ದೇವರ ಮಂದೆಯನ್ನು ಪ್ರೀತಿಯಿಂದ ಪಾಲಿಸುವುದು
“ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ.”—1 ಪೇತ್ರ 5:2.
1, 2. ಯೆಹೋವನ ಪ್ರಧಾನ ಗುಣವು ಯಾವುದು, ಮತ್ತು ಅದು ತನ್ನನ್ನು ಹೇಗೆ ವ್ಯಕ್ತಪಡಿಸಿಕೊಳ್ಳುತ್ತದೆ?
ಪವಿತ್ರ ಶಾಸ್ತ್ರಗಳ ಉದ್ದಕ್ಕೂ, ಪ್ರೀತಿಯು ದೇವರ ಪ್ರಬಲವಾದ ಗುಣವಾಗಿದೆಯೆಂದು ಸೃಷ್ಟಗೊಳಿಸಲ್ಪಟ್ಟಿದೆ. “ದೇವರು ಪ್ರೀತಿಸ್ವರೂಪಿಯು,” ಎಂದು 1 ಯೋಹಾನ 4:8 ಹೇಳುತ್ತದೆ. ಆತನ ಪ್ರೀತಿಯು ಕ್ರಿಯೆಯಲ್ಲಿ ವ್ಯಕ್ತವಾಗುವುದರಿಂದ, 1 ಪೇತ್ರ 5:7 ಹೇಳುವುದು, ದೇವರು “ನಿಮಗೋಸ್ಕರ ಚಿಂತಿಸುತ್ತಾನೆ.” ಬೈಬಲಿನಲ್ಲಿ, ಯೆಹೋವನು ತನ್ನ ಜನರಿಗಾಗಿ ಚಿಂತಿಸುವ ವಿಧವು, ಒಬ್ಬ ಪ್ರೀತಿಪರ ಕುರುಬನು ತನ್ನ ಕುರಿಗಳಿಗಾಗಿ ಕೋಮಲತೆಯಿಂದ ಚಿಂತಿಸುವ ವಿಧಕ್ಕೆ ಹೋಲಿಸಲ್ಪಟ್ಟಿದೆ: “ಇಗೋ, . . . ಕರ್ತನಾದ ಯೆಹೋವನು . . . ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು. ಹಾಲು ಕುಡಿಸುವ ಕುರಿಗಳನ್ನು ಮೆಲ್ಲಗೆ ನಡಿಸುವನು.” (ಯೆಶಾಯ 40:10, 11) “ಯೆಹೋವನು ನನಗೆ ಕುರುಬನು; ಕೊರತೆಪಡೆನು,” ಎಂಬುದಾಗಿ ಹೇಳಶಕ್ತನಾಗಲು ದಾವೀದನು ಎಷ್ಟೊಂದು ಸಂತೈಸಲ್ಪಟ್ಟನು!—ಕೀರ್ತನೆ 23:1.
2 ಬೈಬಲ್ ದೇವರು ಅನುಗ್ರಹಿಸುವ ಜನರನ್ನು ಕುರಿಗಳಿಗೆ ಹೋಲಿಸುವುದು ಸೂಕ್ತವಾಗಿದೆ, ಯಾಕೆಂದರೆ ಕುರಿಗಳು ಶಾಂತಪೂರ್ಣವೂ, ಅಧೀನವಾಗುವವೂ, ಚಿಂತಿಸುವ ತಮ್ಮ ಕುರುಬನಿಗೆ ವಿಧೇಯತೆ ತೋರಿಸುವವೂ ಆಗಿವೆ. ಒಬ್ಬ ಪ್ರೀತಿಪರ ಕುರುಬನೋಪಾದಿ, ತನ್ನ ಕುರಿಗಳಂಥ ಜನರಿಗಾಗಿ ಯೆಹೋವನು ಆಳವಾಗಿ ಚಿಂತಿಸುತ್ತಾನೆ. ಪ್ರಾಪಂಚಿಕವಾಗಿ ಮತ್ತು ಆತ್ಮಿಕವಾಗಿ ಅವರಿಗೆ ಒದಗಿಸುವ ಮೂಲಕ ಮತ್ತು ಈ ದುಷ್ಟ ಲೋಕದ ಕಠಿನವಾದ “ಕಡೇ ದಿವಸ” ಗಳಿಂದ, ಬರುವಂತಹ ಆತನ ನೀತಿಯ ಹೊಸ ಲೋಕದ ಕಡೆಗೆ ಅವರನ್ನು ಮಾರ್ಗದರ್ಶಿಸುವ ಮೂಲಕ ಅದನ್ನು ಆತನು ತೋರಿಸುತ್ತಾನೆ.—2 ತಿಮೊಥೆಯ 3:1-5, 13; ಮತ್ತಾಯ 6:31-34; 10:28-31; 2 ಪೇತ್ರ 3:13.
3. ಯೆಹೋವನು ತನ್ನ ಕುರಿಗಳಿಗಾಗಿ ಚಿಂತಿಸುವ ವಿಧವನ್ನು ಕೀರ್ತನೆಗಾರನು ಹೇಗೆ ವರ್ಣಿಸುತ್ತಾನೆ?
3 ತನ್ನ ಕುರಿಗಳಿಗಾಗಿ ಯೆಹೋವನ ಪ್ರೀತಿಪರ ಚಿಂತೆಯನ್ನು ಗಮನಿಸಿ: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ; . . . ಯೆಹೋವನು ನೀತಿವಂತರ ಕೂಗನ್ನು ಕೇಳಿ ಎಲ್ಲಾ ಕಷ್ಟಗಳಿಂದ ಅವರನ್ನು ಬಿಡಿಸುತ್ತಾನೆ. ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ. ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.” (ಕೀರ್ತನೆ 34:15-19) ತನ್ನ ಕುರಿಗಳಂತಹ ಜನರಿಗೆ ವಿಶ್ವದ ಕುರುಬನು ಎಂತಹ ಮಹಾ ಸಾಂತ್ವನವನ್ನು ಒದಗಿಸುತ್ತಾನೆ!
ಒಳ್ಳೇ ಕುರುಬನ ಮಾದರಿ
4. ದೇವರ ಮಂದೆಯನ್ನು ಕಾಯುವುದರಲ್ಲಿ ಯೇಸುವಿನ ಪಾತ್ರವೇನು?
4 ದೇವರ ಮಗನಾದ ಯೇಸು, ತನ್ನ ತಂದೆಯಿಂದ ಚೆನ್ನಾಗಿ ಕಲಿತನು, ಯಾಕೆಂದರೆ ಬೈಬಲ್ ಯೇಸುವನ್ನು “ಒಳ್ಳೇ ಕುರುಬ” ನೆಂದು ಕರೆಯುತ್ತದೆ. (ಯೋಹಾನ 10:11-16) ದೇವರ ಮಂದೆಗೆ ಮಾಡಲಾದ ಅವನ ಪ್ರಮುಖ ಸೇವೆಯು ಪ್ರಕಟನೆ 7 ನೆಯ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿದೆ. ಒಂಬತ್ತನೆಯ ವಚನದಲ್ಲಿ, ನಮ್ಮ ದಿನದ ದೇವರ ಸೇವಕರು ‘ಸಕಲ ಜನಾಂಗ ಕುಲ ಪ್ರಜೆ ಭಾಷೆಗಳಿಂದ ಬಂದ . . . ಎಣಿಸಲಾಗದಂಥ ಮಹಾ ಸಮೂಹ’ ದವರೆಂದು ಕರೆಯಲ್ಪಟ್ಟಿದ್ದಾರೆ. ಅನಂತರ ವಚನ 17 ಹೇಳುವುದು: “ಯಜ್ಞದ ಕುರಿಯಾದಾತನು [ಯೇಸು] ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ. ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” ನಿತ್ಯಜೀವಕ್ಕೆ ನಡೆಸುವ ಸತ್ಯದ ನೀರುಗಳ ಕಡೆಗೆ ಯೇಸು ದೇವರ ಕುರಿಗಳನ್ನು ಮಾರ್ಗದಶಿಸುತ್ತಾನೆ. (ಯೋಹಾನ 17:3) ಅವನ ಸ್ವಂತ ಕುರಿಯಂತಹ ಗುಣಗಳನ್ನು ಸೂಚಿಸುತ್ತಾ, ಯೇಸು “ಕುರಿಮರಿ” ಯೆಂದು ಕರೆಯಲ್ಪಟ್ಟಿದ್ದಾನೆ ಎಂಬುದನ್ನು ಗಮನಿಸಿರಿ. ದೇವರಿಗೆ ಅಧೀನತೆಯ ವಿಷಯದಲ್ಲಿ ಅವನು ಪ್ರಮುಖ ಮಾದರಿಯಾಗಿದ್ದಾನೆ.
5. ಜನರ ಕುರಿತು ಯೇಸುವಿಗೆ ಹೇಗನಿಸಿತು?
5 ಭೂಮಿಯಲ್ಲಿ, ಯೇಸು ಜನರ ಮಧ್ಯದಲ್ಲಿ ಜೀವಿಸಿದನು ಮತ್ತು ಅವರ ವ್ಯಸನಕರ ಪರಿಸ್ಥಿತಿಯನ್ನು ನೋಡಿದನು. ಅವರ ಅವಸ್ಥೆಗೆ ಅವನು ಹೇಗೆ ಪ್ರತಿಕ್ರಿಯಿಸಿದನು? “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:36) ಕಾಳಜಿ ವಹಿಸದಂತಹ ಕುರುಬರಿರುವ ಕುರಿಗಳು ಬಹಳವಾಗಿ ಕಷ್ಟಾನುಭವಿಸುವಂತೆಯೇ, ಕುರುಬನಿಲ್ಲದ ಕುರಿಗಳು ಕೊಂದು ತಿನ್ನುವ ಪ್ರಾಣಿಗಳಿಂದ ಕಷ್ಟಾನುಭವಿಸುತ್ತವೆ. ಆದರೆ ಯೇಸು ಬಹಳವಾಗಿ ಚಿಂತಿಸಿದನು, ಯಾಕೆಂದರೆ ಅವನಂದದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”—ಮತ್ತಾಯ 11:28-30.
6. ಕಡೆಗಣಿಸಲ್ಪಟ್ಟವರಿಗಾಗಿ ಯೇಸು ಯಾವ ಪರಿಗಣನೆಯನ್ನು ತೋರಿಸಿದನು?
6 ಯೇಸು ಜನರೊಂದಿಗೆ ಪ್ರೀತಿಪರವಾಗಿ ವ್ಯವಹರಿಸುವನೆಂದು ಬೈಬಲ್ ಪ್ರವಾದನೆಯು ಮುಂತಿಳಿಸಿತು: “ಯೆಹೋವನ ಆತ್ಮವು ನನ್ನ ಮೇಲೆ ಅದೆ, . . . ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೆ . . . ದುಃಖಿತರೆಲ್ಲರನ್ನು ಸಂತೈಸುವದಕ್ಕೆ.” (ಯೆಶಾಯ 61:1, 2, NW; ಲೂಕ 4:17-21) ಬಡವರನ್ನು ಮತ್ತು ನಿರ್ಭಾಗ್ಯರನ್ನು ಯೇಸು ಎಂದೂ ಕಡೆಗಣಿಸಲಿಲ್ಲ. ಬದಲಿಗೆ, ಅವನು ಯೆಶಾಯ 42:3ನ್ನು ನೆರವೇರಿಸಿದನು: “ಜಜ್ಜಿದ ದಂಟನ್ನು ಮುರಿದುಹಾಕದೆ ಕಳೆಗುಂದಿದ ದೀಪವನ್ನು ನಂದಿಸದೆ . . . ಸಿದ್ಧಿಗೆತರುವನು.” (ಹೋಲಿಸಿ ಮತ್ತಾಯ 12:17-21.) ನೋಯಿಸಲ್ಪಟ್ಟವರು ಜಜ್ಜಿದ ದಂಟುಗಳಂತೆ, ಇಂಧನದ ಕೊರತೆಯಿಂದ ಆರಿಹೋಗುವ ದೀಪದ ಬತ್ತಿಗಳಂತೆ ಇದ್ದರು. ಅವರ ಶೋಚನೀಯ ಸ್ಥಿತಿಯನ್ನು ಗ್ರಹಿಸುತ್ತಾ, ಯೇಸು ಅವರಿಗೆ ಕನಿಕರವನ್ನು ತೋರಿಸಿದನು ಮತ್ತು ಅವರನ್ನು ಆತ್ಮಿಕವಾಗಿ ಹಾಗೂ ಶಾರೀರಿಕವಾಗಿ ಗುಣಪಡಿಸುತ್ತಾ, ಅವರನ್ನು ಬಲದಿಂದ ಮತ್ತು ನಿರೀಕ್ಷೆಯಿಂದ ತುಂಬಿಸಿದನು.—ಮತ್ತಾಯ 4:23.
7. ಅವನಿಗೆ ಪ್ರತಿಕ್ರಿಯಿಸಿದ ಜನರನ್ನು ಯೇಸು ಎಲ್ಲಿಗೆ ನಿರ್ದೇಶಿಸಿದನು?
7 ಕುರಿಗಳಂತಹ ಜನರು ಯೇಸುವಿಗೆ ದೊಡ್ಡ ಸಂಖ್ಯೆಗಳಲ್ಲಿ ಪ್ರತಿಕ್ರಿಯಿಸಿದರು. ಅವನ ಬೋಧನೆ ಎಷ್ಟು ಹಿತಕರವಾಗಿತ್ತೆಂದರೆ, ಅವನನ್ನು ಸೆರೆಹಿಡಿಯಲು ಕಳುಹಿಸಲ್ಪಟ್ಟ ಅಧಿಕಾರಿಗಳು ವರದಿಸಿದ್ದು: “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ.” (ಯೋಹಾನ 7:46) ಅಷೇಕ್ಟೆ, ಕಪಟ ಧಾರ್ಮಿಕ ನಾಯಕರು ದೂರಿದ್ದು: “ಲೋಕವೆಲ್ಲಾ ಆತನ ಹಿಂದೆ ಹೋಯಿತಲ್ಲಾ”! (ಯೋಹಾನ 12:19) ಆದರೆ ಯೇಸು ತನಗಾಗಿ ಘನತೆ ಯಾ ಮಹಿಮೆಯನ್ನು ಬಯಸಲಿಲ್ಲ. ಜನರನ್ನು ಅವನು ತನ್ನ ತಂದೆಯ ಕಡೆಗೆ ನಿರ್ದೇಶಿಸಿದನು. ಆತನ ಶ್ಲಾಘನೀಯ ಗುಣಗಳಿಗಾಗಿ ಯೆಹೋವನನ್ನು ಪ್ರೀತಿಯಿಂದ ಸೇವಿಸುವಂತೆ ಅವನು ಅವರಿಗೆ ಕಲಿಸಿದನು. “ನಿನ್ನ ದೇವರಾಗಿರುವ ಕರ್ತನನ್ನು (ಯೆಹೋವ, NW) ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಬುದ್ಧಿಯಿಂದಿಲೂ ಪ್ರೀತಿಸಬೇಕು.”—ಲೂಕ 10:27, 28.
8. ದೇವರ ಜನರು ಆತನಿಗೆ ಕೊಡುವ ವಿಧೇಯತೆಯು, ಲೌಕಿಕ ಅರಸರಿಗೆ ಇತರರು ಕೊಡುವ ವಿಧೇಯತೆಗಿಂತ ಹೇಗೆ ಭಿನ್ನವಾಗಿದೆ?
8 ತನ್ನ ವಿಶ್ವ ಸಾರ್ವಭೌಮತೆಯು ತನ್ನ ಕುರಿಗಳಂಥ ಜನರಿಂದ ಬೆಂಬಲಿಸಲ್ಪಡುವುದರಲ್ಲಿ ಯೆಹೋವನು ಮಹಿಮೆಪಡುತ್ತಾನೆ, ಅದು ಆತನಿಗಾಗಿರುವ ಅವರ ಪ್ರೀತಿಯ ಮೇಲೆ ಆಧಾರಿತವಾಗಿದೆ. ಆತನ ಪ್ರೀತಿಯೋಗ್ಯ ಗುಣಗಳ ಅವರ ಜ್ಞಾನದಿಂದಾಗಿ ಆತನನ್ನು ಸೇವಿಸಲು ಅವರು ಮನಃಪೂರ್ವಕವಾಗಿ ಆರಿಸಿದ್ದಾರೆ. ಯಾರ ಪ್ರಜೆಗಳು ಅವರಿಗೆ ಕೇವಲ ಭಯದಿಂದ, ಯಾ ಅಸೂಯೆಯಿಂದ, ಅಥವಾ ಅವರಿಗೆ ಯಾವುದೊ ಅವ್ಯಕ್ತ ಉದ್ದೇಶವಿರುವುದರಿಂದ ವಿಧೇಯರಾಗುತ್ತಾರೊ, ಈ ಲೋಕದ ಅಂತಹ ನಾಯಕರಿಂದ ಇದು ಎಷ್ಟು ಭಿನ್ನವಾಗಿದೆ! ರೋಮನ್ ಕ್ಯಾತೊಲಿಕ್ ಚರ್ಚಿನ ಒಬ್ಬ ಪೋಪನ ಕುರಿತು ಹೇಳಲಾಗಿದ್ದ ವಿಷಯವು ಯೆಹೋವ ಅಥವಾ ಯೇಸುವಿನ ಕುರಿತು ಎಂದಿಗೂ ಹೇಳಲ್ಪಡಲು ಸಾಧ್ಯವಿಲ್ಲ: “ಅವನು ಅನೇಕರಿಂದ ಮೆಚ್ಚಲ್ಪಟ್ಟನು, ಎಲ್ಲರಿಂದ ಹೆದರಲ್ಪಟ್ಟನು, ಯಾರಿಂದಲೂ ಪ್ರೀತಿಸಲ್ಪಡಲಿಲ್ಲ.”—ಕ್ರಿಸ್ತನ ಪ್ರತಿನಿಧಿಗಳು—ಅಧಿಕಾರದ ಕಪ್ಪುಮುಖ (ಇಂಗ್ಲಿಷ್ನಲ್ಲಿ), ಪೀಟರ್ ಡಿ ರೋಸ ಅವರಿಂದ.
ಇಸ್ರಾಯೇಲಿನಲ್ಲಿದ್ದ ಕ್ರೂರ ಕುರುಬರು
9, 10. ಪ್ರಾಚೀನ ಇಸ್ರಾಯೇಲಿನ ಮತ್ತು ಪ್ರಥಮ ಶತಮಾನದ ನಾಯಕರನ್ನು ವರ್ಣಿಸಿರಿ.
9 ಯೇಸುವಿಗೆ ಅಸದೃಶವಾಗಿ, ಅವನ ದಿನದಲ್ಲಿದ್ದ ಇಸ್ರಾಯೇಲಿನ ಧಾರ್ಮಿಕ ನಾಯಕರಿಗೆ ಕುರಿಗಳಿಗಾಗಿ ಪ್ರೀತಿಯಿರಲಿಲ್ಲ. ಯಾರ ಕುರಿತು ಯೆಹೋವನು ಹೀಗೆ ನುಡಿದಿದ್ದನೊ ಇಸ್ರಾಯೇಲಿನ ಆ ಮುಂಚಿನ ಅರಸರಂತೆ ಅವರಿದ್ದರು: “ಅಯ್ಯೋ, ಸ್ವಂತ ಹೊಟ್ಟೆಯನ್ನು ಹೊರೆದುಕೊಳ್ಳುವ ಇಸ್ರಾಯೇಲಿನ ಕುರುಬರ ಗತಿಯನ್ನು ಏನು ಹೇಳಲಿ! ಕುರಿಗಳ ಹೊಟ್ಟೆಯನ್ನು ನೋಡುವದು ಕುರುಬರ ಧರ್ಮವಲ್ಲವೆ. . . . ಹಾ, ನೀವು ದುರ್ಬಲವಾದವುಗಳನ್ನು ಬಲಗೊಳಿಸಲಿಲ್ಲ, ರೋಗದವುಗಳನ್ನು ಸ್ವಸ್ಥಮಾಡಲಿಲ್ಲ, ಮುರಿದ ಅಂಗಗಳನ್ನು ಕಟಲ್ಟಿಲ್ಲ, ಓಡಿಸಿದವುಗಳನ್ನು ಮಂದೆಗೆ ಸೇರಿಸಲಿಲ್ಲ, ತಪ್ಪಿಸಿಕೊಂಡವುಗಳನ್ನು ಹುಡುಕಲಿಲ್ಲ; ಅವುಗಳನ್ನು ಹಿಂಸೆಬಲಾತ್ಕಾರಗಳಿಂದ ಆಳುತ್ತಾ ಬಂದಿದ್ದೀರಿ.”—ಯೆಹೆಜ್ಕೇಲ 34:2-4.
10 ಆ ರಾಜಕೀಯ ಕುರುಬರಂತೆ, ಪ್ರಥಮ ಶತಮಾನದ ಯೆಹೂದಿ ಧಾರ್ಮಿಕ ನಾಯಕರು ಕಲ್ಲೆದೆಯವರಾಗಿದ್ದರು. (ಲೂಕ 11:47-52) ಇದನ್ನು ದೃಷ್ಟಾಂತಿಸಲು, ಕದಿಯಲ್ಪಟ್ಟ, ಹೊಡೆಯಲ್ಪಟ್ಟ, ಮತ್ತು ದಾರಿಬದಿಯಲ್ಲಿ ಬಹುಮಟ್ಟಿಗೆ ಸತ್ತ ಸ್ಥಿತಿಯಲ್ಲಿ ಬಿಡಲ್ಪಟ್ಟ ಒಬ್ಬ ಯೆಹೂದ್ಯನ ಕುರಿತು ಯೇಸು ಹೇಳಿದನು. ಇಸ್ರಾಯೇಲಿನ ಒಬ್ಬ ಯಾಜಕನು ಆ ದಾರಿಯಲ್ಲಿ ಬಂದನು, ಆದರೆ ಯೆಹೂದ್ಯನನ್ನು ನೋಡಿ, ರಸ್ತೆಯ ವಿರುದ್ಧ ಬದಿಯಿಂದ ಹೊರಟುಹೋದನು. ಒಬ್ಬ ಲೇವಿಯನೂ ಹಾಗೆಯೇ ಮಾಡಿದನು. ತದನಂತರ ಇಸ್ರಾಯೇಲ್ಯದವನಲ್ಲದ ಒಬ್ಬನು, ತುಚ್ಛೀಕರಿಸಲ್ಪಟ್ಟ ಒಬ್ಬ ಸಮಾರ್ಯದವನು ಅಲ್ಲಿಗೆ ಬಂದನು ಮತ್ತು ಬಲಿಯಾದ ವ್ಯಕ್ತಿಯನ್ನು ಕಂಡು ಕನಿಕರಪಟ್ಟನು. ಅವನ ಗಾಯಗಳನ್ನು ಕಟ್ಟಿದನು, ಒಂದು ಪ್ರಾಣಿಯ ಮೇಲೆ ಅವನನ್ನು ಒಂದು ಚತ್ರಕ್ಕೆ ಕರೆದುಕೊಂಡು ಹೋಗಿ, ಅವನನ್ನು ನೋಡಿಕೊಂಡನು. ಚತ್ರದವನಿಗೆ ಹಣವನ್ನು ಕೊಟ್ಟು, ಯಾವುದೇ ಹೆಚ್ಚಿನ ವೆಚ್ಚಗಳನ್ನು ಹಿಂದಿರುಗಿ ಬಂದು ಕೊಡುವೆನೆಂದು ಹೇಳಿದನು.—ಲೂಕ 10:30-37.
11, 12. (ಎ) ಧಾರ್ಮಿಕ ನಾಯಕರ ದುಷ್ಟತನವು ಯೇಸುವಿನ ದಿನದಲ್ಲಿ ಒಂದು ಪರಮಾಂಕವನ್ನು ಹೇಗೆ ತಲಪಿತು? (ಬಿ) ರೋಮನರು ಕೊನೆಯದಾಗಿ ಧಾರ್ಮಿಕ ನಾಯಕರಿಗೆ ಏನು ಮಾಡಿದರು?
11 ಯೇಸುವಿನ ದಿನದ ಧಾರ್ಮಿಕ ನಾಯಕರು ಎಷ್ಟು ಭ್ರಷ್ಟರಾಗಿದ್ದರೆಂದರೆ, ಯೇಸು ಲಾಜರನನ್ನು ಸತ್ತವರಿಂದ ಪುನರುತ್ಥಾನಗೊಳಿಸಿದಾಗ, ಮಹಾ ಯಾಜಕರು ಮತ್ತು ಫರಿಸಾಯರು ಹಿರೀ ಸಭೆಯನ್ನು ಕೂಡಿಸಿ, ಹೇಳಿದ್ದು: “ನಾವು ಮಾಡುವದು ಇದೇನು? ಈ ಮನುಷ್ಯನು [ಯೇಸು] ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಅವನನ್ನು ನಂಬಾರು; ಮತ್ತು ರೋಮ್ ರಾಜ್ಯದವರು ಬಂದು ನಮ್ಮ ಸ್ಥಾನವನ್ನೂ ಜನವನ್ನೂ ಸೆಳಕೊಂಡಾರು.” (ಯೋಹಾನ 11:47, 48) ಸತ್ತ ಮನುಷ್ಯನ ಪರವಾಗಿ ಯೇಸು ಮಾಡಿದ್ದ ಒಳ್ಳೆಯ ವಿಷಯದ ಕುರಿತು ಅವರು ಚಿಂತಿಸಲಿಲ್ಲ. ತಮ್ಮ ಸ್ಥಾನಗಳ ಕುರಿತು ಅವರು ಚಿಂತಿತರಾಗಿದ್ದರು. ಆದುದರಿಂದ “ಆ ದಿನದಿಂದ [ಯೇಸುವನ್ನು] ಕೊಲ್ಲುವದಕ್ಕೆ ಆಲೋಚಿಸುತ್ತಿದ್ದರು.”—ಯೋಹಾನ 11:53.
12 ತಮ್ಮ ದುಷ್ಟತನಕ್ಕೆ ಕೂಡಿಸಲು, ಮಹಾ ಯಾಜಕರು ಅನಂತರ “ಲಾಜರನನ್ನೂ ಕೊಲ್ಲಬೇಕೆಂದು ಆಲೋಚಿಸಿದರು. ಯಾಕಂದರೆ ಅವನ ದೆಸೆಯಿಂದ ಯೆಹೂದ್ಯರಲ್ಲಿ ಅನೇಕರು ಹೋಗಿ ಯೇಸುವನ್ನು ನಂಬುವವರಾದರು.” (ಯೋಹಾನ 12:10, 11) ತಮ್ಮ ಸ್ಥಾನಗಳನ್ನು ರಕ್ಷಿಸಲು ಅವರು ಕೈಗೊಂಡ ಸ್ವಾರ್ಥ ಪ್ರಯತ್ನಗಳು ಯಾವುದೇ ಉಪಯೋಗಕ್ಕೆ ಬರಲಿಲ್ಲ, ಯಾಕೆಂದರೆ ಯೇಸು ಅವರಿಗೆ ಹೀಗೆ ಹೇಳಿದ್ದನು: “ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.” (ಮತ್ತಾಯ 23:38) ಆ ಮಾತುಗಳ ನೆರವೇರಿಕೆಯಲ್ಲಿ, ಆ ಸಂತತಿಯಲ್ಲಿ ರೋಮನರು ಬಂದು ‘ಅವರ ಸ್ಥಾನವನ್ನು ಮತ್ತು ಅವರ ಜನಾಂಗವನ್ನು,’ ಅಷ್ಟೇ ಅಲ್ಲದೆ ಅವರ ಜೀವಗಳನ್ನೂ ತೆಗೆದುಕೊಂಡು ಹೋದರು.
ಕ್ರೈಸ್ತ ಸಭೆಯಲ್ಲಿ ಪ್ರೀತಿಯುಳ್ಳ ಕುರುಬರು
13. ತನ್ನ ಮಂದೆಯನ್ನು ಪಾಲಿಸಲು ಯಾರನ್ನು ಕಳುಹಿಸುವೆನೆಂದು ಯೆಹೋವನು ವಾಗ್ದಾನಿಸಿದನು?
13 ಕ್ರೂರರಾದ, ಸ್ವಾರ್ಥಿಗಳಾದ ಕುರುಬರ ಬದಲಿಗೆ, ಆತನ ಮಂದೆಯನ್ನು ಕಾಯಲಿಕ್ಕಾಗಿ ಯೆಹೋವನು ಒಳ್ಳೇ ಕುರುಬನಾದ, ಯೇಸುವನ್ನು ಎಬ್ಬಿಸಲಿದ್ದನು. ಕುರಿಗಳಿಗಾಗಿ ಚಿಂತಿಸಲು ಪ್ರೀತಿಯುಳ್ಳ ಉಪಕುರುಬರನ್ನು ಎಬ್ಬಿಸುವ ವಾಗ್ದಾನವನ್ನು ಸಹ ಆತನು ಮಾಡಿದನು. “ನಾನು ಅವುಗಳ ಮೇಲೆ ಕುರುಬರನ್ನು ನೇಮಿಸುವೆನು, ಅವರು ಅವುಗಳನ್ನು ಮೇಯಿಸುವರು; ಅವು ಇನ್ನು ಭಯಪಡವು.” (ಯೆರೆಮೀಯ 23:4) ಹೀಗೆ, ಪ್ರಥಮ ಶತಮಾನದ ಕ್ರೈಸ್ತ ಸಭೆಗಳಂತೆ ಇಂದು ಕೂಡ, ‘ಪಟ್ಟಣಪಟ್ಟಣಗಳಲ್ಲೂ ಸಭೆಯ ಹಿರಿಯರ ನೇಮಕಗಳು’ ಮಾಡಲ್ಪಡುತ್ತವೆ. (ತೀತ 1:5) ಶಾಸ್ತ್ರಗಳಲ್ಲಿ ಸ್ಥಾಪಿಸಲಾಗಿರುವ ಅರ್ಹತೆಗಳನ್ನು ಪೂರೈಸುವ ಈ ಆತ್ಮಿಕ ಹಿರಿಯ ಪುರುಷರು “ದೇವರ ಮಂದೆಯನ್ನು ಕಾಯ” ಬೇಕಾಗಿದೆ.—1 ಪೇತ್ರ 5:2; 1 ತಿಮೊಥೆಯ 3:1-7; ತೀತ 1:7-9.
14, 15. (ಎ) ಯಾವ ಮನೋಭಾವವನ್ನು ಶಿಷ್ಯರು ಬೆಳೆಸಿಕೊಳ್ಳುವುದನ್ನು ಕಷ್ಟಕರವಾಗಿ ಕಂಡುಕೊಂಡರು? (ಬಿ) ಹಿರಿಯರು ದೀನ ಸೇವಕರಾಗಿರಬೇಕೆಂದು ಅವರಿಗೆ ತೋರಿಸಲು, ಯೇಸು ಏನು ಮಾಡಿದನು?
14 ಕುರಿಗಳನ್ನು ಕಾಯುವುದರಲ್ಲಿ, ಹಿರಿಯರಿಗೆ “ಮೊಟಮ್ಟೊದಲು” ಅವುಗಳಿಗಾಗಿ “ಯಥಾರ್ಥವಾದ ಪ್ರೀತಿ” ಇರಬೇಕು. (1 ಪೇತ್ರ 4:8) ಆದರೆ ಪ್ರತಿಷ್ಠೆ ಮತ್ತು ಸ್ಥಾನದ ಕುರಿತು ಬಹಳ ಚಿಂತಿತರಾಗಿದ್ದ ಯೇಸುವಿನ ಶಿಷ್ಯರಿಗೆ ಇದನ್ನು ಕಲಿಯಲಿಕ್ಕಿತ್ತು. ಆದುದರಿಂದ ಇಬ್ಬರು ಶಿಷ್ಯರ ತಾಯಿ ಯೇಸುವಿಗೆ, “ನಿನ್ನ ರಾಜ್ಯದಲ್ಲಿ ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕೂತುಕೊಳ್ಳುವದಕ್ಕೆ ಅಪ್ಪಣೆಯಾಗಬೇಕು,” ಎಂದು ಹೇಳಿದಾಗ, ಇತರ ಶಿಷ್ಯರು ಕೋಪಗೊಂಡರು. ಯೇಸು ಅವರಿಗೆ ಹೇಳಿದ್ದು: “ಜನಗಳನ್ನಾಳುವವರು ಅವರ ಮೇಲೆ ಅಹಂಕಾರದಿಂದ ದೊರೆತನಮಾಡುತ್ತಾರೆ, ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರನಡಿಸುತ್ತಾರೆ ಎಂದು ನೀವು ಬಲ್ಲಿರಷ್ಟೆ. ನಿಮ್ಮಲ್ಲಿ ಹಾಗಿರಬಾರದು; ಆದರೆ ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು.”—ಮತ್ತಾಯ 20:20-28.
15 ಇನ್ನೊಂದು ಸಂದರ್ಭದಲ್ಲಿ, ಶಿಷ್ಯರು “ತಮ್ಮಲ್ಲಿ ಯಾವನು ಹೆಚ್ಚಿನವನೆಂದು ವಾಗ್ವಾದಮಾಡಿ” ಯಾದ ಬಳಿಕ, ಯೇಸು ಅವರಿಗೆ ಹೇಳಿದ್ದು: “ಯಾವನಾದರೂ ಮೊದಲಿನವನಾಗಬೇಕೆಂದಿದ್ದರೆ ಅವನು ಎಲ್ಲರಲ್ಲಿ ಕಡೆಯವನೂ ಎಲ್ಲರ ಆಳೂ ಆಗಿರಬೇಕು.” (ಮಾರ್ಕ 9:34, 35) ಮನಸ್ಸಿನ ನಮ್ರತೆ ಮತ್ತು ಸೇವೆ ಮಾಡುವ ಸಿದ್ಧಮನಸ್ಸು ಅವರ ವ್ಯಕ್ತಿತ್ವದ ಭಾಗವಾಗಬೇಕಿತ್ತು. ಆದರೂ, ಆ ವಿಚಾರಗಳಲ್ಲಿ ಶಿಷ್ಯರು ತೊಂದರೆಗೊಳಗಾಗುತ್ತಾ ಇದ್ದರು, ಯಾಕೆಂದರೆ ಯೇಸು ಸಾಯುವ ಮುಂಚಿನ ರಾತ್ರಿಯೇ, ಅವನ ಕಡೆಯ ಸಂಧ್ಯಾ ಭೋಜನದ ಸಮಯದಲ್ಲಿ, ತಮ್ಮಲ್ಲಿ ಯಾವನು ಹೆಚ್ಚಿನವನು ಎಂಬ ವಿಷಯದಲ್ಲಿ “ಒಂದು ಬಿಸಿಯಾದ ವಾಗ್ವಾದ” ಹುಟ್ಟಿತು! ಒಬ್ಬ ಹಿರಿಯನು ಮಂದೆಯನ್ನು ಹೇಗೆ ಸೇವಿಸಬೇಕೆಂದು ಯೇಸು ಅವರಿಗೆ ತೋರಿಸಿದ ಹೊರತೂ ಅದು ಸಂಭವಿಸಿತು; ಅವನು ತನ್ನನ್ನು ತಗ್ಗಿಸಿಕೊಂಡು ಅವರ ಕಾಲುಗಳನ್ನು ತೊಳೆದಿದ್ದನು. ಅವನಂದದ್ದು: “ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ. ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.”—ಲೂಕ 22:24; ಯೋಹಾನ 13:14, 15.
16. ಇಸವಿ 1899 ರಲ್ಲಿ, ಹಿರಿಯರ ಅತ್ಯಂತ ಪ್ರಾಮುಖ್ಯವಾದ ಗುಣದ ಮೇಲೆ ವಾಚ್ ಟವರ್ ಯಾವ ಹೇಳಿಕೆಗಳನ್ನು ಮಾಡಿತು?
16 ಹಿರಿಯರು ಹೀಗಿರಬೇಕೆಂದು ಯೆಹೋವನ ಸಾಕ್ಷಿಗಳು ಯಾವಾಗಲೂ ಕಲಿಸಿದ್ದಾರೆ. ಸುಮಾರು ಒಂದು ಶತಮಾನದ ಹಿಂದೆ, ಎಪ್ರಿಲ್ 1, 1899ರ ವಾಚ್ ಟವರ್, 1 ಕೊರಿಂಥ 13:1-8 ರಲ್ಲಿರುವ ಪೌಲನ ಮಾತುಗಳನ್ನು ಗಮನಿಸಿ, ಅನಂತರ ಹೇಳಿದ್ದು: “ಜ್ಞಾನ ಮತ್ತು ವಾಗ್ಮಿತೆ ಅತ್ಯಂತ ಮುಖ್ಯವಾದ ಪರೀಕ್ಷೆಗಳಲ್ಲವೆಂದು ಅಪೊಸ್ತಲನು ಸ್ಪಷ್ಟವಾಗಿಗಿ ಸೂಚಿಸುತ್ತಾನೆ, ಆದರೆ ಹೃದಯದಲ್ಲಿ ವ್ಯಾಪಿಸುವ ಮತ್ತು ಜೀವನ ಕ್ರಮದ ಉದ್ದಕ್ಕೂ ವಿಸ್ತರಿಸುವ, ಮತ್ತು ನಮ್ಮ ಮರಣಾಂತ ದೇಹಗಳನ್ನು ಪ್ರೇರಿಸುವ ಮತ್ತು ಕಾರ್ಯ ನಿರ್ವಹಿಸುವ ಪ್ರೀತಿಯೇ, ನಿಜವಾದ ಪರೀಕೆಯ್ಷಾಗಿದೆ—ನಮ್ಮ ದೈವಿಕ ಸಂಬಂಧದ ನಿಜವಾದ ಪ್ರಮಾಣ. . . . ಪವಿತ್ರ ವಿಷಯಗಳಲ್ಲಿ ಸೇವಿಸಲಿಕ್ಕಾಗಿ, ಚರ್ಚಿನ ಒಬ್ಬ ಸೇವಕನಂತೆ ಸ್ವೀಕರಿಸಲ್ಪಡುವ ಪ್ರತಿಯೊಬ್ಬನಲ್ಲಿ ನೋಡಲ್ಪಡಬೇಕಾದ ಪ್ರಧಾನ ವೈಶಿಷ್ಟ್ಯವು, ಎಲ್ಲಕ್ಕಿಂತ ಪ್ರಥಮವಾಗಿ ಪ್ರೀತಿಯ ಆತ್ಮವಾಗಿರಬೇಕು.” ಪ್ರೀತಿಯಿಂದ ದೀನರಾಗಿ ಸೇವಿಸದ ಪುರುಷರು, “ಅಪಾಯಕರ ಬೋಧಕರಾಗಿದ್ದು, ಬಹುಶಃ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿಯನ್ನೇ ಉಂಟುಮಾಡುವವರಾಗಿದ್ದಾರೆ,” ಎಂದು ಅದು ಗಮನಿಸಿತು.—1 ಕೊರಿಂಥ 8:1.
17. ಹಿರಿಯರಿಗಿರಬೇಕಾದ ಗುಣಗಳನ್ನು ಬೈಬಲ್ ಹೇಗೆ ಒತ್ತಿಹೇಳುತ್ತದೆ?
17 ಹೀಗೆ, ಹಿರಿಯ ಪುರುಷರು ಕುರಿಗಳ ‘ಮೇಲೆ ದೊರೆತನ’ ಮಾಡಬಾರದು. (1 ಪೇತ್ರ 5:3) ಬದಲಿಗೆ, “ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ,” ಇರುವುದರಲ್ಲಿ ಅವರು ನಾಯಕತ್ವವನ್ನು ತೆಗೆದುಕೊಳ್ಳಬೇಕು. (ಎಫೆಸ 4:32) ಪೌಲನು ಒತ್ತಿಹೇಳಿದ್ದು: “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. . . . ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”—ಕೊಲೊಸ್ಸೆ 3:12-14.
18. (ಎ) ಕುರಿಗಳೊಂದಿಗೆ ವ್ಯವಹರಿಸುವುದರಲ್ಲಿ ಯಾವ ಉತ್ತಮ ಮಾದರಿಯನ್ನು ಪೌಲನಿಟ್ಟನು? (ಬಿ) ಕುರಿಗಳ ಅಗತ್ಯಗಳನ್ನು ಹಿರಿಯರು ಯಾಕೆ ಅಲಕ್ಷಿಸಬಾರದು?
18 ಪೌಲನು ಇದನ್ನು ಮಾಡಲು ಕಲಿತನು. ಅವನಂದದ್ದು: “ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡಿದ್ದೆವು. ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.” (1 ಥೆಸಲೊನೀಕ 2:7, 8) ಇದಕ್ಕೆ ಹೊಂದಿಕೆಯಾಗಿ, ಅವನಂದದ್ದು: “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ.” (1 ಥೆಸಲೊನೀಕ 5:14) ಕುರಿಗಳು ಅವರಲ್ಲಿಗೆ ತರಬಹುದಾದ ಸಮಸ್ಯೆಯು ಏನೇ ಆಗಿರಲಿ, ಹಿರಿಯರು ಜ್ಞಾನೋಕ್ತಿ 21:13ನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು: “ಬಡವನ ಮೊರೆಗೆ ಕಿವಿಮುಚ್ಚಿಕೊಳ್ಳುವವನು ತಾನೇ ಮೊರೆಯಿಡುವಾಗ ಯಾರೂ ಉತ್ತರಕೊಡರು.”
19. ಪ್ರೀತಿಯುಳ್ಳ ಹಿರಿಯರು ಯಾಕೆ ಒಂದು ಆಶೀರ್ವಾದವಾಗಿದ್ದಾರೆ, ಮತ್ತು ಕುರಿಗಳು ಇಂತಹ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸುತ್ತವೆ?
19 ಮಂದೆಯನ್ನು ಪ್ರೀತಿಪರವಾಗಿ ಕಾಯುವ ಹಿರಿಯ ಪುರುಷರು ಕುರಿಗಳಿಗೆ ಒಂದು ಆಶೀರ್ವಾದವಾಗಿದ್ದಾರೆ. ಯೆಶಾಯ 32:2 ಮುಂತಿಳಿಸಿದ್ದು: “ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷಿಯ್ಟಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.” ವಿಶ್ರಾಂತಿಯ ಆ ಸುಂದರವಾದ ವರ್ಣನೆಯೊಳಗೆ ನಮ್ಮ ಹಿರಿಯರಲ್ಲಿ ಅನೇಕರು ಇಂದು ಹೊಂದಿಕೊಂಡಿದ್ದಾರೆಂದು ಅರಿಯಲು ನಾವು ಸಂತೋಷಿಸುತ್ತೇವೆ. ಈ ಮುಂದಿನ ತತ್ವವನ್ನು ಅನ್ವಯಿಸಲು ಅವರು ಕಲಿತಿದ್ದಾರೆ: “ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮಾಪುರ 12:10) ಹಿರಿಯರು ಈ ರೀತಿಯ ಪ್ರೀತಿ ಮತ್ತು ದೀನತೆಯನ್ನು ತೋರಿಸುವಾಗ, “ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಸನ್ಮಾನ” ಮಾಡುವ ಮೂಲಕ ಕುರಿಗಳು ಪ್ರತಿಕ್ರಿಯಿಸುತ್ತವೆ.—1 ಥೆಸಲೊನೀಕ 5:12, 13.
ಇಚ್ಛಾ ಸ್ವಾತಂತ್ರ್ಯದ ಉಪಯೋಗವನ್ನು ಗೌರವಿಸಿರಿ
20. ಇಚ್ಛಾ ಸ್ವಾತಂತ್ರ್ಯವನ್ನು ಹಿರಿಯರು ಯಾಕೆ ಗೌರವಿಸಬೇಕು?
20 ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವಂತೆ, ಯೆಹೋವನು ಮಾನವರನ್ನು ಇಚ್ಛಾ ಸ್ವಾತಂತ್ರ್ಯದೊಂದಿಗೆ ಉಂಟುಮಾಡಿದನು. ಹಿರಿಯರು ಸಲಹೆಯನ್ನು ಮತ್ತು ನೀತಿಶಿಕ್ಷಣವನ್ನೂ ಕೊಡುವವರಾಗಿರುವುದಾದರೂ, ಇನ್ನೊಬ್ಬರ ಜೀವವನ್ನು ಯಾ ನಂಬಿಕೆಯನ್ನು ನಿಯಂತ್ರಿಸುವವರಾಗಿರಬಾರದು. ಪೌಲನು ಅಂದದ್ದು: “ನಾವು ನಂಬಿಕೆಯ ವಿಷಯದಲ್ಲಿಯೂ ನಿಮ್ಮ ಮೇಲೆ ದೊರೆತನಮಾಡುವವರೆಂದು ನನ್ನ ತಾತ್ಪರ್ಯವಲ್ಲ; ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ; ನಂಬಿಕೆಯ ವಿಷಯದಲ್ಲಿ ದೃಢನಿಂತಿದ್ದೀರಿ.” (2 ಕೊರಿಂಥ 1:24) ಹೌದು, “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5) ಯೆಹೋವನು ತನ್ನ ನಿಯಮಗಳ ಮತ್ತು ತತ್ವಗಳ ಎಲ್ಲೆಯೊಳಗೆ ನಮಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಿದ್ದಾನೆ. ಹೀಗೆ, ಶಾಸ್ತ್ರೀಯ ತತ್ವಗಳು ಉಲ್ಲಂಘಿಸಲ್ಪಡದಿರುವಲ್ಲಿ, ಹಿರಿಯರು ಕಟ್ಟಳೆಗಳನ್ನು ಸ್ಥಾಪಿಸುವುದನ್ನು ತೊರೆಯಬೇಕು. ತಮ್ಮ ಸ್ವಂತ ವೈಯಕ್ತಿಕ ಅಭಿಪ್ರಾಯಗಳನ್ನು ಸಿದ್ಧಾಂತದಂತೆ ನೀಡುವ ಯಾವುದೇ ಪ್ರವೃತ್ತಿಯನ್ನು ಅಥವಾ ಇಂತಹ ದೃಷ್ಟಿಕೋನಗಳೊಂದಿಗೆ ಯಾರಾದರು ಒಪ್ಪದಿದ್ದಲ್ಲಿ ತಮ್ಮ ಅಹಂ ಅಡಬ್ಡರುವಂತೆ ಬಿಡುವುದನ್ನು ಅವರು ಪ್ರತಿರೋಧಿಸಬೇಕು.—2 ಕೊರಿಂಥ 3:17; 1 ಪೇತ್ರ 2:16.
21. ಫಿಲೆಮೋನನ ಕಡೆಗಿದ್ದ ಪೌಲನ ಮನೋಭಾವದಿಂದ ಏನನ್ನು ಕಲಿಯಸಾಧ್ಯವಿದೆ?
21 ಪೌಲನು ರೋಮ್ನ ಸೆರೆಮನೆಯಲ್ಲಿದ್ದಾಗ, ಏಷಿಯಾ ಮೈನರ್ನ ಕೊಲೊಸ್ಸೆಯಲ್ಲಿ, ಗುಲಾಮರ ಯಜಮಾನನಾಗಿದ್ದ ಒಬ್ಬ ಕ್ರೈಸ್ತ, ಫಿಲೆಮೋನನೊಂದಿಗೆ ಹೇಗೆ ವ್ಯವಹರಿಸಿದನೆಂಬುದನ್ನು ಗಮನಿಸಿರಿ. ಓನೇಸಿಮನೆಂಬ ಫಿಲೆಮೋನನ ದಾಸನು ರೋಮ್ಗೆ ಓಡಿಹೋಗಿ, ಒಬ್ಬ ಕ್ರೈಸ್ತನಾಗಿ, ಪೌಲನಿಗೆ ಸಹಾಯ ಮಾಡುತ್ತಿದ್ದನು. ಪೌಲನು ಫಿಲೆಮೋನನಿಗೆ ಬರೆದದ್ದು: “ನಾನು ಸುವಾರ್ತೆಯ ನಿಮಿತ್ತ ಸೆರೆಯಲ್ಲಿರಲಾಗಿ ನಿನಗೆ ಬದಲಾಗಿ ಅವನು ನನಗೆ ಉಪಚಾರಮಾಡುವಂತೆ ಅವನನ್ನು ನನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದೆನು. ಆದರೆ ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ.” (ಫಿಲೆಮೋನ 13, 14) ಓನೇಸಿಮನನ್ನು ಒಬ್ಬ ಕ್ರೈಸ್ತ ಸಹೋದರನಂತೆ ನಡೆಸಿಕೊಳ್ಳಲು ಫಿಲೆಮೋನನಿಗೆ ಹೇಳುತ್ತಾ, ಪೌಲನು ಅವನನ್ನು ಹಿಂದಿರುಗಿ ಕಳುಹಿಸಿದನು. ಮಂದೆಯು ಅವನದ್ದಾಗಿರಲಿಲ್ಲ, ಅದು ದೇವರದ್ದಾಗಿತ್ತೆಂದು ಪೌಲನಿಗೆ ಗೊತ್ತಿತ್ತು. ಅವನು ಅದರ ಯಜಮಾನನಲ್ಲ, ಅದರ ಸೇವಕನಾಗಿದ್ದನು. ಪೌಲನು ಫಿಲೆಮೋನನಿಗೆ ಆದೇಶ ಕೊಡಲಿಲ್ಲ; ಅವನ ಇಚ್ಛಾ ಸ್ವಾತಂತ್ರ್ಯವನ್ನು ಅವನು ಗೌರವಿಸಿದನು.
22. (ಎ) ತಮ್ಮ ಸ್ಥಾನವು ಏನಾಗಿದೆ ಎಂದು ಹಿರಿಯರು ತಿಳಿದುಕೊಳ್ಳಬೇಕು? (ಬಿ) ಯಾವ ರೀತಿಯ ಸಂಸ್ಥೆಯನ್ನು ಯೆಹೋವನು ವಿಕಸಿಸುತ್ತಿದ್ದಾನೆ?
22 ದೇವರ ಸಂಸ್ಥೆಯು ಬೆಳೆಯುವಂತೆ, ಹೆಚ್ಚಿನ ಹಿರಿಯರು ನೇಮಕಗೊಳ್ಳುತ್ತಾರೆ. ತಮ್ಮ ಸ್ಥಾನವು ದೀನ ಸೇವೆಯ ಒಂದು ಸ್ಥಾನವಾಗಿದೆ ಎಂಬುದನ್ನು ಅವರು, ಅಷ್ಟೇ ಅಲ್ಲದೆ ಅಧಿಕ ಅನುಭವಸ್ಥ ಹಿರಿಯರು ಅರ್ಥಮಾಡಿಕೊಳ್ಳಬೇಕು. ಈ ರೀತಿಯಲ್ಲಿ, ಹೊಸ ಲೋಕದ ಕಡೆಗೆ ದೇವರು ತನ್ನ ಸಂಸ್ಥೆಯನ್ನು ಸಾಗಿಸುವಾಗ, ಆತನು ಬಯಸಿದಂತೆ ಬೆಳೆಯಲು ಅದು ಮುಂದುವರಿಯುವುದು—ಸುಸಂಘಟಿತವಾಗಿ ಆದರೆ ಕಾರ್ಯಸಾಧಕತೆಗಾಗಿ ಪ್ರೀತಿ ಮತ್ತು ಅನುಕಂಪವನ್ನು ತ್ಯಜಿಸುವುದರಿಂದಲ್ಲ. ಹೀಗೆ, “ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲ” ವಾಗುವಂತೆ ದೇವರು ಮಾಡುತ್ತಾನೆಂಬ ರುಜುವಾತನ್ನು ಅದರಲ್ಲಿ ನೋಡುವ ಕುರಿಗಳಂತಹ ಜನರಿಗೆ, ಆತನ ಸಂಸ್ಥೆಯು ಹೆಚ್ಚಾಗಿ ಆಕರ್ಷಕವಾಗುವುದು. ಪ್ರೀತಿಯ ಮೇಲೆ ಆಧಾರಿಸಿರುವ ಒಂದು ಸಂಸ್ಥೆಯಿಂದ ಇದನ್ನು ಅಪೇಕ್ಷಿಸಬೇಕಾಗಿದೆ, ಯಾಕೆಂದರೆ “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.”—ರೋಮಾಪುರ 8:28; 1 ಕೊರಿಂಥ 13:8.
ನೀವು ಹೇಗೆ ಉತ್ತರಿಸುವಿರಿ?
▫ ತನ್ನ ಜನರಿಗಾಗಿ ಯೆಹೋವನ ಚಿಂತೆಯನ್ನು ಬೈಬಲ್ ಹೇಗೆ ವರ್ಣಿಸುತ್ತದೆ?
▫ ದೇವರ ಮಂದೆಗಾಗಿ ಚಿಂತಿಸುವುದರಲ್ಲಿ ಯಾವ ಪಾತ್ರವನ್ನು ಯೇಸು ವಹಿಸುತ್ತಾನೆ?
▫ ಯಾವ ಮುಖ್ಯ ವೈಶಿಷ್ಟ್ಯವನ್ನು ಹಿರಿಯರು ಹೊಂದಿರಬೇಕು?
▫ ಕುರಿಗಳ ಇಚ್ಛಾ ಸ್ವಾತಂತ್ರ್ಯವನ್ನು ಹಿರಿಯರು ಯಾಕೆ ಪರಿಗಣಿಸಬೇಕು?
[ಪುಟ 16 ರಲ್ಲಿರುವ ಚಿತ್ರ]
“ಒಳ್ಳೇ ಕುರುಬ” ನಾದ ಯೇಸು, ಅನುಕಂಪವನ್ನು ತೋರಿಸಿದನು
[ಪುಟ 17 ರಲ್ಲಿರುವ ಚಿತ್ರಗಳು]
ಭ್ರಷ್ಟ ಧಾರ್ಮಿಕ ನಾಯಕರು ಯೇಸುವನ್ನು ಕೊಲ್ಲಲು ಸಂಚುಮಾಡಿದರು