ಬೈಬಲ್—ಅದರ ನಿಜವಾದ ಮೌಲ್ಯವೇನು?
“ಬೈಬಲ್ ಒಂದು ರಹಸ್ಯವಾಗಿದೆ, ಅರ್ಥಮಾಡಿಕೊಳ್ಳಲಿಕ್ಕಾಗಿರದ ಒಂದು ಗ್ರಂಥವಾಗಿದೆ,” ಎಂದು ಒಬ್ಬ ಮನೆಯವನು ವಾದಿಸುತ್ತಾನೆ. ಇನ್ನೊಬ್ಬನು ಹೇಳುವುದು: “ಬೈಬಲ್ ಒಂದು ಪ್ರಾಮುಖ್ಯವಾದ ಗ್ರಂಥವಾಗಿದೆ ಎಂದು ನಾನು ಬಲ್ಲೆ, ಆದರೆ ಅದರ ಕುರಿತು ನನಗೆ ಹೆಚ್ಚು ಗೊತ್ತಿಲ್ಲ. ಅದನ್ನು ಅರ್ಥಮಾಡಿಕೊಳ್ಳುವುದು ಬಹಳ ಕಠಿನವಾಗಿದೆ.”
“ಅನೇಕ ಕ್ರೈಸ್ತರಿಗೆ . . . ಬೈಬಲಿನ ಕುರಿತು ಕಡಿಮೆ ಗೊತ್ತಿದೆ,” ಎಂದು ದ ಟೊರಾಂಟೊ ಸ್ಟಾರ್ ಹೇಳಿತು. ಒಬ್ಬಾಕೆ ಕ್ಯಾತೊಲಿಕ್ ಸ್ತ್ರೀಯು ಹೇಳಿದ್ದು: “ಒಂದು ಬೈಬಲನ್ನು ಹೊಂದಿರುವುದು, ನನ್ನಲ್ಲಿ ಒಳ್ಳೆಯ ಅನಿಸಿಕೆಯನ್ನು ಉಂಟುಮಾಡುತ್ತದೆ. ಅದು ಆಂತರಿಕ ಶಾಂತಿಯನ್ನು ತರುತ್ತದೆ.” “ಬೈಬಲು ಒಬ್ಬನನ್ನು, ಜೀವನದ ಬಿರುಸಾದ, ಬಿರುಗಾಳಿಯ ಸಮುದ್ರದಿಂದ ಸುರಕ್ಷತೆಯ ಒಂದು ಸ್ಥಳಕ್ಕೆ ಮಾರ್ಗದರ್ಶಿಸುವ ಒಂದು ದಿಕ್ಸೂಚಿಯಂತಿದೆ,” ಎಂದು ಒಬ್ಬ ಮೀನುಗಾರನು ಹೇಳುತ್ತಾನೆ. ಮಾಜಿ ಹಿಂದೂವೊಬ್ಬನ ಮಾತುಗಳಲ್ಲಿ, “ಬೈಬಲು ದೇವರ ವಾಕ್ಯವಾಗಿದೆ ಮತ್ತು ಮಾನವಜಾತಿಗೆ ಒಂದು ಕೊಡುಗೆಯೂ ಆತ್ಮಿಕ ಕಷ್ಟಾನುಭವಗಳಿಗೆ ಚಿಕಿತ್ಸೆಯೂ ಆಗಿದೆ.”
ಬೈಬಲಿನ ವಾಸ್ತವವಾದ ಮೌಲ್ಯದ ಕುರಿತು ಅಭಿಪ್ರಾಯಗಳು ಹೇರಳವೂ ಭಿನ್ನವೂ ಆಗಿವೆ. ಆದರೆ, ಅದರ ನಿಜವಾದ ಮೌಲ್ಯ ಏನಾಗಿದೆ?
ಬೈಬಲು ಅಸ್ತಿತ್ವದಲ್ಲಿರುವ ಅತ್ಯಂತ ಪ್ರಾಮುಖ್ಯವಾದ ಮತ್ತು ವ್ಯಾಪಕವಾಗಿ ಹಂಚಲ್ಪಟ್ಟ ಗ್ರಂಥವಾಗಿದೆ. ಅದರ ಪುಟಗಳೊಳಗೆ ಮನುಷ್ಯನು ಅನುಭವಿಸಿರುವ ಯಾ ಇನ್ನೂ ಎದುರಿಸಲಿರುವ ಅತ್ಯಂತ ಕಂಗೆಡಿಸುವ ಸಮಸ್ಯೆಗಳಿಗೆ ಉತ್ತರಗಳು ಅಡಕವಾಗಿವೆ. ಅದರ ಸಲಹೆಯ ಪ್ರಾಯೋಗಿಕತೆಯು ಅಸಮಾನವಾಗಿದೆ. ಅದು ಪ್ರತಿಪಾದಿಸುವ ನೈತಿಕ ಮಟ್ಟಗಳು ಅತಿಶಯವಾಗಿವೆ. ಅದರ ಸಂದೇಶವು ಶಕ್ತಿಯುತವೂ ಪ್ರಯೋಜನಕರವೂ ಆಗಿದೆ. ಅಸದೃಶ ಮೌಲ್ಯವಿರುವ ಈ ಗ್ರಂಥವು, ನಮ್ಮ ಪುಸ್ತಕ ಬೀರುವಿನಿಂದ ಹೊರಗೆ ತೆಗೆಯಲ್ಪಡಲು ಮತ್ತು ಜಾಗರೂಕವಾದ ಗಮನ ಕೊಡಲ್ಪಡಲು ಹಾಗೂ ತನಿಖೆಗೆ ಯೋಗ್ಯವಾಗಿದೆ.
ಅದು ಸಂಪೂರ್ಣವಾಗಿ ನಿಷ್ಕೃಷ್ಟವೂ, ವಿಶ್ವಾಸಯೋಗ್ಯವೂ, ಮತ್ತು ಯಥಾರ್ಥವಾಗಿಯೂ ಇದೆ ಎಂಬ ಪೂರ್ಣ ಭರವಸೆಯಿಂದ ನಾವು ಬೈಬಲನ್ನು ತೆರೆಯಬಲ್ಲೆವು. ಅದರಲ್ಲಿ ದಾಖಲಿಸಿರುವ ಐತಿಹಾಸಿಕ ಘಟನೆಗಳು ಐಹಿಕ ಇತಿಹಾಸದ ಮೂಲಕ ದೃಢೀಕರಿಸಲ್ಪಟ್ಟಿವೆ. ಬೈಬಲು ವಾಸ್ತವಿಕವೂ ಸತ್ಯವೂ ಆಗಿದೆಯೆಂದು ಪ್ರಾಚೀನ ಶೋಧನಾ ಕಂಡುಹಿಡಿತಗಳು ಸತತವಾಗಿ ಸಮರ್ಥಿಸುತ್ತವೆ. ಸುಮಾರು 40 ಬೈಬಲ್ ಬರಹಗಾರರ ನಿಷ್ಕಾಪಟ್ಯವು ಅವರನ್ನು ಪ್ರಾಮಾಣಿಕತೆ ಹಾಗೂ ಸಮಗ್ರತೆಯ ಪುರುಷರಂತೆ ಗುರುತಿಸುತ್ತದೆ. ಬೈಬಲಿನ ಆಂತರಿಕ ಹೊಂದಾಣಿಕೆಯು, ಅದು ಮಾನವ ಮೂಲದ್ದಾಗಿಲ್ಲವೆಂದು ಸೂಚಿಸುತ್ತದೆ. ಅದರಲ್ಲಿ ದಾಖಲೆ ಮಾಡಿರುವ ಘಟನೆಗಳು ವಾಸ್ತವವಾಗಿವೆ. ಅದು ಮಾತಾಡುವಂತಹ ಜನರು ನೈಜವಾಗಿದ್ದಾರೆ. ಅದು ಸೂಚಿಸುವ ಸ್ಥಳಗಳು ಮತ್ತು ಸ್ಥಾನಗಳು ನೈಜವಾಗಿವೆ. ಇನ್ನೂ ಹೆಚ್ಚಾಗಿ, ಯೆಹೋವ ದೇವರನ್ನು ಬೈಬಲಿನ ಗ್ರಂಥಕರ್ತನೆಂದು ಸ್ಪಷ್ಟವಾಗಿಗಿ ಗುರುತಿಸುವ ಎದ್ದುಕಾಣುವ ಪ್ರವಾದನೆಗಳನ್ನು ಬೈಬಲ್ ಹೊಂದಿದೆ.—2 ಪೇತ್ರ 1:21.
ಆತನ ಚಿತ್ತದ ಮತ್ತು ಉದ್ದೇಶಗಳ ಜ್ಞಾನದ ಬಗ್ಗೆ ಅರಿಯಲು ಬಯಸಿದವರಿಗೆ, ಅಂತಹ ಜ್ಞಾನವು ಲಭ್ಯವಾಗಿರುವುದೆಂದು ನಮ್ಮ ಮಹಾ ಶಿಕ್ಷಕನು ಖಚಿತಮಾಡಿದನು. ವಾಸ್ತವದಲ್ಲಿ, ಎಲ್ಲ ರೀತಿಯ ಮನುಷ್ಯರು ಆತನ ವಾಕ್ಯವನ್ನು ಅಭ್ಯಸಿಸಿ, “ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ಆತನ ಚಿತ್ತವಾಗಿದೆ ಎಂದು ಯೆಹೋವನು ನಮಗೆ ಸ್ಪಷ್ಟವಾಗಿದ ಭಾಷೆಯಲ್ಲಿ ಹೇಳುತ್ತಾನೆ. (1 ತಿಮೊಥೆಯ 2:3, 4; ಜ್ಞಾನೋಕ್ತಿ 1:5, 20-33) ನಮ್ಮ ಜೀವಿತದೊಂದಿಗೆ ನಾವು ಮಾಡಬಲ್ಲ ಅತ್ಯಂತ ಪ್ರಾಮುಖ್ಯವಾದ ವಿಷಯಗಳಲ್ಲಿ ಇದು ಒಂದಾಗಿದೆ. ಇದು, ನಾವು ಎದುರಿಸಲು ಹಂಗುಳ್ಳವರಾಗಿರುವ ಒಂದು ಸವಾಲಾಗಿದೆ. ಆದಿ ಕ್ರೈಸ್ತರು ಇದನ್ನು ಅರ್ಥಮಾಡಿಕೊಂಡರು. ಅವರಲ್ಲಿ ಒಬ್ಬನು ಹೀಗೆ ಹೇಳುವಂತೆ ಪ್ರೇರೇಪಿಸಲ್ಪಟ್ಟನು: “ಮತ್ತು ನಾನು ದೇವರನ್ನು ಪ್ರಾರ್ಥಿಸಿ—ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಪೂರ್ಣ ಜ್ಞಾನವಿವೇಕಗಳಿಂದ ಕೂಡಿ ಉತ್ತಮ ಕಾರ್ಯಗಳು ಯಾವವೆಂದು ನೀವು ವಿವೇಚಿಸುವವರಾಗಬೇಕೆಂತಲೂ . . . ಬೇಡಿಕೊಳ್ಳುತ್ತೇನೆ.”—ಫಿಲಿಪ್ಪಿ 1:9, 10; ಕೊಲೊಸ್ಸೆ 1:9, 10.
ಆತನ ಚಿತ್ತವನ್ನು ಮತ್ತು ಮಾನವ ಕುಟುಂಬಕ್ಕಾಗಿರುವ ಆತನ ಉದ್ದೇಶವನ್ನು ತಿಳಿಸುವ ಸೃಷ್ಟಿಕರ್ತನ ಪ್ರಧಾನ ವಿಧಾನವು ಬೈಬಲ್ ಆಗಿದೆ, ಮತ್ತು ಆ ಉದ್ದೇಶದೊಳಗೆ ನಾವು ಹೇಗೆ ವೈಯಕ್ತಿಕವಾಗಿ ಹೊಂದಿಕೊಳ್ಳುತ್ತೇವೆ ಎಂಬುದನ್ನು ಅದು ವಿವರಿಸುತ್ತದೆ. ಅದರಲ್ಲಿ ಗತಕಾಲದ ಘಟನೆಗಳು ದಾಖಲಿಸಲ್ಪಟ್ಟಿವೆ, ಮತ್ತು ಅದು ಭವಿಷ್ಯದ ಕುರಿತು ಸ್ಪಷ್ಟವಾಗಿದ ದರ್ಶನವನ್ನು ನೀಡುತ್ತದೆ. ಸರಿಯಾದ ತತ್ವಗಳನ್ನು ಬೈಬಲ್ ರೇಖಿಸುತ್ತದೆ ಮತ್ತು ನಾವೇನನ್ನು ನಂಬಬೇಕು ಯಾ ನಂಬಬಾರದು ಎಂಬ ವಿಷಯದಲ್ಲಿ ಅದು ನಮ್ಮನ್ನು ಕ್ರಮಪಡಿಸುತ್ತದೆ. (ಅ. ಕೃತ್ಯಗಳು 17:11; 2 ತಿಮೊಥೆಯ 3:16, 17) ಮನುಷ್ಯನು ಜೀವಿಸಬೇಕಾದ ನಡವಳಿಯ ಕಟ್ಟಳೆಗಳನ್ನು ಅದು ಒದಗಿಸುತ್ತದೆ, ಮತ್ತು ಮಾನವರನ್ನು ಅದು ಯಶಸ್ಸಿನ ಹಾಗೂ ಸಂತೋಷದ ಮಾರ್ಗದಲ್ಲಿ ನಿರ್ದೇಶಿಸುತ್ತದೆ. (ಮತ್ತಾಯ, ಅಧ್ಯಾಯಗಳು 5 ರಿಂದ 7ರ ವರೆಗೆ) ಅದು ಎಲ್ಲ ಮಾನವಜಾತಿಗಾಗಿ ದೇವರ ರಾಜ್ಯವನ್ನು ಏಕೈಕ ನಿರೀಕ್ಷೆಯೋಪಾದಿ ಒತ್ತಿಹೇಳುತ್ತದೆ ಮತ್ತು ಆತನ ಸರಕಾರವು ಹೇಗೆ ಆತನ ಹೆಸರನ್ನು ಶುದ್ಧೀಕರಿಸುವ ಮತ್ತು ಆತನ ಸಾರ್ವಭೌಮತೆಯನ್ನು ಮಹಿಮೆಪಡಿಸುವ ಸಾಧನವಾಗಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ಜೀವದಾತನಾದ ಯೆಹೋವನೊಂದಿಗೆ ಒಂದು ನಿಕಟವಾದ, ಪ್ರೀತಿಪರ ಸಂಬಂಧವನ್ನು ಅನುಭವಿಸಲು, ನಾವು ಬೆನ್ನಟ್ಟಬೇಕಾದ ಮಾರ್ಗವನ್ನು ಬೈಬಲ್ ವಿವರಿಸುತ್ತದೆ.
ಇನ್ನೂ ಹೆಚ್ಚಾಗಿ, ಮಾನವಜಾತಿಯು ಎಂದಿಗೂ ಪಡೆಯುವಂಥ ಅತ್ಯಂತ ಮಹಾ ಕೊಡುಗೆಗೆ—ಪ್ರಮೋದವನ ಭೂಮಿಯ ಮೇಲೆ ಪರಿಪೂರ್ಣ ಮಾನವರಂತೆ ಅನಂತ ಜೀವನ—ನಿಮ್ಮನ್ನು ನಡೆಸುವಂಥ ಏಕೈಕ ಪುಸ್ತಕವು ಬೈಬಲ್ ಆಗಿದೆ. (ರೋಮಾಪುರ 6:23) ಯೆಹೋವನ ಏಕಜಾತ ಪುತ್ರನು ನಮಗೆ ಹೇಳುವುದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ನಿತ್ಯಜೀವದ ಬಹುಮಾನವನ್ನು ಪಡೆಯಲು ನಾವು ಏನನ್ನು ಮಾಡಬೇಕೆಂದು ಕಲಿಯಲಿಕ್ಕಾಗಿ, ಇಂತಹ ಮಹಾ ಮೌಲ್ಯದ ಪುಸ್ತಕವು ನಮ್ಮನ್ನು ಖಂಡಿತವಾಗಿ ಪ್ರಚೋದಿಸಬೇಕು. ಮುಂದಿನ ಲೇಖನವು ತೋರಿಸುವಂತೆ, ಬೈಬಲು ಅರ್ಥಮಾಡಿಕೊಳ್ಳಲಿಕ್ಕಾಗಿರುವ ಒಂದು ಪುಸ್ತಕವಾಗಿದೆ.