ದೇವರ ಸೇವಕರು—ಸಂಘಟಿತ ಹಾಗೂ ಸಂತುಷ್ಟ ಜನರು
“ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಸಂತುಷ್ಟರು.”—ಕೀರ್ತನೆ 144:15, NW.
1, 2. (ಎ) ಯೆಹೋವನಿಗೆ ತನ್ನ ಸೇವಕರಿಗಾಗಿ ಮಟ್ಟಗಳನ್ನು ಸ್ಥಾಪಿಸುವ ಅಧಿಕಾರವು ಏಕೆ ಇದೆ? (ಬಿ) ನಾವು ವಿಶೇಷವಾಗಿ ಅನುಕರಿಸಲು ಬಯಸಬೇಕಾದ ಯೆಹೋವನ ಎರಡು ವಿಶೇಷಗುಣಗಳಾವುವು?
ಯೆಹೋವನು ವಿಶ್ವದ ಸಾರ್ವಭೌಮನು, ಸರ್ವಶಕ್ತ ದೇವರು, ಸೃಷ್ಟಿಕರ್ತನು ಆಗಿದ್ದಾನೆ. (ಆದಿಕಾಂಡ 1:1; ಕೀರ್ತನೆ 100:3) ಹಾಗಿರುವುದರಿಂದ, ತನ್ನ ಸೇವಕರಿಗೆ ಯಾವುದು ಅತ್ಯುತ್ತಮವಾಗಿದೆ ಎಂಬುದನ್ನು ಅರಿತುಕೊಳ್ಳುತ್ತಾ, ಅವರಿಗಾಗಿ ವರ್ತನೆಯ ಮಟ್ಟಗಳನ್ನು ಸ್ಥಾಪಿಸುವ ಅಧಿಕಾರ ಆತನಿಗಿದೆ. (ಕೀರ್ತನೆ 143:8) ಮತ್ತು ಯಾರ ಗುಣಗಳನ್ನು ಅವರು ಅನುಕರಿಸುವ ಅಗತ್ಯವಿದೆಯೋ, ಅಂತಹ ಅವರ ಮುಖ್ಯ ಆದರ್ಶನು ಆತನಾಗಿದ್ದಾನೆ. “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ,” ಎಂದು ಒಬ್ಬ ಅಪೊಸ್ತಲನು ಬರೆದನು.—ಎಫೆಸ 5:1.
2 ನಾವು ಅನುಕರಿಸಬೇಕಾದ ದೇವರ ಒಂದು ವಿಶೇಷಗುಣವು, ಸಂಘಟನೆಗೆ ಸಂಬಂಧಿಸಿದೆ. ಆತನು ‘ಅವ್ಯವಸ್ಥೆಯ ದೇವರಲ್ಲ.’ (1 ಕೊರಿಂಥ 14:33) ದೇವರು ಸೃಷ್ಟಿಸಿರುವುದನ್ನು ನಾವು ಜಾಗರೂಕವಾಗಿ ಗಮನಿಸುವುದಾದರೆ, ವಿಶ್ವದಲ್ಲೇ ಅತ್ಯಂತ ಸಂಘಟಿತ ಗಣ್ಯಪುರುಷನು ಆತನೆಂದೇ ತೀರ್ಮಾನಿಸುವಂತೆ ನಾವು ಒತ್ತಾಯಿಸಲ್ಪಡುತ್ತೇವೆ. ಹಾಗಿದ್ದರೂ, ತನ್ನ ಸೇವಕರು ಅನುಕರಿಸಬೇಕೆಂದು ಆತನು ಬಯಸುವ ಇನ್ನೊಂದು ವಿಶೇಷಗುಣವು, ಆತನ ಸಂತೋಷವಾಗಿದೆ, ಯಾಕೆಂದರೆ ಆತನು “ಸಂತೋಷವುಳ್ಳ ದೇವರು” ಆಗಿದ್ದಾನೆ. (1 ತಿಮೊಥೆಯ 1:11, NW) ಹೀಗೆ, ಆತನ ಸಂಘಟನಾತ್ಮಕ ಸಾಮರ್ಥ್ಯವು ಸಂತೋಷದೊಂದಿಗೆ ಸರಿದೂಗಿಸಲ್ಪಟ್ಟಿದೆ. ಒಂದು ಗುಣವು ಇನ್ನೊಂದರ ವೆಚ್ಚದಲ್ಲಿ ಸರ್ವೋತ್ಕೃಷವ್ಟಾಗಿ ಮಾಡಲ್ಪಟ್ಟಿಲ್ಲ.
3. ಸಂಘಟಿಸಲಿಕ್ಕಾಗಿರುವ ದೇವರ ಸಾಮರ್ಥ್ಯವನ್ನು ನಕ್ಷತ್ರಗಳುಳ್ಳ ಆಕಾಶಗಳು ಹೇಗೆ ಪ್ರದರ್ಶಿಸುತ್ತವೆ?
3 ಯೆಹೋವನು ಮಾಡಿರುವ ಎಲ್ಲ ವಿಷಯಗಳು—ಅತಿ ದೊಡ್ಡ ವಿಷಯದಿಂದ ಅತಿ ಚಿಕ್ಕ ವಿಷಯದ ವರೆಗೆ—ಆತನೊಬ್ಬ ಸಂಘಟನೆಯ ದೇವರಾಗಿದ್ದಾನೆಂಬ ಪ್ರಮಾಣವನ್ನು ಕೊಡುತ್ತವೆ. ಉದಾಹರಣೆಗೆ, ದೃಶ್ಯ ವಿಶ್ವವನ್ನು ಪರಿಗಣಿಸಿರಿ. ಅದರಲ್ಲಿ ಕೋಟ್ಯನುಕೋಟಿ ನಕ್ಷತ್ರಗಳಿವೆ. ಆದರೆ ಇವು ಅನಿಶ್ಚಿತವಾಗಿ ಹರಡಿರುವುದಿಲ್ಲ. ಜ್ಯೋತಿರ್ಭೌತ ವಿಜ್ಞಾನಿಯಾದ ಜಾರ್ಜ್ ಗ್ರೀನ್ಸ್ಟೈನ್ ಗಮನಿಸುವುದೇನೆಂದರೆ, “ನಕ್ಷತ್ರಗಳ ಸಂಘಟನೆಗೆ ಒಂದು ಆದರ್ಶ ರೂಪವಿದೆ.” ಕೆಲವು ಲಕ್ಷಾಂತರ ಕೋಟಿ ನಕ್ಷತ್ರಗಳನ್ನು ಹೊಂದಿರುವ ಆಕಾಶ ಗಂಗೆಗಳೆಂದು ಕರೆಯಲ್ಪಡುವ ಗುಂಪುಗಳಾಗಿ ಅವು ರಚಿಸಲ್ಪಟ್ಟಿವೆ. ಮತ್ತು ನೂರಾರು ಕೋಟಿ ಆಕಾಶ ಗಂಗೆಗಳಿವೆ ಎಂಬುದಾಗಿ ಅಂದಾಜುಮಾಡಲಾಗುತ್ತದೆ! ಆಕಾಶ ಗಂಗೆಗಳು ಕೂಡ—ಅವುಗಳಲ್ಲಿ ಬಹಳಷ್ಟು, ಆಕಾಶ ಗಂಗೆಗಳ ಒಂದು ಗುಚ್ಛವಾಗಿ ಗುಂಪು ಕೂಡಿಸಲ್ಪಟ್ಟು—ಸಂಘಟಿಸಲ್ಪಟ್ಟಿವೆ. ಮತ್ತು ಆಕಾಶ ಗಂಗೆಗಳ ಸಮೂಹಗಳು ಅತ್ಯುತ್ಕೃಷ್ಟ ಸಮೂಹಗಳೆಂದು ಕರೆಯಲ್ಪಡುವ ಇನ್ನೂ ದೊಡ್ಡ ತಂಡಗಳಾಗಿ ಸಂಘಟಿಸಲ್ಪಟ್ಟಿವೆ ಎಂದು ತಿಳಿಯಲಾಗುತ್ತದೆ.—ಕೀರ್ತನೆ 19:1; ಯೆಶಾಯ 40:25, 26.
4, 5. ಭೂಮಿಯ ಮೇಲಿರುವ ಜೀವಂತ ವಿಷಯಗಳೊಳಗೆ ಸಂಘಟನೆಯ ಉದಾಹರಣೆಗಳನ್ನು ನೀಡಿರಿ.
4 ದೇವರ ಸೃಷ್ಟಿಗಳ ಭವ್ಯ ಸಂಘಟನೆಯು ಎಲ್ಲೆಡೆಯೂ—ದೃಶ್ಯ ಸ್ವರ್ಗಗಳಲ್ಲಿ ಮಾತ್ರವಲ್ಲ, ಸಾವಿರಾರು ಜೀವಂತ ವಿಷಯಗಳಿರುವ ಭೂಮಿಯ ಮೇಲೆಯೂ—ಕಂಡುಬರುತ್ತದೆ. ಈ ಎಲ್ಲ ವಿಷಯಗಳ ಕುರಿತು, ಭೌತವಿಜ್ಞಾನದ ಒಬ್ಬ ಪ್ರೊಫೆಸರರಾದ ಪೌಲ್ ಡೇವಿಸ್ ಬರೆದದ್ದೇನೆಂದರೆ, “ಭೌತ ಲೋಕದ ಘನತೆ ಮತ್ತು ಜಟಿಲ ಸಂಘಟನೆ” ಯಿಂದ ವೀಕ್ಷಕರು “ಭಯಚಕಿತ” ರಾಗಿದ್ದಾರೆ.—ಕೀರ್ತನೆ 104:24.
5 ಜೀವಂತ ವಿಷಯಗಳಲ್ಲಿ ಕಂಡುಬರುವಂತಹ “ಜಟಿಲ ಸಂಘಟನೆ”ಯ ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ. ಮಾನವ ಮಿದುಳು ಮತ್ತು ಬೆನ್ನುಹುರಿಯ ಕುರಿತು ನರಶಾಸ್ತ್ರಜ್ಞ, ಜೋಸಫ್ ಎವನ್ಸ್ ಹೇಳಿದ್ದು: “ಮಹಾ ವ್ಯವಸ್ಥೆಯ ವಾಸ್ತವಿಕತೆಯು ಬಹುಮಟ್ಟಿಗೆ ಪರವಶಗೊಳಿಸುವಂಥದ್ದಾಗಿದೆ.” ಅತಿಸೂಕ್ಷ್ಮವಾದ ಜೀವಂತ ಕೋಶದ ಕುರಿತು, ಬ್ಯಾಕ್ಟೀರಿಯ ವಿಜ್ಞಾನಿ ಎಚ್. ಜೆ. ಶಾನಸಿ ಹೇಳಿದ್ದು: “ಸೂಕ್ಷ್ಮಜೀವಿಗಳ ಲೋಕದ ಸಂಕೀರ್ಣತೆ ಮತ್ತು ಸುಂದರವಾದ ಕ್ರಮವು ಎಷ್ಟು ಅದ್ಭುತಕರವಾಗಿ ನಿರ್ಮಿಸಲ್ಪಟ್ಟಿದೆ ಎಂದರೆ, ಅದು ದೈವಿಕವಾಗಿ ನೇಮಿಸಿದ ವ್ಯವಸ್ಥೆಯ ಒಂದು ಭಾಗವಾಗಿರುವಂತೆ ತೋರುತ್ತದೆ.” ಕೋಶವೊಂದರ ಒಳಗಿರುವ ವಂಶವಾಹಿ ಸಂಕೇತ ಪಟ್ಟಿ (ಡಿಎನ್ಎ)ಯ ಕುರಿತು ಮೈಕಲ್ ಡೆಂಟನ್ ಹೇಳಿದ್ದು: “ಅದು ಎಷ್ಟು ಸಮರ್ಥವಾಗಿದೆ ಎಂದರೆ, ಗ್ರಹದ ಮೇಲೆ ಅಸ್ತಿತ್ವದಲ್ಲಿದ್ದಂತಹ ಜೀವಿಗಳ ಎಲ್ಲಾ ಜಾತಿಗಳ ರಚನೆಯನ್ನು ನಿರ್ದಿಷ್ಟಪಡಿಸಲು ಬೇಕಾದ ಎಲ್ಲ ಮಾಹಿತಿಯನ್ನು . . . ಒಂದು ಸಣ್ಣ ಚಮಚೆಯಲ್ಲಿ ಸಂಗ್ರಹಿಸಬಹುದು . . . ಮತ್ತು ಬರೆಯಲ್ಪಟ್ಟಿರುವ ಪ್ರತಿಯೊಂದು ಪುಸ್ತಕದಲ್ಲಿರುವ ಎಲ್ಲ ಮಾಹಿತಿಗಾಗಿ ಇನ್ನೂ ಸ್ಥಳವು ಉಳಿದಿರುವುದು.”—ನೋಡಿ ಕೀರ್ತನೆ 139:16.
6, 7. ಆತ್ಮ ಜೀವಿಗಳೊಳಗೆ ಯಾವ ಸಂಘಟನೆ ತೋರಿಸಲ್ಪಟ್ಟಿದೆ, ಮತ್ತು ಅವರ ನಿರ್ಮಾಣಿಕನಿಗಾಗಿ ಗಣ್ಯತೆಯನ್ನು ಅವರು ಹೇಗೆ ವ್ಯಕ್ತಪಡಿಸುತ್ತಾರೆ?
6 ಯೆಹೋವನು ತನ್ನ ಪ್ರಾಪಂಚಿಕ ಸೃಷ್ಟಿಗಳನ್ನು ಮಾತ್ರವಲ್ಲ ಸ್ವರ್ಗದಲ್ಲಿರುವ ತನ್ನ ಆತ್ಮ ಸೃಷ್ಟಿಗಳನ್ನು ಸಹ ಸಂಘಟಿಸುತ್ತಾನೆ. ದಾನಿಯೇಲ 7:10 ನಮಗೆ ಹೇಳುವುದೇನೆಂದರೆ, ದೇವದೂತರ ‘ಹತ್ತು ಸಾವಿರ ಬಾರಿ ಹತ್ತು ಸಾವಿರ ಸಂಖ್ಯೆ ಯೆಹೋವನ ಸರಿ ಮುಂದೆ ನಿಲ್ಲುತ್ತಾ ಇತ್ತು.’ ಪ್ರತಿಯೊಬ್ಬನಿಗೆ ಸರಿಯಾದ ಕೆಲಸವು ನೇಮಿಸಲ್ಪಟ್ಟಿರುವ ಒಂದು ನೂರು ಕೋಟಿ ಶಕ್ತಿಶಾಲಿ ಆತ್ಮ ಜೀವಿಗಳು ಹಾಜರಿಯಲ್ಲಿ! ಇಂತಹ ಬಹುದೊಡ್ಡ ಸಂಖ್ಯೆಗಳನ್ನು ಸಂಘಟಿಸಲು ಬೇಕಾದ ಕೌಶಲದ ಕುರಿತು ಯೋಚಿಸುವುದು ತತ್ತರಗೊಳಿಸುವಂಥದ್ದಾಗಿದೆ. ಸೂಕ್ತವಾಗಿಯೇ, ಬೈಬಲ್ ಹೇಳುವುದು: “ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೇ, ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ. ಆತನ ಸೈನ್ಯಗಳೇ, ಆತನ ಮೆಚ್ಚಿಕೆಯನ್ನು ನೆರವೇರಿಸುವ ಸೇವಕರೇ, ಯೆಹೋವನನ್ನು ಕೊಂಡಾಡಿರಿ.”—ಕೀರ್ತನೆ 103:20, 21; ಪ್ರಕಟನೆ 5:11.
7 ಸೃಷ್ಟಿಕರ್ತನ ಕಾರ್ಯಗಳು ಎಷ್ಟು ಮಹತ್ತಾಗಿ ಸಂಘಟಿಸಲ್ಪಟ್ಟಿವೆ ಮತ್ತು ಸಮರ್ಥವಾಗಿವೆ! ಸ್ವರ್ಗೀಯ ರಾಜ್ಯದಲ್ಲಿರುವ ಶಕ್ತಿಶಾಲಿ ಆತ್ಮ ಜೀವಿಗಳು ಭಯವಿಸ್ಮಿತರಾಗಿ ಹಾಗೂ ಅಧೀನತೆಯಿಂದ ಹೀಗೆ ಘೋಷಿಸುವುದು ಆಶ್ಚರ್ಯವೇನೂ ಅಲ್ಲ: “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.”—ಪ್ರಕಟನೆ 4:11.
8. ಭೂಮಿಯ ಮೇಲೆ ಯೆಹೋವನು ತನ್ನ ಸೇವಕರನ್ನು ಸಂಘಟಿಸುತ್ತಾನೆಂದು ಯಾವ ಉದಾಹರಣೆಗಳು ತೋರಿಸುತ್ತವೆ?
8 ಭೂಮಿಯ ಮೇಲಿರುವ ತನ್ನ ಸೇವಕರನ್ನು ಸಹ ಯೆಹೋವನು ಸಂಘಟಿಸುತ್ತಾನೆ. ಸಾ.ಶ.ಪೂ. 2370 ರಲ್ಲಿ ನೋಹನ ದಿನದ ಜಲಪ್ರಳಯವನ್ನು ಆತನು ತಂದಾಗ, ನೋಹನು ಮತ್ತು ಬೇರೆ ಏಳು ಜನರು, ಒಂದು ಕುಟುಂಬ ಸಂಘಟನೆಯೋಪಾದಿ ಜಲಪ್ರಳಯವನ್ನು ಪಾರಾದರು. ಸಾ.ಶ.ಪೂ. 1513ರ ನಿರ್ಗಮನದಲ್ಲಿ, ತನ್ನ ಹಲವಾರು ಲಕ್ಷಾಂತರ ಜನರನ್ನು ಯೆಹೋವನು ಐಗುಪ್ತ್ಯದ ದಾಸತ್ವದಿಂದ ಹೊರಗೆ ತಂದನು ಮತ್ತು ಅವರ ದೈನಿಕ ಕಾರ್ಯಗಳನ್ನು ಮತ್ತು ಆರಾಧನೆಯನ್ನು ಸಂಘಟಿಸಲಿಕ್ಕಾಗಿ ಅವರಿಗೆ ನಿಯಮಗಳ ಒಂದು ಸವಿಸ್ತಾರವಾದ ಸಂಗ್ರಹವನ್ನು ಕೊಟ್ಟನು. ಮತ್ತು ತದನಂತರ, ವಾಗ್ದತ್ತ ದೇಶದಲ್ಲಿ, ದೇವಾಲಯದಲ್ಲಿ ವಿಶೇಷ ಸೇವೆಗಾಗಿ ಅವರಲ್ಲಿ ಹತ್ತಾರು ಸಾವಿರ ಜನರು ಸಂಘಟಿಸಲ್ಪಟ್ಟರು. (1 ಪೂರ್ವಕಾಲವೃತ್ತಾಂತ 23:4, 5) ಪ್ರಥಮ ಶತಮಾನದಲ್ಲಿ, ಕ್ರೈಸ್ತ ಸಭೆಗಳು ದೈವಿಕ ನಿರ್ದೇಶನದ ಕೆಳಗೆ ಸಂಘಟಿಸಲ್ಪಟ್ಟಿದ್ದವು: “ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು. . . . ದೇವರ ಜನರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸಭೆಯ ಸೇವೆಗೋಸ್ಕರವೂ . . . ಅನುಗ್ರಹಿಸಿದನು.”—ಎಫೆಸ 4:11, 12.
ಆಧುನಿಕ ದಿನದ ಸೇವಕರು ಸಹ ಸಂಘಟಿತರಾಗಿದ್ದಾರೆ
9, 10. ಯೆಹೋವನು ತನ್ನ ಜನರನ್ನು ನಮ್ಮ ಸಮಯದಲ್ಲಿ ಹೇಗೆ ಸಂಘಟಿಸಿದ್ದಾನೆ?
9 ತದ್ರೀತಿಯಲ್ಲಿ, ನಮ್ಮ ದಿನಕ್ಕಾಗಿ ಆತನ ಕೆಲಸವನ್ನು—ಈ ಪ್ರಚಲಿತ ದೈವಿಕವಲ್ಲದ ವಿಷಯಗಳ ವ್ಯವಸ್ಥೆಗೆ ಒಂದು ಅಂತ್ಯವನ್ನು ತರುವ ಮೊದಲು ಆತನ ರಾಜ್ಯದ ಸುವಾರ್ತೆಯನ್ನು ಸಾರುವುದನ್ನು—ಅವರು ಪರಿಣಾಮಕಾರಿಯಾಗಿ ಮಾಡುವ ಕಾರಣದಿಂದ, ಯೆಹೋವನು ತನ್ನ ಆಧುನಿಕ ದಿನದ ಸೇವಕರನ್ನು ಸಂಘಟಿಸಿದ್ದಾನೆ. (ಮತ್ತಾಯ 24:14) ಈ ಭೌಗೋಲಿಕ ಕೆಲಸದಲ್ಲಿ ಏನು ಒಳಗೊಂಡಿದೆ ಮತ್ತು ಒಳ್ಳೆಯ ಸಂಘಟನೆ ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಪರಿಗಣಿಸಿರಿ. ಲಕ್ಷಾಂತರ ಪುರುಷರು, ಸ್ತ್ರೀಯರು, ಮತ್ತು ಮಕ್ಕಳು ಇತರರಿಗೆ ಬೈಬಲ್ ಸತ್ಯಗಳನ್ನು ಕಲಿಸುವಂತೆ ತರಬೇತಿಗೊಳಿಸಲ್ಪಡುತ್ತಿದ್ದಾರೆ. ಈ ತರಬೇತಿಗೆ ನೆರವು ನೀಡಲು, ಅತಿ ದೊಡ್ಡ ಪ್ರಮಾಣದಲ್ಲಿ ಬೈಬಲ್ಗಳನ್ನು ಮತ್ತು ಬೈಬಲಾಧಾರಿತ ಪ್ರಕಾಶನಗಳನ್ನು ಮುದ್ರಿಸಲಾಗುತ್ತಿದೆ. ಯಾಕೆ, ಕಾವಲಿನಬುರುಜು ಪತ್ರಿಕೆಗೆ ಈಗ 118 ಭಾಷೆಗಳಲ್ಲಿ 160 ಲಕ್ಷಕ್ಕಿಂತಲೂ ಅಧಿಕ ಮುದ್ರಣವಿದೆ, ಮತ್ತು ಎಚ್ಚರ! ಪತ್ರಿಕೆಗೆ 73 ಭಾಷೆಗಳಲ್ಲಿ ಸುಮಾರು 130 ಲಕ್ಷ ಪ್ರತಿಗಳ ಮುದ್ರಣವಿದೆ. ಬಹುಮಟ್ಟಿಗೆ ಎಲ್ಲ ಸಂಚಿಕೆಗಳು ಏಕಕಾಲಿಕವಾಗಿ ಮುದ್ರಿಸಲ್ಪಡುತ್ತವೆ, ಇದರಿಂದ ಕಾರ್ಯತಃ ಯೆಹೋವನ ಎಲ್ಲ ಸೇವಕರು ಒಂದೇ ಸಮಯದಲ್ಲಿ ಅದೇ ಮಾಹಿತಿಯನ್ನು ಪಡೆಯುವರು.
10 ಇದಕ್ಕೆ ಕೂಡಿಸಿ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ 73,000 ಕ್ಕಿಂತಲೂ ಅಧಿಕ ಸಭೆಗಳು, ಬೈಬಲ್ ಉಪದೇಶಕ್ಕಾಗಿ ಕ್ರಮವಾಗಿ ಕೂಡುವಂತೆ ಸಂಘಟಿಸಲ್ಪಟ್ಟಿವೆ. (ಇಬ್ರಿಯ 10:24, 25) ಪ್ರತಿ ವರ್ಷ ಸಾವಿರಾರು ದೊಡ್ಡ ಒಟ್ಟುಗೂಡುವಿಕೆಗಳು ಕೂಡ ಇವೆ—ಸರ್ಕಿಟ್ ಸಮ್ಮೇಳನಗಳು ಮತ್ತು ಜಿಲ್ಲಾ ಅಧಿವೇಶನಗಳು. ಹೊಸ ಯಾ ಉತ್ತಮಗೊಳಿಸಲ್ಪಟ್ಟ ರಾಜ್ಯ ಸಭಾಗೃಹಗಳ, ಸಮ್ಮೇಳನ ಸಭಾ ಗೃಹಗಳ, ಬೆತೆಲ್ ಕುಟುಂಬಗಳ, ಮತ್ತು ಬೈಬಲ್ ಸಾಹಿತ್ಯವನ್ನು ಮುದ್ರಿಸಲಿಕ್ಕಾಗಿ ಸೌಕರ್ಯಗಳ ದೊಡ್ಡ ಪ್ರಮಾಣದ ಭೌಗೋಲಿಕ ನಿರ್ಮಾಣ ವ್ಯವಸ್ಥೆಯಿದೆ. ಬೈಬಲ್ ಶಿಕ್ಷಕರ ಮುಂದುವರಿದ ತರಬೇತಿಗಾಗಿ ಭೂಮಂಡಲದ ಸುತ್ತಲೂ ಇರುವ ದೇಶಗಳಲ್ಲಿ, ಮಿಷನೆರಿಗಳಿಗಾಗಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾಡ್ ಮತ್ತು ಪಯನೀಯರ್ ಸೇವಾ ಶಾಲೆಗಳಂಥ ಶಾಲೆಗಳಿವೆ.
11. ಒಳ್ಳೆಯ ಸಂಘಟನೆಯನ್ನು ಈಗ ಕಲಿಯುವುದರಿಂದ ಯಾವ ಭವಿಷ್ಯತ್ತಿನ ಪ್ರಯೋಜನವು ಬರುವುದು?
11 ಸೇವೆ ಮಾಡುವ ತನ್ನ ದೂತರ ಸಹಾಯದಿಂದ ತನ್ನ ಜನರು ಭೂಮಿಯಲ್ಲಿ ‘ತಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸುವಂತೆ’ ಯೆಹೋವನು ತನ್ನ ಜನರನ್ನು ಎಷ್ಟು ಚೆನ್ನಾಗಿ ಸಂಘಟಿಸಿದ್ದಾನೆ! (2 ತಿಮೊಥೆಯ 4:5; ಇಬ್ರಿಯ 1:13, 14; ಪ್ರಕಟನೆ 14:6) ತನ್ನ ಸೇವಕರನ್ನು ಒಳ್ಳೆಯ ಸಂಘಟನೆಯ ಮಾರ್ಗಗಳಲ್ಲಿ ಈಗ ಉಪದೇಶಿಸುವ ಮೂಲಕ, ದೇವರು ಇನ್ನೇನನ್ನೊ ಸಾಧಿಸುತ್ತಿದ್ದಾನೆ. ಈ ವಿಷಯಗಳ ವ್ಯವಸ್ಥೆಯನ್ನು ಅವರು ಪಾರಾದಂತೆ, ಹೊಸ ಲೋಕದಲ್ಲಿ ಜೀವನವನ್ನು ಆರಂಭಿಸಲು ಅವರು ಈಗಾಗಲೇ ಸಂಘಟಿತರಾಗಿರುವಂತೆ, ಆತನ ಸೇವಕರು ಚೆನ್ನಾಗಿ ತಯಾರಿಸಲ್ಪಡುತ್ತಿದ್ದಾರೆ. ಆಗ, ಯೆಹೋವನ ನಿರ್ದೇಶನದ ಕೆಳಗೆ ಒಂದು ಸಂಘಟಿತ ವಿಧದಲ್ಲಿ, ಭೌಗೋಲಿಕ ಪ್ರಮೋದವನವನ್ನು ಕಟ್ಟಲು ಅವರು ತೊಡಗುವರು. ಸತ್ತವರಿಂದ ಪುನರುತ್ಥಾನಗೊಳಿಸಲ್ಪಡುವ ಕೋಟ್ಯನುಕೋಟಿ ಜನರಿಗೆ, ಜೀವಿತಕ್ಕಾಗಿರುವ ದೇವರ ಸವಿಸ್ತಾರವಾದ ಆವಶ್ಯಕತೆಗಳನ್ನು ಕಲಿಸಲು ಕೂಡ ಅವರು ಸಿದ್ಧರಾಗಿರುವರು.—ಯೆಶಾಯ 11:9; 54:13; ಅ. ಕೃತ್ಯಗಳು 24:15; ಪ್ರಕಟನೆ 20:12, 13.
ಸುಸಂಘಟಿತ ಆದರೂ ಸಂತುಷ್ಟ
12, 13. ತನ್ನ ಜನರು ಸಂತೋಷದಿಂದಿರುವಂತೆ ಯೆಹೋವನು ಬಯಸುತ್ತಾನೆಂದು ನಾವು ಯಾಕೆ ಹೇಳಬಲ್ಲೆವು?
12 ಯೆಹೋವನು ಒಬ್ಬ ಅಸಾಧಾರಣ ಕೆಲಸಗಾರನು ಮತ್ತು ಭವ್ಯ ಸಂಘಟನಕಾರನು ಆಗಿರುವಾಗ, ಆತನು ಅನಿಸಿಕೆಯಿಲ್ಲದ, ಅನಮ್ಯ, ಯಾ ಯಾಂತ್ರಿಕ ವ್ಯಕ್ತಿಯಾಗಿರುವುದಿಲ್ಲ. ಬದಲಿಗೆ, ಆತನು ನಮ್ಮ ಸಂತೋಷದ ಕುರಿತು ಚಿಂತಿಸುವ, ಬಹಳ ಆದರಣೆಯ, ಸಂತುಷ್ಟ ಗಣ್ಯಪುರುಷನಾಗಿದ್ದಾನೆ. “ಆತನು ನಿಮಗೋಸ್ಕರ ಚಿಂತಿಸುತ್ತಾನೆ,” ಎಂದು 1 ಪೇತ್ರ 5:7 ಘೋಷಿಸುತ್ತದೆ. ಮಾನವರಿಗಾಗಿ ಆತನು ಮಾಡಿರುವ ವಿಷಯಗಳಲ್ಲಿ ನಾವು ಆತನ ಕಾಳಜಿ ಮತ್ತು ತನ್ನ ಸೇವಕರು ಸಂತುಷ್ಟರಾಗಿರಬೇಕೆಂಬ ಆತನ ಬಯಕೆಯನ್ನು ಕಾಣಬಲ್ಲೆವು. ಉದಾಹರಣೆಗೆ, ದೇವರು ಪರಿಪೂರ್ಣ ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸಿದಾಗ, ಅವರನ್ನು ಒಂದು ಸಂತೋಷದ ಪ್ರಮೋದವನದಲ್ಲಿ ಇರಿಸಿದನು. (ಆದಿಕಾಂಡ 1:26-31; 2:8, 9) ಅವರನ್ನು ಅತ್ಯಂತ ಸಂತುಷ್ಟರನ್ನಾಗಿ ಮಾಡಲು ಅವರಿಗೆ ಬೇಕಾಗಿದ್ದ ಎಲ್ಲವನ್ನು ಆತನು ನೀಡಿದನು. ಆದರೆ ದಂಗೆಯ ಮುಖಾಂತರ ಅವರು ಎಲ್ಲವನ್ನು ಕಳೆದುಕೊಂಡರು. ಅವರ ಪಾಪದ ಫಲಿತಾಂಶವಾಗಿ, ನಾವು ಅಪರಿಪೂರ್ಣತೆಯನ್ನು ಮತ್ತು ಮರಣವನ್ನು ಪಿತ್ರಾರ್ಜಿತವಾಗಿ ಪಡೆದೆವು.—ರೋಮಾಪುರ 3:23; 5:12.
13 ಈಗ ಅಪರಿಪೂರ್ಣರಾಗಿದ್ದರೂ, ಮಾನವರಾದ ನಾವು ದೇವರು ಮಾಡಿರುವ ವಿಷಯಗಳಲ್ಲಿ ಸಂತೋಷವನ್ನು ಇನ್ನೂ ಕಂಡುಕೊಳ್ಳಬಲ್ಲೆವು. ನಮಗೆ ಆನಂದವನ್ನು ತರುವ ಅನೇಕ ವಿಷಯಗಳಿವೆ—ಭವ್ಯವಾದ ಪರ್ವತಗಳು; ಸುಂದರವಾದ ಸರೋವರಗಳು, ನದಿಗಳು, ಸಾಗರಗಳು ಮತ್ತು ಸಮುದ್ರ ತೀರಗಳು; ಅಂತ್ಯರಹಿತ ವಿಭಿನ್ನತೆಯಲ್ಲಿರುವ ವರ್ಣರಂಜಿತ, ಸುವಾಸನೆಯ ಹೂವುಗಳು ಮತ್ತು ಇತರ ಸಸ್ಯಗಳು; ರುಚಿಕರವಾದ ಆಹಾರಗಳ ಪುಷ್ಕಳತೆ; ವೀಕ್ಷಿಸಲು ಎಂದೂ ಬಳಲದಿರುವ ನಯನಮನೋಹರ ಸೂರ್ಯಾಸ್ತಗಳು; ರಾತ್ರಿಯಲ್ಲಿ ಅವಲೋಕಿಸಲು ನಾವು ಸಂತೋಷಿಸುವ ನಕ್ಷತ್ರಗಳುಳ್ಳ ಆಕಾಶಗಳು; ವಿಶಾಲವಾದ ವಿಭಿನ್ನತೆಯಿರುವ ಪ್ರಾಣಿ ಸೃಷ್ಟಿ ಮತ್ತು ವಿನೋದದ ಚೇಷ್ಟೆಗಳೊಂದಿಗೆ ಕೂಡಿರುವ ಅವುಗಳ ರಂಜಿಸುವ ಮರಿಗಳು; ಪ್ರೇರಿಸುವಂತಹ ಸಂಗೀತ; ಆಸಕ್ತಿಕರ ಹಾಗೂ ಉಪಯೋಗಕರ ಕೆಲಸ; ಒಳ್ಳೆಯ ಸ್ನೇಹಿತರು. ಇಂತಹ ವಿಷಯಗಳನ್ನು ಏರ್ಪಡಿಸಿದ ವ್ಯಕ್ತಿಯು, ಇತರರನ್ನು ಸಂತೋಷಪಡಿಸುವುದರಲ್ಲಿ ಆನಂದಿಸುವ ಸಂತುಷ್ಟ ವ್ಯಕ್ತಿ ಎಂಬುದು ಸ್ಪಷ್ಟ.
14. ಆತನನ್ನು ಅನುಕರಿಸುವುದರಲ್ಲಿ ಯಾವ ಸಮತೂಕವನ್ನು ಯೆಹೋವನು ನಮ್ಮಿಂದ ಕೇಳಿಕೊಳ್ಳುತ್ತಾನೆ?
14 ಹೀಗೆ, ಕೇವಲ ಸಂಘಟಿತ ಸಾಮರ್ಥ್ಯವನ್ನು ಮಾತ್ರ ಯೆಹೋವನು ಬಯಸುವುದಿಲ್ಲ. ಆತನು ಸಂತುಷ್ಟನಾಗಿರುವಂತೆಯೇ ತನ್ನ ಸೇವಕರು ಕೂಡ ಸಂತುಷ್ಟರಾಗಿರಬೇಕೆಂದು ಆತನು ಬಯಸುತ್ತಾನೆ. ತಮ್ಮ ಸಂತೋಷವನ್ನು ಹಾನಿಗೊಳಿಸುವ ಮಟ್ಟಿಗೆ ಅವರು ವಿಷಯಗಳನ್ನು ಉನ್ಮತ್ತಾಭಿಮಾನದಿಂದ ಸಂಘಟಿಸುವಂತೆ ಆತನು ಬಯಸುವುದಿಲ್ಲ. ಆತನು ಮಾಡುವಂತೆ, ದೇವರ ಸೇವಕರು ಸಂಘಟನಾತ್ಮಕ ಕೌಶಲಗಳನ್ನು ಸಂತೋಷದೊಂದಿಗೆ ಸರಿದೂಗಿಸಬೇಕು, ಯಾಕೆಂದರೆ ಆತನ ಶಕ್ತಿಶಾಲಿಯಾದ ಪವಿತ್ರಾತ್ಮವು ಇರುವಲ್ಲಿ ಆನಂದವಿದೆ. ನಿಶ್ಚಯವಾಗಿ, ಗಲಾತ್ಯ 5:22 ತೋರಿಸುವುದೇನೆಂದರೆ, ಆತನ ಜನರ ಮೇಲೆ ಕಾರ್ಯ ನಡೆಸುತ್ತಿರುವ ದೇವರ ಪವಿತ್ರಾತ್ಮನ ಎರಡನೆಯ ಫಲವು “ಸಂತೋಷ” ವಾಗಿದೆ.
ಪ್ರೀತಿಯು ಸಂತೋಷವನ್ನು ಹುಟ್ಟಿಸುತ್ತದೆ
15. ನಮ್ಮ ಸಂತೋಷಕ್ಕೆ ಪ್ರೀತಿಯು ಯಾಕೆ ಅಷ್ಟು ಪ್ರಾಮುಖ್ಯವಾಗಿದೆ?
15 “ದೇವರು ಪ್ರೀತಿ ಆಗಿದ್ದಾನೆ,” ಎಂದು ಬೈಬಲ್ ಹೇಳುವುದನ್ನು ಗಮನಿಸುವುದು ಬಹಳ ಆಸಕ್ತಿಯ ವಿಷಯವಾಗಿದೆ. (1 ಯೋಹಾನ 4:8, 16, NW) “ದೇವರು ಸಂಘಟನೆ ಆಗಿದ್ದಾನೆ,” ಎಂದು ಅದು ಹೇಳುವುದೇ ಇಲ್ಲ. ಪ್ರೀತಿಯು ದೇವರ ಮುಖ್ಯ ಗುಣವಾಗಿದೆ, ಮತ್ತು ಅದು ಆತನ ಸೇವಕರಿಂದ ಅನುಕರಿಸಲ್ಪಡಬೇಕು. ಆದುದರಿಂದ ಗಲಾತ್ಯ 5:22 ರಲ್ಲಿ ಪಟ್ಟಿಮಾಡಲಾದ ದೇವರ ಆತ್ಮದ ಪ್ರಥಮ ಫಲವು “ಪ್ರೀತಿ” ಯಾಗಿದೆ, ಮುಂದಿನದು “ಸಂತೋಷ” ವಾಗಿದೆ. ಪ್ರೀತಿಯು ಸಂತೋಷವನ್ನು ಹುಟ್ಟಿಸುತ್ತದೆ. ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ನಾವು ಯೆಹೋವನ ಪ್ರೀತಿಯನ್ನು ಅನುಕರಿಸುವಾಗ, ಸಂತೋಷವು ಹಿಂಬಾಲಿಸುತ್ತದೆ, ಯಾಕೆಂದರೆ ಪ್ರೀತಿಪರ ಜನರು ಸಂತುಷ್ಟ ಜನರಾಗಿದ್ದಾರೆ.
16. ಪ್ರೀತಿಯ ಪ್ರಮುಖತೆಯನ್ನು ಯೇಸು ಹೇಗೆ ಪ್ರದರ್ಶಿಸಿದನು?
16 ದೈವಿಕ ಪ್ರೀತಿಯನ್ನು ಅನುಕರಿಸುವ ಪ್ರಮುಖತೆಯು ಯೇಸುವಿನ ಬೋಧನೆಗಳಲ್ಲಿ ಪ್ರಧಾನವಾಗಿ ಮಾಡಲ್ಪಟ್ಟಿದೆ. ಅವನಂದದ್ದು: “ತಂದೆಯು ನನಗೆ ಬೋಧಿಸಿದ ಹಾಗೆಯೇ ನಾನು ಈ ಸಂಗತಿಗಳನ್ನು ಮಾತಾಡುತ್ತೇನೆ.” (ಯೋಹಾನ 8:28, NW) ಇತರರಿಗೆ ಅವನು ಸರದಿಯಾಗಿ ಕಲಿಸಿದ ಯಾವ ಸಂಗತಿಯು ಯೇಸುವಿಗೆ ವಿಶೇಷವಾಗಿ ಕಲಿಸಲ್ಪಟ್ಟಿತ್ತು? ದೇವರನ್ನು ಪ್ರೀತಿಸುವುದು ಮತ್ತು ನೆರೆಯವರನ್ನು ಪ್ರೀತಿಸುವುದು ಎರಡು ಅತ್ಯಂತ ಮಹಾ ಆಜೆಗ್ಞಳಾಗಿವೆ ಎಂಬ ವಿಷಯವೇ. (ಮತ್ತಾಯ 22:36-39) ಅಂತಹ ಪ್ರೀತಿಯನ್ನು ಯೇಸು ದೃಷ್ಟಾಂತಿಸಿದನು. ಅವನಂದದ್ದು: “ನಾನು ತಂದೆಯನ್ನು ಪ್ರೀತಿಸುತ್ತೇನೆ,” ಮತ್ತು ಮರಣದ ವರೆಗೆ ದೇವರ ಚಿತ್ತವನ್ನು ಮಾಡುವ ಮೂಲಕ ಅವನು ಅದನ್ನು ರುಜುಪಡಿಸಿದನು. ಜನರಿಗಾಗಿ ಸಾಯುವ ಮೂಲಕ ಅವರಿಗಾಗಿದ್ದ ಪ್ರೀತಿಯನ್ನು ಅವನು ತೋರಿಸಿದನು. ಎಫೆಸದಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಹೇಳಿದ್ದು: ‘ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಿಮಗಾಗಿ ತನ್ನನ್ನು ಸಮರ್ಪಿಸಿಕೊಂಡನು.’ (ಯೋಹಾನ 14:31; ಎಫೆಸ 5:2) ಹೀಗೆ, ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನಾನು ಕೊಡುವ ಆಜ್ಞೆಯಾಗಿದೆ.”—ಯೋಹಾನ 15:12, 13.
17. ಇತರರಿಗೆ ಪ್ರೀತಿಯನ್ನು ವ್ಯಕ್ತಪಡಿಸುವುದು ಪ್ರಾಮುಖ್ಯವಾಗಿದೆ ಎಂದು ಪೌಲನು ಹೇಗೆ ತೋರಿಸಿದನು?
17 ಈ ದೈವಿಕ ಪ್ರೀತಿಯು ಎಷ್ಟು ಪ್ರಾಮುಖ್ಯವಾಗಿದೆ ಎಂದು, ಹೀಗೆ ಹೇಳುವ ಮೂಲಕ ಪೌಲನು ವ್ಯಕ್ತಪಡಿಸುತ್ತಾನೆ: “ನಾನು ಮನುಷ್ಯರ ಭಾಷೆಗಳನ್ನೂ ದೇವದೂತರ ಭಾಷೆಗಳನ್ನೂ ಆಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ. ನನಗೆ ಪ್ರವಾದನವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿದ್ಯೆಯೂ ತಿಳಿದರೂ, ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ. ನನಗಿರುವದೆಲ್ಲವನ್ನು ಅನ್ನದಾನಮಾಡಿದರೂ, ನನ್ನ ದೇಹವನ್ನು ಸುಡುವದಕ್ಕೆ ಒಪ್ಪಿಸಿದರೂ ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವದಿಲ್ಲ. . . . ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ.”—1 ಕೊರಿಂಥ 13:1-3, 13.
18. ನಮ್ಮ ಸಂತೋಷಕ್ಕೆ ಕೂಡಿಸುವಂತಹ ಯಾವ ವಿಷಯವನ್ನು ನಾವು ಯೆಹೋವನಿಂದ ಅಪೇಕ್ಷಿಸಬಲ್ಲೆವು?
18 ನಾವು ಯೆಹೋವನ ಪ್ರೀತಿಯನ್ನು ಅನುಕರಿಸುವಾಗ, ನಾವು ತಪ್ಪುಗಳನ್ನು ಮಾಡುವಾಗಲೂ ನಮ್ಮ ಕಡೆಗೆ ಆತನ ಪ್ರೀತಿಯ ಕುರಿತು ಭರವಸೆಯುಳ್ಳವರಾಗಿರಬಲ್ಲೆವು, ಯಾಕೆಂದರೆ ಆತನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು.” (ವಿಮೋಚನಕಾಂಡ 34:6) ತಪ್ಪುಗಳನ್ನು ಮಾಡುವಾಗ ನಾವು ಪ್ರಾಮಾಣಿಕವಾಗಿ ಪಶ್ಚಾತಾಪ್ತಪಡುವುದಾದರೆ, ಇವುಗಳ ಲೆಕ್ಕವನ್ನು ದೇವರು ಇಡುವುದಿಲ್ಲ ಬದಲಿಗೆ ನಮ್ಮನ್ನು ಪ್ರೀತಿಪರವಾಗಿ ಕ್ಷಮಿಸುತ್ತಾನೆ. (ಕೀರ್ತನೆ 103:1-3) ಹೌದು, “ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆ.” (ಯಾಕೋಬ 5:11) ಇದನ್ನು ಅರಿಯುವುದು ನಮ್ಮ ಸಂತೋಷಕ್ಕೆ ನೆರವು ನೀಡುತ್ತದೆ.
ಈಗ ಸಂಬಂಧಿ ಸಂತೋಷ
19, 20. (ಎ) ಈಗ ಸಂಪೂರ್ಣ ಸಂತೋಷವು ಏಕೆ ಸಾಧ್ಯವಿಲ್ಲ? (ಬಿ) ಈ ಸಮಯದಲ್ಲಿ ಸಂಬಂಧಿ ಸಂತೋಷವನ್ನು ನಾವು ಹೊಂದಬಲ್ಲೆವೆಂದು ಬೈಬಲ್ ಹೇಗೆ ತೋರಿಸುತ್ತದೆ?
19 ಹಾಗಿದ್ದರೂ, ರೋಗವೂ ಮರಣವೂ ನಮ್ಮನ್ನು ಎದುರುಗೊಳ್ಳುವ, ಸೈತಾನನ ಕೆಳಗಿರುವ ಈ ಅಪರಾಧದಿಂದ ತುಂಬಿದ, ಹಿಂಸಾತ್ಮಕ, ಅನೈತಿಕ ಲೋಕದ ಕಡೇ ದಿನಗಳಲ್ಲಿ ನಾವು ಜೀವಿಸುತ್ತಿರುವಾಗ, ಇಂದು ಸಂತೋಷವಾಗಿರಲು ಸಾಧ್ಯವೊ? ದೇವರ ಹೊಸ ಲೋಕದಲ್ಲಿರುವಂತಹ ಸಂತೋಷದ ಮಟ್ಟವನ್ನು ನಾವು ಈಗ ಅಪೇಕ್ಷಿಸಲು ಸಾಧ್ಯವಿಲ್ಲ, ಖಂಡಿತ. ಆತನ ವಾಕ್ಯವು ಇಂತಹ ಸಂತೋಷವನ್ನು ಮುಂತಿಳಿಸುತ್ತದೆ: “ಇಗೋ, ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು, ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ.”—ಯೆಶಾಯ 65:17, 18.
20 ದೇವರ ಸೇವಕರು ಈಗ ಹೊಂದಿರಬಹುದಾದ ಸಂತೋಷವು ಸಂಬಂಧಿ ಸಂತೋಷವಾಗಿದೆ ಯಾಕೆಂದರೆ ಆತನ ಚಿತ್ತವನ್ನು ಅವರು ಬಲ್ಲವರಾಗಿದ್ದಾರೆ ಮತ್ತು ಆತನ ಪ್ರಮೋದವನ ಹೊಸ ಲೋಕದಲ್ಲಿ ಬೇಗನೆ ಬರಲಿರುವ ಅದ್ಭುತಕರ ಆಶೀರ್ವಾದಗಳ ನಿಷ್ಕೃಷ್ಟ ಜ್ಞಾನ ಅವರಿಗಿದೆ. (ಯೋಹಾನ 17:3; ಪ್ರಕಟನೆ 21:4) ಆದುದರಿಂದಲೇ ಬೈಬಲ್ ಹೀಗೆ ಹೇಳಸಾಧ್ಯವಿದೆ: “ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು,” “ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು,” “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” (ಕೀರ್ತನೆ 84:12; 128:1; ಮತ್ತಾಯ 5:5) ಹೀಗೆ, ನಾವು ಕಾದಾಡಬೇಕಾದ ಪ್ರಚಲಿತ ಕಠಿನ ಪರಿಸ್ಥಿತಿಗಳ ಹೊರತೂ, ಗಣನೀಯ ಮಟ್ಟದ ಸಂತೋಷವನ್ನು ನಾವು ಹೊಂದಿರಬಲ್ಲೆವು. ಕೆಟ್ಟ ವಿಷಯಗಳು ನಮಗೆ ಸಂಭವಿಸುವಾಗಲೂ, ಯೆಹೋವನನ್ನು ಅರಿಯದವರಂತೆ ಮತ್ತು ಅನಂತ ಜೀವನದ ನಿರೀಕ್ಷೆಯಿಲ್ಲದವರಂತೆ ನಾವು ದುಃಖಿತರಾಗುವುದಿಲ್ಲ.—1 ಥೆಸಲೊನೀಕ 4:13.
21. ತಮ್ಮನ್ನೇ ಕೊಟ್ಟುಕೊಳ್ಳುವುದು ಯೆಹೋವನ ಸೇವಕರ ಸಂತೋಷಕ್ಕೆ ಹೇಗೆ ನೆರವು ನೀಡುತ್ತದೆ?
21 ಇತರರಿಗೆ, ವಿಶೇಷವಾಗಿ ಸೈತಾನನ ಲೋಕದಲ್ಲಿ ಆಗುತ್ತಿರುವ ‘ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ’ ಜನರಿಗೆ, ಬೈಬಲ್ ಸತ್ಯಗಳನ್ನು ಕಲಿಸುವುದರಲ್ಲಿ ಸಮಯ, ಬಲ, ಮತ್ತು ಸಾಧನೋಪಾಯಗಳನ್ನು ಯೆಹೋವನ ಸೇವಕರು ವ್ಯಯಿಸುವುದರಿಂದಲೂ ಸಂತೋಷವು ಬರುತ್ತದೆ. (ಯೆಹೆಜ್ಕೇಲ 9:4) ಬೈಬಲ್ ಹೇಳುವುದು: “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು; ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು.” (ಕೀರ್ತನೆ 41:1, 2) ಯೇಸು ಹೇಳಿದಂತೆ, “ತೆಗೆದುಕೊಳ್ಳುವದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”—ಅ. ಕೃತ್ಯಗಳು 20:35, NW.
22. (ಎ) ಸಂತೋಷದ ವಿಷಯದಲ್ಲಿ ದೇವರ ಸೇವಕರನ್ನು, ಆತನನ್ನು ಸೇವಿಸದವರೊಂದಿಗೆ ವೈದೃಶ್ಯಗೊಳಿಸಿರಿ. (ಬಿ) ಯಾವ ವಿಶೇಷವಾದ ಕಾರಣಕ್ಕಾಗಿ ನಾವು ಸಂತೋಷವಾಗಿರಲು ಅಪೇಕ್ಷಿಸಬೇಕು?
22 ಆದುದರಿಂದ ದೇವರ ಸೇವಕರು ಅತ್ಯಂತ ಶ್ರೇಷ್ಠವಾದ ಸಂತೋಷವನ್ನು ಈ ಪ್ರಚಲಿತ ಸಮಯದಲ್ಲಿ ಅಪೇಕ್ಷಿಸಲು ಸಾಧ್ಯವಿರದಿದ್ದರೂ, ದೇವರನ್ನು ಸೇವಿಸದವರಿಂದ ಅನುಭವಿಸಲ್ಪಡದ ಸಂತೋಷವನ್ನು ಅವರು ಪಡೆಯಬಲ್ಲರು. ಯೆಹೋವನು ಘೋಷಿಸುವುದು: “ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, ನೀವೂ ಮನೋವ್ಯಥೆಯಿಂದ ಮೊರೆಯಿಟ್ಟು ಆತ್ಮಕ್ಲೇಶದಿಂದ ಗೋಳಾಡುವಿರಿ.” (ಯೆಶಾಯ 65:14) ದೇವರನ್ನು ಸೇವಿಸುವವರಿಗೆ ಈಗ ಸಂತೋಷಿಸಲಿಕ್ಕಾಗಿ ಬಹಳ ವಿಶೇಷವಾದೊಂದು ಕಾರಣವಿದೆ—‘ಅರಸನೋಪಾದಿ ತನಗೆ ವಿಧೇಯರಾಗಿರುವವರಿಗೆ ದೇವರು ದಯಪಾಲಿಸಿರುವ’ ಪವಿತ್ರಾತ್ಮ ಅವರಿಗಿದೆ. (ಅ. ಕೃತ್ಯಗಳು 5:32) ದೇವರ ಆತ್ಮವು ಇರುವಲ್ಲಿ, ಸಂತೋಷವಿದೆ ಎಂಬುದನ್ನು ಜ್ಞಾಪಕದಲ್ಲಿಡಿ.—ಗಲಾತ್ಯ 5:22.
23. ನಮ್ಮ ಮುಂದಿನ ಅಭ್ಯಾಸದಲ್ಲಿ ನಾವು ಏನನ್ನು ಪರಿಗಣಿಸುವೆವು?
23 ದೇವರ ಸೇವಕರ ಸಂಸ್ಥೆಯಲ್ಲಿಂದು, ಯೆಹೋವನ ಜನರ ಸಂತೋಷಕ್ಕೆ ನೆರವು ನೀಡುತ್ತಾ, ಸಭೆಗಳಲ್ಲಿ ನಾಯಕತ್ವವನ್ನು ವಹಿಸುವ ಹಿರಿಯರ, “ಹಿರಿಯ ಪುರುಷರ” ಮೂಲಕ ಒಂದು ಪ್ರಾಮುಖ್ಯ ಪಾತ್ರವು ವಹಿಸಲ್ಪಡುತ್ತದೆ. (ತೀತ 1:5) ಇವರು ತಮ್ಮ ಜವಾಬ್ದಾರಿಗಳನ್ನು ಮತ್ತು ತಮ್ಮ ಆತ್ಮಿಕ ಸಹೋದರ ಹಾಗೂ ಸಹೋದರಿಯರ ವಿಷಯದಲ್ಲಿ ತಮ್ಮ ಸಂಬಂಧವನ್ನು ಹೇಗೆ ವೀಕ್ಷಿಸಬೇಕು? ನಮ್ಮ ಮುಂದಿನ ಲೇಖನವು ಇದನ್ನು ಚರ್ಚಿಸುವುದು.
ನೀವು ಹೇಗೆ ಉತ್ತರಿಸುವಿರಿ?
▫ ಯೆಹೋವನು ಸಂಘಟಿತನಾಗಿರುವ ವಿಷಯಕ್ಕೆ ಸೃಷ್ಟಿಯು ಹೇಗೆ ಪ್ರಮಾಣವನ್ನು ನೀಡುತ್ತದೆ?
▫ ಪೂರ್ವದಲ್ಲಿ ಮತ್ತು ಪ್ರಚಲಿತ ಸಮಯದಲ್ಲಿ ಯೆಹೋವನು ತನ್ನ ಸೇವಕರನ್ನು ಹೇಗೆ ಸಂಘಟಿಸಿದ್ದಾನೆ?
▫ ನಮ್ಮಿಂದ ಯಾವ ಸಮತೂಕವನ್ನು ಯೆಹೋವನು ಬಯಸುತ್ತಾನೆ?
▫ ನಮ್ಮ ಸಂತೋಷಕ್ಕೆ ಪ್ರೀತಿಯು ಹೇಗೆ ಪ್ರಾಮುಖ್ಯವಾಗಿದೆ?
▫ ನಮ್ಮ ಸಮಯದಲ್ಲಿ ಯಾವ ರೀತಿಯ ಸಂತೋಷವನ್ನು ನಾವು ಅಪೇಕ್ಷಿಸಬಲ್ಲೆವು?
[ಪುಟ 10 ರಲ್ಲಿರುವ ಚಿತ್ರ ಕೃಪೆ]
Top: Courtesy of ROE/Anglo-Australian Observatory, photograph by David Malin