ಕ್ರಿಸ್ಮಸ್—ಅದು ನಿಜವಾಗಿ ಕ್ರೈಸ್ತೋಚಿತವೊ?
ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಕ್ಕನುಸಾರ “ಯೇಸು ಕ್ರಿಸ್ತನ ಹುಟ್ಟುಹಬ್ಬವನ್ನು ಕ್ರೈಸ್ತರು ಆಚರಿಸುವ ದಿನ ಕ್ರಿಸ್ಮಸ್ ಆಗಿದೆ.” ಆದರೂ, ಎನ್ಸೈಕ್ಲೊಪೀಡಿಯ ಇದನ್ನೂ ತಿಳಿಸುತ್ತದೆ: “ಆದಿ ಕ್ರೈಸ್ತರು [ಯೇಸುವಿನ] ಜನನವನ್ನು ಆಚರಿಸಲಿಲ್ಲ ಯಾಕಂದರೆ ಅವರು ಯಾವುದೇ ವ್ಯಕ್ತಿಯ ಜನನದ ಅಚರಣೆಯನ್ನು ಒಂದು ವಿಧರ್ಮಿ ಪದ್ಧತಿಯಾಗಿ ಪರಿಗಣಿಸಿದರು.”
ಗೋಲ್ಬಿ ಮತ್ತು ಪರ್ಡೂರವರ ದ ಮೇಕಿಂಗ್ ಆಫ್ ದ ಮಾರ್ಡನ್ ಕ್ರಿಸ್ಮಸ್, ಸಮ್ಮತಿಸುತ್ತದೆ: “ಆದಿ ಕ್ರೈಸ್ತರು ಕ್ರಿಸ್ತನ ಜನನವನ್ನು ಆಚರಿಸಲಿಲ್ಲ. ಹುಟ್ಟುಹಬ್ಬಗಳು ತಾವೇ ವಿಧರ್ಮಿ ಆಚರಣೆಗಳೊಂದಿಗೆ ಸಂಬಂಧಿಸಲ್ಪಟ್ಟಿದ್ದವು; ಕ್ರಿಸ್ತನ ಜನನದ ನಿಜವಾದ ತಾರೀಖಿನ ಕುರಿತಾಗಿ ಸುವಾರ್ತೆಗಳು ಏನನ್ನೂ ಹೇಳುವದಿಲ್ಲ.”
ಹುಟ್ಟುಹಬ್ಬಗಳಿಗೆ ಒಂದು ಕ್ರೈಸ್ತ ಹಿನ್ನೆಲೆಯಿಲ್ಲದಿರುವದಾದರೆ, ಕ್ರಿಸ್ತನ ಹುಟ್ಟುಹಬ್ಬವು ಇಂಥ ಒಂದು ಪ್ರಖ್ಯಾತ “ಕ್ರೈಸ್ತ” ಹಬ್ಬವಾದದ್ದು ಹೇಗೆ?
“ಕ್ರಿಸ್ಮಸ್”ನ ವಿಧರ್ಮಿ ಮೂಲ
“ಎಲ್ಲರೂ ಸಮಾರಾಧನೆ ಮಾಡುತ್ತಿದ್ದರು ಮತ್ತು ಉಲ್ಲಾಸಪಡುತ್ತಿದ್ದರು, ಕೆಲಸ ಮತ್ತು ವ್ಯಾಪಾರ ಒಂದು ಕಾಲಕ್ಕಾಗಿ ಪೂರ್ಣವಾಗಿ ನಿಲ್ಲಿಸಿಬಿಡಲ್ಪಟ್ಟವು, ಮನೆಗಳು ಲಾರೆಲ್ ಮತ್ತು ನಿತ್ಯಹಸುರು ಎಲೆಗಳಿಂದ ಸಜ್ಜುಗೊಳಿಸಲ್ಪಟ್ಟವು, ಸ್ನೇಹಿತರ ಮಧ್ಯೆ ಭೇಟಿಗಳು ಮತ್ತು ಕೊಡುಗೆಗಳು ವಿನಿಮಯವಾಗುತ್ತಿದ್ದವು, ಮತ್ತು ಆಶ್ರಯಿಗಳು ತಮ್ಮ ಆಶ್ರಯದಾತರಿಗೆ ಉಡುಗೊರೆಗಳನ್ನು ಕೊಟ್ಟರು. ಇಡೀ ಋತು ಉಲ್ಲಾಸ ಮತ್ತು ಪ್ರಸನ್ನತೆಯದ್ದಾಗಿರುತ್ತಿತ್ತು, ಮತ್ತು ಜನರು ಎಲ್ಲಾ ರೀತಿಯ ವಿನೋದಗಳಲ್ಲಿ ಲೋಲುಪರಾಗುತ್ತಿದ್ದರು.”—ಪೇಗನಿಸಮ್ ಇನ್ ಕ್ರಿಸಿಯ್ಟನ್ ಫೆಸಿವ್ಟಲ್ಸ್, ಜೆ. ಎಮ್. ವೀಲರ್ರವರಿಂದ.
ಈ ವರ್ಣನೆಯು ನಿಮಗೆ ತಿಳಿದಿರುವ ಕ್ರಿಸ್ಮಸ್ ಸಂತೋಷಸಮಾರಂಭಗಳಿಗೆ ಹೊಂದಿಕೆಯಾಗುತ್ತದೋ? ಆಶ್ಚರ್ಯಕರವಾಗಿ ಇದು ಕ್ರಿಸ್ಮಸ್ಸಾಗಿರಲಿಲ್ಲ! ಬದಲಾಗಿ, ಅದು ಶನೀಶ್ವರ ಹಬ್ಬ—ಮಕರ ಸಂಕ್ರಾಂತಿಯೊಂದಿಗೆ (ಎದುರಿನ ಪುಟದಲ್ಲಿ ಚಿತ್ರಿಸಲ್ಪಟ್ಟಂತೆ) ಸಂಬಂಧಿಸಿರುವ ಒಂದು ವಾರ ಉದ್ದದ ವಿಧರ್ಮಿ ರೋಮನ್ ಹಬ್ಬ—ದ ಒಂದು ವರ್ಣನೆಯಾಗಿದೆ. ಅಜೇಯ ಸೂರ್ಯನ ಜನ್ಮದಿನವನ್ನು ದಶಂಬರ 25 ರಂದು—ರೋಮಿನ ಮಿಥ್ರ ದೇವತೆಯ ಸಂಬಂಧವಾದ ಧರ್ಮದ ಒಂದು ಪ್ರಮುಖ ಉತ್ಸವ ದಿನ—ಆಚರಿಸಲಾಗುತ್ತಿತ್ತು.
ದ ನ್ಯೂ ಎನ್ಸೈಕ್ಲೊಪೀಡಿಯಾ ಬ್ರಿಟ್ಯಾನಿಕಾ ಗನುಸಾರ, “ಇರಾನಿನ ಬೆಳಕಿನ ದೇವತೆಯಾದ, ಮಿಥ್ರನ ಹುಟ್ಟುಹಬ್ಬದ ದಿನ ಮತ್ತು . . . ಅಜೇಯನಾದ ಸೂರ್ಯನಿಗೆ ಸಮರ್ಪಿಸಲಾದ ದಿನವಾಗಿರುವ ಡಿಸೆಂಬರ್ 25, ಹಾಗೂ ಶನೀಶ್ವರ ಹಬ್ಬದ ಮಾರನೆಯ ದಿನವನ್ನು, ಈ ಹಬ್ಬಗಳ ಪರಿಣಾಮಗಳನ್ನು ಪ್ರತಿರೋಧಿಸಲು ಚರ್ಚಿನಿಂದ ಕ್ರಿಸ್ಮಸ್ ಆಗಿ, ಯೇಸುವಿನ ಜನ್ಮದಿನವಾಗಿ, ಸ್ವೀಕರಿಸಲ್ಪಟ್ಟಿತು.” ಹಾಗಾದರೆ ಆ ವಿಧರ್ಮಿ ಹುಟ್ಟುಹಬ್ಬದ ಆಚರಣೆಯು, ಹೆಸರುಗಳಲ್ಲಿ ಒಂದು ಸರಳ ಬದಲಾವಣೆಯೊಂದಿಗೆ—ಮಿಥ್ರನಿಂದ ಕ್ರಿಸ್ತ—ಮುಂದುವರಿಯಿತು!
ಹಾಗಿದ್ದರೂ, ದೇವರ ಪುತ್ರನಾದ ಯೇಸುವಿನ ಜನನವು, ಒಂದು ವಿಶೇಷವಾದ, ನೆನಪಿಸಲ್ಪಡಲು ಅರ್ಹವಾಗಿರುವ ಒಂದು ವಿಷಯವಾಗಿದೆಯೆಂದು ನಿಮಗೆ ಅನಿಸಬಹುದು. ಇದರ ಕುರಿತಾಗಿ ಬೈಬಲು ಏನು ಹೇಳುತ್ತದೆಂಬದರ ಕಡೆಗೆ ಒಂದು ನೋಟವು ತುಂಬಾ ತಿಳಿವಳಿಕೆಯನ್ನು ನೀಡುವಂಥದ್ದಾಗಿ ಪರಿಣಮಿಸುವದು.
ಒಂದು ಆನಂದದಾಯಕ ಘಟನೆ
ಲೂಕನ ಸುವಾರ್ತೆಯ 2 ನೆಯ ಅಧ್ಯಾಯವು ಹಿನ್ನೆಲೆಯ ಮಾಹಿತಿಯನ್ನು ಒದಗಿಸುತ್ತದೆ. ಸ್ವರ್ಗೀಯ ದೇವದೂತರು, ನಮ್ರ ಕುರುಬರು, ದೇವರ ನಿಷ್ಠಾವಂತ ಸೇವಕರು, ಮತ್ತು ಸ್ವತಃ ಮರಿಯಳು ಈ ಗಮನಾರ್ಹ ಘಟನೆಗೆ ಪ್ರತಿಕ್ರಿಯಿಸಿದ್ದ ವಿಧವನ್ನು ಲೂಕನು ನಮಗೆ ತಿಳಿಸುತ್ತಾನೆ.
ಮೊದಲಾಗಿ, “ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರೀಹಿಂಡನ್ನು ಕಾಯುತ್ತಿದ್ದ” ಕುರುಬರನ್ನು ಪರಿಗಣಿಸಿರಿ. ಅವರು ಇದನ್ನು ಚಳಿಗಾಲದ ಮಧ್ಯದಲ್ಲಿ ಮಾಡುತ್ತಿದ್ದಿರಲಿಲ್ಲ. “ಕರ್ತನ (ಯೆಹೋವನ, NW) ದೂತನು” ತೋರಿಬಂದಾಗ ಮತ್ತು ದೇವರ ಮಹಿಮೆಯು ಅವರ ಸುತ್ತಲೂ ಪ್ರಕಾಶಿಸಿದಾಗ, ಮೊದಲು ಆ ಕುರುಬರು ಹೆದರಿದರು. ದೇವದೂತನು ಹೀಗೆ ವಿವರಿಸಿದಾಗ ಅವರಿಗೆ ಪುನರಾಶ್ವಾಸನೆ ಸಿಕ್ಕಿತು: “ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ.” ದೇವದೂತರ “ಪರಲೋಕಸೈನ್ಯ” ಒಮ್ಮೆಲೆ ತೋರಿಬಂದಾಗ, ಈ ಜನನವು ಇತರ ಎಲ್ಲವುಗಳಿಗಿಂತ ಭಿನ್ನವಾಗಿತ್ತೆಂದು ಕುರುಬರಿಗೆ ತಿಳಿದಿತ್ತು. ಆಸಕ್ತಿಕರವಾಗಿ, ದೇವದೂತರು ಹೊಸತಾಗಿ ಜನಿಸಿದ ಶಿಶುವಿಗೆ ಯಾವ ಕೊಡುಗೆಗಳನ್ನೂ ತರಲಿಲ್ಲ. ಬದಲಿಗೆ ದೇವದೂತರು ಹೀಗನ್ನುತ್ತಾ ಯೆಹೋವನನ್ನು ಸ್ತುತಿಸಿದರು: “ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ.”—ಲೂಕ 2:8-14.
ಯೆಹೋವನು ತಾನೇ ಈ ಸಂತೋಷದ ಘಟನೆಯನ್ನು ಪ್ರಕಟಿಸಿದ್ದರಿಂದ, ಸ್ವಾಭಾವಿಕವಾಗಿ ಈ ಕುರುಬರು ಸ್ವತಃ ಈ ಮಗುವನ್ನು ನೋಡಲು ಬಯಸಿದರು. ಶಿಶುವು ಗೋದಲಿಯಲ್ಲಿ ಮಲಗಿರುವದನ್ನು ಅವರು ಕಂಡಾಗ, ದೇವದೂತರು ತಮಗೆ ಹೇಳಿದ್ದನ್ನು ಅವರು ಹೆತ್ತವರಿಗೆ ಹೇಳಿದರು. ಅನಂತರ ಕುರುಬರು, ಮಗುವನ್ನಲ್ಲ, “ದೇವರನ್ನು ಕೊಂಡಾಡುತ್ತಾ ಸ್ತುತಿಸುತ್ತಾ” ಹೊರಟುಹೋದರು.—ಲೂಕ 2:15-18, 20.
ಯೇಸುವಿನ ತಾಯಿ, ಮರಿಯಳು, ತನ್ನ ಜೇಷ್ಠಪುತ್ರನ ಯಶ್ವಸೀ ಹೆರಿಗೆಯ ವಿಷಯದಲ್ಲಿ ಉಲ್ಲಾಸಿಸಿರಬೇಕೆಂಬದು ನಿಸ್ಸಂದೇಹ. ಆದರೆ ಅವಳು “ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿಟ್ಟುಕೊಂಡು ಯೋಚಿಸುತ್ತಿದ್ದಳು.” ಅನಂತರ ಅವಳ ಗಂಡನಾದ, ಯೋಸೇಫನೊಂದಿಗೆ ಜೊತೆಗೂಡಿ, ಅವಳು ಮೋಶೆಯ ನಿಯಮಕ್ಕೆ ವಿಧೇಯತೆಯಲ್ಲಿ ಯೆರೂಸಲೇಮಿಗೆ ಪ್ರಯಾಣಿಸಿದಳು. ಇದು ಹುಟ್ಟುಹಬ್ಬದ ಒಂದು ಆಚರಣೆಯಾಗಿರಲಿಲ್ಲ. ಬದಲಾಗಿ, “ಚೊಚ್ಚಲು ಗಂಡೆಲ್ಲಾ ಕರ್ತನಿಗೆ (ಯೆಹೋವನಿಗೆ, NW) ಮೀಸಲೆನಿಸಿಕೊಳ್ಳುವದು ಎಂಬದಾಗಿ ಕರ್ತನ (ಯೆಹೋವನ, NW) ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ” ಶಿಶುವನ್ನು ದೇವರಿಗೆ ಅರ್ಪಿಸುವ ಸಮಯ ಅದಾಗಿತ್ತು.—ಲೂಕ 2:19, 22-24.
ಯೆರೂಸಲೇಮಿನ ದೇವಾಲಯದಲ್ಲಿ, ಮರಿಯ ಮತ್ತು ಯೋಸೇಫರು ಸಿಮೆಯೋನನನ್ನು ಸಂಧಿಸಿದರು. ಲೂಕನು ಅವನನ್ನು “ನೀತಿವಂತನೂ ದೇವಭಕ್ತನೂ ಆಗಿದ್ದು . . . ಸಂತೈಸುವವನೂ ಯಾವಾಗ ಬಂದಾನೆಂದು ಹಾರೈಸುತ್ತ” ಇರುವವನಾಗಿ ವರ್ಣಿಸಿದನು. ಪ್ರೇರಣೆಗೆ ಒಳಗಾಗಿ, ಅವನು “ಕರ್ತನು (ಯೆಹೋವನು, NW) ಕಳುಹಿಸಬೇಕಾದ ಕ್ರಿಸ್ತನನ್ನು” ನೋಡುವ ಮುಂಚೆ ಸಾಯುವದಿಲ್ಲವೆಂಬದಾಗಿ ಅವನಿಗೆ ಹೇಳಲಾಗಿತ್ತು. ಮುಂದೆ ನಡೆದಂಥದ್ದು ಸಹ “ಪವಿತ್ರಾತ್ಮನ ಪ್ರೇರಣೆಯಿಂದ” ನಡೆಯಿತು. ಸಿಮೆಯೋನನು ಶಿಶುವನ್ನು ತನ್ನ ಬಾಹುಗಳಲ್ಲಿ ತೆಗೆದುಕೊಂಡನು, ಒಂದು ಇನಾಮನ್ನು ಕೊಡಲಿಕ್ಕಾಗಿ ಅಲ್ಲ; ಇಲ್ಲ, ಬದಲಾಗಿ ಹೀಗನ್ನುತ್ತಾ ದೇವರನ್ನು ಆಶೀರ್ವದಿಸಲು: “ಒಡೆಯನೇ, ನಿನ್ನ ಮಾತು ನೆರವೇರಿತು; ಈಗ ಸಮಾಧಾನದಿಂದ ಹೋಗುವದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು. ನೀನು ನೇಮಿಸಿರುವ ರಕ್ಷಕನನ್ನು ನಾನು ಕಣ್ಣಾರೆ ಕಂಡೆನು.”—ಲೂಕ 2:25-32.
ಅನಂತರ, ವಯಸ್ಸಾದ ಪ್ರವಾದಿನಿ ಅನ್ನಳು ಹತ್ತಿರ ಬಂದಳು. ಅವಳೂ “ದೇವರಿಂದಾದ ಉಪಕಾರವನ್ನು ನೆನಸಿಕೊಂಡದ್ದಲ್ಲದೆ ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ ವಿಷಯವಾಗಿ ಮಾತಾಡುವವಳಾದಳು.”—ಲೂಕ 2:36-38.
ಮರಿಯ, ಸಿಮೆಯೋನ, ಅನ್ನ, ಕುರುಬರು, ಹಾಗೂ ಸ್ವರ್ಗೀಯ ದೇವದೂತರು, ಯೇಸುವಿನ ಜನನದಲ್ಲಿ ಎಲ್ಲರು ಉಲ್ಲಾಸಿಸಿದರು. ಆದಾಗಲೂ, ದಯವಿಟ್ಟು ಗಮನಿಸಿರಿ, ಏನಂದರೆ ಅವರು ಹುಟ್ಟುಹಬ್ಬದ ಸಮ್ಮೋದ ವಿಲಾಸದಲ್ಲಿ ಲೋಲುಪರಾಗಲಿಲ್ಲ, ಅಥವಾ ಕೊಡುಗೆಗಳನ್ನು ಕೊಡುವದರಲ್ಲಿ ತೊಡಗಲಿಲ್ಲ. ಅದರ ಬದಲಾಗಿ, ಅವರು ತಮ್ಮ ರಕ್ಷಣೆಯ ಮಾಧ್ಯಮದ ಸ್ವರ್ಗೀಯ ಒದಗಿಸುವಾತನನ್ನು, ಯೆಹೋವನನ್ನು ಘನಪಡಿಸಿದರು.
ಆದರೂ, ಕೆಲವರು ಹೀಗೆ ತರ್ಕಿಸಬಹುದು, ‘ಕ್ರಿಸ್ಮಸ್ ಕೊಡುಗೆ ಕೊಡುವಿಕೆ ಖಂಡಿತವಾಗಿ ತಪ್ಪಾಗಿರಸಾಧ್ಯವಿಲ್ಲ, ಯಾಕಂದರೆ “ಮೂವರು ಬುದ್ಧಿವಂತ ಪುರುಷರು” ಯೇಸುವಿಗೆ ಕೊಡುಗೆಗಳನ್ನು ಕೊಟ್ಟು ಸನ್ಮಾನಿಸಲಿಲ್ಲವೇ?’
ಕ್ರಿಸ್ಮಸ್ ಕೊಡುಗೆಗಳು
ಬೈಬಲಿನ ವೃತ್ತಾಂತವನ್ನು ನಾವು ಪುನಃ ಪರೀಕ್ಷಿಸೋಣ. ನೀವು ಅದನ್ನು ಮತ್ತಾಯನ ಸುವಾರ್ತೆಯಲ್ಲಿ, ಅಧ್ಯಾಯ 2 ರಲ್ಲಿ ದಾಖಲಿಸಲ್ಪಟ್ಟಿರುವದನ್ನು ಕಂಡುಕೊಳ್ಳುವಿರಿ. ಯೇಸುವಿನ ಜನನದ ಸ್ವಲ್ಪ ಸಮಯದ ನಂತರ ಅದು ಇರುವಂತೆ ಗೋಚರಿಸುವದಾದರೂ ಯಾವದೇ ಹುಟ್ಟುಹಬ್ಬದ ಆಚರಣೆಯ ಪ್ರಸ್ತಾಪ ಅಥವಾ ಯಾವದೇ ನಿರ್ದಿಷ್ಟ ಸಮಯ ಕೊಡಲ್ಪಟ್ಟಿಲ್ಲ. ವಚನ 1 ರಲ್ಲಿ ಮತ್ತಾಯನು ಸಂದರ್ಶಕರನ್ನು “ಮೂಡಣದೇಶದ [ಗ್ರೀಕ್, ಮಗೊ] ಜೋಯಿಸರು” ಎಂದು ಕರೆಯುತ್ತಾನೆ, ಈ ಕಾರಣದಿಂದ ಅವರು ಯೆಹೋವ ದೇವರ ಕುರಿತಾಗಿ ಯಾವ ಜ್ಞಾನವೂ ಇಲ್ಲದ ವಿಧರ್ಮಿಗಳಾಗಿದ್ದರು. ಈ ಮನುಷ್ಯರು ಹಿಂಬಾಲಿಸಿದ ನಕ್ಷತ್ರವು ಅವರನ್ನು, ನೇರವಾಗಿ ಯೇಸುವಿನ ಜನನದ ಸ್ಥಳವಾದ ಬೇತ್ಲೆಹೇಮಿಗಲ್ಲ ಬದಲಾಗಿ ಅರಸನಾದ ಹೆರೋದನು ಆಳುತ್ತಿದ್ದ ಯೆರೂಸಲೇಮಿಗೆ ನಡಿಸಿತು.
ಅವರು “ಯೆಹೂದ್ಯರ ಅರಸನಾಗಿ ಹುಟ್ಟಿದವನ” ಕುರಿತಾಗಿ ವಿಚಾರಿಸುವದನ್ನು ಈ ದುಷ್ಟ ಅಧಿಪತಿಯು ಕೇಳಿದಾಗ, ಅವನು ಆ ಮಗುವನ್ನು ಕೊಲಲ್ಲಾಗುವಂತೆ, “ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ ಎಂದು” ನಿಕರವಾಗಿ ಕಂಡುಹಿಡಿಯುವಂತೆ ಯಾಜಕರನ್ನು ವಿಚಾರಿಸಿದನು. ಮೆಸ್ಸೀಯನ ಜನ್ಮಸ್ಥಳವು ಬೇತ್ಲೆಹೇಮ್ ಎಂದು ಗೊತ್ತುಮಾಡುವ ಮೀಕನ ಪ್ರವಾದನೆಯನ್ನು ಉದ್ಧರಿಸುವ ಮೂಲಕ ಯಾಜಕರು ಉತ್ತರಿಸಿದರು. (ಮೀಕ 5:2) ಹೆರೋದನು ಕಪಟತನದಿಂದ ತನ್ನ ಸಂದರ್ಶಕರಿಗೆ ಹೀಗೆ ಆಜ್ಞಾಪಿಸಿದನು: “ನೀವು ಹೋಗಿ ಆ ಕೂಸಿನ (ಎಳೆಯ ಮಗು, NW) ವಿಷಯದಲ್ಲಿ ಚೆನ್ನಾಗಿ ವಿಚಾರಣೆ ಮಾಡಿರಿ; ಅದು ಸಿಕ್ಕಿದ ಮೇಲೆ ನನಗೆ ತಿಳಿಸಿರಿ; ನಾನೂ ಬಂದು ಅದಕ್ಕೆ ಅಡ್ಡಬೀಳಬೇಕು.” ಜೋಯಿಸರು ತಮ್ಮ ಪ್ರಯಾಣವನ್ನು ಮುಂದರಿಸಿದರು ಮತ್ತು ನಕ್ಷತ್ರವು “ಮುಂದೆ ಮುಂದೆ ನಡೆದು ಕೂಸು ಇದ್ದ ಸ್ಥಳದ ಮೇಲೆ ಬಂದು ನಿಂತಿತು.” ಅವನನ್ನು ಒಬ್ಬ ನವಜಾತ ಶಿಶುವಿನೋಪಾದಿಯಲ್ಲ, ಒಂದು “ಎಳೆಯ ಮಗು” ವಿನೋಪಾದಿ ವರ್ಣಿಸಲಾಗಿದೆ ಎಂಬದನ್ನು ಗಮನಿಸಿರಿ.—ಮತ್ತಾಯ 2:1-10.
ಒಬ್ಬ ಅಧಿಪತಿಯನ್ನು ಸಂದರ್ಶಿಸುತ್ತಿರುವ ಪೌರಸ್ತ್ಯ ಪ್ರಭುಗಳಿಗೆ ಉಚಿತವಾಗಿರುವಂತೆ, ವಿಧರ್ಮಿ ಜೋಯಿಸರು ಅಡಬ್ಡಿದ್ದು “ಅದಕ್ಕೆ [ಎಳೆಯ ಮಗುವಿಗೆ] ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು.” ಮತ್ತಾಯನು ಕೂಡಿಸುವದು: “ಆ ಮೇಲೆ ದೇವರು ಕನಸಿನಲ್ಲಿ ಅವರಿಗೆ—ನೀವು ಹೆರೋದನ ಬಳಿಗೆ ತಿರಿಗಿ ಹೋಗಬಾರದೆಂದು ಅಪ್ಪಣೆಕೊಟ್ಟದ್ದರಿಂದ ಅವರು ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಹೊರಟುಹೋದರು.”—ಮತ್ತಾಯ 2:11, 12.
ಈ ಸಂಕ್ಷಿಪ್ತ ಶಾಸ್ತ್ರೀಯ ವೃತ್ತಾಂತದಿಂದ, ಕೆಲವು ಜನರು ತಮ್ಮ ಕ್ರಿಸ್ಮಸ್ ಕೊಡುಗೆ ಕೊಡುವಿಕೆಗೆ ಬೆಂಬಲವನ್ನು ಪಡೆಯಲು ಪ್ರಯತ್ನಿಸಬಹುದು. ಆದರೂ, ಕೊಡುಗೆಗಳನ್ನು ಕೊಡುವ ಸದ್ಯದ ಪದ್ಧತಿಗೆ, ರೋಮನರು ತಮ್ಮ ಬಡ ನೆರೆಹೊರೆಯವರಿಗೆ ನೀಡುತ್ತಿದ್ದ ಶನೀಶ್ವರ ಹಬ್ಬದ ಕೊಡುಗೆಗಳಲ್ಲಿ ಮೂಲವಿದೆ ಎಂಬದಾಗಿ ಡಿಸ್ಕವರಿಂಗ್ ಕ್ರಿಸ್ಮಸ್ ಕಸ್ಟಮ್ಸ್ ಆ್ಯಂಡ್ ಫೋಕ್ಲೋರ್ ಪುಸ್ತಕವು ವಿವರಿಸುತ್ತದೆ. “ಆದಿ ಚರ್ಚ್ . . . ಅದರ ಸೂಚಿತಾರ್ಥವನ್ನು ಮೇಜೈ ಜ್ಞಾನಿಗಳ ಕೊಡುಗೆಗಳ ಮತಾಚರಣೆಯ ಸ್ಮರಣೆಯಾಗಿ ಜಾಣತನದಿಂದ ಬದಲಾಯಿಸಿದರು.” ಇದು ಯೇಸುವಿನ ಜನನದ ಸಮಯದಲ್ಲಿ ದೇವರನ್ನು ಕೇವಲ ಸ್ತುತಿಸಿದ—ನಮ್ರ ಕುರುಬರಂತೆ—ಸತ್ಯಾರಾಧಕರಿಗೆ ಎಷ್ಟು ತದ್ವಿರುದ್ಧ!
ಕ್ರಿಸ್ತನನ್ನು ಅರಸನಾಗಿ ಸನ್ಮಾನಿಸಿರಿ!
ಇಂದು ಯೇಸು ಇನ್ನು ಮುಂದೆ ಒಂದು ಮಗುವಾಗಿರುವದಿಲ್ಲ. ಅವನೊಬ್ಬ ಶಕ್ತಿಶಾಲಿ ದೊರೆ, ದೇವರ ಸ್ವರ್ಗೀಯ ರಾಜ್ಯದ ಅರಸನಾಗಿದ್ದಾನೆ, ಮತ್ತು ಅವನನ್ನು ಇಂಥ ಅಧಿಕಾರಕ್ಕಾಗಿ ಸನ್ಮಾನಿಸಬೇಕು.—1 ತಿಮೊಥೆಯ 6:15, 16.
ಈಗ ನೀವೊಬ್ಬ ವಯಸ್ಕರಾಗಿರುವಲ್ಲಿ, ಮಗುವಾಗಿದ್ದಾಗ ತೆಗೆದಿದ್ದಂತಹ ಫೋಟೋಗಳನ್ನು ಜನರು ನಿಮ್ಮ ಉಪಸ್ಥಿತಿಯಲ್ಲಿ ತೋರಿಸುವಾಗ ನಿಮಗೆ ಎಂದಾದರೂ ಪೇಚಾಟವನ್ನುಂಟುಮಾಡಿದೆಯೋ? ನಿಮ್ಮ ಜನನದಲ್ಲಿ ನಿಮ್ಮ ಹೆತ್ತವರಿಗಾದ ಸಂತೋಷವನ್ನು ಆ ಚಿತ್ರಗಳು ಜ್ಞಾಪಕ ಹುಟ್ಟಿಸುತ್ತವೆಂಬುದು ನಿಜ; ಆದರೆ ಈಗ ನಿಮಗೆ ನಿಮ್ಮದೇ ಆದ ವ್ಯಕ್ತಿತ್ವವಿರುವದರಿಂದ, ನೀವಿರುವಂತೆ ಇತರರು ನೋಡಬೇಕೆಂದು ಸಾಮಾನ್ಯವಾಗಿ ಇಷ್ಟಪಡುವದಿಲ್ಲವೊ? ತದ್ರೀತಿಯಲ್ಲಿ, ಆತನ ಹಿಂಬಾಲಕರೆಂದು ಹೇಳಿಕೊಳ್ಳುವವರು ಪ್ರತಿ ವರ್ಷ ಕ್ರಿಸ್ಮಸ್ನ ವಿಧರ್ಮಿ ಸಂಪ್ರದಾಯಗಳಲ್ಲಿ ಮತ್ತು ಆ ಶಿಶುವನ್ನು ಸನ್ಮಾನಿಸುವದರಲ್ಲಿ ಎಷ್ಟು ತಲ್ಲೀನರಾಗುತ್ತಾರೆಂದರೆ ಅವರು ಆತನನ್ನು ಅರಸನನ್ನಾಗಿ ಸನ್ಮಾನಿಸಲು ತಪ್ಪುವಾಗ, ಕ್ರಿಸ್ತ ಯೇಸುವಿನ ಕಡೆಗೆ ಅದೆಷ್ಟು ಅಗೌರವವಾಗಿದೆ ಎಂದು ಯೋಚಿಸಿರಿ. ಮೊದಲನೆಯ ಶತಮಾನದಲ್ಲೂ, ಕ್ರೈಸ್ತ ಅಪೊಸ್ತಲ ಪೌಲನು ಕ್ರಿಸ್ತನ ಕುರಿತಾಗಿ ಅವನು ಈಗಿರುವಂತೆ—ಸ್ವರ್ಗದಲ್ಲಿ ಒಬ್ಬ ರಾಜನೋಪಾದಿ—ಯೋಚಿಸುವದರ ಔಚಿತ್ಯವನ್ನು ವಿವೇಚಿಸಿದನು. ಪೌಲನು ಬರೆದದ್ದು: “ಕ್ರಿಸ್ತನನ್ನು ಕೂಡ ನಾವು ಶರೀರಸಂಬಂಧವಾಗಿ ತಿಳಿದಿದ್ದರೂ ಇನ್ನು ಮುಂದೆ ಆತನನ್ನು ಹಾಗೆ ತಿಳುಕೊಳ್ಳುವದಿಲ್ಲ”!—2 ಕೊರಿಂಥ 5:16.
ದೇವರ ರಾಜ್ಯದ ಅರಸನಾಗಿ, ಕ್ರಿಸ್ತನು ವೇದನೆ, ನರಳಾಟ, ರೋಗ ಮತ್ತು ಮರಣವನ್ನು ತೆಗೆದುಹಾಕುವ ಪ್ರವಾದನಾ ವಾಗ್ದಾನವನ್ನು ನೇರವೇರಿಸುವನು. ಈ ಭೂಮಿಯ ಮೇಲೆ ಪ್ರಮೋದವನ ಪರಿಸ್ಥಿತಿಗಳ ಕೆಳಗೆ ಎಲ್ಲರಿಗೆ ಸಾಕಾಗುವಷ್ಟು ವಸತಿ ಮತ್ತು ಫಲದಾಯಕ ಕೆಲಸವನ್ನು ಕಾದಿಡುವನು. (ಯೆಶಾಯ 65:21-23; ಲೂಕ 23:43; 2 ಕೊರಿಂಥ 1:20; ಪ್ರಕಟನೆ 21:3, 4) ಯೇಸುವನ್ನು ಅಗೌರವಿಸುವದನ್ನು ತೊರೆಯಲು ಇವು ನಿಶ್ಚಯವಾಗಿ ಸಾಕಷ್ಟು ಕಾರಣಗಳಾಗಿವೆ!
ಕ್ರಿಸ್ತನ ಸ್ವಂತ ಮಾದರಿಯನ್ನು ಅನುಸರಿಸುತ್ತಾ, ನಿಜ ಕ್ರೈಸ್ತರು ತಮ್ಮ ನೆರೆಯವರಿಗೆ ಒಬ್ಬನು ನೀಡಬಹುದಾದ ಅತ್ಯಂತ ಮಹತ್ತಾದ ಕೊಡುಗೆ—ನಿತ್ಯ ಜೀವಕ್ಕೆ ನಡಿಸಬಹುದಾದ, ದೇವರ ಉದ್ದೇಶದ ಕುರಿತಾದ ತಿಳಿವಳಿಕೆ—ಯನ್ನು ಕೊಡುತ್ತಿದ್ದಾರೆ. (ಯೋಹಾನ 17:3) ಯೇಸು ಹೇಳಿದಂತೆ: “ತೆಗೆದುಕೊಳ್ಳುವದಕ್ಕಿಂತ ಕೊಡುವದರಲ್ಲಿ ಹೆಚ್ಚಿನ ಸಂತೋಷವಿದೆ,” ಈ ರೀತಿಯ ಕೊಡುಗೆ ಕೊಡುವಿಕೆಯು ಅವರಿಗೆ ಹೆಚ್ಚಿನ ಆನಂದವನ್ನು ತರುತ್ತದೆ.—ಅ. ಕೃತ್ಯಗಳು 20:35, NW; ಲೂಕ 11:27, 28.
ಪರಸ್ಪರವಾಗಿ ನಿಜವಾದ ಆಸಕ್ತಿಯುಳ್ಳ ಕ್ರೈಸ್ತರು ತಮ್ಮ ಪ್ರೀತಿಯನ್ನು ವರ್ಷದ ಯಾವುದೇ ಸಮಯದಲ್ಲಿ ಸ್ವಪ್ರೇರಣೆಯಿಂದ ವ್ಯಕ್ತಪಡಿಸುವದನ್ನು ಕಷ್ಟಕರವಾಗಿ ಕಂಡುಕೊಳ್ಳುವದಿಲ್ಲ. (ಫಿಲಿಪ್ಪಿ 2:3, 4) ಒಂದು ಸರಳ ಉದಾಹರಣೆಯಾಗಿ, ಒಂದು ಬೈಬಲ್ ಭಾಷಣಕ್ಕೆ ಕಿವಿಗೊಟ್ಟ ನಂತರ, ಉಪಕಾರದ ಒಂದು ವ್ಯಕ್ತಪಡಿಸುವಿಕೆಯಾಗಿ ಬರೆದ ಒಂದು ಚಿತ್ರವನ್ನು ಒಬ್ಬ ಕ್ರೈಸ್ತ ಎಳೆಯನಿಂದ ಪಡೆಯುವುದು ಎಷ್ಟು ರೋಮಾಂಚಕಾರಿ! ಅವನ ಪ್ರೀತಿಯ ಸಂಕೇತವಾಗಿ ಒಬ್ಬ ಸಂಬಂಧಿಕನಿಂದ ಒಂದು ಅನಿರೀಕ್ಷಿತ ಕೊಡುಗೆಯು ಸಹ ಅದೇ ರೀತಿಯಲ್ಲಿ ಉತ್ಸಾಹದಾಯಕವಾಗಿದೆ. ತದ್ರೀತಿಯಲ್ಲಿ, ತಮ್ಮ ಮಕ್ಕಳಿಗೆ ಕೊಡುಗೆಗಳನ್ನು ಕೊಡಲು ವರ್ಷದುದ್ದಕ್ಕೂ ತಕ್ಕದ್ದಾದ ಸಂದರ್ಭಗಳನ್ನು ಆರಿಸಿಕೊಳ್ಳುವಾಗ ಕ್ರೈಸ್ತ ಹೆತ್ತವರು ಹೆಚ್ಚಿನ ಆನಂದವನ್ನು ಗಳಿಸುತ್ತಾರೆ. ಈ ರೀತಿಯ ಕ್ರೈಸ್ತ ಉದಾರತೆಯು, ಉತ್ಸವದ ದಿನಗಳಂದು ಕೊಡುಗೆಗಳನ್ನು ಕೊಡಬೇಕಾದ ಊಹಿತ ಹಂಗಿನಿಂದ ಅಥವಾ ವಿಧರ್ಮಿ ಸಂಪ್ರದಾಯದಿಂದ ಕಳಂಕಿಸಲ್ಪಟ್ಟಿಲ್ಲ.
ಆದುದರಿಂದ, ಇಂದು ಎಲ್ಲಾ ರಾಷ್ಟ್ರಗಳಿಂದ ಸುಮಾರು 45 ಲಕ್ಷ ಕ್ರೈಸ್ತರು ಕ್ರಿಸ್ಮಸನ್ನು ಆಚರಿಸುವದಿಲ್ಲ. ತಮ್ಮ ನೆರೆಯವರಿಗೆ ದೇವರ ರಾಜ್ಯದ ಸುವಾರ್ತೆಯ ಕುರಿತಾಗಿ ಒಂದು ಸಾಕ್ಷಿಯನ್ನು ಕೊಡುವದರಲ್ಲಿ ಸ್ವತಃ ತಮ್ಮನ್ನು ಕ್ರಮವಾಗಿ ನಿರತರಾಗಿರಿಸುವ ಯೆಹೋವನ ಸಾಕ್ಷಿಗಳೇ ಇವರಾಗಿರುತ್ತಾರೆ. (ಮತ್ತಾಯ 24:14) ಪ್ರಾಯಶಃ ಬಲು ಬೇಗನೇ, ಅವರು ನಿಮ್ಮ ಮನೆಗೆ ಭೇಟಿ ನೀಡುವಾಗ ನೀವು ಅವರನ್ನು ಸಂಧಿಸುವಿರಿ. ಅವರು ನಿಮಗೆ ತರುವ ವಿಷಯದ ನಿಮ್ಮ ಉತ್ಸುಕ ಸ್ವೀಕಾರವು—ಯೆಹೋವ ದೇವರನ್ನು ವರ್ಷದ ಪ್ರತಿದಿನ ಸ್ತುತಿಸುವ ವಿಧವನ್ನು ನೀವು ಕಲಿಯುತ್ತಿರುವಂತೆ—ನಿಮ್ಮ ಕುಟುಂಬವನ್ನು ಮಹಾ ಆನಂದಕ್ಕೆ ನಡಿಸಲಿ.—ಕೀರ್ತನೆ 145:1, 2.
[ಪುಟ 7 ರಲ್ಲಿರುವ ಚಿತ್ರ]
ಕ್ರೈಸ್ತರು ತಮ್ಮ ನೆರೆಯವರಿಗೆ ಅತ್ಯಂತ ಮಹತ್ತಾದ ಕೊಡುಗೆಗಳಲ್ಲಿ ಒಂದನ್ನು—ನಿತ್ಯ ಜೀವಕ್ಕೆ ನಡಿಸುವ ದೇವರ ಉದ್ದೇಶದ ಕುರಿತಾದ ತಿಳಿವಳಿಕೆಯನ್ನು—ಕೊಡುತ್ತಾರೆ
[ಪುಟ 4 ರಲ್ಲಿರುವ ಚಿತ್ರ ಕೃಪೆ]
Culver Pictures