ಪೇತ್ರನ ಸಮಾಧಿ ವ್ಯಾಟಿಕನ್ನಲ್ಲಿದೆಯೊ?
“ಅಪೊಸ್ತಲರ ಪ್ರಭುವಿನ ಸಮಾಧಿ ಕಂಡುಹಿಡಿಯಲ್ಪಟ್ಟಿದೆ.” ಪೋಪ್ ಪೈಅಸ್ XII ಇವರ ವಿಜಯೋತ್ಸವದ ಪ್ರಕಟನೆಯನ್ನು ವ್ಯಾಟಿಕನ್ ರೇಡಿಯೊ ರವಾನಿಸಿತು. ಸಮಯವು 1950ರ ಅಂತ್ಯವಾಗಿತ್ತು, ಮತ್ತು ಸೆಂಟ್ ಪೀಟರ್ಸ್ ಬೆಸಿಲಿಕದ ಕೆಳಗೆ ಸಂಕೀರ್ಣ ಶ್ರೇಣಿಯ ಭೂಶೋಧನೆಯನ್ನು ಇತ್ತೀಚೆಗೆ ಮಾಡಿ ಮುಗಿಸಲಾಗಿತ್ತು. ಕೆಲವರಿಗನುಸಾರ, ಈ ಅಗೆತದ ಸಂಶೋಧನೆಯು ಪೇತ್ರನು ನಿಜವಾಗಿಯೂ ವ್ಯಾಟಿಕನ್ನಲ್ಲಿ ಹೂಳಲ್ಪಟ್ಟಿದ್ದನು ಎಂಬುದನ್ನು ರುಜುಮಾಡಿತು. ಆದರೂ, ಎಲ್ಲರೂ ಇದನ್ನು ಒಪ್ಪಲಿಲ್ಲ.
ಕ್ಯಾತೊಲಿಕರಿಗೆ ವ್ಯಾಟಿಕನ್ನಲ್ಲಿರುವ ಸೆಂಟ್ ಪೀಟರ್ಸ್ ಚರ್ಚ್ ವಿಶೇಷ ಮಹತ್ವದ್ದು. “ರೋಮಿಗೆ ತೀರ್ಥಯಾತ್ರೆ ಕೈಕೊಳ್ಳುವ ಅವಶ್ಯ ಉದ್ದೇಶವು ಪೇತ್ರನ ಉತ್ತರಾಧಿಕಾರಿಯನ್ನು ಭೇಟಿಯಾಗಿ ಅವನ ಆಶೀರ್ವಾದವನ್ನು ಪಡೆಯುವುದೇ, ಏಕೆಂದರೆ ಪೇತ್ರನು ರೋಮಿಗೆ ಬಂದನು ಮತ್ತು ಅವನನ್ನು ಅಲ್ಲಿ ಸಮಾಧಿ ಮಾಡಲಾಯಿತು,” ಎನ್ನುತ್ತದೆ ಒಂದು ಕ್ಯಾತೊಲಿಕ್ ಕೈಪಿಡಿ. ಆದರೆ ಪೇತ್ರನನ್ನು ನಿಜವಾಗಿಯೂ ರೋಮಿನಲ್ಲಿ ಹೂಳಲಾಯಿತೊ? ಅವನ ಸಮಾಧಿ ವ್ಯಾಟಿಕನ್ನಲ್ಲಿದೆಯೊ? ಅವನ ಎಲುಬುಗಳು ಕಂಡುಹಿಡಿಯಲ್ಪಟ್ಟಿವೆಯೊ?
ಒಂದು ಪ್ರಾಚೀನ ಶೋಧನ ರಹಸ್ಯ
ಸುಮಾರು 1940 ರಲ್ಲಿ ಆರಂಭವಾಗಿ ಸುಮಾರು ಹತ್ತು ವರ್ಷ ನಡೆದ ಈ ಭೂಶೋಧನೆಗಳು ಬಹು ವಿವಾದಾಸ್ಪದವಾಗಿದ್ದವು. ಪೋಪರು ನೇಮಿಸಿದ ಪ್ರಾಚೀನ ಶೋಧಕರು ಏನನ್ನು ಕಂಡುಹಿಡಿದರು? ಕಂಡುಹಿಡಿದ ಒಂದು ಸಂಗತಿ, ಅನೇಕ ಸಮಾಧಿಗಳಿದ್ದ ಒಂದು ವಿಧರ್ಮಿಗಳ ಶ್ಮಶಾನ. ಅವುಗಳ ಮಧ್ಯೆ, ಈ ದಿನಗಳ ಪೋಪರ ಬಲಿಪೀಠದ ಅಡಿಯಲ್ಲಿ ಅವರು ಒಂದು ಈಡಿಕ್ಯಲವನ್ನು, ಅಂದರೆ ಕೆಂಪು ಮೆತುಗಾರೆಯ ಹೊರಮೈ ಮತ್ತು ಎರಡು ಪಕ್ಕಗೋಡೆಗಳಿಂದಾವೃತವಾದ ಪ್ರತಿಮೆ ಅಥವಾ ವಿಗ್ರಹವನ್ನಿಡುವ ಒಂದು ಗೂಡನ್ನು ಗುರುತಿಸಿದರು. ಅಂತಿಮವಾಗಿ ಮತ್ತು ತೀರ ರಹಸ್ಯಗರ್ಭಿತವಾಗಿ, ಕೆಲವು ಮಾನವ ಅವಶೇಷಗಳು ಕಂಡುಹಿಡಿಯಲ್ಪಟ್ಟವು. ಅವು ಎರಡು ಪಕ್ಕಗೋಡೆಗಳಲ್ಲಿ ಒಂದರಲ್ಲಿ ಸಿಕ್ಕಿದವೆಂದು ಹೇಳಲಾಯಿತು.
ಅರ್ಥವಿವರಣೆಗಳು ಆರಂಭವಾಗುವುದು ಇಲ್ಲಿಯೆ. ಅನೇಕ ಕ್ಯಾತೊಲಿಕ್ ತಜ್ಞರಿಗನುಸಾರ, ನೀರೋವಿನ ಆಳಿಕೆಯಲ್ಲಿ, ಪ್ರಾಯಶಃ ಸಾ.ಶ. 64ರ ಹಿಂಸೆಯ ಸಮಯದಲ್ಲಿ ಪೇತ್ರನು ರೋಮಿನಲ್ಲಿ ವಾಸಿಸಿ ಹುತಾತ್ಮನಾದನು ಎಂಬ ಸಂಪ್ರದಾಯವನ್ನು ಈ ಕಂಡುಹಿಡಿತವು ದೃಢೀಕರಿಸಿತು. ಆ ಅವಶೇಷಗಳು ಅಪೊಸ್ತಲನದ್ದೆಂದೂ, ಒಂದು ಅರ್ಥವಿವರಣೆಗನುಸಾರ, “ಪೇತ್ರನು ಇಲ್ಲಿದ್ದಾನೆ,” ಎಂಬ ಸ್ಮಾರಕ ಲಿಪಿಯಿಂದ ಅದನ್ನು ಗುರುತಿಸಬಹುದೆಂದು ಸಹ ಹೇಳಲಾಗಿದೆ. VI ನೆಯ ಪೋಪ್ ಪೌಲ್, 1968 ರಲ್ಲಿ “ನಮ್ಮ ಸಕಲ ಭಕ್ತಿ ಮತ್ತು ಪೂಜ್ಯಭಾವಕ್ಕೆ ಯೋಗ್ಯವಾಗಿರುವ ಸೆಂಟ್ ಪೀಟರನ ಮರ್ತ್ಯ ಅವಶೇಷಗಳ” ಕಂಡುಹಿಡಿತವನ್ನು ಪ್ರಕಟಿಸಿದಾಗ ಅವರು ಈ ಊಹೆಗೆ ಪ್ರಶಸ್ತಿಯನ್ನು ಕೊಟ್ಟರೆಂದು ತೋರುತ್ತದೆ.
ಆದರೆ ಈ ಅರ್ಥವಿವರಣೆಗಳೊಂದಿಗೆ ಪ್ರತಿವಾದಗಳೂ ಇದ್ದವು. ವ್ಯಾಟಿಕನ್ ಭೂಶೋಧನೆಗಳಲ್ಲಿ ಭಾಗವಹಿಸಿದ ಕ್ಯಾತೊಲಿಕ್ ಪ್ರಾಚೀನ ಶೋಧಕನೂ ಒಬ್ಬ ಜೆಸ್ಯುಯಿಟನೂ ಆದ ಆಂಟಾನ್ಯೊ ಫರೂಆ ಅನೇಕ ಬಾರಿ, ತನಗೆ ಆ ವಿಷಯದಲ್ಲಿ ತಿಳಿದಿರುವ ಸಕಲವನ್ನೂ, ಅಂದರೆ ಪೇತ್ರನ ಅವಶಿಷ್ಟಗಳು ಗುರುತಿಸಲ್ಪಟ್ಟಿವೆ ಎಂಬುದನ್ನು ಪ್ರತ್ಯಕ್ಷವಾಗಿ ವಿರೋಧಿಸುವ ವಿಷಯಗಳನ್ನು ತನಗೆ ‘ಪ್ರಕಟಿಸುವಂತೆ ಬಿಡಲ್ಪಟ್ಟಿರುವುದಿಲ್ಲ’ ಎಂದು ಒತ್ತಿಹೇಳಿರುತ್ತಾನೆ. ಹೆಚ್ಚೇಕೆ, ಕ್ಯಾತೊಲಿಕ್ ಕಾರ್ಡಿನಲ್ ಪೂಪರ್ ಎಂಬವರ ಸಂಪಾದಕತ್ವದಲ್ಲಿದ್ದು 1991 ರಲ್ಲಿ ಪ್ರಕಾಶಪಡಿಸಿದ ಗೈಡ್ ಟು ರೋಮ್, “ಕೆಂಪು ಗೋಡೆಯ ಅಸ್ತಿವಾರಗಳಡಿ ಕಂಡುಕೊಂಡ ಮಾನವ ಎಲುಬುಗಳ ವೈಜ್ಞಾನಿಕ ಪರೀಕ್ಷೆಯು ಅಪೊಸ್ತಲ ಪ್ರೇತ್ರನದ್ದಕ್ಕೆ ಯಾವ ರೀತಿಯಲ್ಲಿಯೂ ಸಂಬಂಧಿಸಿರುವಂತೆ ಕಾಣುವುದಿಲ್ಲ,” ಎಂದು ಹೇಳಿತು. ವಿಚಿತ್ರವಾಗಿ, ಅನುಸರಿಸಿ ಬಂದ ಆವೃತ್ತಿಯಲ್ಲಿ (1991ರ ಅಂತ್ಯದಲ್ಲಿ) ಈ ಪದಸಮೂಹವು ಕಾಣೆಯಾಯಿತು, ಮತ್ತು “ನಿಶ್ಚಯ: ಪೇತ್ರನು ಸೆಂಟ್ ಪೀಟರ್ಸ್ನಲ್ಲಿ,” ಎಂಬ ಅಧ್ಯಾಯ ಕೂಡಿಸಲ್ಪಟ್ಟಿತು.
ಕಂಡುಹಿಡಿತಗಳ ಅರ್ಥವಿವರಣೆ
ಕಂಡುಹಿಡಿತಗಳು ಅರ್ಥವಿವರಣೆಗೆ ಈಡಾಗುತ್ತವೆ ಮತ್ತು ಅವು ವಿಭಿನ್ನ ಜನರಿಗೆ ವಿಭಿನ್ನ ರೀತಿಯ ವಿಷಯಗಳನ್ನು ಹೇಳುತ್ತವೆಂಬುದು ಸ್ಪಷ್ಟ. ಅತ್ಯಧಿಕಾರಯುಕ್ತ ಕ್ಯಾತೊಲಿಕ್ ಇತಿಹಾಸಕಾರರು, “ರೋಮಿನಲ್ಲಿ ಪೇತ್ರನ ಧರ್ಮಬಲಿಯ ಮತ್ತು ಅವನ ಸಮಾಧಿ ಸ್ಥಳದ ಐತಿಹಾಸಿಕ ಸಮಸ್ಯೆಗಳು ವಿವಾದಾಸ್ಪದವಾಗಿವೆ,” ಎಂಬುದನ್ನು ಒಪ್ಪುತ್ತಾರೆ. ಕಂಡುಹಿಡಿತಗಳು ಏನು ತೋರಿಸುತ್ತವೆ?
ಕ್ಯಾತೊಲಿಕ್ ಸಂಪ್ರದಾಯವನ್ನು ಸಮರ್ಥಿಸಲು ಪ್ರಯತ್ನಿಸುವವರಿಗನುಸಾರ, ಈಡಿಕ್ಯಲ ಸ್ಮಾರಕವು, ಮೂರನೆಯ ಶತಮಾನದ ಆದಿಯಲ್ಲಿ ಜೀವಿಸಿದ ಗೆಆಯಸ್ ಎಂಬ ಒಬ್ಬ ಪುರೋಹಿತನು ಹೇಳಿರುವ “ಸ್ಮಾರಕ” ವಾಗಿದೆ. ಸೀಸರೀಯದ ಯುಸೀಬಿಯಸ್ ಎಂಬ ನಾಲ್ಕನೆಯ ಶತಮಾನದ ಮಠೀಯ ಇತಿಹಾಸಕಾರನಿಗನುಸಾರ, ಗೆಆಯಸನು ‘ವ್ಯಾಟಿಕನ್ ಗುಡ್ಡದಲ್ಲಿ ಪೇತ್ರನ ಸ್ಮಾರಕವನ್ನು ತೋರಿಸಲು’ ತನಗೆ ಸಾಧ್ಯವಿದೆ ಎಂದು ಹೇಳಿದನು. ಈ ಸಂಪ್ರದಾಯವನ್ನು ಸಮರ್ಥಿಸುವವರು, ಅಪೊಸ್ತಲನು “ಗೆಆಯಸನ ಸ್ಮಾರಕ” ವೆಂದು ಪ್ರಸಿದ್ಧವಾಗಿರುವ ಸ್ಮಾರಕದ ಕೆಳಗೆ ಹೂಳಲ್ಪಟ್ಟಿದ್ದಾನೆಂದು ವಾದಿಸುತ್ತಾರೆ. ಆದರೆ ಇತರರು ಭೂಶೋಧನೆಗಳ ಫಲವನ್ನು, ಆದಿಕ್ರೈಸ್ತರು ತಮಲ್ಲಿ ಸತ್ತವರನ್ನು ಸಮಾಧಿಮಾಡುವುದಕ್ಕೆ ವಿಪರೀತ ಗಮನವನ್ನು ಕೊಡಲಿಲ್ಲವೆಂದೂ, ಪೇತ್ರನು ಅಲ್ಲಿ ಕೊಲ್ಲಲ್ಪಟ್ಟಿದ್ದರೂ ಅವನ ಶರೀರವನ್ನು ಪಡೆಯುವುದು ಅಸಂಭವವೆಂದು ಹೇಳಿ ಬೇರೆಯೇ ರೀತಿಯಲ್ಲಿ ಅರ್ಥವಿವರಿಸುತ್ತಾರೆ. (ರೇಖಾಚೌಕ, ಪುಟ 29 ನೋಡಿ.)
“ಗೆಆಯಸನ ಸ್ಮಾರಕವು” (ಅದು ಕಂಡುಹಿಡಿಯಲ್ಪಟ್ಟಿರುವಲ್ಲಿ) ಒಂದು ಸಮಾಧಿಯೆಂದು ಒಪ್ಪದವರೂ ಇದ್ದಾರೆ. ಅದು ಪೇತ್ರನ ಗೌರವಾರ್ಥವಾಗಿ ಎರಡನೆಯ ಶತಮಾನದ ಅಂತ್ಯ ಸಮಯದಲ್ಲಿ ಕಟ್ಟಲ್ಪಟ್ಟ ಒಂದು ಸ್ಮಾರಕವೆಂದೂ ತರುವಾಯ “ಅದನ್ನು ಸಮಾಧಿ ಸ್ಮಾರಕವೆಂದು ಪರಿಗಣಿಸಲಾಯಿತು” ಎಂದೂ ಅವರು ವಾದಿಸುತ್ತಾರೆ. ಆದರೂ ದೇವತಾಶಾಸ್ತ್ರಜ್ಞ ಆಸ್ಕರ್ ಕುಲ್ಮನ್ ಎಂಬವರಿಗನುಸಾರ, “ವ್ಯಾಟಿಕನ್ ಭೂಶೋಧನೆಗಳು ಪೇತ್ರನ ಸಮಾಧಿಯನ್ನು ಗುರುತಿಸುವುದೇ ಇಲ್ಲ.”
ಎಲುಬುಗಳ ವಿಷಯವೇನು? ಆ ಎಲುಬುಗಳು ನಿಜವಾಗಿಯೂ ಎಲ್ಲಿಂದ ಬಂದವೆಂಬುದು ಇನ್ನೂ ಒಂದು ಒಗಟಾಗಿದೆ ಎಂದು ಹೇಳಬೇಕಾಗುತ್ತದೆ. ಈಗ ಯಾವುದನ್ನು ವ್ಯಾಟಿಕನ್ ಗುಡ್ಡವೆಂದು ಹೇಳಲಾಗುತ್ತದೆಯೋ ಅಲ್ಲಿ ಒಂದನೆಯ ಶತಮಾನದಿಂದ ಒಂದು ಸಮಾಧಿ ಸ್ಥಳವಿತ್ತು, ಆ ಪ್ರದೇಶದಲ್ಲಿ ಅನೇಕಾನೇಕ ಮಾನವ ಅವಶೇಷಗಳನ್ನು ಹೂಳಿಡಲಾಗಿತ್ತು, ಮತ್ತು ಅನೇಕ ಅವಶೇಷಗಳು ಆಗಲೇ ಕಂಡುಹಿಡಿಯಲ್ಪಟ್ಟಿವೆ. ಯಾವುದನ್ನು ಕೆಲವರು ಸ್ಮಾರಕ ವಸ್ತುಗಳು ಕಂಡುಹಿಡಿಯಲ್ಪಟ್ಟ ಸ್ಥಳವನ್ನು ಅಪೊಸ್ತಲನ ಸಮಾಧಿಯೆಂದು ಗುರುತಿಸುತ್ತದೆಂದು ಹೇಳುತ್ತಾರೋ ಆ ಅಪೂರ್ಣ ಸ್ಮಾರಕ ಲಿಪಿ (ಪ್ರಾಯಶಃ ನಾಲ್ಕನೆಯ ಶತಮಾನದ್ದು) ಹೆಚ್ಚೆಂದರೆ, “ಪೇತ್ರನ ಎಲುಬುಗಳ ಕಲ್ಪನೆಯ ಸಮಕ್ಷಮ” ವನ್ನು ಸೂಚಿಸಬಹುದು. ಅಷೇಕ್ಟೆ, ಅನೇಕ ಶಾಸನವಿದ್ಯಾ ಪಂಡಿತರು, ಆ ಸ್ಮಾರಕಲೇಖನವು, “ಪೇತ್ರನು ಇಲ್ಲಿಲ್ಲ” ಎಂಬ ಅರ್ಥವನ್ನೂ ಕೊಡಬಹುದೆಂದು ಅಭಿಪ್ರಯಿಸುತ್ತಾರೆ.
ಒಂದು ‘ಅವಿಶ್ವಾಸಾರ್ಹ ಸಂಪ್ರದಾಯ’
“ಆದಿಯ ಮತ್ತು ಹೆಚ್ಚು ವಿಶ್ವಾಸಾರ್ಹ ಮೂಲಗಳು [ಪೇತ್ರನು] ಹುತಾತ್ಮನಾದ ಸ್ಥಳವನ್ನು ತಿಳಿಸುವುದಿಲವ್ಲಾದರೂ ತರುವಾಯದ ಕಡಮೆ ವಿಶ್ವಾಸಾರ್ಹ ಮೂಲಗಳ ಮಧ್ಯೆ ಅದು ವ್ಯಾಟಿಕನ್ ಪ್ರದೇಶದಲ್ಲಾಯಿತು ಎಂಬುದಕ್ಕೆ ಕಾರ್ಯತಃ ಒಪ್ಪಿಗೆಯಿದೆ,” ಎಂದು ಇತಿಹಾಸಕಾರ ಡಿ. ಡಬ್ಲ್ಯೂ. ಒಕಾನರ್ ಹೇಳುತ್ತಾರೆ. ವ್ಯಾಟಿಕನ್ನಲ್ಲಿ ಪೇತ್ರನ ಸಮಾಧಿಗಾಗಿ ಹುಡುಕುವಿಕೆಯು ಹೀಗೆ ಅವಿಶ್ವಾಸಾರ್ಹ ಸಂಪ್ರದಾಯಗಳ ಮೇಲೆ ಆಧಾರಗೊಂಡಿದೆ. “ಸ್ಮಾರಕ ವಸ್ತುಗಳು ಮಹಾ ಪ್ರಮುಖತೆಯವುಗಳಾಗಿ ಪರಿಣಮಿಸಿದಾಗ, ಕ್ರೈಸ್ತರು ಯಥಾರ್ಥವಾಗಿ ಪೇತ್ರನ [ಸ್ಮಾರಕವು] ವಾಸ್ತವವಾಗಿ ಅವನ ಸಮಾಧಿಯ ನಿಕರ ಸ್ಥಳವನ್ನು ಸೂಚಿಸಿತು ಎಂದು ನಂಬಿದರು,” ಎನ್ನುತ್ತಾರೆ ಒಕಾನರ್.
ಈ ಸಂಪ್ರದಾಯಗಳು ಅಶಾಸ್ತ್ರೀಯವಾದ ಸ್ಮಾರಕ ವಸ್ತುಗಳ ಕಡೆಗೆ ಪೂಜ್ಯಭಾವದೊಂದಿಗೆ ಅಕ್ಕಪಕ್ಕದಲ್ಲಿ ಬೆಳೆದವು. ಮೂರನೆಯ ಮತ್ತು ನಾಲ್ಕನೆಯ ಶತಮಾನದಿಂದ ಹಿಡಿದು, ವಿವಿಧ ಕ್ರೈಸ್ತಮಠೀಯ ಕೇಂದ್ರಗಳು “ಆತ್ಮಿಕ” ಶ್ರೇಷ್ಠತೆಯನ್ನು ಸಾಧಿಸಲು ಮತ್ತು ತಮ್ಮ ಸ್ವಂತ ಅಧಿಕಾರವನ್ನು ಪ್ರವರ್ತಿಸಲು ನಡೆಸಿದ ಹೋರಾಟದಲ್ಲಿ—ಆರ್ಥಿಕ ಲಾಭವಿಲ್ಲದೆ ಅಲ್ಲ—ಸತ್ಯವಾದ ಮತ್ತು ಸುಳ್ಳಾದ ಸ್ಮಾರಕ ವಸ್ತುಗಳನ್ನು ಉಪಯೋಗಿಸಿದರು. ಹೀಗೆ ಪೇತ್ರನ ಅವಶಿಷ್ಟಗಳಿಗೆ ಅದ್ಭುತಗಳನ್ನು ಮಾಡುವ ಶಕ್ತಿಯಿದೆಯೆಂದು ಮನವರಿಕೆಯಾದ ಯಾತ್ರಿಕರು ಅವನ ಕಲ್ಪನಾತ್ಮಕ ಸಮಾಧಿಗೆ ಪಯಣಿಸಿದರು. ಆರನೆಯ ಶತಮಾನದಂತ್ಯದಲ್ಲಿ, ವಿಶ್ವಾಸಿಗಳು ಜಾಗ್ರತೆಯಿಂದ ತೂಕ ಮಾಡಿದ ವಸ್ತ್ರದ ತುಂಡುಗಳನ್ನು “ಸಮಾಧಿ”ಗೆ ಬಿಸಾಡುತ್ತಿದ್ದರು. ಒಂದು ಸಮಕಾಲೀನ ವೃತ್ತಾಂತವು ತಿಳಿಸುವುದು: “ವಿಜ್ಞಾಪಿಸುವವನ ನಂಬಿಕೆಯು ಸ್ಥಿರವಾಗಿರುವಲ್ಲಿ, ಆ ವಸ್ತ್ರವನ್ನು ಸಮಾಧಿಯಿಂದ ಹಿಂದೆ ಪಡೆದುಕೊಂಡಾಗ ಅದು ದೈವಿಕ ಗುಣದಿಂದ ತುಂಬಿದ್ದು ಹಿಂದೆ ಇದ್ದುದಕ್ಕಿಂತ ಹೆಚ್ಚು ಭಾರವಾಗಿರುವುದು.” ಇದು ಆ ಸಮಯದಲ್ಲಿದ್ದ ಮೂಢ ಶ್ರದ್ಧೆಯನ್ನು ಸೂಚಿಸುತ್ತದೆ.
ಶತಮಾನಗಳಲ್ಲಿ, ಇದರಂತಹ ಕಲ್ಪನಾಕಥೆಗಳು ಮತ್ತು ಯಾವ ಆಧಾರವೂ ಇಲ್ಲದ ಸಂಪ್ರದಾಯಗಳು ವ್ಯಾಟಿಕನ್ ಬೆಸಿಲಿಕದ ಪ್ರಶಸ್ತಿಯ ಬೆಳವಣಿಗೆಗೆ ಗಣನೀಯವಾಗಿ ಸಹಾಯ ಮಾಡಿದೆ. ಆದರೂ ಭಿನ್ನಾಭಿಪ್ರಾಯಗಳು ಎದ್ದುಬಂದವು. ಹನ್ನೆರಡನೆಯ ಮತ್ತು 13 ನೆಯ ಶತಮಾನಗಳಲ್ಲಿ ವಾಲ್ಡೆನ್ಸೀಸ್ ಪಂಗಡದವರು ಈ ವೈಪರೀತ್ಯಗಳನ್ನು ಖಂಡಿಸಿ, ಬೈಬಲಿನ ಮೂಲಕ ಪೇತ್ರನು ರೋಮಿನಲ್ಲಿ ಇರಲೇ ಇಲ್ಲವೆಂದು ವಿವರಿಸಿದರು. ಶತಮಾನಗಳಾನಂತರ, ಪ್ರಾಟೆಸ್ಟಂಟ್ ಸುಧಾರಣೆಯ ಪ್ರತಿಪಾದಕರು ಇದೇ ರೀತಿ ವಾದಿಸಿದರು. ಹದಿನೆಂಟನೆಯ ಶತಮಾನದಲ್ಲಿ ಪ್ರಸಿದ್ಧ ತತ್ವಜ್ಞಾನಿಗಳು ಈ ಸಂಪ್ರದಾಯಕ್ಕೆ ಐತಿಹಾಸಿಕವಾಗಿಯೂ ಶಾಸ್ತ್ರೀಯವಾಗಿಯೂ ಆಧಾರವಿಲ್ಲವೆಂದೆಣಿಸಿದರು. ಈ ದಿನಗಳ ವರೆಗೂ, ಕ್ಯಾತೊಲಿಕ್ ಮತ್ತು ಇತರ ಸಮರ್ಥ ತಜ್ಞರು ಇದೇ ದೃಷ್ಟಿಕೋನದಲ್ಲಿ ಭಾಗಿಗಳಾಗಿದ್ದಾರೆ.
ಪೇತ್ರನು ರೋಮಿನಲ್ಲಿ ಸತ್ತನೊ?
ಗಲಿಲಾಯದ ವಿನೀತ ಬೆಸ್ತನಾದ ಪೇತ್ರನು ಒಂದನೆಯ ಶತಮಾನದ ಕ್ರೈಸ್ತ ಸಭೆಯ ಮೇಲೆ ಅಗ್ರಗಣ್ಯತೆಯ ಯಾವ ವಿಚಾರವನ್ನೂ ನಿಶ್ಚಯವಾಗಿ ಇಟ್ಟುಕೊಂಡಿರಲಿಲ್ಲ. ಬದಲಿಗೆ, ತಾನು “ಜೊತೆಹಿರಿಯ” ಎಂದು ತನ್ನನ್ನು ನಿರೂಪಿಸಿಕೊಂಡನು. (1 ಪೇತ್ರ 5:1-6, ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಷನ್) ಪೇತ್ರನ ನಮ್ರ ವ್ಯಕ್ತಿತ್ವಕ್ಕೆ ಅವನ ಸಮಾಧಿಯನ್ನು ಅವರಿಸಿರುವ ವೈಭವವು ವ್ಯತಿರಿಕ್ತವಾಗಿದೆಯೆಂಬುದನ್ನು ವ್ಯಾಟಿಕನ್ ಬೆಸಿಲಿಕದ ಯಾವ ಭೇಟಿಗಾರನೂ ನೋಡಬಲ್ಲನು.
ಇತರ ಕ್ರೈಸ್ತ ಮತಗುಂಪುಗಳ ಮೇಲೆ ತನ್ನ ಶ್ರೇಷ್ಠತೆಯನ್ನು ಸಾಧಿಸಲಿಕ್ಕಾಗಿ ಕ್ಯಾತೊಲಿಕ್ ಚರ್ಚು, ಪೇತ್ರನು ಕೆಲವು ಕಾಲ ರೋಮಿನಲ್ಲಿ ವಾಸಿಸಿದನು ಎಂದು ಹೇಳುವ ‘ಇತ್ತೀಚಿನ ಮತ್ತು ಕಡಮೆ ವಿಶ್ವಾಸಾರ್ಹವಾದ’ ಸಂಪ್ರದಾಯವನ್ನು ಅಂಗೀಕರಿಸಲು ಪ್ರಯತ್ನಿಸಿದೆ. ಆದರೆ ವಿಚಿತ್ರವಾಗಿ, ಇತರ ಹಳೆಯ ಸಂಪ್ರದಾಯಗಳು ಅವನ ಸಮಾಧಿ ಸ್ಥಳವು ವ್ಯಾಟಿಕನ್ನ ಬದಲಿಗೆ ರೋಮಿನ ಬೇರೆ ಭಾಗದಲ್ಲಿದೆಯೆಂದು ಹೇಳುತ್ತವೆ. ಆದರೂ ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ, ಪೇತ್ರನ ವಿಷಯವಾಗಿ ಸಾಕ್ಷಾತ್ತಾಗಿ ಬಂದಿರುವ ನಿಜತ್ವಗಳಿಗೆ ಏಕೆ ಅಂಟಿಕೊಳ್ಳಬಾರದು? ಯೆರೂಸಲೇಮಿನಲ್ಲಿದ್ದ ಕ್ರೈಸ್ತ ಸಭೆಯ ಆಡಳಿತ ಮಂಡಲಿಯ ನಿರ್ದೇಶನಗಳಿಗೆ ವಿಧೇಯನಾಗುತ್ತಾ ಪೇತ್ರನು ತನ್ನ ಕೆಲಸವನ್ನು, ಬಾಬೆಲ್ ಸೇರಿದ್ದ ಹಳೇ ಲೋಕದ ಪೂರ್ವ ಭಾಗದಲ್ಲಿ ಮಾಡಿದನೆಂದು ದೇವರ ವಾಕ್ಯ ಸೃಷ್ಟಗೊಳಿಸುತ್ತದೆ.—ಗಲಾತ್ಯ 2:1-9:; 1 ಪೇತ್ರ 5:13; ಹೋಲಿಸಿ ಅ. ಕೃತ್ಯಗಳು 8:14.
ರೋಮಿನ ಕ್ರೈಸ್ತರಿಗೆ ಸುಮಾರು ಸಾ.ಶ. 56 ರಲ್ಲಿ ಬರೆಯುವಾಗ, ಅಪೊಸ್ತಲ ಪೌಲನು ಪೇತ್ರನ ಹೆಸರನ್ನು ಸಹ ಹೇಳದೆ, ಆ ಸಭೆಯ ಸುಮಾರು 30 ಮಂದಿ ಸದಸ್ಯರನ್ನು ವಂದಿಸಿದನು. (ರೋಮಾಪುರ 1:1-7; 16:3-23) ಬಳಿಕ ಸಾ.ಶ. 60 ರಿಂದ 65ರ ತನಕ ಪೌಲನು ರೋಮಿನಿಂದ ಆರು ಪತ್ರಗಳನ್ನು ಬರೆದರೂ ಪೇತ್ರನನ್ನು ಹೆಸರಿಸಲಿಲ್ಲ. ಇದು ಪೇತ್ರನು ಅಲ್ಲಿರಲಿಲ್ಲವೆಂಬುದಕ್ಕೆ ಬಲವಾದ ಸಂದರ್ಭ ಸಾಕ್ಷ್ಯವಾಗಿದೆ.a (ಹೋಲಿಸಿ 2 ತಿಮೊಥೆಯ 1:15-17; 4:11.) ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ಪೌಲನ ರೋಮಿನ ಚಟುವಟಿಕೆಯನ್ನು ವರ್ಣಿಸಲಾಗಿದೆ, ಆದರೆ ಪುನಃ ಪೇತ್ರನ ಪ್ರಸ್ತಾಪವೇ ಇಲ್ಲ. (ಅ. ಕೃತ್ಯಗಳು 28:16, 30, 31) ಆದಕಾರಣ, ಬೈಬಲ್ ಸಾಕ್ಷ್ಯಗಳ ಪೂರ್ವ ಭಾವನೆಯಿಲ್ಲದ ವಸ್ತುನಿಷ್ಠ ಪರೀಕ್ಷೆಯು ಪೇತ್ರನು ರೋಮಿನಲ್ಲಿ ಸಾರಲಿಲ್ಲ ಎಂಬ ಒಂದೇ ತೀರ್ಮಾನಕ್ಕೆ ನಡೆಸಬಲ್ಲದು.b
ಪೋಪರ “ಅಗ್ರಗಣ್ಯತೆಯು” ಅವಿಶ್ವಾಸಾರ್ಹ ಸಂಪ್ರದಾಯಗಳ ಮೇಲೆ ಮತ್ತು ಶಾಸ್ತ್ರವಚನಗಳ ತಿರುಚಿದ ಅನ್ವಯದ ಮೇಲೆ ಆಧಾರಗೊಂಡಿದೆ. ಕ್ರೈಸ್ತತ್ವದ ಅಸ್ತಿವಾರವು ಯೇಸುವೇ ಹೊರತು ಪೇತ್ರನಲ್ಲ. ‘ಸಭೆಯ ಶಿರಸ್ಸು ಕ್ರಿಸ್ತನು,’ ಎನ್ನುತ್ತಾನೆ ಪೌಲನು. (ಎಫೆಸ 2:20-22; 5:23) ನಂಬಿಕೆಯಿರುವ ಎಲ್ಲರನ್ನು ಆಶೀರ್ವದಿಸಿ ರಕ್ಷಿಸಲಿಕ್ಕಾಗಿ ಯೆಹೋವನು ಕಳುಹಿಸಿದ್ದು ಯೇಸು ಕ್ರಿಸ್ತನನ್ನೇ.—ಯೋಹಾನ 3:16; ಅ. ಕೃತ್ಯಗಳು 4:12; ರೋಮಾಪುರ 15:29; 1 ಪೇತ್ರ 2:4-8 ಸಹ ನೋಡಿ.
ಹಾಗಾದರೆ ಪೇತ್ರನ ಸಮಾಧಿಯೆಂದು ಯಥಾರ್ಥವಾಗಿ ನಂಬಿ, ‘ಅವನ ಉತ್ತರಾಧಿಕಾರಿಯನ್ನು ಭೇಟಿಯಾಗಲು’ ಹೋಗುವ ಎಲ್ಲರು, ‘ಅವಿಶ್ವಾಸಾರ್ಹವಾದ ಸಂಪ್ರದಾಯಗಳನ್ನು’ ಅಂಗೀಕರಿಸಬೇಕೊ, ಭರವಸಾರ್ಹವಾದ ದೇವರ ವಾಕ್ಯವನ್ನು ನಂಬಬೇಕೊ ಎಂಬ ಸಮಸ್ಯೆಯನ್ನು ಎದುರಿಸುತ್ತಾರೆ. ತಮ್ಮ ಆರಾಧನೆಯು ದೇವರಿಗೆ ಸ್ವೀಕಾರಾರ್ಹವಾಗಿರಬೇಕೆಂದು ಕ್ರೈಸ್ತರು ಬಯಸುವುದರಿಂದ, ಅವರು ‘ತಮ್ಮ ನಂಬಿಕೆಯನ್ನು ಪೂರ್ಣಮಾಡುವವನಾದ ಯೇಸುವನ್ನು,’ ಮತ್ತು ಅನುಸರಿಸಲಿಕ್ಕಾಗಿ ಅವನು ನಮಗಾಗಿ ಬಿಟ್ಟುಹೋದ ಪರಿಪೂರ್ಣ ಮಾದರಿಯನ್ನು ‘ಶ್ರದ್ಧಾಪೂರ್ವಕವಾಗಿ ನೋಡುತ್ತಾರೆ.’—ಇಬ್ರಿಯ 12:2, NW; 1 ಪೇತ್ರ 2:21.
[ಅಧ್ಯಯನ ಪ್ರಶ್ನೆಗಳು]
a ಸುಮಾರು ಸಾ.ಶ. 60-61 ರಲ್ಲಿ, ಪೌಲನು ಎಫೆಸದವರಿಗೆ, ಫಿಲಿಪ್ಪಿಯವರಿಗೆ, ಕೊಲೊಸ್ಸೆಯವರಿಗೆ, ಫಿಲೆಮೋನನಿಗೆ ಮತ್ತು ಇಬ್ರಿಯರಿಗೆ ತನ್ನ ಪತ್ರಗಳನ್ನು ಬರೆದನು. ಸುಮಾರು ಸಾ.ಶ. 65 ರಲ್ಲಿ ಅವನು ತಿಮೊಥೆಯನಿಗೆ ತನ್ನ ಎರಡನೆಯ ಪತ್ರವನ್ನು ಬರೆದನು.
b “ಪೇತ್ರನು ರೋಮಿನಲ್ಲಿ ಎಂದಾದರೂ ಇದ್ದನೊ?” ಎಂಬ ಪ್ರಶ್ನೆಯನ್ನು ನವಂಬರ 1, 1972ರ ದ ವಾಚ್ಟವರ್ನ 669-71 ಪುಟಗಳಲ್ಲಿ ಪರಿಗಣಿಸಲಾಗಿದೆ.
[ಪುಟ 29 ರಲ್ಲಿರುವ ಚೌಕ]
“ಭೂಶೋಧನೆಯು ಈಡಿಕ್ಯುಲದ ಅಡಿಯಲ್ಲಿ ಯಾವುದೇ ಸಮಾಧಿಯ ನಿಶ್ಚಿತ ಸುಳಿವನ್ನು ತೋರಿಸಿರುವುದೂ ಇಲ್ಲ, ಸಂತ ಪೇತ್ರನ ದೇಹವನ್ನು ವಧಕಾರರಿಂದ ಕ್ರೈಸ್ತ ಸಮುದಾಯವು ಪುನಃ ಪಡೆದುಕೊಂಡಿತು ಎಂಬುದಕ್ಕೆ ಯಾವ ನಿಶ್ಚಯವೂ ಇಲ್ಲ. ಸಾಧಾರಣ ಸ್ಥಿತಿಯಲ್ಲಿ ಒಬ್ಬ ಅನ್ಯ (ಪೆರೆಗ್ರೀನುಸ್)ನ ಮತ್ತು ಕಾನೂನಿನ ದೃಷ್ಟಿಯಲ್ಲಿ ಒಬ್ಬ ಸಾಮಾನ್ಯ ಪಾತಕಿಯ ಶರೀರವನ್ನು ಟೈಬರ್ [ನದಿ]ಗೆ ಎಸೆಯಲಾಗಬಹುದಾಗಿತ್ತು. . . . ಇದಲ್ಲದೆ, ಈ ಆದಿ ಸಮಯದಲ್ಲಿ, ಶರೀರಸಂಬಂಧವಾದ ಸ್ಮಾರಕ ವಸ್ತುಗಳ ಸಂರಕ್ಷಣೆಯ ವಿಷಯದಲ್ಲಿ ಆ ಬಳಿಕ, ಆಸನ್ನವಾಗಿರುವ ಲೋಕಾಂತ್ಯದಲ್ಲಿ ನಂಬಿಕೆಯು ಮೊಬ್ಬಾದಾಗ ಮತ್ತು ಹುತಾತ್ಮರ ಕುಪಂಥವು ತೋರಿಬಂದಾಗ ಇದ್ದಷ್ಟು ಆಸಕ್ತಿಯು ಇರಲಿಲ್ಲ. ಹಾಗಾದರೆ ಹೂಳಿಡಲಿಕ್ಕಾಗಿ ಸಂತ ಪೇತ್ರನ ದೇಹವನ್ನು ಮರಳಿ ಪಡೆಯದೆ ಇರುವ ಸಾಧ್ಯತೆಯು, ನಿಜವಾದ ಸಾಧ್ಯತೆಯಾಗಿದೆ.”—ದ ಶ್ರೈನ್ ಆಫ್ ಸೆಂಟ್ ಪೀಟರ್ ಆ್ಯಂಡ್ ದ ವ್ಯಾಟಿಕನ್ ಎಕ್ಸ್ಕವೇಶನ್ಸ್, ಜಾಸ್ಲಿನ್ ಟಯಿನ್ಬಿ ಮತ್ತು ಜಾನ್ ವಾರ್ಡ್ ಪರ್ಕಿನ್ಸ್ ಅವರಿಂದ.