ಬಂಜರು ಭೂಮಿಯೊಂದು ಫಲವತ್ತಾಗುತ್ತದೆ
ಆರ್ಥರ್ ಮಲೀನ್ ಹೇಳಿರುವಂತೆ
ಇಸವಿ 1930 ರ ವಸಂತ ಕಾಲದ ಮಬ್ಬಿಲ್ಲದ ದಿನ ಅದಾಗಿತ್ತು. ಬ್ರಿಟಿಷ್ ಕೊಲಂಬಿಯದ ಪ್ರಿನ್ಸ್ ರೂಪರ್ಟ್ನ ಹಡಗುಕಟ್ಟೆಯ ಮೇಲೆ ನಾನು ನಿಂತಿದ್ದೆ. ಕಡಲತಳದಲ್ಲಿದ್ದ ದೋಣಿಯನ್ನು ನೋಡಿ, ‘ನೀರೆಲ್ಲ ಎಲ್ಲಿಗೆ ಹೋಗಿದೆ?’ ಎಂದು ಕುತೂಹಲಪಟ್ಟೆ. ಎಲ್ಲಿ ಸಮುದ್ರ ಮಟ್ಟವು ಕೇವಲ ಆರು ತಾಸುಗಳಲ್ಲಿ 7 ಮೀಟರುಗಳಷ್ಟೂ ಕೆಳಗಿಳಿಯಬಹುದೋ ಆ ಶಾಂತ ಸಾಗರದ ಪಶ್ಚಿಮ ಕರಾವಳಿಯ ಭರತವಿಳಿತಗಳ ವಿಷಯದಲ್ಲಿ ಇದು ನನ್ನ ಪ್ರಥಮ ಅನುಭವವಾಗಿತ್ತು. ಆದರೆ ಹುಲ್ಲುಗಾಡಿನ ಹೊಲದ ಹುಡುಗನೊಬ್ಬನು ಶಾಂತ ಸಾಗರದ ತೀರದಲ್ಲಿ ಇರುವಂತೆ ಆದದ್ದಾದರೂ ಹೇಗೆ?
ಯೆಹೋವನಿಗೆ ಪೂರ್ಣ ಸಮಯದ ಸೇವೆ ಮಾಡುವ ನನ್ನ ಸುಯೋಗವನ್ನು ಷಾರ್ಮ್ಯನ್ ಹಡಗಿನ ನೌಕರ ತಂಡವನ್ನು ಸೇರುವ ಮೂಲಕ ವಿಸ್ತರಿಸಲಿಕ್ಕಾಗಿ ನಾನು ಆಮಂತ್ರಿಸಲ್ಪಟ್ಟಿದ್ದೆನು. ಚದರಿರುವ ಪಶ್ಚಿಮ ಕರಾವಳಿಯಲ್ಲಿ, ವ್ಯಾಂಕೂವರ್ನಿಂದ ಅಲಾಸ್ಕದ ವರೆಗೆ ಸಾರುವ ಕೆಲಸವನ್ನು ಆರಂಭಿಸುವುದು ನಮ್ಮ ನೇಮಕವಾಗಿತ್ತು. ಈ ಹರವಿನಲ್ಲಿ ಬ್ರಿಟಿಷ್ ಕೊಲಂಬಿಯ ಕಡಲತೀರದ ಮೈಲುಗಳಲ್ಲಿ ಹೆಚ್ಚಿನವು ಸೇರಿದ್ದವು ಮತ್ತು ಯೆಹೋವನ ಕ್ರಿಯಾಶೀಲ ಸ್ತುತಿಗಾರರ ಸಂಬಂಧದಲ್ಲಿ ಇದು ಬಂಜರಾಗಿತ್ತು. ಇದಕ್ಕೆ ಒಂದೇ ಅಪವಾದವು ಪ್ರಿನ್ಸ್ ರೂಪರ್ಟ್ ಪಟ್ಟಣದಲ್ಲಿದ್ದ ರಾಜ್ಯ ಪ್ರಚಾರಕರ ಒಂದು ಚಿಕ್ಕ ಗುಂಪು.
ನಾನು ಕೆಲಸ ಆರಂಭಿಸಲು ತವಕಪಡುತ್ತಿದ್ದ ಕಾರಣ, ಟ್ರೆಯ್ನಿನಿಂದ ಇಳಿದೊಡನೆ ಷಾರ್ಮ್ಯನ್ ನನ್ನು ನೋಡಲು ಮತ್ತು ಅದರ ನೌಕರ ತಂಡವಾದ ಆರ್ನಿ ಮತ್ತು ಕ್ರಿಸ್ಟೀನ ಬಾರ್ಸ್ಟ್ಯಾಡ್ ಎಂಬವರನ್ನು ಭೇಟಿ ಮಾಡಲು ಹಡಗುಕಟ್ಟೆಯ ಕಡೆ ನಡೆಯತೊಡಗಿದೆ. ಅಲ್ಲಿ ಯಾರೂ ಇರದರ್ದಿಂದ ನಾನು ಹೊರಟುಹೋದೆ. ಆ ದಿನ ಹೊತ್ತಾದ ಮೇಲೆ ನಾನು ಹಿಂದಿರುಗಿದಾಗ ನನ್ನ ಎದೆಹಾರಿತು. ಸಾಗರವು ಬತ್ತುತ್ತಾ ಹೋಗುತ್ತಿರುವಂತೆ ಕಂಡಿತು!
ಆದರೆ ಈ ರಸಕರವಾದ ನೇಮಕಕ್ಕೆ ಯಾವುದು ನಡೆಸಿತು?
ಒಂದು ಆತ್ಮಿಕ ಪರಂಪರೆ
ಕೆನಡದ ಆಲ್ಬರ್ಟದ ಬಯಲು ಸೀಮೆಯಲ್ಲಿದ್ದ ಮನೆಯಲ್ಲಿ ಆತ್ಮಿಕ ವಿಷಯಗಳಿಗೆ ನನ್ನ ಗಣ್ಯತೆ ಆರಂಭಗೊಂಡಿತು. ಜೈಅನ್ಸ್ ವಾಚ್ ಟವರ್ ಟ್ರ್ಯಾಕ್ಟ್ ಸೊಸೈಟಿಯ ಚಾರ್ಲ್ಸ್ ಟೇಜ್ ರಸೆಲ್ ಬರೆದಿದ್ದ ಒಂದು ಕಿರುಹೊತ್ತಗೆ ನನ್ನ ತಂದೆಗೆ ಸಿಕ್ಕಿತ್ತು. ಇದು ಅವರ ಜೀವಿತವನ್ನು ಗಾಢವಾಗಿ ಪರಿವರ್ತಿಸಿತು. ತಂದೆ ಆಲ್ಬರ್ಟದ ಕ್ಯಾಲ್ಮಾರ್ನಲ್ಲಿ ವ್ಯವಸಾಯದ ಸಮಯ ತಗಲುವ ಕೆಲಸದಲ್ಲಿದ್ದರೂ ತನ್ನ ನೆರೆಯವರಿಗೆ ಸಾರತೊಡಗಿದರು. ಅದು ನೂರು ವರ್ಷಗಳ ಹಿಂದೆ, 1890 ಗಳ ಆದಿಭಾಗದಲ್ಲಿ.
ನಾನು ಫೆಬ್ರವರಿ 20, 1905 ರಲ್ಲಿ ಹುಟ್ಟಿದ್ದು ಈ ದೇವಭಯವುಳ್ಳ ಕುಟುಂಬದಲ್ಲಿಯೇ. ಕೊನೆಗೆ ಹತ್ತು ಸೋದರ ಸೋದರಿಯರಾಗಿ ಪರಿಣಮಿಸಿದ ಕುಟುಂಬದಲ್ಲಿ ನಾನು ಎಂಟನೆಯವನು. ತಂದೆ ಹಾಗೂ ಈ ಸ್ವೀಡಿಶ್ ಸಮುದಾಯದ ಇತರರು ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳೊಂದಿಗೆ ಕೂಡಿಕೊಂಡರು. ಸಕಾಲದಲ್ಲಿ ಅವರು, ಬಳಿಕ ರಾಜ್ಯ ಸಭಾಗೃಹವೆಂದು ಕರೆಯಲ್ಪಟ್ಟ ಒಂದು ಕೂಟದ ಸ್ಥಳವನ್ನು ಕಟ್ಟಿದರು. ಇದು ಕೆನಡದ ಪ್ರಥಮ ಸಭಾಗೃಹಗಳಲ್ಲಿ ಒಂದಾಗಿತ್ತು.
ನಾವು ಕ್ರೈಸ್ತ ಕೂಟಗಳಿಗೆ ಹಾಜರಾಗುವುದರಿಂದ ಹೊಲದ ಕೆಲಸವು ನಮ್ಮನ್ನು ಎಂದಿಗೂ ತಡೆಯುತ್ತಿರಲಿಲ್ಲ. ಈ ಕೂಟಗಳಲ್ಲಿ ಕೆಲವು ಭಾಷಣಗಳು ವಾಚ್ಟವರ್ ಸೊಸೈಟಿ ಕಳುಹಿಸಿದ ಭೇಟಿ ನೀಡುವ ಭಾಷಣಕಾರರಿಂದ ಕೊಡಲ್ಪಡುತ್ತಿದ್ದವು. ಈ ಭಾಷಣಗಳು ಸಾರುವ ಕಾರ್ಯದಲ್ಲಿ ಭಾಗವಹಿಸುವ ತೀವ್ರ ಬಯಕೆಯನ್ನು ನಮ್ಮಲ್ಲಿ ಬೆಳೆಸಿದವು. ಇದರ ಪರಿಣಾಮವಾಗಿ, ನಮ್ಮ ಕುಟುಂಬದಲ್ಲಿ ಹೆಚ್ಚು ಕಡಮೆ ಎಲ್ಲರೂ ಸ್ಥಿರವಾಗಿ ಬೈಬಲ್ ಸತ್ಯದ ಬೆಳಕಿನಲ್ಲಿ ನಡೆದಿದ್ದಾರೆ.
ಸಾರುವ ಕೆಲಸದಲ್ಲಿ ಭಾಗವಹಿಸುವುದು
ಆದಿ 1920 ಗಳಲ್ಲಿ ಸಾಕ್ಷಿ ನೀಡುವ ಪ್ರಥಮ ನೇಮಕ ನನಗೆ ಕೊಡಲ್ಪಟ್ಟಿತು. ಎಡ್ಮಂಟನ್ ನಗರದಲ್ಲಿ ಸಾರ್ವಜನಿಕ ಭಾಷಣದ ಆಮಂತ್ರಣಗಳನ್ನು ನಾನು ಮನೆಯಿಂದ ಮನೆಗೆ ನೀಡಬೇಕಿತ್ತು. ಆ ದಿನ ನಾನು ಅಲ್ಲಿ ಒಬ್ಬನೇ ನಿಂತಾಗ ನಾನೊಂದು ಬೆಲೆಬಾಳುವ ಪಾಠವನ್ನು ಕಲಿತೆ: ಯೆಹೋವನಲ್ಲಿ ಭರವಸವಿಡು. (ಜ್ಞಾನೋಕ್ತಿ 3:5, 6) ಆ ಪ್ರಥಮ ನೇಮಕವನ್ನು ಯೆಹೋವನ ಸಹಾಯದಿಂದ ಸಾಧಿಸಿದ್ದರಲ್ಲಿ ನಾನೆಷ್ಟು ಸಂತುಷ್ಟನಾಗಿದ್ದೆ!
ಯೆಹೋವನ ದೃಶ್ಯ ಸಂಸ್ಥೆಯಲ್ಲಿ ಮತ್ತು ಆತನ ನಂಬಿಗಸ್ತನೂ ವಿವೇಕಿಯೂ ಆದ ಆಳಿನಲ್ಲಿ ನನ್ನ ಭರವಸೆಯು, ಆತನ ಸತ್ಯ ವಾಕ್ಯದ ಮೇಲೆ ಹೆಚ್ಚು ತಿಳಿವಳಿಕೆಯನ್ನು ಬೀರಿದ ಹಾಗೆ ಮುಂದುವರಿಯುತ್ತಾ ಹೋಯಿತು. ಕ್ರಿಸ್ಮಸ್ ಮತ್ತು ಜನ್ಮದಿನಾಚರಣೆಗಳಂತಹ ಕ್ರೈಸ್ತ ಪ್ರಪಂಚದ ಅನೇಕ ಆಚಾರಗಳು ತ್ಯಜಿಸಲ್ಪಟ್ಟವು. ಸ್ವಂತ ರಕ್ಷಣೆ ಇನ್ನು ಮೇಲೆ ಮುನ್ನೊಲವು ಆಗಿರಲಿಲ್ಲ. ಬದಲಿಗೆ, ರಾಜ್ಯ ಸಾರುವಿಕೆಯು ಪ್ರಮುಖತೆಯ ಒಂದು ಯೋಗ್ಯ ಸ್ಥಾನವನ್ನು ಆಕ್ರಮಿಸತೊಡಗಿತು. ಇದೆಲ್ಲ ನನ್ನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. ಹೀಗೆ ಎಪ್ರಿಲ್ 23, 1923 ರಲ್ಲಿ ನಾನು ನನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಂಡ ಸ್ವಲ್ಪದರಲ್ಲಿ, ನಾನು ಪೂರ್ಣ ಸಮಯದ ಶುಶ್ರೂಷೆಯನ್ನು ನನ್ನ ಗುರಿಯಾಗಿರಿಸಿದೆ.
ಶೂನ್ಯಕ್ಕೂ ಕೆಳಗಿನ ಹುಲ್ಲುಗಾಡಿನ ಚಳಿಗಾಲದಲ್ಲಿ, ನಾವು ಗ್ರಾಮೀಣ ಪ್ರದೇಶದಲ್ಲಿ ಕುದುರೆ ಮತ್ತು ಜಾರುಬಂಡಿಯ ಮೇಲೆ ಸವಾರಿ ಮಾಡಿ ಸಾಕ್ಷಿ ನೀಡಿದೆವು. ನಾನು ಒಂದು ಬಾರಿ ಹೌಸ್ಕಾರ್ ಕೆಲಸವೆಂದು ಪ್ರಸಿದ್ಧವಾದ ಕೆಲಸವನ್ನು ಮಾಡುತ್ತಾ ಒಂದು ಗುಂಪಿನೊಂದಿಗೆ ಎರಡು ವಾರ ಕಳೆದೆ. ಕೆನಡದ ಹುಲ್ಲುಗಾಡಿನ ವಿಸ್ತಾರವಾಗಿ ಹರಡಿರುವ ಸ್ಥಳಗಳಲ್ಲಿ ಸಾಕ್ಷಿ ನೀಡಲು ಈ ವಿಶೇಷ ರೀತಿಯ ಕಾರ್ಗಳು ಪ್ರಾಯೋಗಿಕವಾಗಿ ಪರಿಣಮಿಸಿದವು. ಆರ್ಥಿಕ ಸಮಸ್ಯೆಗಳು, ಕಠಿನ ಹವಾಮಾನದ ಪರಿಸ್ಥಿತಿಗಳು ಮತ್ತು ಪ್ರಯಾಣಿಸಲಿದ್ದ ದೂರ ಪ್ರದೇಶಗಳ ಹೊರತೂ ನಾನು ಆಗಾಗ ಸುಮಾರು ಮೂರು ವರ್ಷಕಾಲ—ನಾನು ಶಾಂತ ಸಾಗರದ ಪಶ್ಚಿಮ ಕರಾವಳಿಯಲ್ಲಿ ಸೇವೆ ಮಾಡಲು ಆಮಂತ್ರಿಸಲ್ಪಟ್ಟ ಆ ಸ್ಮರಣೀಯ ದಿನದ ತನಕ—ಆಲ್ಬರ್ಟದಲ್ಲಿ ಪಯನೀಯರ್ ಶುಶ್ರೂಷೆಯಲ್ಲಿ ಮುಂದುವರಿಯಲು ಸಮರ್ಥನಾದೆ. ನನಗೆ ಸಮುದ್ರದ ವಿಷಯವಾಗಲಿ ದೋಣಿಗಳ ವಿಷಯವಾಗಲಿ ಏನೂ ತಿಳಿಯದಿದ್ದುದರಿಂದ ಆ ಆಮಂತ್ರಣ ನನ್ನನ್ನು ತಬ್ಬಿಬ್ಬಾಗಿಸಿತು.
ಹಡಗಿನ ನನ್ನ ಹೊಸ ಜೊತೆ ಕೆಲಸಗಾರರೊಂದಿಗೆ ಆರಾಮವಾಗಿರಲು ನಾನು ಪ್ರಿನ್ಸ್ ರೂಪರ್ಟ್ಗೆ ಬಂದ ಮೇಲೆ ಹೆಚ್ಚು ಕಾಲ ಹಿಡಿಯಲಿಲ್ಲ. ಸಹೋದರ ಬಾರ್ಸ್ಟ್ಯಾಡ್ ವ್ಯಾಪಾರೀ ಮೀನುಗಾರಿಕೆಯಲ್ಲಿ ಅನೇಕ ವರ್ಷ ಭಾಗವಹಿಸಿದ್ದ ಹದಗೊಳಿಸಲ್ಪಟ್ಟಿದ್ದ ನಾವಿಕರಾಗಿದ್ದರು. ಮುಂದಿನ ಆರು ವರ್ಷಗಳು ಬ್ರಿಟಿಷ್ ಕೊಲಂಬಿಯದ ನೀರುಗಳಲ್ಲಿ ವ್ಯಾಂಕೂವರ್ನಿಂದ ಅಲಾಸ್ಕದ ತನಕ ಪ್ರಯಾಣಿಸುವ ತೀಕ್ಷೈ ಸಾರುವಿಕೆಯ ಕಾಲವಾಗಿತ್ತು. ಕಲಿತ ಇನ್ನೊಂದು ಪಾಠ: ಯೆಹೋವನಿಂದ ಬರುವ ನೇಮಕವನ್ನು ಯಾವಾಗಲೂ ಅಂಗೀಕರಿಸು, ಮತ್ತು ಎಂದಿಗೂ ಹಿಮ್ಮೆಟ್ಟದಿರು.
ಸಮುದ್ರ ತೀರದಲ್ಲಿ ಬೀಜ ಬಿತ್ತುವುದು
ಆ 1930 ರ ವಸಂತ ಕಾಲದಲ್ಲಿ ನಾವು ತಂಗಿದ ಪ್ರಪ್ರಥಮ ಬಂದರು ಅಲಾಸ್ಕದ ಕೆಚಿಕನ್ ಆಗಿತ್ತು. ಅಲ್ಲಿ ನಾವು 60 ರಟ್ಟುಪೆಟ್ಟಿಗೆ ಬೈಬಲ್ ಸಾಹಿತ್ಯಗಳನ್ನು ತುಂಬಿದೆವು. ಅಲ್ಲಿ ಕೆಲವು ವಾರಗಳಲ್ಲಿ, ನಾವು ಕೆಚಿಕನ್ನ ಎಲ್ಲ ಮನೆಗಳನ್ನೂ, ರ್ಯಾಂಗೆಲ್, ಪೀಟರ್ಸ್ಬರ್ಗ್, ಜೂನೊ, ಸ್ಕ್ಯಾಗ್ವೇ, ಹೇನ್ಸ್, ಸಿಟ್ಕ ಮತ್ತು ಇನ್ನಿತರ ಚದರಿರುವ ಗ್ರಾಮಗಳನ್ನು ಸಂದರ್ಶಿಸಿದೆವು. ಬಳಿಕ ನಾವು ಪೂರ್ತಿ ಬ್ರಿಟಿಷ್ ಕೊಲಂಬಿಯ ಕರಾವಳಿಯನ್ನು ಆವರಿಸಿ, ಅದನ್ನು ಬೇಸಗೆಯ ಅಂತ್ಯಕ್ಕೆ ಮೊದಲು ಮುಗಿಸಿದೆವು. ದೂರ ಪ್ರದೇಶದಲ್ಲಿರುವ ಮರ ಕಡಿಯುವ ಶಿಬಿರಗಳು, ಮೀನು ಸಂಸ್ಕರಣ ಶಿಬಿರಗಳು, ಅಮೆರಿಕನ್ ಇಂಡಿಯನ್ ಹಳ್ಳಿಗಳು, ಸಣ್ಣ ಪಟ್ಟಣಗಳು ಹಾಗೂ ಚದರಿರುವ ನೆಲಸಿಗರನ್ನು ಮತ್ತು ಬೋನಿಗರನ್ನು ಭೇಟಿ ಮಾಡಿದೆವು. ಹಲವು ಬಾರಿ ಒಂಟಿಗರಾಗಿದ್ದ ಮತ್ತು ಯಾರೊಂದಿಗಾದರೂ ಮಾತಾಡಲು ಸಿಕ್ಕುವ ಸಂದರ್ಭವನ್ನು ಸ್ವಾಗತಿಸಿದ ದೀಪಸ್ತಂಭ ಪಾಲಕರನ್ನು ಅಗಲಿ ಹೋಗುವುದು ಕಷ್ಟಕರವಾಗಿತ್ತು.
ಸಕಾಲದಲ್ಲಿ ಸುಲಭ ಸಾಗಣೆಯ ಫೋನೊಗ್ರಾಫ್ಗಳು ಮತ್ತು ಧ್ವನಿಮುದ್ರಿತ ಬೈಬಲ್ ಭಾಷಣಗಳಿಂದ ಸೊಸೈಟಿ ನಮ್ಮನ್ನು ಸಜ್ಜುಗೊಳಿಸಿತು. ನಾವು ಇವನ್ನು ಪುಸ್ತಕಗಳು, ಬೈಬಲುಗಳು ಮತ್ತು ಪತ್ರಿಕೆಗಳೊಂದಿಗೆ ಒಯ್ದೆವು. ನಾವು ಕರಾವಳಿಯ ಬಂಡೆಗಳನ್ನು ಕೈಕಾಲೂರಿ ಏರಿದಾಗ ಅನೇಕ ಬಾರಿ ನಮಗೆ ಇವನ್ನು ಹೊತ್ತುಕೊಳ್ಳಬೇಕಾಗಿತ್ತು. ನೀರಿನ ಇಳಿತದ ಸಮಯದಲ್ಲಿ, ನಮಗೆ ಕೆಲವು ಬಾರಿ ಇವನ್ನು ಅಳ್ಳಾಡುವ ಏಣಿಗಳನ್ನು ಹತ್ತಿ ಎತ್ತರವಾದ ಹಡಗುಕಟ್ಟೆಗೆ ಎಳೆದುಹಾಕಬೇಕಾಗುತ್ತಿತ್ತು. ಹುಲ್ಲುಗಾಡಿನ ಹೊಲಮನೆಯಲ್ಲಿ ಕೆಲಸಮಾಡುವಾಗ ನನಗೆ ದೊರೆತಿದ್ದ ಶಾರೀರಿಕ ತರಬೇತಿಗಾಗಿ ನಾನು ಆನಂದಪಟ್ಟೆ.
ನಮ್ಮ ಹಡಗಿನಲ್ಲಿದ್ದ ಧ್ವನಿವರ್ಧಕ ವ್ಯವಸ್ಥೆ ರಾಜ್ಯವಾರ್ತೆಯನ್ನು ಹರಡುವುದರಲ್ಲಿ ಶಕ್ತಿಶಾಲಿಯಾದ ಉಪಕರಣವಾಗಿತ್ತು. ನೀರಿನಿಂದ ಹಿಂಪುಟಿತವಾದ ಧ್ವನಿಮುದ್ರಿತ ಭಾಷಣಗಳು ಅನೇಕ ವೇಳೆ ಅನೇಕ ಮೈಲುಗಳ ತನಕ ಕೇಳಿಬರುತ್ತಿದ್ದವು. ಒಮ್ಮೆ ವ್ಯಾಂಕೂವರ್ ಐಲೆಂಡಿನಲ್ಲಿ ಒಂದು ದೂರದ ಖಾರಿಯಲ್ಲಿ ನಾವು ಲಂಗರುಹಾಕಿದ್ದಾಗ, ನಾವು ಈ ಬೈಬಲ್ ಭಾಷಣಗಳಲ್ಲಿ ಒಂದನ್ನು ನುಡಿಸಿದೆವು. ಮರುದಿನ, ಒಳಪ್ರದೇಶದಲ್ಲಿ ಜೀವಿಸುವ ಜನರು ಉದ್ರಿಕ್ತರಾಗಿ ನಮಗೆ ಹೇಳಿದ್ದು: “ನಿನ್ನೆ ನಾವು ಒಂದು ಪ್ರಸಂಗವನ್ನು ನೇರವಾಗಿ ಸ್ವರ್ಗದಿಂದಲೇ ಕೇಳಿದೆವು!”
ಇನ್ನೊಂದು ಸಂದರ್ಭದಲ್ಲಿ ಒಬ್ಬ ವೃದ್ಧ ದಂಪತಿಗಳು, ತಮ್ಮ ಹೊಗೆಕೊಳವಿಯಿಂದ ಸಂಗೀತ ತಮಗೆ ಕೇಳಿಬಂತೆಂದೂ ತಾವು ಹೊರಕ್ಕೆ ಹೋದಾಗ ತಮಗೆ ಏನೂ ಕೇಳಿಸಲಿಲ್ಲವೆಂದೂ ಹೇಳಿದರು. ಒಳಗೆ ಹಿಂದಿರುಗಿ ಬಂದಾಗ, ಅವರಿಗೆ ಒಂದು ಶಬ್ದ ಕೇಳಿತು. ಅದೇಕೆ? ಅವರು ಹೊರಗಡೆ ಇದ್ದಾಗ ನಾವು ರೆಕಾರ್ಡನ್ನು ಬದಲಾಯಿಸುತ್ತಿದ್ದೆವು. ಜನರ ಗಮನವನ್ನು ಸೆಳೆಯಲಿಕ್ಕಾಗಿ ನಾವು ಮೊದಲು ಸಂಗೀತವನ್ನು ನುಡಿಸುತ್ತಿದ್ದೆವು, ಆ ಬಳಿಕ ಬೈಬಲ್ ಭಾಷಣವನ್ನು.
ಇನ್ನೊಂದು ಸಂದರ್ಭದಲ್ಲಿ ಒಂದು ಇಂಡಿಯನ್ ಹಳ್ಳಿಯಿದ್ದ ದ್ವೀಪದ ಬಳಿ ನಾವು ಲಂಗರು ಹಾಕಿದ್ದಾಗ, ಇಬ್ಬರು ನಾಡಿಗ ಹುಡುಗರು ಧ್ವನಿಗಳು ಎಲ್ಲಿಂದ ಬರುತ್ತವೆಂದು ನೋಡಲು ದೋಣಿ ನಡೆಸಿಕೊಂಡು ಬಂದರು. ಆ ಸರ್ವಗಳು ಪುನಃ ಜೀವಿತರಾಗಿದ್ದ ತಮ್ಮ ಮೃತರದ್ದೆಂದು ದ್ವೀಪದ ಕೆಲವರು ಭಾವಿಸಿದರು.
ದೂರ ಪ್ರದೇಶದ ಮೀನು ಸಂಸ್ಕರಣೆಯ ಶಿಬಿರಗಳಲ್ಲಿ ಒಂದು ದಿನಕ್ಕೆ ನೂರಾರು ಪುಸ್ತಕಗಳನ್ನು ಕೊಡುವುದು ಅಸಾಮಾನ್ಯವಾಗಿರಲಿಲ್ಲ. ಅಪಕರ್ಷಣೆಗಳು ಕೊಂಚವಾಗಿದ್ದ ಅವರಿಗೆ ಆತ್ಮಿಕ ವಿಷಯಗಳ ಕುರಿತು ಯೋಚಿಸಲು ಸಮಯವಿತ್ತು. ಕ್ರಮೇಣ ಹೀಗೆ ಚದರಿದ್ದ ಅನೇಕರು ಸಾಕ್ಷಿಗಳಾದರು. ಮುಂದಿನ ಪ್ರಯಾಣಗಳಲ್ಲಿ ನಾವು ಅವರನ್ನು ಭೇಟಿ ಮಾಡಿ, “ಪ್ರೋತ್ಸಾಹನೆಯ ಪರಸ್ಪರ ವಿನಿಮಯ” ಮಾಡುವುದನ್ನು ನಾವು ಮುನ್ನೋಡುತ್ತಿದ್ದೆವು.—ರೋಮಾಪುರ 1:12, NW.
ಜೊತೆಗಾರ್ತಿಯೊಂದಿಗೆ ಮುಂದುವರಿದ ಸೇವೆ
ಇಸವಿ 1931 ರಲ್ಲಿ ನಾನು ಕ್ರಿಸ್ಟೀನ ಬಾರ್ಸ್ಟ್ಯಾಡ್ನ ತಂಗಿಯಾದ ಆ್ಯನಳನ್ನು ಮದುವೆಯಾದೆ. ಆ ಬಳಿಕ ನಾವು ಹಡಗಿನಲ್ಲಿ ಕೂಡಿ ಪಯನೀಯರ್ ಸೇವೆಯನ್ನು ಮುಂದುವರಿಸಿ ಪ್ರತಿಫಲದಾಯಕ ಅನುಭವಗಳಲ್ಲಿ ಸಂತೋಷಿಸಿದೆವು. ದೇವದಾರು, ಪೀತದಾರು ಮತ್ತು ದೈತ್ಯಾಕಾರದ ಶಂಕುಫಲಿ ಮರಗಳಿಂದ ನಿಬಿಡವಾದ ಭವ್ಯ ಪರ್ವತಗಳು, ಏಕಾಂತವಾದ ಖಾರಿಗಳು, ಮರೆಯಾಗಿರುವ ಪ್ರಶಾಂತ ಕೊಲ್ಲಿಗಳ ಹಿನ್ನೆಲೆಯಲ್ಲಿ ತಿಮಿಂಗಿಲ, ಸಮುದ್ರ ಸಿಂಹ, ಸೀಲ್, ಕಡಲ ಹಂದಿ, ಜಿಂಕೆ, ಕರಡಿ ಮತ್ತು ಗರುಡ ಪಕ್ಷಿಗಳು ನಮ್ಮ ಸಂಗಾತಿಗಳಾಗಿದ್ದವು. ಅನೇಕ ಬಾರಿ ನಾವು ದಣಿದಿದ್ದ ಜಿಂಕೆ ಮತ್ತು ಅವುಗಳ ಮರಿಗಳಿಗೆ, ಕೊಂದು ತಿನ್ನುವ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅವು ಜೋರಾಗಿ ಹರಿಯುವ ಕಾಲುವೆಯನ್ನು ಈಜಿ ದಾಟಲು ಪ್ರಯತ್ನಿಸುತ್ತಿದ್ದಾಗ ಸಹಾಯ ಮಾಡಿದೆವು.
ಒಂದು ಅಪರಾಹ್ಣ ಒಂದು ಬೋಳು ಗರುಡ ಪಕ್ಷಿ ನೀರಿನ ಮೇಲೆ ಕೆಳಗಿನಿಂದ ಹಾರಾಡುವುದನ್ನು ನಾವು ಗಮನಿಸಿದೆವು. ಅದರ ಮೊನೆಯುಗುರುಗಳು ಒಂದು ದೊಡ್ಡ ಚಿನೂಕ್ ಸ್ಯಾಮನ್ ಮೀನನ್ನು ಹಿಡಿದಿದ್ದವು. ನೀರಿನಿಂದ ಮೇಲೆತ್ತಲು ಆ ಮೀನು ತೀರ ದೊಡ್ಡದಾಗಿದ್ದುದರಿಂದ ಆ ಹದ್ದು ಆ ಸ್ಯಾಮನನ್ನು ನೀರಿನ ಉದ್ದಕ್ಕೂ ಎಳೆದುಕೊಂಡು ತೀರಕ್ಕೆ ಹೋಗುತ್ತಿತ್ತು. ನಮ್ಮ ಹಡಗಿನ ತಂಡದ ಒಬ್ಬ ಸದಸ್ಯನಾಗಿದ್ದ ಫ್ರ್ಯಾಂಕ್ ಫ್ರಾನ್ಸ್ಕ ಇದರ ಸಾಧ್ಯತೆಯನ್ನು ನೋಡಿ, ಆ ದಣಿದಿದ್ದ ಹದ್ದನ್ನು ಸಂಧಿಸಲು ಸಮುದ್ರ ತೀರದ ಉದ್ದಕ್ಕೂ ಓಡಿ, ಅದು ಹಿಡಿದಿದ್ದ ಮೀನನ್ನು ಬಿಟ್ಟುಬಿಡುವಂತೆ ಒತ್ತಾಯಿಸಿದ. ಆ ಸಾಯಂಕಾಲ ನಮ್ಮ ಪಯನೀಯರ್ ತಂಡಕ್ಕೆ ರುಚಿಯಾದ ಸ್ಯಾಮನ್ ಸಂಧ್ಯಾಭೋಜನ ದೊರಕಿತು ಮತ್ತು ಆ ಗರುಡ ಪಕ್ಷಿ, ಮನಸ್ಸಿಲ್ಲದ್ದಿದರೂ ಭಾಗಿಯಾಗಲು ಕಲಿಯಿತು.
ವ್ಯಾಂಕೂವರ್ ಐಲೆಂಡಿನ ಉತ್ತರ ತುದಿಯಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ಥೀಆಟ್ ಎಂಬ ಹೆಸರಿನ ಒಬ್ಬ ದಂಪತಿಗಳು ಬೈಬಲ್ ಸತ್ಯವನ್ನು ಅಂಗೀಕರಿಸಿದರು. ಗಂಡನು ಮಧ್ಯ 90 ಗಳಲ್ಲಿದ್ದ ಅನರಕ್ಷಸ್ಥನೂ ಛಲವಾದಿಯೂ ಸ್ವತಂತ್ರ ಪ್ರವೃತ್ತಿಯವನೂ ಆಗಿದ್ದನು. ಮತ್ತು ಹೆಂಡತಿ ತನ್ನ ಮಧ್ಯ 80 ಗಳಲ್ಲಿದ್ದಳು. ಆದರೂ ಅವನು ಸತ್ಯದಲ್ಲಿ ಎಷ್ಟು ಆಸಕ್ತಿಯುಳ್ಳವನಾದನೆಂದರೆ, ತನ್ನನ್ನು ತಗ್ಗಿಸಿಕೊಂಡು ತನ್ನ ಹೆಂಡತಿ ತನಗೆ ಓದಲು ಕಲಿಸುವಂತೆ ಬಿಟ್ಟನು. ಬೇಗನೇ ಅವನು ತಾನಾಗಿಯೇ ಬೈಬಲನ್ನು ಮತ್ತು ಸೊಸೈಟಿಯ ಪ್ರಕಾಶನಗಳನ್ನು ಅಭ್ಯಸಿಸಲು ಶಕ್ತನಾದನು. ಮೂರಕ್ಕೂ ಕಡಮೆ ವರ್ಷಗಳ ತರುವಾಯ, ಅವರಿಬ್ಬರಿಗೂ ಅವರ ಆ ದೂರ ಪ್ರದೇಶದ ದ್ವೀಪ ಮನೆಯಲ್ಲಿ ನಮ್ಮ ಹುಟ್ಟುದೋಣಿಯನ್ನು ದೀಕ್ಷಾಸ್ನಾನದ ತೊಟ್ಟಿಯನ್ನಾಗಿ ಉಪಯೋಗಿಸಿ ದೀಕ್ಷಾಸ್ನಾನ ಕೊಡುವ ಆನಂದವು ನನ್ನದಾಗಿತ್ತು.
ಪವೆಲ್ ರಿವರ್ ಪಟ್ಟಣದಲ್ಲಿ ಸ್ಯಾಲಿಸ್ ಕುಟುಂಬ ರಾಜ್ಯ ಸಂದೇಶಕ್ಕೆ ಪ್ರತಿವರ್ತಿಸುವುದನ್ನು ನೋಡುವ ಸಂತೋಷವೂ ನಮ್ಮದಾಗಿತ್ತು. ಯುದ್ಧವೊ ಶಾಂತಿಯೊ—ಯಾವುದು? (ಇಂಗ್ಲಿಷ್) ಪುಸ್ತಿಕೆಯನ್ನು ವಾಲರ್ಟ್ ಓದಿ ಆ ಕೂಡಲೆ ಸತ್ಯದ ನಾದವನ್ನು ಗುರುತಿಸಿದನು. ಸ್ವಲ್ಪದರಲ್ಲಿ ಇಡೀ ಕುಟುಂಬವು ವ್ಯಾಂಕೂವರ್—ಇಲ್ಲಿ ನಾವು ಷಾರ್ಮ್ಯನ್ ದೋಣಿಯನ್ನು ಚಳಿಗಾಲಕ್ಕಾಗಿ ಹಡಗುಕಟ್ಟೆಯಲ್ಲಿ ಕಟ್ಟುತ್ತಿದ್ದೆವು—ನಲ್ಲಿ ವಾಲರ್ಟ್ನನ್ನು ಪಯನೀಯರರಾಗಿ ಸೇರಿಕೊಂಡಿತು. ವಾಲರ್ಟ್ ಬಹಳ ಆಸಕ್ತಿಯುಳ್ಳವನಾಗಿ ಪರಿಣಮಿಸಿದನು ಮತ್ತು ಅನೇಕ ವರ್ಷಗಳಿಂದ ವ್ಯಾಂಕೂವರ್ ಪ್ರದೇಶದ ಸಹೋದರರ ಇಡೀ ಸಂಘಕ್ಕೆ ಪ್ರೀತಿಪಾತ್ರನಾದನು. ಅವನು ಸಾಕ್ಷಿಗಳ ಒಂದು ದೊಡ್ಡ ಕುಟುಂಬವನ್ನು ಹಿಂದೆ ಬಿಟ್ಟು 1976 ರಲ್ಲಿ ತನ್ನ ಭೂಯಾತ್ರೆಯನ್ನು ಮುಗಿಸಿದನು.
ವಿರೋಧವನ್ನು ಜಯಿಸುವುದು
ಇಂಡಿಯನ್ ಹಳ್ಳಿಗಳಲ್ಲಿ ಪಾದ್ರಿಗಳು ಅನೇಕ ವೇಳೆ ನಮ್ಮ ಕೆಲಸದ ಬಗ್ಗೆ ತೀವ್ರ ಅಸಮಾಧಾನಪಟ್ಟರು. ತಮ್ಮ ಆತ್ಮಿಕ ಕಾರ್ಯಕ್ಷೇತ್ರದಲ್ಲಿ ನಾವು ಕಳ್ಳ ಬೇಟೆಗಾರರೆಂದು ಭಾವಿಸಿದರು. ಪೋರ್ಟ್ ಸಿಂಪ್ಸನ್ ಗ್ರಾಮದಲ್ಲಿ ಗ್ರಾಮ ಮುಖ್ಯಸ್ಥನು ನಾವು ಮನೆಯಿಂದ ಮನೆಗೆ ಸಂದರ್ಶಿಸುವುದನ್ನು ನಿಷೇಧಿಸಬೇಕೆಂದು ಸ್ಥಳಿಕ ಪಾದ್ರಿ ಹಕ್ಕುಕೇಳಿಕೆ ಮಾಡಿದನು. ನಾವು ಮುಖ್ಯಸ್ಥನನ್ನು ಸಂಪರ್ಕಿಸಿ, ಜನರು ಸ್ವತಃ ಯೋಚನೆ ಮಾಡಲು ತೀರ ಬುದ್ಧಿಗೇಡಿಗಳೆಂಬ ಪಾದ್ರಿಯ ವರ್ಗೀಕರಣ ಸರಿಯೆಂದು ನೀನು ಯೋಚಿಸುತ್ತಿಯೊ ಎಂದು ಕೇಳಿದೆವು. ಅವನ ಜನರಿಗೆ ದೇವರ ವಾಕ್ಯದ ಒಂದು ಚರ್ಚೆಯನ್ನು ಕೇಳುವ ಒಂದು ಸಂದರ್ಭ ಕೊಡಲಾಗಬೇಕೆಂದೂ ಅವರು ಯಾವುದನ್ನು ಬಯಸುತ್ತಾರೋ ಅದನ್ನು ಅವರೇ ನಿರ್ಣಯಿಸಬೇಕೆಂದೂ ನಾವು ಸೂಚಿಸಿದೆವು. ಪರಿಣಾಮ: ಆ ಗ್ರಾಮದಲ್ಲಿ ನಾವು ಸಾರುತ್ತಾ ಹೋಗುವಂತೆ ಅವನು ಅಪ್ಪಣೆಕೊಟ್ಟನು.
ಇನ್ನೊಬ್ಬ ಗ್ರಾಮ ಮುಖ್ಯಸ್ಥನು, ಸಾಕ್ಷಿಗಳು ಜನರನ್ನು ಸಂಪರ್ಕಿಸುವುದನ್ನು ತಡೆಯುವ ಸಮಿತಿಯ ಸದಸ್ಯರ ಮತ್ತು ಧಾರ್ಮಿಕ ಗುಂಪುಗಳ ಸಕಲ ಪ್ರಯತ್ನಗಳಿಗೆ ಅನೇಕ ದಶಕಗಳ ವರೆಗೆ ಭಂಗ ತಂದನು. ಅವನು ಹೇಳಿದ್ದು: “ನಾನು ಮುಖ್ಯಸ್ಥನಾಗಿರುವ ವರೆಗೆ ಯೆಹೋವನ ಸಾಕ್ಷಿಗಳಿಗೆ ಇಲ್ಲಿ ಸ್ವಾಗತವಿದೆ.” ನಿಜ, ನಮಗೆ ಎಲ್ಲ ಕಡೆಗಳಲ್ಲಿ ಸದಾ ಸ್ವಾಗತವಿರಲಿಲ್ಲ, ಆದರೆ ವಿರೋಧದ ಹೊರತೂ ಒಂದು ಪ್ರದೇಶವನ್ನು ನಾವೆಂದೂ ಬಿಟ್ಟು ಹೋಗುವಂತೆ ಬಲಾತ್ಕರಿಸಲ್ಪಡಲಿಲ್ಲ. ಹೀಗೆ ಪ್ರತಿ ಬಾರಿ ನಾವು ಹಡಗುಕಟ್ಟೆಗೆ ಬಂದಾಗ ನಾವು ನಮ್ಮ ಶುಶ್ರೂಷೆಯನ್ನು ನೆರವೇರಿಸಲು ಶಕ್ತರಾದೆವು.
ಕಡಲಲ್ಲಿ ಉಪದ್ರವಗಳನ್ನು ತಾಳಿಕೊಳ್ಳುವುದು
ದಾಟಿದ ವರ್ಷಗಳಲ್ಲಿ ಚಂಡಮಾರುತ, ಭರತವಿಳಿತ, ಚಿತ್ರಿಸಿಲ್ಲದ ಬಂಡೆಗಳು, ಮತ್ತು ಕೆಲವೊಮ್ಮೆ ಎಂಜಿನ್ ಸಮಸ್ಯೆಗಳನ್ನು ನಾವು ಎದುರಿಸಿದೆವು. ಒಮ್ಮೆ ವ್ಯಾಂಕೂವರ್ನ ಉತ್ತರಕ್ಕೆ ಸುಮಾರು ನೂರು ಮೈಲು ದೂರವಿರುವ ಲಾಸ್ಕೆಟೀ ದ್ವೀಪಕ್ಕೆ ತೀರ ಸಮೀಪ ಪ್ರವಾಹವು ನಮ್ಮನ್ನು ಕೊಚ್ಚಿಕೊಂಡು ಹೋಯಿತು. ಅಲ್ಲಿ ನೀರಿನ ಇಳಿತದಲ್ಲಿ ನಾವು ಬಂಡೆಗಳ ಸಾಲಿನಲ್ಲಿ ತೂಗಹಾಕಲ್ಪಟ್ಟು ವಾತಾವರಣದ ಶಕ್ತಿಗಳ ಅಧೀನತೆಯಲ್ಲಿದ್ದೆವು. ಹವಾಮಾನ ಕೆಟ್ಟದ್ದಾಗುತ್ತಿದ್ದಲ್ಲಿ ದೋಣಿ ಬಂಡೆಗಳಿಗೆ ಬಡಿದು ಚೂರುಚೂರಾಗುತ್ತಿತ್ತು. ನಾವೆಲ್ಲರೂ ಬಂಡೆಗಳ ಮೇಲೆ ಕೈಕಾಲೂರಿ ಏರಿ ಆ ಕೆಟ್ಟ ಪರಿಸ್ಥಿತಿಯ ಸದುಪಯೋಗವನ್ನು ಮಾಡಿದೆವು. ನಾವು ಊಟಮಾಡಿ, ಸ್ವಲ್ಪ ಅಧ್ಯಯನ ಮಾಡಿ ಭರತವು ಪುನಃ ಬರುವ ತನಕ ಕಾದೆವು.
ಅನೇಕ ಅಪಾಯ ಮತ್ತು ಅನನುಕೂಲ್ಯಗಳ ಹೊರತೂ ಅದು ಆರೋಗ್ಯಕರವೂ ಸಂತೋಷಕರವೂ ಆದ ಜೀವನವಾಗಿತ್ತು. ಆದರೆ ನಮ್ಮ ಇಬ್ಬರು ಗಂಡುಮಕ್ಕಳ ಜನನವು ದೊಡ್ಡ ಬದಲಾವಣೆಯನ್ನು ತಂದಿತು. ನಾವು ಹಡಗಿನಲ್ಲಿಯೇ ಜೀವಿಸುತ್ತಾ ಮುಂದುವರಿದೆವು, ಆದರೆ ನಾವು ಊನ ರಿವರ್ನಷ್ಟು ಉತ್ತರಕ್ಕೆ ಪಯಣಮಾಡಿದಾಗೆಲ್ಲ, ಆ್ಯನ ಮತ್ತು ಹುಡುಗರು ಅವಳ ಹೆತ್ತವರ ಮನೆಯಲ್ಲಿ ಉಳಿದರು, ಮತ್ತು ಮಿಕ್ಕವರಾದ ನಾವು ಇನ್ನೂ ಉತ್ತರಕ್ಕಿರುವ ಅಲಾಸ್ಕಕ್ಕೆ ಮುಂದುವರಿಯುತ್ತಿದ್ದೆವು. ಬಳಿಕ ನಾವು ದಕ್ಷಿಣಕ್ಕೆ ಹಿಂದೆಬಂದಾಗ ಆ್ಯನ ಮತ್ತು ಹುಡುಗರು ಪುನಃ ನಮ್ಮ ಜೊತೆಯಲ್ಲಿ ಸೇರಿದರು.
ಎಂದೂ ಮಕ್ಕಳು ಗೊಣಗುತ್ತಿದ್ದ ಅಥವಾ ಕಾಯಿಲೆ ಬಿದ್ದ ಜ್ಞಾಪಕ ನನಗಿಲ್ಲ. ಅವರು ಸದಾ ತೇಲು ನಡುಪಟ್ಟಿಯನ್ನು ಧರಿಸುತ್ತಿದ್ದರು ಮತ್ತು ಕೆಲವು ಬಾರಿ ನಾವು ಅವರನ್ನು ಹಗ್ಗದಿಂದ ಕಟ್ಟಿದ್ದೂ ಉಂಟು. ಹೌದು, ಕೆಲವು ಬಿಗುಪಾದ ಕ್ಷಣಗಳಿದ್ದವು.
ಇನ್ನೂ ಹೆಚ್ಚಿನ ಹೊಂದಾಣಿಕೆಗಳು
ನಮಗೆ 1936 ರಲ್ಲಿ ಷಾರ್ಮ್ಯನ್ ಹಡಗನ್ನು ಬಿಡಬೇಕಾಯಿತು. ಮತ್ತು ನಾನು ಐಹಿಕ ಕೆಲಸವನ್ನು ಪಡೆದುಕೊಂಡೆ. ತರುವಾಯ ನಮಗೆ ಮೂರನೆಯ ಗಂಡುಮಗುವಾಯಿತು. ತಕ್ಕ ಕಾಲದಲ್ಲಿ ನಾನು ಒಂದು ಮೀನುಗಾರಿಕೆಯ ದೋಣಿಯನ್ನು ಖರೀದಿಸಿದೆ. ಇದು ನಮ್ಮ ಜೀವನೋಪಾಯ ಸಾಧನವಾಗಿ ಪರಿಣಮಿಸಿದ್ದು ಮಾತ್ರವಲ್ಲ ಕರಾವಳಿಯ ಉದ್ದಕ್ಕೂ ಸಾರುವ ಕೆಲಸದಲ್ಲಿ ಮುಂದುವರಿಯುವಂತೆಯೂ ನಮ್ಮನ್ನು ಅನುಮತಿಸಿತು.
ನಾವು ಪ್ರಿನ್ಸ್ ರೂಪರ್ಟ್ನ ಕೊಲಿಯ್ಲಾಚೆಗಿನ ಡಿಗ್ಬಿ ದ್ವೀಪದಲ್ಲಿ ಮನೆ ಮಾಡಿದೆವು. ಮತ್ತು ಸ್ವಲ್ಪದರಲ್ಲಿ ಒಂದು ಸಭೆ ರಚಿಸಲ್ಪಟ್ಟಿತು. ಲೋಕ ಯುದ್ಧ II ರ ಸಮಯದಲ್ಲಿ, ಕೆನಡದಲ್ಲಿ ಯೆಹೋವನ ಸಾಕ್ಷಿಗಳ ಸಾರುವ ಕೆಲಸ ನಿಷೇಧಕ್ಕೊಳಗಾಗಿದ್ದಾಗ, ನಾವು ಪ್ರಿನ್ಸ್ ರೂಪರ್ಟ್ಗೆ ಒಂದು ದೋಣಿಯನ್ನು ಒಯ್ದು ಆ ಪ್ರದೇಶದ ಮೇಲೆ “ಉಗ್ರ ದಾಳಿ” ಮಾಡಿ ಪ್ರತಿ ಮನೆಯಲ್ಲಿ ಸಾಹಿತ್ಯವನ್ನು ಬಿಡುತ್ತಿದ್ದೆವು. ನಿಷಿದ್ಧ ಸಾಹಿತ್ಯಗಳ ವಿತರಣೆಗೆ ನಮ್ಮ ಮಧ್ಯ ರಾತ್ರಿಯ ದಾಟುವಿಕೆಗಳ ಕುರಿತು ಯಾರೂ ಮಾತಾಡಲಿಲ್ಲ!
ಭೂಮಿ ಫಲವತ್ತಾಗಿದೆ
ಕ್ರಮೇಣ ಹೆಚ್ಚು ಜನರು ಯೆಹೋವನ ಸಾಕ್ಷಿಗಳೊಂದಿಗೆ ಜೊತೆಗೂಡತೊಡಗಿದರು, ಮತ್ತು 1948 ರಲ್ಲಿ ಪ್ರಿನ್ಸ್ ರೂಪರ್ಟ್ಗೆ ರಾಜ್ಯ ಸಭಾಗೃಹವೊಂದರ ಆವಶ್ಯಕತೆಯಿದೆಯೆಂಬುದು ಸ್ಪಷ್ಟವಾಗಿಯಿತು. ರೇವಿನ ಆಚೆಗಿದ್ದ ಒಂದು ಸೈನ್ಯಖಾತೆಯ ಕಟ್ಟಡವನ್ನು ಖರೀದಿಸಿದ ಬಳಿಕ ನಾವು ಅದನ್ನು ಕಳಚಿ ತೆಪ್ಪದ ಮೇಲೆ ಈಚೆ ಬದಿಗೆ ಸಾಗಿಸಿ, ಅಲ್ಲಿಂದ ಕಟ್ಟಡದ ನಿವೇಶನಕ್ಕೆ ಅದನ್ನು ಲಾರಿಯಲ್ಲಿ ಸಾಗಿಸಿದೆವು. ಯೆಹೋವನು ನಮ್ಮ ಕಠಿನ ಕೆಲಸವನ್ನು ಆಶೀರ್ವದಿಸಿದನು. ನಮಗೆ ನಮ್ಮ ಸ್ವಂತ ಪ್ರಥಮ ರಾಜ್ಯ ಸಭಾಗೃಹ ದೊರೆಯಿತು.
ವರ್ಷ 1956 ರಲ್ಲಿ ನಾನು ಪುನಃ ಪಯನೀಯರ್ ಪಂಕ್ತಿಗೆ ಸೇರಿದೆ ಮತ್ತು ಆ್ಯನ 1964 ರಲ್ಲಿ ನನ್ನ ಜೊತೆಗಾರ್ತಿಯಾದಳು. ನಾವು ಪುನಃ ಶಾಂತ ಸಾಗರ ಕರಾವಳಿಯಲ್ಲಿ ದೋಣಿಯ ಮೂಲಕ ಕೆಲಸ ಮಾಡಿದೆವು. ಸ್ವಲ್ಪ ಸಮಯ, ಕೀನ್ವ್ ಶಾರ್ಲಟ್ ದ್ವೀಪಗಳಿಂದ ಹಿಡಿದು ಪೂರ್ವಕ್ಕೆ ಪರ್ವತಗಳನ್ನು ದಾಟಿ ಫ್ರೇಜರ್ ಲೇಕ್, ಮತ್ತು ಆ ಬಳಿಕ ಪ್ರಿನ್ಸ್ ಜಾರ್ಜ್ ಮತ್ತು ಮೆಕೆನ್ಸಿ ಪಟ್ಟಣಗಳ ವರೆಗೂ ಸಭೆಗಳನ್ನು ಸಂದರ್ಶಿಸುತ್ತಾ ನಾವು ಸರ್ಕಿಟ್ ಕೆಲಸದಲ್ಲಿಯೂ ಭಾಗವಹಿಸಿದೆವು. ಗತ ವರುಷಗಳಲ್ಲಿ ಕಾರ್, ದೋಣಿ ಮತ್ತು ವಿಮಾನಗಳ ಮೂಲಕ ನಾವು ವಾಯುವ್ಯ ಶಾಂತ ಸಾಗರ ಪ್ರದೇಶದಲ್ಲಿ ಸಾವಿರಾರು ಮೈಲು ಪ್ರಯಾಣಿಸಿದ್ದೇವೆ.
ಪ್ರಿನ್ಸ್ ರೂಪರ್ಟ್ನಲ್ಲಿ ನಾವು ಶುಶ್ರೂಷೆಯಲ್ಲಿ ಉತ್ತಮ ಅನುಭವಗಳನ್ನು ಅನುಭವಿಸುತ್ತಾ ಹೋಗಿದ್ದೇವೆ. ಆ್ಯನ ಮತ್ತು ನಾನು, ಹೀಗೆ ಇಬ್ಬರೂ, ಆ ಬಳಿಕ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ಗೆ ಹೋಗಿ ವಿದೇಶಗಳಲ್ಲಿ ಮಿಷನೆರಿಗಳೋಪಾದಿ ಸೇವೆ ಸಲ್ಲಿಸಿದ ವ್ಯಕ್ತಿಗಳೊಂದಿಗೆ ಅಧ್ಯಯನ ನಡೆಸಿದ್ದೇವೆ. ನಮ್ಮ ಆತ್ಮಿಕ ಮಕ್ಕಳು ಅಮೂಲ್ಯವಾದ ರಾಜ್ಯ ಸಂದೇಶವನ್ನು ದೂರದ ದೇಶಗಳಿಗೆ ಒಯ್ಯುವುದನ್ನು ನೋಡುವುದು ಎಷ್ಟು ಸಂತೋಷಕರ!
ಈಗ ನಾವಿಬ್ಬರೂ ಎಂಬತ್ತನ್ನು ದಾಟಿ ಮುಂದೆಸರಿದು ಕ್ಷೀಣಿಸುತ್ತಿರುವ ಆರೋಗ್ಯವನ್ನು ನಿಭಾಯಿಸುತ್ತಿದೇವ್ದಾದರೂ ನಾವಿನ್ನೂ ಯೆಹೋವನ ಸೇವೆಯಲ್ಲಿ ಸಂತುಷ್ಟರಾಗಿದ್ದೇವೆ. ಅಲಾಸ್ಕ ಮತ್ತು ಬ್ರಿಟಿಷ್ ಕೊಲಂಬಿಯದಲ್ಲಿ ನಾವು ನೋಡಿರುವ ನೈಸರ್ಗಿಕ ಸೌಂದರ್ಯವು ಮೆಚ್ಚಿನ ಸ್ಮರಣೆಗಳನ್ನು ಬರಿಸುತ್ತದೆ. ಆದರೂ ಒಮ್ಮೆ ಆತ್ಮಿಕವಾಗಿ ಬಂಜರಾಗಿದ್ದ ಈ ವಿಶಾಲವಾದ ಪ್ರದೇಶವು ಯೆಹೋವನ ಸ್ತುತಿಗಾರರ ಅನೇಕ ಸಭೆಗಳಿಂದ ಫಲ ಬಿಡುವುದನ್ನು ನೋಡುವುದು ಇನ್ನೂ ಹೆಚ್ಚಿನ ಸಂತೋಷವನ್ನು ತರುತ್ತದೆ.
ವಿಶೇಷವಾಗಿ, ನಮ್ಮ ಸ್ವಂತ ಮಕ್ಕಳು ಮತ್ತು ನಮ್ಮ ಆತ್ಮಿಕ ಮಕ್ಕಳು ಬೆಳೆದು ಯೆಹೋವನನ್ನು ಸ್ತುತಿಸುವುದನ್ನು ನೋಡುವುದು ನಮ್ಮನ್ನು ಸಂತೋಷಗೊಳಿಸಿದೆ. ಭೂಮಿಯ ಈ ಭಾಗದ ಆತ್ಮಿಕ ಬೆಳವಣಿಗೆಯಲ್ಲಿ ನಮಗೊಂದು ಚಿಕ್ಕ ಭಾಗವಿದ್ದುದಕ್ಕಾಗಿ ನಾವು ಸಂತೋಷಿಸುತ್ತೇವೆ. ಉದಾಹರಣೆಗೆ, ಅಲಾಸ್ಕಕ್ಕೆ ಈಗ 25 ಕ್ಕೂ ಹೆಚ್ಚು ಸಭೆಗಳನ್ನು ಸುಸಂಘಟಿತವಾಗಿಸುವ ತನ್ನ ಸ್ವಂತ ಬ್ರಾಂಚ್ ಆಫೀಸಿದೆ.
ಇಲ್ಲಿ, ಪ್ರಿನ್ಸ್ ರೂಪರ್ಟ್ನಲ್ಲಿ, ನಗರದ ಮಧ್ಯದಲ್ಲಿ ಒಂದು ಹೊಸ ಸುಂದರ ರಾಜ್ಯ ಸಭಾಗೃಹವನ್ನು ಸಮರ್ಪಣೆ ಮಾಡುವ ಸುಯೋಗ 1988 ರಲ್ಲಿ ನಮಗೆ ಸಿಕ್ಕಿತು. ಹೌದು, ನಾವು ಯೆಶಾಯನಂತೆ, “ಯೆಹೋವನೇ, ನಿನ್ನ ಜನವನ್ನು ಹೆಚ್ಚಿಸಿದ್ದೀ, . . . ನೀನು ದೇಶದ ಮೇರೆಗಳನ್ನೆಲ್ಲಾ ವಿಸ್ತರಿಸಿ ಮಹಿಮೆಗೊಂಡಿದ್ದೀ,” ಎಂದು ಹೇಳುವುದರಲ್ಲಿ ಹರ್ಷಿಸುತ್ತೇವೆ.—ಯೆಶಾಯ 26:15.
[ಪುಟ 21 ರಲ್ಲಿರುವ ಚಿತ್ರ]
ಸರ್ಕಿಟ್ ಕೆಲಸದಲ್ಲಿ ಸೇವೆ ಸಲ್ಲಿಸುವುದು 1964-67
[ಪುಟ 24 ರಲ್ಲಿರುವ ಚಿತ್ರ]
ಕಡಲ ತೀರದ ಉದ್ದಕ್ಕೂ ಸಾಕ್ಷಿನೀಡುವುದರಲ್ಲಿ ಬಳಸಲಾದಂತಹ ರೀತಿಯ ಹಡಗು