ನಿಜವಾದ ಲೋಕವ್ಯಾಪಕ ಭ್ರಾತೃತ್ವದಲ್ಲಿ ಸಂತುಷ್ಟನು
ವಿಲಿ ಡೇವಿಸ್ ಹೇಳಿರುವಂತೆ
ಮಹಾ ಆರ್ಥಿಕ ಕುಸಿತವು 1934 ರಲ್ಲಿ ಲೋಕವನ್ನು ಬಿಗಿಯಾಗಿ ಹಿಡಿದಿತ್ತು ಮತ್ತು ಅಮೆರಿಕವು ಆರ್ಥಿಕ ಸಂಕ್ಷೋಭೆಯಲ್ಲಿ ಸಂಕಟಪಡುತ್ತಿತ್ತು. ಒಹಾಯೋದ ಕ್ಲೀವ್ಲೆಂಡಿನ ಪ್ರಾಸ್ಪೆಕ್ಟ್ ರಿಲೀಫ್ ಸೇಶ್ಟನಿನ ಹೊರಗೆ ಒಬ್ಬ ಪೊಲೀಸನ ಮತ್ತು ಒಬ್ಬ ಸ್ವತಃ ಘೋಷಿತ ಕಮ್ಯೂನಿಸ್ಟನ ಮಧ್ಯೆ ಜಗಳ ನಡೆಯಿತು. ಪೊಲೀಸನು ಗುಂಡುಹೊಡೆದು ಆ ಕಮ್ಯೂನಿಸ್ಟನನ್ನೂ ಒಬ್ಬ ಪ್ರೇಕ್ಷಕಿಯಾಗಿದ್ದ ನನ್ನ ಅಜ್ಜಿ ವಿನಿ ವಿಲ್ಯಮ್ಸ್ ಎಂಬವರನ್ನೂ ಕೊಂದನು.
ಕಮ್ಯೂನಿಸ್ಟರು ಈ ಮರಣಗಳನ್ನು—ನನ್ನ ಅಜ್ಜಿ ಕಪ್ಪು ಮತ್ತು ಪೊಲೀಸನು ಬಿಳಿ ಆಗಿದ್ದುದರಿಂದ—ಜಾತೀಯ ಗಲಭೆಯಾಗಿ ಮಾಡಲು ಪ್ರಯತ್ನಿಸಿದರು. “ಕುಲಶ್ರೇಷ್ಠತಾ ವಾದಿಗಳಾದ ಕ್ಲೀವ್ಲೆಂಡ್ ಪೊಲೀಸರು,” ಮತ್ತು “ಈ ಕೊಲೆಗಳಿಗೆ ಸೇಡು ತೀರಿಸಿರಿ,” ಎಂಬ ಶಿರೋನಾಮಗಳಿದ್ದ ಸುದ್ದಿಪತ್ರಗಳನ್ನು ಅವರು ಹಂಚಿದರು. ಕಮ್ಯೂನಿಸ್ಟರು ನನ್ನ ಅಜಿಯ್ಜ ಶವಸಂಸ್ಕಾರವನ್ನು ಏರ್ಪಡಿಸಿ ಅದರ ಜಾಗ್ರತೆ ವಹಿಸಿದರು. ಶವ ಹೊತ್ತವರ ಒಂದು ಚಿತ್ರ ನನ್ನಲ್ಲಿದೆ—ಅವರೆಲ್ಲರೂ ಬಿಳೀಜನರು ಮತ್ತು ಎಲ್ಲರೂ ಪಾರ್ಟಿಯ ಸದಸ್ಯರು. ಪ್ರತಿಯೊಬ್ಬನು ತನ್ನ ಬಿಗಿದ ಮುಷ್ಟಿಯನ್ನು—ಆ ಬಳಿಕ ಯಾವುದು ಕರೀ ಶಕ್ತಿಯ ದ್ಯೋತಕವಾಗಿ ಆಯ್ದುಕೊಳ್ಳಲ್ಪಟ್ಟಿತೋ ಆ ರೀತಿಯಲ್ಲಿ—ಮೇಲೆತ್ತಿ ಹಿಡಿದಿದ್ದನು.
ನನ್ನ ಅಜ್ಜಿ ಸತ್ತಾಗ ಅವರ ಮಗಳು ನನ್ನನ್ನು ತನ್ನ ಗರ್ಭದಲ್ಲಿ ಹೊತ್ತುಕೊಂಡಿದ್ದಳು, ಮತ್ತು ನಾಲ್ಕು ತಿಂಗಳುಗಳ ಬಳಿಕ ನಾನು ಹುಟ್ಟಿದೆ. ನಾನು ಮಾತಿನ ಅಡಚಣೆಯುಳ್ಳವನಾಗಿ ಬೆಳೆದೆ. ತೊದಲದೆ ನನಗೆ ಮಾತಾಡಲಾಗುತ್ತಿರಲಿಲ್ಲ, ಆದುದರಿಂದ ನನ್ನ ಆದಿ ಶಾಲಾಶಿಕ್ಷಣದಲ್ಲಿ ವಾಕ್ಚಿಕಿತ್ಸೆ ಕೂಡಿತ್ತು.
ನಾನು ಐದು ವಯಸ್ಸಿನವನಾಗಿದ್ದಾಗ ನನ್ನ ಹೆತ್ತವರು ಪ್ರತ್ಯೇಕ ವಾಸಿಗಳಾದರು ಮತ್ತು ನನ್ನ ಅಕ್ಕನನ್ನೂ ನನ್ನನ್ನೂ ನನ್ನ ತಾಯಿ ಬೆಳೆಸಿದರು. ನನಗೆ ಹತ್ತು ವರ್ಷ ವಯಸ್ಸಾದಾಗ, ನಾನು ಕುಟುಂಬದ ಖರ್ಚಿಗೆ ಸಹಾಯ ಮಾಡಲು ಶಾಲೆ ಮುಗಿದ ಬಳಿಕ ಕಿರಾಣಿ ಸರಕನ್ನು ರವಾನಿಸತೊಡಗಿದೆ. ಎರಡು ವರ್ಷಗಳ ತರುವಾಯ ಶಾಲೆಗೆ ಹೋಗುವ ಮೊದಲೂ ಅದು ಮುಗಿದ ಬಳಿಕವೂ ಕೆಲಸ ಮಾಡಲಾರಂಭಿಸಿ, ಕುಟುಂಬದ ಮುಖ್ಯ ಸಂಬಳಗಾರನಾದೆ. ನನ್ನ ತಾಯಿಯನ್ನು ಆಸ್ಪತ್ರೆಗೆ ಒಯ್ದಾಗ ಮತ್ತು ಅವರಿಗೆ ಅನೇಕ ಶಸ್ತ್ರಚಿಕಿತ್ಸೆಗಳ ಅಗತ್ಯ ಬಿದ್ದಾಗ, ನಾನು ಶಾಲೆ ಬಿಟ್ಟು ಪೂರ್ಣ ಸಮಯ ಕೆಲಸ ಮಾಡಲಾರಂಭಿಸಿದೆ.
ಒಂದು ಭ್ರಾತೃತ್ವಕ್ಕೆ ಪರಿಚಯ ಮಾಡಿಸುವಿಕೆ
ಯೆಹೋವನ ಸಾಕ್ಷಿಗಳಲ್ಲೊಬ್ಬನು 1944 ರಲ್ಲಿ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು ಎಂಬ ಪುಸ್ತಕವನ್ನು ನನ್ನ ಸೋದರಬಂಧುವಿನ ಹೆಂಡತಿಯೊಡನೆ ಬಿಟ್ಟುಹೋದನು, ಮತ್ತು ಅವಳೊಂದಿಗೆ ಆರಂಭಿಸಿದ ಬೈಬಲ್ ಅಧ್ಯಯನದಲ್ಲಿ ನಾನು ಸೇರಿಕೊಂಡೆ. ಅದೇ ವರ್ಷ ನಾನು ಈಸ್ಟ್ಸೈಡ್ ಸಭೆಯಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಗೆ ಹಾಜರಾಗಲಾರಂಭಿಸಿದೆ. ಶಾಲಾ ಶಿಕ್ಷಕ, ಆಲ್ಬರ್ಟ್ ಕ್ರ್ಯಾಡಕ್ಗೆ ನನಗಿದ್ದ ವಾಕ್ ಸಮಸ್ಯೆಯೇ ಇದ್ದರೂ ಅವರು ಅದನ್ನು ಹಿಡಿತದಲ್ಲಿಟ್ಟುಕೊಳ್ಳಲು ಕಲಿತಿದ್ದರು. ಅವರು ನನಗೆ ಎಷ್ಟು ಪ್ರೋತ್ಸಾಹನೆಯಾಗಿದ್ದರು!
ನಮ್ಮ ನೆರೆಹೊರೆಯಲ್ಲಿ ಹೆಚ್ಚಾಗಿ ಇಟ್ಯಾಲ್ಯನ್, ಪೋಲಿಷ್, ಹಂಗೆರಿಯನ್ ಮತ್ತು ಯೆಹೂದಿ ಜನರಿದ್ದರು, ಮತ್ತು ಸಭೆಯಲ್ಲಿ ಈ ಮತ್ತು ಇನ್ನಿತರ ಕುಲ ಗುಂಪುಗಳವರಿದ್ದರು. ನನ್ನ ಸೋದರಬಂಧುವಿನ ಹೆಂಡತಿ ಮತ್ತು ನಾನು ಈ ಬಿಳಿ ಸಭೆಯೊಂದಿಗೆ ಜೊತೆಸೇರಿದ ಆಫ್ರಿಕನ್ ಅಮೆರಿಕನರ ಮಧ್ಯೆ ಮೊದಲಿಗರಾಗಿದ್ದರೂ ಸಾಕ್ಷಿಗಳು ನಮ್ಮ ಕಡೆಗೆ ಯಾವುದೇ ಪಕ್ಷಪಾತವನ್ನು ತೋರಿಸಲಿಲ್ಲ. ವಾಸ್ತವವೇನಂದರೆ, ಅವರು ಕ್ರಮವಾಗಿ ತಮ್ಮ ಮನೆಗಳಲ್ಲಿ ಊಟಕ್ಕಾಗಿ ನನ್ನನ್ನು ಅತಿಥಿಯಾಗಿಸುತ್ತಿದ್ದರು.
ನಾನು 1956 ರಲ್ಲಿ ಶುಶ್ರೂಷಕರ ಅಗತ್ಯ ಎಲ್ಲಿ ಹೆಚ್ಚಾಗಿತ್ತೋ ಆ ಅಮೆರಿಕದ ದಕ್ಷಿಣ ಭಾಗಕ್ಕೆ ಮನೆ ಬದಲಾಯಿಸಿದೆ. ನಾನು ಒಂದು ಬೇಸಗೆಯಲ್ಲಿ ಡಿಸ್ಟ್ರಿಕ್ಟ್ ಅಧಿವೇಶನಕ್ಕಾಗಿ ಉತ್ತರಕ್ಕೆ ಹಿಂದಿರುಗಿದಾಗ ಕ್ಲೀವ್ಲೆಂಡಿನ ಅನೇಕ ಸಹೋದರರು ನನ್ನನ್ನು ಭೇಟಿಯಾಗಿ ನನ್ನ ಚಟುವಟಿಕೆಗಳಲ್ಲಿ ಅನುರಾಗದ ಆಸಕ್ತಿಯನ್ನು ವ್ಯಕ್ತಪಡಿಸಿದರು. ಅವರ ಚಿಂತೆ ನನಗೆ ಒಂದು ಮಹತ್ವದ ಪಾಠವನ್ನು ಕಲಿಸಿತು: ಸದಾ, “ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ” ನೋಡುವುದು.—ಫಿಲಿಪ್ಪಿ 2:4.
ವಿಸ್ತೃತ ಪೂರ್ಣ ಸಮಯದ ಶುಶ್ರೂಷೆ
ಪಯನೀಯರನಾಗಿ ಪೂರ್ಣ ಸಮಯದ ಸಾರುವ ಕೆಲಸದಲ್ಲಿ ಮೂರು ವರ್ಷ ಸೇವೆ ಮಾಡಿದ ಬಳಿಕ, 1959ರ ನವಂಬರದಲ್ಲಿ ನನ್ನನ್ನು ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯ ಕಾರ್ಯಾಲಯವಾದ ನ್ಯೂ ಯಾರ್ಕಿನ ಬ್ರೂಕ್ಲಿನ್ ಬೆತೆಲಿನಲ್ಲಿ ಕೆಲಸ ಮಾಡಲು ಆಮಂತ್ರಿಸಲಾಯಿತು. ನನ್ನನ್ನು ಸರಕು ರವಾನೆ (ಷಿಪ್ಪಿಂಗ್) ಖಾತೆಗೆ ನೇಮಿಸಲಾಯಿತು. ನನ್ನ ಖಾತಾ ಮೇಲ್ವಿಚಾರಕರಾದ ಕ್ಲಾಸ್ ಯೆನ್ಸೆನ್ ಮತ್ತು ನನ್ನ ಕೊಠಡಿ ಸಹವಾಸಿ ವಿಲ್ಯಮ್ ಹ್ಯಾನನ್—ಇಬ್ಬರೂ ಬಿಳಿಯರು—ನನ್ನ ಆತ್ಮಿಕ ತಂದೆಗಳಾದರು. ನಾನು ಬಂದಾಗ ಅವರಲ್ಲಿ ಒಬ್ಬೊಬ್ಬರೂ ಬೆತೆಲಿನಲ್ಲಿ ಆಗಲೆ ಸುಮಾರು 40 ವರ್ಷ ಸೇವೆ ಮಾಡಿದ್ದರು.
ಆದಿ 1960 ಗಳಲ್ಲಿ, ಬೆತೆಲ್ ಕುಟುಂಬದಲ್ಲಿ ಸುಮಾರು 600 ಸದಸ್ಯರಿದ್ದರು ಮತ್ತು ಇವರಲ್ಲಿ ಸುಮಾರು 20 ಜನ ಆಫ್ರಿಕನ್ ಅಮೆರಿಕನರು. ಅಷ್ಟರೊಳಗೆ ಅಮೆರಿಕವು ಕುಲಸಂಬಂಧವಾದ ಕಲಹದಿಂದ ಕುದಿಯಲಾರಂಭಿಸಿತ್ತು ಮತ್ತು ಕುಲ ಸಂಬಂಧಗಳ ಜಗ್ಗು ವಿಪರೀತವಾಗಿತ್ತು. ಆದರೂ, “ದೇವರು ಪಕ್ಷಪಾತಿಯಲ್ಲ,” ಎಂದು ಬೈಬಲು ಕಲಿಸುತ್ತದೆ ಮತ್ತು ನಾವೂ ಪಕ್ಷಪಾತಿಗಳಾಗಿರಬಾರದು. (ಅ. ಕೃತ್ಯಗಳು 10:34, 35) ಪ್ರತಿದಿನ ಬೆಳಗ್ಗೆ ಬೆತೆಲ್ ಮೇಜಿನಲ್ಲಿ ನಮ್ಮ ಮಧ್ಯೆ ನಡೆಯುತ್ತಿದ್ದ ಆತ್ಮಿಕ ಚರ್ಚೆಗಳು ಇಂತಹ ವಿಷಯಗಳಲ್ಲಿ ದೇವರ ವೀಕ್ಷಣವನ್ನು ಅಂಗೀಕರಿಸುವ ನಮ್ಮ ದೃಢತೆಯನ್ನು ಬಲಗೊಳಿಸಲು ಸಹಾಯಮಾಡಿದವು.—ಕೀರ್ತನೆ 19:7.
ಬ್ರೂಕ್ಲಿನ್ ಬೆತೆಲಿನಲ್ಲಿ ಸೇವೆ ಮಾಡುತ್ತಿದ್ದಾಗ ನಾನು ವರ್ಜಿನ್ಯದ ರಿಚ್ಮಂಡಿನ ಒಬ್ಬ ಪಯನೀಯರಳಾಗಿದ್ದ ಲೋಎಸ್ ರಫಿನ್ಳನ್ನು ಭೇಟಿಯಾದೆ, ಮತ್ತು ನಮಗೆ 1964 ರಲ್ಲಿ ವಿವಾಹವಾಯಿತು. ಪೂರ್ಣ ಸಮಯದ ಶುಶ್ರೂಷೆಯಲ್ಲಿ ಉಳಿಯುವುದು ನಮ್ಮ ದೃಢ ನಿಶ್ಚಯವಾಗಿದ್ದುದರಿಂದ, ನಮ್ಮ ವಿವಾಹಾನಂತರ ನಾವು ಅಮೆರಿಕದ ದಕ್ಷಿಣ ಭಾಗಕ್ಕೆ ಹಿಂದಿರುಗಿದೆವು. ಮೊದಲು ನಾವು ವಿಶೇಷ ಪಯನೀಯರರಾಗಿ ಸೇವೆ ಮಾಡಿದೆವು, ಬಳಿಕ 1965 ರಲ್ಲಿ ನನ್ನನ್ನು ಸರ್ಕಿಟ್ ಕೆಲಸಕ್ಕೆ ಆಮಂತ್ರಿಸಲಾಯಿತು. ಮುಂದಿನ ಹತ್ತು ವರ್ಷಗಳಲ್ಲಿ ನಾವು ಕೆಂಟಕಿ, ಟೆಕ್ಸಸ್, ಲೂಯ್ಸಿಯಾನ, ಅಲಬಾಮ, ಜಾರ್ಜಿಯ, ನಾರ್ತ್ ಕ್ಯಾರೊಲೈನ ಮತ್ತು ಮಿಸಿಸಿಪಿಯ ಸಭೆಗಳನ್ನು ಭೇಟಿ ಮಾಡಿದೆವು.
ನಮ್ಮ ಭ್ರಾತೃತ್ವಕ್ಕೆ ಒಂದು ಪರೀಕ್ಷೆ
ಅವು ಮಹಾ ಬದಲಾವಣೆಯ ವರ್ಷಗಳು. ನಾವು ದಕ್ಷಿಣ ಭಾಗಕ್ಕೆ ಹೋಗುವ ಮೊದಲು ಕುಲಗಳನ್ನು ಪ್ರತ್ಯೇಕಿಸಲಾಗಿತ್ತು. ಕಪ್ಪು ಜನರು ಬಿಳಿ ಜನರು ಹೋಗುವ ಶಾಲೆಗೆ ಹೋಗುವುದನ್ನು, ಒಂದೇ ಭೋಜನಾಲಯದಲ್ಲಿ ತಿನ್ನುವುದನ್ನು, ಒಂದೇ ಹೋಟೇಲಿನಲ್ಲಿ ಮಲಗುವುದನ್ನು, ಒಂದೇ ಅಂಗಡಿಯಲ್ಲಿ ಖರೀದಿಸುವುದನ್ನು, ಒಂದೇ ನೀರಿನ ಕೊಳಾಯಿಯಿಂದ ಕುಡಿಯುವುದನ್ನು ಸಹ ಶಾಸನಬದ್ಧವಾಗಿ ನಿಷೇಧಿಸಲಾಗಿತ್ತು. ಆದರೆ 1964 ರಲ್ಲಿ, ಅಮೆರಿಕದ ಶಾಸನ ಸಭೆ, ಸಿವಿಲ್ ರೈಟ್ಸ್ ಮಸೂದೆಯನ್ನು ಜಾರಿಗೆ ತಂದು, ಸಾರಿಗೆ ಸೇರಿ ಸಾರ್ವಜನಿಕ ಸ್ಥಳಗಳ ಬೇಧಭಾವಗಳನ್ನು ನಿಷೇಧಿಸಿತು. ಹೀಗೆ ಜಾತೀಯ ಪ್ರತ್ಯೇಕೀಕರಣಕ್ಕೆ ಇನ್ನು ಮುಂದೆ ಯಾವುದೇ ಶಾಸನಬದ್ಧ ಆಧಾರವಿರಲಿಲ್ಲ.
ಆದಕಾರಣ ಎದ್ದುಬಂದ ಪ್ರಶ್ನೆಯು ಯಾವುದೆಂದರೆ, ಎಲ್ಲ ಕಪ್ಪು ಮತ್ತು ಎಲ್ಲ ಬಿಳಿ ಸಭೆಗಳ ನಮ್ಮ ಸೋದರ ಸೋದರಿಯರು ತಮ್ಮನ್ನು ಏಕೀಕರಿಸಿಕೊಂಡು ಪ್ರೀತಿ, ಮಮತೆಗಳನ್ನು ತೋರಿಸುವರೊ ಇಲ್ಲವೆ ಸಮಾಜದಿಂದ ಒತ್ತಡ ಮತ್ತು ಗತಕಾಲದ ಆಳವಾಗಿ ಕುಳಿತಿರುವ ಅನಿಸಿಕೆಗಳು, ಅವರು ಏಕೀಕರಣವನ್ನು ತಡೆಯುವಂತೆ ಮಾಡುವುವೊ? “ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ,” ಎಂಬ ಶಾಸ್ತ್ರೀಯ ಆಜೆಗ್ಞೆ ಕಿವಿಗೊಡುವುದು ಒಂದು ಪಂಥಾಹ್ವಾನವಾಗಿತ್ತು.—ರೋಮಾಪುರ 12:10.
ವಿಶೇಷವಾಗಿ ದಕ್ಷಿಣ ಭಾಗದಲ್ಲಿ, ಒಬ್ಬನಿಗೆ ಜ್ಞಾಪಿಸಿಕೊಳ್ಳಲಿಕ್ಕಾಗುವ ತನಕ ಬಳಕೆಯಲ್ಲಿದ್ದ ವೀಕ್ಷಣವು, ಕಪ್ಪು ಜನರು ಕೀಳಾದವರೆಂಬುದೇ. ಈ ವೀಕ್ಷಣವನ್ನು ಕಾರ್ಯತಃ ಸಮಾಜದ ಪ್ರತಿಯೊಂದು ಭಾಗದ ಮೂಲಕ—ಚರ್ಚುಗಳನ್ನು ಸೇರಿಸಿ—ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿಸಲಾಗಿತ್ತು. ಆದಕಾರಣ ಕಪ್ಪು ಜನರು ತಮಗೆ ಸಮಾನರು ಎಂದು ವೀಕ್ಷಿಸುವುದು ಕೆಲವು ಬಿಳಿಯರಿಗೆ ಸುಲಭವಾಗಿರಲಿಲ್ಲ. ಅದು ನಮ್ಮ ಭ್ರಾತೃತ್ವಕ್ಕೆ—ಕಪ್ಪು ಜನರಿಗೂ ಬಿಳಿಯರಿಗೂ—ಒಂದು ಪರೀಕ್ಷೆಯ ಸಮಯವಾಗಿತ್ತು.
ಸಂತೋಷಕರವಾಗಿ, ನಮ್ಮ ಸಭೆಗಳ ಏಕೀಕರಣಕ್ಕೆ ಮೊತ್ತದಲ್ಲಿ ಆಶ್ಚರ್ಯಕರವಾದ ಪ್ರತಿವರ್ತನೆ ಬಂದಿತು. ಶತಮಾನಗಳಲ್ಲಿ ಜಾಗ್ರತೆಯಿಂದ ತಪ್ಪಾಗಿ ಕಲಿಸಿದ ಕುಲ ಶ್ರೇಷ್ಠತಾ ವಾದದ ವೀಕ್ಷಣವನ್ನು ಬೇಗನೆ ಅಳಿಸಿಬಿಡಲಾಗಲಿಲ್ಲ. ಆದರೂ ಏಕೀಕರಣ ಆರಂಭವಾದಾಗ, ನಮ್ಮ ಸಹೋದರರಿಂದ ಅದು ಅತ್ಯುತ್ತಮವಾಗಿ ಅಂಗೀಕರಿಸಲ್ಪಟ್ಟಿತು. ಅವರಲ್ಲಿ ಅಧಿಕಾಂಶ ಮಂದಿ ತಮಗೆ ಒಟ್ಟಾಗಿ ಸೇರಿಬರಲು ಸಾಧ್ಯವಾದುದಕ್ಕೆ ಸಂತೋಷಿಸಿದರು.
ರಸಕರವಾಗಿ, ನಮ್ಮ ಸಭೆಗಳ ಈ ಏಕೀಕರಣದಲ್ಲಿ ಸಾಕ್ಷ್ಯೇತರರು ಸಹ ಸಹಕರಿಸಿದರು. ದೃಷ್ಟಾಂತಕ್ಕೆ, ಅಲಬಾಮದ ಲನೆಟ್ನಲ್ಲಿ, ರಾಜ್ಯ ಸಭಾಗೃಹದ ನೆರೆಹೊರೆಯವರಲ್ಲಿ, ಕಪ್ಪು ಜನರು ಕೂಟಗಳಿಗೆ ಬರುವುದರಲ್ಲಿ ಅವರಿಗೆ ಆಕ್ಷೇಪಣೆ ಇದೆಯೊ ಎಂದು ಕೇಳಲಾಯಿತು. ಒಬ್ಬ ಬಿಳಿಯ ವೃದ್ಧೆಯು ಒಬ್ಬ ಕಪ್ಪು ಸಹೋದರನ ಕೈ ಕುಲುಕುತ್ತಾ ಹೇಳಿದ್ದು: “ನೀವು ನಮ್ಮ ನೆರೆಹೊರೆಗೆ ಬಂದು ನಿಮ್ಮ ದೇವರನ್ನು ನಿಮಗಿಷ್ಟವಿರುವಂತೆ ಆರಾಧಿಸಿ!”
ಈತಿಯೋಪ್ಯದಲ್ಲಿ ನಂಬಿಗಸ್ತ ಸಹೋದರರು
ವರ್ಷ 1974 ರಲ್ಲಿ, ನ್ಯೂ ಯಾರ್ಕ್ ಸಿಟಿಯ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾಡ್ನಲ್ಲಿ ಐದೂವರೆ ತಿಂಗಳುಗಳ ಮಿಶನೆರಿ ತರಬೇತನ್ನು ಪಡೆಯುವುದರಲ್ಲಿ ನಾವು ಹರ್ಷಿಸಿದೆವು. ಆ ಬಳಿಕ ನಮ್ಮನ್ನು ಆಫ್ರಿಕದ ಈತಿಯೋಪ್ಯ ದೇಶಕ್ಕೆ ನೇಮಿಸಲಾಯಿತು. ಚಕ್ರವರ್ತಿ ಹೈಲಿ ಸೆಲಾಸಿಯನ್ನು ಆಗ ತಾನೆ ಪದಚ್ಯುತಿ ಮಾಡಿ ಗೃಹಬಂಧನದಲ್ಲಿಡಲಾಗಿತ್ತು. ನಮ್ಮ ಸಾರುವ ಕಾರ್ಯವು ನಿಷೇಧಕ್ಕೊಳಗಾಗಿದ್ದುದರಿಂದ, ನಮ್ಮ ಕ್ರೈಸ್ತ ಸಹೋದರತ್ವದ ಅನುರಾಗದ ಆಪತ್ತೆಯನ್ನು ನಾವು ಗಣ್ಯಮಾಡಿದೆವು.
ಆ ಬಳಿಕ ತಮ್ಮ ಸತ್ಯಾರಾಧನೆಯ ಅಂಟಿಕೊಳ್ಳುವಿಕೆಗಾಗಿ ಸೆರೆಮನೆವಾಸಿಗಳಾದ ಅನೇಕರೊಂದಿಗೆ ನಾವು ವಾಸಿಸಿ ಸೇವೆ ಮಾಡಿದೆವು. ನಮ್ಮ ಪ್ರಿಯ ಮಿತ್ರರಲ್ಲಿ ಕೆಲವರು ವಧೆಗೂ ಒಳಗಾದರು. ಆಡೆರ ಟೆಶೋಮಿ, ಈತಿಯೋಪ್ಯದ ರಾಜಧಾನಿ ಆ್ಯಡಿಸಾಬಬದ ಒಂದು ಸಭೆಯಲ್ಲಿ ನನ್ನ ಜೊತೆಹಿರಿಯನಾಗಿದ್ದನು.a ಮೂರು ವರ್ಷ ಬಂದಿಯಾದ ಬಳಿಕ ಅವನನ್ನು ವಧಿಸಲಾಯಿತು. ಅವನ ಪತ್ನಿ ಆಳವಾಗಿ ದುಃಖಿತಳಾದದ್ದು ಸ್ವಾಭಾವಿಕವಾಗಿತ್ತು. ವರ್ಷಗಳಾನಂತರ ಆಕೆ ಪಯನೀಯರಳಾಗಿ ಸೇವೆ ಮಾಡುತ್ತಾ ಹರ್ಷವನ್ನು ಹೊರಸೂಸುವುದನ್ನು ನೋಡುವುದು ಎಷ್ಟು ಆಹ್ಲಾದಕರ!
ವೊರ್ಕೂ ಆಬೆಬೆ ಎಂಬ ಇನ್ನೊಬ್ಬ ನಂಬಿಗಸ್ತ ಸಹೋದರನಿಗೆ ಎಂಟು ಬಾರಿ ಮರಣಶಿಕ್ಷೆ ವಿಧಿಸಲಾಯಿತು.b ಆದರೆ ಇದು ಅವನನ್ನು ಭಯಗೊಳಿಸಲಿಲ್ಲ! ನಾನು ಕೊನೆಯ ಬಾರಿ ಅವನನ್ನು ನೋಡಿದಾಗ, ಸೆರೆಮನೆಯ ಕಾವಲುಗಾರರು ರೈಫಲಿನ ದಪ್ಪ ತುದಿಯಿಂದ ಜಜ್ಜಿದ ತನ್ನ ಕಿವಿಗಳನ್ನು ಅವನು ನನಗೆ ತೋರಿಸಿದನು. ತನ್ನ ಹೊತ್ತರೂಟ, ಮಧ್ಯಾಹ್ನದೂಟ ಮತ್ತು ರಾತ್ರಿಯೂಟಕ್ಕೆ ತನಗೆ ರೈಫಲ್ ದಪ್ಪತುದಿಗಳೇ ಇದ್ದವೆಂದು ಅವನು ವಿನೋದದಿಂದ ಹೇಳಿದ. ಈಗ ಅವನು ಸತ್ತಿರುವುದಾದರೂ, ಸಹೋದರರು ಅವನನ್ನು ಇನ್ನೂ ಪ್ರೀತಿಯಿಂದ ಜ್ಞಾಪಿಸಿಕೊಳ್ಳುತ್ತಾರೆ.
ಹೈಲೂ ಯೆಮೀರು ಎಂಬವನು ನಾನು ಅಕ್ಕರೆಯಿಂದ ಜ್ಞಾಪಿಸಿಕೊಳ್ಳುವ ಇನ್ನೊಬ್ಬ ಸಹೋದರನು.c ಅವನು ತನ್ನ ಹೆಂಡತಿಗೆ ಆದರ್ಶ ರೀತಿಯ ಪ್ರೀತಿಯನ್ನು ತೋರಿಸಿದನು. ಅವಳ ದಸ್ತಗಿರಿಯಾಗಿತ್ತು, ಆದರೆ ಆಕೆ ಗರ್ಭವತಿಯಾಗಿದ್ದು ಬೇಗನೆ ಹೆರಲಿಕ್ಕಿದ್ದುದರಿಂದ, ತಾನು ಜೆಯ್ಲಿನಲ್ಲಿ ಅವಳ ಸ್ಥಾನವನ್ನು ತೆಗೆದುಕೊಳ್ಳಬಹುದೊ ಎಂದು ಅವನು ಜೆಯ್ಲಿನ ಅಧಿಕಾರಿಗಳನ್ನು ಕೇಳಿದ. ತರುವಾಯ ತನ್ನ ನಂಬಿಕೆಯ ಸಂಬಂಧದಲ್ಲಿ ಅವನು ರಾಜಿಯಾಗದೆ ಇದ್ದಾಗ ಅವನನ್ನು ವಧಿಸಲಾಯಿತು.—ಯೋಹಾನ 15:12, 13; ಎಫೆಸ 5:28.
ಈತಿಯೋಪ್ಯದಲ್ಲಿ ಕೆಡುತ್ತಿದ್ದ ರಾಜಕೀಯ ಪರಿಸ್ಥಿತಿಯ ಕಾರಣದಿಂದ, 1976 ರಲ್ಲಿ ನಾವು ಕೆನ್ಯಕ್ಕೆ ಹೋದೆವು. ಏಳು ವರ್ಷಕಾಲ ನಾವು ಸಂಚಾರ ಕೆಲಸದಲ್ಲಿ ಪೂರ್ವ ಆಫ್ರಿಕದ ಅನೇಕ ದೇಶಗಳ—ಕೆನ್ಯ, ಈತಿಯೋಪ್ಯ, ಸೂಡಾನ್, ಸೇಶೆಲ್ಸ್, ಯುಗಾಂಡ, ಮತ್ತು ಟ್ಯಾನ್ಸನೀಯ—ಸಹೋದರರನ್ನು ಭೇಟಿಯಾಗುತ್ತಾ ಸೇವೆಮಾಡಿದೆವು. ಅನೇಕ ಸಂದರ್ಭಗಳಲ್ಲಿ ನಾನು ಬುರುಂಡಿ ಮತ್ತು ರ್ವಾಂಡ ದೇಶಗಳಿಗೂ, ಆ ದೇಶಗಳಲ್ಲಿ ನಮ್ಮ ಕೆಲಸವನ್ನು ಶಾಸನಬದ್ಧವಾಗಿ ರಿಜಿಸ್ಟರ್ ಮಾಡಲು ಅಧಿಕಾರಿಗಳೊಡನೆ ಮಾತಾಡುವ ಪ್ರತಿನಿಧಿಮಂಡಲಿಯ ಭಾಗವಾಗಿ ಪ್ರಯಾಣಿಸಿದೆ.
ನಮ್ಮ ಕೆಲಸದ ಮೇಲಿದ್ದ ನಿಷೇಧವು ತೆಗೆಯಲ್ಪಟ್ಟ ಬಳಿಕ ಈತಿಯೋಪ್ಯದಲ್ಲಿ ನಡೆದ ಪ್ರಥಮ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ 1992 ರಲ್ಲಿ ಅಲ್ಲಿಗೆ ಹಿಂದಿರುಗುವುದು ಸಂತೋಷಕರವಾಗಿತ್ತು. ಆ ಹಿಂದೆ ಕೇವಲ ಚಿಕ್ಕ ಗುಂಪುಗಳಾಗಿ ಸಹೋದರರು ಕೂಡಿ ಬರುತ್ತಿದ್ದುದರಿಂದ, ಅಲ್ಲಿ ಉಪಸ್ಥಿತರಾಗಿದ್ದ 7,000ಕ್ಕೂ ಹೆಚ್ಚು ಜನರಲ್ಲಿ ಅನೇಕರಿಗೆ ಪರಸ್ಪರ ಪರಿಚಯವಿರಲಿಲ್ಲ. ಹೆಚ್ಚಿನವರು ಪ್ರತಿದಿನ, ಅಧಿವೇಶನದ ಕಾರ್ಯಕ್ರಮ ಪ್ರಾರಂಭಿಸುವುದಕ್ಕೆ ಎರಡು ತಾಸುಗಳ ಮೊದಲೇ ಹಾಜರಿದ್ದರು ಮತ್ತು ಪ್ರೀತಿಯ ಭ್ರಾತೃತ್ವದಲ್ಲಿ ಆನಂದಿಸುತ್ತಾ, ಸಾಯಂಕಾಲ ಬಹಳ ಹೊತ್ತಿನ ವರೆಗೆ ಉಳಿಯುತ್ತಿದ್ದರು.
ಬಣ ಪದ್ಧತಿಯ ಸೋಲು
ಆಫ್ರಿಕದಲ್ಲಿ ಬಣ ಪದ್ಧತಿ ಶತಮಾನಗಳಿಂದ ಬಹಳವಾಗಿ ಹಬ್ಬಿದೆ. ದೃಷ್ಟಾಂತಕ್ಕೆ, ಬುರುಂಡಿ ಮತ್ತು ರ್ವಾಂಡದಲ್ಲಿ ದೊಡ್ಡ ಗೋತ್ರಗಳಾದ ಹೂಟು ಮತ್ತು ಟೂಟ್ಸಿ, ದೀರ್ಘಕಾಲದಿಂದ ಪರಸ್ಪರವಾಗಿ ದ್ವೇಷಿಸಿವೆ. ಈ ದೇಶಗಳು ಬೆಲ್ಚಿಯಮ್ನಿಂದ 1962 ರಲ್ಲಿ ಸ್ವಾತಂತ್ರ್ಯವನ್ನು ಪಡೆದಂದಿನಿಂದ, ಈ ಎರಡು ಬಣಗಳ ಸದಸ್ಯರು ಒಬ್ಬರನ್ನೊಬ್ಬರು ಸಾವಿರಾರು ಸಂಖ್ಯೆಯಲ್ಲಿ ಹತಿಸಿದ್ದಾರೆ. ಆದಕಾರಣ ಯೆಹೋವನ ಸಾಕ್ಷಿಗಳಾಗಿ ಪರಿಣಮಿಸಿದ್ದ ಈ ಬಣಗಳ ಸದಸ್ಯರು ಶಾಂತಿಯಲ್ಲಿ ಒಟ್ಟುಗೂಡಿ ಕೆಲಸಮಾಡುವುದನ್ನು ನೋಡುವುದು ಎಷ್ಟು ಆನಂದಕಾರಕವಾಗಿತ್ತು! ಅವರು ಒಬ್ಬರಿಗೊಬ್ಬರು ತೋರಿಸುವ ನಿಜವಾದ ಪ್ರೀತಿ ಇತರ ಅನೇಕರನ್ನು ಬೈಬಲಿನ ಸತ್ಯಗಳಿಗೆ ಕಿವಿಗೊಡುವಂತೆ ಪ್ರೋತ್ಸಾಹಿಸಿದೆ.
ತತ್ಸಮಾನವಾಗಿ, ಕೆನ್ಯದ ಗೋತ್ರಗಳಲ್ಲೂ ಅಭಿಪ್ರಾಯ ವ್ಯತ್ಯಾಸಗಳಿದ್ದವು. ಆದರೆ ಕೆನ್ಯದ ಯೆಹೋವನ ಜನರ ಕ್ರೈಸ್ತ ಬಾಂಧವ್ಯದಲ್ಲಿ ಎಂತಹ ವೈದೃಶ್ಯ! ವಿಭಿನ್ನ ಕುಲಗಳ ಜನರು ರಾಜ್ಯ ಸಭಾ ಗೃಹಗಳಲ್ಲಿ ಐಕ್ಯದಿಂದ ಆರಾಧಿಸುವುದನ್ನು ನೀವು ನೋಡಬಲ್ಲಿರಿ. ಇವರಲ್ಲಿ ಅನೇಕರು ತಮ್ಮ ಕುಲಸಂಬಂಧವಾದ ಹಗೆತನವನ್ನು ತೆಗೆದಿಟ್ಟು ಇತರ ಕುಲಗಳ ತಮ್ಮ ಸಹೋದರ ಸಹೋದರಿಯರಿಗೆ ನಿಜ ಪ್ರೀತಿಯನ್ನು ತೋರಿಸುವುದನ್ನು ನೋಡುವುದು ನನ್ನ ಸಂತೋಷವಾಗಿದೆ.
ನಮ್ಮ ಭ್ರಾತೃತ್ವಕ್ಕಾಗಿ ಸಂತೋಷ
ನಾನು ದೇವರ ಸಂಸ್ಥೆಯೊಂದಿಗಿನ ನನ್ನ 50 ವರ್ಷಗಳ ಒಡನಾಟವನ್ನು ಹಿಂದಿರುಗಿ ನೋಡುವಾಗ, ಯೆಹೋವನಿಗೂ ಆತನ ಕುಮಾರನಾದ ಯೇಸು ಕ್ರಿಸ್ತನಿಗೂ ಕೃತಜ್ಞತೆಯು ನನ್ನ ಹೃದಯವನ್ನು ತುಂಬುತ್ತದೆ. ಅವರು ಭೂಮಿಯ ಮೇಲೆ ಆಗಿಸಿರುವುದನ್ನು ಪ್ರೇಕ್ಷಿಸುವುದು ನಿಜವಾಗಿಯೂ ಬೆರಗುಗೊಳಿಸುವಂತಹದ್ದು! ಇಲ್ಲ, ದೇವಜನರ ಮಧ್ಯೆ ಪರಿಸ್ಥಿತಿಗಳು ಸದಾ ಪರಿಪೂರ್ಣವಾಗಿರಲಿಲ್ಲ, ಇಂದೂ ಆಗಿರುವುದಿಲ್ಲ. ಸೈತಾನನ ಲೋಕದ ನೂರಾರು ವರ್ಷಗಳ ಬಣ ಪದ್ಧತಿಯ ಬೋಧನೆಗಳು ರಾತ್ರಿ ಹಗಲಾಗುವುದರೊಳಗೆ ಅಳಿಸಲ್ಪಡುವಂತೆ ನಿರೀಕ್ಷಿಸುವುದು ಅಸಾಧ್ಯ. ಹೇಗೆಂದರೂ, ನಾವು ಇನ್ನೂ ಅಪೂರ್ಣರು.—ಕೀರ್ತನೆ 51:5.
ನಾನು ಯೆಹೋವನ ಸಂಸ್ಥೆಯನ್ನು ಲೋಕದೊಂದಿಗೆ ಸರಿಹೋಲಿಸುವಾಗ, ನನ್ನ ನಿಜವಾದ ಲೋಕವ್ಯಾಪಕ ಭ್ರಾತೃತ್ವಕ್ಕೆ ಗಣ್ಯತೆಯಿಂದ ನನ್ನ ಹೃದಯ ತುಂಬಿ ತುಳುಕುತ್ತದೆ. ಕ್ಲೀವ್ಲೆಂಡಿನಲ್ಲಿ ಎಲ್ಲರೂ ಬಿಳಿಯರಾಗಿದ್ದು ನನ್ನನ್ನು ಸತ್ಯದಲ್ಲಿ ಪೋಷಿಸಿದ ಆ ಸಹೋದರರನ್ನು ನಾನಿನ್ನೂ ಅಕ್ಕರೆಯಿಂದ ಜ್ಞಾಪಿಸಿಕೊಳ್ಳುತ್ತೇನೆ. ಅಮೆರಿಕದ ದಕ್ಷಿಣ ಭಾಗದ ನಮ್ಮ ಸಹೋದರರು—ಬಿಳಿಯರೂ ಕರಿಯರೂ—ತಮ್ಮ ಅವಿಚಾರಾಭಿಪ್ರಾಯಗಳನ್ನು ಹೃತ್ಪೂರ್ವಕವಾದ ಸಹೋದರ ಪ್ರೇಮದಿಂದ ಭರ್ತಿ ಮಾಡಿದ್ದನ್ನು ನೋಡಿದಾಗ ನನ್ನ ಹೃದಯ ಉಲ್ಲಾಸಿಸಿತು. ಬಳಿಕ, ಆಫ್ರಿಕಕ್ಕೆ ಹೋಗಿ ಅಲ್ಲಿ ಯೆಹೋವನ ವಾಕ್ಯವು ಕುಲಸಂಬಂಧವಾದ ಹಗೆತನವನ್ನು ಅಳಿಸಿಬಿಡುವುದನ್ನು ಸಾಕ್ಷಾತ್ತಾಗಿ ನೋಡುವುದು, ನಮ್ಮ ಲೋಕವ್ಯಾಪಕ ಭ್ರಾತೃತ್ವವನ್ನು ನಾನು ಇನ್ನೂ ಹೆಚ್ಚು ಗಣ್ಯಮಾಡುವಂತೆ ಮಾಡಿದೆ.
ಪುರಾತನ ಕಾಲದ ದಾವೀದ ರಾಜನು ಅದನ್ನು ಉತ್ತಮವಾಗಿ ವ್ಯಕ್ತಪಡಿಸಿದನೆಂಬುದು ನಿಶ್ಚಯ: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!”—ಕೀರ್ತನೆ 133:1.
[ಅಧ್ಯಯನ ಪ್ರಶ್ನೆಗಳು]
a ಆಡೆರ ಟೆಶೋಮಿ ಮತ್ತು ಹೈಲೂ ಯೆಮೀರುವಿನ ಚಿತ್ರಗಳು 1992 ಯಿಯರ್ಬುಕ್ ಆಫ್ ಜಿಹೋವಸ್ ವಿಟ್ನೆಸಸ್ (ಇಂಗ್ಲಿಷ್) ಎಂಬ ಪುಸ್ತಕದ ಪುಟ 177 ರಲ್ಲಿ ಕಾಣಿಸಿಕೊಳ್ಳುತ್ತದೆ; ಪುಟಗಳು 178-81 ರಲ್ಲಿ ವೊರ್ಕೂ ಆಬೆಬೆಯ ಅನುಭವವನ್ನು ಹೇಳಲಾಗಿದೆ.
b ಆಡೆರ ಟೆಶೋಮಿ ಮತ್ತು ಹೈಲೂ ಯೆಮೀರುವಿನ ಚಿತ್ರಗಳು 1992 ಯಿಯರ್ಬುಕ್ ಆಫ್ ಜಿಹೋವಸ್ ವಿಟ್ನೆಸಸ್ (ಇಂಗ್ಲಿಷ್) ಎಂಬ ಪುಸ್ತಕದ ಪುಟ 177 ರಲ್ಲಿ ಕಾಣಿಸಿಕೊಳ್ಳುತ್ತದೆ; ಪುಟಗಳು 178-81 ರಲ್ಲಿ ವೊರ್ಕೂ ಆಬೆಬೆಯ ಅನುಭವವನ್ನು ಹೇಳಲಾಗಿದೆ.
c ಆಡೆರ ಟೆಶೋಮಿ ಮತ್ತು ಹೈಲೂ ಯೆಮೀರುವಿನ ಚಿತ್ರಗಳು 1992 ಯಿಯರ್ಬುಕ್ ಆಫ್ ಜಿಹೋವಸ್ ವಿಟ್ನೆಸಸ್ (ಇಂಗ್ಲಿಷ್) ಎಂಬ ಪುಸ್ತಕದ ಪುಟ 177 ರಲ್ಲಿ ಕಾಣಿಸಿಕೊಳ್ಳುತ್ತದೆ; ಪುಟಗಳು 178-81 ರಲ್ಲಿ ವೊರ್ಕೂ ಆಬೆಬೆಯ ಅನುಭವವನ್ನು ಹೇಳಲಾಗಿದೆ.
[ಪುಟ 23 ರಲ್ಲಿರುವ ಚಿತ್ರ]
ನನ್ನ ಅಜಿಯ್ಜ ಶವಸಂಸ್ಕಾರ
[ಪುಟ 24 ರಲ್ಲಿರುವ ಚಿತ್ರ]
ಟೂಟ್ಸಿ ಮತ್ತು ಹೂಟು ಸಾಕ್ಷಿಗಳು ಒಟ್ಟಿಗೆ ಶಾಂತಿಯಲ್ಲಿ ಕೆಲಸಮಾಡುತ್ತಾರೆ
[ಪುಟ 25 ರಲ್ಲಿರುವ ಚಿತ್ರ]
ನನ್ನ ಪತ್ನಿ ಲೋಎಸಳೊಂದಿಗೆ