ನಮ್ಮ ಜೀವಿತಗಳಲ್ಲಿ ಯೆಹೋವನ ಆರಾಧನೆಯ ಯುಕ್ತವಾದ ಸ್ಥಾನ
“ದಿನಂಪ್ರತಿ ನಿನ್ನನ್ನು ಕೀರ್ತಿಸುವೆನು; ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವೆನು.”—ಕೀರ್ತನೆ 145:2.
1. ಆರಾಧನೆಯ ಸಂಬಂಧದಲ್ಲಿ, ಯೆಹೋವನು ಏನನ್ನು ಅಪೇಕ್ಷಿಸುತ್ತಾನೆ?
“ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.” (ವಿಮೋಚನಕಾಂಡ 20:5, NW) ಆ ಘೋಷಣೆಯನ್ನು ಮೋಶೆಯು ಯೆಹೋವನಿಂದ ಕೇಳಿದನು, ಮತ್ತು ತದನಂತರ ಇಸ್ರಾಯೇಲ್ ಜನಾಂಗವನ್ನು ಸಂಬೋಧಿಸುವಾಗ ಅದನ್ನು ಅವನು ಪುನರುಚ್ಚರಿಸಿದನು. (ಧರ್ಮೋಪದೇಶಕಾಂಡ 5:9) ತನ್ನನ್ನು ಸಂಪೂರ್ಣ ಭಕ್ತಿಯಿಂದ ತನ್ನ ಸೇವಕರು ಆರಾಧಿಸಬೇಕೆಂದು ಯೆಹೋವ ದೇವರು ಅಪೇಕ್ಷಿಸಿದನೆಂಬ ವಿಚಾರದ ಬಗ್ಗೆ ಮೋಶೆಯ ಮನಸ್ಸಿನಲ್ಲಿ ಯಾವ ಸಂದೇಹವೂ ಇರಲಿಲ್ಲ.
2, 3. (ಎ) ಸೀನಾಯಿ ಬೆಟ್ಟದ ಬಳಿಯಲ್ಲಿ ಸಂಭವಿಸಿದ ಸಂಗತಿಯು ಅಸಾಧಾರಣವಾಗಿತ್ತೆಂದು ತಿಳಿಯಲು, ಯಾವ ವಿಷಯವು ಇಸ್ರಾಯೇಲ್ಯರನ್ನು ಪ್ರಭಾವಿಸಿತು? (ಬಿ) ಇಸ್ರಾಯೇಲ್ಯರ ಮೂಲಕ ಮಾಡಲಾದ ಮತ್ತು ಇಂದು ದೇವರ ಸೇವಕರ ಮೂಲಕ ಮಾಡಲಾಗುವ ಆರಾಧನೆಯ ಕುರಿತು ಯಾವ ಪ್ರಶ್ನೆಗಳನ್ನು ನಾವು ಪರೀಕ್ಷಿಸುವೆವು?
2 ಸೀನಾಯಿ ಬೆಟ್ಟದ ಹತ್ತಿರ ಬೀಡು ಬಿಟ್ಟಿದ್ದ ಇಸ್ರಾಯೇಲ್ಯರು ಮತ್ತು ಅವರೊಂದಿಗೆ ಐಗುಪ್ತ ದೇಶವನ್ನು ಬಿಟ್ಟು ಬಂದಿದ್ದ “ಬಹು ಮಂದಿ ಅನ್ಯರು,” ಅಸಾಧಾರಣವಾದ ಯಾವುದೋ ಸಂಗತಿಯನ್ನು ನೋಡಿದರು. (ವಿಮೋಚನಕಾಂಡ 12:38) ಅದು ಹತ್ತು ಆಪತ್ಕಾರಕ ಘಟನೆಗಳಿಂದ ಯಾ ಬಾಧೆಗಳಿಂದ ಈಗ ಅಪಮಾನಗೊಳಿಸಲ್ಪಟ್ಟಿದ್ದ ಐಗುಪ್ತದ ದೇವರುಗಳ ಆರಾಧನೆಗೆ ಸದೃಶವಾಗಿರಲಿಲ್ಲ. ಯೆಹೋವನು ತನ್ನ ಉಪಸ್ಥಿತಿಯನ್ನು ಮೋಶೆಗೆ ವ್ಯಕ್ತಪಡಿಸಿದಾಗ, ಭಯ ಹುಟ್ಟಿಸುವ ಘಟನೆ ಸಂಭವಿಸಿತು: ಗುಡುಗು, ಮಿಂಚು, ಮತ್ತು ಇಡೀ ಶಿಬಿರವನ್ನು ನಡುಗಿಸಿದ ತುತೂರಿಯ ಕಿವುಡುಗೊಳಿಸುವ ಶಬ್ದ. ಮುಂದೆ ಇಡೀ ಬೆಟ್ಟವು ಕಂಪಿಸಿದಾಗ ಬೆಂಕಿಯೂ ಹೊಗೆಯೂ ಬಂದವು. (ವಿಮೋಚನಕಾಂಡ 19:16-20; ಇಬ್ರಿಯ 12:18-21) ಸಂಭವಿಸುತ್ತಿದ್ದ ವಿಷಯವು ಅಸಾಧಾರಣವಾಗಿದೆ ಎಂಬುದಕ್ಕೆ ಹೆಚ್ಚಿನ ಪ್ರಮಾಣವು ಯಾವನೇ ಇಸ್ರಾಯೇಲ್ಯನಿಗೆ ಬೇಕಾಗಿದ್ದಲ್ಲಿ, ಅದು ಬೇಗನೆ ಸಂಭವಿಸಲಿಕ್ಕಿತ್ತು. ಅಷ್ಟರಲ್ಲೆ, ದೇವರ ಆಜ್ಞೆಗಳ ಎರಡನೆಯ ಪ್ರತಿಯನ್ನು ಪಡೆದ ಬಳಿಕ ಮೋಶೆ ಬೆಟ್ಟದಿಂದ ಕೆಳಗಿಳಿದನು. ದೈವಪ್ರೇರಿತ ದಾಖಲೆಗನುಸಾರ, “[ಮೋಶೆಯ] ಮುಖವು ಪ್ರಕಾಶವಾಗಿರುವದನ್ನು [ಇಸ್ರಾಯೇಲ್ಯರೆಲ್ಲರೂ] ನೋಡಿ ಅವನ ಹತ್ತಿರಕ್ಕೆ ಬರುವದಕ್ಕೆ ಭಯಪಟ್ಟರು.” ಸತ್ಯವಾಗಿಯೂ, ಮರೆಯಲಾಗದ, ಒಂದು ಅತಿಮಾನುಷ ಅನುಭವ!—ವಿಮೋಚನಕಾಂಡ 34:30.
3 ದೇವರ ಪ್ರತಿನಿಧಿರೂಪವಾದ ಆ ರಾಷ್ಟ್ರಕ್ಕೆ, ಯೆಹೋವನ ಆರಾಧನೆಯು ವಹಿಸಿದ ಸ್ಥಾನದ ಕುರಿತು ಯಾವ ಪ್ರಶ್ನೆಯೂ ಇರಲಿಲ್ಲ. ಆತನು ಅವರ ವಿಮೋಚಕನಾಗಿದ್ದನು. ಅವರು ಆತನಿಗೆ ಋಣಿಗಳಾಗಿದ್ದರು. ಆತನು ಅವರ ನ್ಯಾಯ ನಿಬಂಧನೆಗಳನ್ನು ರಚಿಸುವವನೂ ಆಗಿದ್ದನು. ಆದರೆ ಅವರು ಯೆಹೋವನ ಆರಾಧನೆಯನ್ನು ಪ್ರಥಮ ಸ್ಥಾನದಲ್ಲಿಟ್ಟರೊ? ಮತ್ತು ದೇವರ ಆಧುನಿಕ ದಿನದ ಸೇವಕರ ಕುರಿತೇನು? ಅವರ ಜೀವಿತಗಳಲ್ಲಿ ಯೆಹೋವನ ಆರಾಧನೆಯು ಯಾವ ಸ್ಥಾನವನ್ನು ವಹಿಸುತ್ತದೆ?—ರೋಮಾಪುರ 15:4.
ಇಸ್ರಾಯೇಲ್ನ ಯೆಹೋವನ ಆರಾಧನೆ
4. ತಮ್ಮ ಅರಣ್ಯ ಪ್ರಯಾಣದ ಸಮಯದಲ್ಲಿ ಇಸ್ರಾಯೇಲಿನ ಬಿಡಾರದ ವಿನ್ಯಾಸ ಏನಾಗಿತ್ತು, ಮತ್ತು ಬಿಡಾರದ ಮಧ್ಯದಲ್ಲಿ ಏನಿತ್ತು?
4 ಅರಣ್ಯದಲ್ಲಿ ಬೀಡು ಬಿಟ್ಟಿದ್ದ ಇಸ್ರಾಯೇಲ್ನ ಮೇಲುನೋಟವನ್ನು ನೀವು ಪಡೆದಿದ್ದರೆ, ನೀವು ಏನನ್ನು ನೋಡುತ್ತಿದ್ದಿರಿ? ವಿಶಾಲವಾದ, ಆದರೆ ಬಹುಶಃ 30 ಲಕ್ಷ ಯಾ ಅದಕ್ಕಿಂತಲೂ ಹೆಚ್ಚು ಜನರಿಗೆ ಸ್ಥಳ ಒದಗಿಸಿದ ಗುಡಾರಗಳ ಕ್ರಮಬದ್ಧ ರಚನೆ. ಅವು ಮೂರು ಕುಲಗಳನುಸಾರ ವಿಭಾಗಿಸಲ್ಪಟ್ಟು, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ಕಡೆಗೆ ಗುಂಪುಗೂಡಿಸಲ್ಪಟ್ಟಿದ್ದವು. ಇನ್ನೂ ಹತ್ತಿರಕ್ಕೆ ಇಣಕಿ ನೋಡುವುದಾದರೆ, ಶಿಬಿರದ ಮಧ್ಯ ಭಾಗಕ್ಕೆ ಹತ್ತಿರವಾಗಿ ಇನ್ನೊಂದು ಗುಂಪನ್ನು ಸಹ ನೀವು ಗಮನಿಸಿದಿರ್ದಬಹುದು. ಗುಡಾರಗಳ ಈ ನಾಲ್ಕು ಚಿಕ್ಕ ಗುಂಪುಗಳು ಲೇವಿ ಕುಲದ ಕುಟುಂಬಗಳ ವಾಸಸ್ಥಾನವಾಗಿದ್ದವು. ಶಿಬಿರದ ಮಧ್ಯದಲ್ಲಿ, ಬಟ್ಟೆಯ ಗೋಡೆಯಿಂದ ಬೇರ್ಪಡಿಸಲ್ಪಟ್ಟ ಒಂದು ಪ್ರದೇಶದಲ್ಲಿ, ಅಪೂರ್ವವಾದೊಂದು ರಚನೆಯಿತ್ತು. ಅದು “ದೇವದರ್ಶನದ ಗುಡಾರ” ಯಾ ಸಾಕ್ಷಿಗುಡಾರವಾಗಿತ್ತು. ಅದನ್ನು “ಜಾಣ” ಇಸ್ರಾಯೇಲ್ಯರು ಯೆಹೋವನ ಯೋಜನೆಗನುಸಾರ ಕಟ್ಟಿದ್ದರು.—ಅರಣ್ಯಕಾಂಡ 1:52, 53; 2:3, 10, 17, 18, 25; ವಿಮೋಚನಕಾಂಡ 35:10.
5. ಇಸ್ರಾಯೇಲಿನಲ್ಲಿ ಸಾಕ್ಷಿಗುಡಾರವು ಯಾವ ಉದ್ದೇಶವನ್ನು ಪೂರೈಸಿತು?
5 ತಮ್ಮ ಅರಣ್ಯ ಪ್ರಯಾಣದ ಸಮಯದಲ್ಲಿ, ಸುಮಾರು 40 ಶಿಬಿರದಾಣಗಳ ಪ್ರತಿಯೊಂದು ಶಿಬಿರದಾಣದಲ್ಲಿ ಇಸ್ರಾಯೇಲ್ ಸಾಕ್ಷಿಗುಡಾರವನ್ನು ನಿರ್ಮಿಸಿತು, ಮತ್ತು ಅದು ಅವರ ಶಿಬಿರದ ಕೇಂದ್ರಬಿಂದುವಾಯಿತು. (ಅರಣ್ಯಕಾಂಡ, ಅಧ್ಯಾಯ 33) ಯೋಗ್ಯವಾಗಿಯೇ, ಬೈಬಲು ಯೆಹೋವನನ್ನು ತನ್ನ ಜನರ ಮಧ್ಯದಲ್ಲಿ, ಅವರ ಶಿಬಿರದ ಮಧ್ಯಭಾಗದಲ್ಲಿ ವಾಸಿಸುವುದಾಗಿ ವರ್ಣಿಸುತ್ತದೆ. ಆತನ ಮಹಿಮೆ ಸಾಕ್ಷಿಗುಡಾರವನ್ನು ತುಂಬಿತು. (ವಿಮೋಚನಕಾಂಡ 29:43-46; 40:34; ಅರಣ್ಯಕಾಂಡ 5:3; 11:20; 16:3) ಔಅರ್ ಲಿವಿಂಗ್ ಬೈಬಲ್ ಎಂಬ ಪುಸ್ತಕವು ಹೇಳುವುದು: “ಸುಲಭಸಾಗಣೆಯ ಈ ಮಂದಿರವು ಅತ್ಯಂತ ಮಹತ್ವದ್ದಾಗಿತ್ತು, ಯಾಕೆಂದರೆ ಅದು ಕುಲಗಳಿಗೆ ಧಾರ್ಮಿಕ ಒಟ್ಟುಗೂಡುವಿಕೆಯ ಕೇಂದ್ರವನ್ನು ಸೃಷ್ಟಿಸಿತು. ಹೀಗೆ ಮರಳುಗಾಡಿನಲ್ಲಿ ಅನೇಕ ವರ್ಷಗಳ ಅಲೆದಾಡುವಿಕೆಯ ಸಮಯದಲ್ಲಿ ಅವರನ್ನು ಅದು ಐಕ್ಯವಾಗಿಟ್ಟಿತು ಮತ್ತು ಐಕಮತ್ಯದ ಕಾರ್ಯವನ್ನು ಸಾಧ್ಯಗೊಳಿಸಿತು.” ಅದಕ್ಕಿಂತಲೂ ಹೆಚ್ಚಾಗಿ, ಸಾಕ್ಷಿಗುಡಾರವು ತಮ್ಮ ಸೃಷ್ಟಿಕರ್ತನ ಆರಾಧನೆಯು ಇಸ್ರಾಯೇಲ್ಯರ ಜೀವಿತದಲ್ಲಿ ಮುಖ್ಯವಾಗಿತ್ತೆಂಬ ಸತತವಾದ ಮರುಜ್ಞಾಪನದೋಪಾದಿ ಕಾರ್ಯಮಾಡಿತು.
6, 7. ಆರಾಧನೆಗಾಗಿ ಯಾವ ರಚನೆಯು ಸಾಕ್ಷಿಗುಡಾರವನ್ನು ಸ್ಥಾನಪಲ್ಲಟಗೊಳಿಸಿತು, ಮತ್ತು ಇದು ಇಸ್ರಾಯೇಲ್ ಜನಾಂಗಕ್ಕೆ ಹೇಗೆ ಸೇವೆಯನ್ನು ಸಲ್ಲಿಸಿತು?
6 ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ತಲಪಿದ ಅನಂತರವೂ, ಸಾಕ್ಷಿಗುಡಾರವು ಇಸ್ರಾಯೇಲ್ನ ಆರಾಧನೆಯ ಕೇಂದ್ರಬಿಂದುವಾಗಿ ಮುಂದುವರಿಯಿತು. (ಯೆಹೋಶುವ 18:1; 1 ಸಮುವೇಲ 1:3) ಸಕಾಲದಲ್ಲಿ, ರಾಜ ದಾವೀದನು ಶಾಶ್ವತವಾದೊಂದು ಕಟ್ಟಡವನ್ನು ಕಟ್ಟುವ ಯೋಜನೆ ಮಾಡಿದನು. ಇದು ತದನಂತರ ಅವನ ಮಗನಾದ ಸೊಲೊಮೋನನ ಮೂಲಕ ಕಟ್ಟಲ್ಪಟ್ಟ ದೇವಾಲಯವಾಗಿ ಪರಿಣಮಿಸಿತು. (2 ಸಮುವೇಲ 7:1-10) ಅದರ ಪ್ರತಿಷ್ಠಾಪನೆಯ ಸಮಯದಲ್ಲಿ, ಯೆಹೋವನ ಆ ಕಟ್ಟಡದ ಸ್ವೀಕರಣೆಯನ್ನು ಸೂಚಿಸಲು ಮೇಘವೊಂದು ಕೆಳಗಿಳಿಯಿತು. “ನಾನು ನಿನಗೋಸ್ಕರ ಒಂದು ಮಂದಿರವನ್ನು ಕಟ್ಟಿಸಿದ್ದೇನೆ,” ಎಂದು ಸೊಲೊಮೋನನು ಪ್ರಾರ್ಥಿಸಿದನು, “ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಿರಲಿ.” (1 ಅರಸು 8:12, 13; 2 ಪೂರ್ವಕಾಲವೃತ್ತಾಂತ 6:2) ಹೊಸದಾಗಿ ಕಟ್ಟಲ್ಪಟ್ಟ ದೇವಾಲಯವು ಈಗ ರಾಷ್ಟ್ರದ ಭಕ್ತಿಗೆ ಕೇಂದ್ರಸ್ಥಾನವಾಯಿತು.
7 ವರ್ಷಕ್ಕೆ ಮೂರು ಬಾರಿ ಎಲ್ಲ ಇಸ್ರಾಯೇಲ್ಯ ಗಂಡಸರು, ದೇವರ ಆಶೀರ್ವಾದವನ್ನು ಮಾನ್ಯಮಾಡುತ್ತಾ ದೇವಾಲಯದಲ್ಲಿ ನಡೆಯುವ ಆನಂದದಾಯಕ ಆಚರಣೆಗಳನ್ನು ಹಾಜರಾಗಲು ಯೆರೂಸಲೇಮಿಗೆ ಹೋಗುತ್ತಿದ್ದರು. ಸೂಕ್ತವಾಗಿಯೇ, ದೇವರ ಆರಾಧನೆಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ, ಈ ಪುನರ್ಮಿಲನಗಳು “ಯೆಹೋವನಿಂದ ನೇಮಕವಾದ ಹಬ್ಬದ ಕಾಲಗಳು” ಎಂಬುದಾಗಿ ಹೆಸರಿಸಲ್ಪಟ್ಟವು. (ಯಾಜಕಕಾಂಡ 23:2, 4) ಧರ್ಮನಿಷ್ಠ ಹೆಂಗಸರು ಕುಟುಂಬದ ಇತರ ಸದಸ್ಯರೊಂದಿಗೆ ಹಾಜರಾದರು.—1 ಸಮುವೇಲ 1:3-7; ಲೂಕ 2:41-44.
8. ಯೆಹೋವನ ಆರಾಧನೆಯ ಮಹತ್ವದ ಕುರಿತು ಕೀರ್ತನೆ 84:1-12 ಹೇಗೆ ಸಾಕ್ಷಿಹೇಳುತ್ತದೆ?
8 ತಮ್ಮ ಜೀವಿತಗಳಲ್ಲಿ ಆರಾಧನೆಯು ಎಷ್ಟು ಮಹತ್ವವುಳ್ಳದ್ದಾಗಿ ಪರಿಗಣಿಸಲ್ಪಡುತ್ತಿತ್ತೆಂದು ದೈವಪ್ರೇರಿತ ಕೀರ್ತನೆಗಾರರು ವಾಗ್ವೈಖರಿಯಿಂದ ಅಂಗೀಕರಿಸಿದರು. “ಸೇನಾಧೀಶ್ವರನಾದ ಯೆಹೋವನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ,” ಎಂದು ಕೋರಹನ ಪುತ್ರರು ಹಾಡಿದರು. ಅವರು ಖಂಡಿತವಾಗಿಯೂ ಬರಿಯ ಒಂದು ಕಟ್ಟಡವನ್ನು ಸ್ತುತಿಸತ್ತಿರಲಿಲ್ಲ. ಬದಲಿಗೆ, ಹೀಗೆ ಘೋಷಿಸುತ್ತಾ, ತಮ್ಮ ಧ್ವನಿಗಳನ್ನು ಅವರು ಯೆಹೋವ ದೇವರ ಸ್ತುತಿಯಲ್ಲಿ ಎತ್ತರಿಸಿದರು: “ಚೈತನ್ಯಸ್ವರೂಪನಾದ ದೇವರಿಗೆ ನನ್ನ ತನುಮನಗಳಿಂದ ಹರ್ಷಧ್ವನಿಮಾಡುತ್ತೇನೆ.” ಲೇವಿಯರ ಸೇವೆಯು ಅವರಿಗೆ ಮಹಾ ಸಂತೋಷವನ್ನು ತಂದಿತು. “ನಿನ್ನ ಮಂದಿರದಲ್ಲಿ ವಾಸಿಸುವವರು ಧನ್ಯರು,” ಎಂದು ಅವರು ಘೋಷಿಸಿದರು. “ಅವರು ನಿತ್ಯವೂ ನಿನ್ನನ್ನು ಕೀರ್ತಿಸುತ್ತಾ ಇರುತ್ತಾರೆ.” ವಾಸ್ತವವಾಗಿ ಎಲ್ಲ ಇಸ್ರಾಯೇಲ್ಯರು ಹೀಗೆ ಹಾಡಬಹುದಿತ್ತು: “ನಿನ್ನಲ್ಲಿ ಬಲವನ್ನು ಹೊಂದುವ ಮನುಷ್ಯರು ಧನ್ಯರು. . . . ಅವರು ಹೆಚ್ಚುಹೆಚ್ಚಾಗಿ ಬಲಹೊಂದಿ ಚೀಯೋನ್ ಗಿರಿಯಲ್ಲಿ ದೇವರ ಸನ್ನಿಧಿಯನ್ನು” ಸೇರುವರು. ಯೆರೂಸಲೇಮಿಗೆ ತಾನು ಕೈಗೊಳ್ಳುವ ಪ್ರಯಾಣವು ದೀರ್ಘವಾಗಿ ಮತ್ತು ಆಯಾಸಕರವಾಗಿ ಇದ್ದಿರಬಹುದಾದರೂ, ಇಸ್ರಾಯೇಲ್ಯನೊಬ್ಬನ ಬಲವು ಅವನು ರಾಜಧಾನಿಯನ್ನು ತಲಪಿದಂತೆ ನವೀಕರಿಸಲ್ಪಟ್ಟಿತು. ಯೆಹೋವನನ್ನು ಆರಾಧಿಸುವ ತನ್ನ ಸುಯೋಗವನ್ನು ಅವನು ಕೊಂಡಾಡಿದಂತೆ, ಅವನ ಹೃದಯವು ಆನಂದದಿಂದ ತುಂಬಿತು: “ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯ್ದುಕೊಂಡಿರುವದೇ ಲೇಸು. . . . ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.” ಇಂತಹ ಅಭಿವ್ಯಕ್ತಿಗಳು ಯೆಹೋವನ ಆರಾಧನೆಗೆ ಆ ಇಸ್ರಾಯೇಲ್ಯರು ನೀಡಿದ ಆದ್ಯತೆಯನ್ನು ಪ್ರಕಟಿಸುತ್ತವೆ.—ಕೀರ್ತನೆ 84:1-12.
9. ಯೆಹೋವನ ಆರಾಧನೆಯನ್ನು ಪ್ರಧಾನವಾಗಿಡಲು ಇಸ್ರಾಯೇಲ್ ಜನಾಂಗವು ತಪ್ಪಿದಾಗ ಅದಕ್ಕೆ ಏನು ಸಂಭವಿಸಿತು?
9 ದುಃಖಕರವಾಗಿ, ಸತ್ಯ ಆರಾಧನೆಯನ್ನು ಪ್ರಧಾನವಾಗಿಡುವುದರಲ್ಲಿ ಇಸ್ರಾಯೇಲ್ ತಪ್ಪಿಹೋಯಿತು. ಯೆಹೋವನಿಗಾಗಿರುವ ತಮ್ಮ ಹುರುಪನ್ನು ಸುಳ್ಳು ದೇವರುಗಳಿಗಾಗಿದ್ದ ಭಕ್ತಿಯು ಕುಗ್ಗಿಸುವಂತೆ ಅವರು ಅನುಮತಿಸಿದರು. ಪರಿಣಾಮವಾಗಿ, ಬಾಬೆಲಿನಲ್ಲಿ ಪರದೇಶ ವಾಸಕ್ಕೆ ಅವರನ್ನು ಕೊಂಡೊಯ್ಯುವಂತೆ ಅನುಮತಿಸುತ್ತಾ, ಯೆಹೋವನು ಅವರನ್ನು ಅವರ ವೈರಿಗಳಿಗೆ ಒಪ್ಪಿಸಿಬಿಟ್ಟನು. 70 ವರ್ಷಗಳ ಅನಂತರ ಅವರು ತಮ್ಮ ಸ್ವದೇಶಕ್ಕೆ ಪುನಃಸ್ಥಾಪಿಸಲ್ಪಟ್ಟಾಗ, ನಂಬಿಗಸ್ತ ಪ್ರವಾದಿಗಳಾದ ಹಗ್ಗಾಯ, ಜೆಕರ್ಯ, ಮತ್ತು ಮಲಾಕಿಯರಿಂದ ಹುರಿದುಂಬಿಸುವ ಪ್ರಬೋಧನೆಗಳನ್ನು ಯೆಹೋವನು ಇಸ್ರಾಯೇಲ್ ರಾಷ್ಟ್ರಕ್ಕೆ ಒದಗಿಸಿದನು. ದೇವಾಲಯವನ್ನು ಕಟ್ಟುವಂತೆ ಮತ್ತು ಅಲ್ಲಿ ಸತ್ಯ ಆರಾಧನೆಯನ್ನು ಪುನಃಸ್ಥಾಪಿಸುವಂತೆ ಯಾಜಕನಾದ ಎಜ್ರನು ಮತ್ತು ಪ್ರಾಂತಾಧಿಪತಿಯಾದ ನೆಹೆಮೀಯನು ದೇವರ ಜನರನ್ನು ಪ್ರೇರಿಸಿದರು. ಆದರೆ ಶತಮಾನಗಳು ದಾಟಿದಂತೆ, ರಾಷ್ಟ್ರದಲ್ಲಿ ಸತ್ಯಾರಾಧನೆಯು ಪುನಃ ಕಡಮೆ ಆದ್ಯತೆಯ ವಿಷಯವಾಯಿತು.
ಸತ್ಯಾರಾಧನೆಗಾಗಿ ಪ್ರಥಮ ಶತಮಾನದ ಹುರುಪು
10, 11. ಯೇಸು ಭೂಮಿಯಲ್ಲಿದ್ದ ಸಮಯದಲ್ಲಿ, ನಂಬಿಗಸ್ತರ ಜೀವಿತಗಳಲ್ಲಿ ಯೆಹೋವನ ಆರಾಧನೆಗೆ ಯಾವ ಸ್ಥಾನವಿತ್ತು?
10 ಯೆಹೋವನ ನೇಮಿತ ಸಮಯದಲ್ಲಿ, ಮೆಸ್ಸೀಯನು ಕಾಣಿಸಿಕೊಂಡನು. ರಕ್ಷಣೆಗಾಗಿ ನಂಬಿಗಸ್ತ ವ್ಯಕ್ತಿಗಳು ಯೆಹೋವನಲ್ಲಿ ನಿರೀಕ್ಷೆಯನ್ನಿಟ್ಟಿದ್ದರು. (ಲೂಕ 2:25; 3:15) ಲೂಕನ ಸುವಾರ್ತಾ ದಾಖಲೆಯು ಸ್ಪಷ್ಟವಾಗಿಗಿ 84 ವರ್ಷ ಪ್ರಾಯದ ಅನ್ನಳನ್ನು, “ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿ ಹಗಲೂ ದೇವರ ಸೇವೆಯನ್ನು ಮಾಡುತ್ತಿದ್ದ” ಒಬ್ಬ ವಿಧವೆಯೋಪಾದಿ ವರ್ಣಿಸುತ್ತದೆ.—ಲೂಕ 2:37.
11 “ನನ್ನ ಆಹಾರವು,” ಯೇಸು ಹೇಳಿದ್ದು, “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ” ಆಗಿದೆ. (ಯೋಹಾನ 4:34) ದೇವಾಲಯದಲ್ಲಿದ್ದ ಚಿನಿವಾರರನ್ನು ಯೇಸು ಎದುರಿಸಿದಾಗ, ಅವನು ಹೇಗೆ ಪ್ರತಿಕ್ರಿಯಿಸಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಅವನು ಅವರ ಮೇಜುಗಳನ್ನು ಅಷ್ಟೇ ಅಲ್ಲದೆ ಪಾರಿವಾಳಗಳನ್ನು ಮಾರುವವರ ಕಾಲ್ಮಣೆಗಳನ್ನೂ ಕೆಡವಿ ಹಾಕಿದನು. ಮಾರ್ಕನು ತಿಳಿಸುವುದು: “[ಯೇಸು] ಒಬ್ಬನನ್ನಾದರೂ ಸಾಮಾನು ಹೊತ್ತುಕೊಂಡು ದೇವಾಲಯದೊಳಗೆ ಹಾದುಹೋಗಗೊಡಿಸಲಿಲ್ಲ. ಮತ್ತು ಆತನು ಉಪದೇಶ ಮಾಡಿ—ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು ಎಂದು ಬರೆದಿದೆಯಲ್ಲಾ? ಆದರೆ ನೀವು ಅದನ್ನು ಕಳ್ಳರ ಗವಿ ಮಾಡಿದ್ದೀರಿ ಎಂದು ಹೇಳಿದನು.” (ಮಾರ್ಕ 11:15-17) ಹೌದು, ಪಟ್ಟಣದ ಇನ್ನೊಂದು ಭಾಗಕ್ಕೆ ವಸ್ತುಗಳನ್ನು ಎತ್ತಿಕೊಂಡು ಹೋಗುವಾಗ ದೇವಾಲಯದ ಅಂಗಳದ ಮುಖಾಂತರ ಒಂದು ಸೀಳುದಾರಿಯನ್ನು ಬಳಸುವಂತೆ ಸಹ ಯೇಸು ಯಾರನ್ನೂ ಬಿಡಲಿಲ್ಲ. ಈ ಹಿಂದೆ ಕೊಡಲ್ಪಟ್ಟ ಅವನ ಬುದ್ಧಿವಾದವನ್ನು ಯೇಸುವಿನ ಕ್ರಿಯೆಗಳು ಬಲಪಡಿಸಿದವು: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.” (ಮತ್ತಾಯ 6:33) ಯೆಹೋವನಿಗೆ ಸಂಪೂರ್ಣ ಭಕ್ತಿಯನ್ನು ಸಲ್ಲಿಸುವುದರಲ್ಲಿ ಯೇಸು ನಮಗೊಂದು ಅದ್ಭುತಕರವಾದ ಮಾದರಿಯನ್ನಿಟ್ಟಿದ್ದಾನೆ. ಅವನು ಏನನ್ನು ಬೋಧಿಸಿದನೊ ಅದನ್ನು ಸತ್ಯವಾಗಿಯೂ ಆಚರಿಸಿದನು.—1 ಪೇತ್ರ 2:21.
12. ಯೆಹೋವನ ಆರಾಧನೆಗೆ ತಾವು ಕೊಟ್ಟ ಆದ್ಯತೆಯನ್ನು ಯೇಸುವಿನ ಶಿಷ್ಯರು ಹೇಗೆ ಪ್ರದರ್ಶಿಸಿದರು?
12 ಅದುಮಲ್ಪಟ್ಟ ಆದರೆ ನಂಬಿಗಸ್ತರಾಗಿದ್ದ ಯೆಹೂದ್ಯರನ್ನು ಸುಳ್ಳು ಧಾರ್ಮಿಕ ಆಚರಣೆಗಳ ಹೊರೆಗಳಿಂದ ಬಿಡಿಸಲಿಕ್ಕಿದ್ದ ತನ್ನ ನಿಯೋಗವನ್ನು ಅವನು ಪೂರೈಸಿದ ವಿಧದಲ್ಲೂ, ಯೇಸು ತನ್ನ ಶಿಷ್ಯರಿಗೆ ಹಿಂಬಾಲಿಸಲು ಒಂದು ನಮೂನೆಯನ್ನು ಸ್ಥಾಪಿಸಿದನು. (ಲೂಕ 4:18) ಶಿಷ್ಯರನ್ನಾಗಿ ಮಾಡಿ ಅವರಿಗೆ ದೀಕ್ಷಾಸ್ನಾನಮಾಡಿಸುವುದರ ಯೇಸುವಿನ ಆಜೆಗ್ಞೆ ವಿಧೇಯತೆ ತೋರಿಸುತ್ತಾ, ಪುನರುತ್ಥಾನಗೊಂಡ ತಮ್ಮ ಪ್ರಭುವಿನ ಸಂಬಂಧದಲ್ಲಿ ಯೆಹೋವನ ಚಿತ್ತವನ್ನು ಆದಿ ಕ್ರೈಸ್ತರು ಧೈರ್ಯದಿಂದ ಘೋಷಿಸಿದರು. ತನ್ನ ಆರಾಧನೆಗೆ ಅವರು ಕೊಟ್ಟ ಆದ್ಯತೆಯಿಂದ ಯೆಹೋವನು ಬಹಳವಾಗಿ ಹರ್ಷಿಸಿದನು. ಹೀಗೆ, ದೇವರ ಸ್ವಂತ ದೂತನು ಅಪೊಸ್ತಲರಾದ ಪೇತ್ರ ಮತ್ತು ಯೋಹಾನರನ್ನು ಸೆರೆಯಿಂದ ಅದ್ಭುತಕರವಾಗಿ ಬಿಡಿಸಿ, ಅವರಿಗೆ ಉಪದೇಶ ನೀಡಿದ್ದು: “ನೀವು ಹೋಗಿ ದೇವಾಲಯದಲ್ಲಿ ನಿಂತುಕೊಂಡು ಈ ಸಜ್ಜೀವವಿಷಯವಾದ ಮಾತುಗಳನ್ನೆಲ್ಲಾ ಜನರಿಗೆ ಹೇಳಿರಿ.” ಪುನಃಚೇತನಗೊಳಿಸಲ್ಪಟ್ಟ ಅವರು, ವಿಧೇಯರಾದರು. ಪ್ರತಿ ದಿನ, ಯೆರೂಸಲೇಮಿನ ದೇವಾಲಯದಲ್ಲಿ ಮತ್ತು ಮನೆಯಿಂದ ಮನೆಗೆ “ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.”—ಅ. ಕೃತ್ಯಗಳು 1:8; 4:29, 30; 5:20, 42; ಮತ್ತಾಯ 28:19, 20.
13, 14. (ಎ) ಆದಿ ಕ್ರೈಸ್ತ ಸಮಯಗಳಿಂದ, ದೇವರ ಸೇವಕರಿಗೆ ಏನನ್ನು ಮಾಡಲು ಸೈತಾನನು ಪ್ರಯತ್ನಿಸಿದ್ದಾನೆ? (ಬಿ) ದೇವರ ನಂಬಿಗಸ್ತ ಸೇವಕರು ಏನು ಮಾಡುವುದನ್ನು ಮುಂದುವರಿಸಿದ್ದಾರೆ?
13 ತಮ್ಮ ಸಾರುವಿಕೆಗೆ ವಿರೋಧವು ಹೆಚ್ಚಾದಂತೆ, ಸಮಯೋಚಿತ ಸಲಹೆಯನ್ನು ಬರೆಯುವಂತೆ ದೇವರು ತನ್ನ ನಂಬಿಗಸ್ತ ಸೇವಕರನ್ನು ನಿರ್ದೇಶಿಸಿದನು. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ,” ಎಂದು ಸಾ.ಶ. 60 ನೆಯ ವರ್ಷದ ತರುವಾಯ ಪೇತ್ರನು ಬರೆದನು. “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ.” ಆದಿ ಕ್ರೈಸ್ತರು ಖಂಡಿತವಾಗಿಯೂ ಆ ಮಾತುಗಳಲ್ಲಿ ಪುನರಾಶ್ವಾಸನೆಯನ್ನು ಕಂಡುಕೊಂಡರು. ತಾವು ಸ್ವಲ್ಪಕಾಲ ಬಾಧೆಯನ್ನು ಅನುಭವಿಸಿದ ಬಳಿಕ, ದೇವರು ತಮ್ಮ ತರಬೇತಿಯನ್ನು ಮುಗಿಸುವನೆಂದು ಅವರಿಗೆ ಗೊತ್ತಿತ್ತು. (1 ಪೇತ್ರ 5:7-10) ಯೆಹೂದಿ ವಿಷಯಗಳ ವ್ಯವಸ್ಥೆಯ ಆ ಕೊನೆಯ ದಿನಗಳಲ್ಲಿ, ನಿಜ ಕ್ರೈಸ್ತರು ಯೆಹೋವನ ಪ್ರೀತಿಪರ ಆರಾಧನೆಯನ್ನು ಹೊಸ ಉನ್ನತಿಗೇರಿಸಿದರು.—ಕೊಲೊಸ್ಸೆ 1:23.
14 ಅಪೊಸ್ತಲ ಪೌಲನು ಮುಂತಿಳಿಸಿದ್ದಂತೆಯೇ, ಧರ್ಮಭ್ರಷ್ಟತೆ, ಸತ್ಯಾರಾಧನೆಯಿಂದ ದೂರ ಸರಿಯುವಿಕೆಯು ಸಂಭವಿಸಿತು. (ಅ. ಕೃತ್ಯಗಳು 20:29, 30; 2 ಥೆಸಲೊನೀಕ 2:3) ಮೊದಲನೆಯ ಶತಮಾನದ ಕೊನೆಯ ದಶಕಗಳಿಂದ ಬಂದ ಸಾಕ್ಷ್ಯವು, ಧರ್ಮಭ್ರಷ್ಟತೆಯ ಕುರಿತಾದ ಪ್ರಮಾಣವನ್ನು ಶೇಖರಿಸಿತು. (1 ಯೋಹಾನ 2:18, 19) ಗೋಧಿಯಂತಹ ಕ್ರೈಸ್ತರಿಂದ ಈ “ಹಣಜಿಗಳನ್ನು” ಗುರುತಿಸುವುದನ್ನು ಕಷ್ಟಕರವಾಗಿ ಮಾಡುತ್ತಾ, ಸೈತಾನನು ಯಶಸ್ವಿಯಾಗಿ ನಕಲಿ ಕ್ರೈಸ್ತರನ್ನು ಯಥಾರ್ಥ ಕ್ರೈಸ್ತರೊಳಗೆ ಒತ್ತಾಗಿ ಹರಡಿದನು. ಆದರೂ, ಗತಿಸಿಹೋದ ಶತಮಾನಗಳಲ್ಲಿ, ತಮ್ಮ ಜೀವಿತಗಳನ್ನು ಸಹ ಗಂಡಾಂತರಕ್ಕೆ ಈಡುಮಾಡುತ್ತಾ, ಕೆಲವು ವ್ಯಕ್ತಿಗಳು ದೇವರ ಆರಾಧನೆಯನ್ನು ಪ್ರಥಮವಾಗಿಟ್ಟರು. ಆದರೆ “ಅನ್ಯಜನಾಂಗಗಳ ನೇಮಿತ ಸಮಯಗಳ” ಮುಕ್ತಾಯದ ದಶಕಗಳ ತನಕ, ಸತ್ಯಾರಾಧನೆಯನ್ನು ಉನ್ನತಕ್ಕೇರಿಸಲು ದೇವರು ತನ್ನ ಸೇವಕರನ್ನು ಪುನಃ ಒಟ್ಟುಗೂಡಿಸಲಿಲ್ಲ.—ಮತ್ತಾಯ 13:24-30, 36-43; ಲೂಕ 21:24, NW.
ಇಂದು ಉನ್ನತಕ್ಕೇರಿಸಲ್ಪಟ್ಟಿರುವ ಯೆಹೋವನ ಆರಾಧನೆ
15. 1919 ರಿಂದ, ಯೆಶಾಯ 2:2-4 ಮತ್ತು ಮೀಕ 4:1-4ರ ಪ್ರವಾದನೆಗಳು ಹೇಗೆ ನೆರವೇರಿವೆ?
15 1919 ರಲ್ಲಿ, ಲೋಕವ್ಯಾಪಕ ಸಾಕ್ಷಿನೀಡುವ ಚಳುವಳಿಯನ್ನು ಧೈರ್ಯದಿಂದ ಆರಂಭಿಸುವಂತೆ ಯೆಹೋವನು ಅಭಿಷಿಕ್ತ ಉಳಿಕೆಯವರನ್ನು ಬಲಪಡಿಸಿದನು. ಇದು ಸತ್ಯ ದೇವರ ಆರಾಧನೆಯನ್ನು ಉನ್ನತಕ್ಕೆ ಏರಿಸಿದೆ. 1935 ರಿಂದ ಪ್ರಚಲಿತ ಸಮಯದ ವರೆಗೆ, ಸಾಂಕೇತಿಕ “ಬೇರೆ ಕುರಿ” ಗಳ ಪ್ರವಾಹದೊಂದಿಗೆ, “ಯೆಹೋವನ ಮಂದಿರದ ಬೆಟ್ಟ”ಕ್ಕೆ ಆತ್ಮಿಕವಾಗಿ ಏರುವ ಜನರ ಪ್ರವಾಹವು ಬೆಳೆಯುತ್ತಾ ಬಂದಿದೆ. 1993ರ ಸೇವಾ ವರ್ಷದಲ್ಲಿ, ಆತನ ಉನ್ನತಕ್ಕೇರಿಸಲ್ಪಟ್ಟ ಆರಾಧನೆಯಲ್ಲಿ ಸೇರುವಂತೆ ಇತರರನ್ನು ಆಮಂತ್ರಿಸುವ ಮೂಲಕ, ಯೆಹೋವನ 47,09,889 ಸಾಕ್ಷಿಗಳು ಆತನನ್ನು ಸ್ತುತಿಸಿದರು. ಸುಳ್ಳು ಧರ್ಮ ಲೋಕ ಸಾಮ್ರಾಜ್ಯದ—ಕ್ರೈಸ್ತಪ್ರಪಂಚದಲ್ಲಿ ಮುಖ್ಯವಾಗಿ—ಪಂಥಾಭಿಮಾನದ “ಗುಡ್ಡಬೆಟ್ಟ” ಗಳ ಆತ್ಮಿಕವಾಗಿ ಕೀಳ್ಮಟ್ಟದ ಸ್ಥಿತಿಗೆ ಇದು ಎಂತಹ ವೈದೃಶ್ಯವನ್ನುಂಟುಮಾಡುತ್ತದೆ!—ಯೋಹಾನ 10:16; ಯೆಶಾಯ 2:2-4; ಮೀಕ 4:1-4.
16. ಯೆಶಾಯ 2:10-22 ರಲ್ಲಿ ಮುಂತಿಳಿಸಲಾಗಿರುವ ವಿಷಯದ ನೋಟದಲ್ಲಿ, ದೇವರ ಸೇವಕರಲ್ಲಿ ಎಲ್ಲರೂ ಏನನ್ನು ಮಾಡುವ ಅಗತ್ಯವಿದೆ?
16 ಸುಳ್ಳು ಧರ್ಮದ ಅನುಯಾಯಿಗಳು ತಮ್ಮ ಚರ್ಚುಗಳನ್ನು ಮತ್ತು ಆರಾಧನಾಮಂದಿರಗಳನ್ನು ಮತ್ತು ತಮ್ಮ ಪಾದ್ರಿಗಳನ್ನು ಕೂಡ—ಅವರಿಗೆ ಆಡಂಬರದ ಬಿರುದುಗಳನ್ನು ಮತ್ತು ಪದವಿಗಳನ್ನು ಹೊರಿಸುತ್ತಾ—“ಉನ್ನತ” ರೆಂದು ವೀಕ್ಷಿಸುತ್ತಾರೆ. ಆದರೆ ಯೆಶಾಯನು ಮುಂತಿಳಿಸಿದ್ದನ್ನು ಗಮನಿಸಿರಿ: “ಸಾಮಾನ್ಯರ ಗರ್ವದೃಷ್ಟಿಯು ತಗ್ಗಿಹೋಗುವದು, ಮುಖಂಡರ ಅಹಂಕಾರವು ಕುಗ್ಗಿಹೋಗುವದು, ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.” ಇದು ಯಾವಾಗ ಸಂಭವಿಸುವುದು? ಆಸನ್ನವಾಗಿರುವ ಮಹಾ ಸಂಕಟದ ಸಮಯದಲ್ಲಿ, “ವಿಗ್ರಹಗಳು ಸಂಪೂರ್ಣವಾಗಿ ಹೋಗಿಬಿಡು” ವಾಗ, ಅದು ಸಂಭವಿಸುವುದು. ಭಯ ಹುಟ್ಟಿಸುವ ಆ ಸಮಯದ ಆಸನ್ನತೆಯ ನೋಟದಲ್ಲಿ, ದೇವರ ಸೇವಕರಲ್ಲಿ ಎಲ್ಲರೂ ತಮ್ಮ ಜೀವಿತಗಳಲ್ಲಿ ಯೆಹೋವನ ಆರಾಧನೆಗೆ ಯಾವ ಸ್ಥಾನವಿದೆಯೆಂದು ಗಂಭೀರವಾಗಿ ಪರೀಕ್ಷಿಸುವ ಅಗತ್ಯವಿದೆ.—ಯೆಶಾಯ 2:10-22.
17. ಯೆಹೋವನ ಆರಾಧನೆಗೆ ಅವರು ಕೊಡುವ ಆದ್ಯತೆಯನ್ನು ಯೆಹೋವನ ಸೇವಕರಿಂದು ಹೇಗೆ ಪ್ರದರ್ಶಿಸುತ್ತಾರೆ?
17 ಅಂತಾರಾಷ್ಟ್ರೀಯ ಸಹೋದರತ್ವದೋಪಾದಿ, ರಾಜ್ಯವನ್ನು ಸಾರುವುದರಲ್ಲಿ ತಮ್ಮ ಹುರುಪಿಗಾಗಿ ಯೆಹೋವನ ಸಾಕ್ಷಿಗಳು ಪ್ರಸಿದ್ಧರಾಗಿದ್ದಾರೆ. ಅವರ ಆರಾಧನೆಯು ವಾರಕ್ಕೊಮ್ಮೆ ಸುಮಾರು ಒಂದು ಗಂಟೆಗೆ ಮೀಸಲಾಗಿಟ್ಟ ಬರಿಯ ಕಾಟಾಚಾರದ ಧರ್ಮವಾಗಿರುವುದಿಲ್ಲ. ಇಲ್ಲ, ಅದು ಅವರ ಇಡೀ ಜೀವನ ಮಾರ್ಗವಾಗಿದೆ. (ಕೀರ್ತನೆ 145:2) ನಿಶ್ಚಯವಾಗಿ, ಕಳೆದ ವರ್ಷ 6,20,000 ಕ್ಕಿಂತಲೂ ಹೆಚ್ಚು ಸಾಕ್ಷಿಗಳು, ಕ್ರೈಸ್ತ ಶುಶ್ರೂಷೆಯಲ್ಲಿ ಪೂರ್ಣ ಸಮಯ ಭಾಗವಹಿಸುವಂತೆ ತಮ್ಮ ಕಾರ್ಯಗಳನ್ನು ಏರ್ಪಡಿಸಿದರು. ಉಳಿದವರು ಖಂಡಿತವಾಗಿಯೂ ಯೆಹೋವನ ಆರಾಧನೆಯನ್ನು ಅಲಕ್ಷಿಸುವುದಿಲ್ಲ. ಐಹಿಕ ಕೆಲಸಗಳಲ್ಲಿ ಅವರು ಕಷ್ಟಪಟ್ಟು ದುಡಿಯಬೇಕೆಂದು ತಮ್ಮ ಕುಟುಂಬದ ಹಂಗುಗಳು ಅವರನ್ನು ನಿರ್ಬಂಧಪಡಿಸಿದರೂ, ತಮ್ಮ ಪ್ರತಿನಿತ್ಯದ ಸಂಭಾಷಣೆಗಳಲ್ಲಿ ಮತ್ತು ತಮ್ಮ ಬಹಿರಂಗ ಸಾರುವಿಕೆಯಲ್ಲಿ—ಎರಡರಲ್ಲಿಯೂ—ಅದು ಪ್ರಾಮುಖ್ಯವಾಗಿ ಎದ್ದುಕಾಣುತ್ತದೆ.
18, 19. ಸಾಕ್ಷಿಗಳ ಜೀವನ ಕಥೆಗಳನ್ನು ಓದುವುದರಿಂದ ನೀವು ಪಡೆದಿರಬಹುದಾದ ಉತ್ತೇಜನದ ಉದಾಹರಣೆಗಳನ್ನು ತಿಳಿಸಿರಿ.
18 ಕಾವಲಿನಬುರುಜು ಪತ್ರಿಕೆಯಲ್ಲಿ ಪ್ರಕಟಿಸಲಾದ ಸಾಕ್ಷಿಗಳ ಜೀವನ ಕಥೆಗಳು, ವಿಭಿನ್ನ ಸಹೋದರ ಸಹೋದರಿಯರು ತಮ್ಮ ಜೀವಿತಗಳಲ್ಲಿ ಯೆಹೋವನ ಆರಾಧನೆಯನ್ನು ಪ್ರಥಮವಾಗಿಟ್ಟ ವಿಧಗಳ ಒಳನೋಟವನ್ನು ಒದಗಿಸುತ್ತವೆ. ಆರು ವರ್ಷಗಳ ಪ್ರಾಯದಲ್ಲಿ ಯೆಹೋವನಿಗೆ ತನ್ನ ಜೀವಿತವನ್ನು ಸಮರ್ಪಿಸಿದ ಒಬ್ಬಾಕೆ ಎಳೆಯ ಸಹೋದರಿಯು, ಮಿಷನೆರಿ ಸೇವೆಯನ್ನು ತನ್ನ ಗುರಿಯನ್ನಾಗಿಟ್ಟಳು. ಯುವ ಸಹೋದರ ಸಹೋದರಿಯರಾದ ನೀವು, ನಿಮ್ಮ ಜೀವಿತಗಳಲ್ಲಿ ಯೆಹೋವನ ಆರಾಧನೆಯನ್ನು ಪ್ರಧಾನವಾಗಿಡುವಂತೆ ನಿಮಗೆ ಸಹಾಯಮಾಡುವ ಯಾವ ಗುರಿಯನ್ನು ನೀವು ಆರಿಸಬಲ್ಲಿರಿ?—ಜೂನ್ 1, 1992ರ ಕಾವಲಿನಬುರುಜು, ಪುಟಗಳು 26-30 ರಲ್ಲಿ ಕಾಣಿಸಿಕೊಳ್ಳುವ, “ಆರು ವರ್ಷ ಪ್ರಾಯದಲ್ಲಿ ಇಟ್ಟ ಒಂದು ಗುರಿಯನ್ನು ಬೆನ್ನಟ್ಟುವುದು” ಎಂಬ ಲೇಖನವನ್ನು ನೋಡಿರಿ.
19 ವಿಧವೆಯಾಗಿರುವ ವೃದ್ಧ ಸಹೋದರಿಯೊಬ್ಬರು, ಯೆಹೋವನ ಆರಾಧನೆಯನ್ನು ಅದರ ಸರಿಯಾದ ಸ್ಥಾನದಲ್ಲಿಡುವುದರ ಇನ್ನೊಂದು ಉತ್ತಮ ಮಾದರಿಯನ್ನು ಒದಗಿಸುತ್ತಾರೆ. ಸತ್ಯವನ್ನು ಕಲಿಯುವಂತೆ ಅವರು ಸಹಾಯ ಮಾಡಿದ ವ್ಯಕ್ತಿಗಳಿಂದ ತಾಳಿಕೊಳ್ಳುವ ಮಹಾ ಉತ್ತೇಜನವನ್ನು ಅವರು ಪಡೆದರು. ಅವರು ಆ ವೃದ್ಧೆಯ “ಕುಟುಂಬ” ದವರಾಗಿದ್ದರು. (ಮಾರ್ಕ 3:31-35, NW) ನಿಮ್ಮನ್ನು ನೀವು ತದ್ರೀತಿಯ ಪರಿಸ್ಥಿತಿಗಳಲ್ಲಿ ಕಂಡುಕೊಂಡರೆ, ಸಭೆಯಲ್ಲಿರುವ ಎಳೆಯರ ಬೆಂಬಲ ಮತ್ತು ಸಹಾಯವನ್ನು ನೀವು ಸ್ವೀಕರಿಸುವಿರೊ? (ಅಕ್ಟೋಬರ 1, 1992ರ ಕಾವಲಿನಬುರುಜು, ಪುಟಗಳು 21-3 ರಲ್ಲಿ ಪ್ರಕಟಿಸಲಾಗಿರುವ “ನಾನು ಕೊಯ್ಲಿನ ಕಾಲದಲ್ಲಿ ಪ್ರತಿವರ್ತಿಸಿದೆನು” ಎಂಬ ಲೇಖನದಲ್ಲಿ, ಸಹೋದರಿ ವಿನಿಫ್ರೆಡ್ ರೆಮಿ ತನ್ನನ್ನು ಹೇಗೆ ವ್ಯಕ್ತಪಡಿಸಿದರೆಂದು ದಯವಿಟ್ಟು ಗಮನಿಸಿರಿ.) ಪೂರ್ಣ ಸಮಯದ ಸೇವಕರೇ, ದೇವಪ್ರಭುತ್ವ ನಿರ್ದೇಶನಕ್ಕೆ ಮನಃಪೂರ್ವಕವಾಗಿ ಅಧೀನರಾಗುತ್ತಾ, ನೇಮಿಸಲ್ಪಟ್ಟಲ್ಲಿ ದೈನ್ಯವಾಗಿ ಸೇವೆ ಸಲ್ಲಿಸುವ ಮೂಲಕ ನಿಮ್ಮ ಜೀವಿತಗಳಲ್ಲಿ ಯೆಹೋವನ ಆರಾಧನೆಯು ನಿಜವಾಗಿಯೂ ಪ್ರಥಮವಾಗಿದೆ ಎಂಬುದನ್ನು ತೋರಿಸಿರಿ. (ದಶಂಬರ 1, 1991ರ ದ ವಾಚ್ಟವರ್, ಪುಟಗಳು 24-7 ರಲ್ಲಿ ಕಾಣಿಸಿಕೊಳ್ಳುವ “ದೇವರ ಸಂಸ್ಥೆಗೆ ನಿಕಟವಾಗಿ ಅಂಟಿಕೊಳ್ಳುವುದು” ಎಂಬ ಲೇಖನದಲ್ಲಿ ತಿಳಿಸಲಾದಂತೆ, ಸಹೋದರ ರಾಯ್ ರಯನ್ರ ಉದಾಹರಣೆಯನ್ನು ದಯವಿಟ್ಟು ಗಮನಿಸಿರಿ.) ಯೆಹೋವನ ಆರಾಧನೆಗೆ ನಾವು ಆದ್ಯತೆಯನ್ನು ಕೊಡುವಾಗ, ಆತನು ನಮಗಾಗಿ ಚಿಂತಿಸುವನೆಂಬ ಆಶ್ವಾಸನೆ ನಮಗಿದೆ ಎಂಬುದನ್ನು ನೆನಪಿನಲ್ಲಿಡಿ. ಜೀವನದ ಆವಶ್ಯಕತೆಗಳು ಎಲ್ಲಿಂದ ಬರುವವು ಎಂಬುದರ ಕುರಿತು ನಾವು ಚಿಂತಿಸುವ ಅಗತ್ಯವಿಲ್ಲ. ಸಹೋದರಿಯರಾದ ಆಲಿವ್ ಮತ್ತು ಸೋನಿಯ ಸ್ಪ್ರಿನ್ಗೆಟ್ರ ಅನುಭವಗಳು ಇದನ್ನು ದೃಷ್ಟಾಂತಿಸುತ್ತವೆ.—ಫೆಬ್ರವರಿ 1, 1994ರ ಕಾವಲಿನಬುರುಜು, ಪುಟಗಳು 20-5 ರಲ್ಲಿರುವ “ಮೊದಲಾಗಿ ನಾವು ರಾಜ್ಯವನ್ನು ಹುಡುಕಿದೆವು” ಎಂಬ ಲೇಖನವನ್ನು ನೋಡಿರಿ.
20. ಯಾವ ತಕ್ಕದಾದ ಪ್ರಶ್ನೆಗಳನ್ನು ನಾವು ಈಗ ಕೇಳಿಕೊಳ್ಳಬೇಕು?
20 ಹಾಗಾದರೆ, ವೈಯಕ್ತಿಕವಾಗಿ, ಕೆಲವು ಭೇದಿಸಿ ತಿಳಿಯುವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬಾರದೊ? ನನ್ನ ಜೀವಿತದಲ್ಲಿ ಯೆಹೋವನ ಆರಾಧನೆಯು ಯಾವ ಸ್ಥಾನವನ್ನು ವಹಿಸುತ್ತದೆ? ದೇವರ ಚಿತ್ತವನ್ನು ಮಾಡಲಿಕ್ಕಾಗಿರುವ ನನ್ನ ಸಮರ್ಪಣೆಯನ್ನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ಪೂರೈಸುತ್ತಿದೇನ್ದೊ? ಜೀವಿತದ ಯಾವ ಕ್ಷೇತ್ರಗಳಲ್ಲಿ ನಾನು ಅಭಿವೃದ್ಧಿ ಮಾಡಸಾಧ್ಯವಿದೆ? ಮುಂದಿನ ಲೇಖನದ ವಿಚಾರಪರ ಪರಿಗಣನೆಯು, ಜೀವನದಲ್ಲಿ ನಮ್ಮ ಆರಿಸಲಾದ ಆದ್ಯತೆ—ನಮ್ಮ ಪ್ರೀತಿಯ ತಂದೆ, ಸಾರ್ವಭೌಮ ಕರ್ತನಾದ ಯೆಹೋವನ ಆರಾಧನೆ—ಯೊಂದಿಗೆ ಅನುರೂಪವಾಗಿ ನಮ್ಮ ಸಂಪನ್ಮೂಲಗಳನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಚಿಂತನೆಮಾಡುವಂತೆ ಸಂದರ್ಭವನ್ನು ನೀಡುವುದು.—ಪ್ರಸಂಗಿ 12:13; 2 ಕೊರಿಂಥ 13:5.
ಪುನರ್ವಿಮರ್ಶೆಯಲ್ಲಿ
▫ ಆರಾಧನೆಯ ಸಂಬಂಧದಲ್ಲಿ, ಯೆಹೋವನು ಏನನ್ನು ಅಪೇಕ್ಷಿಸುತ್ತಾನೆ?
▫ ಸಾಕ್ಷಿಗುಡಾರವು ಯಾವುದರ ಮರುಜ್ಞಾಪನವಾಗಿ ಕಾರ್ಯಮಾಡಿತು?
▫ ಸಾ.ಶ. ಪ್ರಥಮ ಶತಮಾನದಲ್ಲಿ, ಸತ್ಯಾರಾಧನೆಗಾಗಿ ಹುರುಪಿನ ಎದ್ದುಕಾಣುವ ಮಾದರಿಗಳು ಯಾರಾಗಿದ್ದರು, ಮತ್ತು ಹೇಗೆ?
▫ 1919 ರಿಂದ, ಯೆಹೋವನ ಆರಾಧನೆಯು ಹೇಗೆ ಉನ್ನತಕ್ಕೇರಿಸಲ್ಪಟ್ಟಿದೆ?