಗಿರಬೇಕು. ಕ್ರೈಸ್ತ ಹೆತ್ತವರು ಸೋಲನ್ನೊಪ್ಪಿ, ಮನೆವಾರ್ತೆಯನ್ನು ಮಕ್ಕಳು ನಡೆಸುವಂತೆ ಬಿಡಬಾರದು.—ಹೋಲಿಸಿ ಗಲಾತ್ಯ 6:9.
11. ಕುಟುಂಬ ಅಧ್ಯಯನವನ್ನು ಆನಂದದಾಯಕವಾಗಿ ಹೇಗೆ ಮಾಡಸಾಧ್ಯವಿದೆ?
11 ನಿಮ್ಮ ಮಕ್ಕಳು ಕುಟುಂಬ ಅಧ್ಯಯನವನ್ನು ಆನಂದಿಸದಿರುವಲ್ಲಿ, ಬಹುಶಃ ಕೆಲವು ಬದಲಾವಣೆಗಳನ್ನು ಮಾಡಸಾಧ್ಯವಿದೆ. ಉದಾಹರಣೆಗೆ, ಅಧ್ಯಯನವು ನಿಮ್ಮ ಮಕ್ಕಳ ಇತ್ತೀಚೆಗಿನ ತಪ್ಪುಗಳ ವಿಮರ್ಶೆಗಾಗಿ ಒಂದು ನೆವದಂತೆ ಉಪಯೋಗಿಸಲಾಗುತ್ತಿದೆಯೆ? ಬಹುಶಃ ಅಂತಹ ಸಮಸ್ಯೆಗಳನ್ನು ಏಕಾಂತದಲ್ಲಿ ಚರ್ಚಿಸುವುದು ಅತ್ಯುತ್ತಮವಾಗಿರುವುದು. ನಿಮ್ಮ ಅಧ್ಯಯನವು ಕ್ರಮವಾಗಿ ನಡೆಸಲ್ಪಡುತ್ತದೊ? ಅದನ್ನು ಒಂದು ಅಚ್ಚುಮೆಚ್ಚಿನ ಟೆಲಿವಿಷನ್ ಕಾರ್ಯಕ್ರಮಕ್ಕಾಗಿ ಯಾ ಕ್ರೀಡೆಗಾಗಿ ನೀವು ರದ್ದು ಪಡಿಸುವುದಾದರೆ, ಬಹುಶಃ ನಿಮ್ಮ ಮಕ್ಕಳು ಅಧ್ಯಯನವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲಾರರು. ಅಧ್ಯಯನವನ್ನು ನಡೆಸುವ ನಿಮ್ಮ ವಿಧಾನದಲ್ಲಿ ನೀವು ಶ್ರದ್ಧೆಯುಳ್ಳವರೂ ಉತ್ಸಾಹವುಳ್ಳವರೂ ಆಗಿದ್ದೀರೊ? (ರೋಮಾಪುರ 12:8) ಹೌದು, ಅಧ್ಯಯನವು ಆನಂದದಾಯಕವಾಗಿರಬೇಕು. ಎಲ್ಲ ಮಕ್ಕಳನ್ನು ಒಳಗೂಡಿಸಲು ಪ್ರಯತ್ನಿಸಿರಿ. ಅವರ ಭಾಗವಹಿಸುವಿಕೆಗಾಗಿ ನಿಮ್ಮ ಮಕ್ಕಳನ್ನು ಆದರದಿಂದ ಪ್ರಶಂಸಿಸುತ್ತಾ, ಸಕಾರಾತ್ಮಕವಾಗಿಯೂ ಭಕ್ತಿವೃದ್ಧಿಯನ್ನುಂಟುಮಾಡುವವರಾಗಿಯೂ ಇರ್ರಿ. ನಿಶ್ಚಯವಾಗಿಯೂ ಕೇವಲ ವಿಷಯವನ್ನು ಆವರಿಸಬೇಡಿರಿ, ಆದರೆ ಹೃದಯಗಳನ್ನು ತಲಪಲು ಪ್ರಯತ್ನಿಸಿರಿ.—ಜ್ಞಾನೋಕ್ತಿ 23:15.
ನೀತಿಯಲ್ಲಿ ಶಿಕ್ಷಿಸುವುದು
12. ನೀತಿಶಿಕ್ಷೆಯು ಯಾಕೆ ಯಾವಾಗಲೂ ಶಾರೀರಿಕ ದಂಡನೆಯನ್ನು ಒಳಗೊಳ್ಳುವುದಿಲ್ಲ?
12 ಮಕ್ಕಳಿಗೆ ನೀತಿಶಿಕ್ಷೆಯ ಬಲವಾದ ಅಗತ್ಯವೂ ಸಹ ಇರುತ್ತದೆ. ಹೆತ್ತವರೋಪಾದಿ, ಅವರಿಗಾಗಿ ನೀವು ಮಿತಿಗಳನ್ನು ಇಡಬೇಕು. ಜ್ಞಾನೋಕ್ತಿ 13:24 ಹೇಳುವುದು: “ಬೆತ್ತಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ ಪಿತ ಪುತ್ರನಿಗೆ ಮಿತ್ರ.” ಆದರೂ, ನೀತಿಶಿಕ್ಷೆಯು ಯಾವಾಗಲೂ ಶಾರೀರಿಕ ರೀತಿಯಲ್ಲಿ ನೀಡಲ್ಪಡಬೇಕೆಂದು ಬೈಬಲ್ ಅರ್ಥೈಸುವುದಿಲ್ಲ. ಜ್ಞಾನೋಕ್ತಿ 8:33, NW ಹೇಳುವುದು: “ನೀತಿಶಿಕ್ಷೆಗೆ ಕಿವಿಗೊಡಿರಿ,” ಮತ್ತು “ಮಂದನಿಗೆ ನೂರು ಪೆಟ್ಟು ಹೊಡೆಯುವದಕ್ಕಿಂತಲೂ ಗದರಿಕೆಯೇ ವಿವೇಕಿಗೆ ಹೆಚ್ಚಾದ ಶಿಕ್ಷೆ,” ಎಂದು ನಮಗೆ ಹೇಳಲಾಗಿದೆ.—ಜ್ಞಾನೋಕ್ತಿ 17:10.
13. ಮಗುವಿಗೆ ನೀತಿಶಿಕ್ಷೆಯನ್ನು ಹೇಗೆ ನೀಡಬೇಕು?
13 ಕೆಲವು ಸಂದರ್ಭಗಳಲ್ಲಿ, ಕೊಂಚ ಶಾರೀರಿಕ ನೀತಿಶಿಕ್ಷೆಯು ಕೂಡ ಸೂಕ್ತವಾಗಿರಬಹುದು. ಆದರೆ ಕೋಪದಲ್ಲಿ ನಿರ್ವಹಿಸಲ್ಪಡುವುದಾದರೆ, ಬಹುಶಃ ಅದು ಅತಿಯಾದದ್ದೂ ಅಪರಿಣಾಮಕಾರಿಯಾಗಿಯೂ ಇರುವುದು. ಬೈಬಲ್ ಎಚ್ಚರಿಸುವುದು: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.” (ಕೊಲೊಸ್ಸೆ 3:21) ನಿಶ್ಚಯವಾಗಿಯೂ, “ಕೇವಲ ಪೀಡನೆಯು ವಿವೇಕಿಯನ್ನು ಬುದ್ಧಿಗೇಡಿಯಾಗಿ ವರ್ತಿಸುವಂತೆ ಮಾಡಬಹುದು.” (ಪ್ರಸಂಗಿ 7:7, NW) ರೇಗಿಸಲ್ಪಟ್ಟ ಒಬ್ಬ ಯುವಕನು ನೀತಿಯ ಮಟ್ಟಗಳ ವಿರುದ್ಧವೂ ದಂಗೆ ಏಳಬಲ್ಲನು. ದೃಢವಾದ ಆದರೂ ಸಮತೂಕವಾದ ರೀತಿಯಲ್ಲಿ ತಮ್ಮ ಮಕ್ಕಳನ್ನು ನೀತಿಯಲ್ಲಿ ಶಿಕ್ಷಿಸುವುದಕ್ಕೆ ಹೀಗೆ ಹೆತ್ತವರು ಶಾಸ್ತ್ರಗಳನ್ನು ಉಪಯೋಗಿಸಬೇಕು. (2 ತಿಮೊಥೆಯ 3:16) ದಿವ್ಯ ನೀತಿಶಿಕ್ಷೆಯು ಪ್ರೀತಿ ಮತ್ತು ನಮ್ರತೆಯಿಂದ ನೀಡಲ್ಪಡುತ್ತದೆ.—ಹೋಲಿಸಿ 2 ತಿಮೊಥೆಯ 2:24, 25.a
14. ಕೋಪಕ್ಕೆ ಒಳಗಾಗುವ ಅನಿಸಿಕೆ ಆದಾಗ ಹೆತ್ತವರು ಏನು ಮಾಡಬೇಕು?
14 “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದು” ನಿಶ್ಚಯ. (ಯಾಕೋಬ 3:2) ಸಾಧಾರಣವಾಗಿ ಪ್ರೀತಿಸುವ ಒಬ್ಬ ಹೆತ್ತವರು ಗಳಿಗೆಯ ಒತ್ತಡಕ್ಕೆ ವಶವಾಗಸಾಧ್ಯವಿದೆ ಮತ್ತು ಕಠಿನವಾಗಿ ಏನನ್ನಾದರೂ ಹೇಳಬಹುದು ಇಲ್ಲವೆ ಕೋಪದ ಪ್ರದರ್ಶನವನ್ನು ಮಾಡಬಹುದು. (ಕೊಲೊಸ್ಸೆ 3:8) ಅದು ಸಂಭವಿಸುವಲ್ಲಿ, ನಿಮ್ಮ ಮಗುವು ಮಹಾ ಸಂಕಟದಲ್ಲಿ ಯಾ ಸ್ವತಃ ನೀವೇ ಕೋಪಗೊಂಡ ಸ್ಥಿತಿಯಲ್ಲಿರುವುದರೊಂದಿಗೆ ಸೂರ್ಯನು ಮುಳುಗುವಂತೆ ಬಿಡಬೇಡಿರಿ. (ಎಫೆಸ 4:26, 27) ಅದು ಸೂಕ್ತವೆಂದು ತೋರಿದಲ್ಲಿ ಕ್ಷಮಾಪಣೆಯನ್ನು ಕೇಳುತ್ತಾ, ನಿಮ್ಮ ಮಗುವಿನೊಂದಿಗೆ ವಿಷಯವನ್ನು ಬಗೆಹರಿಸಿರಿ. (ಹೋಲಿಸಿ ಮತ್ತಾಯ 5:23, 24.) ಅಂತಹ ದೀನತೆಯ ಪ್ರದರ್ಶನವು ನಿಮ್ಮನ್ನು ಮತ್ತು ನಿಮ್ಮ ಮಗುವನ್ನು ಒಟ್ಟಿಗೆ ಹತ್ತಿರಕ್ಕೆ ಸೆಳೆಯಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಿಲ್ಲವೆಂದು ಮತ್ತು ಕೋಪಕ್ಕೆ ನೀವು ಒಳಗಾಗುವಿರೆಂದು ನಿಮಗನಿಸುವಲ್ಲಿ, ನೇಮಿತ ಸಭಾ ಹಿರಿಯರಿಂದ ಸಹಾಯವನ್ನು ಕೇಳಿರಿ.
ಒಂಟಿ ಹೆತ್ತವರ ಮನೆವಾರ್ತೆಗಳು ಮತ್ತು ಮಲಕುಟುಂಬಗಳು
15. ಒಂಟಿ ಹೆತ್ತವರ ಕುಟುಂಬಗಳಲ್ಲಿರುವ ಮಕ್ಕಳು ಹೇಗೆ ಸಹಾಯಿಸಲ್ಪಡಬಲ್ಲರು?
15 ಆದರೆ ಎಲ್ಲ ಮಕ್ಕಳಿಗೆ ಇಬ್ಬರು ಹೆತ್ತವರ ಬೆಂಬಲ ಇರುವುದಿಲ್ಲ. ಅಮೆರಿಕದಲ್ಲಿ, 4 ಮಕ್ಕಳಲ್ಲಿ ಒಂದು ಮಗುವು ಒಂಟಿ ಹೆತ್ತವರಿಂದ ಬೆಳೆಸಲ್ಪಡುತ್ತಿದೆ. ಬೈಬಲ್ ಸಮಯಗಳಲ್ಲಿ ‘ತಂದೆಗಳಿಲ್ಲದ ಹುಡುಗರು’ ಸಾಮಾನ್ಯವಾಗಿದ್ದರು, ಮತ್ತು ಅವರಿಗಾಗಿ ಚಿಂತೆಯು ಸತತವಾಗಿ ಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. (ವಿಮೋಚನಕಾಂಡ 22:22) ಇಂದು, ಒಂಟಿ ಹೆತ್ತವರ ಕ್ರೈಸ್ತ ಮನೆವಾರ್ತೆಗಳು ಅಂತೆಯೇ ಒತ್ತಡಗಳನ್ನು ಮತ್ತು ಕಷ್ಟಗಳನ್ನು ಎದುರಿಸುತ್ತವೆ, ಆದರೆ ಯೆಹೋವನು “ದಿಕ್ಕಿಲ್ಲದವರಿಗೆ (ತಂದೆಯಿಲ್ಲದ ಹುಡುಗರಿಗೆ, NW) ತಂದೆಯೂ ವಿಧವೆಯರಿಗೆ ಸಹಾಯಕನೂ,” ಎಂದು ಅರಿಯವುದರಲ್ಲಿ ಅವರು ಸಾಂತ್ವನವನ್ನು ಪಡೆದುಕೊಳ್ಳುತ್ತಾರೆ. (ಕೀರ್ತನೆ 68:5) ಕ್ರೈಸ್ತರು “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ (ಅನಾಥರನ್ನು, NW) ವಿಧವೆಯರನ್ನೂ ಪರಾಮರಿ” ಸುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದಾರೆ. (ಯಾಕೋಬ 1:27) ಒಂಟಿ ಹೆತ್ತವರ ಕುಟುಂಬಗಳಿಗೆ ಸಹಾಯ ಮಾಡಲು ಜೊತೆ ವಿಶ್ವಾಸಿಗಳು ಹೆಚ್ಚಿನದನ್ನು ಮಾಡಬಲ್ಲರು.b
16. (ಎ) ಒಂಟಿ ಹೆತ್ತವರು ತಮ್ಮ ಸ್ವಂತ ಮನೆವಾರ್ತೆಗಳ ಪರವಾಗಿ ಏನನ್ನು ಮಾಡಬೇಕು? (ಬಿ) ನೀತಿಶಿಕ್ಷೆಯು ಕಷ್ಟಕರವಾಗಿರಬಹುದು ಯಾಕೆ, ಆದರೆ ಅದು ನೀಡಲ್ಪಡಬೇಕು ಯಾಕೆ?
16 ನೀವೊಬ್ಬ ಒಂಟಿ ಹೆತ್ತವರಾಗಿರುವುದಾದರೆ, ನಿಮ್ಮ ಮನೆವಾರ್ತೆಗೆ ಪ್ರಯೋಜನವಾಗುವಂತೆ ಸ್ವತಃ ನೀವೇ ಏನನ್ನು ಮಾಡಬಲ್ಲಿರಿ? ಕುಟುಂಬ ಬೈಬಲ್ ಅಧ್ಯಯನ, ಕೂಟದ ಹಾಜರಿ, ಮತ್ತು ಕ್ಷೇತ್ರ ಶುಶ್ರೂಷೆಯ ಕುರಿತು ನೀವು ಶ್ರಮಶೀಲರಾಗಿರುವ ಅಗತ್ಯವಿದೆ. ಆದರೆ ನೀತಿಶಿಕ್ಷೆಯು, ವಿಶೇಷವಾಗಿ ಕಷ್ಟಕರ ಸವಾಲಾಗಿರಬಹುದು. ಬಹುಶಃ ಮರಣದಲ್ಲಿ ಪ್ರಿಯ ಸಂಗಾತಿಯ ನಷ್ಟವನ್ನು ನೀವು ಇನ್ನೂ ದುಃಖಿಸುತ್ತಿದ್ದೀರಿ. ಅಥವಾ ಕುಸಿದುಬಿದ್ದ ಮದುವೆಯ ಬಗ್ಗೆ ಅಪರಾಧಿ ಅನಿಸಿಕೆಗಳೊಂದಿಗೆ ಯಾ ಕೋಪದೊಂದಿಗೆ ನೀವು ಕಾದಾಡುತ್ತಿರಬಹುದು. ಪಾಲ್ಗೊಂಡ ರಕ್ಷಣೆ ಇರುವಲ್ಲಿ, ನಿಮ್ಮ ಮಗುವು ಬೇರ್ಪಟ್ಟ ಯಾ ವಿವಾಹ ವಿಚ್ಛೇದ ಪಡೆದ ಸಂಗಾತಿಯೊಂದಿಗಿರಲು ಇಷ್ಟಪಡಬಹುದೆಂದು ಕೂಡ ನೀವು ಭಯಪಡಬಹುದು. ಸಮತೂಕದ ನೀತಿಶಿಕ್ಷೆಯನ್ನು ನೀಡುವುದನ್ನು ಅಂತಹ ಸನ್ನಿವೇಶಗಳು ಭಾವನಾತ್ಮಕವಾಗಿ ಕಷ್ಟಗೊಳಿಸಬಹುದು. ಹಾಗಿದ್ದರೂ, “ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 29:15) ಆದುದರಿಂದ ಹಿಂದಿನ ಮದುವೆಯ ಸಂಗಾತಿಯಿಂದ ಅಪರಾಧಿ ಪ್ರಜ್ಞೆ, ಮರುಕ, ಯಾ ಭಾವನಾತ್ಮಕ ಒತ್ತಡಕ್ಕೆ ಒಳಗಾಗುವಂತೆ ಬಿಡಬೇಡಿರಿ. ನ್ಯಾಯವಾದ ಮತ್ತು ಸಮಂಜಸವಾದ ಮಟ್ಟಗಳನ್ನು ಸ್ಥಾಪಿಸಿರಿ. ಬೈಬಲ್ ತತ್ವಗಳ ಒಪ್ಪಂದ ಮಾಡಬೇಡಿರಿ.—ಜ್ಞಾನೋಕ್ತಿ 13:24.
17. ಒಂಟಿ ಹೆತ್ತವರ ಮನೆವಾರ್ತೆಯಲ್ಲಿ ಕುಟುಂಬ ಸದಸ್ಯರ ಪಾತ್ರಗಳು ಹೇಗೆ ಅಸ್ಪಷ್ಟವಾಗಿಗಬಲ್ಲವು, ಮತ್ತು ಇದನ್ನು ತಡೆಯಲು ಏನನ್ನು ಮಾಡಸಾಧ್ಯವಿದೆ?
17 ಒಂಟಿ ತಾಯಿಯು ತನ್ನ ಮಗನನ್ನು ಬದಲಿ ಗಂಡನಂತೆ—ಮನೆಯ ಪುರುಷನಂತೆ—ಯಾ ಮಗಳನ್ನು ಅಂತರಂಗ ಸ್ನೇಹಿತೆಯಂತೆ, ಆಕೆಯನ್ನು ಗಾಢವಾದ ಸಮಸ್ಯೆಗಳಿಂದ ಪೀಡಿಸುತ್ತಾ—ನಡೆಸಿಕೊಳ್ಳುವಲ್ಲಿ ತೊಂದರೆಗಳು ಏಳಬಲ್ಲವು. ಮಗುವಿನೊಂದಿಗೆ ಹಾಗೆ ಮಾಡುವುದು ಅಯೋಗ್ಯವೂ ಗಲಿಬಿಲಿಯನ್ನುಂಟುಮಾಡುವಂಥದ್ದು ಆಗಿದೆ. ಒಬ್ಬ ಹೆತ್ತವರ ಮತ್ತು ಮಗುವಿನ ಪಾತ್ರಗಳು ಅಸ್ಪಷ್ಟವಾಗಿದಾಗ, ನೀತಿಶಿಕ್ಷೆಯು ಭಂಗಗೊಳ್ಳಬಲ್ಲದು. ನೀವು ಹೆತ್ತವರಾಗಿದ್ದೀರೆಂದು ತಿಳಿಯುವಂತಾಗಲಿ. ಬೈಬಲ್ ಆಧಾರಿತ ಸಲಹೆಯ ಅಗತ್ಯವಿರುವ ತಾಯಿಯು ನೀವಾಗಿರುವಲ್ಲಿ, ಅದನ್ನು ಹಿರಿಯರಿಂದ ಅಥವಾ ಒಬ್ಬಾಕೆ ಪ್ರೌಢ ಹಿರಿಯ ಸಹೋದರಿಯಿಂದ ಪಡೆಯಿರಿ.—ಹೋಲಿಸಿ ತೀತ 2:3-5.
18, 19. (ಎ) ಮಲಕುಟುಂಬಗಳು ಎದುರಿಸುವ ಕೆಲವು ಸವಾಲುಗಳು ಯಾವುವು? (ಬಿ) ಮಲಕುಟುಂಬವೊಂದರಲ್ಲಿ ಹೆತ್ತವರು ಮತ್ತು ಮಕ್ಕಳು ವಿವೇಕವನ್ನು ಮತ್ತು ವಿವೇಚನೆಯನ್ನು ಹೇಗೆ ತೋರಿಸಬಲ್ಲರು?
18 ಹಾಗೆಯೇ ಮಲಕುಟುಂಬಗಳು ಕೂಡ ಸವಾಲುಗಳನ್ನು ಎದುರಿಸುತ್ತವೆ. ಅನೇಕ ವೇಳೆ, “ತತ್ಕ್ಷಣದ ಪ್ರೀತಿಯು” ವಿರಳವಾಗಿದೆ ಎಂದು ಮಲಹೆತ್ತವರು ಕಂಡುಕೊಳ್ಳುತ್ತಾರೆ. ಉದಾಹರಣೆಗೆ, ಸ್ವಂತ ಮಕ್ಕಳ ಕಡೆಗೆ ತೋರಿಸುತ್ತೀರಿ ಎಂದು ಕಂಡುಬರಬಹುದಾದ ಯಾವುದೇ ಪಕ್ಷಪಾತಕ್ಕೆ ಮಲಮಕ್ಕಳು ಬಹಳ ಸೂಕ್ಷ್ಮಗ್ರಾಹಿಗಳಾಗಿರಬಹುದು. (ಹೋಲಿಸಿ ಆದಿಕಾಂಡ 37:3, 4.) ವಾಸ್ತವದಲ್ಲಿ, ಮಲಮಕ್ಕಳು ಅಗಲಿದ ತಂದೆ ಯಾ ತಾಯಿಗಾಗಿ ದುಃಖದೊಂದಿಗೆ ಹೆಣಗಾಡುತ್ತಿರಬಹುದು ಮತ್ತು ಒಬ್ಬ ಮಲತಂದೆ ಯಾ ಮಲತಾಯಿಯನ್ನು ಪ್ರೀತಿಸುವುದರಿಂದ ತಾವು ತಮ್ಮ ಸ್ವಂತ ತಂದೆ ಯಾ ತಾಯಿಗೆ ಹೇಗೋ ಅನಿಷ್ಠೆಯನ್ನು ತೋರಿಸುತ್ತೇವೆಂದು ಭಯಪಡಬಹುದು. ಬೇಕಾದ ನೀತಿಶಿಕ್ಷೆಯನ್ನು ನೀಡುವ ಪ್ರಯತ್ನಗಳು, ‘ನೀನು ನನ್ನ ನಿಜವಾದ ತಂದೆ ಯಾ ತಾಯಿ ಅಲ್ಲ!’ ಎಂಬ ತೀಕ್ಷೈವಾದ ಮರುಜ್ಞಾಪನವನ್ನು ಎದುರುಗೊಳ್ಳಬಹುದು.
19 ಜ್ಞಾನೋಕ್ತಿ 24:3 ಹೇಳುವುದು: “ಮನೆಯನ್ನು ಕಟ್ಟುವದಕ್ಕೆ ಜ್ಞಾನವೇ ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕವೇ ಆಧಾರ.” ಹೌದು, ಮಲಕುಟುಂಬವೊಂದು ಸಫಲಗೊಳ್ಳಲು ಎಲ್ಲರಲ್ಲಿ ವಿವೇಕ ಮತ್ತು ವಿವೇಚನೆಯ ಅಗತ್ಯವಿದೆ. ಸಕಾಲದಲ್ಲಿ, ವಿಷಯಗಳು ಬದಲಾಗಿವೆ ಎಂಬ ಅನೇಕ ವೇಳೆ ವೇದನಮಯವಾಗಿರುವ ನಿಜತ್ವವನ್ನು ಮಕ್ಕಳು ಸ್ವೀಕರಿಸಬೇಕು. ಮಲಹೆತ್ತವರು ಕೂಡ ಹಾಗೆಯೇ ತಾಳ್ಮೆಯುಳ್ಳವರೂ ಅನುಕಂಪ ಇರುವವರೂ, ತೋರ್ಕೆಯ ತಿರಸ್ಕಾರವನ್ನು ಎದುರಿಸುವಾಗ ಬೇಗನೆ ಕೋಪಗೊಳ್ಳದಿರುವವರೂ ಆಗಿರಲು ಕಲಿಯಬೇಕು. (ಜ್ಞಾನೋಕ್ತಿ 19:11; ಪ್ರಸಂಗಿ 7:9) ಶಿಸ್ತು ಪಾಲಕನ ಪಾತ್ರವನ್ನು ವಹಿಸಿಕೊಳ್ಳುವ ಮೊದಲು, ಮಲಮಗುವಿನೊಂದಿಗೆ ಗೆಳೆತನವನ್ನು ಸ್ಥಾಪಿಸುವುದರ ಕಡೆಗೆ ಕೆಲಸಮಾಡಿರಿ. ಅಂತಹ ಬಂಧವು ಸ್ಥಾಪಿಸಲ್ಪಡುವ ತನಕ, ನೈಸರ್ಗಿಕ ತಂದೆ ಯಾ ತಾಯಿಯು ಶಿಕ್ಷೆಯನ್ನು ನಿರ್ವಹಿಸುವಂತೆ ಅನುಮತಿಸುವುದು ಉತ್ತಮವೆಂದು ಕೆಲವರು ಪರಿಗಣಿಸಬಹುದು. ಬಿಗುಪುಗಳು ಏಳುವಾಗ, ಸಂಸರ್ಗ ಮಾಡಲು ಪ್ರಯತ್ನಿಸಬೇಕು. “ಒಟ್ಟಿಗೆ ಸಮಾಲೋಚಿಸುವವರಲ್ಲಿ ವಿವೇಕವಿದೆ,” ಎಂದು ಜ್ಞಾನೋಕ್ತಿ 13:10 (NW) ಹೇಳುತ್ತದೆ.c
ನಿಮ್ಮ ಮನೆವಾರ್ತೆಯ ರಕ್ಷಣೆಗಾಗಿ ಕೆಲಸಮಾಡುತ್ತಾ ಇರಿ!
20. ಕ್ರೈಸ್ತ ಕುಟುಂಬದ ತಲೆಗಳು ಏನನ್ನು ಮಾಡಲು ಮುಂದುವರಿಯಬೇಕು?
20 ಬಲವಾದ ಕ್ರೈಸ್ತ ಕುಟುಂಬಗಳು ಅನಿರೀಕ್ಷಿತ ಸಂಗತಿಗಳಲ್ಲ. ನಿಮ್ಮ ಮನೆವಾರ್ತೆಗಳ ರಕ್ಷಣೆಗಾಗಿ ಕುಟುಂಬದ ತಲೆಗಳಾದ ನೀವು ಕಷ್ಟಪಟ್ಟು ಕೆಲಸ ಮಾಡಲು ಮುಂದುವರಿಯಬೇಕು. ಆರೋಗ್ಯಕರವಲ್ಲದ ಗುಣಗಳನ್ನು ಯಾ ಲೌಕಿಕ ಒಲವುಗಳನ್ನು ಗಮನಿಸುತ್ತಾ, ಎಚ್ಚರವಾಗಿರ್ರಿ. ಮಾತು, ನಡತೆ, ಪ್ರೀತಿ, ನಂಬಿಕೆ, ಮತ್ತು ಶುದ್ಧತೆಯಲ್ಲಿ ಒಳ್ಳೆಯ ಮಾದರಿಯನ್ನು ಸ್ಥಾಪಿಸಿರಿ. (1 ತಿಮೊಥೆಯ 4:12) ದೇವರ ಆತ್ಮದ ಫಲಗಳನ್ನು ಪ್ರದರ್ಶಿಸಿರಿ. (ಗಲಾತ್ಯ 5:22, 23) ತಾಳ್ಮೆ, ಪರಿಗಣನೆ, ಕ್ಷಮಾಪಣೆ, ಮತ್ತು ಕೋಮಲತೆಯು, ನಿಮ್ಮ ಮಕ್ಕಳಿಗೆ ದೇವರ ಮಾರ್ಗಗಳನ್ನು ಕಲಿಸಲಿರುವ ನಿಮ್ಮ ಪ್ರಯತ್ನಗಳನ್ನು ಬಲಪಡಿಸುವುವು.—ಕೊಲೊಸ್ಸೆ 3:12-14.
21. ಒಬ್ಬರ ಮನೆಯಲ್ಲಿ ಅನುರಾಗದ, ಸಂತೋಷದ ವಾತಾವರಣವನ್ನು ಹೇಗೆ ಕಾಪಾಡಸಾಧ್ಯವಿದೆ?
21 ದೇವರ ಸಹಾಯದಿಂದ, ನಿಮ್ಮ ಮನೆಯೊಳಗೆ ಸಂತೋಷದ, ಅನುರಾಗದ ಆತ್ಮವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿರಿ. ಪ್ರತಿ ದಿನ ಕಡಿಮೆ ಪಕ್ಷ ಒಂದು ಊಟವನ್ನಾದರೂ ಜೊತೆಯಾಗಿ ಮಾಡಲು ಶ್ರಮಿಸುತ್ತಾ, ಕುಟುಂಬದೋಪಾದಿ ಸಮಯವನ್ನು ಒಟ್ಟಿಗೆ ವ್ಯಯಿಸಿರಿ. ಕ್ರೈಸ್ತ ಕೂಟಗಳು, ಕ್ಷೇತ್ರ ಸೇವೆ, ಮತ್ತು ಕುಟುಂಬ ಅಧ್ಯಯನವು ಆವಶ್ಯಕ. ಆದರೂ, “ನಗುವ ಸಮಯ . . . ಕುಣಿದಾಡುವ ಸಮಯ” ಕೂಡ ಇದೆ. (ಪ್ರಸಂಗಿ 3:1, 4) ಹೌದು, ಚೇತೋಹಾರಿಯಾದ ಮನೋರಂಜನೆಯ ಅವಧಿಗಳನ್ನು ಗೊತ್ತುಪಡಿಸಿರಿ. ವಸ್ತು ಸಂಗ್ರಹಾಲಯಗಳಿಗೆ, ಮೃಗಾಲಯಗಳಿಗೆ, ಮತ್ತು ತದ್ರೀತಿಯ ಸ್ಥಳಗಳಿಗೆ ಭೇಟಿಗಳು ಇಡೀ ಕುಟುಂಬಕ್ಕೆ ಆನಂದದಾಯಕವಾಗಿವೆ. ಅಥವಾ ನೀವು ಟಿವಿಯನ್ನು ಬಂದ್ ಮಾಡಿ, ಹಾಡುತ್ತಾ, ಸಂಗೀತವನ್ನು ಆಲಿಸುತ್ತಾ, ಆಟಗಳನ್ನು ಆಡುತ್ತಾ, ಮತ್ತು ಮಾತಾಡುತ್ತಾ ಸಮಯವನ್ನು ವ್ಯಯಿಸಬಹುದು. ಒಟ್ಟಿಗೆ ಹತ್ತಿರಕ್ಕೆ ಬರುವಂತೆ ಇದು ಕುಟುಂಬಕ್ಕೆ ನೆರವಾಗಬಲ್ಲದು.
22. ನಿಮ್ಮ ಮನೆವಾರ್ತೆಯ ರಕ್ಷಣೆಗಾಗಿ ಯಾಕೆ ನೀವು ಕಷ್ಟಪಟ್ಟು ಕೆಲಸಮಾಡಬೇಕು?
22 “ನೀವು ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿರು” ವಂತೆ ಯೆಹೋವನನ್ನು ಸಂಪೂರ್ಣವಾಗಿ ಮೆಚ್ಚಿಸಲು ಕ್ರೈಸ್ತ ಹೆತ್ತವರಾದ ನೀವೆಲ್ಲರೂ ಕೆಲಸಮಾಡುತ್ತಾ ಮುಂದುವರಿಯುವಂತಾಗಲಿ. (ಕೊಲೊಸ್ಸೆ 1:10) ದೇವರ ವಾಕ್ಯಕ್ಕೆ ವಿಧೇಯತೆಯ ಬಲಿಷ್ಠವಾದ ತಳಪಾಯದ ಮೇಲೆ ನಿಮ್ಮ ಮನೆವಾರ್ತೆಯನ್ನು ಕಟ್ಟಿರಿ. (ಮತ್ತಾಯ 7:24-27) ನಿಮ್ಮ ಮಕ್ಕಳನ್ನು “ಯೆಹೋವನ ನೀತಿಶಿಕ್ಷೆ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸುತ್ತಾ” ಹೋಗುವ ನಿಮ್ಮ ಪ್ರಯತ್ನಗಳಿಗೆ ಆತನ ಅನುಗ್ರಹವಿರುವುದೆಂಬ ಆಶ್ವಾಸನೆಯುಳ್ಳವರಾಗಿರ್ರಿ.—ಎಫೆಸ 6:4.
[ಅಧ್ಯಯನ ಪ್ರಶ್ನೆಗಳು]
a “ಬೈಬಲಿನ ದೃಷ್ಟಿಕೋನ: ‘ಶಿಕ್ಷೆಯ ಬೆತ್ತ’—ಅದು ಅರೂಢಿಯದ್ದೊ?” ಎಂಬ ಲೇಖನವನ್ನು ಸಪ್ಟಂಬರ 8, 1992ರ ಅವೇಕ್! ನಲ್ಲಿ ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
▫ ತಮ್ಮ ಮನೆವಾರ್ತೆಯನ್ನು ಕಟ್ಟುವುದರಲ್ಲಿ ಗಂಡ ಮತ್ತು ಹೆಂಡತಿ ಹೇಗೆ ಸಹಕರಿಸಬಲ್ಲರು?
▫ ಮಕ್ಕಳ ಕೆಲವು ಭಾವನಾತ್ಮಕ ಅಗತ್ಯಗಳು ಯಾವುವು, ಮತ್ತು ಅವುಗಳನ್ನು ಹೇಗೆ ಪೂರೈಸಸಾಧ್ಯವಿದೆ?
▫ ಕುಟುಂಬದ ತಲೆಗಳು ತಮ್ಮ ಮಕ್ಕಳಿಗೆ ಔಪಚಾರಿಕವಾಗಿ ಮತ್ತು ಅನೌಪಚಾರಿಕವಾಗಿ—ಎರಡೂ ರೀತಿಯಲ್ಲಿ ಹೇಗೆ ಕಲಿಸಬಲ್ಲರು?
▫ ಹೆತ್ತವರು ಹೇಗೆ ನೀತಿಯಲ್ಲಿ ಶಿಕ್ಷಿಸಬಲ್ಲರು?
▫ ಒಂಟಿ ಹೆತ್ತವರ ಕುಟುಂಬಗಳ ಮತ್ತು ಮಲಕುಟುಂಬಗಳ ಪ್ರಯೋಜನಕ್ಕಾಗಿ ಏನನ್ನು ಮಾಡಸಾಧ್ಯವಿದೆ?
[ಪುಟ 16 ರಲ್ಲಿರುವ ಚಿತ್ರ]
ಒಂದು ಮಗುವಿನ ಭಾವನಾತ್ಮಕ ವಿಕಸನಕ್ಕೆ ತಂದೆಯ ಪ್ರೀತಿ ಮತ್ತು ಮೆಚ್ಚಿಗೆ ಪ್ರಾಮುಖ್ಯವಾಗಿದೆ